ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂವತೈದು ಮುತ್ತುಗಳ ಹಾರ

ಜಯಶ್ರೀನಿವಾಸ ರಾವ್ ರ ಕವನ ಸಂಕಲನ ’ಬುಧವಾರದ ಅತಿಥಿ’

ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಶ್ರೀಪಾದ್‌ ಹೆಗಡೆ ಅವರ ಬರಹ ಇಲ್ಲಿದೆ .

-ಶ್ರೀಪಾದ್‌ ಹೆಗಡೆ

ಕನ್ನಡದ ಕವಿಗಳಲ್ಲಿ ಏ ಕೆ ರಾಮಾನುಜನ್ ಮತ್ತು ತಿರುಮಲೇಶ ಅವರುಗಳದ್ದು ವಿಶಿಷ್ಟವಾದ ಪ್ರತಿಭೆ. ಸಾಂಪ್ರದಾಯಿಕವಾದ ಹೆದ್ದಾರಿ ಬಿಟ್ಟು ತಮ್ಮದೇ ಕಾಲು ದಾರಿಯಲ್ಲಿ ಕವಿತೆ ರಚಿಸಿದವರು ಇವರು. ಕನ್ನಡದ ಕಾವ್ಯ ಸಂದರ್ಭದಲ್ಲಿ ನಂತರ ಇವರ ಹಾದಿಯನ್ನು ಹಿಡಿದು ನಡೆದವರು ವಿರಳಾತಿವಿರಳ ಅಥವಾ ಇಲ್ಲವೇ ಇಲ್ಲ ಅಂದರೆ ತಪ್ಪಾಗಲಾರದು. ಜಯಶ್ರೀನಿವಾಸ ರಾವ್ ತಮ್ಮ ಚೊಚ್ಚಲ ಕವನ ಸಂಕಲನದಲ್ಲಿ ಈ ಹಾದಿಯನ್ನು ಯಶಸ್ವಿಯಾಗಿ ತುಳಿದಿದ್ದಾರೆ. ಆದರೆ ಅದೇ ಸಮಯದಲ್ಲಿ ತಾನು ಈ ಇಬ್ಬರ ಪಡಿಯಚ್ಚಾಗದಂತೆ ಎಚ್ಚರಿಕೆಯನ್ನೂ ವಹಿಸಿದ್ದಾರೆ. ಪ್ರತಿ ಕವಿತೆಯಲ್ಲಿಯೂ ಭಾಷೆಯ ಬಳಕೆ ಮತ್ತು ನಿರೂಪಣೆಯಲ್ಲಿ ತಮ್ಮ ಛಾಪು ಒತ್ತಿದ್ದಾರೆ. ಪದ ಸಂಪತ್ತನ್ನು ವ್ಯಯಿಸುವುದರಲ್ಲಿ ಇವರು ರಾಮಾನುಜನ್ ರ ಹಾಗೆ ಸಂಕೋಚದವರಲ್ಲ, ಹಾಗಂತ ಒಂದು ಹೇಳುವಲ್ಲಿ ನಾಲ್ಕು ಹೇಳಿ ವ್ಯರ್ಥ ವ್ಯಯಿಸುವವರೂ ಅಲ್ಲ. ಈ ವಿಷಯದಲ್ಲಿ ತಿರುಮಲೇಶರಿಗೆ ಇವರು ಹತ್ತಿರ. ಈ ಇಬ್ಬರಿಗಿಂತ ಹೆಚ್ಚು ಪ್ರಮಾಣದಲ್ಲಿ ಆಡು ಮಾತಿನ ನುಡಿಗಟ್ಟನ್ನು ಜಯಶ್ರೀನಿವಾಸ ರಾವ್ ಬಳಸಿ ಕವಿತೆ ರಚಿಸಿದ್ದಾರೆ. ಸ್ವಭಾವೋಕ್ತಿ ಇವರ ಕವಿತೆಗಳಲ್ಲಿ ಎದ್ದು ಕಾಣುವ ಒಂದು ಪ್ರಮುಖ ಲಕ್ಷಣ. ಹಲವು ಕವಿತೆಗಳಲ್ಲಿ ಉಭಯ ಕುಶಲೋಪರಿಯ ತರಹದ ಸಂಭಾಷಣೆಯನ್ನು ನಾಟಕೀಯವಾಗಿ ಇವರು ಬಳಸಿ ಕೊಂಡಿರುವುದು ಆ ಕವಿತೆಗಳನ್ನು ಅನನ್ಯವಾಗಿಸಿವಲ್ಲಿ ಸಫಲವಾಗಿದೆ.

ಅರ್ಥ ಸಾರ್ಥಕ್ಯದ ಬೆನ್ನು ಹತ್ತದೆ, ಸಕಲ ಪೂರ್ವಾಗ್ರಹ ಮುಕ್ತವಾಗಿ, ತೀರ್ಮಾನ ಕೊಡುವ ನ್ಯಾಯಾಧೀಶನಾಗದೆ, ಸೈದ್ದಾಂತಿಕ ವಿಮರ್ಶೆಗಿಳಿಯದೆ, ದೊಡ್ಡ ದನಿಯಲ್ಲಿ ಮಾತಾಡದೆ, ಕಾಣ್ಕೆ- ದರ್ಶನಗಳ ಹಂಗು ತೊರೆದು, ದೊಡ್ಡ ದೊಡ್ದ ವಸ್ತುವನ್ನು ಕಾವ್ಯ ಸಾಮಗ್ರಿ ಮಾಡಿಕೊಳ್ಳದೆ, ಸಾಮಾನ್ಯ ಸಂಗತಿಗಳನ್ನು ಗಮನಿಸುತ್ತಾ ಹೋಗುವ ಪರಿಯಲ್ಲಿಯೇ ಪ್ರತಿಯೊಂದೂ ಅಪುರೂಪದ ಕವಿತೆಯಾಗಿ ಇಲ್ಲಿ ಮೈ ದಾಳಿದೆ. ನಿತ್ಯ ದಿನಚರಿಯ ಭಾಗವಾದ ಪಾತ್ರೆ ತೊಳೆಯುವುದು, ಬಟ್ಟೆ ಒಣ ಹಾಕುವ ಕ್ರಿಯೆಗಳೂ ಕವಿತೆಯ ವಸ್ತುವಾಗಿ, ಅಂತಹ ಕ್ರಿಯೆಗಳಲ್ಲಿನ ಸೂಕ್ಷ್ಮ ವಿವರಗಳ ಮೇಲಿನ ಗಮನ ಧ್ಯಾನವಾಗಿ ಬಿಡುತ್ತವೆ. Zen ಸಂಪ್ರದಾಯದಲ್ಲಿ Attention meditation ಎನ್ನುವ ಒಂದು ವಿಧವಿದೆ; ನಾವು ಮಾಡುವ ಎಲ್ಲ ಕೆಲಸಗಳನ್ನು ಪ್ರತಿ ಕ್ಷಣವೂ ಎಚ್ಚರಿಕೆಯಿಂದ ಗಮನಿಸುವುದು ಇದರ ಕ್ರಮ. ಈ ಕವಿತೆಗಳಲ್ಲಿ ಆ ತಿಳಿವು ಇವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಕುರಿತಾಗಿ ’ಕೇಳಿ …… ನೋಡಿ’ ಎನ್ನುವ ಒಂದು ಕವಿತೆಯಿದೆ. ಇದು ನಮ್ಮ ನೋಟವನ್ನು ಪಲ್ಲಟಿಸಿ ಬಿಡುತ್ತದೆ. ಇದನ್ನು ಓದಿದ ಮೇಲೆ ನಾವು ಈ ಮೊದಲು ಸೂರ್ಯೋದಯ- ಸೂರ್ಯಾಸ್ತಗಳನ್ನು ನೋಡಿದ ರೀತಿಯಲ್ಲಿ ಮತ್ತೆ ನೋಡುವುದು ಸಾಧ್ಯವೇ ಇಲ್ಲ! ಇನ್ನು ಬಸವನ ಹುಳದ ಮೇಲೆ ಮೂರು ಕವಿತೆಗಳಿವೆ. ಇದನ್ನು ಓದಿದಾಗ ರಾಮಾನುಜನ್ ರ ’ಅಂಗುಲದ ಹುಳು’ ನೆನಪಾಗುತ್ತಾದರೂ ಅದಕ್ಕಿಂತ ಇದು ಆಶಯದಲ್ಲಿ ಭಿನ್ನ. ಪ್ರತಿಭಾವಂತ ಕ್ರಿಕೆಟ್ ಬೌಲರ್ ಆಗಿ ಟೀಮಿನಲ್ಲಿ ಪ್ರತಿ ಬಾರಿ ಆಯ್ಕೆಯಾದರೂ, ಹನ್ನೊಂದರಲ್ಲಿ ಬರದೆ , ಇನ್ನೊಬ್ಬ ಬೌಲರ್ ಗೆ ಪೆಟ್ಟಾಗಿ ಆಡಲಾಗದಿದ್ದಾಗ ಮಾತ್ರ ಅವಕಾಶ ಸಿಗುವ, ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿ ಸದಾ ಇರುವ ಆಟಗಾರ ’ಸ್ಕಾಟ್ ಬೋಲಂಡ್ -ನ ಅವಸ್ಥೆ’ ಎನ್ನುವ ಕವಿತೆ ಅವನ ಮನಸ್ಥಿತಿಯ ಒಳಹೊಕ್ಕು ನೋಡುವ ಪ್ರಯತ್ನ ಮಾಡುತ್ತಾ ಎಲ್ಲ ಅವಕಾಶ ವಂಚಿತರ ಪಾಡಿನ ಹಾಡಾಗುತ್ತದೆ. ಕಾವ್ಯಕ್ಕೆ ಇದೊಂದು ಅಪರೂಪದ ವಸ್ತು ಮತ್ತು ಅಷ್ಟೆ ಸೊಗಸಾದ ನಿರೂಪಣೆ. ’ನಾಯಿ ನೋಟ’ ಎನ್ನುವ ಕವಿತೆ ನಾಯಿಯ ಒಡೆಯರು (ನಾಯಪ್ಪಂದಿರು) ದಿನಾ ಬೆಳಗ್ಗೆ ನಾಯಿಯೊಂದಿಗೆ ವಾಕ್ ಬರುವ ಬಗೆಗಳ ವರ್ಣನೆ ಮಾಡುತ್ತಾ ನಾಯಿಗಳ ಮನೋಲೋಕವನ್ನು ಪ್ರವೇಶಿಸುವ ಪ್ರಯತ್ನ ಮಾಡುತ್ತದೆ. ಆಗ ಏಳುವ ಪ್ರಶ್ನೆ ತುಂಬ ಕುತೂಹಲಕಾರಿಯಾಗಿದೆ:

’ನಾಯಿಗಳಿಗೆ ದೇವರು ದಿಂಡರು ಅಂತ ಇದಾರಾ ?

ಇರುವುದಾದರೆ, ಹೇಗೆ ಕಾಣುವರು ಆ ದೇವರು?

———————————————–

———————————————–

ನಾಯಿಗಳ ದೇವರು ನಾಯಿಯ ಹಾಗೆ

ಕಾಣ ಬೇಕೆಂದೇನಿಲ್ಲ, ಅಲ್ವಾ? ’

ಎನ್ನುವ ಸಾಲುಗಳು ಮನುಷ್ಯ ಮಾಡಿಕೊಂಡ ದೇವರುಗಳ ನೆನಪಿಸಿ ವಿಚಾರಕ್ಕೆ ಹತ್ತಿಸದೆ ಇರದು.

ಈ ಸಂಕಲನದ ಇನ್ನೊಂದು ವಿಶೇಷವೆಂದರೆ ಇಲ್ಲಿನ 35 ಕವಿತೆಗಳೂ ಸಾಮಾನ್ಯವಾದ ಅಸಮಾನ್ಯ ಕವಿತೆಗಳು. ಈ ಗುಣ ಮಟ್ಟವನ್ನು ಸಂಕಲನದ ಎಲ್ಲ ಕವಿತೆಗಳಲ್ಲಿಯೂ ಕಾಯ್ದು ಕೊಂಡು ಹೋಗುವುದು ಸುಲಭದ ಕೆಲಸವಲ್ಲ.

ಪಿಕಾಸೋನ ’Bull’s Head’ ಎಂಬ ಪ್ರಸಿದ್ಧ ಕಲಾಕೃತಿಯ ಕುರಿತಾಗಿ ’ಪಿಕಾಸೋನ ಕಣ್ಣುಗಳು’ ಎನ್ನುವ ಕವಿತೆ ಪಿಕಾಸೋಗಿದ್ದ ಸೂಕ್ಷ್ಮ ನೋಟವನ್ನು ವಿವರಿಸುತ್ತದೆಯಾದರೂ, ಅದರೊಂದಿಗೆ ಜಯಶ್ರೀನಿವಾಸ ರಾಯರ ಈ ಕವಿತಾ ಸಂಕಲನದ ಎಲ್ಲ ಕವಿತೆಗಳ ಹಿಂದಿರುವ ಸೂಕ್ಷ್ಮ ನೋಟವನ್ನೂ ಅದು ತಿಳಿಸುತ್ತದೆ. ಕಸದ ಗುಪ್ಪೆಯೊಂದರಲ್ಲಿ ಬಿಡಿ ಬಿಡಿಯಾಗಿ ಬಿದ್ದಿದ್ದ ಬೈಸಿಕಲ್ಲಿನ ಒಂದು ಸೀಟ್ ಮತ್ತು ಹ್ಯಾಂಡಲ್ಲನ್ನು ಕೂಡಿಸಿ ಪಿಕಾಸೋ ರಚಿಸಿದ ಈ ಸರಳ ಕಲಾಕೃತಿ ಜಗತ್ಪ್ರಸಿದ್ಧವಾದ ಸಂಗತಿಯನ್ನು ಹೇಳುತ್ತಲೇ ಈ ಕವಿತೆ ಈ ಸಂಕಲನ ಕವಿತೆಗಳ ರಚನೆಯ ಹಿಂದಿರುವ ನೋಟವನ್ನೂ ಸೂಚಿಸುತ್ತದೆ.

’ ಕಣ್ಣುಗಳು ಬೇಕು,

ಇಡಿಯಾಗಿ ನೋಡಲೂ,

ಬಿಡಿಬಿಡಿಯಾಗಿ ನೋಡಲೂ,

ಬಿಡಿಬಿಡಿಗಳನ್ನು ಬೇರಾಗಿ ಜೋಡಿಸಿ

ಬೇರೊಂದು ಇಡಿಯಾಗಿ ನೋಡಲೂ,

ಇದು ಮೊದಲು ಕಂಡದ್ದು ಪಿಕಾಸೋಗೆ,

ಆಮೇಲೆ ಮಿಕ್ಕವರಿಗೆ ಕಂಡರೇನು. ’

ಇಡಿಯಾಗಿದ್ದನ್ನು ಬಿಡಿಬಿಡಿಯಾಗಿ ನೋಡುವ ಮತ್ತು ಆ ಬಿಡಿಬಿಡಿಗಳನ್ನು ಜೋಡಿಸಿ ಇಡಿಯಾಗಿಸಿ ಬೇರೆಯೇ ಒಂದನ್ನಾಗಿ ಮಾಡಿ ತೋರಿಸುವ ಪ್ರಯತ್ನವನ್ನು ಕವಿ ಯಶಸ್ವಿಯಾಗಿ ಈ ಸಂಕಲನದ ಕವಿತೆಗಳಲ್ಲಿ ಮಾಡಿದ್ದಾರೆ.

ಮಾಮೂಲಿಯಾಗಿ, ಅರ್ಥವನ್ನು ಹುಡುಕುವ, ಕಾಣ್ಕೆಗಾಗಿ ಎದುರು ನೋಡುವ, ಸೈದ್ದಾಂತಿಕ ಘರ್ಷಣೆಗಾಗಿ ಕಾಯುವ ಮನಸುಗಳಿಗೆ ಈ ಕವಿತಾ ಸಂಕಲನ ಆಕರ್ಷಣೀಯವಾಗಲಿಕ್ಕಿಲ್ಲ. ಆದರೆ ಪಿಕಾಸೋನ ಕಣ್ಣುಗಳ ಮೂಲಕ ನೋಡ ಬಯಸುವವರಿಗೆ ಈ ಸಂಕಲದಲ್ಲಿರುವ 35 ಕವಿತೆಗಳೂ ಒಂದೊಂದು ಮುತ್ತು ಎಂದೆನಿಸದಿರದು. ಇನ್ನು ಕಮಲಾಕರ ಕಡವೆ ಬರೆದ ಮುನ್ನುಡಿಯ ಮಾತುಗಳು ಇಂತಹ ಕವಿತೆಗಳ ಓದಿಗೆ ಇನ್ನೂ ತೆರೆದು ಕೊಂಡಿರದ ಓದುಗರ ತಯ್ಯಾರಿಯ ಅನುಕೂಲಕ್ಕೆ ಖಂಡಿತವಾಗಿ ಒದಗಿ ಬರುತ್ತದೆ. ಈ ಸಂಕಲನದ ಕವಿತೆಗಳ ನಾಡಿ ಮಿಡಿತವನ್ನು ಅವರ ಮಾತುಗಳು ಸೊಗಸಾಗಿ ಮತ್ತು ಸರಳವಾಗಿ ಕಟ್ಟಿ ಕೊಟ್ಟಿವೆ. ಕಮಲಾಕರರು ಹೇಳಿದಂತೆ ” ಕನ್ನಡ ಕಾವ್ಯ ಪ್ರಿಯರು ಪ್ರೀತಿಯಿಂದ ಬಹುಕಾಲ ನೆನಪಿಟ್ಟುಕೊಳ್ಳುವ ಕವನಗಳು ಇವು”.

‍ಲೇಖಕರು Admin

13 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading