ವಿಕಾಸ ನೇಗಿಲೋಣಿ. ರಾಜೇಶ್ ಶೆಟ್ಟಿ ಸಂಪಾದನೆಯ ‘ಬೆಸ್ಟ್ ಆಫ್ ಜೋಗಿ’
ಜೋಗಿ ಅವರ ನೂರು ಪುಸ್ತಕಗಳಿಂದ ಆಯ್ದ ಅತ್ಯುತ್ತಮ ಬರಹಗಳ ಸಂಗ್ರಹ
‘ಸಪ್ನ ಬುಕ್ ಹೌಸ್’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ.
-ನಾಮದೇವ ಕಾಗದಗಾರ
ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಜೋಗಿ ಅವರದ್ದು ವಿಶಿಷ್ಟವಾದ ಛಾಪು. ಅವರ ನೂರು ಪುಸ್ತಕಗಳ ಬರವಣಿಗೆಯ ಮಹಾಸಾಗರದಿಂದ ಆಯ್ದ ನೂರು ಬಿಂದುಗಳೇ ಈ ‘ಬೆಸ್ಟ್ ಆಫ್ ಜೋಗಿ’ ಸಂಕಲನ. ಏಳು ವಿಭಿನ್ನ ವಿಭಾಗಗಳಲ್ಲಿ ಹರಡಿಕೊಂಡಿರುವ 327 ಪುಟಗಳ ಈ ಕೃತಿ, ಕೇವಲ ಸಾಹಿತ್ಯದ ಸಂಗ್ರಹವಲ್ಲ; ಬದಲಿಗೆ ಮನುಷ್ಯನ ಆಂತರಿಕ ಜಗತ್ತು, ತೊಳಲಾಟ, ಪ್ರೀತಿ, ಸಾವು ಮತ್ತು ಅಸ್ತಿತ್ವದ ಪ್ರಶ್ನೆಗಳನ್ನು ಮುಖಾಮುಖಿ ಮಾಡುವ ದರ್ಶನವಾಗಿದೆ.
ಈ ಕೃತಿಯನ್ನು ಮೊದಲ ಬರಹದಿಂದ ಕೊನೆಯ ಬರಹದವರೆಗಿನ ವಿಸ್ತಾರದಲ್ಲಿ ಅವಲೋಕಿಸಿದಾಗ ಲೇಖಕನ ಚಿಂತನೆಗಳು ಕಾಲದೊಂದಿಗೆ ಹೇಗೆ ವಿಕಾಸಗೊಳ್ಳುತ್ತಾ ಹೋಗುತ್ತವೆ ಎಂಬುದು ಸ್ಪಷ್ಟವಾಗುತ್ತದೆ.
ಮೊದಲ ವಿಭಾಗದ ‘ಲಂಕೇಶ್ ಮತ್ತು ಬಭ್ರುವಾಹನ’ ಕಥೆಯಲ್ಲಿ ಅತಿರೇಕದ ಆರಾಧನೆ ಮತ್ತು ಸಾಹಿತ್ಯದ ಪ್ರಭಾವ ವ್ಯಕ್ತಿಯನ್ನು ಹೇಗೆ ಮೌನಿಯನ್ನಾಗಿಸುತ್ತದೆ ಎಂಬುದನ್ನು ಚಿತ್ರಿಸಿದರೆ, ಕೊನೆಯಲ್ಲಿ ‘ಕನ್ನಡಿಯೊಳಗೆ ಗಳಗನಾಥರಿರಲಿಲ್ಲ’ ಕಥೆಯ ಮೂಲಕ ವಯಸ್ಸಾಗುವಿಕೆ ಮತ್ತು ಅಸ್ತಿತ್ವದ ಭ್ರಮೆಯನ್ನು ಮಾರ್ಮಿಕವಾಗಿ ದಾಟಿಸುತ್ತಾರೆ. ‘ಕಾಡಿನ ಒಳಗೆ ತಿಳಿಲಾರದೆ’( ಚಿಟ್ಟೆ ಹೆಜ್ಜೆ) ಕಾದಂಬರಿಯ ಭಾಗದಲ್ಲಿ ಪ್ರಕೃತಿಯ ನಿಗೂಢತೆಯನ್ನು ವರ್ಣಿಸುವ ಜೋಗಿ, ‘ನಾನು ಅಸ್ವಸ್ಥಯಲ್ಲ’ (ಅಶ್ವತ್ಥಾಮ) ಬರಹದಲ್ಲಿ ಸಮಾಜದ ಚೌಕಟ್ಟಿಗೆ ಒಗ್ಗದ ಹೆಣ್ಣಿನ ಮಾನಸಿಕ ಸ್ವಾತಂತ್ರ‍್ಯವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಾರೆ.
‘ಪುಣ್ಯಕೋಟಿ’ಯ ಜನಪದ ಕಥೆಯನ್ನು ಆಧುನಿಕ ವಿಮರ್ಶಾ ಪಂಥಗಳ ಅಂದರೆ ಮಾರ್ಕ್ಸ್ ವಾದ, ಪರಿಸರವಾದ, ಮನೋವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಲೇವಡಿ ಮಾಡುವ ‘ಹಾರಿ ಪ್ರಾಣಬಿಟ್ಟ ಹುಲಿಯ ನೆನೆಯುತ್ತಾ’ ಲೇಖನವು ಜೋಗಿ ಅವರ ಬೌದ್ಧಿಕ ಹಾಸ್ಯ ಪ್ರಜ್ಞೆಗೆ ಸಾಕ್ಷಿ.
ಅದೇ ರೀತಿ, ಪುರಾಣದ ಜರಾಸಂಧನ ಕಥೆಯನ್ನು ಇಂದಿನ ‘ಸ್ಪ್ಲಿಟ್ ಪರ್ಸನಾಲಿಟಿ’ಗೆ ಹಾಗೂ ಅರ್ಜುನ-ಊರ್ವಶಿಯ ಪ್ರಸಂಗವನ್ನು ಗಂಡಿನ ನಿಗ್ರಹ ಶಕ್ತಿಗೆ ಜೋಡಿಸುವ ಅವರ ‘ಮುಖಾಮುಖಿ ಕಾಲಂ’ಗಳು ಇವೆಯಲ್ಲ ಪುರಾಣವನ್ನು ಹೊಸ ಕಣ್ಣಿನಿಂದ ನೋಡಲು ಕಲಿಸುತ್ತವೆ.
‘ಕನ್ನಡಕ ಮಾರಾಟಕ್ಕಿದೆ’ ಕವಿತೆಯಲ್ಲಿ ಇಂದಿನ ಸಮಾಜದ ಕುರುಡುತನವನ್ನು ತೀಕ್ಷ್ಣವಾಗಿ ವಿಮರ್ಶಿಸುವ ಕವಿ, ತಾರುಣ್ಯದ ವಿಭಾಗದಲ್ಲಿ ‘ಕಿತ್ತಳೆ ಹಣ್ಣಿನ ಕತೆ’ಯ ಮೂಲಕ ದಿನದ ೨೪ ಗಂಟೆಗಳನ್ನು ಹೇಗೆ ಸೃಜನಶೀಲವಾಗಿ ಬಳಸಬೇಕೆಂಬ ಕಾಲಪ್ರಜ್ಞೆಯ ಅದ್ಭುತ ಪಾಠ ಮಾಡುತ್ತಾರೆ.
ಕೊನೆಯ ವಿಭಾಗದ ‘ಮೊದಲ ಅಲೌಕಿಕ ಬೆಳಕು’ ಮತ್ತು ‘ನಾನು ವಿರಾಗಿಯಾಗುತ್ತೇನೆ ಅಂತ ಅಮ್ಮ ಭಯಪಟ್ಟಿದ್ದಳು’ ಬರಹಗಳು ಬದುಕಿನ ಅನಿವಾರ್ಯ ನಿಲ್ದಾಣವಾದ ‘ಸಾವು’ ಮತ್ತು ಸಂಸಾರದ ನಡುವೆಯೇ ಕಂಡುಕೊಳ್ಳಬೇಕಾದ ‘ವೈರಾಗ್ಯ’ದ ತತ್ವವನ್ನು ದಾಟಿಸುತ್ತಾ ಕೃತಿಯನ್ನು ಉನ್ನತ ಮಟ್ಟಕ್ಕೊಯ್ಯುತ್ತವೆ.
ಜೋಗಿ ಅವರ ಬರಹದ ದೊಡ್ಡ ಶಕ್ತಿಯೆಂದರೆ ಅದರ ಸಹಜತೆ ಮತ್ತು ಸಂವಹನಶೀಲತೆ. ಅವರು ಎಲ್ಲಿಯೂ ಕ್ಲಿಷ್ಟ ಪದಗಳ ಬೆನ್ನು ಹತ್ತುವುದಿಲ್ಲ. ಅತ್ಯಂತ ಸಂಕೀರ್ಣವಾದ ಮಾನಸಿಕ ಸ್ಥಿತಿಗಳನ್ನು ಅಥವಾ ತಾತ್ವಿಕ ಸತ್ಯಗಳನ್ನು ಸಾಮಾನ್ಯ ಓದುಗನಿಗೂ ತಲುಪುವಂತೆ ಸರಳ ಭಾಷೆಯಲ್ಲಿ ನಿರೂಪಿಸುವುದು ಜೋಗಿ ಅವರಿಗೆ ಸಿದ್ಧಿಸಿರುವ ಕಲೆ.
ಆದರೆ, ಈ ವಿಭಿನ್ನ ವಿಭಾಗಗಳ ನಡುವೆ ಓದುಗನಿಗೆ ಕೆಲವು ಕಡೆ ಆಲೋಚನೆಗಳ ತೀವ್ರ ಸ್ಥಿತ್ಯಂತರ ಕಾಡಬಹುದು. ಒಂದು ಕಡೆ ಲಘು ಹಾಸ್ಯದ ಬರಹವಿದ್ದರೆ, ತಕ್ಷಣವೇ ತೀವ್ರ ತತ್ವಚಿಂತನೆಯ ಅಥವಾ ಭಾವುಕತೆಯ ಲೋಕಕ್ಕೆ ಓದುಗ ಜಿಗಿಯಬೇಕಾಗುತ್ತದೆ. ಇದು ಜೋಗಿ ಅವರ ಬಹುಮುಖಿ ಬರವಣಿಗೆಯ ಲಕ್ಷಣವಾದರೂ, ನಿರಂತರ ಓದಿಗೆ ಕೊಂಚ ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ. ಆದಾಗ್ಯೂ, ಸಂಪಾದಕರಾದ ವಿಕಾಸ್ ನೇಗಿಲೋಣಿ ಮತ್ತು ರಾಜೇಶ್ ಶೆಟ್ಟಿ ಅವರು ಬರಹಗಳನ್ನು ಆಯ್ಕೆ ಮಾಡಿದ ಕ್ರಮ ಹಾಗೂ ಜೋಡಿಸಿದ ಶೈಲಿ ಶ್ಲಾಘನೀಯ.
‘ಬೆಸ್ಟ್ ಆಫ್ ಜೋಗಿ’ ಮನುಷ್ಯನ ನಿತ್ಯ ಬದುಕಿನ ಸುಖ-ದುಃಖಗಳನ್ನು, ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇರುವ ಒಂದು ಆಪ್ತ ಕೈಪಿಡಿಯಂತಿದೆ.
ಇಲ್ಲಿ ಪ್ರೀತಿಯಿದೆ, ವಿರಹವಿದೆ, ನಗುವಿದೆ, ಸಾವಿನ ಮೌನವಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಪ್ರೀತಿಸಬೇಕೆಂಬ ಹಂಬಲವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಸೃಜನಶೀಲ ಮತ್ತು ವೈಚಾರಿಕ ಬರಹಗಳ ಸಮನ್ವಯವಾಗಿ ಈ ಕೃತಿ ದೀರ್ಘಕಾಲ ಉಳಿಯುವಂತಹದ್ದಾಗಿದೆ.
“ಜೋಗಿ ಅವರ ಬರಹಗಳ ದೊಡ್ಡ ಗುಣವೆಂದರೆ, ಅವರು ಎಲ್ಲೂ ಸಿದ್ಧಾಂತಗಳ ಭಾರವನ್ನು ಓದುಗನ ಮೇಲೆ ಹೇರುವುದಿಲ್ಲ. ಅತ್ಯಂತ ಗಂಭೀರವಾದ ವಿಷಯವನ್ನೂ ಮುಗುಳ್ನಗೆಯೊಂದನ್ನು ತುಟಿಯಂಚಿನಲ್ಲಿ ಉಳಿಸಿ ದಾಟಿಸಿಬಿಡುತ್ತಾರೆ.””ಇಲ್ಲಿನ ಬರಹಗಳು ಕೇವಲ ಘಟನೆಗಳನ್ನು ದಾಖಲಿಸುವುದಿಲ್ಲ; ಬದಲಿಗೆ ಮನುಷ್ಯನ ಅಂತರAಗದ ಕತ್ತಲೆ ಮತ್ತು ಬೆಳಕಿನ ನಡುವಿನ ಕಣ್ಣಾಮುಚ್ಚಾಲೆಯನ್ನು ಸೂಕ್ಷ್ಮವಾಗಿ ಹಿಡಿದಿಡುತ್ತವೆ.” “ಜೋಗಿ ಅವರ ಅಂಕಣ ಬರಹಗಳು ಕೇವಲ ಪತ್ರಿಕೆಯ ಪುಟಗಳ ಆಯಸ್ಸನ್ನು ಹೊಂದಿದ್ದವಲ್ಲ, ಅವುಗಳಿಗೆ ಸಾರ್ವಕಾಲಿಕ ಸಾಹಿತ್ಯದ ಮೌಲ್ಯವಿದೆ ಎಂಬುದನ್ನು ಈ ಸಮಗ್ರ ಸಂಕಲನ ಸಾಬೀತುಪಡಿಸುತ್ತದೆ.” “ಇದು ಕೇವಲ ‘ಬೆಸ್ಟ್ ಆಫ್ ಜೋಗಿ’ ಅಲ್ಲ; ನಮ್ಮೊಳಗಿನ ‘ಬೆಸ್ಟ್’ ಅಂಶಗಳನ್ನು ಹುಡುಕಿಕೊಳ್ಳಲು ಪ್ರೇರೇಪಿಸುವ ಅಕ್ಷರ ಕನ್ನಡಿ.”






0 Comments