ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರನೇ ಮುದ್ರಣದ ಸಂಭ್ರಮದಲ್ಲಿ ಹಿಂತಿರುಗಿ ನೋಡಿದಾಗ…

-ಎ ಆರ್ ಮಣಿಕಾಂತ್

ನಾನಾಗ ಕನ್ನಡಪ್ರಭದಲ್ಲಿದ್ದೆ. ಕ್ವೀನ್ಸ್‌ ರಸ್ತೆಯಲ್ಲಿ ಆಫೀಸಿತ್ತು. ‘ಅಪ್ಪ ಅಂದ್ರೆ ಆಕಾಶ’ ಪುಸ್ತಕದ ಬಿಡುಗಡೆಯನ್ನು ಬಿಡುಗಡೆಯನ್ನು ಭಿನ್ನವಾಗಿ ಮಾಡಬೇಕು ಎಂಬ ಆಸೆಯಿತ್ತು. ಅಂತಹ ಸಂದರ್ಭದಲ್ಲಿ, ಒಂದು ವಿಶೇಷ ಸಂದರ್ಶನಕ್ಕೆಂದು ಕ್ರೆಸೆಂಟ್‌ ರಸ್ತೆಯಲ್ಲಿರುವ ಸುವರ್ಣ ನ್ಯೂಸ್‌ ಕಚೇರಿಗೆ ಪುನೀತ್‌ ರಾಜ್‌ಕುಮಾರ್‌ ಬರುತ್ತಾರೆಂದು ಗೊತ್ತಾಯಿತು. ‘ಡಾ. ರಾಜ್‌ಕುಮಾರ್‌ ಕುರಿತು ನಾಲ್ಕು ಮಾತಾಡಿ ಪುಸ್ತಕ ಬಿಡುಗಡೆ ಮಾಡಿ’ ಎಂದು ಪುನೀತ್‌ರನ್ನು ಕೇಳುವ ಆಸೆ ನನ್ನದಿತ್ತು. ಸುವರ್ಣ ನ್ಯೂಸ್ ನಲ್ಲಿ ನಿರೂಪಕರಾಗಿದ್ದ ಗೌರೀಶ್ ಅಕ್ಕಿ ಅವರಲ್ಲಿ ನನ್ನಾಸೆ ಹೇಳಿಕೊಂಡೆ. ಅವರು, ಪುನೀತ್ ರನ್ನು ಪರಿಚಯಿಸಿದ್ದು ಮಾತ್ರವಲ್ಲ; ಪುಸ್ತಕ ಬಿಡುಗಡೆ ಮಾಡಬೇಕೆಂದೂ ಕೇಳಿಕೊಂಡರು. ತಕ್ಷಣವೇ ತಮ್ಮ ಷೆಡ್ಯೂಲ್ ಚೆಕ್ ಮಾಡಿದ ಪುನೀತ್- ‘ಸಾರಿ. ನೀವು ಹೇಳಿರುವ ದಿನದಲ್ಲಿ ನಾನು ಫಾರಿನ್ ಲಿ ಶೂಟಿಂಗ್ ಲಿ ಇರ್ತೇನೆ. ಹಾಗಾಗಿ ಬರಲು ಆಗಲ್ಲ’ ಅಂದರು. ನಂತರ, ನನಗೆ ಈ ಪುಸ್ತಕದ ಹೆಸ್ರು ತುಂಬಾ ಇಷ್ಟ ಆಗಿದೆ. ದಯವಿಟ್ಟು ಈ ಕಾಪಿ ನನಗೇ ಕೊಡಿ’ ಅಂದರು. ಹಾಗೇ ಮಾಡಿದ್ದಾಯಿತು.

************

ಮಕ್ಕಳನ್ನು ಕುರಿತು ತಂದೆ ಅಥವಾ ತಂದೆಯನ್ನು ಕುರಿತು ಮಕ್ಕಳು ಮಾತಾಡಿದರೆ, ‘ಅಪ್ಪ ಅಂದ್ರೆ ಆಕಾಶ’ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಒಂದು ಅರ್ಥ ಇರುತ್ತದೆ ಎಂದು ಯೋಚಿಸಿದ್ದೆವು. ಪುನೀತ್ ಸಿಗಲಿಲ್ಲವಲ್ಲ; ಈಗ ತಂದೆಯ ವಯಸ್ಸಿನ ಒಬ್ಬ ಖ್ಯಾತ ನಟರನ್ನು ಒಪ್ಪಿಸಲು ತೀರ್ಮಾನಿಸಿದೆವು. ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಅವರ ಮೂಲಕ ಆ ನಟನನ್ನು ಒಪ್ಪಿಸಿದ್ದೂ ಆಯಿತು. ಹಾಲ್ ಬುಕ್ ಮಾಡಿದ್ದೂ ಆಯಿತು. ಆಹ್ವಾನ ಪತ್ರಿಕೆ ಮುದ್ರಣಕ್ಕೆ ಕೊಡಬೇಕು ಅನ್ನುವಾಗ, ಆ ನಟರು ದಿಢೀರ್ ಮನಸ್ಸು ಬದಲಿಸಿದರು. ಕಾರ್ಯಕ್ರಮಕ್ಕೆ ನಾನು ಬರಲ್ಲ ಅಂದುಬಿಟ್ಟರು. ನನ್ನ ಪಾಲಿಗೆ ಅದು ದೊಡ್ಡ ಶಾಕ್. ಪುಸ್ತಕ ಬಿಡುಗಡೆಗೆ ಎಲ್ಲಾ ತಯಾರಿ ಆಗಿ, ಹಾಲ್ ಬುಕ್ ಆಗಿ, ಕಾರ್ಯಕ್ರಮಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿದ್ದಾಗ, ಮುಖ್ಯ ಅತಿಥಿಯೇ ನೋ ಅಂದುಬಿಟ್ಟರೆ… ಅವತ್ತು ಎಷ್ಟು ದುಃಖವಾಯಿತು ಅಂದರೆ, ಜೊತೆಗಿದ್ದ ನವೀನ್ ಸಾಗರ್ ನ ಕೈಹಿಡಿದುಕೊಂಡು ಸಾಹಿತ್ಯ ಪರಿಷತ್ ಎದುರಿನ ರಸ್ತೆಯಲ್ಲಿ ನಿಂತು ಜೋರಾಗಿ ಅತ್ತುಬಿಟ್ಟೆ. ‘ಅಣ್ಣ, ಅಳಬೇಡ, ಆ ನಟನ ಮನೆ ಗೊತ್ತು ನನಗೆ. ಒಮ್ಮೆ ಅವರ ಮನೆಗೇ ಹೋಗಿ ಕೇಳಿಕೊಳ್ಳೋಣ ಬಾ’ ಅಂದ ನವೀನ. ಹಾಗೇ ಮಾಡಿದ್ದಾಯಿತು. ಉಹುಂ, ಪ್ರಯೋಜನವಾಗಲಿಲ್ಲ. ಆ ನಟ-‘ನನಗೆ ಬರೋಕಾಗಲ್ಲ, ಹೋಗಿಬನ್ನಿ…’ ಅಂದರು. ಕಣ್ಣೀರು ಹಾಕುತ್ತಲೇ ಅಲ್ಲಿಂದ ಎದ್ದುಬಂದೆ.

**********

ಮೊದಲಿಂದಲೂ ನನ್ನ ಹುಂಬ ಸಾಹಸಗಳಿಗೆ ಜೊತೆಯಾಗಿದ್ದವರು ಗಾಯಕ ಉಪಾಸನಾ ಮೋಹನ್. ಅವರನ್ನು ಭೇಟಿಯಾಗಿ, ಕಣ್ಣೀರಿಡುತ್ತಲೇ ನಡೆದಿದ್ದನ್ನೆಲ್ಲ ಹೇಳಿಕೊಂಡೆ. ಅವರು ಸಮಾಧಾನಿಸುತ್ತಾ- ‘ಮಣಿ, ಇಂಥ ಘಟನೆಗಳಾದಾಗ ಅಂಜಬಾರದು. ಇನ್ನೂ ಚೆನ್ನಾಗಿ ಕಾರ್ಯಕ್ರಮ ಮಾಡ್ತೇನೆ ಅಂದುಕೊಂಡು ಮುನ್ನುಗ್ಗಬೇಕು. ಹಾಲ್ ಬುಕ್ ಮಾಡಿದ್ದ ಹಣ ಹೋಯ್ತು. ಅದನ್ನು ಮರೆತುಬಿಡಿ. ಎಚ್ ಎಸ್ ವಿ ಅವರಿಂದಾನೇ ಬುಕ್ ರಿಲೀಸ್ ಮಾಡಿಸೋಣ. ಅವರನ್ನು ಒಪ್ಪಿಸೋಣ ಬನ್ನಿ’ ಎಂದು ಎಚ್ ಎಸ್ ವಿ ಅವರ ಮನೆಗೆ ಕರೆದೊಯ್ದರು. ‘ಮೋಹನ ನಮ್ಮ ಮನೆ ಮಗ. ನೀವು ನನಗೆ ತುಂಬಾ ಬೇಕಾದವರು. ನಿಮಗೆ ಹೇಗಪ್ಪಾ ನೋ ಅನ್ನೋಕಾಗುತ್ತೆ? ಈ ದಿನಾಂಕದಂದು ಕಾರ್ಯಕ್ರಮಕ್ಕೆ ನಾನು ಬರ್ತೇನೆ. ನೀವು ಉಳಿದ ತಯಾರಿ ಮಾಡಿಕೊಳ್ಳಿ’ ಅಂದರು ಎಚ್ ಎಸ್ ವಿ.

*********

ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ ಅವರ ಸಹಕಾರ-ಪ್ರೋತ್ಸಾಹ ದೊಡ್ಡದು. ಬರೆಯುವ ವಿಷಯದಲ್ಲಿ ನಾನು ಕನಸಿನಲ್ಲೂ ನಿರೀಕ್ಷಿಸದ ಸ್ವಾತಂತ್ರ್ಯ ಕೊಟ್ಟ ಅವರು, 15 ವರ್ಷಗಳ ಅವಧಿಯಲ್ಲಿ ಒಮ್ಮೆ ಕೂಡ ಏನು ಬರೀತಿದ್ದೀರಿ ಎಂದು ಕೇಳಲಿಲ್ಲ. ನಾನು ಬರೆದಿದ್ದರಲ್ಲಿ ಒಂದಕ್ಷರವನ್ನೂ ಎಡಿಟ್ ಮಾಡಲಿಲ್ಲ. ‘ಪುಸ್ತಕ ಬಿಡುಗಡೆ ಕಾರ್ಯಕ್ರಮ’ ಅಂದಾಗ ಖಂಡಿತ ಬರ್ತೇನೆ. ಕಾರ್ಯಕ್ರಮ ಚೆನ್ನಾಗಿ ಆಗುತ್ತೆ. ಅನುಮಾನ ಬೇಡ ಎಂದು ಧೈರ್ಯ ತುಂಬಿದರು.

******

ನಾನು ಪುಸ್ತಕ ಬಿಡುಗಡೆ ಮಾಡುವ ಸಂದರ್ಭಗಳಲ್ಲಿ ಸೋದರರಂತೆ ಜೊತೆಗಿದ್ದವರು ನವೀನ್ ಸಾಗರ್ ಮತ್ತು ಚೇತನ್ ನಾಡಿಗೇರ್. ನಮ್ಮ ನವೀನ- ‘ಅಣ್ಣಾ, ಬುಕ್ ಬಗ್ಗೆ ಮಾತಾಡಲು ನಿರ್ದೇಶಕ ಗುರುಪ್ರಸಾದ್ ಗೆ ಕೇಳೋಣ. ಅವರು ತುಂಬಾ ಚೆನ್ನಾಗಿ ಮಾತಾಡ್ತಾರೆ’ ಅಂದ. ಚೇತನ್ ಗೆ ಈ ವಿಷಯ ತಿಳಿಸಿದಾಗ- ಹೌದಣ್ಣಾ, ಆತ ಒಳ್ಳೆಯ ಮಾತುಗಾರ. ಅವರನ್ನು ಕರೆಸೋಣ ಅಂದದ್ದಲ್ಲದೆ, ಫೋನ್ ಮಾಡಿ ಅವರನ್ನು ಒಪ್ಪಿಸಿಯೂ ಬಿಟ್ಟ. ಮರುದಿನವೇ ಅವರಿಗೆ ಒಂದು ಪುಸ್ತಕವನ್ನೂ ಕಳಿಸಿದ್ದಾಯಿತು. ಮುಖ್ಯ ಅತಿಥಿಯಾಗಿ ನಟಿ ಭಾವನಾ ಅವರನ್ನು ಕರೆಸೋಣ ಎಂದ ನವೀನ, ಅವರನ್ನು ಭೇಟಿ ಮಾಡಿಸಿ ಒಪ್ಪಿಸಿದ. ನಾಲ್ಕು ದಿನ ಬಿಟ್ಟು, ನಿರ್ದೇಶಕ ಗುರುಪ್ರಸಾದ್ ಅವರನ್ನು ಖುದ್ದಾಗಿ ಆಹ್ವಾನಿಸಲು ಜಂಬೂಸವಾರಿ ದಿಣ್ಣೆ ಹತ್ತಿರವಿದ್ದ ಅವರ ಮನೆಗೆ ಹೋದಾಗ, ಅವರು ಹೇಳಿದರು: ‘ಪುಸ್ತಕ ಓದಿದೆ. ತುಂಬಾ ಚೆನ್ನಾಗಿದೆ. ಒಂದ್ ಮಾತು ಹೇಳ್ತೀನಿ ಮಣಿಕಾಂತ್. ನಿಮ್ಮ ಪುಸ್ತಕ ಬಿಡುಗಡೆಯ ದಿನ, ಪ್ರತಿ ಮಾತಿಗೂ ಜನ ಚಪ್ಪಾಳೆ ಹೊಡೀಬೇಕು, ಹಾಗೆ ಮಾತಾಡ್ತೇನೆ, ಪ್ರೋಗ್ರಾಮ್ ಕ್ಲಿಕ್ ಆಗುತ್ತೆ. ಆರಾಮಾಗಿ ಇರಿ’ ಅಂದರು.

**********

ಕಾರ್ಯಕ್ರಮಕ್ಕೆ ನಾಲ್ಕು ದಿನ ಬಾಕಿ ಉಳಿದಿವೆ ಅನ್ನುವಾಗ, ವಿಪರೀತ ಜ್ವರ. ಎದ್ದು ಕೂರಲೂ ಶಕ್ತಿ ಇರಲಿಲ್ಲ. ಕಾರ್ಯಕ್ರಮದ ಬಗ್ಗೆ ಫೇಸ್ ಬುಕ್ ನಲ್ಲಿ, ಮೇಲ್ ನಲ್ಲಿ ಎರಡು ಪ್ಯಾರಾ ಬರೆಯಲೂ ಆಗುತ್ತಿಲ್ಲ ಅನ್ನುವಷ್ಟು ನಿಶಕ್ತಿ. ನವೀನನಿಗೆ ಎಲ್ಲವನ್ನೂ ಹೇಳಿಕೊಂಡೆ. ‘ಅಣ್ಣಾ, ನೀನು ರೆಸ್ಟ್ ತಗೋ. ಪೂರ್ತಿ ಹುಷಾರಾಗು. ಫೇಸ್ ಬುಕ್ ಲಿ ನಾನು ಪೋಸ್ಟ್ ಹಾಕ್ತೇನೆ’ ಅಂದವನು, ನನ್ನ ಕುರಿತು, ಪುಸ್ತಕದ ಕುರಿತು ಆಪ್ತವಾಗಿ ಬರೆದು ಫೇಸ್ ಬುಕ್ ಲಿ ಹಾಕಿದ. ಅದುವರೆಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದ ಅಪ್ಪ, ಈ ಬಾರಿ ಮನಸ್ಸು ಬದಲಿಸಿ ಬಂದುಬಿಟ್ಟರು. ನಮ್ಮ ವಿಜಯಕ್ಕ- ‘ಬೊಕೆಗಳನ್ನು ನಾನು ತಗೊಂಡು ಬರ್ತೀನಿ ಮಣೀ. ಆ ಜವಾಬ್ದಾರಿ ನನಗೆ ಬಿಡು’ ಅಂದರು. ಪುಸ್ತಕದಲ್ಲಿರುವ ರಿಯಲ್ ಹೀರೊಗಳನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

*****

ನಾಳೆ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಅನ್ನುವಾಗ, ರಾತ್ರಿ 9 ಗಂಟೆಯಲ್ಲಿ ನಾಗಪಟ್ಟಣಂನ ಮಹೇಶ್ವರಂ- ನಾಗಮಣಿ ದಂಪತಿ ಫೋನ್ ಮಾಡಿದರು. (ಪುಸ್ತಕದಲ್ಲಿ ಅವರ ಸ್ಟೋರಿ ಇದೆ.) ‘ಕಾರ್ಯಕ್ರಮಕ್ಕೆ ಬರ್ತಾ ಇದ್ವಿ. ಸೇಲಂ ಹತ್ರ ನಮ್ಮ ಕಾರ್ ಆಕ್ಸಿಡೆಂಟ್ ಆಗಿಬಿಟ್ಟಿದೆ. ಈಗ ಪೊಲೀಸ್ ಠಾಣೆಯಲ್ಲಿ ಇದ್ದೇವೆ. ಕೇಸ್ ಫೈಲ್ ಮಾಡ್ತೇವೆ, ನೀವು ಇಲ್ಲಿಂದ ಹೋಗುವಂತಿಲ್ಲ ಎಂದು ಇನ್ಸ್ಪೆಕ್ಟರ್ ಹೇಳ್ತಾ ಇದ್ದಾರೆ. ಬಹುಶಃ ನಾವು ಬರೋಕಾಗಲ್ಲ… ತಪ್ಪು ತಿಳಿಯಬೇಡಿ, ಸಾರಿ’ ಅಂದರು! ನಂತರದ ಅರ್ಧ ಗಂಟೆಯ ಅವಧಿಯಲ್ಲಿ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದ ಮತ್ತಿಬ್ಬರು ರಿಯಲ್ ಹೀರೋಗಳು, ವೈಯಕ್ತಿಕ ಕಾರಣಗಳಿಂದ ನಾವು ಬರಲು ಆಗುತ್ತಿಲ್ಲ, ಸಾರಿ…’ ಅಂದರು. ದಿಕ್ಕು ತೋಚದೆ ಉಪಾಸನಾ ಮೋಹನ್ ಅವರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ‘ಯಾರು ಬರಲಿ ಬಿಡಲಿ, ಕಾರ್ಯಕ್ರಮ ಅಂತೂ ಗ್ರ್ಯಾಂಡ್ ಆಗಿ ಮಾಡೋಣ. ಆರಾಮಾಗಿ ಇರಿ’ ಅಂದರು. ಮರುದಿನ ಮ್ಯಾಜಿಕ್ ನಡೆದುಹೋಗಿತ್ತು. ಮಹೇಶ್ವರಂ- ನಾಗಮಣಿ ದಂಪತಿ ಸೇರಿದಂತೆ, ಕಾರ್ಯಕ್ರಮಕ್ಕೆ ಬರಲ್ಲ ಅಂದಿದ್ದವರೆಲ್ಲ, ನಮಗಿಂತ ಮೊದಲೇ ರವೀಂದ್ರ ಕಲಾಕ್ಷೇತ್ರಕ್ಕೆ ಬಂದಿದ್ದರು. ‘ಕಾರ್ಯಕ್ರಮದ ವಿವರ ಕೇಳಿದ ಇನ್ಸ್ಪೆಕ್ಟರ್, ಮನಸ್ಸು ಬದಲಿಸಿ, ಕೇಸ್ ಹಾಕದೆ ನಮ್ಮನ್ನು ಕಳಿಸಿಕೊಟ್ಟರು’ ಎಂದು ಮಹೇಶ್ವರನ್- ಚೂಡಾಮಣಿ ದಂಪತಿ ಹೇಳಿದರು.

*****

ಆನಂತರದಲ್ಲಿ ನಡೆದದ್ದು ಉಪಾಸನಾ ಮೋಹನ್ ಮತ್ತು ಸಂಗಡಿಗರಿಂದ ಮಧುರ ಗಾಯನದ ಕಾರ್ಯಕ್ರಮ. ನಂತರ ಪುಸ್ತಕ ಬಿಡುಗಡೆ. ನಿರ್ದೇಶಕ ಗುರುಪ್ರಸಾದ್ ಎಷ್ಟು ಚೆನ್ನಾಗಿ ಮಾತಾಡಿದರು ಅಂದರೆ- ಅವರು ಮಾತಾಡುತ್ತಿದ್ದಷ್ಟೂ ಹೊತ್ತು ಜನ ನಗೆಗಡಲಲ್ಲಿ ತೇಲುತ್ತಿದ್ದರು. ನಂತರ ವಿಶ್ವೇಶ್ವರ ಭಟ್ಟರು, ನಟಿ ಭಾವನಾ, ನನ್ನ ಪ್ರೀತಿಯ ಕವಿ ಎಚ್ ಎಸ್ ವಿ ಮಾತಾಡಿದರು. ರಿಯಲ್ ಹೀರೋಗಳ ಪರವಾಗಿ ಮಾತಾಡಿದ ಚೂಡಾಮಣಿ ಅವರು- ನನಗೆ ಎಷ್ಟೊಂದು ಜನ ಬಂಧುಗಳು ಸಿಕ್ಕರೂ… ಎನ್ನುತ್ತಾ ಕಣ್ತುಂಬಿಕೊಂಡರು.

******

ಇದೆಲ್ಲಾ ನಡೆದು 14 ವರ್ಷ ಕಳೆದಿದೆ. ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕದ ಜನಪ್ರಿಯತೆಯ ಮಧ್ಯೆ ‘ಅಪ್ಪ ಅಂದ್ರೆ ಆಕಾಶ’ ಪುಸ್ತಕ ಅಷ್ಟಾಗಿ ಜನರನ್ನು ತಲುಪಲಾರದೇನೋ ಅಂದುಕೊಂಡಿದ್ದ ನನ್ನ ಅಂದಾಜು ತಪ್ಪಾಗಿದೆ. ಈ ಪುಸ್ತಕವನ್ನು ಕನ್ನಡಿಗರು, ಅದರಲ್ಲೂ ಹೆಣ್ಣು ಮಕ್ಕಳು ಅತೀ ಅನ್ನುವಷ್ಟು ಇಷ್ಟಪಟ್ಟಿದ್ದಾರೆ. ಶಿಕ್ಷಕರು, ತಮ್ಮ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಕೊಟ್ಟು ಓದಿಸಿದ್ದಾರೆ. ತುಂಬಾ ಸಂತೋಷದ ಸಂಗತಿ ಎಂದರೆ- ಪುಸ್ತಕ ಓದಿದವರೆಲ್ಲ ಖುಷಿಪಟ್ಟಿದ್ದಾರೆ. ಕೆಲವರು, ಈ ಪುಸ್ತಕದಲ್ಲಿರುವ ಹೀರೋಗಳಂತೆಯೇ ಬೆಳೆದು ದೊಡ್ಡ ಹೆಸರು ಮಾಡಿದ್ದಾರೆ. ಓದುಗದೊರೆಗಳ ಔದಾರ್ಯದ ಫಲವಾಗಿ- ಅಪ್ಪ ಅಂದ್ರೆ ಆಕಾಶ ಪುಸ್ತಕ 100 ನೇ ಮುದ್ರಣ ಕಂಡಿದೆ.

ಓದುಗರ ಈ ಋಣವನ್ನು ತೀರಿಸುವುದು ಹೇಗೆಂದು ತಿಳಿಯದೆ ಕಣ್ತುಂಬಿಕೊಂಡು, ಮೂಕನಾಗಿ ನಿಂತಿದ್ದೇನೆ.

ನಿಮ್ಮೆಲ್ಲರ ಹಾರೈಕೆಯೇ ನನ್ನ ಶಕ್ತಿ.

ಪ್ರೀತಿ ಇರಲಿ…

‍ಲೇಖಕರು Admin

23 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading