ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಮಾಯಾ ಚಾಪೆಯ ಮೇಲೊಂದು ಪಯಣ

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 17

ಕೃತಿ – ಡೋರ್ ನಂಬರ್ 142

ಲೇಖಕರು – ಜಿ. ಎನ್. ಮೋಹನ್

ಪ್ರಕಾಶನ – ಅಂಕಿತ ಪುಸ್ತಕ

ಬೆಲೆ –95

ಜಿ.ಎನ್. ಮೋಹನ್ ಎಂದರೆ ಥಟ್ಟನೆ ನೆನಪಾಗುವುದು ಅವರ ವೈಶಿಷ್ಟ ಪೂರ್ಣವಾದ ಪ್ರವಾಸ ಕಥನ ನನ್ನೊಳಗಿನ ಹಾಡು ಕ್ಯೂಬಾ. ಪ್ರವಾಸ ಕಥನವೆಂದರೆ ಕೇವಲ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ, ಇತಿಹಾಸದ ಪರಿಚಯ, ಅಂಕಿ ಅಂಶಗಳ ದಾಖಲೀಕರಣ ಮಾತ್ರವಲ್ಲ, ಅದನ್ನು ಮೀರಿದ ಮಾಹಿತಿಯನ್ನು ಜಿ. ಎನ್. ಮೋಹನ್ ಅವರು ತಮ್ಮ ಪ್ರವಾಸ ಕಥನದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಮಾದರಿ ರಾಷ್ಟ್ರ ಕಟ್ಟುವ ಬಗೆ,ಅದಕ್ಕಾಗಿ ಅಲ್ಲಿನ ಪ್ರಜೆಗಳ ತ್ಯಾಗ ಬಲಿದಾನ ಮತ್ತು ರಾಷ್ಟ್ರಪ್ರೇಮದ ವಿನೂತನವಾದ ಕಥಾನಕವೆ ಅವರ ಪ್ರವಾಸ ಕಥನದ ವಸ್ತುವಾಗಿದೆ. ಹಾಗೆಯೇ ಅವರ ಡೋರ್ ನಂಬರ್ 142 ಕೂಡ ಕೇವಲ ಅವರ ಆತ್ಮಕಥನವಲ್ಲ, ಅದನ್ನು ಮೀರಿದ ಅರ್ಧ ಶತಮಾನದ ಹಿಂದಿನ ಸೌಹಾರ್ದ ಬದುಕು, ಸಂಬಂಧಗಳಲ್ಲಿನ ಗಟ್ಟಿತನ, ಧಾವಂತದ ಬದುಕಿನಿಂದ ಮುಕ್ತವಾದ ಸರಳವಾದ ಬದುಕಿನ ಚಿತ್ರಣವನ್ನು ತಮ್ಮದೇ ದಾಟಿಯಲ್ಲಿ ಹೇಳಿದ್ದಾರೆ. 142 ಇದು ಕೇವಲ ಮನೆಯ ನಂಬರ್ ಮಾತ್ರವಲ್ಲ, ಆ ಮನೆಯ ಬಾಗಿಲ ಮೂಲಕ ಇಡೀ ಜಗತ್ತನ್ನೇ ಬೆರಗುಗಣ್ಣಿನಿಂದ ನೋಡಿದ ಪರಿಯನ್ನು

ಬಿಂಬಿಸಿದ್ದಾರೆ. ಮನೆ ನಂಬರ್ 142 ಅದು ಅವರ ಅಸ್ತಿತ್ವ ಮತ್ತು ಅಸ್ಮಿತೆ ಎರಡು ಆಗಿತ್ತೆಂದು ಹೇಳುತ್ತಾ ಸಾಗುತ್ತಾರೆ.

“ಏಕ ತಿತಲಿ, ಅನೇಕ ತಿತಲಿಯಾ, ಏಕ ಏಕ ಏಕ ಅನೇಕ “
ಎಂಬ ಹಾಡಿನಂತೆ, ಒಂದು ಮನೆ ಆ ಮನೆಯಲ್ಲಿ ಅನೇಕರು, ಎಲ್ಲರೂ ಬೇರೆಯಾಗಿದ್ದರು ಕೂಡ ಅವರೆಲ್ಲ ಒಂದೇ ಎಂಬ ಭಾವ ಈ ಕೃತಿಯಲ್ಲಿ ಒಡ ಮೂಡಿದೆ. ಆ ಕಾಲದ ಮನೆ, ಬಡಾವಣೆ, ಊರು ಹೀಗೆ ಎಲ್ಲವೂ ವಿವಿಧತೆಯಲ್ಲಿ ಏಕತೆ ಕಾಣುಬಹುದಾಗಿತ್ತು.

ಮೋಹನ್ ಅವರ ಈ ಆತ್ಮಕಥೆ ಭಿನ್ನವಾಗಿದ್ದು, ಮಾಯಾ ಚಾಪೆ ಮೇಲೆ ಕುಳಿತು ಭೂತಕಾಲದಲ್ಲಿ ತೇಲುವ ಒಂದು ವಿನೂತನ ಯತ್ನದಂತಿದೆ. ಇಲ್ಲಿ ವರ್ತಮಾನ ಮತ್ತು ಭೂತಕಾಲಕ್ಕೆ ಏಣಿ ಹಾಕಿದ್ದಾರೆ. ಯಾವುದು ತುದಿ ಮೊದಲು ಎಂಬ ಭೇದವಿಲ್ಲ, ಆದರೆ ಒಂದಕ್ಕೊಂದು ನಂಟು ಬೆಸದಿದೆ.

ಜಿ. ಎನ್.ಮೋಹನ್ ಅವರು ಮೂಲತಃ ಪತ್ರಿಕೋದ್ಯಮಿ. ಹಾಗಾಗಿ ಚಿಕ್ಕ ಚಿಕ್ಕ ಲೇಖನಗಳಲ್ಲಿ, ಪದಗಳ ಮಿತಿಯಲ್ಲಿ ಆಲೋಚನೆಗೆ ಹಚ್ಚುವಂತ ವಿಷಯಗಳು ಇಲ್ಲಿ ಚರ್ಚಿಸಿದ್ದಾರೆ. ಇದು ಅವರ ಜೀವನ ಕಥನವಾದರೂ ಕೂಡ ಎಲ್ಲೂ ಅವರು ದಿನಾಂಕ,ಊರು, ಹೆಸರುಗಳನ್ನು ನಮೂದಿಸದೆ ತಮ್ಮದೇ ಲಹರಿಯಲ್ಲಿ ಕೆಲವು ದಶಕದ ಹಿಂದಿನ ಬದುಕನ್ನು ಅನಾವರಣಗೊಳಿಸಿದ್ದಾರೆ. ನಗರೀಕರಣದಿಂದ ದೂರವಾದ ಬದುಕು, ಅಕ್ಷರಗಳ ಮೂಲಕವೇ ಎಲ್ಲವನ್ನೂ ದಕ್ಕಿಸಿಕೊಳ್ಳುವ ಕಾಲ, ಇಂದಿನ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ತೆಕ್ಕೆಯಲ್ಲಿ ಕಳೆದುಹೋಗದ, ಧಾವಂತವಿಲ್ಲದ ಬದುಕನ್ನು ಬಿಚ್ಚಿಟ್ಟಿದ್ದಾರೆ.

ಆತ್ಮಕಥನವೆಂದರೆ ತಮ್ಮ ಬದುಕಿನ ಘಟನೆಗಳನ್ನು ಎಲ್ಲವನ್ನು ಓದುಗನ ಎದುರು ಬಿಚ್ಚಿಡುತ್ತ ಹಗುರಾಗುವ ಪ್ರಕ್ರಿಯೆ ಎಂಬ ಮಾತನ್ನು ಅಲ್ಲಗಳೆಯುತ್ತಾ, ತಮಗೆ ಕಾಡಿದ ಕೆಲವು ಪ್ರಸಂಗಗಳನ್ನು ಮಾತ್ರ, ವರ್ತಮಾನದ ಕನ್ನಡಿಯಿಂದ ಭೂತಕಾಲದ ಬದುಕಿಗೆ ಇಣುಕಿ ಹಾಕಿ, ತಮ್ಮೊಂದಿಗೆ ಓದುಗನನ್ನು ಸಹಜವಾಗಿ ಕರೆದೊಯ್ಯುತ್ತಾರೆ.

ಅವರು ಬಾಲ್ಯದಲ್ಲಿ ಬಳಸಿದ ಚೀತಾ ಫೈಟ್ ಎಂಬ ದಂತ ಮಂಜನ, ಮೈಗೆ ಹಚ್ಚುವ ತರಾವರಿ ಸಾಬೂನುಗಳ ಕುರಿತು, ಹಳೆಯ ಹಾಡುಗಳು, ಅವರು ಸಾಕಿದ ಕಾಣೆಯಾದ ಆಕಳಿನ ಕಣ್ಣುಗಳು, ಬಾಲ್ಯದಲ್ಲಿ ಚುನಾವಣೆಯ ಬಗ್ಗೆ ಅವರಿಗಿರುವ ಮುಗ್ಧತೆ, ಅಂದಿನ ಸೌಹಾರ್ದ ಬದುಕು ಎಲ್ಲವನ್ನು ಪ್ರಸ್ತುತ ಕಾಲಮಾನದೊಂದಿಗೆ ತೌಲನಿಕವಾಗಿ ನೋಡುತ್ತಾ ಹೋಗುತ್ತಾರೆ.

“ಎದೆ ಎದೆಗಳ ನಡುವಿನ ಸೇತುವೆಗಳು ಕುಸಿದಿವೆ, ಭಯಕಂಪನ ತಲ್ಲಣಗಳ ವಾದ್ಯ ವೃಂದ ಮೊಳಗಿವೆ, ಯಾವುದೀ ಪ್ರವಾಹವು ? “
ಎಂಬ ಸಾಲು ನಮ್ಮನ್ನು ನಾವು ಅವಲೋಕಿಸುವಂತಿದೆ. ಬದಲಾಗುತ್ತಿರುವ ಕಾಲಕ್ಕೆ ಕೈಗನ್ನಡಿಯಂತಿದೆ.

ಜಿ.ಎನ್. ಮೋಹನ್ ಅವರ ಬದುಕಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಪಾತ್ರಗಳು ಎಂದರೆ ಅವರ ಅಪ್ಪ, ಅಮ್ಮ ಮತ್ತು ಅಣ್ಣ, ಹಾಗೂ ಅಣ್ಣ ತಂದು ಕೊಡುವ ಪುಸ್ತಕಗಳು. ಇನ್ನು ಬಾಲ್ಯದ ಸಣ್ಣಪುಟ್ಟ ಸಂಗತಿಗಳನ್ನು ಅತ್ಯಂತ ಮೋಹಕವಾಗಿ ಬಣ್ಣಿಸಿದ್ದಾರೆ. ತಂಗಿಗೆ ಉಡುಗೊರೆಯಾಗಿ ನಟರಾಜ್ ಪೆನ್ಸಿಲ್ ಕೊಟ್ಟ ಪ್ರಸಂಗ ಪದೇ ಪದೇ ಮೆಲಕು ಹಾಕುವಂತಿದೆ..

ಇನ್ನು ಯೌವ್ವನಾವಸ್ಥೆಗೆ ಬಂದ ನಂತರ ಅವರಲ್ಲಿ ಆದ ಬದಲಾವಣೆ, ಮದುವೆ, ಮಗಳು ಎಲ್ಲವನ್ನು ತುಣುಕು ತುಣುಕಾಗಿ ಹೇಳುತ್ತಾ ಹೋಗುತ್ತಾರೆ, ಡಿಜಿಟಲ್ ಜಗತ್ತಿಗೆ ಅವರು ತೆರೆದುಕೊಂಡ ಪರಿ , ಅದು ಎಲ್ಲರ ಅನುಭವವು ಎನ್ನುವಂತಿದೆ.

ಹೀಗೆ ತಮ್ಮ ಬದುಕಿನ ಘಟನಾವಳಿಗಳನ್ನು ಕೆಲವೊಂದಿಷ್ಟು ಮಾತ್ರ ಹೇಳಿ ಕನ್ಫೆಷನ್ ಮಾಡಿಕೊಂಡಿದ್ದಾರೆ, ಹೊರತು, ಹಾಗೆಂದು ಎಲ್ಲವನ್ನೂ ಹೇಳಿ ನಿರುಮ್ಮಳವಾಗಿಲ್ಲ. ಇನ್ನೂ ಏನೆಲ್ಲಾ ಹೇಳುವುದಿದೆ, ಆದರೆ ಡೋರ್ ನಂಬರ್ 142 ಮೂಲಕ ಇಣುಕಿದಾಗ ಆಚೆ ಈಚೆ ಕಂಡ, ಕಾಡಿದ, ಕುತೂಹಲವಾದ, ಕೌತುಕ ಸಂಗತಿಗಳನ್ನು ಮಾತ್ರ ನೆನಪಿಸಿಕೊಂಡು ಮೆಲುಕು ಹಾಕಿದ್ದಾರೆ.

ಪ.ಸ.ಕುಮಾರ ಅವರು ಕೃತಿಯ ಕುರಿತು ಹೇಳಿದ ಮಾತು "ನೆನಪೆಂದರೆ ಅಸ್ಪಷ್ಟ ಭೂತ(ಕಾಲ)ಗಳ ಜೊತೆಗಿನ ಸಂವಾದ" ಎಂಬುದು ಸತ್ಯದ ಮಾತು. 

ಜಿ.ಎನ್. ಮೋಹನ್ ಅವರ ಈ ನೆನಪಿನ ಬುತ್ತಿಯು, ಆ ಕಾಲಘಟ್ಟದ ಎಲ್ಲರ ಬದುಕಿನ ಬುತ್ತಿಯು ಆಗಿತ್ತು. ಮನೆ ನಂಬರ್ ಬೇರೆ ಬೇರೆ ಆಗಿರಬಹುದು, ಆದರೆ ಎಲ್ಲರ ಮನೆಯ ಚಿತ್ರಣವು ಒಂದೇ ಆಗಿತ್ತು. ಇವರ ಬರವಣಿಗೆ ಓದುತ್ತಾ, ಓದುಗ ಕೂಡ ಮಾಯಾ ಚಾಪೆಯ ಮೇಲೆ ಕುಳಿತು ಭೂತದಲ್ಲಿ ತೇಲಾಡಿದ ಅನುಭವ ದಕ್ಕದೆ ಇರದು. ಓದಿದ ಎಲ್ಲರೂ ಕೂಡ ತಮ್ಮ ತಮ್ಮ ಡೋರ್ ಗಳ ಮೂಲಕ ಇಣುಕಿ ಹಾಕುವಂತೆ ಮಾಡುವ ಆಪ್ತಬರಹ ಜಿ. ಎನ್. ಮೋಹನ್ ಅವರದ್ದು. ವಿಭಿನ್ನ ತಂತ್ರಗಾರಿಕೆ, ಭಾಷೆಯ ಲಾಲಿತ್ಯ ಮತ್ತು ಛಂದ ಬರವಣಿಗೆಯ ಶೖಲಿಯಿಂದ, ಕೃತಿಯು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ.

‍ಲೇಖಕರು Admin

23 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading