ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯದ ಓದಿಗೆ ಸಕಾಲ

ರಾಜಕುಮಾರ ಮಡಿವಾಳರ ‘ನೆಲದ ಕಾವು ಮುಗಿಲ ತಾಕಿ’

ಅಕ್ಷರ ಮಂಡಲ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ ಇಲ್ಲಿದೆ.

~ ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು

ರಾಜಕುಮಾರ ಮಡಿವಾಳರ ಸಾಮಕಾಲೀನ ಕವಿಗಳಲ್ಲಿ ನಾನು ಬಹಳ ಕುತೂಹಲದಿಂದ ಗಮನಿಸುವ ಕವಿ. ಅವರು ಬಳಸುವ ಕಾವ್ಯದಭಾಷೆ ನನಗೆ ಬಹಳ ಇಷ್ಟ. ಧಾರವಾಡದ ಬಾಷೆಯಲ್ಲಿ ಕಾವ್ಯ ಓದುವಾಗ ಹಿನ್ನಲೆಯಲ್ಲಿ ಬೇಂದ್ರೆ ಯಾವತ್ತೂ ಸುಳಿದು ಹೋಗುತ್ತಾರೆ. ಈ ಕವಿಯನ್ನು ಓದುವಾಗಲೂ ಬೇಂದ್ರೆ, ಕೆ ಎಸ್‌ ಎನ್‌ ನೆನಪಾಗುತ್ತಾರೆಂದರೆ ಅದು ಅವರ ಕಾವ್ಯದ ಅನುಕರಣೆಯಿಂದಲ್ಲ. ಬದಲಿಗೆ ಭಾಷೆ ಮತ್ತು ಆರಿಸಿಕೊಂಡ ಕಾವ್ಯವಸ್ತುವಿನ ಕಾರಣದಿಂದ. ಕಾವ್ಯಪರಂಪರೆಯ ಹಾದಿಯಲ್ಲಿ ನಡೆಯುತ್ತ ತನ್ನದೇ ಆದ ಸ್ವಂತದ ಕಿರುಹಾದಿಯನ್ನು ರಾಜಕುಮಾರ್‌ ಕಂಡುಕೊಂಡಿದ್ದಾರೆ ಅಂತ ಮುನ್ನುಡಿ ಬರೆದ ಹಿರಿಯ ಕವಿ ಸತೀಶ್‌ ಕುಲಕರ್ಣಿ ಹೇಳಿರುವುದು ಸರಿಯಾಗಿಯೇ ಇದೆ. 

ಜೀರ್ಣೋದ್ಧಾರಗೊಂಡ ಎಲ್ಲಾ ದೇವಸ್ಥಾನಗಳು ಗ್ರಾನೈಟ್‌ ನೆಲ, ಅಲ್ಯೂಮೀನಿಯಂ ಶೀಟ್‌ ಹೊದ್ದುಕೊಂಡು ಒಂದೇ ತರಹ ಕಾಣುವ ಹಾಗೆ ಯಾವುದೋ ಸಿದ್ಧಾಂತಕ್ಕೆ ವಾಲಿಕೊಂಡು ಒಂದು ಸಿದ್ಧ ಮಾದರಿಯನ್ನು ಅನುಸರಿಸುವ ಇಂದಿನ ಬಹುತೇಕ ಕವಿಗಳ ಕಾವ್ಯ ಒಂದೇ ತರಹ ಅನ್ನಿಸಿಬಿಡುತ್ತದೆ ನನಗೆ. ರಾಜಕುಮಾರ್‌ ಇವರಿಗಿಂತ ಭಿನ್ನ ಅನ್ನಿಸಲು ಮುಖ್ಯ ಕಾರಣ, ಎಲ್ಲವನ್ನೂ ಕಾವ್ಯದ ಮೂಲಕವೇ ಹೇಳಬೇಕೆನ್ನುವ ಜಿದ್ದಿಗೆ ಇವರು ಬೀಳದೇ ಇರುವುದು ಮತ್ತು ಸಮಾಜದ ತಲ್ಲಣಗಳಿಗೆ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಲು ಕಾವ್ಯ ಮಾತ್ರವಲ್ಲದೇ ಬೇರೆ ಮಾಧ್ಯಮಗಳೂ ಇವೆ ಅನ್ನುವುದನ್ನು ಸರಿಯಾಗಿಯೇ ಗ್ರಹಿಸಿರುವುದು. ಹಾಗಾಗಿಯೆ ಇವರ ಕವಿತೆಗಳು ಸೈಧ್ಯಾಂತಿಕ ಭಾರದಿಂದ ನಲುಗುವುದಿಲ್ಲ. ಯಾವುದೋ ಘಟನೆಯನ್ನು ಮೆಲುಕು ಹಾಕಿಕೊಂಡು ಕವಿತೆಯಲ್ಲಿಯೇ ಕಟ್ಟಿಕೊಡಬೇಕು, ಪ್ರತಿಕ್ರಿಯೆ ಕೊಡಬೇಕು ಅನ್ನುತ್ತಾ ಬುದ್ಧಿಪೂರ್ವಕವಾಗಿ ಪದಗಳನ್ನು ಬಲವಂತವಾಗಿ ತಂದು ಕೂರಿಸಿ ಪದ್ಯ ಮಾಡುವ ಯಾವ ಆತುರವನ್ನೂ ತೋರುವುದಿಲ್ಲ. ಅಂತಹ ಯಾವುದೇ ಒತ್ತಡಗಳಿಗೆ, ಪಂಥಗಳಿಗೆ, ಸ್ಪರ್ಧೆಗಳಿಗೆ ಕಟ್ಟುಬಿದ್ದವರಲ್ಲ. ಕರಿಮೋಡ ಕಂಡು ನಲಿವ ನವಿಲಿನ ಹಾಗೆ, ಕುಡಿಚಿಗುರು ತಿಂದು ಉಲಿವ ಕೋಗಿಲೆಯ ಹಾಗೆ! ಯಾರೋ ಮೆಚ್ಚಲಿ ಅಂತ ಇವರು ಕವಿತೆಗಳನ್ನು ಬರೆಯುವುದಿಲ್ಲ.

ಇವರ ನೆಲದ ಕಾವು ಮುಗಿಲ ತಾಕಿ ಕವಿತೆಗಳ ಸಂಕಲನ ಸುಡುಬೇಸಿಗೆಯಲ್ಲಿಯೇ ಕೈಗೆ ಸಿಕ್ಕಿತ್ತಾದರೂ ಬಿಡಿಸಿ ನೋಡುವಾಗ ಆಗಲೇ ಮುಗಿಲ ತಾಕಿದ ಕಾವು ಮಳೆಯಾಗಿ ನೆಲವನ್ನು ಹಸಿ ಮಾಡುತ್ತಿದೆ. ಒಂದೊಂದು ಕವಿತೆಯನ್ನು ತೆರೆದು ಓದುವಾಗ ಇದು ಇವರ ಕಾವ್ಯದ ಓದಿಗೆ ಸಕಾಲ ಅನ್ನಿಸಿತು. ರಾಜಕುಮಾರ್‌ ಅಪ್ಪಟ ಸ್ತ್ರೀ ಸಂವೇದನೆಯ ಜನಪದೀಯ ಕವಿ. ತನ್ನ ನೆಲದ ಆಚಾರ ವಿಚಾರ ಸಂಸ್ಕೃತಿ ಹಬ್ಬ ಎಲ್ಲದರ ಸ್ಪಷ್ಟ ಅರಿವು ಈ ಕವಿಗಿದೆ. ಅದು ಕೇವಲ ಪುಸ್ತಕದ ಓದಿನಿಂದ ಪ್ರಾಪ್ತಿಯಾದ ಜ್ಞಾನವಲ್ಲ. ಜನರ ಬದುಕನ್ನು ಹತ್ತಿರದಿಂದ ಓದಿಕೊಂಡ ಅನುಭವದ ಅರಿವಿದು. ದಾಂಪತ್ಯದ ಚೌಕಟ್ಟಿನೊಳಗೆ ಬರುವ ಸಣ್ಣಸಣ್ಣ ಸಂಗತಿಗಳನ್ನೂ ಕವಿತೆಯಲ್ಲಿ ಸಂಭ್ರಮಿಸುವ, ಎಂದೂ ಭೇಟಿಯಾಗದ ತುಂಗೆ ದಡದ ಹುಡುಗಿಯ ನೆನೆಯುತ್ತಾ ತುಸು ಹೆಚ್ಚೇ ಪೋಲಿಯಾಗುವ ಸಂಭಾವಿತ ಕವಿ ರಾಜಕುಮಾರ!

ಹೆಣ್ಣಾಗು ಇಲ್ಲಾ ಮಣ್ಣಾಗು; ಇವೆರಡರಿಂದಲೇ ಹುಟ್ಟೆಂಬುದು ಅನ್ನುವುದು ಕವಿಯ ಬದುಕಿನ ತತ್ವ. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು, ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ಅಂತ ಎಚ್ಚೆಸ್ವಿ ರಾಧೆಯ ಕಣ್ಣಿನಿಂದ ಕೃಷ್ಣನನ್ನು ನೋಡುವ ಹಾಗೆ, ತನ್ನ ಸುತ್ತಲ ಜಗತ್ತನ್ನು ಹೆಣ್ಣಿನ ದೃಷ್ಠಿಯಿಂದ ನೋಡುತ್ತಾ ಮತ್ತು ಅವಳ ಅಂತಃಕರಣದಿಂದಲೇ ಬದುಕನ್ನು ಅರಿತುಕೊಳ್ಳುತ್ತಾ ಸಾಗುವ ಈ ಕವಿಯ ಹಾದಿ ಬದುಕನ್ನು ಸಹ್ಯಗೊಳಿಸುವ ಪ್ರೇಮದ ಹಾದಿಯೆಂದು ನನಗೆ ತೋರುತ್ತದೆ. ಹೆಣ್ಣು ಸಂಸಾರದ ಕಣ್ಣು, ಅವಳಿಂದಲೇ ಸೃಷ್ಠಿ. ಅವಳಿಲ್ಲದೇ ಲೋಕದಲ್ಲಿ ಜೀವಸೆಲೆಯಿಲ್ಲ. ಭ್ರೂಣದಲ್ಲಿಯೇ ಹೆಣ್ಣನ್ನು ಕಿವುಚಿ ಕೊಲ್ಲುವ ಸಮಾಜದ ಜೀವವಿರೋಧಿ ಕೃತ್ಯ ಕವಿಯ ಮನಸ್ಸನ್ನು ಘಾಸಿಗೊಳಿಸಿದೆ. ಅದರ ಕುರಿತಾಗಿಯೇ ಸದ್ದಲೇ ಕವಿತೆಯಲ್ಲಿ ಧ್ವನಿಯೆತ್ತುತ್ತಾರೆ.

ಊರ ಜಾತ್ರೆಯ ದಿನ ಗೊರಪ್ಪನ ತೇರನ್ನು ಜನ ಸಂಭ್ರಮದಿಂದ ಎಳೆಯುವ ಸಮಯ. ಆದರೆ ಎಷ್ಟು ಪ್ರಯತ್ನ ಪಟ್ಟರೂ ಎಳಿ ಮಿಸಗಲಿಲ್ಲ, ಹೆಜ್ಜಿ ಮುಂದೆ ಸರಿಲಿಲ್ಲ. ಮಿಣಿ ತುಂಡಾಗಿ ಎಲ್ಲಾ ಜನ ದಿಗಿಲಿನಲ್ಲಿ ನಿಲ್ಲುತ್ತಾರೆ. ಯಾವುದೋ ಶಾಪ ಊರಿಗೆ ತಗುಲಿದೆ ಅನ್ನುವ ಭಯದಲ್ಲಿ ಎದಿಯ ತುದಿಗೆ ಸಿಡಿಲು ಬಡಿದಂಗಾಗಿ ಬಗೆಹರಿಸು ಶಾಪಾ ಅಂತ ಗೊರಪ್ಪನ ಮೊರೆಹೋಗುತ್ತಾರೆ. ಗೊರವಾ ಕಾರಣಿಕ ಹೇಳುತ್ತಾನೆ. 

ಏಳು ಕನ್ಯಾರು ಹುಟ್ಟಿ

ಅವರಿಗ್ಹದಿನಾರು ತುಂಬಿ

ಕತ್ತರಿಸಿ ಬಿದ್ದ ಹಗ್ಗ ಬಾಲೆಯರು

ಕೈಯಾರೆ ಕಟ್ಟಿ ತಾ ಮೊದಲು

ಎಳೆಯುವ ಮುನ್ನ

ತೇರಿನ್ನ ಕದಲುವುದಿಲ್ಲ!

ಹೆಣ್ಣಿಲ್ಲದ ಯಾವ ಲೋಕದ ತೇರನ್ನು ಈ ಗಂಡು ತಾನೇ ಎಳೆದು ಹೊರಡಿಸುತ್ತೇನೆ ಅನ್ನುವ ಹುಂಬತನದಲ್ಲಿ ಹೊರಟಿದ್ದಾನೆ? ಗಂಡು ಹೆಣ್ಣು ಅನ್ನುವುದು ಈ ಬದುಕಿನ ತೇರಿಗೆ ಎರಡು ಚಕ್ರಗಳಿದ್ದ ಹಾಗೆ. ಒಂದಿಲ್ಲದೆ ತೇರು ಮುಂದೆ ಹೋಗುವುದಾದರೂ ಹೇಗೆ? ಹೆಣ್ಣಿಗೆ ಸವಲತ್ತನ್ನು ನಿರಾಕರಿಸುವ ಸ್ವಾತಂತ್ರ್ಯವನ್ನು ನಿರಾಕರಿಸುವ ಪುರುಷಪ್ರಧಾನ ಸಮಾಜ ಒಂದು ಹಂತದಲ್ಲಿ ಹೆಣ್ಣಿನ ಹುಟ್ಟನ್ನೂ ನಿರಾಕರಿಸುವ ಹಂತವನ್ನೂ ಮುಟ್ಟಿದ್ದು ಮಾನವತೆಯ ಅಧಃಪತನವಲ್ಲದೆ ಮತ್ತೇನು? ಮನುಷ್ಯ ತನ್ನ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಪ್ರಕೃತಿಯ ಸಮತೋಲನವನ್ನೇ ಏರುಪೇರು ಮಾಡುವುದಕ್ಕೂ ಹಿಂದೆ ಬಿದ್ದಿಲ್ಲ. ಏಳು ಕನ್ಯೆಯರು ಹುಟ್ಟಿ ಅವರಿಗೆ ಹದಿನಾರು ತುಂಬಿ ಕತ್ತರಿಸಿ ಬಿದ್ದ ಹಗ್ಗವನ್ನು ಕೈಯಾರೆ ಕಟ್ಟಿ ಎಳೆಯುವ ತನಕ ತೇರಿನ್ನು ಕದಲುವುದಿಲ್ಲ ಅನ್ನುವ ಕಾರಣಿಕದ ನುಡಿಗಳು, ಅಲ್ಲಿಯತನಕ ಮಾಡಿದ ಪಾಪಕ್ಕೆ ಅನುಭವಿಸುವುದು ತಪ್ಪುವುದಿಲ್ಲ ಅನ್ನುವ ಖಡಕ್‌  ಸಂದೇಶವನ್ನು ಕೊಡುತ್ತದೆ. ಸಾಂಕೇತಿಕವಾಗಿ ಕಾವ್ಯದಲ್ಲಿ ಹೇಳಿದ ಮಾತು ನಾಗರೀಕ ಅನ್ನಿಸಿಕೊಂಡ ಅನಾಗರಿಕ ಸಮಾಜಕ್ಕೆ ಕವಿ ಕೊಡುವ ಎಚ್ಚರಿಕೆಯೂ ಹೌದು. ಸ್ತ್ರೀ ಚೈತನ್ಯ ಕವಿಯ ಬದುಕಿನಲ್ಲಿ ಪಡೆದುಕೊಂಡ ಮಹತ್ತರವಾದ ಸ್ಥಾನಮಾನವನ್ನು ಈ ಕವಿತೆ ಹೇಳುತ್ತದೆ ಅಂತ ನನಗನ್ನಿಸಿತು.

ಮುಗಿಲ ಕ್ಯಾನ್ವಾಸ್‌ ನಲ್ಲಿ ಜರುಗುವ ಸಾಮಾನ್ಯ ವಿದ್ಯಾಮಾನವನ್ನು ಇವರು ಕಟ್ಟಿಕೊಡುವ ಬಗೆಯಲ್ಲಿ ಹೊಸ ಆಲೋಚನಾ ಕ್ರಮವಿದೆ. ದೀಪದ ಪ್ರೇಮಕ್ಕೆ ತಹತಹಿಸುವ ದೀಪದ್ಹುಳದ ಹಾಗೆ ಚಂದಿರನ ಸುತ್ತ ಮಿನುಗುವ ತಾರಾಗಣ ಅನ್ನುವ ರೂಪಕವನ್ನು ಕಟ್ಟಿಕೊಟ್ಟು ಒಂದು ಹೊಸ ನೋಟದ ಕ್ರಮವನ್ನು ನಮ್ಮ ಕಣ್ಣುಗಳಿಗೆ ತೆರೆಯುತ್ತಾರೆ. ಮೋಡ ಆ ಮೋಡಿಗೆ ಸೋತು ಹಾರಿ ಹಾರಿ ಬಂದು ತನ್ನ ಸೆರಗ ಮರೆ ಮಾಡಿ ಬೆಳ್ಳನ ಗಲ್ಲ ಗಿಲ್ಲಿ ಏಸು ಮುತ್ತಿಟ್ಟವೋ ಅಂತ ಕವಿ ಪುಳಕಿತಗೊಳ್ಳುತ್ತಾರೆ. ಅವಳ ಎರಡು ಕಣ್ಣು ಅವಳಿ ದೀಪದ ಒಂದು ಜ್ಯೋತಿಯ ಹಾಗೆ, ಕವಿಯ ಕಣ್ಣಿಗೆ ಚಂದಿರ ಕಾಣಿಸುತ್ತಿದ್ದ. 

ನಿನ್ನ ಕಣ್ಣಿನಂತ ಅವಳಿ ದೀಪದೇಕ ಜ್ಯೋತಿ

ಮುಗಿಲ ಮಾರಿಗಂಟಿಸಿದಂಗಿತ್ತು ಬೆಳಕಿನ

ಹುಚ್ಚಿಗೆ ಮುಗಿಬಿದ್ದ ಸಾಲು ದೀಪದ್ಹುಳ ತಾರಾಗಣ!

ಅದೆಷ್ಟು ಬಗೆಯಲ್ಲಿ ನಮಗೆ ಚಂದಿರನನ್ನ ಕಾಣಿಸಿದ್ದಾರೆ ನಮ್ಮ ಕವಿಗಳು. ಆಕಾಶ ಚಂದಿರ ನಕ್ಷತ್ರ…ಎಲ್ಲರೂ ನೋಡುವ ವಸ್ತು ಅದೆ ಅದೇ ಆದರೂ ಎಷ್ಟೊಂದು ಭಿನ್ನ ನೋಟಗಳು! ದಿನಕರ ದೇಸಾಯಿ ಬರೆದ ಹಾಗೆ, ಅವರವರ ಮನದಂತೆ ದೃಷ್ಠಿಯೂ ಬೇರೆ; ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ. ಆದರೆ ಈ ಕವಿಗೆ ಚಂದಿರ ಅವಳ ಕಣ್ಣಿನ ದೀಪ, ನಕ್ಷತ್ರಗಳು ದೀಪದ ಮೋಹಕ್ಕೆ ಸುತ್ತ ಸುಳಿಯುವ ಪತಂಗಗಳು!

ಈ ಸಂಕಲನದ ಕವಿತೆಗಳು ಯಾವುದೋ ಒಂದು ಕ್ರಮದಲ್ಲಿ ಜೋಡಿಸಲ್ಪಟ್ಟಿಲ್ಲ. ಒಂದೇ ಕಡೆ ಚದುರಿಬಿದ್ದ ಬೇರೆ ಬೇರೆ ಹೂಗಳ ಹಾಗೆ ಒಂದಕ್ಕಿಂತ ಒಂದು ಭಿನ್ನ ಭಾವದ, ಅರ್ಥದ ಕವಿತೆಗಳು. ಯಾರನ್ನಾದರೂ ಪ್ರೀತಿಸು, ಗಾಢವಾಗಿ ಪ್ರೀತಿಸು. ನೋವು ಎಂದರೇನು ತಿಳಿಯುತ್ತದೆ ಅಂತ ಜೋಗಿ ಹೇಳಿದ ಹಾಗೆ ಸಂಬಂಧಗಳು ಹಚ್ಚಿಕೊಂಡಷ್ಟು ನೋವಿನ ತೀವ್ರತೆಯೂ ಹೆಚ್ಚು.

ಮುಗಿದ ದಿನಗಳ

ಹುಗಿದ ಸಂತಸಗಳ

ತಿರುಗಿ ಕರೆಯಲು

ಕರಗಿ ಬರುವವೆ ಹೊಡಮರಳಿ?

ಪುತ್ರಶೋಕ ಮಾತ್ರವಲ್ಲ ಮಿತ್ರಶೋಕವೂ ನಿರಂತರ. ಕ್ಷಣಭಂಗುರದ ಈ ಬದುಕಿನಲ್ಲಿ ಆ ಕ್ಷಣ ಬದುಕಿದ್ದಷ್ಟೇ ನಮ್ಮ ಪಾಲಿಗೆ ದಕ್ಕುವುದು. ಎಲ್ಲವನ್ನೂ ನಮ್ಮ ಸೀಮಿತ ಬೊಗಸೆಯಲ್ಲಿ ಹಿಡಿಯಲಾಗುವುದಿಲ್ಲ. ಬದುಕಿದನು ನನ್ನನೇ, ತನ್ನ ಬಾಳು ಎನ್ನುವ ಹಾಗೆ ಜೊತೆಗಿದ್ದ ಮಿತ್ರನ ಸಾವು ಕವಿಯನ್ನು ತೀವ್ರವಾಗಿ ಕಾಡಿದೆ. ಮುಗಿಲ ಮುಟ್ಟಬೇಕಿನ್ನವನ ಮುಗಿಯಲು ಅಂತ ಭಾವುಕರಾಗುತ್ತಾರೆ. ಈ ಪುಟ್ಟ ಕವಿತೆ ಕಟ್ಟಿಕೊಡುವ ಭಾವತೀವ್ರತೆ ದೊಡ್ಡದು ಅಂತ ಅನ್ನಿಸಿ ಕವಿತೆ ಮಹತ್ವದ್ದು ಅನ್ನಿಸಿತು. 

ಗಂಗಾಧರ ಚಿತ್ತಾಲರ ಕಾಮಸೂತ್ರ ನನ್ನನ್ನು ಬೆರಗುಗೊಳಿಸುವ ಕವಿತೆಗಳಲ್ಲಿ ಒಂದು. “ಕಣ್ಮುಚ್ಚಿಯೂ ಕೂಡಾ ಕಂಡುದೆನಿತು; ಮಾತಿಲ್ಲದೆಯೂ ಕೂಡಾ ಅಂದುದೆನಿತು” ಅಂತ ಕವಿತೆಯ ಸಾಲೇ ಹೇಳುವ ಹಾಗೆ ಆ ಬೆತ್ತಲೆ ರಾತ್ರಿಯಲ್ಲಿ ನಡೆದ ಗಂಡು ಹೆಣ್ಣಿನ ಸಮಾಗಮದಲ್ಲಿ ಬಯಕೆ ಮಾತಿನಿಂದಷ್ಟೇ ವ್ಯಕ್ತವಾಗುವುದಿಲ್ಲ. ಹೇಗೆ ಅಂತ ಕವಿತೆಯೇ ಹೇಳುತ್ತದೆ.

ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು

ಕಂಠನಾಳದಲೆಲ್ಲ ನಾಗಸಂಪಿಗೆಯಂತೆ ಉಸಿರು ಹೂತು

ಬಾಯ್ತುಂಬ ಜೇನು, ಕೈತುಂಬ ಮೊಲೆಹೂ

ಮಗ್ಗುಲು ತಿರುವಿದಲ್ಲೆಲ್ಲ ಸುಖದ ಉಲುಹು!

ತುಟಿ, ಬಾಯಿ, ಕೈ ಎಲ್ಲವೂ ಮಾತಿನಲ್ಲಿ ತೊಡಗಿವೆ. ಅಲ್ಲಿ ಶಬ್ದಗಳ ಹಂಗಿಲ್ಲ. ಸನ್ನೆಗೆ ಕಾಯುವ ತುರ್ತಿಲ್ಲ. ಆದರೆ ಅದು ಎಂಥಾ ಮಾತು?. “ಇದು ಬಯಕೆ ಇದು ಹಸಿವೆ ಇದು ದಾಹಾ; ಒಂದೇ ಉಸಿರಿನಲ್ಲಿತ್ತು ಅಯ್ಯೋ ಆಹಾ” ಅಂತ ಕವಿತೆಯೇ ಹೇಳುತ್ತದೆ ಅವರ ಆಗಿನ ಸ್ಥಿತಿಯನ್ನು. ಅದು ಮಾತಿಗೆ ನಿಲುಕದ ಕವಿತೆ!. ಈ ಕವಿತೆ ನೆನಪಾಗಲು ಕಾರಣ ರಾಜಕುಮಾರರ ನೆಲದ ಕಾವು ಮುಗಿಲ ತಾಕಿ ಕವಿತೆಯ ಸಾಲುಗಳು.

ಹೂವ್ವಿನ ತುಟಿಯ ಮುಟ್ಟಿ ದುಂಬಿ

ಹೂವ್ವ ತುಟಿಗೆ ಮುಟ್ಟಿಸಿದ ನಂಬಿ

ತೆನೆಬಾಯಿ ಮುತ್ತು! ಜಗದ ನಗೆ

ಈ ಕವಿತೆಯಲ್ಲಿ ಹೂವಿನ ತುಟಿಯನ್ನು ಮುಟ್ಟಿದ ದುಂಬಿ ಇನ್ನೊಂದು ಹೂವಿನ ತುಟಿಗೆ ಮುಟ್ಟಿಸಿದ ಮಾತು ಬೇರೆಯಲ್ಲ; ಚಿತ್ತಾಲರ ಕವಿತೆಯಲ್ಲಿ ತುಟಿಗೆ ತುಟಿ ಮುಟ್ಟಿಸಿದ ಮಾತು ಕೂಡಾ ಬೇರೆಯಲ್ಲ. ನಡೆಯುತ್ತಿರುವುದು ಒಂದೇ ಕ್ರಿಯೆ. ಎಷ್ಟು ಚಂದದ ಲಯ ಈ ಕವಿತೆಗೆ ದಕ್ಕಿದೆ ಅನ್ನುವುದು ನಿಜಕ್ಕೂ ಈ ಕವಿಯ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ.

ಯಾವ ಹಿಗ್ಗಿನ ಸೆಲೆಯೋ ನಮಗೆ ಸಿಲುಕಿ

ಇಳೆಯ ಮೂಲಕು ನಮ್ಮ ಬೇರು ನಿಲುಕಿ

ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ

ನಾವಿಂದು ಮನುಕುಲದ ತಂದೆ ತಾಯಿ

“ಕಾಮಸೂತ್ರ ಕೊನೆಯಾಗುವುದು ನಾವಿಂದು ಮನುಕುಲದ ತಂದೆತಾಯಿ ಎಂಬ ದೈವಿಕ ಸಾಲಿನಿಂದ. ಈ ಸಾಲಿಗೆ ಬರುತ್ತಲೇ ಕವಿಯೇ ಹೇಳಿದಂತೆ ಆ ಒಂದು ಗಳಿಗೆಯಲ್ಲಿ ಏನು ಗೈದರೂ ಮಾಫಿ; ಕಾಡಿದರೂ ಬೇಡಿದರೂ ಹಿಡಿಹಿಡಿದು ಆಡಿದರೂ ಮಾಫಿ. ಯಾವ ಗುಟ್ಟನು ಕೆದಕಿದರೂ ಮಾಫಿ” ಅಂತ ಕಾಮಸೂತ್ರ ಕವಿತೆಯ ಕುರಿತಾಗಿ ಜೋಗಿ ಹೇಳುತ್ತಾರೆ. ಅಂದರೆ ಸೃಷ್ಠಿ ಕ್ರಿಯೆಯ ಉದ್ದೇಶ ಎಲ್ಲವನ್ನೂ ಮಾಫಿ ಮಾಡುತ್ತದೆ. ರಾಜಕುಮಾರರ ಈ ಕವಿತೆ ಕೂಡಾ ಕೊನೆಯಾಗುವುದು ಇಬ್ಬರು ಒಂದಾಗುವ ಲೀಲೆಯಲ್ಲಿ.

ಯಾವ ಬಸಿರಿಗೆ ಎಲ್ಲೋ ಉಂಟು ಉಸಿರು

ಈ ಲೀಲೆಯೊಳಗೆ ನಾ

ಅಂತಃಕರಣದ ಆಟದಲ್ಲೇ ನೀನೂ

ಎರಡೂ ಕವಿತೆಗಳು ರಚನೆಯಾದ ಕಾಲಮಾನಗಳು ಬೇರೆ ಬೇರೆಯಾದರೂ ಒಂದು ಕವಿತೆಯ ಯಾವುದೋ ಒಂದು ತಂತು ಇನ್ನೊಂದು ಕವಿತೆಯನ್ನು ನೆನಪಿಸುತ್ತದೆ. ಬೇಂದ್ರೆಯ ಜೋಗಿ ಕವಿತೆ ಪುತಿನ ಅವರ ಚಿಕುಹೂ ಕವಿತೆಯನ್ನು, ಅಡಿಗರ ಮೋಹನ ಮುರಳಿಯನ್ನು ನೆನೆಪಿಸಿದ ಹಾಗೆ! 

ತವರು, ಆಷಾಡ, ಪಂಚಮಿ ಹಬ್ಬ ಅಂತ ಅಪ್ಪಟ ದಾಂಪತ್ಯ ಬದುಕಿನ ನಿಜದ ಕ್ಷಣಗಳನ್ನು ಜನಪದೀಯ ಹಿನ್ನಲೆಯಲ್ಲಿ ಕಟ್ಟಿಕೊಡುವ ಹಲವಾರು ಪದ್ಯಗಳು ಈ ಸಂಕಲನದಲ್ಲಿವೆ. ಹೆಣ್ಣಿಗೆ ಮಾತ್ರ ಅರ್ಥವಾಗುವ ಅವಳಿಗಷ್ಟೇ ಪ್ರವೇಶವಿರುವ ಅವಳ ಲೋಕವೊಂದಿದೆ. ಅದನ್ನು ಗಂಡು ತನ್ನ ದೃಷ್ಠಿಯಿಂದ ನೋಡುತ್ತಾ ಅರ್ಥೈಸಿಕೊಂಡರೆ ಅದು ಹೊಂದಾಣಿಕೆಯಾಗುವುದಿಲ್ಲ. ಅದು ಅವಳ ತವರು, ಅಲ್ಲಿ ಹೋಗುವ ಇರುವ ಬರುವ ಮತ್ತು ಅಲ್ಲಿಂದ ತರುವ ಕೊಡುವ ವಿಷಯದಲ್ಲಂತೂ ಮಾತು ಬಂದರೆ ಅದು ಕೊನೆಯಾಗುವುದು ವಿರಸದಿಂದಲೇ ಅನ್ನುವುದು ಎಲ್ಲರಿಗೂ ಒಂದಲ್ಲ ಒಂದು ಕ್ಣಣದಲ್ಲಿ ಅನುಭವಕ್ಕೆ ಬಂದಿರುವ ವಿಷಯವೇ. ಅದು ಅವಳ ಭಾವನಾತ್ಮಕ ಲೋಕ. ಅಲ್ಲಿ ನಮ್ಮ ಲಾಭನಷ್ಟ ಬಂಧು ಬಳಗದ ಲೆಕ್ಕಾಚಾರಗಳು ನಡೆಯುವುದಿಲ್ಲ. ಅಂತಹ ಹಲವಾರು ಕ್ಷಣಗಳನ್ನು ಈ ಕವಿ ಕವಿತೆಯಲ್ಲಿ ಕಟ್ಟಿಕೊಡುವ ಬಗೆಯೇ ಆಪ್ತವಾಗಿದೆ. 

ಪಂಚಮಿ ಹಬ್ಬ ತವರ ಸಿರಿ ಬಾಗೀನ

ಹೆಣ್ಮಕ್ಕಳ ಸಿರಿತನ ಸಹನಿಟ್ಟು ಕೇಳು

ಮಾತು ಮಾತಿಗೆ ಸೆಟಗೊಂಡ ಕುಂದರಬ್ಯಾಡ

ಇದು ಹೆಣ್ಮಕ್ಕಳ ಸಿರಿತನ ಅನ್ನುವ ಅವಳ ಮಾತು ಆ ಪದದ ಅರ್ಥವನ್ನಷ್ಟೇ ಅಲ್ಲದೆ ಬಹಳಷ್ಟನ್ನು ಧ್ವನಿಸುತ್ತದೆ. ನಮಗೆ ಕೊರತೆ ಇದೆ ಅಂತ ಕಳಿಸಿ ಕೊಟ್ಟಿಲ್ಲ. ಪ್ರತೀ ಸಲ ನನ್ನ ತವರಿನಿಂದ ತುಪ್ಪ ಕಳಿಸಿಕೊಡುವಾಗ ಇಲ್ಲೇನು ಕಮ್ಮಿಯಿದೆ? ನಮ್ಮ ಆಕಳ ಬೆಣ್ಣೆ ತುಪ್ಪ ಆಗುದಿಲ್ಲವೇನು? ಅಂತ ದಡ್ಡತನದ ಮಾತನಾಡದಿರು, ನಾನೇನು ನನ್ನ ಅಪ್ಪನ ಸಿರಿವಂತಿಕೆಯನ್ನು ನಿನ್ನೆದುರು ಮೆರೆಸುತ್ತಿಲ್ಲ. ಸಹನೆಯಿಟ್ಟು ಕೇಳು, ಇದು ಹೆಣ್ಮಕ್ಕಳ ಸಿರಿತನ ಅಂತ ಹೇಳುವ ಅವಳ ಅಂತರಂಗದ ಭಾವಕೋಶವನ್ನು ಕವಿ ಈ ಕವಿತೆಯಲ್ಲಿ ಅದೆಷ್ಟು ಸೂಕ್ಷ್ಮವಾಗಿ ನೇಯ್ದುಕೊಟ್ಟಿದ್ದಾರೆ.

ತೊಟ್ಟಿಲ ಹೊತ್ಕೊಂಡು

ತವರ ಬಣ್ಣ ಉಟ್ಕೊಂಡು

ಅಪ್ಪ ಕೊಟ್ಟೆಮ್ಮೆ ಹೊಡಕೊಂಡು

ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ

ಅದೆಷ್ಟು ಹಿಂದೆ ಬರೆದ ಪದ್ಯವೋ ಗೊತ್ತಿಲ್ಲ. ಶತಮಾನಗಳು ಉರುಳಿಹೋಗಿವೆ. ತವರು ಮನೆ ಗಂಡನ ಮನೆ ಹೋಗಿ ಈಗ ಉದ್ಯೋಗದ ಅನುಕೂಲಕ್ಕಾಗಿ ಮಾಡಿಕೊಂಡ ಮನೆಗಳಾಗಿವೆ. ಹೊಡ್ಕೊಂಡು ಹೋಗುವ ಎಮ್ಮೆಯೂ ಇಲ್ಲ, ತಿಟ್ಟತ್ತಿ ತಿರುಗಿ ನೋಡಲು ನಡೆದುಕೊಂಡು ಹೋಗುವ ದಾರಿಗಳೂ ಇಲ್ಲ. ಆದರೂ ತವರಿನಿಂದ ಹೊರಟ ಹೆಣ್ಣುಮಗಳು ಬಸ್ಸಿನಲ್ಲೋ ಕಾರಿನಲ್ಲೋ ರೈಲಿನಲ್ಲೋ ಕುಳಿತು ಕಣ್ಣೀರು ಒರೆಸಿಕೊಳ್ಳುತ್ತಾಳೆ, ಮತ್ತು ತವರಿನವರು ಮರೆಯಾಗುವ ತನಕ ಕೈಬೀಸುತ್ತಲೇ ಇರುತ್ತಾಳೆ. ಕೆ ಎಸ್‌ ಎನ್‌ ಅವರ ರೈಲು ನಿಲ್ದಾಣದಲ್ಲಿ ಕವಿತೆ ಕೂಡಾ ಇಲ್ಲಿ ನೆನಪಾಗುತ್ತದೆ. ತವರಿಂದ ಬರುವ ಕೆಂಪು ಹಳದಿ ಬಸ್ಸು ನೋಡುತ್ತಿದ್ದರೆ, ನಮ್ಮೂರ ಗ್ರಾಮದೇವಿ ದುರುಗವ್ವ ಮಗಳಾ ಅಂತ ಅಲವತ್ತು ನನಗಾಗಿಯೇ ಅವತಾರ ಎತ್ತಿ ಬಂದ ಹಾಗೆ ಅಗುತ್ತದೆ ಅಂತ ಅಂದುಕೊಳ್ಳುವ ರಾಜಕುಮಾರರ ಕವಿತೆಯ ಹೆಣ್ಮಗಳ ಭಾವ ಬಹುಶಃ ಸಾರ್ವಕಾಲಿಕವಾದದ್ದು.

ಮದುವೆಯಾದ ಹೊಸತರಲ್ಲಿ ರಾಯರು ಮಾವನ ಮನೆಗೆ ಬಂದ ಪ್ರಸಂಗವನ್ನು ಕೆ ಎಸ್‌ ಎನ್‌ ಅವರ ರಾಯರು ಬಂದರು ಮಾವನ ಮನೆಗೆ ಕವಿತೆ ಸೊಗಸಾಗಿ ಕಟ್ಟಿಕೊಡುತ್ತದೆ. ಹೆಂಡತಿಯನ್ನು ಬಿಟ್ಟು ಬಹಳ ದಿನಗಳನ್ನು ಕಳೆದ ವಿರಹದಲ್ಲಿ ಮತ್ತೆ ಅವಳನ್ನು ಯಾವಾಗ ನೋಡುತ್ತೇನೆ ಅನ್ನುವ ಕಾತರದಿಂದ ರಾಯರು ಮಾವನ ಮನೆಗೆ ಬಂದಿದ್ದಾರೆ. ಅಂದು ಬೆಳದಿಂಗಳ ರಾತ್ರಿ. ಮಾವನ ಮನೆಯಲ್ಲಿ ತುಂಬಿಕೊಂಡ ಮಲ್ಲಿಗೆ ಹೂಗಳ ಪರಿಮಳ ಬೇರೆ. ಕಾಲಿಗೆ ನೀರು ತಂದು ಕೊಟ್ಟರು. ಮೃಷ್ಟಾನ್ನ ಭೋಜನ ಮಾಡಿಸಿದರು, ಗಸೆಗಸೆ ಪಾಯಸ ಕುಡಿಸಿದರು, ಮತ್ತೆ ಮಲಗಲು ಮೆತ್ತನೆ ಹಾಸಿದ ಮಂಚ. ಮಲಗಿ ಹೊರಳಿದರೆ ದಿಂಬಿನ ಅಂಚಿಗೆ ಪದುಮಳು ಹಾಕಿದ ಚಿತ್ತಾರ. ಚಿಗುರೆಲೆ ಬಣ್ಣದ ಅಡಿಕೆ ತಂದುಕೊಡುವ ನಾದಿನಿ, ಬಿಸಿಬಿಸಿ ಹಾಲಿನ ಬಟ್ಟಲು ತರುವ ಮಾವ. ಉಪಚಾರವೋ ಉಪಚಾರ. ಆದರೆ ಮುದ್ದಿನ ಮಡದಿ ಮಾತ್ರ ಎಲ್ಲೂ ಪತ್ತೆಯಿಲ್ಲ. ಯಾವುದೂ ಮನ ತುಂಬಲಿಲ್ಲ. ಅಸಹನೆ ಕಸಿವಿಸಿ ಒಳಗೊಳಗೆ ಕುದಿಯುವ ಸಿಟ್ಟು. ಕೊನೆಗೂ ಸಂಕೋಚ ಬಿಟ್ಟು ಅಕ್ಕನ ಕರೆಯಮ್ಮ ಎಂದು ನಾದಿನಿ ಜೊತೆ ಅಂಗಲಾಚಿದರೆ “ಪದುಮಳು ಒಳಗಿಲ್ಲ” ಎಂದು ನಗುತ್ತಾಳೆ. ಆ ರಾತ್ರಿ ರಾಯರ ಪಾಲಿಗೆ ಅತ್ಯಂತ ಯಾತನಾಮಯವೂ ಧೀರ್ಘವೂ ಆಗುತ್ತದೆ. ನಿದ್ದೆಯಿಲ್ಲದ ರಾತ್ರಿಯನ್ನು ಕಳೆದ ಸಿಟ್ಟಿನಲ್ಲಿ ಸರಿ, ಹೊರಡುತ್ತೇನೆ ಅನ್ನುವಾಗಲೇ ಒಳಮನೆಯಿಂದ ”ನೀರಾಯಿತು” ಎಂದು ರಾಗದಲ್ಲಿ ನಾದಿನಿ ಹೇಳುವಾಗ ಬದಲಾಗುವ ಕವಿತೆಯ ಚಿತ್ರಣ ಎದೆಯನ್ನು ತಟ್ಟುತ್ತದೆ. ತಲೆ ಸ್ನಾನ ಮಾಡಿ ಹೂವನ್ನು ಮುಡಿಯುತ್ತಾ ರಾಯರ ಕೋಣೆಗೆ ಬರುವಾಗ ಅದುವರೆಗೆ ಅನುಭವಿಸಿದ್ದ ಸಿಟ್ಟು, ಚಡಪಡಿಕೆ, ಅಸಮಧಾನ ಕಸಿವಿಸಿಗಳೆಲ್ಲವೂ ಮಾಯವಾಗುವ ಸೋಜಿಗ. ಈ ಕವಿತೆ ನಮಗೆ ರಾಯರ ಚಡಪಡಿಕೆ ಸಿಟ್ಟು ಕಸಿವಿಸಿಯನ್ನು ಕಾಣಿಸಿದರೆ, ಹೊರಗಿರುವ ಯಾತನೆ ಅಸಲಿಗೆ ಇಬ್ಬರನ್ನೂ ತಟ್ಟಿದೆ. ಅವರು ಬಂದರೂ ನೋಡಲಾಗದ, ಕಣ್ಸನ್ನೆಯ ಮೂಲಕವಾದರೂ ಒಲವನ್ನು ತೋರಿಸಲಾಗದ, ಸತ್ಕಾರ ಮಾಡಲಾಗದ ಯಾತನೆಯನ್ನು ಅದೆಷ್ಟು ಅನುಭವಿಸಿದಳೋ ಅವಳು? ಕವಿತೆ ಹೇಳಿಯೂ ಹೇಳದೆ ಉಳಿಸುವುದು ಎಷ್ಟು ಅನ್ನುವುದು ಯಾವತ್ತಿಗೂ ಸೋಜಿಗ.

ಇಷ್ಟೇ ತೀವ್ರವಾಗಿ ಕಾಡುವ ಭಾವದ ಕವಿತೆಯನ್ನು ರಾಜಕುಮಾರರು ಕೂಡಾ ಈ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ಅವಳು ತವರಿಂದ ತಿರುಗಿ ಬಂದಿದ್ದಾಳೆ. ಏರುತ ಇಳಿಯುತ ರಾಯರು ದೂರದ ಊರಿಂದ ಬಂದ ಹಾಗೆ ಹೆಂಡತಿ ಮನೆಗೆ ಬಂದ ಸುದ್ಧಿ ತಿಳಿಯುತ್ತಲೇ ಎಂದೂ ಇಲ್ಲದ ಹಾಗೆ ಇಂದು ಕೆಲಸದಿಂದ ಬೇಗ ಬಂದಿದ್ದಾನೆ. ಬರಿಗೈಯಲ್ಲಿ ಬಂದಿಲ್ಲ. ಕೈಯಲ್ಲಿ ಘಮಘಮಿಸುವ ಮಲ್ಲಿಗೆ ಇದೆ. ಸಿಹಿಯಾದ ಮೈಸೂರಪಾಕಿದೆ. ಬಾಗಿಲು ತೆರೆದವಳನ್ನು “ಹೊಸಮಾಲಗಿತ್ತಿಯಂತೆ ಹೊಸ ಹೆಂಡತಿಯೆಂದು” ನೋಡಿದ, ಅಂತ ಕವಿ ಹೇಳುವ ಮಾತು ಬಹಳ ಮಜವಾಗಿದೆ. ಬಹಳ ದಿನಗಳ ನಂತರ ತೆಕ್ಕೆಗೆ ಸಿಕ್ಕ ಹೆಂಡತಿಯನ್ನು ಸೇರಲು ಅದೆಂತಹ ಆತುರ!

ಮುಟ್ಟಿದನು ಮೊದಲಿಂದೇ ಅನ್ನುವೊಲು

ಮುತ್ತಿದನು ಅಪ್ಪಿ ಅವಳ, ಕೊರಳ ಭುಜಕೆ ತಂದು

ಸಣ್ಣಗೆ ನಕ್ಕು ಉಸಿರಿದಳವನ ಕಿವಿಯಲ್ಲಿ ಇಂದಿಗೆ

ಮೂರು ಇನ್ನೆರಡು ದಿನ ಕಾಯಿರಿ ಸ್ವಾಮಿ ಎಂದು!

ಸುಖದ ಉತ್ತುಂಗದ ಕಾತರದಲ್ಲಿದ್ದವನ ಮನ ಓಯಾಸಿಸ್‌ ಖಾಲಿಯಾದ ಮರುಭೂಮಿಯಾಯಿತು. ಇಲ್ಲಿ ಕವಿ ಅದೆಂತಹ ಚಂದದ ಚಿತ್ರವನ್ನು ಕರುಣಿಸುತ್ತಾರೆಂದರೆ ಆ ಖಾಲಿತನ ನಮ್ಮ ಎದೆಯನ್ನೂ ಆವರಿಸುತ್ತದೆ. ಜಾತ್ರೆಯ ತೇರು, ಬಣ್ಣದ ಬಾವುಟ ಚಿತ್ರಿಸಿದ ಹಾಳೆ ಹಾರಗಳನ್ನೆಲ್ಲ ಬಿಚ್ಚಿ ತೇರನಸ್ಥಿಯಂತೆ ನಿಂತಿತು ಅಂತ ಜಾತ್ರೆ ಮುಗಿದ ಬಯಲಿನ ಚಿತ್ರವನ್ನು ಕೊಡುತ್ತಾರೆ. ಸಂಭ್ರಮವೆಲ್ಲಾ ಕಳಚಿ ನಿಂತ ತೇರನಸ್ಥಿಯಂತಾಯಿತು ಅವನ ಮನಸ್ಸು. ಮುಡಿಸಿಲ್ಲವಾದರೂ ಮಲ್ಲಿಗೆ ಪರಿಮಳವೇ ಮೊದಲು ಬಾಡಿತು! ಪರಿಮಳವೇ ಬಾಡಿತು ಅನ್ನುವ ತಾಜ ತಾಜ ರೂಪಕದಿಂದ ಕವಿತೆಯ ಮಲ್ಲಿಗೆ ಘಮಘಮಿಸುತ್ತದೆ. 

ನರಸಿಂಹಸ್ವಾಮಿ ಕವಿತೆಯನ್ನು ಸುಖಾಂತಗೊಳಿಸಿದರೆ ಮೂರು ದಿನವನ್ನು ತನ್ನ ಕವಿತೆಯಲ್ಲಿ ಮೀರಲಾಗದ ಅಸಹಾಯಕತೆಯಲ್ಲಿದ್ದಾರೆ ಈ ಕವಿ. ಕಟ್ಟಿತ್ತು ಬಾನಲ್ಲಿ ಮೋಡ, ಸುರಿಮಳೆಯ ಗಾಳಿ ತಣ್ಣಗೆ ದೂರ ಸರಿಸಿತ್ತು ಅನ್ನುವ ವಿಷಾದದ ಚಿತ್ರವನ್ನು ಕಟ್ಟಿಕೊಟ್ಟು, ತಡಮಾಡಿ ಬರಬಾರದು ತವರಿಂದ ಮರಳಿ, ತಡವಾದರೂ ಇನ್ನೆರಡು ದಿನ ತಡದೇ ಬರಬೇಕಿತ್ತು ಎಂದು ಅವಳು ಮನಸ್ಸಿನಲ್ಲಿಯೇ ನೊಂದು ಕಣ್ಣೀರಾಗುವ ಹಾಗೆ ಕವಿತೆಯನ್ನು ನಿಲ್ಲಿಸುತ್ತಾರೆ.

ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತಾ; ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ ಅನ್ನುತ್ತಾರೆ ಬೇಂದ್ರೆ. ಎತ್ತಿಕೊಂಡವರಿಗೆ ಹಿಗ್ಗನ್ನು ಕೊಟ್ಟು ತಾನೂ ಹಿಗ್ಗುತ್ತದೆ. ಅಂದರೆ ಕವಿತೆ ಓದಿದವರಿಗೆ ಆನಂದವನ್ನು ಕೊಟ್ಟು ಅವರ ಓದಿನ ಮೂಲಕ ತಾನೂ ಹೆಚ್ಚಿನ ಅರ್ಥವನ್ನು ಪಡೆಯುವ, “ತನ್ನ ತಾನೇ ಪ್ರೀತಾ” ಸ್ವ ಆನಂದದಲ್ಲಿ ತೇಲುತ್ತದೆ ಕವಿತೆ. ತನ್ನಲ್ಲಿಯೇ ಆನಂದವನ್ನು ಹುಟ್ಟಿಸುತ್ತಾ ಹಾಗೂ ಆ ಆನಂದವನ್ನು ಓದುವವರೂ ಅನುಭವಿಸಬೇಕು ಅನ್ನುವುದಷ್ಟೇ ಉದ್ದೇಶದ ಸ್ವಾರ್ಥವಿಲ್ಲದ ಕವಿತೆ. ರಾಜಕುಮಾರರ ಈ ಕವಿತೆ ನನಗೆ ಕೊಟ್ಟ ಅನುಭವವನ್ನು ಹೇಳಲು ಬೇಂದ್ರೆಯ ಭಾವಗೀತೆ ಕವಿತೆಯ ಸಾಲು ಮಾತ್ರ ಸಮರ್ಥ ಅಂತ ಅನ್ನಿಸಿತು.

ಆಹಾ! ಗುನುಗತಾವ, ಗುಲುಗತಾವ,

ಕುಲುಕತಾವ, ಮುಗುಳ್ನಗುತ ಬೆಳಗ

ಕುಣಿದು ಘಮ್ಮನಸತಾವ ಗೆಜ್ಜಿ

ಗಾಳಿಗುಂಟ ತೋಂ ತಕಿಟ ಥಾ ಹೆಜ್ಜಿ…

ಇಷ್ಟು ಸಮರ್ಥವಾಗಿ, ಲಾಲಿತ್ಯ ಪೂರ್ಣವಾಗಿ, ಪದಗಳ ಕಾಲಿಗೆ ಗೆಜ್ಜೆಕಟ್ಟಿ ಕುಣಿಸಬಲ್ಲ ಮತ್ತೊಬ್ಬ ಕವಿ ನನ್ನ ಸಮಕಾಲೀನರಲ್ಲಿ ನನಗೆ ಕಾಣಿಸುವುದಿಲ್ಲ. ರಾಜಕುಮಾರರ ಕವಿತೆಯನ್ನು ಓದುವುದೇ ಒಂದು ಹೊಸ ಅನುಭವ. ಒಂದು ಸಂಭ್ರಮ. ಅವರ ಕಾವ್ಯದ ಸುಕೋಮಲತೆಗಾಗಿ ಈ ಒಂದು ಪದ್ಯವನ್ನು ಜೋರಾಗಿ ಓದಿಬಿಡಬೇಕು. ಒಂದು ಹೂ ಹೂ-ಹಗುರಾಗಿ ಗಾಳಿಯಲ್ಲಿ ತೇಲುತ್ತಾ ಪರಿಮಳ ಬೀರುತ್ತಾ ಎದೆಯೊಳಗಿಳಿದು ನಾವೇ ಹೂವಾಗಿ ಬಿಡುವ ಸೋಜಿಗವನ್ನೊಮ್ಮೆ ಅನುಭವಿಸಿಬಿಡಬೇಕು. 

ಯಾವುದೋ ಕಾರ್ಯಕ್ರಮಕ್ಕೆ ಹೊರಡುವ ಗಳಿಗೆ. ತಾನು ತಯಾರಾಗಿ ಅವಳನ್ನು ಕಾದು ಕಾದು, ಇನ್ನೂ ಎಷ್ಟು ಹೊತ್ತೇ ನಿಂಗೆ ತಯಾರಾಗೋಕೆ ಅಂತ ಸಿಟ್ಟಾಗುವ, ಇಷ್ಟು ಕಾದದ್ದೇ ತನ್ನ ಸಹನೆ ಅಂದುಕೊಳ್ಳುವ ಎಲ್ಲಾ ಗಂಡಸರು ಇರಿ ಬಂದೆ ಅನ್ನುವ ಈ ಸಂಕಲನದ ಪದ್ಯವನ್ನೊಮ್ಮೆ ಓದಬೇಕು. ಕವಿಗಿರುವ ಸೂಕ್ಷ್ಮ ಸಂವೇದನೆಯನ್ನೊಮ್ಮೆ ಅನುಭವಿಸಬೇಕು. ಅದೆಷ್ಟು ನಯ ನಾಜೂಕು ಅವಳು ಹೊರಡುವುದರಲ್ಲಿ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅವಳು ಅವಳಾಗಿ ಉಳಿಯುವುದಿಲ್ಲ. 

ಯಾರಿಗಾಗಿ ಅವಳು ಇಷ್ಟೆಲ್ಲಾ ನಾಜೂಕಿನಲ್ಲಿ ಮುತುವರ್ಜಿಯಲ್ಲಿ ತಯಾರಾಗುತ್ತಾಳೆ? ಅಸಂಖ್ಯ ಕೂದಲುಗಳ ನಾಜೂಕಿನಲಿ ಹೆಣೆದು ಹೂ ಮುಡಿದುಕೊಳ್ಳುವುದು? ಎಷ್ಟು ಸಹನೆ ಬೇಕು ಈ ಸೆರಗು, ರೇಷಿಮೆ ನಯ ಭುಜ ಎಡವಿ ಬೀಳದಂತೆ ಹಿಡಿದಿಟ್ಟುಕೊಳ್ಳಲು? ಸೆರಗು ತೀಡಿದಷ್ಟು ಹೊತ್ತು ಕೂದಲು ಹಠ ಮಾಡುತ್ತದೆ. ಎಷ್ಟು ಸರಿ ಮಾಡಿದರೂ ನಿರಿ ಏಕೋ ಸರಿಯಾಗಲಿಲ್ಲ ಅನ್ನುತ್ತಾ ಮತ್ತೆ ಮತ್ತೆ ಒಳಗೆ ಹೋಗುವುದು. ಎಷ್ಟು ಸಹನೆ ಬೇಕು ಅವಳು ತಯಾರಾಗಿ ಬರುವುದರಲ್ಲಿ? ಈ ಭಾವವನ್ನು ಕವಿ ಹಿಡಿದ ಪರಿಯೇ ಸಂಭ್ರಮ.

ಕೊನೆ ಕ್ಷಣದಲ್ಲೂ ಇರಿ ಬಂದೆ ಎನ್ನುತ್ತಾ ಹುಬ್ಬುಗಳ ಸಮ ನಡುವೆ ಕುಂಕುಮ ತೀಡಿಕೊಳ್ಳುವುದು. ಸಹನೆ ಅಂದರೆ ಅವಳನ್ನು ಕಾಯುತ್ತಾ ಸಿಡಿಮಿಡಿಗೊಳ್ಳುವುದಲ್ಲ. ನಿನಗಾಗಿಯೇ ಇಷ್ಟೆಲ್ಲಾ ಒಪ್ಪ ಓರಣವಾಗಿ ಅವಳು ಈಗ ಸರಿಯಾಯಿತು ಅನ್ನುವ ಖುಷಿಯಲ್ಲಿ ತೃಪ್ತಿಯಲ್ಲಿ ನಡೆದು ಬರುವುದು ಅನ್ನುತ್ತದೆ ಕವಿತೆ.

ಸಹನೆ ಎಂದೆರೆ ಹೀಗೆ ಬರುವ ಅವಳನ್ನು ಕಾಯುವುದಲ್ಲ

ನಿನಗಾಗಿ ಅವಳು ಹೀಗೆ ಬರುವುದು!

ಯಾವುದೋ ಕನಸ ಬೆನ್ನು ಹತ್ತಿ ಹೊರಡುವವರಿಗೆ ಜೊತೆಯಲ್ಲಿ ಇರುವ ಸಂಗಾತಿಯ ನೆನಪು ಆ ಕ್ಷಣಕ್ಕೆ ಆಗುವುದೇ ಇಲ್ಲ. ಉದ್ದೇಶಪೂರ್ವಕ ಅಲ್ಲವಾದರೂ ಒಂದು ದಿವ್ಯ ಅಲಕ್ಷ ನಡೆದೇ ಬಿಡುತ್ತದೆ. ಬದುಕಿನ ಯಾವುದೋ ಹಂತದಲ್ಲಿ ತಿರುಗಿ ನೋಡಿದಾಗ ಬೆಂಬತ್ತಿದ ಗುರಿ ತಲುಪಿ, ಅಲ್ಲೇನೂ ಇಲ್ಲ ಅನ್ನುವುದು ಗೊತ್ತಾದಾಗ ಬದುಕಿಗೆ ಮರಳುವುದು ಕಷ್ಟವಾಗುತ್ತದೆ. ಅವಳು ಇವನಿಲ್ಲದೇ ಬದುಕುವುದನ್ನು ರೂಢಿಸಿಕೊಂಡಿರುತ್ತಾಳೆ. ಮರಳಿ ಬಂದ ಇವನೀಗ ಅನಪೇಕ್ಷಿತ ಅತಿಥಿ. ತಪ್ಪಾಗಿದೆ ಅನ್ನುವುದು ಅರಿವಿಗೆ ಬಂದಿದೆ. ಆದರೆ ಕಾಲಕ್ಕೆ ಹಿಮ್ಮುಖವಾಗಿ ಚಲಿಸಿ ಅಭ್ಯಾಸವಿಲ್ಲ. ಮೊದಲಿಂದ ಎಲ್ಲವನ್ನೂ ಆರಂಭಿಸಲಾಗುವುದಿಲ್ಲ. 

ತಪ್ಪು ನನ್ನದೆ. ತಪ್ಪುವಾಗ 

ತಿಳಿಯಲೇ ಇಲ್ಲ.

ತಿಳಿವುದು ಆನಂತರ ನಿಧಾನವಾಗಿ 

ಅನ್ನುತ್ತಾರೆ ಅಡಿಗರು ಬಾ ಇತ್ತ ಇನ್ನೂ ಇತ್ತ ಕವಿತೆಯಲ್ಲಿ. ಬದುಕಿನ ಸಂಧ್ಯಾ ಕಾಲದಲ್ಲಿ ಕುಳಿತು ಯೋಚಿಸುವಾಗ ಎಲ್ಲವೂ ಅರಿವಾಗುತ್ತಿದೆ. ಅವಳನ್ನು ಅಲಕ್ಷಿಸಿ ಯಾವುದೋ ಮಾಯಾಮೃಗದ ಬೆನ್ನತ್ತಿ ಹೊರಟ ವ್ಯರ್ಥ ದಿನಗಳು ಈಗ ಕಣ್ಣಿಗೆ ರಾಚುತ್ತವೆ. ತಪ್ಪುವಾಗ ತಿಳಿಯಲಿಲ್ಲ ಅಂತ ಹಲುಬುತ್ತಾರೆ.

ಉಣಲಿದ್ದಾಗ ಹಸಿವಿಲ್ಲ; ಹಸಿದಾಗ ಉಣಿಸಿಲ್ಲ

ಅಂತಃಕರಣ ತುಂಬಿ ತುಳುಕುತ್ತಲಿರುವಾಗ

ಅಭಿವ್ಯಕ್ತ ಪಥಕೆ ಕದ ತೆರೆವುದಿಲ್ಲ

ಎಲ್ಲವೂ ಇದ್ದಾಗ ಹಸಿವಿರಲಿಲ್ಲ. ಈಗ ಹಸಿವಾಗಿದೆ ಆದರೆ ಉಣಿಸಿಲ್ಲ. ಎಂತಹ ವಿಪರ್ಯಾಸ ಇದು? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ ಅಂತ ಬರೆದುದನ್ನೇ ಪಾಲಿಸಿದರೇ? ಸಾಧನೆಯ ಕದ ತೆರೆದು ಹೊರಟವರಿಗೆ ಅಭಿವ್ಯಕ್ತ ಪಥಕ್ಕೆ ಕದ ತೆರೆಯಲಿಲ್ಲ! ಕ್ಷಮಿಸು ಅಂತ ಈಗ ಕೇಳಬಹುದು. ಆದರೆ ಅವಳು ಕಳೆದ ಖಾಲಿತನದ ದಿನಗಳನ್ನು ಹೇಗೆ ತುಂಬಿಸಿಕೊಡುವುದು? 

ಕಾಲ ಮಿಂಚಿದೆ ಈಗ; ಮಿಂಚಿದಾಗಲೇ 

ಕಣ್ಗೆ ಕಾಣುವುದು

ಕತ್ತಲಿನ ಪಾತಾಳದಾಳ

ಕಾಲ ಮಿಂಚಿಹೋಗಿದೆ. ಆ ಮಿಂಚಿನ ಬೆಳಕಿನಲ್ಲಿಯೇ ಮಾಡಿದ ತಪ್ಪು ನಿಚ್ಚಳವಾಗಿ ಕಾಣುತ್ತಿದೆ. ಯಾವುದೋ ಸಾಧನೆಗಾಗಿ ಕಳೆದ ದಿನಗಳ ಪೊಳ್ಳುತನ ಈಗ ಅರ್ಥವಾಗುತ್ತಿದೆ. ಆಗ ಅವಳು ಒಂಟಿ; ಈಗ ನೀನು! 

ಮುಗಿಯುತ್ತಲಿದೆ ಈಗ 

ಕೊನೆಯ ಅಧ್ಯಾಯ. ಈಗ 

ಪಶ್ಚಾತ್ತಾಪವೊಂದೇ ಸಾಧ್ಯ

ಈ ಕವಿ ಕೂಡಾ ಬದುಕಿನ ಯಾವುದೋ ತಿರುವಿನಲ್ಲಿ ಅವಳನ್ನು ಅಲಕ್ಷಿಸಿದ್ದು ನೆನಪಾಗಿ ಕ್ಷಮಿಸು ಅಂತ ಕೇಳುತ್ತಾನೆ. ಅದರೆ ತಾನು ಬದಲಾಗುವ ಬಗ್ಗೆ ಇನ್ನೂ ಖಾತ್ರಿ ಕೊಡುವುದಿಲ್ಲ. ಮಾಡಿದ್ದು ತಪ್ಪೆನ್ನುವ ಅರಿವಿದ್ದೂ ಬದಲಾಗುತ್ತೇನೆ ಅನ್ನುವ ಮನಸ್ಸು ಮಾಡುವುದಿಲ್ಲ. ಆದರೂ sorry ಕೇಳುತ್ತಾನೆ.

ನನ್ನ ಲಕ್ಷ ಅಲಕ್ಷಗಳ ನಡುವೆಯೂ ನಳನಳಿಸುವ ನೀನು,

ಬಲು ದೈನ್ಯದಲಿ ಬಳಿ ಬಂದು 

ಕ್ಷಮೆ ಕೇಳುವೆನು, ಕ್ಷಮಿಸುವೆಯಾ?

ಮೆತ್ತಿರಬೇಕು ಕತ್ತಲನ್ನ ಕನಸ ಕಣ್ಣಿಗೆ! ಯಾರ ಕನಸ ಕಣ್ಣಿಗೆ ಕತ್ತಲನ್ನ ಮೆತ್ತಿದ್ದು? ತನ್ನ ಕನಸುಗಳಿಗೇ ಕತ್ತಲನ್ನ ಮೆತ್ತಿರಬಹುದೆ? ಅಥವಾ ಅವಳ ಕನಸುಗಳನ್ನು ಚಿವುಟಿದ್ದೇನೆ ಅನ್ನುವ ಪಶ್ಚಾತ್ತಾಪವೇ? ನೆನಪಿದ್ದೂ ಮರೆತಂತೆ, ಅವಳ ಇರವನ್ನು ಅಲಕ್ಷಿಸಿ ಮುಂದೆ ಹೋದ ತಪ್ಪು ಈಗ ಕಾಡುತ್ತಿದೆಯಾ? 

Sorry

ತಾಕಿದ್ದಿದೆ 

ಕಾಲಿಗೆ ಕಾಲು, ಕೈ, ಮೈ ಬೇಡದಲ್ಲಿಗೆ

ಮಾತುಗಳು ಎದೆಗೆ, ಉಪ್ಪು ನೋವಿಗೆ, ತಾಕಿಸಿದ್ದೂ…

ಮೈ ಕೈಗೆ ತಾಕಿದ್ದು ವಾಸಿಯಾಗಬಹುದು, ಮರೆತುಹೋಗಬಹುದು. ಆದರೆ ಮಾತು? ಎದೆಗೆ ತಾಕಿದ ಮಾತು ಮಾಡಿದ ಗಾಯ ಆಳವಾದದ್ದು. ಮತ್ತೆ ಮತ್ತೆ ನೆನಪಾಗಿ ಸತ್ತ ಭೂತವನ್ನು ತಂದು ಮನೆಯಂಗಳಕ್ಕೆ ಎಸೆಯುತ್ತದೆ. ಕಾಡುತ್ತದೆ. ಗೊತ್ತು ಕವಿಗೆ. ಹಾಗಾಗಿ ಅದನ್ನು ನೆನಪಿಸಿಯೇ sorry ಕೇಳುತ್ತಿದ್ದಾನೆ.

ಈಗ ಅವಳು ಕ್ಷಮಿಸಿದರೆ ಮುಂದೆ ಎಲ್ಲವೂ ಸರಿಯಾಗುವ ವಿಶ್ವಾಸವೂ ಕವಿಗಿಲ್ಲ. ಆದರೂ ತಪ್ಪು ನನ್ನದೇ, ತಪ್ಪುವಾಗ ತಿಳಿಯಲೇ ಇಲ್ಲ ಅನ್ನುವ ಪಶ್ಚಾತ್ತಾಪವೂ ಇದೆ. ಕ್ಷಮಿಸುವಳೆ ಅವಳು? ಅದನ್ನು ಕವಿ ಹೇಳುವುದಿಲ್ಲ!

ಹುಲ್ಡಿಲ್ಲಲೇ ಈ ಸಂಕಲನದ ಅತ್ಯುತ್ತಮ ಕವಿತೆ ಅಂತ ಅದನ್ನು ಓದಿದ ತಕ್ಷಣ ಅನ್ನಿಸಿಬಿಟ್ಟಿತು. ಅದರ ಅರ್ಥ, ಧ್ವನಿಯಿಂದಾಗಿ ಮತ್ತೆ ಮತ್ತೆ ಓದಿಸಿಕೊಂಡಿತು. ಕವಿಯನ್ನು ಹತ್ತಿರದಿಂದ ಬಲ್ಲವರಿಗೆ ಖಂಡಿತಾ ಗೊತ್ತು ಇದು ಕವಿ ಬದುಕುವ ರೀತಿ ಅನ್ನುವುದು. ರೂಪ, ಬಲ, ರೊಕ್ಕ, ಹೆಸರು, ಸಿಟ್ಟು, ಸಂಬಂಧ ಎಲ್ಲವೂ ಎಷ್ಟೊಂದು ಕ್ಷಣಿಕ, ಕ್ಷಣಭಂಗುರ ಮಾತ್ರ ಅನ್ನುವುದನ್ನು ಕವಿತೆಯಲ್ಲಿ ಕಟ್ಟಿಕೊಟ್ಟ ಬಗೆ ಅನನ್ಯ. ಹುಲ್ಡಿಲ್ಲಲೇ ತಮ್ಮ ಅನ್ನುವ ಕವಿ ಇಲ್ಲಿ ದಾರ್ಶನಿಕರಂತೆ ಕಾಣುತ್ತಾರೆ. 

ಬಟ್ಟೆ ಬಿಚ್ಚಿ ನೀರಿಗೀಸು ಬೀಳುವ ತೆರದಿ

ಬಿರುದು ಬಾವಲಿ ಫಲಕ ಹೊಳಿದಂಡಿ ಸರಕು

ಹುಲ್ಡಿಲ್ಲಲೇ ತಮ್ಮ ತೊಡುವುದರಾಗ

ಬಿರುದು ಬಾವಲಿ ಫಲಕ ಎಲ್ಲವೂ ಹೊಳಿದಂಡಿ ಸರಕು! ಅದನ್ನು ತೊಡುವುದರಲ್ಲಿ ಯಾವುದೇ ಹುರುಳಿಲ್ಲ ಅಂದು ಬಿಡುತ್ತಾರೆ ಈ ಕವಿ. ಹೆಸರಿಗಾಗಿ ಹಪಹಪಿಸುವ, ಪ್ರಶಸ್ತಿಗಳಿಗಾಗಿ ತನ್ನತನವನ್ನು ಮಾರಿಕೊಳ್ಳುವವರ ನಡುವೆ ಈ ಕವಿಯ ನಿಲುವು ಭರವಸೆ ಹುಟ್ಟಿಸುತ್ತದೆ. ಖುಷಿ ಇರುವುದು ಬಟ್ಟೆ ಬಿಚ್ಚಿ ನೀರಿಗೀಸು ಬೀಳುವುದರಲ್ಲಿ ಅನ್ನುವ ಗುಟ್ಟು ತಿಳಿದವರಲ್ಲಿ ಹೊಳಿದಂಡಿಯ ಸರಕು ಬೆಲೆಯನ್ನು ಕಳೆದುಕೊಳ್ಳುತ್ತದೆ. ಹೆಸರು ಹೆಸರೆಂಬುದೇನ್? ಕಸುರು ಬೀಸುವ ಗಾಳಿ ಅಂತ ಡಿವಿಜಿ ಹೇಳಿದ ಹಾಗೆ ಹುಲ್ಡಿಲ್ಲಲೇ ತಮ್ಮ ತೊಡುವುದರಾಗ ಅನ್ನುತ್ತಾರೆ ಈ ಕವಿ.

ಬದುಕನ್ನು ಅಧಮ್ಯವಾಗಿ ಪ್ರೇಮಿಸುವ ಜೀವನೋತ್ಸಾಹದ ತುಂಟತನದ ಕವಿತೆಗಳನ್ನು ಕೊಟ್ಟ ಕವಿಯೇ ಇಂತಹ ದಾರ್ಶನಿಕದ ಕವಿತೆಯನ್ನೂ ಈ ಸಂಕಲನದಲ್ಲಿ ಕೊಟ್ಟಿದ್ದಾರೆ ಅನ್ನುವುದು ಬೆರಗು ಹುಟ್ಟಿಸುತ್ತದೆ. ಬದುಕು ಕರುಣಿಸುವ ಎಲ್ಲಾ ಭಾವಕ್ಕೂ ಈ ಕವಿ ಮಿಡಿಯುವ ಕಾರಣದಿಂದಲೇ ರಕ್ತಿಯಲ್ಲಿ ವಿರಕ್ತಿಯೂ ಹುಟ್ಟಿರಬಹುದು. ಈ ಕವಿತೆ ಬದುಕನ್ನು ಒಂದು ಸಮಾನ ದೂರದಲ್ಲಿ ನಿಂತು ನೋಡುವ ಹಾಗೆ ಮಾಡುತ್ತದೆ. ಯಾವುದೇ ಸಿನಿಕತೆಯಲ್ಲಿ ಬದುಕದಿರು ಅಂತ ಬುದ್ಧಿಮಾತು ಹೇಳುತ್ತಾ ವಾಸ್ತವದ ದರ್ಶನ ಮಾಡಿಸುತ್ತದೆ.

ಇದ್ದುದೆಲ್ಲವೂ ಚೆಂದ ಬಲು ಅಂದ

ಇದ್ರ ಅದರಾಗ ಜೀವ

ಬೆಳಕೇ ಬೆಳಕು ಮನಿ ತುಂಬ ಮನಿ ಹಣತಿ

ಹೊತ್ತೊತ್ತಿಗೆ ಹೊತ್ತಿ ಉರಿಯುವಾಗ

ಜೀವ ಹೋಗಿ ದೀಪ ಆರಿದಮ್ಯಾಲ

ಹುಲ್ಡಿಲ್ಲಲೇ ತಮ್ಮ ಸ್ವಂತ ಮನಿಯಾಗ!

ಸ್ವಂತ ಮನೆಯೊಳಗೆ ಹೇಗೆ ಬದುಕಬೇಕು ಅನ್ನುವ ಸೂಕ್ಷ್ಮವನ್ನು ಹೇಳುತ್ತದೆ ಈ ಕವಿತೆಯ ಕೊನೆಯ ಸಾಲುಗಳು. ದೀಪ ಆರಿದ ಮೇಲೆ ಬದುಕಿಲ್ಲ. ಪ್ರೀತಿಯ ಹಣತೆಯನ್ನು ಸದಾ ಬೆಳಗಿಸಿ. ಪ್ರತೀ ಕ್ಷಣವನ್ನೂ ಬೆಳಕಿನಲ್ಲಿ ಕಳೆಯಿರಿ. ಕತ್ತಲೆಯ ಮೂಲೆಗಳ ಸೇರದಿರು ಅನ್ನುವ ಡಿವಿಜಿ ಮಾತಿನ ಹಾಗೆ ಬೆಳಕಿನಲ್ಲಿ ಬಾಳು ಅನ್ನುವುದನ್ನು ಧ್ವನಿಸುತ್ತದೆ. ಹೃದಯದೊಳಗೆ ಪ್ರೀತಿಗೆ ಜಾಗವಿರದಷ್ಟು ದ್ವೇಷವನ್ನು ತುಂಬಿಕೊಳ್ಳಬೇಡಿ ಅನ್ನುವ ಸಂದೇಶ ಕೊಟ್ಟ ಗುಡಿಯ ನೋಡಿರಣ್ಣ ಅನ್ನುವ ಆಧ್ಯಾತ್ಮಿಕ ನಾಟಕವನ್ನು ಬರೆಯುವುದು ಈ ಕವಿಗೆ ಸಾಧ್ಯವಾಗಿದ್ದು ಬಹುಶಃ ಬದುಕಿನೊಳಗೆ ತುಂಬಿಕೊಂಡ ಇಂತಹ ಆಧ್ಯಾತ್ಮ ಪ್ರಜ್ಞೆಯಿಂದ. 

ನಿರಿಗೆ ಗೊಂಚಲು ಹಿಡಿದು, ತಲೆ ಕೆರೆದುಕೊಳ್ಳುತ್ತ ಕೂತಿರುವನಂತೆ, ನಡು ಎಲ್ಲಿಂದ ಶುರು ಎಂದು ಗೊತ್ತಿಲ್ಲದ ಮಹಾ ಸಭ್ಯಸ್ಥ ಹುಡುಗನಾದ, ಕೆಲವು ಸಲ ತು ಟೀ ಪಿಯೇಗಾ? ಅನ್ನುವ ಸಭ್ಯ ಪ್ರಶ್ನೆಯನ್ನು ಕೇಳುವ ನನ್ನಂತೆ ತುಸು ಉಡಾಳ ಹುಡುಗನಾದ ರಾಜಕುಮಾರ ಮಡಿವಾಳರನೆಂಬ ಧಾರವಾಡ ಮಣ್ಣಿನ ಕವಿ ಬದುಕಿನ ಪ್ರತೀ ಕ್ಷಣವನ್ನೂ ಕಾವ್ಯವಾಗಿಸುತ್ತಾನೆ. ಪದಗಳಲ್ಲಿ ಉಳಕೊಳ್ಳುವ ಕವಿತೆಗೆ ಆಯಸ್ಸು ಕಡಿಮೆ. ರಾಗದಲ್ಲಿ ಉಳಕೊಳ್ಳುವ ಕವಿತೆಗೆ ತಲುಪುವ ಶಕ್ತಿ ಕ್ಷೀಣ. ಆದರೆ ಲಯದಲ್ಲಿ ಉಳಿದುಕೊಳ್ಳುವ ಕವಿತೆಯಷ್ಟೇ ಒಳಗಿಳಿಯುತ್ತದೆ ಅಂತ ಜೋಗಿ ಕವಿತೆಯ ಕುರಿತು ಹೇಳಿದ ಮಾತು ನನಗೂ ನಿಜ ಅನ್ನಿಸಿದೆ. ರಾಜಕುಮಾರ ಮಡಿವಾಳರ ಕವಿತೆಗಳು ಲಯದಲ್ಲಿ ಉಳಿದುಕೊಳ್ಳುವ ಕವಿತೆಗಳು. ಒಳಗಿಳಿದು ಕಾಡುತ್ತವೆ, ಕಚಗುಳಿ ಇಡುತ್ತವೆ, ಇನ್ನೊಂದು ಓದಿಗೆ ಪ್ರೇರೇಪಿಸುತ್ತವೆ. 

ದಾಂಪತ್ಯದ ಸಣ್ಣ ಸಣ್ಣ ಖುಷಿಗಳನ್ನು ಬೇಸರಗಳನ್ನು, ಅಷ್ಟಾಗಿ ಗಣನೆಗೆ ಬಾರದೆ ಕಳೆದುಹೋಗುವ ದಿನನಿತ್ಯದ ಸಂಗತಿಗಳನ್ನು ತಮ್ಮ ಕವಿತೆಯ ಬೊಗಸೆಯಲ್ಲಿ ಹಿಡಿದಿಟ್ಟು ಅವೇ ಈ ಬದುಕಿನ ಮಹತ್ವದ ಕ್ಷಣಗಳು ಅನ್ನುವ ಅರಿವನ್ನು ಈ ಕವಿ ಕೊಡುತ್ತಾ ಹೋಗುತ್ತಾರೆ. ನಿಸಾರ್‌ ಅಹಮದ್‌ ಹೇಳುವ ಹಾಗೆ ಚೆಲುವೆದುರಿನಲ್ಲಿ ಈ ಕವಿಯ ಕಣ್ಣು ಸತತ ಹೊಸತಾಗುತ್ತದೆ. ನಿತ್ಯದ ರೂಟೀನ್‌ ಅನ್ನುವಂತಹ ಸಂಗತಿಗಳನ್ನೂ ಹೊಸ ಪರಿಭಾಷೆಯಲ್ಲಿ ಕಟ್ಟಿಕೊಟ್ಟು ಓದುವ ನಮ್ಮ ನೋಟವನ್ನೂ ಹೊಸದಾಗಿಸುವ ಕಸುಬುಗಾರಿಕೆ ಈ ಕವಿಗೆ ಸಹಜವಾಗಿಯೇ ಸಿದ್ಧಿಸಿದೆ. ಅರ್ಥದ ಹಂಗಿಲ್ಲದೆ ಸುಮ್ಮನೆ ಈ ಕವಿತೆಗಳನ್ನು ಓದುತ್ತಾ ಕೂರಬೇಕು ಈ ಮಳೆಗಾಲದ ಸಂಜೆಗಳಲ್ಲಿ. ಒಂದು ಬೆಚ್ಚಗಿನ ಪ್ರೇಮ ನಮ್ಮ ಎದೆಗಳನ್ನು ತುಂಬಿಕೊಳ್ಳುವುದು ನಮ್ಮ ಅನುಭವಕ್ಕೆ ಬರುತ್ತದೆ. ಒಬ್ಬ ಕವಿ ಮಾಡಬೇಕಾಗಿರುವುದೂ ಅದನ್ನೇ ಅಲ್ಲವೆ?  

‍ಲೇಖಕರು Admin

14 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading