ಸುಗತ ಬರೆಯುತ್ತಾರೆ : ಪ್ರಧಾನಿಯಾಗಲು ಮಾತಿನ ಚತುರತೆ ಅಗತ್ಯವೇ?

ಸುಗತ ಶ್ರೀನಿವಾಸ ರಾಜು

ದಿನಂಪ್ರತಿ ಸುದ್ದಿವಾಹಿನಿಗಳನ್ನು ನೋಡುತ್ತಾ ರಾಜಕಾರಣ ಎಂಬುದು ಮಾತಿನ ಸಂತೆ, ಅಲ್ಲಿ ಮೌನಕ್ಕೆ ಬೆಲೆಯಿಲ್ಲ ಎಂದೆನಿಸಿದರೆ ಅದು ಅಸಹಜವೇನಲ್ಲ. ಸಾರ್ವಜನಿಕ ಬದುಕಿನಲ್ಲಿರುವವರಿಗೆ ಮಾತು ಬರದಿದ್ದರೆ, ಅವರು ಮಾತಿನ ಮಲ್ಲರಾಗಿರದಿದ್ದರೆ ನಾಲಾಯಕ್ಕು ಎಂಬ ಅಭಿಪ್ರಾಯ ನಮ್ಮ ಹೊಸ ತಲೆಮಾರಿನವರಲ್ಲಿ ಬೇರೂರುತ್ತಿದ್ದರೆ ಆಶ್ಚರ್ಯಪಡಬೇಕಿಲ್ಲ. ಮಾತು ಮುಖ್ಯವೋ, ಕ್ರಿಯೆ ಮುಖ್ಯವೋ ಎಂಬಂತಹ ಪ್ರಶ್ನೆಗಳು ಇಂದಿನ ವಾತಾವರಣದಲ್ಲಿ ಅಸಂಬದ್ಧವಾಗಿ ಕಾಣಲೂಬಹುದು.

ದೆಹಲಿಯಲ್ಲಿ ಹೊಸದಾಗಿ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷಕ್ಕೆ ಅದರ ವಾಚಾಳಿತನವೇ ಮುಳುವಾಗುವ ಸೂಚನೆಗಳು ಕಾಣುತ್ತಿವೆ. ಕಳೆದ ಒಂದು ವಾರದ ಬೆಳವಣಿಗೆಗಳನ್ನು ಗಮನಿಸಿದರೆ, ಆ ಪಕ್ಷದ ವಾಚಾಳಿ ನಾಯಕರು ಹೊಸ ತರ್ಕದ ಮೂಲಕ, ಅವಿವೇಕದ ಹುರುಪಿನ ಮೂಲಕ, ತಮ್ಮೆಲ್ಲ ತಪ್ಪುಗಳನ್ನು ಸರಿ ಎಂದು ಪ್ರತಿಕ್ಷಣ ವಾದಿಸುತ್ತಿದ್ದಾರೆ. ಬಯಲಲ್ಲಿ ಸರಕಾರ ನಡೆಸಲು ಹೊರಟಿರುವ ಅವರು, ಚಿಂತನೆಯಲ್ಲಿ, ಆತ್ಮಾವಲೋಕನದಲ್ಲಿ ಮುಳುಗಿರುವ ಒಂದು ಗಳಿಗೆಯೂ ನಮಗೆ ಈವರೆಗೂ ಬಿತ್ತರವಾಗಿಲ್ಲ. ‘ಬಿತ್ತರ’ ಎಂಬ ಪದ ಇಲ್ಲಿ ಮುಖ್ಯ. ಏಕೆಂದರೆ, ಅವರು, ಎಲ್ಲವನ್ನೂ ಸುದ್ದಿವಾಹಿನಿಗಳ ಕ್ಯಾಮೆರಾಗಳ ಮುಂದೆ, ಸಾಮಾಜಿಕ ಜಾಲತಾಣದ ಚುಟುಕು ಚಟಾಕಿ, ವ್ಯಂಗ್ಯ ಮತ್ತು ಚಾಟಿ ಏಟುಗಳ ಮೂಲಕವೇ ಮಾಡುತ್ತಿದ್ದಾರೆ. ಇದೆಲ್ಲ ತಮ್ಮನ್ನು ಎಲ್ಲಿಗೆ ಕೊಂಡೊಯ್ಯಬಹುದು, ಯಾವ ಹಳ್ಳಕ್ಕೆ ಇಳಿಸಬಹುದು ಎಂಬ ದೂರಾಲೋಚನೆ ಅವರಿಗೆ ಇದ್ದಂತಿಲ್ಲ. ಕ್ಷಣಿಕ ಸುಖ, ಅಬ್ಬರದ ಪ್ರಚಾರದ ಈ ಸಮಯದಲ್ಲಿ ‘ದೂರಾಲೋಚನೆ’ ಎಂಬ ಮಾತೂ ಬಹುಶಃ ಅಸಂಬದ್ಧ.
ಕಾಕತಾಳೀಯವೆಂದರೆ, ತಮ್ಮ ಪ್ರೀತಿ, ಪ್ರಣಯ, ಹಗರಣ ಎಲ್ಲವನ್ನೂ ಸುದ್ದಿವಾಹಿನಿಗಳ ಮುಂದೆ, ಸಾಮಾಜಿಕ ಜಾಲತಾಣಗಳಲ್ಲಿ ಎಡೆಬಿಡದೆ ಮಾತನಾಡಿದ ಸುನಂದಾ ಪುಷ್ಕರ್ ಈಗ ಕಾಯಂ ಮೌನಕ್ಕೆ ಜಾರಿದ್ದಾರೆ. ಮಾತು ತಮ್ಮನ್ನು ಸಾವಿನ ಸುಳಿಗೆ ಎಳೆಯುತ್ತಿದೆ ಎಂದು ಬಹುಶಃ ಅವರು ಯೋಚಿಸಿದ್ದಂತಿಲ್ಲ. ಅವರ ಮಾತು, ಅವರ ಮತ್ತು ಅವರ ಪತಿ ಶಶಿ ತರೂರ್ ಅವರ ಜೀವನದಲ್ಲಿ ಏನನ್ನೂ ಖಾಸಗಿಯಾಗಿ ಉಳಿಸಲಿಲ್ಲ. ಸಾರ್ವಜನಿಕ ಬದುಕಿನಲ್ಲಿರುವವರು ಮಾತಿನ ವರಸೆಗೆ ಬಿದ್ದರೆ, ತಮ್ಮ ಮಾತನ್ನು ತಾವೇ ಮೋಹಿಸಲು ಪ್ರಾರಂಭಿಸಿದರೆ, ಅದರ ಚಲಾವಣೆಯಲ್ಲಿ ಅತೀವ ನಂಬಿಕೆ ಇರಿಸಿದರೆ ಅದು ಸೃಷ್ಟಿ ಮಾಡುವ ಗೊಂದಲಗಳು ಒಂದೆರಡಲ್ಲ.

ಆಮ್ ಆದ್ಮಿ ಪಕ್ಷದ ಗುಣಗಾನ ಮಾಡುವುದು ಅಥವಾ ಸುನಂದಾ ಪುಷ್ಕರ್ ಅವರ ಸಾವನ್ನು ವಿಶ್ಲೇಷಿಸುವುದು ನನ್ನ ಇಲ್ಲಿನ ಜರೂರಲ್ಲ. ಮಾತುಗಾರಿಕೆ (Oratory) ಎಂಬುದು ಇದ್ದರೆ ಮಾತ್ರ ನಾವು ದೊಡ್ಡವರೆನಿಸಿಕೊಳ್ಳಲು ಸಾಧ್ಯವೇ ಎಂಬ ಜಿಜ್ಞಾಸೆಯ ಸುತ್ತ ಕೆಲವು ಟಿಪ್ಪಣಿಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ನಮ್ಮ ಪ್ರಧಾನಿ ಮನಮೋಹನ್ ಸಿಂಘ್ ‘ಮೌನ’ವಾಗಿ ಹತ್ತು ವರ್ಷ ದೇಶ ಅಳಿ ನಿರ್ಗಮಿಸಲು ತಯಾರಾಗುತ್ತಿರುವ ಹೊತ್ತಿನಲ್ಲಿ, ಈ ಜಿಜ್ಞಾಸೆ ನಮಗೆ ಇನ್ನಷ್ಟು ಮುಖ್ಯವಾಗುತ್ತದೆ. ಇನ್ನು ಮುಂದೆ, ಭಾರತದ ಪ್ರಧಾನಿಯಾಗಬೇಕಾದರೆ ಮಾತಿನ ಚತುರತೆ ಇಲ್ಲದೇ ಹೋದರೆ ಅದು ಸಾಧ್ಯವಿಲ್ಲವೇ? ಅವರು ಎಷ್ಟೇ ಸಮರ್ಥರಾಗಿದ್ದರೂ, ವಿದ್ಯಾವಂತರಾಗಿದ್ದರೂ, ಮಿತಭಾಷಿಯಾಗಿದ್ದರೆ ಮಾತಿನಲ್ಲಿ ಕೊಂಚ ಒರಟುತನವಿದ್ದರೆ ಅಥವಾ ಅವರಲ್ಲಿ ಮಾತಿನ ನಿರರ್ಗಳತೆ ಇಲ್ಲದಿದ್ದರೆ ಅವರು ಪ್ರಧಾನಿ ಆಗಲು ಸಾಧ್ಯವಿಲ್ಲವೇ? ಪಿ ವಿ ನರಸಿಂಹರಾವ್, ಎಚ್ ಡಿ ದೇವೇಗೌಡ, ಐ ಕೆ ಗುಜ್ರಾಲ್, ಮನಮೋಹನ್ ಸಿಂಘ್, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ, ಈ ನಮ್ಮ ಪ್ರಧಾನಿಗಳು ಮಾತಿಗೆ ಪ್ರಾಮುಖ್ಯತೆ ಕೊಟ್ಟವರಲ್ಲ, ಹಾಗೆಂದ ಮಾತ್ರಕ್ಕೆ ಇವರೆಲ್ಲ ಅಸಮರ್ಥರೇ? ಇವರಿಗೆ ತಮ್ಮ ಕೆಲಸ ಗೊತ್ತಿರಲಿಲ್ಲವೇ? ಹಾಗೆ ನೋಡಿದರೆ, ವಾಜಪೇಯಿ, ನೆಹರು, ಇಂದಿರಾ, ರಾಜೀವ್ ಇವರೆಲ್ಲರ ಮಾತಿಗೆ ಅನನ್ಯ ಶೈಲಿ, ಖಚಿತತೆ, ವಿಶ್ವಾಸವಿತ್ತೇ ಹೊರತು ಅವರಾರೂ ವಾಚಾಳಿಗಳಾಗಿರಲಿಲ್ಲ. ಆದರೆ ಈಗ, ಸುದ್ದಿವಾಹಿನಿಗಳ ಸ್ಫೋಟವಾಗಿರುವಾಗ, ನಾಯಕರ ಮಾತಿನ ಬಗೆಗಿನ ನಮ್ಮ ಮಾನದಂಡ ಬದಲಾದಂತಿದೆ. ನಾವು ಹೊಸ ಮಾನದಂಡವನ್ನು ಅಮೆರಿಕದಿಂದ ವಿಶೇಷವಾಗಿ ಅಮದು ಮಾಡಿಕೊಂಡಂತೆ ಕಾಣುತ್ತದೆ. ಅಮೆರಿಕದಲ್ಲಿ ಒಬ್ಬ ನಾಯಕ ಅರಳು ಹುರಿದಂತೆ ಮಾತನಾಡದಿದ್ದರೆ ಅವನು ಆ ದೇಶದ ಅಧ್ಯಕ್ಷನಾಗಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ‘Oratory is all, sincerity counts for nothing,’ ಎಂಬ ಮಾತನ್ನು ಒಂದು ದಶಕದ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಕೇಳಿದ ನೆನಪು. ಒಬ್ಬ ನಾಯಕನಿಗೆ ಮಾತು ಮುಖ್ಯ. ಆದರೆ ಅದೊಂದೇ ಸಾಕೇ? ಆ ಮಾತು ಸ್ಪಷ್ಟವಾಗಿ, ನೇರವಾಗಿದ್ದರೆ ಸಾಲದೇ? ಅದು ಸದಾ ಮೋಡಿ ಮಾಡುವಂತಿರಬೇಕೇ? ಹುಚ್ಚೆಬ್ಬಿಸುವಂತಿರಬೇಕೇ? ಅದರಲ್ಲಿ ಹುಸಿ ತರ್ಕ, ತೀಕ್ಷ್ಣತೆ ತುಂಬಿರಬೇಕೇ? ಇಂಗ್ಲಿಷ್ ಭಾಷೆಯಲ್ಲಿ ಹೀಗೆ ಮಾತನಾಡುವವರಿಗೆ ಹಲವು ವಿಶೇಷ ಪದಗಳಿವೆ: Demagogue (ಜನಸಾಮಾನ್ಯರ ಪೂರ್ವಗ್ರಹಗಳನ್ನು ಕೆರಳಿಸಿ, ಸ್ವಂತಕ್ಕೆ ಬಳಸಿಕೊಳ್ಳುವ ಭಾಷಣಕಾರ); Sophist (ಸತ್ಯ, ನ್ಯಾಯ ಎಂಬ ಭ್ರಾಂತಿ ಹುಟ್ಟಿಸುವ ವಾದಗಳನ್ನು ಹೂಡಿ ವಂಚಿಸುವ ತಾರ್ಕಿಕ); Rhetorician (ದೊಡ್ಡ ದೊಡ್ಡ ಪದಗಳನ್ನು ಬಳಸಿ ನಾಟಕೀಯ ಪರಿಣಾಮಕ್ಕಾಗಿ ಪ್ರಯತ್ನಿಸುವ ಭಾಷಣಕಾರ), ಇತ್ಯಾದಿ.
ಶುಕ್ರವಾರ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿಯವರ ಮಾತಿನಲ್ಲಿ ಹೊಸ ಬೀಸು, ತಡವರಿಸದೆ ಹೊರಬಂದ ಸಿಟ್ಟು, ಹೊಸ ಆವೇಶ ಕಾಣಿಸಿಕೊಂಡಿತು. ಇದು ಬಹಳ ಪರಿಣಾಮಕಾರಿಯಾಗಿತ್ತು ಎಂದು ಅನೇಕರು ಅಭಿಪ್ರಾಯಪಟ್ಟರು. ಹೀಗೆ ಮಾತನಾಡುತ್ತಾ ಹೋದರೆ ಕಾಂಗ್ರೆಸ್‌ಗೆ ಮುಂಬರುವ ಚುನಾವಣೆಯಲ್ಲಿ ಹತ್ತಾರು ಸೀಟು ಹೆಚ್ಚಾಗಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದರು. ಇದರ ಅರ್ಥ, ಉಗ್ರ ಪ್ರತಾಪಿ ಪ್ರದರ್ಶನ ಕೊಟ್ಟರೆ ಮಾತ್ರ ಜನರು ಮತ ಹಾಕುತ್ತಾರೆ ಎಂದೇ? ಇಲ್ಲಿ ಕೇಳಿಕೊಳ್ಳಬೇಕಾದ ಮತ್ತೊಂದು ಪ್ರಶ್ನೆ, ರಾಹುಲ್ ತಮ್ಮತನವನ್ನು, ತಮ್ಮ ಸಹಜ ಹಿಂಜರಿಕೆಯನ್ನು ಬದಿಗಿರಿಸಿ ಆವೇಶಭರಿತರಾಗಿ ಮಾತನಾಡಲು ಭಾ.ಜ.ಪ ದ ನರೇಂದ್ರ ಮೋದಿ ಕಾರಣರೇ? ಇಲ್ಲಿಯವರೆಗೂ ನಮ್ಮ ಮಾಧ್ಯಮಗಳಲ್ಲಿ ನಡೆದಿರುವ ಚರ್ಚೆಯಲ್ಲಿ ಮೋದಿ ಅತ್ಯಂತ ಪರಿಣಾಮಕಾರಿ ಭಾಷಣಕಾರ, ಅವರ ಕುಹಕ, ವ್ಯಂಗ್ಯ, ಆಂಗಿಕ ಅಭಿನಯ (Body Language), ವೇಷಭೂಷಣ ಎಲ್ಲವೂ ಜನರನ್ನು ಆಕರ್ಷಿಸುತ್ತದೆ. ಅದರೆ, ತಾವು ಧರಿಸಿದ ಕುರ್ತಾದ ತೋಳನ್ನು ಸದಾ ಮೇಲಕ್ಕೆ ಎಳೆದುಕೊಳ್ಳುತ್ತಾ, ತಡವರಿಸುತ್ತಲೇ ಮಾತನಾಡುವ ರಾಹುಲ್ ಬಹಳ ಸಪ್ಪೆ, ಆತನ ತಂಗಿ ಪ್ರಿಯಾಂಕಳಿಗಿರುವ ಸಹಜತೆ ಕೂಡ ಈತನಿಗಿಲ್ಲ ಎಂದು ವಿಶ್ಲೇಷಿಸುತ್ತಾ ಬಂದಿದ್ದೇವೆ. ಈ ವಿಶ್ಲೇಷಣೆಗಳಿಗೆ ಅಪವಾದ ಎಂಬಂತೆ ಶುಕ್ರವಾರ ಆತ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಮಾತನಾಡಿದರು ಎಂಬುದು ಸುದ್ದಿಯಾಯಿತು. ಏರುದನಿಯ ಪ್ರದರ್ಶನವೇ ಸರಿ, ಮನಮೋಹನ್ ಸಿಂಘರಂತೆ ಕುಂಯ್ಞಿಗುಟ್ಟಿದರೆ ಆಗದು ಎಂಬ ತೀರ್ಮಾನಕ್ಕೆ ರಾಹುಲ್ ಬಂದರೇ? ಇದು ಸರಿ ತೀರ್ಮಾನವೇ ಎಂಬ ಅನುಮಾನವನ್ನು ನಾವು ಇರಿಸಿಕೊಳ್ಳುವುದು ಒಳಿತು. ಎಲ್ಲರೂ ಇಂತಹುದೇ ತೀರ್ಮಾನಕ್ಕೆ ಬಂದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಏನಾಗಬಹುದೆಂದು ಊಹಿಸಿ. ಮೌನಕ್ಕೆ, ಸಮಾಧಾನದ ಚಿಂತನೆಗೆ ಎಡೆ ಇರದ, ಏರುದನಿಯ, ಮಾತಿನ ಮಲ್ಲರ ಪ್ರಭುತ್ವ ನಮ್ಮದಾಗಬಹುದು. ಆಗ ಕ್ರಿಯೆ ಇಲ್ಲಿ ಎರಡನೇ ದರ್ಜೆ ಪ್ರಜೆಯಾಗುತ್ತದೆ. ಒಬ್ಬ ನಾಯಕನಲ್ಲಿ ನಾವು ಆಪೇಕ್ಷಿಸುವ ಬೇರೆಲ್ಲಾ ಭೂಷಣಗಳು ಮಾತಿನ ಪ್ರಾಧಾನ್ಯತೆಯ ನಡುವೆ ಬದಿಗೆ ಸರಿಯುತ್ತವೆ. ರಾಹುಲ್ ಮಾತು ಮತ್ತು ಅದರ ವರಸೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು, ತಮ್ಮ ಕಾರ್ಯತಂತ್ರ, ಅಭಿವದ್ಧಿ ಯೋಜನೆ, ಅದರ ಪ್ರಾಮಾಣಿಕ ಅನುಷ್ಠಾನ,

ತಮ್ಮ ಕಾರ್ಯಶೈಲಿ, ಇವುಗಳ ಉತ್ತಮ ಸಂವಹನಕಾರರಾದರೆ ಸಾಕು. ಕೆಲವೊಮ್ಮೆ ಮೆಲುದನಿಗಿರುವ ಕಂಪನ ಏರುದನಿಗೆ ಇರುವುದಿಲ್ಲ. ಸೈದ್ಧಾಂತಿಕ ಸ್ಪಷ್ಟತೆಯಿಂದ ಹೊರಡುವ ಮಾತಿಗೂ, ಸೈದ್ಧಾಂತಿಕ ಅಂಧಾಭಿಮಾನದಿಂದ ಹೊರಡುವ ಮಾತಿಗೂ ವ್ಯತ್ಯಾಸವಿರುತ್ತದೆ.
ಪ್ರತಿದಿನದ ರಾಜಕಾರಣ, ಗೊಂದಲಗಳ ನಡುವೆ ಮೌನದಿಂದ ಶಕ್ತಿಯನ್ನೂ, ಏಕಾಗ್ರತೆಯನ್ನೂ ಸಂಪಾದಿಸುವ ಗಾಂಧಿ ಪರಂಪರೆಯನ್ನು ನಮ್ಮ ಇಂದಿನ ರಾಜಕಾರಣಿಗಳು ಮರೆತಂತಿದೆ. ಗಾಂಧೀಜಿ ಸತ್ಯಾಗ್ರಹವನ್ನಷ್ಟೇ ಅಲ್ಲ, ಮೌನವನ್ನೂ ಒಂದು ವ್ರತವಾಗಿ, ಒಂದು ಅಸ್ತ್ರವಾಗಿ ಪಾಲಿಸುತ್ತಿದ್ದರು. ಸ್ವಾತಂತ್ರ್ಯೋತ್ತರದಲ್ಲಿ ಬಂದ ಅನೇಕ ರಾಜಕಾರಣಿಗಳು ಇದನ್ನು ಬೇರೆ ಬೇರೆ ರೀತಿ ಪ್ರಯೋಗ ಮಾಡಿದ್ದಾರೆ. ನಮ್ಮಲ್ಲಿ ರಾಮಕಷ್ಣ ಹೆಗಡೆ ಮೌನವ್ರತವನ್ನು ವಾರಕ್ಕೊಮ್ಮೆ ಆಚರಿಸುತ್ತಿದ್ದರು. ಎಸ್ ಎಂ ಕೃಷ್ಣ ಮಿತಭಾಷಿ. ನಮ್ಮ ರಾಜಕಾರಣದಲ್ಲಿ ಮಾತನ್ನು ಅಳೆದು, ತೂಗಿ ಮಾತನಾಡುವ ಸಂಪ್ರದಾಯವೂ ಇದೆ. ಕರುಣಾನಿಧಿ, ವಾಜಪೇಯಿ ತರಹದವರು ಈ ಸಂಪ್ರದಾಯವನ್ನು ಪ್ರತಿನಿಧಿಸುತ್ತಾರೆ. ಅವರ ಒಂದು ಮಾತಿಗೆ ಹಲವು ಅರ್ಥವಿರುತ್ತದೆ, ಮತ್ತು ಮಾತಿನ ನಡುವಿನ ಮೌನ (Pause) ಅರ್ಥಗರ್ಭಿತವಾಗಿರುತ್ತದೆ. ಅವರು ಮಾತನಾಡದೆ ಉಳಿಸಿದ್ದು ಹೆಚ್ಚು ಚರ್ಚೆಯಾಗುತ್ತದೆ. ಭಾವಿಸಿ, ಅನುಭವಿಸಿ ಮಾತನಾಡುವುದಕ್ಕೂ, ಸುಮ್ಮನೆ ಉಗುಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ನಮ್ಮ ಶರಣ ಪರಂಪರೆಯಲ್ಲೂ ಯಾವ ಮಾತು ಸರಿ, ಯಾವ ಮಾತು ಒಪ್ಪಿತ, ಮಾತು ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಭಾರತದ ಬೇರೆ ಭಾಷಾ ಪರಂಪರೆಗಳಲ್ಲೂ ಇದು ಪ್ರಚಲಿತವಾಗಿದೆ. ನಾನು ದೆಹಲಿಯಲ್ಲಿ ನನ್ನ ಬಿಹಾರಿ ಸ್ನೇಹಿತರಿಂದ ಬಹಳ ಹಿಂದೆ ಕೇಳಿದ ಒಂದು ನಾಣ್ಣುಡಿಯನ್ನು ಇಂದಿಗೂ ಆಸ್ವಾದಿಸುತ್ತಿರುತ್ತೇನೆ: ‘ಮೀಠಾ ಬೋಲ್ ಕಮ್ ತೋಲ್’ (ಸಿಹಿ/ಹೊಗಳಿಕೆಯ ಮಾತಿಗೆ ತೂಕ ಕಡಿಮೆ).

ವಿಜಯ ಕರ್ನಾಟಕದಲ್ಲಿ ಪ್ರಕಟಿತ


‍ಲೇಖಕರು G

January 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

14 ಪ್ರತಿಕ್ರಿಯೆಗಳು

  1. Ananda Prasad

    ಉತ್ತಮ ಪ್ರಧಾನಿಯಾಗಲು ಅಥವಾ ನಾಯಕನಾಗಲು ವಾಚಾಳಿತನ ಅಗತ್ಯವಿಲ್ಲ. ಇದಕ್ಕೆ ಅಗತ್ಯವಾಗಿರುವುದು ಸ್ವತಂತ್ರವಾಗಿ ಪರಿಸ್ಥಿತಿಯನ್ನು ಎಲ್ಲ ದೃಷ್ಟಿಕೋನಗಳಿಂದಲೂ ವಿಶ್ಲೇಷಿಸಿ ಸಂದರ್ಭಕ್ಕೆ ಸೂಕ್ತ ನಿರ್ಣಯ ತೆಗೆದುಕೊಳ್ಳಬಲ್ಲ ಚಾಣಾಕ್ಷ್ಯತೆ. ಇದು ಇಲ್ಲದಿದ್ದರೆ ತನ್ನ ತಪ್ಪು ನಿರ್ಧಾರಗಳಿಗೆ (ಅಥವಾ ತನ್ನ ಸಲಹೆಗಾರರ ತಪ್ಪು ಸಲಹೆಗಳಿಗೆ) ತಾನೇ ಬಲಿಯಾಗಬೇಕಾಗುತ್ತದೆ.

    ಪ್ರತಿಕ್ರಿಯೆ
  2. ಸಿ. ಎನ್. ರಾಮಚಂದ್ರನ್

    ಪ್ರಿಯರೆ, ಸುಗತ ಅವರ ಲೇಖನ ತುಂಬಾ ಅರ್ಥಪೂರ್ಣವಾಗಿದೆ; ಮತ್ತೆ ಮತ್ತೆ ವಾಗ್ಮಿತೆಯ oratory) ಬಗ್ಗೆ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಆಡಳಿತಗಾರನಿಗೆ ತನ್ನ
    ಕರ್ತವ್ಯಗಳ ಬಗ್ಗೆ ಬದ್ಧತೆ ಮುಖ್ಯವೇ ಹೊರತು, ಅವನ/ಳ ಕ್ರಿಯೆ ಮುಖ್ಯವೇ ಹೊರತು, ’ಮೋಡಿ ಮಾಡುವ ವಾಗ್ಮಿತೆ’ ಅಲ್ಲ. ಸಾಕ್ರಟೀಸ್ ವಾಗ್ಮಿ ಆಗಿರಲಿಲ್ಲ ಎಂಬುದು ನಾವು
    ಗಮನಿಸಬೇಕಾದ ನಿದರ್ಶನ. ಸುಗತ ಅವರ ಲೇಖನಕ್ಕಾಗಿ, ಅವರ ’ಭಿನ್ನ ದನಿ’ಗಾಗಿ, ಅಭಿನಂದನೆಗಳು.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  3. ರವಿಪ್ರಕಾಶ

    ನನ್ನೊಂದಿಗಿರುವ ಸ್ನೇಹಿತರುಗಳು ಹಾಗೂ ಸಾಮಾಜಿಕ ಜಾಲತಣದ ಲೈಕುಗಳು ನಿಮ್ಮ ಅನ್ನಿಸಿಕೆಯನ್ನೆ ಪ್ರತಿಬಿಂಬಿಸುತ್ತಿವೆ. ಮಾತಿನ ಮೋಡಿಗೆ ಒಳಗಾದ ಇವರುಗಳು ಭೂತದ ವೈಭೋಗದ ಕನಸನ್ನು ಭವಿಷ್ಯದಲ್ಲಿ ಕಾಣುತ್ತ ಇರುವಾಗ ವತರ್ಮಾನವನ್ನೆ ಮರೆತಿರುವಂತಿದೆ. ಇವರು ಮರೆವು ಭವಿಷ್ಯದಲ್ಲಿ ಹಿಂಸೆಯ ಸೃಷ್ಟಿಗೆ ಕಾರಣವಾಗದಿರಲಿ ಎಂಬುದೊಂದೆ ಆಶಯ.

    ಪ್ರತಿಕ್ರಿಯೆ
  4. ಬಿ. ಆರ್. ಸತ್ಯನಾರಾಯಣ

    ಚಿಂತನಾರ್ಹ ಲೇಖನ.
    ಮಾತುಗಳ ನಡುವಿನ ಮೌನವನ್ನು ಗೌರವಿಸಬೇಕಾಗಿದೆ.
    ನಮಗೊಬ್ಬ ಮೇಷ್ಟರಿದ್ದರು. ಪಾಠ ಮಾಡುವಾಗ ಯಾವುದೋ ಒಂದು ಪ್ರಮುಖ ಹಂತದಲ್ಲಿ ಮಾತುನಿಲ್ಲಿಸಿ ಸುಮಾರು ಒಂದು ನಿಮಿಷದವರೆಗೂ ಮೌನವಾಗಿಬಿಡುತ್ತಿದ್ದರು. ಆದರೆ ಅಷ್ಟರಲ್ಲಿ ಅವರು ನಿಲ್ಲಿಸಿದ ಮಾತುಗಳ ಮುಂದುವರಿಕೆಯಾಗಿ ಹತ್ತಾರು ಅರ್ಥಬರುವ ಆಲೋಚನೆಗಳು ನಮ್ಮ ಮನಸ್ಸಿನಲ್ಲಿ ಬಂದು ಹೋಗುತ್ತಿದ್ದವು!

    ಪ್ರತಿಕ್ರಿಯೆ
  5. Pramod

    ಮಾತು ಮರೆತು, ಜನರ ಮುಖ ಮರೆತು, ಫೇಸ್ ಬುಕ್, ಟೀವಿ ಮು೦ದೆ ಕೂತ ಮನುಷ್ಯರ ಕಿವಿ ಕಣ್ಣುಗಳು ಮಾತ್ರ ಕೆಲಸ ಕೆಲಸಮಾಡುತ್ತವೆ. ಅದರಾಚೆಗಿನ ಮೆದುಳಲ್ಲ. ಸ್ವಭಾವತಃ ಸ೦ವಹನದ ಅಭಾವ ಹೊ೦ದಿದ ಸದ್ಯದ ಜನ ಅದನ್ನೇ ಬೇರೆಯವರಲ್ಲಿ ನೋಡುತ್ತಿದ್ದಾರೆ

    ಪ್ರತಿಕ್ರಿಯೆ
  6. krishna Bhat

    ಮಾತು, ವಾಚಾಳಿತನ ಮತ್ತು ಮೌನದ ವಿಶ್ಲೇಷಣೆ ಸೊಗಸಾಗಿದೆ. ಒಬ್ಬ ಆಡಳಿತಗಾರ ಎಲ್ಲವನ್ನೂ ಶಬ್ದಶ: ಹೇಳಬೇಕಾದ ಅನಿವಾರ್ಯತೆ ಬರಬಾರದು. ಹಾಗೆ ಹೇಳಬೇಕಾಗಿ ಬಂದರೆ ಪ್ರಜೆಗಳು ಮೂರ್ಖರು ಎಂದಾಗುತ್ತದೆ. ಒಂದೇ ವಿಷಯಕ್ಕೆ ಸಾವಿರ ಪದಗಳನ್ನು ಬಳಸುವ ಬದಲು, ಕಿರಿದರಲ್ಲಿ ಪಿರಿದರ್ಥ ತುಂಬುವ ಭಾಷಣವೇ ಆಪ್ತವಾಗುತ್ತದೆ. ಮಾತು ಸಂವಹನಕ್ಕೆ ಪೂರಕವಾಗಿ ಬೇಕೇ ಬೇಕು. ಆದರೆ, ವಾಚಾಳಿತನವಾದರೆ ಅಪಾಯಕಾರಿ.

    ಪ್ರತಿಕ್ರಿಯೆ
  7. ಮಾಲತೇಶ್ ಅರಸ್ ಹರ್ತಿಮಠ

    ಸುಗತ ಸರ್ ಅವರ ಲೇಖನದ ಪ್ರತಿಯೊಂದು ಅಕ್ಷರಗಳು ಅರ್ಥ ಪೂರ್ಣವಾಗಿವೆ. ಪ್ರಸ್ತುತ ರಾಜಕಾರಣಿಗಳು ಆಗಾಗ ಓದಬೇಕಾದ ಲೇಖನವಾಗಿದೆ. ಮತ್ತು ಮಾತನ್ನೇ ನಂಬಿ ಮತ ಹಾಕಲು ಸಿದ್ಧವಾಗಿರುವ ಅನೇಕರು ಇದನ್ನು ಓದಲೇ ಬೇಕಾಗಿದೆ.

    ಪ್ರತಿಕ್ರಿಯೆ
  8. Divya

    Sva VishleshaNege hachchidanta lekhana.
    Gandhi heLida maatu nenapaytu – ” There are times, where Silence is the Loudest Voice”.
    Nanna vaiyaktika badukinallu neevu heLiruva maatannu nambiruvavaLu.Adare raajakeeya rangakke anvayisi naanu nodiralilla!

    ಪ್ರತಿಕ್ರಿಯೆ
  9. Shwetha Hosabale

    ಎಲ್ಲರ ಗಮನ ಸೆಳೆಯಲು, ಮೋಡಿ ಮಾಡಲು ಮಾತು ಎನ್ನುವುದು ಪ್ರಬಲ ಅಸ್ತ್ರವಾಗಿಬಿಟ್ಟಿದೆ! ಬರೀ ರಾಜಕೀಯ ಅಂಥಲ್ಲ, ಬೇರೆ ಕ್ಷೇತ್ರಗಳಲ್ಲೂ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಆತ ಉತ್ತಮ ಮಾತುಗಾರನಾಗಿದ್ದರೆ ಗೆಲ್ಲಬಲ್ಲ ಎಂಬಂಥಹ ಪರಿಸ್ಥಿತಿಯಿದೆ…ಸೂಕ್ಷ್ಮ ಒಳನೋಟಗಳಿರುವ ಸುಗತ ಅವರ ಲೇಖನ ತುಂಬ ಇಷ್ಟವಾಯಿತು.

    ಪ್ರತಿಕ್ರಿಯೆ
  10. h a patil

    – ಈ ದೇಶದ ಪ್ರಧಾನಿಯಾಗಲು ಮಾತಿನ ಚತುರತೆ ಅಗತ್ಯವಲ್ಲವಾದರೂ ಆ ಅರ್ಹತೆ ಅವನಿಗೋ ಇಲ್ಲ ಅವಳಿಗೋ ಆ ಚತುರತೆ ಇದ್ದರೆ ಚೆನ್ನ ಎನಿಸುತ್ತದೆ. ಏಕೆಂದರೆ 130 ಕೋಟಿಗೂ ಆಧಿಕ ಜನ ಬಾಹುಳ್ಯವಿರುವ ಒಂದು ದೇಶದ ಪ್ರಧಾನಿಗೆ ತನ್ನ ಜನಪರ ಕಾರ್ಯಕ್ರಮಗಳ ಕುರಿತ ಅಭಿವ್ಯಕ್ತಿಸಲು ವಾಕ್ಷಾರ್ಯತೆ ಇದ್ದರೆ ಚೆನ್ನ ಎನಿಸುತ್ತೆ.

    ಪ್ರತಿಕ್ರಿಯೆ
  11. ನಾಗೇಂದ್ರ ಹೆಬ್ಬಾರ

    ಅರ್ಥಪೂರ್ಣ ಲೇಖನ.ಬಹುಶಃ ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದರೆ ಆಮ್ ಆದ್ಮಿ ಬೇರೆ ರಾಜಕೀಯ ಪಕ್ಷಗಳ ಹಾದಿಯಲ್ಲೇ ಸಾಗಬಹುದಾದ ಎಲ್ಲ ಸಾಧ್ಯತೆಗಳೂ ಕಾಣಿಸುತ್ತಿವೆ. ಯಾರು ಹಿತವರು ನಿಮಗೆ??????

    ಪ್ರತಿಕ್ರಿಯೆ
  12. mahipalreddy munnur

    media highlight dinda janisida Kejriwaal.. entha pollu antaa ega gottaguttide…
    ade media highlight dinda Modi ge generate maadalaguttide.. Modi yenu anta naale gottagutte..
    e hosa aalochanegala sugat srinivasu raju avara e editorial page article nijakku aalochane ge edu maduttade..
    abhinandanegalu sugat sir and avadhi

    ಪ್ರತಿಕ್ರಿಯೆ
  13. Anil Talikoti

    ಅಮೆರಿಕೆಯಿಂದ ಹಿಂದು ಮುಂದು ನೋಡದೆ ನಾವು ಆಮದು ಮಾಡಿಕೊಂಡ ಅನಿಷ್ಟಗಳಲ್ಲಿ ಇದೂ ಒಂದು. ಆದರೆ ಇಲ್ಲಿ ಪ್ರಚಾರ(campaign)ಕ್ಕೂ, ಆಡಳಿತಕ್ಕೂ ಇರುವ ಖಚಿತ ವ್ಯತ್ಯಾಸಗಳು ನಮ್ಮಲ್ಲಿ ಇಲ್ಲವೇನೋ? ಅಭಿವದ್ಧಿ ಯೋಜನೆ, ಅದರ ಪ್ರಾಮಾಣಿಕ ಅನುಷ್ಠಾನ ಮಾಡುವದಾದರೆ ಇವೆಲ್ಲಾ ಗೌಣ. ತುಂಬಾ ಅರ್ಥಪೂರ್ಣ ಲೇಖನ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: