ಪ್ರೇಮ ಮತ್ತು ಬದುಕಿನ ತೀವ್ರತೆಯನ್ನು ಕಟ್ಟಿಕೊಡುವ ’ಡೇಡ್ ಇಶ್ಕಿಯಾ’

ಪ್ರೀತಿಗೆ ಕೊನೆಯೆಲ್ಲಿ…. ?

ಕುಮಾರ ರೈತ

ವರದಿಗಾರ.ಕಾಂ

ದೆಢ್ ಇಷ್ಕಿಯಾ, ಪ್ರೇಮ ಮತ್ತು ಬದುಕಿನ ಬಗ್ಗೆ ಉದ್ಧುದ್ದ ಸಂಭಾಷಣೆ ಹೇಳದೆ ಅವುಗಳ ತೀವ್ರತೆಯನ್ನು ಕಟ್ಟಿಕೊಡಲು ಯತ್ನಿಸಿರುವ ಸಿನಿಮಾ. ಕಳ್ಳತನ, ಮಾಫಿಯಾ, ಸಂಚು ಮತ್ತು ಪೊಲೀಸ್ ಇವುಗಳ ಘರ್ಷಣೆಯಲ್ಲಿ ಪ್ರೀತಿ ಗೆಲ್ಲುತ್ತದೆ ಎಂಬುದೇ ಇಲ್ಲಿನ ಕೇಂದ್ರ. ಇದನ್ನು ನಿರ್ದೇಶಕ ಅಭಿಷೇಕ್ ಚೌಬೆ ನಿರೂಪಿಸಿರುವ ರೀತಿ ಆಕರ್ಷಕ.

ಸಿನಿಮಾ ಆರಂಭ ಮತ್ತು ಅಂತ್ಯ ಎರಡೂ ಒಂದೆಡೆಯೇ ಆಗುವುದರ ಮೂಲಕ ‘ಬದುಕು ಎಲ್ಲಿ ಆರಂಭವಾಗುವುದೋ ಅಲ್ಲಿಯೇ ಅಂತ್ಯಗೊಳ್ಳಬಹುದು’ ಎಂಬುದನ್ನೂ ಹೇಳಲು ನಿರ್ದೇಶಕ ಪ್ರಯತ್ನಿಸಿದ್ದಾನೆ ಅನಿಸುತ್ತದೆ. ಆಭರಣಗಳ ಮಳಿಗೆಯಿಂದ ದುಬಾರಿ ಬೆಲೆಯ ವಜ್ರದ ಕಂಠೀಹಾರ ಕಳುವಾಗಿರುತ್ತದೆ. ಇದನ್ನು ಎಗರಿಸಿದವರಲ್ಲಿ ಒಬ್ಬನಾದ ಬಬ್ಬನ್ (ಅರ್ಷದ್ ವಾರ್ಸಿ) ಹಿಡಿಯುವ ಭೂಗತ ಜಗತ್ತು ತನ್ನದೆ ಧಾಟಿಯಲ್ಲಿ ಆತನ ಬಾಯಿ ಬಿಡಿಸಲು ಯತ್ನಿಸುತ್ತದೆ.

ಇಲ್ಲಿ ಫ್ಯಾಷ್ ಬ್ಯಾಕ್ ತಂತ್ರ ಬಳಸುವ ನಿರ್ದೇಶಕ ಆಭರಣ ಕಳುವಾದ ರೀತಿ, ಪೊಲೀಸ್ ದಾಳಿಯಲ್ಲಿ ಅದನ್ನು ಲಪಾಟಾಯಿಸಿದ ಸಮೀಪ ಬಂಧುಗಳೇ ಆದ ಕಳ್ಳರಿಬ್ಬರು ಬೇರ್ಪಡೆ ಆದದ್ದನ್ನು ಹೇಳುತ್ತಾನೆ. ಚಿತ್ರದುದ್ದಕ್ಕೂ ಇದೇ ರೀತಿಯ ಸಣ್ಣಸಣ್ಣ ಫ್ಲಾಷ್ ಬ್ಯಾಕ್ ಬರುತ್ತವಾದರೂ ಕಥೆಯ ಓಟಕ್ಕೆ ಧಕ್ಕೆಯಾಗಿಲ್ಲ.
ಚಾಣಾಕ್ಷತನದಿಂದ ಭೂಗತ ಜಗತ್ತಿನ ಖದೀಮರಿಂದ ತಪ್ಪಿಸಿಕೊಳ್ಳುವ ಬಬ್ಬನ್, ಕಾಣೆಯಾಗಿದ್ದ ಕಳ್ಳ ಖಾಲುಜಾನ್ (ನಾಸಿರುದೀನ್ ಶಾ) ಹುಡುಕಲು ತೊಡಗುತ್ತಾನೆ. ಆಗ ಅವನಿಗೆ ಅಚ್ಚರಿಯೊಂದು ಕಾದಿರುತ್ತದೆ. ಖಾಲುಜಾನ್ ನವಾಬನಾಗಿರುತ್ತಾನೆ ! ಮುಂದಿನ ಬೆಳವಣಿಗೆಗಳು ರೋಚಕವಾಗಿವೆ.
ಮಮ್ಮುದಾಬಾದ್ ಪ್ರಾಂತ್ಯದ ಮಧ್ಯ ವಯಸ್ಸಿನ ಅಪ್ರತಿಮ ಚೆಲುವೆ, ವಿಧವೆ ಪರ (ಮಾಧುರಿ ದೀಕ್ಷಿತ್) ಸ್ವಯಂವರ ಏಪರ್ಡಿಸಿರುತ್ತಾಳೆ. ಇಲ್ಲಿನ ಸ್ಪರ್ಧೆಗಳಲ್ಲಿ ಗೆದ್ದವನು ಪರ ಕೈಹಿಡಿದು, ಮಮ್ಮುದಾಬಾದ್ ನವಾಬನೂ ಆಗುವ ಅಪೂರ್ವ ಅವಕಾಶ. ಈ ಸಂದರ್ಭದಲ್ಲಿ ಬರುವ ಶಾಹಿರಿಗಳು ಅನನ್ಯ.

ಇಲ್ಲಿ ಭೂಗತ ಜಗತ್ತಿನ ಮುಖಂಡ ಜಾನ್ ಮೊಹಮ್ಮದ್ (ವಿಜಯ್ ರಾಜ್) ಪ್ರವೇಶ, ಪರ ವರಿಸಲು ಈತನ ತಹತಹ. ಖಾಲುಜಾನ್ ಮತ್ತು ಈತನ ನಡುವೆ ಘರ್ಷಣೆ. ಸ್ಪರ್ಧೆ ಇವರಿಬ್ಬರ ನಡುವೆ ಕೇಂದ್ರೀಕೃತವಾಗುತ್ತದೆ. ಈ ನಡುವೆ ಬಬ್ಬನ್ ಮತ್ತು ಪರ ಸಹೋದರಿ ಸುಂದರಿ ಮುನಿಯಾ (ಹುಮಾ ಖುರೇಷಿ) ನಡುವೆ ಪ್ರೇಮಾಂಕುರವಾಗುವ ಬೆಳವಣಿಗೆಯೂ ನಡೆಯುತ್ತದೆ. ಜೊತೆಗೆ ಸ್ಪರ್ಧೆ ಅಂತಿಮಗೊಳ್ಳುವುದಕ್ಕಿಂತ ಮುಂಚೆಯೇ ಪರ ಮತ್ತು ಖಾಲುಜಾನ್ ನಡುವೆ ಪ್ರೀತಿ ಮೊಳೆತಿರುತ್ತದೆ !
ಇಲ್ಲಿಗೆ ಕಥೆ ಸುಖಾಂತವಾಯಿತು ಎಂದು ನೀವು ಅಂದುಕೊಳ್ಳಬಹುದು. ಆದರೆ ಮತ್ತಷ್ಟು ಬೆಳವಣಿಗಳು ಘಟಿಸುತ್ತವೆ. ಅವುಗಳು ಅಚ್ಚರಿಯನ್ನೂ ಮೂಡಿಸುತ್ತವೆ. ಕಥೆಯ ಮಡಿಲಿನಲ್ಲಿ ಹುಟ್ಟುವ ಈ ಉಪಕಥೆಗಳು ನಿಜಕ್ಕೂ ಉಪಕಥೆಗಳಾಗಿರದೆ ಅವುಗಳೇ ಪ್ರಮುಖ ಎಂಬುದರ ಅನಾವರಣವೂ ಆಗುತ್ತದೆ.

ಸುಂದರಿಯರಾದ ಪರ ಮತ್ತು ಮುನಿಯಾ ಅಸಲಿ ಮುಖಗಳು ತೆರೆದುಕೊಳ್ಳುತ್ತವೆ. ಪ್ರೀತಿ ಹುಸಿ ಎಂದರಿವಾಗುತ್ತಿದ್ದಂತೆಯೇ ಅಲ್ಲಿ ಅಸಲಿ ಪ್ರೀತಿ ಅರಳಿರುತ್ತದೆ. ಇಷ್ಟೆಲ್ಲಾ ವಿಷಯ ಕಿಂಚಿತ್ತೂ ಗೋಜಲಾಗದಂತೆ ನಿರೂಪಿಸುವಲ್ಲಿ ನಿರ್ದೇಶಕ ಗೆದ್ದಿದ್ದಾನೆ. ಕಥೆ ದರಬ್ ಫಾರೂಕಿ ಅವರದು. ಚಿತ್ರಕಥೆಯೂ ಅಚ್ಚುಕಟ್ಟಾಗಿದೆ. ಇದರಲ್ಲಿ ಗುಲ್ಜಾರ್, ಜೊತೆಗೆ ಚಿತ್ರ ನಿರ್ದೇಶಕ ಚೌಬೆ ಮತ್ತು ನಿರ್ಮಾಪಕ ವಿಶಾಲ್ ಭಾರದ್ವಜ್ ಪರಿಶ್ರಮವೂ ಇದೆ.
ಚಿತ್ರದ ಓಟಕ್ಕೆ ಅನಗತ್ಯ ಎನಿಸುವ ದೃಶ್ಯವೈಭವಗಳು ಇಲ್ಲ. ಕಥೆ ಮತ್ತು ಪಾತ್ರಗಳು ಏನನ್ನು ಅಪೇಕ್ಷಿಸುತ್ತದೆಯೋ ಆ ಕೆಲಸವನ್ನು ಛಾಯಾಗ್ರಹಕ ಸೇತು ಮಾಡಿದ್ದಾರೆ. ಸಂಕಲನ ಕಾರ್ಯವನ್ನು ಎ. ಶ್ರೀಕರ ಪ್ರಸಾದ್ ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರ ಸಂಗೀತದ ಹೊಣೆಯನ್ನೂ ಹೊತ್ತಿರುವ ವಿಶಾಲ್ ಭಾರದ್ವಾಜ್ ಅದನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ. ರಹತ್ ಫತೇ ಅಲಿಖಾನ್ ಹಾಡಿರುವ ದಿಲ್ ಕಾ ಮಿಜಾಯಿ ಇಷ್ಕಿಯಾ, ಜಬಾನ್ ಚಲೇ ಹೈ, ರೇಖಾ ಭಾರಧ್ವಜ್ ಹಾಡಿರುವ ಹಮಾರಿ ಅತಾರಿಯಾ, ಈಕೆ ಮತ್ತು ಬಿರ್ಜು ಮಹಾರಾಜ್ ಹಾಡಿರುವ ಜಗಾವೆ ಸಾರಿ ರೈನಾ ಇಂಪಾಗಿವೆ. ನೃತ್ಯ ಸಂಯೋಜನೆ ಆಕರ್ಷಕ.
ನಾಶಿರುದ್ದೀನ್ ಶಾ, ಅರ್ಷದ್ ವಾರ್ಸಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಭೂಗತ ಜಗತ್ತಿನ ವ್ಯಕ್ತಿಯ ಪಾತ್ರ ಮಾಡಿರುವ ವಿಜಯ್ ರಾಜ್ ನಟನೆ ಸಹಜವಾಗಿಲ್ಲ. ಓವರ್ ಆಕ್ಟಿಂಗ್. ಮಾಧುರಿ ದೀಕ್ಷಿತ್ ಮತ್ತು ಹುಮಾ ಖುರೇಷಿ ನಟನೆ ಅನನ್ಯ. ಮಾಧುರಿ ಮಾತನಾಡುವುದಕ್ಕಿಂತ ಆಕೆಯ ಕಣ್ಣುಗಳು ಮಾತನಾಡಿವೆ. ಈಕೆಯ ಸಾಂಪ್ರದಾಯಿಕ ನೃತ್ಯಗಳಂತೂ ಮೋಹಕ. ಹುಮಾ ಖುರೇಷಿಯಾ ಬಾಡಿ ಲಾಂಗ್ವೇಜ್ ಕೂಡ ಗಮನಾರ್ಹ. ಇಂಥ ಸೂಕ್ಷ್ಮಗಳಿಗೆ ಅವಕಾಶ ನೀಡಿರುವ ನಿರ್ದೇಶಕ ಚೌಬೆ ಚಿತ್ರ ಉತ್ತಮವಾಗಿಸುವುದರಲ್ಲಿ ಗೆದ್ದಿದ್ದಾರೆ.
 

‍ಲೇಖಕರು G

January 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km

    ಸಿನೆಮ ನೋಡದೆ ಹಲವಾರು ವರುಷಗಳೇ ಆಗಿವೆ. ನಿಮ್ಮ ವಿಮರ್ಶೆ ಓದಿದ ಮೇಲೆ ಈ ಚಿತ್ರ ನೋಡಲೇಬೇಕು ಎನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: