'ಅಷ್ಟಕ್ಕೂ ನೀನೆಲ್ಲಿ ಸಾಕ್ಷಿಕೊಟ್ಟೆ ನನಗೆ?' – ಶ್ರೀದೇವಿ ಕೆರೆಮನೆ

ದೇವದಾಸಿಯ  ಸ್ವಗತ

ಶ್ರೀದೇವಿ ಕೆರೆಮನೆ

ಹುಟ್ಟು, ಸಾವು ಎಲ್ಲದಕ್ಕೂ
ಈ ಜಗತ್ತು ಸಾಕ್ಷಿ ಕೇಳುತ್ತಿರುವಾಗ
ನಾನು ಪ್ರೀತಿಸಿದ್ದಕ್ಕೆ ಸಾಕ್ಷಿ ಕೇಳಿದ್ದರಲ್ಲಿ
ನಿನ್ನ ತಪ್ಪೇನೂ ಇಲ್ಲ ಬಿಡು
ಸಾಕ್ಷಿಗಿರಲಿ ಎಂದು ಮುದ್ರೆಯುಂಗುರ ನೀಡಿದ್ದ
ದುಷ್ಯಂತ ಅದನ್ನೇ ಮರೆತು ಕನವರಿಸುತ್ತಿರುವಾಗ
ನಾ ಸಾಕ್ಷಿ ಎಲ್ಲಿಂದ ತರಲಿ?
ನೀ ಕಟ್ಟಿದ್ದ ಗೆಜ್ಜೆಯಂತೂ ಯಾವುತ್ತೋ
‘ಘಲ್’ ಎನ್ನುವ ನಿನಾದವನ್ನು ನಿಲ್ಲಿಸಿ ಬಿಟ್ಟಿರುವಾಗ
ಮತ್ತಾವ ಸಾಕ್ಷಿಯಿದೆ ನನ್ನ ಬಳಿ?
ಬುದ್ಧಿವಂತ ನೀನು
ಬಿಟ್ಟು ಹೊರಡುವಾಗ ಗುಲಗುಂಜಿಯಷ್ಟೂ
ಸಾಕ್ಷಿ ದೊರೆಯದಂತೆ ಮುನ್ನೆಚ್ಚರಿಕೆ ವಹಿಸಿದ
ಹಾ ಚತುರ, ವಾಸ್ತವವಾದಿ
ಆ ಶಕುನಿಗೆ ನೀನೇ ಗುರುವೇ?
ಅಷ್ಟಕ್ಕೂ ನೀನೆಲ್ಲಿ ಸಾಕ್ಷಿಕೊಟ್ಟೆ ನನಗೆ?
ಒಂದು ಹನಿಯೂ ಮೈಗೆ ತಾಗದಂತೆ
ನಾಜೂಕಾಗಿ ಒರೆಸಿ ಎಸೆಯುವಾಗ
ವೀರ್‍ಯವೂ ಸಾಕ್ಷಿಯಾಗಬಹುದೆಂದೆನಿಸಿತ್ತೇ ನಿನಗೆ?
ನಾನದನ್ನು ರಸಿಕತೆ ಎಂದುಕೊಂಡಿದ್ದೆ..
‘ಹೋಗು ಸ್ನಾನ ಮಾಡು’ ಎಂದು ಒತ್ತಾಯಿಸಿ
ಶವರ್ ಕೆಳಗೆ ನಿಲ್ಲಿಸಿ ಮೈಯ್ಯುಜ್ಜಿದೆಯಲ್ಲ
ನನ್ನ ಮೈಗಂಟಿದ್ದ ನಿನ್ನ ಬೆವರ ಹನಿಯೂ
ಸಾಕ್ಷಿ ಹೇಳಬಹುದೆಂಬ ಅಂಜಿಕೆಯೇ?
ನಾನದನ್ನು ಪ್ರೀತಿ ಎಂದೇ ಭ್ರಮಿಸಿದ್ದೆ
ಹೋಗಲಿ ಬಿಡು,
ಮುರಿದು ಬಿದ್ದ ಕನಸುಗಳನ್ನೆಲ್ಲ
ಮತ್ತೆ ಮತ್ತೆ ನೆನೆಸಿ,
ಮೆಲಕು ಹಾಕಿ ಅಳುತ್ತಿರಲು
ಸಮಯವಾದರೂ ಎಲ್ಲಿದೆ ನನಗೆ?
ಅಲ್ಲಿ ನಿನ್ನಿಂದಲೋ ಅಥವಾ
ಯಾರದ್ದೆಂದೇ ಹೇಳಲಾಗದೆ ಹುಟ್ಟಿದ
ಹೊಟ್ಟೆಗೆ ಬೆನ್ನು ಹತ್ತಿಕೊಂಡ ಮಗು
ತುತ್ತು ಗುಟುಕಿಗಾಗಿ ಬಾಯ್ತೆರೆದು ಚೀತ್ಕರಿಸುತ್ತಿದೆ
ಕೈಗೊಂದಿಷ್ಟು ಕಾಸೆಸೆದು ಬಿಟ್ಟರೆ
ಅದರ ರಾವಣನ ಹೊಟ್ಟೆಗೊಂದಿಷ್ಟು
ಅರೆಕಾಸಿನ ಮಜ್ಜಿಗೆ ಸುರಿಯುತ್ತೇನೆ…
ತೀರಾ ಆಗದು ಎಂದಾದರೆ ಅದನ್ನಾದರೂ ಹೇಳಿಬಿಡು
ನೀನೇ ಕಟ್ಟಿದ್ದ ಗೆಜ್ಜೆಯ ಕಿತ್ತು ತೆಗೆದು, ಮಾರಿ
ಒಂದು ತೊಟ್ಟು ವಿಷವನ್ನಾದರೂ ಖರೀದಿಸಿ
ಅದರ ಬಾಯಿಗಿಡುತ್ತೇನೆ…

‍ಲೇಖಕರು avadhi

January 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. ಪಿ.ಮಂಜುನಾಥ / ಬೆಳಗಾವಿ

    ಕವಿತೆ ಚೆನ್ನಾಗಿದೆ ಮೇಡಂ…

    ಪ್ರತಿಕ್ರಿಯೆ
  2. udayagaonkar

    ಕವಿತೆ ಇಷ್ಟವಾಯ್ತು;ಕೊನೆಯ ಎರಡು ಸಾಲುಗಳನ್ನು ಬಿಟ್ಟು.

    ಪ್ರತಿಕ್ರಿಯೆ
  3. Anonymous

    ಕವಿತೆ ಚೆನ್ನಾಗಿದೆ,ಇಷ್ಟವಾಯ್ತು ಶ್ರೀದೇವಿ ಮೇಡಂ.
    VITTAL.

    ಪ್ರತಿಕ್ರಿಯೆ
  4. Lokesh Raj Mayya

    ಸೊಗಸಾಗಿದೆ ಮೇಡಂ….ಬಿತ್ತರವೇ ಹಾಗೇ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: