ಆಸ್ಟ್ರೇಲಿಯಾದಲ್ಲೊಂದು ’ಹುಲ್ಲು ಪುರಾಣ’!

ನೆಚುರಲಿಸ್ಟ ಕ್ಲಬ್

ದತ್ತು ಕುಲಕರ್ಣಿ

ಹುಟ್ಟಿಸಿದ ದೇವರು ಹುಲ್ಲು ತಿನಿಸುವದಿಲ್ಲ ಅನ್ನೂದು ಎಷ್ಟ ಖರೆನೊ ಅಷ್ಟ ಖರೆ ಈ ಅಷ್ಟೇಲಿಯಾದಾಗ ಇದ್ದಮ್ಯಾಲೆ ಮನಿ ಮುಂದಿನ ಹುಲ್ಲು ತೆಗೆಸದ ಬಿಡುದಿಲ್ಲಾ ಅನ್ನೂದು. ಇದರಷ್ಟ ಬ್ಯಾಸರದ ಕೆಲಸ ಮತ್ತೊಂದಿಲ್ಲ. ಅದರಾಗೂ ಈ ಆಸಿಗಳು ಇದಕ್ಕ ಲಾನ್ ಕಟ್ಟಿಂಗ ಅನ್ನದ..ನ ಲಾನ್ ಮೂವಿಂಗ ಅಂತ ಯಾಕಂತಾರೆನೊ.. ಗಾಲಿ ಮ್ಯಲೆ ಉಳ್ಳಾಡಿಸಿಕೋತ ಈ ಮಶಿನ್ ಸರಿಸ್ಯಾಡೊ ಈ ಕೆಲಸ ಅವರಿಗೆ ಭಾಳ ಸೇರತಿರಬೇಕು. ನನಗಂತೂ ಹುಲ್ಲು ಕತ್ತರಿಸುದೂ ಅಥವಾ ಲಾನ್ ಕಟ್ಟಿಂಗ ಅಂದರನ ಅದರ ಮ್ಯಾಲಿನ ಸಿಟ್ಟು ಕಡಿಮೆ ಆಗತದ. ಅಲ್ಲಾ, ನಮ್ಮ ಮನಿಮುಂದಿನ ಹುಲ್ಲು ನಾವ ಕತ್ತರಿಸಲಿಕ್ಕಂದರ ಅವರಿಗೇನ ತ್ರಾಸ ಆಗತದ ಅಂತ..?! ಸಿಟಿ ಕೌಲ್ಸಿಲ್‌ದವರು ಇಂತಾದಕ್ಕ ಕಾದಕೊಂಡು ಕುಳಿತಿರತಾರಂತ ಕಾಣಸ್ತದ, ದಂಡ ಕಟ್ಟಲಿಕ್ಕೆ. ಮತ್ತ ಇವರಿಗೆ ಹುಲ್ಲು ಇಲ್ಲಾ ಅಂದ್ರು ಸೇರಂಗಿಲ್ಲ. ಹುಲ್ಲಿನ ಹಾಸಿಗೆ ಕೊಂಡುಕೊಂಡ ತಂದು ಅಂಗಳ ತುಂಬಾ ಹಾಕಬೇಕು ಮತ್ತ ಎರಡು ಇಂಚುಗಿಂತ ಜಾಸ್ತಿ ಬೆಳಿಬಾರದಂಗ ಎರಡು ವಾರಕ್ಕೊಮ್ಮೆ ಹಜಾಮತಿ ಮಾಡತಿರಬೇಕು. ಒಣಗಲ್ದಂಗ ನೀರನೂ ಹಾಕಬೇಕ. ಮತ್ತ ಜಾಸ್ತಿ ಬೆಳದರ ಕುತಿಗಿನೂ ಕೊಯ್ಯಬೇಕೂ ಅಂದ್ರ, ನನಗ ಅದು ಸೆರಂಗಿಲ್ಲಾ.

ಹುಲ್ಲು ಇರೂದ ಬೆಳಿಲಿಕ್ಕೆ ಅಂತ.. ಅದರ ಕೆಲಸನ ಬೆಳಿಯುದೂ, ಆದರಿಲ್ಲೆ ಅದಕ್ಕ ಬೆಳಿಯೊ ಸ್ವಾತಂತ್ರ್ಯ ಇಲ್ಲ ಮತ್ತ ನನಗ ಅದನ್ನು ಬೆಳಿಲಿಕ್ಕೆ ಬಿಡು ಸ್ವಾತಂತ್ರ್ಯ ಇಲ್ಲ. ಲಿಬೆರೆಶನ್ನೂ, ಮನಸೊ ಇಚ್ಚೆ ಆದೂ ಇದೂ ಅಂತ ಏನೇನೊ ಮಾತಾಡತಾವ ಈ ಆಸಿಗಳು.. ಆದರ.. ಏನು ಮಾಡುವದು ಇವತ್ತ ನಾ ಈ ಹಜಾಮತಿ ಮಾಡಲಿಲ್ಲಾ ಅಂದ್ರ ನಾಳೆ ಕೌನ್ಸಿಲ್‌ದವರು ಇನ್ನೊಬ್ಬ ಹಜಾಮನ್ನ ಮನಿಗೆ ಕಳಿಸಿ ಹುಲ್ಲು ತೆಗೆಸಿ ಡಬಲ್ ಬಿಲ್ಲು ಕಳಸ್ತಾರ. ಅಂತ ಹೀಗೆಲ್ಲಾ ವಿಚಾರ ಮಾಡತಾ ಅಂಗಳಕ್ಕ ಬಂದು ಲಾನ್ಮೂ ವಿಂಗ ಮಶಿನ್ ಚಾಲು ಮಾಡಿದೆ ಹತ್ತು ನಿಮಿಷ ಆಗೂದ್ರಾಗ ಬ್ಯಾಸರಾತು. ಅಷ್ಟರಾಗ ಲಕ್ಷ ಮನಿ ಮುಂದಿನ ಪೋಸ್ಟ ಡಬ್ಬಿ ಕಡೆ ಹೋತು. ಮನಿಗೆ ಯಾವದಾದರೂ ಪತ್ರ ಬಂದಾವನು ನೋಡುಣು ಅಂತ ಇದನ್ನೆಲ್ಲಾ ಅಲ್ಲೇ ಬಿಟ್ಟು ಆ ಕಡೆ ಹೋಗಿ ಪೋಸ್ಟ ಡಬ್ಬಿ ಒಳಗ ಕೈ ಹಾಕಿದೆ. ನಂದು ಟೆಲಿಫೋನ್  ಬಿಲ್ಲಿಂದು ಒಂದು ಪತ್ರ ಇತ್ತು. ಇನ್ನೆರಡು ಪತ್ರ ನಾ ಅಂದು ಕೊಂಡಂಗ ಆರ್.ಯು.ವಾಟ್ಸನ್ ಅನ್ನುವವನದು ಇದ್ದವು. ಈ ವಾಟ್ಸನ್ ಯಾವ ಕಾಲದಾಗ ಈ ಮನ್ಯಾಗ ಇದ್ದನೊ ಎನೊ.. ನಾನು ಈ ಮನಿಗೆ ಬಾಡಿಗೆ ಬಂದು ನಾಲ್ಕು ತಿಂಗಳಾದ್ರೂ ಅವನ ಪತ್ರ ಈ ಅಡ್ರೆಸ್ಸಿಗೆ ಬರೂದು ನಿಂತಿಲ್ಲ. ಈ ವಾಟ್ಸನ್‌ನು ಸ್ವಲ್ಪ ವಿಚಿತ್ರ ಮನುಷ್ಯನ ಇರಬೇಕು.. ನನ್ನಂಗ. ಅವನ ಬ್ಯಾಂಕ ಸ್ಟೇಟ್‌ಮೆಂಟ್ಸ್, ಕಾರ್ ಇನ್ಸುರನ್ಸದ್ದು, ಕಡೀಕ ಅವನ ಹಳೆ ಗರ್ಲ್‌ಫ್ರೆಂಡ್‌ದ್ದು ಗ್ರೀಟೀಂಗ ಕಾರ್ಡ ಸಹಿತ ಇಲ್ಲಿಗೆ ಬರಲಿಕ್ಕೆ ಹತ್ಯಾವ. ಆದರೂ ಅವಗ ತನ್ನ ಹೊಸ ಅಡ್ರೆಸ್ಸ್ ಅಪ್ಡೇಟ್ಮಾ ಡಸ ಬೇಕಂತ ಖಬರ ಇಲ್ಲ. ಅದೂ ಹೋಗಲಿ ನನ್ನಂತ ಬೇರೆಯವರು ತನ್ನ ಪತ್ರ ತಗದ ಓದತಾರ ಅನ್ನೊ ಕಾರಣಕ್ಕಾದರೂ ತಾನು ಈಗಿನ ತನ್ನ ಅಡ್ರೇಸ್ ಕೊಡಬೇಕು ಅನ್ನೊ ಜ್ಞಾನ ಸಹಿತ ಇದ್ದಂಗಿಲ್ಲ ಅವಗ.

ನನಗಂತೂ ಅವನ ಪತ್ರ ಓದೂದು ಚೊಲೊನೊ ಕೆಟ್ಟೊ ಗೊತ್ತಿಲ್ಲ. ನನ್ನ ಮನಿಗೆ ಬರೊ ಎಲ್ಲ ಕಾಗದ ಪತ್ರ, ಹ್ಯಾಂಡ್ಸ ಓಟ್ಸ್, ಸೇಲ್ಸ್ ಕೆಟ್‌ಲಾಗ್ ಮತ್ತ ಗಿಫ್ಟ ಓಚರ್ ಇವಗಳನ್ನು ತಗದ ಓದಲಿಕ್ಕೆ ನಾ ಹಕ್ಕದಾರ ಇದ್ದೇನಿ ಅಂತ ತಿಳಕೊಂಡ ಸೀದಾ-ಸಾದಾ ಮನುಶಾ ನಾನು. ಅದರಾಗೂ ಈ ವಾಟ್ಸನ್‌ನಂದು ಪತ್ರ ಓದಲಿಕ್ಕೆ ಎನೋ ಒಂದು ತರದ್ದು ಖುಶಿ. ಇವನ ಹೆಸರೂ ವಿಚಿತ್ರನ ಅದ. ಯಾರರೆ ಇವನಿಗೆ ’ಆರ್. ಯು. ವಾಟ್ಸನ್?’ ಅಂತ ಕೇಳಿದರ ಇವ ’ಎಸ್ ಆಯ್ ಆಮ್ ವಾಟ್ಸನ್’ ಅಂತ ಹೇಳಿದಾ ಛೊಲೊ ಆತು. ಇಲ್ಲಂದರ ಇವ ಏನರೆ ’ಆಯ್ ಆಮ್ ವಾಟ್ಸನ್- ಆರ್. ಯು. ವಾಟ್ಸನ್’ ಅಂತ ತನ್ನ ಪೂರ್ತಿ ಹೆಸರು ಇನಿಶಿಯಲ್ ಜೊತಿ ಹೇಳಿದ್ನಂದ್ರ ಆವಾಗ ಕೇಳಿದವರು ಇವನ್ಯಾಕ ನಮ್ಮನ್ನ ನೀನು ವಾಟ್ಸನ್ ಇದ್ದಿಯೆನು ಅಂತ ಕೇಳಿಕ್ಕತ್ತಾನ ಅಂತ ತಲಿ ಕೆರಕೊಬೇಕಾಗತದ. ಪ್ರತಿಸಲ ಅವನ ಪತ್ರ ಓದು ಮುಂದ ಅಥವಾ ಯಾವಾಗರ ಅವನ ಹೆಸರಿನ ಮ್ಯಾಲೆ ನನ್ನ ಕಣ್ಣ ಹೋದ ತಕ್ಷಣ ಈ ಮಜಕೂರ ಸೀನ ನನಗೆ ನೆನಪಾಗಿ ನಗಿಬರತದ. ಮೊದಮೊದಲು ನಾನೂ ಇವನ ಪತ್ರ ಒಡೆದು ಓದು ಉಸಾಬರಿಗೆ ಹೋಗತಿದ್ದಿಲ್ಲ. ಆದರ ಯಾವಾಗ ಸರಾಸರಿ ದಿನಕ್ಕ ಒಂದೊ ಎರಡೊ ಒಮ್ಮೊಮ್ಮೆ ಅಂತು ಮೂರ‍್ನಾಲ್ಕು ಪತ್ರ ಬ್ಯಾರೆ ಬ್ಯಾರೆ ಕಡಿಯಿಂದ ಬರಲಿಕ್ಕೆ ಹತ್ತಿದವೊ, ನನಗ ತಡಕೊಳ್ಳಲಿಕ್ಕೆ ಆಗಲಿಲ್ಲ. ಈ ವಾಟ್ಸನ್‌ರ ಎಷ್ಟ ಬಾರಾ ಭಾನಗಡಿ ಮನಷ್ಯಾ ಇದ್ದಾನಂತಿರಿ..

ಇವಗ ಬ್ರಿಸ್‌ಬೇನ್ ಕ್ಯಾಥೋಲಿಕ್ ಚರ್ಚದ್ದು ಮೆಂಬರಶಿಪ್‌ದ ಕಾರ್ಡ ಬರತಾವು ಮತ್ತ ಅವಗ ಸಿಡ್ನಿದಾಗ ಇಬ್ರಾಹಿಮ್ ಅನ್ನೊ ಮುಸ್ಲೀಮ್ ಗೆಳೆಯಾ ಇದ್ದಾನ. ಇವಗ ಕಾರದ ರೆಜಿಸ್ತ್ರೇಶನ್ ತುಂಬದೆ ಇದ್ದುದ್ದು ನೋಟಿಸ್ಹಂಗ ಮ್ಯಾಲಿಂದ ಮ್ಯಾಲ ಬರತಾವು, ಆದರ ಇವ ಆಫ್ರಿಕಾದಾಗ ಚೈಲ್ಡ್ ಸ್ಪಾನ್ಸರ್ಮಾಡ್ಯಾನ. ಇಂಥ ನೂರಾಎಂಟು ಹಳವಂಡದ ಮನುಷ್ಯಾನ ನಾನಂತು ನೋಡಿಲ್ಲ. ಇನ್ನೂ ಏನೇನು ಅವತಾರ ತೋರಸ್ತಾನೊ ನೋಡಿಬಿಡೋಣ ಅಂತ ಇವತ್ತನ ಪತ್ರ ಹರಿದೆ. ಒಂದು ’ಸಿವಿಕ್ ವಿಡಿಯೊ ಕಾಲಿಂಗವುಡ್’ ಅವರಿಂದ ಒಂದು ಫ್ರೀ ಗಿಫ್ಟ ಕೂಪನ. ಇನ್ನೊಂದು ರೀಡರ್ ಡೈಜೆಸ್ಟ ರಿನ್ಯು ಮಾಡಲಿಕ್ಕೆ ನೆನೆಪಿಸೊ ಪತ್ರ. ಎರಡನೆ ಪತ್ರಕ್ಕಿಂತ ಮೊದಲನೆ ಪತ್ರನ ನನಗ ಭಾಳ ಉಪಯೋಗಕ್ಕ ಬರುವಂತಾದ್ದು ಅಂದುಕೊಂಡು ಅದನ್ನ ಕಿಸೆಕ್ಕ ಸೇರಿಸಿದೆ. ಅಷ್ಟರತನಕ ಈ ಲಾನ್‌ಮೂವಿಂಗ ಅನ್ನೊ ಕಾಟಾಚಾರದ ಕೆಲಸಾ ಆಲಪರಕೋತ ನನ್ನ ನೋಡಕೋತ ಕುಳಿತಿತ್ತು. ಮತ್ತ ಲಾನ್‌ಮೂವಿಂಗ ಮಷಿನ್ ಚಾಲು ಮಾಡಿ ಎರಡು ಸುತ್ತು ಹೊಡದು, ಎಡ್ಜ ಟ್ರಿಮ್ಮಿಂಗ ಮತ್ತ ಯಾವಾಗಾದರೂ ಮಾಡಿದ್ರಾತು ಅನಕೋತ ಅದರ ಶಾಸ್ತ್ರ ಮುಗಿಸಿದೆ.

ಸಾಯಂಕಾಲ ಕಾಲಿಂಗವುಡಗೆ ಡ್ರೈವ್ ಮಾಡಕೋತ ಹೋಗಬೇಕಾರ ಮನಸು ಬಿಟ್ಟಿ ವಿಡಿಯೊ ಬಗ್ಗೆ ತಾಳ ಹಾಕಲಿಕ್ಕೆ ಹತ್ತಿತ್ತು. ಆದರ ಈ ವಾಟ್ಸನ್ ಅನ್ನು ಮನುಷಾ ಅಲ್ಲೆ ನಮ್ಮ ಮನಿ ಹತ್ತಿರ ಇರೊ ಸಿವಿಕ ವಿಡಿಯೊದಾಗ ಖಾತೆ ತಗೆಯೊ ಬದಲು ಇಪ್ಪತ್ತು ಕಿಲೊ ಮೀಟರ್ ಇರೊ ಈ ಕಾಲಿಂಗವುಡದಾಗ ಯಾಕ ಮಾಡ್ಯಾನ ಅನ್ನುದು ತಿಳಿಲಿಲ್ಲ. ’ಹಲೊ ವಾಟ್ಸನ್ ಆಯ್ ನೊ. ಯು ಆರ ಬಿಗ್ ಫ್ಯಾನ್ ಆಫ್ ಡಾಕುಮೆಂಟರೀಸ್. ನಿಮಗ ಯಾವ ವಿಡಿಯೊ ಬೇಕೊ ಅದನ್ನು ತೋಗೊಬಹುದು’ ಅಂತ ವಿಡಿಯೋದಾಕಿ ಅಂದಾಗ ಒಮ್ಮೆಲೆ ನಾನು ಯಾವಗಲೂ ನೆನೆಪಿಸಿಕೊ ’ಆರ್ ಯು ವಾಟ್ಸನ್’ಅನ್ನೊ ಸೀನ್ ಮನಸಿನಾಗ ಸುಳಿದು ಹೋತು. ಮತ್ತ ನಾನು ಈಗಾಗಲೆ ಇಕಿ ಬಾಯಾಗ ವಾಟ್ಸನ್ ಆಗಹೋಗಿದ್ದೆ. ಹಂಗ ಸಾವರಿಸಿಕೊಂಡು ’ಎಸ್ಽಽಽ॒ಽ ಎಸ್ಽಽ’ಅಂದು, ಡಾಕುಮೆಂಟರಿಗಳು ಇರೊ ವಿಭಾಗದ ಕಡೆ ಹುಡಿಕ್ಕೊತ ಹೋದೆ. ನನಗ ಬೇಕಾದಂತ ಜಾಕಿ ಚಾನ್‌ನಂದೋ, ಅರ್ನಾಲ್ಡಂದೋ, ಸ್ಟೆಲನ್‌ನಂದೋ ಆಯಾಕ್ಷನ್ಸಿನೆಮಾದ ವಿಡಿಯೊ ತೊಗೊಬೇಕಂದ್ರ ಈ ವಿಡಿಯೋದಾಕಿ ನನಗ ವಾಟ್ಸನ್‌ನಂದು ಹೆಸರಿಟ್ಟು ಡಾಕುಮೆಂಟರಿ ವಿಡಿಯೊ ತೊಗೊಳೊ ಬಿಡೆಕ್ಕ ಬೀಳಿಸ್ಯಾಳ.. ಅನಕೋತಿರಬೇಕಾದ್ರನ ಅಕಿನ ಹಿಂದ ಬಂದು ನನ್ನ ಮುಖದ ಮೇಲಿನ ಸಂಧಿಗ್ಧನ ಎನೊ ಅಂತ ತಿಳಕೊಂಡು ತಾನೂ ಒಂದು ಪ್ರಶ್ನಾರ್ಥಕ ಚಿನ್ಹೆಯಾಗಿ ಎದುರು ನಿಂತಳು.

ನಾನ ಸಾವರಿಸಿಕೊಂಡು ’ಐ ಹಾವ ಸೀನ್ ಮೆನಿ ಡಾಕುಮೆಂಟರಿಸ್ ಯು ನೊ, ಅದಕ್ಕ ಯಾವದನ್ನು ತೋಗೊಬೇಕಂತ ಸ್ವಲ್ಪ ಕನ್ಫೂಜನ್’ ಅಂದೆ. ಈಗ ನಾನು ಹೇಳಿದ ಈ ಇನ್ಸ್ಟಂಟ ಸುಳ್ಳು ನಂದೊ ಅಥವಾ ವಾಟ್ಸನ್ಂದೊ ತಿಳಿಲಿಲ್ಲಾ. ’ಓ, ಆಯ್ಸಿ , ಆಯ ಥಿಂಕ ಆಯ್ ಕ್ಯಾನ್ ಹೇಲ್ಪ ಯು ಫಾರ್ ದೆಟ್’ ಅಂತಂದು ಅವಳು ಸಟಗ್ನ ತನ್ನ ಕೌಂಟರ‍್ಗೆ ಹೋಗಿ ಒಂದು ಪ್ರಿಂಟ್ ಔಟ್ ತೆಗೆದುಕೊಂಡು ಬಂದಳು. ಅದರಲ್ಲಿ ವಾಟ್ಸನ್ ಕಳೆದೆರಡು ವರ್ಷದಾಗ ಸಿವಿಕ್ ವಿಡಿಯೊದಿಂದ ತೆಗೆದುಕೊಂಡ ವಿಡಿಯೊಗಳ ಪೂರ್ತಿ ಪಟ್ಟಿ ಇತ್ತು. ಹಾಗೆ ಅದರ ಮ್ಯಾಲೆ ಕಣ್ಣಾಡಿಸಬೇಕಾದರೆ ರಾಜಕೀಯ ಡಾಕುಮೆಂಟರಿಗಳು, ಯುದ್ಧದ ಡಾಕುಮೆಂಟರಿಗಳು,ಜಿಯಾಗ್ರಫಿಕಲ್ ಡಾಕುಮೆಂಟರಿಗಳು, ಕರೆಂಟ್ ಇಶ್ಶುಗಳ ಡಾಕುಮೆಂಟರಿಗಳು ಅಂತ ಹತ್ತು ಹಲವು ವಿಭಾಗಗಳ ಡಾಕುಮೆಂಟರಿಗಳಿದ್ದವು. ಇವನ್ನೆಲ್ಲಾ ಈ ವಾಟ್ಸನ್ನೋಡಿರತಾನೊ ಇಲ್ಲೊ ಅನ್ನೊ ಸಂಶಯ ತಲ್ಯಾಗ ಧುತ್ತನ ಬಂದ ಹೋತು. ನೋಡಲಿಕ್ಕಂದ್ರ ಅವ ಯಾಕ ಇಷ್ಟು ದುಡ್ಡು ಕೊಟ್ಟು ಇವನ್ನೆಲ್ಲ ಯಾಕ ಬಾಡಿಗೆ ತೊಗೊಂಡು ಹೋಗತಿದ್ದ ಅನ್ನು ತರ್ಕ ಈ ಸಂಶಯ ನುಂಗಲಿಕ್ಕೆ ನೋಡಿತು. ಆ ಪ್ರಿಂಟನ ಕೊನೆಗೆ ಕಸ್ಟಮರ್ ಪ್ರೊಫೈಲ್‌ದಲ್ಲಿ ವಾಟ್ಸನ್‌ನ ಕಸ್ಟಮರ್ ನಂಬರ್ ಜೊತೆಗೆ ಇನ್ನೂ ಕೆಲ ಅವನ ವೈಯಕ್ತಿಕ ವಿಷಯಗಳು ಕೊಡಲ್ಪಟ್ಟಿದ್ದವು. ಅದರಾಗ ಅವನ ಆಸಕ್ತಿಗಳು ಪುಸ್ತಕ ಓದುದು, ಬುಶವಾಕಿಂಗ ಹೋಗುದು, ಪಾಪ್ ಮ್ಯುಜಿಕ್ ಕೇಳುದು, ಧ್ಯಾನ ಮಾಡುದು. ಅಲ್ಲ,.. ಗಿರಾಕಿ ಬಂದ ತಕ್ಷಣ ಅವನ ಕಾರ್ಡ ತೊಗೊಂಡು ಅದರಿಂದ ಅವನ ಪ್ರೊಫೈಲ್ ನೋಡಿ ಅದರಾಗಿರುವ ಮಾಹಿತಿನ ತಮ್ಮ ವ್ಯಾಪಾರಕ್ಕ ಉಪಯೋಗಿಸುವ ಈ ಮತಲಬಿ ವಿಡಿಯೋದಾಕಿ ನನಗ ಈ ರೀತಿ ಸಹಾಯ ಮಾಡತಾಳ ಅನಿಸಿರಲಿಲ್ಲ.

ನನಗ ಈಗ ನಾನು ಎನು ಮಾಡಬೇಕು ಅನ್ನೊದೊ ಗೊತಾಗಲಿಕ್ಕೆ ಹತ್ತಿತು. ಆ ಲಿಸ್ಟದಾಗಿನ ಮೊದಲ ನಾಲ್ಕು ವಿಡಿಯೊಗಳನ್ನು ಎತ್ತಿಕೊಂಡು ಅದರಗ ಮೊದಲನೆದನ್ನು ಫ್ರೀಯಾಗಿಯೋ ಇನ್ನು ಮೂರನ್ನು ಬಾಡಿಗೆ ಅಂತಲೂ ತೊಗೊಂಡು ಬಂದೆ. ಹಿಂಗ ದಿನಾ ಸಾಯಂಕಾಲ ಎರಡರಂತೆ ಆ ವಿಡಿಯೊ ನೋಡಿ ಮತ್ತ ಆ ಲಿಸ್ಟದ ಪ್ರಕಾರ ವಿಡಿಯೊ ಎತ್ತಿಕೊಂಡುಬರತಾ ಇದ್ದೆ. ಹೀಗೆ ಪ್ರತಿಸಲ ವಿಡಿಯೊ ತೊಗೊಂಡು ಬರಲಿಕ್ಕೆ ಹೋದಾಗ ನಾನ ವಾಟ್ಸನ್ ಆಗತಿದ್ದೆ. ವಿಡಿಯೊ ನೋಡುವಾಗಂತೂ ನನ್ನೊಳಗಿರೊ ವಾಟ್ಸನ ದಿನ ಅಂದ್ರ ದಿನ ರಾತ್ರಿ ಅಂದ್ರ ರಾತ್ರಿ ನನ್ನ ಕೇರ ಮಡದನ ತನ್ನ ವಿಡಿಯೊ ನೊಡೊಚಪಲ ತೀರಿಸಿಕೊತಿದ್ದ. ಹೀಂಗ ನಡಿತಿರಬೇಕಾದ್ರ ಕಾಗಿ ಕೂಡುದಕ್ಕೂ ಟೊಂಗಿ ಮುರಿಯೊದಕ್ಕೂ ಸರಿ ಹೋತ ಅಂತಾರಲ್ಲ ಹಂಗ ನಾ ಕೆಲಸಾ ಮಾಡು ಕಂಪನಿ ಚೈನಾಕ್ಕ ಶಿಫ್ಟ್ ಮಾಡು ಕಾರಣ ಮುಂದ ಮಾಡಿ ಸ್ವಲ್ಪ ಪರಿಹಾರನ್ನೂ ಕೊಟ್ಟಂಗ ಮಾಡಿ ಮುಚ್ಚಿತು. ವಾಟ್ಸನ್‌ಗ ತನ್ನ ನೂರಾ ಹಳವಂಡಗಳ ನಡುವೆ ಇದು ಛೊಲೊ ಆತು ಅನಿಸ್ತು. ನಾ ಪೂರ್ತಿ ವಿಡಿಯೊ ನೋಡುತಾ ವ್ಯಾಳೆ ಕಳಿಲಿಕ್ಕೆ ಶುರು ಮಾಡಿದೆ. ಇತ್ತಿತ್ತಲಾಗ ಮನಿ ಮುಂದಿನ ಹುಲ್ಲು ಎಂದಿನಂಗ ಬೇಳಿತಾನ ಇತ್ತು. ಮತ್ತ ನನಗ ಆಶ್ಚರ್ಯ ಆಗುವಂಗ ಬ್ಯಾಸರ ಇಲ್ಲದ ಛೋಲೊತ್ನಾಗಿ ಲಾನ್ ಮೂವಿಂಗ ಮಾಡುದು,ಎಡ್ಜ ಟ್ರಿಮ್ಮಿಂಗ ಮಾಡುದು ಮಾಡಲಿಕ್ಕೆ ಹತ್ತೆ.

ಬಹುಶಃ ವಾಟ್ಸನ್‌ಗ ಇದು ಸೇರತಿತ್ತು ಅಂತ ಕಾಣಸ್ತದ. ವಾಟ್ಸನ್‌ಗ ಮ್ಯಾಲಿಂದ ಮ್ಯಾಲ ಅಲ್ಲಿಂದ ಇಲ್ಲಿಂದ ಪತ್ರಗಳು ಮೋದಲಿನ ಹಂಗನ ಬರತಾ ಇದ್ದವು. ನಾನಂತೂ ಈಗ ಮೊದಲಿನಕಿಂತ ಜಾಸ್ತಿ ಆಸಕ್ತಿ ತೊಗೊಂಡು ಅವನ್ನ ಓದಲಿಕ್ಕೆ ಶುರು ಮಾಡಿದೆ. ಒಂದೊಂದಕ್ಕಂತೂ ಮರಳಿ ಉತ್ತರ ಕೂಡ ಬರಿಲಿಕ್ಕೆ ಹತ್ತಿದೆ. ರೀಡರ್ಸ್ ಡೈಜೆಸ್ತ್ ರಿನ್ಯು ಮಾಡಿಸಿದೆ. ಕ್ಯಾಥೊಲಿಕ್ ಚರ್ಚದ್ದು ಫೀ ಕಟ್ಟಿ ಅವರು ಈ ಡೊನೆಷನ ಟ್ಯಾಕ್ಸ್‌ದಿಂದ ಕ್ಲೇಮ ಮಾಡಲಿಕ್ಕೆ ಬರತದ ಅಂತ ಕಳಿಸಿದ ರಸಿತಿಯನ್ನು ಜ್ವಾಪಾನಾಗಿ ಕಾಯ್ದ ಇಟಗೊಂಡೆ. ಬುಶ್ ವಾಕಿಂಗ ಕ್ಲಬ್‌ನವರು ಗೈಡ ಆಗಿ ಸಲ್ಲಿಸಿದ ಸೇವೆಗೆ ಬರೆದ ಅಬಿನಂದನಾ ಪತ್ರಕ್ಕ ಥಾಂಕ್ಸ ಅಂತ ಮಾರುತ್ತರ ಬರೆದೆ.ಅಷ್ಟ ಅಲ್ಲದ ವಾಟ್ಸನ್ ಈ ತರದ್ದು ಪುಸ್ತಕ-ಆ ತರದ್ದು ಪುಸ್ತಕ ಓದತಿದ್ದ ಅನಕೊಂಡು ಇತಿಹಾಸದ್ದು, ಕರೆಂಟ ಅಫೇರದ್ದು ಲೈಬ್ರಯಿಂದ ತೊಗೊಂಡುಬಂದು ಓದಲಿಕ್ಕೆ ಶುರು ಮಾಡಿದೆ. ಓದಿದ್ದು ನೋಡಿದ್ದು ತಲಿಯೊಳಗ ಇರಲಾರದ ಹೊರಗ ಬರಲಿಕ್ಕೆ ಹವಣುಸುತ್ಲೆ ಯಾರರೆ ಕೇಳಲಿ ಬಿಡಲಿ ಹಂಗ ವಿವರಣಾ ಕೊಡಲಿಕ್ಕೆ ಶುರು ಮಾಡಿದೆ. ಕ್ವೀನ್ ಬರ್ಥಡೆಕ್ಕ ಆಷ್ಟ್ರೇಲಿಯಾದ ಬ್ಯಾರೆ ಬ್ಯಾರೆ ರಾಜ್ಯದವರು ಬ್ಯಾರೆ ಬ್ಯಾರೆ ದಿವಸ ರಜ ಕೊಟಗೋತಾರ ಅನ್ನೊ ವಿಷಯದಿಂದ ಹಿಡಿದು ಫೂಟಿ ಆಟ ಹೆಂಗ ಕಂಡಹಿಡಿದ್ರು ಅನ್ನೊ ತನಕಾ ನನ್ನ ಮಾತಿನ ಹರವು ತುಂಬಿಕೊಳ್ಳಲಿಕ್ಕೆ ಹತ್ಯು.

ನಾ ಅಂತೂ ವಾಟ್ಸನ್ ಇದನ್ನ ಹಂಗ ಹೇಳಬಹುದಲ್ಲಾ ಹಿಂಗ ಹೇಳಬಹುದಲ್ಲಾ ಅನಕೋತ ಅವನಂಗನ ಹೇಳತಿದ್ದೆ, ಅದನ ಕೇಳಕೋತ ಜನರು ’ವಾಟ್ಶನ್ ಯು ಆರ್ ಗುಡ್ ಮ್ಯಾನ್. ಥ್ಯಾಂಕು ಮ್ಯಾನ’ ಅನಕೋತ ನನಗ ಗಾಳಿ ನಾನೂ ಸಹಿತ ಮನಿ ಹತ್ತರ ಅಂಗಡಿಗೆ ಹೋದಾಗ ಅವರು ಕೇಳಲಿ ಬಿಡಲಿ ’ಆಯ್ ಆಮ್ ವ್ಯಾಟ್ಸನ್. ಆರ್ ಯು ವಾಟ್ಶನ್’ ಅಂದು ಆ ಸೀನ್ ನಿರ್ಮಾಣ ಮಾಡಿ ನಕ್ಕೋತ ಬರತಿದ್ದೆ, ಅವರು ’ವಾಟ ಎವರ್ ಅಂದ್ರೂನು ಕೇಳಸಲ್ದಂಗ. ಹಿಂಗ ನಡಿತಿರಬೇಕಾದ್ರ ಮತ್ತೋದು ಇಂಟರೆಸ್ಟಿಂಗ ಪತ್ರ ವಾಟ್ಸನಗ ಬಂತು.ಅದು ಬಂದಿದ್ದು ಗೋಲ್ಡಕೋಸ್ಟ ನೆಕೆಡ ಆಂಡ ನ್ಯುಟ್ರಲಿಸ್ಟ ಕ್ಲಭ್‌ದಿಂದ. ನನಗ ಅದನ್ನು ಓದತಾ ಓದತಾ ಎನೋ ಒಂದ ತರ ಖುಶಿ ಮತ್ತ ಒಂದ ತರದ ನಡುಕ. ಬರೊ ವಾರಾಂತ್ಯಕ್ಕ ಗೋಲ್ಡಕೋಸ್ಟದಾಗಿರೊ ಎಡ್ವೆಂಚರ್ ರಿಜಾರ್ಟ್‌ನಲ್ಲಿ ಸಂಮಿಲನದ ಸಮ್ಮೇಳನ. ಡ್ರೆಸ್ಸ್ಕೋ ಡ, ಹುಟ್ಟುಡಿಗಿ ಅಂತ ಬರದಿದ್ದು ಕಣ್ಣು ಕುಕ್ಕುವಂತಿತ್ತು. ಹಂಗ ಆ ಶನಿವಾರದ ಮುಂಜಾನೆ ಎದ್ದ ಕೂಡಲೆ ಮನಿ ಮುಂದಿನ ಲಾನ್ ಐದು ನಿಮಿಷದಾಗ ಕತ್ತರಿಸಿ ಏಡ್ಜ ಟ್ರಿಮ್ ಮಾಡಿ ನಾನು ಕಾರನಲ್ಲಿ ಕುಳಿತ್ತಿದ್ದೆ. ಕಾರು ಗೋಲ್ಡಕೋಸ್ಟದತ್ತ ದೌಡಾಯಿಸುತ್ತಿತ್ತು. ಅಲ್ಲೆ ಎಲ್ಲರೂ ಬರೇ ಬತ್ಲ ಬರತಾರ ಅನ್ನೂದ ತಲ್ಯಾಗ ಗಿರಗಿಟ್ಲಿ ಆಡಲಿಕ್ಕೆಹತ್ತಿತ್ತು. ಅಲ್ಲೆ ಹುಡುಗ್ಯಾರು, ಹೆಣ್ಣಮಕ್ಕಳು ಹಿಂಗ ಬರಿ ಮೈ ಬಿಟಗೊಂಡ ಬಂದಿರತಾರ ಅಂತ ಮನಸಿನ್ಯಾಗ ಮಂಡಿಗಿ ತಿನ್ನುತ್ತಿರುವಾಗ ಗೋಲ್ಡಕೋಸ್ಟದಾಗಿನ ಎಡ್ವೆಂಚರ್ ರಿಜಾರ್ಟ್ ಬಂದೆ ಬಿಟ್ಟಿತ್ತು.

ಕಾರ ಪಾರ್ಕ ಮಾಡಿ ಒಳಗೆ ಹೋದಾಗ ಅಲ್ಲಿ ಕಾಯುವ ಖೋಣಿಯೊಳಗ ನೂರಾರು ಜನರು ಸೇರಿದ್ದರು. ಅಲ್ಲಿರುವ ಸ್ವಾಗತಕಾರಿಣಿ ಪ್ರತಿಯೊಬ್ಬರ ಪತ್ರಗಳನ್ನು ಪರೀಕ್ಷಾ ಮಾಡಿ ನೂರು ಡಾಲರ್ ಕಟ್ಟಿಸಿಕೊಂಡು ಕೈಗೊಂದು ಪಟ್ಟಿ ಕಟ್ಟಿ ಒಳಗೆ ಬಿಡುತ್ತಿದ್ದಳು. ನಾನು ಈ ಎಲ್ಲ ಪದ್ದತಿಗಳನ್ನು ಮುಗಿಸಿ ಒಳ ಬಯಲಿನಾಗ ಕಾಲಿಟ್ಟಾಗ ಬಲಗಡೆ ಇರುವ ಚಪ್ಪರದಾಗಿನ ದೃಶ್ಯ ನನ್ನ ದಂಗ ಬಡಿಸಿತು. ಎಲ್ಲರೂ ತಮ್ಮ ಬಟ್ಟಿ ಬಿಚ್ಚಿ ಅಲ್ಲಿರುವ ಸೆಲ್ಫ್‌ದೊಳಗ ಇಟ್ಟು ಆ ಕಡೆ ಇರುವ ತ್ವಾಟದ ಕಡೆ ಹೊಂಟಿದ್ದರು. ನಾನು ಹಾಗೆ ಬಾಯಿ ತೆಗೆದು ಅವರನ್ನೆಲ್ಲ ನೋಡಿಕೋತ ನಿಂತೆ. ಹಂಗ ಒಂದು ಕಡೆ ಬೆದರ ಗೊಂಬಿ ಹಂಗ ನಿಂತ ನನ್ನನ್ನ ಎಲ್ಲರೂ ಮಿಕಿ ಮಿಕಿ ನೋಡಕೋತ ಹೊಂಟಿದ್ರು. ಹತ್ತರದಿಂದ ಹಾದ ಹೋಗುತ್ತಿರುವ ಹದಿನೆಂಟು-ಇಪ್ಪತ್ತರ ಹುಡುಗ ’ಹೇ ಮ್ಯಾನ್, ಕಮಾನ್ ಹಂಗ್ಯಾಕ ನಿಂತಿ? ಎಲ್ಲ ಬಿಚ್ಚಿ ನಿನ್ನೊಳಗಿನ ದಿವ್ಯ ದರುಶನ ಎಲ್ಲರಿಗೂ ಮಾಡಿಸು’ ಅಂತಂದು ನಕ್ಕೋತ ಹೋದ. ಆವಾಗಲೇ ನನಗ ನಾನೂ ಇಲ್ಲಿರಬೇಕಾದ್ರ ಅವರಂಗ ದಿಗಂಬರ ಆಗ ಬೇಕಂತ ಗೋತ್ತಾತು. ನನ್ನ ಕಡಿಂದ ಇದು ಆಗು ಕೆಲಸ ಅಲ್ಲ. ಆದರ ಇಲ್ಲಿರೊ ನೋಡೊ ದೃಶ್ಯ ತಪ್ಪಿಸಿಕೊಳ್ಳಲಿಕ್ಕೆ ಮನಸಿಲ್ಲ. ಅನಕೋತ ಇನ್ನೆರಡು ನಿಮಿಷ ನಿಲ್ಲುದರಾಗ ಇಬ್ಬರು ದಪ್ಪ ಸೆಕುರಿಟಿ ಗಾರ್ಡಗಳು ಪ್ರತ್ಯಕ್ಷರಾಗಿ ತಮ್ಮ ದೊಡ್ಡ ರಟ್ಟಿಯಾಗ ನನ್ನನ್ನ ಹೊರಗ ಎಳಕೊಂಡು ಬಂದರು. ನಾನು ನೂರು ಡಾಲರ ಕೊಟ್ಟೇನಿ ಅಂತ ಎನೇನೊ ಹೇಳಾಕ ಪ್ರಯತ್ನ ಮಾಡಿದೆ. ಅವರು ’ಕಂಡಿಶನ್ ಆಪ್ ಎಂಟ್ರಿ ಏನು ಅಂತ ನಿನಗ ಗೊತ್ತಿಲ್ಲಾ ? ಸುಮ್ಮನ ಗಲಾಟೆ ಮಾಡಬೇಡ’ ಅಂತ ಎತ್ತಗೊಂಡು ಬಂದು ಗೇಟ್ ಹೊರಗ ಹಾಕಿ ಚಿಲ್ಲಕ ಹಾತಿದರು. ನನಗ ಬ್ಯಾಸರ ಆತು. ನೂರು ಡಾಲರ ಹಿಂಗ ಹೊಳ್ಯಾಗ ಹುಣಸಿ ಹಣ್ಣು ತೊಳದಂಗ ಕಳಕೊಂಡದ್ದ ಒಂದು ಕಡೆ ಮತ್ತ ಹಿಂಗ ಈ ಸೆಕುರಿಟಿ ಕಡಿಯಿಂದ ಹೊರಗ ಹಾಕಿಸಿಕೊಂಡದ್ದು ಇನ್ನೊಂದು ಕಡೆ.

ಹಂಗ ನಡಕೋತ ಕಾರ ಪಾರ್ಕ ಕಡೆ ಹೊರಟೆ. ’ವಾಟ ಅ ಶಿಟ್ ಪೀಪಲ್’, ಅನ್ನುತ್ತಾ ಕಾರ ಪಾರ್ಕ ಕಡೆ ಹೊರಟ ಇನ್ನೊಬ್ಬ ನನ್ನ ಜೊತೆ ಹೆಜ್ಜೆ ಹಾಕ್ಕೋತ ಮಾತಿಗೆ ಶುರು ಇಟಗೊಂಡ. ನನಗ ಶಿಟ್ಪೀ ಪಲ್ ಅಂದದ್ದು ಇವ ನನಗೊ ಅಥವಾ ಮತ್ತಿನ್ಯಾರಿಗೊ ಅನ್ನೊ ಗಲಿಬಿಲಿ ಶುರು ಆಗೋದರಾಗ ಅವ ತಾನ ಶುರುವಿಟಗೊಂಡ. ’ಈ ಜನ ಯಾವಾಗ ಶಿಸ್ತು-ಸಂಯಮ ಕಲಿತಾರೊ ಗೊತ್ತಿಲ್ಲ. ಲ್ಯಾಪ್‌ಟಾಪು, ಐ-ಪೋನು, ಮೈಮ್ಯಾಲಿನ ಬಟ್ಟಿ, ಟೈ, ಶೂಸ್ ಇವನ್ನೆಲ್ಲ ಬಿಚ್ಚಿ ಇವತ್ತೊಂದು ದಿನ ನಾನು ನಾನಾಗೆ ನೇಚರ‍್ದಂಗ ಎಲ್ಲ ಬಿಚ್ಚಿ ಇರೋಣ ಅಂತ ಇಲ್ಲಿಗೆ ಬಂದ್ರ ಇಲ್ಲೆ ನೆಚುರಲಿಸ್ಟ ಕ್ಲಬ್‌ದ ಬಗ್ಗೆ ಏನೇನೂ ಗೊತ್ತಿಲ್ಲದವರು ಬಂದು ಇಲ್ಲಿ ವಾತಾವರಣಾನ ಕೆಡಸಲಿಕ್ಕೆ ಹತ್ಯಾರ. ಅದಕ್ಕ ನಾನ ಬ್ಯಾಸರಾಗಿ ಹೊರಗ ಬಂದ್ಯೆ. ಅಂದಂಗ ನೀನಗೂ ಇದೆಲ್ಲ ಸೇರಲಿಕ್ಕಿಲ್ಲ ಅಲ್ಲಾ, ಅದಕ್ಕ ನೀನು ವಾಪಸ ಹೊಂಟಿ..’ಅಂದ. ನಾನು ಸುಮ್ಮನ ಇದ್ದೆ. ಸುಮ್ಮನ ಎನೂ ಹೇಳದೇ ಇರುವದೂ ಒಂದೊಂದು ಸಲ ಸುಳ್ಳು ಹೇಳುದಕ್ಕ ಸಮಾನ ಅಂತ ನನಗ ಅನಿಸಲಿಕ್ಕೆಹತ್ತಿತು. ಆದರೆ ನಾ ಏನರೆ ಹೇಳಿದ್ರು ಅದೂ ಸುಳ್ಳನ ಇರತಿತ್ತು ಅಂತ ಸುಮ್ಮನಾದೆ. ನಾನು ಖರೆವಂದ್ರ ವಾಟ್ಸನ್ ಆಗಿದ್ರ ಈ ಸುಳ್ಳು ಪರಿಸ್ತಿತಿ ಬರತಿರಲಿಲ್ಲ ಅನಿಸಲಿಕ್ಕೆ ಅಷ್ಟರಲ್ಲಿ ಅವನೆ ’ಹಾಯ್, ಐ ಆಮ್ ರಾಲ್ಫ್’ಎನ್ನುತ್ತಾ ನನ್ನ ಕೈ ಹಿಡಿದು ಪರಿಚಯಿಸಿಕೊಂಡ. ನಾನು ’ಹೈ ಐ ಆಮ್ ವಾಟ್ಸನ್’ ಅಂತ ಹೇಳಿ ನಾಲಿಗೆ ಕಚ್ಚಿಕೊಂಡೆ. ’ಬಾ ನೀನು ಖಾಲಿ ಇದ್ದಂಗ ಕಾಣಿಸ್ತಿ ..ಇಲ್ಲೆ ಪಾರ್ಕಿನಾಗ ಕುತಗೊಂಡು ಮಾತಾಡೂಣು.’ ಅಂತ ಕರಕೊಂಡ ಹೋದ.

ಪಾರ್ಕು ಸಣ್ಣದಿದ್ದರೂ ಭಾಳ ಛೊಲೊತ್ನಾಗಿ ನೋಡಕೊಂಡದ್ದಕ್ಕ ಅಚ್ಚಕಟ್ಟಾಗಿ ಇತ್ತು. ಭಾಳ ಜನನೂ ಇದ್ದಿದ್ದಿಲ್ಲ. ನಾವು ಅಲ್ಲೆ ಇರು ಬೆಂಚ ಮ್ಯಾಲೆ ಕುತಗೊಂಡ್ವಿ. ಅಲ್ಲೆ ಒಂದು ಕಡಿಗೆ ’ಮೆಂಟೈನ್ಡ ಬಾಯ್ ಎಡ್ವೆಂಚರ್ ಗ್ರುಪ್’ ಅಂತ ಬೋರ್ಡ ಹಾಕಿದ್ದರು. ರಾಲ್ಫ್ ಅದನ್ನು ನೋಡಿದವನೆ ’ನೋಡಿಲ್ಲೆ , ಅಲ್ಲಿ ಅಂತಾ ಫಾಲತು ಕಾರ್ಯಕ್ರಮದಿಂದ ಸಿಕ್ಕಾಪಟ್ಟೆ ದುಡ್ಡು ಮಾಡಿ ಇಲ್ಲೆ ಸ್ವಲ್ಪ ಖರ‍್ಚು ಮಾಡಿ ದೊಡ್ಡ’ನನಗಂತೂ ಒಳಗೊಂದು ಹೊರುಗೊಂದೂ ಇರೊವರನ್ನ ಕಂಡ್ರ ಆಗುದಿಲ್ಲ ನೋಡು.’ ಅಂದ ನನಗ ನನ್ನೊಳಗಿರು ವಾಟ್ಸನ್ ಮಿಸುಕಾಡಿದಂಗಾತು.’ಈಗ ಈ ರೆಸೊರ್ಟ್‌ನವರನ್ನು ನೋಡು ತಮ್ಮ ಹೆಸರಿನ ಸಲುವಾಗಿ ಈ ಪಾರ್ಕಗೆ ಖರ್ಚ ಮಾಡ್ಯಾರ. ಅವರಿಗೇನು ಈ ಪಾರ್ಕ ಬಗ್ಗೆ ಕಾಳಜಿ ಅದ ಅಂದಕೊಂಡ್ಯಾ ? ಇಲ್ಲಾ. ಎಲ್ಲ ಹೆಸರಿಗೋಸ್ಕರ. ಆದರ ನೋಡುವವರಿಗೆ ಏನು ಅನಸ್ತದ ಅಂದರ ಇವರು ಪಾರ್ಕ ಬಗ್ಗೆ ಏಷ್ಟು ಕಾಳಜಿ ಇದ್ದವರು ಇದ್ದಾರಲ್ಲ.. ಅಂತ. ಹೀಂಗ ಅದು ಇರೂದ ಒಂದು ಆದರ ಜನ ಖ್ಹರೆವಂದ್ರ ತಿಳಕೊಳ್ಳುದ..ಇನ್ನೊಂದು. ಹಿಂತಾದು ಭಾಳ ಅವನೋಡು, ವಾಟ್ಸನ್’ ಅಂದ. ಅವ ’ವಾಟ್ಸನ್’ ಅಂತ ಒತ್ತೆ ಹೇಳಿದನೊ ಅಥವಾ ಅದು ನನಗ ಹಂಗ ಕೇಳಸ್ತೊ ಗೊತ್ತಿಲ್ಲ. ನನಗೆ ’ನನ್ನ ಮತ್ತು ವಾಟ್ಸನ್’ ಬಗ್ಗೆ ಇವನಿಗೆ ಏನಾದರು ವಾಸನೆ ಬಡಿದಿರಬೇಕು ಅಂತ ಈಗ ನೋಡು ಈ ನೆಚುರಲಿಷ್ಟ ಕ್ಲಬ್ ಅಂತ ನಾ ಇಲ್ಲಿ ಬಂದೆ. ಆದರ ಅಲ್ಲಿ ಬಂದವರಿಗೆ ಭಾಳ ಜನಕ್ಕ ನೆಚುರಲಿಷ್ಟ ಅಂದರೇನು ಗೊತ್ತಿಲ್ಲ.

ನೆಚುರಲಿಷ್ಟ ಅಂದ್ರ ಕೆಲವರಿಗೆ ಬರೆ ಬತ್ಲ ಇದ್ದು ನಿಂಗೊತ್ತಲ್ಲಾ ಮಜಾ ಮಾಡು ಅಂಥಾ ಕೀಳು ಮನಸಿನವರು ಅನಸ್ತದ. ಇನ್ನ ಕೆಲವೊಬ್ಬ ಮಡಿವಂತರಿಗೆ ಇದು ಮಾಮೂಲಾದ ಜೀವನ ಕ್ರಮಾನ ಹಾಳ ಮಾಡುವಂತಾ ವಿಚಾರ. ಆದರ ಖರೆವಂದ್ರ ನೇಚುರಲಿಸ್ಟ ಅಂದ್ರ ಎಲ್ಲ ತ್ಯಾಗ ಮಾಡಿ ಸ್ವಲ್ಪಾದರೂ ಹೊತ್ತ ನೆಚುರಲ್ ಆಗಿ ಇರ್ಲಿಕ್ಕೆ ಬಯಸೂದು. ಆದರ ಜನರಿಗೆ ಎನೂ ಗೊತ್ತಿಲ್ಲ..’. ಅಂತ ಅವ ತನ್ನ ಮನಸಿನ್ಯಾಗ ಇದ್ದದ್ದನ್ನ ನನಗ ನನ್ನ ಬಗ್ಗೆ ಇವಗ ಎನೂ ಗೊತ್ತಿರಲಿಕ್ಕಿಲ್ಲ ಬಿಡು ಅಂತ ಸ್ವಲ್ಪ ಖುಷಿ ಆತು. ಆದರೂ ಇವನಿಂದ ಪಾರಾಗಿ ಬ್ಯಾರೆ ಹೋಗುದೂ ಚೊಲೊ ಅನಸ್ಲಿಕ್ಕೆ ಹತ್ತ್ಯು. ಆದರೂ ಹಂಗ ಸಟ್ನ ಹೋದ್ರ ಎದಿಗುದಿ ಆಗತದ ಅಂತಂದು.. ’ಹಾಗೆ ಇರಲಿಕ್ಕಿಲ್ಲ, ಅಥವಾ ಹಾಗೆ ಇರಬೇಕಂತನೂ ಇಲ್ಲ ರಾಲ್ಫ್, ಭಾಳ ಜನರಿಗೆ ನೀ ಹೇಳುವಂತ ನ್ಯಾಚುರಲಿಸ್ಟ ವಿಚಾರ ಭಾಳ ಅನ್ಯಾಚುರಲ್ ಅನಸ್ತದ. ಯಾಕಂದರ ಅವರು ನಡಸೂ ಜಿವನ ವಿಧಾನನ ಅವರ ಪ್ರಕಾರ ನ್ಯಾಚುರಲ್. ನಿಮ್ಮಂಗ ಬರೆಬತ್ಲ ಇರುದು ಅಂದ್ರ ಅವರಿಗೆ ಮುಜುಗರದ ವಿಷಯ. ಮತ್ತ ಅವರೂ ನಿಮ್ಮಷ್ಟು ಟೆನ್ಷನ್ ಜೀವನ ನಡೆಸಲಿಕ್ಕಿಲ್ಲ. ಅದಕ್ಕ ಕೆಲವರಿಗೆ ನೀವು ಹೇಳು ವಿಚಾರ ನ್ಯಾಚುರಲ್ ಜೀವನ ಕ್ರಮ ಹಾಳು ಮಾಡು ವಿಚಾರ ಅಂತ ಅನಿಸೋದು. ಮತ್ತ ಇನ್ನು ಕೆಲವರಿಗೆ ಅಂದ್ರ ಇವತ್ತ ಇಲ್ಲಿಗೆ ಬಂದಾರಲ್ಲ ಅಂಥ ಭಾಳ ಜನರಿಗೆ ’ಎಲ್ಲೆ ಬರೆಬತ್ಲ ಜನ ಇರತಾರ ಅವರನ್ನು ನೋಡೊ ಮನುಷ್ಯ ಸಹಜ ಬಯಕಿ’. ಅದನ್ನ ತಪ್ಪಂತ ಅನ್ನುದೂ ತಪ್ಪ ಅಂದೆ.

ಇಂಥ ವ್ಯಾಳ್ಯಾದಾಗ ಆಡೂ ಮಾತು ಸ್ವಂತಂದ್ದ ಆಗಿದ್ರ ಹಸಿ ಗ್ವಾಡಿ ಮ್ಯಾಲೆ ಒಗದ ಕಲ್ಲಿನ ತರ ಇರತಾವಲ್ಲ ಅನಿಸಲಿಕ್ಕೆಹತ್ತಿತು.’ನಿ ಹೇಳು ಮಾತೂ ನಿಜ ವ್ಯಾಟ್ಸನ್, ಒಬ್ಬೊಬ್ಬರದೂ ಒಂದೊಂದು ವಿಚಾರ. ಇರಲಿ, ನನ್ನ ಸರ್‌ನೇಮು ವ್ಯಾಟ್ಸನ್ ಅಂತ, ಅಂದರ ನನ್ನ ಪೂರ್ತಿ ಹೆಸರು ರಾಲ್ಫ್ ವ್ಯಾಟ್ಸನ್ ಅಂತ. ನಮ್ಮಿಬ್ಬರ ಹೆಸರಿನ್ಯಾಗಿನ ಸಾಮ್ಯತೆ ಹಂಗ ವಿಚಾರನೂ ಒಂದ ಅವ ಅಲಾ ? ನಿನ್ನ ಜೊತೆ ಮಾತಾಡಿ ಭಾಳ ಖುಶಿ ಆತು. ನಾವು ಬೇರೆಯವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು. ನಮಗ ಏನು ಸರಿ ಅನಸ್ತದ ಅದನ್ನು ಮಾಡಬೇಕು ಹೌದಲ್ಲೊ? ಆದರ ಎಲ್ಲದಕ್ಕಿಂತ ಮೊದಲ ನಮಗ ನಾವ ಸಿನ್ಸಿಯರ್ ಆಗಿರಬೇಕು. ಅದಕ್ಕ ಈಗ ನಾನು ಹೊಳ್ಳಿ ಆ ನೆಚೆರಲಿಸ್ಟ ಕ್ಲಬ್ಬಿಗೆ ಹೊಂಟೆನಿ. ಆ ಕ್ಲಬ್ಬಿನಿಂದ ಬರು ಪತ್ರಗಳು ನನಗ ಬರೂದು ನಿಂತಾವು, ಮೊದಲ ಅದನ್ನು ವಿಚಾರ ಮಾಡಬೇಕು. ನೀನು ಬರ್ತಿಯಾ?’ ಅಂತ ಕೇಳಿದ .

 

‍ಲೇಖಕರು avadhi

January 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Divya

    Idu neerikshita koneyadaru, vivaraNe kutoohalakaariyagide.
    Allade, ello nodiruva English Cinema da nenapu tarisuvantide.

    ಪ್ರತಿಕ್ರಿಯೆ
  2. Malhar Patil

    Hello Mama,
    Nanu bhala khushing odide ninna lekhanana office olaga ondu pyara odidaratu andu start madide
    aadra ardhaka bidalikkagalilla nodu. Namma mamana pajeeti nagu taristu nanaga, Nanaga bhala khushi
    aatu noda mama. Andang bhaga 2 yavaga bartada.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: