ಪಿ ಚಂದ್ರಿಕ ಕಾಲಂ ’ಚಿಟ್ಟಿ’ : ಚಿಟ್ಟಿ ಬೆಳೆಯುತ್ತಿದ್ದಾಳೆ…

(ಇಲ್ಲಿಯವರೆಗೆ…)

ಚಿಟ್ಟಿಗೆ ಎಲ್ಲವೂ ಮರೆಯಬೇಕಿತ್ತು, ಶಾರದಾಳನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಅವಳ ಅಣ್ಣ ರಾಜುವಿನ ಬಿಟ್ಟ ಕಣ್ಣುಗಳು, ಭಯ, ಒಳಗೇ ಇಟ್ಟುಕೊಂಡ ಆತಂಕ, ತನ್ನ ಪ್ರೀತಿಯನ್ನು ತನ್ನೊಂದಿಗೆ ಕೊಂಡೊಯ್ದಿದ್ದ ನಿಂಗರಾಜುವಿನ ನೆನಪು . . . ಕೊನೆಗೆ ತನ್ನನ್ನೂ ಕೂಡಾ. ಅದಕ್ಕಾಗೆ ಅವಳು ನಾಟಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಮಾತಾಡುವಾಗ ಮೊದಲೇ ಅಭಿವ್ಯಕ್ತಿಗೆ ಹೇಳಿ ಮಾಡಿಸಿದಂತಿದ್ದ ಅವಳ ಕಣ್ಣುಗಳಲ್ಲಿ ಮತ್ತಷ್ಟು ಹೊಳಪು ತುಂಬುತ್ತಿತ್ತು. ಹಾಗೇ ಮಾತಾಡ್ತಾ ಅವಳ ಒಳಗೆ ಅವಳಿಗೇ ತಿಳಿಯದಂತೆ ಭಾವುಕತೆ ತುಂಬಿಕೊಳ್ಳುತ್ತಿತ್ತು ‘ನಾವು ದಿನಾ ನೋಡುತ್ತಿದ್ದ ಹುಡುಗಿ ಇವಳೇನಾ?’ ಗುರುಪಾದಪ್ಪ ಮೇಷ್ಟ್ರಿಗೆ ಆಶ್ಚರ್ಯವಾಗುತ್ತಿತ್ತು. ಮನೆಗೆ ಬಂದು ಅಪ್ಪ, ಅಮ್ಮನ ಹತ್ತಿರವೂ ಇದರ ಬಗ್ಗೆ ಮಾತಾಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
‘ಚಿಟ್ಟಿ ನಾವಂದುಕೊಂಡ ಹಾಗೆ ಅಲ್ಲ’ ಎನ್ನುವುದು ಅಪ್ಪ ಅಮ್ಮರಿಗೆ ಮನದಟ್ಟಾಯಿತಾದರೂ, ಅಜ್ಜಿಗೆ ಇದರಿಂದ ಅಸಮಾಧಾನ ಮಾತ್ರ ಉಳಿದೇ ಇತ್ತು. ಕೇಳದ ತನ್ನ ಕಿವಿಯನ್ನು ಅವಕಾಶವಾಗಿ ತೆಗೆದುಕೊಂಡು ‘ಹೆಣ್ಣು ಹುಡುಗಿ ಈಗಲೇ ಹೀಗೆ ಇವಳನ್ನ ಬಿಟ್ಟರೆ ನಾಳೆ ಗತಿಯೇನು? ಇವಳು ನಿಮ್ಮ ಕೈಗೆ ಸಿಗ್ತಾಳಾ? ಹಾಡು ಕುಣಿತ ಅಂತ ವಯಸ್ಸಿಗೆ ಬಂದಿರೋ ಮಗಳನ್ನು ಕಳಿಸ್ತಾ ಇದೀರಲ್ಲಾ ಇದೇನು ನಾಯಕಸಾನಿ ಕೊಂಪೆಯಾ? ಇದೆಲ್ಲಾ ನಮ್ಮ ಹೆಣ್ಣುಮಕ್ಕಳಿಗೆ ಬೇಕಾ?’ ಎಂದು ಗೊಣಗಿದ್ದಳು. ಅಪ್ಪ ಕೇಳಿದರೂ ಕೇಳದಂತೆ ಓಡಾಡಿದ. ಗಿರಿಜಾಳ ವಿಷಯಕ್ಕೆ ಆದಂತೆ ಅಪ್ಪ ಕೊನೆಯ ಹೊತ್ತಿಗೆ ‘ಬೇಡ’ ಅಂದುಬಿಟ್ಟರೆ ಏನು ಮಾಡೋದು ಎನ್ನುವ ಚಿಟ್ಟಿಯ ಭಯ ಇದರಿಂದ ದೂರವಾಗಿತ್ತು.
ಅಪ್ಪ ರಿಹರ್ಸಲ್‌ಗೆ ಬಂದು ಚಿಟ್ಟಿಯ ನಟನೆಯನ್ನು ನೋಡಿ ಕಣ್ತುಂಬಿಕೊಂಡಿದ್ದ. ಮನೆಗೆ ಬಂದು ಅಮ್ಮನ ಹತ್ತಿರ ‘ನೀನು ನೋಡಬೇಕು ಕಣೇ, ಚಿಟ್ಟಿ ನಿಜಕ್ಕೂ ಚಿಟ್ಟಿನಾ ಅನ್ನಿಸ್ತಾ ಇತ್ತು. ಡೈಲಾಗ್ ಹೇಳ್ತಾ ಹೇಳ್ತಾ ತನ್ನನ್ನೇ ತಾನು ಮರೆತುಬಿಡ್ತಾ ಇದ್ಲು’ ಎಂದಿದ್ದ. ‘ನನ್ನ ಮಗಳ ಬಗ್ಗೆ ನಂಗೆ ಗೊತ್ತಿಲ್ವಾ? ಅವಳಿಗೆ ಓದು ಒಲಿಯುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಕಲೆ ಮಾತ್ರ ಒಲಿದು ಬರುತ್ತೆ’ ಎಂದಿದ್ದಳು. ಹೊದಿಕೆಯ ಮರೆಯಲ್ಲಿ ಮಲಗುವ ನಾಟಕ ಆಡಿದ್ದ ಚಿಟ್ಟಿ ಆ ಮಾತುಗಳನ್ನ ಕೇಳಿ ಉಬ್ಬಿ ಹೋಗಿದ್ದಳು.
ಆದರೆ ಅಮ್ಮನಿಗೆ ಇದ್ದ ಭಯವೇ ಬೇರೆ. ಅದು ಚಿಟ್ಟಿಯಲ್ಲಿ ಆಗುತ್ತಿದ್ದ ಬದಲಾವಣೆ. ಇಷ್ಟು ದಿನ ಚಿಟ್ಟಿ ದೇವರಿಗೆ ಕೈ ಮುಗಿದು ಬೆಳಗಿನ ಕೆಲಸ ಆರಂಭಿಸುತ್ತಿದ್ದಳು. ನಿಂಗರಾಜುವಿನ ಸಾವಿನ ನಂತರ ಅವಳಿಗೆ ದೇವರ ಬಗ್ಗೆ ನಂಬಿಕೆ ಹೊರಟುಹೋಗಿತ್ತು. ದೇವರಿಲ್ಲ, ಇದ್ದರೂ ಅವನು ಖಂಡಿತಾ ಒಳ್ಳೆಯವನಲ್ಲ, ನಂಬಿದವರಿಗೆ ಕಷ್ಟ ಯಾಕೆ ಕೊಡ್ತಾನೆ ಎನ್ನುವ ಭಾವನೆ ಮನಸ್ಸಿನಲ್ಲಿ ತಳ ಊರಿತ್ತು. ಅದು ನಿಧಾನಕ್ಕೆ ದೇವರ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿತ್ತು.
‘ಅಮ್ಮ ದೇವರು ಇದ್ದಾನೆ ಅಂದ್ರೆ ನಮಗ್ಯಾಕೆ ಕೆಟ್ಟದು ಆಗಬೇಕು?’
‘ನಮಗೆ ಅಂದ್ರೆ ಯಾರಿಗೆ ಚಿಟ್ಟಿ?’
‘ನಮಗೆ ಅಂದ್ರೆ ಅವನನ್ನು ನಂಬಿರೋ ಮನುಷ್ಯರಿಗೆ?’
‘ಕಷ್ಟ ಗಿಡ ಮರಕ್ಕೂ ಬರುತ್ತೆ!’
‘ಅಮ್ಮಾ ತಮಾಷೆ ಬೇಡ. . . ನನ್ನ ಮನಸ್ಸಿಗೆ ಗೊತ್ತಾಗ್ತಾ ಇದೆ ಅವನಿಲ್ಲ’
‘ಅವನಿಲ್ಲ ಅಂದ್ರೆ ನಾವು ಎಲ್ಲಿರ್ತಾ ಇದ್ವಿ?… ನೋಡು ಚಿಟ್ಟಿ ಈ ಪ್ರಶ್ನೆಗಳನ್ನೆಲ್ಲಾ ದೊಡ್ಡ ದೊಡ್ಡ ಸಂತರೆಲ್ಲಾ ಕೇಳಿಕೊಂಡೆ ಬಂದಿದ್ದಾರೆ.’
‘ನೀನು ಅವನನ್ನು ನಂಬ್ತೀಯ ತಾನೆ? ಹಾಗಿದ್ದ ಮೇಲೆ ನಿನ್ನ ಬಗ್ಗೆ ಅವನು ಪ್ರೀತಿ ತೋರಿಸ್ಬೇಕಿತ್ತಲ್ವಾ, ಎಷ್ಟು ದಿನ ನೀನು ಅತ್ತಿದ್ದೀಯ, ಕೊರಗಿದ್ದೀಯಾ ಅವನಿಗೇನಾದ್ರೂ ಕರುಣೆ ಅಂತ ಬಂತಾ? ಅದೇ ನಂಗೇನಾದ್ರೂ ಆದ್ರೆ ನಿಂಗೆ ನೋವಾಗುತ್ತೆ ತಾನೆ? ಆ ನೋವನ್ನ ಮರಸ್ಲಿಕ್ಕೆ ನೀನು ಏನಾದ್ರೂ ಮಾಡ್ತೀಯತಾನೆ? ಯಾರಿಗೂ ಆಗದ ಕೆಟ್ಟದ್ದೆಲ್ಲಾ ನಮಗೇ ಆಗುತ್ತೇ ಯಾಕೆ?
‘ನನ್ನ ವಿಷ್ಯ ಬಿಡು ಚಿಟ್ಟಿ ಈಗ ನಿಂಗೆ ಅಂಥ ಕೆಟ್ಟದ್ದು ಏನಾಯ್ತು?!’
ಚಿಟ್ಟಿ ಮಾತಾಡಲಿಲ್ಲ. ಅಮ್ಮನಿಗೆ ಅವಳ ಬಗ್ಗೆ ಅನುಮಾನ ಬಂತು.
‘ನೀನು ನನ್ನಿಂದ ಏನೋ ಮುಚ್ಚಿಡ್ತಾ ಇದೀಯ. ಅದೇನ್ ಹೇಳು?’
ಚಿಟ್ಟಿ ಮಾತಾಡಲಿಲ್ಲ. ಅವಳ ಕಣ್ಣ ಮುಂದೆ ಯಾವ ಯಾವ ಚಿತ್ರಗಳು ತೇಲಿ ಹೋದವೋ ಅವಳಿಗೆ ಗೊತ್ತಾಗಲಿಲ್ಲ. ಅಮ್ಮನ ಒಳಗು ಅಲ್ಲಾಡಿ ಹೋಯಿತು. ಅವಳಿಂದ ಉತ್ತರ ಬಾರದೆ ನೆಮ್ಮದಿಯಿಲ್ಲ. ಆದರೆ ಅವಳು ಮಾತಾಡಲಿಲ್ಲ. ದೇವಸ್ಥಾನಕ್ಕೆ ಬರಲಿಲ್ಲ, ದೇವರಿಗಾಗಿ ಕೈ ಮುಗಿಯಲಿಲ್ಲ. ತಾನು ನಂಬದ ದೈವಕ್ಕೆ ‘ಇನ್ನು ನಿನಗೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದಿದ್ದಳು.
ಕಣ್ಣಲ್ಲಿ ಕಣ್ಣಿಟ್ಟು ಮಗಳನ್ನು ನೋಡುತ್ತಿದ್ದ ಅಮ್ಮನಿಗೆ ಚಿಟ್ಟಿಯಲ್ಲಾಗುತ್ತಿರುವ ಬದಲಾವಣೆಗಳು ಆತಂಕ ಹುಟ್ಟಿಸಿತ್ತು. ಚಿಟ್ಟಿಗೆ ಹೇಳೋಣವೆಂದರೆ ಅವಳು ಯಾವುದಕ್ಕೂ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ತನ್ನೊಳಗೆ ಏನೋ ಮಾತಾಡಿಕೊಳ್ಳುತ್ತಿದ್ದಳು. ‘ಏನೇ ಅದು?’ ಅಂದರೆ ‘ನಾಟಕದ ಸಾಲು’ ಹಾರಿಕೆ ಉತ್ತರ ಕೊಡುತ್ತಿದ್ದಳು.
ಶಾರದಾಳ ಘಟನೆ ನಡೆದಮೇಲೆ ಮಲ್ಲಣ್ಣನ ಮನೆಯ ಕಡೆ ಮಂಚವನ್ನು ನೋಡಲು ಹೋಗಲಿಲ್ಲ. ಒಂದು ದಿನ ಮಲ್ಲಣ್ಣ ಮಂಚದ ಸಮೇತ ಮನೆಗೆ ಬಂದಿದ್ದ. ಅಪ್ಪ ಮಂಚ ಮಾಡಲಿಕ್ಕೆ ಅಂತ ಅವನನ್ನು ಮನೆಗೆ ಕರೆಸಿ ಮಾತಾಡುವಾಗ ‘ಹುಟ್ಟುವ ಸೂರ್ಯನನ್ನು ಕೆತ್ತಿಕೊಡುತ್ತೇನೆ, ನಾನು ಮಾಡದ ಡಿಸೈನ್ ಯಾವುದಾದರೂ ಇದೆಯಾ? ನಮ್ಮಪ್ಪ, ಅಜ್ಜ ಎಲ್ಲಾ ಇದೆ ಕಸುಬಿನವರೇ’ ಎಂದು ಜಂಭ ಕೊಚ್ಚಿಕೊಂಡಿದ್ದ ಮಲ್ಲಣ್ಣ. ಬೇರೆ ಆಚಾರಿ ಊರಲ್ಲಿಲ್ಲದ ಕಾರಣ ಮುಖ್ಯವಾಗಿ ಬೇಕಾಗಿದ್ದು ಅಜ್ಜಿ ಮಲಗಲಿಕ್ಕೆ. ಆದ್ದರಿಂದ ಅಪ್ಪ ತುಂಬಾ ತಲೆ ಕೆಡಿಸಿಕೊಂಡ ಹಾಗೆ ಇರಲಿಲ್ಲ. ಅಮ್ಮ ಮಾತ್ರ ಮಂಚದಲ್ಲಿ ಒಂದು ನವಿಲು ಹೂವೂ ಇರಲಿ ಎಂದಿದ್ದಳು.
ಮಂಚ ಬಂದ ತಕ್ಷಣ ಚಿಟ್ಟಿ ಹುಡುಕಿದ್ದು ಹುಟ್ಟುವ ಸೂರ್ಯನನ್ನು. ನವಿಲುಗಳನ್ನು. ಅವಳ ಕಲ್ಪನೆಯಲ್ಲಿ ಏನೇನೋ ಆಗಿದ್ದ ಮಂಚ ಸಪಾಟಾಗಿ ಅವಳ ಎದುರು ಮಲಗಿತ್ತು. ಮಲ್ಲಣ್ಣ ಮೂರು ಗೆರೆಗಳಂಥ ತುಂಡುಗಳನ್ನು ಸೊಟ್ಟ ಸೊಟ್ಟಗೆ ಸೇರಿಸಿದ್ದ. ಮೇಲೊಂದು ಹೂವನ್ನು ಮೂಸುತ್ತಿರುವ ನವಿಲನ್ನು ಇಟ್ಟಿದ್ದ. ಅದು ನವಿಲಿನ ಯಾವ ಗುಣಲಕ್ಷಣಗಳನ್ನೂ ಹೊಂದಿರಲಿಲ್ಲ. ಹೆಚ್ಚೂ ಕಡಿಮೆ ಕೋಳಿಯ ಹಾಗಿತ್ತು. ಚಿಟ್ಟಿ ಪಕ್ಕೆಂದು ನಕ್ಕಳು. ಮಲ್ಲಣ್ಣ ಹುಟ್ಟುವ ಸೂರ್ಯನನ್ನು ನವಿಲಿನ ಚಂದವನ್ನೂ ವಿವರಿಸಿ ವಿವರಿಸಿ ಹೇಳಿದ. ‘ಅಲ್ಲಪ್ಪಾ ನವಿಲು ಯಾಕೆ ಹೂವನ್ನು ಮೂಸುತ್ತೆ? ಎಂದ ಚಿಟ್ಟಿಯ ಪ್ರಶ್ನೆಗೆ ಮುಖ ಕೆಂಪಗೆ ಮಾಡಿಕೊಂಡ. ಅವಳ ಮಾತನ್ನು ತಡೆಯುತ್ತಾ ‘ನಾಕು ಜನ ಕೂತ್ರೆ ಬೀಳಲ್ಲ ತಾನೆ? ಅಷ್ಟಾದರೆ ಸಾಕು ಬಿಡು’ ಎಂದು ಅಪ್ಪ ಗಂಭೀರವಾಗಿ ಕೇಳಿದ್ದರಿಂದ ಎಲ್ಲಾ ಅವಮಾನಗಳೂ ಒಟ್ಟಿಗೆ ಸಂಭವಿಸಿ ‘ಹಾಗೇನಾದ್ರೂ ಬಿದ್ರೆ ನಾನು ಕಸುಬು ಮಾಡೋದನ್ನೇ ಬಿಟ್ಟ್ ಬಿಡ್ತೀನಿ. ನಿಮ್ಮ ಮರದ ದುಡ್ಡು, ನನ್ನ ಕೂಲಿ ಎಲ್ಲಾ ವಾಪಾಸ್’ ಎಂದಿದ್ದ. ಅಪ್ಪ ಅವನು ಕೇಳಿದ್ದರಲ್ಲಿ ಚೌಕಾಸಿ ಮಾಡಿ ಹಣ ಕೊಟ್ಟು ಕಳಿಸಿದ್ದ. ಹೀಗೆ ಚಿಟ್ಟಿ ಕಂಡಿದ್ದ ಕನಸಲ್ಲಿ ಕಾಲುಭಾಗವನ್ನೂ ತುಂಬಿಕೊಡದ ಮಂಚ ಮನೆಗೆ ಬಂದು ಕೂತಿತ್ತು.
ಮಂಚವನ್ನು ನೋಡಿದಾಗಲೆಲ್ಲಾ ಅಪ್ಪ ‘ಅಡ್ದಕಸುಬಿ’ ಎಂದು ಮಲ್ಲಣ್ಣನನ್ನು ನೆನೆಸಿಕೊಳ್ಳುವುದು ತಪ್ಪಲಿಲ್ಲ. ‘ಬ್ರಹ್ಮ ಅನ್ನೋ ಬ್ರಹ್ಮಾನೇ ಅಡ್ದಕಸುಬಿ, ಎಂಥೆಂಥವರನ್ನೋ ಸೃಷ್ಟಿ ಮಾಡ್ತಾನೆ. ಅಂಥಾದ್ರಲ್ಲಿ ಈ ಮಲ್ಲಣ್ಣ ಏನು ಮಹಾ ಬಿಡಿ’ ಎಂದು ಅಮ್ಮ ಹೇಳಿದರೂ ಅಪ್ಪನಿಗೆ ಸಮಾಧಾನ ಇರ್ಲಿಲ್ಲ. ಅದರ ಬದಲಿಗೆ ತನ್ನನ್ನೇ ಏನೋ ಅನ್ನುತ್ತಿರಬೇಕು ಅನ್ನಿಸಿ ‘ಯಾರ ಬಗ್ಗೆ ನೀನು ಹೇಳಿದ್ದು?’ ಎಂದು ಅಮ್ಮನ ಮೇಲೆ ರೇಗಿದ.

‘ನೀನ್ ಏನ್ ತಪ್ಪ್ ಹೇಳ್ದೆ? ಅಪ್ಪ ಯಾಕೆ ರೇಗಿದ್ದು?’ ಎಂದು ಚಿಟ್ಟಿ ಅಮ್ಮನನ್ನು ಪ್ರಶ್ನಿಸಿದಳು. ಅಮ್ಮನ ಕಣ್ಣುಗಳು ಏನೋ ಹೇಳಿದವಾದರೂ ಚಿಟ್ಟಿಗೆ ಪೂರ್ತಿ ಅರ್ಥವಾಗಲಿಲ್ಲ. ಆದರೆ ಅಪ್ಪ ತಪ್ಪು ಮಾಡ್ತಿದ್ದಾನೆ ಎನ್ನುವುದು ಮಾತ್ರ ಚೆನ್ನಾಗಿ ಅರ್ಥವಾಗಿತ್ತು. ಅಪ್ಪನಿಗೆ ತಿಳಿಯದೆ ಅಮ್ಮನ ಮೇಲೆ ಅಸಹನೆ ಇದೆ ಎಂದು. ಅಪ್ಪನನ್ನು ನಿಲ್ಲಿಸಿ ‘ನೀನು ಮಾಡ್ತಿರೋದು ಸರೀನಾ?’ ಅಂತ ಕೇಳಬೇಕು ಎಂದುಕೊಂಡಳು. ಅಪ್ಪ ‘ಇದೆಲ್ಲಾ ನಿಂಗ್ಯಾಕೆ ಸಣ್ಣ ಹುಡುಗಿ ಸಣ್ಣವಳ ಹಾಗೆ ಇರು ಎಂದರೆ?’ ಅನ್ನಲಿ  ಆಗ ಹೇಳ್ತೀನಿ ‘ನಾನೀಗ ದೊಡ್ಡವಳಾಗಿದ್ದೀನಿ, ಸರಿ ತಪ್ಪು ನಂಗೂ ಅರ್ಥ ಆಗುತ್ತೆ’ ಅಂತ. ಹಾಗಂದುಕೊಂಡದ್ದು ಅಷ್ಟೇ. ಅವಳು ಯಾವತ್ತೂ ಅಪ್ಪನ ಎದುರು ನಿಲ್ಲಲೇ ಇಲ್ಲ.
ಹೀಗೇ ಈ ಎಲ್ಲದರ ನಡುವೆಯೇ ನಾಟಕಕ್ಕಾಗಿ ಹೊರಡುವ ದಿನ ಬಂದೇಬಿಟ್ಟಿತು. ಗುರುಪಾದಪ್ಪ ಮೇಷ್ಟ್ರು ವೇಷಗಳ ಪಟ್ಟಿಯನ್ನು ಮಾಡುತ್ತಿದ್ದರು. ಗಂಡು ಪಾತ್ರಗಳಿಗೆ ಒಂದು ಶಲ್ಯ, ಕಚ್ಚೆ ಪಂಚೆ, ಸಾವಿತ್ರಿಗೆ ಮಾತ್ರ ಸೀರೆ ಎಂದರು. ಆರೋಗ್ಯಾದಿಯಾಗಿ ಎಲ್ಲರೂ ಮೊದಲು ಗಾಬರಿಗೊಂಡು ನಂತರ ನಾಚಿಕೊಂಡರು, ಮೇಷ್ಟ್ರಿಗೆ ತಾನೇನು ಮಾತಾಡಿದೆ ಅಂತ ಅರ್ಥ ಆಗಲೇ ಇಲ್ಲ. ಹೆಣ್ಣು ಮಕ್ಕಳ ಮುಖವನ್ನು ನೋಡುವಾಗ ಅವರ ನಾಚಿಕೆಗೆ ಕಾರಣ ಅರ್ಥವಾಯಿತು. ಆಮೇಲೆ ತಮ್ಮ ತಪ್ಪನ್ನು ತಿದ್ದಿಕೊಳ್ಳುವವರಂತೆ ಅಂದ್ರೆ ಒಳಗೆ ಅಂಗಿ ಇರುತ್ತೆ ಅದರ ಮೇಲೆ ಕಚ್ಚೆಪಂಚೆ, ಶಲ್ಯ ಅಷ್ಟೇ ಎಂದರು.
ನಾಟಕದ ಅಭ್ಯಾಸ ಭರದಿಂದ ಸಾಗಿತ್ತು ಸ್ಕೂಲಲ್ಲಿ, ಹೊರಗೆ, ಕಾಡಿನ ಮಧ್ಯೆ ಹೀಗೆ ಎಲ್ಲೆಂದರಲ್ಲಿ. ಯಾರೊಬ್ಬರೂ ಡೈಲಾಗ್ ಅನ್ನು ತಪ್ಪು ಹೇಳಬಾರದು ಜಾಸ್ತಿ ಸೇರಿಸಿಕೊಳ್ಳಬಾರದು ಎನ್ನುವುದು ಒಪ್ಪಂದ ಆಗಿತ್ತು. ಯಮನಾಗಿದ್ದ ಆರೋಗ್ಯ ಮಾತು ಮರೆತು ಹೋದಾಗಲೆಲ್ಲಾ ತನಗೆ ತೋಚಿದ್ದನ್ನು ಸೇರಿಸಿಕೊಂಡು ಬಿಡುತ್ತಿದ್ದಳು. ಮೇಷ್ಟ್ರಿಗೆ ತಲೆ ಕೆಟ್ಟು ಹೋಗುತ್ತಿತ್ತು. ನಂತರ ಮಾತಾಡುವವರು ಏನು ಹೇಳಬೇಕು ಗೊತ್ತಾಗದೆ ಕಕ್ಕಾಬಿಕ್ಕಿ ಯಾಗುತ್ತಿದ್ದರು. ಗಾತ್ರದಲ್ಲಿ ಹಾಗೇ ಇರುವ ಇನ್ನೊಬ್ಬ ಹುಡುಗಿ ಸಿಗದ ಕಾರಣ ಅವಳನ್ನೇ ಆರಿಸಿಕೊಂಡ್ದಿದ್ದರು. ಕೊನೆಗೆ ತಪ್ಪಿದ ಕಡೆಗೆ ನಕ್ಕತ್ತುವೇ ಮಾತನ್ನು ಎತ್ತಿಕೊಡುವ ಹಾಗೆ ತಯಾರಿ ಮಾಡಿದ್ದರೂ ಆತಂಕ ತಪ್ಪಲಿಲ್ಲ. ಗಂಡನ ಪ್ರಾಣವನ್ನು ತೆಗೆದುಕೊಂಡು ಹೋಗುವ ಯಮನನ್ನು ಅಳುತ್ತಲೇ ಎದುರುಗೊಳ್ಳುವ ಸವಾಲಿನಲ್ಲಿದ್ದ ನಕ್ಕತ್ತುವಿಗೆ ಡೈಲಾಗ್ ತಪ್ಪಿ ಹೋಗುವ ಭಯವಂತೂ ಇದ್ದೇ ಇತ್ತು. ಮಹಾ ಕವಿಯ ನಾಟಕ ತಪ್ಪಿ ಯಾರಾದರೂ ಬೈದು ಬಿಟ್ಟರೆ ಎನ್ನುವ ಹೆದರಿಕೆ ಗುರುಪಾದಪ್ಪ ಮೇಷ್ಟ್ರಿಗೆ. ಒಟ್ಟಿನಲ್ಲಿ ಎಲ್ಲಾ ಆತಂಕಗಳ ನಡುವೆಯೇ ನಾಟಕ ಸ್ಪರ್ಧೆಯ ದಿನ ಬಂದೆ ಬಿಟ್ಟಿತು.
ಬಣ್ಣ ಹಚ್ಚಿಕೊಂಡು ಕನ್ನಡಿಯ ಎದುರು ನಿಂತ ಚಿಟ್ಟಿಗೆ ತಾನು ಸಾವಿತ್ರಿಯ ಪಾತ್ರ ಮಾಡಿದ್ದಿದ್ದರೆ ಚೆನ್ನಾಗಿರ್ತಿತ್ತು ಎಂಬ ಭಾವನೆ. ಆದರೆ ನಕ್ಕತ್ತು ಅವಳಿಗಿಂತ ಸ್ವಲ್ಪ ಕಡಿಮೆ ಎತ್ತರವಾದ್ದರಿಂದ ಸಾವಿತ್ರಿಯ ಪಾತ್ರ ಕೊಡಲಾಗಿತ್ತು. ನಾಟಕ ಚೆನ್ನಾಗೇ ಆಯಿತು. ಸ್ಟೇಜ್ ಇಳಿದು ಬಂದ ತಕ್ಷಣವೇ ಚಿಟ್ಟಿಗೆ ಎಲ್ಲರೂ ಮುತ್ತಿಕೊಂಡರು. ‘ಇದು ಹೇಗೆ ಸಾಧ್ಯ? ಆ ಸಾವಿನ ದೃಶ್ಯದಲ್ಲಿ ನೀನು ನಿಜವಾಗಿ ಸತ್ತೆ ಅಂದುಕೊಂಡೆವು ಅಷ್ಟು ಅಮೋಘವಾಗಿತ್ತು ನಿನ್ನ ನಟನೆ’ ಎಂದರು. ಚಿಟ್ಟಿಗೆ ಉತ್ತರಿಸಲು ಯಾವುದೇ ಮಾತುಗಳು ಇರಲಿಲ್ಲ.
ಅಲ್ಲಿಗೆ ಬಂದ ನಲವತ್ತು ನಾಟಕಗಳಲ್ಲಿ ‘ಯಮನ ಸೋಲು’ ನಾಟಕವೇ ಅತ್ಯುತ್ಕೃಷ್ಟ ಎನ್ನುವ ಹಾಗೇ ಇತ್ತು. ಹಾಗಾಗಿ ಮೊದಲೇ ಊಹಿಸಿದಂತೆ ನಾಟಕಕ್ಕೆ ಮೊದಲ ಬಹುಮಾನ ಬಂದಿತ್ತು. ಜೊತೆಗೆ ಚಿಟ್ಟಿಗೆ ಬೆಸ್ಟ್ ಆಕ್ಟಿಂಗ್‌ಗೆ ಮೊದಲ ಬಹುಮಾನ ಬಂದಿತ್ತು.
‘ನೀವು, ನಿಮ್ಮ ಕಣ್ಣು, ನಿಮ್ಮ ಮಾತು ಎಲ್ಲ ಅದ್ಭುತ ರೀ ನಿಮ್ಮ ಆಟೋಗ್ರಾಫ್ ಕೊಡಿ, ನಾಳೆ ನೀವು ದೊಡ್ಡ ಆಕ್ಟ್ರೆಸ್ ಆದಾಗ ತೋರಿಸೋಕಾದ್ರೂ ಒಂದು ಪ್ರೂಫ್ ಇರ್ಲಿ’ ಅವಳಿಗಿಂತ ಏಳೆಂಟು ವರ್ಷಕ್ಕೆ ದೊಡ್ಡವ ಗುರುಪಾದಪ್ಪ ಮೇಷ್ಟ್ರ ಅಳಿಯ ಮಾತಾಡ್ತ ಇದ್ದರೆ ಚಿಟ್ಟಿ ಅವನನ್ನೇ ಬಿರುಗಣ್ಣಿಂದ ನೋಡುತ್ತಿದ್ದಳು. ಮೊದಲ ಬಾರಿಗೆ ‘ನಿಮ್ಮ ಆಟೋಗ್ರಾಫ್ ನನ್ನ ಬಳಿ ಇರಲಿ’ ಎಂದಿದ್ದು ಅವಳ ಒಳಗೆ ಆತ್ಮವಿಶ್ವಾಸವನ್ನು ಹುಟ್ಟುಹಾಕಿತ್ತು. ನಾಳೆ ನಾನು ತುಂಬಾ ದೊಡ್ಡವಳಾಗುತ್ತೇನೆ ಎನ್ನುವ ಭರವಸೆಯೂ ಮೂಡಿತು. ಅವನ ಕೈಲ್ಲಿದ್ದ ಸಣ್ಣ ಪುಸ್ತಕದಲ್ಲಿ ಸಹಿ ಹಾಕಿದಳು. ಅವಳಲ್ಲಿ ನಿರಾಳತೆ ತುಂಬಿತ್ತು
ಅದೇ ಖುಷಿಯಲ್ಲಿ ಮನೆಗೆ ಬಂದ ಚಿಟ್ಟಿಗೆ ಮನೆಯಲ್ಲಿ ನೀರವತೆ ತುಂಬಿದಂತೆನಿಸಿತು. ಅಪ್ಪ ಒಂದು ಕಡೆ ಸುಮ್ಮನೆ ಕೂತಿದ್ದ. ಅಮ್ಮಾ ಅಳುತ್ತಿದ್ದಳು. ಬಂದ ಬಹುಮಾನವನ್ನು ತೋರಿಸಬೇಕೆನ್ನುವ ಆಸಕ್ತಿಯನ್ನೇ ಅವಳು ಕಳೆದುಕೊಂಡಳು. ಅಮ್ಮಾ ಸ್ವಲ್ಪಹೊತ್ತಿನ ನಂತರ ಅಪ್ಪನಿಗೆ ‘ಹೋಗಿಬನ್ನಿ ಇನ್ನೇನು ಮಾಡೋಕ್ಕಾಗುತ್ತೆ’ ಎಂದಳು. ‘ಅಪ್ಪ ಎಲ್ಲಿಗೆ ಹೋಗಬೇಕು?’ ಚಿಟ್ಟಿ ಅಚ್ಚರಿಯಿಂದ ಅಪ್ಪನ ಕಡೆಗೆ ನೋಡಿದಳು. ಅಪ್ಪ ಅಮ್ಮನ ಮಾತಿಗೆ ಕಾದವನಂತೆ ಎದ್ದು ಹೊರಟ. ಚಿಟ್ಟಿ ಅವನು ಹೋದ ದಿಕ್ಕನ್ನೇ ನೋಡುತ್ತಾ ‘ಏನಾಯ್ತು?’ ಎಂದಳು. ಅವಳು ಬಂದಿದ್ದೂ ಅರಿವಿಲ್ಲದ ಅಮ್ಮ ‘ಓಹ್ ನೀನಾ ಯಾವಾಗ ಬಂದೆ? ಎಲ್ಲಾ ಚೆನ್ನಾಗಿ ಆಯ್ತಾ? ಏನೂ ತೊಂದ್ರೆ ಆಗ್ಲಿಲ್ಲ ತಾನೆ?’ ಎಂದಳು. ಚಿಟ್ಟಿ ಇಲ್ಲ ಎನ್ನುವಂತೆ ತಲೆ ಆಡಿಸಿ, ತನ್ನ ಕೈಲಿದ್ದ ಬಹುಮಾನವನ್ನು ಅಮ್ಮನ ಕೈಗೆ ಇತ್ತಳು. ಅಮ್ಮ ಅದನ್ನು ನೋಡಿ ಕಣ್ಣಲ್ಲಿ ಅಭಿಮಾನವನ್ನು ತುಂಬಿಕೊಂಡು ಎದೆಗವಚಿಕೊಂಡಳು. ಚಿಟ್ಟಿಯ ನೆತ್ತಿ ಅವಳ ಕಣ್ಣೀರಿಂದ ನೆಂದು ಹೋಯಿತು.
‘ಅಮ್ಮಾ ಯಾಕೆ ಅಳ್ತಾ ಇದೀಯಾ?’
‘ಹಾಂ ಹೆಣ್ಣು ಮಕ್ಕಳನ್ನ ಎಲ್ಲಿಗಾದರೂ ಕಳಿಸಬೇಕಾದರೆ ಹುಷಾರು ಅಂತೀವಿ, ಬೇರೆ ಊರಿಗೆ ಹೋಗುವಾಗ ಪರಿಚಯದವರ ಜೊತೆ ಕಳಿಸ್ತೀವಿ, ಅಲ್ಲೇನಾದ್ರೂ ಆಗ್ಬಿಟ್ರೆ ಅಂತ ಆತಂಕ ಪಡ್ತೀವಿ. ಆದ್ರೆ ಈ ಮದ್ವೇ ಇದ್ಯಲ್ಲಾ ಚಿಟ್ಟಿ ಇದೊಂದು ವಿಷ್ಯಕ್ಕೆ ಮಾತ್ರ ತಲೇನೇ ಕೆಡಿಸ್ಕೊಳ್ಳಲ್ಲ. ಕಷ್ಟ ಆದ್ರೆ ಕಷ್ಟ ಪಡಬೇಕು ಅಂತ ಬುದ್ದಿ ಹೇಳ್ತೀವಿ’.
‘ಅಮ್ಮಾ . . .’
‘ಇಲ್ಲ ಚಿಟ್ಟಿ ನಾನು ಇವತ್ತು ನಮ್ಮಪ್ಪ ಅಮ್ಮನ್ನ ಬೈದುಕೊಳ್ತಾ ಇದೀನಿ. ನಾಳೆ ನನ್ನೂ ನೀನ್ ಹೀಗೆ ಬೈದುಕೊಳ್ತೀಯ ನಂಗೆ ಗೊತ್ತು’
ಎನ್ನುತ್ತಾ ಚಿಟ್ಟಿಯ ಪ್ರತಿಕ್ರಿಯೆಗೂ ಕಾಯದೆ ಒಳಗೆ ಹೋದಳು. ಅಮ್ಮಂಗೆ ಏನಾಗಿದೆ ಇವತ್ತು ಎನ್ನುತ್ತಾ ಚಿಟ್ಟಿ ತಲೆ ಕೆಡಿಸಿಕೊಂಡಳು.
‘ಓಹ್ ಪ್ರೈಜ್ ಬಂತಾ?ಚೆನ್ನಾಗಿದೆ ಕಣೆ ಮುಂದಿನ ವರ್ಷ ನಾನೂ ತಗೋತೀನಿ’ ಪುಟ್ಟಿ ಅದನ್ನು ತಿರುಗಿಸ ಮುರುಗಿಸ ನೋಡಿದಳು. ಮಾತಾಡದ ಚಿಟ್ಟಿಯ ಕಲ್ಪನೆಯನ್ನು ಸಾಯಿಸಿದ ಮಂಚದ ಮೇಲೆಮಲಗಿದ್ದ ಅಜ್ಜಿ ‘ಏನೇ ಅದು?’ ಎಂದಳು. ಚಿಟ್ಟಿಗೆ ಏನೋ ಹೊಳೆದಂತಾಗಿ ‘ಅಪ್ಪ ಅಮ್ಮ ಯಾಕ್ ಜಗಳ ಆಡಿದ್ರು?’ ಎಂದು ಪುಟ್ಟಿಯನ್ನು ಕೇಳಿದಳು. ‘ಜಗಳ ಅಲ್ಲ ಕಣೆ ಅಪ್ಪ ಇನ್ನೊಂದ್ ಮದ್ವೇ ಆಗಿದ್ರಲ್ಲಾ ಅವ್ರಿಗೆ ತುಂಬಾ ಹುಷಾರಿಲ್ಲಂತೆ ಹೇಳ್ ಕಳಿಸಿದ್ರು. ಅಪ್ಪನ್ನ ಹೋಗ್ಬೇಡ ಅಂತ ಅಮ್ಮ ತಡದಿದ್ದಕ್ಕೆ ಅಪ್ಪನಿಗೆ ಬೇಸರ ಆಗಿತ್ತು. ಅದಕ್ಕೆ ಸ್ವಲ್ಪ ಮಾತಾಯ್ತು’ ಎಂದಳು. ತನಗೆ ಹೇಳಲಿಕ್ಕಾಗದೇ ಇದ್ದಿದ್ದನ್ನು ಇವಳು ಎಷ್ಟು ಸಲೀಸಾಗಿ ಹೇಳ್ತಾ ಇದಾಳಲ್ಲ? ಇದನ್ನು ಹೇಳುವುದು ಅಷ್ಟು ಸುಲಭಾನಾ? ಪ್ರಶ್ನೆಗಳ ಮಧ್ಯೇನೆ ‘ಅಂದ್ರೆ ಅವ್ರು ಸತ್ತ್ ಹೋಗ್ತಾರಾ?’ ಚಿಟ್ಟಿ ಪುಟ್ಟಿಯನ್ನು ಕೇಳಿದಳು. ‘ಯಾರೋ ಬಂದಿದ್ರಲ್ಲಾ ಅವ್ರ ಮಾತನ್ನ ಕೇಳ್ತಿದ್ರೆ ನಂಗೆ ಹಾಗೇ ಅನ್ನಿಸ್ತು ಚಿಟ್ಟಿ. ಅವ್ರು ಸಾಯಬಹುದು’ ಎಂದಳು ಪುಟ್ಟಿ. ‘ಸಾಯಬಹುದಲ್ಲ ಸಾಯಬೇಕು ಅಮ್ಮನ ಕಣ್ನಲ್ಲಿ ನೀರ್ ಹಾಕ್ಸಿದ್ರಲ್ಲಾ ಅವ್ರು ಯಾಕ್ ಬದುಕ್ಬೇಕು?’ ಚಿಟ್ಟಿ ಸವಾಲೆಸೆದಳು. ‘ನಾವ್ ಸಾಯಿ ಅಂದ್ರೆ ಸಾಯಲ್ಲ, ಬೇಡ ಅಂದ್ರೆ ಬಿಡಲ್ಲ. ಅದ್ರ ಬಗ್ಗೆ ಯೋಚ್ನೆ ಮಾಡ್ಬೇಡ’ ಎಂದಳು ಪುಟ್ಟಿ.
ಯಾಕೆ ಪುಟ್ಟಿ ಹೀಗ್ ಮಾತಾಡಿದ್ಲು? ಅವ್ರು ಮಾಡಿರೋ ಅನ್ಯಾಯಕ್ಕೆ ಅವ್ರಿಗೆ ಶಿಕ್ಷೆ ಆಗಬೇಕಲ್ವಾ?ಆದ್ರೆ ನಾನು ನೋಡ್ತಾ ಇರೋ ಜಗತ್ತಿನಲ್ಲಿ ಗಂಡಸರೇ ಹೆಂಗಸರಿಗೆ ಅನ್ಯಾಯ ಮಾಡ್ತಾ ಇರೋದು. ಅಪ್ಪಾ ಕೂಡಾ ಹೀಗೇ ಏನೋ ಮಾಡಿರಬಹುದಲ್ಲಾ? ಹಾಗೇ ನೋಡಿದ್ರೆ ಸತ್ಯವಾನ ಎಂಥವನೋ ಏನೋ ಅಂಥಾ ಗಂಡಸನ್ನು ಯಮನ ಕೈಯಿಂದ ಕಾಪಾಡಲಿಲ್ವಾ? ಛೇ ಆಗಿನ ಕಾಲದ ಗಂಡಸರು ಒಳ್ಳೆಯವರೇ ಇದ್ದರು ಅನ್ನಿಸುತ್ತೆ. ಅದಕ್ಕೆ ಹೆಂಗಸರಿಗೂ ಅಂಥಾ ಶಕ್ತಿ ಬರ್ತಾ ಇತ್ತು. ಇವೆಲ್ಲಾ ನನಗೆ ಯಾಕೆ ಹೊಳೀಲಿಲ್ಲ.
ಅರೆ ಈ ಪುಟ್ಟಿಗೆ ಇರುವ ಸಮಚಿತ್ತತೆ ತನಗೆ ಯಾಕಿಲ್ಲ? ಅಲ್ಲಿ ಕೂಡಾ ಇಬ್ಬರು ಮಕ್ಕಳಿದ್ದಾರಂತೆ ಅದೂ ಹೆಣ್ಣು ಮಕ್ಕಳೇ? ಆಕಿ ಸತ್ತು ಹೋದ್ರೆ‌ಆ ಮಕ್ಕಳನ್ನ ನೋಡೋರು ಯಾರು? ಹೀಗೆ ನಾನು ಬಯಸಬಹುದಾ? ಚಿಟ್ಟಿಯ ಕೆನ್ನೆಗೆ ಯಾರೋ ಹೊಡೆದ ಹಾಗನ್ನಿಸಿತು. ಆದರೆ ಅಮ್ಮನ ಸಂಕಟ. . . ಅದನ್ನು ಹೇಳೋರು ಯಾರು? ಕೇಳೋರು ಯಾರು?
ಅಪ್ಪ ನಾಕು ದಿನ ಮನೆಗೆ ಬರಲಿಲ್ಲ. ಅಜ್ಜಿ ಮಂಚದ ಮೇಲೆ ಕೂತು ಯಾರ ಮಾತನ್ನೂ ಕೇಳದೆ ತನ್ನದೇ ವರಾತ ಹಚ್ಚಿತ್ತು. ‘ನಿನ್ನ ಮದುವೆ ಮಾಡಿಕೊಂಡು ಬಂದ ಮಗ ಒಂದು ದಿನಾನೂ ಸುಖವಾಗಿಲ್ಲ. ಅದಕ್ಕೆ ಹೇಳದೆ ಹೇಳದೆ ಎಲ್ಲಂದರಲ್ಲಿಗೆ ಹೋಗುತ್ತಾನೆ’ ಎಂದಳು. ಅಮ್ಮ ಎಲ್ಲವನ್ನೂ ಸಹಿಸಿಕೊಂಡಳು.
ನಾಕನೆ ದಿನ ವಾಪಾಸಾದ ಅಪ್ಪನ ಮುಖದಲ್ಲಿ ಒಂದಿಷ್ಟು ದುಃಖ, ಒಂದಿಷ್ಟು ಆತಂಕ, ಸೂತಕದ ಕಳೆ ಬಿಟ್ಟರೆ ಏನೂ ಇರಲಿಲ್ಲ. ಆ ಸ್ಥಿತಿಯಲ್ಲಿ ಅಪ್ಪನನ್ನು ನೋಡಿ ಅಮ್ಮ ‘ಏನಾಯ್ತು?’ ಎಂದಳು. ಅಪ್ಪ ಅವಳಿಗೆ ಒರಗಿ ಅಳುತ್ತಾ ‘ಎಲ್ಲಾ ಮುಗಿದು ಹೋಯ್ತು, ನೀನು ಇನ್ನು ಯಾವುದಕ್ಕೂ ಕೊರಗಬೇಕಿಲ್ಲ, ಯಾರ ಮೇಲೆ ಸಾಧಿಸ್ತಾ ಇದ್ಯೋ ಅವಳು ಇನ್ನು ಇಲ್ಲ’ ಎಂದ. ಅಮ್ಮನಿಗೆ ಏನು ಹೇಳಬೇಕು ಎಂದು ಅರ್ಥವಾಗದೆ ಕಕ್ಕಾಬಿಕ್ಕಿಯಾದಳು. ಚಿಟ್ಟಿ ಇಬ್ಬರನ್ನೂ ನೋಡುತ್ತಾ ನಿಂತಳು.
(ಮುಂದುವರಿಯುವುದು..)

‍ಲೇಖಕರು G

January 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ರಾಜ ಬಂದ ಹೆಂಡತಿಯೊಡನೆ… « ಅವಧಿ / Avadhi - [...] : ರಾಜ ಬಂದ ಹೆಂಡತಿಯೊಡನೆ… January 28, 2014 by user2 (ಇಲ್ಲಿಯನರೆಗೆ) ಕೃಷ್ಣಪ್ಪನ ಕಳ್ಳಂಗಡಿಯಿಂದ ಹೊರಗೆ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: