’ಅಂತ್ಯಸಂಸ್ಕಾರವೊಂದರಲ್ಲಿ ಸರಕಾರ ಎಷ್ಟು ಭಾಗವಹಿಸಬೇಕು?’ – ಸುಗತ ಕೇಳ್ತಾರೆ

ಸುಗತ ಶ್ರೀನಿವಾಸರಾಜು

ಮಲ್ಲೇಶ್ವರದ ಹನ್ನೊಂದನೇ ಕ್ರಾಸಿನಲ್ಲಿ ಒಂದು ಹಳೆಯ ಪುಸ್ತಕದಂಗಡಿಯಿತ್ತು. ಅಲ್ಲಿಗೆ ನನ್ನ ತಂದೆ ಮತ್ತು ನಾನು ವ್ರತ ಹಿಡಿದವರಂತೆ ಶುಕ್ರವಾರ ಸಂಜೆ ಹೋಗುತ್ತಿದ್ದೆವು. ನಮ್ಮ ಮನೆಯ ಪುಟ್ಟ ಗ್ರಂಥಭಂಡಾರಕ್ಕೆ ಅಲ್ಲಿಂದ ಅನೇಕ ಪುಸ್ತಕಗಳು ಸಂಪಾದನೆ ಆದವು. ಅವುಗಳಲ್ಲಿ ನಾನು ಇಂದಿಗೂ ಬಹಳ ಜೋಪಾನವಾಗಿ ಇಟ್ಟಿರುವುದೆಂದರೆ ಜೇಬಿನ ಗಾತ್ರಕ್ಕೆ ಮಾಡಿದ, ಚರ್ಮದ ಹೊದಿಕೆ ಇರುವ, ಶೇಕ್ಸ್‌ಪಿಯರ್ ಮತ್ತು ಬರ್ನಾರ್ಡ್ ಶಾ ನಾಟಕಗಳ ಹೊತ್ತಗೆ. ಅಂದವಾಗಿ ಮುದ್ರಿತವಾದ ಈ ಪುಸ್ತಕಗಳ ಜೊತೆಗೆ ನಾನು ಪ್ರೀತಿಸುವ, ಸದಾ ಬಳಸುವ ಮತ್ತೊಂದು ಪುಸ್ತಕ ಎಂದರೆ ‘EXITS: Stories of Dying Moments & Parting Words’ (ಸಂಪಾದಕರು: ಸ್ಕಾಟ್ ಸ್ಲೇಟರ್ ಮತ್ತು ಅಲೆಕ್ ಸೋಲೋಮಿಟ). ಸಾವಿನ ಬಗ್ಗೆ ಭಯ, ಕುತೂಹಲಕ್ಕಿಂಲೂ ವಿಚಿತ್ರ ಆಕರ್ಷಣೆಯನ್ನು ಬೆಳಸಿಕೊಂಡಿದ್ದ ನನ್ನ ತಂದೆಯವರಿಗೂ ಈ ‘ನಿರ್ಗಮನ’ಗಳ ಪುಸ್ತಕ ಮೆಚ್ಚಿನದಾಗಿತ್ತು. ಬಹಳ ದಿನ ಇದು ಅವರ ಹಾಸಿಗೆ ಬದಿಯಲ್ಲಿದ್ದ ಪುಸ್ತಕದ ಕಪಾಟಿನಲ್ಲಿ ಸ್ಥಳ ಪಡೆದಿತ್ತು.
ಕಳೆದ ವಾರ ಅನಂತಮೂರ್ತಿಯವರು ನಿರ್ಗಮಿಸಿದ ಸಂದರ್ಭದಲ್ಲಿ ನನ್ನ ಕೈಗಳು ಮತ್ತೆ ಈ ಪುಸ್ತಕವನ್ನು ಅಪ್ರಜ್ಞಾಪೂರ್ವಕವಾಗಿ ಕೈಗೆಟುಕಿಸಿಕೊಂಡವು. ಅದರಲ್ಲಿದ್ದ ಅನೇಕ ಚಿಂತಕರ, ಬರಹಗಾರರ, ರಾಜಕಾರಣಿಗಳ, ತತ್ತ್ವಶಾಸ್ತ್ರಜ್ಞರ, ವಿಜ್ಞಾನಿಗಳ, ಕಲಾವಿದರ ಕೊನೆಯ ಮಾತು ಮತ್ತು ಕೊನೆಯ ಕ್ಷಣಗಳ ಬಗ್ಗೆ ಓದುತ್ತ ನನ್ನ ಮನಸ್ಸು ಸುಳಿದಾಡಿದ್ದು ಇಬ್ಬರ ಮಾತುಗಳ ಸುತ್ತ-ಕ್ರಿ.ಪೂ.399ರಲ್ಲಿ ತೀರಿಕೊಂಡ ತತ್ತ್ವಜ್ಞಾನಿ ಸಾಕ್ರೆಟೀಸ್ ಮತ್ತು 18ನೇ ಶತಮಾನದ ಇಟಲಿಯ ಬರಹಗಾರ ಮತ್ತು ವಿಲಾಸಿ ಪುರುಷ ಜಾಕಾಮೊ ಕಾಸನೊವ.
ಸಾಕ್ರೆಟೀಸ್ ವಿಷವನ್ನು ಗಟಗಟನೆ ಸೇವಿಸಿ, ನಂಜು ಪಾದದಿಂದ ಏರುತ್ತಾ ತಲೆಯ ಮುಟ್ಟುವ ಮುನ್ನ ತನ್ನ ಸ್ನೇಹಿತ ಕ್ರಿಟೋಗೆ ಹೇಳುತ್ತಾನೆ: ”ಕ್ರೀಟೋ, ಆಸ್‌ಕ್ಲೇಪಿಯೋಸ್‌ಗೆ ಒಂದು ಹುಂಜ ಬಲಿ ಕೊಡಬೇಕು, ಕೊಡುವಂತೆ ನೋಡಿಕೋ, ಮರೆಯಬೇಡ.” ಆಸ್‌ಕ್ಲೇಪಿಯೋಸ್ ರೋಗರುಜಿನಗಳಿಂದ ಮನುಷ್ಯರನ್ನು ಗುಣಪಡಿಸುವ ಗ್ರೀಕ್ ದೇವತೆ. ‘ಬದುಕಿನಿಂದ ತನ್ನನ್ನು ಗುಣಪಡಿಸಿದಕ್ಕಾಗಿ’ ಧನ್ಯವಾದ ಅರ್ಪಿಸುವ ಸಾಕ್ರೆಟೀಸ್ ಹುಂಜ ಬಲಿ ಕೊಡಿ ಎನ್ನುತ್ತಾನೆ. ಮತ್ತೊಂದೆಡೆ, ತನ್ನ ಜೀವಮಾನದಲ್ಲಿ ಇನ್ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಪ್ರೇಮದಾಟದಲ್ಲಿ ಸಿಲುಕಿಸಿದ್ದೆ ಎಂದು ಆತ್ಮಚರಿತ್ರೆಯಲ್ಲಿ ಬಡಾಯಿ ಕೊಚ್ಚಿ ಲೆಕ್ಕ ಒಪ್ಪಿಸುವ ಕಾಸನೋವ, ತನ್ನ ಕಡೆ ಕ್ಷಣದಲ್ಲಿ ಹೀಗೆ ಪಿಸುಗುಟ್ಟುತ್ತಾನೆ: ”ನಾನು ತತ್ತ್ವಜ್ಞಾನಿಯ ಹಾಗೆ ಬದುಕಿದೆ. ಆದರೆ ಒಬ್ಬ ಕ್ರಿಶ್ಚಿಯನ್ ಆಗಿ ಸಾಯುತ್ತಿದ್ದೇನೆ,” ಎಂದು.
ಈ ಇಬ್ಬರ ಕೊನೆಯ ಮಾತಿನ ಮರ್ಮವನ್ನು ವಿಶ್ಲೇಷಿಸಲು ನಮಗೆ ನೂರಾರು ಪುಟಗಳು ಬೇಕಾಗಬಹುದು. ಆದರೆ ಸರಳೀಕರಿಸಿ, ನಮ್ಮ ಇಲ್ಲಿನ ಅಗತ್ಯತೆಗೆ ಪೋಣಿಸಿ ಹೇಳುವುದಾದರೆ, ಅವರ ಮಾತುಗಳಲ್ಲಿ ಅವರ ಬದುಕು ಮತ್ತು ಸಾವಿನ ಗಳಿಗೆಯ ನಡುವೆ ಒಂದು ರೀತಿಯ ವೈರುಧ್ಯ, ದ್ವಂದ್ವ, ವಿಪರ್ಯಾಸ, ಹತಾಶೆ, ಪ್ರಾಯಶ್ಚಿತ್ತ ಎಲ್ಲವೂ ಗೋಚರಿಸುತ್ತದೆ. ಚಿಂತಿಸುವ, ಆಲೋಚಿಸುವ, ತನ್ನ ಸುತ್ತಲಿನ ವಾಸ್ತವಕ್ಕೆ ಪ್ರತಿಕ್ರಿಯಿಸುವ ಒಬ್ಬ ವ್ಯಕ್ತಿ ಸದಾ, ಪ್ರತಿ ಅರೆಕ್ಷಣ ಬದಲಾಗುತ್ತಿರುತ್ತಾನೆ. ಈ ಬದಲಾವಣೆ ಸಹಜ, ಪ್ರಕೃತಿ ಧರ್ಮವೂ ಹೌದು. ಆದರೆ, ಆ ಬದಲಾವಣೆಗೂ ಒಂದು ತರ್ಕ, ಒಂದು ಸೂತ್ರವಿರುತ್ತದೆ. ಆ ತರ್ಕ ಮತ್ತು ಸೂತ್ರದ ನಿಷ್ಠೆ (integrity) ಮತ್ತು ವೈಶಾಲ್ಯತೆ (expanse) ಬದಲಾದ ಆ ವ್ಯಕ್ತಿಯ ಎತ್ತರವನ್ನು ನಿರ್ಧರಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ. ಗಾಂಧಿ ಸದಾ ವೈರುಧ್ಯ ಮತ್ತು ವಿರೋಧಾಭಾಸಗಳಲ್ಲಿ ಬದುಕಿದ ವ್ಯಕ್ತಿ. ಆದರೆ, ಅವರ ಚಡಪಡಿಕೆಯ ಹಿಂದೆ ಇರುವ ನಿಷ್ಠೆ ಮತ್ತು ಆತ್ಮಪರೀಕ್ಷಣಾ ಗುಣವನ್ನು ನಾವು ಎಂದೂ ಅನುಮಾನಿಸುವ ಹಾಗಿರಲಿಲ್ಲ. ಲಂಕೇಶರು ಬುದ್ಧನನ್ನು, ‘ದೇವರಲ್ಲ, ದೊಡ್ಡ ಮನುಷ್ಯ’ ಎಂದು ಅರ್ಥೈಸುವುದರ ಹಿಂದೆ ಬುದ್ಧನ ಬದುಕಿನ ಗೊಂದಲಗಳು, ಸಹಜ ಹಾಗೂ ಅಸಹಜ ಬದಲಾವಣೆಗಳ ಹಿಂದಿದ್ದ ತರ್ಕ ಮತ್ತು ಸೂತ್ರದ ಅರಿವು ಹಾಗೂ ಸಹಾನುಭೂತಿ ಇತ್ತು. ನಾವು ಸಾಕ್ರೆಟೀಸ್ ಮತ್ತು ಕಾಸನೋವಗೂ ಈ ಸಹಾನುಭೂತಿಯನ್ನು ವಿಸ್ತರಿಸಬಹುದು. ಆದರೆ, ನಮ್ಮ ನಡುವೆ ಸಾರ್ವಜನಿಕ ಬದುಕು ಬದುಕಿದ ಅನೇಕರ ಬಗ್ಗೆ ಈ ರೀತಿಯ ಸಹಾನುಭೂತಿ ತೋರುವುದು ಬಹಳ ಕಷ್ಟ. ತತ್ತ್ವಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ಅವರು ತರ್ಕದ ಮಿತಿಯನ್ನು ಸೂಚಿಸುತ್ತಿರುತ್ತಾರೆ. ಸಮಾಜ ಮತ್ತು ಸಮುದಾಯದ ಆಯಾಮವಿರುವ ಎಲ್ಲವೂ ತರ್ಕದ ಹಿಡಿತಕ್ಕೆ ಸಿಗುತ್ತದೆ. ಏಕೆಂದರೆ ಸಮಾಜ, ಸಮುದಾಯ ನಾವೇ ಜತನದಿಂದ ಕಟ್ಟಿಕೊಂಡ ಏರ್ಪಾಟು. ಆದರೆ ಸ್ವಾರ್ಥ, ವ್ಯಕ್ತಿಗತ ನೆಲೆಯಲ್ಲಿ ನಡೆಯುವ ಎಲ್ಲವೂ ತರ್ಕಬಾಹಿರವಾಗಿರುತ್ತದೆ.

ಮೇಲೆ ಲಂಕೇಶರ ಹೆಸರು ಪ್ರಸ್ತಾಪವಾಯಿತು. ಅವರ ಸಾವಿಗೆ ಕಿ.ರಂ. ನಾಗರಾಜ ಮತ್ತು ನನ್ನ ತಂದೆಯವರೊಂದಿಗೆ ಹೋಗಿದ್ದು, ಅವರ ತೋಟದಲ್ಲಿ ಜನಸಾಗರದ ನಡುವೆ ಮೃತದೇಹವನ್ನು (ಮಾವಿನ?) ಮರದಡಿಯಲ್ಲಿ ಮೆಲ್ಲಗೆ ಇಳಿಸಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ. ಆಗ ನಾನು ಬಿಡಲು ಸಜ್ಜಾಗುತ್ತಿದ್ದ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಲಂಕೇಶರಿಗೆ ಒಂದು ನುಡಿನಮನ ಬರೆದೆ. ಅವರನ್ನು ನೆಲದ ಗರ್ಭಕ್ಕೆ ಇಳಿಸುವ ಕ್ರಿಯೆಯನ್ನು ನಾನು ಆಡೆನ್ ಕವಿಯು, ಏಟ್ಸ್ ಮಹಾಕವಿ ತೀರಿಕೊಂಡಾಗ ಬರೆದ ಸಾಲುಗಳ ಮೂಲಕ ವಿವರಿಸಲು ಪ್ರಯತ್ನಿಸಿದ್ದೆ: “You were silly like us;/ Your gift survived it all;/ The Parish of rich women,/ Physical decay…/ Yourself; mad Ireland hurt you/ Into Poetry…/ Earth, receive an honoured guest…/ With your unconstraining voice/ Still presuade us to rejoice…”. ಲಂಕೇಶರ ಮೃತದೇಹವನ್ನು ಇರಿಸಿದ್ದ ಸ್ಥಳದಲ್ಲಿ ಒಬ್ಬ ವಯಸ್ಸಾದ ಹೆಂಗಸು ‘ನನ್ನ ಹುಲಿಯಾ, ನನ್ನ ಹುಲಿಯಾ’ ಎಂದು ಬಿಕ್ಕಳಿಸಿ ಅಳುತ್ತಿದ್ದುದನ್ನೂ ಆ ಲೇಖನದಲ್ಲಿ ದಾಖಲಿಸಿದ್ದೆ. ಅಂದಿನ ಎಸ್.ಎಂ. ಕೃಷ್ಣ ಸರಕಾರ ಲಂಕೇಶರಿಗೆ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಬೇಕು ಎಂದು ಘೋಷಿಸಲಿಲ್ಲ. ಇದು ನಮ್ಮಲ್ಲಿ ಅನೇಕರಿಗೆ ಸಮಾಧಾನ ತಂದಿತ್ತು. ”ಯಾರನ್ನೂ ಓಲೈಸಲು ಮುಂದಾಗದೆ, ಎಲ್ಲರನ್ನೂ ಎದುರು ಹಾಕಿಕೊಂಡು, ಅಧಿಕಾರಸ್ಥರ ಆತ್ಮಸಾಕ್ಷಿಯನ್ನು ಕುಟುಕುವ ಸಾಮಾನ್ಯ ಜನರ ನಿಯೋಜಿತ ವ್ಯಕ್ತಿಯಾಗಿ ಬದುಕಿದ ಲಂಕೇಶರಿಗೆ ಸರಕಾರಿ ಗೌರವ ಸಂದಿದ್ದರೆ ಅದು ಅವರಿಗೆ ತೋರಿದ ಅಗೌರವವಾಗುತ್ತಿತ್ತು, ಅಪಚಾರವಾಗುತ್ತಿತ್ತು,” ಎಂದು ನನ್ನ ನುಡಿನಮನದಲ್ಲಿ ಬರೆದೆ.
ಡಿಸೆಂಬರ್ 2007ರಲ್ಲಿ ನನ್ನ ತಂದೆಯವರು ತೀರಿಕೊಂಡಾಗ ನಾನು ಏನೂ ಬರೆಯಲಿಲ್ಲ. ಕೆಲವು ವರ್ಷದ ನಂತರ ಮಣಿಪಾಲದ ಮೆಡಿಕಲ್ ಕಾಲೇಜಿನ ಅನಾಟಮಿ ಸಂಗ್ರಹಾಲಯಕ್ಕೆ (anatomy museum) ಭೇಟಿಯಿತ್ತಾಗ ಮಾತ್ರ, ದೇಹದಾನ ಮಾಡಿದ ನನ್ನ ತಂದೆಯ ದೇಹದ ಬಿಡಿ ಭಾಗಗಳನ್ನೂ ಹೀಗೇ ಮತ್ತೊಂದು ಕಡೆ ಪ್ರದರ್ಶನಕ್ಕೆ ಇಟ್ಟಿರಬಹುದೇ ಎಂಬ ವಿಚಾರದ ಸುಳಿಯಲ್ಲಿ ಸಿಕ್ಕಿ ಆಗ ನಾನು ಕೆಲಸ ಮಾಡುತ್ತಿದ್ದ ‘ಔಟ್‌ಲುಕ್’ ಪತ್ರಿಕೆಯಲ್ಲಿ ಒಂದು ಪುಟ್ಟ ಲೇಖನ ಬರೆದೆ. ನನ್ನ ತಂದೆಯವರು ನನ್ನ ಮತ್ತು ನನ್ನ ಸೋದರನಿಗೆ ಬರೆದಿಟ್ಟ ಮರಣಪತ್ರದಲ್ಲಿ ‘ನಾನು ಸತ್ತ ಮೇಲೆ, ನಾನು ತೀರಿಕೊಂಡ ಬಳಿಕ ಹೀಗೆ ಹೀಗೆ ಮಾಡಿ’ ಎಂದು ಹೇಳುವ ಬದಲು, ಸಾವಿನ ಪಲ್ಲಂಗದಲ್ಲಿ ಕೂತು, ಅದರ ಮನೆ ತಲುಪಿದವರಂತೆ ಕರಾರುವಕ್ಕಾಗಿ ಬರೆದಿದ್ದರು: ”ಈ ಜೀವಲೋಕದಲ್ಲಿ ಎಲ್ಲರಂತೆ ನಾನೂ ಪ್ರಕೃತಿಯಿಂದ ಬೆಳೆದವನು, ಪ್ರಕೃತಿಯಲ್ಲಿ ಲೀನವಾಗಿದ್ದೇನೆ. ನನಗೆ ಪ್ರಕೃತಿಧರ್ಮ ಪ್ರಿಯವಾದದ್ದು. ಮಾನವ ನಿರ್ಮಿತ, ಕಾಲಕಾಲಕ್ಕೆ ಬದಲಾಗುವ ಯಾವುದೇ ಧರ್ಮಗಳ ಬಗ್ಗೆ ನನಗೆ ನಂಬಿಕೆಯಿಲ್ಲ. ಅವುಗಳ ಅರ್ಥವಿಲ್ಲದ ಆಚರಣೆಗಳ ಬಗ್ಗೆಯೂ ನಂಬಿಕೆಯಿಲ್ಲ. ಮನುಷ್ಯ ಮಾನ ಮರ್ಯಾದೆಯಿಂದ, ನೆಮ್ಮದಿಯಿಂದ ಬದುಕುವುದಕ್ಕೆ ಮತಧರ್ಮಗಳ ಊರುಗೋಲು ಅವಶ್ಯಕತೆಯಿಲ್ಲ. ನನ್ನ ದೇಹವನ್ನು ಯಾವುದೇ ಮತ ಧರ್ಮದ ಆಚರಣೆಗೆ ಒಳಪಡಿಸಬೇಡಿ.” ಇದನ್ನು ಗೌರವಿಸುವುದು ನನ್ನ ತಮ್ಮ ಮತ್ತು ನನಗೆ ಕಷ್ಟವೆನಿಸಲಿಲ್ಲ. ಆದರೆ ನಮ್ಮ ತಾಯಿ, ದೇವರು-ಧರ್ಮ, ಪೂಜೆ-ಪುನಸ್ಕಾರದಲ್ಲಿ ನಂಬಿಕೆ ಇರಿಸಿದ್ದವರು ಮತ್ತು ನಮ್ಮ ತಂದೆ ಎಂದೂ ಅದಕ್ಕೆ ಅಡ್ಡಿಪಡಿಸಿರಲಿಲ್ಲ. ಹೀಗಾಗಿ ನಮಗೆ ಅವರು ದೇಹದಾನಕ್ಕೆ ಒಪ್ಪುತ್ತಾರೆಯೇ ಎಂಬ ಅನುಮಾನವಿತ್ತು. ಆದರೆ, ನಮ್ಮ ತಾಯಿ ನಮ್ಮ ತಂದೆಯವರ ಮಾತಿಗೆ ಅನುಗುಣವಾಗಿ ನಡೆಯುವಂತೆ ಸೂಚಿಸಿದ್ದರು. ನಮ್ಮ ತಂದೆಯವರ ಸಾವಿಗೆ ಒಂದು finality (ಅಂತಿಮತೆ, ಮುಕ್ತಾಯ) ಸಿಗಲಿಲ್ಲ ಎಂದು ಅವರು ಕೊರಗಿ, ಅನೇಕ ತಿಂಗಳು, ವರ್ಷ ಒದ್ದಾಡಿ ನಿದ್ದೆ ಕಳೆದುಕೊಂಡದ್ದು ಬೇರೆ ವಿಚಾರ. ಅಂದು ಸಾವಿನ ಮನೆಗೆ ಬಂದಿದ್ದ ಅನಂತಮೂರ್ತಿ ಅವರು, ”ದೇಹದಾನಕ್ಕೆ ನೀನು ಒಪ್ಪಿದ್ದು ದೊಡ್ಡ ವಿಚಾರವಲ್ಲ, ನಿಮ್ಮ ತಾಯಿ ಒಪ್ಪಿದ್ದು ದೊಡ್ಡದು,” ಎಂದು ಹೇಳಿ ಹೋಗಿದ್ದರು. ಅದು ಸರಿಯಾದ ಮಾತಾಗಿತ್ತು ಎಂದು ನಾನು ಒಪ್ಪುತ್ತೇನೆ.
ಅನಂತಮೂರ್ತಿ ಅವರ ಅಂತ್ಯಸಂಸ್ಕಾರದ ಬಗೆಗೆ ಹಲವು ಪ್ರಶ್ನೆಗಳು ನಮ್ಮ ನಡುವೆ ಹರಿದಾಡುತ್ತಿವೆ. ಧಾರ್ಮಿಕ ವಿಧಿವಿದಾನಗಳಲ್ಲಿ ಅನಂತಮೂರ್ತಿ ಅವರಿಗೆ ನಂಬಿಕೆ ಇದ್ದಿದ್ದರೆ ಮತ್ತು ಅವರ ಮನೆಯವರಿಗೆ ಅದನ್ನು ಪಾಲಿಸುವಂತೆ ಅವರು ಸೂಚಿಸಿದ್ದರೆ ನನಗೆ ಅದರಲ್ಲಿ ತಪ್ಪು ಕಾಣುವುದಿಲ್ಲ. ಅದು ಅವರವರ ನಂಬಿಕೆಯ ವಿಚಾರ. ಒಬ್ಬ ವ್ಯಕ್ತಿಗೆ ತನ್ನ ‘ಮುಕ್ತಿ’ಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ, ಇರಬೇಕು. ಅವರು ಬದುಕಿದ್ದಾಗ ಮಾತನಾಡಿದ್ದು, ಬರೆದದ್ದು ಗಮನಿಸಿದರೆ ಅವರು ‘ಬೇರೆಯದೇ ತೆರನಾದ ವ್ಯಕ್ತಿ’ ಎಂದು ಭಾಸವಾಗುತ್ತಿತ್ತಲ್ಲ ಎಂದು ಯಾರಾದರೂ ವಾದಿಸಿದರೆ, ಅದಕ್ಕೆ ನನ್ನ ಸರಳ ಉತ್ತರ ಇಷ್ಟೆ: ಅದು ಅವರ ಬಕುತರ ಕರ್ಮ, ಬಹುಶಃ ಅವರೆಲ್ಲರಿಗೂ ಗ್ರಹಿಕೆಯ ಸಮಸ್ಯೆ ಇದ್ದಿರಬಹುದು.
ಈ ಸಂದರ್ಭದಲ್ಲಿ ನಾವು ಕೇಳಬೇಕಾದ ಪ್ರಶ್ನೆ ಅನಂತಮೂರ್ತಿಯವರ ನಂಬಿಕೆಗೆ ಸಂಬಂಧಿಸಿದ್ದಲ್ಲ, ಸರಕಾರದ ನಂಬಿಕೆ, ನಡವಳಿಕೆಗೆ ಸಂಬಂಧಪಟ್ಟಿದ್ದಾಗಿರಬೇಕು. ನಮ್ಮ ಘನ ಸರಕಾರ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಒಬ್ಬ ದೊಡ್ಡ ಬರಹಗಾರನಿಗೆ ಗೌರವ ಸೂಚಿಸುವುದು ತಪ್ಪಲ್ಲ, ಬದಲಿಗೆ ಅದರ ಕರ್ತವ್ಯ. ಆದರೆ, ಈ ರೀತಿ ಗೌರವ ಸೂಚಿಸುವುದಕ್ಕೆ ಸ್ಪಷ್ಟ ನಿಯಮಾವಳಿ ಇರುತ್ತದೆ ಎಂದು ನಾನು ನಂಬಿದ್ದೇನೆ. ಆ ನಿಯಮಾವಳಿ ತೀರಿಕೊಂಡವರ ಧರ್ಮ, ಜಾತಿಗೆ ಅನುಗುಣವಾಗಿ, ಸಾರ್ವಜನಿಕ ಸ್ಥಳವೊಂದರಲ್ಲಿ, ಸರಕಾರಿ ವೆಚ್ಚದಲ್ಲಿ ಅಂತ್ಯಸಂಸ್ಕಾರ ನಡೆಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಕಪ್ಪು ಚೌಕದ ಗೆಜೆಟ್ ವಾರ್ತೆ ಹೊರಡಿಸುವುದು, ಸಾರ್ವಜನಿಕ ಕಾರ್ಯಕ್ರಮ ರದ್ದು ಮಾಡುವುದು, ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸುವುದು, ತ್ರಿವರ್ಣ ಧ್ವಜ ಹೊದಿಸುವುದು, ಪೊಲೀಸರು ಸಲಾಮಿನ ಗುಂಡು ಸಿಡಿಸುವುದು, ಇವೆಲ್ಲ ಸರಿ. ಆದರೆ, ಇಷ್ಟು ಗಂಧದ ತುಂಡು ಒದಗಿಸಬೇಕು, ಇಷ್ಟು ಕಿಲೋ ತುಪ್ಪ ಸುರಿಯಬೇಕು, ಇಷ್ಟು ಜನ ಅರ್ಚಕರು ಹಾಜರಿರಬೇಕು ಎಂದು ಸರಕಾರಿ ನಿಯಮಾವಳಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಅದು ಹಾಗೆ ಹೇಳಿದರೆ, ನಮ್ಮ ಸಂವಿಧಾನದ ಮೂಲ ಉದ್ದೇಶಕ್ಕೆ ಚ್ಯುತಿ ತಂದ ಹಾಗೆ. ನಮ್ಮ ಸಂವಿಧಾನದ ಮುನ್ನುಡಿಯಲ್ಲಿ ‘secular’ (ಜ್ಯಾತ್ಯತೀತ) ಎಂಬ ಪದ ಇದೆ. ಅದರ ಮೂಲ ಅರ್ಥ, ಸರಕಾರ ಮತ್ತು ಧರ್ಮದ ನಡುವೆ ಒಂದು ದೊಡ್ಡ ಗೋಡೆ ಇರಬೇಕು ಎಂದು. ಅದು ಧರ್ಮಸಹಿಷ್ಣುತೆಯ ವಿಚಾರ. ಎಲ್ಲ ಧರ್ಮದ ಆಚರಣೆಗಳನ್ನು ತಾನು ನಡೆಸುವ ವ್ಯವಹಾರ, ಕಾರ್ಯಕ್ರಮಗಳಲ್ಲಿ ಸರಕಾರ ಅಳವಡಿಸಿಕೊಂಡು, ತನ್ನ ವೆಚ್ಚದಲ್ಲಿ ನಡೆಸಬೇಕು ಎಂಬುದು ಅದರ ಅರ್ಥವಲ್ಲ. ಒಂದು ಪಕ್ಷ ಸಂವಿಧಾನ ಹಾಗೆ ಹೇಳಿದ್ದರೆ, ಅನೇಕ ಜಾತಿ, ಧರ್ಮಗಳಿರುವ ನಮ್ಮ ದೇಶದಲ್ಲಿ ಅರಾಜಕತೆ ಮನೆಮಾಡುತ್ತಿತ್ತು. ಅನಂತಮೂರ್ತಿ ಅವರ ಅಂತ್ಯಸಂಸ್ಕಾರದ ಧಾರ್ಮಿಕ ವಿಧಿವಿಧಾನಗಳನ್ನು ತನ್ನ ವೆಚ್ಚದಲ್ಲೇ ಸರಕಾರ ನೆರವೇರಿಸಿದ್ದರೆ, ನನ್ನ ತಿಳಿವಳಿಕೆಯ ಮಿತಿಯಲ್ಲಿ ಅದು ತಪ್ಪು. ಸಾರ್ವಜನಿಕ ಹಣ ವ್ಯಯವಾಗಿದ್ದರೆ ಅದಕ್ಕೆ ಸರಕಾರ ಮೊದಲು ಲೆಕ್ಕ ಕೊಡಬೇಕು. ಮದುವೆಗಳನ್ನು ದೊಡ್ಡದಾಗಿ ಮಾಡುವುದರ ವಿರುದ್ಧ ಕಾನೂನು ತರುತ್ತೇವೆ ಎಂದು ಹೇಳುವ ಈ ಸರಕಾರ ಅದೇ ಆದರ್ಶವನ್ನು ಸಾವಿಗೂ ಅನ್ವಯಿಸಬೇಕು. ಸಾವಿನ ವಿಜೃಂಭಣೆ ಆದರ್ಶವಾಗಲು ಹೇಗೆ ತಾನೇ ಸಾಧ್ಯ?
(ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ)

‍ಲೇಖಕರು G

September 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

8 ಪ್ರತಿಕ್ರಿಯೆಗಳು

  1. B.Harishchandra Bhat

    I fully agree with you Sugata. Lankesh, Nanjundaswamy and URA and your father lived life on principles of their own which they valued very much. URA may not have thought of the luxurious ways of the Government showing respect to him. As I learn , he only wanted not to go into the electric cremation. But certainly not-the pouring of 75 kgs of ghee, 60 tonnes of sandalwood and 16 priests performing the rites !That too, in a place reserved for Kala-grama ! Siddaramaiah looses his sheen he gained by initiating a discussion on religious superstitions.

    ಪ್ರತಿಕ್ರಿಯೆ
  2. ಸತ್ಯನಾರಾಯಣ

    ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯಂತ ಅರ್ಥಪೂರ್ಣ ಬರಹ.
    ಸರ್, ತಮ್ಮ ತಂದೆಯವರೊಂದಿಗೆ ಒಂದೆರಡು ಗಂಟೆಗಳ ಕಾಲ ಕಳೆಯುವ ಅವಕಾಶ ನನಗೆ ಸಿಕ್ಕಿತ್ತು. ಮಲ್ಲೇಶ್ವರಂ ಮನೆಗೂ ಬಂದಿದ್ದೆ. ಅವರೊಂದಿಗೆ ಕಳೆದಿದ್ದ ಸಮಯ ನನ್ನ ಪಾಲಿಗೆ ಅತ್ಯಂತ ಅಮೂಲ್ಯವಾದದುದು. ಅವರ ಸರಳತೆ, ಸಜ್ಜನಿಕೆ ಎಲ್ಲವೂ ಮನನೀಯ…
    ನಿಮ್ಮ ತಾಯಿಯವರಿಗೆ ನನ್ನ ನಮಸ್ಕಾರಗಳು.

    ಪ್ರತಿಕ್ರಿಯೆ
  3. K Laxminarasimha

    URA ಅವರ ಅಂತ್ಯಕ್ರಿಯೆ ನಡೆದ ರೀತಿಯ ಬಗ್ಗೆ, ಅತೀ ಭಾವನಾತ್ಮಕ ಎನ್ನಿಸುವಂತಹ ಪ್ರತಿಕ್ರಿಯೆ/ಬರಹ ಗಳೇ ಎಲ್ಲೆಡೆ ಕಾಣಿಸುತ್ತಿರುವಾಗ; ಅತ್ಯಂತ ಸಮತೋಲನ ಕಾಯ್ದುಕೊಂಡ ಬರಹ ನಿಮ್ಮದು, ಸುಗತ ಅವರೆ. ಧನ್ಯವಾದಗಳು- ಲಕ್ಷ್ಮೀನರಸಿಂಹ

    ಪ್ರತಿಕ್ರಿಯೆ
  4. rameswari varma

    nimma baraha mattu visleshane
    nijavaagiyoo arthapoorna vaagide.dhanyavaadagalu

    ಪ್ರತಿಕ್ರಿಯೆ
  5. G Narayana

    A renowned and popular (?) author like URA is perceived by his readers and followers based on his writings and expressed views. What happened after his death during ceremony is wholly contrary to these perceptions. Our Secular (?) government did not come out unscathed in this.

    ಪ್ರತಿಕ್ರಿಯೆ
  6. ಕೆ ಎಸ್ ನವೀನ್

    ನಮಸ್ತೆ,
    ಡಾ ಟಿ ವಿ ವೆಂಕಟಾಚಲ ಶಾಸ್ತ್ರಿಗಳ “ಶಾಸ್ತ್ರೀಯ” ಸಂಪುಟ ಒಂಬತ್ತರಲ್ಲಿ ಸಾವಿನ ಕುರಿತ ಒಂದು ಅಧ್ಯಾಯವಿದೆ, ನೋಡಿರಿ. ಕೆ ಎಸ್ ನವೀನ್

    ಪ್ರತಿಕ್ರಿಯೆ
  7. Mailar Sutagatti

    ಸರ್ ನಿಮ್ಮ ಈ ಬರಹವನ್ನು ನಾನು ಪತ್ರಿಕೆಯಲ್ಲಿ ಓದಿದ್ದೆ. ನಿಮಗೆ ಪತ್ರವನ್ನು ಸಹ ಬರೆದಿದ್ದೆ. ಅದು ತಲಿಪಿತೊ,ಇಲ್ಲವೋ ಗೊತ್ತಿಲ್ಲ. ಈ ಬರಹ ತುಂಬ ಇಷ್ಟವಾಯಿತು ಸರ್.
    ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: