’ಅವರವರ ಭಾವಕ್ಕೆ ಒಲಿಯುವ ಸಮೀಕ್ಷೆಗಳು…’ – ಸುಗತ ಶ್ರೀನಿವಾಸರಾಜು ಬರೀತಾರೆ

ಸುಗತ ಶ್ರೀನಿವಾಸರಾಜು

ಇನ್ನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಹಲವು ಕಾರಣಗಳಿಗೆ ಈ ಚುನಾವಣೆ ಮಹತ್ವ ವಾದದ್ದು ಎಂದು ಚಿಂತಕರು, ವೀಕ್ಷಕರು, ಪತ್ರಕರ್ತರು ನಮಗೆ ಮನ ದಟ್ಟು ಮಾಡಿಕೊಟ್ಟಿದ್ದಾರೆ: ಅಧ್ಯಕ್ಷೀಯ ಮಾದರಿಯ ಲೇಪನ ಪಡೆದ, ಅಮೆರಿಕೀಕರಣಗೊಂಡ ಮೊದಲ ಚುನಾವಣೆ ಇದು ಎಂದು ಹೇಳಲಾ ಗಿದೆ; ಸರಾಸರಿ ಮತದಾನ ಸಂಖ್ಯೆ ಎಲ್ಲ ಕಾಲದ ದಾಖಲೆ ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ; ಮಧ್ಯಮ ವರ್ಗಗಳ ಉತ್ಸಾಹವನ್ನು, ಭಾಗೀದಾರಿಕೆಯನ್ನು ಈ ಚುನಾವಣೆ ಹೆಚ್ಚಿಸಿದೆ ಎಂದು ವಿಶ್ಲೇಷಿಸ ಲಾಗಿದೆ; ನೇತಾರರ ಖಾಸಗಿ ವಿಚಾರಗಳನ್ನು, ಊಹಾಪೋಹ ಗಳನ್ನು ನಮ್ಮ ನಡುವೆ ಸ್ಫೋಟಗೊಂಡಿರುವ ಸಂವಹನ ಮತ್ತು ತಂತ್ರಜ್ಞಾನ ಸಲಕರಣೆಗಳನ್ನು ಬಳಸಿ ದೇಶದುದ್ದಗಲಕ್ಕೂ ಎರಚಾಡಿ, ಸತ್ಯ ಮತ್ತು ಮಿಥ್ಯಗಳ ನಡುವಿನ ಅಂತರವನ್ನು ದೊಡ್ಡ ಪ್ರಮಾಣದಲ್ಲಿ ಕುಸಿಯುವ ಹಾಗೆ ಮಾಡಿದ ಕೀರ್ತಿ ಈ ಚುನಾವಣೆಗೆ ಸಲ್ಲುತ್ತದೆ ಎಂದೂ ಅಭಿ ಪ್ರಾಯವಿದೆೆ.
ಇದರ ಜೊತೆಗೆ, ಮಾಧ್ಯಮಗಳ ಸ್ವಾತಂತ್ರ್ಯ ವನ್ನು ಪರೋಕ್ಷ ವಾಗಿ ಕುಂಠಿತಗೊಳಿಸಿದ, ಅವುಗಳ ಗ್ರಹಿಕೆ ಮತ್ತು ನಿಲುವನ್ನು ಮುಕ್ತ ವಾಗಿ, ನಿರ್ಭಿಡೆಯಿಂದ ಹೊರಗೆಡವಲು ಕೊಂಚ ಇಕ್ಕಟ್ಟು ಸಷ್ಟಿಸಿದ ಚುನಾವಣೆ ಇದಾಗಿತ್ತು ಎಂದೂ ಹೇಳಬಹುದು. ಸಮಚಿತ್ತದಿಂದಿ ದ್ದರೆ, ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರ ಆ ಪಕ್ಷದ ಪ್ರಚಾರಕ್ಕಿಂತಲೂ ಹೆಚ್ಚಿನ ಅಬ್ಬರ ಪತ್ರಿಕೆಯೊಂದರ ಪುಟಗಳಲ್ಲಿ ನಡೆಸದಿ ದ್ದರೆ ಅದು ಮಹಾ ಪ ರಾಧ, ಅದು ಭಾರತದ ಹಿತಾಸಕ್ತಿಗೇ ಮುಳುವು ಎಂಬ ದಿಗಿಲಿನ ವಾತಾವರಣವನ್ನು ಪ್ರಜ್ಞಾಪೂರ್ವಕವಾಗಿ ಬಿತ್ತಿ, ಬೆಳೆಸಿದ ಚುನಾವಣೆ ಇದಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಇದು, ನಮ್ಮ ದೇಶದ ಪ್ರಜಾಪ್ರಭುತ್ವವಾದಿ ಬುನಾದಿಯನ್ನು ಮತ್ತೆ ಮತ್ತೆ ತಡಕಿ ನೋಡುವ ಹಾಗೆ ಮಾಡಿತು. ಈ ಪರೋಕ್ಷ ಒತ್ತಡ ಬರೀ ಮಾಧ್ಯಮದ ಮೇಲೆ ಮಾತ್ರವಲ್ಲ, ಸಂವಿಧಾನದ ಹಲವು ಸಂಸ್ಥೆಗಳ ಮೇಲೂ, ಮುಖ್ಯ ವಾಗಿ ಚುನಾವಣಾ ಆಯೋಗದ ಮೇಲೆಯೂ ಇತ್ತು ಎಂಬುದು ಸ್ಪಷ್ಟ.
ಈಗಾಗಲೇ ಪ್ರಕಟಗೊಂಡಿರುವ ಚುನಾವಣಾ ಸಮೀಕ್ಷೆಗಳು ಈ ಬಾರಿ ಬಹುಮತ ಯಾರಿಗೆ ಎಂಬುದನ್ನು ತಮ್ಮದೇ ಆದ ನಿಖರತೆಯಿಂದ ಸಾರಿ ಸಾರಿ ಹೇಳಿವೆ. ಮೇ 16ರಂದು ಹೊರಬೀಳಲಿರುವ ನಿಜ ಫಲಿ ತಾಂಶ ಕೇವಲ ಔಪಚಾರಿಕ ಮಾತ್ರ ಎಂಬ ಅಭಿಪ್ರಾಯವನ್ನು ಮಾಧ್ಯಮ ಗಳು ಸಷ್ಟಿಸಿವೆ. ಇದು ಸರಿಯಾದರೆ ಸಂತೋಷ. ಗೆದ್ದವರು ಗದ್ದುಗೆ ಹಿಡಿ ಯಲಿ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಒಪ್ಪಲೇ ಬೇಕು. ಆದರೆ, 2004ರಲ್ಲಿ ಮತ್ತು 2009ರಲ್ಲಿ ಆದಂತೆ ಸಮೀಕ್ಷೆಗಳು ಹುಸಿಯಾ ದರೆ, ಮಾಧ್ಯಮಗಳ ವಿಶ್ವಾ ಸಾರ್ಹತೆ ಮತ್ತಷ್ಟು ಕುಸಿಯುವುದರಲ್ಲಿ ಅನುಮಾನ ಬೇಡ.
ಅಭಿಪ್ರಾಯ ರೂಪಿಸುವ ಸಲಕರಣೆಯಾಗಿ ಅಥವಾ ಮತದಾರರ ಮುಂದೆ ಆಡಿಸುವ ಅಂಕಿಗಳ ಗಿಲಕಿಯಾಗಿ ಈಗ ಕಾಣುತ್ತಿರುವ ಚುನಾ ವಣಾ ಸಮೀಕ್ಷೆಗಳು, 1960ರಲ್ಲಿ, ಭಾರತದಲ್ಲಿ, ಸೆಫಾಲಜಿ (ಛಿಟ್ಝಟಜ) ಎಂಬ ಹೆಸರಿನಲ್ಲಿ ಹುಟ್ಟು ಪಡೆದದ್ದು ಮತದಾರರ ಚಿಂತನಾಕ್ರಮ, ಮನಃಸ್ಥಿತಿ, ಆಯ್ಕೆಗಳು; ಸಮುದಾಯಗಳ ಜಾತಿ- ಪಂಗಡಗಳ ಮತ ಆಯ್ಕೆಯನ್ನು ಅರ್ಥಮಾಡಿಕೊಳ್ಳುವ, ಅರೆ ಸಮಾಜ ಶಾಸ್ತ್ರ, ಅರೆ ಮನಃಶಾಸ್ತ್ರ, ಅರೆ ಸಂಖ್ಯಾಶಾಸ್ತ್ರಗಳನ್ನು ಒಳಗೊಂಡ ಜ್ಞಾನ ಶಾಖೆ ಯಾಗಿ. ಸೋಜಿಗವೆಂದರೆ, ಈಗ ಅದು ಜ್ಯೋತಿಷ್ಯಶಾಸ್ತ್ರಕ್ಕೆ ಹತ್ತಿರ ವೇನೋ ಎನ್ನಿಸುವಂತೆ ಆಗಿಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಅವುಗಳ ಅವೈಜ್ಞಾನಿಕ ವಿಸ್ತರಣೆ.

ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ನಡೆಸುವ ಚುನಾವಣಾ ಸಮೀಕ್ಷೆ ಗಳು ನಾಲ್ಕು ಅಂಶಗಳನ್ನು ಬಹುಮುಖ್ಯ ಎಂದು ಪರಿಗಣಿಸು ತ್ತವೆ. ಮೊದಲನೆಯದು, ಸಮೀಕ್ಷೆಗಾಗಿ ಆಯ್ಕೆ ಮಾಡಿಕೊಳ್ಳುವ ಮಾದರಿಗಳು (ಞಟ್ಝಛಿ, ಅಂದರೆ ಸಂದರ್ಶಿಸುವ ಜನರು) ವಿಶಾಲವೂ, ವೈವಿಧ್ಯ ಮ ಯವೂ ಆಗಿರಬೇಕು. ಮಾಡುವ ಸಮೀಕ್ಷೆಯಲ್ಲಿ ಯಾವ ಮಟ್ಟದ ನಿಖರತೆಯನ್ನು ಅಪೇಕ್ಷಿಸಲಾಗಿದೆ ಎಂಬುದರ ಮೇಲೆ ಒಂದು ಭೂ ಪ್ರ ದೇಶದಲ್ಲಿ ಎಷ್ಟು ಜನರನ್ನು ಸಂದರ್ಶಿಸಬೇಕು ಎಂಬ ನಿರ್ಧಾರಕ್ಕೆ ಬರಲಾ ಗುತ್ತದೆ. ಮಾದರಿಗಳ ಪ್ರಮಾಣವನ್ನು ನಿರ್ಧರಿಸಲು ಸಂಖ್ಯಾ ಶಾಸ್ತ್ರದ ಸಿದ್ಧ, ಸಂಶೋಧಿತ ತಿಳಿವಳಿಕೆ ಸಹಾಯ ಮಾಡುತ್ತದೆ. ಸಂದರ್ಶಿ ಸುವ ಜನರ ಸಂಖ್ಯೆ ಹೆಚ್ಚಿದಷ್ಟು, ಅಂದರೆ ಮಾದರಿಗಳ ಸಂಖ್ಯೆಯಲ್ಲಿನ ಹೆಚ್ಚಳ, ಸಮೀಕ್ಷೆಯ ಫಲಿತಾಂಶವನ್ನು ಹೆಚ್ಚು ನಿಖರವಾಗಿಸುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಮಾದರಿಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿದರೆ, ತಪ್ಪುಗಳ ಮಟ್ಟವೂ ಹತ್ತು ಪಟ್ಟು ಹೆಚ್ಚುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವಿದೆ. ನಾವು ಆಯ್ಕೆ ಮಾಡಿಕೊಳ್ಳುವ ಮಾದರಿ ಗಳ ಪ್ರಮಾಣ ಮತ್ತು ಸಂದರ್ಶಿಸುವ ಜನರು ಎಷ್ಟರ ಮಟ್ಟಿಗೆ ಪ್ರಾತಿನಿಧಿಕ ಎಂಬುದು ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ.
ಸಮೀಕ್ಷೆಗಳ ವಿಚಾರದಲ್ಲಿ ಪ್ರಮುಖವಾಗುವ ಎರಡನೇ ಅಂಶ ಎಂದರೆ, ನಾವು ಯಾವ ಜನರ, ಸಮುದಾಯದ ಅಥವಾ ಭೂಪ್ರದೇಶ ದಲ್ಲಿ ಸಮೀಕ್ಷೆ ನಡೆಸಲು ಇಚ್ಛಿಸುತ್ತೇವೆಯೋ, ಅಲ್ಲಿರುವ ಎಲ್ಲ ಜನರಿಗೂ ಸಮೀಕ್ಷೆಯಲ್ಲಿ ಭಾಗಿಯಾಗಲು ಸಮಾನ ಅವಕಾಶ ಇದೆಯೇ ಎಂಬುದು. ತಾತ್ವಿಕವಾಗಿ ಸಮೀಕ್ಷೆಗೆ ಒಳಪಡುವ ಜನಸಂಖ್ಯೆ ಯಲ್ಲಿ ಯಾರು ಬೇಕಾದರೂ ಮಾದರಿಯಾಗಿ ಆಯ್ಕೆಗೊಳ್ಳುವ, ಅಂದರೆ, ಎಲ್ಲರೂ ಪಾಲ್ಗೊಳ್ಳುವ ಸಾಧ್ಯತೆ ಇರಬೇಕು. ಇದು ಸಮೀಕ್ಷೆಯ ವಿಸ್ತಾರದ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ.
ಮೂರನೆಯ ಅಂಶ, ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮಾದರಿ- ಮಂದಿಗೆ ಕೇಳುವ ಪ್ರಶ್ನೆಗಳಿಗೆ ಸಂಬಂಧಿಸಿದ್ದು. ಪ್ರಶ್ನೆಗಳು ಸ್ಪಷ್ಟ, ಸರಳ ವಾಗಿರಬೇಕು ಮತ್ತು ನಿರ್ದಿಷ್ಟ (standardised) ಆಗಿರಬೇಕು. ಪ್ರಶ್ನೆಗಳಲ್ಲಿನ ಪದಗಳು ಯಾವುದೇ ಗೊಂದಲಕ್ಕೆ ದಾರಿ ಮಾಡಿಕೊಡ ಬಾರದು ಮತ್ತು ಈ ಪ್ರಶ್ನೆಗಳನ್ನು ಕೇಳುವ ರೀತಿಯಲ್ಲಿ ಒಂದು ಬಗೆಯ ವೈಜ್ಞಾನಿಕ ಏಕತಾನತೆ ಇರಬೇಕು. ಅಂದರೆ, ಪ್ರಶ್ನೆಗಳನ್ನು ಕೇಳುವಾಗ ಭಾವ ಒಂದೇ ಆಗಿರಬೇಕು. ಒಬ್ಬರಿಗೆ ನಗುನಗುತ್ತ, ಮತ್ತೊಬ್ಬರಿಗೆ ಹಸನ್ಮುಖಿಯಾಗಿ, ಇನ್ನೊಬ್ಬರಿಗೆ ಆತುರ ಮತ್ತು ಸಿಟ್ಟಿನಿಂದ ಪ್ರಶ್ನೆಗಳನ್ನು ಕೇಳಲು ಬರುವುದಿಲ್ಲ. ಭಾರತದಲ್ಲಿ ಸಮೀಕ್ಷೆ ನಡೆಸುವ ಸಂಸ್ಥೆಗಳು ಜನರನ್ನು ಖುದ್ದು ಭೇಟಿ ಮಾಡಿ ಪ್ರಶ್ನೆಗಳನ್ನು ಕೇಳುತ್ತವೆ, ಆದ್ದರಿಂದ ಭಾವನೆಗಳ ಏಕತಾನತೆ ಮುಖ್ಯವಾಗುತ್ತದೆ. ಯುರೋಪ್ ಮತ್ತು ಅಮೆರಿಕದಲ್ಲಿ ಸಮೀಕ್ಷೆಗಳು ದೂರವಾಣಿ ಮೂಲಕ ನಡೆಯುತ್ತವೆ. ಕೊಂಚ ಹೆಚ್ಚಿನ ಮಟ್ಟಿಗೆ ಇದು ಭಾವನೆಗಳಿಗೆ ತಡೆಗೋಡೆ ಕಟ್ಟುತ್ತದೆ.
ನಾಲ್ಕನೇ ಅಂಶ, ಯಾವುದೇ ಪೂರ್ವೋದ್ದೇಶವಿಲ್ಲದೆ ಸಮೀಕ್ಷೆ ನಡೆಸ ಬೇಕೆ ನ್ನುತ್ತದೆ. ಯಾರದೋ ಪರವಾಗಿ ಉತ್ತರ ಪಡೆಯಲು ಅಥವಾ ಯಾವುದೋ ಒಂದು ಪಕ್ಷದ ಪರವಾಗಿ ಚಿಂತಿಸುವಂತೆ ಪ್ರೇರೇಪಿಸುವ ಉದ್ದೇಶವಿಟ್ಟುಕೊಂಡು ಪ್ರಶ್ನೆಗಳನ್ನು ಕೇಳಬಾರದು ಎನ್ನುತ್ತದೆ. ಈ ನಾಲ್ಕೂ ಅಂಶಗಳನ್ನು ಈಚೆಗೆ ನಡೆದ ಸಮೀಕ್ಷೆಗಳು ಎಷ್ಟರಮಟ್ಟಿಗೆ ಅಳ ವಡಿ ಸಿ ಕೊಂಡಿವೆ ಎಂಬುದು ಸಮೀಕ್ಷಾ ಸಂಸ್ಥೆಗಳ ಮತ್ತು ಸಮೀಕ್ಷಾ ವರದಿಗಳನ್ನು ಬಿತ್ತರಿಸಿದ ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆ ಮತ್ತು ಆತ್ಮಸಾಕ್ಷಿಗೆ ಸಂಬಂಧಿಸಿದ ವಿಚಾರ.
ನಾನು ಕೆಲವು ವಾರಗಳ ಕೆಳಗೆ ನಮ್ಮ ದೇಶದ ದೊಡ್ಡ ಸುದ್ದಿವಾಹಿನಿ ಯೊಂದರ ಮುಖ್ಯಸ್ಥರನ್ನು ಊಟಕ್ಕೆ ಭೇಟಿಯಾಗಿದ್ದೆ. ಚುನಾವಣೆಯ ಅದು-ಇದು ಮಾತು, ಲೆಕ್ಕಾಚಾರದ ನಡುವೆ ನಾನು ಅವರ ವಾಹಿನಿ ಯಲ್ಲಿ ಬಿತ್ತರಗೊಂಡ ಸಮೀಕ್ಷೆ ಕುರಿತಂತೆ ಮತ್ತು ಅವರು ಬಿತ್ತರಿಸಿದ ಅಂಕಿ-ಅಂಶಗಳನ್ನು ಪಡೆಯಲು ಎಷ್ಟು ಜನರನ್ನು ಸಂದರ್ಶಿಸಿದ್ದರು ಎಂದು ಕೇಳಿದೆ. ಆಗ ಅವರು, ”ನಮ್ಮದು ಹೆದ್ದಾರಿಗಳ ಸಮೀಕ್ಷೆ. ನಾವು ಒಳದಾರಿಗಳಿಗೆ ಹೋಗಿ ಜನರನ್ನು ಭೇಟಿ ಮಾಡುವುದಿಲ್ಲ. ಹಾಗೆ ಮಾಡಲು ಹಣದ ಅಭಾವದ ಜೊತೆಗೆ ಸಮಯದ ಅಭಾವವೂ ಇರುತ್ತದೆ,” ಎಂದು ಉತ್ತರಿಸಿದರು. ಹೀಗೆ, ಹೆದ್ದಾರಿಗಳಲ್ಲಿ ಓಡಾ ಡುವ ಜನರೊಂದಿಗೆ (ಇಲ್ಲಿ ‘ಹೆದ್ದಾರಿ’ಯನ್ನು ಒಂದು ರೂಪಕವಾಗಿಯೂ ನೋಡಬಹುದು) ಮಾತ್ರ ವ್ಯವಹರಿಸಿ ಹೊರಬೀಳುವ ಅಭಿಪ್ರಾಯ ಮತ್ತು ಅಂಕಿ-ಅಂಶ ಎಷ್ಟರ ಮಟ್ಟಿಗೆ ಸರಿ? ಇದು ಒಟ್ಟು ಜನ ಸಮುದಾಯವನ್ನು ಒಳಗೊಳ್ಳುವ ಪ್ರಕ್ರಿಯೆಗಿಂತ, ಪರೋಕ್ಷವಾಗಿ ಹೊರದಬ್ಬುವ ಕ್ರಿಯೆ ಆಗಿರುವುದಿಲ್ಲವೇ? ನಮ್ಮ ದೇಶದ ವಿಸ್ತೀರ್ಣ ಎಷ್ಟು ಮತ್ತು ನಮ್ಮ ಹೆದ್ದಾರಿಗಳ ವಿಸ್ತೀರ್ಣವೆಷ್ಟು ಎಂಬ ಸರಳ ಗಣಿತ ಈ ಇಡೀ ಸಮೀಕ್ಷೆಯ ಟೊಳ್ಳನ್ನು ಹೊರಗೆಡಹುದಿಲ್ಲವೇ? ಇದಲ್ಲದೆ, ಬರೀ ರಾಷ್ಟ್ರೀಯ ಹೆದ್ದಾರಿಗಳ ಮೇಲೇ ಅವರು ಅಭಿಪ್ರಾಯ ಸಂಗ್ರಹಿಸಿದ್ದರೆ ಅದು ಮತ್ತಷ್ಟು ಸಂಕುಚಿತವಾಗಿರಲು ಸಾಧ್ಯವಲ್ಲವೇ?
”ಭಾರತದಲ್ಲಿ ಈಗಲೂ ಶೇಕಡ 70 ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಅಂಕಿ-ಅಂಶ ಹೀಗಿರುವಾಗ, ನಾವು ನಡೆಸುವ ಚುನಾವಣಾ ಸಮೀಕ್ಷೆ ತನ್ನ ಶೇಕಡ 70ರಷ್ಟು ಸಂದರ್ಶನಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಿ, ಶೇಕಡ 30ರಷ್ಟು ಸಂದರ್ಶನಗಳನ್ನು ಪಟ್ಟಣ ಪ್ರದೇಶ ಗಳಲ್ಲಿ ನಡೆಸಬೇಕು. ಆದರೆ, ಹಾಗಾಗುವುದು ಅನು ಮಾನ,” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಪ್ರವೀಣ್ ರೈ, ಇತ್ತೀಚಿಗೆ ‘ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ತಾವು ಬರೆದ ಲೇಖನ ದಲ್ಲಿ. ಇದಷ್ಟೇ ಅಲ್ಲದೆ, ಭಾರತದ ಸಾಮಾಜಿಕ, ಭಾಷಾ ಮತ್ತು ಸಾಂಸ್ಕತಿಕ ವೈವಿಧ್ಯ, ವರ್ಗ ಮತ್ತು ಜಾತಿ ಭೇದಗಳು ಯಾವುದೇ ಸಮೀಕ್ಷೆಯ ನಿಖರತೆಗೆ ಸವಾಲಾಗ ಬಹುದು. ಪ್ರಮುಖವಾಗಿ ಎರಡೇ ಪಕ್ಷಗಳಿರುವ ದೇಶಗಳಲ್ಲಿ ಸಮೀ ಕ್ಷೆಯ ಫಲಿತಾಂಶ ಅಂತಿಮ ಫಲಿತಾಂಶ ವನ್ನು ತಕ್ಕಮಟ್ಟಿಗೆ ಹೋಲು ವಂತಿ ರ ಬಹುದು. ಆದರೆ, ಭಾರತದಂತಹ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳ ಜೊತೆ ಜೊತೆಗೆ ಇರುವ ಅನೇಕ ಪ್ರಾದೇಶಿಕ ಪಕ್ಷಗಳು ಸಮೀಕ್ಷೆಯ ಕೆಲಸವನ್ನು, ನಿಖರತೆಯನ್ನು ಕಠಿಣಗೊಳಿಸುತ್ತವೆ. ಯಾರು, ಯಾರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಎಷ್ಟೋ ಬಾರಿ ಚುನಾವಣಾ ಫಲಿತಾಂಶ ಹೊರಬಂದ ಮೇಲೂ ಕಂಡು ಹಿಡಿ ಯುವುದು ಕಷ್ಟವಾಗುತ್ತದೆ. ಹಲವು ಸಮೀಕ್ಷೆಗಳಿಂದ ರೂಪಿತ ಗೊಂಡಿ ರುವ ನಮ್ಮ ಸಾಮಾನ್ಯ ಜ್ಞಾನ ಉತ್ತರ ಪ್ರದೇಶದಲ್ಲಿ ಮುಸಲ್ಮಾ ನರು ಬಿಜೆಪಿಗೆ ಮತಹಾಕುವುದಿಲ್ಲ ಎಂದು ಹೇಳುತ್ತದೆ. ಆದರೆ, 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಮುಸಲ್ಮಾನರು ಒಂದೇ ಗುಣಧರ್ಮವುಳ್ಳ, ಏಕರೂಪದ ಸಮುದಾಯ ವಾಗಿ ವ್ಯವಹರಿ ಸು ವುದಿಲ್ಲ ಎಂದು ಇತರೆ ಅಧ್ಯಯನಗಳು ತೋರಿಸಿ ಕೊಟ್ಟಿವೆ. ಅವರಲ್ಲಿ ರುವ ವೈವಿಧ್ಯತೆ ಹಲವು, ಹಾಗಾಗಿ ಇವರಲ್ಲಿ ಯಾರೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂಬುದು ತಪ್ಪು ಮಾಹಿತಿ. ಇದೇ ಉದಾಹರಣೆಯನ್ನು ನಾವು ಎಲ್ಲ ರಾಜ್ಯಗಳಿಗೂ ಅನ್ವಯಿಸಿ ನೋಡಬಹುದು.
ಚುನಾವಣಾ ಸಮೀಕ್ಷೆಗಳಿಗೆ ಸವಾಲೆಸೆಯಬಹುದಾದ ಮತ್ತೊಂದು ಅಂಶವನ್ನು ಪ್ರವೀಣ್ ರೈ ಗುರುತಿಸುತ್ತಾರೆ. ಅದು, ಭಾರತದ ಮತದಾರ ತನ್ನ ಮತದಾನದ ಸತ್ಯವನ್ನು ಸಮೀಕ್ಷೆಗಳಲ್ಲಿ ಬಿಚ್ಚಿಡುವು ದಿಲ್ಲ ಎಂಬುದು. ಸಮಾಜದಲ್ಲಿನ ಜಾತಿ, ಧರ್ಮ, ವರ್ಗ, ಕೋಮು ಏರ್ಪಾಡುಗಳನ್ನು ತನ್ನ ಮತದಾನದ ಮರ್ಮ ಅಲುಗಾಡಿಸಬಹುದು ಎಂದು ಹೆದರಿ ಅವನು ಕೇಳಿದವರಿಗೆ ತಪ್ಪು ಮಾಹಿತಿ ನೀಡುತ್ತಾನೆ. ಉತ್ತರ ಪ್ರದೇಶದಲ್ಲಿ, 2007ರಲ್ಲಿ ನಡೆದ ಹಲವು ಸಮೀಕ್ಷೆಗಳಿಗೆ ಮೇಲ್ಜಾತಿಯವರು ಮಾಯಾವತಿ ಅವರ ದಲಿತ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ನಿಖರವಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ.
ಚುನಾವಣಾ ಸಮೀಕ್ಷೆಗಳೊಂದಿಗೆ ಅಂಟಿಕೊಂಡಿರುವ ಈ ಸಮಸ್ಯೆಗಳನ್ನು ಮತ್ತು ತಪ್ಪು ಅಂಕಿ-ಅಂಶಗಳನ್ನು ಬಿತ್ತರಿಸಿದ ಮುಜುಗರದಿಂದ ತಪ್ಪಿಸಿಕೊಳ್ಳಲು ನನ್ನ ಸಂಪಾದಕರಾಗಿದ್ದ ವಿನೋದ್ ಮೆಹ್ತಾ ಅವರು ‘ಔಟ್‌ಲುಕ್’ ವಾರಪತ್ರಿಕೆಯಲ್ಲಿ 2009ರ ನಂತರ ಸಮೀಕ್ಷೆಗಳನ್ನು ಸಂಪೂರ್ಣ ವಾಗಿ ನಿಷೇಧಿಸಿದ್ದರು. 2002ರ ಗುಜರಾತ್ ಚುನಾವಣೆ ಯಲ್ಲಿ ಮೋದಿ ಗೆಲ್ಲುವುದಿಲ್ಲ ಎಂದು ಸಮೀಕ್ಷೆ ಪ್ರಕಟಿಸಿ ಪತ್ರಿಕೆ ಮುಜುಗರ ಅನುಭವಿಸಿತ್ತು. ಹಾಗೆಯೇ 2004 ಮತ್ತು 2009ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲೂ ಕೈಸುಟ್ಟುಕೊಂಡಿತ್ತು. ‘ಔಟ್‌ಲುಕ್’ ನಲ್ಲಿ ನನ್ನ ಸಹೋದ್ಯೋಗಿ-ಮಿತ್ರರಾಗಿದ್ದ ಅಜಿತ್ ಪಿಳ್ಳೈ (ಇವರು ‘ವಿಕ’ ಅಂಕಣಕಾರರು ಕೂಡ) ತಮ್ಮ ಹೊರಬರಲಿರುವ ಪುಸ್ತಕದಲ್ಲಿ ಸಮೀಕ್ಷೆಗಳ ಬಗ್ಗೆ ಮತ್ತು ಸಮೀಕ್ಷೆ ಮಾಡುವವರ ಬಗ್ಗೆ ಹೀಗೆ ಹೇಳುತ್ತಾರೆ: ”ನಾನು 15 ವರ್ಷಗಳಿಗಿಂತಲೂ ಹೆಚ್ಚು ಕಾಲ ಹಲವು ಸಮೀಕ್ಷಾ ಸಂಸ್ಥೆಗಳೊಂದಿಗೆ ವ್ಯವಹರಿಸಿದ್ದೇನೆ. ಅವರೆಲ್ಲರೂ ಸಂಪಾದಕರ ಸೈದ್ಧಾಂತಿಕ ಒಲವು, ನಿಲುವು ಮತ್ತು ಮನಃಸ್ಥಿತಿಗೆ ತಕ್ಕಂತೆ ಸಮೀಕ್ಷೆಯ ಫಲಿತಾಂಶವನ್ನು ತುಂಬಾ ಜಾಣತನದಿಂದ ಅಣಿಗೊಳಿಸುತ್ತಾರೆ. ನೀವು ಸಮೀಕ್ಷೆ ನಡೆಸುವಾಗ ನಮ್ಮ ವರದಿ ಗಾರ ರೊಬ್ಬರನ್ನು ಕಳಿಸಬಹುದೇ ಎಂದು ನಾನು ಹಲವರನ್ನು ಪೀಡಿಸಿದ್ದೇನೆ. ಆದರೆ ಅವರು ಅದಕ್ಕೆ ಎಂದೂ ಒಪ್ಪಿಲ್ಲ. ಅವರಿಗೆ ಅವರ ವ್ಯವಹಾರದ ಒಳಗುಟ್ಟು ಹೊರಬೀಳಬಹುದು ಎಂಬ ಆತಂಕವಿದ್ದಿರಬಹುದು.”ಇದೆಲ್ಲ ಅರಿತ ಮೇಲೆ ಕಡೆಯದಾಗಿ ಹೇಳುವು ದಾದರೆ, ಸಮೀಕ್ಷೆ ಯೊಂದು ನಿಮ್ಮ ಭಾವಕ್ಕೆ ಒಲಿದರೆ ಒಪ್ಪಿಕೊಳ್ಳಿ, ಇಲ್ಲವಾದರೆ ತಿರಸ್ಕರಿಸಿ.
(ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ)

‍ಲೇಖಕರು G

May 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: