'ನೆಹರು ನಿವೃತ್ತರಾದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ?' – ಸುಗತ ಶ್ರೀನಿವಾಸರಾಜು ಬರೀತಾರೆ

ಸುಗತ ಶ್ರೀನಿವಾಸರಾಜು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಘಾತಕಾರಿ ಸೋಲುಂಡ (monumental defeat) ಕಾಂಗ್ರೆಸ್ ಪಕ್ಷ ತನ್ನ ಕಣ್ಮುಂದೆ, ತನ್ನ ಕಣ್ಮರೆಯಲ್ಲಿ ಹರಿದಾಡುತ್ತಿರುವ ಹಲವು ಸತ್ಯಗಳನ್ನು ಕಂಡುಕೊಳ್ಳಬೇಕಾಗಿದೆ. ಸೋಲು ಇನ್ನೂ ಹೊಸತಾಗಿರುವ, ತನ್ನ ತಾಜಾತನವನ್ನು ಇನ್ನೂ ಕಳೆದುಕೊಂಡಿರದ ಈ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ದೂಷಿಸುವ, ಒಬ್ಬರ ತಲೆಯ ಮೇಲೆ ಇನ್ನೊಬ್ಬರನ್ನು ಕೂರಿಸುವ (ರಾಹುಲ್‌ಗಿಂತ ಪ್ರಿಯಾಂಕ ಮೇಲು ಎಂಬಿತ್ಯಾದಿ ಮಾತು) ತಮ್ಮ ಎಂದಿನ ಆಟಗಳಲ್ಲಿ ದೇಶದಾದ್ಯಂತ ಕೈ ಪಾಳೆಯದವರು ತೊಡಗಿದ್ದಾರೆ. ಇದು, ಮುಂಬರುವ ದಿನಗಳಲ್ಲಿ, ಅವರ ಆತ್ಮಾವಲೋಕನದ ಪರಿ ಆಗಿಬಿಡುವ ಅಪಾಯವಿದೆ. ಎಲ್ಲೂ ಬೇಸರದ, ಆಘಾತದ, ಅವಮಾನದ, ಆಳ ಚಿಂತನೆಯ ಛಾಯೆ ಕಾಣುತ್ತಿಲ್ಲ. ಅಥವ, ನಮಗೆ ತಿಳಿಯದೇ ತಮ್ಮ ಬಂದ್ ದರ್ವಾಜಗಳ ಹಿಂದೆ ಬೋರಲು ಮಲಗಿ ನಾಯಕರುಗಳು ಬಿಕ್ಕಳಿಸುತ್ತಿರಬಹುದು. ಆದರೆ, ಸಾರ್ವಜನಿಕವಾಗಿ ಅವರು ಆಡುತ್ತಿರುವ ಅಥವ ಆಡದೇ ಇರುವ ಮಾತಿನ ಧಾಟಿ ಗಮನಿಸಿದರೆ ಅವರ ಸೋಲು ಅವರ ಕೋಣೆಗಳ ಏಕಾಂತವನ್ನು ಆವರಿಸಿಲ್ಲ ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. ಮೇ 16ರ ಫಲಿತಾಂಶ ಪ್ರಕಟಗೊಂಡ ನಂತರ, ನಾನು ನಮ್ಮ ರಾಜ್ಯದ ಮತ್ತು ಹೊರಗಿನ ರಾಜ್ಯಗಳ ಕೆಲವು ಸೋತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಭೇಟಿ ಮಾಡಿದ್ದೆ. ಅವರೆಲ್ಲರೂ ತಮ್ಮ ಎಂದಿನ ದಿರಸು ಮತ್ತು ಧಿಮಾಕಿನಲ್ಲಿ ತಮ್ಮ ಮುಂದಿನ ಅವಕಾಶಗಳ ಲೆಕ್ಕಾಚಾರಗಳಲ್ಲಿ ತೊಡಗಿದ್ದರು. ಇದು ದುರಂತ.
ಕಾಂಗ್ರೆಸ್ ತಾನು ಅಧಿಕಾರ ಮಾತ್ರ ಕಳೆದುಕೊಂಡಿದೆ, ಮುಂದಿನ ಬಾರಿ ಚದುರಂಗದಾಟದ ನಡೆಗಳನ್ನು ಬದಲಿಸಿದರೆ ಮತ್ತೆ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿ ಕೂತಂತಿದೆ. ತಮ್ಮ ಹತ್ತು ವರ್ಷದ ಸಾಧನೆಯನ್ನು ಜನರ ಮುಂದೆ ಸರಿಯಾಗಿ, ಪ್ರಭಾವಶಾಲಿಯಾಗಿ ಬಿಡಿಸಿಡಲಿಲ್ಲ ಎಂಬ ಕಾರಣಕ್ಕೆ ಮಾತ್ರ ತಾವು ಸೋತೆವು ಎಂಬ ಚಿಂತನಾಸುಳಿಗೆ ಅವರು ಸಿಕ್ಕಂತೆ ಕಾಣುತ್ತದೆ. ಇದು ಕೂಡ ಒಂದು ಭ್ರಮೆ ಎಂದು ತಿಳಿಹೇಳುವ ಮಂದಿ ಅವರಲ್ಲಿ ಉಳಿದಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಸೋಲು ಸಾಧನೆಯ ಅಥವ ಸಂವಹನದ ಕೊರತೆಯಿಂದ ಮಾತ್ರ ಉಂಟಾದುದಲ್ಲ, ಇದು ಸಿದ್ಧಾಂತ ಸ್ಪಷ್ಟತೆ ಕಳೆದುಕೊಂಡ ಕಾರಣದಿಂದ ಉಂಟಾದ ಸೋಲು. ಸುಮಾರು 129 ವರ್ಷ ಇತಿಹಾಸವುಳ್ಳ ಪಕ್ಷಕ್ಕೆ ಹೀಗಾದದ್ದು ಒಂದು ವಿಪರ್ಯಾಸ. ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಈ ಚುನಾವಣೆ ಸಿದ್ಧಾಂತಗಳ ಸಮರ ಎಂದು ಆಗಾಗ ಹೇಳುತ್ತಿದುದು ನಿಜ, ಆದರೆ ಅವರು ತಮ್ಮ ಸಿದ್ಧಾಂತ ಯಾವುದು, ಅದು ಏಕೆ ಮುಖ್ಯ, ಅದು ಜನರ ದೈನಂದಿನ ಬದುಕು ಮತ್ತು ಅವರ ಸಾಂಸ್ಕೃತಿಕ ಹಾಗು ಧಾರ್ಮಿಕ ಬಹುತ್ವದಿಂದ ಹೇಗೆ ಅರಳಿತು ಎಂದು ಬಿಡಿಸಿ ಹೇಳಲು ಸೋತರು. ತಮ್ಮ ಸಿದ್ಧಾಂತ ನಾಲ್ಕು ಮಂದಿಯ ಕಣ್ಣಿಗೆ ಕಂಡ ಚರಿತ್ರೆಯ ಕಲ್ಪಿತ ನೋಟವಲ್ಲ, ಆದರೆ ಶತಮಾನಗಳಿಂದ ಹೊರಹೊಮ್ಮಿದ ಜನರ ಪರಿಪಾಠ ಮತ್ತು ವಿವೇಕ ಎಂದು ಹೇಳದೇ ಹೋದರು. ಜೊತೆಗೆ, ಅವರ ಮೆಲುದನಿಯ ಸಿದ್ಧಾಂತ ಸ್ಮೃತಿ ಚುನಾವಣಾ ಯುದ್ಧಕಾಲದ ಶಸ್ತ್ರಾಭ್ಯಾಸವಾಗಿ ಕಂಡದ್ದು ಇನ್ನೂ ದೊಡ್ಡ ಸೋಲು.
ಅಂದರೆ, ಜನರಿಗೆ, ಕಾಂಗ್ರೆಸ್‌ನ ಸಿದ್ಧಾಂತ ಯಾವುದು ಎಂದು ತಿಳಿಯಪಡಿಸಲಿಲ್ಲ, ಒಂದು ವೇಳೆ ಅವರಿಗೆ ಅದು ತಿಳಿದಿತ್ತು ಎಂದು ವಾದಿಸುವುದೇ ಆದರೆ, ಕಾಂಗ್ರೆಸ್ ಪಕ್ಷದವರು ಆ ಸಿದ್ಧಾಂತಕ್ಕೆ ತೋರಿರುವ ಬದ್ಧತೆ ಯಾವ ಮಟ್ಟದ್ದು ಎಂಬುದರ ಬಗ್ಗೆ ಜನರ ಮನಸ್ಸಿನಲ್ಲಿ ಅಸ್ಪಷ್ಟತೆ ಇತ್ತು ಎಂದು ಒಪ್ಪಲೇ ಬೇಕು. ತಮ್ಮ ಸಿದ್ಧಾಂತದ ಬಗ್ಗೆ ಗೊಂದಲವಷ್ಟೇ ಅಲ್ಲ, ವಿರೋಧಿ ದಳವಾದ ಭಾ.ಜ.ಪದ ಸೈದ್ಧಾಂತಿಕ ನಿಲುವಿನ ಆಳ, ಹರಿವಿನ ಪರಿಚಯ ಅನೇಕ ಕಾಂಗ್ರೆಸ್ ನಾಯಕರಿಗೆ ಇದ್ದಂತೆ ತೋರಲಿಲ್ಲ. ಇದ್ದರೂ ಅದರ ಬಗ್ಗೆ ಉಡಾಫೆ ಇತ್ತು (ದಿಗ್ವಿಜಯ್ ಸಿಂಗ್ ತರಹದವರು). ಅವರೂ ತಮ್ಮಂತೆಯೇ ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದು ಎಲ್ಲವನ್ನೂ ಸರಳವಾಗಿ ಅರ್ಥೈಸಿಕೊಂಡು ಪ್ರಚಾರ ಕೈಗೊಂಡರು. ಆದರೆ, ಭಾ.ಜ.ಪಗೆ ಈ ಚುನಾವಣೆ ಸೈದ್ಧಾಂತಿಕ ಅಳಿವು, ಉಳಿವಿನ ಹೋರಾಟವಾಗಿತ್ತು ಮತ್ತು ಇದಕ್ಕಾಗಿ ಅವರು ಸುದೀರ್ಘ ತಯ್ಯಾರಿ ನಡೆಸಿದ್ದರು. ಈ ಚುನಾವಣೆಯಲ್ಲಿ ಅವರಿಗೆ ಆಯ್ಕೆಗೊಳ್ಳುವ ವ್ಯಕ್ತಿ ಮುಖ್ಯವಾಗಿರಲಿಲ್ಲ, ಸಿದ್ಧಾಂತ ಪ್ರಮುಖವಾಗಿತ್ತು. ಆ ಸಿದ್ಧಾಂತದ ಪ್ರತಿರೂಪವಾಗಿ ಅವರಿಗೆ ಮೋದಿ ಇದ್ದರು. ಗೆದ್ದವರು ನರೇಂದ್ರ ಮೋದಿ ಹೆಸರು ಹೇಳಿಕೊಂಡು ಗೆದ್ದರು.
ಕಾರವಾನ್ ಪತ್ರಿಕೆಯ ಲೇಖನವೊಂದು (ಮೇ 2014ರ ಸಂಚಿಕೆ) ಆರ್.ಎಸ್.ಎಸ್‌ನ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರನ್ನು ಹೀಗೆ ಉಲ್ಲೇಖಿಸುತ್ತದೆ: ಭಾ.ಜ.ಪ 2014ರಲ್ಲಿ ಗೆದ್ದರೆ ಇಪ್ಪತ್ತೈದು ವರ್ಷಗಳ ಕಾಲ ಅಧಿಕಾರದಲ್ಲಿ ಇರಬಹುದು. ಸೋತರೆ, ನಾವು ಸರ್ವ ಪ್ರಯತ್ನ ನಡೆಸಿದರೂ ಪಕ್ಷ ನೂರು ವರ್ಷ ಮೇಲೇಳಲು ಸಾಧ್ಯವಿಲ್ಲ. ಇದು ಸಂಘದ ಮತ್ತು ಭಾ.ಜ.ಪದ ಚುನಾವಣಾ ಪೂರ್ವಭಾವಿ ತಯ್ಯಾರಿಯ ಮಾತಾಗಿತ್ತು. ಈ ಸ್ಪಷ್ಟ ಧ್ಯೇಯವಿರಿಸಿಕೊಂಡು ಅವರು ಅನೇಕ ತಂತ್ರಗಳನ್ನು ಹೆಣೆದರು, ಅದರಲ್ಲಿ ಅವರ ಸಿದ್ಧಾಂತ ತೋರಿದ ದಾರಿ ದೊಡ್ಡದಾಗಿತ್ತು. ಮುಸಲ್ಮಾನರನ್ನೂ ಒಳಗೊಂಡಂತೆ ಎಲ್ಲ ಸಮುದಾಯ, ವರ್ಗ, ಜಾತಿಯ ಜನ ಅವರಿಗೆ ನಿಚ್ಚಳ ಬಹುಮತವನ್ನು ಕೊಟ್ಟರು ಎಂದು ಲಭ್ಯವಿರುವ ಅಂಕಿ-ಅಂಶಗಳು ತಿಳಿಸಿ ಹೇಳುತ್ತವೆ. ಭಾರತದ ಶೇಖಡ 31 ಮಂದಿ ಮಾತ್ರ ಭಾ.ಜ.ಪಗೆ ಮತ ಹಾಕಿದರು, ಉಳಿದ ಶೇಖಡ 69 ಮಂದಿ ಅವರಿಗೆ ಮತ ಹಾಕಲಿಲ್ಲ ಎಂದು ಕೊಂಕು ತೆಗೆಯುವುದು ಸುಲಭ, ಆದರೆ ಆತ್ಮಾವಲೋಕನಕ್ಕೆ ಇಳಿಯಬೇಕಾದ ಕಾಂಗ್ರೆಸ್ ಪಕ್ಷ ಈ ಅಂಕಿ-ಅಂಶದಿಂದ ತಮ್ಮನ್ನು ತಾವು ಸಮಧಾನಪಡಿಸಿಕೊಂಡರೆ, ಇನ್ನು ನೂರು ವರ್ಷ ಅಧಿಕಾರ ಮೂಸುವುದು ಕಷ್ಟವಾಗಬಹುದು. ಮೊದಲ ಬಾರಿ ಮತ ಚಲಾಯಿಸಿದವರಲ್ಲಿ ಶೇಖಡ 19 ಮಂದಿ ಮಾತ್ರ ಕಾಂಗ್ರೆಸ್ ಆಯ್ಕೆ ಮಾಡಿಕೊಂಡರು, ಈ ಅಂಕಿ 2009ರಲ್ಲಿ ಶೇಖಡ 25 ಆಗಿತ್ತು.
25 ವರ್ಷದ ಒಳಗಿನ ಮತದಾರರಲ್ಲಿ ಶೇಖಡ 20 ಮಂದಿ ಮಾತ್ರ ಕಾಂಗ್ರೆಸ್‌ನೊಂದಿಗಿದ್ದಾರೆ, ಮತ್ತೆ ಈ ಅಂಕಿ 2009ರಲ್ಲಿ ಶೇಖಡ 48 ಇತ್ತು. ಈ ಅಂಕಿ-ಅಂಶ ಭವಿಷ್ಯದ ಸೂಚಕ. ಯುವ ಮತದಾರರಿಗೆ ಕಾಂಗ್ರೆಸ್ ಬಗ್ಗೆ ಮತ್ತು ಅದು ಎತ್ತಿ ಹಿಡಿಯುವ (ಹಿಡಿಯಬೇಕಾದ) ಸಿದ್ಧಾಂತದ ಬಗ್ಗೆ ಏನೂ ಪರಿಚಯವಿಲ್ಲ ಎಂಬುದು ಸ್ಪಷ್ಟ. ಮುಂದಿನ ತಲೆಮಾರುಗಳು ಕಾಂಗ್ರೆಸನ್ನು ಹೀಗೇ ತೊರೆಯುತ್ತಾ ಹೋದರೆ ಆ ಪಕ್ಷದ ಪುನರುತ್ಥಾನ ಕಷ್ಟವಾಗಬಹುದು. ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವುದು ಸುಲಭ, ಆದರೆ ಇದನ್ನು ಯುವ ಜನತೆಗೆ ತಲೆಮಾರಿನಿಂದ ತಲೆಮಾರಿಗೆ ಬಿತ್ತರಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಉಪೇಕ್ಷಿಸುತ್ತಾ ಬಂದಿದೆ. ಕಾಂಗ್ರೆಸ್ ಆಡಳಿತ ನಡೆಸುವ ಪಕ್ಷ (party of governance) ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತಾ ಬಂದು, ಅಧಿಕಾರದ ಮದದಲ್ಲಿ ತನ್ನ ಅಂಗ ಸಂಸ್ಥೆಗಳನ್ನು (ಸೇವಾದಳ, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಇತ್ಯಾದಿ), ತನ್ನ ಪರಿವಾರವನ್ನು, ತನ್ನ ಚರಿತ್ರೆ ಮತ್ತು ಪರಂಪರೆಯನ್ನು ಮರೆಯುತ್ತಾ ಬಂತು. ಭಾ.ಜ.ಪಕ್ಕೆ ಹಾಗಾಗಲಿಲ್ಲ.ಸತತವಾಗಿ ಆರ್.ಎಸ್.ಎಸ್ ಮತ್ತು ಅದರ ಪರಿವಾರ ಸೈದ್ಧಾಂತಿಕ ಸ್ಪಷ್ಟತೆಯನ್ನೂ, ಚರಿತ್ರೆಯ ಭಿನ್ನ ವ್ಯಾಖ್ಯಾನವನ್ನು ತಲೆಮಾರಿನಿಂದ ತಲೆಮಾರಿಗೆ ಬಿತ್ತರಿಸುವ ಕಾರ್ಯವನ್ನು ಮಾಡುತ್ತಾ ಬಂತು. ವಿಚಿತ್ರ ಮತ್ತು ಸೋಜಿಗ ಎಂದರೆ, ಈಗ ಆರ್.ಎಸ್.ಎಸ್  ideologues ಅಥವ ಭಾ.ಜ.ಪ ideologues (ಅವರ ವಿಚಾರಧಾರೆಯನ್ನು ಸಾರ್ವಜನಿಕವಾಗಿ ಪ್ರತಿಪಾದಿಸುವವರು) ಇದ್ದಾರೆಯೇ ಹೊರತು, ಕಾಂಗ್ರೆಸ್ ideologues ಇಲ್ಲ. ಅವರಿಗೆ ವಕ್ತಾರರು, ಅವರ ಬಗ್ಗೆ ಸಹಾನುಭೂತಿ ಉಳ್ಳವರು (sympathizers), ಮತ್ತು ಮತದಾರರು ಮಾತ್ರ ಇದ್ದಾರೆ. ಈ ಚುನಾವಣೆಯಲ್ಲಿ ಇವರೆಲ್ಲರ ಸಂಖ್ಯೆಯೂ ಕ್ಷೀಣಿಸಿದೆ.

ಕಾಂಗ್ರೆಸ್ ಅನ್ನು ಬೆಂಬಲಿಸುವ ಬುದ್ಧಿಜೀವಿಗಳೂ ಕೂಡ ಅವರ ಸಿದ್ಧಾಂತದ ಸ್ಮರಣೆ ಮಾಡದೆ, ವ್ಯಕ್ತಿಗಳ ಸುತ್ತ ಗಿರಕಿ ಹೊಡೆಯುತ್ತಾರೆ. ಫಲಿತಾಂಶ ಹೊರಬಂದ ನಂತರದ ವಿಜಯೋತ್ಸವ ಸಂದರ್ಭದಲ್ಲಿ ಕರ್ನಾಟಕದ ಕೆಲವೆಡೆ ಸಣ್ಣಪುಟ್ಟ ಘರ್ಷಣೆಗಳು ನಡೆದವು. ಇದಕ್ಕೆ ಚಕಾರವೆತ್ತದ ಬುದ್ಧಿಜೀವಿಗಳು, ಯು.ಆರ್.ಅನಂತಮೂರ್ತಿಯವರಿಗೆ ಬೆದರಿಕೆ ಕರೆಗಳು ಬಂದವು ಎಂದ ಕೂಡಲೇ ಅವರ ಮನೆಯತ್ತ ಧಾವಿಸಿದರು. ಅನಂತಮೂರ್ತಿಯವರ ವಾಕ್ ಸ್ವಾತಂತ್ರ್ಯ ಸಮರ್ಥಿಸಿಕೊಳ್ಳುವುದು ನಮ್ಮ ಕರ್ತವ್ಯ, ಆದರೆ ಮುಖವಿಲ್ಲದಿರುವ, ಧ್ವನಿಯಿಲ್ಲದಿರುವ ಸಣ್ಣ ಸಮುದಾಯಗಳ, ಅಲ್ಪ ಸಂಖ್ಯಾತರ ಅನುಮಾನ, ಆತಂಕ, ಭಯಗಳನ್ನು ನಿವಾರಿಸುವುದೂ ಬಹಳ ಮುಖ್ಯ ಕೆಲಸ. ಕಾಂಗ್ರೆಸ್ 1947ರಲ್ಲಿ ಆಡಳಿತ ನಡೆಸುವ ಪಕ್ಷವಾಗಿ ಮಾರ್ಪಡುತ್ತಿದ್ದಾಗ, ಗಾಂಧೀಜಿ ದೆಹಲಿಯಿಂದ ಬಹಳ ದೂರ ಹಿಂಸೆ ಕಂಡ ಸಮುದಾಯಗಳಿಗೆ ಸಾಂತ್ವಾನ ಹೇಳುತ್ತಿದ್ದರು. ಕಾಂಗ್ರೆಸ್‌ನ ಅಂತಃಸತ್ವ ಅಡಗಿರುವುದು ಇಂತಹ ಕ್ರಿಯೆಯಲ್ಲಿ, ನಡವಳಿಕೆಯಲ್ಲಿ.
ಕಾಂಗ್ರೆಸ್ ತನ್ನ ಸೈದ್ದಾಂತಿಕ ಸ್ಪಷ್ಟತೆಯನ್ನು ಮರುಕಳಿಸಿ ಪಡೆಯದಿದ್ದರೆ ಅದಕ್ಕೆ ಉಳಿಗಾಲವಿಲ್ಲ. ಈ ಹೊಸ ಯುಗದಲ್ಲಿ ಆ ಪಕ್ಷದ ಸೈದ್ಧಾಂತಿಕ ದಿಕ್ಕು ಗಾಂಧಿಯ ತತ್ವ ಮತ್ತು ನೆಹರೂವಿನ ಆಧುನಿಕತೆಯ ಮೇಳೈಕೆಯಾಗಿರಬೇಕು ಎಂದು ಚಿಂತಕರು ಅಭಿಪ್ರಾಯ ಪಡುತ್ತಾರೆ. ಗಾಂಧಿ ಮತ್ತು ನೆಹರು ಚರಿತ್ರೆಯನ್ನು ಅರ್ಥಮಾಡಿಕೊಂಡ ರೀತಿ ಮತ್ತು ಸಂಘ ಪರಿವಾರ ಚರಿತ್ರೆ ಅರ್ಥಮಾಡಿಕೊಳ್ಳುವ ರೀತಿಗೂ ಸಹಜವಾಗಿಯೇ ದೊಡ್ಡ ವ್ಯತ್ಯಾಸವಿದೆ. ಈ ಚರಿತ್ರೆಯ ಭಿನ್ನ ವ್ಯಾಖ್ಯಾನ ಒದಗಿಸುವ ಮುನ್ನೋಟವೇ ಕಾಂಗ್ರೆಸ್‌ನ ಸೈದ್ಧಾಂತಿಕ ಬುನಾದಿ. ತಮ್ಮ ‘Discovery of India’ ಪುಸ್ತಕದಲ್ಲಿ ನೆಹರು ಭಾರತದ ಚರಿತ್ರೆಯ ಕುರಿತು ಈ ಉಪಮೆ ಬಳಸುತ್ತಾರೆ: “An ancient palimpsest on which layer upon layer of thought and reverie had been inscribed, and yet no succeeding layer had completely hidden or erased what had been written previously.” (ಒಂದು ಹಳೆಯ ತಾಳೆಗರಿಯ ಮೇಲೆ ಪದರ ಪದರವಾಗಿ ಭಿನ್ನ ವಿಚಾರಗಳು ಮತ್ತು ನೆನಪುಗಳು ಅಚ್ಚೊತ್ತಿವೆ. ಆದರೆ ಆ ತಾಳೆಗರಿಯ ಮೇಲೆ ಪ್ರಕಟಗೊಂಡ ಹೊಸ ಪದರದ ಬರವಣಿಗೆ ಹಿಂದೆ ಬರೆದುದನ್ನು ಸಂಪೂರ್ಣವಾಗಿ ಮರೆಮಾಡುವುದಾಗಲಿ, ಅಳಿಸಿ ಹಾಕುವುದಾಗಲಿ ಮಾಡಲಿಲ್ಲ.) ನೆಹರು ಅವರ ಬಹುತ್ವದ ಕಲ್ಪನೆ (pluralism), ಇಂದಿರಾ ಮತ್ತು ರಾಜೀವ್ ಗಾಂಧಿ ಅವರ ಅಸ್ಪಷ್ಟ ಜಾತ್ಯತೀತತೆ (secularism) ಕಲ್ಪನೆಗಿಂತ ಭಿನ್ನ ಮತ್ತು ಪ್ರಬುದ್ಧ.
ಇದೇ ಕಾಲಘಟ್ಟದಲ್ಲಿ ಬರೆದ ವೀರ್ ಸಾವರ್ಕರ್ ತಮ್ಮ “Hindutva: Who is a Hindu?” ಹೊತ್ತಗೆಯಲ್ಲಿ ಹೀಗೆ ಹೇಳುತ್ತಾರೆ. “Hindutva is not a word but a history… Not only a spiritual and religious history… but histroy in full. Hinduism is only a derivative, a fraction, a part of Hindutva.” (ಹಿಂದುತ್ವ ಎಂಬುದು ಒಂದು ಪದವಲ್ಲ, ಅದು ಚರಿತ್ರೆ… ಅದು ಬರೀ ಅಧ್ಯಾತ್ಮದ ಅಥವ ಧಾರ್ಮಿಕ ಚರಿತ್ರೆಯಲ್ಲ… ಬದಲಿಗೆ ಅದು ಸಂಪೂರ್ಣ ಚರಿತ್ರೆ. ಹಿಂದೂಯಿಸಂ ಹಿಂದುತ್ವದಿಂದ ಜನ್ಯವಾದದ್ದು, ಅದರ ಒಂದು ಸಣ್ಣ ಭಾಗ ಮಾತ್ರ.) ಚರಿತ್ರೆಯ ಈ ಭಿನ್ನ ವ್ಯಾಖ್ಯಾನಗಳಲ್ಲಿ ನಮ್ಮ ಮುಂದಿನ ರಾಜಕೀಯ ಅಡಗಿದೆ. ಇದನ್ನು ಕಾಂಗ್ರೆಸ್ ಕಂಡುಕೊಳ್ಳಬೇಕಿದೆ. ಇದನ್ನು ಅರಿತಿರುವ ಭಾ.ಜ.ಪ, ನೆಹರು ಅವರ ವಿಚಾರಧಾರೆಯನ್ನು ಹೀಗಳೆಯುವ ಜೊತೆಗೆ, ಸರ್ದಾರ್ ಪಟೇಲರನ್ನು ಅವರಿಗಿಂತಲೂ ಎತ್ತರದ ವ್ಯಕ್ತಿ ಎಂದು ಬಿಂಬಿಸಲು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಯತ್ನಿಸಿತು. ಕೆಲವು ದಶಕಗಳ ಹಿಂದೆಯೇ ಜನಸಂಘದ ಒಲವಿದ್ದ ಅಡಿಗರು ನೆಹರು ನಿವೃತ್ತರಾಗುವುದಿಲ್ಲ ಎಂದು ಹಂಗಿಸಿದ್ದರು. ನಿಜ ಅರ್ಥದಲ್ಲಿ ನೆಹರು ನಿವೃತ್ತರಾದರೆ, ಅಂದರೆ, ಕಾಂಗ್ರೆಸ್ ಅವರ ವಿಚಾರಧಾರೆ ಮತ್ತು ಲೋಕದೃಷ್ಟಿಯನ್ನು ಹಿಂದೆ ಸರಿಯಲು ಬಿಟ್ಟರೆ, ಅದಕ್ಕೆ ಉಳಿಗಾಲವಿಲ್ಲ.
(ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ)

‍ಲೇಖಕರು G

May 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Anonymous

    (i) that Congress has given the utmost importance to Familial Dynasty (no matter however irrelevant and immature the members are) rather than to the Philosophical Dynasty (ii) that the communal divide in India was propagated & nurtured by Congress itself in an effort to ensure a solid vote bank which now is being diminishing every year (iii)that there is no second rung of leaders in the party and (iv) that the high command presumes that it is immortal and as such all others in the party are boot-lickers and not anything else. Many more such facts are there, too innumerable to be jotted down here. Most important is, isn’t there an ancient saying, GOOD ENEMY IS BETTER THAN A BAD FRIEND? Days have come to make the enemy too attempt of being a friend. If it doesn’t attempt, there would be another election in near future. Ponder over this fact too.

    ಪ್ರತಿಕ್ರಿಯೆ
  2. Palahalli Vishwanath

    We were very much influemced by Nehru during our school and college days. While Gandhiji was the role model for the earlier generation, Nehru placed the same role fo us. It is tragic to see him going down in poll after poll. His contribution to democracy in barely acknowledged. And his ideas of secularism are ridculed. I thnik one of the main problems is that even his own family did not understand and appreeciate his ideas. He spent months writing about history to his daughter who uttered plattitudes like ‘ he was a saint ‘ etc. When I went few years ago to see Shantivan in Delhi, there was nobody there ! instead Sanjay Gandhi’s place had many visitors. Yes, Nehru’s ideas should be questiooned . His economics could have been faulty. There could be a rethink and Congress should build itself around his ideals some of which will always remain good for all times.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: