ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಊರೊಟ್ಟಿನ ಟೀವಿಯೂ ಇಲ್ಲ, ಊರೂ ಒಟ್ಟಿಗಿಲ್ಲ

ಏನಾಯ್ತು?” “ತುಂಬ ಹೊಟ್ಟೆನೋವು ಮಿಸ್.” “ಚೆನಾಗೇ ಇದ್ಯಲ್ಲ?” “ ಇಲ್ಲ ಮಿಸ್ ತುಂಬ ಹೊಟ್ಟೆ ನೋವು.” “ಸರಿ ಹೋಗು ಮನೆಗೆ. ಒಂದ್ ಲೀವ್ ಲೆಟರ್ ಕೊಟ್ ಹೋಗು” ಚಕಚಕನೆ ಬರೆದುಕೊಟ್ಟು ಬಂದಿದ್ದೆ. ಅವತ್ತು ಮನೆಗೆ ಟಿವಿ ಬಂದ ಮೊದಲ ದಿನ. ಅಪ್ಪರಾಣೆ ಇನ್ನೂ ಏನೂ ಬರ್ತಿರ್ಲಿಲ್ಲ. ಬರೀ ಮಿಣ ಮಿಣ ಮಿಣ ಅಂತ ಲಕ್ಷ ಕರಿಹುಳಗಳು ಹರಿದಾಡಿದಂಗ್ ಕಾಣ್ತಿತ್ತಷ್ಟೆ. ನಾಳೆ ಮುಸ್ತಾಕು ಬಂದು ಆಂಟೆನಾ ಜೋಡಿಸ್ತಾನೆ ಅಂತ ಮನೇಲೆಲ್ಲ ಮಾತಾಡ್ತಾ ಇದ್ದದ್ದು ಕೇಳಿಕೊಂಡೇ ಸ್ಕೂಲಿಗೆ ಚಕ್ಕರು.. ಟಿವಿ ಹುಳಗಳ ಮುಂದೆ ಹಾಜರು.
ಅಂತೂ ಟಿವಿ ಬಂತು..ಹೆಚ್ಚು ಹಿಂದಿ ಸ್ವಲ್ಪ ಕನ್ನಡ, ರಾಮಾಯಣ, ಮಹಾಭಾರತ, ಚಂದ್ರಕಾಂತ, ಅದರೊಳಗಿನ ಕ್ರೂರ್ ಸಿಂಗ್, ವಾರಕ್ಕೊಂದು ಸಿನೆಮಾ.. ಗುರುವಾರದ ಚಿತ್ರಮಂಜರಿ. ಇದೆಲ್ಲವೂ ಅದೆಷ್ಟೋ ಜನರ ನವಿರು ನೆನಪು ಈಗ. ಸಿಟಿ ಮಂದಿ ವಿಚಾರ ನಂಗೊತ್ತಿಲ್ಲ. ಆಗ ಹಳ್ಳಿಗಳಲ್ಲಿ ಇರುತ್ತಿದ್ದದು ಊರಿಗೊಂದೋ ಎರಡೋ ಟಿವಿಗಳು ಅಷ್ಟೆ. ಮನೆಗಳ ದೊಡ್ಡ ಹಜಾರಗಳು. ಮಿನಿ ಟೆಂಟುಗಳಾಗಿರುತ್ತಿದ್ದವು. “ಟಿವಿ ನೋಡಕ್ ಸಲುವಾಗಿ ಇನ್ನೊಬ್ಬೊರ ಮನೆಗ್ ಹೋಗದಾ?” ಅನ್ನುವ ಈಗೋಗಳಿಗೆ ಜಾಗವೇ ಇರಲಿಲ್ಲ. ಇನ್ನು ಟಿವಿ ಇದ್ದವರು “ಹಟ್ಟಿ ತುಂಬ ಜನ ತುಂಬಕಂಡ್ ಕಸ ಚೆಲ್ತರೆ, ಗುಡಿಸಿ ಸಾಯಬೇಕು” ಅಂತಾಗಲೀ “ನಮಗೆ ಪ್ರೈವೇಸೀನೇ ಇಲ್ಲ” ಅಂತ ಯೋಚಿಸಿದ್ದಾಗಲೀ ಯಾವತ್ತೂ ಇಲ್ಲವೇ ಇಲ್ಲ. ವಾರದ ಸಿನೆಮಾ ಗಂತೂ ಅಬಾಲವೃಧ್ದರಾದಿಯಾಗಿ ಊರವರೆಲ್ಲ ಟಿ ವಿ ಮುಂದೆ ಹಾಜರು. ಮಧ್ಯೆ ಕರೆಂಟು ಹೋದಾಗ. ಗಾಳಿಗೆ ಆಂಟೆನಾ ಅಲ್ಲಾಡಿ ಪರದೆಯ ಚಿತ್ರ ಗೋಜಲಾದಾಗ ಎಲ್ಲರಲ್ಲೂ ಸಮಾನ ತಳಮಳ. ಹೊಟ್ಟೆಯೊಳಗೆ ಟಿವಿ ಪರದೆಯೊಳಗಿನಂತದೇ ಹುಳಗಳಾಟ.
ಮಿಣ ಮಿಣ ಮಿಣ ಮಿಣ.. …. “ಥತ್ತೇರಿಕಿ. ಓಯ್ತು ಟಿವಿ. ಈ ಬಡ್ಡೇನ್ ಗಾಳಿ ಬೀಸಿ ಆಂಟೇನ್ ಅತ್ಲಾಗ್ ತಿರಿಕತ್ತೇನೋ.. ನಮಗ್ ಬಂದುದಡ ಅದ್ ಸರ್ಮಾಡಕ? ನಾಳಗ್ ಯಳಂದೂರಗ್ ಓಗಿ ಆ ಸಾಬಿ ಮುಸ್ತಾಕನ್ನೇ ಕರ್ಕಂಡ್ ಬರಬೇಕು.” ದೊಡ್ಡ ಮಾವ ಹೇಳಿದರು. ಚಿಕ್ಕ ಮಾವ ಸುಮ್ಮನಿರ್ಲಿಲ್ಲ. “ಐ ಒಳ್ಳಿ ಸೀನ್ಸ್ ಬರವತ್ಲೆ ಒಂಟೋಯ್ತಲ್ಲ. ಏಣಿ ಕೊಡಿ ಇಲ್ಲಿ ನೋಡಂವು” ಅಂತ ಹತ್ತೇಬಿಟ್ಟ. ಮೊಸರು ಕಡೆಯೋ ಮಂತಿನ ಹಾಗೆ ಆಂಟೆನಾ ಇತ್ತಿಂದತ್ತ ತಿರುಗಿಸೋದು..”ಓ ಬಂತು ಬಂತು ಬಂತು” ಕೆಳಗಿದ್ದವರು ಕಿರುಚೋದು. “ಬಂತಾ..” ಅನ್ನುವಷ್ಟರಲ್ಲಿ ಮತ್ತೆ “ಐ ಓಯ್ತು ಕುಡ ಮಯೇಸ. ಆಗ್ಲೆ ನಿಲ್ಸಿದ್ದೆಲ್ಲ ಅಲ್ಗೇ ನಿಲ್ಸುಡ” “ಬಂತಾ?” “ಊ ಊ ಬಂತು. ಸಾಕು ಸಾಕು, ನಿಲ್ಸುಡ, ಅಲ್ಗೆ ನಿಲ್ಸುಡ.” ನಿಧಾನಕ್ಕೆ ಕೆಳಗಿಳಿದು ಬರೋಹೊತ್ತಿಗೆ ಸಬೀಹಾ ಬಾನು ನಮಸ್ಕಾರ ಹೇಳುತ್ತಿದ್ದಳು.

ಒಮ್ಮೊಮ್ಮೆ ಇಲ್ಲಿ ಎಲ್ಲ ಸರಿ ಇದ್ದರೂ ಟಿವಿ ಒಳಗೇ ಏನೋ ಟೆಕ್ನಿಕಲ್ ಪ್ರಾಬ್ಲಂ ಆಗಿಬಿಡೋದು. ಆಗ ಕಲರ್ ಬಾರ್ ಬರುತ್ತಿತ್ತು. ಅದನ್ನೂ ಬಿಡದೇ ನೋಡುತ್ತಿದ್ದ ಮಂದಿಯಿದ್ದರು. ಆಮೇಲೆ “ಅಡಚಣೆಗಾಗಿ ಕ್ಷಮಿಸಿ” ಬೋರ್ಡು ಹಾಕುತ್ತಿದ್ದರು. ವಾರದ ಸಿನೆಮಾ.. ಮತ್ತು ಚಿತ್ರಮಂಜರಿ ಮುಗಿದಾಗ ಸಿನೆಮಾ ಥೇಟರಿನಿಂದ ಹೊರಗೆ ಬರೋ ಥರವಾಗೇ.. ಟಿವಿ ಮನೆಯಿಂದ ಹೊರಗೆ ಬರ್ತಿದ್ದರು ಜನ.
ಇದು ನಾನಿದ್ದ ಅಜ್ಜಿ ಮನೆ ಟಿವಿ ಕಥೆ.. ಇದನ್ನ ಹೋಲುವ ಎಷ್ಟೋ ಕಥೆಗಳು ನಿಮಗೆ ತಿಳಿದಿರಬಹುದು.ನೋಡಿ, ಅನುಭವಿಸಿರಲೂಬಹುದು. ಆದರೆ ನಮ್ಮೂರು ಆಯರಹಳ್ಳಿಯ ಟಿವಿ ಕಥೆಯಿದೆಯಲ್ಲ ಅದು ಡಿಫರೆಂಟು, ನಾನು ಪುಟ್ಟಾಣಿ ಮಗುವಾಗಿದ್ದಾಗಲೇ ನಮ್ಮೂರಿಗೆ ಟಿವಿ ಬಂದುಬಿಟ್ಟಿತ್ತು. ಇಡೀ ಊರಿಗೆ ಒಂದೇ ಟಿವಿ. ಅದರ ಹೆಸರು “ಊರೊಟ್ಟಿನ ಟಿವಿ” . ಊರೊಳಗೆ ಇದ್ದ ಒಂದೇ ಒಂದು ದೊಡ್ಡ ತಾರಸಿ ಮನೆಯ ಸಜ್ಜಾದ ಕೆಳಗೆ, ಒಂದು ಮರದ ಪೆಟ್ಟಿಗೆಯೊಳಗೆ ಟಿವಿ ಇಟ್ಟು, ಜಾತಿ, ಮತ ಯಾವ ಭೇದವೂ ಇಲ್ಲದೆ, ಊರವರೆಲ್ಲ ಒಟ್ಟಿಗೇ ಕೂತು ಟಿವಿ ನೋಡ್ತಿದ್ದರು.
ನಮ್ಮೂರ ಹಾಲಿನ ಡೈರಿ ಸೆಕ್ರೆಟರಿ ನಿಂಗಪ್ಪಣ್ಣ ಹೇಳೋ ಪ್ರಕಾರ, ಆ ಟಿವಿ ತಂದದ್ದು 1984ರ ನವೆಂಬರ್ 22ನೇ ತಾರೀಕು. ಅದು ನಮ್ಮೂರ ಮಾಜಿ ಎಂಎಲ್ಎ ಅವರ ಸಲಹೆ ಮೇರೆಗೆ. ಎಸ್, ಎಂ. ಕೃಷ್ಣರೊಂದಿಗೆ ವಿದೇಶದಲ್ಲಿ ಓದಿಕೊಂಡು ಬಂದಿದ್ದ ಅವರ ಯೋಚನೆಗಳಿಗೂ, ನಮ್ಮೂರ ಜನರ ಯೋಚನೆಗಳಿಗೂ ಕಡೇವರೆಗೂ ತಾಳೆಯಾಗಲೇ ಇಲ್ಲ. ಅವರು ಇವರ ಮಟ್ಟಕ್ಕಿಳಿದು, ಇವರು ಚೂರು ಅವರ ಮಟ್ಟಕ್ಕೇರಿ ಎಂದೂ ಯೋಚಿಸಲಿಲ್ಲ. ಹಾಗಾಗಿ ಅವರ ಮತ್ತು ಊರ ಜನರ ನಡುವಿನ ಸಂಬಂಧ ತಾವರೆ ಎಲೆ ಮೇಲಿನ ನೀರ ಹನಿಯಹಾಗೇ ಇದ್ದುಬಿಟ್ಟಿತ್ತು. ಅವರೊಂದಿಗೆ ಆಪ್ತ ಸಂಪರ್ಕವಿಟ್ಟುಕೊಂಡಿದ್ದ ಊರ ಕೆಲವರಲ್ಲಿ ನಿಂಗಪ್ಪಣ್ಣನೂ ಒಬ್ಬರು. ಡೈರಿ ಹಾಲಿನ ದುಡ್ಡಿನಲ್ಲಿ ಇಂತಿಷ್ಟನ್ನ ಚಾರಿಟಿ ಫಂಡ್ ಅಂತ ಇಟ್ಟಿರುತ್ತಿದ್ದರು. “ಆ ಹಣದಲ್ಲಿ ಟಿವಿ ತಗೊಂಡು ಬಾ. ಜನ ವಾರ್ತೆ ನೋಡಲಿ. ನಾಗರಿಕರಾಗಲಿ” ಅಂತ ದೊಡ್ಡವರು ಅಪ್ಪಣೆ ಕೊಡಿಸಿದರು.
ಹಾಗೆ ಹೇಳಿದಾಕ್ಷಣ ಯೂನಿಲೆಟ್ಟಿಗೋ, ಕ್ರೋಮಾಗೋ, ಹೀಗೆ ಹೋಗಿ ಹಾಗೆ ಟಿವಿ ತರಲು ಸಾಧ್ಯವಿರಲಿಲ್ಲ. ಹೇಳಿ ಕೇಳಿ ಚಾರಿಟಿ ಫಂಡು. ಸಹಕಾರ ಇಲಾಖೆಯ ಅಸಿಸ್ಟಂಡ್ ರಿಜಿಸ್ಟರಾರ್ ಹತ್ತಿರ ಅಪ್ಪಣೆ ಪಡೆದು. ನಂತರ, ಮೂರುಸಾವಿರದ ಮುನ್ನೂರು ರೂಪಾಯಿ ಕೊಟ್ಟು, ಆ ಟಿವಿ ತಂದು ಕೂರಿಸೋ ಕಥೆಯಿಲ್ಲಿ ಒಂದು ಉಪಕಥೆಯಾದೀತು.
ಟಿವಿ ಬಂತು.. ಇಲ್ಲೂ ಅದೇ.. ಮಹಾಭಾರತ, ರಾಮಾಯಣ. ಅದೇ ಚಂದ್ರಕಾಂತ, ಚಿತ್ರಮಂಜರಿ, ಸಿನೆಮಾ. ಹೇಳಿದ್ದೆನಲ್ಲ ಹಿಂದೆ, ಮೈಸೂರಿನ ಹಳ್ಳಿಗರಿಗೆ ಹೋಲಿಸಿದರೆ ಚಾಮರಾಜನಗರದ ಹಳ್ಳಿಗರು ತುಸು ನಾಜೂಕಿನವರು, ಅವರು ತಮಿಳು, ಹಿಂದಿ ಎಲ್ಲಾನೂ ಎಂಜಾಯ್ ಮಾಡ್ತಿದ್ದರು. ನಮ್ಮೂರ ಜನ ಹಿಂದಿ ನೋಡ್ತಿರಲಿಲ್ಲ.ಅವರು ಶುಧ್ದ ರೈತಾಪಿ ಜನ. ಮತ್ತು ಅಂತವೇ ಯೋಚನೆಗಳು. ಮನರಂಜನೆಗೆ ಅಷ್ಟು ಮಹತ್ವವಿರಲಿಲ್ಲ. ಆದರೆ ಈ ಟಿವಿ ಪೆಟ್ಟಿಗೆ ಹೊಸ “ಬೆರಗು” ಮೂಡಿಸಿತ್ತು. ಆ ಕಡೆ ಈ ಕಡೆ ಪಡಸಾಲೇಲಿ ಹೆಂಗಸರು, ಬೀದೀಲಿ ಗಂಡಸರು, ಕೆಲವರು ಕುಂತು ಮತ್ತೆ ಕೆಲವರು ನಿಂತು..ಬೆಳಗ್ಗೆ ಹೊತ್ತು “ಡೈರಿಗೊಂಚೂರ್ ಹಾಲ್ ಬುಟ್ಬುಟ್ ಬಾ ಕೂಸೆ” ಅಂದರೆ “ಓಗವ್ವ ಆಗಲ್ಲ” ಅಂತಿದ್ದ ಹೈಕಳು ಸಂಜೆ ಮಾತ್ರ “ಹಾಲ್ ಬುಟ್ಬುಟ್ ಬತ್ತೀನಿ ಕೊಡು” ಅಂತ ತಾವೇ ಕೇಳವು, ಹಾಲಿನ್ ಪಾತ್ರೆ ಹಿಡ್ಕೊಂಡು ಟಿವಿಗೆ ಕಣ್ಣುನೆಟ್ಟು ನಿಂತವರ ಜೊತೆ ನಿಂತ್ಕಂಡ್ರೆ, “ಉಣ್ಣು ಬಾ ಮೂದೇವಿ” ಅಂತ ಅವರವ್ವ ಅಟ್ಟಿಸ್ಕಂಡ್ ಬರಬೇಕು. ಇಲ್ಲ ಟಿವಿ ಆಫ್ ಆಗಬೇಕು. ಇನ್ನು ಆ ಊರೊಟ್ಟಿನ ಟಿವಿಗೆ ಚಾನಲ್ ಬದಲಿಸುವ ಪ್ರಶ್ನೆಯೇ ಇರಲಿಲ್ಲ. ಇದ್ದದ್ದೇ ಒಂದು. ಸೌಂಡು ಯಾವಾಗಲೂ ಹೆಚ್ಚೇ ಇರಬೇಕಾಗಿದ್ದು ಅನಿವಾರ್ಯ. ಮತ್ತೇನಾದರೂ ಬದಲಿಸಬೇಕಿದ್ದರೆ ಮೇಲೆ ಹತ್ತಿ , ಡೈರಿಯ ಮಹದೇವಣ್ಣ ಬದಲಿಸ್ತಿದ್ರು. ಮನೆಯಲ್ಲೇ ಟಿವಿ ನೋಡಿ ಅಭ್ಯಾಸವಿದ್ದ ನನಗೆ, ಇಲ್ಲಿ ರಜೆಗೆ ಬಂದಾಗ ಬೀದಿ ಟಿವಿ ರುಚಿಸುತ್ತಿರಲಿಲ್ಲ. ಹಾಗಂತ ನೋಡದೇ ಏನೂ ಇರ್ತಿರಲಿಲ್ಲ.!
ನಿಧಾನಕ್ಕೆ ಒಂದೊಂದೇ ಮನೆಗಳವರು ಟಿವಿ ಸ್ವಂತಕ್ಕೆ ತರತೊಡಗಿದರು. ಊರೊಟ್ಟಿನ ಟಿವಿಗೆ ಜನ ಕಡಿಮೆಯಾಗತೊಡಗಿದರು. ಬೆಚ್ಚಗೆ ಮನೆಗಳಲ್ಲಿ ಸೇರಿಕೊಂಡರು. ವಿಸಿಪಿ, ವಿಸಿಆರ್ ಗಳ ದರಬಾರು ಶುರುವಾಗಿ, ಹಬ್ಬಕ್ಕೆ, ಮದುವೆಗೆ , ತಿಥಿಗೆಲ್ಲ ಸಿನೆಮಾಗಳು ಜಾಗರಣೆ ಮಾಡಿಸತೊಡಗಿದವು. ವಿಸಿಆರ್ ತಂದವರ ಮನೆ, ಒನ್ಸ್ ಅಗೈನ್ ಮಿನಿ ಥಿಯೇಟರು. ವಿಷ್ಣುವರ್ಧನ್, ರಾಜ್ಕುಮಾರ್, ಶಂಕರ್ ನಾಗ್..ಇವರದ್ದೇ ಸಿನೆಮಾಗಳು. ಮೈನೆರೆದ ಮೇಲೆ ಹೆಣ್ಣುಮಕ್ಕಳು ಹೊಸಿಲು ದಾಟಬಾರದು ಅನ್ನುವುದು ಅಲಿಖಿತ ನಿಯಮವೇ ಆಗಿದ್ದಾಗ, ಈ ಟಿವಿ, ಮತ್ತು ವಿಸಿಆರ್ ಗಳಿಂದ ಅಂತ ಹೆಣ್ಮಕ್ಕಳಿಗೂ ಒಂಚೂರು ಮನರಂಜನೆ ಸಿಕ್ಕಿತ್ತು.
ಎರಡಾಯಿತು ನಾಲ್ಕಾಯಿತು, ಹತ್ತಾಯಿತು,,ನೂರಾಯಿತು, ಹತ್ತು ವರ್ಷಗಳಲ್ಲಿ, ಟಿವಿಯಿಲ್ಲದ ಮನೆಯೇ ಇಲ್ಲದಾಯಿತು. ಚಂದನ ಬಂತು, ಉದಯ ಬಂತು. ಧಾರಾವಾಹಿಗಳೂ ಬಾಗಿಲು ತಟ್ಟತೊಡಗಿದವು. ಜನಪ್ರಿಯ ದಾರಾವಾಹಿಗಳು, ಕ್ರಿಕೆಟಿನಷ್ಟೇ ಶ್ರಧ್ದೆಯಿಂದ ನೋಡಿಸಿಕೊಂಡವು. ಕೆಲವರ್ಷಗಳ ನಂತರ ಈಟಿವಿಯೂ ಬಂತು, ಟಿವಿ , ಕೈಗೆಟುಕಲಾರದ್ದು ಅನ್ನುವಂತ ವಿಶೇಷತೆ ಕಳೆದುಕೊಂಡು,ಬೀದಿ ಟಿವಿಯೊಂದೇ ಇದ್ದಾಗಿನ ಬೆರಗು ಕಳೆದುಕೊಂಡು, ಮನೆಯ “ಮಾಮೂಲಿ” ವಸ್ತುವಾಯಿತು.
ಮದುವೆ ಮನೆ, ತೊಟ್ಟಿಲು ಶಾಸ್ತ್ರ, ನಾಮಕರಣ, ಮುಂಜಿಮನೆ, ಹೆಂಗಸರು ಎಲ್ಲೆಲ್ಲಿ ಸೇರಿದರಲ್ಲಿ ಮಾತಾಡುತ್ತಿದ್ದದು ಬರಿಯ ದಾರಾವಾಹಿ ಕಥೆಗಳನ್ನೇ.. “ ಆ ಹೆಣ್ಣಗ ಕೊಡ್ತೀನಿ ಅಂತ ಅಷ್ಟ್ ಕಷ್ಟನ ಕೊಡದು ದೇವ್ರು” ಅಂತ ಹೀರೋಯಿನ್ನಿಗೆ ಕರುಣೆ ತೋರಿಸೋದೇನು? “ಆ ನನ್ ಸವತಿ ಯಾವ್ಯಾವ್ ಆಟ ಆಡ್ತಳ ಬಚ್ಚಾಲಿ ರಂಡೆ,ಎಲ್ಯಾರೂ ಆಕ್ಸಿಡೆಂಟ್ ಆಗಿ ಅವಳ ಹೆಣ ಬೀಳ” ಅಂತ ನೆಗೆಟಿವ್ ಕ್ಯಾರೆಕ್ಟರ್ಗೆ ಬೈತಿದ್ದರು.
ಉದಯ ಟಿವಿಯ ಒಂದು ದಾರಾವಾಹಿಯಂತೂ ಅದೆಷ್ಟು ಪ್ರಸಿಧ್ದವಾಗಿತ್ತೆಂದರೆ, ಗದ್ದೆಕೆಲಸಕ್ಕೆ ಬರೋ ಹೆಣ್ಣಾಳುಗಳು ಸಂಜೆಯಾಗುತ್ತಿದ್ದಂತೆ, ಟೈಮೆಷ್ಟಾಯ್ತು.. ಟೈಮೆಷ್ಟಾಯ್ತು.. ಅಂತ ಕೇಳೋರು. ಯಾಕ್ರಮ್ಮ ? ಅಂದರೆ “ಐ ನಾವ್ ದಾರಾವಾಹಿ ನೋಡಬೇಕು ,ಐದುವರೆಗ್ ಸರ್ಯಾಗ್ ಹೊಂಟ್ಬುಡಬೇಕು ಅಳಿ. ನೆನ್ನೆ ಬಸಿರಿಗ ವಿಷ ಆಕ್ಬುಟ್ಟಳ, ಇವತ್ ಅದೇನಾದ್ದೋ ಅದೇನಾದ್ದೋ, ನೋಡ್ಲೇಬೇಕು” ಅನ್ನೋರು. ದುಡ್ ಬೇಕಾದ್ರೆ ಹತ್ತಿಪ್ಪತ್ ಕಡಿಮೆ ಕೊಡಿ , ಆದ್ರೆ ಹತ್ ನಿಮಿಷ ಜಾಸ್ತಿ ಕೆಲಸ ಮಾತ್ರ ಆಗಲ್ಲ ಅನ್ನುತ್ತಿದ್ದರು.
ಅವರೆಲ್ಲ ಹೊರಟಮೇಲೆ ನಾನೂ ಅಮ್ಮ ಬರುತ್ತಿದ್ದರೆ ಇಡೀ ಬೀದೀಲಿ ಒಬ್ರೇ ಒಬ್ಬರೂ ಇಲ್ಲ.. ಎಲ್ಲರ ಮನೆಯ ಒಳಗಿಂದಲೂ ಒಂದೇ ಟೈಟಲ್ ಸಾಂಗ್ ಬರ್ತಿದೆ.. ಎಷ್ಟರಮಟ್ಟಿಗೆ ಅಂದರೆ. ಎರಡು ಮನೆಗಳ ಮಧ್ಯದ ಮನೆಯಲ್ಲಿ ಟಿವಿ ಮ್ಯೂಟ್ ಮಾಡಿದರೂ ಡೈಲಾಗ್ ಕೇಳುವಷ್ಟು.
ಐದು ವರ್ಷಗಳ ಹಿಂದೆ ನನ್ನ ಮದುವೆ, ಸುಮಾರು ನೂರ ಎಪ್ಪತ್ತೆಂಟು ಹಳ್ಳಿಗಳ ಜನ. ಮತ್ತು ಮೈಸೂರಿಗರೂ ಇದ್ದರು. ಟಿ. ಎನ್ ಸೀತಾರಾಮ್.. ಮತ್ತು ನಮ್ಮ ಟಿ ವಿ ಕಲಾವಿದರ ದಂಡೇ ಬಂದಿತ್ತು. ಒಂದು ಗುಂಪು ಸೀತಾರಾಮ್ ಸರ್ ಸುತ್ತ ಆದರೆ ಮತ್ತೊಂದು ಹೆಂಗಸರ ಗುಂಪು ಪ್ರಸಿಧ್ದ ದಾರಾವಾಹಿಯ ನೆಗೆಟಿವ್ ರೋಲ್ ಮಾಡುತ್ತಿದ್ದ ಹುಡುಗಿಯ ಸುತ್ತ! ನನಗೆ ಸೂಕ್ಷ್ಮ ಗೊತ್ತಾಗಿತ್ತು. ಆಮೇಲೆ ಅವಳೂ ಹೇಳಿದಳು. ಹಳ್ಳಿಗಳ ಹೆಂಗಸರು ಅವಳಿಗೆ ಹೀನಾಮಾನ ಬೈದುಹಾಕಿದ್ದಾರೆ. ಮದುವೆ ಮುಗಿಸಿ ಊರಿಗೆ ಹೋದಾಗ ಕೆಳಿದ್ದರು “ ಆ ಕತ್ತೆಲೌಡೀನ ಯಾತಕ್ ಕರೆದಿದ್ದೆ? ಮನೆಹಾಳ್ ಮಾಡ್ಬಿಡ್ತಾಳೆ ಹುಷಾರು” !!
ಹೌದು, ಚಂದ್ರಕಾಂತದ ಟೈಟಲ್ ಸಾಂಗನ್ನ ಪುಟ್ಟ ಕೈಗಳಲ್ಲಿ ಶ್ರಧ್ದೆಯಿಂದ ಬರೆದಿಟ್ಟುಕೊಳ್ಳುತ್ತಿದ್ದ ನಾನು, ನೋಡ ನೋಡುತ್ತಿದ್ದಂತೆ ಸೀರಿಯಲ್ ಡೈಲಾಗು ಬರೆಯಲು ಬಂದುಬಿಟ್ಟಿದ್ದೆ.! ಈಗ ಎಷ್ಟೊಂದು ಸುಲಭ! ಮನೆಯಲ್ಲಿ ಕೂತು ಟೈಪಿಸಿ ಮೇಲ್ ಮಾಡಿಬಿಡ್ತೀರ.. ಆಗ ಕನ್ನಡದ ಮೊಟ್ಟ ಮೊದಲ ದಾರಾವಾಹಿಗಳು ಶುರುವಾದಾಗ ಎಲ್ಲರಿಗೂ ಹೊಸತು,, ಎಷ್ಟೊಂದು ಕಷ್ಟವಿತ್ತು ಅಂತ ಸೀತಾರಾಮ್ ಸರ್ ಆಫೀಸಿನಲ್ಲಿ ಎಲ್ಲರೂ ಮಾತಾಡುತ್ತಿದ್ದರೆ, ಆಗ ನಾನು ಯಾವುದೋ ಹಳ್ಳಿಯಲ್ಲಿ ಕೂತು ಈ ಯಾವ ಪರದೆ ಹಿಂದಿನ ಕಥೆಯೂ ಗೊತ್ತಿಲ್ಲದೆ ಮುಗ್ದವಾಗಿ ಟಿವಿ ನೋಡುತ್ತಿದ್ದುದು ನೆನಪಾಗುತ್ತಿತ್ತು. ಬಾಲ್ಯದ ಮುಗ್ದ ದಿನಗಳಲ್ಲಿ ಹುಟ್ಟಿಕೊಂಡ ಟಿವಿ , 2008-2009ರವರೆಗೂ ಟಿವಿ ನನ್ನೊಟ್ಟಿಗೇ ಸಾಗಿ ಬಂದ ಹಾಗೆ ಅನಿಸುತ್ತಿತ್ತು. ಆದರೆ ಆಮೇಲೆ?
ಎಷ್ಟೊಂದು ಚಾನಲ್ಲುಗಳು! ಎಂಟರ್ಟೇನ್ಮೆಂಟ್ ಜೊತೆಗೆ ನ್ಯೂಸ್ ಚಾನಲ್ಗಳ ಧಾಳಿಯೂ..ಎಷ್ಟೊಂದು ವೇಗದ ಬೆಳವಣಿಗೆ! ನನ್ನನ್ನು ದಾಟಿಕೊಂಡು, ನಿಲುಕಲಾರದಷ್ಟು ದೂರಕ್ಕೆ ಹೋಗಿಬಿಟ್ಟಿವೆಯೇನೋ ಅನಿಸುತ್ತದೆ. ಭಾವಗಳ ಜಾತ್ರೆಯ ಜಾಗಕ್ಕೀಗ ಯಾವುದೋ ವಿದೇಶೀ “ಮಾಲ್” ಬಂದ ಹಾಗನಿಸುತ್ತದೆ. ವಾರ್ತೆಗಳ ನಡುವೆ ಸಣ್ಣ ತಪ್ಪಾದರೂ “ಕ್ಷಮಿಸಿ” ಅನ್ನುತ್ತಿದ್ದ ಸಬೀಹಾ.. ಅಪರ್ಣಾ ಬದಲು,ದಿನಕ್ಕೆ ನೂರು ಬಾರಿ ಜನರ ಕ್ಷಮೆ ಕೇಳಬೇಕಾದ ಕಾರ್ಯಕ್ರಮಗಳಾಗುತ್ತಿವೆ.ಕೇಳುವುದಿಲ್ಲವಷ್ಟೆ.!
ನಮ್ಮೂರ ಮಾಜಿ ಎಂಎಲ್ಎ ಈಗ ಸತ್ತುಹೋಗಿದ್ದಾರೆ, ಊರೊಟ್ಟಿನ ಟಿವಿಯ ಜಾಗವೂ ಖಾಲಿಯಾಗಿದೆ. ಅದನ್ನಿಟ್ಟಿದ್ದ ಮರದ ಬಾಕ್ಸನ್ನೂ ಇತ್ತೀಚೆಗಷ್ಟೇ ತೆಗೆದು ತಿಪ್ಪೆಗೆಸೆದದ್ದಾಗಿದೆ. “ಐ “ಮೊನ್ನೆ ಬಸವಣ್ಣ 32 ಇಂಚಿನ್ ಟಿವಿ ತಂದನಲ್ಲ. ಗ್ವಾಡೆಗೇ ನ್ಯಾತಾಕದು. ನಮ್ಮೂರ್ಲೇ ಯಾರೂ ತಂದಿಲ್ಲ ಅಷ್ಟ್ ದೊಡ್ದು”. .ಅಂತ ಮಾತಾಡಿದರೆ, ಇನ್ಯಾವನ ಕುಂಡೆಗೋ ಚುಚ್ಚಿದಂತಾಗಿ 21 ಇಂಚನ್ನ ಬದಲಿಸುತ್ತಾನೆ. ಇಂಚುಗಳೂ ಈಗ ಪ್ರತಿಷ್ಟೆಯ ಪ್ರಶ್ನೆ.! ಜಮೀನಿಂದ ಸಂಜೆ ಬಂದರೆ ಗೊಂದಲಮಯ. ಒಂದೊಂದು ಮನೆಯೊಳಗೂ ಒಂದೊಂದು ಶಬ್ದ. ಹಳ್ಳಿಯ ಯುವಕರೆಲ್ಲ ಪೆಪ್ಸಿ ಕೋಕು ಕುಡಿಯುತ್ತಾರೆ. ಮಕ್ಕಳೆಲ್ಲ ಡಾರ್ಕ್ ಫ್ಯಾಂಟಸಿ, ಲೇಸು, ಓರಿಯೋ, ಕುರುಕುತ್ತಾರೆ. ಟಿವಿ, ಸಿನೆಮಾದ ಹೀರೋ ಹೀರೋಯಿನ್ನಿನ ಹೆಸರುಗಳೇ ನಮ್ಮೂರ ಪುಟ್ಟ ಕಂದಮ್ಮಗಳದೂ. ಟಿವಿ, ಸಿನೆಮಾ ತಾರೆಯರ ವಿವರಗಳು ಇಲ್ಲೆ ಕೆಲಸ ಮಾಡುವ ನನಗಿಂತ ಅವರಿಗೇ ಹೆಚ್ಚು ಗೊತ್ತು.! ಇಪ್ಪತ್ತು ವರ್ಷಗಳ ಟಿವಿ ಜಗತ್ತಿನ ವೇಗದ ಬೆಳವಣಿಗೆ ಅಷ್ಟೇ ವೇಗವಾಗಿ ನನ್ನ ಹಳ್ಳಿಯನ್ನೂ ಬದಲಿಸಿಬಿಟ್ಟಿತಾ? ಮಾಯಾಪೆಟ್ಟಿಗೆ!!
ಹೋದ ವಾರ ಊರಿಗೆ ಹೋಗಿದ್ದೆ. ತೋಟದ ಮನೇಲಿ ಶುಕ್ರವಾರದ ಎಪಿಸೋಡು ಮುಗಿದಾಗ ಧಾರಾವಾಹಿಯೊಳಗೆ ಹೆಂಗಸೊಬ್ಬಳು ತರಕಾರಿ ಕತ್ತರಿಸುತ್ತಿದ್ದಳು. ದೊಡ್ಡಮ್ಮ ಕೇಳಿದರು. “ ಓ.. ಮುಗ್ದೋಯ್ತಾ.. ಸರಿ ಬುಡು..ಅಯ್ಯೋ ಪಾಪ, ಇನ್ನು ಸೋಮಾರ ಬರಗಂಟ ಅಂವ ಇಳಗಮಣ ಮುಂದೇ ಕುಂತಿರ್ಬೇಕಾ?”
 

‍ಲೇಖಕರು G

September 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಟಿ.ವಿ. ಪುರಾಣವನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ.
    ಹಾಗೆ ನೋಡಿದರೆ ಹಳ್ಳಿಯಲ್ಲಿ ಮೊಟ್ಟಮೊದಲ ಟಿ.ವಿ.ಕಂಡವರೆಲ್ಲರ ಅನುಭವ ಡಿಟೊ.
    ಆದರೆ ನೀವದನ್ನು ನಿರೂಪಿಸಿದ ಶೈಲಿ ,,,,
    ಕುಸುಮರವರಿಗೆ ಮಾತ್ರ ಸಾಧ್ಯ.
    ಚೆಂದದ ಲೇಖನ.

    ಪ್ರತಿಕ್ರಿಯೆ
  2. ನಾಗೇಂದ್ರ ಶಾನುಭೊಗ

    ನಮ್ಮೊಳಗೆ ಟ.ವಿ.ಯೋ….?
    ಟಿ.ವಿ.ಯೊಳಗೆ ನಾವೋ…?
    ನಾವು.ಟ.ವಿ.ಗಳೆರಡು ಭ್ರಮೆಗಳೊಳಗೋ….!

    ಪ್ರತಿಕ್ರಿಯೆ
  3. Ramachandra Hegde

    “ಊರೊಟ್ಟಿನ ಟೀವಿಯೂ ಇಲ್ಲ, ಊರೂ ಒಟ್ಟಿಗಿಲ್ಲ” – ಶೀರ್ಷಿಕೆಯೇ ಎಲ್ಲವನ್ನೂ ಹೇಳುತ್ತಿದೆ ಕುಸುಮಾ …. ತುಂಬಾ ಭಾವನಾತ್ಮಕ ಬರಹ… ಬಹುಷಃ ಇಲ್ಲಿರುವ ಭಾಷೆ ಬೇರೆ ಇರಬಹುದು, ಆದರೆ ಭಾವನೆಗಳು ಮಾತ್ರ ನಮ್ಮೆಲ್ಲರದ್ದೂ ಕೂಡಾ… ಓದುತ್ತ ಓದುತ್ತಾ ಆ ದಿನಗಳ ನೆನಪಾದವು… ಚೆಂದದ ಬರಹ… ಧನ್ಯವಾದ

    ಪ್ರತಿಕ್ರಿಯೆ
  4. amardeep.p.s.

    ನಾವು ಟೀವಿ ನೋಡೋದಿಕ್ಕೆ ಹೋಗಿ ಬೈಸಿಕೊಂಡು, ಕತ್ತು ಹಿಡಿದು ಆಚೆ ನೂಕಿಸಿಕೊಂಡು ಬಂದದ್ದು, ಅಷ್ಟಾದರೂ ಟೀವಿ ಯಾರ ಮನೆಯೆಲ್ಲಾದ್ರೂ ನೋಡಿಯೇ ತೀರಬೇಕೆಂದು ಅಲೆದಿದ್ದು ನೆನಪಾಯ್ತು … ಇಷ್ಟವಾಯ್ತು ಮೇಡಂ ಬರಹ .

    ಪ್ರತಿಕ್ರಿಯೆ
  5. vidyashankar

    Very tasty article 🙂 ಬದಲಾವಣೆ, ಬೆಳವಣಿಗೆ ಗ್ರಹಿಸಿದ್ದೀರಿ!

    ಪ್ರತಿಕ್ರಿಯೆ
  6. Rajan

    ನನ್ನ ನೆನಪುಗಳು ಸ್ವಲ್ಪ ಬೇರೆ!
    ಆಗ India Vs. Australia ಕ್ರಿಕೆಟ್ ನಡೆಯುತ್ತಿದ್ದಾಗ ಬೆಳ್ಳಂ ಬೆಳಗ್ಗೆ ೪ ಘಂಟೆಗೆ ಎದ್ದು ಯಾರ ಮನೆ ಟಿ.ವಿ. on ಇದೆ ಅಂತಾ ಮನೆಯಲ್ಲಿ ಟಿ.ವಿ. ಇದ್ದ ಮೂರೂ ಮನೆಗಳ ಮುಂದೆ ಕಳ್ಳರ ರೀತಿ ಠಳಾಯಿಸುತ್ತಿದ್ದು ಯಾವುದಾದರೂ ಟಿ.ವಿ. on ಇರುವ ಸೂಚನೆ ಸಿಕ್ಕ ಕೂಡಲೇ ಮಾನ, ಮರ್ಯಾದೆ ಎಲ್ಲವನ್ನೂ ಬಿಸಾಕಿ ಬಾಗಿಲು ತಟ್ಟಿ, ಬೈಸಿಕೊಂಡು ಮ್ಯಾಚ್ ನೋಡಿದಾಗ ಸ್ವರ್ಗ ಸಿಕ್ಕ ಅನುಭವ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: