ಕುಸುಮಬಾಲೆ ಕಾಲಂ : ನಮ್ಮ ಹೊಲದಂಚಿಗೆ ಬೋರ್ಡು ’ಒಳಗೆ ಪ್ರವೇಶವಿಲ್ಲ’


“ಎಲ್ಲಿದ್ದೀರಿ”? ಫೋನಿನ ಪ್ರಶ್ನೆ. “ಇವತ್ತು ಊರಿನಲ್ಲಿದ್ದೇನೆ. ಆಯರಹಳ್ಳಿಯಲ್ಲಿ.” ಯುಗಾದಿ ಹಬ್ಬಕ್ಕೆ ಏನು ನಿಮ್ಮೂರಲ್ಲಿ ವಿಶೇಷ?” ಕೇಳಿದರು. “ನಮ್ಮೂರಲ್ಲಿ ಗಂಡಸರು ಒಬ್ಬಟ್ಟು ತಟ್ಟುತ್ತಾರೆ. ಅದುವೇ ವಿಶೇಷ” . ಮಹಿಳೆಯರ ಬಗೆಗೆ ವಿಶೇಷ ಕಾಳಜಿಯುಳ್ಳ ಅವರಿಗೆ ತುಂಬಾ ಖುಷಿಯಾಯ್ತು. “ಓಹೋ, ಹೌದೇ? ಹೇಗದು? ಎಲ್ಲಿ ತಟ್ಟುತ್ತಾರೆ? ನಾನೂ ನಿಮ್ಮೂರಿಗೆ ಬಂದು ನೋಡಬೇಕಲ್ಲ?” ಅಚ್ಚರಿಗೊಂಡರು. “ ಖಂಡಿತಾ ಬನ್ನಿ. ನೀವ್ ಊರೊಳಗ್ ಕಾಲಿಡ್ತಿದ್ ಹಾಗೇ. ಮಠದಲ್ಲಿ, ಅರಳೀಕಟ್ಟೇಲಿ, ಬೀದೀಲಿ, ಜಗುಲೀಲಿ. ಸಿಕ್ಕ ಸಿಕ್ಕ ಕಡೆ ಎಲ್ಲ ಗಂಡಸರು ಒಬ್ಬಟ್ ತಟ್ತಾ ಇರ್ತಾರೆ. ಹಬ್ಬದ ಹಿಂದಿನ ದಿನ, ಹಬ್ಬದ ದಿನ, ಮತ್ತು ಹಬ್ಬದ ಮರುದಿನ. ಮೂರು ದಿನ ಮಾತ್ರ. ಆಮೇಲೆ ಯಾರೂ ಕಾಣದ ಹಾಗೆ ಹೊಲ, ಗದ್ದೆ, ತೋಟದ್ ಕಡೆ ಹೋಗಿ ತಟ್ತಾರೆ. ಮೂರ್ ದಿನ ಆದ್ಮೇಲೂ ಊರಲ್ಲೇ ಕಂಟಿನ್ಯೂ ಮಾಡಿದ್ರೆ ಪೋಲೀಸರು ಎತ್ತಾಕೊಂಡ್ ಹೋಗ್ತಾರೆ” .. ಇಷ್ಟು ಹೇಳುವಾಗ ನಗು ಬಂದು, “ಇಸ್ಪೀಟಾಡ್ತಾರೆ ಸಾರ್.. ಅದೇ ನಮ್ಮೂರ ಯುಗಾದಿ ಸ್ಪೆಷಲ್ಲು” ಅಂದೆ ಅವರೂ ನಕ್ಕರು.
“ಹುಲಿಮನೆ” ಅಂತೊಂದು ಆಟ, ಆ ಆಟ ಹೇಗೆ ಆಡುವುದೆಂದು ನನಗೆ ಗೊತ್ತಿಲ್ಲ. ಆದರೆ ಅಪ್ಪ ಅವರ ಸ್ನೇಹಿತರೊಂದಿಗೆ ಆಡುತ್ತಿದ್ದರು. ಜಗುಲಿ ಮೇಲೆ ಸೀಮೆಸುಣ್ಣದಿಂದ್ಲೋ, ಬಳಪದ ಕಲ್ಲಲ್ಲೋ ಅದನ್ನ ಬರೆದುಕೊಳ್ತಿದ್ರು. ಅದು ಚೌಕಾಬರದ ಹಾಗೇ ಚೌಕಾಕಾರದಕ್ಕಿರುತ್ತಿತ್ತು. ಆದರೆ ಅದರೊಳಗಿನ ಮನೆಗಳು, ಚೌಕಾಬರದಂತಲ್ಲ, ಸಣ್ಣ ಸಣ್ಣದಾದ ಅದೆಷ್ಟೋ ಮನೆಗಳು. ಅದರೊಳಗೆಷ್ಟೋ ಇಂಟೂ ಮಾರ್ಕ್ ಹಾಕಲಾದ ಮನೆಗಳು. ಮತ್ತೆ ಕೆಲವು ಖಾಲಿ. ಆ ಸಣ್ಣ ಮನೆಗಳಿಗೆ ತಕ್ಕಂತೆ, ಕಡಲೇಬೇಳೆ ಗಾತ್ರದ ಒಂದಷ್ಟು ಸಣ್ಣ ಕಲ್ಲುಗಳನ್ನು ಇಟ್ಟುಕೊಂಡು ಆಡುತ್ತಿದ್ದರು. ಮನೆಗಳ ತುಂಬ ಕಲ್ಲುಗಳು. ಸ್ವಲ್ಪವೇ ಖಾಲಿ ಮನೆಗಳು ಕಾಣುತ್ತಿದ್ದುದು. ನೋಡುವುದಕ್ಕೇ ಸಿಕ್ಕಾಪಟ್ಟೆ ಕನ್ಪ್ಯೂಷನ್ ಆಗೋ ಥರ ಇತ್ತು.
ಆಗೆಲ್ಲ ನಮ್ಮೂರಲ್ಲಿ ನೀರಾವರಿ ಇರಲಿಲ್ಲ, ಮಳೆ ಆಶ್ರಯದ ಬೆಳೆಗಳು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಜಮೀನಿನ ಕೆಲಸಗಳು ಇಲ್ಲದಾಗ, ಹಗಲೆಲ್ಲ ಬೇಸರವಾಗುತ್ತಿತ್ತು. ಕಾಲ ಕಳೆವುದೇ ಕಷ್ಟವಾಗಿತ್ತು. ಆಗ ಬೇಸಗೆಯ ಬೇಸರಕ್ಕಾಗಿ, ಜಗುಲಿಯಲ್ಲಿ ಇಂತ ಆಟಗಳು ನಡೆಯುತ್ತಿದ್ದವು. ಈ ಹುಲಿಮನೆ ಆಟವಂತೂ ಅದೆಷ್ಟೋ ಹೊತ್ತು ತಲ್ಲೀನವಾಗಿ ಆಡಿಸಿಕೊಳ್ಳುತ್ತಿತ್ತು. ಇನ್ನು ಹೆಂಗಸರಿಗೂ ಬೇಸಿಗೆಯಲ್ಲಿ ಬೇರೆ ಥರದ ಕೆಲಸವಿರುತ್ತಿತ್ತು. ಎಲ್ಲಕ್ಕಿಂತ ಮುಖ್ಯ ಕೆಲಸವೆಂದರೆ ಹಪ್ಪಳ ಸಂಡಿಗೆ ಮಾಡೋದು.
ಈ ಹಪ್ಪಳ ಸಂಡಿಗೆ ಕಾರ್ಯಕ್ರಮಕ್ಕೆ ನಮ್ಮಜ್ಜಿ ಮನೆಗೆ ಎಲ್ಲರೂ ಸೇರುತ್ತಿದ್ದರು. ಮದುವೆಯಾಧ ಎಲ್ಲ ಹೆಣ್ಣುಮಕ್ಕಳೂ ತಮ್ಮ ತಮ್ಮ ಮಕ್ಕಳನ್ನ ಕರೆದುಕೊಂಡು, ತವರಿಗೆ ಹೋಗೋದು. ಅಲ್ಲಿ ಎಲ್ಲರೂ ಸೇರಿ, ಎಲ್ಲರ ಮನೆಗೂ ಆಗುವಷ್ಟು ಹಪ್ಪಳ ಸಂಡಿಗೆ ಮಾಡೋದು. ಜೋಳದ ಹಪ್ಪಳ, ಹುರುಳಿ ಹಪ್ಪಳ, ರಾಗಿ ಹಪ್ಪಳ, ಅಕ್ಕಿ ಹಪ್ಪಳ, ಹಬೆಯ ಹಪ್ಪಳ, ಕುಟುಕಲು ಮಳೆಗೆ, ಕುರುಕಲಿನಂತೆ ಎಣ್ಣೆಯಲ್ಲಿ ಕರಿದೆಯೇ ತಿನ್ನಬಹುದಾದ ಮಸಾಲೆಗಳ ಬೆರೆಸಿದ ಸಣ್ಣ ಸಣ್ಣ, ಸಂಡಿಗೆಗಳು. ಇನ್ನೂ ಎಷ್ಟೊಂದು ವೆರೈಟಿ. ನಾವು , ಅಂದರೆ ಚಿಕ್ಕಮಕ್ಕಳು ಇರದಿದ್ದರೆ, ಈ ಹಪ್ಪಳ, ಸಂಡಿಗೆ ಕೆಲಸ ಆಗುತ್ತಲೇ ಇರಲಿಲ್ಲ ಬಿಡಿ. ಅವರು ಮಾಡಿಕೊಟ್ಟ ಹಪ್ಪಳ, ಸಂಡಿಗೆಗಳನ್ನ ,ತೊಟ್ಟಿ ಮನೆಯ ನಡುವಣ ಅಂಗಳದಲ್ಲಿ , ಮತ್ತು ಮೇಲೆ ಹೆಂಚಿನ ಮೇಲೆ ಹುಲ್ಲು ಹಾಕಿ, ಅದರ ಮೇಲೆ ಹರಡಿದ ಕಾಟನ್ ಸೀರೆ, ಪಂಚೆಗಳ ಮೇಲೆ ಸಾಲಾಗಿ ಜೋಡಿಸಿ , ಒಣಗಿಸಿ,ಅವು ಬಿರುಬಿಸಿಲಿನ ಸೆಟಕೊಂಡಾಗ ಮಗುಚಿ ನೇರವಾಗಿಸಿ, ಒಣಗಿದವನ್ನು ಲೆಕ್ಕಮಾಡಿ ಜೋಡಿಸಿ.. ಮಕ್ಕಳಿಲ್ಲದಿದ್ರೆ ಎಷ್ಟೊಂದು ಕಷ್ಟವಾಗುತ್ತಿತ್ತು. ಅವರಲ್ಲೇ ಯಾರಾದರೂ ಒಬ್ಬರು ಈ ಕೆಲಸಕ್ಕೆ ಎದ್ದು ಬಂದಿದ್ದರೆ, ಅವರವರ ಗಂಡನಮನೆಗಳಿಂದ ತಂದ ಸ್ಟೋರಿಗಳ ಫ್ಲೋ ಕಟ್ ಆಗಿಬಿಡುತ್ತಿತ್ತು!
ಇದಿಷ್ಟರಲ್ಲಿ ನಾನು ಇಷ್ಟಪಟ್ಟು ಮಾಡುತ್ತಿದ್ದ ಕೆಲಸ ಶಾಖದ ಹಪ್ಪಳದ್ದು. ನೀರ್ ದೋಸೆ ಹಿಟ್ಟಿನ ಥರದ ತೆಳ್ಳನೆ ಸಂಪಣ ಅದು. ಒಂದು ಸ್ಟೀಲ್ ತಟ್ಟೆಗೆ ಒಂದು ಸೌಟು ಹಾಕಿಕೊಂಡು ತಟ್ಟೆಯನ್ನ ಕಾರಿನ ಸ್ಟೇರಿಂಗ್ನಂತೆ ಹಿಡಿದು ತಿರುಗಿಸ್ತಾ ತಿರುಗಿಸ್ತಾ ದುಂಡನೆ ಶೇಪ್ ಕೊಡುವುದು. ಒಂದು ಸೆಟ್ ದೋಸೆಯಾಕಾರದಷ್ಟು . ಒಲೆ ಮೇಲೆ ಪಾತ್ರೆಯಲ್ಲಿ ಜಲಿಜಲಿ ಕುದಿವ ನೀರು. ಈ ತಟ್ಟೆಯನ್ನ ತೆಗೆದು ಆ ನೀರಿನ ಪಾತ್ರೆಗೆ ಉಲ್ಟಾ ಮುಚ್ಚೋದು. ಅದು ಹಬೆಯಲ್ಲಿ ಬೆಂದ ಮೇಲೆ, ತೆಂಗಿನ ಗರಿಯನ್ನು ಒಂದು ಐಸ್‍ಕ್ರೀಂ ಸ್ಪೂನಿನಷ್ಟುದ್ದಕ್ಕೆ , ರೆಕ್ಟ್ ಆಂಗಲಿನಲ್ಲಿ ಕತ್ತರಿಸಿಟ್ಟುಕೊಂಡಿರುತ್ತಿದ್ದರು. ಅದರ ಮೂಲಕ ನಾಜೂಕಾಗಿ, ಅದನ್ನ ಬಿಡಿಸಬೇಕಿತ್ತು. ಕೈಯಲ್ಲಿ ಮುಟ್ಟಲಾಗದಷ್ಟು ತೆಳು ಮತ್ತು ಸೂಕ್ಷ್ಮ ಅದು. . ತಟ್ಟೆಯನ್ನು ದಬಾಕಿಕೊಂಡು ಹಾಗೆ ನಿಧಾನ ಬಿಡಿಸ್ತಾ, ನೇರ ಅದನ್ನ ಒಣಹುಲ್ಲಿನ ಮೇಲೆ ಬೀಳಿಸುವುದು. (ಬಟ್ಟೆ ಮೇಲೆ ಹಾಕಲೂ ಸಾಧ್ಯವಿರಲಿಲ್ಲ) ಒಣಗಿದ ಮೇಲೆ ಅದು, ತೆಳ್ಳನೆ, ಗಾಜಿನಂತೆ.ಹೇಗೆಂದರೆ ಟೀವಿಯಲ್ಲಿ ಪಿಯರ್ಸ್ ಸೋಪ್ ಅಡ್ವರ್‍ಟೈಸಿನಲ್ಲಿ ಆಕಡೆ ಅಮ್ಮ ಸೋಪಿಟ್ಟುಕೊಂಡು ನೋಡಿದರೆ, ಈ ಕಡೆ ಮಗಳು ಕಾಣ್ತಾಳಲ್ಲ ಹಾಗೆ ಇರುತ್ತಿತ್ತು.

ಈಗಲೂ ನನಗಿದೊಂದು ಚಮತ್ಕಾರದಂತೆ ಕಾಣುತ್ತದೆ. ಬೇರೆ ಯಾವ ಮಕ್ಕಳಿಗೂ ಆಗದ್ದು ನಾನು ಮಾಡುತ್ತೇನೆ. ಅನ್ನುವ ಗರ್ವಕ್ಕೇ ನಾನು ತಟ್ಟೆ ಸ್ಟೇರಿಂಗ್ ತಿರುಗಿಸುತ್ತಿದ್ದೆ ಅನಿಸುತ್ತದೆ. ಯಾರಾದರೂ ವಿದೇಶೀಯರಿಗೆ , ಈ ಹಪ್ಪಳ ವಿತೌಟ್ ಮಶೀನು ಮಾಡಿದ್ದು ಅಂತ ಹೇಳಿದರೆ , ಅದರ ಬಗ್ಗೆ ಡಾಕ್ಯುಮೆಂಟರಿ ಮಾಡಿಯಾರು. ಇಂತವು ಬೇಕಾದಷ್ಟಿವೆ ಬಿಡಿ ನಮ್ಮ ದೇಶದಲ್ಲಿ..
ಹಪ್ಪಳದ ನಂತರದ್ದು ಹುಣಿಸೇಹಣ್ಣಿನ ಕೆಲಸ. ಹುಣಿಸೇಹಣ್ಣು ಮರದಿಂದ ಉದುರಿಸಿ, ಮೂಟೆ ಕಟ್ಟಿಟ್ಟಿರುತ್ತಿದ್ದಳು ಅಜ್ಜಿ. ಅದರ ಸಿಪ್ಪೆ ಬಿಡಿಸಿ, ಕೆಳಗೆ ಕಲ್ಲು, ಕೈಯಲ್ಲಿ ಸುತ್ತಿಗೆ ಇಟ್ಟುಕೊಂಡು ಅದನ್ನು ಜಜ್ಜಿ ಅದರ ಬೀಜ ತೆಗೆದು, ನಾರು ತೆಗೆದು ಹದಮಾಡಿ ಅದನ್ನ ದಪ್ಪ ಮುದ್ದೆ ಯಂತೆ ಮಾಡಿ, ಕಾಟನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಳ್ಳುವುದು.ಹುಣಿಸೇಬೀಜಕ್ಕೆ ಸೇರಿಗಿಷ್ಟು ಅಂತ ಆ ಊರ ಸಾಬರ ಕೇರಿಯವರು ಕೊಳ್ತಿದ್ದರು. ಆ ಕಾಸು ಮಕ್ಕಳಿಗೆ.
ಇದೆಲ್ಲ ಮುಗಿಸಿ, ಊರಿಗೆ ಮರಳೋ ವೇಳೆಗೆ ಅಪ್ಪ ಬಿತ್ತನೆ ಕಾಳು ತೆಗೆದಿಟ್ಟಿರ್ತಿದ್ರು. ಅಮ್ಮ, ಒಂದು ಬಿದಿರಿನ ಕುಕ್ಕೆಯನ್ನು ಸಗಣಿಯಿಂದ ಸಾರಿಸಿ ಅದರೊಳಗೆ ಬಿತ್ತನೆ ಬೀಜ ತುಂಬಿ ಮರಳು ಮಿಶ್ರಮಾಡಿ, ಬಟ್ಟೆಯಿಂದ ಮುಚ್ಚಿ, ಮೆಂತ್ಯ ಕಾಗದ ರುಬ್ಬಿದ ಮಿಶ್ರಣದಿಂದ ಕುಕ್ಕೆಯನ್ನು ಮುಚ್ಚಿ ಒಣಗಿಸಿದರೆ, ಯಾವ ಹುಳ ಹುಪ್ಪಟೆ ಬರದಂತೆ ಸೀಲ್ ಆಯ್ತು ಅಂತ ಲೆಕ್ಕ.ಇದು ನಮ್ಮ ಮನೆ ಕತೆ ಮಾತ್ರ ಅಲ್ಲ, ಊರ ಎಲ್ಲರದೂ.
ಈಗ ನಮ್ಮದು ಮಳೆ ಆಶ್ರಯದ ಭೂಮಿಯೂ ಅಲ್ಲ, ಬೆಳೆಯೂ ಅಲ್ಲ, ಹುರುಳಿ, ರಾಗಿ, ಭತ್ತ ಗಳ ಊರಿಗೋರೇ ಕೈಬಿಟ್ಟು, ಕಬ್ಬು, ಬಾಳೆ ತೆಂಗಿನಂತ ವಾರ್ಷಿಕ ಬೆಳೆಗಳನ್ನ ಮಾಡುತ್ತೇವೆ. ಹಾಗಾಗಿ ಋತುಗಳಿಗೆ ತಕ್ಕಂತೆ ಏನೂ ನಮ್ಮ ಟೈಮ್ ಟೇಬಲ್ ತಯಾರಾಗಬೇಕಿಲ್ಲ. ಬದಲಾಗಲೂ ಬೇಕಿಲ್ಲ.
ಎಂತಾ ಬೇಸಿಗೆಯಲ್ಲೂ, ನಂಜನಗೂಡ ಸುತ್ತ ಕಪಿಲೆ ಬೇಕಾದಷ್ಟು ಕೈಗಾರಿಕೆಗಳಿಗೆ ಆಶ್ರಯ ನೀಡಿದ್ದಾಳೆ. ಅಕ್ಕ ಪಕ್ಕದ ಊರುಗಳ ಗದ್ದೆಗಳಿಗೆ ಫ್ಯಾಕ್ಟರಿಯ ತ್ಯಾಜ್ಯವೂ ಸೇರುತ್ತದೆ.ಸುತ್ತಲ ಹಳ್ಳಿಗಳ ನಲ್ಲಿಗಳಲಿ ಬರುವ ಕುಡಿವ ನೀರು ಯಾಕೋ ಬಣ್ಣ ತಿರುಗಿದೆ. ಬೇಸಿಗೆಯಲಂತೂ ಜ್ವರ, ಕೆಮ್ಮು,ಬೇದಿ ತಪ್ಪಲ್ಲ. ಆದರೂ ಜನ ಜಮೀನು ಉಳಿಸಿಕೊಂಡಿದಾರೆ. ಬೆಳೆವ ವ್ಯಾಮೋಹಕ್ಕಲ್ಲ. ಬೆಲೆಯ ಬಿಸಿ ಇನ್ನೂ ಏರುವ ನಿರೀಕ್ಷೆಗೆ. ಭುಸ್ವಾಧೀನ ಪ್ರಕ್ರಿಯೆ ಜಾರಿಯಾಗುತ್ತಿದೆ. ನಿಮ್ಮ ಜಮೀನು ತಗೊಂಡು, ನಾವು ಮಾಡುವ ರಸ್ತೆ ನಮ್ಮ ಮನೆಗೆ ಬರ್ತಿತ್ತಾ? ಅದು ಸಾರ್ವಜನಿಕರದು . ಅಂದರೆ ನಿಮ್ಮದೇ ಅಲ್ವಾ? ಅನ್ನೋದು ಮೋದೀಜೀ ನಿನ್ನೆ ಕೇಳಿದ ಪ್ರಶ್ನೆ. ರಾಜ್ಯ ಸರಕಾರ ಈ ಬಜೆಟ್‍ನಲ್ಲಿ ನಮ್ಮೂರ ಬಳಿ ನೂರು ಎಕರೆಯಲ್ಲಿ ಫಿಲ್ಮ ಸಿಟಿ ಘೋಷಿಸಿದೆ. ನಾವು ಕೊಡದಿದ್ದರೂ ಸರಕಾರ ತಾನೇ ಕಿತ್ತುಕೊಳ್ಳಬುಹಾದ ಭೂಮಿಗಾಗಿ ಯಾಕೆ ಬಡಿದಾಡಬೇಕು? ಬರೋ ದುಡ್ಡಿನಲ್ಲಿ ಸಿಟೀಲಿ ಮನೆ ಕೊಂಡು ಬಾಡಿಗೆ ಎಣಿಸಿ ಕೂತರಂತೂ.. ನಮಗೆ ಬೇಸಿಗೆ ಮಳೆಗಳ ಹಂಗಿಲ್ಲ. ನಗರಿಗರಂತೆಯೇ ಥೇಟ್.
ಮತ್ತೆ ಇಡೀ ದಿನ ಕೂತು ಏನು ಮಾಡುವುದಪ್ಪ? ಅನ್ನುವ ಯೋಚನೆಯಿಲ್ಲ. ಬೇಸಿಗೆಯೇನು? ಎಲ್ಲ ಕಾಲಕ್ಕೂ ಬೇಸರ ಕಳೆಯಲಿಕ್ಕೆ ಟೀವಿ ಇದೆ. ಗಂಡಸರಿಗೆ ನ್ಯೂಸು. ಹೆಂಗಸರಿಗೆ ಸೀರಿಯಲ್ಲು, ಮತ್ತು ಮಕ್ಕಳಿಗೆ ಪೋಗೋ ಚಾನೆಲು.. ಟಿವಿಯ ಸುದ್ದಿಗಳು ಏನು ಬರುತ್ತವೋ, ಹೋಟೆಲು, ಮಠ, ಜಗಲಿಗಳಲಿ ಆ ವಿಷಯದ ಮೇಲೆಯೇ ಊರವರ ಪ್ಯಾನಲ್ ಡಿಸ್ಕಷನ್ನು. ಹೆಂಗಸರದು ಧಾರಾವಾಹಿಯ ಕತೆಗಳ ಚರ್ಚೆಗಳು. ಮತ್ತು ಮಕ್ಕಳು ಚೋಟಾ ಭೀಮ್‍ನ ಸಾಹಸಗಳನು ಹಂಚಿಕೊಳ್ಳುತ್ತಾರೆ. ರಾತ್ರಿ ಲೇಟಾಗಿ ಮಲಗಿದರೂ ನಡೀತು. ಬೆಳಗಾಗೆದ್ದು ಹೊಲಕೆ ಏರು ಕಟ್ಟೋದೇನಿಲ್ವಲ್ಲ? ಹಾಗಾಗಿ ನಮ್ಮ ಬೇಸಿಗೆಯೂ ಈಗ ನಿಮ್ಮ ಹಾಗೇ,ಫ್ಯಾನು ಮತ್ತು ಟೀವಿಯೊಂದಿಗೆ.!
ಯುಗಾದಿಯ ದಿನ ಮಠದ ಅಂಗಳದಲ್ಲಿ ಅಪ್ಪ ಇಸ್ಪೀಟು ಕಲಸುವಾಗ ನೆನಪಾಯಿತು, ಅರೆ, ಇವರು ಹುಲಿಮನೆ ಆಡದೇ ಎಷ್ಟು ವರ್ಷವಾಯ್ತು! ಬಹುಶಃ ಅವರೂ ಆ ಆಟ ಮರೆತಿರಲಿಕ್ಕೆ ಸಾಕು, ಕಳೆದ ಐದಾರು ವರ್ಷಗಳಿಂದ ನಮ್ಮೂರ ಮಕ್ಕಳು ಗೋಲಿ, ಕುಂಟೇಬಿಲ್ಲೆ, ಬುಗುರಿ ಆಡಿದ್ದು ನಾನು ನೋಡಿಲ್ಲವೆಂದು ತಕ್ಷಣ ಹೊಳೆದು ಹೋಯ್ತು.. ಇದೆಲ್ಲ ಯೋಚಿಸುತ್ತಾ ಜಗಲೀಲಿ ಕುಳಿತಿರೋವಾಗಲೇ ನಮ್ಮ ಚೆಲುವಾಚಾರಿ ನಡೆದುಹೋಗುತ್ತಿದ್ದ. ನಿಲ್ಲಿಸಿ ಕೇಳಿದೆ, “ಐಕಳ್ಯಾರೂ ಬುಗುರಿ ಮಾಡ್ಕೊಡು ಅಂತ ಕೇಳಲ್ವ ನಿನ್ನ ಈಗ?” “ ಐ ಈಗ್ಯಾರ್ ಅವ್ನೆಲ್ಲ ಆಡತ್ ಕುಂತ್ಕಂಡರು ? ಅದೆಂತೆಂತೆದೋ ಬಂದವಲ್ಲ, ಅವಾಡ್ತರ, ಸ್ಯಾನೇ ಬೇಕು ಅಂದ್ರ ಪ್ಯಾಸ್ಟ್ಲಿಕ್‍ನವ್ ಬಂದವ ತಕ್ಕತ್ತರ, ಯಾಕ ಯೋಳಿ? ನಿಮ್ಮ ಗಂಡಗ್ ಬೇಕಾ? ಅಂದ. “ಬ್ಯಾಡ ಕಣಪ್ಪ, ಸುಮ್ನೆ ಕೇಳ್ದೆ ಅಷ್ಟೆ” ಅಂದೆ.
ಹುಲಿಮನೆ, ಚೌಕಾಬರ, ಕುಂಟೇಬಿಲ್ಲೆಗಳೆಲ್ಲ ಈಗ ನಮ್ಮ ಬದುಕಿನಲ್ಲೇ ಸಂಭವಿಸುತ್ತಿವೆ. ಇದೆಲ್ಲ ಓಲ್ಡ್ ಫ್ಯಾಷನ್ ನೀವು ಚೆಸ್ ಆಡಿ, ಬುದ್ದಿವಂತರಾಗಿ, ಅಂತ ಉತ್ತೇಜಿಸಿ, ಯಾರೋ ನಮಗೆ ಗೊತ್ತಾಗದೇ, ಚೌಕಾಬರದಲಿ ನಮ್ಮ ಕಾಯಿ ಹೊಡೆದಿದ್ದಾರೆ. ಅವರದನ್ನು ಹಣ್ಣು ಮಾಡಿಕೊಳ್ಳುತ್ತಿದ್ದಾರೆ. ಪಗಡೆ ಆಟ ಹೇಗೆಂದೇ ತಿಳಿಯದವರಿಗೂ ಕಲಿಸಿ, ಆಡಿಸಿ, ಸೋಲಿಗಚ್ಚಲು ನಮ್ಮೊಳಗೇ ಶಕುನಿಗಳು ವೇಷ ಮರೆಸಿಕೊಂಡು ಓಡಾಡುತ್ತಿದ್ದಾರೆ. ಫ್ಯಾನು, ಫೋನು, ಟೀವಿ, ಮತ್ತು ಅವರದೇ ಜ್ಯೂಸು ಕುಡಿದು ನಾವು ಬೇಸಿಗೆ ಕಳೆಯುತ್ತಿದ್ದರೆ, ಅಲ್ಲೆಲ್ಲೋ ಗಾಲ್ಪ್ ಆಡುವವರು ಸಜ್ಜಾಗುತ್ತಿದ್ದಾರೆ. ಬಂದಿಲ್ಲಿ ಬೋರ್ಡು ಹಾಕುತ್ತಾರೆ. “ಒಳಗೆ ಪ್ರವೇಶವಿಲ್ಲ”. !
 

‍ಲೇಖಕರು G

March 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಡಾ.ಶಿವಾನಂದ ಕುಬಸದ

    ಒಳ್ಳೆಯ ಲೇಖನ.
    ಐವತ್ತಾದವು.
    ಅಭಿನಂದನೆಗಳು.

    ಪ್ರತಿಕ್ರಿಯೆ
  2. ಮಮತ

    Yes. Wt a writing.!! ಊರಲ್ಲಿಯ ಹಬ್ಬ, ಆಟಗಳು, ಸಂಸ್ಕೃತಿ, ಅದರಲ್ಲಿಯ ಕೌಶಲ್ಯ, ಜಾಣ್ಮೆ, ಊರ ಬದುಕು, ಸಂವಹನ , ಈ ಮೂಲಕ ಹೊರಟ ಲೇಖನಿ ಹಳಿ ಸೀರಿಯಲ್ಲೂ ಟಿ.ವಿ. , ಭೂಮಿ , ಕೈಗಾರಿಕೆ, ಆಕ್ರಮಣ, ನಮ್ಮಲ್ಲೆ ನಮ್ ರೈತರು ಅಪರಿಚಿತರಾದ ಬಗೆ, ಬಂಡವಾಳಶಾಹಿ ಜಗತ್ತಿನ ತಂಕ ಬಂದು ನಿಲ್ತು. ಇದರ ನಂತಥವೂ ಬಹಳ ನೋವಾಗೋದು ರೈತರ ಭೂಮಿಯ ವಶಪಡಿಸಿಕೊಳ್ಳೋ ಪ್ರಕ್ರಿಯೆ, ಮತ್ತು “ಒಳಗೆ ಪ್ರವೇಶವಿಲ್ಲ”

    ಪ್ರತಿಕ್ರಿಯೆ
  3. Anil Talikoti

    ಕಾಲ ಎಲ್ಲವನ್ನೂ ಕಬಳಿಸುತ್ತಿದೆ ಕೂಲಾಗಿ – ಕಾಯುವದಲ್ಲದೆ ಬೇರೆ ಕೆಲಸವಿಲ್ಲ!

    ಪ್ರತಿಕ್ರಿಯೆ
  4. umavallish

    ವಾಸ್ತವವನ್ನು,ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ.

    ಪ್ರತಿಕ್ರಿಯೆ
  5. vidyashankar

    True… Hulimani is logical game… I am king of that game… There is Android App of this Game as well 🙂

    ಪ್ರತಿಕ್ರಿಯೆ
  6. sindhu

    ಕುಸುಂ…
    ಎಷ್ಟ್ ಚೆನಾಗಿದೆ ಅಂದ್ರೆ ಅಷ್ಟ್ ಚೆನಾಗಿದೆ. ಈ ಸಲ ಸ್ವಲ್ಪ ನಿಮ್ ಭಾಷೆ ಪೇಟೆ ಕಡೆಗೆ ಬಂದಿದೆ. ಆಟದ್ ಬಗ್ಗೆ ಬರೆದ ಜೋಷಲ್ಲಿ ಅಂತ ಕಾಣತ್ತೆ. 🙂
    ಆದ್ರೆ ವಿಷ್ಯ ಮಾತ್ರ ಎಂದಿನ ಹಾಗೆ ಎಮ್ಮೆ ಚುಚ್ಮದ್ದೇ!
    ಕೊನೆಯ ಪ್ಯಾರಾ ಕ್ರೆಸೆಂಡೋ>>> ಹುಲಿಮನೆ, ಚೌಕಾಬರ, ಕುಂಟೇಬಿಲ್ಲೆಗಳೆಲ್ಲ ಈಗ ನಮ್ಮ ಬದುಕಿನಲ್ಲೇ ಸಂಭವಿಸುತ್ತಿವೆ. ಇದೆಲ್ಲ ಓಲ್ಡ್ ಫ್ಯಾಷನ್ ನೀವು ಚೆಸ್ ಆಡಿ, ಬುದ್ದಿವಂತರಾಗಿ, ಅಂತ ಉತ್ತೇಜಿಸಿ, ಯಾರೋ ನಮಗೆ ಗೊತ್ತಾಗದೇ, ಚೌಕಾಬರದಲಿ ನಮ್ಮ ಕಾಯಿ ಹೊಡೆದಿದ್ದಾರೆ.
    ಸತ್ಯಸ್ಯ ಸತ್ಯ!
    ನನ್ನ ಮಗಳು, ಹೋದ್ವರ್ಷ ಹಳ್ಳಿಯಿಂದ ಬಂದ ನನ್ನ ಅಣ್ಣನ ಮಗನ ಜೊತೆಗೆ ವಂಡರ್ಲಾ ಹೋಗಿಬಂದಿದ್ದಳು.ಅಲ್ಲೊಂದು ಮೇಲಿಂದ ಜಾರಿಬಂದು ಗುಂಡಿಗೆ ಬೀಳುವ ಆಟವಿತ್ತು. ಇಬ್ಬರೂ ಸಕ್ಕಥ್ ಥ್ರಿಲ್ಲಾಗಿದ್ದರು. ಆಮೇಲೆ ಮತ್ತೆ ನಾವು ಊರಿಗೆ ಹೋದಾಗ ಅಣ್ಣನ ಮನೆಯಲ್ಲಿ ನನ್ನ ಮಗಳ ಪುಟಾಣಿ ಅಣ್ಣ ಅವಳಿಗೆ ಅಂತ ತಾನೇ ತಯಾರಿಸಿದ ಮೇಲಿಂದ ಜಾರಿ ಬಂದು ಗುಂಡಿಗೆ ಬೀಳುವ ಆಟ ರೆಡಿ ಮಾಡಿಕೊಂಡು ಕಾಯುತ್ತಿದ್ದ.
    ತೋಟಕ್ಕೆ ನಮ್ ಹಳ್ಳೀ ಕಡೆ ಮಣ್ಣು ಏರಿಸಿರ್ತಾರೆ. ಅವನು ನಮ್ಮ ಅಡಿಕೆ ತೋಟದ ಒಣಗಿದ ಹಾಳೆಗಳೊಂದಿಷ್ಟನ್ನು ಇಟ್ಟುಕೊಂಡು ಅವರ ಜಾರಾಟಕ್ಕೆ ಒಂದು ಒಳ್ಳೆ ಜಾಗ ಆರಿಸಿಕೊಂಡಿದ್ದ. ಹಳೇ ಅಂಗಿ ಹಾಕು ಅತ್ತೆ ಅಂತ ನನ್ ಕೈಲಿ ಅವನು ನನ್ ಮಗಳ ಬಟ್ಟೆ ಬದಲಾಯಿಸಿದಾಗಲೇ ನಂಗೆ ಅಂದಾಜಾಗಿತ್ತು.
    ನೋಡಲಿಕ್ಕೆ ಎರಡು ಕಣ್ಣು ಸಾಲದು. ಇಬ್ಬರು ಒಂದು ದೊಡ್ಡ ಹಾಳೆ ಮೇಲೆ ಕುಂತು ಎತ್ತರದಿಂದ ಆ ಮಣ್ಣಿನ ರಾಶಿಯಲ್ಲಿ ಜಾರ್ಕೊಂಡು ಬಂದು ಕೆಳಗೆ ಧೂಳಿಗೆ ಬೀಳುತ್ತಿದ್ದರು. ನನ್ನ ಬಾಲ್ಯ, ಮರಳು, ಮಣ್ಣು, ಅಡಿಕೆಸಿಪ್ಪೆ, ಮತ್ತು ಒಣಗಿದ ಸಗಣಿಗಳ ಮೇಲೆ ಹೀಗೇ ಜಾರಿ ಮಜವಾಗಿ ಇದ್ದಿದ್ದು ನೆನಪಾಯ್ತು.
    ನನ್ನ ಮಗಳು ಈ ವಂಡರ್ಲಾ ಸುಪ್ಪರ್ ಇದೆ ಅಮ್ಮ ಎಂದು ನಲಿದಿದ್ದಳು.
    ಈ ಹೊರಾಂಗಣಗಳನ್ನೆಲ್ಲ app ಮಾಡಿದ ನಾವು ನಗರದ ಮಂದಿ..ಏನೆಲ್ಲ ಕಳಕೊಳ್ತಾ ಇದೀವಿ.. 🙁
    ಅಷ್ಟೇ ಅಲ್ಲ ಬರಿಯ ಒಳಾಂಗಣದ ಸೋಫಾದ ಮೆತ್ತೆಗೆ ಅಂಟುತ್ತ ಅಂಟುತ್ತ ನಾವು ಬದುಕಿನ ಬನಿಯನ್ನೇ ಮಿಸ್ ಮಾಡುತ್ತಾ ಇದ್ದೀವಿ. ನೀವೇ ಬರೆದ ಹಾಗೆ ಯಾರೋ ಯಾವತ್ತೋ ಮಾಡಿಟ್ಟ ಜ್ಯೂಸನ್ನ ಚಪ್ಪರಿಸಿಕೊಂಡು ಕುಡಿದು ಮಾತ್ರೆ/ಟಾನಿಕ್ ಕುಡಿಯಬೇಕಾಗಿರುವ ಬದುಕು ಇದು.

    ಪ್ರತಿಕ್ರಿಯೆ
  7. Anonymous

    first para thumba estavetithu yellru oOlige thttudu nice joke but now it was the situation in village only n city all going n MALL, SHOPING COMPLEX & OUT SIDE DINNER BUT NOW DAYS MISSING ALL OLD GAMES NICE ARTICLE (yEELLIDEYA MEENA yELLIDEEYA)…..

    ಪ್ರತಿಕ್ರಿಯೆ
  8. H.R.Naveenkumar

    ನಿಜ ಮೇಡಂ ನೀವು ಹೇಳಿದ್ದೆಲ್ಲವೂ ನಿಜ, ಇಂದಿನ ರೈತನ ಪರಿಸ್ಥಿತಿ ಹೇಗಾಗಿದೆ ಎಂದರೆ ಅವನು ಸಂಪೂರ್ಣವಾಗಿ ಬೇಸಾಯದಿಂದಲೇ ದೂರ ಹೋಡುತ್ತಿದ್ದಾನೆ. ಅದಕ್ಕೆ ನಮ್ಮ ಅಪ್ಪ ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ. “ವ್ಯವಸಾಯ ನೀನ್ ಸಾಯ, ನಿಮ್ ಅಪ್ಪ ಸಾಯ, ಮನೆಮಕ್ಕಳೆಲ್ಲ ಸಾಯ. ಈ ರೀತಿಯಾಗಿಗೆ ರೈತನ ಬದುಕು. ಇದರ ಮರ್ಮವೇನೆಂದು ಯಾರೂ ತಲೆ ಕೆಡಿಸಿಕೊಳ್ಳತ್ತಿಲ್ಲ. ಸರ್ಕಾರದ ಒಂದು ಅಧ್ಯಯನದ ಪ್ರಕಾರವೇ ಪ್ರತಿ ಅರ್ಥ ತಾಸಿಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಸ್ಥಿಯಲ್ಲಿ ರೈತರನ್ನು ಕೃಷಿಯಲ್ಲೇ ಉಳಿಸುವಂತಹ ಯಾವ ಆಶಾದಾಯಕ ತೀರ್ಮಾನಗಳನ್ನು ಮೇಲಿನ ಮೋದಿಯವರು ತೆಗೆದುಕೊಳ್ಳುತ್ತಿಲ್ಲ, ಇಲ್ಲಿನ ಸಿದ್ದಣ್ಣನು ತೆಗೆದುಕೊಳ್ಳುತ್ತಿಲ್ಲ. ಕೊಡುವವರು ಯಾರೂ ಇಲ್ಲ ಎಲ್ಲರೂ ಕಿತ್ತುಕೊಳ್ಳುವವರೇ. ಮೇಲಿನವರು ಭೂಸ್ವಾಧೀನದ ಹೆಸರಿನಲ್ಲಿ ಕಿತ್ತುಕೊಂಡರೆ, ಇಲ್ಲಿಯವರು ಒತ್ತುವರಿಯ ಹೆಸರಿನಲ್ಲಿ ಸಣ್ಣ ಪುಟ್ಟ ಬಡ ರೈತರಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಕಿತ್ತುಕೊಳ್ಳಲು ಹೊಂಚುಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ರೈತ ಮುಖಂಡನ ಮಾರು ನೆನಪಿಗೆ ಬರುತ್ತಿದೆ ‘ಆಲೂಗಡ್ಡೆಯನ್ನು ಜರಾಕ್ಸ್ ಮಿಷನ್ ನಲ್ಲಿಟ್ಟು ತೆಗೆಯೋದಾದರೆ, ಅಥವಾ ಯಂತ್ರದಲ್ಲಾಕಿ ಉತ್ಪತ್ತಿ ಮಾಡೋದಾರೆ ವ್ಯವಸಾಯ ಯಾಕ್ ಬೇಕು ಹೇಳಿ?

    ಪ್ರತಿಕ್ರಿಯೆ
  9. jagadishkoppa@gmail.com

    ಕುಸುಮಾ ಅವರೇ, ನನ್ನದು ಮಂಡ್ಯ, ನಿಮ್ಮದು ಮೈಸೂರು ಸೀಮೆ. ಎರಡು ಕಡೆ ಗಂಡಸರು ಉಗಾದಿಯಲ್ಲಿ ಒಬ್ಬಟ್ಟನ್ನು ಎರಡು ದಿನ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಟ್ಟುತ್ತಾ ಬಂದಿದ್ದರಲ್ಲಾ! ನಿಜಕ್ಕೂ ಅದ್ಯಯನಕ್ಕೆ ಯೋಗ್ಯವಾದ ವಿಷಯ.

    ಪ್ರತಿಕ್ರಿಯೆ
  10. ವೈಶಾಲಿ ಹೆಗಡೆ

    ತುಂಬಾ ಚಂದ ಇದೆ. ಪಗದೆ, ಲೂದೋ ಎಲ್ಲ ಮನೆಯಲ್ಲಿವೆ. ಈಗಲೂ ಫ್ಯಾಮಿಲಿ ಟೈಮ್ ಅಂದರೆ ಅವೇ ಆಟಗಳು ಎಲ್ಲರಿಗೂ ಇಷ್ಟ. ಸೋತಾಗ, ಮಗ ಎಸೆದೆಸೆದು ಎಷ್ಟೆಲ್ಲಾ ಕಾಯಿ ಖಾಲಿಯಾಗಿವೆ ಆದರೂ ಮಗಳು ಏನೇನೋ ಬದಲಿ ಉಪಾಯ ಸಾಧಿಸಿ ಅವು ಮತ್ತೆ ಮತ್ತೆ ಆಡಿಸಿಕೊಳ್ಳುತ್ತವೆ. ಈ ಸರ್ತಿ ಊರಿಗೆ ಹೋದಾಗ ಕವಡೆ ಆಟ ಮಕ್ಕಳ ಜೊತೆ ನಾನು ತಂಗಿ ಎಲ್ಲ ಸೇರಿ ಆಡಿದೆವು. ಎಷ್ಟೆಲ್ಲಾ ವರ್ಷವಾಗಿತ್ತು, ಗಜ್ಜುಗ, ಕವಡೆ ಎಲ್ಲ ಆಡಿ. ಕವಡೆ ಈಗ ಸಮುದ್ರ ದಾಟಿದೆ. ಎಲ್ಲ ಆಟಕ್ಕಿಂತ ಅದಕ್ಕೆ ಹೆಚ್ಚು ಡಿಮ್ಯಾಂಡು ಈಗ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: