ಕುಸುಮಬಾಲೆ ಕಾಲಂ : ಮತ್ತೆ ಮತ್ತೆ ಭ್ರಮೆಗಳು ಮುರಿಯುತ್ತವೆ…

ಈ ಬದುಕು ಹಾಗೇ, ನಾವೇನು ಮಾಡಬಾರದು ಅಂದುಕೊಳ್ಳುತ್ತೇವೋ, ಅದನ್ನೇ ನಮ್ಮಿಂದ ಮಾಡಿಸಿಬಿಡುತ್ತದೆ. ಹಾಗೇ ನಮ್ಮ ಘನವೆತ್ತ ಅಭಿಪ್ರಾಯಗಳಿಗೆ, ವಾದಗಳಿಗೆ ಕೆಲವರ್ಷಗಳ ನಂತರ ನಮ್ಮ ಎದುರು ನಮ್ಮನ್ನೇ ನಿಲ್ಲಿಸಿ, ಪಾಟೀಸವಾಲು ಮಾಡುತ್ತದೆ. ಅಲ್ಲೂ ನಾವೆ ಇಲ್ಲೂ ನಾವೇ, ಸಿನೆಮಾದ ಡಬಲ್ ಆಕ್ಟಿಂಗ್ ತರ. ಏಕಪಾತ್ರಾಭಿನಯ. ಪ್ರಶ್ನ ಉತ್ತರ, ಪ್ರತ್ಯುತ್ತರ, ಪ್ರತಿಉತ್ತರ ಎಲ್ಲವೂ ನಮಗೆ ನಾವೇ. ನಿಮಗೂ ಆಗಿರಬೇಕು ಈ ಅನುಭವ. ನನಗೂ ಆಗಿದೆ.
“ಹೊಸನೆತ್ತರುಕ್ಕುಕ್ಕುತ್ತಿದ್ದ ಸಮಯ ಅದು. ಅನ್ಯಾಯ ಕಂಡರೆ ಪ್ರತಿಭತಿಸಬೇಕು. ಶೀಘ್ರಗತಿಯಲ್ಲಿ, ಸಾಧ್ಯವಾದರೆ ನಾಳೆಯೆಂಬ ನಾಳೆಯೇ ಈ ದೇಶ ಬದಲಾಗಿಬಿಡಬೇಕು. ನಮ್ಮ ಸಂಕಲ್ಪ ಉಗ್ರವಾಗಿದ್ದರೆ, ಲಕ್ಷ ಲಕ್ಷ ನರಿಗಳ ಕೂಗು ಸೇರಿದರೆ ಅದು ಗಿರಿ ಮುಟ್ಟಲೇಬೆಕು ಗುರಿಸೇರಲೇಬೇಕು. ಕಾಲೇಜಿಗೆ ಚಕ್ಕರ್ ಪ್ರತಿಭಟನೆಗೆ ಹಾಜರ್. “ಕಟ್ಟುವೆವು ನಾವು ಹೊಸನಾಡೊಂದನು” ಘೋಷವಾಕ್ಯ. ಉಸಿರ ಮಂತ್ರ. ಆ ದಿನಗಳಲಿ.
ಇಂತಿಪ್ಪ ಸಮಯದಲಿ, ಅಂದರೆ, 2005 ರಲಿ, ಎಕ್ಸಾಮಿಗೆಂದು ಬೆಳಗಿನ ಬಸ್ಸು ಹತ್ತಿ , ನಮ್ಮೂರಿಂದ ಮೈಸೂರಿನ ಕಾಲೆಜಿಗೆ ಹೊರಟಿದ್ದೆ. ಬಸ್ಸೊಳಗೆ ಒಬ್ಬ ಧಡೂತಿ ಕಂಡಕ್ಟರ್.. ದಿನಾ ಅದೇ ಬಸ್ಸಿಗೆ ಕೆಲಕ್ಕೆಂದು ಹೋಗೋರಿಗೂ ಅವನಿಗೂ ಅಡ್ನಸ್ಟ್ ಮೆಂಟು. ಅರ್ಧ ದುಡ್ಡು, ಹಳೇ ಟಿಕೇಟು. ಅವತ್ತು ಬಸ್ಸಿನಲಿ, ಮೆಟ್ಟಿಲ ಮುಂದಲ ಸಣ್ಣ ಜಾಗದಲಿ ತನ್ನ ಸೊಪ್ಪಿನ ಕುಕ್ಕೆ ಇಟ್ಟುಕೊಂಡು ಕೂತಿದ್ದ ಮುದುಕಿಗೆ “ಟಿಕೇಟ್” ಅಂದ. ಅವಳು ಹತ್ತು ರೂಪಾಯಿ ಕೊಟ್ಟಳು. ಬಸ್ಚಾರ್ಜು 12 ರೂಪಾಯಿ. ಅವನು ಟಿಕೆಟ್ ಹರಿಯಲಿಲ್ಲ. ಅವಳು ಇಷ್ಟೇ ಇರಾದು ಅಂದಳು. ಅವನು ಆ ದುಡ್ಡು ಇಸಕೊಂಡು, ಮುಂದಿನ ಸ್ಟಾಪಲ್ಲಿ ಇಳಿದವರ ಹಳೆ ಟಿಕೆಟು ಮುದುಕಿಗೆ ಕೊಟ್ಟು ಕೂರಿಸಿದ.
ಬಸ್ಸಿಳಿದು ಟಿಸಿ ಹತ್ತಿರ ಹೋಗಿ, ಪ್ರವರ ಹೇಳಿದೆ. ಕಂಪ್ಲೇಂಟ್ ಮಾಡಿದೆ. ಅವರು “ಬಾಯಲ್ ಹೇಳಿದ್ರೆ ಆಗಲ್ರೀ, ರೂಟ್ ನಂಬರ್ ಬರ್ದು ವ್ರಿಟನ್ ಕಂಪ್ಲೇಟ್ ಕೊಡ್ರೀ. ನಿಮ್ ಅಡ್ರಸ್ ಪೂರಾ ಬರೀರಿ” ಅಂತ ಗದರಿಸಿದ. ಬರೆದೆ. ಆದರೆ ಅವರು ಕ್ರಮ ಕೈಗೊಳ್ಳೋ ಬಗ್ಗೆ ನನಗೆ ಯಾವ ನಂಬಿಕೆಯೂ ಇರಲಿಲ್ಲ. ಪರೀಕ್ಷೆ ಮುಗಿಸಿ, ಈ ಟಿಕೆಟ್ ವಂಚನೆ, ಲೇಡೀಸ್ ಸೀಟ್ ಪುರಾಣ, ಕಂಡಕ್ಟರುಗಳ ಅಸಭ್ಯ ವರ್ತನೆ ಎಲ್ಲವನ್ನೂ ಇಷ್ಟೂದ್ದ ಬರೆದು “ಆಂದೋಲನ” ಪತ್ರಿಕೆಗೆ ಕೊಟ್ಟು ಬಂದೆ.
ಮರುದಿನ ಅದೇ ಬಸ್ಸು ಅದೇ ಟೈಮು. ಅದೇ ಸೊಪ್ಪಿನ ಮುದುಕಿ, ಅದೇ ಕಂಡಕ್ಟರು, ಅದೇ ಟಿಕೆಟ್ ಮೋಸ. ಒಂದೂ ಮಾತಾಡದೇ ಬಸ್ಸಿಳಿದೆ. ಅಲ್ಲೆ ಪೇಪರುಗಳನ್ನು ಹರವಿಕೊಂಡಿದ್ದ ಹುಡುಗ. ಪೇಪರ್ ಕೊಂಡು ನೋಡಿದರೆ , ಬರೆದದ್ದು ಪ್ರಕಟವಾಗಿತ್ತು! ಕಂಡಕ್ಟರ್ ಬಸ್ ಬಾಗಿಲ ಬಳಿನಿಂತು ಚಿಲ್ಲರೆ ಕೊಡೋದರಲ್ಲಿ ಮಗ್ನನಾಗಿದ್ದ. ಮತ್ತೊಂದು ಪೇಪರ್ ಕೊಂಡೆ. ಆ ದೊಡ್ಡ ಹೊಟ್ಟೆಯ ಕಂಡಕ್ಟರ್ ಅವತ್ತು ಬಿಳಿಯ ಶರ್ಟು ಹಾಕಿ ತನ್ನ ಯೂನಿಫಾಮ್ ಅನ್ನು ಜಾಕೆಟ್ ಥರ ಹಾಕಿಕೊಂಡು ನಿಂತಿದ್ದು ಚೆನ್ನಾಗಿ ನೆನಪಿದೆ.ಪೇಪರ್ ಅವನಿಗೆ ಕೊಟ್ಟು, “ತಗೊಳಿ. ಇದರಲ್ಲಿ ನಿಮ್ಮ ಬಗ್ಗೆ ಬಂದಿದೆ ಓದಿ” ಅಂತ ಹೇಳಿ ಹೋಗಿಬಿಟ್ಟೆ. (ಎಕ್ಸಾಮಿಗೆ ಲೇಟಾಗಿತ್ತೋ, ಅಥವಾ ಅಲ್ಲಿ ನಿಲ್ಲುವ ಧೈರ್ಯವಿರಲಿಲ್ಲವೋ ಗೊತ್ತಾಗುತ್ತಿಲ್ಲ !)
ಈ ಲೇಖನದಿಂದ ಏನೇನೇನೆಲ್ಲ ಆಗಿಹೋಯಿತು. ಎಷ್ಟೆಲ್ಲಾ ಘಟನೆಗಳು ನಡೆದವು. ತಿಂಗಳುಗಟ್ಟಲೆ ಇದರ ಪರಿಣಾಮ, ಮಾತು ಚರ್ಚೆ, ಜಾರಿಯಲ್ಲಿತ್ತು. ವ್ಯವಸ್ಥೆಯಲ್ಲಲ್ಲ. ವೈಯಕ್ತಿಕ ಬದುಕಲ್ಲಿ. ವ್ಯವಸ್ಥೆಯದು ಆಗಲೂ ಈಗಲೂ ಯಥಾಸ್ಥಿತಿ.!
ಆಮೇಲೆ ನಾನು ಬೆಂಗಳೂರಿಗೆ ಬಂದು ಬಿದ್ದೆ. ಮೂರ್ನಾಲ್ಕು ವರುಷ ಸೀರಿಯಲ್ ಕೆಲಸ ಮಾಡಿ, ಏಕತಾನತೆಯಿಂದ, ಉದ್ದೇಶವಿಲ್ಲದ ಬದುಕ ನಡೆಯಿಂದ ಬೇಸತ್ತು ಹೋಗಿದ್ದೆ. ನ್ಯೂಸ್ ಚಾನೆಲ್ ಸೇರಿದರೆ ಸಾರ್ಥಕ ಕೆಲಸ ಮಾಡಬಹುದೆಂಬ “ಭ್ರಮೆ”ಯಿಂದ ಅಲ್ಲಿ ಹೋದೆ. ಧಾರಾವಾಹಿ ಬುಸುಗುಟ್ಟೋ ಹಾವು, ನ್ಯೂಸ್ ಚಾನಲು ಕಚ್ಚೋ ಹಾವೆಂಬುದು ಅರಿವಾಗಿ, ಹೊರಬಂದದ್ದು ಬೇರೆಯದೇ ಕಥೆ.

ಎಲ್ಲ ಸಮಯದಲೂ ಇರುವಂತೆ ಆ ಸಮಯದಲೂ ಒಂದು ಘನಸರ್ಕಾರವಿತ್ತು. ಎಲ್ಲ ಸರ್ಕಾರದಲೂ ಇರುವಂತೆ ಆ ಸರ್ಕಾರದಲೂ ಒಬ್ಬ ಸಾರಿಗೆ ಮಂತ್ರಿಯಿದ್ದರು. ಅವರ ನೇತೃತ್ವದಲಿ ಬೆಂಗಳೂರಿನ ಬಸ್ಸುಗಳಿಗೆ ಹೊಸ ರೂಪ ಕೊಡಲಾಯ್ತು. ಕಂಪನಿಯೊಂದರಿಂದ ನೂರಾರು ಹೊಸ ಬಸ್ಸುಗಳನು ತರಿಸಲಾಯ್ತು. ಆದರೆ ಆಮೇಲೆ ಈ ಬಸ್ಸುಗಳು “ಪ್ರಯಾಣ ಸ್ನೇಹಿ” ಆಗದೇ ಕ್ಷಮತೆಯಲ್ಲೂ ಸೋತವು. ಅದರ ಬಗ್ಗೆ ಚಾನೆಲಿನಲಿ,ಸ್ಟೋರಿ ಮೇಲ್ ಸ್ಟೋರಿ ಮಾಡಿದ್ದೇ ಮಾಡಿದ್ದು. ಬರೆದದ್ದೇ ಬರೆದದ್ದು. ಅದೇ ಕಂಪನಿಯಿಂದ ಬಸ್ಸು ತರಿಸಿಕೊಳ್ಳಲು ಇವರಿಗೆ ಎಷ್ಟು ಕೋಟಿಗಳು ಸಂದವು. ಮತ್ತು ಸರಕಾರದ ಬೊಕ್ಕಸದಿಂದ ಆ ನಿರುಪಯುಕ್ತ ಬಸ್ಸುಗಳಿಗೆ ಎಷ್ಟೆಷ್ಟು ಕೋಟಿ ಖರ್ಚು ಮಾಡಲಾಯ್ತು. ಈಗ ಕೆಲಸಕ್ಕೆ ಬಾರದ ಬಸ್ಸುಗಳ ಏನು ಮಾಡೋದು? ಈ ಭಾರೀ ನಷ್ಟದ ಹೊಣೆ ಯಾರು ಹೊರಬೇಕು? ಸಾರ್ವಜನಿಕರ ಹಣಕ್ಕೆ ಬೆಲೆ ಇಲ್ಲವೇ? ಪ್ರಶ್ನೆ ಮೇಲ್ ಪ್ರಶ್ನೆಗಳು. ಆದರೆ ಇದ್ದಕ್ಕಿದ್ದಂತಯೆ ಈ ಸ್ಟೋರಿ ಫಾಲೋ ಅಪ್ ನಿಲ್ಲಿಸಲಾಯ್ತು. “ಈ ಪ್ಯಾಕೇಜ್ ಪ್ರಸಾರವಾಗುತ್ತಿದ್ದಂತೆಯೇ ಜನರಿಗೆ ಕೋಪ ಉಕ್ಕಿ , ಬೀದಿಗಿಳಿದು ಪ್ರತಿಭಟಿಸುತ್ತಾರೆ ಅನ್ನುವ ಭಾರೀ ವಿಶ್ವಾಸದಲಿ,  ಗಂಟಲು ಕಿತ್ತುಹೋಗುವಂತೆ, ಭಾವಾವೇಶದಿಂದ ನನ್ನ ಇಡೀ ಶಕ್ತಿವ್ಯಯಿಸಿ ಆ ಸ್ಟೋರಿಗೆ ವಾಯ್ಸ್ ಓವರ್ ಕೊಟ್ಟದ್ದನ್ನ ಈಗ ನೆನಪಿಸಿಕೊಂಡರೆ, ಸಣ್ಣಗೆ ನಗು ಮೂಡುತ್ತದೆ, ವಿಷಾದದೊಂದಿಗೆ.
ಇದಾದ ಮೇಲೆ, ಅಂದರೆ, ನಾನು ನ್ಯೂಸ್ ಚಾನೆಲ್ ಬಿಟ್ಟಮೇಲೆ, ಸಾರಿಗೆ ನೌಕರರ ಪ್ರತಿಭಟನೆ ಶುರುವಾಗಿತ್ತು. ತಮ್ಮ ಸಂಬಳ ಹೆಚ್ಚುಮಾಡಬೇಕೆಂದು ಅವರೆಲ್ಲ ಬೀದಿಗಿಳಿದು ಹೋರಾಡಿದರು. ಸರಕಾರ ಕ್ಯಾರೇ ಅನ್ನಲಿಲ್ಲ. ಅನಿವಾರ್ಯವಾಗಿ ಪ್ರತಿಭಟನೆಯಿಂದೆದ್ದರು, ಬಸ್ಸುಗಳು ಚಲಿಸತೊಡಗಿದವು. ಚಲಿಸಲೇಬೇಕಲ್ಲ. ಬೇರೆ ಕೆಲಸ ಸಿಗುವುದಿದ್ದರೆ, ಅಷ್ಟು ಅನಿವಾರ್ಯವಲ್ಲದಿದ್ದರೆ “ಈ ಹಾಳ್ ಬಡ್ಡೇನ್ ಕೆಲಸಕ್ ಯಾವನ್ ಬರ್ತಿದ್ದ?” ಅಲ್ವಾ?
ಇಷ್ಟಕ್ಕೂ ಅವರ ಸಂಬಳವೆಷ್ಟು? ಈ ಪಾಟಿ ಪ್ರತಿಭಟನೆ ಮಾಡೋಷ್ಟು ಕಡಿಮೆಯಾ? ವಿಚಾರಿಸಿ ನೋಡಿದರೆ, ಹೌದು ತೀರಾ ಕಡಿಮೆರೀ. ಬೆಂಗಳೂರಲ್ಲಂತೂ ಆ ಸಂಬಳ ನೆಚ್ಚಿಕೊಂಡ ಬದುಕೋಕಾಗೋದೇ ಇಲ್ಲ. ಈ ಟ್ರಾಫಿಕ್ ಜಾಮಿನಲಿ ನಮಗೆ ಒಂದು ಕಡೆಯಿಂದ ಇನ್ನೊಂದು ಕಡೆ ಬಸ್ಸತ್ತಿ ಇಳಿದರೇ ಸಾಕಪ್ಪಾ ಅನಿಸುವಾಗ , ಅವರು ಇಡೀ ದಿನ ಅದೇ ಮಾಡ್ತಾರೆ. ಬೇರೆ ಬೇರೆ ಊರ ಬಸ್ಸುಗಳದೂ ಅದೇ ಪಾಡು ಅಲ್ಲವಾ? ಹಗಲೆಲ್ಲ ಬಸ್ಸಲ್ಲಿ ತಿರುಗ್ತಾ , ಅಲ್ಲೆಲ್ಲೋ ಸಿಕ್ಕಿದ್ದನ್ನ ತಿಂತಾ, ಓಡಾಡ್ತಾರಲ್ಲಾ. ಅವರಿಗೊಂಚೂರು ನೆಮ್ಮದಿಯಾಗಿ ಬದುಕೋಷ್ಟ್ ಸಂಬಳ ಕೊಟ್ಟರೇನಾಗತ್ತೆ? ಅದೂ ಸಂಸ್ಥೆ ಲಾಭದಲ್ಲಿರುವಾಗ? ಹೀಗೆ ಕೇಳುವ ನಮ್ಮದು ಮತ್ತೆ ನರಿಕೂಗು.
ಮೊನ್ನೆ ಒಬ್ಬ ಹುಡುಗ ಬಂದಿದ್ದ, ಡಾಕುಮೆಂಟರಿ ಫಿಲ್ಮ ಮಾಡ್ತಿದೇನೆ ಸ್ಕ್ರಿಪ್ಟ್ ಬರಕೊಡಬೇಕು ಅಂತ. ಅವನು ಸಾರಿಗೆ ಸಂಸ್ಥೆಯ ಕೆಲಸ ಬಿಟ್ಟು ಬಂದಿದ್ದ. “ಯಾಕ್ರೀ ಸರಕಾರಿ ಕೆಲ್ಸ ಬಿಟ್ ಡಾಕುಮೆಂಟರಿ ಮಾಡೋಕ್ ಬಂದ್ರಿ?. ಸಂಬಳ ಪ್ರಾಬ್ಲಮ್ಮಾ?” ಅಂದೆ. ಇಲ್ಲವೆಂದ. ಅವನೇನೂ ಡ್ರೈವರೋ ಕಂಡಕ್ಟರೋ ಅಲ್ಲ. ಅಧಿಕಾರಿಯಾಗಿದ್ದನಂತೆ. ಬಸ್ ಗಳನ್ನು ಕ್ಲೀನ್ ಮಾಡಿಸೋ ಕೆಲಸ ಅವನದು, ಆ ಬಸ್ ಕ್ಲೀನಿಂಗ್‍ ಗೆ ಅಂತಲೇ ಬೇಕಷ್ಟು  ಕೇಂದ್ರಗಳಿವೆಯಂತೆ. ಇವನು ಯಾರಿಗಾದ್ರೂ ಕೊಡಬಹುದು. ಇವನು ಕೇಳದಿದ್ರೂ ನಮಗೇ ಕೊಡಿ ಅಂತ ಸೂಟ್‍ಕೇಸಲಿ ತಂದಿಟ್ಟು ಹೋಗ್ತಾರಂತೆ.” ಸಂಬಳ ಏನ್ ಲೆಕ್ಕಕ್ಕೇ ಇರ್ಲಿಲ್ಲ. ಒಂದ್ ಬಸ್‍ಗಿಷ್ಟು, ತಿಂಗಳಿಗಿಷ್ಟ್ ಬಸ್ಸು ಲೆಕ್ಕಹಾಕಿ” ಅಂದ. ನಾನು ಬೇರೇನನ್ನೋ ಎಣಿಸುತ್ತಾ ಕೂತೆ.
ಹತ್ತದಿನೈದು ರೂಪಾಯಿಗೆ ಮೋಸ ಮಾಡಿದನೆಂದು ನಾನು ಅಷ್ಟುದ್ದ ಬರೆದದ್ದನ್ನು ಮತ್ತೆ ನೆನಪಿಸಿಕೊಳ್ಳುತ್ತೇನೆ. ಅವನ್ಯಾವನೋ ಮಿನಿಸ್ಟರು, ಇವನ್ಯಾವನೋ ಅಧಿಕಾರಿ, ಎಸಿಯಲಿ ಕೂತು ಮೈ-ಕೈನೋಯಿಕೊಳ್ಳದೇ ಕೋಟಿಗಳು, ಲಕ್ಷಗಳನು ಬಾಚಿಕೊಳ್ಳುವಾಗ. ಆ ಕಂಡಕ್ಟರು 15 ರೂಪಾಯಿ ಕದ್ದರೇನು ತಪ್ಪು? ಪಾಪ ಮುದುಕಿಗೂ ಉಳೀತಪ್ಪ. ಅವತ್ತು ನಾನು ಹಾಗೆ ಬರೆಯಬಾರದಿತ್ತು ಅನಿಸುತ್ತದೆ. ಚಿಕ್ಕದಾಗಲೀ ದೊಡ್ಡದಾಗಲೀ ಮೋಸ ಮೋಸವೇ ತಾನೆ? ಅನಿಸುತ್ತದೆ. ಸಂಪತ್ತಿನ ಕ್ರೂಢೀಕರಣ ತಡೆಯಬೇಕು. ಅಂತಹ ಹಲವು ದಾರಿಗಳಲಿ ಈ ಕದಿಯುವಿಕೆಯೂ ಒಂದು ಅನಿಸುತ್ತದೆ. ನಮ್ಮಂತ ಸಾಮಾನ್ಯರ, ಬಸ್‍ಚಾರ್ಜಿನ ಕಾಸು ಅವನ್ಯಾವನೋ ಕೊಬ್ಬಿದ ರಾಜಕಾರಣಿ, ಅಧಿಕಾರಿ ಗುಳುಮ್ಮಿಸೋ ಬದಲು, ಈ ಬಡಪಾಯಿ ಕಂಡಕ್ಟರುಗಳಿಗೇ ಸಿಗಲಿ ಅನಿಸುತ್ತದೆ. ಇದು ಅವ್ಯವಸ್ಥೆಗೆ ರಹದಾರಿ. ಅರಾಜಕತೆಯ ಹೆದ್ದಾರಿ. ನಾವೇ ನಿರ್ಮಿಸಬೇಕಾ? ಅನಿಸುತ್ತದೆ. ನಮ್ಮ ಕಾಸಿಗೆ ಟಿಕೆಟ್ಟು ಹರಿಯದೇ ಅದೇ ಕಾಸನ್ನು ಕೂಡಿ ಕೂಡಿ ಗಂಟು ಮಾಡಿ, ನಮ್ಮ ರೂಟಲಿ ಓಡಾಡೋ ರೈತರಿಗೇ ಬಡ್ಡಿಗೆ ಕೊಟ್ಟು ವಸೂಲಿ ಮಾಡೋ ಕಂಡಕ್ಟರನ ಕಂಡಾಗ, ಇಲ್ಲ, ಅವತ್ತು ಬರೆದದ್ದು ಸರಿ ಅನಿಸುತ್ತದೆ.
ಕಾಲ, ಸ್ಥಿತಿ , ಅನುಭವಗಳು ನಮ್ಮ ಅಭಿಪ್ರಾಯಗಳನು ಬದಲಿಸುತ್ತಾ ಹೋಗುತ್ತವೆ. ಹೇಳಿಕೆಯೊಂದನ್ನು ಬರೆದು , ಅದರ ಮುಂದಿನ ಖಾಲಿ ಬಾಕ್ಸಲಿ ಆಗಾಗ ರೈಟ್ ಮಾರ್ಕು. ಆಗಾಗ ರಾಂಗ್ ಮಾರ್ಕು ಹಾಕಿಸುತ್ತವೆ.!
ಎಲ್ಲದಕೂ ರೈಟ್ ಮಾರ್ಕು ಹಾಕುವ ಕಲ್ಪನೆಗೇ ನಗುತ್ತೇನೆ. ಇಡಿಯ ವ್ಯವಸ್ಥೆಯೇ ಬದಲಾಗುವ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. “ಆಮೂಲಾಗ್ರ ಬದಲಾವಣೆ” ಅಂತ್ಯಾರಾದರೂ ಪದಬಳಕೆ ಮಾಡಿದರೆ ಜೋರಾಗಿ ನಕ್ಕುಬಿಡಿ. ವಿಷಾದದಿಂದ !!!

‍ಲೇಖಕರು G

March 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Anil Talikoti

    ಇದೊಂದು ವಿಷವರ್ತುಲವೇ ಸೈ -ಬಿಲಿಯನ್ ಡಾಲರ್ ಸವಾಲಿದು, ಒಂಥರಾ ರೂಬಿಕ್ ಕ್ಯೂಬ್ ಕಲಿಯುವಾಗ ಆಗುತ್ತಿದ್ದ ಹತಾಶೆಯಂತೆ ಒಂದು ಕಡೆ ಹೊಂದಿಸಲು ಹೋದರೆ ಇನ್ನೊಂದು ಕಡೆ ಬಿಕ್ಕಟ್ಟಾದಂತೆ -ವಿಷಾದವೇ ಸುಲಭದ್ದು.

    ಪ್ರತಿಕ್ರಿಯೆ
  2. ಮಮತ

    ಹ…ಹ.. ಇದು ಎಷ್ಟೋ ಕಾಲದ ಅನಿಸಿಕೆ ಹಾಗೂ ಆಯಾ ಕಾಲಘಟ್ಟದಲ್ಲಿ ಬದಲಾವಣೆ ಬಯಸಿ ಎಲ್ರೂ ರೊಚ್ಚಿಗೆದ್ದು , ಬರೆದೂ ಮತ್ತೆ ಸುಮ್ಮನಾದದ್ದಿದೆ. ಯಾವತ್ತು ಸರಿಯಿದೆ ಹೇಳಿ ಸ್ವರೂಪ. ಡೊಂಕು ಬಾಲದ ನಾಯಕರು ಅಂತ ಪುರಂದರ ದಾಸರು ಆವತ್ತೂ ಹೇಳಿದ್ದರು. ಈಗಿರೋ “ವ್ಯವಸ್ಥೇನೇ(?) ” ತನ್ನ ಅವ್ಯವಸ್ಥೆಯ ಹಾದಿನ ಪೂರ್ತಿ ಒಂದು ರೌಂಡ್ ಮುಗಿಸಿ ಮತ್ತೆ ಹಳಿ ಮೇಲೆ ಬರಬಹುದು . ನಮ್ಮ ಕಾಲಕ್ಕಂತೂ ಅಲ್ಲ .ಹಾಗಾಗಿ ಕಾಯೋಣ ಅನ್ನೋದ್ರಲ್ಲೂ ಅರ್ಥವಿಲ್ಲ.

    ಪ್ರತಿಕ್ರಿಯೆ
  3. guru sullia

    ಬದಲಾವಣೆ ಪ್ರಕೃತಿ ಸಹಜ ನಾವದರ ಏಜೆಂಟುಗಳಷ್ಟೆ…ಪ್ರತಿಕ್ಷಣವೂ ಸಂಭವಿಸುತ್ತಿರುವ ಬದಲಾವಣೆಗೆ ಸ್ಪಂದಿಸುತ್ತ ನಮ್ಮೊಳಗೆ ನಾವೇ ಬದಲಾಗುತ್ತಾ ಮುಂದಿನ ತಲೆಮಾರಿಗೆ ಹರಿಯಗೊಡವುದುತ್ತಮ…

    ಪ್ರತಿಕ್ರಿಯೆ
  4. umavallish

    ನಿಜವಾಗಲೂ ವಿಷಾದನೀಯ, ನಾನು ಮನೆಯಿಂದ ಹೊರಗಡೆ ಹೊರಟಾಗ,ಒ0ದಲ್ಲ ಒ0ದು ಘಟನೆ ಅನ್ಯಾಯ ಕಣ್ಣಿಗೆ ಬೀಳುತ್ತ್ತಿರುತ್ತದೆ. ಆಸ0ದರ್ಭದಲ್ಲಿ,ಹಾಗೆ ಮಾಡಬೇಕು,ಹೀಗೆ ಬರೆಯಬೇಕು,ಇದನ್ನು ಎಲ್ಲರ ಗಮನಕ್ಕೆ ತರಬೇಕು ಎಂದು ಖ0ಡಿತಾ ಅನ್ನಿಸುತ್ತದೆ ನಿಜವಾಗಲೂ,ಆದರೆ ನನಗೆ,ದ್ವನಿ ಗೂಡಿಸುವವರಿಲ್ಲದೆ ನಿರಾಸೆ,ಅಸಹಾಯಕತೆ ದು0ಖ ತರಿಸುತ್ಹದೆ,ನೀವು ಬರೆದಿರುವಂತೆ ಇದು ನರಿಯ ಕೂಗೇ ಸರಿ.ಒ0ಟಿ ಯಾದರೂ,ಅಷ್ಟೇ,ಸಮಷ್ಟಿಯಾದರೂ ಅಷ್ಟೇ

    ಪ್ರತಿಕ್ರಿಯೆ
  5. ಬಸವರಾಜ ಜೋತಿಬಾ ಜಗತಾಪ

    ನಾನು ಹಿಂಗ ಬರಿತಾ ಹೊಂಟರ ಪ್ರಾಥಮಿಕ ಶಾಲೆಯಿಂದ ಸ್ಕಾಲರ್ ಶಿಪ್ ಮಾಡಸೊವಾಗಿನ. ಲಂಚ ತೊಗಂಡ ತಲಾಟಿ, ತಹಶೀಲ್ದಾರ ರಿಂದ ಹೀಡದು ಭ್ರಷ್ಟ ರಾಜಕಾರಣಿಗಳು,ಅಯೊಗ್ಯ ಅಧಿಕಾರಿಗಳು,ಕೆಟ್ಟ ಪೋಲಿಸರು ದುರಾಸೆಯ ವಕೀಲರು,ಒಂದು ಸಣ್ಣ ಪಾಯಿಕಾನೆ ಮಂಜುರಾತಿಗೆ ಲಂಚ ತೊಗಳೊ ಪಂಚಾಯಿತಿ ಚೇರಮೆನ್ನಗಳು ಮತ್ತವರ ಚೇಲಾಗಳು..ಇನ್ನೂ ಆ ಬಡ ರೈತರಿಗೆ ಸಿಗುವ ಸಣ್ಣ ಸಣ್ಣ ಮೊತ್ತಗಳನ್ನ ತಿಂದು ತೆಗು ಮದ್ಯವರ್ತಿಗಳು ಇನ್ನೂ ವೃದ್ದಾಪ್ಯ ಮಾಸಾಶನ ಕೊಡಸ್ತಿನಿ ಅಂತಾ ಮೋಸ ಮಾಡೊವರಿಗೆ ಹೊಟ್ಟೆ ಬಟ್ಟೆ ಕಟ್ಟಿ ಬಡವರು ಮಾಸಾಶನ ಬರೊ ಮೊದಲು ಸಾವಿರಾರು ಬಂದ ಮೇಲೆ ತಂದುಕೊಡೊನಿಗೆ ನೂರಾರು ತೊಗೊಳೊ ಮೋಸಗಾರರ ಬಗ್ಗೆ ಬರಿತಾ ಹೊದರೆ ಬೆಕಾದಷ್ಟಿದೆ.ಇನ್ನೂ ಹತ್ತು ಹಲವಾರಿದೆ ಹಾಗೆ ಬರದರೆ ನನ್ನ ಟಿ ಆರ ಪಿ ಜಾಸ್ತಿ ಆಗಿಬಿಡತ್ತೆ xyz News channel ಗಿಂತಾನೂ.

    ಪ್ರತಿಕ್ರಿಯೆ
  6. ಡಾ.ಶಿವಾನಂದ ಕುಬಸದ

    ನಾವು ಬದಲಿಸಲಾಗದ ಪರಿಸರದಲ್ಲಿ ನೆಮ್ಮದಿಯಿಂದ ಬದುಕಲು ಕಂಡುಕೊಂಡ ಮಧ್ಯದ ದಾರಿಯ ಬಗೆಗಿನ ಒಳ್ಳೆಯ ಬರಹ..
    “ಆಮೂಲಾಗ್ರ ಬದಲಾವಣೆ” ಅಂತ್ಯಾರಾದರೂ ಪದಬಳಕೆ ಮಾಡಿದರೆ ಜೋರಾಗಿ ನಕ್ಕುಬಿಡಿ. ವಿಷಾದದಿಂದ !!!
    ಎಂಬ ಮಾತು ಇಂದಿನ ( ಎಂದಿನ) ಪರಿಸ್ಥಿತಿಗೆ ಹಿಡಿದ ನಿಜ ಕನ್ನಡಿ.

    ಪ್ರತಿಕ್ರಿಯೆ
  7. sangeetha

    ನ್ಯೂಸ್ ಚ್ಯಾನಲ್ ಕಚ್ಚುವ ಹಾವು ಅಂತ ಎಷ್ಟು ಸರಿಯಾಗಿ ಬರೆದಿದ್ದೀರಿ. ನನಗೆ ಭ್ರಮನಿರಸನ ಆಗಲಿಕ್ಕೆ 6 ವರ್ಷ ಬೇಕಾಯಿತು. ಈಗ ನಾನೂ ವಿಷಾದಿಂದ ಬಾಯಿತುಂಬ ನಗುತ್ತಿದ್ದೇನೆ.

    ಪ್ರತಿಕ್ರಿಯೆ
  8. MANJULA B.V.

    s edhu vishavarthulane entha dhara madhya jeevAna naadesabekkala naavellruu gandhijiya 3 monkeys aagabeku aste nejjakku VEESHADHAVEEVE

    ಪ್ರತಿಕ್ರಿಯೆ
  9. ತಿಲಕ್ ರಾಜ್ ಸೋಮಯಾಜಿ

    ರೂಮಿ ಹೇಳುತ್ತಾನೆ, ” ನಿನ್ನೆ ನಾನು ಜಾಣನಾಗಿದ್ದೆ, ಪ್ರಪಂಚವನ್ನೇ ಬದಲಾಯಿಸಲು ಹೊರಟೆ. ಇಂದು ನಾನು ಜ್ಞಾನಿಯಾಗಿದ್ದೇನೆ ಅದಕ್ಕೇ ನನ್ನನ್ನೇ ಬದಲಾಯಿಸಿಕೊಂಡಿದ್ದೇನೆ”. ಅಬ್ಬರದ ಪ್ರವಾಹದಲ್ಲೂ, ನೀರಿನೊಂದಿಗೆ, ನೀರಿನಂತೆ ಬಳುಕಿ, ಕಲ್ಲು ಬಂಡೆಗಳಿಂದ ತಪ್ಪಿಸಿಕೊಂಡು ಪಾರಾದ ಮುದುಕನ ಕಥೆಯನ್ನು ಝೆನ್ ಹೇಳುತ್ತದೆ. ಬಹುಶಃ ನಮ್ಮ ಸುತ್ತಮುತ್ತಲಿನ ಅನ್ಯಾಯವನ್ನು ಕಣ್ಣು ಮುಚ್ಚಿ ಸಹಿಸಿಕೊಳ್ಳಲು ಸಂತರಾಗುವುದು ಅನಿವಾರ್ಯವೇನೋ. ಅಲ್ಲಿಯ ತನಕ ಈ ತೋಳಗಳು ನಮ್ಮ ಆಕ್ರೋಶದ ಕಾವಿನಲ್ಲಿ, ಆರಾಮವಾಗಿ ಬೇಳೆ ಬೇಯಿಸಿಕೊಂಡು ಹಾಯಾಗಿ ಬದುಕಿರುತ್ತವೆ. ಪ್ರತಿ ವಾರದಂತೆ ಮತ್ತೊಂದು ಉತ್ತಮವಾದ ಅಂಕಣ ಬರೆದದ್ದಕ್ಕೆ ಧನ್ಯವಾದಗಳು ಕುಸುಮಬಾಲೆಯವರೇ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: