’ಯಾವುದಾದರೂ ಸೈಟ್ ಇದ್ರೆ ಹೇಳಿ ಸ್ವಾಮಿ!’ – ಬಿ ವಿ ಭಾರತಿ

ಭಾರತಿ ಬಿ ವಿ

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ …

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ …


ಇಂಥ ಮಾತನ್ನೆಲ್ಲ ಬಲ್ಲವರು ಸುಮ್ಸುಮ್ನೇ ಹೇಳಿಲ್ಲ ಅನ್ನುವುದು ನನ್ನ ಅಚಲ ನಂಬಿಕೆಯಾಗಿತ್ತು ಈಗೊಂದಿಷ್ಟು ವರ್ಷಗಳ ಮೊದಲು. ಸೈಟು ಖರೀದಿಸುವುದು, ಕಷ್ಟ ಪಟ್ಟು ಮನೆ ಕಟ್ಟಿಸುವುದು, ಹುಟ್ಟಿರುವುದೇ ಆ ಮನೆಗಾಗಿಯೇನೋ ಅನ್ನುವಂತೆ ಅದನ್ನು ತಿದ್ದಿ, ತೀಡಿ ಒಪ್ಪವಾಗಿರಿಸುವುದು ಎಲ್ಲವನ್ನೂ ನಾನು ಧಿಕ್ಕರಿಸುತ್ತಿದ್ದೆ. ಒಂದೆಡೆ ನೆಲೆ ಯಾಕೆ ನಿಲ್ಲಬೇಕು ಅನ್ನುವುದು ನನ್ನ ವಾದವೂ ಆಗಿತ್ತು. ಹಾಗೆ ನೋಡಿದರೆ ನನಗೆ ನನ್ನದೇ ಆದ ಮನೆ ಬೇಕು ಅನ್ನುವ ವ್ಯಾಮೋಹವೇ ಇರಲಿಲ್ಲ. ಈ ಜಗತ್ತಿನ ತುಂಬ ಬಾಡಿಗೆ ಮನೆಗಳಿರುವಾಗ ನಾನು ಯಾಕೆ ಅಷ್ಟೆಲ್ಲ ಹಣ ಹಾಕಿ ಮನೆ ಕಟ್ಟಿಸಬೇಕು ಅಂತ ಕಂಠ ಹರಿಯುವಂತೆ ವಾದ ಮಾಡುತ್ತಿದ್ದೆ. ಬಾಡಿಗೆ ಮನೆಗಳಾದರೆ ಬೆಸ್ಟು, ಬೇಜಾರೆನ್ನಿಸಿದಾಗ ಮತ್ತೊಂದು ಮನೆಗೆ ಹೋಗಿರಬಹುದು ಅನ್ನುವ ನನ್ನ ಮಾತನ್ನು ಕೇಳಿದವರು ಮುಸಿಮುಸಿ ನಗುತ್ತಾ – ಈಗ ಹಾಗೆ ಹೇಳ್ತೀರಿ. ಒಂದಿಷ್ಟು ವರ್ಷ ಬಾಡಿಗೆ ಮನೆಯ ವಾಸ ಅನುಭವಿಸಿರಿ. ಆಮೇಲೆ ಹೇಳುವಿರಂತೆ ಅಂದರೆ ನನಗೆ ಮೈಯೆಲ್ಲ ಉರಿ ಏಳುತ್ತಿತ್ತು. ‘ನಿಮ್ಮ ಅಭಿಪ್ರಾಯ ಸಾರ್ವಜನಿಕ ಮತ್ತು ಸಾರ್ವಕಾಲಿಕ ಸತ್ಯ ಅಂತ ಯಾಕೆ ತಿಳಿದುಕೊಳ್ಳುತ್ತೀರಿ? ಒಂದಿಷ್ಟು ವರ್ಷವೇಕೆ, ಇನ್ನೊಂದು ಜನ್ಮವೇ ಬಿಟ್ಟು ಬಂದು ಕೇಳಿದರೂ ನನ್ನ ಅಭಿಪ್ರಾಯ ಬದಲಾಗುವುದಿಲ್ಲ ಎನ್ನುತ್ತಿದ್ದೆ. ಹೌದು, ಯೌವನಕ್ಕೆ ಒಂದೇ ಕಾಲ ಗೊತ್ತಿರುವುದು, ಅದು ವರ್ತಮಾನ ಕಾಲ ಮಾತ್ರ! ಬದುಕಿನ ಅನಿರೀಕ್ಷಿತಗಳ ಭವಿಷ್ಯತ್ಕಾಲ ಯಾವಾಗಲೂ ಬೇರೆಯವರಿಗೆ ಮಾತ್ರ ಆಗುವುದು, ನಮಗಲ್ಲ ಅನ್ನುವ ಅಚಲ ನಂಬಿಕೆ. ನಂಬಿಕೆಗಳು ಬದಲಾಗುವಲ್ಲಿನ ದಾರಿಯ ಪ್ರಯಾಣದ ಕಥೆ ಹೇಳುತ್ತೇನೆ ನಿಮಗೀಗ …
ಭೂಲೋಕದ ಆದಿಯಲ್ಲೆಲ್ಲೋ ಒಂದು ದಿನ ನನ್ನ ಮದುವೆಯಾಯಿತು (ಅಷ್ಟು ಕಾಲ ಕಳೆದಿದೆ ಅಂತ ನಮ್ಮಿಬ್ಬರಿಗೂ ಅನ್ನಿಸುತ್ತಿದೆ ಅಂದಮೇಲೆ ಅಷ್ಟು ಕಾಲ ಕಳೆದೇ ಹೋಗಿದೆಯೋ, ಏನೋ!!) ಅನ್ನುವಲ್ಲಿಗೆ ಈ ಕಥೆ ಶುರುವಾಗುತ್ತದೆ. ಮದುವೆಯಾದ ಒಂದೆರಡು ತಿಂಗಳು ತವರಿನಲ್ಲಿ ಝಾಂಡಾ ಹೊಡೆದಿದ್ದಾಯಿತು. ಆಮೇಲೆ ಒಂದು ದಿನ ಮನೆಯ ಹುಡುಕಾಟ ಶುರುವಾಯಿತು. ಬರುತ್ತಿದ್ದ ಪುಡಿಗಾಸಲ್ಲಿ ಅರಮನೆಯ ಕನಸನ್ನು ಕಾಣುವುದು ಅಸಾಧ್ಯವಿತ್ತು. ಹಾಗಾಗಿ ಸಣ್ಣ ಮನೆಯೊಂದರ ತಲಾಷಿಗೆ ಬಿದ್ದೆವು. ನನ್ನ ಗಂಡನಿಗೆ ದಿನಾ ಅದೇ ಕೆಲಸ. ಆಫೀಸ್‌ನಿಂದ ಬಂದ ಕೂಡಲೇ ಮನೆಬೇಟೆಗೆ ಹೊರಡುತ್ತಿದ್ದ. ಸಂಜೆಯೆಲ್ಲ ತಿರುಗಿದರೂ ನೆಟ್ಟಗಿರುವ ಒಂದು ಮನೆಯೂ ಸಿಗುತ್ತಿರಲಿಲ್ಲ. ತಲೆಕೆಟ್ಟು ಹೋಯ್ತು ಹುಡುಕಿ ಹುಡುಕಿ ಅನ್ನಿಸುತ್ತದೆ. ಹೀಗಿರುವಾಗ ಒಂದು ದಿನ ಬಂದವನು ಒಂದು ಮನೆ ಇಷ್ಟವಾಯ್ತು ಮತ್ತು ಅಡ್ವಾನ್ಸ್ ಕೂಡ ಕೊಟ್ಟು ಬಂದಾಯ್ತು ಅಂತ ಘೋಷಿಸಿಬಿಟ್ಟ. ನನಗೆ ಮನೆ ತೋರಿಸದೇ ಅವನು ಅಡ್ವಾನ್ಸ್ ಕೊಟ್ಟು ಬಂದಾಗಿತ್ತು. ಇನ್ನೆಂಥ ಮನೆ ಮಾಡಿಬಿಟ್ಟನೋ ಅಂತ ನಾನು ಗಾಭರಿಗೆ ಬಿದ್ದೆ. ಮನೆ ಹೇಗಿದೆ ಮಾರಾಯಾ? ಸುಮಾರಾಗಿದೆಯಾ? ತುಂಬ ಚಿಕ್ಕದಾ? ಅಂತೆಲ್ಲ ನಾನು ಪ್ರಾಣ ತಿಂದರೆ, ಅಮ್ಮ ಬೆಂಗಳೂರಿನ ನೀರಿನ ಕೊರತೆಯ ಕಷ್ಟ ಅನುಭವಿಸಿದವಳು, ಪದೇ ಪದೇ – ನೀರು ಬರುತ್ತಾ ಚೆನ್ನಾಗಿ ಅಂತ ಪ್ರಶ್ನಿಸಲು ಶುರು ಮಾಡಿದಳು. ಅವಳು ಹಾಗೆ ಕೇಳಿದಾಗೆಲ್ಲ ನನ್ನ ಗಂಡ – ದೊಡ್ ಡ್ ಡ್ ಡ್ ಡ್ ಡ ತೊಟ್ಟಿ ಇದೆ ಅನ್ನುತ್ತಿದ್ದ! ದೊಡ್ಡ ತೊಟ್ಟಿ ಇದೆ ಸರಿ, ಅದರಲ್ಲಿ ನೀರು ಬರುತ್ತಂತಾ ಅನ್ನುವುದು ಅಮ್ಮನ ಮುಂದಿನ ಪ್ರಶ್ನೆ. ಅಚ್ಚುಕಟ್ಟಾಗಿ ತಲೆಯಾಡಿಸಿದ.
ಸಂಜೆ ಮನೆ ನೋಡಲು ಹೋದೆವು. ಕೆಂಪು ನೆಲದ ಚಿಕ್ಕ ಮನೆ. ಹಿಂದೆ ಔಟ್‌ಹೌಸಿನಲ್ಲಿ ಓನರ್ ಸಂಸಾರ. ಮನೆಯ ಮುಂದಷ್ಟು ಜಾಗ. ಒಂದಿಷ್ಟು ಹೂವಿನ ಗಿಡಗಳು. ಗಿಡ ಎಲ್ಲ ಬೆಳ್ಸಿದಾರೆ ಅಂದ್ರೆ ನೀರಿನ ಪ್ರಾಬ್ಲಮ್ ಇಲ್ಲ ಅಂತ್ಲೇ ಅರ್ಥ ಕಣೇ – ಅಂದಳು ಅಮ್ಮ ಶೆರ್ಲಾಕ್ ಹೋಮ್ಸ್‌ನ ಗತ್ತಿನಲ್ಲಿ. ನಾನು ಉದ್ದಿನಬೇಳೆಗೂ-ಹೆಸರು ಬೇಳೆಗೂ, ತೊಗರಿಬೇಳೆಗೂ-ಕಡ್ಲೆಬೇಳೆಗೂ ವ್ಯತ್ಯಾಸ ಅರಿಯದಂತೆ ಅಡ್ಡಾದಿಡ್ಡಿ ಬೆಳೆದ ಹೆಣ್ಣು, ಅಮ್ಮ ಹೇಳಿದ್ದಕ್ಕೆ ತಲೆಯಾಡಿಸಿ ಸುಮ್ಮನಾದೆ. ಚಿಕ್ಕದೊಂದು ರೂಮು. ಸಣ್ಣದೊಂದು ಹಾಲ್. ಕಗ್ಗತ್ತಲ ಗವಿಯಂತಿದ್ದ ಅಡಿಗೆ ಮನೆ. ಹಗಲು ಹೊತ್ತಿನಲ್ಲಿ ಕೂಡಾ ದೀಪವಿರದೇ ಇದ್ದರೆ ಕಣ್ಣೇ ಕಾಣದಂಥ ಗುಹೆ. ಅಡಿಗೆಯ ಕೆಲಸ ಅಂಥ ಪ್ರಿಯವಾದ ಕೆಲಸವೇನೂ ಆಗಿರಲಿಲ್ಲವಾದ್ದರಿಂದ, ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಟಾಯ್ಲೆಟ್ ಕೂಡ ಅಷ್ಟೇ ಕತ್ತಲ ಕೂಪವಾಗಿದ್ದು ನನಗೆ ಸಂಕಟವಾಯಿತು. ಟಾಯ್ಲೆಟ್ಟಿನಲ್ಲಿ ನನ್ನ ಸಕಲ ಓದೂ ನಡೆಯುವುದು ಸಾಮಾನ್ಯವಾದ್ದರಿಂದ ಅಲ್ಲಿ ಯಾವತ್ತೂ ಸಿಕ್ಕಾಪಟ್ಟೆ ಬೆಳಕಿರಬೇಕು. ಜೊತೆಗೆ ನನ್ನ ಕಲ್ಪನೆಯ ‘ನನ್ನ ಮನೆಯಲ್ಲಿ’ ಟಾಯ್ಲೆಟ್ ಅಂದರೆ ಒಂದು ಮೂಲೆಯಲ್ಲಿ ಪುಸ್ತಕದ ಸ್ಟ್ಯಾಂಡ್ ಒಂದು ಹೊಡೆಯುವಷ್ಟು ದೊಡ್ಡದಾಗಿರಬೇಕು ಮತ್ತು ಘಂಟೆಗಟ್ಟಳೆ ಕೂತಾಗ ಮಂಡಿ ಹಿಡಿದುಕೊಳ್ಳದಂತೆ ವೆಸ್ಟರ್ನ್ ಕಮೋಡ್ ಇರಬೇಕು ಅನ್ನುವುದು ಕಡ್ಡಾಯವಾಗಿತ್ತು. ಇಲ್ಲಿನ ಟಾಯ್ಲೆಟ್ ಕಥೆ ಏನು ಹೇಳಲಿ! ನಾನು ಸಣ್ಣಗಿದ್ದ ಕಾಲವಾದ್ದರಿಂದ ಸುಲಭಕ್ಕೆ ಎದ್ದು, ಕೂತು ಮಾಡುವಂತಿತ್ತು ಸಧ್ಯ.ಈಗೇನಾದರೂ ಆಗಿದ್ದರೆ ಕೂತ ನಾನೇ ಏಳಲೂ ಸಾಧ್ಯವಿಲ್ಲದಷ್ಟು ಕಿಷ್ಕಿಂದಾ ನಗರಿ. ಸರಿ, ಅಲ್ಲಿಗೊಂದು 200 ವ್ಯಾಟ್ ಬಲ್ಬ್ ಹಾಕಿಯಾದರೂ ಓದಲು ಅನುಕೂಲ ಮಾಡಿಕೊಳ್ಳಬೇಕು ಅಂತ ತೀರ್ಮಾನಿಸಿದೆ.
ಮುಂದಿನ ಎರಡು ದಿನಗಳಲ್ಲಿ ಹೊಸಮನೆಗೆ ಶಿಫ್ಟ್ ಆದೆವು. ಹೋದ ದಿನ ಓನರ್ ಮನೆಯವರೇ ತೊಟ್ಟಿ ತುಂಬ ನೀರು ತುಂಬಿಸಿದ್ದರು. ಟಾಯ್ಲೆಟ್ಟಿನಲ್ಲಿ ನಲ್ಲಿಯಿತ್ತು, ಆದರೆ ನೀರು ಬರುತ್ತಿರಲಿಲ್ಲ ಅಷ್ಟೇ! ಬಕೆಟಿನಲ್ಲಿ ತುಂಬಿಸಿ, ಒಳಸೇರಿದ ಕೂಡಲೇ ಹಿತ್ತಲಿನಿಂದ ಓನರಿಣಿಯ ದನಿ ಕೇಳಿತು – ಥೂ ಅದೇನು ವಾಸನೆ. ನೀರು ಹಾಕಕ್ಕಾಗಲ್ವಾ ಅಂತ! ಇನ್ನೇನು ಟಾಯ್ಲೆಟ್ಟಿನಿಂದ ಗಬ್ಬುವಾಸನೆಯಲ್ಲದೇ ಮಲ್ಲಿಗೆಯ ಪರಿಮಳ ಹರಡುತ್ತದಾ ಅಂತ ನಾನು ಬಯ್ದುಕೊಂಡೆ. ನೀರಿಲ್ಲದ ನಲ್ಲಿಯಲ್ಲಿ ನೀರು ಬರುತ್ತಿದ್ದರೆ ವಾಸನೆ ಇಲ್ಲದ ಹಾಗೆ ಮಾಡಬಹುದಿತ್ತು ಅಂತ ವಟಗುಟ್ಟಿಕೊಂಡೆ. ಮುಂದಿನ ದಿನಗಳಲ್ಲಿ ಗೊತ್ತಾಯಿತು – ಆಕೆಗೆ ಬಯ್ಯಲೊಂದು ಕಾರಣ ಬೇಕಿತ್ತು ಅಷ್ಟೇ ಅನ್ನುವುದು. ಯಾರಾದರೂ ಆಗಿರಲಿ, ಏನೇ ವಿಷಯವಿರಲಿ, ಬಿಡಲಿ ಒಟ್ಟಿನಲ್ಲಿ ಬಯ್ಯುವುದಂತೂ constant factor! ಮೊದಲ ದಿನದ ಕಥೆಗೆ ವಾಪಸ್ ಬರುತ್ತೇನೆ ಈಗ. ದಿನ ಆರಾಮವಾಗಿ ದಿನ ಕಳೆಯಿತು. ಎಲ್ಲ ಕೆಲಸಕ್ಕೂ ಉಪಯೋಗಿಸುತ್ತ ಹೋದಂತೆ ನೀರಿನ ತೊಟ್ಟಿ ಖಾಲಿಯಾಗುತ್ತಾ ಹೋದ ಹಾಗೆ, ಮತ್ತೆ ಅದನ್ನು ತುಂಬಲೂ ಬೇಕು ಅನ್ನುವ ಜ್ಞಾನೋದಯ ಆಗಲು ಶುರುವಾಯಿತು. ಓನರಿಣಿಯ ಮನೆ ಬಾಗಿಲು ತಟ್ಟಿದೆ ನೀರು ಬರುವ ಸಮಯ ಕೇಳಲು.
ಹಿಂದಿನ ದಿನದವರೆಗೆ ಧಾರೆಯಾಗಿ ತಾಳಿ ಕಟ್ಟುವ ಮುಂಚೆ ಇರುತ್ತಿದ್ದರಲ್ಲ, ಆಗಿನ ಕಾಲದ ಕನ್ಯಾಪಿತೃ ಆ ರೀತಿ ಇದ್ದ ಆಕೆ, ಸಂಜೆಗೆ ತಾಳಿಕಟ್ಟಿದ ನಂತರದ ನಿರ್ಲಕ್ಷ್ಯದಲ್ಲಿ – ರಾತ್ರಿ ಬರುತ್ತೆ ಅಂದರು! ರಾತ್ರಿ?? ನೀರು ಬರುವುದು ರಾತ್ರಿ ಅಂದರೆ ಇಡೀ ರಾತ್ರಿ ನೀರು ತುಂಬಿಸಬೇಕಾ ಅಂತ ಬೆಚ್ಚಿಬಿದ್ದೆ. ಅದು ನನ್ನ ಕೊನೆಯಿಲ್ಲದ ಗೋಳಿನ ಮುನ್ನುಡಿಯಾಗಿತ್ತು. ರಾತ್ರಿ 11 ಘಂಟೆಗೆ ಕಣ್ಣೀರಿನ ಸ್ಪೀಡಿನಲ್ಲಿ ನೀರು ಶುರುವಾಯ್ತು. ಎಷ್ಟು ಕಡಿಮೆ force ಎಂದರೆ, ನೆಲದ ಮಟ್ಟದಿಂದ ಮೇಲಿರುವ ನಲ್ಲಿಯಲ್ಲಿ ನೀರು ಬರಲೂ ಸಾಧ್ಯವಿರಲಿಲ್ಲ. ಹಾಗಾಗಿ ನೆಲದ ಮಟ್ಟದ ಕೆಳಗೊಂದು ಒಂದಡಿ ಬೈ ಒಂದಡಿಯ ಒಂದು ಗುಂಡಿಯಲ್ಲಿ ನೀರು ತುಂಬಿದ ನಂತರ ಅದನ್ನು ಮಗ್ಗಿನಲ್ಲಿ ತುಂಬಿಸಿ ಬಕೆಟ್ಟಿಗೆ ಸುರಿದು , ಅಲ್ಲಿಂದ ತೊಟ್ಟಿಗೆ ತುಂಬಿಸಬೇಕು! ನನಗೆ ಹೃದಯಾಘಾತವಾದ ಮತ್ತೊಂದು ವಿಷಯವೆಂದರೆ ಓನರ್ ಮೊದಲು ಹಿಡಿದ ನಂತರ ನಾನು ಕಾದು ನೀರು ತುಂಬಿಸಿಕೊಳ್ಳಬೇಕು ಎನ್ನುವುದು. ಅದೆಲ್ಲ ಸಾಧ್ಯವಿಲ್ಲ, ನಾನೊಂದು ಬಕೆಟ್ ಮತ್ತು ನೀವೊಂದು ಬಕೆಟ್ ತುಂಬಿಸಿಕೊಳ್ಳಬೇಕು. ನಾನ್ಯಾಕೆ ಬೆಳಗಿನವರೆಗೆ ಕಾಯಬೇಕು? ನೀರು ಅಷ್ಟರಲ್ಲಿ ನಿಂತೇ ಹೋದರೆ ಅಂತೆಲ್ಲ ಉಗ್ರವಾಗಿ ಮೊದಲ ದಿನವೇ ಹೋರಾಡಿ ಆಯಮ್ಮನ ಕೆಂಗಣ್ಣಿಗೆ ಗುರಿಯಾದೆ. ಇಡೀ ರಾತ್ರಿ ಒಂದೊಂದೇ ಬಕೆಟ್ ತುಂಬಿ, ತೊಟ್ಟಿ ತುಂಬಿಸುವಷ್ಟರಲ್ಲಿ ಬೆಳಕು ಹರಿಯುವ ಸಮಯ. ಸುಸ್ತಾದ ನಾನು ಆಗ ಹೋಗಿ ಹಾಸಿಗೆಗೆ ಬಿದ್ದೆ.
ಈ ರೀತಿ ಶುರುವಾದ ನನ್ನ ಸಂಸಾರ ದಿನಗಳೆಯುತ್ತಾ ಹದಗೆಡುತ್ತ ಹೋಯಿತು. ದಿನಾ ರಾತ್ರಿ ನಿದ್ರೆಯಿಲ್ಲದೆ ನಾನೊಂದು ನಡೆದಾಡುವ ದೆವ್ವದಂತಾದೆ. ಸದಾ ಗೊಣಗುಟ್ಟುವ ಅತೃಪ್ತ ಆತ್ಮವಾಗಿಹೋದೆ. ನನಗಿನ್ನು ಈ ಮನೆಯಲ್ಲಿ ಸಂಸಾರ ಮಾಡುವುದು ಸಾಧ್ಯವಿಲ್ಲ, ಬೇರೆ ಮನೆ ಹುಡುಕು ಅಂತ ಜೀವ ಹಿಂಡಲು ಶುರುವಿಟ್ಟುಕೊಂಡೆ. ದಿನಾ ಅದೇ ರಾಗ ಕೇಳಿ ಕೇಳಿ ಸಾಕಾದ ಅವನು, ಕೊನೆಗೊಮ್ಮೆ ಮತ್ತೆ ಮನೆಬೇಟೆಗೆ ಹೊರಟ ಅನ್ನುವಲ್ಲಿಗೆ ನಿಜದ ಕಥೆಯ ಆರಂಭವಾಗುತ್ತದೆ …………………….
ನನ್ನ ಗಂಡ ಆಗೆಲ್ಲ ನಸುಬೆಳಕಿನಲ್ಲಿ ಎದ್ದು ಶಿಸ್ತಾಗಿ ವಾಕಿಂಗ್ ಹೋಗುತ್ತಿದ್ದ. ಹೆಂಗಸರು ವಾಕಿಂಗ್‌ಗೆ ಹೋದಾಗ ಅವರ ಪ್ರಿಯವಾದ ಹರಟೆಯ ವಿಷಯ ಅಂದರೆ ಚಟ್ನಿಪುಡಿ ಮಾಡುವುದು ಮತ್ತು ಗಂಡಸರ ಪ್ರಿಯವಾದ ವಿಷಯ ಅಂದರೆ ಪಾಲಿಟಿಕ್ಸ್, ಕ್ರಿಕೆಟ್ ಮತ್ತು ಆಸ್ತಿ ಪಾಸ್ತಿಯದ್ದು. ಹೀಗೆ ಒಂದು ದಿನ ವಾಕಿಂಗ್ ಹೋಗಿ ಬಂದವನು ಭಲೇ ಖುಷಿಯಾಗಿದ್ದ. ನಿನ್ನೀ ನಗುವಿಗೆ ಕಾರಣವೇನೂಊಊಊ ಅಂತ ನಾನು ರಾಗ ಪಾಡಿದೆ. ಅವನು ತುಟಿಯಲ್ಲಿ ಸಂತೋಷವನ್ನು ಅದುಮಿಟ್ಟುಕೊಂಡು, ಮೇಲೆ ನಿರ್ಲಿಪ್ತತೆಯನ್ನು ನಟಿಸುತ್ತ – ಇವತ್ತೊಬ್ಬರು ಗಾಂಧಿನಗರದ ಡೈರೆಕ್ಟರ್ ಸಿಕ್ಕಿದ್ರು. ನನ್ನ ನೋಡಿ ನೀವು ಹೀರೋ ಇದ್ದಂಗಿದೀರಾ ಅಂದ್ರು ಅಂದ ಸಂಭ್ರಮದಲ್ಲಿ! ಯಾವನೋ ಬೊಗಳೆ ಆಸಾಮಿ ಇರಬೇಕು ಅಂದೆ ಸಮಾಧಾನಿಸಿಕೊಳ್ಳುತ್ತಾ. ತನ್ನನ್ನು ಹೀರೋ ಥರ ಇದ್ದಾನೆ ಅಂದವನನ್ನು ಬೊಗಳೆ ಅಸಾಮಿ ಅಂದಿದ್ದಕ್ಕೆ ನನ್ನ ಗಂಡನಿಗೆ ಸಿಕ್ಕಾಪಟ್ಟೆ ರೇಗಿಹೋಯಿತು. ‘ಏಯ್ ಸುಮ್ನಿರಮ್ಮಾ, ಅವರನ್ನ ಯಾರೋ ಕಾಂಜಿಪೀಂಜಿ ಅಂದ್ಕೋಬೇಡ. ಅವರು ಸಖತ್ ಫೇಮಸ್’ ಅಂತ ಒಂದು ಹೆಸರನ್ನು ಹೇಳಿದ. ನಾನು ದಂಗುಬಡೆದು ಹೋದೆ.
ಸರಿ, ಮಾರನೆಯ ದಿನದಿಂದಲೇ ಈ ಡೈರೆಕ್ಟರಪ್ಪ ನನ್ನ ಗಂಡನ ವಾಕಿಂಗ್ ದೋಸ್ತ್ ಆಗಿಹೋದರು. ನನ್ನ ಗಂಡನಿಗೆ ಖುಷಿಯೋ ಖುಷಿ. ದಿನಾ ಬಂದು ಅವರ ನುಡಿಮುತ್ತನ್ನೆಲ್ಲಾ ಹೇಳಲು ಶುರುವಿಟ್ಟುಕೊಂಡ. ಅವರು ಪರಿಚಯವಾದ ಎರಡೇ ದಿನಕ್ಕೆ – ಒಂದು ಸಿನೆಮಾ ಪ್ರೊಡಕ್ಷನ್ನಲ್ಲಿದೆ ಸಾರ್ ಅಂತ ನನ್ನ ಗಂಡನಿಗೆ ಸಿನೆಮಾ ಕಥೆ ಹೇಳಲು ಶುರು ಮಾಡಿದರು. ಅದನ್ನು ಇವನು ನನಗೆ ಹೇಳಲು ಶುರುಮಾಡಿದ. ಮೊದಲನೇ ದಿನದ ಕಥೆ ಶುರು ಮಾಡಿದ – ಒಂದು ಕಾಡಿನ ಕಥೆ ಅಂತೆ. ಹೀರೋ ಸಣ್ಣ ವಯಸಲ್ಲೇ ಒಂದು ಕಾಡಿನ ಪಾಲಾಗಿ ಹೋಗಿರ್ತಾನೆ. ಅಲ್ಲಿ ಪ್ರಾಣಿಗಳ ಜೊತೆಯಲ್ಲಿ ಇವನು ಬೆಳೀತಾ ಹೋಗ್ತಾನೆ. ಅವನಿಗೆ ಒಂದು ಕೋತಿ, ಒಂದು ಆನೆ, ಒಂದು ನಾಯಿ ಫ಼್ರೆಂಡ್ಸ್ ಆಗ್ತಾರೆ. ಅವನು ಯಾವಾಗಲೂ ಅವರ ಜೊತೆಯಲ್ಲೇ ಇರ್ತಾನೆ. ಹೀಗೇ ಸುಖವಾಗಿ ಬದುಕಿದ್ದಾಗ ಒಂದು ದಿನ ಆ ಕಾಡಿನಲ್ಲಿ ಒಂದು ಪ್ಲೇನ್ ಕ್ರ್ಯಾಷ್ ಆಗೋಗತ್ತೆ. ಬೆಂಕಿಯಲ್ಲಿ ಪ್ಲೇನ್ ಬೂದಿಯಾಗತ್ತೆ. ಎಲ್ಲರೂ ಸತ್ತೋಗ್ತಾರೆ. ಒಬ್ಬಳೇ ಒಬ್ಬಳು ಹುಡುಗಿ ಮಾತ್ರ ಉಳ್ಕೊಳ್ತಾಳಂತೆ …..’ ಅವನು ಹೇಳುತ್ತಿರುವಷ್ಟರಲ್ಲೇ ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದ ನನಗೆ ಆಕಳಿಗೆ ಶುರುವಾಗಿತ್ತು. ‘ಇದ್ಯಾವ ಸೀಮೆ ಕಥೆನೋ … ಖರಾಬಾಗಿದೆ. ಆಮೇಲೆ ಇನ್ನೇನು ಮಣ್ಣು, ಅವಳಿಗೆ ಈ ಕಾಡುಮನುಷ್ಯನ ಮೇಲೆ ಪ್ರೀತಿ ಬೆಳೆಯತ್ತೆ. ಅವನನ್ನು ‘ನಾಗರೀಕನನ್ನಾಗಿ’ ಪರಿವರ್ತಿಸುವ ಪಣ ತೊಡ್ತಾಳೆ .. ರೈಟ್?’ ಅಂದೆ. ಅಯ್ಯೋ ನಿನಗೆ ಹೇಗೆ ಗೊತ್ತಾಯ್ತು? ಅಂದ ಆಶ್ಚರ್ಯದಿಂದ. ನಾನು ತಣ್ಣಗೆ – ಇಂಥ ಸಾವಿರ ಕಥೆಗಳು ಬಂದಿವೆಯಲ್ಲ ಮಾರಾಯಾ ಎಲ್ಲ ಭಾಷೆಗಳಲ್ಲೂ ಅಂದೆ. ಅವನ ಮುಖ ಚೂರು ಕಳೆಗುಂದಿತು. ‘ಹೇಗೆ ತೆಗೀತಾರೆ ಅನ್ನೋದೂ important’ ಅಂತ ಸಮಾಧಾನಿಸಿಕೊಂಡ.

ಮಾರನೆಯ ದಿನ ವಾಕಿಂಗ್ ಮುಗಿಸಿ ಬಂದ. ಸಿನೆಮಾ ಕಥೆಯಲ್ಲಿ ಹೀರೋಗೆ ಬೆಸ್ಟ್ ಫ಼್ರೆಂಡ್ಸ್ ಒಂದು ನಾಯಿ, ಒಂದು ಹಾವು, ಒಂದು ಹುಲಿ ಆಗಿ ಬದಲಾಗಿತ್ತು. ಅದರ ಮಾರನೆಯ ದಿನಕ್ಕೆ ಅವು ಒಂದು ಕೋತಿ, ಒಂದು ಕರಡಿ, ಒಂದು ಹಾವು ಆಗಿತ್ತು!! ಮೊದಲ ದಿನ ಹೀರೋಯಿನ್ ಮೀನಾಕ್ಷಿ ಶೇಷಾದ್ರಿ ಆಗಿದ್ದರೆ ಎರಡನೆಯ ದಿನಕ್ಕೆ ಅದು ಮಾಧುರಿ ದೀಕ್ಷಿತ್ ಆಗಿರುತ್ತಿತ್ತು. ಅದರ ಮಾರನೆಯ ದಿನಕ್ಕೆ ಅದು ಶ್ರೀದೇವಿ ಆಗಿರುತ್ತಿತ್ತು !!! ನನ್ನ ಗಂಡ ಆ ವಿಷಯದ ಬಗ್ಗೆಯೆಲ್ಲ ಹೆಚ್ಚು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಆದರೆ ನನ್ನದೋ ಪ್ರಾಣ ತಿನ್ನುವಂಥ ನೆನಪಿನ ಶಕ್ತಿ ಆಗ. ಅವನು ಹೇಳುತ್ತಿರುವಷ್ಟರಲ್ಲೇ – ಅಯ್ಯೋ ನೆನ್ನೆ ಮೀನಾಕ್ಷಿ ಶೇಷಾದ್ರಿ ಅಂದಿದ್ದೆಯಲ್ಲಾ …. ಕೋತಿ ಬೆಸ್ಟ್ ಫ಼್ರೆಂಡ್ ಅಂದಿದ್ದೆಯಲ್ಲಾ ಅಂತ ಕೇಳಿಬಿಡುತ್ತಿದ್ದೆ. ನೀನು ಸರಿಯಾಗಿ ಕೇಳಿಸಿಕೊಳ್ಳೋದಿಲ್ಲ, ನಾನು ಹಾಗಂದೇ ಇಲ್ಲ ಅಂತ ಅವನು ದಬಾಯಿಸಲು ಶುರು ಮಾಡಿದ. ದಿನ ಕಳೆಯುವಷ್ಟರಲ್ಲಿ ನನಗೆ ಆ ಡೈರೆಕ್ಟರ್ ಪ್ರತಿಭೆ ಬಗ್ಗೆ ಅಪಾರ ನಂಬಿಕೆ ಬೆಳೆಯಲು ಶುರುವಾಯ್ತು. ದಿನಕ್ಕೊಂದು ಕಥೆ! ದಿನಕ್ಕೊಂದು ತಿರುವು!! ದಿನಕ್ಕೊಂದು ಕ್ಲೈಮ್ಯಾಕ್ಸ್!!! ನನ್ನ ಗಂಡನ ಮುಗ್ಧತನವನ್ನು ಅವನು ಉಪಯೋಗಿಸಿಕೊಳ್ಳುತ್ತಿದ್ದಾನೆ ಅಂತ ತೀರ್ಮಾನಿಸಿದೆ. ಆ ನಂತರ ದಿನ ಕಳೆದಂತೆ – ಅಯ್ಯೋ ಎಂಥದ್ದೋ ಹೇಳಿಕೊಂಡು ಹೋಗಲಿ, ನಾನ್ಯಾಕೆ ತಲೆಕೆಡಿಸಿಕೊಳ್ಳಬೇಕು. ಸುಮ್ಮನೇ ಏನೋ ಹೇಳಿಕೊಳ್ಳಲಿ, ನಾವೇನು ಅವರ ಜೊತೆಗಿರಬೇಕಿಲ್ಲವಲ್ಲ ಅಂತ ಸಹಿಷ್ಣುತೆ ಬೆಳೆಸಿಕೊಂಡೆ.
ಆಗ ಬದುಕಿನ ಆ ತಿರುವು ಎದುರಾಗಿದ್ದು! ನನ್ನ ಗಂಡ ಒಂದು ಕರಾಳ ದಿನ ಆ ಡೈರೆಕ್ಟಪ್ಪನ ಜೊತೆ ಮಾತಾಡುತ್ತಾ ಮನೆ ಹುಡುಕಾಟದ ಗೋಳಿನ ಕಥೆಯನ್ನು ಹೇಳಿಕೊಂಡಿದ್ದಾನೆ. ಆತ ಕರುಣಾರ್ದ್ರ ಹೃದವಂತನಂದದಿ – ನನ್ನ ಮನೆಯೊಂದಿದೆ, ನೋಡೋದಾದರೆ ನೋಡಿ ಅಂದಿದ್ದಾರೆ! ನನ್ನ ಗಂಡನಿಗೆ ಅದೃಷ್ಟದ ಬಳ್ಳಿ ಕಾಲಿಗೆ ಸುತ್ತಿಕೊಂಡ ಹಿತವಾದ ಪುಳಕದ ಅನುಭವ! ಆದರೂ ಪಾಪ ನಮಗೆ ಆಗ ಇದ್ದ ದುಡ್ಡಿನ ಪರಿಸ್ಥಿತಿ ಲೆಕ್ಕ ಹಾಕಿ ಗಾಂಧಿನಗರದವರ ಮನೆ ಅಂದರೆ ವೈಭವೋಪೇತವಾಗಿರುತ್ತದೆ ಮತ್ತು ತಾನು ಎಲ್ಲಿಂದ ಅಷ್ಟೊಂದು ಬಾಡಿಗೆ ತರಲಿ ಅನ್ನಿಸಿ ನನ್ನ ಗಂಡ ತುಂಬ ಸಂಕೋಚದಿಂದ ಕೈ ಕೈ ಹೊಸೆಯುತ್ತ – ನಿಮ್ಮನೆ ಅಂದರೆ ದೊಡ್ಡದಾಗಿರುತ್ತೇನೋ … ನನಗೆ ಅಷ್ಟೆಲ್ಲ ಕೊಡಕ್ಕಾಗಲ್ಲ ಅಂದಿದ್ದಾನೆ. ಆತ ತುಂಬ ವಿಶ್ವಾಸದಿಂದ – ಹಣದ ಮಾತು ಆಮೇಲಿರಲಿ ಸ್ವಾಮಿ, ಮೊದಲು ಮನೆ ಕಡೆ ಬನ್ನಿ ಅಂದಿದ್ದಾರೆ. ಇವನಿಗೆ ಗಾಂಧಿನಗರದ ಸಿನೆಮಾ ಕಥೆಯೇ ತನ್ನೆದುರು ನಿಜದಲ್ಲಿ ನಡೆಯುತ್ತಿದೆಯೇನೋ ಅನ್ನುವಷ್ಟು ಸಂಭ್ರಮವಾಗಿಹೋಗಿದೆ! ಅಡ್ರೆಸ್ ತೆಗೆದುಕೊಂಡವನೇ ಹಾರುವ ನಡಿಗೆಯಲ್ಲಿ ಮನೆಗೆ ಬಂದವನೇ ಉಸಿರೆಳೆದುಕೊಳ್ಳಲೂ ಪುರುಸೊತ್ತಿಲ್ಲದಂತೆ ಎಲ್ಲ ಹೇಳಿದ…
ನಾನು ಮೊದಲಿನಿಂದಲೂ ಅನುಮಾನದ ಪ್ರಾಣಿ. ನನ್ನ ಗಂಡ ನನ್ನನ್ನು ಕರೆಯುತ್ತಿದ್ದಿದ್ದೇ ‘ಡೌಟಮ್ಮ’ ಎಂದು. ಯಾರೇ ಆದರೂ ತಾವಾಗೇ ಅತೀ ಧಾರಾಳತನ ತೋರಿದರೆ ಕಣ್ಣು ಕಿರಿದಾಗಿಸಿ ‘ಅದೆಲ್ಲ ಸರಿ, ಆದರೆ ಇವ್ರು ಯಾಕೆ ಇಷ್ಟು ಪ್ರೀತಿ ತೋರಿಸ್ತಿದ್ದಾರೆ’ ಅಂತ ನೋಡುವುದು ನನಗೆ ಅಭ್ಯಾಸವಾಗಿಹೋಗಿತ್ತು. ಈತನಂತೂ ಅಸಾಧ್ಯ ಸುಳ್ಳುಗಾರ ಅನ್ನುವುದು ಈ ವೇಳೆಗಾಗಲೇ ಶಂಕೆಯ ಲೆವೆಲ್ ದಾಟಿ ನಂಬಿಕೆಯ ಲೆವೆಲ್‌ಗೆ ಏರಿಯಾಗಿತ್ತು. ಈಗ ಈ ವಿಷಯ ಹೇಳಿದ ಕೂಡಲೇ ಅದೇ ಪ್ರಶ್ನೆ ಎಸೆದೆ ಅಪನಂಬಿಕೆಯಿಂದ. ನನ್ನ ಗಂಡನಿಗೆ ಮೊದಲೇ ಮನೆ ಹುಡುಕಿ ಹುಡುಕಿ ಹೆಣ ಬಿದ್ದು ಹೋಗಿತ್ತು. ಈಗ ತಾವಾಗೇ ರೆಡ್ ಕಾರ್ಪೆಟ್ ಹಾಸಿ ಕರೆದಾಗಲೂ ಈ ರೀತಿ ರಾಗ ಎಳೆಯುತ್ತಿದ್ದೀನಲ್ಲಾ ಎಂದು ಕೋಪ ನೆತ್ತಿಗೇರಿ, ಸಿಕ್ಕಾಪಟ್ಟೆ ಕೂಗಾಡಿ, ಅದೇ ನೆಪದಲ್ಲಿ – ನನ್ನ ಕೈಲಿ ಇನ್ನಾಗಲ್ಲ. ನೀನೇ ಮನೆ ಹುಡುಕ್ಕೋ ಅಂತ ಡಿಕ್ಲೇರ್ ಮಾಡಿದ. ಜವಾಬ್ದಾರಿಯಿಂದ ನುಣುಚಿಕೊಳ್ಳಬೇಕಾದಾಗೆಲ್ಲ ಅವ ಉಪಯೋಗಿಸುತ್ತಿದ್ದ ಈ ಅಸ್ತ್ರ ನನಗೆ ಅಷ್ಟರಲ್ಲಿ ಸುಮಾರು ಸಲ ಚುಚ್ಚಿ ಚುಚ್ಚಿ ಅಭ್ಯಾಸವಾಗಿದ್ದರಿಂದ, ಬಾಣ ಹೊರಟ ಕೂಡಲೇ ಬಗ್ಗಿ ತಪ್ಪಿಸಿಕೊಳ್ಳುವ ಕಲೆ ನನಗೂ ಇಷ್ಟರಲ್ಲಾಗಲೇ ಕರಗತವಾಗಿಹೋಗಿತ್ತು (marriage is an institution ಅಂತ ಸುಮ್ನೆ ಅಂತಾರಾ ತಿಳಿದವರು?! ಅದೊಂದು educational institutionಏ ಕಣ್ರೀ!!) ನಾನು ಕೂಡಲೇ – ಸಂಜೆ ಎಷ್ಟು ಹೊತ್ತಿಗೆ ರೆಡಿಯಾಗಿರಲಿ ಅಂದೆ. ಬಾಂಬ್ diffuse ಆಯಿತು! ಸಂಜೆ ಆರಕ್ಕೆ ಅಂತ ತೀರ್ಮಾನವಾಯಿತು. ಮೊದಲ ಮನೆ ಹುಡುಕುವಾಗ ಭಯಂಕರ ಎಡವಿದ್ದರಿಂದ ಈ ಸಲ ಅಮ್ಮನೂ ನಮ್ಮ ಜೊತೆ ಬರುತ್ತೇನೆ ಅಂತ ಡಿಕ್ಲೇರ್ ಮಾಡಿದಳು.
ಸಂಜೆ ಆ ಗಾಂಧಿನಗರದಣ್ಣ ಕೊಟ್ಟಿದ್ದ ಅಡ್ರೆಸ್ ಹಿಡಿದು ಹೊರಟೆವು. ನಮ್ಮ ಮನೆಯಿಂದ ತುಂಬ ದೂರವೇನೂ ಇರಲಿಲ್ಲ. ಅವರಿವರನ್ನು ಕೇಳಿ ತಿಳಿದುಕೊಂಡು ಅಂತೂ ಆ ಜಾಗ ತಲುಪಿದೆವು. ಭವ್ಯ ಮಹಲಿನ ಕನಸಿನಲ್ಲಿ ಹೋದ ನಮಗೆ ಭವ್ಯ ಮಹಲಿರಲಿ, ಮಹಲೇ ಇಲ್ಲ ಅನ್ನುವ ಸತ್ಯ ಗೊತ್ತಾಯಿತು! ನಾನು ಮನೆ ನಂಬರ್ ಸರಿಯಿದೆಯೋ, ಇಲ್ಲವೋ ಅನ್ನುವ ಅನುಮಾನದಲ್ಲಿ ಪಕ್ಕದ ಅಂಗಡಿಯ ನಂಬರ್ ಎರಡೆರಡು ಸಲ ಪರೀಕ್ಷಿಸಿ ಅದೇ ಜಾಗ ಅನ್ನುವುದನ್ನು ಖಚಿತ ಪಡಿಸಿಕೊಂಡೆ. ಪಿಳಿ ಪಿಳಿ ಕಣ್ಣು ಬಿಡುತ್ತಾ ಅಲ್ಲೇ ಇದ್ದ 6 ಮೆಟ್ಟಿಲನ್ನೇರಿದೆವು. ನಮ್ಮನ್ನು ಭವ್ಯವಾಗಿ ಸ್ವಾಗತಿಸಿದವು ಅಲ್ಲಿದ ಒಂದಿಷ್ಟು ಪಿಲ್ಲರ್‌ಗಳು! ಮೂಲೆಯಲ್ಲಿ ಒಂದೆರಡು ಬೊಗಸೆಗಳಷ್ಟಿದ್ದ ಜಲ್ಲಿಕಲ್ಲು, ಮತ್ತೊಂದು ಮೂಲೆಯಲ್ಲಿದ್ದ ಎರಡು ಮಂಕರಿ ಮರಳು ಬಿಟ್ಟರೆ ಅಲ್ಲಿ ಮನೆ ಕಟ್ಟುತ್ತಿರುವುದಕ್ಕೆ ಇನ್ಯಾವ ಸಾಕ್ಷಿಯೂ ಇರಲಿಲ್ಲ. ನಾನು, ಅಮ್ಮ ಮುಖ ಮುಖ ನೋಡಿಕೊಂಡೆವು. ನನಗಂತೂ ಕಿಸಿ ಕಿಸಿ ನಗುವೇ ಶುರುವಾಯಿತು. ‘ಇದೇನೋ ಮಾರಾಯಾ, ಈವಪ್ಪ ಇದನ್ನೇ ಮನೆ ಅಂದರಾ? ಇಲ್ಲಿ ಮನೆ ಎಲ್ಲಿದೆ? ಸಿನೆಮಾನೂ ಹೀಗೇ ತೆಗೀತಾರೋ ಏನೋ! ಕೈಯಲ್ಲಿ ಮೂರು ಪೇಜ್ ಸ್ಕ್ರಿಪ್ಟ್ ಹಿಡ್ಕೊಂಡು ಸಿನೆಮಾ ತೋರಿಸ್ತೀನಿ ಬನ್ನಿ ಅನ್ನಬಹುದಾ’ ಅಂತ ನನ್ನ expert commentary ಶುರುವಾಯಿತು. ನನ್ನ ಗಂಡನಿಗೂ ಚೂರು ಅವಮಾನವಾಯಿತಾದರೂ ತೋರಿಸಿಕೊಳ್ಳದೇ, ಇರು ಅವರನ್ನು ಕರೀತೀನಿ ಅಂತ ಅತ್ತಿತ್ತ ನಿಂತು ಕೂಗಿದ. ಹತ್ತು ಸಲ ಕರೆದಾದ ಮೇಲೆ ಎಲ್ಲಿಂದಲೋ ಅಶರೀರವಾಣಿಯೊಂದು ಕೇಳಿ ಬಂತು! ನಾವು ದನಿ ಎಲ್ಲಿಂದ ಬಂತು ಅಂತ ತಬ್ಬಿಬ್ಬಾಗುವಾಗಲೇ, ಬೇಸ್‌ಮೆಂಟಿನಿಂದ ಬರುತ್ತಿದೆ ಅನ್ನುವುದು ಅರ್ಥವಾಯ್ತು. ಮನೆಯ ಹಿಂಬಾಗಕ್ಕೆ ಹೋದರೆ ಅಲ್ಲಿ ನಿಂತಿದ್ದರು ಸೊಣಕಲು ದೇಹದ ಆ ಮನುಷ್ಯ. ಕತ್ತಲು ಕತ್ತಲಾದ ಮೆಟ್ಟಿಲುಗಳನ್ನು ಇಳಿಯುವಾಗ ನನಗಂತೂ ಹಳೆಯ ಕಾಲದ ಕನ್ನಡ ಸಿನೆಮಾಗಳ ಕಳ್ಳರ ಡೆನ್ ಪ್ರವೇಶಿಸುತ್ತಿದ್ದೀನೋ ಅನ್ನಿಸುತ್ತಿತ್ತು! ಅಲ್ಲಿದ್ದ ಮೆಟ್ಟಿಲುಗಳನ್ನು ಇಳಿದು ಹೋದೆವು. ಅಲ್ಲೊಂದು ಸಣ್ಣ ರೂಮು. ಮನೆಯ ಪರಿಸ್ಥಿತಿ ನೋಡಿದರೆ ತುಂಬ ಕಷ್ಟದಲ್ಲಿರುವಂತಿತ್ತು. ನಾವು ಹೋದಕೂಡಲೇ ಸೋಫಾದ ಮೇಲಿದ್ದ ಬಟ್ಟೆಗಳನ್ನೆಲ್ಲ ಎತ್ತಿ ಅಲ್ಲೇ ಇದ್ದ ಮಂಚದ ಮೇಲೆಸೆದು ಮನೆ ಕ್ಲೀನ್ ಮಾಡಿ ಕೂತುಕೊಳ್ಳಿ ಅಂತ ಉಪಚರಿಸಿದರು. ನಾವು ಮುಖ ಮುಖ ನೋಡಿಕೊಂಡೆವು … ಸಿನೆಮಾ ಡೈರೆಕ್ಟರು ಅಂತಾರೆ, ಈ ಪರಿಸ್ಥಿತಿ ಅಂತ ಕಕ್ಕಾಬಿಕ್ಕಿಯಾಯಿತು. ನನ್ನ ಗಂಡ ಇದ್ದುದರಲ್ಲೇ ದನಿಗೂಡಿಸಿಕೊಂಡು ‘ಮನೆ….’ ಅಂತ ರಾಗವೆಳೆದ. ಡೈರೆಕ್ಟರಪ್ಪ ‘ಅದೇ ಈಗ ಅಲ್ಲಿ ಪಿಲ್ಲರ್ ಇದ್ವಲ್ಲ ಸಾರ್, ಅದೇ ಮನೆ. ನೀವು ಅಡ್ವಾನ್ಸ್ ಕೊಟ್ಟರೆ ಒಂದು ತಿಂಗಳಲ್ಲಿ ಮನೆ ಮುಗಿಸಿಕೊಡ್ತೀನಿ. ನೀವು ತಲೆ ಕೆಡ್ಸಿಕೋಬೇಡಿ’ ಅಂದರು! ನಾನು, ಅಮ್ಮ ಮುಖ ಮುಖ ನೋಡಿಕೊಂಡೆವು. ಆತ ಒಳ್ಳೆಯ ಸ್ಕ್ರಿಪ್ಟ್ ರೈಟರ್ ಅನ್ನುವ ನಂಬಿಕೆ ಬಂತು ನಮಗೆ! ಆತ ಕೂಲಾಗಿ ಮನೆ ಬಾಡಿಗೆ ಇಷ್ಟು, ಅಡ್ವಾನ್ಸ್ ಇಷ್ಟು ಅಂತ ಮಾತಾಡುತ್ತ ಹೋದರು. ಮನೆಯೇ ಇಲ್ಲದೆ ಬಾಡಿಗೆಯ ಮಾತು!
ನಾನು ಕಣ್ಣಿನಲ್ಲೇ ಇದೆಲ್ಲ ತಾಪತ್ರಯ ಬೇಡ ಅನ್ನುವಂತೆ ಸನ್ನೆ ಮಾಡಿದೆ ನನ್ನ ಗಂಡನಿಗೆ. ಆತನಿಗೆ ಅದರ ಸುಳಿವು ಸಿಕ್ಕಿ ಹೋಯಿತು. ಅಯ್ಯೋ ಸಾರ್! ನಾವು ಈಗಿರೋ ಸ್ಥಿತಿ ನೋಡಿ ಕನ್ಫ್ಯೂಸ್ ಆಗ್ಬೇಡಿ. ನಮ್ಮ ಮನೆ ಜಯನಗರದಲ್ಲೊಂದು ಇದೆ. ಇದನ್ನ ಮುಗಿಸಿ ಬಾಡಿಗೆಗೆ ಕೊಟ್ಟು, ಆಮೇಲೆ ಅಲ್ಲಿಗೆ ಶಿಫ್ಟ್ ಮಾಡಣ ಅಂತಷ್ಟೇ ಅಂತ ಸಿನೆಮಾ ಕಥೆಯ ಪಾರ್ಟ್ -2 ಶುರು ಮಾಡಿದರು. ಅಷ್ಟರಲ್ಲೇ ಪಾರ್ಟ್ ೩ ಶುರುವಾಯ್ತು …. ಸಾರ್ ನನ್ನ ಹೆಂಡ್ತಿನೂ ಸಿನೆಮಾದಲ್ಲಿ ಮಾಡ್ತಾಳೆ ಅಂತ ಯಾವುದೋ ನಟಿಯ ಹೆಸರು ಹೇಳಿದರು. ನಾನು ಹೂಂ ಗೊತ್ತು ಅವರು ಎಂದೆ. ಅವಳೇನು ಸಾಮಾನ್ಯದವಳಲ್ಲ ಸಾರ್, HALನಲ್ಲಿ ಕೆಲಸ ಮಾಡ್ತಾಳೆ, ಇಂಜಿನಿಯರ್ರು ಅಂದರು. ಈಗ ಈ ಕಥೆಯೆಲ್ಲ ಯಾಕೆ ಹೇಳ್ತಿದಾರೆ ಅಂತ ನಾನು ಇನ್ನಿಷ್ಟು ಕಂಗಾಲಾದೆ. ಅಮ್ಮ ಕೈ ತಿವಿಯಲಾರಂಭಿಸಿದಳು ಹೊರಡೋಣ ಎನ್ನುವಂತೆ. ನಾವು ಎದ್ದೆವು. ಅಗ್ರೀಮೆಂಟ್ ಯಾವಾಗ ಇಟ್ಕೊಳಣ ಸರ್ ಅಂತ ಕೇಳಿದರು! ನನ್ನ ಗಂಡ ಅಸ್ಪಷ್ಟವಾಗಿ ಏನೋ ಮಣಮಣ ಅಂದು ಹೊರಟ. ಮನೆಗೆ ಬಂದು ನಾವು ಈ ಬುರುಡೇರಾಯನ ಕಥೆಕಟ್ಟುವ ಕೆಪ್ಯಾಸಿಟಿ ನೆನೆಸಿಕೊಂಡು ಮನಸಾರೆ ನಕ್ಕೆವು.
ಮರುದಿನ ಬೆಳಿಗ್ಗೆ ನನ್ನ ಗಂಡ ಬೇರೆ ದಾರಿಯಲ್ಲಿ ವಾಕಿಂಗ್ ಮುಗಿಸಿ ಬಂದ. ಅವನು ಬಂದ ಸ್ವಲ್ಪ ಹೊತ್ತಿಗೆ ಮನೆ ಬೆಲ್ಲು … ನೋಡಿದರೆ ಆ ಡೈರೆಕ್ಟರಪ್ಪ!! ಬಂದವರನ್ನು ಒಳಗೆ ಕರೆಯುವುದು ಸೌಜನ್ಯ ಅಂತ ಕರೆದೆವು. ಬೆಳ್ಬೆಳಗ್ಗೆಯೇ ಸ್ಕ್ರಿಪ್ಟ್ ಶುರು! ಅಯ್ಯೋ ಮನೆ ೧೫ ದಿನದಲ್ಲಿ ಮುಗಿಸಿಬಿಡ್ತೀನಿ. ನನ್ನ ಹೆಂಡ್ತಿ ಒಳ್ಳೆ ಕೆಲಸದಲ್ಲಿದಾಳೆ ಸರ್, HMTನಲ್ಲಿ ಕೆಲಸ ಮಾಡ್ತಾಳೆ, ಡಬಲ್ ಗ್ರ್ಯಾಜುವೇಟು ಅಂದರು!! ಒಂದೊಂದಿನ ಒಂದೊಂದು ಕಡೆ ಕೆಲಸ, ಒಂದೊಂದಿನ ಒಂದೊಂದು ಡಿಗ್ರಿ ಕೊಡಿಸಬಲ್ಲ ಈತ ಒಂದು ಸಿನೆಮಾಗೆ ಎಷ್ಟು ಸೀಕ್ವೆಲ್‌ಗಳನ್ನಾದರೂ ತೆಗೆಯಬಲ್ಲಂಥ ಪ್ರತಿಭಾವಂತ ಅನ್ನುವುದು ಸಾಬೀತಾಯಿತು! ಅವತ್ತಿನಿಂದ ಎರಡು ದಿನಕ್ಕೊಮ್ಮೆ ಬಂದು ಹೆಂಡತಿಗೊಂದು ಹೊಸಾ ಡಿಗ್ರಿ ಕೊಡಿಸಿ, ಹೊಸ ಕಡೆ ಕೆಲಸಕ್ಕೆ ಸೇರಿಸಿ ಮನೆಗೆ ಅಡ್ವಾನ್ಸ್ ಯಾವಾಗ ಕೊಡ್ತೀರಾ ಅಂತ ಕೇಳಲು ಶುರು ಮಾಡಿದರು. ನಾನು ಮೊದಮೊದಲು ತುಂಬ ವಿನಯವಾಗಿ ಉತ್ತರ ಕೊಡುತ್ತಿದ್ದವಳು ಕಡೆಗೆ ಒರಟಾಗಿ ಉತ್ತರಿಸಲು ಪ್ರಾರಂಭಿಸಿದರೂ ಅವರು ಪೀಡಿಸುವುದು ಮಾತ್ರ ನಿಲ್ಲಿಸಲೇ ಇಲ್ಲ. ಕೊನೆಗೊಮ್ಮೆ ನಾವು ಆತುರಾತುರವಾಗಿ ಬೇರೆ ಮನೆ ಹುಡುಕಿ ಶಿಫ್ಟ್ ಆದೆವು.
ಇದು ಬರೀ ಎರಡೇ ಮನೆಗಳ ಕಥೆ. ಇನ್ನೂ ಮೂರು ಮನೆಯ ಕಥೆ ಮತ್ತೆ ಎಂದಾದರೂ ಹೇಳುತ್ತೇನೆ. ಒಂದೂವರೆ ಅಡಿ ಬೈ ನಾಲ್ಕು ಅಡಿಗಳ ಅಡಿಗೆ ಮನೆಯ ಕಥೆ, ನಡುರಾತ್ರಿಯಲ್ಲಿ ನಮ್ಮ ಬೆಡ್ ರೂಮಿನ ಕಿಟಕಿಯಲ್ಲಿ ಇಣುಕು ಹಾಕುತ್ತಿದ್ದ ವಿಕೃತ ಓನರ್‌ನ ಕಥೆ, ನಮ್ಮನ್ನು ಮನೆ ಬಿಡಿಸಲೆಂದು ಮನೆಯಲ್ಲಿ ಹೊಸದಾಗಿ ಮದುವೆಯಾಗಿ ಬಂದ ಸೊಸೆ ತನ್ನ ಹೆಂಡತಿಯ ಜೊತೆ ನಾಯಿಯಂತೆ ಜಗಳ ಕಾಯುತ್ತಿದ್ದಾಳೆ ಅಂತ ಸುಳ್ಳು ಹೇಳಿ ಮನೆ ಬಿಡಿಸಿದ ಓನರ್ ಕಥೆ, ಕಳ್ಳತನ ಆದ ಮನೆಗೆ ಬಾಡಿಗೆದಾರರಿಲ್ಲದೆ ಲಾಟರಿ ಹೊಡೆಯುತ್ತಿದ್ದ ಓನರ್ ನಾವು ಹೇಳಿದ್ದಕ್ಕೆಲ್ಲ ತಲೆಯಾಡಿಸಿ ನಂತರ ಮನೆಗೆ ಹೋದ ಮೇಲೆ ದಿವ್ಯನಿರ್ಲಕ್ಷ್ಯ ತೋರಿದ ಕಥೆ …. ಇವೆಲ್ಲ ಮತ್ತೆ ಕೂತು ಎಂದಾದರೂ ಹೇಳುವೆ ….
ಉಪಸಂಹಾರ: ಇಷ್ಟೆಲ್ಲ ಅನುಭವಗಳಾದ ಮೇಲೆ ‘ಇಲ್ಲಿಗೆ ನಾವು ಸುಮ್ಮನೆಯೇನೂ ಬಂದಿಲ್ಲ’ ಮತ್ತು ‘ಅಲ್ಲಿರುವ ನಮ್ಮನೆಗೆ ಈಗಲೇ ನಾವು ಹೋಗುವುದೂ ಇಲ್ಲ’ ಅನ್ನುವ ಜ್ಞಾನೋದಯವಾಗಿ ಸ್ಥಾವರವಾಗುವ ನಿರ್ಧಾರಕ್ಕೆ ಬಂದಿದ್ದೀವಿ … ಯಾವುದಾದರೂ ಸೈಟ್ ಇದ್ರೆ ಹೇಳಿ ಸ್ವಾಮಿ, ಬಸವೇಶ್ವರನಗರದಲ್ಲಿ … !
 

‍ಲೇಖಕರು G

March 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. umavallish

    ಓ ಭಾರತೀ…. ನಾನು ಓದುತ್ತಾ ಓದುತ್ತಾ, ಕಥೆ ಹೇಳುವ ಓನರ್ ನ ಇಮ್ಮ್ಯಾಜಿನ್,ಮಾಡಿಕೊಂಡೆ. ಅಬ್ಬಾ ಸುಳ್ಳಿನ ಸರಮಾಲೆಯನ್ನೇ ನಿಮಗೆ ಹಾಕಿದ್ದಾನೆ.ವಿಷಯವನ್ನು, ವಿನೋದವಾಗಿ ಬರೆದಿದ್ದೀಯ,ಆ ಸಮಯದಲ್ಲಿ,ಎಷ್ಟು ಕೋಪ ಬಂದಿರುತ್ತೆ ಅಲ್ವಾ?…ತುಂಬಾ ಚೆನ್ನಾಗಿದೆ. ಉಳಿದ ಅನುಭವ ಓದಲು ಕಾತುರದಿಂದ ಕಾಯುತ್ತಿದ್ದೇನೆ..

    ಪ್ರತಿಕ್ರಿಯೆ
  2. Anil Talikoti

    ಅದಕ್ಕೆ ಅಲ್ಲವೆ ಹೇಳಿದ್ದು ‘ಮನೆಯೇ ಮೊದಲ ಪಾಠಶಾಲೆ’ ಅಂತ – ಸ್ವಂತದ್ದಾದರೆ ಇಂಗ್ಲಿಶ್ ಮೀಡಿಯಂ ಶಾಲೆ -ಇನ್ನೂ ಫಾಸ್ಟ್ ಆಗಿ ಕಲಿಬಹುದು

    ಪ್ರತಿಕ್ರಿಯೆ
  3. ಬಿ.ವಿಶ್ವನಾಥ್

    ನನ್ನ experience ಬೇರೆ.ನಾನು ಬಾಡಿಗೆಗಿದ್ದ ಮನೆ ಒಡೆಯರು ಎರಡು ವರ್ಷವಾದ ಮೇಲೆ ಬಾಡಿಗೆ ಹೆಚ್ಚು ಕೊಟ್ಟಿದ್ದಕ್ಕೆ ಬೇಜಾರು ಮಾಡಿಕೊಂಡು,ನಿನ್ನನ್ನು ಮಗನ ರೀತಿ ಭಾವಿಸಿದ್ದೆ ಸ್ವಂತ ಮನೆಯಾಗುವ ತನಕ ಮನೆಬದಲಾಯಿಸುವಯೋಚನೆ ಮಾಡಬೇಡವೆಂದು ಹಾಗೇ ನಡೆದುಕೊಂಡರು.ಹೀಗಾಗಿ ನಾನು 15 ವರ್ಷ ಒಂದೇ ಮನೆಯಲ್ಲಿ ಬಾಡಿಗೆಗಿದ್ದು ನಂತರ ಸ್ವಂತ ಮನೆಗೆಬದಲಾಯಿಸಿದೆ

    ಪ್ರತಿಕ್ರಿಯೆ
  4. bharathi b v

    ವಿಶ್ವನಾಥ್ ಅವರೇ ನೀವೂ ನಮ್ಮ ಭೂಲೋಕದಲ್ಲೇ ಇರೊದು ತಾನೇ !!!!

    ಪ್ರತಿಕ್ರಿಯೆ
  5. jagadishkoppa@gmail.com

    ಸಹೋದರಿ. ಬೆಂಗಳೂರಿನಲ್ಲಿ ನನಗೊಂದು 6×3 ರ ಸೈಜಿನ ನಿವೇಶನ ಬೇಕಿತ್ತು. ನಿಮ್ಮ ಅರ್ಜಿಯ ಜೊತೆ ನನ್ನದೊಂದು ಅರ್ಜಿಯನ್ನು ಲಗತ್ತಿಸಿ.

    ಪ್ರತಿಕ್ರಿಯೆ
  6. Anonymous

    ಓಹೋ ಖಂಡಿತಾ ಭಾರತಿಯವರೇ, ನಿಮಗೇ ನಮ್ಮ ಸೈಟು. (Allot ಆದ ತಕ್ಷಣ!).
    ಹೇಗಿದ್ದರೂ ಮೊನ್ನೆಮೊನ್ನೆ ತಾನೇ ಬಸವೇಶ್ವರ ನಗರದಲ್ಲಿ ನಾವು ಸೈಟ್-ಗಾಗಿ apply ಮಾಡಿದ್ದೀವಿ! 😉
    ಇಷ್ಟು ನಿಮ್ಮ ಕಷ್ಟಸುಖಕ್ಕಾಗ್ದೇದ್ರೆ ಸ್ನೇಹಿತರಾಗಿ ಏನು ಪ್ರಯೋಜನ ಹೇಳಿ? 😉

    ಪ್ರತಿಕ್ರಿಯೆ
  7. Rukmini Nagannavar

    ಇಕಥೆ ಹೇಳುವ ಧಾಟಿ ತುಂಬ ವಿನೋದವಾಗಿರುವುದರಿಂದ ಫಟಾಫಟಾ ಓದಿಸಿಕೊಂಡು ಹೋಗುತ್ತದೆ ಮತ್ತು ಕಥಾವಿಷಯ ಮನದಟ್ಟಾಗುತ್ತ ಹೋಗುತ್ತದೆ. ಸೂಪರ್ ಅಕ್ಕ… ತುಂಬ ಇಷ್ಟವಾಯಿತು.

    ಪ್ರತಿಕ್ರಿಯೆ
  8. Sarala

    Bharathi, neevu patta kashtagalanella hasyadalli muligisi nagiseedira 🙂
    namma tande maneyalli hattu varshagala kaala ondu malayaali samsaara badigege idru. maduveyada hosa jodi mattu gandana taayi moore jana idru avarige maguvada mele naalku jana adru. avaru aa mane bittu 30 varsha adru, eegalau aa sose namma tande taayiyannu tumba adaara krutagneteyinda neneyuttale. naanu avarige modala magalu anta heltale. alli iddaga tumba aaramagi idvi anta janpisikollutta irtale. eegalu namma samparkadalli iddare. Happily 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: