'ಅಪ್ಪನ ಪ್ರೀತಿಯ ಬಗ್ಗೆ ಸಾಕಷ್ಟು ಬರೆದಿದ್ದೇನೆ, ಈ ಸಲ for a change..' – ಭಾರತಿ ಬಿ ವಿ

ಭಾರತಿ ಬಿ ವಿ

ನನ್ನ ಅಪ್ಪ ಹಣಕಾಸಿನ ವಿಚಾರದಲ್ಲಿ ತುಂಬ ಕಟ್ಟುನಿಟ್ಟು. ಅವರು ಹಾಗೇ ಇರಲೇಬೇಕಾದ ಅನಿವಾರ್ಯವೂ ಇತ್ತು ಅಂತಿಟ್ಟುಕೊಳ್ಳಿ. ಆಗ ಎಲ್ಲರ ಮನೆಗಳ ಪರಿಸ್ಥಿತಿಯೂ ಹೆಚ್ಚುಕಡಿಮೆ ಹಾಗೇ ಇರುತ್ತಿದ್ದರಿಂದ ನಮಗೆ ಆಗ ಅದೆಲ್ಲ ವಿಚಿತ್ರ ಅಥವಾ ಅತಿರೇಕ ಅನ್ನಿಸುತ್ತಲೂ ಇರಲಿಲ್ಲ. ಬದುಕು ಇರಬೇಕಾದ್ದೇ ಹಾಗೆ ಮತ್ತು ಇರುವುದೂ ಹಾಗೆಯೇ ಅನ್ನುವ ರೀತಿ ಬದುಕಿಬಿಡುತ್ತಿದ್ದೆವು! ಅಪ್ಪ ಪ್ರೀತಿಯ ವಿಷಯದಲ್ಲಿ ಎಷ್ಟು ಧಾರಾಳವೋ, ಶಿಸ್ತಿನ ವಿಷಯದಲ್ಲೂ ಅಷ್ಟೇ ಧಾರಾಳಿ … ಬೈಗುಳದ ವಿಷಯದಲ್ಲೂ ಅಷ್ಟೇ ಧಾರಾಳಿ! ಇದುವರೆಗೆ ಅಪ್ಪನ ಪ್ರೀತಿಯ ಬಗ್ಗೆ ಸಾಕಷ್ಟು ಸಲ ಬರೆದಿದ್ದೇನೆ. ಈ ಸಲ for a change ಅಪ್ಪನ ಇಂಥ ಶಿಸ್ತಿನ ಒಂದೆರಡು ಸ್ಯಾಂಪಲ್ಸ್ !
ನಾವು ಶಾಲೆಯಲ್ಲಿ ಕಲಿಯುತ್ತಿದ್ದ ಕಾಲದಲ್ಲಿ ನಾವೆಲ್ಲ ಉಪಯೋಗಿಸುತ್ತಿದ್ದುದು ಇಂಕ್ ಪೆನ್ ಮಾತ್ರ. ಬಾಲ್ ಪೆನ್ನನ್ನು ಕಂಡು ಹಿಡಿದು ಒಂದು ಶತಮಾನ ಕಳೆದು ಹೋಗಿದ್ದರೂ ಇಂಕ್ ಪೆನ್ನನ್ನೇ ಉಪಯೋಗಿಸಬೇಕು ಅನ್ನುವ ಕಟ್ಟಳೆ ಶಾಲೆಯಲ್ಲಿ ಜಾರಿಯಲ್ಲಿತ್ತು. ನನ್ನಪ್ಪ ತಿಂಗಳ ರೇಷನ್ ಇದ್ದ ತರಹ ಒಂದೆರಡು ಇಂಕಿನ ಬಾಟಲಿ ತಂದಿಟ್ಟು ಬಿಡುತ್ತಿದ್ದರು. ಅವರ ಲೆಕ್ಕಾಚಾರದ ಪ್ರಕಾರ ಆ ಬಾಟಲಿಯ ಇಂಕು ಅದೆಷ್ಟೋ ದಿನಕ್ಕೆ ಬರಬೇಕು. ಆ ರೀತಿ ಲೆಕ್ಕ ಹಾಕಲು ಅದ್ಯಾವ economic theory ಅವರಿಗೆ ಪ್ರೇರೇಪಣೆಯಾಗಿತ್ತೋ ನನಗೆ ಗೊತ್ತಿಲ್ಲ, ಒಟ್ಟಿನಲ್ಲಿ ಅವರ ಲೆಕ್ಕಾಚಾರ ತಪ್ಪುವಂತಿಲ್ಲ. ಪ್ರತಿವಾರದ ಭಾನುವಾರದಂದೂ ಇಂಕ್ ತುಂಬುವ ಕಾರ್ಯಕ್ರಮವನ್ನು ಸತ್ಯನಾರಾಯಣ ಪೂಜೆಗಿಂತಲೂ ಶ್ರದ್ಧೆಯಿಂದ ಮಾಡುತ್ತಿದ್ದೆವು (ಸತ್ಯನಾರಾಯಣ ಪೂಜೆ ಇಡೀ ಜನ್ಮದಲ್ಲಿ ಒಂದೇ ದಿನ ಮಾಡಿದ್ದು ಅನ್ನುವುದು ಬೇರೆಯದೇ ಮಾತು!). ಈ ಮಹತ್ಕಾರ್ಯ ಹೆಚ್ಚೂಕಡಿಮೆ ಅಪ್ಪನ ಮೇಲ್ವಿಚಾರಣೆಯಲ್ಲೇ ನಡೆಯುತ್ತಿತ್ತು. ಇಂಕ್ ಫಿಲ್ಲರ್ ಅನ್ನುವ ಮಂತ್ರದಂಡವೊಂದು ಇನ್ನೂ ಸೃಷ್ಟಿಯಾಗಿಲ್ಲದ ಕಾಲದಲ್ಲಿ ಒಂದು ತೊಟ್ಟೂ ಕೆಳಕ್ಕೆ ಬೀಳದಂತೆ ಇಂಕು ತುಂಬಿಸುವುದು ಸಾಮಾನ್ಯದ ಸಂಗತಿಯೇನೂ ಆಗಿರಲಿಲ್ಲ. ಅಪ್ಪ ಅಲ್ಲೇ ಕೂತು ನಮ್ಮನ್ನು ನೋಡುತ್ತಿದ್ದಾರೆ ಅನ್ನುವ ಕಾರಣಕ್ಕೆ ತುಂಬ ಹುಷಾರಿನಲ್ಲಿ ಇಂಕು ತುಂಬಿಸಲು ಹೋಗಿ, ಕೈ ನಡುಗಿ ಒಂದೆರಡು ತೊಟ್ಟು ಇಂಕು ಕೆಳಗೆ ಹರಡಿದ್ದ ಬಟ್ಟೆಯ ಪಾಲಾಗಿ ಮುಂದಿನ ಒಂದಿಷ್ಟು ಹೊತ್ತು ಬಯ್ಯುವುದು ಮತ್ತು ಬಯ್ಯುತ್ತಲೇ ಫ಼್ಲ್ಯಾಷ್‌ಬ್ಯಾಕಿಗೆ ಹೋಗುವುದು ಮಾಮೂಲು…
ಕಡಲೆಕಾಯಿ ಭಕ್ತರಾಗಿದ್ದ ತಾತನಿಗೆ ದಿನಾ ರಾತ್ರಿ ಮಲಗುವ ಮುಂಚೆ ಒಂದು ಹಿಡಿ ಕಡಲೆಕಾಯಿ ತಿನ್ನುವ ಅಭ್ಯಾಸವಿತ್ತಂತೆ. ಮನೆಯಲ್ಲಿರುವ ಮಕ್ಕಳಿಗೆಲ್ಲ ಕೊಟ್ಟರೆ ಇಡೀ ಒಂದು ಮೂಟೆ ಕಡಲೆಕಾಯಿ ಖಾಲಿ ಮಾಡುವಂಥ ಹೊಟ್ಟೆಬಾಕರು! ತಾತನ ಆದಾಯ ಅದಕ್ಕೆಲ್ಲ permit ಮಾಡುತ್ತಿರಲಿಲ್ಲ. ಹಾಗಾಗಿ ‘ದುಡಿಯುವ ಗಂಡಸಾದ’ ತಾತನಿಗೆ ಮಾತ್ರ ಆ ಪುಣ್ಯ. ಅದನ್ನು ಬಿಡಿಸಿಕೊಡಲು ಈ ಮಕ್ಕಳಲ್ಲಿ ಪೈಪೋಟಿಯಂತೆ. ತಾತನಿಗೆ ಬಿಡಿಸಿಕೊಡುವಾಗ ಬೇಕೆಂತಲೇ ಒಂದಿಷ್ಟು ಕಾಳುಗಳನ್ನು ಸಿಪ್ಪೆಯ ಜೊತೆ ಜಾರಿಸಿಬಿಟ್ಟು, ಸಿಪ್ಪೆ ಬಾಚಿದ ನಂತರ ಅವನ್ನೆಲ್ಲ ಹುಡುಕಿ ಮಕ್ಕಳು ತಿನ್ನುತ್ತಿದ್ದರಂತೆ. ಈ ಕಥೆ ಮತ್ತು ಇಂಥ ಒಂದಿಷ್ಟು ಕಥೆಗಳನ್ನು ಉದಾಹರಿಸುತ್ತ ಅಪ್ಪ ತಮ್ಮ ಬೈಗುಳದ ಸೆಷನ್ ಶುರುಮಾಡುತ್ತಿದ್ದರು. ನಾವು ಇಂಕು ಚೆಲ್ಲಿದ ತಪ್ಪಿಗೆ ಇದನ್ನೆಲ್ಲ ಕೇಳಿಸಿಕೊಳ್ಳುತ್ತ ಇಂಕು ತುಂಬಿಸುವ ಮಹಾಯಜ್ಞ ಮುಗಿಸುತ್ತಿದ್ದೆವು. ಇನ್ನು ಮುಂದಿನ ವಾರದವರೆಗೂ ಆ ಇಂಕು ‘ಬಾಳಿಕೆ’ ಬರಬೇಕು ಅಷ್ಟೇ! ಆದರೆ ಆ ಇಂಕು ಅಷ್ಟು ಕಾಲ ಬಾಳಿಕೆ ಬರುತ್ತಿರಲಿಲ್ಲ! ಯಾಕೆಂದರೆ ಅಪ್ಪನ ಲೆಕ್ಕದಲ್ಲಿ ಇಂಕು ಅನ್ನುವುದು ಬರೆಯಲು ಮಾತ್ರ ಇರುವ ಸಾಧನವಾಗಿತ್ತು. ನಮಗೆ ಅದು ದೇವರಂತೆ … ನಾನಾ ಸ್ವರೂಪ ಅದಕ್ಕೆ!

ಬಿಡಿಸಿ ಹೇಳುತ್ತೇನೆ ಕೇಳಿ! ನಾವು ಶಾಲೆಯ ದಾರಿಯಾಗಿ ಹೋಗುವಾಗ ರಸ್ತೆ ಬದಿಯಲ್ಲೊಂದು ಗೂಡಂಗಡಿ ಇತ್ತು. ಅಲ್ಲಿ ಸಣ್ಣ ಸಣ್ಣ ಗಾಜಿನ ಜಾಡಿಗಳಲ್ಲಿ ಅಂಟಿನುಂಡೆ, ಎಳ್ಳುಂಡೆ, ಬೆಲ್ಲದ ಕೊಬ್ಬರಿ ಮಿಠಾಯಿ ತುಂಬಿಸಿಟ್ಟಿರುತ್ತಿದ್ದರು. ನನಗೆ ಈ ಜಗತ್ತಿನ ಯಾವುದನ್ನೆ ಆಗಲಿ, ಹೇಗೋ ನಿಗ್ರಹಿಸುವ ಶಕ್ತಿಯಿದೆ. ಆದರೆ ಬೆಲ್ಲದಿಂದ ಮಾಡಿದ ಸಿಹಿತಿಂಡಿ ನನ್ನ ಬದುಕಿನ ಬಹು ದೊಡ್ಡ ವೀಕ್‌ನೆಸ್! ಆಗೆಲ್ಲ ಪಾಕೆಟ್ ಮನಿ ಅನ್ನುವುದರ ಹೆಸರು ಕೂಡ ಕೇಳಿರಲಿಲ್ಲ ನಾವು. ನಮ್ಮ ಕೈಯಲ್ಲಿ ಒಂದೇ ಒಂದು ನಯಾಪೈಸೆ ಓಡಾಡದ ಕಾಲ. ಮತ್ತೆ ಆ ಕೊಬ್ಬರಿ ಮಿಠಾಯಿ ತಿನ್ನುವುದು ಹೇಗೆ! ಆಗಲೇ ಈ barter system ಅನ್ನುವುದು ನಮ್ಮ ಬದುಕಿನ ಭಾಗವಾಗಿದ್ದು!! ವಾರದ ಲೆಕ್ಕದಲ್ಲಿ ಅಪ್ಪ ಕೊಡುತ್ತಿದ್ದ ಇಂಕಿನ ಕೆಲವು ತೊಟ್ಟುಗಳನ್ನು ನಾವು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದೆವು! ಅದು ಹೇಗೆಂದರೆ ಗೆಳತಿಯರ ಪೆನ್ನಿನ ಇಂಕು ಖಾಲಿಯಾದಾಗ ನಾವು ಇಂಕನ್ನು ತೊಟ್ಟಿನ ಲೆಕ್ಕದಲ್ಲಿ ಸಾಲ ಕೊಡುತ್ತಿದ್ದೆವು. ಆ ತೊಟ್ಟುಗಳ ಲೆಕ್ಕ ಕರಾರುವಾಕ್ಕಾಗಿ ನೆನಪಿನಲ್ಲಿ ಇಟ್ಟುಕೊಂಡಿರುತ್ತಿದ್ದೆವು. ಸಾಲದ ಗಡಿ 5 ತೊಟ್ಟು ಮುಟ್ಟಿದಾಗ ಅವರು ನಮಗೊಂದು ಕೊಬ್ಬರಿ ಮಿಠಾಯಿ ಕೊಡಿಸುತ್ತಿದ್ದರು. ಅಲ್ಲಿಗೆ ನಮ್ಮ ವ್ಯವಹಾರ ಚುಕ್ತಾ! ಈ ರೀತಿಯಾಗಿ ಬೇಕಾದಷ್ಟು ಸಲ ಕೊಡು-ಕೊಳ್ಳುವ ವ್ಯವಹಾರ ಮಾಡುತ್ತಿದ್ದೆವು. ಈ ಕಾರಣಕ್ಕಾಗಿ ನಮಗೆ ಒಂದಿಷ್ಟು ಇಂಕು ಬೇಕಾಗುತ್ತಿತ್ತು.
ಇನ್ನೊಂದು ಕಾರಣವೆಂದರೆ, ನಮ್ಮ ಕ್ಲಾಸಿನಲ್ಲಿ ತುಂಬ ಬಡತನದಲ್ಲಿ ಬದುಕುತ್ತಿದ್ದ ಒಂದಿಬ್ಬರು ಗೆಳತಿಯರಿದ್ದರು. ನಾವೆಲ್ಲ ಸೇರಿ ಆಗೀಗ ಅವರಲ್ಲಿ ಯಾರಾದರೊಬ್ಬರಿಗೆ non returnable ಶರತ್ತಿನ ಮೇರೆಗೆ ಒಂದೆರಡು ತೊಟ್ಟು ಇಂಕು ಕೊಡುತ್ತಿದ್ದೆವು. ಅದು ಒಂಥರಾ ಸಮುದಾಯ ಪ್ರಜ್ಞೆಯ ಹಾಗೆ. ಅವರೆಲ್ಲರ ಕಷ್ಟವನ್ನು ಯಾರೂ ಆಜ್ಞೆ ಮಾಡದೇ, ಯಾರೂ ಒತ್ತಾಯಿಸದೇ ನಾವೆಲ್ಲ ಹಂಚಿಕೊಂಡು ಬಿಟ್ಟಿದ್ದೆವು. ಇದನ್ನೆಲ್ಲ ಅಪ್ಪನ ಬಳಿಯಾಗಲೀ, ಮತ್ಯಾರ ಬಳಿಯಾಗಲೀ ನಾವು ಹೇಳುತ್ತಿರಲಿಲ್ಲ. ಹಾಗಾಗಿ ಅಪ್ಪ ಕೊಡುತ್ತಿದ್ದ ಇಂಕಿನ ರೇಷನ್‌ನಲ್ಲಿ ಇದಕ್ಕೂ ಪ್ರಾವಿಷನ್ ಮಾಡಬೇಕಾದ ಅನಿವಾರ್ಯತೆ ಕೂಡ ಸೇರಿಕೊಳ್ಳುತ್ತಿತ್ತು. ಇದರ ಜೊತೆಗೆ ಆಗಿನ ಬಹುತೇಕ ಮಕ್ಕಳಲ್ಲಿ ಇನ್ನೊಂದು ತಲೆಹರಟೆ ವಿದ್ಯೆಯಿತ್ತು. ಅದೇನೆಂದರೆ, ಒಂದು ಹಾಳೆಯ ನಡುವೆ ಒಂದೆರಡು ತೊಟ್ಟು ಇಂಕನ್ನು ಒದರಿ, ನಂತರ ಆ ಹಾಳೆಯನ್ನು ಮಧ್ಯದಲ್ಲಿ ಮಡಚಿ ನಂತರ ಬಿಡಿಸಿದರೆ ಒಂದು ಅದ್ಭುತವಾದ ಮಾಡರ್ನ್ ಆರ್ಟ್ ಮೂಡಿರುತ್ತಿತ್ತು! ಅದರಲ್ಲಿ ನಮ್ಮ ಕಲ್ಪನಾ ಶಕ್ತ್ಯಾನುಸಾರ ನವಿಲು, ಆನೆಯ ಸೊಂಡಿಲು, ಗಾಂಧಿತಾತನ ಕೋಲು-ಕನ್ನಡಕ, ಮರ-ಗಿಡ ಎಲ್ಲವೂ ಮೂಡುವ ಅದ್ಭುತ ಘಳಿಗೆಯೊಂದು ನಮ್ಮೆದುರು ಬಿಚ್ಚಿಕೊಳ್ಳುವ ಸಮಯವದು. ಇಂಥ ಚಮತ್ಕಾರದ ಘಳಿಗೆಗೆ ನಾವೆಷ್ಟು ಅಡಿಕ್ಟ್ ಆಗಿದ್ದೆವೆಂದರೆ ಅಪ್ಪನ ಆಜ್ಞೆಯಾಗಲೀ, ಭಯವಾಗಲೀ ನಮ್ಮನ್ನು ತಡೆಯುತ್ತಿರಲಿಲ್ಲ. ಇರುವ ಇಂಕಿನಲ್ಲಿ ಈ ಕೆಲಸಕ್ಕೂ ಒಂದಿಷ್ಟು ಪ್ರಾವಿಷನ್ ಇಟ್ಟುಕೊಳ್ಳಬೇಕಾಗಿತ್ತು!
ಇದನ್ನೇ ನೋಡಿ ಬದುಕಿನ ಅನಿವಾರ್ಯತೆ ಅನ್ನುವುದು! ಈ ವಿಷಯದಲ್ಲಿ ಅಪ್ಪನೂ ಸರಿಯಾಗಿದ್ದರು ಮತ್ತು ನಾವು ಅವರ ವಿರುದ್ಧವಾಗಿ ಇದ್ದೂ ಕೂಡಾ ನಾವೂ ಸರಿಯಿದ್ದೆವು! ಹಾಗಾಗಿ ಆದದ್ದು ಆಗಿಹೋಗಲಿ ಎನ್ನುವ ಭಂಡತನಕ್ಕೆ ಬಿದ್ದು ಎಲ್ಲವನ್ನೂ ಮಾಡಿ ಮುಗಿಸಿಬಿಡುತ್ತಿದ್ದೆವು. ಆ ನಂತರ ನಿರೀಕ್ಷಿಸಿದ ಹಾಗೇ ಇಂಕು ಡ್ಯೂ ಡೇಟಿಗೆ ಮುಂಚಿತವಾಗೇ ಮುಗಿದುಹೋಗುತ್ತಿತ್ತು. ಆಗ ಈ ‘ಎಚ್ಚೆತ್ತ ಭಾರತಿ‘ಗೆ ವಾಸ್ತವದ ನೆನಪಾಗುತ್ತಿತ್ತು. ಒಮ್ಮೊಮ್ಮೆ ಪೆನ್ನಿಲ್ಲದೇ ಶಾಲೆಗೆ ಹೋಗಲಾಗದ ಕಾರಣಕ್ಕೆ ಹೊಟ್ಟೆನೋವು, ತಲೆನೋವು ಅಂತೆಲ್ಲ ಬರಿಸಿಕೊಳ್ಳುತ್ತಿದ್ದೆವು. ಆದರೆ ಪ್ರತೀ ವಾರವೂ ಅದನ್ನೇ ಮಾಡುವುದೂ ಸಾಧ್ಯವಿಲ್ಲವಲ್ಲ. ಕೊನೆಗೆ ವಿಧಿಯಿಲ್ಲದಾಗ ಅಪ್ಪನೆದುರು ಜೋಲು ಮುಖ ಮಾಡಿ ನಿಲ್ಲುತ್ತಿದ್ದೆವು ಅಪ್ಪನ ಬಯ್ಗುಳಕ್ಕೆ ಕಿವಿ ಕೊಟ್ಟು…
‘ನಿಮ್ಮಪ್ಪ ದೊರೆ ಮೊಮ್ಮಗ ಅಂದ್ಕೊಂಡ್ರಾ’
‘ದುಡ್ಡೇನು ನಿಮ್ಮಮ್ಮ ಹಾಕಿರೋ ಹತ್ತಿ ಮರದಲ್ಲಿ ಬಿಡುತ್ತಾ ಕಿತ್ಕೊಂಡು ಬರಕ್ಕೆ’
‘ನಮ್ಮ ಕಾಲದಲ್ಲಿ ಹುಟ್ಬೇಕಿತ್ತು ನೀವೆಲ್ಲಾ.. ಚಪ್ಪಲಿ …ಚಪ್ಪಲಿಗೆ ಗತಿಯಿರ್ತಿರಲಿಲ್ಲ’
‘ದಾನ ಮಾಡಿ ಬಂದುಬಿಡಿ, ನಾನಿದೀನಲ್ಲ ಇಲ್ಲಿ ….’
ಒಂದು ಜುಜುಬಿ ಇಂಕಿಗಾಗಿ ಈ ರೀತಿಯಾಗಿ ಸಾಕಷ್ಟು ಮಾತು ಕೇಳಿದ ನಂತರ ‘ಹಾಳಾಗಿಹೋಗು’ ಅನ್ನುವಂತೆ ಅಪ್ಪ ಸುಮ್ಮನಾಗುತ್ತಿದ್ದರು. ನಾವು ಮತ್ತೆ ಎಂದಿನಂತೆ ಕೊಬ್ಬರಿಮಿಠಾಯಿಗಾಗಿ ಜೀವವನ್ನೇ ಪಣಕ್ಕಿಟ್ಟು ಇಂಕಿನ ಕಳ್ಳ ವ್ಯವಹಾರದಲ್ಲಿ ಮುಳುಗುತ್ತಿದ್ದೆವು!
ಇದು ನನ್ನೊಬ್ಬಳ ಕಥೆಯೋ …ನಿಮದೂ ಕಥೆಯೋ ಅನ್ನುವುದನ್ನು ನೀವೇ ಹೇಳಬೇಕು!

***

ಇನ್ನು ಅಪ್ಪನ ಶಿಸ್ತಿನ ಮತ್ತೊಂದು ಘಟನೆ ಹೇಳುತ್ತೇನೆ ….
ಸರಗೂರೆಂಬ ಹಳ್ಳಿಯಲ್ಲಿ ವಾಚ್ ಕಟ್ಟುತ್ತಿದ್ದ ಕೆಲವೇ ಪುಣ್ಯವಂತರಲ್ಲಿ ನಾನು ಮತ್ತು ಅಕ್ಕ ಕೂಡ ಇಬ್ಬರು. ಸಣ್ಣ ವಯಸ್ಸಿನಿಂದ ಸದಾಕಾಲ ಟೈಮೆಷ್ಟು, ಟೈಮೆಷ್ಟು ಅಂತ ಕೇಳುತ್ತಲೇ ಇರುವುದು ನನ್ನ ಚಾಳಿ. ಅದಕ್ಕೆ ರೋಸಿದ್ದಕ್ಕೋ ಏನೋ ಅಪ್ಪ ನಾನು ಐದನೆಯ ಕ್ಲಾಸಿನಲ್ಲಿರುವಾಗಲೋ, ಆರನೆಯ ಕ್ಲಾಸಿನಲ್ಲಿರುವಾಗಲೋ ಹೆಚ್ ಎಂ ಟಿ ಪ್ರಿಯಾ ವಾಚ್ ಕೊಡಿಸಿಬಿಟ್ಟರು. ಅವರು ಕೊಡಿಸಿದ ಘಳಿಗೆಯಿಂದ ಅದನ್ನು ಸ್ನಾನ ಮಾಡುವಾಗ ಬಿಟ್ಟು, ಮತ್ಯಾವುದೇ ಘಳಿಗೆಯಲ್ಲೂ ಬಿಚ್ಚದೇ ರಾತ್ರಿಯೆಲ್ಲ ಎದ್ದೆದ್ದು ಸಮಯ ನೋಡಿಕೊಳ್ಳುತ್ತಿದ್ದೆ ನಾನು! ಅದರ ಬಗೆಗೆ ಅತೀವ ವ್ಯಾಮೋಹ ನನ್ನದು. ಒಂದು ಸಣ್ಣ ಗೆರೆಯೇನಾದರೂ ಬಿದ್ದರೆ ಮೂರು ದಿನ ದುಃಖಿಸುತ್ತಿದ್ದೆ.
ಹೀಗಿರುವಾಗ ಒಂದುಸಲ ನಮ್ಮ ಸ್ಕೂಲಿನಲ್ಲಿ ‘ಸ್ಕೂಲ್ ಡೇ’ ತಯಾರಿ ಶುರುವಾಯ್ತು. ಸರಿ, ನಾವು ಬಾಲಪ್ರತಿಭೆಗಳನ್ನೆಲ್ಲ ಕಲೆ ಹಾಕಿ ನಮ್ಮಿಂದ ಅಭಿನಯ ‘ತೆಗೆಸಬೇಕಾದ’ ಕರ್ಮ ಟೀಚರುಗಳದ್ದು. ಯಾವುದೋ ನಾಟಕ ಮಾಡಿಸುವುದು ಅಂತ ತೀರ್ಮಾನವಾಯ್ತು. ನಮ್ಮದು ಬರೀ ಹೆಣ್ಣುಮಕ್ಕಳಿದ್ದ ಶಾಲೆ. ಹಾಗಾಗಿ ಗಂಡುಗಳ ಪಾತ್ರವನ್ನೂ ಹೆಣ್ಣುಮಕ್ಕಳೇ ಮಾಡಬೇಕು. ಎಲ್ಲರಿಗೂ ಪಾತ್ರಗಳು ನಿಗದಿಯಾದವು. ತಯಾರಿ ಭರದಿಂದ ಸಾಗಿತು….
ಸ್ಕೂಲ್ ಡೇ ಬಂದೇಬಿಟ್ಟಿತು. ಸರಕಾರಿ ಶಾಲೆಯಲ್ಲಿ ನಾವೆಲ್ಲರೂ ಆಲ್ ಇನ್ ಒನ್! ಟೀಚರ್‌ಗಳು ಮತ್ತು ಮಕ್ಕಳು ಸೇರಿ ಕಸ ಗುಡಿಸುವುದರಿಂದ ಸ್ಟೇಜ್ ಸೆಟ್ ಮಾಡುವವರೆಗೆ ಎಲ್ಲವನ್ನೂ ಮಾಡುತ್ತಿದ್ದೆವು. ಹೀಗೆ ಗಡಿಬಿಡಿಯಲ್ಲಿ ಏನೋ ಮಾಡುತ್ತ ಓಡಾಡುತ್ತಿದ್ದಾಗಲೇ ನಮ್ಮ ರಮಾ ಟೀಚರ್‌ಗೆ ಗಂಡುಪಾತ್ರದ ರಾಣಿ ವಾಚ್ ಕಟ್ಟಲೇಬೇಕು ಅನ್ನುವುದು ನೆನಪಾದದ್ದು! ಗಂಡಸರು ಮಾತ್ರ ಯಾಕೆ ವಾಚ್ ಕಟ್ಟಬೇಕಿತ್ತು ಅನ್ನುವ ಪ್ರಶ್ನೆಗೆ ಈವರೆಗೂ ಉತ್ತರ ಹೊಳೆದಿಲ್ಲ ಅನ್ನುವುದು ಬೇರೆಯದೇ ಮಾತು!! ಆಗ ನಮ್ಮ ಟೀಚರ್ ನನ್ನನ್ನು ಕರೆದು ‘ನಿನ್ನ ವಾಚ್ ಕೊಡು ರಾಣಿಗೆ’ ಅಂದರು. ನನ್ನ ಎದೆ ಧಸಕ್ಕೆಂದಿತು! ವಾಚ್ ಕೊಡುವುದೆಂದರೆ ನನ್ನ ಹೃದಯವನ್ನೇ ಕಿತ್ತುಕೊಟ್ಟಂತೆ ಲೆಕ್ಕ. ಆದರೆ ಟೀಚರ್ ಕೇಳುವಾಗ ಇಲ್ಲವೆನ್ನುವುದು ಹೇಗೆ? ಆದರೆ … ಆದರೆ … ಅಪ್ಪ ….? ಅಯ್ಯೋ! ಅಪ್ಪ ನನ್ನ ರುಂಡವನ್ನು ಚೆಂಡಾಡಿಬಿಡುತ್ತಾರೆ. ಕೊಡಲ್ಲ ಅಂದುಬಿಡಲಾ? ಅಂದುಬಿಡಲಾ …. ‘ನಮ್ಮಪ್ಪ …..’ ಅನ್ನುವ ಪದ ಗಂಟಲಿನಿಂದ ಆಚೆ ಬೀಳುವ ಮುಂಚೆಯೇ ನಮ್ಮಪ್ಪನ ಮಹಾನ್ ಭಕ್ತೆಯಾದ ರಮಾ ಟೀಚರ್ ‘ನಿಮ್ಮಪ್ಪ ನಮ್ಮ ಸ್ಕೂಲಿಗೆ ನಾಕು ಛೇರ್ ಕೊಡಿಸಿದಂಥ ಮನುಷ್ಯ. ನೀನು ಅದೇನು ಅಂತ ಅವರ ಮಗಳಾಗಿ ಹುಟ್ಟಿದೆಯೋ’ ಅಂತ ‘ಫ಼ಾದರ್ ಸೆಂಟಿಮೆಂಟ್’ ಶುರುವಿಟ್ಟುಕೊಂಡು ಕೊನೆಗೆ ‘ನಾನು ನಿಮ್ಮಪ್ಪನಿಗೆ ಹೇಳ್ತೀನಿ, ಬೇಗ ಕೊಡು’ ಅಂತ ಆಜ್ಞಾಪಿಸಿದ ನಂತರ ನನಗೆ ಹೇಳಲು ಇನ್ನೇನೂ ಉಳಿಯದೇ, ವಾಚ್ ಬಿಚ್ಚಿಕೊಟ್ಟೆ. ನನ್ನ ಮುದ್ದಿನ ‘ಪ್ರಿಯಾ’ ಎರಡೇ ನಿಮಿಷದಲ್ಲಿ ರಾಣಿಯ ಪ್ರಿಯಳಾದಳು. ಅಲ್ಲಿಂದ ಮುಂದೆ ನನಗೆ ಕೆಲಸದಲ್ಲಿ ಯಾವ ಆಸಕ್ತಿಯೂ ಉಳಿಯಲಿಲ್ಲ. ಕಾಟಾಚಾರಕ್ಕೆ ಅಲ್ಲಿಯೇ ತಾರಾಡುತ್ತಿದ್ದೆ.

ಒಂದೊಂದಾಗಿ ಕಾರ್ಯಕ್ರಮಗಳು ನಡೆಯುತ್ತ ಹೋದವು. ನಾನು ಮಾತ್ರ ಗ್ರೀನ್ ರೂಮ್ ಬಿಟ್ಟು ಕದಲದೆ ತನ್ನ ಪ್ರಿಯತಮೆಯನ್ನು ಪಟಾಯಿಸಿದ ಸೆಕೆಂಡ್ ಹೀರೋನ ಫ಼ಸ್ಟ್ ಹೀರೋ ವಿಷಾದದಿಂದ ನೋಡುವ ಹಾಗೆ ರಾಣಿಯ ಕೈಯನ್ನೇ ನೋಡುತ್ತಾ ಕೂತುಬಿಟ್ಟಿದ್ದೆ. ಕೊನೆಯದಾಗಿ ರಾಣಿ ಅಭಿನಯಿಸಿದ್ದ ನಾಟಕ ಶುರುವಾಗುವ ಘಳಿಗೆ ಬಂದೇ ಬಿಟ್ಟಿತು ಮತ್ತು ರಾಣಿ ನನ್ನ ವಾಚಿನೊಡನೆ ಸ್ಟೇಜಿಗೆ ಹೋಗಿಬಿಟ್ಟಳು. ಒಂದಿಷ್ಟು ಹೊತ್ತು ಟ್ರ್ಯಾಜಿಕ್ ಲುಕ್ಕಿನಲ್ಲಿ ಕೂತಿದ್ದವಳು ನಂತರ ಕಾಲೆಳೆಯುತ್ತ ಸ್ಟೇಜಿನ ಮುಂದೆ ಬಂದು ಕುಕ್ಕರಿಸಿದೆ. ನಾಟಕದ ಒಂದಂಶವೂ ಅರ್ಥವಾಗುತ್ತಿಲ್ಲ, ಯಾಕೆಂದರೆ ನನ್ನ ಗಮನವೆಲ್ಲ ರಾಣಿಯ ಕೈಲಿದ್ದ ವಾಚಿನ ಮೇಲೆಯೇ. ಯಾವಾಗ ನಾಟಕ ಮುಗಿಯುತ್ತದೋ ಅನ್ನುವ ಟೆನ್ಷನ್ನಿನಲ್ಲೇ ಕೂತಿದ್ದೆ. ಆಮೇಲೆ ಆಗಿದ್ದು ನಿಜಕ್ಕೂ miracle! ಇದ್ದಕ್ಕಿದ್ದ ಹಾಗೆ ವಾಚಿನ ವಿಷಯವೇ ಮರೆತುಹೋಗಿ ಆ ಹಾಸ್ಯ ನಾಟಕದ ಜೋಕ್‌ಗಳಲ್ಲಿ ನಾನೂ ಮುಳುಗಿಹೋದೆ! ನಾಟಕ ನಾನು ಅಂದುಕೊಂಡಿದ್ದಕ್ಕಿಂತ ದೀರ್ಘವಾಗಿತ್ತು. ಮುಗಿಯುವಷ್ಟರಲ್ಲಿ ಒಂಭತ್ತು ಮೀರಿತ್ತು. ನಮ್ಮ ಮನೆ ಸ್ಕೂಲಿನಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿತ್ತು. ಕಾಲೋನಿಯ ಮಕ್ಕಳೆಲ್ಲ ಒಟ್ಟಾಗಿಯೇ ಹೋಗಬೇಕಿತ್ತು. ನಾಟಕ ಮುಗಿಯುವ ವೇಳೆಗೆ ಹೇಮಾ, ವಿಜಿ ಎಲ್ಲರೂ ಗಡಿಬಿಡಿ ಮಾಡತೊಡಗಿದರು. ನನಗೆ ವಾಚ್ ಮರೆತೇ ಹೋಯಿತು! ಬೇಗನೇ ಮನೆ ಸೇರಿಕೊಳ್ಳುವ ಆತುರದಲ್ಲಿ ಅವರ ಜೊತೆ ಹೊರಟೇಬಿಟ್ಟೆ.
ಅಪ್ಪ ಮನೆಗೆ ಬಂದು ಆಗಿತ್ತು. ನಾನು ಮನೆಯೊಳಕ್ಕೆ ಕಾಲಿಟ್ಟ ಕೂಡಲೇ ಬಾಗಿಲು ತೆರೆದ ಅಪ್ಪ ನನ್ನ ಕೈ ನೋಡಿ ‘ವಾಚ್ ಎಲ್ಲಿ’!!!! ಅಂತ ಕೂಗಿದರು. ನನ್ನ ಕೈಕಾಲು ತಣ್ಣಗಾಗಿ ಹೋಯ್ತು. ಆಗಲೇ ವಾಚಿನ ನೆನಪಾಗಿದ್ದು!
‘ವಾಚು …. ರಾಣಿ … ಸ್ಕೂಲ್ ಡೇ …. ರಮಾ ಮಿಸ್ …’ ಅಂತ ತೊದಲುವಷ್ಟರಲ್ಲಿ ಅಪ್ಪ ಉಗ್ರಾವತಾರ ತಾಳಿ ಕಿರುಚಾಡಲು ಶುರುವಿಟ್ಟುಕೊಂಡರು.
ನಾನು ಮಧ್ಯೆ ಎಲ್ಲೋ ಅಪ್ಪನ ಬಯ್ಗುಳಕ್ಕೆ ಕಾಮಾ ಹಾಕಿದ ಕೂಡಲೇ ಛಕ್ಕನೇ ಸಾವರಿಸಿಕೊಂಡು ‘ರಮಾ ಮಿಸ್ ಬಲವಂತ ಮಾಡಿದರು ಅಣ್ಣ …’ ಅಂದೆ.
‘ಆಆ!! ಬಲವಂತ ಮಾಡಿದರಾ?! ಮಾಡದೇ ಏನು ಮಾಡ್ತಾರೆ! ಯಾಕೆ ನಿಮ್ಮ ರಮಾ ಮಿಸ್ ಕೈಯಲ್ಲೇ ವಾಚ್ ಇರತ್ತಲ್ಲ, ಅದನ್ನೇ ಬಿಚ್ಚಿಕೊಡಬೋದಿತ್ತಲ್ಲ’
ಆಗಲೇ ನನಗೂ ಹೊಳೆದಿದ್ದು ನಮ್ಮ ಶಾಲೆಯ ಎಲ್ಲ ಟೀಚರ್‌ಗಳ ಕೈಲೂ ವಾಚ್ ಇತ್ತು ಅನ್ನುವುದು!
‘ಈ ಜಗತ್ತೆಲ್ಲಾ ಜಾಣತನದಿಂದ ಬದುಕತ್ತೆ. ನನ್ನ ಮಕ್ಕಳಿಗೆ ಮಾತ್ರ ಊರಲ್ಲಿರೋ ಪೆದ್ದುತನವೆಲ್ಲ ಸುತ್ತಿಕೊಂಡಿದೆ. ನಿಮ್ಮ ಮುಖದಲ್ಲೇ ಇರೋ ದಡ್ಡ ಕಳೆ ನೋಡೀನೇ ಜನ ನಿಮ್ಮನ್ನ ಮೂರ್ಖರನ್ನಾಗಿ ಮಾಡ್ತಾರೆ! ಅಪ್ಪ ಒಂದೇ ಸಮನೆ ಬಯ್ಯುತ್ತಿದ್ದರು.
ಕೇಳಿ ಕೇಳಿ ಸಾಕಾದ ನಾನು ‘ನಾಳೆ ಇಸ್ಕೊಂಡು ಬರ್ತೀನಿ ಅಣ್ಣಾ’ ಅಂದೆ ಮೆಲ್ಲನೆ ಅಳು ದನಿಯಲ್ಲಿ …
ಅಪ್ಪ ಇನ್ನಿಷ್ಟು ಸಿಟ್ಟಿಗೆದ್ದರು!
‘ಹು ನಾಳೆ ಇಸ್ಕೊಂಡು ಬರ್ತೀಯಾ? ಅದು ಇನ್ನೂ ಉಳಿದಿದ್ದರೆ ಇಸ್ಕೊಂಡು ಬರ್ತೀ. ಇಲ್ದೇನೇ ಹೋದ್ರೆ ಏನನ್ನ ಇಸ್ಕೊಂಡು ಬರ್ತಿ?’
‘ಇಲ್ಲ ರಾಣಿ ನನ್ ಫ್ರೆಂಡು … ಅವಳು ….’ ಅನ್ನುವ ಮಾತು ಮುಗಿಯಲು ಬಿಡಲೇ ಇಲ್ಲ!
‘ಯಾರಿಲ್ಲ ಅಂದ್ರು? ಅವಳೇನು ಬೇಕಂತ ಕೊಡಲ್ಲ ಅಂದೆನಾ ನಾನು? ಈಗ ಸ್ಕೂಲಿಂದ ವಾಪಸ್ ಬರುವಾಗ ವಾಚ್ ಬಿದ್ದೋಗಿದ್ರೆ ಆಮೇಲೇನು ಕೊಡ್ತಾಳೆ? ಮನೆಗೆ ಬಂದು ಮರೆತುಹೋಗಿ ಕೈ ತೊಳೀವಾಗ ನೀರು ಬೀಳಿಸಿ ವಾಚ್ ಕೆಡಿಸಿಟ್ರೆ, ಆಮೇಲೇನು ವಾಪಸ್ ಕೊಡ್ತಾಳೆ? ಎಲ್ಲಿಗಾದರೂ ತಗುಲಿಸಿ, ವಾಚ್ ಚೂರು ಚೂರಾದ್ಮೇಲೆ ಇನ್ನೇನು ವಾಪಸ್ ಕೊಡ್ತಾಳೆ ….’ ಹೇಳುತ್ತಾ ಹೋದರು!
ಜಗತ್ತಿನಲ್ಲಿ ಒಂದು ವಸ್ತು ನಾಶವಾಗುವುದಕ್ಕೆ ಯಾವ ಯಾವ ಕಾರಣ ಇರಬಹುದೋ ಅದೆಲ್ಲ ಸಾಲು ಸಾಲಾಗಿ ಅಪ್ಪ ಹೇಳುತ್ತ ಹೋದ ಹಾಗೆ ನಾನು ಅಗ್ನಿಪರ್ವತ ಸಿಡಿದ ಹಾಗೆ ದಿಗ್ಭ್ರಾಂತಳಾಗಿ ನಿಂತಿದ್ದೆ.
ಮುಗಿಯಿತು … ಮುಗಿಯಿತು … ಇನ್ನು ಪ್ರಿಯಾ ಯಾವತ್ತೂ ನನ್ನ ಕೈ ಸೇರಲ್ಲ ಅನ್ನುವ ಸ್ಥಿತಿ ತರಿಸಿಟ್ಟುಬಿಟ್ಟರು ಅಪ್ಪ!
‘ಈಗಲೇ ಹೋಗಿ ತರ್ತೀನಿ’ ಅಂದೆ ಕೊನೆಗೊಮ್ಮೆ ಅಚಲ ನಿರ್ಧಾರದಲ್ಲಿ.
ಅಪ್ಪ ‘ತೆಪ್ಪಗೆ ಬಿದ್ಕೋ ಹೋಗು. ವಾಚ್ ಅಂತೂ ಹೋಯ್ತು. ಇನ್ನು ನಿಂಗೂ ಏನಾದ್ರೂ ಆಗ್ಲಿ ಅಂತಾನಾ’ ಅಂತ ನಿರಾಕರಿಸಿದರು.
ಒಟ್ಟಿನಲ್ಲಿ ವಾಚ್ ಹೋಯ್ತು ಅಂತ ತೀರ್ಮಾನವಾಗೇ ಬಿಟ್ಟಿತು ಆ ಕ್ಷಣದಲ್ಲಿ …
ಆ ರಾತ್ರಿ ಕಳೆದುಕೊಂಡ ವಾಚಿನ ನೆನಪಲ್ಲಿ ಊಟ ಕೂಡ ಸೇರಲಿಲ್ಲ. ಇಡೀ ರಾತ್ರಿ ನಿದ್ರೆಯಲ್ಲೆಲ್ಲ ರಾಣಿ ವಾಚನ್ನು ಜಜ್ಜುತ್ತಿರುವ ಹಾಗೆ, ಪುಡಿಪುಡಿ ಮಾಡುತ್ತಿರುವಾ ಹಾಗೆ, ಗಹಗಹಿಸಿ ನಗುತ್ತಿರುವ ಹಾಗೆ ಕನಸು. ಹಾಸಿಗೆಯ ತುಂಬ ಹೊರಳಾಡುತ್ತಲೇ ರಾತ್ರಿ ಕಳೆಯಿತು. ಇದ್ದಕ್ಕಿದ್ದ ಹಾಗೆ ಧಡಕ್ಕೆಂದು ಎಚ್ಚರ! ಸಮಯ ಎಷ್ಟಾಯಿತೋ ಅಂತ ಎಡಗೈ ಬೆಳಕಿಗೆ ಹಿಡಿದೆ. ಅಲ್ಲಿ ವಾಚ್ ಇರಲಿಲ್ಲ! ಅಯ್ಯೋ ನನ್ನ ವಾಚೂಊಊಊ … ನಿದ್ದೆ ಹಾರಿಹೋಗಿ ದೀಪ ಹಚ್ಚಿ ಗೋಡೆ ಗಡಿಯಾರ ನೋಡಿದರೆ ಇನ್ನೂ ಐದೂವರೆ. ಡಿಸೆಂಬರ್ ತಿಂಗಳಿನ ಕತ್ತಲು, ಕತ್ತಲು. ನನಗೆ ಇನ್ನು ಮಲಗಿರಲು ಆಗಲೇ ಇಲ್ಲ. ಎದ್ದವಳೇ ಮುಖ ತೊಳೆದು ತಯಾರಾದೆ. ಕಾಲೋನಿಯಾದ್ದರಿಂದ ಕಳ್ಳರ ಭಯವಿರಲಿಲ್ಲ. ಬಾಗಿಲು ಮುಂದಕ್ಕೆ ಎಳೆದುಕೊಂಡು ‘ಬಂಗಾರದ ಮನುಷ್ಯ’ ಸಿನೆಮಾದಲ್ಲಿ ಅಣ್ಣಾವ್ರು ಕ್ಲೈಮ್ಯಾಕ್ಸ್ ಸೀನಿನಲ್ಲಿ ಇಡುವ ರೀತಿಯ ಭಾರವಾದ ಹೆಜ್ಜೆಗಳನ್ನಿಡುತ್ತ ರಾಣಿಯ ಮನೆ ಕಡೆ ಹೊರಟೆ ….
ಇನ್ನೂ ಸರಗೂರು ಮೈಮುರಿಯುತ್ತಿತ್ತು. ನಾನು ನಡುಗುವ ಎದೆಯೊಡನೆ ರಾಣಿಯ ಮನೆ ಸೇರಿದೆ. ಅವಳ ಮನೆ ಪೂರ್ತಿ ಇನ್ನೂ ಕತ್ತಲು. ಯಾರೂ ಎದ್ದೇ ಇರಲ್ಲಿಲ್ಲ ಇನ್ನೂ! ನಾನು ವಾಚ್ ಇಲ್ಲದೇ ಮನೆಗೆ ಹಿಂತಿರುಗಲು ಸಿದ್ಧಳಿರಲಿಲ್ಲ. ಅದೇನೋ ಒಂದು ತೀರ್ಮಾನವಾಗಲೇ ಬೇಕಿತ್ತು! ಅವಳ ಮನೆಯ ಮುಂದಿದ್ದ ಮೆಟ್ಟಿಲುಗಳ ಮೇಲೆ ನಡುಗುತ್ತಾ, ಕಾಯುತ್ತಾ ಕೂತೆ. ನನ್ನ ಇಡೀ ಭವಿಷ್ಯ ಮುಂದಿನ ಒಂದಿಷ್ಟು ನಿಮಿಷಗಳಲ್ಲಿ ತೀರ್ಮಾನವಾಗುವುದರಲ್ಲಿತ್ತು! ಸ್ವಲ್ಪ ಸಮಯ ಕಳೆಯುವುದರಲ್ಲಿ ಬೆಳಕು ಹರಿಯಿತು … ಜನರ ಓಡಾಟ ಶುರುವಾಯಿತು. ಮೇನ್ ರೋಡಾಗಿದ್ದರಿಂದ ವಾಹನಗಳು ಅಲ್ಲೊಂದು, ಇಲ್ಲೊಂದು ಓಡಾದಲು ಶುರುವಾಯಿತು. ನಾನು ಸ್ವಪ್ನ ಲೋಕದಲ್ಲೆಲ್ಲೋ ಇರುವಂತೆ ಅರೆ ನಿದ್ದೆ, ಅರೆ ಎಚ್ಚರದಲ್ಲಿ ಕೂತೇ ಇದ್ದೆ…
ಇದ್ದಕ್ಕಿದ್ದ ಹಾಗೆ ಬಾಗಿಲು ತೆರೆದ ಸದ್ದು. ರಾಣಿಯ ಅಮ್ಮ ಒಂದು ಕೈಲಿ ನೀರಿನ ಬಕೆಟ್, ಮತ್ತೊಂದು ಕೈಲಿ ಪರಕೆ ಹಿಡಿದು ನಿಂತಿದ್ದರು. ಆ ಕ್ಷಣದಲ್ಲಿ ಆಕೆಯ ಕೈಲಿದ್ದ ಪರಕೆ ಚಾಮರದ ಹಾಗೆಯೂ ಮತ್ತು ಅವರು ದೇವಕನ್ನಿಕೆಯ ಥರವೂ ಕಂಡರು! ಆ ಅವೇಳೆಯಲ್ಲಿ ನನ್ನನ್ನು ಕಂಡ ಅವರಿಗೆ ಆಶ್ಚರ್ಯ. ಅವರು ಬಾಯಿ ಬಿಡುವಷ್ಟರಲ್ಲೇ ‘ರೀ, ರೀ ರಾಣಿ ನನ್ನ ವಾಚನ್ನ ನಾಟಕಕ್ಕೆ ಬೇಕು ಅಂತ ಇಸ್ಕೊಂಡು ….’ ನನ್ನ ವಾಚನ್ನು ಹಾಳು ಮಾಡಿಬಿಟ್ಟಿದ್ದಾಳೆ ಅಂತ ತೀರ್ಮಾನಿಸಿಯೇ ಬಿಟ್ಟಿದ್ದರಿಂದ , ದೂರಿನ ಧಾಟಿಯಲ್ಲಿದ್ದ ನನ್ನ ಮಾತಿನ್ನೂ ಮುಗಿಯದೇ ಮುಂದುವರೆದಿತ್ತು. ಅಷ್ಟರಲ್ಲಿ ಅವಳ ತಾಯಿ ದೇವತೆಯಂತೆ ಅಂತರ್ಧಾನರಾಗಿ ಮತ್ತೆ ವಾಚಿನೊಡನೆ ಪ್ರತ್ಯಕ್ಷರಾಗಿ ‘ತಗೋ’ ಅಂತ ನೀಡಿದರು. ನನ್ನಪ್ಪ ಹಿಮಾಲಯ ಪರ್ವತದ ಹಾಗೆ ನನ್ನೆದುರು ಇಟ್ಟಿದ್ದ ಸಮಸ್ಯೆ, ನಿಜವಾಗಿ ಸಮಸ್ಯೆಯೇ ಆಗಿರಲಿಲ್ಲ ಅನ್ನುವುದನ್ನು ನಂಬುವುದು ನಿಜಕ್ಕೂ ಕಷ್ಟವೇ ಆಗಿತ್ತು. ವಾಚ್ ಕೊಟ್ಟೇ ಬಿಟ್ಟರಾ? ಇನ್ನು ಯಾವ ಸಮಸ್ಯೆಯೂ ಇಲ್ಲವೇ ಇಲ್ಲವೆ?! ಅನ್ನುವ ಹಗುರಾದ ಭಾವದೊಡನೆ ನಾನು ಸರಗೂರಿನ ಮಣ್ಣು ರಸ್ತೆಯಲ್ಲಿ ಸ್ವಪ್ನಲೋಕದಲ್ಲೆಲ್ಲೋ ತೇಲುತ್ತಿರುವ ಹಾಗೆ ಹಾರುತ್ತಾ, ಕುಣಿಯುತ್ತ ಮನೆ ಸೇರಿದ್ದು ಇವತ್ತಿಗೂ ನೆನಪಿದೆ…

***

ಉಪಸಂಹಾರ: ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನೆಮಾದಲ್ಲಿ ಒಂದೇ ಒಂದು ದೃಶ್ಯ ನನಗೆ ನೆನಪಿನಲ್ಲಿ ಉಳಿದುಬಿಟ್ಟಿದೆ. ಹೀರೋ ಯಶ್ ಅಪ್ಪನಿಗೆ ಅವನನ್ನು ಕಂಡರೆ ಸಿಟ್ಟು. ಮಗನ ಬೇಜವಾಬ್ದಾರಿತನ, ಸಿಟ್ಟು, ಹೊಡೆದಾಟ ಇವುಗಳು ಅವರಿಗೆ ಮಗನ ಬಗ್ಗೆ ಪ್ರೀತಿಯೇ ಇಲ್ಲದ ಹಾಗೆ ಮಾಡಿರುತ್ತದೆ. ಸದಾಕಾಲ ಬಯ್ಯುವ ಅಪ್ಪನನ್ನು ಕಂಡರೆ ಮಗನಿಗೂ ದ್ವೇಷ. ಹೀಗೇ ವರ್ಷಗಳು ಕಳೆದ ನಂತರ. ಯಾವುದೋ ಸಂದರ್ಭದಲ್ಲಿ ಅಪ್ಪ-ಮಗನ ಮಧ್ಯೆ ಪ್ರೀತಿ ಶುರುವಾಗುತ್ತದೆ. ಒಮ್ಮೆ ದಾರಿಯಲ್ಲಿ ಬರುವಾಗ ನಡುರಸ್ತೆಯಲ್ಲಿ ಗಾಡಿ ನಿಲ್ಲಿಸುವಂತೆ ಹೇಳಿದ ಅಪ್ಪ – ಸಣ್ಣವನಿರುವಾಗಿನಿಂದ ನಿನ್ನನ್ನು ಬಯ್ದಿದ್ದೇ ಆಯ್ತು. ನಿನ್ನ ಜೊತೆ ಪ್ರೀತಿಯಿಂದ ಮಾತೇ ಆಡಲಿಲ್ಲ. ನಿನ್ನ ಜೊತೆ ಪೇರೆಂಟ್ಸ್ ಮೀಟಿಂಗ್‌ಗೆ ಬರಲಿಲ್ಲ, ನೀನು ಆಟದಲ್ಲಿ ಗೆದ್ದು ಪ್ರೈಜ಼್ ತಂದಾಗ ಬೆನ್ನು ತಟ್ಟಲಿಲ್ಲ. ನೀನು ಒಳ್ಳೆಯ ಡ್ಯಾನ್ಸರ್ ಅಂತೆ! ನಾನು ಒಂದು ಸಲವೂ ನಿನ್ನ ಡ್ಯಾನ್ಸ್ ನೋಡಲೇ ಇಲ್ಲ. ನಿನ್ನ ಬೆಳವಣಿಗೆಯಲ್ಲಿ ನನ್ನ ಪಾತ್ರವೇ ಇರಲಿಲ್ಲವಲ್ಲ ಅಂತ ದುಃಖಿಸಿದವನು ರಸ್ತೆಯ ಮಧ್ಯೆಯೇ ತನಗಾಗಿ ಒಂದೆರಡು ಸ್ಟೆಪ್ ಹಾಕುವಂತೆ ಮಗನನ್ನು ಒತ್ತಾಯಿಸಿ, ಸಂತೋಷದಿಂದ ಅವನ ಡ್ಯಾನ್ಸನ್ನು ನೋಡುತ್ತಾ, ಕೊನೆಗೆ ಇಬ್ಬರೂ ಕಣ್ಣೀರಾಗುತ್ತಾರೆ…
ನಮ್ಮನ್ನು ಪ್ರಾಣದಷ್ಟು ಪ್ರೀತಿಸುತ್ತಿದ್ದ ಅಪ್ಪ, ಸಣ್ಣಪುಟ್ಟದ್ದಕ್ಕೆಲ್ಲ ಈ ರೀತಿ ಬಯ್ದಾಗ ಸಿಟ್ಟು ಬರುತ್ತಿತ್ತು ನನಗೆ. ಆದರೆ ಈಗ ಅನ್ನಿಸುತ್ತದೆ, ಬದುಕಿನ ಪ್ರತೀ ಹೆಜ್ಜೆಯಲ್ಲೂ ಹಾಸುಹೊಕ್ಕಾಗಿ ಅಪ್ಪನ ನೆನಪುಗಳಿರುವುದೂ ಅದೃಷ್ಟವೇ ಅಲ್ಲವೇ ಎಂದು …

‍ಲೇಖಕರು G

June 21, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. ಅಪರ್ಣ ರಾವ್

    ಅಪ್ಪನನ್ನು ಅಪ್ಪನಾಗೇ ಬರೆದಿರುವುದಕ್ಕೆ ಸಂತೋಷವಾಯ್ತು. 🙂

    ಪ್ರತಿಕ್ರಿಯೆ
  2. N.Viswanatha

    Ayyayyo naanu ishtella maadiddenaa endu tilidukollalu khandithaa bejaaraaguttade टी

    ಪ್ರತಿಕ್ರಿಯೆ
  3. ಕಿರಣ್

    ಎಷ್ಟೊಂದು ಮಾರ್ದವ!
    ಬಹಳ ಸೊಗಸಾದ ನಿರೂಪಣೆ!
    ನಮ್ಮ ಕಥೆಯನ್ನೇ ಹೇಳಿದಿರಿ ನೀವು!
    ನೆನಪಿನ ಅಂಗಳಕ್ಕೆ ಕೊಂಡೊಯ್ದಿದ್ದಕ್ಕೆ ತುಂಬಾ ಥಾಂಕ್ಸ್!

    ಪ್ರತಿಕ್ರಿಯೆ
  4. Bharathi b v

    Anna idu for a change andiddu adakkene …. Idallade preethi thorsiddu idra noorararashtu …

    ಪ್ರತಿಕ್ರಿಯೆ
  5. Ahalya Ballal

    ಕಥಾ ವಾಚ’ನದಲ್ಲಿ ಎಷ್ಟು ನೈಜತೆ, ಭಾ! ಎಷ್ಟು ತಿರುಗಿದರೂ ಗಡಿಯಾರದ ಮುಳ್ಳುಗಳು ಬಂದು ಸೇರುವುದು ಅಲ್ಲಿಗೇ. ಸಾರ್ಥಕ ಓದು!

    ಪ್ರತಿಕ್ರಿಯೆ
  6. ಅಕ್ಕಿಮಂಗಲ ಮಂಜುನಾಥ

    ಲೇಖನ ತುಂಬಾ ಚೆನ್ನಾಗಿದೆ , ಮೇಡಂ.

    ಪ್ರತಿಕ್ರಿಯೆ
  7. Veena Sreekant

    ಭಾವಾಸ್ಪರ್ಶಿಯಾಗಿದೆ….ಮಾತೃ ದೇವೋ ಭಾವ ಪಿತೃ ದೇವೋ ಭಾವ ಅನ್ನೋ ಸಂಸ್ಕಾರ ನಮ್ಮದು..ಇಂತಹ ಸಂಸ್ಕೃತಿ ಸಂಸ್ಕಾರದಾ ಛಾಯೆಯಲ್ಲಿ ಸುಂದರ ಸಾಲುಗಳು ಮೂಡಿಬಂದಿದೆ.

    ಪ್ರತಿಕ್ರಿಯೆ
  8. A R MANIKANTH

    ತುಂಬಾ ಇಷ್ಟ ಆಯ್ತು. ಬಾಲ್ಯದ ದಿನಗಳನ್ನು ಮತ್ತೆ ನೆನಪು ಮಾಡಿದ್ದಕ್ಕೆ ಅಭಿನಂದನೆ ನಿಮಗೆ

    ಪ್ರತಿಕ್ರಿಯೆ
  9. Surekha Patil

    ತುಂಬಾ ಚೆನ್ನಾಗಿದೆ ಲೇಖನ…ಮೇಡಂ:-)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: