ಸಿಂಪಲ್ಲಾಗಿ ಹೀಗೊಂದು ಮ್ಯಾಚ್ ಮಾಕಿಂಗು! – ಬಿ ವಿ ಭಾರತಿ

Fullscreen capture 02-09-2015 233213

ಭಾರತಿ ಬಿ ವಿ

 

ನನ್ನ ತಾತನಿಗೆ, ಅಂದರೆ ಅಪ್ಪನ ಅಪ್ಪನಿಗೆ ಆರು ಜನ ಮಕ್ಕಳು. ಎಲ್ಲರ ಮನೆಯಲ್ಲೂ ಡಜ಼ನ್ ಮಕ್ಕಳು ಇರುತ್ತಿದ್ದ ಕಾಲದಲ್ಲಿ ನಮ್ಮ ಮನೆಯಲ್ಲಿ ಆರೇ ಯಾಕೆ ಅಂತ ಪ್ರಶ್ನೆ ಏಳುವವರಿಗೊಂದು ಕ್ಲ್ಯಾರಿಫಿಕೇಷನ್ ಆರನೆಯದು ಹುಟ್ಟಿದ ಒಂದೆರಡು ವರ್ಷದಲ್ಲೇ ನಮ್ಮಜ್ಜಿನೇ ಸತ್ತುಹೋದರು! ಹೆಂಗಸರಿರುವ ಮನೆಯೆಂದರೆ ಎಲ್ಲರನ್ನೂ ಹೆಣೆಯುವ ಅಗೋಚರ ಸೂತ್ರವೊಂದು ಇರುತ್ತದೆ. ಆದರೆ, ಅಜ್ಜಿ ಸತ್ತು ಹೋಗಿದ್ದರಿಂದ ತಾತ ಡಬಲ್ ಆಕ್ಟಿಂಗ್ ಮಾಡಬೇಕಾಯಿತು ಪಾಪ. ಒದ್ದಾಡಿಕೊಂಡು ಸಂಸಾರದ ಎಲ್ಲ ಮುಕುಟಮಣಿಗಳನ್ನೂ ಒಂದಾಗಿ ಹೆಣೆಯುವ ಬಾಂಧವ್ಯ ಸೂತ್ರವಾದರು ತಾತ.
ಅದಾದ ಮೇಲೆ ನಾವು ಹನ್ನೆರಡು ಜನ ಮೊಮ್ಮಕ್ಕಳು ಭೂಮಿಯಲ್ಲಿ ಅವತರಿಸಿದೆವು. ಆಗ ತಾತನ ಜವಾಬ್ದಾರಿ ಇನ್ನೂ ಹೆಚ್ಚಾಯಿತು. ಎಲ್ಲರನ್ನೂ ಆಗಾಗ ಯಾವುದೋ ನೆಪದಲ್ಲಿ ಒಗ್ಗೂಡಿಸುತ್ತಿದ್ದರು (ಇದು ತುಂಬ ಶಿಥಿಲವಾದ ಸೂತ್ರ – ತಾತ ಇಲ್ಲವಾದ ಒಂದಿಷ್ಟು ವರ್ಷಗಳಲ್ಲಿ ಈ ಸೂತ್ರ ಹರಿದು ತುಂಡುತುಂಡಾಗಿ ಮಣಿಗಳು ಎಲ್ಲೆಲ್ಲೂ ಚೆಲ್ಲಾಡಿಹೋಗಿವೆ ಅನ್ನುವುದು ಬೇರೆಯದೇ ಮಾತು). ರಜೆಯಲ್ಲಿ ಅತ್ತೆಯರು, ದೊಡ್ಡಪ್ಪನ, ಚಿಕ್ಕಪ್ಪನ ಮನೆಗೆ ಹೋಗುವುದು ಕಡ್ಡಾಯವಾಗಿತ್ತು. ಸ್ಕೂಲ್ ಇರುವಾಗಲೂ ಯಾವುದಾದರೂ ಫಂಕ್ಷನ್ನಿಗೆ ಸ್ಕೂಲ್ ನೆಪ ಹೇಳಿದರೆ ಸ್ವತಃ ಟೀಚರ್ ಆದ ತಾತ ’ಏನು ನಿಮ್ಮ ಮಕ್ಕಳು IAS ಮಾಡ್ತಾ ಇದಾರಾ? ಕರ್ಕೊಂಡು ಬನ್ರಯ್ಯ ಸಾಕು’ ಎಂದು ಗದರಿಸುತ್ತಿದ್ದರು ದೊಡ್ಡವರಿಗೆ!
ಈ ರೀತಿಯ ಬಂದುಹೋಗುಗಳ ಕಾರಣದಿಂದ ನಾವು, ಅಂದರೆ ಮೊಮ್ಮಕ್ಕಳಲ್ಲಿ ಆಯಾ ವಯಸ್ಸಿನವರು ಸಿಕ್ಕಾಪಟ್ಟೆ ಕ್ಲೋಸ್ ಆಗಿ, ನಮ್ಮದೇ ವಯಸ್ಸಿನವರ ಜೊತೆ ಒಂದು ಮಿನಿ ಸರ್ಕಲ್ ಮಾಡಿಕೊಂಡಿರುತ್ತಿದ್ದೆವು. ಆಗ ಹತ್ತು ಜನ ಮೊಮ್ಮಕ್ಕಳು ಮಾತ್ರ ಇದ್ದ ಕಾಲದಲ್ಲಿ ನಾನು ಮತ್ತು ನನ್ನ ಅತ್ತೆಯ ಮಗ ಸಾಲಿನಲ್ಲಿ 8 ಮತ್ತು 9 ನೆಯವರು. ನಮಗಿಂತ ದೊಡ್ಡ ವಯಸ್ಸಿನ ಕಸಿನ್‌ಗಳು ನಮ್ಮನ್ನು ಗೋಳು ಹೊಯ್ದು ಗೊಟರಾಕಿ ಕೊಳ್ಳುತ್ತಿದ್ದರು (ಗೊಟರಾಕಿ ಅನ್ನುವ ಪದವೊಂದು ನಮ್ಮ ಕನ್ನಡ ನಿಘಂಟಿನಲ್ಲಿ ಇದೆಯೋ, ಇಲ್ಲವೋ ಗೊತ್ತಿಲ್ಲ – ನಮ್ಮ ಪ್ರಕಾರ ಗೊಟರಾಕಿಕೊಳ್ಳುವುದು ಅಂದರೆ ಪ್ರಾಣ ತಿನ್ನುವುದು ಅಥವಾ ಮಟಾಷ್ ಮಾಡುವುದು!). ಒಂದೇ ವಯಸ್ಸಿನ ಒಂದು ಗಂಡು ಮತ್ತು ಒಂದು ಹೆಣ್ಣು ಕಸಿನ್‌ಗಳು ಕಡ್ಡಾಯವಾಗಿ ಜೋಡಿಯಾಗಲೇ ಬೇಕಿತ್ತು. ಆದರೆ ಇಲ್ಲೊಂದು ತಾಪತ್ರಯವಿತ್ತು – ಹೆಣ್ಣು ಮೊಮ್ಮಕ್ಕಳು ಇದ್ದಿದ್ದೇ ನಾಲ್ಕು ಜನ. ಅದರಲ್ಲಿ ಒಬ್ಬಳು ತುಂಬ ಚಿಕ್ಕವಳು ಬೇರೆ. ಜೊತೆಗೆ ಒಬ್ಬಳು ಕಸಿನ್‌ಗೆ ಇಬ್ಬರು ನಾಲ್ಕು ಜನ ಅಣ್ಣಂದಿರೇ ಆಗಿಹೋಗಿರುತ್ತಿದ್ದರು. ನನಗೆ ಮತ್ತು ಅಕ್ಕನಿಗೆ ಇಬ್ಬರು ದೊಡ್ಡಪ್ಪನ ಮಕ್ಕಳೂ ಅಣ್ಣಂದಿರು. ಹಾಗಾಗಿ ಅವರಿಗೆ ನಮ್ಮನ್ನು ಜೋಡಿ ಮಾಡಿಸುವ ಹಾಗಿರಲಿಲ್ಲ!! ಈ ಎಲ್ಲ ಟೆಕ್ನಿಕಲ್ ಸ್ನ್ಯಾಗ್‌ಗಳ ಕಾರಣವಾಗಿ ಸುಮಾರು ಜೋಡಿಗಳ ಚಿತ್ರಾನ್ನ ಆಗಿಹೋಗುತ್ತಿತ್ತು. ಆದರೆ ಸಧ್ಯ ನನಗೆ ಮತ್ತು ಮತ್ತು ಅತ್ತೆಯ ಮಗನಿಗೆ ಮಾತ್ರ ಅತೀ ಚಿಕ್ಕವರಾಗಿದ್ದ ಕಾರಣಕ್ಕೆ ಇನ್ಯಾರನ್ನೂ ಜೋಡಿ ಮಾಡಿಸದೇ ಬಿಟ್ಟುಬಿಡುತ್ತಿದ್ದರು. ಹಾಗಾಗಿ ಯಾವಾಗಲೇ ಆದರೂ ನಾನು ಮತ್ತು ಅವನು ಒಂದು ಗ್ರೂಪ್.
ನಮ್ಮ ಆಟದಲ್ಲಿ ಮದುವೆ ಆಟ ಬಹಳ ಪ್ರಮುಖ ಸ್ಥಾನ ಪಡೆದಿತ್ತು. ಪ್ರತೀ ರಜೆಯಲ್ಲೂ ಒಂದೆರಡು-ಮೂರು ಸಲ ಮದುವೆ ಆಗುತ್ತಿತ್ತು! ನನಗೆ ಮತ್ತು ಅವನಿಗೂ ಸುಮಾರು ಸಲ ಮದುವೆ ಮಾಡಿದ್ದರು ಈ ‘ಹಿರಿಯರು’. ಎರಡು ಟವಲನ್ನು ಕಟ್ಟಿ ಹಾರವಾಗಿಸಿ, ಸುತ್ತಲೂ ಉಳಿದವರೆಲ್ಲ ಕೂತು ಬಾಯಿಗೆ ಬಂದ ಏನನ್ನೋ ಮಂತ್ರವಾಗಿಸಿ ಮದುವೆ ಮಾಡುತ್ತಿದ್ದರು! ತುಂಬ ಸಣ್ಣವರಾಗಿದ್ದ ನಮ್ಮಿಬ್ಬರಿಗೆ ಇವೆಲ್ಲ ಬೋರ್ ಹೊಡೆಯುತ್ತಿತ್ತು. ‘ಬಿಡ್ರೋ ನಮ್ಮ ಪಾಡಿಗೆ ನಮ್ಮನ್ನ’ ಅಂತ ಬೇಡಿದರೂ ಮದುವೆಯಾಗದ ಹೊರತು ನಮ್ಮನ್ನು ಬಿಡುತ್ತಿರಲಿಲ್ಲ. ನಾವೂ ‘ಹಾಳಾಗಿ ಹೋಗಿ ಅತ್ಲಾಗೆ. ಈಗೇನು ಹಾರ ಹಾಕ್ಬೇಕಾ’ ಅಂತ ಬೈಕೊಂಡು ಹಾರ ಬದಲಾಯಿಸಿಕೊಂಡು ಮದುವೆ ಶಾಸ್ತ್ರ ಮುಗಿಸುತ್ತಿದ್ದೆವು. ಪುಣ್ಯಕ್ಕೆ ನಮ್ಮ ಮದುವೆಯ ಆಟ ಅಲ್ಲಿಗೇ ಮುಗಿಯುತ್ತಿತ್ತು! ಮದುವೆ ಮುಗಿದ ಕೂಡಲೇ ನಮ್ಮ ಪ್ರಿಯವಾದ ಆಟ ‘ಹುಡುಗ-ಹುಡುಗಿ-ಊರು-ಸಿನೆಮಾ’ ಆಡಲು ಇಬ್ಬರೂ ಎರಡು ಪೇಪರ್ ಮತ್ತು ಪೆನ್ಸಿಲ್ ಹಿಡಿದು ಒಂದು ಮೂಲೆ ಸೇರಿದರೆ ಆ ಆಟಕ್ಕೆ ಕೊನೆಯೆಂಬುದೇ ಇರುತ್ತಿರಲಿಲ್ಲ. ಊಟ-ತಿಂಡಿಗೆ ಬಿಟ್ಟು ಮತ್ತೆ ಯಾವುದಕ್ಕೂ ಆ ಜಾಗ ಬಿಟ್ಟು ಏಳುತ್ತಿರಲಿಲ್ಲ. ಆ ಆಟ ಆಡುವಾಗ ನಾವಿಬ್ಬರೂ ಹಾಗೇ ಕಷ್ಟ – ಸುಖ ಮಾತಾಡಿಕೊಳ್ಳುತ್ತಿದ್ದೆವು. ಅವನ ಜೀವನದ ಅತೀ ದೊಡ್ಡ ಸಮಸ್ಯೆಯೆಂದರೆ – ಅವನಿಗಿಂತ ಸಣ್ಣ ವಯಸ್ಸಿನ ಹುಡುಗಿಯರು ಅವನನ್ನು ಮದುವೆಯಾಗು ಅಂತ ದುಂಬಾಲು ಬೀಳುತ್ತಾರೆ ಎನ್ನುವುದು!! ಆ ಕಾಲದಲ್ಲೇ ಅವನ ಸೌಂದರ್ಯದ ಪರಿಕಲ್ಪನೆಯಲ್ಲಿ ಏನೇನೋ ಅಂಶಗಳಿದ್ದವು. ಹಾಗಾಗಿ ಅವನಿಗೆ ಅವರಲ್ಲಿ ಯಾರನ್ನೂ ಮದುವೆಯಾಗುವ ಮನಸ್ಸಿರಲಿಲ್ಲವಂತೆ!! ‘ನನಗಿಂತ ಸಣ್ಣವಳಾದರೂ ನೀನು ಮಾತ್ರ ನನಗೆ ಸರಿ ಕಣೇ, ಮದುವೆ ಮಾಡ್ಕೋ ಅನ್ನಲ್ಲ ನೀನು’ ಎನ್ನುತ್ತಿದ್ದ!!! ಅವನು ಎಷ್ಟು ಸಲ ಈ ಮಾತನ್ನು ನನ್ನೆದುರು ಹೇಳುತ್ತಿದ್ದ ಅಂದರೆ, ಅಪ್ಪಿತಪ್ಪಿಯೂ ನಿಜಕ್ಕೂ ಅವನ ಮೇಲೆ ಆಕರ್ಷಣೆ ಹುಟ್ಟಿಬಿಟ್ಟರೂ ಅವನ ಮುಂದೆ ವ್ಯಕ್ತಪಡಿಸದಷ್ಟು ನಿರ್ಲಿಪ್ತತೆ ತರಿಸಿಬಿಟ್ಟಿದ್ದ.
ಇದೆಲ್ಲದರ ಹಿನ್ನೆಲೆಯಲ್ಲಿ ಅವನಿಗೊಂದು ಮದುವೆ ಮಾಡಿಸುವ- ಅಂದರೆ ಹೆಣ್ಣು ಹುಡುಕುವ- ಜವಾಬ್ದಾರಿಯೂ ನನ್ನ ಮೇಲೆಯೇ ಬಿದ್ದುಬಿಟ್ಟಿತ್ತು, ಅಲ್ಲಲ್ಲ, ನಾನೇ ಬೀಳಿಸಿಕೊಂಡಿದ್ದೆ! ನಮ್ಮ ಕಾಲದಲ್ಲಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಅಮ್ಮಂದಿರು ಎಲ್ಲೇ ಹೋದರೂ ಗಂಡು ಹುಡುಕುತ್ತಿದ್ದರಲ್ಲ, ಹಾಗೆ ನಾನು ನನ್ನ ಗೆಳತಿಯರಲ್ಲಿ ಅವನಿಗೆ ಸರಿಹೋಗುವ ಹುಡುಗಿಯರನ್ನು ಹುಡುಕುತ್ತಲೇ ಇರುತ್ತಿದ್ದೆ. ಅದರಲ್ಲಿ ನನ್ನದೊಂದು ಸ್ವಾರ್ಥವೂ ಇತ್ತೆನ್ನಿ. ನನ್ನ ಪ್ರೀತಿಯ ಗೆಳೆಯನಿಗೆ ಸಿಗುವ ಹುಡುಗಿ ನನ್ನ ಗೆಳತಿಯೇ ಆದರೆ ನನ್ನನ್ನು- ಅವನನ್ನು ಬೇರೆ ಮಾಡುವುದಿಲ್ಲ  ಎನ್ನುವ ದೂರದೃಷ್ಟಿ!
1
ನನಗೆ 9 ವರ್ಷವಾಗಿರುವಾಗ ಕಬಿನಿಯಿಂದ ವರ್ಗವಾಗಿ ಸರಗೂರು ಸೇರಿದೆವು. ಸೇರಿದ ಒಂದಿಷ್ಟು ದಿನಗಳಲ್ಲಿ  ನಾಲ್ಕು ಜನ ತುಂಬ ಹತ್ತಿರದ ಗೆಳತಿಯರಾದರು. ಅವಳೊಬ್ಬಳನ್ನು ಬಿಟ್ಟರೆ ಉಳಿದೆಲ್ಲರೂ ಬೆಳ್ಳಗಿದ್ದರು. ಅವಳು ಮಾತ್ರ ನನ್ನ ಥರವೇ ಕಪ್ಪು. ಕಪ್ಪು ಬಣ್ಣದ ಕೀಳರಿಮೆ ನನ್ನನ್ನು ಬಹಳವಾಗಿ ಮುದುಡಿಸುತ್ತಿದ್ದ ಕಾಲವದು. ಹಾಗಾಗಿಯೋ ಏನೋ ನನ್ನದೇ ಬಣ್ಣದ ಅವಳು ನನಗೆ ತುಂಬ ಆತ್ಮೀಯಳಾದಳು. ಪುಟ್ಟ ಪುಟ್ಟಗೆ, ಸಣ್ಣಗೆ ಇದ್ದ ಅವಳ ಕೆನ್ನೆಯನ್ನು ನಸುಗಪ್ಪು ಮಚ್ಚೆ ಆವರಿಸಿತ್ತು. ಆ ಮಚ್ಚೆಯ ಕಾರಣವಾಗಿ ಅವಳು ಇನ್ನಿಷ್ಟು ಕಪ್ಪಗೆ ಕಾಣುತ್ತಿದ್ದಳು. ರೇಷಿಮೆಯಂಥ ಕೂದಲನ್ನು ಎರಡು ಪುಟ್ಟ ಪುಟ್ಟ ಐದು ಕಾಲಿನ ಜಡೆ ಹೆಣೆಯುತ್ತಿದ್ದಳು. ಒಂದು ನಾಲ್ಕೈದು ಕಾಲುಗಳನ್ನು ಹೆಣೆದ ಮೇಲೆ ಉಳಿದ ಕೂದಲನ್ನು ಹಾಗೆಯೇ ಉಳಿಸಿ, ರಿಬ್ಬನ್ ಕಟ್ಟಿ ಉದ್ದನೆಯ ಕುಚ್ಚು ಬಿಡುತ್ತಿದ್ದಳು. ನನಗಂತೂ ಅವಳು ಯಾವ ಪರಿ ಇಷ್ಟವಾಗಿ ಹೋಗಿದ್ದಳೆಂದರೆ ಅವಳ ಜಡೆ, ನಗು, ಮಾತು ಎಲ್ಲವನ್ನೂ ಕಂಡು ಹುಚ್ಚಳಾಗಿದ್ದೆ. ಅವಳಿಲ್ಲದೇ ಬೆಳಗೇ ಆಗುವುದಿಲ್ಲ ಎನ್ನುವಂತಾಗಿ ಹೋಯಿತು.
ಒಂದೈದಾರು ಅಕ್ಕ, ಅಣ್ಣ, ಎಲ್ಲರೂ ಇದ್ದ ಮನೆಯಲ್ಲಿ ಇವಳೇ ಕೊನೆಯವಳು. ನಮ್ಮೂರಿನ ಏಕೈಕ ಹೈಸ್ಕೂಲಿಗೆ ಅವಳ ತಂದೆಯೇ ಪ್ರಿನ್ಸಿಪಲ್ ಆಗಿದ್ದರು. ಮನೆಯಲ್ಲಿನ ಮಕ್ಕಳಲ್ಲಿ ಇವಳು ಮತ್ತು ಕೊನೆಯ ಅಣ್ಣ ತುಂಬ ತರಲೆಗಳು. ಇಬ್ಬರೇ ಇದ್ದ ಮನೆಯಲ್ಲಿ ಬೆಳೆದ ನನಗೆ, ಅವರ ಮನೆಯಲ್ಲಿನ ತರಲೆಗಳು ತುಂಬ ಇಷ್ಟವಾಗುತ್ತಿದ್ದವು. ಗೋಕುಲಾಷ್ಟಮಿಗೆ ಮಾಡಿದ ತಿಂಡಿಗಳಲ್ಲಿ ಕೆಲವರಿಗೆ ಸಿಂಹಪಾಲು ದೊರಕಿ, ಮತ್ತೆ ಕೆಲವರಿಗೆ ಅತೀ ಕಡಿಮೆ ಸಿಗುತ್ತಿದ್ದ ಕಾರಣ ಅವರ ಮನೆಯಲ್ಲಿ ಒಂದು ರೂಲ್ ಮಾಡಿಟ್ಟಿದ್ದರು. ಎಲ್ಲ ತಿಂಡಿಯನ್ನೂ ಸಮಪಾಲು ಮಾಡಿ ಹಂಚಿಬಿಡುತ್ತಿದ್ದರು. ಅವರವರ ಕಡೆಯ ಅತಿಥಿಗಳಿಗೆ ತಿಂಡಿ ಕೊಟ್ಟುಕೊಳ್ಳುವ ಜವಾಬ್ದಾರಿ ಅವರವರಿಗೇ ಸೇರಿದ್ದು! ನಾವು ಹೋದಾಗ ಅವಳು ಒಳಗೆ ಮುಚ್ಚಿಟ್ಟಿರುತ್ತಿದ್ದ ತಿಂಡಿಯನ್ನು ತಂದು ನಮಗಿಷ್ಟು ಹಂಚುತ್ತಿದ್ದಳು, ತುಂಬ ಜವಾಬ್ದಾರಿ ಇರುವ ಮನೆ ಹಿರಿಯಳ ಹಾಗೆ. ನಾನೇ ಆಗಿದ್ದರೆ ಈ ರೀತಿ ಹಂಚಿದ ತಿಂಡಿಯನ್ನು ಅಷ್ಟು ಧಾರಾಳವಾಗಿ ಗೆಳತಿಯರಿಗೆ ಕೊಡಲು ಮನಸ್ಸು ಮಾಡುತ್ತಿದ್ದೆನಾ ಅಂತ ಕೇಳಿಕೊಂಡರೆ ‘ಇಲ್ಲ’ ಅನ್ನುವ ಉತ್ತರ ಸಿಗುತ್ತಿದ್ದುದರಿಂದ ಅವಳು ತಿಂಡಿ ಹಂಚುವಾಗ ಥೇಟ್ ಫಂಡರಿಬಾಯಿಯ ಹಾಗೆ ಅನ್ನಿಸುತ್ತಿದ್ದಳು ನನಗೆ!
ಊರಿಗೆ ಕಾಲಿಟ್ಟ ಹೊಸದರಲ್ಲಿ ಸಂಕೋಚದಿಂದ ಆಗೀಗ ಅವಳ ಮನೆಗೆ ಹೋಗುತ್ತಿದ್ದ ನಾನು, ಬರಬರುತ್ತಾ ಅಲ್ಲೇ ಬೀಡುಬಿಡಲು ಶುರು ಮಾಡಿದೆ. ಅವಳ ಅಣ್ಣನಂತೂ ತನ್ನ ತುಂಟುಗೂದಲನ್ನು ಹಿಂದಕ್ಕೆ ತಳ್ಳಿಕೊಳ್ಳುತ್ತ, ತರಲೆ ಮಾಡುತ್ತ ಓಡಾಡುವಾಗ ನನಗಂತೂ ದೊಡ್ಡ ಹೀರೋನ ಥರ ಕಾಣುತ್ತಿದ್ದ. ಅವಳ ಇಬ್ಬರು ಅಕ್ಕಂದಿರೂ ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಹಾಗಾಗಿ ನನಗೆ ಅವರ ಮನೆಯೆಂದರೆ ನನ್ನದೇ ಮನೆ ಅನ್ನುವ ಹಾಗೆ ಸದರವಾಗಿ ಹೋಯಿತು. ಹಾಗೆ ಅವಳು ಕ್ಲೋಸ್ ಆದ ಕೂಡಲೇ ನನ್ನ ವಧು ಅನ್ವೇಷಣಾ ಪ್ರಜ್ಞೆ ಮತ್ತೆ ಜಾಗೃತವಾಯಿತು! ‘ನನ್ನ ಅತ್ತೆಯ ಮಗನಿಗೆ ಇವಳನ್ನು ಮದುವೆ ಮಾಡಿಸಿಬಿಟ್ಟರೆ ಹೇಗೆ!’ ಎನ್ನುವ ಬ್ರಿಲಿಯೆಂಟ್ ಪ್ಲ್ಯಾನ್ ತಲೆಯಲ್ಲಿ ಸಿದ್ಧವಾಗೇಬಿಟ್ಟಿತು! ಆ ಬೇಸಿಗೆ ರಜೆಯಲ್ಲಿ ಅವನನ್ನು ಹೇಗಾದರೂ ಮಾಡಿ ನಮ್ಮೂರಿಗೆ ಕರೆಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿದೆ.
ಆ ವರ್ಷದ ದಸರಾ ರಜೆಯಲ್ಲಿ ನಾವು ಅತ್ತೆಯ ಮನೆಗೆ ಹೋಗಿದ್ದೆವು. ಆಗ ಶುರುವಾಯಿತು ನನ್ನ ರಾಯಭಾರ! ಕೂತ ಕಡೆ, ನಿಂತ ಕಡೆ ಅವಳ ಬಗ್ಗೆ ಸಾಧ್ಯವಾದಷ್ಟೂ ಅವಳ ಬಗ್ಗೆ ಕೊರೆಯಲು ಶುರು ಮಾಡಿ, ಅವನ ರಿಯಾಕ್ಷನ್ ಏನು ಎಂದು ನೋಡುವುದೊಂದು ಹೊಸ ಚಟವಾಯಿತು. ನಾನು ಅವಳ ಬಗ್ಗೆ ನೂರು ಮಾತು ಹೇಳಿದರೆ, ಅವ ನಿರ್ಲಿಪ್ತನಾಗಿ ಯಾವಾಗಲೋ ಒಮ್ಮೆ ಹೂಂಗುಡುತ್ತಿದ್ದ. ಆದರೂ ಬಿಡದ ನಾನು
ಅವಳ ಜಡೆ ಎಷ್ಟು ಚೆನ್ನಾಗಿದೆ ಗೊತ್ತಾ
ಅವಳ ಕಿವಿಯ ರಿಂಗು ಕೂಡ ಎಷ್ಟು ಚೆನ್ನಾಗಿದೆ ಗೊತ್ತಾ
ಅವಳು ಎಷ್ಟು ಮುದ್ದಾಗಿದಾಳೆ ಗೊತ್ತಾ
ಅವಳು ಎಷ್ಟು ಒಳ್ಳೆಯವಳು ಗೊತ್ತಾ …
ಅಂತ ಹಾಡಿದ್ದೇ ಹಾಡಿದ್ದು. ಅವನು ನನಗೆ ಬೇಸರವಾಗಬಾರದು ಅಂತಲೋ, ಏನೋ ತಲೆಯಾಡಿಸುತ್ತಿದ್ದ. ನನಗಾಗ ಒಂದು ಬ್ರಿಲಿಯೆಂಟ್ ಐಡಿಯ ತಲೆಗೆ ಬಂದುಬಿಟ್ಟಿತು! ಮುಂದಿನ ಬೇಸಿಗೆ ರಜೆಯಲ್ಲಿ ಹೇಗಾದರೂ ಮಾಡಿ ಅತ್ತೆಯ ಮಗನನ್ನು ನಮ್ಮೂರಿಗೆ ಕರೆಸಿ ಅವಳನ್ನು ತೋರಿಸಿಯೇ ಬಿಡಬೇಕು ಅಂತ ತೀರ್ಮಾನ ಮಾಡಿಬಿಟ್ಟೆ. ಆ ಐಡಿಯಾ ತಲೆಗೆ ಬಂದಿದ್ದೇ ತಡ, ಅತ್ತೆಯ ಮನೆಯವರನ್ನು ನಮ್ಮೂರಿಗೆ ಬರುವಂತೆ ಒಂದೇ ವರಾತ ಹಚ್ಚಿದೆ. ನನ್ನ ಅತ್ತೆಗೆ ಮುಂದಿನ ಬೇಸಿಗೆಗೆ ಬರಲು ಸಾಧ್ಯವಾಗುತ್ತಿಲ್ಲ. ಅವರದ್ದು ಬೇರೇನೋ ಕಾರ್ಯಕ್ರಮವಿದೆ. ಆದರೆ ಹಾಗಂತ ಹೇಳಿದರೆ ನಾನು ಬಿಡಬೇಕಲ್ಲ?! ಅವರು ಎಷ್ಟೆಲ್ಲ ಹೇಳಿದರೂ ಒಪ್ಪದೇ ‘ಸರಿ ನೀವು ಬರಕ್ಕೆ ಆಗದಿದ್ದರೆ ಪರವಾಗಿಲ್ಲ… ಮಾಮ ಮತ್ತು ಅವನನ್ನು ಕಳಿಸಿ’ ಅಂತ ಪ್ರಾಣ ತಿನ್ನಲು ಶುರು ಮಾಡಿದೆ. ಅವರು ಹೇಳಿ ಹೇಳಿ ಸುಸ್ತಾಗಿ ಕೊನೆಗೆ ಹಾಳಾಗಿಹೋಗು ಅನ್ನುವಂತೆ ಒಪ್ಪಿಯೇ ಬಿಟ್ಟರು. ನಾನು ನಮ್ಮೂರಿಗೆ ವಾಪಸ್ಸಾದೆ.
ಅಲ್ಲಿಂದ ಮುಂದೆ ನನ್ನ ಪ್ಲ್ಯಾನಿನ ಎರಡನೆಯ ಪಾರ್ಟ್ ಶುರುವಾಯಿತು. ಅವತ್ತಿನಿಂದ ಸಮಯ ಸಿಕ್ಕಾಗೆಲ್ಲ ಅವನ ಬಗ್ಗೆ ಅವಳಿಗೆ ಕೊರೆಯಲು ಶುರು ಮಾಡಿದೆ.
ನಮ್ಮತ್ತೆ ಮಗ ಎಷ್ಟು ಬೆಳ್ಳಗಿದ್ದಾನೆ ಗೊತ್ತಾ
ಅವನು ಎಷ್ಟು ಜಾಣ ಗೊತ್ತಾ
ಅವನಿಗೆ ನಮ್ಮ ರಾಜ್ಯದ ಮಂತ್ರಿಗಳ ಹೆಸರೆಲ್ಲಾ ಗೊತ್ತು, ಗೊತ್ತಾ?
ಅವನು ಎಷ್ಟು ಚೆನ್ನಾಗಿ ‘ನಾವಾಡುವ ನುಡಿಯೇ ಕನ್ನಡನುಡಿ’ ಹಾಡು ಹೇಳ್ತಾನೆ ಗೊತ್ತಾ …
ಹೀಗೇ ಹೇಳುತ್ತಾ ಹೋದೆ. ಪಾಪ ನನ್ನ ಪ್ಲ್ಯಾನಿನ ಬಗ್ಗೆ ಸುಳಿವೂ ಇಲ್ಲದ ಅವಳು ಆಕಳಿಸುತ್ತಲೋ, ತೂಕಡಿಸುತ್ತಲೋ ನನ್ನ ಮಾತುಗಳನ್ನು ಕೇಳುತ್ತಿದ್ದಳು! ನನ್ನ ಅತ್ತೆಯ ಮಗನ ಬಗ್ಗೆ ತನಗ್ಯಾಕೆ ಹೇಳಿ ಹೇಳಿ ಪ್ರಾಣ ತಿನ್ನುತ್ತಿದ್ದಾಳೆ ಅಂತ ಅನ್ನಿಸಿರಲಿಕ್ಕೂ ಸಾಕು. ಆದರೆ ನನ್ನೆದುರು ಹೇಳಲಾಗದೇ ಕಿವಿಗೊಟ್ಟು ಕೂತುಕೊಳ್ಳುತ್ತಿದ್ದಳು. ಸರಿ, ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೂ ಇದೇ ಮಾತು ಆಡಿ ಆಡಿ ಒಂದು ಭೂಮಿಕೆ ಸಿದ್ಧಪಡಿಸಿದ್ದಾಯ್ತು.
ಏಪ್ರಿಲ್ ತಿಂಗಳ ಅದೊಂದು ಸುಡುವ ಬಿಸಿಲಿನ ನಡುಮಧ್ಯಾಹ್ನ ನನ್ನ ಅತ್ತೆಯ ಮಗ, ಅವನ ಅಪ್ಪನೊಡನೆ ನಮ್ಮ ಸರಗೂರೆಂಬ ಊರಿನ ನೆಲದಲ್ಲಿ ಕಾಲೂರಿ ನಮ್ಮನ್ನು ಪಾವನಗೊಳಿಸಿದ! 20 ಮನೆಗಳಿದ್ದ ನಮ್ಮ ಕಾಲೋನಿಯನ್ನು ಇಂದ್ರನ ಸ್ವರ್ಗವೆನ್ನುವ ಹಾಗೆ ಬಣ್ಣಿಸಿಟ್ಟೆ ಅವನೆದುರು. ಇದ್ದ ಎರಡು ಬೀದಿಯ ತುಂಬ ಓಡಾಡಿಸಿ ಸಿಕ್ಕ ಎಲ್ಲರಿಗೂ ‘ನನ್ನತ್ತೆಯ ಮಗ, ಬೆಂಗಳೂರಿಂದ ಬಂದಿದಾನೆ’ ಅಂತ ಹೆಮ್ಮೆಯಿಂದ ಪರಿಚಯಿಸಿದೆ. ನಮ್ಮ ಕಾಲೋನಿಯ ಹತ್ತಿರ ಹರಿಯುತ್ತಿದ್ದ ಕಪಿಲೆಯನ್ನು ತೋರಿಸಿದೆ. ಆಲೆಮನೆಗೆ ಕರೆದೊಯ್ದು ಕಬ್ಬಿನಹಾಲು ಕಂಠಮಟ್ಟ ಕುಡಿಸಿದ್ದಾಯ್ತು. ಕಾರಾಪುರದ ಕಾಡಿಗೆ ಹೋಗಿ ಬಂದಿದ್ದಾಯ್ತು. ಹೀಗೇ ಎಲ್ಲ ಸಂಭ್ರಮ ಒಂದೊಂದಾಗಿ ಮುಗಿಯಿತು. ಆದರೆ ನನ್ನ ಅಜೆಂಡಾ ಇದ್ದಿದ್ದೇ ಬೇರೆಯಲ್ಲ! ಹಾಗಾಗಿ ಯಾವಾಗ, ಹೇಗೆ ಈ ವಧು-ವರರ ಭೇಟಿ ಮಾಡಿಸುವುದು ಅನ್ನುವುದು ಹತ್ತು ವರ್ಷದ ನನ್ನ ಹೆಗಲಿನ ಮೇಲೆ ಕೂತ ಭಾರವಾಗಿತ್ತು. ಅಂತೂ ಕೊನೆಗೊಮ್ಮೆ ಒಂದು ದಿನ ಅವಳ ಮನೆಯೆದುರೇ ಇದ್ದ ನರಸಿಂಹ ಸ್ವಾಮಿ ದೇವಸ್ಥಾನ ಅವರಿಬ್ಬರ ಭೇಟಿಗೆ ಸರಿಯಾದ ಜಾಗ ಎಂದು ತೀರ್ಮಾನಿಸಿದೆ….
ಒಂದು ಬೆಳಿಗ್ಗೆಯೇ ಅವನನ್ನು ‘ನರಸಿಂಹ ಸ್ವಾಮಿ ದೇವಸ್ಥಾನ ಎಷ್ಟು ಚೆನ್ನಾಗಿದೆ ಕಣೋ. ಹೋಗಿ ಬರೋಣ ಬಾ’ ಅಂತ ಹೊರಡಿಸಿದೆ. ಅವನೂ ಶಿಸ್ತಾಗಿ ತಯಾರಾದ. ನಮ್ಮ ಮನೆಯಿಂದ ಒಂದು ಕಿಲೋಮೀಟರ್ ದೂರವಿದ್ದ ದೇವಸ್ಥಾನಕ್ಕೆ ಹೋಗಿ ಅವನನ್ನು ಒಂದು ಕಡೆ ಕೂರಿಸಿ ‘ಈಗ ಬಂದೆ ಇರು’ ಅಂದವಳೇ ಅವಳ ಮನೆಗೆ ಓಡಿದೆ. ಆರಾಮವಾಗಿ ಕೂತಿದ್ದವಳಿಗೆ ನನ್ನನ್ನು ನೋಡಿ ಖುಷಿಯಾಗಿ ಹೋಯಿತು. ನಾನು ಅವಳ ಹತ್ತಿರ ‘ನನಗೆ ಯಾಕೋ ರಾಗಿ ಹುರಿಹಿಟ್ಟು ತಿನ್ನಬೇಕು ಅನ್ನಿಸ್ತಿದೆ ಕಣೇ. ಮಾಡ್ತೀಯಾ?’ ಅಂತ ಕೇಳಿದೆ. ವಧು ಪರೀಕ್ಷೆಯ ದಿನ ಸಿನೆಮಾಗಳಲ್ಲಿ ಉಪ್ಪಿಟ್ಟು-ಕೇಸರಿಬಾತು ಎಲ್ಲ ಕೊಡುವುದನ್ನು ನೋಡಿದ್ದ ಬುದ್ಧಿವಂತೆ ನಾನು! ಹಾಗಾಗಿ ಉಪ್ಪಿಟ್ಟು ದೇವಸ್ಥಾನದಲ್ಲಿ ತಿನ್ನಬಹುದೋ ಇಲ್ಲವೋ ಗೊತ್ತಿಲ್ಲದ ನಾನು, ಈ ಹಿಂದೆ ಅವಳೊಡನೆ ರಾಗಿ ಹುರಿಹಿಟ್ಟು ದೇವಸ್ಥಾನದಲ್ಲಿ ತಿಂದಿದ್ದರಿಂದ ಅದನ್ನೇ ಮಾಡಲಿ ಅಂತ ಕೇಳಿಕೊಂಡಿದ್ದು!
ಅವಳ ಅಮ್ಮ ಘಮ್ಮನೆ ತುಪ್ಪ, ಏಲಕ್ಕಿ ಪುಡಿ ಮತ್ತು ಬೆಲ್ಲ ಹಾಕಿ ಕಲೆಸುತ್ತಿದ್ದ ಹುರಿಹಿಟ್ಟು ತುಂಬ ಚೆಂದಕ್ಕಿರುತ್ತಿತ್ತು. ಅವಳು ಅಮ್ಮನನ್ನು ಕಾಡಿ, ಬೇಡಿ ಅದನ್ನು ಮಾಡಿಸಿದಳು. ಅಬ್ಬ! ಮೊದಲ ಹಂತ ಮುಗಿದಿತ್ತು. ಇನ್ನು ಅದರ ಸಮೇತ ದೇವಸ್ಥಾನಕ್ಕೆ ಹೋಗಿ ಅವರಿಬ್ಬರ ಭೇಟಿ ಮಾಡಿಸಿಬಿಟ್ಟರೆ ನನ್ನ ಜವಾಬ್ದಾರಿ ಮುಗಿಯಿತಪ್ಪ ಅಂದುಕೊಂಡು ಅವಳನ್ನು ಅಲ್ಲಿಗೆ ಹೊರಡಿಸಿದೆ.
‘ಈ ಬಿಸಿಲಲ್ಲಿ ಎಂಥದ್ದೇ ಅಲ್ಲಿಗೆ ಹೋಗೋದು? ಇಲ್ಲೇ ಇರೋಣ’ ಅಂತ ಅವಳೆಂದಾಗ ಮಾತ್ರ ವಿಧಿಯಿಲ್ಲದೇ ನನ್ನ ಅತ್ತೆಯ ಮಗ ದೇವಸ್ಥಾನದಲ್ಲಿ ಕೂತಿದ್ದಾನೆ ಅಂತ ಹೇಳಲೇ ಬೇಕಾಯಿತು. ಸರಿ, ಆ ಹುರಿಹಿಟ್ಟನ್ನು ಪ್ಯಾಕ್ ಮಾಡಿಕೊಂಡು ದೇವಸ್ಥಾನಕ್ಕೆ ಕಾಲಿಟ್ಟೆವು. ನನಗಂತೂ ಅತೀವ ಆತಂಕ. ಇಬ್ಬರೂ ಒಬ್ಬರಿಗೊಬ್ಬರು ಮದುವೆ ಮಾಡಿಕೊಳ್ಳುವಷ್ಟು ಇಷ್ಟವಾಗುತ್ತಾರಾ ಅನ್ನುವುದೊಂದೇ ಆಗಿದ್ದ ಸಮಸ್ಯೆ! ಅವರಿಬ್ಬರೂ ನಿರಾತಂಕವಾಗಿದ್ದರು. ನನಗೇನೇ ಕೈಕಾಲೆಲ್ಲ ಸಣ್ಣಗೆ ನಡುಗುತ್ತಿತ್ತು ಯಾವುದೋ ಒಂದು ರಹಸ್ಯ ಕಾರ್ಯಾಚರಣೆಯ ಭಾಗವಾಗಿದ್ದೀನೋ ಅನ್ನುವಂತೆ.
ಆ ಉರಿಬಿಸಿಲಿನಲ್ಲಿ ದೇವಸ್ಥಾನದಲ್ಲಿ ಇಬ್ಬರ ಭೇಟಿ ಮಾಡಿಸೇಬಿಟ್ಟೆ! ‘ಎಂಥ ಸುಂದರಿ ನೋಡು’ ಅನ್ನುವಂತೆ ಅವಳನ್ನು ಅವನಿಗೂ, ‘ಹೇಗಿದ್ದಾನೆ ನೋಡು’ ಅನ್ನುವಂತೆ ಹೆಮ್ಮೆಯಿಂದ ಅವನನ್ನೂ ಮುಖಾಮುಖಿಯಾಗಿಸಿದೆ. ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿಹೋಗುವುದು ಅನಿವಾರ್ಯ ಅನ್ನುವಂತೆ ನಾನು ನೋಡುತ್ತಿದ್ದರೆ, ಇಬ್ಬರೂ ಸಂಕೋಚದಿಂದ ಒಬ್ಬರನ್ನೊಬ್ಬರು ನೋಡಿ ಸಣ್ಣಗೆ ನಕ್ಕರಷ್ಟೇ. ನನಗೆ ಒಂದು ಥರ ಭ್ರಮನಿರಸನವಾದ ಹಾಗಾಯಿತು. ಹುಟ್ಟಿದಾಗಿನಿಂದ ವರ್ಷದಲ್ಲಿ ಬಿಡುಗಡೆಯಾಗುತ್ತಿದ್ದ ಎಲ್ಲ ಕನ್ನಡ ಸಿನೆಮಾಗಳನ್ನು ನೋಡಿ ನೋಡಿ ಅದರ ಪ್ರಭಾವ ಅದೆಷ್ಟು ಗಾಢವಾಗಿತ್ತೆಂದರೆ, ಅವರಿಬ್ಬರೂ ನನ್ನ ಕಣ್ಣಿಗೆ ಹತ್ತು ವರ್ಷ ವಯಸ್ಸಿನ ಹುಡುಗ-ಹುಡುಗಿಯ ಥರ ಕಾಣದೇ, ರಾಜ್‌ಕುಮಾರ್-ಭಾರತಿ, ಆರತಿ-ವಿಷ್ಣುವರ್ಧನ್, ಕಲ್ಪನಾ-ಗಂಗಾಧರ್ ಥರವೆಲ್ಲ ಕಾಣಿಸತೊಡಗಿದರೆ, ಅವರಿಬ್ಬರಿಂದ ಇಂಥ ನೀರಸ ಪ್ರತಿಕ್ರಿಯೆ! ನನಗಂತೂ ಅದನ್ನು ಹೇಗೆ ಸ್ವೀಕರಿಸಬೇಕು ಅನ್ನುವುದೇ ಅರ್ಥವಾಗದೇ ತಬ್ಬಿಬ್ಬಾಗಿದ್ದೆ. ಮತ್ತೇನೂ ಮಾಡಲು ತೋಚದೇ ರಾಗಿ ಹುರಿಹಿಟ್ಟಿನ ಡಬ್ಬ ತೆಗೆದೆ. ಅವನು ಅದನ್ನು ನೋಡಿದ ಕೂಡಲೇ ಮುಖ ಸ್ವಲ್ಪ ಸಿಂಡರಿಸಿ ಕಾಟಾಚಾರಕ್ಕೆ ಅನ್ನುವ ಹಾಗೆ ಸ್ವಲ್ಪ ಮಾತ್ರ ಬಾಯಿಗೆಸೆದುಕೊಂಡ ಶಾಸ್ತ್ರ ಮಾಡಿದ.
‘ತುಂಬ ಚೆನ್ನಾಗಿರತ್ತೆ ಕಣೋ, ತಿನ್ನು’ ಅಂತ ಬಲವಂತ ಮಾಡಿದೆ. ಅವನು ‘ನನಗೆ ರಾಗಿ ಜಾಸ್ತಿ ಇಷ್ಟ ಇಲ್ವೇ’ ಅಂದ ಸ್ವಲ್ಪ ಕಿರಿಕಿರಿಯ ದನಿಯಲ್ಲಿ. ಬಹುಶಃ ನನ್ನ ಬಲವಂತದಿಂದ ಅವನಿಗೆ ಸಿಟ್ಟು ಬಂದಿದ್ದಿರಬೇಕು. ಆಗ ನೆನಪಾಯಿತು – ಅವನಿಗೆ ಕಪ್ಪಗಿನ ಬಣ್ಣದ ಯಾವುದೂ ಹೆಚ್ಚು ಸೇರುತ್ತಿರಲಿಲ್ಲ ಎನ್ನುವುದು. ಕಪ್ಪಗಿದ್ದೂ ಅವನು ಇಷ್ಟಪಡುತ್ತಿದ್ದ ಏಕೈಕ ವ್ಯಕ್ತಿ ಎಂದರೆ ನಾನು ಮಾತ್ರ ಆಗಿದ್ದೆ. ಅದೆಲ್ಲ ಗೊತ್ತಿದ್ದೂ ಇದೆಲ್ಲ ಸಾಹಸಕ್ಕೆ ಕೈ ಹಾಕಿದೆನಲ್ಲ ಅಂತ ಯಾಕೋ ಧುಃಖವೆನ್ನಿಸಿ ಅವಳ ಕಡೆ ನೋಡಿದರೆ, ಅವಳು ಅವನ ಇರುವನ್ನೇ ಮರೆತವಳಂತೆ ಅವಳ ಪಾಡಿಗೆ ಹುರಿಹಿಟ್ಟು ತಿನ್ನುತ್ತಿದ್ದಾಳೆ!
ಇಂಥ unromantic ವಧುಪರೀಕ್ಷೆಯನ್ನು ಕಂಡು ನನಗಂತೂ ಸಿಟ್ಟು ಶುರುವಾಯಿತು. ಆದರೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಯಾಕೆಂದರೆ ಅವರಿಬ್ಬರೂ ಮದುವೆಯಾಗುವುದು ನನ್ನ-ಅವನ ಮತ್ತು ನನ್ನ-ಅವಳ ಸಂಬಂಧ ಸೂರ್ಯ ಚಂದ್ರರಿರುವರೆಗೆ ಉಳಿಸಿಕೊಳ್ಳುವ ಏಕೈಕ ಮಾರ್ಗವಾಗಿತ್ತು! ಅಲ್ಲಿಂದ ಮುಂದೆ ಅವರಿಬ್ಬರ ನಡುವೆ ಕೊಂಡಿಯಾಗಿ ನಿಂತು ಮಾತು ಮುಂದುವರೆಸುವ ನನ್ನ ಪ್ರಯತ್ನವೆಲ್ಲ ಛಿದ್ರವಾಗಿ, ಅವನು ಮನೆಗೆ ಹೋಗೋಣ ಬಾ ಅಂತಲೂ, ಅವಳು ಲೇಟಾದರೆ ಅಮ್ಮ ಬಯ್ತಾರೆ ಅನ್ನುತ್ತಲೂ ಹೊರಡುವ ತಯಾರಿ ನಡೆಸಿದರು. ಅವಳು ಹುರಿಹಿಟ್ಟಿನ ಡಬ್ಬಿಯನ್ನು ಜೋಪಾನವಾಗಿ ಮುಚ್ಚಿ ಲಂಗ ಎತ್ತಿ ಹಿಡಿದು ಜುಟ್ಟು ಕುಣಿಸುತ್ತಾ ಓಡಿದಳು. ನಾನು ಕಾಲೆಳೆಯುತ್ತ ಅವನ ಜೊತೆ ಮನೆಯ ಕಡೆ ಹೆಜ್ಜೆ ಹಾಕಿದೆ. ದಾರಿಯಲ್ಲಿ ಬರುವಾಗ ಸಾಯುತ್ತಿರುವವರ ಎದೆಗೆ ಗುದ್ದಿ ಬದುಕಿಸುವ ನಮ್ಮ ಕನ್ನಡ ಸಿನೆಮಾ ಹೀರೋಗಳ ನೆನಪಾಗಿ, ‘ನನ್ನ ಫ಼್ರೆಂಡ್ ಎಷ್ಟು ಚೆನ್ನಾಗಿದಾಳೆ ಅಲ್ವಾ’ ಅಂದೆ. ಅವನು ನಿರ್ಲಿಪ್ತನಾಗಿ ‘ನನಗೆ ಇಷ್ಟ ಆಗ್ಲಿಲ್ಲ’ ಅಂದ. ಅವಳು …. ಅಂಥ ರೂಪಸಿಯಾದ ಅವಳನ್ನು ಮೆಚ್ಚದವರೂ ಇರುತ್ತಾರಾ ಅನ್ನುವುದೇ ನನಗೆ ಯಕ್ಷಪ್ರಶ್ನೆಯಾಗಿತ್ತು ಮತ್ತು ತಡೆದುಕೊಳ್ಳಲಾಗದ ಆಘಾತವೂ ….
ಉಪ ಸಂಹಾರ: ಅಲ್ಲಿಂದ ಮುಂದೆ ಅವರಿಬ್ಬರ ಭೇಟಿ ಮಾಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಆಸಕ್ತಿ ತೋರಿಸದೇ ಉಳಿದಿದ್ದರಿಂದ ನನ್ನ ‘ಲವ್ ಅಟ್ ಫಸ್ಟ್ ಸೈಟ್’ ಮಾಡಿಸುವ ಪ್ರಯತ್ನ ಅಲ್ಲಿಗೇ ಮುಗಿಯಿತು. ಅವಳು ಮತ್ತು ಅವನಿಲ್ಲದೇ ಬದುಕೇ ಸಾಗುವುದಿಲ್ಲ ಅನ್ನುವ ಕಾರಣಕ್ಕೆ ಮದುವೆ ಮಾಡಿಸುವ ಪ್ರಯತ್ನಕ್ಕೆ ಬಿದ್ದಿದ್ದೆ ನಾನು. ಆದರೆ ಕಾಲ ಹೇಗೆ ತಿರುಗಿತೆಂದರೆ, ಯೌವನಕ್ಕೆ ಕಾಲಿಟ್ಟ ಅತೀವ ಸಂಕೋಚದಲ್ಲಿ ನಾನು ಅವನ ಜೊತೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟೆ! ಆ ಊರನ್ನು ಬಿಟ್ಟ ನಂತರ ಒಮ್ಮೆ ಮಾತ್ರ ಭೇಟಿಯಾದ ಅವಳೂ, ಆ ನಂತರ ನನ್ನದೇ ಮತ್ತೊಬ್ಬ ಗೆಳೆಯನನ್ನು ಮದುವೆಯಾಗಿ ಬೆಂಗಳೂರಿನಲ್ಲೇ ಇದ್ದರೂ ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆಯೂ ಭೇಟಿಯಾಗಿಲ್ಲ ….
ಇನಾಂದಾರರ ‘ಯಯಾತಿ’ ಕಾದಂಬರಿಯಲ್ಲಿ ಒಂದು ಮಾತಿದೆ – ಬಾಲ್ಯದಲ್ಲಿ ಗೊತ್ತಿರುವ ಒಂದೇ ಕಾಲವೆಂದರೆ ಅದು ವರ್ತಮಾನ ಎಂದು … ಎಷ್ಟು ಸತ್ಯ!

‍ಲೇಖಕರು avadhi-sandhyarani

September 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಅಮರದೀಪ್.ಪಿ.ಎಸ್.

    ಮದುವೆ ಮಾಡಿಸುವ ಪ್ರಹಸನ ಚೆನ್ನಾಗಿದೆ ಮೇಡಂ.

    ಪ್ರತಿಕ್ರಿಯೆ
  2. Kusuma

    lekhana tumba chenagide…hattane vayassige nivu avribra madve astondu plan madidira… super :).

    ಪ್ರತಿಕ್ರಿಯೆ
  3. vijaya hebbar

    bharathi..first article of yours that i read..great style..so simple and close to the heart way of writing..good luck always..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: