’ನಮ್ಮಮ್ಮ ಅಂದ್ರೆ ನಂಗಿಷ್ಟ’ – ಭಾರತಿ ಬಿ ವಿ

ಭಾರತಿ ಬಿ ವಿ

ಇವತ್ತು ಅಮ್ಮಂದಿರ ದಿನವಂತೆ. ಮತ್ತೆ ಎಂದಿನಂತೆ ಶುರುವಾಗಬಹುದು ಬಿಸಿ ಬಿಸಿ ಚರ್ಚೆ- ಅಮ್ಮಂದಿರ ದಿನ ಅನ್ನುವುದೆಲ್ಲ ಹೆತ್ತವರಿಗೆ ಸಮಯ ಕೊಡಲಾಗದ ಪಾಶ್ಚಾತ್ಯರ ಸಂಸ್ಕೃತಿ, ನಮ್ಮದು ಜಗತ್ತಿನ ಸರ್ವ ಶ್ರೇಷ್ಠ ಸಂಸ್ಕೃತಿ, ನಾವು ಹಾಗೆಲ್ಲ ಅಮ್ಮನಿಗೆ ಒಂದೇ ದಿನ ಅಂತೆಲ್ಲ ಮೀಸಲಾಗಿಡುವವರಲ್ಲ ಅಂತೆಲ್ಲ. ಗೌರಿ ಹಬ್ಬದ ದಿನ ಗೌರಿಯನ್ನು ನೆನೆಯಬಹುದು, ಗಣೇಶನ ಹಬ್ಬದ ದಿನ ಗಣೇಶನನ್ನು ಪೂಜಿಸಬಹುದು, ಕೃಷ್ಣ ಜನ್ಮಾಷ್ಠಮಿ ಅಂತ ಆಚರಿಸಬಹುದು … ಆದರೆ ಅಮ್ಮನ ದಿನ, ಅಪ್ಪನ ದಿನ, ಪ್ರೇಮಿಗಳ ದಿನ ಮಾತ್ರ ಆಚರಿಸಬಾರದು ಅನ್ನುವ ಹಠವೇಕೋ ಕಾಣೆ! ನನಗಂತೂ ನೆನೆಸಿಕೊಳ್ಳಲು ಇವೆಲ್ಲವೂ ಒಂದು ನೆಪವಷ್ಟೇ …
ಮೊದಲಿಗೆ ಹೇಳಿಬಿಡುತ್ತೇನೆ – ಇದು ಅಮ್ಮನ ಬಗ್ಗೆ ತುಂಬ ಭಾವುಕವಾದ, ಎದೆ ಕಲಕುವ ಕಥೆಯಲ್ಲ. ನನ್ನಮ್ಮ ಅಂದರೆ,
ಮಕ್ಕಳು ಊಟ ಮಾಡಿದ ಕೂಡಲೇ ಅಮ್ಮ ಸೆರಗಲ್ಲಿ ಕೈ ಒರೆಸುವ ಕಥೆಯಲ್ಲ
ತಾನು ತಿನ್ನದೇ ಮಕ್ಕಳಿಗಾಗಿ ಎಲ್ಲ ಎತ್ತಿಡುವ ಅಮ್ಮನ ಕಥೆಯಲ್ಲ
ಬದುಕಿನಲ್ಲಿ ಮಕ್ಕಳನ್ನು ಬಿಟ್ಟರೆ ಬೇರೆ ಬದುಕೇ ಇಲ್ಲವೆನ್ನುವಂತೆ ಬದುಕಿದ ಅಮ್ಮನ ಕಥೆಯಲ್ಲ …
 
ನನ್ನಮ್ಮ ಎಂದರೆ,
ಅತ್ಯಂತ ಜೀವನ ಪ್ರೀತಿಯ ಅಮ್ಮ
ತಾನೂ ಬದುಕಿ ನಮ್ಮನ್ನೂ ಬದುಕಲು ಬಿಟ್ಟ ಅಮ್ಮ
ಮನೆ-ಮಕ್ಕಳು ಅಂತ ಒದ್ದಾಡುವಾಗಲೂ ತನ್ನ ಆಸಕ್ತಿಗಳನ್ನು ಕಾಯ್ದುಕೊಂಡ ಅಮ್ಮ!
ಮನೆಯ 11 ಮಕ್ಕಳಲ್ಲಿ 9ನೆಯವಳಾಗಿ ಹುಟ್ಟಿ ಬೇಬಿ ಅಂಥ ಕರೆಸಿಕೊಂಡು, ನಂತರ ಬೇಬಕ್ಕ, ಬೇಬಿ ಆಂಟಿ, ಬೇಬಿ ಅಜ್ಜಿಯೂ ಆದ ನನ್ನಮ್ಮನ ಒಂದಿಷ್ಟು ಜೀವನ ಪ್ರೀತಿಯ ಕ್ಷಣಗಳು …

***

ಅಮ್ಮ ಸಣ್ಣವಳಾಗಿದ್ದಾಗಿನ ಅವಳ ಕಥೆಗಳನ್ನು ಹೇಳುವುದು ನನಗೆ ತುಂಬ ಇಷ್ಟದ ಕ್ಷಣಗಳಲ್ಲಿ ಒಂದು. ಅವಳ ಕಾಲಕ್ಕೂ, ನನ್ನ ಕಾಲಕ್ಕೂ, ನನ್ನ ಮಗನ ಕಾಲಕ್ಕೂ ಕೊಂಡಿಯಂತಿರುವ ಅಮ್ಮನ ಮಾತುಗಳು ನನಗೆ ನಾನು ಅರಿಯದ ಯಾವುದೋ ಕಾಲಘಟ್ಟಕ್ಕೆ ಕೊಂಡೊಯ್ಯುತ್ತವೆ.
ಅವಳ ಅಜ್ಜಿ ಅಂದರೆ ನನ್ನ ಮುತ್ತಜ್ಜಿಗೆ ಸಿಕ್ಕಾಪಟ್ಟೆ ಸಿನೆಮಾ ಹುಚ್ಚಂತೆ. ಆದರೆ ನನ್ನ ತಾತ ತುಂಬ ಸ್ಟ್ರಿಕ್ಟ್ ಮನುಷ್ಯ ಅಂತ ಮಗನನ್ನು ಕೇಳಲು ಹೆದರಿಕೆಯಾಗಿ, ನನ್ನಮ್ಮನನ್ನು ಮುಂದಿಟ್ಟುಕೊಂಡು ಪರ್ಮಿಷನ್ ತೆಗೆದುಕೊಂಡು ಸಿನೆಮಾ ನೋಡುತ್ತಿದ್ದ ಕಥೆ, ಡೆಲ್ಲಿಯಿಂದ ಬರುತ್ತಿದ್ದ ನನ್ನ ದೊಡ್ಡಮ್ಮನ ಮಕ್ಕಳಿಗೆ ಇಂಗ್ಲೀಷ್ ಸಿನೆಮಾ ತೋರಿಸಲು ಕರೆದುಕೊಂಡು ಹೋಗಿ ನಯಾಪೈಸೆ ಅರ್ಥವಾಗದೇ ಬೆಂಚಿನ ಮೇಲೆ ಕಾಲು ಚಾಚಿ ನಿದ್ದೆ ಹೊಡೆದು, ಸಿನೆಮಾ ಮುಗಿದ ನಂತರ ಎದ್ದು ಬಂದ ಕಥೆ, ಅಜ್ಜಿ ಮಾರ್ಕೆಟ್ಟಿಗೆ ಸಾಮಾನು ತರಲು ಕಳಿಸಿದಾಗೆಲ್ಲ ಎರಡು ಬಾಳೆಹಣ್ಣು ಮತ್ತು ಒಂದಿಷ್ಟು ದ್ರಾಕ್ಷಿ ಹಣ್ಣನ್ನು ಪ್ರತೀ ಸಲವೂ , ಅಂದರೆ ದಿನಕ್ಕೆ ನಾಕು ಸಲ ಕಳಿಸಿದರೆ ಎಂಟು ಬಾಳೆಹಣ್ಣು ಮತ್ತು ದ್ರಾಕ್ಷಿ ಮಲ್ಟಿಪ್ಲೈಡ್ ಬೈ ಫ಼ೋರ್ ಅನ್ನುವ ಲೆಕ್ಕದಲ್ಲಿ ತಿನ್ನುತ್ತಿದ್ದ ಕಥೆ … ಅವಳ ಬತ್ತಳಿಕೆಯ ತುಂಬ ಇರುವ ಇಂಥ ಕಥೆಗಳನ್ನು ಕೇಳುವುದು ನನಗೆ ತುಂಬ ಇಷ್ಟ.
ಕೊಳ್ಳೆಗಾಲದಲ್ಲಿ ಮೊದಲೇ ದೇವಾಂಗ ಶೆಟ್ಟರ ಬೀದಿಯವರು ಮಾಟಮದ್ದಿಗೆ ಫೇಮಸ್ ಅಂತೆ. ಅಂಥವರ ಮನೆಯ ಮಕ್ಕಳೆಲ್ಲ ನನ್ನಮ್ಮನ ದೋಸ್ತ್‌ಗಳು. ನನ್ನಜ್ಜಿ ‘ಅವರಿಗೆ ಮದ್ದು ಹಾಕಕ್ಕೆ ಯಾರೂ ಸಿಗದಿದ್ರೆ ಮನೆ ಮಕ್ಕಳಿಗೇ ಮದ್ದು ಹಾಕಿ ಮಾರನೇ ದಿನ ತೆಗೀತಾರಂತೆ ಕಣೇ, ಅಲ್ಲಿ ತಿನ್ನಬೇಡ’ ಅಂತ ಬಯ್ದರೂ, ಒಂದೇ ಒಂದು ಸಲಕ್ಕೂ ಅನುಮಾನಿಸದೇ ಕೊಟ್ಟಿದ್ದನ್ನೆಲ್ಲ ಕಬಳಿಸಿ ಬರುತ್ತಿದ್ದ ಕಥೆ ನಮ್ಮ ಬೆಸ್ಟ್ ಸೆಲ್ಲರ್ ಕಥೆಗಳಲ್ಲಿ ಒಂದು!
ಇವೆಲ್ಲ ಅವಳ ಬಾಲ್ಯದ ಕಥೆಯಾದರೆ- ಮದುವೆಯಾದ ಹೊಸದರಲ್ಲಿ ಲೆಕ್ಕ ಗೊತ್ತಾಗದೇ ಇಬ್ಬರು ನೆಂಟರು ಎಕ್ಸ್ಟ್ರಾ ಬಂದರೆ ಎರಡು ಕೊಳಗ ಬಿಸಿಬೇಳೆ ಬಾತ್ ಮಾಡಿ ಮೊದಲೇ ಕಾಸಿಲ್ಲದ ನಮ್ಮಪ್ಪನಿಗೆ ಕಣ್ಣು ಮೇಲಕ್ಕೆ ಸಿಕ್ಕಿಸುತ್ತಿದ್ದ ಕಥೆ, ಬಂದವರಿಗೆ ಇಟ್ಟುಕೊಡಲು ದುಡ್ಡಿಲ್ಲ ಎಂದು ಮದುವೆಯಲ್ಲಿ ಉಡುಗೊರೆಯಾಗಿ ಬಂದಿದ್ದ ಬೆಳ್ಳಿ ಬಟ್ಟಲನ್ನೆಲ್ಲ ಕುಂಕುಮದ ಜೊತೆಗಿಟ್ಟು ಕೊಟ್ಟ ದಾನಶೂರ ಕರ್ಣಿಯ ಕಥೆ, ಮದುವೆಯಾದ ಹೊಸದರಲ್ಲಿ ಅಸಾಧ್ಯ ನಿದ್ದೆಪುರುಕಿಯಾದ ಅಮ್ಮ ಬಾಗಿಲು ಜಡಿದು ನಿದ್ದೆ ಹೊಡೆದು, ಅಪ್ಪ ಕಿರಿಚಿ ಕಿರಿಚಿ ಸಾಕಾಗಿ ಕಿಟಕಿಯಲ್ಲಿ ಕೋಲು ತೂರಿಸಿ ಅಮ್ಮನನ್ನು ಎಬ್ಬಿಸಿದ ಕಥೆ, ಮನೆಯ ಹೆಂಚನ್ನು ತೆಗೆದಿಟ್ಟು ಸೂರಿನಿಂದ ಅಕ್ಕನಿಗೆ ಕಟ್ಟಿದ್ದ ತೊಟ್ಟಿಲಿನ ಹಗ್ಗ ಹಿಡಿದು ಕಳ್ಳ ಮನೆಯೊಳಗೆ ಇಳಿಯುವವರೆಗೂ ನಿದ್ದೆ ಹೊಡೆಯುತ್ತಿದ್ದ ಕಥೆ, ಬಕಾಸುರನಂಥ ನಾನು ಡಬ್ಬಗಟ್ಟಳೆ ಫ಼ೇರೆಕ್ಸ್ ತಿಂದು ಅಪ್ಪನ ಸಂಬಳ ಖಾಲಿ ಮಾಡಿ ಕೊನೆಗೆ ಸಾಬರ ಗೆಳೆಯನಿಂದ ಪ್ರತಿ ತಿಂಗಳ ಕೊನೆಗೂ 10 ರೂಪಾಯಿ ಸಾಲ ಪಡೆದು ತೀರಿಸಿ ಮತ್ತೆ ಮುಂದಿನ ತಿಂಗಳಿಗೆ ಕೈ ಚಾಚುತ್ತಿದ್ದ ಕಥೆ ಇಂಥ ಕಥೆಗಳನ್ನೂ ರಸವತ್ತಾಗಿ ಹೇಳುತ್ತಿರುತ್ತಾಳೆ.
ಯಾವತ್ತೂ ಅಪ್-ಟು-ಡೇಟ್ ಆದ ಅಮ್ಮ ಡ್ರೆಸ್ಸಿನ, ಫ಼್ಯಾಷನ್ನಿನ, ಟೆಕ್ನಾಲಜಿನ ವಿಷಯದಲ್ಲಿ ಅತೀವ ಆಸಕ್ತಿ ಹೊಂದಿದ್ದಳು. ಹೊಸ ಬಟ್ಟೆ ಹೊಲೆಸಲು ದುಡ್ಡಿಲ್ಲವಾದರೆ ಇರುವ ಸೀರೆಯನ್ನೇ ಹರಿಸಿ ಚೆಂದಕ್ಕಿರೋ ಫ್ರಾಕ್ ಹೊಲೆಸುತ್ತಿದ್ದಳು. ಅಮ್ಮನ ತಿಳಿ ಲ್ಯಾವೆಂಡರಿನ ಸೀರೆಯಲ್ಲಿ ಹೊಲೆಸಿದ್ದ ಡ್ಯಾನ್ಸಿಂಗ್ ಫ್ರಾಕ್ ಇವತ್ತಿಗೂ ನಾನು ಮರೆತಿಲ್ಲ. ಸಿನೆಮಾ ತಾರೆಯರ ಹೇರ್ ಕಟ್ ಮಾಡಿಸುವುದು ಅಮ್ಮನಿಗೆ ಬಹಳ ಪ್ರಿಯವಾಗಿತ್ತು. ತಾನೂ ಅಷ್ಟೇ, ಯಾವತ್ತೂ ‘ಹೇಬರಾಸಿಯ’ ಹಾಗೆ (ಹೇಬರಾಸಿ ಅನ್ನುವ ಪದ ಡಿಕ್ಷನರಿಯಲ್ಲಿಲ್ಲ ಅನ್ನಿಸುತ್ತದೆ) ಡ್ರೆಸ್ ಮಾಡಿಕೊಳ್ಳದೇ, ಇರುವುದನ್ನೇ ನೀಟಾಗಿ ಉಡುತ್ತಿದ್ದಳು ಅಮ್ಮ. ಆಯಾ ಕಾಲಕ್ಕೆ ತಕ್ಕಂತೆ ಬ್ಲೌಸಿನ ತೋಳು ಗಿಡ್ಡವಾಗುತ್ತ, ಉದ್ದವಾಗುತ್ತ ಹೋಗುತ್ತಿತ್ತು. ಯಾವತ್ತೂ ಹಾಗೆಲ್ಲ ಹಳೆಯ ಫ್ಯಾಷನ್ನಿನ ಎಂಥದ್ದೋ ಮ್ಯಾಚಿಂಗ್ ಇಲ್ಲದ ಬಟ್ಟೆ ಹಾಕುತ್ತಲೇ ಇರಲಿಲ್ಲ. ತನ್ನ 72 ನೆಯ ವಯಸ್ಸಿನಲ್ಲೂ ಅವಳದ್ದು ಅದೇ ಕುಂದದ ಆಸಕ್ತಿ, ಅಚ್ಚುಕಟ್ಟು. ಇನ್ನು ಟೆಕ್ನಾಲಜಿ ವಿಷಯಕ್ಕೆ ಬಂದರೆ, ಟೇಪ್ ರೆಕಾರ್ಡರ್ ಅಮ್ಮನನ್ನು ಬಹಳವಾಗಿ ಆವರಿಸಿಕೊಂಡ ಕಥೆ ಹೇಳುತ್ತೇನೆ ಕೇಳಿ!
ಒಮ್ಮೆ ಮೈಸೂರಿನಿಂದ ಬಂದ ಅಪ್ಪನ ಕೈಯಲ್ಲಿ ಪ್ಯಾನಾಸೋನಿಕ್ ಟೇಪ್ ರೆಕಾರ್ಡರ್ ಕಂಡಾಗ ಅದೇನೆಂದು ತಿಳಿಯದ ನಾವು ಬಾಯಿ ಬಾಯಿ ಬಿಟ್ಟಿದ್ದೆವು. ಆಮೇಲೆ ಅಪ್ಪ ಕ್ಯಾಸೆಟ್ ಹಾಕಿ ಸಿನೆಮಾ ಹಾಡು ಕೇಳಬಹುದು ಅಂದ ಘಳಿಗೆಯಲ್ಲಿ ನಮ್ಮೆದುರು ಒಂದು ಮಾಯಾಲೋಕ ತೆರೆದುಕೊಂಡಿತು! ತೆರೆಯ ಹಿಂದೆ, ರೇಡಿಯೋ ಒಳಗೆ ಕೂತು ಹಾಡುಗಾರರು ಹಾಡುವುದನ್ನು ಮಾತ್ರ ಕೇಳಿದ್ದ ನಮಗೆ, ಅವರೆಲ್ಲ ನಮ್ಮ ಮನೆಯೊಳಗೂ ಕೂತು ಹಾಡುತ್ತಾರೆ ಎಂದಾಗ ರೋಮಾಂಚನ! ಮೊದಮೊದಲಲ್ಲಿ ಕ್ಯಾಸೆಟ್ ಹಾಕಿ ಕೇಳುತ್ತಿದ್ದ ಅಮ್ಮನಿಗೆ ಇದ್ದಕ್ಕಿದ್ದ ಹಾಗೆ ಶುರುವಾಯ್ತು ನಮ್ಮ ಗಾನ ಪ್ರತಿಭೆಯನ್ನು ರೆಕಾರ್ಡ್ ಮಾಡುವ ಹುಚ್ಚು! ಅಸಾಧ್ಯ ಸಿಟ್ಟಿನಲ್ಲಿ ಕಿರಿಚಿ, ಕಿರಿಚಿ ಗೊಗ್ಗರು ಗಂಟಲಾಗಿಸಿಕೊಂಡಿದ್ದ ನಾನು, ಒಣಕಲು ಶರೀರದೊಳಗಿನ ಸಣ್ಣ ದನಿಯ ಅಕ್ಕ, ತಕ್ಕಮಟ್ಟಿಗೆ ಕೆಟ್ಟದಾಗಿದ್ದ ಅಪ್ಪನ ದನಿ, ಗಂಡಸರ ದನಿಯಂತಿದ್ದ ಅಮ್ಮ ಎಲ್ಲರ ದನಿಯಲ್ಲೂ ಆಗಾಗ ಹಾಡಿಸಿ ರೆಕಾರ್ಡ್ ಮಾಡುವ ಕೆಲಸ ಶುರುವಾಯಿತು ಅವಳದ್ದು.
ಕಾಲೋನಿಯಲ್ಲಿದ್ದ ಒಬ್ಬರು ಹಾಡಿನ ಟೀಚರ್ ಪುರಂದರ ದಾಸರ ರಚನೆಗಳನ್ನು ನನ್ನಿಂದ ಹೊರಡಿಸಲಾಗದೇ ಸೋತು ಸುಣ್ಣವಾಗಿದ್ದರು ಅಂದರೆ ನನ್ನ ಬಾಲಪ್ರತಿಭೆ ಊಹಿಸಿಕೊಳ್ಳಿ! ಅಂಥ ಕೆಟ್ಟ ಕಂಠದ ನನ್ನನ್ನು ಹಾಡು ಹಾಡು ಎಂದು ಪ್ರಾಣ ತಿನ್ನುತ್ತಿದ್ದಳು. ಅದೂ ರೆಕಾರ್ಡ್ ಮಾಡುವ ಕೆಲಸವೇನು ಸಾಮಾನ್ಯದ್ದೇ! ಗಾಳಿಯ ಸದ್ದಿನಿಂದ ಹಿಡಿದು, ಎಲ್ಲವೂ ರೆಕಾರ್ಡ್ ಆಗುತ್ತಿದ್ದುದರಿಂದ ಎಲ್ಲ ಕೆಲಸ ಮುಗಿಸಿ, ಮನೆಯ ಎಲ್ಲ ಕಿಟಕಿ, ಬಾಗಿಲುಗಳನ್ನು ಜಡಿದು, ಬೀದಿಯಲ್ಲಿ ತರಕಾರಿ, ಹೂವಿನವರೆಲ್ಲ ಬಂದು ಹೋಗಿ ಆಯ್ತು ಅಂತ ಖಾತ್ರಿ ಪಡಿಸಿಕೊಂಡ ನಂತರ ಇವಳ ರೆಕಾರ್ಡಿಂಗ್ ಸೆಷನ್ ಶುರುವಾಗುತ್ತಿತ್ತು. ನಾವು ಅಸಾಧಾರಣ ಪ್ರತಿಭೆಯ ಗಾಯಕರು ಒಂದೇ ಟೇಕಿನಲ್ಲಿ ಹಾಡಿ ಮುಗಿಸಬೇಕಿತ್ತು ಬೇರೆ! ನಾನು ಮೊದಲು ಹಾಡಿದ ಹಾಡು ನಾಗರಹಾವು ಸಿನೆಮಾದ ‘ಕನ್ನಡ ನಾಡಿನ ವೀರ ರಮಣಿಯ’ ಹಾಡು. ವೀರ ರಮಣಿ ಅನ್ನುವುದು ಗೊತ್ತಿಲ್ಲದ ಪೆದ್ದಲಾಷ್ಟಕ ನಾನು ‘ವೀರರ ಮಣಿಯ’ ಅಂತ ಹಾಡಿದ್ದೆ!! ಅದೂ ಉಸಿರು ಹಿಡಿದು ಹಾಡಲು ಗೊತ್ತಿಲ್ಲದ ನಾನು ಬುಸ್ ಬುಸ್ ಎಂದು ಉಸಿರು ಬಿಡುತ್ತಾ ಹಾಡಿದ್ದೆ. ಆಮೇಲೆ ಪ್ಲೇ ಮಾಡಿ ನೋಡಿದರೆ ಹಿಮಾಲಯ ಪರ್ವತ ಹತ್ತುತ್ತಾ ಹಾಡುತ್ತಿದ್ದೇನೋ ಅನ್ನುವಂತೆ ರೆಕಾರ್ಡ್ ಆಗಿದ್ದು ಕಂಡು ನನಗೆ ಸಿಕ್ಕಾಪಟ್ಟೆ ಅವಮಾನವಾಗಿ ಹೋಗಿತ್ತು. ಅಪ್ಪ ಅದನ್ನು ಕೇಳಿದ ನಂತರ ಹಾಡುವ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದಾಗ, ನ್ಯೂಸ್ ಪೇಪರ್ ಹಿಡಿದು ಓದುವುದನ್ನೇ ರೆಕಾರ್ಡ್ ಮಾಡಿ ಅಮ್ಮ ಪತಿಭಕ್ತಿ ಮೆರೆದಿದ್ದಳು!

ಅದಾದ ನಂತರ ಯಾವುದೇ ಊರಿಗೆ ಹೋಗಲಿ, ಯಾವುದೇ ರಜೆ ಬರಲಿ.. ನಾವು ಊರಿಗೆ ಹೋಗಲು ಪ್ಯಾಕ್ ಮಾಡುವ ಲಗೇಜಿನಲ್ಲಿ ಈ ಟೇಪ್ ರೆಕಾರ್ಡರಿಗೆ ಪರ್ಮನೆಂಟ್ ಜಾಗ ಸಿಕ್ಕಿಬಿಟ್ಟಿತು. ಅಮ್ಮ ಒಂದೇ ಒಂದು ಸಲವೂ ಬೇಸರಿಸದೇ ಅದೆಷ್ಟು ಜನರ ಹಾಡುಗಳನ್ನು, ಕ್ಯಾಸೆಟ್‌ಗಟ್ಟಳೆ ರೆಕಾರ್ಡ್ ಮಾಡಿದಳೋ. ಕೊಳ್ಳೆಗಾಲದ ರೂಪ ಸಂತೋಸ, ಅಹ್ಹಾ, ಒಹ್ಹೋ ಅಂದದ್ದರಿಂದ ಹಿಡಿದು, ನನ್ನ ಮಾವ ಪೂಜೆ ಮಾಡುವಾಗ ಹೇಳುತ್ತಿದ್ದ ಮಂತ್ರ, ನನ್ನ ಅಜ್ಜಿಯ ಹಾರ್ಮೋನಿಯಮ್, ಆಗಿನ ಕಾಲಕ್ಕೆ ಬರಿಯ ಹಿಂದಿ ಗೀತೆಗಳನ್ನೇ ಹೇಳುತ್ತಿದ್ದ ನನ್ನಣ್ಣನ ಅದ್ಯಾವುದೋ ಸಂಭಾಷಣೆಯಂತೆ ಓದಿದ್ದ ಹಾಡು, ನನ್ನ ದೊಡ್ಡಮ್ಮನ ಮಗಳ ನಾ ಪಾಡಲ್ ಪಾಡುಂ ಅನ್ನುವ ತಮಿಳು ಹಾಡು ಎಲ್ಲವನ್ನೂ ರೆಕಾರ್ಡ್ ಮಾಡಿಸಿ ಮಾಡಿಸಿ ತುಂಬಿಟ್ಟಳು. ನನ್ನ ದೊಡ್ಡಮ್ಮ ಬಾರೋ ಕೃಷ್ಣಯ್ಯಾ ಅನ್ನುತ್ತ ಹಾಡುವಾಗೆಲ್ಲ ನನ್ನ ದೊಡ್ಡಪ್ಪ ಹಿಂದೆ ನಿಂತು ಬಾರೋ ರಾಮಯ್ಯ ಅಂತ ತಮ್ಮ ಹೆಸರಾದ ರಾಮಚಂದ್ರನಿಗೆ ತಿದ್ದುಪಡಿ ಮಾಡಿದ್ದ ಹಾಡು, ನನ್ನತ್ತೆ ತಮಿಳು ಉಚ್ಛಾರಣೆಯಲ್ಲಿ ನಿಲ್ಲಿಸ ದಿರು ವನಮಾಲಿ ಕೊಳಲ ಗಾ ನವಾ ಅನ್ನುತ್ತ ಸಂಕೋಚದಲಿ ಹಾಡಿದ್ದ ಹಾಡು, ನಮ್ಮ ಮನೆಯ ಏಕೈಕ ಸುಮಧುರ ಕಂಠವಾದ ನನ್ನತ್ತೆಯ ಮಗನ ನಾವಾಡುವ ನುಡಿಯೇ ಕನ್ನಡನುಡಿ ಹಾಡು, ನನ್ನ ದೊಡ್ಡಮ್ಮನ ಮಗ ಯಾರೇ ಕೂಗಾಡಲಿ ಹಾಡಿದಾಗ ಹಿಂದೆ ಅರೆ ಹೊಯ್ ಅರೆ ಹೊಯ್ ಅನ್ನುತ್ತ ಕೋರಸ್ ಹಾಡಿದ್ದು ಎಲ್ಲವನ್ನೂ ಅದೆಷ್ಟು ತನ್ಮಯತೆಯಿಂದ ಬೇಜಾರೇ ಇಲ್ಲದೆ ಅಮ್ಮ ರೆಕಾರ್ಡ್ ಮಾಡಿಟ್ಟಳು. ಈಗ ಆ ಹಾಡುಗಳನ್ನು ಹಾಡಿದವರಲ್ಲಿ ಎಷ್ಟೊಂದು ಜನ ಇಲ್ಲವಾಗಿದ್ದಾರೆ. ಆದರೆ, ಅವರ ದನಿ ಮಾತ್ರ ನಮ್ಮ ಮನೆಯಲ್ಲಿ ಶಾಶ್ವತ …
ಇಂಥದ್ದೇ ಇನ್ನೊಂದು ಹುಚ್ಚೆಂದರೆ ಅವಳ ಕ್ಯಾಮೆರಾದ್ದು. ಅಮ್ಮನಿಗೆ ಮೊದಲಿನಿಂದ ತನ್ನದೇ ಆದ ಒಂದು ಕ್ಯಾಮೆರಾ ಇರಬೇಕು ಅನ್ನುವ ಆಸೆ. ಆಗೆಲ್ಲ ಕ್ಯಾಮೆರ ಮತ್ತು ಫೋಟೋಗ್ರಫಿ ತುಂಬ ದುಬಾರಿ ಹವ್ಯಾಸವಾಗಿತ್ತು. ಹಾಗಾಗಿ ಅಮ್ಮ ಆಸೆಯನ್ನು ಅದುಮಿಟ್ಟುಕೊಂಡಿದ್ದಳು. ಒಂದು ಸಲ ನಮ್ಮ ನೆಂಟರಲ್ಲಿ ಯಾರೋ ಹಳೆಯದ್ದೊಂದು ಕ್ಯಾಮೆರಾ ಮಾರುತ್ತಿದ್ದಾರೆ ಅಂದಾಗ ಅಮ್ಮ ಇದ್ದ ಬದ್ದ ದುಡ್ಡೆಲ್ಲ ಹೊಂಚಿಹಾಕಿ ಮುಗಿಬಿದ್ದು ಅದನ್ನು ಕೊಂಡಿದ್ದಳು. ಮೊತ್ತಮೊದಲ ಫೋಟೋ ಅವಳು ತೆಗೆದದ್ದು ನನ್ನಪ್ಪನ ಕಾಲಿನ ಮೇಲಿದ್ದ ರಗ್‌ನ ಫೋಟೋ! ಮುಖ ಫೋಕಸ್ ಮಾಡಲು ಹೋಗಿ ಪಾಪ ಕಾಲು ಫೋಕಸ್ ಆಗಿತ್ತು! ತಾನು ನಿಂತ ಜಾಗ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಬಿಟ್ಟು ನಮ್ಮನ್ನೇ ಹಿಂದೆ ಹೋಗಿ ಸ್ವಲ್ಪ, ಇನ್ನೊಂಚೂರು ಮುಂದೆ ಬನ್ನಿ ಅನ್ನುತ್ತಿದ್ದಳು!! ಮನೆಗೆ ಬಂದ ಫೋಟೋಗ್ರಾಫರ್ ಒಬ್ಬರು ನಿಂತವರನ್ನು ಹಾಗೆಲ್ಲ ಅಡ್ಜಸ್ಟ್ ಮಾಡಬಾರದು, ನೀವು ತೆಗೆಯುವ ಜಾಗ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಅಮೋಘ ಉಪದೇಶ ಕೊಟ್ಟ ಮೇಲೆ ಅಮ್ಮ ಅಂತೂ ಸುಮಾರಾಗಿ ಫೋಟೋ ತೆಗೆಯಲು ಕಲಿತಳು. ತಾನೇ ಹೋಗಿ ಫಿಲ್ಮ್ ರೋಲ್‌ಗಳನ್ನು ಎಲ್ಲೆಲ್ಲೋ ಹೋಗಿ ತರುತ್ತಿದ್ದಳು. ಫಿಲ್ಮ್ ಲೋಡ್ ಮಾಡುವುದು ಕಲಿತಳು. ಅಪ್ಪನಿಗೆ ಕಾಡಿ ಬೇಡಿ ಎಂ ಜಿ ರೋಡಿಗೆ ಕಳಿಸಿ ಡೆವಲಪ್ ಮಾಡಿಸಿ, ಪ್ರಿಂಟ್ ಹಾಕಿಸುತ್ತಿದ್ದಳು. ಇಷ್ಟಿಷ್ಟು ದಪ್ಪದ ಆಲ್ಬಮ್ ತರಿಸಿ ಅವುಗಳಲ್ಲಿ ಈ ಫೋಟೋಗಳನ್ನು ಸಿಕ್ಕಿಸುವವರೆಗೂ ಅವಳದ್ದು ತೀರದ ಉತ್ಸಾಹ. ಒಮ್ಮೆಯಂತೂ ಮನಿಲಾದಲ್ಲಿ ಚೆಂದಕ್ಕೆ ಪ್ರಿಂಟ್ ಬರುತ್ತದೆ ಅಂತ ಮಾಮ ಹೇಳಿದ್ದು ಕೇಳಿ, ಪೋಸ್ಟಿನಲ್ಲಿ ರೋಲ್ ಕಳಿಸಿದ್ದಂಥ ಮಹಾಮಾತೆ ನನ್ನಮ್ಮ!
ಆ ಫೋಟೋ ಹುಚ್ಚು ಕೂಡಾ ಹಾಡಿನ ರೆಕಾರ್ಡಿನಂಥದ್ದೇ. ನಾವು ಎಲ್ಲೆಲ್ಲಿ ಕೂತೆವೋ, ನಿಂತೆವೋ, ಒರಗಿದೆವೋ ಆಗೆಲ್ಲ ಸುರಸುಂದರಿಯರ ಹಾಗೆ ಅವಳ ಕಣ್ಣಿಗೆ ಕಂಡು ‘ಇರ್ರೇ! ಓಡೋಗಿ ಕ್ಯಾಮೆರಾ ತರ್ತೀನಿ’ ಅಂತ ಓಡುತ್ತಿದ್ದಳು. ನಾನೋ ಸುಹಾಸಿನಿ, ಸ್ಮಿತಾ ಪಾಟಿಲ್ ಮುಂತಾದ ನಟಿಯರ ಆರ್ಟ್ ಮೂವಿ ಭಕ್ತೆ. ಅವರಂತೆ ಎಣ್ಣೆ ಮುಖದ, ಮೇಕಪ್ ಅನ್ನುವುದಿರಲಿ ಪೌಡರ್ ಕೂಡಾ ಹಚ್ಚದ ನನ್ನ ಮತ್ತು ಅಕ್ಕನ ಸಾಲು ಸಾಲು ಫೋಟೋ ತೆಗೆಯುತ್ತಿದ್ದಳು. ಯಾವುದೋ ಬಟ್ಟೆ ಹಾಕಿ ಅವಸರದಲ್ಲಿ ಎಲ್ಲೋ ಹೊರಡುವ ಗಡಿಬಿಡಿಯಲ್ಲಿದ್ದಾಗ ಅಮ್ಮನಿಗೆ ನಮ್ಮಲ್ಲೊಬ್ಬ ಮಿಸ್ ಇಂಡಿಯಾ ಗೋಚರಿಸಿಬಿಡುತ್ತಿದ್ದಳು! ನಾವು ‘ಲೇಟ್ ಆಗಿದೆ ಸುಮ್ನಿರಮ್ಮಾ’ ಅಂತ ಬೇಡಿಕೊಂಡರೂ ಬಿಡದೇ ಗದರಿಸಿ ನಿಲ್ಲಿಸಿ ಫೋಟೋ ತೆಗೆಯುವವರೆಗೂ ಬಿಡುತ್ತಿರಲಿಲ್ಲ. ಯಾವುದೇ ಮನೆಯಲ್ಲಿ ನೆಂಟರು ಸೇರಲಿ ಇವಳು ಮೊದಲು ಕ್ಯಾಮೆರಾ ರೋಲ್ ಹೊಂದಿಸಿಕೊಳ್ಳುತ್ತಿದ್ದಳು! ಅಲ್ಲಿ ಹೋಗಿ ಇದ್ದ ಬದ್ದವರನ್ನೆಲ್ಲ ಕೂರಿಸಿ ತೆಗೆದಿದ್ದೇ ತೆಗೆದಿದ್ದು. ಒಮ್ಮೆ ತಾತ-ಅಜ್ಜಿಯ ಫೋಟೋಗಳನ್ನು ತುಂಬ ಪ್ರೀತಿಯಿಂದ ತೆಗೆದಳು ಅಮ್ಮ. ಅದಾದ ನಂತರ ಆ ರೋಲ್ ಇನ್ನೂ ಮುಗಿಯುವ ಮುನ್ನವೇ ತಾತ ಇನ್ನಿಲ್ಲವಾಗಿದ್ದರು. ಅಮ್ಮ ಒಂದು ದಿನ ತಾತನನ್ನು ನೆನೆಸಿಕೊಳ್ಳುತ್ತಲೇ ದುಃಖದಿಂದ ಆ ರೋಲ್ ಹೊರತೆಗೆಯಲು ಹೊರಟು ಅದು ಎಕ್ಸ್‌ಪೋಸ್ ಆಗಿ ಇಡೀ ರೋಲ್ ಕರ್ರಗಾಗಿ ಹೋಗಿ, ತಾತ ಮಾಯವಾಗಿಹೋಗಿದ್ದರು. ಅವತ್ತು ಅಮ್ಮ ಪಟ್ಟ ದುಃಖ ಇವತ್ತಿಗೂ ನಾನು ಮರೆತಿಲ್ಲ …

***

ನನ್ನಮ್ಮ ಎಂಥವಳು ಎಂದರೆ, ಇಡೀ ಜೀವನದಲ್ಲಿ ಒಂದೇ ಒಂದು ಸಲವಾದರೂ ನನಗೆ ಮೂಡಿಲ್ಲ, ಬೇಜಾರು, ನನಗೆ ಅದಿಲ್ಲ, ಇದಿಲ್ಲ ಅಂತ ಕೊರಗಿದ್ದೇ ಕಂಡಿಲ್ಲ. ಒಂಥರಾ ಆರಾಮ್ ಜೀವಿ. ನಾನಂತೂ ಸಣ್ಣ ಪುಟ್ಟದಕ್ಕೆಲ್ಲ ಗಾಭರಿ ಬೀಳುವವಳು. ಅಪ್ಪ ಬರುವುದು ತಡವಾದರೆ ಮೊದಲು ಟೆನ್ಷನ್ನಿನಲ್ಲಿ ಬಾಲ್ಕನಿಗೆ ಹೋಗಿ, ನಂತರ ಗೇಟಿಗೆ ಹೋಗಿ ನಂತರ ಬೀದಿ ಕೊನೆಯಲ್ಲಿ ನಿಂತುಬಿಡುತ್ತಿದ್ದೆ ನಾನು. ಒಮ್ಮೆಯಂತೂ ಹಾಗೆ ನಿಂತಿರುವಾಗ ಒಬ್ಬರು ಪೊಲೀಸ್ ಕಾನ್ಸ್ಟೇಬಲ್ ಹೋಗುತ್ತಿದ್ದರೆ, ಅಪ್ಪನಿಗೆ ಏನೋ ಆಗಿಹೋಗಿರುವುದರಿಂದ information ಕೊಡಲು ಮನೆ ಹುಡುಕುತ್ತಿದ್ದಾರೆ ಅಂತ ಗಾಭರಿ ಬಿದ್ದು ಅವರನ್ನು ಹೋಗಿ ಯಾಕೆ ಬಂದಿದೀರ ಅಂತಲೂ ವಿಚಾರಿಸಿದಂಥ ಪ್ರಾಣಿ ನಾನು! ನಾನು ಇಷ್ಟೆಲ್ಲ ತಿಕ್ಕಲು ತಿಕ್ಕಲಾಗಿ ಆಡುತ್ತಿದ್ದರೆ ಅಮ್ಮ ನನ್ನನ್ನು ಮೂರು ಸಲ ‘ಅಯ್ಯೋ ಬಾರೇ ಬರ್ತಾರೆ. ಊಟ ಮಾಡು’ ಅನ್ನುವಾಗ ನಾನು ಅಮ್ಮನನ್ನು ಮೇಲಿನಿಂದ ಕೆಳಗಿನವರೆಗೆ ನೋಡುತ್ತಿದ್ದೆ! ‘ನನ್ನಪ್ಪ ಇನ್ನೂ ಬಂದಿಲ್ಲ ಅಂತ ನಾನು ಒದ್ದಾಡುತ್ತಿದ್ದರೆ ಊಟವಂತೆ ಊಟ!’ ಅನ್ನುವ ತಿರಸ್ಕಾರವಿರುತ್ತಿತ್ತು ನನ್ನಲ್ಲಿ. ಅಮ್ಮ ಕರೆದು ಸಾಕಾಗಿ, ಕೊನೆಗೆ ಅಚ್ಚುಕಟ್ಟಾಗಿ ಸಾರನ್ನ, ಪಲ್ಯ, ಕೆನೆ ಹಾಕಿದ ಮೊಸರನ್ನ ಕಲೆಸಿ ಚಪ್ಪರಿಸಿ ತಿಂದು ಕೈ ತೊಳೆಯುತ್ತಿದ್ದಳು. ನಾನು ದ್ರಾಬೆ ಮೂತಿ ಮಾಡಿ ಕೂತೇ ಇರುತ್ತಿದ್ದೆ. ಕೊನೆಗೆ ಒಣ ಮುಖದಲ್ಲಿ ಮೂರು ಘಂಟೆ ಆದಮೇಲೆ ಅಪ್ಪ ಮನೆಗೆ ಬರುತ್ತಿದ್ದರು. ಇವಳು ಆರಾಮವಾಗಿ ‘ನಾ ಹೇಳ್ಳಿಲ್ವಾ ಏನಾಗಿರಲ್ಲ ಅಂತ’ ಎನ್ನುತ್ತ ಅಪ್ಪನಿಗೆ ಬಡಿಸಿ ನೆಮ್ಮದಿಯಾಗಿ ಹೋಗಿ ಮಲಗುತ್ತಿದ್ದಳು. ಅಷ್ಟರವರೆಗೆ ಒದ್ದಾಡಿದ ನಾನು ಏನು ಘನಕಾರ್ಯ ಸಾಧಿಸಿದೆ ಎಂದು ಆಶ್ಚರ್ಯ ಪಡುತ್ತಾ ಕೂರುತ್ತಿದ್ದೆ! ಹಾಗಂತ ಮಾರನೆಯ ದಿನಕ್ಕೆ ನನಗೆ ಬುದ್ಧಿ ಬಂದುಬಿಡುತ್ತಿತ್ತು ಅಂದುಕೊಳ್ಳಬೇಡಿ … ಮಾರನೆಯ ದಿನಕ್ಕೂ ಇದೇ ರಾಗ- ಇದೇ ಹಾಡು ನನ್ನದು.
ಆಗೆಲ್ಲ ಅಮ್ಮನಿಗೆ ತುಂಬ ತಲೆನೋವಿನ ಕಾಟ. ಬಿಸಿಲಿಗೆ ಓಡಾಡಿದರಂತೂ ಮುಗಿದೇ ಹೋಯಿತು, ತಲೆ ನೋವಿನೊಡನೆ, ವಾಂತಿಯೂ ಶುರುವಾಗಿ ಹೋಗುತ್ತಿತ್ತು. ಅಮ್ಮ ಗಂಟಲಿನಾಳದಿಂದ ದನಿ ಮಾಡುತ್ತ ವಾಂತಿ ಮಾಡಿಕೊಳ್ಳುವುದು ನನ್ನ ಜೀವನದ nightmare ಆಗಿಹೋಗಿತ್ತು. ಒಂದು ಸಲವಂತೂ ವಾಂತಿ ಮಾಡುವಾಗ ರಕ್ತ ಕಾರಿಕೊಂಡು ಬಿಟ್ಟಿದ್ದಳು. ನಾನು ಜ್ಞಾನ ತಪ್ಪಿ ಬೀಳುವುದೊಂದು ಬಾಕಿ. ಆಮೇಲೆ ಮನೆಯ ಹತ್ತಿರವೇ ಇದ್ದ ಡಾಕ್ಟರ್ ಹತ್ತಿರ ಹೋಗಿ ‘ಅಯ್ಯೋ ನಮ್ಮಮ್ಮ ರಕ್ತ ವಾಂತಿ ಮಾಡ್ತಿದಾಳೆ’ ಅಂತ ಗೊಳೋ ಎಂದು ಅತ್ತಿದ್ದೆ, ಹುಚ್ಚು ಹಿಡಿದ ಹಾಗೆ ಆಡಿದ್ದೆ. ಆಮೇಲೆ ಅವರು ಅದೇನೋ ಮಾತ್ರೆ ಕೊಟ್ಟರು, ಸರಿ ಹೋದಳು ಅಮ್ಮ. ಆದರೆ ಅವತ್ತಿನಿಂದ ಸಂಜೆಯಾದ ನಂತರ ಅಮ್ಮ ಅವಳ ತಲೆಯ ಮೇಲೆ ಕೈ ಇಟ್ಟುಕೊಳ್ಳುವ ಅಧಿಕಾರ ಕಳೆದುಕೊಂಡು ಬಿಟ್ಟಳು!! ಹಾಗೆ ಇಟ್ಟ ಕೂಡಲೇ ತಲೆ ನೋವಾ, ಅಯ್ಯೋ ತಲೆ ನೋವಾ ಅಂತ ಬಾಯಿ ಬಡಿದುಕೊಳ್ಳಲು ಶುರು ಮಾಡುತ್ತಿದ್ದೆ ನಾನು. ಅಮ್ಮನಿಗೆ ತಲೆನೋವಿಗಿಂತ ದೊಡ್ಡ ತಲೆಬೇನೆಯಾದೆ ನಾನು. ‘ಇಲ್ಲವೇ ತಲೆನೋವಿಲ್ಲ’ ಅಂದರೂ ಬಿಡದೇ ‘ನಿಜ ಹೇಳು, ನಿಜ ಹೇಳು’ ಅಂತ ಪ್ರಾಣ ತಿನ್ನುತ್ತಿದ್ದೆ. ಅವಳೂ ಕೇಳಿ ಕೇಳಿ ಸಾಕಾಗಿ ‘ನನ್ನಾಣೆಗೂ ಇಲ್ಲ’ ಅನ್ನುತ್ತಿದ್ದಳು. ನಾನು ಆಣೆ ಮಾಡ್ತಿದ್ದಾಳೆ ಅಂದರೆ ಅದು ಸತ್ಯವೇ ಅಂತ ನಂಬಿ ನೆಮ್ಮದಿಯಾಗುತ್ತಿದ್ದೆ. ಅದಾಗಿ ಒಂದಿಪ್ಪತ್ತು ವರ್ಷಗಳೇ ಕಳೆದ ಮೇಲೆ ಒಂದಿನ ‘ನೀನು ಆಣೆ ಮಾಡಿದಾಗಲೇ ನನಗೆ ನೆಮ್ಮದಿ ಆಗ್ತಿದ್ದು ಕಣೇ ಅಂದರೆ ‘ಅಯ್ಯೋ ಬೇಕಾದಷ್ಟು ಸಲ ಸುಳ್ಳು ಹೇಳಿರ್ತಿದ್ದೆ ’ ಅಂದಳು!! ನಾನು ‘ಅಯ್ಯೋ ರಾಮ ಮತ್ತೆ ಆಣೆ ಹಾಕ್ತಿದ್ಯಲ್ಲೇ’ ಅಂತ ಕಣ್ಣು ಕಣ್ಣು ಬಿಟ್ಟರೆ ‘ಅಯ್ಯೋ ಹೋಗೇ! ನೀನು ತಲೆ ತಿನ್ತಿದ್ಯಲ್ಲ, ಅದಕ್ಕಿಂತ ಆಣೇನೇ ವಾಸಿ ಅನ್ನಿಸ್ತಿತ್ತು’ ಅಂದಳು ಕೂಲಾಗಿ!!
ನನ್ನಮ್ಮ ಈ ವಯಸ್ಸಿನಲ್ಲೂ ರಾತ್ರೋ ರಾತ್ರಿ ನಡೆಯುವ ಕ್ರಿಕೆಟ್ ಮ್ಯಾಚ್‌ಗಳನ್ನು ನೋಡುತ್ತಾಳೆ. ವಿಂಬಲ್ಡನ್, US ಓಪನ್ ಎಲ್ಲ ಟೆನ್ನಿಸ್ ಮ್ಯಾಚುಗಳನ್ನೂ ಟಿವಿಯ ಒಳಕ್ಕೇ ಹೋಗುತ್ತಾಳೇನೋ ಅನ್ನುವಷ್ಟು ಮುಂದಕ್ಕೆ ಛೇರ್ ಹಾಕಿ ಕೂತು ನೋಡುತ್ತಾಳೆ. ಜೀವವನ್ನೇ ಪಣಕ್ಕಿಟ್ಟವಳಂತೆ ಆಟಗಾರರನ್ನು ಕಮಾನ್!!! ಎಂದು ಹುರಿದುಂಬಿಸುತ್ತಾಳೆ. ನನ್ನ ಅಪ್ಪ ಅಮ್ಮನನ್ನು ರೇಗಿಸಲು ‘ನೀನು ವಿಂಬಲ್ಡನ್ ಛಾಂಪಿಯನ್ ಆಗಿದ್ಯಲ್ಲ, ಆಗ ಹೀಗೆ ಆಗಿರ್ಲಿಲ್ಲ ಅಲ್ವಾ’ ಅನ್ನುತ್ತಾರೆ! ಅಮ್ಮ ‘ಉಶ್! ನೋರು ಮೂಸ್ಕೊಂಡು ಕೂಸ್ಕೋ’ ಅಂತ ಮಕ್ಕಳನ್ನು ಗದರಿಸುವ ಹಾಗೆ ಗದರಿ ಮತ್ತೆ ಮ್ಯಾಚಿನಲ್ಲಿ ಮುಳುಗುತ್ತಾಳೆ. ಟಿವಿ ಸೀರಿಯಲ್ ನೋಡುವಾಗ ಟಿ ಎನ್ ಸೀತಾರಾಮ್ ಸರ್ ಅವರ ಸೀರಿಯಲ್ ಒಂದು ಬಿಟ್ಟು ಮತ್ತೆಲ್ಲ ನೋಡುವಾಗಲೂ ‘ಅಯ್ಯೋ ಥೂ! ಬರೀ ಬಂಡಲ್ ಕಥೆ’ ಅನ್ನುತ್ತಲೇ ವರ್ಷಗಟ್ಟಳೆ ನೋಡುತ್ತಾಳೆ. ‘ಮತ್ತೆ ಯಾಕೆ ನೋಡ್ತಿ, ಬಿಟ್ಟು ಇರು’ ಅನ್ನುತ್ತೀನಿ ನಾನು … ಅವಳು ಮೌನವಾಗಿರುತ್ತಾಳೆ ಮತ್ತು ಸುಖವಾಗಿ ಬದುಕುತ್ತಾಳೆ.
ಕಾರ್ಡ್ಸ್‌ ಆಟ ಅವಳು ಆಡುವುದನ್ನು ನೋಡಬೇಕು … ಎಂಥ ಅದ್ಭುತ ಕಲೆಗಾರ್ತಿ ಗೊತ್ತಾ! ಶೋ ಆಗುತ್ತದೆ ಅಂತಲೇ ಗೊತ್ತಾಗಿರದ ನಾವು ನೋಡುತ್ತಿದ್ದರೆ ಟ್ರಿಪ್ಲೆಟ್‌ಗಳನ್ನು ಒಡೆದು, ಸೀಕ್ವೆನ್ಸ್‌ಗಳನ್ನು ಒಡೆದು ಕ್ಷಣ ಮಾತ್ರದಲ್ಲಿ re arrange ಮಾಡಿ ಛಕ್ಕಂತ ಶೋ ಮಾಡುವ ಸ್ಟೈಲ್ ನೋಡಬೇಕು … you must see it to believe it! ಅಪ್ಪ-ಅಮ್ಮ ಒಂದಿಪ್ಪತ್ತೈದು ದೇಶಗಳನ್ನು ಸುತ್ತಿದ್ದಾರೆ. ಲಡಾಕ್‌ನ ಆ ರಸ್ತೆಗಳಲ್ಲೂ ಹೋದ ವರ್ಷ ಪ್ರವಾಸ ಮಾಡಿ ಬಂದರು ಇಬ್ಬರೂ. ಈ ಜೀವನಪ್ರೀತಿಯೇ ಬಹುಶಃ ನನ್ನನ್ನು ನನ್ನೆಲ್ಲ ಕಷ್ಟದ ಸಂದರ್ಭಗಳಲ್ಲೂ ಬದುಕಿನೆಡೆಗೆ ಮತ್ತೆ ಮುಖ ಮಾಡುವಂತೆ ಪ್ರೇರೇಪಿಸುತ್ತದೋ ಏನೋ!
ಅವಳಿಗೆ ನನ್ನ ಬಗ್ಗೆ ಕೆಲವು ತಕರಾರುಗಳಿವೆ ಅನ್ನುವುದು ನನಗೆ ಗೊತ್ತು. ನಾನು ದೇವರ ಪೂಜೆ ಮಾಡುವುದಿಲ್ಲ ಅನ್ನುವುದು ಅವಳಿಗೆ ತುಂಬ ಬೇಜಾರಿನ ವಿಷಯ ಅನ್ನುವುದು ನನಗರಿವಿದೆ. ದೊಡ್ಡ ದೊಡ್ಡ ಹಬ್ಬಗಳಲ್ಲಾದರೂ ಅವಳೊಡನೆ ಎಲ್ಲ rituals ನಲ್ಲೂ ಭಾಗಿಯಾಗಲಿ ಅನ್ನುವ ಆಸೆಗೆ ನಾನು ತಣ್ಣೀರೆರಚುತ್ತೇನೆ ಪಾಪ. ನಾನು ತಲೆಹರಟೆ ಅನ್ನುವುದೊಂದು ಬೇಸರವೂ ಇದೆ. ಚೌತಿ ಚಂದ್ರನನ್ನು ಬೇಡ ಅಂದರೂ ನೋಡ್ತೀನಿ ಅಂತೆಲ್ಲ ನನ್ನ ಮೇಲೆ ಸಿಟ್ಟಿದೆ. ಅದೆಲ್ಲ ಏನೇ ಇದ್ದರೂ ಕಷ್ಟ ಅಂದರೆ ಎಲ್ಲ ಕೆಲಸ ಬಿಸಾಕಿ ಓಡಿ ಬರುತ್ತಾಳೆ, ನೋಡಿಕೊಳ್ಳುತ್ತಾಳೆ, ನಾನಿದ್ದೀನಿ ಸುಮ್ಮನಿರು ಅಂತ ಅಭಯ ನೀಡುತ್ತಾಳೆ, ನಾನು ಹರಕೆ ಅಂತೆಲ್ಲ ಕಟ್ಟಿಕೊಂಡರೆ ತೀರಿಸುವವಳಲ್ಲ ಅಂತ ಗೊತ್ತಿರುವುದರಿಂದ ತಾನೇ ಬಂದು ಸೇವೆ ಮಾಡುತ್ತೇನೆ ಅಂತ ದೇವರೊಡನೆ ಸಂಧಾನ ಮಾಡಿಕೊಳ್ಳುತ್ತಾಳೆ, ನಾನು ನಾಟಕ ಮುಗಿಸಿ ಮನೆಗೆ ಬರುವವರೆಗೆ ನಿದ್ದೆ ಮಾಡದೇ, ನಾನು ಮನೆ ತಲುಪಿದೆ ಅಂತ ಹೇಳಿದ ಮೇಲೆ ಸುಖ ನಿದ್ದೆಗಿಳಿಯುತ್ತಾಳೆ. ಓ ಕಾದಲ್ ಕಣ್ಮಣಿ ಸಿನೆಮಾ ನೋಡಬೇಕು, ಟಿಕೆಟ್ ಬುಕ್ ಮಾಡಿಸಿಕೊಡು ಅನ್ನುತ್ತಾಳೆ ….
ಅಪ್ಪನ ಪ್ರೀತಿಯಲ್ಲೇ ಮುಳುಗಿಹೋದ ನಾನು ಅವಳನ್ನು ಇನ್ನಿಷ್ಟು ಪ್ರೀತಿಸಬೇಕಿತ್ತು ಅಂತ ಅನ್ನಿಸುತ್ತದೆ ಇತ್ತೀಚೆಗೆ. ಅದಕ್ಕೇ ಪ್ರಾಯಶ್ಚಿತ್ತ ಮಾಡಿಕೊಳುವವಳಂತೆ ನನಗೆ ನಂಬಿಕೆ ಇಲ್ಲದಿದ್ದರೂ ಅವಳಿಗಾಗಿ ಮೊದಲ ವರ್ಷ ಅವಳ ತಿಥಿ ಮಾಡುತ್ತೇನೆ ಅಂತ ಪ್ರಾಮಿಸ್ ಮಾಡಿದ್ದೇನೆ. ಅವಳು ಉಪದೇಶ ನೀಡುವಾಗ ಮೊದಲಿನಂತೆ ರೇಗದೇ ಸಹಿಸಿಕೊಳ್ಳುತ್ತೇನೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚು ಪ್ರೀತಿಸಲು ಶುರು ಮಾಡಿದ್ದೇನೆ. ಅವಳೂ ಕೂಡ ಆಗಾಗ ನನ್ನ ಮಾತು ಕೇಳಲು ಶುರು ಮಾಡಿದ್ದಾಳೆ! ಕಣ್ಣು ದಾನ ಮಾಡು ಅಂದರೆ ಒಂದು ಕಣ್ಣು ಮಾತ್ರ ಅನ್ನುತ್ತಿದ್ದಳು ಸದಾ. ನಾನು ಒಂದು ದಿನ ಅದಕ್ಕೆ ಕಾರಣ ಕೇಳಿದರೆ- ಅಯ್ಯೋ, ಸ್ವರ್ಗ ನೋಡಕ್ಕೆ ಸಾಧ್ಯವಾಗೋದಾದರೆ ಒಂದು ಕಣ್ಣಾದ್ರೂ ಇರಲಿ ಅಂತ ಕಣೇ ಅನ್ನುತ್ತಿದ್ದಳು! ನಾನು ಸುಮಾರು ವರ್ಷಗಳಿಂದ – ಅವೆಲ್ಲ ನಾನ್ಸೆನ್ಸ್ ಅಮ್ಮ, ಸತ್ತ ಮೇಲೆ ಸುಟ್ಟು ಹಾಕ್ತಾರೆ, ಯಾವ ಕಣ್ಣು, ಯಾವ ಸ್ವರ್ಗ ಅಂತ ಬಯ್ಯುತ್ತಿದ್ದೆ. ಮೊನ್ನೆ ಯಾವತ್ತೋ ಎರಡೂ ಕಣ್ಣೂ ದಾನ ಮಾಡಿದೀನಿ ಅಂದಳು.
ಅಮ್ಮನಿಗೊಂದು ಮೆಸೇಜ್: ಹೇಗೂ ಒಬ್ಬರಿಗೊಬ್ಬರು ಅಡ್ಜಸ್ಟ್ ಆಗೋಗಿದೀವಿ ಅಲ್ವಾ?
ಮುಂದಿನ ಜನ್ಮ ಅನ್ನೋದು ಇದ್ದರೆ ನಾವಿಬ್ರೇ ಅಮ್ಮ-ಮಕ್ಕಳಾಗೋಣ …
ಹ್ಯಾಪಿ ಮದರ್ಸ್ ಡೇ ಅಮ್ಮಾ!
ಹ್ಯಾಪಿ 53 ನೆಯ ಆನಿವರ್ಸರಿ ಕೂಡಾ ….
 

‍ಲೇಖಕರು G

May 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. Anuradha.B.Rao

    ಅದೆಷ್ಟು ಚೆನ್ನಾಗಿ ಅಮ್ಮನ ಬಗ್ಗೆ ಬರೆದಿದ್ದೀಯ ಭಾರತಿ . ನನ್ನ ಅಮ್ಮನ ಬಗ್ಗೆನೂ ತುಂಬಾ ಬರೀಬೇಕು ಅನ್ನಿಸತ್ತೆ ಕಣೆ . ನನ್ನ ಮನಸ್ಸಿನ ತುಂಬಾ ನನ್ನಮ್ಮ ತುಂಬಿಕೊಂಡಿದ್ದಾರೆ . ಕೆಲವು ಸಲ ಅಮ್ಮನ ಆರೋಗ್ಯ ಸರಿಯಿಲ್ಲದಾಗ ಬೈದದ್ದು ಉಂಟು . ಈಗ ನೆನಸಿಕೊಂಡರೆ ಬೇಜಾರಾಗುತ್ತದೆ . ಅಮ್ಮ ಯಾರನ್ನೂ ನೋಯಿಸಿದವಳಲ್ಲ .. ಅಪ್ಪ ಸತ್ತಾಗ ಸ್ಮಶಾನದಲ್ಲಿ ಬೆಂಕಿ ಉರಿಯುತ್ತಿದ್ದಂತೆ ದೂರದ ನೆಂಟರೊಬ್ಬಳು ಅಮ್ಮನ ಬಳೆಗಳನ್ನು ಒಡೆ ದಿದ್ದಳು .. ನನಗೆ ಎಲ್ಲಿಲ್ಲದ ಸಿಟ್ಟು ಬಂದಿತ್ತು . ನೀನು ಯಾಕೆ ಕೈ ನೀಡಿದೆ ಅಮ್ಮ ಅಂತ ಕೇಳಿದರೆ .. ಅವಳಿಗೆ ಸಮಾಧಾನವಾಯಿತಲ್ಲ ಬಿಡು ಅಂದಿದ್ದರು . Flash Back ಅಂತಾರಲ್ಲ .. ಹಾಗೇನಾದರೂ ಆಗುವುದಿದ್ದಲ್ಲಿ .. ನನಗೆ ಬೇಕಿತ್ತು ಅಮ್ಮನೊಡನೆ ಕಳೆಯುವ ಮತ್ತಷ್ಟು ಸಮಯ ..

    ಪ್ರತಿಕ್ರಿಯೆ
  2. umavallish

    ಭಾರತಿ ನಿನ್ನ ಅಮ್ಮ ನನಗೆ ತಿಳಿದ ”ಸ್ಮಾರ್ಟ್ ಬೇಬೀ” ಬಗ್ಗೆ ಇನ್ನೂ ತುಂಬಾ ವಿಷ್ಯ ತಿಳಿಸಿದ್ದೀಯಾ. ಮೈಸೂರಿಗೆ ದೊಡ್ಡಮ್ಮ ಮನೆಗೆ ಬಂದಾಗಲೆಲ್ಲ ಮಾತನಾಡುವಾಗೆಲ್ಲ ಅವರ ನಗು ಮುಖದ ಮಾತು,ಎಷ್ಟು ಚೆನ್ನಾಗಿ ಡ್ರೆಸ್ ಮಾಡಿಕೊಳ್ತಾರೆ ಎಂದು ಒಳಗೊಳಗೇ ಇಷ್ಟ ಪಡ್ತಿದ್ದೆ.ಅವರ ”ಕಾರ್ಡ್ಸ್” ಪ್ರೇಮ ತಿಳಿದಿತ್ತು.ಇನ್ನು ದೊಡ್ಡಮ್ಮ ನಿನ್ನ ಅಮ್ಮನ ಬಗ್ಗೆ ನನ್ನ ಬಳಿ ಸದಾ ಹೊಗಳುತ್ತಿದ್ದರು. ಈಗ,ನೀನು ಚೆನ್ನಾಗಿ ಬರೆದಿದ್ದೀಯ. ನನ್ನ ಕಣ್ಣ ಮುಂದೆ ಬೇಬೀ ಬಂದ ಹಾಗೆ ವರ್ಣಿಸಿದ್ದೀಯ. ಚೆನ್ನಾಗಿದೆ ಭಾರತಿ ನಿನ್ನ ಲೇಖನ.

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ಲೇಖನ ಚೆನ್ನಾಗಿದೆ ಮೇಡಂ.

    ಪ್ರತಿಕ್ರಿಯೆ
  4. Karki Krishnamurthy

    ಚೆನ್ನಾಗಿದೆ ಲೇಖನ; ಇಷ್ಟ ಆಯ್ತು

    ಪ್ರತಿಕ್ರಿಯೆ
  5. ಅಮರದೀಪ್.ಪಿ.ಎಸ್.

    ಮಸ್ತ್ ಇದೆ ಮೇಡಂ, ನಿಮ್ಮ ಅಮ್ಮನವರ ಜೀವನ ಪ್ರೀತಿ, ಉತ್ಸಾಹದ ಬಗ್ಗೆ ಬರೆದ ಬರಹ. ನನ್ನಕ್ಕನನ್ನೂ ಕೂಡ ಚಿಕ್ಕವಳಿದ್ದಾಗ ಬೇಬಿ ಅಂತಿದ್ರು, ಆಕೆಗೀಗ ಇಪ್ಪತ್ತೆರಡು ವಯಸ್ಸಿನ ಮಕ್ಕಳಿದ್ದಾರೆ. ಈಗ ಬೇಬಿ ಆಂಟಿ, ಮಗಳು ಪಿಯೂ… ಇನ್ನೊಂದೆರಡು ವರ್ಷಗಳಲ್ಲಿ ಓದು ಮುಗಿದು ಮದ್ವೆ ಮಾಡಿ, ಆಕೆಗೆ ಮಕ್ಕಳಾದರೆ, ಆಗ್ಲೇ ಬೇಬಿ ಅಜ್ಜಿ……ನೆನಸ್ಕೊಂಡ್ರೆ ನಗು ಬರುತ್ತೆ. ಆಕೆ ನನಗಿಂತ ಕೇವಲ ಒಂದೂವರೆ ವರ್ಷ ದೊಡ್ಡವಳಷ್ಟೇ….

    ಪ್ರತಿಕ್ರಿಯೆ
  6. Anonymous

    supppper……. last last line ooduvaaga gotthilde kannal neeritthu … ondu adbutha noodidaaga mai jumm annutthala aa anubhavavaaayitu………………………. love you amma……….

    ಪ್ರತಿಕ್ರಿಯೆ
  7. chethan

    suuuppppper adbutha… koneya saalugalannu oodutthiruvaaga gotthillade kannanchali neerina anubhava…. adbutavaadannu noodiaaga mainavirelutthalla aa anubhavavaayitu……………………..loved it madm….. amma avalendu badalaagalla kaala este badalaadaru… yaavatthu avalene tindaru adarallina ondu tutthu namage kandita meesalu……………………

    ಪ್ರತಿಕ್ರಿಯೆ
  8. Kusuma

    lekhana tumba chenagide madam..nimma amma super…avara jeevana preeti tumba ista aytu..:)

    ಪ್ರತಿಕ್ರಿಯೆ
  9. ಲಕ್ಷ್ಮೀಕಾಂತ ಇಟ್ನಾಳ

    ಡೌನ್ ದಿ ಮೆಮೆರಿ ಲೇನ್, ಅಮ್ಮನ ಕುರಿತ ನೆನಪುಗಳು ತುಂಬ ಚನ್ನಾಗಿ ರೂಪ ಪಡೆದು, ಒಂದು ರೀತಿಯ ಬೆಚ್ಚನೆಯ ಭಾವವನ್ನು ಅಂಕುರಿಸುತ್ತವೆ. ಚನ್ನಾದ ಬರಹ ಭಾರತೀ ಜಿ.

    ಪ್ರತಿಕ್ರಿಯೆ
  10. umasekhar

    estu chennagi barediddeya bharathi. Thumba khushi ayitu. Ninna ammana adamya utsaha lavalavike jeevana preeti sanna vishayakku santhosha paduva guna ishta ayitu. heege barita iru. Mugisuva munna ninna amma appanige happy anniversery.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: