ಆಹಾ! ಎಂಥಾ ಕುಬ್ಜರಯ್ಯಾ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ

ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸುಮಾರು ಕಡೆ ಸೈಕಲ್ ಸವಾರರಿಗೆ ಬೇರೆಯದೇ ಆದ ಲೇನ್ ಕೂಡಾ ಇತ್ತು. ಇದ್ದಕ್ಕಿದ್ದಂತೆ ಆ ಪ್ರಶಾಂತ ವಾತಾವರಣದಲ್ಲಿ ಆಂಬ್ಯುಲೆನ್ಸ್ ಒಂದರ ಸೈರನ್ ಕೂಗಲಾರಂಭಿಸಿತು. ‘ಓಹ್ ಈಗೇನು ಮಾಡಬಹುದು? ನಮ್ಮೂರ ವಾಹನ ಸವಾರರ ರೀತಿ ಅದೇ ನೆಪದಲ್ಲಿ ತಾವೂ ಸಿಗ್ನಲ್ ಜಂಪ್ ಮಾಡುತ್ತಾರಾ ಅಂತ ಕುತೂಹಲದಿಂದ ನೋಡುವಾಗಲೇ ನಮ್ಮ ಮುಂದಿದ್ದ ಕಾರುಗಳು ತುಸುವೇ ಎತ್ತರಕ್ಕಿದ್ದ ಫುಟ್ ಪಾತ್‌ನ ಮೇಲೆ ಹತ್ತಲು ಶುರು ಮಾಡಿದವು! ನೋಡನೋಡುತ್ತಿದ್ದಂತೆ ಆನ್ಯಾ ಕೂಡಾ ನಮ್ಮ ವಾಹನವನ್ನು ಕೇರಾಫ್ ಫುಟ್ ಪಾತ್ ಮಾಡಿದಳು.

ಇದೆಲ್ಲ ಹಲವು ಸೆಕೆಂಡ್‌ಗಳಲ್ಲಿ ಮುಗಿದು, ಆಂಬ್ಯುಲೆನ್ಸ್ ನಮ್ಮ ನಡುವಿನಿಂದ ದಾರಿ ಮಾಡಿಕೊಂಡು ಸಾಗಿಹೋದ ನಂತರ ನಾವು ಮತ್ತೆ ಕೇರಾಫ್ ರಸ್ತೆ ಆದೆವು. ಮತ್ತೆ ಎಂದಿನಂತೆ ಸರಾಗವಾಗಿ ವಾಹನ ಸಂಚಾರ ಶುರುವಾಯಿತು. ಇದೆಲ್ಲ ರೂಲ್‌ಗಳನ್ನು ಪಾಲಿಸುವುದು ಕಾನೂನಿನ ಭಯಕ್ಕೋ, ಅಥವಾ ಜನರ ಮನಸ್ಥಿತಿಯೇ ಹಾಗೋ ಅರ್ಥವಾಗಲಿಲ್ಲ. ಊರಿಗೆ ಬಂದ ಮೇಲೆ ಹೀಗಾಯಿತು ಅಲ್ಲಿ ಎಂದು ಒಂದು ಪೋಸ್ಟ್ ಹಾಕಿದೆ ಫೇಸ್‌ಬುಕ್‌ನಲ್ಲಿ.

ಅದಕ್ಕೆ – ನಮ್ಮ ದೇಶದಲ್ಲಾದರೆ ಮೊದಲು ಅಲ್ಲಿ ಫುಟ್ ಪಾತ್ ಇರಬೇಕಲ್ಲ ಸರಿ ಗಾಡಿ ಹತ್ತಿಸಕ್ಕೆ ಮೊದಲು ಪಾನಿಪೂರಿ ಗಾಡಿಯವರ ಪರ್ಮಿಷನ್ ತಗೋಬೇಕಾ ಅದು ಸರಿ, ಆಗಲೇ ನಿಂತಿರುವ ಗಾಡಿಗಳನ್ನೇನು ಮಾಡೋದು ಒಂದ್ಸಲ ಫುಟ್ ಪಾತ್ ಮೇಲೆ ನಿಂತಿದ್ದಾಗ ಬೈಕ್ ಸವಾರ ಒಬ್ಬ ಫುಟ್ ಪಾತ್ ಹತ್ತಿಸಿ, ಗಾಡಿ ಬರ್ತಿರೋದು ನಿಮ್ ಕಣ್ಗೆ ಕಾಣಲ್ವಾ ಹಾಗೇ ನಿಂತಿದೀ ಅಂತ ನನ್ನನ್ನೇ ಬಯ್ದು ಹೋಗಿದ್ದ ನಾವು ಆಂಬ್ಯುಲೆನ್ಸ್ ಬರದೇ ಇದ್ರೂ ಫುಟ್ ಪಾತ್ ಹತ್ತಿಸ್ತೀವಿ ನಮ್ಮೂರಲ್ಲಿ ಗಾಡಿ ಫುಟ್ ಪಾತ್ ಹತ್ತಿಸಿ, ಅಲ್ಲಿ ನಡ್ಕೊಂಡು ಹೋಗ್ತಿರೋರನ್ನೂ ಆಂಬ್ಯುಲೆನ್ಸ್ ಎತ್ತಾಕೊಂಡು ಹೋಗೋ ಹಾಗೆ ಮಾಡ್ತಾರೆ ನಮ್ಮೂರಲ್ಲೂ ಫುಟ್ ಪಾತ್ ಹತ್ತಿಸ್ತಾರೆ ಕುಡಿದು ಗಾಡಿ ಓಡಿಸುವಾಗ… ಹೀಗೆ ಥರಾವರಿ ತಮಾಷೆಯ ಕಾಮೆಂಟ್‌ಗಳು ಬಂದವು!

ತಮಾಷೆಯೊಂದು ಅತ್ತ ಕಡೆಗಿರಲಿ, ಆದರೆ ನಿಜಕ್ಕೂ ಪಾದಚಾರಿಗಳಿಗೆ ಮರ್ಯಾದೆ ಕೊಡುವುದನ್ನು ಕಂಡರೆ ಮಾತ್ರ ತುಂಬ ಖುಷಿಯಾಗುತ್ತದೆ.

ಪಾದಚಾರಿಗಳಿಗೆ ಮರ್ಯಾದೆ ಅನ್ನುವ ವಿಷಯ ಬಂದಾಗ ಮತ್ತೊಂದು ವಿಷಯ ನೆನಪಾಯಿತು… ಭಾರತ ಲೆಫ್ಟ್ ಹ್ಯಾಂಡ್ ಡ್ರೈವ್ ದೇಶವಲ್ಲವಾ? ಹಾಗಾಗಿ ನಾವು ರಸ್ತೆ ಕ್ರಾಸ್ ಮಾಡುವಾಗ ಮೊದಲು ಬಲಕ್ಕೆ ನೋಡಿ ನಂತರ ಎಡಕ್ಕೆ ನೋಡಿ ಮತ್ತೆ ಬಲಕ್ಕೆ ನೋಡಿ ರಸ್ತೆ ಕ್ರಾಸ್ ಮಾಡುವ ಅಭ್ಯಾಸದವರು. ಆದರೆ ಜಗತ್ತಿನ ಕೆಲವೇ ಕೆಲವು ದೇಶಗಳನ್ನು ಬಿಟ್ಟರೆ ಉಳಿದೆಲ್ಲ ಕಡೆ ಅದು ರೈಟ್ ಹ್ಯಾಂಡ್ ಡ್ರೈವ್ ಆಗಿರುತ್ತದೆ. ಹಾಗಾಗಿ ಇಲ್ಲಿ ಏನೇನು ಮಾಡುತ್ತೇವೋ ಅದರ ಉಲ್ಟಾ ಅಲ್ಲಿ ಮಾಡಬೇಕು. ಇಲ್ಲಿನ ಪದ್ದತಿಗೆ ಒಗ್ಗಿಹೋದ ಮನಸ್ಸಿಗೆ
ಇದ್ದಕ್ಕಿದ್ದಂತೆ ಬದಲಾಗುವುದು ಕಷ್ಟದ ಮಾತೇ. ಹಾಗಾಗಿ ಒದ್ದಾಡಿಕೊಂಡು ರಸ್ತೆ ಕ್ರಾಸ್ ಮಾಡುವಾಗ ಎಷ್ಟೇ ನೆನಪಿಟ್ಟುಕೊಂಡರೂ ನಮ್ಮ ದೇಶದ ರೀತಿಯೇ ಬಲಕ್ಕೆ ನೋಡಿ ಕ್ರಾಸ್
ಮಾಡಿಬಿಡುತ್ತೇನೆ.

ಸುಮಾರು ಸಲ ಹಾಗೆ ರಸ್ತೆ ಕ್ರಾಸ್ ಮಾಡುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಕ್ರೀಈಈಈಚ್ ಶಬ್ದ ಬರುತ್ತದೆ. ಆಗ ಎಚ್ಚೆತ್ತು ಗಾಭರಿಯಿಂದ ನೋಡಿದರೆ
ಒಂದು ವಾಹನ ನನಗೆ ಗುದ್ದರಿಸದಂತೆ ತಡೆಯಲು ಬಲವಾಗಿ ಬ್ರೇಕ್ ಹಾಕಿರುತ್ತದೆ. ನಾನು ತಪ್ಪು ಮಾಡಿರುತ್ತೇನಾದ್ದರಿಂದ ಈಗ ಕಾರಿನಿಂದ ತಲೆಯೊಂದು ಈಚೆ ಬಂದು ‘ಏಯ್ ಮನೇಲಿ ಹೇಳಿಬಂದಿದೀಯಾ ಹೇಗೆ? ಸಾಯಕ್ಕೆ ನನ್ನ ಕಾರೇ ಬೇಕಾ ನಿನಗೆ? ನಿಮ್ಮಂಥೋರೆಲ್ಲ ಮನೆ ಬಿಟ್ಟು ಯಾಕೆ ಬರ್ತೀರಿ?’ ಎಂಬ ನುಡಿಮುತ್ತುಗಳು ಉದುರುತ್ತವೆ ಎಂದು ಕಾದರೆ ಒಂದು ಶಬ್ದವೂ ಇಲ್ಲ!

ಅರೆರೆ ಇದೇನು ಕತೆ ಅಂತ ಆಶ್ಚರ್ಯದಿಂದ ತಲೆ ಎತ್ತಿ ನೋಡಿದರೆ ಸಾರಥಿ ರಸ್ತೆ ಕ್ರಾಸ್ ಮಾಡು ಎಂಬಂತೆ ಕೈ ಸನ್ನೆ ಮಾಡುತ್ತಾರೆ. ನನಗಂತೂ ಅವರು ನಿಜಕ್ಕೂ ಹೇಳುತ್ತಿದ್ದಾರಾ, ಇಲ್ಲವೇ ಬಯ್ಯುತ್ತಿದ್ದಾರಾ ಅಂತ ಕೂಡಾ ಸರಿಯಾಗಿ ಅರ್ಥವಾಗುವುದಿಲ್ಲ. ಆದರೆ ಅವರು ಒಂದಿಷ್ಟೂ ಆತುರ ಮಾಡದೇ ಮತ್ತೆ ಹಾಗೆಯೇ ನಿಲ್ಲಿಸಿ
ನಾವು ರಸ್ತೆ ದಾಟಲೆಂದು ಕಾಯುವಾಗ ಆನಂದಕ್ಕೆ ಬವಳಿ ಬರುವುದೊಂದು ಬಾಕಿ!

ಎಷ್ಟೋ ದೇಶಗಳಲ್ಲಿ ಪಾದಚಾರಿಗಳು ರಸ್ತೆ ದಾಟುವ ಸಿಗ್ನಲ್ ಇಲ್ಲದಿದ್ದರೆ ಸಿಗ್ನಲ್ ಕಂಭದ ಮೇಲಿನ ಒಂದು ಗುಂಡಿ ಒತ್ತಿ ಆರಾಮವಾಗಿ ರಸ್ತೆ ಕ್ರಾಸ್ ಮಾಡುತ್ತಾರೆ. ವಾಕಿಂಗ್ ಹೋದಾಗ ರಸ್ತೆ ದಾಟುವುದು ಎರಡು ಕ್ಷಣ ತಡವಾದರೆ ಜೀವ ಹೋದಂತೆ ಪೇ ಪೇ ಪೇ ಅಂತ ಹಾರ್ನ್ ಒತ್ತುವುದನ್ನು ಕೇಳಿ ಉರಿದುಕೊಳ್ಳುವ ನನಗೆ ಇಷ್ಟೆಲ್ಲ ರಾಜಮರ್ಯಾದೆ ಕಂಡರೆ ಭೂಮಿಯ ಮೇಲೆ ಇದ್ದೀನಾ, ಇಲ್ಲವೇ ಅವರು ಬ್ರೇಕ್ ಹಾಕಿದಾಗ ಸ್ವರ್ಗ ಸೇರಿಬಿಟ್ಟು, ಅಲ್ಲಿ ಕನಸು ಕಾಣುತ್ತಿದ್ದೇನಾ ಎಂದೆಲ್ಲ ಅನುಮಾನ ಶುರುವಾಗಿ ಬಿಡುತ್ತದೆ.

ಈಗ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಾಗಲೂ ಅದೇ ರೀತಿಯ ಖುಷಿಯ ಭಾವ ಮನಸ್ಸಿನಲ್ಲಿ. ಒಂದೋ ಅಲ್ಲಿನ ರೂಲ್‌ಗಳೇ ಬಹಳ ಕಠಿಣವಿರಬೇಕು, ಇಲ್ಲವಾದರೆ ಮನುಷ್ಯ ಜೀವಕ್ಕೆ ಆ ಪರಿ ಗೌರವ ಕೊಡುವವರಾಗಿರಬೇಕು… ಯಾವುದೇ ಆದರೂ ಒಳ್ಳೆಯದೇ ಅಲ್ಲವಾ?

ಅಲ್ಲಿಂದ ಆನ್ಯಾ ನಮ್ಮನ್ನು ಓಲ್ಡ್ ಮಾರ್ಕೆಟ್ ಸ್ಕ್ವೇರ್ ಬಳಿ ಕರೆದೊಯ್ದಳು. ಯುರೋಪಿಯನ್ ದೇಶಗಳಲ್ಲಿನ ಊರುಗಳಲ್ಲಿ ಈ ಓಲ್ಡ್ ಮಾರ್ಕೆಟ್ ಸ್ಕ್ವೇರ್ ಅನ್ನುವ ಸ್ಥಳದಷ್ಟು happening place ಮತ್ತೊಂದಿಲ್ಲ. ಸಾಧಾರಣವಾಗಿ ಆ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ಹಾಗಾಗಿ ಮಕ್ಕಳಿಗಂತೂ ಅದು ಒಂದು ರೀತಿಯಲ್ಲಿ
ಸ್ವರ್ಗ. ಒಂದೆಡೆ ಯಾರೋ ಗಿಟಾರ್ ನುಡಿಸುತ್ತಾ ಹಾಡುತ್ತಿರುತ್ತಾರೆ, ಮತ್ತೊಂದು ಕಡೆ ಯಾರೋ ನರ್ತಿಸುತ್ತಿರುತ್ತಾರೆ, ಮತ್ತೊಂದೆಡೆ ಮ್ಯಾಜಿಕ್ ಶೋ, ಅಲ್ಲೇ ಎಲ್ಲೋ ಸೋಪಿನ್
ಬಬಲ್ ಊದಿ ಇಡೀ ವಾತಾವರಣಕ್ಕೆ ಹಾರಿ ಬಿಡುವವರು… ಒಂದು ರೀತಿಯ ಮಾಯಾಲೋಕದಂತಿರುತ್ತದೆ ಆ ಸ್ಥಳ.

ಅಲ್ಲಿ ವಾಹನ ಹೋಗುವಂತಿಲ್ಲವಾದ್ದರಿಂದ ಸ್ವಲ್ಪ ದೂರದಲ್ಲಿದ್ದ ಹೂವಿನ ಅಂಗಡಿಗಳ ಬದಿಯಲ್ಲಿ ನಿಲ್ಲಿಸಿದಳು ಆನ್ಯಾ. ಆ ಹೂವಿನ ಅಂಗಡಿಗಳು ಎಷ್ಟು ಚೆಂದವಿದ್ದವೆಂದರೆ ನೋಡಲು ಎರಡು ಕಣ್ಣು ಯಾತಕ್ಕೂ ಸಾಲದು. ಎಷ್ಟೋ ಪ್ರೇಮಿಗಳು ಪ್ರೊಪೋಸ್ ಮಾಡಲು ಆ ಜಾಗವನ್ನೇ ಆರಿಸಿಕೊಳ್ಳುತ್ತಾರೆ ಎಂದು ನಕ್ಕ ಆನ್ಯಾ, ‘ನಡೆಯಿರಿ ಪಕ್ಕದ ಬೀದಿಯಲ್ಲೊಂದು ಕರೆನ್ಸಿ ಎಕ್ಸ್ಛೇಂಜ್ ಇದೆ. ಬೇಗ ಆ ಕೆಲಸ ಮುಗಿಸುವಾ’ ಎಂದು ಅವಸರಿಸಿದಳು.

ಆ ಚೆಂದದ ಹೂವಿನ ಮಾರ್ಕೆಟ್‌ಗೆ ಅವತ್ತು ನನ್ನ ಅದೃಷ್ಟಕ್ಕೆ ಯಾರಾದರೂ ಪ್ರೇಮಿಗಳು ಬಂದು ಪ್ರೊಪೋಸ್ ಮಾಡಿಕೊಂಡುಬಿಟ್ಟರೆ ಆ ಸಮಯದಲ್ಲಿ ನಾನು ಅಲ್ಲಿಲ್ಲದಿದ್ದರೆ ಹೇಗೆ ಹೇಳಿ! ಹಾಗಾಗಿ ಆ ಕರೆನ್ಸಿಯ ನೀರಸ ಕೆಲಸಕ್ಕೆ ನಾನು ಬರುವುದಿಲ್ಲವೆಂದು ಹೇಳಿ ಅಲ್ಲೇ ನಿಂತೆ. ಮಗನೂ ನನ್ನ ಜೊತೆಗೆ ಉಳಿದ. ಎಂತೆಂಥ ಚೆಲುವಿನ ಹೂಗಳವು! ಇಡೀ ವಾತಾವರಣವೇ ಚೆಲುವಿನಲ್ಲಿ ಮುಳುಗೆದ್ದಂತೆ. ಅಲ್ಲಿಯೇ ಇನ್ನೆರಡು ದಿನ ಉಳಿಯುವಂತಿದ್ದರೆ ಎರಡಾದರೂ ಕಡ್ಡಿ ಕೊಂಡೊಯ್ಯುತ್ತಿದ್ದೆನೇನೋ. ಆದರೆ
ಮರುದಿನ ಹೊರಡಬೇಕೆಂದು ಗೊತ್ತಿದ್ದರಿಂದ ಸುಮ್ಮನೆ ಹೂವಿಗೆ ಕಾಟ ಕೊಡುವುದೇಕೆ ಎಂದು ತೆಪ್ಪಗೆ ಮಾರ್ಕೆಟ್ ಸುತ್ತು ಹಾಕಿದೆವು.

ಹಾಗೇ ಸುತ್ತು ಹಾಕಿ, ಒಂದಿಷ್ಟು ಫೋಟೋ ಸಂಭ್ರಮ ನಡೆಸುವಾಗಲೇ ಸ್ವಲ್ಪ ದೂರದಲ್ಲಿ ಮಾರ್ಕೆಟ್ ಸ್ಕ್ವೇರ್‌ನಲ್ಲಿ ಬೃಹದಾಕಾರದ ಸೋಪಿನ ಗುಳ್ಳೆಗಳನ್ನು ಮಾಡುತ್ತಿದ್ದ
ಹುಡುಗಿ ಕಾಣಿಸಿದಳು! ಈ ಸೋಪಿನ ಗುಳ್ಳೆ ನನ್ನ ಜೀವನದ ಅತಿ ದೊಡ್ಡ ವೀಕ್‌ನೆಸ್‌ಗಳಲ್ಲಿ ಒಂದು. ನಾನು ಚಿಕ್ಕವಳಿರುವಾಗ ಸಿಕ್ಕ ಸಿಕ್ಕ ಸ್ಟ್ರಾಗಳಲ್ಲೆಲ್ಲ ಊದಿ ಊದಿ ಆಗಸದ ತುಂಬ
ಅವುಗಳನ್ನು ಹಾರಿಬಿಟ್ಟು ಮರುಳಾಗುತ್ತಿದ್ದೆ. ನಂತರ ನನ್ನ ಮಗ ಚಿಕ್ಕವನಿರುವಾಗ ಹೊಸ ರೀತಿಯ ರೆಡಿಮೇಡ್ ಬಬಲ್ ಊದುವ ಕೊಳವೆ ಬಂದಿತ್ತು. ಅವನ ನೆಪದಲ್ಲಿ ಎಲ್ಲಿ ಹೋದರೂ ತಂದು ಗುಡ್ಡೆ ಹಾಕಿ ನಾನು ಊದುತ್ತ ಕುಳಿತಿರುತ್ತಿದ್ದೆ. ಇನ್ನು ಮೊಮ್ಮಗುವಿನ ಜೊತೆ
ಊದುವುದೊಂದು ಬಾಕಿ ಇದೆ!

ಇಂಥ ಹುಚ್ಚಿನ ನನಗೆ ಅಷ್ಟು ದೊಡ್ಡ ಗುಳ್ಳೆಗಳನ್ನು ಕಂಡರೆ ಎಂಥ ಥ್ರಿಲ್ ಆಗಿರಬೇಡ! ಅದೂ ಆ ಗುಳ್ಳೆಗಳು ಸಾಧಾರಣಕ್ಕಿಂತ ನೂರಿನ್ನೂರು ಪಟ್ಟು ದೊಡ್ಡದು! ಅದು ಹೇಗೆ ಅಂಥ ದೊಡ್ಡ ಗುಳ್ಳೆ ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ಅತ್ತ ಹೆಜ್ಜೆ ಹಾಕಿದೆವು. ಅಲ್ಲೊಬ್ಬಳು ಹುಡುಗಿ ದೊಡ್ಡ ಸ್ಕಿಪ್ಪಿಂಗ್ ಹಗ್ಗದಂಥದ್ದನ್ನು ಒಂದು ಕೋಲಿಗೆ ಕಟ್ಟಿ ಎತ್ತಿ ಗಾಳಿಯಲ್ಲಿ ಚಾವಟಿ ಬೀಸಿದಂತೆ ಬೀಸುತ್ತ ಬೃಹದಾಕಾರದ ಗುಳ್ಳೆಗಳನ್ನು ಮಾಡುತ್ತಿದ್ದಳು. ಈ ರೀತಿಯಲ್ಲಿ ಗುಳ್ಳೆ ಮಾಡುವ ವಿಧಾನ ನನಗೆ ಹೊಸತು.

ಬಾಯಿ ಬಿಟ್ಟುಕೊಂಡು ನೋಡುತ್ತಾ ನಿಂತೆ. ಅಂಥ ಒಂದು ರಾಶಿ ಗುಳ್ಳೆಗಳನ್ನು ಆಕಾಶಕ್ಕೆ ಹಾರಿ ಬಿಟ್ಟಾಗ ಸುತ್ತಲಿದ್ದ ಮಕ್ಕಳು ಅದನ್ನು ಹಿಡಿಯಲು ಹಾರುತ್ತಿದ್ದವು. ಇನ್ನೊಂದು
ಪಾಪು ಆ ಭಾರದ ಕೋಲನ್ನು ಹೊರಲಾರದೇ ಹೊತ್ತು ತಾನೂ ಮಾಡಲು ಪ್ರಯತ್ನಿಸುತ್ತಿತ್ತು. ನನಗಂತೂ ಎಲ್ಲವೂ ಸೇರಿ ಅದೊಂದು ಮಾಯಾಲೋಕದ ಹಾಗೆ ಕಂಡಿತು! ಅದರ ಜೊತೆಗೆ ಅಲ್ಲೇ ಕುಳಿತು ಹಾಡುಗಾರನೊಬ್ಬ ಹಾಡುತ್ತಿದ್ದುದು ಆ ವಾತಾವರಣವನ್ನು ಮತ್ತಿಷ್ಟು ಮಾಂತ್ರಿಕಗೊಳಿಸಿತ್ತು. ಆ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿಯುತ್ತ ಮಕ್ಕಳ
ಹಿಂದೆ ಮುಂದೆ ಓಡಾಡುತ್ತಲೇ ಇದ್ದೆ.

ಮನಸ್ಸಿನಲ್ಲಿ ನಾನೂ ಮಾಡಬೇಕು ಆ ಗುಳ್ಳೆಗಳನ್ನು ಎನ್ನುವ ಆಸೆ. ನಾನೂ ಮಾಡುತ್ತೇನೆ ಅನ್ನಲಾ… ಅಂದೇ ಬಿಡಲಾ… ಅಂದುಕೊಳ್ಳುವಷ್ಟರಲ್ಲಿ ನನ್ನ ಮಗ ‘ಅವರೆಲ್ಲ ವಾಪಸ್ ಬರಬಹುದು ಇನ್ನೇನು, ನಡಿ ಹೋಗಿ ಬಿಡೋಣ’ ಅಂದ. ಮನಸಿಲ್ಲದ ಮನಸ್ಸಿನಿಂದ ವಾಪಸ್ ಹೊರಟೆ. ಹಾಗೆ ಬರುವಾಗ ಮಗ ಗಕ್ಕನೆ ನಿಂತು ‘ಇದೇನು’ ಎಂದ. ನೋಡಿದರೆ ಅಲ್ಲೊಂದು ದೀಪದ ಕಂಭದ ಕೆಳಗೆ ಒಂದು ಕುಬ್ಜ ಮನುಷ್ಯನ ಕಂಚಿನ ವಿಗ್ರಹವಿತ್ತು.

ಸುಮಾರು ಅರ್ಧ ಅಡಿ ಇದ್ದೀತಷ್ಟೇ. ಕೈನಲ್ಲೊಂದು ಗಿಟಾರ್ ಎತ್ತಿ ಹಿಡಿದು ನಿಂತಿತ್ತು. ಅದ್ಯಾಕೆ ಅಲ್ಲಿ ಬಂತು ಎಂದು ಆಶ್ಚರ್ಯವಾಯಿತು. ಮಗುವೊಂದು ಆಡುತ್ತಿದ್ದ ಆಟಿಕೆಯನ್ನು ಮರೆತುಹೋದಂತೆ ಒಂದು ಬೆಂಚಿನ ಮೇಲೆ ನಿಂತಿತ್ತು. ಆದರೆ ಮರುಕ್ಷಣದಲ್ಲೇ  ಅಷ್ಟು ಭಾರದ ಕಂಚಿನ ಪ್ರತಿಮೆ ಆಟದ ವಸ್ತು ಆಗಿರಲಿಕ್ಕೆ ಸಾಧ್ಯವಿಲ್ಲ ಅಂತಲೂ ಅನ್ನಿಸಿತು. ನಮಗೆ ಹೆಚ್ಚು ಸಮಯ ಇರಲಿಲ್ಲವಾಗಿ ಅದರ ಫೋಟೋ ತೆಗೆದುಕೊಂಡು ನಂತರ ಆನ್ಯಾಳನ್ನು ಕೇಳಿದರಾಯಿತು ಎಂದು ಫೋಟೋ ಕ್ಲಿಕ್ಕಿಸುವುದರಲ್ಲಿ
ಅವರು ಲಂಬ ರಸ್ತೆಯಲ್ಲಿ ಬರುವುದು ಕಾಣಿಸಿ, ಇನ್ನು ನಮ್ಮನ್ನು ಹುಡುಕಿಯಾರೆಂದು ಆತುರದಲ್ಲಿ ಒಂದಿಷ್ಟು ಫೋಟೋ ತೆಗೆದುಕೊಂಡು ಅತ್ತ ಹೆಜ್ಜೆ ಹಾಕಿದೆವು.

ಈ ಬಾರಿ ನಾನು ಹಿಂದಿನ ಸೀಟ್ ಬಿಟ್ಟು ವಿಧೇಯ ವಿದ್ಯಾರ್ಥಿನಿಯಂತೆ ಆನ್ಯಾಳ ಪಕ್ಕ ಕುಳಿತೆ… ಆ ಕಂಚಿನ ಬೊಂಬೆಯ ಬಗ್ಗೆ ಕೇಳಬೇಕಿತ್ತಲ್ಲ ಹಾಗಾಗಿ. ನಾವು ತುಂಬ ಕ್ಯಾಷುಯಲ್ ಆಗಿ ಆಟದ ಬೊಂಬೆಯ ಬಗ್ಗೆ ವಿಚಾರಿಸಿದಾಗ ಆನ್ಯಾ ‘ಅದನ್ನು ಗಮನಿಸಿದಿರಾ! ಈಗ ನಾನೇ ಅದರ ಬಗ್ಗೆ ಹೇಳುವವಳಿದ್ದೆ’ ಎಂದಳು. ಓಹ್ ಹಾಗಿದ್ದರೆ ಇದು ಸುಮ್ಮನೆ ರಸ್ತೆಯ ಮೂಲೆಯಲ್ಲಿ ಬಿದ್ದ ಬೊಂಬೆಯಲ್ಲ! ಇದರ ಹಿಂದೆ ಏನೋ ಕಥೆ ಇದೆ ಎಂದು ಖುಷಿಯಾಗಿ ಕಿವಿ ನಿಮಿರಿಸಿ ಕುಳಿತ ನನಗೆ, ಆ ವಿಚಿತ್ರ ಪ್ರತಿಭಟನೆಯ ಕತೆಯನ್ನು ಕೇಳಿ ಹೀಗೂ ಉಂಠೇ ಅನ್ನಿಸಿಬಿಟ್ಟಿತು!

70ರ ದಶಕದಲ್ಲಿ ಪೋಲೆಂಡ್‌ನಲ್ಲಿ ಜನಸಾಮಾನ್ಯರು ಸರಕಾರದ ವಿರುದ್ದ ಮಾತನಾಡುವುದನ್ನು, ಪ್ರತಿಭಟಿಸುವುದನ್ನು ತಡೆಯಲು ಮಾರ್ಷಲ್ ಲಾ ಆಚರಣೆಗೆ ತರುತ್ತಾರೆ. ಅದು ನಾಗರೀಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಯಾವುದೇ ಪ್ರತಿಭಟನಾ ಮೆರವಣಿಗೆ, ಸಭೆ ನಡೆಯುವುದು ಕಾನೂನುಬಾಹಿರ ಎಂದು ಲೆಕ್ಕಿಸಲ್ಪಡುತ್ತದೆ. ಶಾಲಾ ಕಾಲೇಜುಗಳಲ್ಲಿ ನಡೆಯುವ ಯಾವುದೇ ರಾಜಕೀಯ ಚಟುವಟಿಕೆಯೂ ಕಾನೂನುಬಾಹಿರ ಎಂದು ಘೋಷಿಸುತ್ತಾರೆ. ಜನರು ದನಿ ಎತ್ತದಂತೆ ಕರ್ಫ್ಯೂ ಹೇರಲ್ಪಡುತ್ತದೆ. ಆಗಿದ್ದ ಆರ್ಥಿಕ ನೀತಿಗಳಿಂದ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುತ್ತದೆ. ಎಷ್ಟೋ ವಸ್ತುಗಳು ಜನರಿಗೆ ಸಿಗುವುದೇ ಇಲ್ಲ. ಇದೆಲ್ಲದರಿಂದ ರೋಸಿಹೋದರೂ ಜನ ಕಮಕ್ ಕಿಮಕ್ ಎನ್ನುವಂತಿಲ್ಲ. ಅಂದರೆ ಜೈಲು ವಾಸ ಗ್ಯಾರಂಟಿ. ಕದ್ದುಮುಚ್ಚಿ ರಾತ್ರೋರಾತ್ರಿ ಗೋಡೆಗಳ ಮೇಲೆ ಗ್ರಾಫಿಟಿ ಬರೆದರೆ ಮರುದಿನ ಅದರ ಮೇಲೆ ಸುಣ್ಣ ಬಳಿದು ಬರುತ್ತಿರುತ್ತದೆ ಮಿಲಿಟರಿ.

ಹೀಗೆ ಎಲ್ಲ ಸ್ವಾತಂತ್ರ್ಯ ಕಿತ್ತುಕೊಂಡ ಸಮಯದಲ್ಲಿ ವಾಲ್ಡೇಮಿರ್ ಫಿದ್ರಿಷ್ ಎನ್ನುವ ವಿದ್ಯಾರ್ಥಿಯೊಬ್ಬನಿಗೆ ತಾವು ಮಾಮೂಲಿ ರೀತಿಯಲ್ಲಿ ಪ್ರತಿಭಟಿಸುವುದನ್ನು ಬಿಟ್ಟು, ಏನಾದರೂ ವಿಚಿತ್ರ ರೀತಿಯಲ್ಲಿ ಪ್ರತಿಭಟಿಸಬೇಕು ಎಂಬ ಯೋಚನೆ ಬರುತ್ತದೆ. ಅದು ಎಷ್ಟು ವಿಚಿತ್ರವಾಗಿ ಇರಬೇಕು ಎಂದರೆ ಅಂಥವರನ್ನು ಅರೆಸ್ಟ್ ಮಾಡುವಾಗ ಪೊಲೀಸರಿಗೇ ಅವಮಾನವಾಗಿ ಬಿಡಬೇಕು, ಆ ಥರದಲ್ಲಿ  ಏನಾದರೂ ಮಾಡಬೇಕು ಎಂದು ಯೋಚಿಸಿ ‘ಆರೆಂಜ್ ಆಲ್ಟರ್‌ನೇಟಿವ್ ಎನ್ನುವ ಸಂಘಟನೆಯೊಂದನ್ನು ಹುಟ್ಟು ಹಾಕುತ್ತಾನೆ. ಆ ಸಂಘಟನೆಯ ಸದಸ್ಯರು ಮ್ರೋಟ್ಜ಼್ವಾದ ಸುಣ್ಣ ಹೊಡೆದ ಬಿಳಿಯ ಗೋಡೆಗಳ ಮೇಲೆಲ್ಲ ಕೇಸರಿ ಟೊಪ್ಪಿಯ ಕುಬ್ಜನ ಚಿತ್ರಗಳನ್ನು ಬಿಡಿಸಲಾರಂಭಿಸುತ್ತಾರೆ… ಅಷ್ಟೇ! ಕೇವಲ ಒಂದು ಕುಬ್ಜನ ಚಿತ್ರ!

ಈಗ ಮಿಲಿಟರಿಯವರ ಪಾಡು ಬೇಡಾಬೇಡ. ಅವರಿಗೆ ಗೊತ್ತಿರುತ್ತದೆ ಅದು ಸರಕಾರದ ವಿರುದ್ದ, ತಮ್ಮ ವಿರುದ್ದ ಹಾಕಿದ ಸವಾಲು ಎಂದು. ಆದರೆ ಹೇಗೆ ಅರೆಸ್ಟ್ ಮಾಡುವುದು? ಯಾವ ಆಧಾರದ ಮೇಲೆ ಅರೆಸ್ಟ್ ಮಾಡುವುದು?! ಮೊದಲಾದರೆ ಸರಕಾರದ ವಿರುದ್ದ ಘೋಷಣೆ ಮಾಡಿದರು ಎಂದು ಹೇಳಬಹುದಿತ್ತು. ಈಗ ಕುಬ್ಜರ ಚಿತ್ರ ಬಿಡಿಸಿದರು, ಅದಕ್ಕೇ ಅರೆಸ್ಟ್ ಮಾಡಿದೆವು ಎಂದು ಹೇಳಬೇಕಾ. ಹೇಳಿದರೆ ಯಾರಾದರೂ ಉರುಳಾಡಿ ನಗುವುದಿಲ್ಲವೇ. ಚಿತ್ರ ಬಿಡಿಸಿದ್ದಕ್ಕೆ ಅರೆಸ್ಟ್ ಮಾಡಿದಿರಾ ಎಂದು ಅವಮಾನಿಸುವುದಿಲ್ಲವೇ ಜಗತ್ತು… ಹೀಗೆ ಒದ್ದಾಡಿಬಿಡುತ್ತಾರೆ. ವಾಲ್ಡೆಮೆರ್‌ಗೆ ಬೇಕಾಗಿದ್ದೂ ಅದೇ! ದಮನಿಸಲು ಬಂದವರನ್ನು ನಗೆಪಾಟಲಾಗಿಸುವ ಅವನ ಪ್ರಯತ್ನ ಸಫಲವಾಗುತ್ತದೆ. ಜೊತೆಗೆ ಕೇಸರಿ ಟೊಪ್ಪಿಯ ಕುಬ್ಜ ‘ಆರೆಂಜ್ ಆಲ್ಟರ್‌ನೇಟಿವ್’ ಸಂಘಟನೆಯ ಅಘೋಷಿತ ಲಾಂಛನವೂ ಆಗಿಬಿಡುತ್ತದೆ.

ಆ ನಂತರ ವಾಲ್ಡೆಮೆರ್‌ನ ತಲೆಯಲ್ಲಿ ಇಂಥ ಅನೇಕ ಹಾಸ್ಯಾಸ್ಪದ ಐಡಿಯಾಗಳು ಮೂಡಲು ಶುರುವಾಗುತ್ತದೆ! ತೀವ್ರ ಕೊರತೆಯಿದ್ದ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ಟಿಷ್ಯು
ಪೇಪರ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿಂತು ಹಂಚುವುದು. ಕುಬ್ಜರು ಧರಿಸುವಂಥ ಕೇಸರಿ ಟೋಪಿಯನ್ನು ಧರಿಸಿದ ಸಾವಿರಾರು ಮಂದಿ ರಸ್ತೆಯಲ್ಲಿ ಸುಮ್ಮನೆ ನಡೆದು
ಹೋಗುವುದು, ದಾರಿಹೋಕರಿಗೆಲ್ಲ ಕುಬ್ಜರು ಧರಿಸುವಂತ ಕೇಸರಿ ಟೋಪಿಯನ್ನು ಹಂಚುವುದು ಈ ರೀತಿ ಹಾಸ್ಯಾಸ್ಪದವಾದ ಕೆಲಸಗಳನ್ನು ಮಾಡಲು ಶುರು ಮಾಡುತ್ತಾನೆ! ಅವನ ಈ ರೀತಿಯ ವಿನೂತನ ಪ್ರತಿಭಟನೆಗೆ ಸಾವಿರಾರು ಜನ ಜೊತೆಗೂಡಲು ಶುರು ಮಾಡುತ್ತಾರೆ!

ರಸ್ತೆಯಲ್ಲಿ ಹೋಗುವ ಯಾವುದೇ ದಾರಿಹೋಕನನ್ನು ಕರೆದು ಅವನ ಕುತ್ತಿಗೆಗೆ ‘RIP – paper napkins and sanitary pads’ ಎನ್ನುವ ಬ್ಯಾನರ್ ಕುತ್ತಿಗೆಗೆ ನೇತುಹಾಕಿಬಿಡುವುದು, ಸೇರಿದ ಜನರೆಲ್ಲ ಒಟ್ಟಾಗಿ ‘ಕುಳ್ಳರಿಲ್ಲದೆ ಸ್ವಾತಂತ್ರ್ಯವಿಲ್ಲ’ ಎಂದು ಹೇಳುತ್ತಾ ನಡೆಯುತ್ತಾ ಹೋಗುವುದು ಈ ಥರದ ಚಿತ್ರವಿಚಿತ್ರ ಯೋಜನೆಗಳನ್ನು ಹಾಕುತ್ತಾನೆ. ಇನ್ನೊಂದು ಯೋಜನೆಯೆಂದರೆ, PRECZ Z UPALAMI ಎಂಬ ಅಕ್ಷರಗಳ ಟಿ ಶರ್ಟ್ ಧರಿಸಿದ 13 ಜನ ಸಾಲಾಗಿ ಯಾವುದೋ ಮುಖ್ಯ ಸ್ಥಳದಲ್ಲಿ ನಿಲ್ಲುವುದು. ಹಾಗೆಂದರೆ ಬಿಸಿಲನ್ನು ದೂರ ಸರಿಸಿ ಎಂದರ್ಥವಂತೆ ಪೋಲಿಷ್ ಭಾಷೆಯಲ್ಲಿ. ಸುಮ್ಮನೆ ನಿಲ್ಲುವುದು… ಅಷ್ಟೇ!

ಪೊಲೀಸಿನವರು ಏನೋ ಮಾಡುತ್ತಾರೆ ಎಂದು ಕಾದು ನಿಂತು ನಿಂತು ಸಾಕಾಗಿ ಅತ್ತ ಹೋದ ಕೂಡಲೇ ಸಾಲಿನಲ್ಲಿ U ಅಕ್ಷರದ ಟಿ ಶರ್ಟ್ ಧರಿಸಿದವನನ್ನು ದೂರ ತೆಗೆದು ಆ ಸ್ಥಳದಲ್ಲಿ ಸೂರ್ಯನ ಚಿತ್ರವಿರುವ ಟಿ ಶರ್ಟ್ ಧರಿಸಿದಾತನನ್ನು ನಿಲ್ಲಿಸುವುದು, ಕೇವಲ PRECZ Z PALAMI ಎಂಬುದು ಮಾತ್ರ ಕಾಣಿಸುವ ರೀತಿಯಲ್ಲಿ. PRECZ Z PALAMI ಎಂದರೆ  ‘ಲಾಠಿಯನ್ನು ದೂರ ಸರಿಸಿ’ ಎಂದರ್ಥವಂತೆ!

ಹೊಡೆದಾಡಿದರೆ, ಘೋಷಣೆ ಕೂಗಿದರೆ ಅಂಥವರನ್ನು ಶಿಕ್ಷಿಸಬಹುದು. ಆದರೆ ಇಂಥ ಜಾಣತನಕ್ಕೇನು ಮಾಡುವುದು ತಿಳಿಯದೇ ತಬ್ಬಿಬ್ಬಾದ ಸರಕಾರ, ಕೊನೆಗೆ ನೋಡಿ ನೋಡಿ
ಸಾಕಾಗಿ ಅವನನ್ನು ಅರೆಸ್ಟ್ ಮಾಡಿಯೇ ಬಿಡುತ್ತದೆ. ಆಗ ವಾಲ್ಡೆಮಿರ್ ‘ನೋಡಿ ಈಗ ಯಾಕೆ ಅರೆಸ್ಟ್ ಆದೆ ಅಂದರೆ ಸ್ಯಾನಿಟರ್ ಪ್ಯಾಡ್ ಹಂಚಿದೆ ಅದಕ್ಕೆ, ಕೇಸರಿ ಟೋಪಿ ಹಂಚಿದ
ಕಾರಣಕ್ಕೆ ಎಂದು ಜಗತ್ತಿಗೆ ತಿಳಿಸಬಹುದು’ ಎಂದು ಲೇವಡಿ ಮಾಡುತ್ತಾನೆ! ಅಂತೂ ಕೊನೆಗೆ 1989ರಲ್ಲಿ ಪೋಲ್ಯಾಂಡಿನಲ್ಲಿ ಕಮ್ಯುನಿಸ್ಟ್ ಅಧಿಕಾರ ಕೊನೆಗೊಳ್ಳುತ್ತದೆ.
ವಾಲ್ಡೆಮೆರ್ ಆ ನಂತರ ಫ್ರಾನ್ಸ್‌ಗೆ ಹೋಗಿ ಅಲ್ಲಿ ಚಿತ್ರ ಬಿಡಿಸಿಕೊಂಡು ಇದ್ದು ಬಿಡುತ್ತಾನೆ.

ಆ ನಂತರ ಆರೆಂಜ್ ಆಲ್ಟರ್‌ನೇಟಿವ್ ಸಂಘಟನೆಯ ಸ್ಥಾಪನೆಯ ನೆನಪಿಗಾಗಿ 2001ರಲ್ಲಿ ಅದರ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಒಂದು ಕುಬ್ಜ ಕಂಚಿನ ಮೂರ್ತಿಯನ್ನು ಸ್ಥಾಪಿಸಲು
ಸರಕಾರವೇ ನಿರ್ಧರಿಸುತ್ತದೆ. ಆ ಮೂರ್ತಿ ಜನರ ಗಮನ ಸೆಳೆದು ತುಂಬ ಪ್ರಾಮುಖ್ಯತೆ ಪಡೆದುದನ್ನು ನೋಡಿದ ವ್ರೋಟ್ಜ಼್ವಾನ ಪ್ರವಾಸೋದ್ಯಮ ಇಲಾಖೆ ಮತ್ತೂ ಅಂಥ ಐದು
ಮೂರ್ತಿಯನ್ನು ಅಲ್ಲಲ್ಲಿ ಇರಿಸುತ್ತದೆ. ಎಲ್ಲಿಯೋ ನಡೆಯುವಾಗ ಕಣ್ಣಿಗೆ ಬೀಳುವ ಈ ಪುಟ್ಟ ಪುಟ್ಟ ಪ್ರತಿಮೆಗಳು ಫೇಮಸ್ ಆಗಿಬಿಡುತ್ತವೆ. .

ತಮ್ಮ ಸಂಘಟನೆಯ ಲಾಂಛನ ಹೀಗೆ ಪ್ರವಾಸಿಗರನ್ನು ಆಕರ್ಷಿಸಲು ಬಳಕೆಯಾಗುತ್ತಿರುವುದನ್ನು ನೋಡಿದ ವಾಲ್ಡೆಮೆರ್ ಕೋರ್ಟ್‌ನಲ್ಲಿ ಕೇಸ್ ಹಾಕಿ ಗೆಲ್ಲುತ್ತಾನೆ. ಆದರೆ ಅಷ್ಟರಲ್ಲಾಗಲೇ ಇಡೀ ವ್ರೋಟ್ಜ಼್ವಾನಲ್ಲಿ ಸುಮಾರು 400 ಕುಬ್ಜರ ವಿಗ್ರಹಗಳನ್ನು ಇಟ್ಟಾಗಿರುತ್ತದೆ! ವಾಲ್ಡೆಮಿರ್ ಕೇಸ್ ಗೆದ್ದ ನಂತರ ಒಂದಿಷ್ಟು ಕುಬ್ಜರನ್ನು ತೆಗೆದರೂ, ಪ್ರವಾಸಿಗರು
ಅದರಿಂದ ಅದು ಜನರ ಗಮನ ಸೆಳೆಯುತ್ತದೆನ್ನುವ ಕಾರಣಕ್ಕೇ ಹಲವಾರು ಅಂಗಡಿಗಳ ಮಾಲೀಕರು, ಕೆಲವು ಕಛೇರಿಗಳು, ಸಾರ್ವಜನಿಕ ಸ್ಥಳಗಳು ಎಲ್ಲೆಡೆ ಇಂಥ ನೂರಾರು ಪ್ರತಿಮೆಗಳನ್ನು ಇಡುತ್ತಾ ಹೋಗಿ ಕೊನೆಗದು ವ್ರೋಟ್ಜ಼್ವಾ ಲಾಂಛನವೇ ಆಗಿಬಿಡುತ್ತದೆ!

‘ಈಗಂತೂ ಈ ಕುಬ್ಜರನ್ನು ಹುಡುಕುವ ಸ್ಪೆಷಲ್ ‘ನೋಮ್ಸ್ ಟೂರ್’ ಅಂತೆಲ್ಲ ಫೇಮಸ್ ಆಗಿಹೋಗಿದೆ ಅಂದರೆ ನಂಬುತ್ತೀರಾ?’ ಎಂದು ನಕ್ಕಳು ಆನ್ಯಾ. ‘ನಂಬುತ್ತೇನೆ ತಾಯಿ… ನಿಮ್ಮ ದೇಶದ ಘೋರ ಚರಿತ್ರೆಯ ಭಾಗವಾದ ಎಕ್ಸ್‌ಟರ್ಮಿನೇಷನ್ ಕ್ಯಾಂಪ್‌ಗಳಲ್ಲಿ ಲವರ್‌ಗಳು ಫೋಟೋ ಶೂಟ್ ಮಾಡಿದರು ಅಂತ ಓದಿದ್ದೀನಿ. ಇನ್ನು ಇದನ್ನು ನಂಬದೇ ಏನು’ ಎಂದುಕೊಂಡೆ ಮನಸ್ಸಿನಲ್ಲೇ…

‍ಲೇಖಕರು avadhi

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: