ಮಣಿಪಾಲಕ್ಕೆ ಬಿದ್ದ ಮೀನ ಕಣ್ಣು…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಂಗಳದಲ್ಲಿ ಸರಿಯಾಗಿ ಬೆಳಗಾಗುವ ಮೊದಲೇ ಬರುತ್ತಿದ್ದದ್ದು ನಾಗಿ ಮತ್ತು ಶೇಷಿಯ ಮೀನು ಕುಕ್ಕಿಗಳು. ನಮ್ಮ ಮನೆಯಿಂದ ಮಾರುದೂರದಲ್ಲೇ ಇಬ್ಬರದ್ದೂ ಮನೆ. ಇನ್ನೂ ಅರೆ ಜೀವದಲ್ಲಿರುವ ಬಂಗುಡೆ, ಬೈಗೆ, ಕೊಡವಾಯಿಗಳ ಬಾಯಿ ಕಳೆಯಿಸಿ “ಕಾಣಿಕಾಣಿ… ಯಾವ್ನು ಮನಿ ಹಸಿಮೊಳತ್” ಎನ್ನುತ್ತಾ ನನ್ನಜ್ಜಿಯ ಜೊತೆಗೆ ಎರಡು ರೂಪಾಯಿ ಬಿಡುವುದಕ್ಕೂ ಸಾಧ್ಯವೇ ಇಲ್ಲ ಎಂದು ಹಠ ಮಾಡುವ ಅವರುಗಳು ನನಗೆ ಯಾವ ಕಾಲದಲ್ಲೂ ಮರೆಯುವುದಿಲ್ಲ.

ಸಮುದ್ರಕ್ಕೆ ತಾಗಿಯೇ ಹಬ್ಬಿರುವ ನಮ್ಮ ಕರಾವಳಿಯುದ್ದಕ್ಕೂ ಕಾಲು ಗಂಟಿಗಿಂತ ಚೂರು ಮೇಲೆಯೇ ಸೀರೆ ಉಟ್ಟು, ಮೀನು ಬುಟ್ಟಿ ಹೊತ್ತು, ಮನೆ ಮನೆಗೆ ಮೀನು ಮಾರಿ ಬದುಕು ನಡೆಸುವ ಇದೇ ಗಟ್ಟಿಗಿತ್ತಿಯರು ಕಾಣಸಿಗುತ್ತಾರೆ. ಎಲ್ಲಾ ಮನೆಯಲ್ಲೂ ಇವರಿಗಾಗಿಯೇ ಕಾದಿದ್ದು ಅವತ್ತಿನ ಅಡುಗೆಯನ್ನು ನಿರ್ಧರಿಸುವುದು ರೂಢಿ.ಇದನ್ನು ಹೊರತುಪಡಿಸಿ ಮಣಿಪಾಲವೂ ಇಲ್ಲ. ಆದರೆ ನನ್ನೂರಿನ ನಾಗಿ, ಶೇಷಿಯವರು ಇಲ್ಲಿ ಗೀತಾ, ಸರೋಜಾ ಆಗಿದ್ದಾರೆ ಅಷ್ಟೇ. ಇವರೆಲ್ಲರ ಕಸುಬು ಮತ್ತು ಕಸುವು ಎರಡೂ ಒಂದೇ.

ಮಣಿಪಾಲದೂರು ಗುಡ್ಡೆಯ ಮೇಲಾದರೂ ದೂರ ಕಣ್ಣು ಹಾಯಿಸಿದಷ್ಟು ಹತ್ತಿರಕ್ಕೆ ಅರಬ್ಬೀ ಸಮುದ್ರ ಕಾಣುತ್ತದೆ. ಊರಿನವರು ಮತ್ತು ದೂರದವರು ಮನಸ್ಸು ತಣ್ಣಗೆ ಮಾಡಿಕೊಳ್ಳುವುದಕ್ಕೆ ಇದೇ ಕಡಲ ತೀರಕ್ಕೆ ಬರುವುದು. ಈ ತೀರದಲ್ಲಿ ಅನೇಕರು ಮೀನುಗಾರಿಕೆಯ ಸುತ್ತಲೇ ತಮ್ಮಬದುಕು ಕಟ್ಟಿಕೊಂಡಿದ್ದಾರೆ ಮತ್ತು ಸಾಗರದ ಮೀನು ಹೊಟ್ಟೆ ಮುಟ್ಟುವವರೆಗೂ ಈ ಉದ್ಯಮದ ಕೊಂಡಿ ಬಿಗಿದುಕೊಂಡಿದೆ.

ಮತ್ಸೋದ್ಯಮ ಮತ್ತು ಮಣಿಪಾಲಕ್ಕೆ ಒಳ್ಳೆಯ ಬಾಂಧವ್ಯ ಇದೆ. ಇಲ್ಲಿನ ಹೋಟೆಲ್, ಮನೆಗಳು ಮತ್ತು ಇಲ್ಲಿನವರ ಕೈಗಳು ಮೀನಿನ ಘಮದಲ್ಲೇ ತುಂಬಿರುವುದು. ಮೀನು ಇಲ್ಲಿನ ಸಂಸ್ಕೃತಿಯ ಒಂದು ಭಾಗವೇ. ಈ ಮೀನಿನ ಬಾಲ ಹಿಡಿದೇ ಅದೆಷ್ಟೋ ಜನರು ಮಣಿಪಾಲ ಮತ್ತು ಅದರ ಸುತ್ತ ಮುತ್ತಲು ಜೀವನ ನಡೆಸುತ್ತಿದ್ದಾರೆ. ಕರಾವಳಿಯ ಉದ್ದಕ್ಕೂ ಉದ್ಯಮವಾಗಿ ಬೆಳೆದಿರುವ ಮೀನುಗಾರಿಕೆಯ ಕೊನೆಯ ಕೊಂಡಿಗಳಾಗಿ ಗೀತಾ ಮತ್ತು ಸರೋಜಾನಂತವರು ಮಣಿಪಾಲದಲ್ಲಿ ಎದುರಾಗುತ್ತಾರೆ.

ಮಲ್ಪೆಯ ತೀರದಲ್ಲಿ ಆ ಬೆಳಿಗ್ಗೆ ಮೀನಿನ ಸುಗ್ಗಿ ಇರಲಿ, ಇಲ್ಲದೆ ಇರಲಿ ತಮ್ಮ ಮೀನು ಕುಕ್ಕಿಯನ್ನು ಅವತ್ತಿನ ದರಕ್ಕೆ ಖರೀದಿ ಮಾಡಿ ಮಣಿಪಾಲದ ಬಸ್ಸು ಹತ್ತುವುದು ಇವರ ನಿತ್ಯ ಕಾಯಕ. “ನಿಮ್ಮ ಮೀನುಕುಕ್ಕಿಯ ವಾಸನೆಗೆ ಬೇರೆ ಯಾರೂ ಬಸ್ಸು ಹತ್ತುವುದಿಲ್ಲ ಮರ್ರೆ”ಎಂದು ಕಂಡಕ್ಟರ್ ಪ್ರತಿ ದಿನ ಎಷ್ಟೇ ಹಂಗಿಸಿದರೂ, “ಹೊರ್ಕತಿಂಬತಿಗೆ ಸಮಾ ಹೊಟ್ಟಿಗ್ಹ್ವಾತಲ್ಲ… ಈಗ ಬಸ್ಸೆಗೆ ಹ್ವಾತಿಲ್ಯಾ?”ಎಂದು ವಾಪಸ್ಸು ಹಂಗಿಸಿ ಇಬ್ಬರೂ ಬಸ್ಸು ಹತ್ತಿಯೇ ಬಿಡುತ್ತಾರೆ. ಹಿಂದಿನ ಸೀಟು ಹಿಡಿದು, ಬಸ್ಸಿನ ವೇಗಕ್ಕೆ ಬುಟ್ಟಿ ಅಲುಗಾಡದಂತೆ ಕಾಲು ಕೊಟ್ಟು ಕೂತರೆ ಮಣಿಪಾಲದಲ್ಲಿ ಇಳಿಯುವವರೆಗೂ ಅವರು ಅಂತರ್ಮುಖಿಗಳೇ. 

ತಮ್ಮ ಮನೆಯಲ್ಲಿ ದೋಣಿಗೆ, ಇಲ್ಲ ಬೋಟಿಗೆ ಹೋಗಿ ಮೀನು ತರುವ ಗಂಡ ಅಥವಾ ಗಂಡು ಮಕ್ಕಳು ಇಲ್ಲದ ಇಬ್ಬರೂ ವ್ಯಾಪಾರಕ್ಕೆ ಮೀನು ಕೊಳ್ಳಲು ಒಬ್ಬರಿಬ್ಬರು ನಂಬಿಕಸ್ತರನ್ನು ಹುಡುಕಿಕೊಂಡಿದ್ದಾರೆ. ಕೈಯಲ್ಲಿ ಅಪರೂಪಕ್ಕೆ ದುಡ್ಡಿದ್ದರೆ ಮೊದಲೇ ಹಣ ಕೊಟ್ಟೋ, ಇಲ್ಲದಿದ್ದರೆ ದಿನದ ಕೊನೆಗೆ ಒಟ್ಟಾಗುವ ದುಡ್ಡಲ್ಲಿ ಹೊಂದಿಸಿಯೋ ಅವರ ನಂಬಿಕೆಯನ್ನೂ ಉಳಿಸಿಕೊಂಡಿದ್ದಾರೆ. ವರ್ಷಗಳಿಂದ ತಮ್ಮ ಮತ್ತು ಮನೆಯ ಹೊಟ್ಟೆ ತುಂಬಿಸುತ್ತಿರುವ ಮೀನು ಮಾರಾಟ ಇವರಿಗೆ ಜಾತಿ ಅಥವಾ ಮನೆಯ ಉದ್ಯೋಗವಾಗುವುದಕ್ಕೂ ಮೀರಿ ಬದುಕಿನ ಅವಶ್ಯಕತೆಯಾಗಿದೆ. ಎಲ್ಲೋ ಒಂದು ಕಡೆಮನೆಯ ನೂರು ತಾಪತ್ರಯಗಳು ಇವರಿಗೆ ಹೊರಗೆ ದುಡಿಯುವ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟಿದೆ.

ಬಸ್ಸಿಂದ ಇಳಿದು ಬುಟ್ಟಿಯನ್ನು ತಲೆ ಮೇಲಿರಿಸಿಕೊಂಡು ತಾವು ದಿನ ಕೂತು ವ್ಯಾಪಾರ ಮಾಡುವ ಜಾಗಕ್ಕೆ ಹೊರಡುವಾಗ ಇವತ್ತು ಯಾವ ಮೀನಿನ ಮೇಲೆ ಎಷ್ಟು ಲಾಭವಾಗಬಹುದು, ಎಲ್ಲ ಸುಸೂತ್ರವಾಗಿ ಮಾರಾಟವಾದರೆ ಲಾಭದೊಂದಿಗೆ ಆವತ್ತಿನ ಬಸ್ಸಿನ ಖರ್ಚು ಹುಟ್ಟಬಹುದು ಎಂದು ತಮಗೆ ಬಂದಷ್ಟೇ ಲೆಕ್ಕಾಚಾರವನ್ನು ತಲೆಯಲ್ಲಿ ಓಡಿಸುತ್ತಿರುತ್ತಾರೆ.  ಗೀತಾ ಸಿಂಡಿಕೇಟ್ ಸರ್ಕಲ್ ನಿಂದ ಮಾರು ದೂರಕ್ಕೂ, ಸರೋಜಾ ಇಂಡಸ್ಟ್ರಿಯಲ್ ಏರಿಯಾದ ದಾರಿಯಲ್ಲೂ ತಮ್ಮ ಖಾಯಂ ಜಾಗ ಮಾಡಿಕೊಂಡಿದ್ದಾರೆ. ಒಂದು ಚಿಕ್ಕ ಪ್ಲಾಸ್ಟಿಕ್ ಟಾರ್ಪಾಲಿನ ಕೆಳಗೆ ವರ್ಷಾನುವರ್ಷದಿಂದ ಅದೇ ಜಾಗದಲ್ಲಿ ಕೂತಿರುವ ಇವರ ಮುಖಗಳು ಅಲ್ಲಿ ಓಡಾಡುವ ಮಣಿಪಾಲಿಗರಿಗೆ ಬಲುಪರಿಚಿತ.

ತಮ್ಮಂತೆಯೇ ಬೇರೆ ಊರಿನ ಬಸ್ಸಿಂದ ಇಳಿದು ತಮ್ಮ ಪಕ್ಕದಲ್ಲೇ ಕೂತು ಮೀನು ವ್ಯಾಪಾರ ಮಾಡುವ ಇತರ ಹೆಂಗಸರೊಂದಿಗೆ ಯಾವ ಮಾತ್ಸರ್ಯವೂ ಇಲ್ಲದೆ ಮನೆ ಕಥೆ, ಆ ಹೊತ್ತಿನ ಖುಷಿ, ಕೆಲಸದ ದುಗುಡಗಳನ್ನೆಲ್ಲ ಹಂಚಿಕೊಳ್ಳುತ್ತಲೇ ಒಟ್ಟಿಗೆ ಗ್ರಾಹಕರ ದಾರಿ ಕಾಯುತ್ತಾರೆ. ಅರೆ ಜೀವದ ಮೀನುಗಳನ್ನೂ ತಲೆ, ಬಾಲ, ಹೊಟ್ಟೆಯ ಸೀಳಿ ನೈಪುಣ್ಯತೆಯಿಂದ ಕುರಿಯುವ ವೇಗ ಮತ್ತು ರೀತಿ ಅವರಿಗೆ ಬದುಕಿನ ಅವಶ್ಯಕತೆಗಳು ಕಲಿಸಿದ್ದು. ಅದರ ನಡುವೆ ಮೀನಿಗಾಡುವ ನೊಣಗಳು, ಪಕ್ಕದಲ್ಲೇ ಕುರಿದು ಎಸೆಯುವ ಮೀನುಮಂಡೆಗೆ ಕಾದು ಕುಳಿತಿರುವ ನಾಯಿ ಮತ್ತು ಕಾಗೆಗಳ ಹಿಂಡು ಕೂಡ ಅವರ ಬಳಗವೇ. ಮಣಿಪಾಲಿಗರು ಕೊಳ್ಳದೆ ಬಿಟ್ಟಿದ್ದೆಲ್ಲವೂ ಇವರ ಪಾಲು.

ಮಲ್ಪೆಯಲ್ಲಿ ಮೀನು ಬಿದ್ದ ದಿನ ಮಣಿಪಾಲದಲ್ಲಿ ಎಂತಹ ಜಿಟಿ ಜಿಟಿ ಮಳೆ ಇಲ್ಲ ಸುಡು ಸುಡು ಬಿಸಿಲಿದ್ದರೂ ಅವರು ತಮ್ಮ ಮಾಮೂಲಿ ದುಡಿಮೆಯ ಜಾಗಕ್ಕೆ ಹಾಜರಾಗುವವರೇ. ಗಳಿಗೆಯಲ್ಲೇ ಕತ್ತಿಯ ಬಾಯಿಗೆ ಮೀನಿನ ಬಾಯಿಯ ಸಿಕ್ಕಿಸಿ ಎಳೆದು, ಕುರಿದು, ತುಂಡು ಮಾಡಿಕೊಳ್ಳುವವರ ಚೀಲಕ್ಕೆ ಹಾಕುತ್ತ ಅಲ್ಪ ಸ್ವಲ್ಪ ಲಾಭದ ದರ ಹೇಳುವಾಗಲೂ ಅವರು ಮುಜುಗರ ಪಟ್ಟುಕೊಳ್ಳುವವರು. ತಾವು ಖರೀದಿಸುವ ಮತ್ತು ಮಾರುವ ದರದ ನಡುವೆ ಸಿಗುವ ಲಾಭ ಹೇಳಿಕೊಳ್ಳುವಂತದಲ್ಲವಾದರೂ ಅವರಿಗೆ ತಮ್ಮ ಮೀನುಕುಕ್ಕಿಯ ಭಾರವೇ ಪ್ರೀತಿ. ಇಬ್ಬರಿಗೂ ಈ ದಿನಚರಿಯನ್ನು ಬಿಟ್ಟು ಉಳಿದ ವಿಚಾರಗಳು ನಗಣ್ಯ.

ಎಲ್ಲರಂತೆ ಮಣಿಪಾಲಿಗರಿಗೂ ಮೀನು ಅತಿ ಪ್ರಿಯವೇ. ಈ ಊರಿನವರು, ಇಲ್ಲಿಗೆ ಬಂದವರೆಲ್ಲರೂ ಸಮುದ್ರದಿಂದ ನೇರವಾಗಿ ಸಿಗುವ ಹಸಿ ಮೀನುಗಳ ರುಚಿಗೆ ಸಲೀಸಾಗಿಯೇ ಮರುಳಾಗಿದ್ದಾರೆ. ಕಾಲಗಳಿಂದಲೂ ಊರಿಗರಿಗೆ ಗೀತಾ, ಸರೋಜನಂತವರಲ್ಲಿಯೇ ಮೀನು ಖರೀದಿ  ಅಭ್ಯಾಸವಾಗಿದ್ದರೂ, ಈಗೀಗ ಮಣಿಪಾಲಕ್ಕೆ ಆವರಿಸಿರುವ ಶಹರದ ಛಾಯೆ ಮತ್ತು ಅದರೊಂದಿಗೆ ಬಂದಿರುವ  ಮಾರುಕಟ್ಟೆಯ ಪೈಪೋಟಿ ಇವರ ದಿನಚರಿಯನ್ನು ಬದಲಿಸಿದೆ. ಮಾರುಕಟ್ಟೆಗೆ ಕಾಲಿಟ್ಟಿರುವ ಹೊಸ ಮಾದರಿಯ ಮತ್ಸ್ಯ ಮಾರಾಟ ತಂತ್ರಗಳು, ಕಾವಲಿಗೆ ಹಾಕಲು ಸಿದ್ದವಾಗಿ ಮನೆ ಬಾಗಿಲಿಗೆ ಬರುವ ಮೀನುಗಳು ಇವರ ಕುಕ್ಕಿಗಳ ಭಾರವನ್ನು ಹೆಚ್ಚಿಸಿದೆ. ಅದೆಷ್ಟೋ ದಿನ ಬುಟ್ಟಿಯಲ್ಲಿನ ಮೀನುಗಳು ಹಾಗೆಯೇ ಕೊಳೆತು ನಾಯಿ ಕಾಗೆಗಳ ಹೊಟ್ಟೆ ತುಂಬಿಸಿದ್ದಿದೆ.

“ಒಂಜಿ ದಿನಡ್ ಲಾಭ… ಒಂಜಿ ದಿನಡ್ ನಷ್ಟ… ಎಂಕಲೆಗ್ ರೆಡ್ಡಲಾ ಒಂಜೇ… ಬುಡ್ಲೆ… ” ಎಂದು ನಗು ಮುಖದಲ್ಲೇ ಹೇಳುವ ಇವರ ಲಾಭ ನಷ್ಟದ ಲೆಕ್ಕಾಚಾರ ನಮ್ಮಂತ ಮಣಿಪಾಲಿಗರಿಗೆ ಅರ್ಥವಾಗಲಿಕ್ಕಿಲ್ಲ. ಬೆಳಿಗ್ಗೆ ಯಾವ ಹುಮ್ಮಸ್ಸಲ್ಲಿ ಬಸ್ಸು ಇಳಿದಿರುತ್ತಾರೋ ಅದೇ ಹುಮ್ಮಸ್ಸಲ್ಲಿ ವಾಪಸ್ಸು ಬಸ್ಸು ಹತ್ತಿರುತ್ತಾರೆ. ಅವರ ಥೈಲಿ ತುಂಬಿರುತ್ತದೋ ಇಲ್ಲವೋ ಈ ಸಾರಿ ಮಾತ್ರ ಕಂಡಕ್ಟರ್ ನಿಗೆ ಬಯ್ಯಲು ಅವಕಾಶವಿಲ್ಲದಂತೆ ಮೀನು ಬುಟ್ಟಿ ಮಾತ್ರ ಖಾಲಿಯಾಗಿರುತ್ತದೆ.

ಇಲ್ಲಿ ಕಡಲದ್ದೂ ಒಡಲಿದ್ದೂ ಒಂದೇ ಬಣ್ಣ

ಹಸಿವಿಗೆ ಭೋರ್ಗರೆದು ದಡ ದಾಟುತ್ತದಷ್ಟೆ

ಜೀವ ಬಿಟ್ಟವುಗಳನ್ನ ಹೊತ್ತು ಜೀವನ ಕಟ್ಟುವಾಗ

ಹಂಗಿಸುವುದುಂಟೆ ಮೀನ ಕಣ್ಣು …

ಮತ್ತೆ ಮಾರನೇ ದಿನ ನಸುಕಲ್ಲೇಗೀತಾ – ಸರೋಜಾ ತಮ್ಮ ತಮ್ಮ ಮನೆಗಳಲ್ಲಿ ಎದ್ದು ಸಮುದ್ರ ದಂಡೆಗೂ, ಅಲ್ಲಿ ತುಂಬಿದ ಕುಕ್ಕಿ ಹಿಡಿದು ವ್ಯಾಪಾರಕ್ಕೂ ಹೊರಡುತ್ತಾರೆ. ಮಣಿಪಾಲದ ಬದುಕಿನ ಭಾಗವಾಗಿ ಇವರೂ ಮತ್ತು ಇವರ ಬದುಕಿನ ಭಾಗವಾಗಿ ಮಣಿಪಾಲವೂ ಬದಲಾಗದೆ ಹಾಗೆಯೆ ಇದೆ. ಆದರೆ ಅದೆಷ್ಟು ದಿನ ಹೀಗೆಯೇ ಉಳಿದೀತು ಎಂಬುದ ನೋಡಬೇಕು.

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: