ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’

ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ.

ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದಬೊಂಬಾಟ್ ಪುಸ್ತಕವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ.

‘ಹಬ್ಬಿದಾ ಮಲೆ ಮಧ್ಯದೊಳಗೆ’ ಇದು ಹೊಸ ತಲೆಮಾರಿನ ಕನ್ನಡ ಲೇಖಕರ ನಡುವೆ ಕೇಳಿಬರುವ ಪ್ರಮುಖ ಹೆಸರುಗಳಲ್ಲಿ ಒಂದಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕಥಾಸಂಕಲನದ ಹೆಸರು. ಇದು ಗೋವಿನ ಹಾಡಿನಿಂದ ಪ್ರೇರೇಪಿತವಾಗಿರುವ ಶೀರ್ಷಿಕೆ. ಹಾಗಾಗಿ ಶೀರ್ಷಿಕೆಗೂ ಇಲ್ಲಿನ ಕತೆಗಳಿಗೂ ತುಂಬಾ ಅರ್ಥವಿದೆ.

ಫೈಜ್ನಟ್ರಾಜ್ ಅವರು ಮೂಲತಃ ಕವಿ. ಕನ್ನಡದಲ್ಲಿ ಬಹಳಷ್ಟು ಕವಿಗಳು ಕವಿತೆಗಳ ಜೊತೆಗೆ ಕತೆಗಳನ್ನು ಲೇಖನಗಳನ್ನು ಅಪರೂಪಕ್ಕೆ ಕಾದಂಬರಿಗಳನ್ನು ಬರೆದಿರುವ ಸಂಭವವೂ ಉಂಟು. ಅದೇ ರೀತಿ ಫೈಜ್ನಟ್ರಾಜ್ ಅವರು ಕೂಡ ಕಾದಂಬರಿಯೊಂದನ್ನು ಮಾತ್ರ ಬರೆದಿಲ್ಲ ಎಂದು ಅನಿಸುತ್ತದೆ. ಉಳಿದಂತೆ ಕವಿತೆಗಳು, ಆಧುನಿಕ ವಚನಗಳು, ಕತೆಗಳು ಪ್ರಬಂಧಗಳು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ‘ಎದೆಯೊಳಗೆ ತಲ್ಲಣ’, ‘ಮಂತ್ರದಂಡ’, ‘ಬುದ್ಧನಾಗ ಹೊರಟು’ ಎಂಬ ಕವನಸಂಕಲನಗಳು ಮತ್ತು ‘ಸ್ನೇಹದ ಕಡಲಲ್ಲಿ’ ಎಂಬ ಮಕ್ಕಳ ಕಥಾಸಂಕಲವನ್ನು ಬರೆದಿದ್ದಾರೆ. ‘ಹಬ್ಬಿದಾ ಮಲೆ ಮಧ್ಯದೊಳಗೆ’ ಇವರ ಐದನೇಯ ಕೃತಿ.

ಇವರು ಮೂಲತಃ ಆಗಿನ ಅವಿಭಜಿತ ಶಿವಮೊಗ್ಗ ಜಿಲ್ಲೆಯ ಕೆಳದಿ ಚನ್ನಮ್ಮ ಕಟ್ಟಿಸಿದ ಕೋಟೆಯ ಊರು ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿಯೇ ಆರಂಭದ ವಿದ್ಯಾಭ್ಯಾಸ ಮುಗಿಸಿ ತಮ್ಮ ಹುಟ್ಟಿದ ಊರಿನಲ್ಲಿಯೇ ನೆಲೆಸಿ ಅಲ್ಲಿಯೇ ಕನ್ನಡ ಅಧ್ಯಾಪಕರಾಗಿದ್ದಾರೆ.

ಫೈಜ್ನಟ್ರಾಜ್ ಅವರ ಹೆಸರನ್ನು ನಾನು ಮೊದಲು ಕೇಳಿದ್ದು ಕಥೆಗಾರರಾದ ಇಂದ್ರಕುಮಾರ್ ಎಚ್. ಬಿ.  ಮತ್ತು ಕತೆಗಾರ್ತಿ ದೀಪ್ತಿ ಭದ್ರಾವತಿಯವರ ಮೂಲಕ ಎಂದು ಹೇಳಬಹದು. ಅವರು ಇವರ ಬಗ್ಗೆ ಆಗಾಗ ಫೇಸ್ಬುಕಿನಲ್ಲಿ ಪ್ರಸ್ತಾಪ ಮಾಡುತ್ತಿದ್ದದ್ದು ಕೇಳಿ ಇವರ ಬಗ್ಗೆ ತುಂಬಾ ಕುತೂಹಲವಿತ್ತು. ಸಹಜವಾಗಿ ಆ ಕುತೂಹಲಕ್ಕೆ ತಕ್ಕಂತೆ ಸಂತೆಬೆನ್ನೂರು ಸಮೀಪದ ಸಿದ್ದನಮಠದಲ್ಲಿ ನೆಲೆಸಿರುವ ನನ್ನ ಆತ್ಮೀಯರೊಬ್ಬರ ಮಗಳ ಹತ್ತಿರ ಫೋನಿನಲ್ಲಿ ಮಾತನಾಡುವಾಗ “ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ನಿನಗೆ ಗೊತ್ತ?” ಎಂದು ಕೇಳಿದೆ.

ತಕ್ಷಣ ಅವಳು “ಅಣ್ಣ, ಅವರು ನನ್ನ ಗುರುಗಳು ತುಂಬಾ ಒಳ್ಳೆಯವರು” ಎಂದು ಹೇಳಿದಳು. “ಮಾನವ ಕುಲ ತಾನೊಂದೇ ವಲಂ” ಎಂಬ ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿಗಳಾದ ಆದಿ ಕವಿ ಪಂಪ, ಬಸವಣ್ಣ ಮತ್ತು ಕುವೆಂಪು ಅವರ ಸಂದೇಶವನ್ನು ಪಾಲಿಸುತ್ತ ಶಿಕ್ಷಕ ವೃತ್ತಿಗೆ ಗೌರವ ತರುತ್ತಿರುವ ಫೈಜ್ನಟ್ರಾಜ್ ಅವರ ಕತೆಗಳು ಕೂಡ ಅದೇ ಸಂದೇಶವನ್ನು ಹೆಚ್ಚು ಹೆಚ್ಚು ಸಾರುತ್ತಿವೆ.

ನನಗೆ ಇವರ ಬಗ್ಗೆ ಕುತೂಹಲ ಹೆಚ್ಚಲು ಇನ್ನೊಂದು ಕಾರಣ ಸಂತೆಬೆನ್ನೂರು ಎಂಬ ಆ ಪಟ್ಟಣವು ಅಲ್ಲದ ಹಳ್ಳಿಯೂ ಅಲ್ಲದ ಆ ಐತಿಹಾಸಿಕ ಊರು. ಬಹಳಷ್ಟು ಜನ ನಮ್ಮ ಸಂತೆಕಡೂರಿನ ಮತ್ತು ಈ ಸಂತೆಬೆನ್ನೂರಿನ ನಡುವೆ ಗೊಂದಲ ಮೂಡಿಸಿಕೊಂಡು ನಿಮ್ಮ ಸಂತೆಬೆನ್ನೂರು ಎಂದು ನನಗೆ ಬಹಳ ಸಲ ಹೇಳಿದ್ದಾರೆ. ಈ ಸಂತೆಬೆನ್ನೂರಿನ ಐತಿಹಾಸಿಕ ಕಲ್ಯಾಣಿ ತುಂಬಾ ಸುಂದರವಾಗಿ ಅಷ್ಟೇ ಆಕರ್ಷಕವಾಗಿಯೂ ಇಂದಿಗೂ ಇದೆ.

ಈ ಜಾಗದಲ್ಲಿ ಹಲವಾರು ಚಲನಚಿತ್ರಗಳನ್ನು ಚಿತ್ರೀಕರಿಸಿದ್ದಾರೆ. ಈ ಊರಿನಲ್ಲಿ ಹಿಂದೆ ಇದ್ದ ಪಾಳೇಗಾರರಿಗೂ ಸಮೀಪದ ಬಸವಾಪಟ್ಟಣ ಮತ್ತು ತರೀಕೆರೆಯ ಪಾಳೇಗಾರರಿಗೂ ಸಂಬಂಧ ಇತ್ತು ಎಂದು ಖ್ಯಾತ ಸಾಹಿತಿಗಳಾದ ಸುಮತೀಂದ್ರ ನಾಡಿಗರು ಮತ್ತು ಎಂ ಚಿದಾನಂದ ಮೂರ್ತಿಗಳು ಹೇಳುತ್ತಿದ್ದರು.

ಜೊತೆಗೆ ಸವಣೂರಿನ ನವಾಬರು ಈ ಪ್ರದೇಶವನ್ನು ಆಳಿದ್ದರು ಎಂಬುದಕ್ಕೆ ಅಲ್ಲಿರುವ ಕಲ್ಯಾಣಿಯ ವಾಸ್ತುಶಿಲ್ಪವೇ ಸಾಕ್ಷಿಯಾಗಿದೆ. ಈ ಕಲ್ಯಾಣಿಯ ಮುಂದೆ ಫೈಜ್ನಟ್ರಾಜ್ ಅವರು ಆಗಾಗ ಕುಳಿತುಕೊಂಡು ಫೋಟೋ ತೆಗೆಸಿಕೊಂಡು ಅವನ್ನು ಫೇಸ್ಬುಕಿನಲ್ಲಿ ಹಾಕುತ್ತಿರುವುದನ್ನು ನಾನು ನೋಡಿದ್ದೇನೆ. ಅವರಿಗೂ ಆ ಕಲ್ಯಾಣಿಯ ಮೇಲೆ ವಿಶೇಷ ಆಸಕ್ತಿ ಇರುವ ಹಾಗೆ ಕಾಣಿಸುತ್ತದೆ. 

ಹಬ್ಬಿದಾ ಮಲೆ ಮಧ್ಯದೊಳಗೆ ಎಂಬ ಈ ಚಿಕ್ಕ ಕಥಾಸಂಕಲನದಲ್ಲಿ ಹದಿನೇಳು ಅತೀ ಚಿಕ್ಕ ಕತೆಗಳಿವೆ. ಒಂದೋ ಎರಡೋ ಸ್ವಲ್ಪ ದೊಡ್ಡದಾದ  ಸಣ್ಣ ಕತೆಗಳಿವೆ. ಹಾಗಾದರೆ, ಈ ಕತೆಗಳು ಎಂತಹ ಕತೆಗಳು? ಇಲ್ಲಿನ ಕತೆಗಳಲ್ಲಿ ಪ್ರೀತಿ ಇದೆ, ಬಡತನವಿದೆ, ಹಸಿವಿದೆ, ಮಾನವೀಯತೆ ಇದೆ. ಇವುಗಳ ಮಧ್ಯ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅದನ್ನು ಬಳಸಿಕೊಳ್ಳುವ ಹಲವರು ಸಿಗುತ್ತಾರೆ.

ಈ ಕತೆಗಳನ್ನು ಓದಿ ಮುಗಿಸಿದ ಮೇಲೆ ನೀವು ಭಾವನಾ ಜೀವಿಯಾಗಿದ್ದರೆ ನಿಮ್ಮ ಕಣ್ಣಲ್ಲಿ ನಿಮಗೆ ತಿಳಿಯದೆಯೇ ಕಣ್ಣೀರು ಸುರಿಯುತ್ತಿರುತ್ತದೆ. ಇದೇ ರೀತಿಯ ಕತೆಗಳನ್ನು ಇತ್ತೀಚೆಗೆ ನಾನು ಡಾ. ಗವಿಸ್ವಾಮಿಯವರ ಚಕ್ರ ಕಥಾಸಂಕಲನದಲ್ಲಿ ಓದಿದ್ದೇನೆ. ಇತ್ತೀಚೆಗೆ ಪ್ರಕಟಗೊಂಡು ಹೆಚ್ಚು ಜನರಿಗೆ ತಲುಪುತ್ತಿರುವ ಚಕ್ರ ಕಥಾಸಂಕಲದ ಕತೆಗಳು ಕೂಡ ನಮ್ಮ ಅಂತಃಕರಣವನ್ನು ಫೈಜ್ನಟ್ರಾಜ್ ಅವರ ಕತೆಗಳಂತೆ ಕಲಕುತ್ತವೆ.

ಈ ಕತೆಗಳ ಕಥಾನಾಯಕರು ಅಥವಾ ನಾಯಕಿಯರು ನಮ್ಮ ದಿನ ನಿತ್ಯ ವ್ಯವಹಾರಗಳಲ್ಲಿ ನಮ್ಮ ಕಣ್ಣ ಮುಂದೆಯೇ ಸಿಗುವವರು. ಈ ಕತೆಗಳನ್ನು ಓದಿದ ಮೇಲೆ ಬದುಕನ್ನು ನಾವು ಈ ರೀತಿಯೂ ನೋಡಬಹುದಲ್ಲವೇ? ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುತ್ತೇವೆ.

ಈ ಕಥಾಸಂಕಲನದ ಮುನ್ನುಡಿಯನ್ನು ಖ್ಯಾತ ಲೇಖಕಿ ಡಾ. ಕೆ. ಷರೀಫಾ ಅವರು ಬರೆದಿದ್ದಾರೆ. ಇದರ ಬೆನ್ನುಡಿಯನ್ನು ಕವಿಗಳಾದ ಜಿ. ಮುದ್ದುವೀರಸ್ವಾಮಿಗಳು ಬರೆದಿದ್ದಾರೆ. ಫೈಜ್ನಟ್ರಾಜ್ ಅವರ ಒಂದು ಕತೆಯನ್ನು ಮಹಾರಾಷ್ಟ್ರ ಸರ್ಕಾರ ತಮ್ಮ ರಾಜ್ಯದ ಪಠ್ಯಪುಸ್ತಕ ಒಂದಕ್ಕೆ  ಆಯ್ಕೆಮಾಡಿಕೊಂಡು ಬಳಸಿಕೊಂಡಿದೆ.

ತೀವ್ರ ಕುತೂಹಲಕಾರಿಯಾಗಿರುವ ಇಲ್ಲಿನ ಕೆಲವು ಕತೆಗಳ ಬಗ್ಗೆ ತಿಳಿಸಲು ಇಚ್ಛಿಸುತ್ತೇನೆ. ಈ ಸಂಕಲನದ ಮೊದಲ ಕತೆ ಇಪ್ಪತ್ತು ರೂಪಾಯಿ. ಇಲ್ಲಿ ಖಾಸೀಮಜ್ಜ ಎಂಬ ಮುದುಕನೊಬ್ಬ ಸೈಕಲಿನಲ್ಲಿ ಊರೂರು ತಿರುಗಿ ವ್ಯಾಪಾರ ಮಾಡುತ್ತಿರುತ್ತಾನೆ. ವಯಸ್ಸಿನ ಕಾರಣದಿಂದ ಅವನ ಹೆಂಡತಿ ರಸೂಲ್ ಬಿ ಮತ್ತು ಮಕ್ಕಳು ವ್ಯಾಪಾರ ಮಾಡುವುದು ಬಿಟ್ಟು ಮನೆಯಲ್ಲಿಯೇ ಇರಲು ಹೇಳುತ್ತಾರೆ.

ಅದೇ ಸಮಯಕ್ಕೆ ಆ ಮುದುಕನಿಗೆ ಅತೀಯಾದ ಧೂಮಪಾನದಿಂದ ಕೆಮ್ಮು ಹೆಚ್ಚಾಗಿ ಯಾವುದೇ ಮನೆ ಮದ್ದು ಮಾಡಿದರೂ ಅದು ನಿಲ್ಲುವುದಿಲ್ಲ. ಆಗ ವೈದ್ಯರ ಹತ್ತಿರ ತೋರಿಸಿಕೊಳ್ಳುತ್ತಾನೆ. ಆ ವೈದ್ಯರ ಶುಲ್ಕವನ್ನು ಕೊಡಲು ಅವನ ಹತ್ತಿರ ಇಪ್ಪತ್ತು ರೂಪಾಯಿ ಕಡಿಮೆಯಾಗುತ್ತದೆ. ಆ ಇಪ್ಪತ್ತು ರೂಪಾಯಿಯನ್ನು ವೈದ್ಯರಿಗೆ ಕೊಡಲು ಆ ಮುದುಕ ಏನು ಮಾಡುತ್ತಾನೆ ಎಂಬುದೇ ಕತೆಯ ತಿರುಳು. ಇಲ್ಲಿ ಮನುಷ್ಯನೊಬ್ಬ ತನ್ನ ಅಹಂಗೆ ಅಥವಾ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಏನು ಮಾಡುತ್ತಾನೆ ಎಂಬುದು ಈ ಕತೆಯ ಸಾರ. 

ಈ ಕಥಾಸಂಕಲನದ ಶೀರ್ಷಿಕೆಯ ಕತೆಯಾದ ಹಬ್ಬಿದಾ ಮಲೆ ಮಧ್ಯದೊಳಗೆ ಒಂದು ಕಾಲದಲ್ಲಿ ದಾವಣಗೆರೆಯ ಪೈಲ್ವಾನ್ ಮತ್ತು ವೆಯಿಟ್ ಲಿಫ್ಟರ್ ಆಗಿದ್ದ ಹಬೀಬ್ ಎಂಬುವನ ಕತೆ. ಸದಾ ಬಡವರ ಅಸಹಾಯಕ ಜನರ, ತುಳಿತಕ್ಕೊಳಗಾದವರ ಪರವಾಗಿ ನಿಲ್ಲುವ ಇವನು ಯಾವುದೋ ಕ್ಷುಲಕ ಕಾರಣಕ್ಕೆ ಜೈಲಿಗೂ ಹೋಗಿ ಬಂದಿರುತ್ತಾನೆ. ಈಗ ಇವನು ಪಾಶ್ವವಾಯುವಿನಿಂದ ಹಾಸಿಗೆ ಹಿಡಿಯಬೇಕಾಗುತ್ತದೆ.

ಅವನಿಗೆ ಯಾವ ರೀತಿಯ ಆಧುನಿಕ ಔಷಧಿಗಳಿಂದಲೂ ಪ್ರಯೋಜನವಾಗುವುದಿಲ್ಲ. ಆಗ ಇವನ ಹೆಂಡತಿ ಒಂದು ಹಜರತ್ ಮಸೀದಿಯ ಮೌಲ್ವಿಯವರ ಮನೆಗೆ ನಾಟಿ ಔಷಧಿ ಕೊಡಿಸಲು ಕರೆದುಕೊಂಡು ಹೋದಾಗ ಅಲ್ಲಿ ಸುನ್ನಿ ಮತ್ತು ತಬ್ಲೀಕ್ ಜಮಾತ್ ಎಂಬ ವಿವಾದಕ್ಕೆ ತಿರುಗಿ ದೇವರಿಗಿಂತ ಮೌಲ್ವಿಯ ಆರ್ಭಟವೇ ಹೆಚ್ಚಾಗುತ್ತದೆ. ಇಲ್ಲಿ ದೇವರು ಮತ್ತು ಭಕ್ತನ ನಡುವೆ ಬರುವ ಇನ್ನೊಬ್ಬ ವ್ಯಕ್ತಿ ಎಲ್ಲವನ್ನೂ ವಿಚಿತ್ರವಾಗಿ ಕಾಣುವಂತೆ ಮಾಡುತ್ತಾನೆ.

ಕತೆ ಧರ್ಮ ರಾಜಕೀಯಕ್ಕೆ ತಿರುಗಿಕೊಳ್ಳುತ್ತದೆ. ಚಿಕಿತ್ಸೆ ನೀಡಬೇಕಾದ ಮೌಲ್ವಿಯೇ ಧರ್ಮದ್ರೋಹವೆಸಗಿದ್ದಾನೆಂದು ಇವನಿಗೆ ಶುಶ್ರೂಷೆ ಕೊಡಲು  ಸಂಪೂರ್ಣ ನಿರಾಕರಿಸುತ್ತಾನೆ. ಇಲ್ಲಿ ಧರ್ಮಮುಖ್ಯವೋ ಮಾನವೀಯತೆ ಮುಖ್ಯವೋ ಎಂಬ ಪ್ರಶ್ನೆಯನ್ನು ಆ ಮೌಲ್ವಿ ಹಾಕಿಕೊಳ್ಳುವುದಿಲ್ಲ. ಓದುಗರು ಹಾಕಿಕೊಳ್ಳುವಂತೆ ಲೇಖಕರು ಈ ಕತೆಯನ್ನು ಚಿತ್ರಿಸಿದ್ದಾರೆ.

ಇಲ್ಲಿ ಬರುವ ಚೌರದ ಪಾರವ್ವನ ಕತೆ ಒಂದು ವಿಶಿಷ್ಟ ಸಮಸ್ಯೆಯನ್ನು ನಮ್ಮ ಮುಂದೆ ನೀಡುತ್ತದೆ. ಅವಳೊಬ್ಬಳು ವಿಧವೆ. ಗಂಡ ಸತ್ತ ಮೇಲೆ ಅವಳು ಗಂಡನ ಚೌರದ ವೃತ್ತಿಯನ್ನೇ ತಾನು ಮುಂದುವರೆಸಿ ಅವನ ಅಂಗಡಿಯನ್ನೇ ತನ್ನ ಹೊಟ್ಟೆಪಾಡಿಗೆ ತಾನೇ ನಡೆಸಿಕೊಂಡು ಹೋಗುತ್ತಾಳೆ. ಅಲ್ಲಿಗೆ ಬರುವ ಮದುವೆಯಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಅವಳಿಗೆ ಏಕಮುಖ ಪ್ರೀತಿ ಹುಟ್ಟುತ್ತದೆ. ಮುಂದೆ ಏನಾಗುತ್ತದೆ ಎಂದು ತಿಳಿಯಲು ಕತೆಯನ್ನು ಓದಲೇ ಬೇಕು.

ಇದೆ ಚೌರದ ಪಾರವ್ವನನ್ನೇ ಹೋಲುವ ಇನ್ನೊಬ್ಬ ಮಹಿಳೆ ಸಂಕವ್ವ. ಸಂಕವ್ವನ ಸ್ವಾತಂತ್ರ್ಯ ದೇಶದ ಸ್ವಾತಂತ್ರ್ಯದ ಜೊತೆಗೆ ಸ್ತ್ರೀ ಸ್ವಾತಂತ್ರ್ಯವನ್ನು ಚೆನ್ನಾಗಿ ಬಿಂಬಿಸುತ್ತದೆ.

ಕೂಡದ ಹಳಿಯಲಿ ಎಂಬ ಕತೆ ತನ್ನ ಶೀರ್ಷಿಕೆಯಲ್ಲಿಯೇ ಸಂಪೂರ್ಣ ಕತೆಯ ಗುಟ್ಟನ್ನು ಹಿಡಿದುಕೊಂಡಿದೆ. ಇಲ್ಲಿ ನಬಿ ಎಂಬ ಬಡವ ಅತೀಲೋಕ ಸುಂದರಿಯಂತಿರುವ ಹುಡುಗಿಯನ್ನು ಮದುವೆಯಾಗುತ್ತಾನೆ. ಆ ಹುಡುಗಿ ಎರಡು ಮಕ್ಕಳಾದ ಮೇಲೆ ಹಣಕ್ಕಾಗಿ ಬೇರೊಬ್ಬನ ಪ್ರೇಮಪಾಶದಲ್ಲಿ ಬೀಳುತ್ತಾಳೆ.  ಜೊತೆಗೆ ನಬಿಗೆ ತಲಾಕ್ ಕೊಡುತ್ತಾಳೆ. ಆದರೆ ಅವಳ ಮಕ್ಕಳನ್ನು ನಬಿಯೇ ನೋಡಿಕೊಳ್ಳಬೇಕಾಗುತ್ತದೆ. ಅಲ್ಲಿ ಅವನು ವಿಚಿತ್ರ ಪರಿಸ್ಥಿತಿಗೆ ತಲುಪುತ್ತಾನೆ. ಅವನಿಗೆ ಧರ್ಮಸಂಕಟ ಎದುರಾಗುತ್ತದೆ.

ಕಡೆಯ ಪಯಣದಲ್ಲಿ ಎಂಬ ಕತೆ ವ್ಯಕ್ತಿಯೊಬ್ಬ ಸತ್ತ ನಂತರ ಅವನ ಸಂಸ್ಕಾರದ ವಿಷಯವಾಗಿ ಉದ್ಭವವಾಗುವ ಸಮಸ್ಯೆ ಮತ್ತು ಅದನ್ನು ರಾಜಕೀಯಕ್ಕೆ ಹೇಗೆಲ್ಲಾ ಬಳಸಿಕೊಂಡರು ಎಂಬುದನ್ನು ತುಂಬಾ ಚೆನ್ನಾಗಿ ತೋರಿಸುತ್ತದೆ.

ಕಣ್ಣುಗಳು ಕತೆಯಲ್ಲಿ ಒಬ್ಬ ಕವಿಯತ್ರಿಯ ಕವಿತೆಯನ್ನು ಕುರುಡು ಹಾಡುಗಾರನೊಬ್ಬ ಆಕಾಶವಾಣಿಯಲ್ಲಿ ಹಾಡುತ್ತಾನೆ. ಆ ಹಾಡುಗಾರನಿಗೆ ಆ ಕವಿತೆಯ ಲೇಖಕ ಅಥವಾ ಲೇಖಕಿ ಯಾರೆಂದು ಗೊತ್ತಿರುವುದಿಲ್ಲ. ಇಲ್ಲಿ ಆ ಕವಿತೆಯ ಕವಿಯತ್ರಿ ಆ ಹಾಡುಗಾರನ ದಿವ್ಯಧ್ವನಿಗೆ ಸೋಲುತ್ತಾಳೆ. ಅವನನ್ನು ಹುಡುಕಿಕೊಂಡು ಅವನ ಊರಿಗೆ ಹೋಗುತ್ತಾಳೆ. ಅಲ್ಲಿ ಅವನನ್ನು ಭೇಟಿಯಾಗಿ ಮಾತನಾಡಿಸುತ್ತಾಳೆ. ಆ ಹಾಡುಗಾರನಿಗೆ ಮತ್ತೇ ಆ ಕವಿತೆಯನ್ನು ಹಾಡಲು ಕೇಳಿ ಕೊಳ್ಳುತ್ತಾಳೆ. ಅವಳ ಅಂತರಂಗದ ಕಣ್ಣುಗಳು ತೆರೆದು ಅವಳಲ್ಲಿ ಪ್ರೇಮಾಂಕುರವಾಗುತ್ತದೆ.

ಅಲ್ಲಾ ದೇವರು, ಅನ್ನ ದೇವರು ಎಂಬ ಕತೆ ಬಡತನದ ಹಸಿವಿನ ಬ್ರಹ್ಮಾಂಡವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ? ಅನ್ನವಿರುವನಕ ಪ್ರಾಣವು; ಜಗದೊಳಗನ್ನವೇ ದೈವ! ಸರ್ವಜ್ಞ ಎಂಬ ಕ್ರಾಂತಿ ಕವಿ ಸರ್ವಜ್ಞನ ವಚನದ ಸಾಲುಗಳು ಈ ಕತೆಯನ್ನು ಓದಿದಾಗ ನಮ್ಮ ಮುಂದೆ ಬರುತ್ತವೆ. 

ಕಳೆದು ಹೋದವರ ನಡುವೆ ಎಂಬ ಕತೆ ಒಂದು ಹಳ್ಳಿಯ ಕತೆ. ಅಲ್ಲಿನ ಗ್ರಾಮ ರಾಜಕೀಯದ ಅಥವಾ ಗ್ರಾಮಾಯಣದ ಬಗ್ಗೆ ತಿಳಿಸುವ ಕತೆ. ಇಲ್ಲಿ ನಾನು ವೈಯುಕ್ತಿಕವಾಗಿ ಅವಿಭಜಿತ ಶಿವಮೊಗ್ಗ ಜಿಲ್ಲೆಯ ಬಗ್ಗೆ ತುಂಬಾ ಪ್ರೀತಿಯಿಟ್ಟುಕೊಂಡವನು. ಹಿಂದೆ ಅವಿಭಜಿತ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳನ್ನು ದಾವಣಗೆರೆ ಜಿಲ್ಲೆಗೆ ಸೇರಿಸಿ ಪ್ರತ್ಯೇಕ ಜಿಲ್ಲೆ ಮಾಡಿದ್ದು ನನಗೂ ಇಷ್ಟವಾಗಿರಲಿಲ್ಲ. ಆ ತಾಲ್ಲೂಕುಗಳ ಶೇಕಡಾ ತೊಂಬತ್ತೊಂಬತ್ತು ಜನಕ್ಕೆ ಅದು ಇಷ್ಟವಾಗಿರಲಿಲ್ಲ.

ಪ್ರತ್ಯೇಕ ಜಿಲ್ಲೆಗಳನ್ನು ರಚನೆ ಮಾಡಿದ ಜೆ.ಎಚ್. ಪಟೇಲರ ಬಗ್ಗೆಯೂ ಸ್ವಲ್ಪ ಅಸಮಾಧಾನವಿತ್ತು. ಇಲ್ಲಿಯ ನಿರೂಪಕನಿಗೂ ಆ ಅಸಮಾಧಾನವಿದೆ. ಅಂತಹ ವಿಭಜಿತ ತಾಲ್ಲೂಕಿಗೆ ಸೇರಿರುವ ಒಂದು ಹಳ್ಳಿಯಲ್ಲಿ ಮುಸ್ಲಿಂ ಹುಡುಗನೊಬ್ಬ ಬ್ಯಾಡರ ಹುಡುಗಿಯೊಬ್ಬಳನ್ನು ಪ್ರೀತಿಸಿ ಅವಳ ಜೊತೆ ಓಡಿಹೋಗುತ್ತಾನೆ. ಅದೇ ಸಮಯದಲ್ಲಿ ಊರಿನಲ್ಲಿ ಮಾರಿ ಜಾತ್ರೆ ಮಾಡಲು ಊರಿನ ಮುಖಂಡರೆಲ್ಲಾ ಸೇರಿರುತ್ತಾರೆ. ಆಗ ನಡೆಯುವ ಅಲ್ಲಿನ ಘಟನೆಗಳು ಈ ಕತೆಯಲ್ಲಿ ತುಂಬಾ ಚೆನ್ನಾಗಿ ಚಿತ್ರಿತವಾಗಿವೆ.

ಇಲ್ಲಿನ ಕತೆಗಳು ಒಂದಕ್ಕಿಂತ ಒಂದು ಭಿನ್ನವಾಗಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ ಮತ್ತು ವಸ್ತುವಿನಿಂದಲೂ ತುಂಬಾ ಚೆನ್ನಾಗಿ ಮೂಡಿಬಂದಿವೆ.

ಇಲ್ಲಿನ ಮುನ್ನುಡಿಯಲ್ಲಿ ಡಾ. ಕೆ. ಷರೀಫಾ ಅವರು ಒಂದು ವಿಷಯವನ್ನು ಪ್ರಸ್ತಾಪಿಸುತ್ತಾರೆ. ಅದು ತುಂಬಾ ಮುಖ್ಯವಾದ ವಿಷಯ ಕೂಡ. ಅದು ಈ ರೀತಿ ಇದೆ. ಚರಿತ್ರೆಯಲ್ಲಿ ಯಾರೋ ಮಾಡಿದ ಪಾಪ ಹೊತ್ತು ಸಾಗುವುದು ಮತ್ತು ಆ ಪಾಪದ ಹೊಣೆ ಹೊರುವ ವಾರಸುದಾರಿಕೆಯನ್ನು ಹೊತ್ತು ನಡೆಯುವುದು ತುಂಬಾ ಕಷ್ಟಕರ ಎಂದು ಹೇಳುತ್ತಾರೆ. ಇದು ೨೦೦೧ರ ನಂತರದ ಪ್ರಪಂಚದ ಪ್ರತಿಯೊಬ್ಬ ಮುಸ್ಲಿಂ ಪ್ರಜೆಯ ಸಮಸ್ಯೆಯೂ ಆಗಿದೆ.

ಅದರಲ್ಲೂ ಅವರು ಅಲ್ಪ ಸಂಖ್ಯಾತರಾಗಿರುವ ದೇಶಗಳಲ್ಲಿ ಅದರ ಸಮಸ್ಯೆ ಬಹುದೊಡ್ಡದು. ಅಲ್ಲಿ ಸಮಾಜ ಸದಾ ಅವರನ್ನು ಅಪರಾಧಿ ಅಥವಾ ಕೆಟ್ಟವನು ಎಂದು ನೋಡುತ್ತಿರುತ್ತದೆ. ಅಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಲೇಖಕ ತನ್ನ ಜವಾಬ್ದಾರಿಯನ್ನು ಮರೆಯದೇ ಬರೆಯುವುದು ಒಂದು ಹಳ್ಳಿಯ ಅಥವಾ ದೇಶದ ಸಹಬಾಳ್ವೆಯ ನಿಟ್ಟಿನಿಂದ ತುಂಬಾ ಮಹತ್ವದ ಪಾತ್ರವಯಿಸುತ್ತದೆ.

ಇಲ್ಲಿ ಸಂತೆಬೆನ್ನೂರು ಫೈಜ್ನಟ್ರಾಜ್ ಅವರು ಅಂತಹ ಒಂದು ಜವಾಬ್ದಾರಿಯುತ ಪಾತ್ರ ನಿರ್ವಯಿಸಿದ್ದಾರೆ. ಇಲ್ಲಿ ಅವರು ಯಾರನ್ನೂ ದೂಷಿಸದೆ ಈ ಕಥಾಸಂಕಲನದ ಮೂಲಕ ಮಾನವತೆಯೊಂದೇ ಕೊನೆಗೆ ಗೆಲ್ಲುವುದು ಎಂದು ತೋರಿಸಿದ್ದಾರೆ. ಆ ಕಾರಣದಿಂದ ಈ ಕಥಾಸಂಕಲನ ಕತೆಗಳು ಎಲ್ಲರೂ ಓದಬಹುದಾದ ನೀತಿ ಕತೆಗಳನ್ನಾಗಿಯೂ ಕೂಡ ನೋಡಬಹುದು.

ಇಂತಹ ಒಂದು ಒಳ್ಳೆಯ ಕಥಾಸಂಕಲನವನ್ನು ಬರೆದಿರುವುದಕ್ಕೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದರ ಪ್ರಕಾಶಕರು ರೇಷು ಪ್ರಕಾಶನ ಸಂತೆಬೆನ್ನೂರು ಇವರು. ಈ ಕಥಾಸಂಕಲನ ಓದಲು ಬಯಸುವವರು ಅಲ್ಲಿಂದ ಪುಸ್ತಕಗಳನ್ನು ತರಿಸಿಕೊಳ್ಳಬಹುದು.

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಕತೆಗಾರರಿಗೂ, ಪರಿಚಯಿಸಿದವರಿಗೂ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: