ಮೂಡ್ನಾಕೂಡು ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ‘ನೆನಪಿನ ಹಕ್ಕಿ’

ನಾ ದಿವಾಕರ

ಒಂದು  ನಿರ್ದಿಷ್ಟ ತತ್ವ್ವ, ಸಿದ್ಧಾಂತ ಮತ್ತು ಜೀವನ ಮಾರ್ಗವನ್ನು ಅನುಸರಿಸಿ ಬದುಕು ಸವೆಸುವ ವ್ಯಕ್ತಿಗೆ ಆತ್ಮ ಕಥನ ಎನ್ನುವುದು ನಾವು ಜೀವನದಲ್ಲಿ ಸಹಜವಾಗಿ ಕಟ್ಟಿಕೊಳ್ಳುವ ಗೋಡೆಗಳನ್ನು ದಾಟಿ, ಬೇಲಿಗಳನ್ನು ಮೀರಿ, ವಿಶಾಲ ವಿಶ್ವದ ದಿಗಂತದಲ್ಲಿ ನಿಲ್ಲುವ ಒಂದು  ಜಂಗಮ ರೂಪಿ ಸ್ಮಾರಕದಂತೆ ನಿಂತುಬಿಡುತ್ತದೆ. ಮೊಗೆದಷ್ಟೂ ನೀರು ಬಗೆದಷ್ಟೂ ನಿಧಿ ಎನ್ನುವ ಹಾಗೆ ಜೀವನದ ವಿವಿಧ ಕಾಲಘಟ್ಟಗಳನ್ನು ಶೋಧಿಸುತ್ತಾ ನಡೆದಾಗ ತೆರೆದುಕೊಳ್ಳುವ ಪ್ರತಿಯೊಂದು ಹಾಳೆಯಲ್ಲೂ ರಂಗುರಂಗಿನ ಚಿತ್ತಾರ ಕಾಣವಂತೆಯೇ ಅಳಿಸಿದ ರಂಗೋಲಿಯೂ ಕಾಣುತ್ತದೆ, ಸಾಧನೆಗಳ ಕೋಟೆಗಳ ಗೋಡೆಗಳ ಮೇಲೆ ಅಪಮಾನದ, ಶೋಷಣೆಯ, ಅವಹೇಳನದ ಬಿಂಬಗಳು ಕಾಣುತ್ತವೆ. ಭಾರತದ ಸಂದರ್ಭದಲ್ಲಿ ಈ ಆತ್ಮಕಥನಗಳ ಹಿಂದೆ ನೋವಿನ ಛಾಯೆ ಸದಾಕಾಲವೂ ಕಂಡುಬರುತ್ತದೆ.

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದೇ ಕ್ಲಿಷ್ಟಕರ ಎನ್ನುವ ಪರಿಸ್ಥಿತಿಯಲ್ಲೇ ಈ ದೇಶದ ಹೂದೋಟಗಳಲ್ಲಿ ಸಾಕಷ್ಟು ಸಂಜೀವಿನಿಗಳು ಅರಳಿವೆ, ಹಾಗೆಯೇ 21ನೆಯ ಶತಮಾನದಲ್ಲೂ ಆಧುನಿಕ ಭಾರತದ ಸಾಮಾಜಿಕ ಬದುಕನ್ನು ಕಾಡುತ್ತಿರುವ ಶ್ರೇಷ್ಠತೆಯ ವ್ಯಸನ, ಮೇಲ್‍ಸ್ತರದ ಯಜಮಾನ್ಯದ ಅಹಮಿಕೆ ಮತ್ತು ಜಾತಿ ಪದ್ಧತಿಯ ಅನಿಷ್ಟ ರೋಗಗಳನ್ನು ಗುಣಪಡಿಸುವ ಬೌದ್ಧಿಕ ಔಷಧಿಗಳು ಅಕ್ಷರ ರೂಪದಲ್ಲಿ ಹೊರಹೊಮ್ಮಿವೆ.

ಇಂತಹ ರೋಗಗ್ರಸ್ಥ ಭಾರತದ ಶ್ರೇಣೀಕೃತ ಸಮಾಜದಲ್ಲಿ, ಎಲ್ಲ ರೀತಿಯ ಅಪಮಾನಗಳನ್ನು ಸವಾಲಿನಂತೆ ಎದುರಿಸಿ, ಬದುಕು ಸವೆಸಿ, ಆತ್ಮ ನಿಗ್ರಹ ಮತ್ತು ಆತ್ಮಬಲವನ್ನು ತೋರಿ, ಯಶಸ್ಸಿನ ಉತ್ತುಂಗ ತಲುಪಿದ ಸಾವಿರಾರು ಚೇತನಗಳು ನಮ್ಮ ನಡುವೆ ಇದ್ದರು, ಇದ್ದಾರೆ, ಮುಂದೆಯೂ ಇರಲಿದ್ದಾರೆ. ಅಂತಹ ಒಬ್ಬ ಕವಿ, ರಂಗಕರ್ಮಿ, ಲೇಖಕ, ಸಮಾಜ ಸೇವಕ ಮತ್ತು ಸಹೃದಯ, ಪ್ರಾಮಾಣಿಕ ಸರ್ಕಾರಿ ನೌಕರನ ಬದುಕಿನ ರೆಕ್ಕೆ ಪುಕ್ಕಗಳನ್ನು “ನೆನಪಿನ ಹಕ್ಕಿಯ ಹಾರಲು ಬಿಟ್ಟು” ಕೃತಿ ನಮ್ಮ ಮುಂದೆ, ಎಳೆಎಳೆಯಾಗಿ ಅಕ್ಷರ ರೂಪದಲ್ಲಿ ತೆರೆದಿಡುತ್ತದೆ. ದಲಿತ ಕವಿ ಎನಿಸಿಕೊಳ್ಳಲಿಚ್ಚಿಸದೆ, ಬುದ್ಧ ಮಾರ್ಗದಲ್ಲಿ ನಡೆಯುತ್ತಲೇ ದೇಶ ಭಾಷೆಗಳ ಅಸ್ಮಿತೆಗಳನ್ನು ಮೀರಿ ತಮ್ಮ ಅಂತರಂಗದ ಅನುಭಾವ ಮತ್ತು ಬಾಳ ಪಯಣದ ಸಿಹಿ/ಕಹಿ ಅನುಭವಗಳನ್ನು ಶ್ರೀಯುತ ಮೂಡ್ನಾಕೂಡು ಚಿನ್ನಸ್ವಾಮಿಯವರು ತಮ್ಮ ಆತ್ಮಕಥನದಲ್ಲಿ ತೆರೆದಿಡುತ್ತಾ ಹೋಗುತ್ತಾರೆ.

ಸಾಮಾನ್ಯವಾಗಿ ಆತ್ಮಕಥನಗಳು ಕೃತಿಕಾರರ ಸ್ವಂತ ಬದುಕಿನ ಮತ್ತು ಈ ಬದುಕಿನ ಸುತ್ತಲಿನ ಕೌಟುಂಬಿಕ, ಸಾಮಾಜಿಕ, ಸಾಂಸ್ಕಂತಿಕ ಪರಿಸರದ ಸುತ್ತ ಹೆಣೆದುಕೊಂಡಿರುತ್ತವೆ. ಕೃತಿಕಾರನು ತನ್ನ ವ್ಯಕ್ತಿಗತ ಬದುಕಿನ ನೋವು, ನಲಿವು, ದುಃಖ ದುಮ್ಮಾನಗಳನ್ನು ಬದುಕಿನ ಚೌಕಟ್ಟಿನಲ್ಲಿ ಎದುರಿಸಿ, ನಿವಾರಿಸಿದ ಪರಿಯನ್ನು ಕಟ್ಟಿಕೊಡಲಾಗುತ್ತದೆ. ಬಹುಪಾಲು ಸಂದರ್ಭಗಳಲ್ಲಿ ಆತ್ಮರತಿಯೊಂದಿಗೇ ಅನುಕಂಪ ಸೃಷ್ಟಿಸುವಂತಹ ಧೋರಣೆ, ಪ್ರವೃತ್ತಿಯನ್ನು ಅನೇಕ ಕೃತಿಗಳಲ್ಲಿ ಕಾಣಬಹುದು. ನೆನಪಿನ ಹಕ್ಕಿ ಕೃತಿಯಲ್ಲಿ ಚಿನ್ನಸ್ವಾಮಿಯವರು ಈ ಮಿತಿಗಳನ್ನು ದಾಟಿ, ತಮ್ಮ ನೋವುಗಳನ್ನು ಒಡಲಲ್ಲಿಟ್ಟುಕೊಂಡೇ ತಾವು ಕಂಡ ಸಮಾಜದ ಒಂದು ವೈವಿಧ್ಯಮಯ ಚಿತ್ರಣವನ್ನು ಓದುಗರ ಮುಂದಿಡುತ್ತಾರೆ.

ಪ್ರಶಸ್ತಿಗಳು ತಾವಿದ್ದಲ್ಲಿಗೆ ಬಂದರೂ, ಪ್ರಶಸ್ತಿಗಳ ಆಕಾಂಕ್ಷೆ ಇಲ್ಲದೆ, ಗುರುತಿಸುವಿಕೆಯ ಬಯಕೆಯೂ ಇಲ್ಲದೆ, ನಮ್ಮ ಜಾತಿ ಕೇಂದ್ರಿತ ಸಮಾಜದ ಬೌದ್ಧಿಕ ದಾರಿದ್ರ್ಯವನ್ನು, ದೌರ್ಬಲ್ಯಗಳನ್ನು ಓದುಗರ ಮುಂದಿಡುತ್ತಲೇ ಚಿನ್ನಸ್ವಾಮಿಯವರು ತಮ್ಮ ನೆನಪಿನ ಹಕ್ಕಿಯ ರೆಕ್ಕೆಗಳನ್ನು ಮತ್ತಷ್ಟು ವರ್ಣರಂಜಿತಗೊಳಿಸುತ್ತಾರೆ.

ಕೃತಿಯಲ್ಲಿನ ಕೊನೆಯ ಸಾಲುಗಳನ್ನು ಮೊದಲೇ ಹೇಳುವುದಾದರೆ “ ಒಬ್ಬ ಬರಹಗಾರನ ಬದುಕು ಅವನೊಬ್ಬನ ಬದುಕಷ್ಟೇ ಆಗಿರುವುದಿಲ್ಲ. ಅದು ಅವನ ಕಾಲವನ್ನು, ದೇಶವನ್ನು, ಸಂಸ್ಕಂತಿಯನ್ನು, ಸಾಹಿತ್ಯವನ್ನು, ರಾಜಕೀಯವನ್ನು, ಇತಿಹಾಸವನ್ನು, ಸಮಾಜವನ್ನು ಮತ್ತು ಇತರ ಮಾನವಿಕಗಳನ್ನು ಪ್ರತಿಬಿಂಬಿಸಬೇಕು”(ಪು 215)ಎಂದು ಹೇಳುವ ಮೂಲಕ ಸಹೃದಯ ಕವಿ ಚಿನ್ನಸ್ವಾಮಿಯವರು ನೆನಪಿನ ಹಕ್ಕಿಗೆ ಮತ್ತೊಂದು ಗರಿ ಮೂಡಿಸುತ್ತಾರೆ.

ಕವಿಯಾದವನಿಗೆ ಕಲ್ಪನೆಯೊಂದಿದ್ದರೆ ಸಾಲದು ಸೃಜನಶೀಲತೆಯೂ ಬೇಕು, ಸಂವೇದನೆಯೂ ಬೇಕು ಮತ್ತು ಮಾನವೀಯ ಕಾಳಜಿಯೂ ಬೇಕು ಎನ್ನುವುದನ್ನು ಈ ಸಾಲುಗಳು ಬಿಂಬಿಸುತ್ತವೆ. ಹಾಗಾಗಿ ಓರ್ವ ಕವಿಯ ಆತ್ಮಕಥನ ಎಂದರೆ ಅದು ಕೇವಲ ವ್ಯಕ್ತಿ ಚಿತ್ರಣವಾಗಿರಕೂಡದು, ಏಕೆಂದರೆ ಕವಿ ಒಳಗಣ್ಣಿನಿಂದ ಎಲ್ಲವನ್ನೂ ನೋಡುತ್ತಾನೆ, ರವಿ ಕಾಣದ್ದನ್ನು ಕವಿ ಕಂಡ ಎನ್ನುವುದನ್ನೇ ಪುನುರಚ್ಛರಿಸುವುದಾದರೆ, ಕವಿ ಅನ್ಯರಿಗೆ ಗೋಚರಿಸದ ವಾಸ್ತವಗಳನ್ನು ಗ್ರಹಿಸುವ ಶಕ್ತಿ ಹೊಂದಿರುತ್ತಾನೆ. ಮಾನವಿಕಗಳು ಮುನ್ನೆಲೆಗೆ ಬರುವುದೂ ಇಲ್ಲಿಯೇ ಎನ್ನುವುದನ್ನು ನೆನಪಿನ ಹಕ್ಕಿಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಗ್ರಾಮೀಣ ಹಿನ್ನೆಲೆಯ ತಮ್ಮ ಬಾಲ್ಯದ ಹೆಜ್ಜೆ ಗುರುತುಗಳನ್ನು “ ನಾನು ಅವ್ವ ಮತ್ತು ಕಾಗೆ ” ಎಂಬ ತಮ್ಮದೇ ಕಥೆಯ ಮೂಲಕ   ಬಿಂಬಿಸುತ್ತಾ ಹೋಗುವ ಚಿನ್ನಸ್ವಾಮಿಯವರ ಬಾಲ್ಯ ಹಲವು ವೈವಿಧ್ಯತೆಗಳಿಂದ ಕೂಡಿರುವುದು ಓದುಗರ ಗಮನಕ್ಕೆ ಬರಲೇಬೇಕು. ಕಟ್ಟಡದ ಅಂದಚೆಂದ ಅದರ ವಿನ್ಯಾಸದಲ್ಲಿದೆ ಎನ್ನುವಂತೆ ಕಥನದ ಸೌಂದರ್ಯವೂ ಅಕ್ಷರ ವಿನ್ಯಾಸದಲ್ಲಿ ಅಡಗಿರುತ್ತದೆ. ಸಮಾಜದ ಶೋಷಿತ ಸಮುದಾಯದಿಂದ ಬಂದು ವಿದ್ಯಾಭ್ಯಾಸದಲ್ಲಿ ತೊಡಗುವ ಪ್ರಕ್ರಿಯೆಯಲ್ಲಿ ಈ ಜೀವಗಳು ಎದುರಿಸುವ ಆತಂಕ, ತುಮುಲ ಮತ್ತು ಅಪಮಾನಗಳನ್ನು ಒಳಹೊಕ್ಕು ನೋಡಿದರೆ ಮಾತ್ರ ಗ್ರಹಿಸಲು ಸಾಧ್ಯ .

“ಡಿ ಸಿ ಕ್ಯಾಂಡಿಡೇಟ್ಸ್ ಯಾರಿದ್ದೀರಿ” ಈ ಅಧ್ಯಾಯದಲ್ಲಿ ಚಿನ್ನಸ್ವಾಮಿಯವರು ಈ ಮಾನಸಿಕ ತುಮುಲಗಳನ್ನು ಸುಸ್ಪಷ್ಟತೆಯಿಂದ ನಮ್ಮ ಮುಂದಿಡುತ್ತಾರೆ. ಇದೇ ಆತಂಕಗಳನ್ನು ತಮ್ಮ ನಂತರದ ದಿನಗಳಲ್ಲಿ ನೌಕರಿ ನಿರ್ವಹಿಸುವಾಗಲೂ ಎದುರಿಸುವುದನ್ನೂ ಅಷ್ಟೇ ಮಾರ್ಮಿಕವಾಗಿ ತೆರೆದಿಡುತ್ತಾರೆ.   ಡಿ ಸಿ ಕ್ಯಾಂಡಿಡೇಟ್ಸ್ ಎಂದು ಗುರುತಿಸಿಕೊಂಡು ಎದ್ದು ನಿಲ್ಲುವಾಗ ನಾನು ಬೆವತುಹೋಗುತ್ತಿದ್ದೆ ಎಂಬ ಚಿನ್ನಸ್ವಾಮಿಯವರ ಮಾತುಗಳು ಸೂಕ್ಷ್ಮ ಸಂವೇದನೆ ಉಳ್ಳವರಿಗೆ ಚುಚ್ಚಿದಂತಾಗುತ್ತದೆ. ಆಗ ಎಸ್ ಸಿ ಎಂಬ ಬಳಕೆ ಜಾರಿಗೆ ಬಂದಿರಲಿಲ್ಲವಾಗಿ ಡಿಪ್ರೆಸ್ಡ್ ಕ್ಲಾಸಸ್ ಎಂದು ಕರೆಯಲಾಗುತ್ತಿತ್ತು.

ಆದರೆ ಐದಾರು ದಶಕಗಳ ನಂತರ ಎಸ್‍ಸಿ ಎಂಬ ಪದ  ಬಳಕೆಗೆ ಬಂದರೂ, ಹರಿಜನ ಎನ್ನುವ ಅಪಮಾನಕರ ಪದ ನಿಷಿದ್ಧವಾದರೂ, ಮೇಲ್ಜಾತಿಯ ಮನಸುಗಳು ಸಂಪೂರ್ಣವಾಗಿ ಬದಲಾಗಿರಲಿಲ್ಲ ಎನ್ನುವುದನ್ನು ಕವಿ ಚಿನ್ನಸ್ವಾಮಿ ತಮ್ಮ ಕೆಎಸ್‍ಆರ್‍ಟಿಸಿ ಸೇವಾವಧಿಯಲ್ಲಿನ ಅನುಭವಗಳ ಮೂಲಕ ಸ್ಪಷ್ಟಪಡಿಸುತ್ತಾರೆ. ಮಹದೇವಯ್ಯ ಎಂಬ ಅವರದೇ ಊರಿನ ಟಿಸಿ ತನ್ನ ಮೇಲಧಿಕಾರಿಯೊಡನೆ ಫೋನಿನಲ್ಲಿ ಮಾತನಾಡುವಾಗ ತಮ್ಮನ್ನು ಜಾತಿವಾದಿ ಎಂದು ಕರೆದದ್ದನ್ನು ನೆನಪಿಸಿಕೊಳ್ಳುವ ಮೂಲಕ (ಪು 166) ಐದು ದಶಕಗಳ ಭಾರತ ಸಾಮಾಜಿಕವಾಗಿ ಬದಲಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ.

35 ವರ್ಷಗಳ ನನ್ನ ಬ್ಯಾಂಕಿಂಗ್ ಸೇವೆಯಲ್ಲಿ ನನಗೂ ಇಂತಹ ಅನುಭವಗಳಾಗಿವೆ. ಆದರೆ ನಾನು ಭೌತಿಕವಾಗಿ ಬೇಲಿಯ ಒಳಗಿದ್ದವನಾಗಿ, ಬೌದ್ಧಿಕವಾಗಿ ಹೊರಗಿದ್ದವನಾಗಿ ಇದನ್ನು  ಸ್ಮರಿಸಬಹುದು. ನಾನು ಕೆಲಸ ಮಾಡಿದ ಮತ್ತು ನೋಡಿದ ಎಲ್ಲ ಶಾಖೆಗಳನ್ನೂ ಬೆಸೆಯುವ ಒಂದೇ ಕೊಂಡಿ ಎಂದರೆ ಹೊಸದಾಗಿ ಶಾಖೆಗೆ ಬರುವ ಸಿಬ್ಬಂದಿಯ ಜಾತಿಯನ್ನು ಮೊದಲು ಗುರುತಿಸುವ ಬ್ರಾಹ್ಮಣ್ಯದ ಚಪಲ ಮತ್ತು ವ್ಯಸನ.

ಮುಕ್ತವಾಗಿ ಚರ್ಚೆಯಾಗದಿದ್ದರೂ, ಬಂದ ನೂತನ ಸಹೋದ್ಯೋಗಿಯನ್ನು ಅಕ್ಕರೆಯಿಂದ ಕೈ ಕುಲುಕಿ ಬರಮಾಡಿಕೊಂಡವರೇ, ಮಧ್ಯಾಹ್ನದ ಚಹಾ ಅಥವಾ ಊಟದ ವೇಳೆಯಲ್ಲಿ “ಲೋ ಬಂದಿರೋದು ಅವರು ಕಣೋ” ಎಂತಲೋ “ಕೆಟಗರಿಯಂತೆ ಕಣೋ” ಎಂತಲೋ ಅಥವಾ “ರಿಸರ್ವೇಷನ್ ಕಣೋ” ಎಂದೋ ಗುಸುಗುಸ ಮಾಡುವುದು ಸಮಾನ ಎಳೆಯಾಗಿ ಕಂಡಿದ್ದೇನೆ. ನಂತರ ಅವರನ್ನು ನೋಡುವ ರೀತಿಯಲ್ಲೇ ಎರಡು ಕಣ್ಣೋಟಗಳಿರುವುದನ್ನು ಗುರುತಿಸುವುದೇನೂ ಕಷ್ಟವಾಗುತ್ತಿರಲಿಲ್ಲ.

ಮೂಡ್ನಾಕೂಡು ಚಿನ್ನಸ್ವಾಮಿಯವರು ತಮ್ಮ ಈ ರೀತಿಯ ಕಹಿ ಅನುಭವವನ್ನು ಪ್ರಾಥಮಿಕ ಶಾಲೆಯಿಂದ ನಿವೃತ್ತರಾಗುವವರೆಗೂ ಕಂಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ನೆನಪಿನ ಹಕ್ಕಿಯ ಅಂತರಾಳದ ದನಿ ನಮಗೂ ಕೇಳುತ್ತದೆ. ವೃತ್ತಿ ಬದುಕಿನಲ್ಲಿ ಒಬ್ಬ ದಕ್ಷ, ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಯಾಗಿ ಹೆಸರು ಮಾಡಿದರೂ ಹೊಸದಾಗಿ ಕೆಲಸಕ್ಕೆ ವರದಿ ಮಾಡಿಕೊಂಡ ಸಂದರ್ಭದಲ್ಲಿ ಹಾರ ಹಾಕಿಸಿಕೊಂಡ ಪ್ರಸಂಗದಿಂದ ಹಿಡಿದು (ಪು 68 ಮೊದಲ ಪ್ಯಾರಾ), ಜಾತಿ ವ್ಯಸನದ ಪ್ರಭಾವದಿಂದ ಸಾಂವಿಧಾನಿಕವಾಗಿ ಲಭ್ಯವಾಗಬೇಕಾದ ಬಡ್ತಿಯನ್ನೂ ಕಳೆದುಕೊಂಡ ಪ್ರಸಂಗದವರೆಗೆ (ಪು 103-104) ಚಿನ್ನಸ್ವಾಮಿಯವರು ತಮ್ಮ ಅನುಭವ  ಕಥನವನ್ನು ಕಾವ್ಯಾತ್ಮಕವಾಗಿಯೇ ಕಟ್ಟಿಕೊಡುತ್ತಾರೆ.

ಇದನ್ನು ಓದಿದವರೇನಾದರೂ, “ ಅಯ್ಯೋ ಇಷ್ಟೇನಾ ನಾವು ಇನ್ನೂ ಹೆಚ್ಚಿನ ಯಾತನೆ ಅನುಭವಿಸಿದ್ದೇವೆ ”ಎಂದು ಮನದಲ್ಲೇ ಅಂದುಕೊಂಡರೆ ಅದು ಸೂಕ್ಷ್ಮ ದೃಷ್ಟಿಯ ಕೊರತೆ ಎನ್ನಬೇಕಷ್ಟೇ. ಏಕೆಂದರೆ ನೆನಪಿನ ಹಕ್ಕಿಯನ್ನು ಹಾರಲು ಬಿಡುವ ಸಂದರ್ಭದಲ್ಲಿ ಸೂಕ್ಷ್ಮ ಮನಸಿನ ಕವಿ ಹೊರಗೆಡಹಿರುವುದಕ್ಕಿಂತಾ ನುಂಗಿರುವುದೇ ಹೆಚ್ಚು ಎನ್ನುವುದನ್ನು ಇಡೀ ಕೃತಿಯಲ್ಲಿ ಗಮನಿಸಬಹುದು.

ಜಾತಿ ಅಸ್ಮಿತೆಗಳನ್ನು ಮುಚ್ಚಿಡಲೇಬೇಕಾದ ಅನಿವಾರ್ಯತೆಗಳನ್ನು ಎದುರಿಸಿದ ಕಾಲಘಟ್ಟದಲ್ಲಿ ಕೃತಿಕಾರ ಚಿನ್ನಸ್ವಾಮಿ ತಮ್ಮ ಬದುಕಿನ ತಿರುವುಗಳನ್ನು, ಕವಲುಗಳನ್ನು ಮತ್ತು ಮುನ್ನಡೆಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ತನ್ನದಲ್ಲದ ಜಾತಿಗೆ ಸೇರಿದವರಂತೆ ತೋರ್ಪಡಿಸಿಕೊಳ್ಳುವುದು ಅಥವಾ ತನ್ನ ಜಾತಿ ಅಸ್ಮಿತೆಯನ್ನು ಮುಚ್ಚಿಟ್ಟು ಎಲ್ಲರೊಳಗೊಂದಾಗಲು ಬಯಸುವುದು, ಈ ಎರಡೂ ಪ್ರಕ್ರಿಯೆಗಳು ಮೇಲ್ನೋಟಕ್ಕೆ ಒಂದೇ ಎಂದು ಕಂಡುಬಂದರೂ, ಭಾರತದ ಸಂದರ್ಭದಲ್ಲಿ ವಿಭಿನ್ನ ಆಯಾಮವನ್ನೇ ಪಡೆದುಕೊಳ್ಳುತ್ತದೆ.

“ಸುಳ್ಳು ಜಾತಿ ಹೇಳಿಕೊಂಡ ಪ್ರಸಂಗ” ಅಧ್ಯಾಯದಲ್ಲಿ ಕವಿಗಳು ತಮ್ಮ ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗಿನ ಕಚೇರಿಗಳಲ್ಲಿ ಜಾತಿ ಅಸ್ಮಿತೆಯನ್ನು ಹೆಕ್ಕಿ ತೆಗೆದು ಗುರುತಿಸುವ ಅವಕಾಶಗಳು ಮೇಲ್ಜಾತಿಯವರಿಗೆ ಇರುವುದರಿಂದ, ಮೀಸಲಾತಿ ಫಲಾನುಭವಿಗಳು ತಮ್ಮ ಮನೆಗಳಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಮಾಡಿಸುವುದರ ಮೂಲಕ ಮೇಲ್ಚನೆಗೆ ಪ್ರಯತ್ನಿಸುತ್ತಾರೆ. ಇದರ ಪೂರ್ವಾಪರ, ಸಾಧಕ ಬಾಧಕಗಳು ಅನ್ಯ ವಿಚಾರ. ಆದರೆ ಈ ಯಾತನೆಯನ್ನು ಅನುಭವಿಸಬೇಕಿರುವುದೇ ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಬೌದ್ಧಿಕ ಚಿಂತನೆಗಳು ಪಕ್ವವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ.

ಒಂದು ಆತ್ಮಕಥನದಲ್ಲಿ ನೂರೆಂಟು ಕಹಿ ಅನುಭವಗಳನ್ನು ಕಾಲಾನುಕ್ರಮ ಪಟ್ಟಿ ಮಾಡುವುದರ ಬದಲು ಚಿನ್ನಸ್ವಾಮಿಯವರು ಒಂದೆರಡು ಪ್ರಸಂಗಗಳಲ್ಲಿ ಹೇಳಿ ಕೈಬಿಡುತ್ತಾರೆ. ಬಹುಶಃ ಕಾವ್ಯಾನುಭವದ ಪ್ರಭಾವವೂ ಇದಕ್ಕೆ ಕಾರಣವಿರಬಹುದು.   (ಹೊಸದಾಗಿ ನೌಕರಿಗೆ ಸೇರಿಕೊಳ್ಳುವವರ ನೇಮಕಾತಿ ಆದೇಶ ಪತ್ರವನ್ನು ಕಾತುರದಿಂದ ನೋಡುವ ಮೇಲ್ಜಾತಿಯವರಲ್ಲಿ ಬಹುಪಾಲು ಜನರು ಕಣ್ಣಾಡಿಸುವುದೇ ಜಾತಿ ಕಾಲಂ ಮೇಲೆ ಎನ್ನುವುದು ನನ್ನ ಅನುಭವ) ಕೀಳರಿಮೆ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಅಥವಾ ಸಮುದಾಯದ ಮಾನಸಿಕ ಅಭಿವ್ಯಕ್ತಿ ಎನ್ನಲಾಗುವುದಿಲ್ಲ.

ಭಾರತದ ಬ್ರಾಹ್ಮಣಶಾಹಿ-ಊಳಿಗಮಾನ್ಯ ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಶೋಷಣೆಯ ವಿಭಿನ್ನ ಆಯಾಮಗಳು ಈ ಕೀಳರಿಮೆಯನ್ನು ಸಹಜವೇನೋ ಎನ್ನುವಂತೆ ಮಾಡಿಬಿಡುತ್ತವೆ. ಈ ಕೀಳರಿಮೆಯಿಂದ ಹೊರತಾಗುವ ಪ್ರಯತ್ನದಲ್ಲಿ ಶೋಷಕ ವರ್ಗಗಳನ್ನೇ ಅನುಕರಿಸಿ ಅವರೊಳಗೊಂದಾದಂತೆ ನಟಿಸುವುದು ಒಂದು ಮಾರ್ಗವಾದರೆ, ಕೀಳರಿಮೆಯನ್ನು ಬದಿಗಿಟ್ಟು “ನೀವೆಣಿಸಿದಂತೆ ನಾನಿಲ್ಲ ನನ್ನಲ್ಲೂ ಶಿಖರಾರೋಹಣದ ಸಾಮಥ್ರ್ಯ ಇದೆ” ಎಂದು ಸವಾಲೆಸೆದು ಸಾಧಿಸುವುದು ಮತ್ತೊಂದು ಆಯಾಮ.

ಚಿನ್ನಸ್ವಾಮಿಯವರು ತಮ್ಮ ವೃತ್ತಿ ಜೀವನದಲ್ಲಿ ಮತ್ತು ಪ್ರವೃತ್ತಿಯ ಮಾರ್ಗದಲ್ಲಿ ಎರಡನೆ ಆಯಾಮವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ “ ನಾನೊಂದು ಮರವಾಗಿದ್ದರೆ ” ಕವನ ಇದನ್ನೇ ಬಿಂಬಿಸುತ್ತದೆ. ದಕ್ಷತೆಯ ಪ್ರಶ್ನೆ ಎದುರಾದಾಗಲೆಲ್ಲಾ ಮೀಸಲಾತಿಯನ್ನು ಮುಖಾಮುಖಿಯಾಗಿಸುವ ಮೇಲ್ಜಾತಿ ಮನಸುಗಳ ನಡುವೆ 35 ವರ್ಷಗಳ ಸೇವೆ ಸಲ್ಲಿಸಿರುವ ನನಗೆ ಚಿನ್ನಸ್ವಾಮಿಯವರು ಈ ಮನಸುಗಳಿಗೆ ತೊಡೆತಟ್ಟಿ ಸವಾಲೆಸೆಯುವ ಸಾಹಿತ್ಯಕ ಪೈಲ್ವಾನರಂತೆ ಕಾಣುತ್ತಾರೆ.

ಅಸ್ಪಂಶ್ಯತೆಯ ಅನುಭವ ಭಾರತದ ಸಮಾಜದಲ್ಲಿ ಹಲವು ರೂಪಗಳಲ್ಲಿ ಕಾಣುತ್ತವೆ. ನೇರವಾಗಿ ಬಹಿಷ್ಕಂತರಾಗುವ ಯಾತನೆ ಇಂದಿಗೂ ಇದೆ, ಪ್ರತ್ಯೇಕೀಕರಣಕ್ಕೊಳಗಾಗುವ ಅನುಭವ ವೈದಿಕರ ಸೂಚಕ ವರ್ತನೆಯಲ್ಲಿ, ಬಾಹ್ಯ ಸಮಾಜದ ದೇವರು ಮತ್ತು ಆರಾಧನೆಯ ಚೌಕಟ್ಟಿನಲ್ಲಿ  ಮತ್ತು ಸುಶಿಕ್ಷಿತರ ನಡುವೆ ಬೌದ್ಧಿಕ ನೆಲೆಯಲ್ಲಿ ಗುರುತಿಸಬಹುದು. ಮತ್ತೊಮ್ಮೆ ನನ್ನ ಅನುಭವದಲ್ಲಿ ಹೇಳುವುದಾದರೆ, ಇತರ ಶಾಖೆಯ ಸಹೋದ್ಯೋಗಿಯನ್ನು “ ಏನಮ್ಮಾ ಹೇಗಿದೆ ನಿಮ್ಮ ಬ್ರಾಂಚು” ಎಂದು ಕೇಳಿದ ಕೂಡಲೇ “ ಏ,,,,, ಮೇನೇಜರ್ ಕೆಟಗರಿ ಕಣೋ,,,,,,??????” ಅಷ್ಟೇಉತ್ತರ ಸಾಕಾಗುತ್ತಿತ್ತು.

ಆ ಮೇನೇಜರ್ ಸಾಧನೆ ಉತ್ಕಂಷ್ಟವಾಗಿದ್ದರೂ ಒಪ್ಪದಂತಹ ಮನಸುಗಳು ನಮ್ಮ ನಡುವೆ ಇದೆ ಎನ್ನಲು ಈ ಉದಾಹರಣೆ ನೀಡಬೇಕಾಯಿತು. ಚಿನ್ನಸ್ವಾಮಿಯವರು ತಮ್ಮ ಬಾಲ್ಯದ ದಿನಗಳಲ್ಲಿ ಲಿಂಗಾಯತರ ಮನೆಯಲ್ಲಿನ ಭೋಜನದ ಪ್ರಹಸನವನ್ನು ಕಟ್ಟಿಕೊಡುತ್ತಲೇ (ಪು 41), ಎಷ್ಟೋ ವರ್ಷಗಳ ನಂತರದ ಮಂತ್ರಾಲಯದ ಭೋಜನ ಮತ್ತು ಕೇಶವಮೂರ್ತಿ ಎಂಬ ಬ್ರಾಹ್ಮಣ ಗೆಳೆಯನ ಮನೆಗೆ ಊಟಕ್ಕೆ ಕರೆಯದ ಕಹಿ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಬದಲಾಗದ ಸಾಮಾಜಿಕ ಮನಸ್ಥಿತಿಯನ್ನು ಬಿಂಬಿಸುತ್ತಾರೆ.


ಇಂದಿರಾಗಾಂಧಿಯ ಹತ್ಯೆಯ ಹಿನ್ನೆಲೆಯಲ್ಲಿ ತಮ್ಮ ಕಾವ್ಯ ಕೃಷಿಯನ್ನು ಆರಂಭಿಸುವ ಚಿನ್ನಸ್ವಾಮಿಯವರು ಆ ಕಾಲಘಟ್ಟದ ಸಾಹಿತ್ಯಕ ಮತ್ತು ಸಾಂಸ್ಕಂತಿಕ ಮನಸುಗಳೊಡನೆ ಬೆರೆತು, ಕಲೆತು ತಮ್ಮ ಬೌದ್ಧಿಕ ಚಿಂತನೆಗಳಿಗೆ ಹೊಸ ಆಯಾಮ ಮತ್ತು ಹೊಸ ರೂಪ ನೀಡುವುದನ್ನು ಮೈಸೂರಿನ ಜಲಪುರಿಯ ಅನುಭವ, ಸಿ ನಾಗಣ್ಣ ಅವರ ಆತ್ಮೀಯತೆ, ಲಂಕೇಶ್, ಸಿದ್ಧಲಿಂಗಯ್ಯ, ಡಿ ಆರ್ ನಾಗರಾಜ್, ಪಾಟಿಲ್ ಪುಟ್ಟಪ್ಪ ಮುಂತಾದವರ ಒಡನಾಟಗಳಲ್ಲಿ ಗುರುತಿಸಬಹುದು.

ಒಬ್ಬ ಕವಿ ತನ್ನದೇ ಆದ ಅನುಭವದ ಮೂಸೆಯಲ್ಲಿ ಹೊರಹೊಮ್ಮಿದರೂ, ಬಾಹ್ಯ ಜಗತ್ತಿನ ಅನುಭಾವಗಳ ಮೂಲಕ ಹೊಸ ಚಿಂತನೆಗಳಿಗೆ ತೆರೆದುಕೊಳ್ಳುವುದನ್ನು ಮೂಡ್ನಾಕೂಡು ಅವರು ಕೃತಿಯ “ಬೆರಗುಗೊಳಿಸಿದ ಸಾಂಸ್ಕಂತಿಕ ಲೋಕ” ಅಧ್ಯಾಯದಲ್ಲಿ ಕಾಣಬಹುದು.

ತಮ್ಮ ಬದುಕನ್ನು ರೂಪಿಸಲು ನೆರವಾದ, ವ್ಯಕ್ತಿಗತ ಬದುಕಿನಿಂದಾಚೆಗಿನ ವಿದ್ಯಮಾನಗಳನ್ನು ಆತ್ಮಕಥೆಯಲ್ಲಿ ಉಲ್ಲೇಖಿಸುವುದು ಅಪರೂಪ ಎನ್ನಬಹುದೇನೋ. ಮೀಸಲಾತಿ, ಪೂನಾ ಒಪ್ಪಂದ ಮತ್ತು ಇತ್ತೀಚೆಗೆ ಬಹುಚರ್ಚಿತ ಒಳಮೀಸಲಾತಿಯನ್ನು ಒಂದೆರಡು ಅಧ್ಯಾಯಗಳಲ್ಲಿ ಚಿನ್ನಸ್ವಾಮಿಯವರು ವಿಶ್ಲೇಷಣೆಗೊಳಪಡಿಸುತ್ತಾರೆ. ಇದು ಈ ಕೃತಿಯ ವಿಶಿಷ್ಟ ಭಾಗ ಎಂದರೂ ಅತಿಶಯವೆನಿಸಲಾರದು.

ತಾವು ಬೌದ್ಧ ಮತಕ್ಕೆ ಮತಾಂತರವಾದ ಪ್ರಸಂಗ ಮತ್ತು ನಂತರದ  ಬದುಕಿನ ತಿರುವುಗಳನ್ನೂ ಕೃತಿಕಾರ ಚಿನ್ನಸ್ವಾಮಿಯವರು ಒಂದು ನಿರ್ದಿಷ್ಟ ಸೈದ್ಧಾಂತಿಕ ಹಾಗೂ ತಾತ್ವಿಕ ನೆಲೆಗಟ್ಟಿನಲ್ಲೇ ಕಟ್ಟಿಕೊಡುತ್ತಾರೆ. ಭರತ್ ಇನಾಂದಾರ್ ಎಂಬ ಆತ್ಮೀಯ ಸ್ನೇಹಿತರೊಡನೆ ಚಿನ್ನಸ್ವಾಮಿಯವರು ನಡೆಸುವ ಸಂಭಾಷಣೆಯಲ್ಲಿ (ಪು 192-193) ದಲಿತ ಅಸ್ಮಿತೆ ಅಥವಾ ಮೂಲತಃ ಅಸ್ಮಿತೆಯ ವಿಚಾರದಲ್ಲೇ ತಮ್ಮ ತಾತ್ವಿಕ ನಿಲುವುಗಳನ್ನು ಸ್ಪಷ್ಟಪಡಿಸುತ್ತಾರೆ.ಇಡೀ ಕೃತಿಯ ಮೂಲ ಆಶಯವನ್ನು ಪುಟ 193ರ ಕೊನೆಯ ಪ್ಯಾರಾದಲ್ಲಿ ಕಂಡುಕೊಳ್ಳಬಹುದು.

ಹೀಗೆ ತಮ್ಮ ಸುದೀರ್ಘ ಬದುಕಿನಲ್ಲಿ ತಾವು ಎದುರಿಸಿದ ಸವಾಲುಗಳು ಮತ್ತು ಪ್ರಶ್ನೆಗಳಿಗೆ ತಮ್ಮೊಳಗೇ ಉತ್ತರ ಹುಡುಕಿಕೊಳ್ಳುತ್ತಾ, ಒಂದು ಅಸ್ಮಿತೆಯ ಚೌಕಟ್ಟಿನಿಂದ ಹೊರಬಂದರೂ ತಮ್ಮ ಮೂಲ ಸಾಮುದಾಯಿಕ ಆಶಯಗಳನ್ನು ಎಲ್ಲಿಯೂ ಬಿಟ್ಟುಕೊಡದೆ ಸನ್ಮಾನ್ಯ ಚಿನ್ನಸ್ವಾಮಿಯವರು ನೆನಪಿನ ಹಕ್ಕಿಯನ್ನು ಹಾರಲು ಬಿಟ್ಟಿದ್ದಾರೆ. ಈ ನೆನಪುಗಳು ಕೇವಲ ಒಂದು ಹಕ್ಕಿಯದಲ್ಲ ಅಥವಾ ಯಾವುದೋ ಮೂಲೆಯಲ್ಲಿರುವ ಹಳ್ಳಿಯ ಹಕ್ಕಿಯ ದನಿಯೂ ಅಲ್ಲ.

ಇದು ಸಮಸ್ತ ಶೋಷಿತ ಸಮುದಾಯಗಳ ಮನದಾಳದ ಆತಂಕ, ತುಮುಲ ಮತ್ತು ಆಶಯಗಳನ್ನು ಬಿಂಬಿಸುವ  ಒಂದು ವಿರಾಟ್ ಸ್ವರೂಪದ ಹಕ್ಕಿಯ ದನಿಯಂತೆ ಕಾಣುತ್ತದೆ. ತಾವು ದೀರ್ಘ ಕಾಲ ಸೇವೆ ಸಲ್ಲಿಸಿದ ಸಾರಿಗೆ ಸಂಸ್ಥೆಯಲ್ಲಿನ ಕಾರ್ಮಿಕರ ಬವಣೆಯ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲದಿರುವುದು ಅಚ್ಚರಿ ಮೂಡಿಸುವ ಅಂಶ. ಇದು ನಿರ್ಲಕ್ಷ್ಯ ಎನ್ನುವುದಕ್ಕಿಂತಲೂ ನಿರ್ದಿಷ್ಟ ಚೌಕಟ್ಟಿಗೆ ಸಿಲುಕದೆ ಹೊರಜಗತ್ತಿನಲ್ಲಿ ನಿಂತು ನೋಡುವಾಗ ಸಂಭವಿಸಬಹುದಾದ ಸಂಗತಿ ಎಂದುಕೊಳ್ಳಬಹುದೇನೋ.

ಸನ್ಮಾನ್ಯ ಮೂಡ್ನಾಕೂಡು ಚಿನ್ನಸ್ವಾಮಿಯವರು ಹಾರಲು ಬಿಟ್ಟಿರುವ ನೆನಪಿನ ಹಕ್ಕಿಯ ಧ್ವನಿ ಬಹುಶಃ ಎಲ್ಲ ಶೋಷಿತ ವ್ಯಕ್ತಿಗಳಲ್ಲೂ ಧ್ವನಿಸುತ್ತದೆ.ಈ ಕೃತಿಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ. ಎಲ್ಲರೂ ಓದಲೇಬೇಕಾದ,  ದೀರ್ಘಕಾಲ ನೆನಪಿನಲ್ಲಿ ನಿಲ್ಲುವ ಕೃತಿಯನ್ನು, ಎಲ್ಲವೂ ಹಿಂಚಲನೆ ಕಾಣುತ್ತಿರುವ ಸಂದರ್ಭದಲ್ಲಿ ಹೊರತಂದಿರುವ ಮೂಡ್ನಾಕೂಡು ಚಿನ್ನಸ್ವಾಮಿ ಅಭಿನಂದನಾರ್ಹರು.

‍ಲೇಖಕರು Avadhi

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: