ನಾಯಿ ತಲೀಮ್ಯಾಲಿನ ಬುತ್ತಿ ಸಂಸಾರ…

ಅಮರದೀಪ್.ಪಿ.ಎಸ್.

ಸುಮಾರು ರಾತ್ರಿ ಒಂಬತ್ತು ಮುಕ್ಕಾಲು ಗಂಟೆ ಆಗಿತ್ತು.  ಗೆಳೆಯನೊಬ್ಬ ಫೋನ್ ಮಾಡಿ “ಎಲ್ಲದೀಲೇ”? ಕೇಳಿದ.  “ಉಂಡು ಟಿವಿ ನೋಡ್ತಾ ಕೂತಿದೀನಿ” ಅಂದೆ.  ಅದಕ್ಕೂ ಮುಂಚೆ ಸಂಜೆ ಮಾತಾಡಿ ಅರ್ಜೆಂಟಾಗಿ ನಿನ್ನತ್ರ ಮಾತಾಡೋದಿದೆ ಬಾ ಅಂದಿದ್ದ. ಹೋದರೆ ಹೇಳಿದ ಜಾಗದಲ್ಲಿ ಅವನಿಲ್ಲ. ಕಾಲ್ ಮಾಡಿದರೆ ಅರ್ಧ ಗಂಟೆಯಲ್ಲಿ ಬರ್ತೀನಿ ಅಂದ. ಬಂದಿರಲಿಲ್ಲ. ವಾಪಾಸ್ ಬಂದು ಮನೇಲೇ ಇದ್ದೆ.   “ಎಫ್.ಸಿ.ಐ. ಗೋಡಾನ್ ಹತ್ರ ಬಂದು ಬಿಡು…” ಅಂದ. ಹೋಗಿ ಕಾಯುತ್ತಿದ್ದೆ. ಕಾರಿನಲ್ಲಿ ಬಂದವನೇ “ನಿನ್ನ ಬೈಕ್ ಪಾನ್ ಶಾಪ್ ಹತ್ರಾನೇ ಪಾರ್ಕ್ ಮಾಡು. ಹತ್ತು ಕಾರು” ಅನ್ನುವುದ ರಲ್ಲೇ ಗೊತ್ತಾಗಿತ್ತು; ಗೆಳೆಯ “ಜರಾಸಾ”  ಝೂಮಲ್ಲಿದ್ದಾನೆಂದು. 

ನಲವತ್ತಾಗಿದೆ. ಶುಗರ್ ಫ್ಯಾಕ್ಟ್ರಿ ಓನರ್ ಆಗಿದಾನೆ. ನನಗಿಂತ ಏಳೆಂಟು ವರ್ಷದ ಹಿರಿಯನಂತೆ ಬೊಜ್ಜು ಬೆಳೆದಿದ್ದ ಗೆಳೆಯನನ್ನೊಮ್ಮೆ ನೋಡಿದೆ.  ಕಾರಿನಲ್ಲಿ ಸಿ.ಅಶ್ವಥ್ ಕಂಠಸಿರಿಯಲ್ಲಿ ಅದ್ಭುತ ಹಾಡು ಹೊಮ್ಮುತ್ತಿತ್ತು; “ಎಲ್ಲೋ ಹುಟ್ಟಿ…. ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು. ಸದಾ  ಗುಪ್ತಗಾಮಿನಿ  …ನನ್ನ ಶಾಲ್ಮಲಾ……..”.   ಏಸಿ ಬೇಡವೆಂದೆ. ಕಾರು ಹೊಸಪೇಟೆ ರಸ್ತೆ ಕಡೆಗೆ ಓಡುತ್ತಿತ್ತು. 

ಕಾರು ಖರೀದಿಸಿದ ಹೊಸತರಲ್ಲಿ ಮೂತಿ ಅಂದಗೆಡಿಸಿ ಬೋಣಿ ಮಾಡಿದ್ದನೆಂದು ಕೇಳಿದ್ದೆ. ಆದರೆ ಈಗ ಅವನ ಡ್ರೈವಿಂಗ್ ಅನಾಹುತ.  ಶಾಲ್ಮಲಾ ಹಾಡು ಬರೆದದ್ದು ಚಂಪಾ ಅವರು.  ಈ ಬಡ್ಡೀಮಗ ಓದಿದ್ದು ಧಾರವಾಡ. ಆ ನದಿ, ಈ ಹಾಡು, ಬರೆದ ಕವಿ ಎಲ್ಲಾ ಧಾರವಾಡದ ಸುತ್ತಲೇ ಇದ್ದಂಥ ಗುಂಗು.  “ನಿನಿಗೆ ಟೈಮ್ಸೆನ್ಸು ಅನ್ನೋದೇ ಇಲ್ನೋಡಲೇ…….” ಅಂದೆ. 

“ ಸಾಕಾಗಿ ಬಿಟ್ಟೈತಿ…. ಯಾರಾನ ಕೇಳ್ಲಿ; ಹೌದ್ಸಾರ್…… ಹುನ್ಸಾರ್….. ಆಯ್ತು ಸರ್….. ಅನ್ನೋ ಮಂದಿ ನಡುವ ಹೀಂಗ್ ಸ್ವಚ್ಚಾಗಿ ಮಾತಾಡೋ ದೋಸ್ತ್ ಜತೀಗೆ ಮಾತಾಡ್ದ ರೋಸ್ಗಿ ಬಂದಿತ್ಲೇ. ಆಹಾ……| ಹೋಗಲೇsss ಬಾರಲೇsss ಅನ್ನೋದು ಕೇಳಿ ಕಿವಿ ತಂಪಾತು ನೋಡು…”  ಅನ್ನುತ್ತಲೇ ಒಂದು ಜುರುಕಿ ಸಿಗರೇಟ್ ಎಳೆದು ಹೊಗೆ ಬಿಟ್ಟ.    ರಾತ್ರಿ ಹತ್ತಾಗುತ್ತಲೇ ನನ್ನ ಹೆಂಡತಿ ಪೋನಾಯಿಸಿ “ಹೊತ್ತಾಯ್ತು…. ಗೇಟಿಗೆ ಬೀಗ ಹಾಕ್ಬೇಕು” ಅಂದಳು. 

ಬೇಗ ಹೋಗದಿದ್ದರೆ ಗೇಟ್ ಹೊರಗೇ ಇರಬೇಕಾಗುತ್ತೆ ಅನ್ನುವುದನ್ನು ಸೂಚ್ಯವಾಗಿ ಹೇಳಿದಂತಿತ್ತು.  ಗೆಳೆಯನ ಕಾರು ಆತನ ಮನೆ ಮುಂದೆ ನಿಲ್ಲುತ್ತಲೇ ನೀನು ಮನೆಯೊಳಗೆ ಬರಬೇಡವೆಂದ.  ಹೊರಗೆ ನಿಂತಿದ್ದೆ. ಅವನ ಹೆಂಡತಿ ಬಾಗಿಲು ತೆಗೆದು  ಇನ್ನೇನು ಗಂಡನಿಗೆ ಸಹಸ್ರನಾಮಾರ್ಚನೆ ಶುರು ಮಾಡಬೇಕು, ನಾನಿದ್ದದ್ದನ್ನು ನೋಡಿ,  ಮೃದುವಾಗಿ “ ಓಹ್,,,, ಬನ್ನಿ ಬನ್ನಿ.” ಅಂದಳು.  ನಾನು ಹೊರಗೇ ನಿಂತಿದ್ದೆ.  ಗೆಳೆಯ ಮನೆಯೊಳಗೆ ಹೋಗಿ ಒಂದು ಪುಸ್ತಕ ಕೈಯಲ್ಲಿಟ್ಟುಕೊಂಡು ಬಂದು ಬಾಗಿಲಲ್ಲಿ ಹೆಂಡತಿಗೆ ಸಣ್ಣ ದನಿಯಲ್ಲಿ “ಈಗ ಬರ್ತೀನಿ, ಹತ್ತೇ ನಿಮಿಷ”  ಅಂದ. ನಾನು ಕಾರೊಳಗೆ ಕುಳಿತೆ. ಅವನ ಹೆಂಡತಿ ದಬ್ಬಂತ ಬಾಗಿಲು ಹಾಕಿದ ಸೌಂಡು. ಗೆಳೆಯನನ್ನು ಕೇಳಿದೆ “ಏನಾಯ್ತು…?”  

ಅಸಲಿ ಕತೆ ಶುರುವಾಗಿದ್ದೇ ಆಗ. ಈ ಬಡ್ಡಿಮಗ, ಸಂಜೆ ಆಫೀಸ್ ಮುಗಿಸಿಕೊಂಡು ಮನೆಗೆ ಹೋಗಿ ಮುಖ ತೊಳೆಯಲು ಹೋಗಿದ್ದಾನೆ.  ಒಂದು ಫೋನ್ ಕಾಲ್ ಬರುತ್ತೆ.  ಆ ಕಡೆಯಿಂದ ಹೆಣ್ಣು ದನಿ. ಅದನ್ನು ಗೆಳೆಯನ ಹೆಂಡತಿ ನೋಡಿ ರೀಸೀವ್ ಮಾಡದೇ ಹಾಗೆ ಇಟ್ಟಿದ್ದಾಳೆ.  ಪುನ: ರಿಂಗ್ ಬರುವಷ್ಟರಲ್ಲಿ ಗೆಳೆಯ ಮುಖ ಒರೆಸುತ್ತಾ ಕಾಲ್ ರಿಸೀವ್ ಮಾಡಿ ಮಾತಾಡುವ ಮಧ್ಯೆ “ಇಲ್ಲ, ಈಗಾಗಲ್ಲ, ಹೊತ್ತಾಗಿದೆ, ಮನೆಗೆ ಬಂದೆ. ಈಗೆಲ್ಲೋ ಹೊರಗೆ ಹೊರಟಿದೀನಿ, ನಾಳೆ ಆದ್ರೆ ಆಫೀಸ್ ಟೈಂ ನಂತ್ರ ಸಿಕ್ತೇನೆ…” ಎನ್ನುವುದು ಹೆಂಡತಿಯ ಕಿವಿ ಕೆಂಪಾಗಿಸಿದೆ. 

“ಕರೆಕ್ಟಾಗಿ ಹೇಳು, ಎಲ್ಲಿ ಹೊಂಟಿ?” ಹೆಂಡತಿ ಖಡಾಖಂಡಿತವಾಗಿದ್ದಾಳೆ.  ಇವನು ಆಫೀಸ್ ಇಶ್ಯೂಗಳಿವೆ, ನಾಟಕ ಪ್ರಯೋಗದ ಬಗ್ಗೆ ಮಾತಾಡೋದಿದೆ, ಒಂದಿಬ್ಬರೊಂದಿಗೆ “ಹೊರಗೆ” ಹೊರಟ್ಟಿದ್ದೇನೆಂದು ಹೇಳಿ ಮನೆ ಬಿಟ್ಟಿದ್ದಾನೆ. ಮನೆ ಬಿಟ್ಟು ಅರ್ಧ ದಾರಿಗೆ ಬಂದನೋ ಇಲ್ಲವೋ ಮತ್ತ ಹೆಂಡತಿಯಿಂದ ಫೋನ್…. “ ಏನಾರ ಆ ಹೆಣ್ದನಿ ಹಿಂದೇನಾದ್ರೂ ಹೋಗಿದ್ದು ಗೊತ್ತಾಗಿದ್ದೇ ಆದ್ರೆ….. ಬಾ ಮನೆಗೆ…”  ಅಷ್ಟೇ.

 ಮೊದಲೇ ರಸಿಕನಿವ. ಹೊರಟಿದ್ದೇನೋ ಆ ಹೆಣ್ದನಿ ಇದ್ದ ಮನೆ ಕಡೆಗೇ.  ಹೋದವನು ಒಂದಷ್ಟು “ ಕುಶಲೋಪರಿ” ನಂತರ ಹೆಣ್ದನಿ ಜೊತೆ ಕುಳಿತು ವೈನ್ ಕುಡಿದಿದ್ದಾನೆ.  ಮುಕ್ಕಾಲು ಗಂಟೆ ಕಳೆದಿರಬಹು ದೇನೋ. ಹೆಂಡತಿಯಿಂದ ಫೋನ್ ಬರುವ ಭೀತಿ.  ಒಂದಿಬ್ಬರ ಜೊತೆ ಅಂದಿದ್ದು ಗಂಡಸರು ಇರಲಿಕ್ಕೆ ಸಾಕು.  ಆದರೆ, ಹೆಂಡತಿ “ಪಕ್ದಲ್ಲಿರೋರಿಗೆ ಫೋನ್ ಕೊಡಿ” ಅಂದುಬಿಟ್ಟರೇ?  ಅದು ಸಮಸ್ಯೆ.  ಆಗಲೇ ಅವನಿಗೆ ನನ್ನ ನೆನಪಾಗಿದೆ. ಜೊತೆಗೆ ನಾನಿದ್ದೆ ಅಂದರೆ ಅಲ್ಲಿಗೆ ಅನುಮಾನ ಬಗೆಹರಿದಂತೆಯೇ ಅನ್ನುವುದು ಅವನ ಲೆಕ್ಕಾಚಾರ.  ಅಷ್ಟೊತ್ತಿಗಾಗಲೇ ಒಂದೈದು ಬೇರೆ ಬೇರೆ ಫೋನ್ ಕಾಲ್ ಬಂದಿವೆ, ಮಾತಾಡಿದ್ದಾನೆ.  ಅವುಗಳ ಮಧ್ಯೆದಲ್ಲೇ ಹೆಂಡತಿಯ ಮಿಸ್ಡ್ ಕಾಲ್ ಗಳು.. 

ಈಗ ಕತೆಯ ಎರಡನೇ ಕಂತು ಬಿಡಿಸಿದ. “ನಾನು ಒಂದಿಬ್ಬರ ಜೊತೆ ಹೊರಗೆ ಹೋಗುತ್ತೇನೆಂದು ಬಂದೆ. ಜೊತೆಗೆ ಯಾರೂ ಇಲ್ಲ. ಹೋಗಿದ್ದು, “ಹೆಣ್ದನಿ” ಮನೆಗೆ. ಜೊತೆಗೆ ಅವಳು ಮಾತ್ರ ಇದ್ದದ್ದು. ನಾವಿಬ್ಬರು ಕುಡಿದದ್ದು ವೈನೇ.  ಆದರೆ, ಹೆಂಡತಿ ಫೋನ್ ಕಾಲ್ ರಿಸೀವ್ ಮಾಡಿ ತೊಡರಿದರೆ, ಇಳಿಯೋದು ನನ್ನ ನಶೆಯಲ್ಲ, ನಸೀಬು. ಅದಕ್ಕೆ ಹೆಣ್ದನಿಯೊಂದಿಗಿನ “ಕುಶಲೋಪರಿ”  ಜಂಟಿಮೇಜು ಸಾಂಗತ್ಯವೆಲ್ಲವನ್ನೂ ಮುಗಿಸಿ ನಿನಗೆ ಕಾಲ್ ಮಾಡಿದೆ. 

ನಿನ್ನ ಜೊತೆ ಮನೆಗೆ ಹೋಗುವುದು ಸೇಫ್ ಅನ್ನಿಸ್ತು.  ಒಂದಷ್ಟು  ನಾಟಕಗಳಲ್ಲಿ ಅಭಿನಯಿಸಿ ಪಳಗಿದ ಅನುಭವ ಕೆಲಸಕ್ಕೆ ಬಂದಂತೆ ಸಿಚ್ಯುವೇಷನ್ನು ಪ್ಯಾಚಪ್ಪು ಮಾಡಬೇಕಲ್ಲೋ ಮಗಾ?. ಅದಕ್ಕೆ ನಿನ್ನ ಕರ್ಕೊಂಡು ಹೋಗಿ ಮೊನ್ನೆ ತಾನೇ ಓದಿ ಮುಗಿಸಿದ್ದ ನಾಟಕವೊಂದರ ಸ್ಕ್ರಿಪ್ಟ್ ನ್ನು ಮನೆಯಿಂದ ತಂದು ನಿನ್ನ ಕೈಗಿಟ್ಟು  ಅದೇ “ಗಹನ” ವಿಚಾರದಲ್ಲೇ ಇಬ್ಬರೂ ಇದ್ದೆವೆಂದೂ, ನಂತರ ನಿನ್ನನ್ನು ಡ್ರಾಪ್ ಮಾಡಿ ವಾಪಾಸ್ ಹೋಗೋದನ್ನು ನನ್ನ ಹೆಂಡತಿ ನಂಬಿದರೆ ಈ ರಾತ್ರಿ ಪಾಲಿಗೆ ಕುರುಕ್ಷೇತ್ರದ ಕದನ ವಿರಾಮ ಘೋಷಣೆಗೆ ಇದ್ದ ಬಚಾವಾಗುವ ದಾರಿ……” ಅಂದ. 

ನಾನು ಸಮಯ ನೋಡಿದೆ ಹತ್ತು ಗಂಟೆ ನಲವತ್ತೈದು ನಿಮಿಷ.  ಅಶೋಕ ಸರ್ಕಲ್ ದಾಟಿ ಬಸ್ ನಿಲ್ದಾಣದ ಎದುರಿಗೆ ಸ್ವೀಟ್ ಪಾನ್ ತಿನ್ನುತ್ತಾ “ ಒಂದು ನಾಟಕದ ಪ್ರಯೋಗ ಮಾಡ್ಬೇಕಲ್ಲಲೇ, ಸಾಹಿತ್ಯ ಭವನದಲ್ಲಿ.  ಖರ್ಚು ನಂದೇ ಕಲಾವಿದರು, ನಿರ್ದೇಶಕರು ಎಲ್ಲರನ್ನೂ ಸಜ್ಜುಗೊಳ್ಸೋಣ….. ಏನಂತೀಯಾ?…. ಅಂದ.  ನನಗಾಗಲೇ ನನ್ನ ಹೆಂಡತಿಯ ಪೋನ್ ಕಾಲ್ ಶುರುವಾಗಿದ್ದವು….. “ ಗೇಟ್ ಕೀ ಹಾಕಿದೀನಿ…..” ಅಂತಷ್ಟೇ. 

 ಎಫ್.ಸಿ.ಐ ಗೋಡಾನ್ ಬಳಿ ನನ್ನ ಬೈಕ್ ಹತ್ತಿರ ಡ್ರಾಪ್ ಮಾಡಿ ಗೆಳೆಯ ಕಾರಿನ ಇಗ್ನೀಷನ್ ತಿರುವಿದ.  ಕೆಲವು ಜನ ವರ್ಷ ಪೂರ್ತಿ ತಾವು ಮಾಡುವ ಎಲ್ಲ ಎಡವಟ್ಟುಗಳ ಪಾಪ ಒಂದು ತಿಂಗಳ  “ಅಯ್ಯಪ್ಪ ಸ್ವಾಮಿ ವ್ರತದಲ್ಲೇ ಕಳೆದುಕೊಂಡು ಬಿಡಬೇಕು ಅನ್ನುವಷ್ಟು ಭಕ್ತಿ ಪರವಶರೇಕಾಗುತ್ತಾರೋ? ಎನ್ನುವ ಪ್ರಶ್ನೆಗೆ ಇಂಥ ಪ್ರಸಂಗದ ಉತ್ತರಗಳೂ ಕಾರಣವಾಗುತ್ತವೇನೋ…..

ಕತ್ತಲಲ್ಲಿ ಮೊಬೈಲ್ ಬೆಳಕಲ್ಲಿ ನನ್ನ ಕೈಯಲ್ಲಿದ್ದ ನಾಟಕದ ಸ್ಕ್ರಿಪ್ಟ್ ನ ಮೊದಲ ಪುಟ ನೋಡಿದೆ. “ ಜೊತೆಗಿರುವನು ಚಂದಿರ”  ರಚನೆ ಜಯಂತ್ ಕಾಯ್ಕಿಣಿ ಅಂತಿತ್ತು. ಗೆಳೆಯನ ಬಣ್ಣವಿಲ್ಲದ ಅದ್ಭುತವಾಗಿ ನಟನೆ ನೋಡಿದರೆ ನನಗೆ ಥಟ್ಟನೇ ನೆನಪಾಗಿದ್ದು, ಮತ್ತದೇ ಸಿ. ಅಶ್ವಥ್ ಅವರು ಹಾಡಿದ “ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ….. ಬಲು ನಿಸ್ಸಾರ…. ಇದನರಿತು ಅರಿತು ಮಂದಿ ಬಿದ್ದಾರ… ಹಿಂದಾ ಬಿದ್ದಾರ…..” 

‍ಲೇಖಕರು Avadhi

September 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಓದಲೇನೋ ಚೆನ್ನಾಗಿದೆ. ಆದರೆ ಹೀಗೂ ಮೋಸ ಮಾಡಬಹುದೇ?

    ಪ್ರತಿಕ್ರಿಯೆ
    • ಅಮರದೀಪ್ ಪಿ.ಎಸ್.

      ಮೇಡಂ, ವಾಸ್ತವ ಮತ್ತು ನಿಜ….. ಪ್ರಯೋಗವೆಂದ ಮೇಲೆ ಪ್ರತಿಫಲ, ಪ್ರಾಯಶ್ಚಿತ್ತ ಕೂಡ ಇದ್ದೇ ಇರುತ್ತದೆ. ತಪ್ಪು ಮತ್ತು ಸರಿ ಎನ್ನುವುದು ವಿವೇಚನೆಗೆ ಒಳಪಡುತ್ತೆ…. ಪ್ರಯೋಗಕ್ಕಿಂತ ಮೊದಲು ಅದು ಎಚ್ಚರವಾಗಿದ್ದರೆ ಇಂಥ ಅವಘಡಗಳಾಗುವುದಿಲ್ಲ….

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: