ಇವ್ಯಾವೂ ಕಾಲ್ಪನಿಕ ಘಟನೆಗಳಲ್ಲ – ಸ್ವರ್ಣ ಎನ್ ಪಿ

Swarna-20150627_002735-150x15011

ಸ್ವರ್ಣಾ ಎನ್ ಪಿ

ಈ ಕಥೆಗಳಲ್ಲಿ ಯಾವುದೇ ಹೊಸತನವಿಲ್ಲ. ಅವೇ ಸವಕಲು ಕಥೆಗಳನ್ನು ಹೇಳಿ ಪ್ರಯೋಜನವೆನೆಂಬ ಪ್ರಶ್ನೆಯನ್ನು ಮೀರಿ ಇವನಿಲ್ಲಿಗೆ ತಂದಿದ್ದೇನೆ.
ಸೂಚನೆ : ಇವ್ಯಾವೂ ಕಾಲ್ಪನಿಕ ಘಟನೆಗಳಲ್ಲ.
ನೀರು ಉಳಿಸಿ. ಈ ಮಾತು ಎಲ್ಲೆಡೆ ಕೇಳಿ ಬರಲು ಶುರುವಾಗಿ ದಶಕಗಳೇ ಸಂದವು. ಓದಿಕೊಂಡ ಎಲ್ಲರೂ ಈ ಮಾತನ್ನು ಕೇಳಿರುತ್ತಾರೆ.
೧. ಅದೊಂದು ಸಾಫ್ಟ್ವೇರ್ ಕಂಪನಿ. ತಾಪಮಾನವನ್ನು ಸದಾ ೨೫ರ ಆಸುಪಾಸಿನಲ್ಲಿ ನಿರ್ವಹಣೆ ಮಾಡಲು ಯಂತ್ರಗಳಿವೆ ಒಳಗಿನ ಮನುಷ್ಯರ ಮನಸ್ಸು ಮಾತ್ರ ಸದಾ ಉಬ್ಬರಕ್ಕೆ ಸಿಕ್ಕಿದ ಸಮುದ್ರ. ಅಲ್ಲಿನ ಎಲ್ಲರಿಗೂ ಪ್ರಚಲಿತ ವಿದ್ಯಮಾನಗಳ ಅರಿವಿದೆ ಆದರೆ ನೀರನ್ನು ಹೇಗೆ ಬಳಸ ಬೇಕೆಂಬುದು ಮರೆತು ಹೋಗಿದೆ. ಕಛೇರಿ ತಲುಪಲು ೨ ಘಂಟೆಯ ಪ್ರಯಾಣಿಸಿದ ನಂತರ ಮುಖ ತೊಳೆಯಲು ಬಂದ ತರುಣಿ ಬರೋಬ್ಬರಿ  ೫ -೧೦ ನಿಮಿಷ ನಲ್ಲಿಯ ನೀರನ್ನು ಹರಿಸುತ್ತಾಳೆ . ಮಧ್ಯೆ ಅದನ್ನು ನಿಲ್ಲಿಸುವ ಗೋಜಿಗೆ ಅವಳು ಹೋಗುವುದಿಲ್ಲ. ಫ್ರೆಶ್ ಆದಮೇಲೆ ಅಲ್ಲೇ ಇಟ್ಟ ಟಿಶ್ಯೂ ರಾಶಿಯಿಂದ ಅನಾಮತ್ತಾಗಿ ನಾಲ್ಕೈದನ್ನು ಎಳೆದು ಒಂದೆರಡನ್ನು ಬೀಳಿಸಿ ಮುಖ ಒರೆಸಿ ಅವಿಷ್ಟನ್ನೂ ಕಸದ ಬುಟ್ಟಿಗೆ ಎಸೆದು ಮತ್ತೊಂದನ್ನು ತೆಗೆದು ಕೈ ಒರೆಸಿ ಹೊರಡುತ್ತಾಳೆ.  ಬೀಳಿಸಿದ ಒಂದೆರಡನ್ನು ತೆಗೆಯುವ ಕೆಲಸ ಹೌಸ್ ಕೀಪಿಂಗ್ ನವರದ್ದು .
೨. ಅವಳು  ವಿಜ್ಞಾನದ ವಿಧ್ಯಾರ್ಥಿ. ದೇಶದ ದೊಡ್ಡ ನಗರಗಳಲ್ಲಿ ಉತ್ತಮವೆಂದು ಹೆಸರು ಮಾಡಿದ ಶಾಲೆಯಲ್ಲಿ ಓದಿದವಳು.ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳಿಸಿದ ಜಾಣೆ. ಪ್ರತಿಷ್ಟಿತ ಐ.ಟಿ. ಕಂಪನಿಯ ಉದ್ಯೋಗಿ. ಮೊದಲ ತರಗತಿಯ ಮಗನ ಓದಿಗೆ ಗೂಗಲ್ ಜಾಲಾಡಿ ಅತ್ಯುತ್ತಮವಾದ ವಿಧಾನದಲ್ಲಿ ಅವನಿಗೆ ಪಾಠ ಮಾಡುತ್ತಾಳೆ. ಮೊದಲೇ ಮುನಿಸಿಕೊಂಡಿರುವ ಮಳೆರಾಯ ಮೊನ್ನೆ ಒಂದು ದಿನ ಒಂದರ್ಧ ಗಂಟೆ ಸುರಿದಿದ್ದಕ್ಕೆ , “ಅಯ್ಯೋ ಏನು ಮಳೆನಪ್ಪ , ಎಲ್ಲಾ ಕಡೆ ರಾಡಿಯಾಗುತ್ತೆ ” ಅಂತಾಳೆ.
121
೩. ನೀರಿನ ಕೆಮಿಕಲ್ ಫಾರ್ಮುಲಾದ ಬಗ್ಗೆ ಮಗನಿಗೆ ಪಾಠ ಹೇಳುವ ತಾಯಿ , ಪಾತ್ರೆ ತೊಳೆಯಲು ನಿಂತರೆ ನಲ್ಲಿ ಮಾತ್ರ ಫುಲ್ ಸ್ಪೀಡಿನಲ್ಲಿ . ಅವಳಿಗೆ ತಕ್ಕ ಮಗ.
೪. ಪೇಪರ್ ನಲ್ಲಿ ಆ ಹಳ್ಳಿಯ ಬಳಿ ಪ್ಲಾಸ್ಟಿಕ್ ಕಸದಿಂದಾಗಿ ಆ ಖಾಹಿಲೆ ಹರಡುತ್ತಿದೆಯಂತೆ.  ಹಸುವಿನ ಹೊಟ್ಟೆಯಲ್ಲಿ ಮೂರ್ನಾಲ್ಕು ಕೆಜಿ ಪ್ಲಾಸ್ಟಿಕ್ ಸಿಕ್ಕಿತಂತೆ ಎಂದು ಪೇಪರ್ ಓದಿ ಪ್ಚ್ ಪ್ಚ್ … ಎನ್ನುತ್ತಾಳೆ ಆನ್ಲೈನ್ ನಲ್ಲಿ ಪೇಪರ್ ಓದುವ ಚತುರೆ. ಮಾಲೊಂದರ ಪ್ರಸಿಧ್ಧ  ಹೊಟೇಲಿಗೆ ಹೋಗಿ ಕುಂತಾಗ ಮಾಣಿ ಬಂದು  “ನಾರ್ಮಲ್ ವಾಟರಾ ಮಿನರಲ್ ವಾಟರಾ?” ಅಂದ್ರೆ ಉತ್ತರ “ಮಿನರಲ್ ವಾಟರ್” ಎಂದೇ ಆಗಿರುತ್ತದೆ . ಆ ಹೊಟೇಲಿನ ನೀರು ಶುಧ್ಧವಾಗಿಲ್ಲ ಎಂದ ಮೇಲೆ ಅಲ್ಲೇ ಮಾಡಿದ ಅಡುಗೆಗಳನ್ನು ತಿನ್ನುವುದು ಹೇಗೆ ? ಗ್ರಾಹಕರಿಗೆ ಶುಧ್ಧ ನೀರು ಕೊಡಬೇಕಾದ್ದು ಕೂಡ ಅವನ ಜವಾಬ್ದಾರಿಯಲ್ಲವೇ ? ಈ ಪ್ರಶ್ನೆಗಳನ್ನು ಹಲವರು ಎತ್ತಿದ ಪರಿಣಾಮವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಆದರೆ ಇನ್ನೂ ಹಲವು  ಪ್ರಶ್ನೆಗಳು ಹಾಗೇ ಉಳಿದಿವೆ.
೫. ದಶಕಗಳಿಂದ ಮದುವೆಗಳ ಊಟದ ವ್ಯವಸ್ಥೆ ಮಾಡುತ್ತಿರುವ ತಂದೆಯೊಡನೆ ಮಾತನಾಡುತ್ತಿದ್ದೆ. “ಇಡ್ಲಿ ಮಾಡಲು ನೀವು ಪ್ಲಾಸ್ಟಿಕ್ ಪೇಪರ್ ಬಳಸಬಾರದು ಅದು ಹಾನಿಕಾರಕ ಗೊತ್ತಾ ?” ಅಂದ್ರೆ ಅವರು ನಕ್ಕು ನುಡಿದಿದ್ದರು “ಹಾಗಾದ್ರೆ ಒಬ್ಬೊಬ್ಬರಿಗೂ ಅರ್ಧರ್ಧ ಲೀಟರ್ ನೀರಿನ ಬಾಟಲಿ ಕೊಡೋದು, ಅವರದರಿಂದ  ಒಂದೆರಡು ಗುಟುಕು ಕುಡಿದು ಅಲ್ಲೇ ಬಿಟ್ಟು ಹೋಗೋದು . ಪ್ರತೀ ಮದುವೆಯ ನಂತರ ಛತ್ರದ ಹಿಂಭಾಗದಲ್ಲಿ ಕಾಣುವ ಬಾಟಲಿಗಳ ಸಣ್ಣ ಸಣ್ಣ ಗುಡ್ಡಗುಡ್ಡಗಳು ಇವಕ್ಕೇನು ಹೇಳುತ್ತಿ ? ಈಗ ಅಡುಗೆ ಮಾಡಲು ಕೂಡ ಛತ್ರದ ನೀರು ಬಳಸುವ ಹಾಗಿಲ್ಲ ೫೦-೧೦೦  ಕ್ಯಾನ್  ಅಡುಗೆ ಮಾಡೋಕಂತಾನೆ ತರಿಸಿಬಿಡಿ ಅಂತಾರೆ . ಗೊತ್ತಾ ? ” ಮಾತು ಮುಂದುವರೆಯಲಿಲ್ಲ.
೬. ­­­­­­­ಮುಂದಿನದು ಸ್ವಲ್ಪ ಹಿಂದಿನ ಕಥೆ. ಸುಮಾರು ಎರಡು ದಶಕಗಳ ಹಿಂದೆ ೧೫ -೪೦ರಲ್ಲಿ ಕಟ್ಟಿದ ಪುಟ್ಟ ಮನೆ. ಮನೆಯೊಡತಿಗೆ ಮನೆಯ ಮುಂದೆ ತುಳಸಿ ವೃಂದಾವನಕ್ಕೆ ಜಾಗವಿದ್ದು ಪಕ್ಕದಲ್ಲಿ ಒಂದಷ್ಟು ಗಿಡಗಳನ್ನು ನೆಡುವಂತಿರಬೇಕು ಎಂಬ ಕನಸು . ಆ ಮನೆಯನ್ನು ಹಾಗೇ ಕಟ್ಟಲಾಯಿತು. ಪಕ್ಕದಲ್ಲಿದ್ದ ಅಷ್ಟೇ ಸಣ್ಣ ಜಾಗದಲ್ಲಿ ಇತ್ತೀಚಿಗೆ ಕಟ್ಟಿದ ಮತ್ತೊಂದು ಮನೆ , ಈಗ ಮನೆಯೊಡತಿ ಆಕೆಯ ಮನಸ್ಸು ಎರಡೂ ಹಿಂದಿನಂತಿಲ್ಲ  . ತುಳಸಿಯನ್ನು ಕುಂಡದಲ್ಲಿ ಬೆಳೆಸಿದರಾಯಿತು. ಗಿಡಗಳಾ ? ಸಾಧ್ಯವಾದರೆ  ತಾರಸಿ ಮೇಲೀನ ಜಾಗದಲ್ಲಿ ನೋಡೋಣ. ಮನೆಗಿನ್ನೊಂದು ರೂಮು ಬೇಕೇ ಬೇಕು ಎಂಬ ಬೇಡಿಕೆ ಆಕೆಯದ್ದು. ಅದಕ್ಕನುಗುಣವಾಗಿಯೇ ಕಟ್ಟಿದ ಮನೆ. ಮನೆಯ ಮುಂದೆ ಸಣ್ಣ ಕುಂಡದಲ್ಲಿ ಒಂಟಿಯಾಗಿ ಬೆಳೆದ ತುಳಸಿ .
೭. ಮಕ್ಕಳಿಗೆ ಬಳಸುವ ಬಳಸಿ ಬಿಸಾಡುವ ನ್ಯಾಪ್ಕಿನ್ ಗಳು ಒಂದೆರಡು ದಶಕಕಳೆದರೂ ಮಣ್ಣಿನೊಂದಿಗೆ ಸೇರಿ ಕೊಳೆಯುವುದಿಲ್ಲ ,ಗೊಬ್ಬರವಾಗುವುದಿಲ್ಲ   ಎಂಬ ಸತ್ಯ ಗೊತ್ತಿರುವ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಮನೆಯಲ್ಲೇ ಇರುವ ತಾಯಿ . ಅವಳ ಮಗು ಮಾತ್ರ ಮನೆಯಲ್ಲೂ ಪ್ಯಾಡಿಲ್ಲದೇ ಇರುವುದಿಲ್ಲ .
ಮನೆಯಲ್ಲಿ ಗೊಬ್ಬರ ಮಾಡುವ ಮಾತು ಬಿಡಿ ಬಿಸಾಡುವಾಗ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಬೇರೆ ಮಾಡುವ ಕಷ್ಟ ತೆಗೆದುಕೊಳ್ಳುವವರ ಸಂಖ್ಯೆ ಎಷ್ಟು ?  ಹುಳುಗಳನ್ನು ಕೊಡವಿ ಬಿಸಾಕುವಂತೆ ಒಂದು ದಿನ ನಾವು ಇಲ್ಲವೇ ನಮ್ಮ ಮುಂದಿನ ಪೀಳಿಗೆ ಬಿಸಾಕಲ್ಪಡುತ್ತೇವೆ. ನಮಗಿಂತಲೂ ಮೊದಲೇ ಅವತರಿಸಿದ ಪೃಥ್ವಿ ಆತ್ಮರಕ್ಷಣೆಯ ಪ್ರಯತ್ನಕ್ಕೆ ಮುಂದಾದರೆ ನಮ್ಮ ಗತಿ ?
ಇನ್ನೆಷ್ಟು ಬರೆಯುವುದು ? ಇದನ್ನು ಓದಿದವರೆಲ್ಲರೂ ಇಂತಹುದೇ ಇನ್ನೊಂದಷ್ಟು ಕಥೆಗಳನ್ನು ಸೇರಿಸಬಹುದು. ಈ ಕಥೆಗಳ ಭಾಗವಾದ ನಾವೆಲ್ಲರೂ ನಮ್ಮದೇ ಆದ ಕಾರಣಗಳನ್ನು ಕೊಡಬಹುದು. ನಾವಿಲ್ಲಿ ಯಾರನ್ನೂ ನಂಬಿಸಬೇಕಿಲ್ಲ . ಭೂಮಿಗೆ ನಾವು ಬೇಕಿಲ್ಲ , ನಮಗೆ ಭೂಮಿ ಬೇಕು ಎಂಬ ಸತ್ಯ ತಿಳಿಯದವರೇನಲ್ಲ ನಾವು ಆದರೂ ಹೀಗೇಕೆ ? ನಾಶವೊಂದರ ಸಾಕ್ಷಿಯಾಗಬೇಕಾದ ಪೀಳಿಗೆ ತಯಾರಾಗುವ ಪರಿಯೇ ಇದು ?
 
ಕಾಮದ ಕತ್ತಲಾಟಕ್ಕೆ
ಚಿಗುರಿದ ಮೊಳಕೆ
ಮಡಿಲಿಲ್ಲ  ತಾಯಿ ಜೀವಕೆ !
ನೆನಪಾದಳು ಕೊಟ್ಟಿಗೆಯ ತುಂಗೆ
ಹೇಗೂ ‘ನವರಾತ್ರಿ’ಯ ಹೊತ್ತು
ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು !
ಯಾರದ್ದದೆಂದು  ಕೇಳಲು ಅವಳಿಗಿಲ್ಲ ಬಾಯಿ
ಹತ್ತುಪಾಲು  ವಾಸಿ ಹರಿದು ತಿನ್ನುವ ಕಸಾಯಿ
ಅವಳ ಮಗುವಿನ ಹಾಲು
ಇವಳ ಕಂದನ ಪಾಲು
ಇದು ಜನನದ  ಬಲಿ !
 
ಜೀವ ಬೆಳೆಯಲು ಬೇಕೊಂದು ಮಡಿಲು
ತಾಯಿ ಬೇರ ತಂದರಾಯ್ತು  ಮಹಾನಗರಿಗೆ
ಸಿಗದ ಮಣ್ಣಿಗೆ ಚಡಪಡಿಸುತ್ತಿದೆ ಬೇರು  ಜೀವ
ಕರುಳ ಬಳ್ಳಿಯ ಚಿಗುರು ಮರೆಸದು ಬೇರ ನೋವ
ಇದು ಜತನದ  ಬಲಿ !
 
ಚಿಗುರಿಗೊಂದು ನೆಲ ಬೇಡವೇ ?
ತನ್ನದೆಂಬ ನೆಲೆ ಬೇಡವೇ ?
ಉರುಳಿದ ಗುಲ್ಮೊಹರಲಿತ್ತು ‘ಮೈನಾ’ ಗೂಡು
ಇನ್ನು ಕೇಳುವರಾರು ಅವಳ ಪಾಡು ?
ಕಾದದೇ ಅಭಿಮನ್ಯುವಾದ ಅವಳ ಮರಿಗಳ ಹಾಡು
ಕಟ್ಟಿದ ಎಂಟಸ್ತಿನ ಹೊರಗೊಂದು ಚಿಂದಿಯ ಡಬ್ಬ
ಅದರಲೆಂದೂ ನಡೆಯಲಿಲ್ಲ ಮೈನಾ ಹಬ್ಬ
ಇದು ನೆಲೆಯ ಬಲಿ !
 
ಜೀವಜಾಲವ  ಕಾಣಬೇಕು ಬೆಳೆದ ಜೀವ
ಘರ್ಜಿಸುವುದ  ಮರೆತ ರಾಜ
ಪಂಜರದಲಿಟ್ಟ ಮೂಕ ಗಿಳಿ
ಆಡುವುದ ಮರೆತ ಮೊಲ
ನೋಡುತ್ತಾ ನಿಂತ ಕಾಲ
ಇದು ಬುಧ್ಧಿಯ  ಬಲಿ !
 
ಬಲಿಗಳಲ್ಲೇ ಬೆಳೆದ ಜೀವ
ಚಕ್ರವರ್ತಿಯದಲ್ಲ ಮನೋಭಾವ
ಹೇಗಾದೀತು ?
ಹೆಜ್ಜೆ ನಮಸ್ಕಾರದಲುದಯಿಸಿದ
ತಂಗದಿರ, ತಾರೆಯರ
ಬಲಿಗಳ ಪಯಣಕ್ಕಿಲ್ಲ ಕೊನೆ
ಬದುಕು (?) ನಡೆಯುವುದೇ ಬಲಿಗಳಲ್ಲಿ
ಅವರು ಕಲಿತ ಸತ್ಯ
ನಾವೇ ಕಲಿಸಿದ ತಥ್ಯ
ಜಗದಗಲ ಕಾಳಿಯ ನಾಲಿಗೆ
ಬಲಿಯಾಗಲಿ  ‘ನಾನು’ ನಾಳೆಗೆ .
 

‍ಲೇಖಕರು avadhi-sandhyarani

September 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

11 ಪ್ರತಿಕ್ರಿಯೆಗಳು

  1. Bharathi b v

    ಸ್ವರ್ಣಾ ಲೇಖನ ಕಾಳಜಿಯದ್ದಾಗಿದೆ. ನನಗೆ ತುಂಬ ಇಷ್ಟವಾಯಿತು. ಒಂದೇ ವಿಷಯ ಸ್ಪಷ್ಟ ಪಡಿಸಬೇಕು ನಾನು – ನಾನು ಕೂಡ ನನ್ನ ಆರೋಗ್ಯದ ಮಿತಿಯ ಕಾರಣದಿಂದ ಮಿನರಲ್ ವಾಟರ್ ಬಾಟಲನ್ನು ಮಾತ್ರ ಬಳಸುತ್ತೇನೆ. ಆದರೆ ಅದೇ ಹೋಟೆಲಿನಲ್ಲಿ ಬೇಯಿಸಿದ ಮತ್ತು ಕುದಿಸಿದ ಆಹಾರವನ್ನು ತಿನ್ನುತ್ತೇನೆ. ಕಲುಷಿತ ನೀರನ್ನು ಕುಡಿದರೆ ಬೇಗನೇ ರೋಗಗಳು ಬಂದು ಅಡರುವ ಈ ಕಾಲದಲ್ಲಿ ಮತ್ತೇನಾದರೂ ಆಯ್ಕೆ ಇದೆಯಾ?

    ಪ್ರತಿಕ್ರಿಯೆ
    • Swarna

      ಮಿನರಲ್ ವಾಟರ್ ಅನ್ನು ಬಳಸಲೇ ಬಾರದು ಎಂಬ ಧೋರಣೆ ನನ್ನದಲ್ಲ ಭಾರತಿ . ಆದರೆ ಆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವ ಬದಲು ಹೊಟೇಲ್ ನವರಿಗೆ ಕಡ್ಡಾಯವಾಗಿ ಒಂದು ಆರ್.ಓ. ಫಿಲ್ಟರ್ ಅನ್ನು ಕಣ್ಣಿಗೆ ಕಾಣುವಂತೆ ಇಟ್ಟು ಅಲ್ಲಿಂದಲೇ ನೀರು ಕೊಡು ಎನ್ನಬಹುದು. ಈಗ ಅಲ್ಲಲ್ಲಿ ಪ್ಲಾಂಟ್ಗಳನ್ನು ಸರಕಾರದವರೇ ಸ್ಥಾಪಿಸಿ ಒಂದು ರೂಪಾಯಿಗೆ ಲೀಟರ್ನಂತೆ ನೀರು ಕೊಡುತ್ತಿದ್ದಾರೆ .ಹೀಗೆ ಇನ್ನಾವುದೇ ಮಾರ್ಗವಾದರೂ ಓಕೆ ಆದರೆ ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ತಪ್ಪಬೇಕು.

      ಪ್ರತಿಕ್ರಿಯೆ
  2. jayashree Deshpande

    ವಿಷ ವರ್ತುಲಗಳೆ೦ದರೆ ಹೀಗೆಯೇ ಅಲ್ಲವೇ? ತಲೆಗೆ ಸುರಿದುಕೊ೦ಡ ನೀರು ಕಾಲಿಗೆ ಬ೦ದೇ ಬರುತ್ತದೆ೦ಬ ಜ್ಞಾನವಿರುವವರೂ ನಾವು ವಾತಾವರಣವನ್ನು ಪೊಲ್ಲ್ಯೂಟ್ ಮಾಡುವುದಿಲ್ಲ ಎ೦ದು ಎದೆ ತಟ್ಟಿ ಒಪ್ಪಿಕೊಳ್ಳುವುದಿಲ್ಲ…ಸಾಧ್ಯವಿರುವಷ್ಟು ತಡೆಯುವ ಪ್ರಯತ್ನ ಮಾಡಿಯೇವೇ?

    ಪ್ರತಿಕ್ರಿಯೆ
  3. umavallish

    ನಮ್ಮದೇ ”ಅಜ್ಞಾನ” ನಮ್ಮ ಮುಂದೆ ಬಿಚ್ಚಿ ಇಟ್ಟಿದ್ದೀರಾ. ಚೆನ್ನಾಗಿ ಸರಳವಾಗಿ, ಬರೆದಿದ್ದೀರಿ. ವಂದನೆಗಳು.

    ಪ್ರತಿಕ್ರಿಯೆ
  4. Swarna

    ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ವಂದನೆಗಳು.

    ಪ್ರತಿಕ್ರಿಯೆ
  5. Kusuma R

    lekhana tumba ista aytu .mnanu adastu office alli tissue paper mattu nirannu waste maduvudilla..

    ಪ್ರತಿಕ್ರಿಯೆ
  6. Mallappa

    ಸ್ವರ್ಣ,
    ಲೇಖನ ಚನ್ನಾಗಿದೆ. ಮನೆಯ RO ದ ತ್ಯಾಜ್ಯwaterನ್ನ ಎಲ್ಲಾಗಿಡಗಳಿಗೆ ಹಾಗು ಬೆಳಿಗ್ಗೆ ರಂಗೋಲಿಗೆ. ಮನೆಯಲ್ಲಿ ನನ್ನ ನೆಕ್ ನೆಮ್ ಹನಿನೀರಾವರಿ ಎಕೆಂದರೆ ಹನಿ ನೀರಲ್ಲಿಯೇ ನನ್ನ ಸ್ನಾನಾದಿ.ಸಮಿತಿಯಲ್ಲಿ ಧರ್ಮಸ್ಥಳ ಒಂದೇ ಲೋಟದಲ್ಲಿ ಎಲ್ಲರೂ ನೀರು ಕುಡಿಬೇಕು.ಲೋಟ ಚಲ್ಲುವಹಾಗೆ ಇಲ್ಲ.ಹೊಸ ಐಡಿಯಾ ಇದ್ದರೆ ತಿಳಿಸಿ ಇಂಪ್ಲಿಮೆಂಟ ಮಾಡೋಣ ಮಲ್ಲಪ್ಪ

    ಪ್ರತಿಕ್ರಿಯೆ
  7. Bharathi b v

    ಇಟ್ಟರೂ ಕಣ್ಣೆದುರು ವರ್ಷಗಟ್ಟಳೆ ತೊಳೆಯದ ಟ್ಯಾಂಕ್ ನ ಚಿತ್ರ ಬರುತ್ತೆ ಸ್ವರ್ಣಾ … ಇದೆಲ್ಲ ಒಟ್ಟಿನಲ್ಲಿ ವಿಷವರ್ತುಲವೇ ….ಅಲ್ವಾ?

    ಪ್ರತಿಕ್ರಿಯೆ
  8. Shrinivas. Huddar

    ತುಂಬಾ ಸರಳವಾಗಿ ಬರೆದಿದ್ದಿರಿ ವಂದನೆಗಳು. ಕವನ ಕೂಡಾ ಸುಂದರವಾಗಿದೆ. ನಾಳೆ ಹೇಗೋ ಏನೋ….. ಪೇಟೆಗೆ ಹೋಗುವುದೇ ಖಾತ್ರಿ ಇದ್ದಲ್ಲಿ ಒಂದು ಬಟ್ಟೆ ಕಯ ಚೀಲ ಒಯ್ಯಲು ಸೋಮಾರಿತನ ನಮಗೆ ಪ್ಲಾಸ್ಡಿಕನಿಂದ ಬಂದಿದೆ.

    ಪ್ರತಿಕ್ರಿಯೆ
  9. kusumabaale

    ಆಸ್ಪತ್ರೆ ತ್ಯಾಜ್ಯ?…ಈ ತ್ಯಾಜ್ಯ? ಬಹುಶಃ ಕಲಿಗಾಲದ ಅಂತ್ಯವೆಂದರೆ…..

    ಪ್ರತಿಕ್ರಿಯೆ
  10. Praveen V Savadi

    ಇಂತಹ ಸಮಸ್ಯೆ / ಪ್ರಶ್ನೆಗಳಿಗೆ ಉತ್ತರ / ಸಲಹೆಗಳು ಕೂಡಾ ಅಷ್ಟೇ ಸಾವಿರಾರು.. ಅವುಗಳಿಗೆ ನಾನೂ ಒಂದು ಸೇರಿಸುವುದೆಂದರೆ… ಈ ಸಾ.. ಕಂಪನಿಗಳು ಸುಮಾರಾಗಿ ನಗರ ಅಥವಾ ಮಹಾನಗರಗಳಲ್ಲಿ ಇರುವುದರಿಂದ ಅಲ್ಲಿ ಮನೆ ಭಾಡಿಗೆ ಕೊಡುವವರು ಅಥವಾ ಸ್ವಂತ ಕಟ್ಟಿಕೊಳ್ಳುವವರು 1BHK / 2 BHK ಬದಲು 1BHKO / 2 BHKO ಯೋಜನೆ ಮಾಡಿಕೊಳ್ಳುವುದು ಒಳಿತು. ಮನೆಯಲ್ಲಿ ಎಲ್ಲವೂ ಹೇಗೂ ಹಾಗೆ ಒಂದು ಆಫೀಸ್ ರೂಂ ಅಂತ ಇದ್ದರೆ ಹೇಗೆ?… ಅತ್ತ ಕಂಪನಿಗಳಿಗೆ ಸರ್ಕಾರ ನಿಯಮ ಮಾಡಿ, ತಾತ್ಕಲಿಕವಾದರು ಸರಿಯೇ, ವಾರಕ್ಕೆ 3/4 ದಿನ ಮನೆಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದಲ್ಲಿ… ಕಛೇರಿಗೆ ಹೋಗುವ ಸಮಯ, ನೀರು, ಜೊತೆಗೆ ಮನೆಯಲ್ಲಿ ಹೆಂಡತಿಯೋ, ಗಂಡನೋ, ಅಮ್ಮನೋ, ಹೀಗೆ ನಮ್ಮವರೇ ಮಾಡಿದ ಶುಚಿಯಾದ, ರುಚಿಯಾದ ಅಡಿಗೆ ಊಟಕ್ಕೆ ಲಭಿಸುವುದು ಅತ್ತ ಸಾ.. ಕಂಪನಿಗಳಿಗೂ ಸ್ಥಳ ಕೊರತೆ ನೀಗುವುದು… ಸೊ ಮನೆ 1 / 2 BHKO ಆಗಿರಲಿ… ಹೀಗೆ ಗದ್ಯ – ಸಮಸ್ಯಗಳ ಮರುಭೂಮಿಯಿಂದ ನಡೆದು ದಕ್ಷಿಣಕ್ಕೆ ಬಂದರೆ ಅಲ್ಲಿ… ಚಿಂತನೆಗೀಡು ಮಾಡುವ ಅಥವಾ ಅನಿವಾರ್ಯತೆಯಿಂದ ತುಂಬಿದ, ಸುಂದರವಾದ, ಅಚ್ಚುಕಟ್ಟಾದ ಪದ್ಯ ಸರೋವರ ಇದೆ… ಪದ್ಯದ ತುಂಬ ಎಲ್ಲಾ ಬಲಿಗಳು ಜೀವಂತವಾಗಿ ಹರೀದಿವೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: