ಮಲೆಗಳಲ್ಲಿ ಮದುಮಗಳು ಮತ್ತು ಜೋಗಪ್ಪದೀರು… – ಶಿಲ್ಪಶ್ರೀ ಕೆ ಎಸ್

ಶಿಲ್ಪಶ್ರೀ ಕೆ ಎಸ್

ಕಥೆಯಲ್ಲಿ ಎಂಥಾ ಹಂದರ ಹರಡಿದ್ದರೂ, ಕಥೆ ಹೇಳುವ ಹೊರೆ ಹೊತ್ತವನ ಕೌಶಲ್ಯ ಬಲದಿಂದ ಕೇಳುಗನ ಚಿತ್ತ ವಿಹರಿಸುತ್ತದೆ. ಒಬ್ಬ ಕವಿಯಾಗಿ, ಲೇಖಕನಾಗಿ, ಒಟ್ಟಿನಲ್ಲಿ ಕಥೆಗಾರನಾಗಿ ಕುವೆಂಪುರವರ ಕೈಂಕರ್ಯವನ್ನು ಬಿಂಬಿಸುವ ಕೃತಿಗೆ ನಾಡಿಯಾಗಿ ಜೋಗಪ್ಪರನ್ನು ಕೆ ವೈ ನಾರಾಯಣ ಸ್ವಾಮಿ ಅವರು ನೇಮಿಸಿ ತಮ್ಮ ಸಾಮರ್ಥ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಮಲೆನಾಡಿನಲ್ಲಿ ನಮ್ಮನ್ನು ಕೊಂಡೊಯ್ಯುವ ಈ ಜೋಗಪ್ಪಂದಿರು ತಮ್ಮ ಹೊಟ್ಟೆಪಾಡಿಗಾಗಿ ಕಂಡು-ಕೇಳಿದ ಆಗುಹೋಗುಗಳ ನಡುವಿನ ಅರ್ಥಾರ್ಥಗಳನ್ನು ಒಂದುಗೂಡಿಸಿ ರೂಪ ನೀಡಿ ಹಾಡಿ ಹೊರಡುತ್ತಾರೆ. ಜೋಗಪ್ಪಗಳಿಗೆ ತಮ್ಮದೇ ಆದ ನೆಲೆಯಿಲ್ಲ. ಎಲ್ಲರ ಸೂರಿನ ಬಿರುಕುಗಳೂ ಅವರಿಗೆ ಗೊತ್ತು. ಊರಿಗೇ ನೆಂಟರು, ಒಪ್ಪೊತ್ತಿನ ಊಟ ಗಿಟ್ಟಸುವುದರಲ್ಲಿ ಪಂಟರು.
ಮಲೆಗಳಲ್ಲಿ ನಡೆದಾಡುವ ಈ ನಾಟಕದ ಜೋಗಪ್ಪಂದಿರೂ ಸಹ ಇವೆಲ್ಲವನ್ನು ಒಳಗೊಂಡವರೇ ಆಗಿದ್ದಾರೆ. ಈ ಜೋಗಿಗಳು ತಮ್ಮ ಕಥಾಹಂದರದಲ್ಲಿ ಬರುವ ಪಾತ್ರಗಳಿಗೆ ತಮ್ಮನ್ನೇ ತೊಡಗಿಸಿಕೊಂಡು, ಜೀವತುಂಬಿ ನೋಡುಗರಿಗೆ ಪ್ರದರ್ಶಿಸುತ್ತಾರೆ. ತುಣುಕುಗಳನ್ನೆಲ್ಲಾ ಒಗ್ಗೂಡಿಸಿ ಹೊರಹೊಮ್ಮುವ ಪೂರ್ಣಚಂದ್ರನು ಹುಣ್ಣಿಮೆಯ ಚೆಲುವಿನಲ್ಲಿ ಸನ್ನಿವೇಶಗಳನ್ನು ಮುಂದೊಯ್ಯುತ್ತಾನೆ.
ಹಾಗೆ ಯಾರೂ ಅಮುಖ್ಯರಲ್ಲ ಎಂಬುದನ್ನು ಸಾಕ್ಷೀಕರಿಸುವಲ್ಲಿ ಈ ಜೋಗಪ್ಪಂದಿರು ಯಶಸ್ವಿಯಾಗುತ್ತಾರೆ. ತಮ್ಮ ಜೀವನವನ್ನೇ ಕಲೆಯಾಗಿಸಿ, ಪಾತ್ರಧಾರಿಯಾಗಿ ಶ್ರಮಿಸಿ ಕಲಾರಸಿಕರಿಗೆ ಉಣಬಡಿಸುವುದರ ಜೊತೆಗೆ ತಮ್ಮ ಹೊಟ್ಟೆಯನ್ನೂ ತುಂಬಿಸಿಕೊಂಡು ಮುಂದಿನ ಊರಿಗೆ ತಮ್ಮ ದಾರಿ ಸವೆಸುತ್ತಾರೆ.

ಸಾಧುಗಳ ಗುಂಪೊಂದು ತಮಗೆ ಭಿಕ್ಷೆಯಾಗಿ ಸಿಕ್ಕ ಉಂಗುರವನ್ನು ಜೋಗಪ್ಪರಿಗೆ ನೀಡಿ ಆ ಉಂಗುರಕ್ಕೆ ಕಾಣಸಿಕ್ಕಿರುವ ಎಲ್ಲಾ ಕಥಾ ಚುಟುಕಗಳನ್ನು ಸೇರಿಸಿ ಹೆಣೆದು ರೂಪುಗೊಂಡ ಹಂದರವನ್ನು ಎಲ್ಲೂ ಮಾಸಲು ಬಿಡದೇ ಹಾಡಿಹರಡುವ ಜವಾಬ್ದಾರಿಯನ್ನು ವಹಿಸುತ್ತಾರೆ. ಇದನ್ನು ಪೂರೈಸಲು ಜೋಗಪ್ಪಂದಿರು ಪ್ರಮುಖ ಪಾತ್ರಗಳನ್ನು ತಮ್ಮಲ್ಲಿ ತಾವು ಮೈಗೂಡಿಸಿಕೊಂಡು ತಾವೇ ಆ ಪಾತ್ರಗಳು ಎನ್ನುವಷ್ಟರ ಮಟ್ಟಿಗೆ ಅಭಿವ್ಯಕ್ತಪಡಿಸುತ್ತಾರೆ.

ಕಥೆಯ ಜೀವಾಳವನ್ನು ಉಂಗುರ ಎಂಬ ಕಲ್ಪನೆಯಾಗಿ ಸಾಗಬಿಡುವುದು ಕುವೆಂಪುರವರ ಕಲಾಸಾಮರ್ಥ್ಯದ ಹಿಡಿತದ ಕುರುಹು. ಸನ್ನಿವೇಷಗಳನ್ನು ನೈಸರ್ಗಿಕವಾಗಿ ಸೃಷ್ಠಿಸಿ ಜೀವನ ಧರ್ಮವನ್ನು ಹಾಗೂ ಲೋಕಾರೂಢಿಯನ್ನು ಸಾದರಪಡಿಸಿ ಜನಜೀವನದ ಅಸಹಾಯಕತೆ, ದುರ್ಬಲತೆ, ಸ್ವಾರ್ಥ, ಹಿರಿಮೆ, ಭಾವ, ಮೋಹ ಎಲ್ಲದರ ರೂಪುರೇಷಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪ್ರತಿಯೊಂದು ಸಾಲೂ ಸಹ ಒಂದೊಂದು ಕಥೆ ಹೇಳವ ಸಾಮರ್ಥ್ಯ  ಒಳಗೊಂಡಿದೆ.

ಇಲ್ಲಿ ಪಾತ್ರಗಳು ಕಥೆಗೆ ಜೀವ ತುಂಬಿದೆಯೇ ಹೊರತು ಯಾವ ಪಾತ್ರದ ಕಥೆಯೂ ಇದಾಗಿಲ್ಲ. ನಂಬಿಕೆಯಿಂದ ಆರಂಭಗೊಂಡು ಪದ್ಧತಿ, ಆಚರಣೆ, ಮೂಢನಂಬಿಕೆ, ಧರ್ಮ, ಅಧಿಕಾರ ಎಲ್ಲದರ ಉಲ್ಲೇಖವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಮುನ್ನುಡಿ, ಕಥಾ ಸನ್ನಿವೇಶ, ದೃಶ್ಯಗಳ ಅವಲಂಭನೆಯನ್ನು ಜೋಗಪ್ಪಂದಿರು ಅರ್ಥೈಸುತ್ತಾರೆ. ಪ್ರತಿ ಪಾತ್ರದ ತುಮುಲವನ್ನು ಜೋಗಪ್ಪಂದಿರು ಸರಳವಾಗಿ ನೋಡಗೊಡುತ್ತಾರೆ.

ಮೂಲ ಕೃತಿಯಲ್ಲಿ ಜೋಗಪ್ಪನ ಪಾತ್ರವೇ ಇಲ್ಲ ಎಂಬುದು ಪುಳಕ ನೀಡಿದ ಕ್ಷಣ. ಪರಿಪೂರ್ಣ ಕೃತಿಯೊಂದನ್ನು ಉತ್ತಮಗೊಳಿಸುವ ತಾಕತ್ತು ಪ್ರಬಲವಾಗಿ ಮೂಡಿಬಂದಿದೆ. ಈ ಕಾರ್ಯ ಕಷ್ಟಸಾಧ್ಯ ಎಂಬುದನ್ನು ನಾಟಕಕಾರರು ಇಲ್ಲಿ ಸುಳ್ಳು ಮಾಡಿದ್ದಾರೆ.

ಇದೆಲ್ಲದರ ವಿಹಾರದ ಬಳಿಕ ಕುವೆಂಪುರವರು ಒಬ್ಬ ಅದೃಶ ಜೋಗಿಯಾಗಿ ಇಡೀ ನಾಟಕದಲ್ಲಿ ಕಾಣಸಿಗುವಂತೆ ಕೆ ವೈ ನಾರಾಯಣ ಸ್ವಾಮಿ ಅವರು ರೂಪಾಂತರಿಸಿದ್ದಾರೆ. ಒಳಿತು ಕೆಡುಕುಗಳ ಮನ್ನಣೆಗೆ ನೋಡುಗರ ಮನ ತೆರೆಯುತ್ತಾರೆ.
ಇದು ನನಗೆ ನಾಟಕದ ಮೊದಲ ಅನುಭವ. ಈ ಕಲಾಪ್ರಪಂಚಕ್ಕೆ ಇದಕ್ಕಿಂತ ಉತ್ತಮವಾದ ಮುನ್ನುಡಿ ಮತ್ತೊಂದಿರಲು ಸಾಧ್ಯವಿರಲಿಲ್ಲ. ಮಲೆಯಲ್ಲಿ ಮುದ್ದು ಮದುಮಗಳ ನೋಡುತ್ತಾ ಶಿಲ್ಪವಾಗಿ ಒಳಹೊಕ್ಕು ನಿಂತ ಅವಿರತ ಅನುಭವ.
 

‍ಲೇಖಕರು G

March 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: