'ಹೋಗಿ ಬಾ ಮದುಮಗಳೇ…' – ಜಿ ಎನ್ ಮೋಹನ್

ಮದುಮಗಳು ಸಂಭ್ರಮಕ್ಕೆ ಸಧ್ಯಕ್ಕೆ ತೆರೆ ಬಿದ್ದಿದೆ.

ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯುತ್ತಿದ್ದ ’ಮಲೆಗಳಲ್ಲಿ ಮದುಮಗಳು’ ನಾಟಕ ತನ್ನ ೬೦ನೆಯ ಪ್ರದರ್ಶನ ಮುಗಿಸಿ ನಮಗೆ ಕೈ ಬೀಸಿದೆ.

ಕಳೆದ ಸಲ ಮದುಮಗಳ ಪ್ರದರ್ಶನ ಮುಗಿದ ಮೇಲೆ ಜಿ ಎನ್ ಮೋಹನ್ ಬರೆದ ಬರಹ ಈಗಲೂ ಪ್ರಸ್ತುತ ಅನ್ನಿಸಿದ್ದರಿಂದ ನಿಮ್ಮ ಮರು ಓದಿಗೆ ಈ ಬರಹ.

***


ಜಿ ಎನ್ ಮೋಹನ್

‘ದೊಡ್ಡಗೌಡರ ಬಾಗಿಲೀಗೆ ನಮ್ಮ ಮೂಳೆಯ ತೋರಣ, ನಮ್ಮ ಜನಗಳ ಕಾಲು ಕೈ ಕಂಬ ಅವರ ಹಟ್ಟಿಗೆ, ಅವರ ಬಂಗಲೆಯಂಗಳಕ್ಕೆ ನಮ್ಮ ರಕ್ತದ ರಂಗೋಲಿ…’ ಹಾಡು ಮೊರೆಯುತ್ತಿರುವಾಗ ಸುಡುಗಣ್ಣುಗಳನ್ನು ಹೊತ್ತ, ಮೈ ತುಂಬಾ ಆವೇಶ ಹೊದ್ದ ಆತ ರಂಗಪ್ರವೇಶಿಸಿದ. ಇಡೀ ಇಡೀ ವ್ಯವಸ್ಥೆಯನ್ನೇ ಬದಲು ಮಾಡಿಬಿಡಬೇಕು ಎನ್ನುವ ತಹತಹ ಆತನಲ್ಲಿತ್ತು. ಆತ ಸಿಂಘ್ವಾ. ಸಿಜಿಕೆ ಎಂದೇ ಹೆಸರಾದ ಸಿ ಜಿ ಕೃಷ್ಣಸ್ವಾಮಿ ಅದೀಗ ತಾನೇ ನಿರ್ದೇಶಕರಾಗಿ ನೆಲೆಯೂರುತ್ತಿದ್ದರು. ‘ಸಮುದಾಯ’ ತಂಡ ಕಲೆಯನ್ನು ನಾಲ್ಕು ಗೋಡೆಗಳ ನಡುವಿನಿಂದ ಬಿಡಿಸಿಕೊಂಡು ಜನರ ಬಳಿಗೇ ಒಯ್ಯಲು ಸಜ್ಜಾದಾಗ ಸಿಜಿಕೆ ಮೊದಲ ಬಾರಿ ನಿರ್ದೇಶನಕ್ಕೆ ಕೈ ಹಾಕಿದ್ದರು. ಬಿಹಾರದ ಬೆಲ್ಚಿಯಲ್ಲಿ ದಲಿತರ ಮಾರಣಹೋಮವಾಗಿ ಹೋಗಿತ್ತು. ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಬೆಲ್ಚಿಗೆ ಬಂದು ಪರಿಸ್ಥಿತಿ ಅಧ್ಯಯನ ಮಾಡುವಂತೆ ಒತ್ತಡ ಹೇರುವಷ್ಟು ದೇಶ ಭುಗಿಲೆದ್ದಿತ್ತು. ಇದ್ದ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಕಿಚ್ಚು ಹೊತ್ತಿಸಿ ಇಡೀ ವ್ಯವಸ್ಥೆಯನ್ನು ಬದಲು ಮಾಡಿಬಿಡುತ್ತೇನೆ ಎಂದು ಹೊರಡುವ ಆ ಸಿಂಘ್ವಾನ ಪಾತ್ರಕ್ಕಾಗಿ ಸಿಜಿಕೆ ತಲಾಶ್ ನಡೆಸಿದ್ದರು. ಅವರೆದುರಿಗೆ ಅದೇ ಸುಡುಗಣ್ಣುಗಳೊಂದಿಗೆ, ಇದ್ದದ್ದನ್ನು ಮುರಿದು ಕಟ್ಟುವ ಹಂಬಲದ ಯುವಕನೊಬ್ಬ ಕಂಡ. ಆತನೇ ಸಿ ಬಸವಲಿಂಗಯ್ಯ.

ಅದೇ ಬಸವಲಿಂಗಯ್ಯ ರಂಗಭೂಮಿಯ ಮಟ್ಟಿಗೂ ಆ ಕೆಲಸ ಮಾಡಿದ್ದಾರೆ. ರಂಗಭೂಮಿಯ ವ್ಯಾಕರಣವನ್ನು ಮುರಿದು ಕಟ್ಟುವ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಸಿ ಬಸವಲಿಂಗಯ್ಯ ಕುವೆಂಪುರವರ ‘ಮಲೆಗಳಲಿ ಮದುಮಗಳು’ ಕಾದಂಬರಿಯನ್ನು ಕೈಗೆತ್ತಿಕೊಂಡಾಗ ಸಾಹಿತ್ಯಲೋಕ ಒಂದು ಬಾರಿ ಮಗ್ಗಲು ಬದಲಿಸಿತ್ತು. ಮಲೆಗಳಲ್ಲಿ ಮದುಮಗಳು ಎಂಬ ಮಹಾ ಹರವಿನ ಕಾದಂಬರಿಯನ್ನು ಓದಿದವರು ಈ ಮಲೆಯ ಮಹಾಯಾನವನ್ನು ಇನ್ನೂ ಅರ್ಥಮಾಡಿಕೊಳ್ಳುತ್ತಲೇ ಇದ್ದರು. ಅಂತಹ ಹೊತ್ತಿನಲ್ಲಿಯೇ ಬಸವಲಿಂಗಯ್ಯ ಈ ಕಾದಂಬರಿ ಹಿಡಿದು ನಿಂತೇಬಿಟ್ಟರು. 1967ರಲ್ಲಿ ಈ ಕಾದಂಬರಿಯನ್ನು ಕುವೆಂಪು ಓದುಗ ಲೋಕಕ್ಕೆ ಅರ್ಪಿಸಿದಾಗ ಮಲೆಯಂತೆಯೇ ಹಬ್ಬಿ ನಿಂತಿದ್ದ ಈ ಕಾದಂಬರಿಯನ್ನು ವಿಮರ್ಶಿಸುವುದು ಹೇಗೆ ಎಂಬುದು ಗೊತ್ತಾಗದೇ ವಿಮರ್ಶಾಲೋಕ ತಬ್ಬಿಬ್ಬುಗೊಂಡಿತ್ತು. ಅಲ್ಲಿಯವರೆಗಿದ್ದ ವಿಮರ್ಶೆಯ ಹತಾರಗಳನ್ನು ಮೀರಿ ಈ ಕಾದಂಬರಿ ಎದ್ದು ನಿಂತಿತ್ತು. ಹಾಗಾಗಿ ವಿಮರ್ಶೆ ಎನ್ನುವುದೇ ತನ್ನ ವ್ಯಾಕರಣ ಬದಲಿಸಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ.
ಮೊನ್ನೆ ರಂಗಶಂಕರದಲ್ಲಿ ಲಂಕೇಶ್ ಉತ್ಸವ ನಡೆಯಿತು. ನಾನು ‘ಪಾಪದ ಹೂಗಳ’ನ್ನು ಓದಲು ನಿಂತಿದ್ದೆ. ಪಾಪದ ಹೂಗಳು ಸಾಹಿತ್ಯ ಲೋಕದೊಳಗೆ ಹೆಜ್ಜೆಹಾಕಿದಾಗ ಫ್ರಾನ್ಸ್ ಬೆಚ್ಚಿಬಿದ್ದಿತ್ತು. ವಿಮರ್ಶಕರು ಈ ಕೃತಿಯನ್ನು ವಿಮರ್ಶಿಸುವುದು ಹೇಗೆ ಎಂದು ಕಾಣದೇ ತಬ್ಬಿಬ್ಬಾಗಿದ್ದರು. ಅವರ ವಿಮರ್ಶೆಯ ಹತಾರಗಳು ಕೈಕೊಟ್ಟಿದ್ದವು. ಈ ಕೃತಿ ಪರಿಚಯಿಸುತ್ತಾ ನಿಂತ ನನಗೆ ಆ ಕ್ಷಣ ನೆನಪಾದದ್ದು ಸಿ ಬಸವಲಿಂಗಯ್ಯ. ಮಲೆಗಳಲಿ ಮದುಮಗಳು ನಾಟಕ ಸಹಾ ಇಂತಹದ್ದೇ ಒಂದು ಬಿಕ್ಕಟ್ಟನ್ನು ಸೃಷ್ಟಿಮಾಡಿತ್ತು. ಅಂದಿನವರೆಗೂ ನಾವು ನಾಟಕ ನೋಡುತ್ತಿದ್ದ ರೀತಿಯನ್ನೇ ಬದಲಿಸಿಹಾಕಿತು. ನಾಲ್ಕು ರಂಗಮಂಚ, ಇಡೀ ರಾತ್ರಿ ನಾಟಕ, ಅಸಂಖ್ಯಾತ ಪಾತ್ರಗಳು, ಕ್ರಿಮಿ ಕೀಟ ನಾಯಿ ಹಂದಿಗಳೂ ಪಾತ್ರಗಳು… ಹೀಗೆ ನಾಟಕ ಎಂದರೆ ಅದುವರೆಗೂ ಏನಾಗಿತ್ತೋ ಅದನ್ನು ಬಸವಲಿಂಗಯ್ಯ ಬದಲಿಸಿಹಾಕಿದ್ದರು. ರಂಗ ವಿಮರ್ಶೆಯೂ ಈಗ ಮಗ್ಗಲು ಬದಲಿಸಿಕೊಳ್ಳುವ ಕಾಲ ಬಂದಿತ್ತು.

ಚಿತ್ರ ಕೃಪೆ : ರವಿ ಅರೇಹಳ್ಳಿ

‘ನೀನು ಸಾಥ್ ಕೊಟ್ಟರೆ ಮದುಮಗಳನ್ನು ಬೆಂಗಳೂರಿಗೂ ಕರೆದುಕೊಂಡು ಬಂದುಬಿಡುತ್ತೇನೆ ನೋಡು…’ ಎಂದು ‘ಬಸೂ’ ಎಂದೇ ನಾವೆಲ್ಲರೂ ಕರೆಯುವ ಸಿ ಬಸವಲಿಂಗಯ್ಯ ನನ್ನ ಹೆಗಲ ಮೇಲೆ ಕೈಹಾಕಿ ಹೇಳುತ್ತಿದ್ದ. ‘ಅಲ್ಲ, ಅದೇನು ಹುಡುಗಾಟವೇ? ಅಷ್ಟೊಂದು ವಿಸ್ತಾರವಾದ ಪ್ರದೇಶ, ಅಷ್ಟು ಸಂಖ್ಯೆಯ ನಟರು, ತಿಂಗಳುಗಟ್ಟಲೆ ಪ್ರದರ್ಶನ… ಎಲ್ಲಾದರೂ ಉಂಟೇ?’ ಎನಿಸಿತ್ತು. ನಾನು ಬಸವಲಿಂಗಯ್ಯನನ್ನು ನೋಡಿದೆ ಉಹುಂ ಅವನ ಕಣ್ಣುಗಳಲ್ಲಿದ್ದ ಆಶಾವಾದ ಬತ್ತಿರಲಿಲ್ಲ. ಟಿವಿ ಚಾನಲ್ ಒಂದು ನಾಟಕಕ್ಕೆ ಸಾಥಿಯಾಗಿ ಟಿ ಆರ್ ಪಿ ಏರಿಸಿಕೊಳ್ಳುವುದು ಇವತ್ತಿನ ಲೋಕದಲ್ಲಿ ಖಂಡಿತಾ ಪವಾಡವೇ ಸರಿ ಎಂದು ನನಗೂ, ಅವನಿಗೂ ಚೆನ್ನಾಗಿ ಗೊತ್ತಿತ್ತು. ಆದರೂ ಆತನಿಗೆ ‘ಯಾಕಾಗಬಾರದು” ಎನ್ನುವ ಉತ್ಸಾಹ. ನನಗೆ ‘ಒಂದು ಕೈ ನೋಡಿಯೇಬಿಡೋಣ’ ಎನ್ನುವ ಹುಂಬತನ. ನನ್ನ ಕೈಗೆ ಕೃಪಾಕರ ಸೇನಾನಿ ಸೆರೆಹಿಡಿದಿದ್ದ ನಾಟಕದ ವಿಡಿಯೋ ದೃಶ್ಯಾವಳಿಯನ್ನು ಕೈಗಿಟ್ಟು ಬಸೂ ಮಾಯವಾದ.
ಮಾಯವಾದ ಎಂದೇ ಅಂದುಕೊಂಡಿದ್ದೆ. ವಾರ್ತಾ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಫೋನ್ ಮಾಡುವವರೆಗೆ. ‘ನಮ್ಮ ಮನೆ ಮದುವೆಗೆ ಬನ್ನಿ’ ಎನ್ನುವಷ್ಟೇ ಅಕ್ಕರೆಯಿಂದ ‘ಮಲೆಗಳಲ್ಲಿ ಮದುಮಗಳು’ ನಾಟಕದ ಪ್ರಿವ್ಯೂಗೆ ಬನ್ನಿ ಎಂದು ವಿಶುಕುಮಾರ್ ಆಹ್ವಾನವಿತ್ತರು. ಒಮ್ಮೆ ಕಂಡ ಕನಸಿನಿಂದ ಬಸೂ ಕಾಲ್ತೆಗೆಯುವುದಿಲ್ಲ ಎಂದು ಮತ್ತೆ ಸಾಬೀತಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ನಿಜಕ್ಕೂ ಇದನ್ನು ತಮ್ಮ ಮನೆಯ ಒಂದು ಹಬ್ಬವೇನೋ ಎನ್ನುವಂತೆ ನಾಟಕವನ್ನು ನಡೆಸಿಕೊಟ್ಟರು. ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ರಂಗಕ್ಕೆ ಏರಿಸಿಯೇಬಿಡೋಣ ಎಂದು ಬಸೂ ಕೈ ವೈ ನಾರಾಯಣಸ್ವಾಮಿಯವರ ಮುಂದೆ ತಮ್ಮ ಕನಸು ಹರಡಿದಾಗ ಕೆವೈಎನ್ ಒಮ್ಮೆ ಬೆಚ್ಚಿಬಿದ್ದರು. ‘ಏಕಕಾಲಕ್ಕೆ ಬಸು ನನ್ನಲ್ಲಿ ಅತೀವ ಭಯ ಹಾಗೂ ವ್ಯಾಮೋಹ ಎರಡೂ ಹುಟ್ಟುಹಾಕಿಬಿಟ್ಟಿದ್ದರು’ ಎನ್ನುತ್ತಲೇ ಅವರು ಈ ಸವಾಲಿಗೆ ಎದೆಗೊಟ್ಟೇಬಿಟ್ಟರು. ಕಥೆಗಾರ, ಹುಮ್ಮಸ್ಸಿನ ಆಡಳಿತಗಾರ ಕಾ.ತ.ಚಿಕ್ಕಣ್ಣ ರಂಗಾಯಣದ ಮುಖ್ಯಸ್ಥರಾಗಿದ್ದ ದಿನಗಳು ಅವು. ಒಂದು ಕನಸು ಚಿಗುರೊಡೆದೇ ಬಿಟ್ಟಿತು. ಜಿ ಎಚ್ ನಾಯಕ್ ಒಂದೆಡೆ, ಕೆ ವಿ ನಾರಾಯಣ್ ಮತ್ತೊಂದೆಡೆ ಇವರ ಕನಸಿನ ಬೀಜ ಮೊಳಕೆಯೊಡೆಯಲು ಕಾರಣರಾದರು.

ಮೈಸೂರಿನ ರಾತ್ರಿಯಲ್ಲಿ ಒಂದು ದಿನ ಆಟೋ ಒಂದು ಭರ್ರನೆ ಓಡುತ್ತಿತ್ತು. ಅವರ ವೇಗ ನೋಡಿದ ಪೊಲೀಸರು ಕೈ ಅಡ್ಡ ಹಾಕಿದರು. ಆದರೂ ಕ್ಯಾರೇ ಎನ್ನದೆ ಆಟೋ ಮುಂದೆ ಓಡಿತು. ಡ್ರೈವರ್ ಯೂನಿಫಾರಂ ಹಾಕಿಲ್ಲ ಎಂದು ಗೊತ್ತಾದ ಪೊಲೀಸರು ಇನ್ನೊಂದು ಕಡೆ ಅಡ್ಡ ಹಾಕಿದರು ಉಹುಂ ಆಟೋ ನಿಲ್ಲಲೇ ಇಲ್ಲ. ಈತನ ವೇಗ ಕಂಡು ಇನ್ನೂ ಒಂದೆಡೆ ಪೊಲೀಸರು ಆಟೋ ನಿಲ್ಲಿಸಲು ಯತ್ನಿಸಿದರು ಆಟೋ ಸೀದಾ ಕಲಾಭವನದ ಅಂಗಳಕ್ಕೆ ನುಗ್ಗೇ ಬಿಟ್ಟಿತು. ಮೂರೂ ಪೊಲೀಸ್ ಗುಂಪು ಅವನನ್ನು ಬೆನ್ನತ್ತಿ ಅಲ್ಲಿಗೇ ಬಂದರು. ಆಟೋದಿಂದ ಇಳಿದ ಡ್ರೈವರ್ ಬಸವಲಿಂಗಯ್ಯನ ಎದುರು ಹಾಜರ್. ‘ಸಾರ್ ಸರಿಯಾದ ಟೈಂಗೆ ರಿಹರ್ಸಲ್ ಗೆ ಬಂದಿದ್ದೀನಿ’ ಅಂತ ಹಲ್ಲುಬಿಟ್ಟ. ಆತ ನಾಟಕದಲ್ಲಿ ಹೊನ್ನಾಳಿ ಹೊಡೆತ ನೀಡುವ ಸಾಬರ ಪಾತ್ರಧಾರಿ.
ಅಷ್ಟು ಹೊತ್ತಿಗಾಗಲೇ ಪೊಲೀಸರು ಆ ಡ್ರೈವರ್ ನನ್ನು ಸುತ್ತುವರಿದಾಗಿತ್ತು. 600 ರೂ ದಂಡ ಕೊಟ್ಟ ಆತ ರಿಹರ್ಸಲ್ ಅಂಗಳಕ್ಕೆ ಸೇರಿಕೊಂಡ. ಹೀಗೆ ಆಟೋ ಓಡಿಸುತ್ತಿದ್ದಾತ, ಮಾರಾಟ ಮಳಿಗೆಯೊಂದರಲ್ಲಿ ಸೇಲ್ಸ್ ಮನ್ ಆಗಿದ್ದಾಕೆ, ಎಂಟನೇ ಕ್ಲಾಸ್ ಫೇಲ್ ಆಗಿ ಪೋಟೋ ತೆಗೆಯುತ್ತಿದ್ದಾತ, ಎಸ್ ಎಸ್ ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿ, ಬ್ಯಾನರ್, ಬೋರ್ಡ್ ಬರೆಯುತ್ತಿದ್ದಾತ, ಎಂ ಎನ್ ಸಿ ಕಂಪನಿಗಳಲ್ಲಿದ್ದು ಬೇಸರವಾಗಿ ಊರಿಗೆ ಹಿಂದಿರುಗಿದ್ದಾತ… ಹೀಗೆ ಒಂದು ಕರ್ನಾಟಕವೇ ಮದುಮಗಳಿಗಾಗಿ ಸಜ್ಜಾಗಿ ಕೂತಿತ್ತು.
ಕಾದಂಬರಿ ಎನ್ನುವುದೊಂದು ನಾಟಕವಾಗಲು ಮೊದಲು ಪೊರೆ ಕಳಚಬೇಕು. ಅದು ಹೇಗೆ ಎಂದು ಚಿಂತೆ ಹೊತ್ತ ಕೆ ವೈ ನಾರಾಯಣಸ್ವಾಮಿಗೆ ಸಿಕ್ಕ ಕೊಂಡಿಯೇ  ಉಂಗುರ. ಕಾವೇರಿಯ ಕೈಯಲ್ಲಿದ್ದ ಉಂಗುರ ಧರ್ಮಸ್ಥಳದ ಹುಂಡಿಯಲ್ಲಿ ಸಿಕ್ಕಿತು ಎನ್ನುವುದೇ ಹೊಸ ಲೋಕದ ಬಾಗಿಲು ತೆರೆಯಿತು. ಆ ಉಂಗುರ ಹಿಡಿದುಕೊಂಡು ಕಿನ್ನರಿ ಜೋಗಿಗಳು, ಅವರ ಹಿಂದೆ ಸುಡುಗಾಡು ಸಿದ್ದರು, ಅವರನ್ನು ಅನುಸರಿಸಿ ಹೆಳವರು ಕಥೆ ಹೇಳುತ್ತಾ ಸಾಗಿದರು.
‘ಹರಿವ ನದಿಗೆ ಮೈಯೆಲ್ಲಾ ಕಾಲು’ ಎನ್ನುವಂತೆ ಹರಿಯಲು ಹೊರಟ ಮದುಮಗಳನ್ನು ರಂಗಕ್ಕೇರಿಸಲು ಕೈಗೂಡಿಸಿದವರು ಎಷ್ಟೋ. ಹಂಸಲೇಖ ರಾಗಗಳೊಂದಿಗೆ ಜೊತೆಯಾದರು. ಪಾಳು ಬೀಳುತ್ತಿದ್ದ ಕಾರಂತರ ಬಾಲವನಕ್ಕೆ ಆ ಕಾಲದಲ್ಲಿಯೇ ಜೀವ ಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು, ರಂಗದ ನಾಡಿಮಿಡಿತ ಗೊತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ ಆರ್ ರಾಮಕೃಷ್ಣ, ವಾರ್ತಾ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಜೊತೆಯಾದರು. ಇವರು ಜೊತೆಯಾದ ಕಾರಣಕ್ಕಾಗಿಯೇ ಮೈಸೂರಿನ ನಂತರ ಮಲೆಗಳಲ್ಲಿ ಆ ವೇಳೆಗಾಗಲೇ ಮರೆಯಾಗಿ ಹೋಗಿದ್ದ ಮದುಮಗಳು ಮತ್ತೆ ಬೆಂಗಳೂರಿಗೆ ಬಂದಳು.
‘9 ಗಂಟೆ ನಾಟಕ ಯಾರು ನೋಡ್ತಾರೆ. ಕೊನೆಗೆ ಬಸೂ ಮತ್ತೆ ಲೈಟಿಂಗ್ ನವರು ಮಾತ್ರ ಇರ್ತಾರೆ’ ಅಂತ ರಿಹರ್ಸಲ್ ವೇಳೆ ತಮಾಷೆ ಮಾಡ್ತಿದ್ರು’ ಅಂತ ಬಸೂ ಹೇಳುವಾಗ ಅವರ ಮುಖದಲ್ಲಿ ಗೆದ್ದ ಸಂಭ್ರಮಕ್ಕಿಂತ ಹೊಸ ಹುಡುಕಾಟಕ್ಕೆ ಸಿಕ್ಕ ಸ್ಪಂದನದ ಖುಷಿ ಎದ್ದು ಕಾಣುತ್ತಿತ್ತು.
ಮದುಮಗಳು ಮೈಸೂರು ಬಿಟ್ಟು ಬೆಂಗಳೂರಿಗೆ ಬಂದಳು. ಜನ ಆಹೋ ರಾತ್ರಿ ಕೊಡೆ ಹಿಡಿದು, ತಂದಿದ್ದ ಹತ್ತಾರು ಪ್ಲಾಸ್ಕ್ ನ ಕಾಫಿ, ಟೀ ಕುಡಿದು, ಒರಗುದಿಂಬಿಗೆ ಒರಗಿ, ಮಕ್ಕಳಿಗೆ ಹಾಸಿಗೆ ಹಾಸಿ, ಹೊದಿಕೆ ಹೊದಿಸಿ ಇಡೀ ರಾತ್ರಿ ನಾಟಕ ನೋಡಿದರು. ಐಟಿ,ಬಿಟಿ ಟೆಕ್ಕಿಗಳೂ ಆನ್ ಲೈನ್ ನಲ್ಲಿ ಮುಗಿಬಿದ್ದು ಟಿಕೇಟು ಖರೀದಿಸಿದರು. ಬಾಕ್ಸ್ ಆಫೀಸಿನಲ್ಲಿರುತ್ತಿದ್ದ ದೊಡ್ಡ ಮೀಸೆಯ ರಾಧಾಕೃಷ್ಣರಿಗೆ ‘ಟಿಕೆಟ್ ಎಲ್ಲಾ ಖಾಲಿ, ಸೋಲ್ಡ್ ಔಟ್’ ಎಂದು ಹೇಳುವುದೇ ಸಂಭ್ರಮವಾಗಿತ್ತು. ಒಂದು ಮಹತ್ವದ ಪ್ರಯೋಗವನ್ನು ಜನ ಇನ್ನಿಲ್ಲದಂತೆ ಅಪ್ಪಿಕೊಂಡರು ಎನ್ನುವ ಸಂತೋಷ ಅಲ್ಲಿ ಇಣುಕುತ್ತಿತ್ತು. ಪರ್ಫೂಮ್ಸ್ ಸುರೇಶ್ ಅಂತೂ ಕ್ಯಾಮೆರಾ ಹಿಡಿದು ಎಷ್ಟೋ ರಾತ್ರಿ, ಹಗಲು ಮದುಮಗಳನ್ನು ದಾಖಲು ಮಾಡುತ್ತಲೇ ಹೋದರು. ಅಂತೂ ಮದುಮಗಳು ಮನಸ್ಸಲ್ಲೂ ದಾಖಲಾದಳು. ದಾಖಲೆಯೂ ಆಗಿ ಉಳಿದಳು.
ಚಿತ್ರ: ಮುರುಳಿ ಮೋಹನ ಕಾಟಿ

‍ಲೇಖಕರು avadhi

March 23, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Swarna

    ಒಂದು ಸುಂದರ ಅನುಭವವನ್ನು ಮತ್ತೆ ನೆನಪಿಸಿದ್ದಕ್ಕಾಗಿ ವಂದನೆಗಳು

    ಪ್ರತಿಕ್ರಿಯೆ
  2. ಉದಯಕುಮಾರ್ ಹಬ್ಬು

    ಬೃಹತ್ ಕ್ಯಾನವಾಸಿನ ಕಾದಂಬರಿಯನ್ನು ನಾಟಕಕ್ಕೆ ಅಳವಡಿಸುವುದು ಕುಶಾಲಿನ ಮಾತಲ್ಲ. ಅದನ್ನು ಸಕರಗೊಳಿಸಿದ ಬಸಲಿಂಗಯ್ಯನವರಿಗೆ ಹೇಟ್ಸ್ ಆಫ್. ಮೋಹನರು ಮೋಹನವಾಗಿಯೇ ನೆನಪಿಸಿದ್ದಾರೆ. ಅಭಿನಂದನೆಗಳು

    ಪ್ರತಿಕ್ರಿಯೆ
  3. Anil Talikoti

    ತುಂಬಾ ಚೆನ್ನಾಗಿದೆ ನಿಮ್ಮ ಬಿಳ್ಕೊಡುಗೆಯ ಸಂದೇಶ – ಒಂದು ಮಹಾ ಕೃತಿಯನ್ನು ಇ ವಿಸ್ತಾರದಲ್ಲಿ ನಾಟಕವಾಗಿಸುವದು ಅದೂ ಬೆಂಗಳೂರಿನಲ್ಲಿ -ನಿಜಕ್ಕೂ ಶ್ಲಾಘನೀಯ. ಇದರಲ್ಲಿ ಭಾಗಿಯದವರೆಲ್ಲಾ ಕಲೆಯ ಉತ್ಕಟ ಅಭಿಮಾನಿಗಳು.
    ‘ಪಾಪದ ಹೂಗಳು ಸಾಹಿತ್ಯ ಲೋಕದೊಳಗೆ ಹೆಜ್ಜೆಹಾಕಿದಾಗ “ಫ್ರಾನ್ಸ್” ಬೆಚ್ಚಿಬಿದ್ದಿತ್ತು.’ ಅರ್ಥವಾಗಲಿಲ್ಲ – is it supposed to be fans?
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
    • G

      ‘ಪಾಪದ ಹೂಗಳು’ ಕವನ ಸಂಕಲನ ಬರೆದ ಬೋದಿಲೇರ್ ಫ್ರೆಂಚ್ ಲೆಖಕ. ಆತ ಪಾಪದ ಹೂಗಳು ಬರೆದಾಗ ಫ್ರಾನ್ಸ್ ಬೆಚ್ಚಿಬಿತ್ತು

      ಪ್ರತಿಕ್ರಿಯೆ
  4. Gopaala Wajapeyi

    Swaasthyada kaaraNadinda naanu, badukiDee raatri hottu mane biTTu horage iruvantilla. MadumagaLannu kaNNu tumbikoLLuva avakaashadinda vanchitanaagiddene emba novu nannallide. Aadaroo aa vedeo noduva aase ide. AbhinandanegaLu Basoo.

    ಪ್ರತಿಕ್ರಿಯೆ
  5. ಸುಧಾ ಚಿದಾನಂದಗೌಡ

    so beautiful write up.
    ಕಥೆ ಥರಾ ಓದಿಸಿಕೊಂಡು ಹೋಯ್ತು ಲೇಖನ.
    ಧನ್ಯವಾದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: