ಸುಗತ ಬರೆಯುತ್ತಾರೆ: ನಮ್ಮಆಯ್ಕೆಗಳು ಮತ್ತು ಅಂತರ್ಜಾಲ ಬೇಹುಗಾರಿಕೆ

ಸುಗತ ಶ್ರೀನಿವಾಸರಾಜು

ಕನ್ನಡದಲ್ಲಿ ‘ಬಿಗ್ ಬಾಸ್’ ಎಂಬ ಧಾರಾವಾಹಿ ಬಹಳ ಜನಪ್ರಿಯವಾಗಿದೆ. ಮುಕ್ತಾಯದ ಹಂತ ತಲುಪಿರುವ ಈ ಸರಣಿಯಲ್ಲಿ ನಾವು ಕಂಡಿದ್ದು, ಒಂದು ಗೂಡಿನಲ್ಲಿ ಕೂಡಿ ಹಾಕಿದ ಕೆಲವು ಮಂದಿಯ ಖಾಸಗಿ ಬದುಕನ್ನು-ಅವರು ನಿದ್ರಿಸುವುದು, ಊಟ ಮಾಡುವುದು, ಆಟವಾಡುವುದು, ಜಗಳವಾಡುವುದು, ಆಣೆ -ಪ್ರಮಾಣ ಮಾಡುವುದು, ಪ್ರೀತಿ ಮತ್ತು ಮದುವೆಯ ನಟನೆ ಮಾಡುವುದು, ಇತ್ಯಾದಿ. ಅವರು ಎಲ್ಲಿ ಹೋದರಲ್ಲಿ ಕ್ಯಾಮೆರಾಗಳು ಹಿಂಬಾಲಿಸುತ್ತವೆ; ಅವರು ಏನು ಮಾತನಾಡಿದರೂ ಅದು ಧ್ವನಿ ಸುರುಳಿ ಸೇರುತ್ತದೆ. ಇದನ್ನೆಲ್ಲ ನಾವು ಮನೆಯಲ್ಲಿ ಹಾಯಾಗಿ ಕಾಲು ಚಾಚಿ ಕುಳಿತು ನೋಡುತ್ತೇವೆ, ಕೇಳಿಸಿ ಕೊಳ್ಳುತ್ತೇವೆ ಮತ್ತು ನಮ್ಮ ನಡುವಿನ ಚರ್ಚೆಯ ವಿಷಯವಾಗಿ ಬಳಸುತ್ತೇವೆ.

‘ಬಿಗ್ ಬಾಸ್’ನ ಮನೆಯಲ್ಲಿ ಬದುಕುತ್ತಿರುವವರಿಗೆ ತಮ್ಮ ನಡವಳಿಕೆಯನ್ನು ಕ್ಯಾಮೆರಾಗಳು ದಾಖಲಿಸುತ್ತವೆ ಮತ್ತು ಮನೆ-ಮನೆಗೆ ಬಿತ್ತರಿಸುತ್ತಿವೆ ಎಂಬುದು ತಿಳಿದಿದೆ. ನಮಗೂ, ಅವರು ಮಾಡುತ್ತಿ ರುವುದು ಅರೆ-ನಟನೆ ಎಂಬುದು ಗೊತ್ತಿದೆ. ನಟಿಸುವವರ ಮತ್ತು ನೋಡುವವರ ನಡುವೆ ಇಲ್ಲಿ ಒಂದು ಸ್ಪಷ್ಟ ಒಪ್ಪಂದವಿದೆ.
ಒಂದು ವೇಳೆ ಹೀಗೊಂದು ಒಪ್ಪಂದವಿಲ್ಲದ ಪ್ರಸಂಗದಲ್ಲಿ ನಾವು ಅದನ್ನು ‘ಕದ್ದಾಲಿಕೆ’ ಎಂದೋ ‘ಕದ್ದು ನೋಡುವುದು’ ಎಂದೋ ಅರ್ಥೈಸಬಹುದು. ಉದಾಹರಣೆಗೆ, ನಿಮ್ಮ ಮನೆಯಲ್ಲಿ ಅಥವಾ ನೀವು ತಂಗುವ ಹೊಟೇಲ್ ಒಂದರಲ್ಲಿ ನಿಮಗೆ ತಿಳಿಯದೇ ಇಂತಹ ಒಂದು ‘ರೆಕಾರ್ಡಿಂಗ್’ ನಡೆಯುತ್ತಿದ್ದರೆ; ನಿಮ್ಮ ಖಾಸಗಿ ಬದುಕಿನ ಎಳೆಎಳೆಯೂ ಅಪರಿಚಿತರಿಗೆ ಮುಫತ್ ಮನರಂಜನೆಯ ಸರಕಾಗಿದೆ ಎಂದು ಗೊತ್ತಾದರೆ, ನಿಮಗಾಗುವ ಆಘಾತ ಊಹಿಸಲೂ ಸಾಧ್ಯವಿಲ್ಲ. ಈಗ ಆಗಿರುವುದು, ಆಗುತ್ತಿರುವುದು ಅದೇ ಎಂದು ಹೇಳುತ್ತಿದ್ದಾನೆ 29 ವರ್ಷದ ಸಾಹಸಿ ಕಂಪ್ಯೂಟರ್ ತಂತ್ರಜ್ಞಾನಿ ಎಡ್ವರ್ಡ್ ಸ್ನೋಡೆನ್. ‘ಫೇಸ್‌ಬುಕ್’ ತರಹದ ಸಾಮಾಜಿಕ ಜಾಲತಾಣಗಳಲ್ಲಿ, ‘ಗೂಗಲ್’ ತರಹದ ಪ್ರಬಲವಾದ ಅಂತರ್ಜಾಲ ಹುಡುಕಾಟ ತಾಣಗಳಲ್ಲಿ, ಇ-ಮೇಲ್‌ಗಳ ಮೂಲಕ ನೀವು ನಡೆಸುತ್ತಿರುವ ಅತ್ಯಂತ ಖಾಸಗಿ ವ್ಯವಹಾರಗಳನ್ನು ಅಮೆರಿಕಾದ ಭದ್ರತಾ ಮತ್ತು ಬೇಹುಗಾರಿಕಾ ಸಂಸ್ಥೆಯಾದ ನ್ಯಾಷನಲ್ ಸೆಕ್ಯೂರಿಟಿ ಏಜೆನ್ಸಿ (ಎನ್.ಎಸ್.ಎ), ಕದ್ದು ಓದುತ್ತಿದೆ ಮತ್ತು ಆಲಿಸುತ್ತಿದೆ ಎಂದು ದಾಖಲೆಗಳ ಸಮೇತ ಕಳೆದ ವಾರ ಅವನು ಆರೋಪಿಸಿದ್ದಾನೆ. ಈ ‘ಕದ್ದು’ ಮಾಡುತ್ತಿರುವ ಕೆಲಸವನ್ನು ಭದ್ರತೆಯ ಸೋಗಿನಲ್ಲಿ (‘ಪ್ರಿಸಮ್’ ಎಂಬ ಯೋಜನೆಯಡಿ) ಕೆಲವು ವರ್ಷಗಳಿಂದ ಎನ್.ಎಸ್.ಎ ನಡೆಸುತ್ತಾ ಬಂದಿದೆ ಎಂದು ಅವನು ಹೇಳಿದ್ದಾನೆ. ಬೆಚ್ಚಿ ಬಿದ್ದ ಅಮೆರಿಕ ಈ ಆರೋಪಕ್ಕೆ ಬಹಳ ಜಾರಿಕೆಯ ಉತ್ತರವನ್ನು ನೀಡಿ ಪಾರಾಗಲು ಪ್ರಯತ್ನಿಸುತ್ತಿದೆ.

ಸ್ನೋಡೆನ್ ಇದೇ ಎನ್.ಎಸ್.ಎಯಲ್ಲಿ ಮತ್ತು ಅಮೆರಿಕದ ಮತ್ತೊಂದು ಬೇಹುಗಾರಿಕಾ ಸಂಸ್ಥೆಯಾದ ಸಿ.ಐ.ಎನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದ. ಅಮೆರಿಕದ ಸೈನ್ಯದಲ್ಲೂ ದಾಖ ಲಾಗಿದ್ದ. ಈ ಆರೋಪ ಮಾಡುವ ಹೊತ್ತಿಗೆ ಅವನು ಎನ್.ಎಸ್.ಎನಲ್ಲಿ ಮತ್ತೆ ಕರಾರಿನ ಮೇಲೆ ಕೆಲಸ ಮಾಡುತ್ತಿದ್ದ. ಅವನು ಬಿಡುಗಡೆಗೊಳಿಸಿರುವ ರಹಸ್ಯ ದಾಖಲೆಗಳನ್ನು ಆಧುನಿಕ ಅಮೆರಿಕದ ಬೇಹುಗಾರಿಕಾ ಚರಿತ್ರೆಯಲ್ಲಿ ಅತ್ಯಂತ ದೊಡ್ಡ ‘ಸೋರಿಕೆ’ ಎಂದು ಹಲವು ದೊಡ್ಡ ಪತ್ರಿಕೆಗಳು ವ್ಯಾಖ್ಯಾನಿಸಿವೆ. ಸಹಜವಾಗಿಯೇ, ಈ ಸಾಹಸ ಅವನ ಸ್ವಾತಂತ್ರ್ಯಕ್ಕೆ ಮತ್ತು ಜೀವಕ್ಕೆ ಕುತ್ತು ತಂದಿತ್ತಿದೆ.
ಕುತೂಹಲದ ಸಂಗತಿ ಎಂದರೆ ಸ್ನೋಡೆನ್ ಈ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವ ಸಲುವಾಗಿ ಅಮೆರಿಕವನ್ನು ತೊರೆದು ಹಾಂಗ್‌ಕಾಂಗ್‌ಗೆ ಬಂದು ನೆಲೆಸಿದ್ದಾನೆ. ಇದು ಅಮೆರಿಕದ ಆತಂಕವನ್ನು ಹೆಚ್ಚು ಮಾಡಿದೆ. ಏಕೆಂದರೆ, ಹಾಂಗ್‌ಕಾಂಗ್ ಚೀನಿಯರ ಅಧೀನದಲ್ಲಿರುವ ಸ್ವಾಯತ್ತ ಪ್ರದೇಶ. ಆರ್ಥಿಕವಾಗಿ ಮತ್ತು ಭದ್ರತೆಯ ದೃಷ್ಟಿಯಿಂದ ಅಮೆರಿಕಕ್ಕೆ ನಿದ್ರೆಗೆಡಿಸುತ್ತಿರುವ ದೇಶ ಯಾವುದಾದರೂ ಜಗತ್ತಿನಲ್ಲಿದ್ದರೆ ಅದು ಚೀನಾ. ಹಾಗಾಗಿ, ಈ ಅತ್ಯಂತ ಸೂಕ್ಷ್ಮ ಮತ್ತು ಗೌಪ್ಯ ದಾಖಲೆ ಗಳನ್ನು ಹೊತ್ತು ಸ್ನೋಡೆನ್ ಹಾಂಗ್‌ಕಾಂಗ್‌ಗೆ ಬಂದಿರುವುದು ಅಮೆರಿಕಕ್ಕೆ ದೊಡ್ಡ ತಲೆನೋವಿನ ಸಂಗತಿಯಾಗಿದೆ. ನಿನ್ನೆ ಪ್ರಕಟಗೊಂಡ ಕೆಲವು ಚೀನಿ ಪತ್ರಿಕೆಗಳಲ್ಲಿ ಸ್ನೋಡೆನ್‌ನನ್ನು ಅಮೆರಿಕಕ್ಕೆ ಹಿಂದಿರುಗಿಸ ಕೂಡದು ಏಕೆಂದರೆ ಅವನು ಚೀನಾಕ್ಕೆ ಬಹಳ ಉಪಯುಕ್ತವಾಗಬಲ್ಲ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಮೆರಿಕ ಸ್ನೋಡೆನ್ ಕುರಿತಾಗಿ ಇನ್ನೂ ತನ್ನ ನಿಲುವನ್ನು ಪ್ರಕಟಿಸಿಲ್ಲ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಸ್ನೋಡೆನ್ ಪಯಣವನ್ನು ವಿಶ್ಲೇಷಿಸಿದರೆ ಆತನ ಮಾತಿನ ಆದರ್ಶವನ್ನು ಮಾತ್ರ ನಾವು ನಂಬುವಂತಿಲ್ಲ; ಆ ಆದರ್ಶದ ಹಿಂದೆ ಜಗತ್ತಿನ ರಾಷ್ಟ್ರಗಳ ನಡುವಿನ ನಡವಳಿಕೆಗಳ ಬಗ್ಗೆ ಹಾಗೂ ಮಾಧ್ಯಮಗಳ ಧೋರಣೆ ಕುರಿತಂತೆ ಆಳವಾದ ತಿಳಿವಳಿಕೆ ಮತ್ತು ಅದರಿಂದ ಹುಟ್ಟುವ ಚಾಣಾಕ್ಷತನವೂ ಇದ್ದಂತಿದೆ.


ಸ್ನೋಡೆನ್‌ನ ಚಾಣಾಕ್ಷತನವೇನೇ ಇರಲಿ, ಅವನ ಆದರ್ಶದತ್ತ ನಾವು ಕೊಂಚ ಗಮನ ಹರಿಸೋಣ. ಸಾಮಾನ್ಯವಾಗಿ ಈ ರೀತಿ ಗೌಪ್ಯ ದಾಖಲೆಗಳನ್ನು ಮಾಧ್ಯಮಗಳಿಗೆ ಕೊಡುವವರು ತಮ್ಮ ಗುರುತನ್ನು ಬಹಿರಂಗಪಡಿಸುವುದಿಲ್ಲ. ಆದರೆ ಈತ ಸ್ವಇಚ್ಛೆಯಿಂದ ತನ್ನ ಗುರುತನ್ನು ಹೊರಹಾಕಿ, ”ನಾನು ಏನೂ ತಪ್ಪು ಮಾಡಿಲ್ಲ. ಹಾಗಾಗಿ ನಾನು ನನ್ನ ಗುರುತನ್ನು ಮರೆಮಾಚುವ ಅಗತ್ಯ ಇಲ್ಲ ಎಂದು ತಿಳಿದಿದ್ದೇನೆ,” ಎಂದು ಇಂಗ್ಲೆಂಡಿನ ‘ಗಾರ್ಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾನೆ. ಜೊತೆಗೆ, ”ನನ್ನ ಮನೆಗೆ ನಾನು ಎಂದೂ ಹಿಂದಿರುಗಿ ಹೋಗಲಿಕ್ಕಾಗದೆ ಇರಬಹುದು ಎಂಬ ಸಂಪೂರ್ಣ ಅರಿವು ನನಗಿದೆ,” ಎಂದು ಹೇಳಿದ್ದಾನೆ.

ಈ ಮಾತುಗಳಿಗಿಂತಲೂ ನನಗೆ ಮುಖ್ಯ ಅನಿಸಿದ್ದು ಅವನು ಸಾರ್ವಜನಿಕ ಹಿತದ ಬಗ್ಗೆ ಆಡಿರುವ ನುಡಿಗಳು: ”ನನಗೆ ವೈಯಕ್ತಿಕ ಪ್ರಚಾರ ಬೇಡ. ಇಲ್ಲಿ ಕತೆ ಆಗಬೇಕಿರುವುದು ನಾನಲ್ಲ. ಅಮೆರಿಕದ ಸರಕಾರ ಮಾಡುತ್ತಿರುವ ದೊಡ್ಡ ತಪ್ಪುಗಳು ಜಗತ್ತಿಗೆ ತಿಳಿಯಬೇಕು. ಇದಷ್ಟೆ ನನ್ನ ಉದ್ದೇಶ,” ಎಂದು ಹೇಳಿದ್ದಾನೆ. ಇದಲ್ಲದೆ, ”ನಾನು ಹೊರಹಾಕಿರುವ ದಾಖಲೆಗಳ ಮೂಲಕ ಜನರಿಗೆ ನಾವು ಎಂತಹ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದು ತಿಳಿದರೆ ಸಾಕು, ಅಂತರ್ಜಾಲವನ್ನು ಬೇಹುಗಾರಿಕೆಯಿಂದ ಮುಕ್ತಗೊಳಿಸುವ ಅಗತ್ಯವಿದೆ. ನಾನು ಹಣದಿಂದ ಪ್ರೇರಿತನಾಗಿದ್ದರೆ ಈ ದಾಖಲೆಗಳನ್ನು ಗುಪ್ತವಾಗಿ ಬೇರೆ ದೇಶಗಳಿಗೆ ಮಾರಾಟ ಮಾಡಬಹುದಿತ್ತು. ಆದರೆ ನನಗೆ ಬೇಕಿರುವುದು ಹಣವಲ್ಲ; ನಮ್ಮೆಲ್ಲ ಸಂವಹನದ ಕೇಂದ್ರದಲ್ಲಿರುವ ಅಂತರ್ಜಾಲದ ಮುಕ್ತ, ಸ್ವತಂತ್ರ ಸ್ವರೂಪ. ಜನರ ಖಾಸಗಿ ಬದುಕಿನ ತುಣುಕುಗಳ ಹರಣವನ್ನು ಜಗತ್ತಿನ ಯಾವುದೇ ಸರಕಾರ ಮಾಡದಂತೆ ನೋಡಿಕೊಳ್ಳಬೇಕು. ಇದು ನಮ್ಮ ನಾಗರಿಕ ಮತ್ತು ಮಾನವ ಹಕ್ಕುಗಳ ಬಹಳ ಮುಖ್ಯ ಸಂಗತಿ,” ಎಂದು ಭಾವಪೂರ್ಣವಾಗಿ ಮಾತನಾಡಿದ್ದಾನೆ.


ಸ್ನೋಡೆನ್ ಅಮೆರಿಕಕ್ಕಾಗಿ ಕೆಲವು ವರ್ಷಗಳ ಕಾಲ ಜಿನೇವಾ ಮತ್ತು ಜಪಾನಿನಲ್ಲಿ ಬೇಹುಗಾರಿಕೆ ನಡೆಸಿದ ವ್ಯಕ್ತಿ. ”ಬೇಹುಗಾರಿಕೆಯ ತಂತ್ರಗಳಿಂದ ಬೇಸತ್ತು, ಸ್ವಾತಂತ್ರ್ಯದ ಆದರ್ಶವನ್ನು ಜಾಗೃತಗೊಳಿಸಿಕೊಂಡೆ” ಎಂದು ಹೇಳುತ್ತಾನೆ. ‘ನೀನು ಇದೆಲ್ಲವನ್ನು ಹಿಂದೆಯೇ ಏಕೆ ಬಹಿರಂಗಗೊಳಿಸಲಿಲ್ಲ?’ ಎಂದು ‘ಗಾರ್ಡಿಯನ್’ ಪತ್ರಿಕೆ ಕೇಳಿದ ಪ್ರಶ್ನೆಗೆ ಸ್ನೋಡೆನ್ ಉತ್ತರ ಕುತೂಹಲಕಾರಿಯಾಗಿದೆ: ”ಒಬಾಮನಿಂದ ಒಳ್ಳೆಯದಾಗಬಹುದು ಎಂದು ಬಹಳ ಜನ ನಿರೀಕ್ಷಿಸಿದ್ದರು. ಆದರೆ ಆತ ಕೂಡ ಬುಷ್‌ನಂತೆಯೇ ನಡೆದುಕೊಳ್ಳಲು ಪ್ರಾರಂಭಿಸಿದ. ನನ್ನಲ್ಲಿ ಇದೆಲ್ಲ ತಪ್ಪು ಎಂಬ ಅರಿವು ಬೆಳೆಯುತ್ತಾ ಹೋಯಿತು. ಈ ನಿರ್ಧಾರ ನಾನು ಒಂದು ದಿನ ದಿಢೀರನೆ ತೆಗೆದುಕೊಂಡದ್ದಲ್ಲ. ಕಾಲಕ್ರಮೇಣದಲ್ಲಿ ಸಹಜವಾಗಿ ಮೂಡಿದ ಧೈರ್ಯ… ಮತ್ತು ಸಿ.ಐ.ಎ ಬಳಿ ಇರುವ ರಹಸ್ಯ ಮಾಹಿತಿ ವ್ಯಕ್ತಿಗಳಿಗೆ ಸಂಬಂಧಪಟ್ಟಿದ್ದು. ಅದು ಯಂತ್ರಗಳ ಬಗ್ಗೆಯಾಗಲಿ, ವ್ಯವಸ್ಥೆಗಳ ಬಗ್ಗೆಯಾಗಲಿ ಇರುವುದಲ್ಲ. ವ್ಯಕ್ತಿಗಳನ್ನು ಪೇಚಿಗೆ ಸಿಲುಕಿಸುವ ಕೆಲಸ ನನಗೆ ಸರಿಕಾಣಲಿಲ್ಲ. ವ್ಯವಸ್ಥೆಯೊಂದನ್ನು ಸರಿಪಡಿಸುವ ಅವಕಾಶದ ಕಿಡಿ ಕಂಡಾಗ ನಾನು ಹೊರಬಂದೆ,” ಎಂದು ಸಮಚಿತ್ತದಿಂದ ಮಾತನಾಡುತ್ತಾನೆ. ಬೇಹುಗಾರಿಕೆ ಮಾಡುವವರು ತಮ್ಮ ಆತ್ಮಸಾಕ್ಷಿಯನ್ನು ಕೊಂದುಕೊಂಡಿರುತ್ತಾರೆ, ದ್ವಿಮುಖಿಗಳಾಗಿ, ತಣ್ಣನೆಯ ಸ್ವಭಾವದವರಾಗಿರುತ್ತಾರೆ ಎಂಬುದು ನಮ್ಮ ಸಾಮಾನ್ಯ ತಿಳುವಳಿಕೆ. ಆ ತಿಳುವಳಿಕೆಯನ್ನು ಸ್ನೋಡೆನ್ ತನ್ನ ನುಡಿ, ನಡೆಯಿಂದ ಪ್ರಶ್ನಿಸುತ್ತಿದ್ದಾನೆ. ಬಹಳಷ್ಟು ಜನ ಅವನನ್ನು ಈಗಾಗಲೇ ಒಬ್ಬ ‘ಹೀರೋ’ ಎಂದು ಘೋಷಿಸಿದ್ದಾರೆ. ಆದರೆ ಆ ಆತುರದ ನಿಲುವಿಗೆ ನಾವು ಈಗಾಗಲೇ ಬರಬಾರದು. ಕೊಂಚ ಕಾದು, ಪರಿಶೀಲಿಸಿ, ಆ ಪಟ್ಟ ಕಟ್ಟಿದರೆ ತಪ್ಪಾಗಲಾರದು. ಅವನಿಗಿರುವುದು ಸಾತ್ವಿಕ ಸಿಟ್ಟೇ? ಅವನ ಸರಿ-ತಪ್ಪುಗಳ ಕಲ್ಪನೆ ಬಹಳ ಪ್ರಖರವಾಗಿದೆಯೇ, ಎಂಬುದನ್ನು ನಾವು ವಿವೇಚನೆಗೆ ಒಡ್ಡಬೇಕಾಗಿದೆ.

ಸ್ನೋಡನ್‌ನ ವಿಚಾರ ಹಾಗಿರಲಿ, ನಾವು ಅಂತರ್ಜಾಲವನ್ನು ಕುರಿತಂತೆಯೇ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಸಂದರ್ಭ ಒದಗಿ ಬಂದಿದೆ. ಸ್ನೋಡನ್ ನಮಗೆ ಹೇಳುತ್ತಿರುವುದು,ಅಮೆರಿಕದ ಭದ್ರತೆ ಮತ್ತು ಬೇಹುಗಾರಿಗೆ ಸಂಸ್ಥೆ ನಾವು ಅಂತರ್ಜಾಲದ ಮೂಲಕ ಮಾಡುವುದನ್ನು ಗಮನಿಸುತ್ತಿವೆ ಎಂದು. ಆದರೆ ಇದನ್ನು ಅವರಷ್ಟೇ ಮಾಡುತ್ತಿಲ್ಲ. ಅಂತರ್ಜಾಲದಲ್ಲಿ ಹಲವು ಸವಲತ್ತುಗಳನ್ನು ಏರ್ಪಡಿಸಿಕೊಡುವ ಫೇಸ್‌ಬುಕ್, ಗೂಗಲ್ ತರಹದ ಸಂಸ್ಥೆಗಳೂ ಅದನ್ನೇ ಮಾಡುತ್ತಿರುವುದು. ನೀವು ಅಂತರ್ಜಾಲದಲ್ಲಿ ಮುಗ್ಧವಾಗಿ ಮಾಡುವ ಕೆಲವು ಆಯ್ಕೆಗಳನ್ನೂ ಅವು ತಮ್ಮ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿವೆ. ಉದಾಹರಣೆಗೆ ನೀವು ಯಾವುದೋ ಒಂದು ಶಬ್ದದ ಅರ್ಥವನ್ನು ಹುಡುಕಿದಿರಿ ಎಂದು ಇಟ್ಟುಕೊಳ್ಳಿ, ಆ ಶಬ್ದಕ್ಕೆ ಪೂರಕವಾದ ಹಲವು ಮಾಹಿತಿಯನ್ನು ಅದು ಬೇರೆ ಬೇರೆ ಸಂದರ್ಭದಲ್ಲಿ ನಿಮ್ಮ ಕಣ್ಮುಂದೆ ಬರುವಂತೆ ಮಾಡುತ್ತವೆ. ನೀವು ‘ಖಿನ್ನತೆ’ ಎಂಬ ಶಬ್ದದ ಅರ್ಥವನ್ನು ಹುಡುಕಿದರೆ, ಮತ್ತಾವುದೋ ಸಂದರ್ಭದಲ್ಲಿ ಅದು ನಿಮಗೆ ‘ಖಿನ್ನತೆ’ಯನ್ನು ಹೋಗಲಾಡಿಸಲಿರುವ ಹಲವು ಔಷಧಗಳು, ಅದನ್ನು ನಿಭಾಯಿಸಲು ಇರುವ ಸಂಸ್ಥೆಗಳು, ಇತ್ಯಾದಿ ವ್ಯಾಪಾರಿ ಅಂಶಗಳನ್ನು ನಿಮ್ಮ ಗಮನಕ್ಕೆ ತರುತ್ತದೆ. ಫೇಸ್‌ಬುಕ್ ನಲ್ಲಿ ನೀವು ಸ್ನೇಹಿತರೊಬ್ಬರ ವಿಚಾರವನ್ನೋ, ಅವರು ಪ್ರಸ್ತುತ ಪಡಿಸಿದ ಲೇಖನಕ್ಕೋ ‘ಲೈಕ್’ ಎಂದು ಒತ್ತಿದಿರಿ ಎಂದು ಇಟ್ಟುಕೊಳ್ಳಿ, ಮುಂದೆ ನಿಮಗೆ ಅಂತಹುದೇ ಆದ ವಿಚಾರಗಳನ್ನು ಆ ವಿಚಾರವನ್ನು ಪ್ರತಿಪಾದಿಸುವ ಸ್ನೇಹಿತರನ್ನು ಮಾತ್ರ ಅದು ಮೇಲೆಸೆಯಲು ಪ್ರಾರಂಭಿಸುತ್ತದೆ. ಹೀಗೆ ಮಾಡುವುದರ ಮೂಲಕ ನಿಮಗೆ ಇಷ್ಟವಾಗುವ, ಸಾಧ್ಯವೆನಿಸುವುದನ್ನು ಮಾತ್ರ ನಿಮ್ಮ ಮುಂದೆ ಇಡುತ್ತಿರುತ್ತದೆ. ನಿಮಗೆ ಭಿನ್ನ ಅಭಿಪ್ರಾಯ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇದ್ದರೂ ಅದನ್ನು ಅದು ಮೇಲೆ ಮಾಡುವುದಿಲ್ಲ. ಹಾಗೆಯೇ, ನೀವು ಅಮೇಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಒಂದು ಪುಸ್ತಕ ಕೊಂಡಿರೆ, ನಿಮಗೆ ಅದೇ ಪುಸ್ತಕ ಕೊಂಡ ಇತರರು ಆಯ್ಕೆ ಮಾಡಿಕೊಂಡ ಇನ್ನಷ್ಟು ಪುಸ್ತಕಗಳ ಪಟ್ಟಿಯನ್ನು ಒದಗಿಸುತ್ತದೆ. ಗೂಗಲ್‌ನಲ್ಲಿ ಕೂಡ ನಿಮ್ಮ ಅಂತರ್ಜಾಲದ ಇತರೆ ಆಯ್ಕೆಗಳನ್ನು ಆಧರಿಸಿಯೇ ನಿಮ್ಮ ‘ಹುಡುಕಾಟಕ್ಕೆ’ (search) ಉತ್ತರ ಸಿಗುವುದು. ಅಂದರೆ, ನಿಮಗೆ ಅಂತರ್ಜಾಲದಲ್ಲಿ ಮುಕ್ತವಾಗಿ ಜ್ಞಾನ ಸಿಗುತ್ತದೆ ಎಂಬುದು ಸುಳ್ಳು. ಇದನ್ನೇ “personlised search’ ಎಂದು ಕರೆಯುವುದು. ಇದು ಸಾಧ್ಯವಾಗುವುದು ಅಂತರ್ಜಾಲದಲ್ಲಿರುವ ಸಂಸ್ಥೆಗಳು ನಿಮ್ಮ ಆಯ್ಕೆ, ಆಸೆಗಳ ಬೇಹುಗಾರಿಕೆಯನ್ನು ನಡೆಸಿದಾಗ ಮಾತ್ರ. ಇದು ನಿಮಗೆ ತಿಳಿಯದೇ ನಡೆಯುತ್ತಿದೆ. ಅಂತರ್ಜಾಲದ ಮೂಲಕ ಜಗತ್ತಿನ ವಿಶಾಲತೆಯನ್ನು, ಮಾಹಿತಿ ಮುಕ್ತ ಹರಿದಾಟವನ್ನು ಅಳೆಯಲು ಹೊರಟ ನಿಮಗೆ, ಈ ವಿಶೇಷ ‘ಜರಡಿಗಳು'(filters) ನಿಮ್ಮ ಜಗತ್ತನ್ನು ಮತ್ತು ಮಾಹಿತಿಯನ್ನು ಸಂಕುಚಿತಗೊಳಿಸುತ್ತದೆ. ಅದರ ಅಗಾಧ ನೆನಪಿನ ಶಕ್ತಿಯ ಮೂಲಕ, ನಿಮ್ಮ ಆಯ್ಕೆಗಳ ಬೇಹುಗಾರಿಕೆಯ ಮೂಲಕ ಅಂತರ್ಜಾಲ ನಿಮಗಿಷ್ಟವಾದದನ್ನು ಮಾತ್ರ ಕಟ್ಟಿಕೊಡುತ್ತಿರುತ್ತದೆ. ಹೀಗೆ ಮಾಡುವುದರ ಮೂಲಕ ವಾಸ್ತವತೆಯ ಬಗ್ಗೆ ಒಂದು ದೊಡ್ಡ ಮರೀಚಿಕೆಯನ್ನು ಸೃಷ್ಟಿ ಮಾಡುತ್ತಿರುತ್ತದೆ.

‘ವಿಜಯ ಕರ್ನಾಟಕ’ದಲ್ಲಿ ಪ್ರಕಟಿತ

‍ಲೇಖಕರು G

June 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. ಓದುಗ, ಬೆಂಗಳೂರು

    ಯಾವ ರೀತಿ ಅಮೇರಿಕನ್ ಸ್ವಾಮ್ಯದ ಕಂಪೆನಿಗಳು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜಗತ್ತಿನ ಇತರ ದೇಶ ಹಾಗೂ ಪ್ರಜೆಗಳನ್ನು ತಮ್ಮ ಅಧೀನದಲ್ಲಿರುವಂತೆ ಮಾಡುತ್ತಾರೆ ಎಂಬುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಒಂದು ಕಡೆ ತಮ್ಮ ಉದ್ಯಮವನ್ನು ನಡೆಸುತ್ತಿದೆ ಇನ್ನೊಂದು ಕಡೆ ಇತರರನ್ನು ಎಲ್ಲಾ ರೀತಿಯಿಂದ ತನ್ನ ದಾಸ್ಯತನಕ್ಕೆ ಒಳಪಡಿಸುತ್ತಿದೆ. ಗೂಗಲ್ ನ ಬಗ್ಗೆ ಇನ್ನೂ ಹೇಳುವುದಾದರೆ, ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ನಾವೇನು ಅನುವಾದಕ್ಕಾಗಿ ಫೀಡ್ ಮಾಡುತ್ತೇವೆಯೋ ಅದು ಕೂಡಾ ಗೂಗಲ್ ಕಂಪೆನಿಯ ಇಂಟೆಲಕ್ಚುವಲ್ ಪ್ರಾಪರ್ಟಿಯಾಗುತ್ತದೆ. ನಮ್ಮ ಸರಕಾರಗಳ ದೂರದರ್ಶಿತ್ವವಿಲ್ಲದ ಧೋರಣೆಗಳು ,ಜನ-ನಾಯಕರ ಹೊಣೆಗೇಡಿತನ, ಹಾಗೂ ಉದ್ಯಮಿಗಳ ಹಣದ ದಾಹಗಳೆಲ್ಲವೂ ಸೇರಿ “ವಿಜ್ಞಾನ ಹಾಗೂ ಸಂಶೋಧನೆ” ಯ ಕತ್ತುಹಿಸುಕಿರುವುದೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ.

    ಪ್ರತಿಕ್ರಿಯೆ
  2. Santhoshkumar LM

    ಹೌದು. ಇಲ್ಲಿ ಅಮೇರಿಕಾ ಕದ್ದು ನೋಡುತ್ತಿರುವುದು ನಾವು ಮುಕ್ತ ಅಂತರ್ಜಾಲದಲ್ಲಿ ಮಾಡುವ ಕೆಲಸಗಳನ್ನಲ್ಲ. ಬದಲಿಗೆ ತೀರಾ ಖಾಸಗಿ ಎಂದು ಹೇಳಿಕೊಳ್ಳಬಹುದಾದ ಮಿಂಚಂಚೆ(email)ಗಳು, ಅದರೊಳಗಿನ ಮಾಹಿತಿಗಳು. ಯಾರೋ ಅಪರಿಚಿತ ವ್ಯಕ್ತಿ ಬಂದು ನಮ್ಮ ಹೆಸರು ಕೇಳಿದಾಗ ನಾವು ಹಿಂದೆ ಮುಂದೆ ಯೋಚಿಸದೆ ನಮ್ಮ ಹೆಸರು ಹೇಳಬಹುದು. ಆದರೆ ಅದೇ ವ್ಯಕ್ತಿ “ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಡಿ” ಅಂದಾಗ “ಏಕೆ” ಎಂಬ ಪ್ರಶ್ನೆ ಎಸೆಯುತ್ತೀವಲ್ಲ. ಹಾಗೆಯೇ ಅಲ್ಲವೇ?!
    ಈಗ ಸ್ನೋಡೆನ್‌ ನ ಪೂರ್ವಾಪರಗಳನ್ನು ಕೂಲಂಕುಷವಾಗಿ ತಿಳಿದುಕೊಂಡು ಅವನನ್ನು ಶ್ಲಾಘಿಸಿ ಜತೆಗೆ ಅವನು ಹೇಳಿದ್ದು ಸರಿಯೆಂದಾದರೆ ಅಮೇರಿಕಾ ಬಗೆಗಿನ ನಮ್ಮ ನಿಲುವನ್ನು ಬದಲಾಯಿಸಿಕೊಳ್ಳುವುದು ಸರಿಯೆಂದು ನನ್ನ ಅನಿಸಿಕೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: