ಮಂಡ್ಯ ರಮೇಶ್ ಕಾಲಂ: ನಾನು ಮತ್ತು ’ಆದಿಮ’

‘ಆದಿಮ’ ನನಗೆ ಹೊಸತಲ್ಲ, ಅನೇಕ ಬಾರಿ ಹೋಗಿ ಬಂದಿದ್ದೇನೆ. ಮೊದಲ ಬಾರಿಯಂತೂ ‘ಕನಸನ್ನೇ ಕದ್ಬಿಟ್ಟಿದ್ದೀರಲ್ಲಾ ಗುರುಗಳೇ!’ ಅಂತಾ ಪ್ರೀತಿಯ ಕೋಟಗಾನಹಳ್ಳಿ ರಾಮಯ್ಯನವರನ್ನು ಕಾಡಿಬಿಟ್ಟಿದ್ದೆ.

ವರ್ಷಕ್ಕೊಂದೆರಡು ಬಾರಿ ‘ಆದಿಮ’ದ ಬಂಡೆ ಮೇಲೆ ಕೂತು ಹರಟದಿದ್ದರೇ ಎಂಥದ್ದೋ ಕಳೆದುಕೊಂಡ ಅನುಭವ! ನಟನ ತಂಡದ ಚೋರ ಚರಣದಾಸ, ನಾನು ನಿರ್ದೇಶಿಸಿದ ಲಂಕೇಶರ ಸಂಕ್ರಾಂತಿ, ನಾಯಿತಿಪ್ಪ, ರತ್ನಪಕ್ಸಿ, ರಂಗಗೀತೆಗಳ ಕಾರ್ಯಕ್ರಮ, ಮಕ್ಕಳ ಮೇಳದಲ್ಲಿ ನನ್ನ ಸಂವಾದ…. ಎಲ್ಲಾ ನಡೆದಿದೆ….

ಬಿಡುವಾದಾಗಲೆಲ್ಲಾ ರಾಮಯ್ಯನವರು ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡಿ ಕಲೆ, ಸಂಸ್ಕೃತಿ, ರಾಜಕಾರಣ, ಜಾಗತಿಕ ವಿದ್ಯಮಾನಗಳನ್ನೆಲ್ಲಾ… ಮಾತನಾಡಿ ನನ್ನ ಅಂತಃಶಕ್ತಿಯನ್ನು ಉದ್ದೀಪಿಸಿದ್ದಾರೆ…

ಪ್ರತೀಸಾರಿಯೂ ‘ಬನ್ನಿ ರಮೇಶ್ ನಾಟ್ಕ Direct ಮಾಡ್ಕೊಡಿ’ ಅಂತಾ ಒತ್ತಾಯಿಸುತ್ತಲೇ ಇದ್ದಾರೆ… ನನಗೆ ಸಾಧ್ಯವಾಗಿರಲೇ ಇಲ್ಲ. ತಿಂಗಳ ಹಿಂದೆ ಫೋನಾಯಿಸಿ ರಮೇಶ, ‘Let Poly Thrive’ ಅಂತಾ ನಾನು ಬರೆದ ನಾಟಕವನ್ನು ಹುಡುಗರೇ ಮಾಡ್ಕೊಂಡಿದ್ದಾರೆ., ನೀವು ಬಂದು ಒಂದಷ್ಟು ಸರಿ ಮಾಡಪ್ಪಾ ಅಂತಾ ಮತ್ತೆ ಕರೆದರು…. ಇನ್ನು ತಪ್ಪಿಸಿಕೊಳ್ಳುವುದು ತರವಲ್ಲ ಅನ್ನಿಸಿ ಎರಡು ದಿನ ಅಲ್ಲಿದ್ದು ಆ ಹುಡುಗರಿಗೆ ‘ಅಭಿನಯದ ತರಗತಿ’ಗಳನ್ನು ನಡೆಸಿ., ನಾಟಕವನ್ನು ಒಂದಷ್ಟು ಪಕ್ಕಾ ಮಾಡಿಸಲೆಂದು ‘ಆದಿಮ’ಕ್ಕೆ ಬಂದಿಳಿದೆ.

ಬೆಳಗ್ಗಿನ ಹತ್ತೂವರೆಗೆ ಆವರಣಕ್ಕೆ ಹೊಕ್ಕಾಗ… ಆಗತಾನೆ ತಿಂಡಿ ತಿಂದು ನಟ-ನಟಿಯರು ಸುಧಾರಿಸಿಕೊಳ್ಳುತ್ತಿದ್ದರು., ಸೀದಾ ಮೇಲ್ಬಾಗದ ಹೆಂಚಿನ ಪ್ರೇಕ್ಷಾಂಗಣದ ಬಂಡೆಗಳ ಹಿನ್ನೆಲೆಯ stage ನಲ್ಲಿ ಒಬ್ಬನೇ ಕುಳಿತೆ ಮರದ ಕುರ್ಚಿಯೊಂದರ ಮೇಲೆ. ಬಿರುಬಿಸಿಲ ಝಳದಲ್ಲಿ ತಣ್ಣನೆ ಗಾಳಿಯಿತ್ತು, ಹೊಂಗೆ ಚಿಗುರು ತಿನ್ನಬೇಕೆನಿಸುವಷ್ಟು ಚೆಂದವಿತ್ತು ಸುತ್ತಲು, ನಾಲ್ಕಾರು ಹಕ್ಕಿಗಳ ಕೂಗು ಬಿಟ್ಟರೆ ಆಗೀಗ ಒಂದಷ್ಟು ಗಾಳಿಯ ಸದ್ದು. ಶುದ್ಧ ಮೌನ. ಕಲಿಯಲಿಕ್ಕೆ ಪ್ರಶಸ್ಥ ಸ್ಥಳ ಅದು.
ಒಬ್ಬೊಬ್ಬರೇ ಬಂದು ಸೇರಿದರು. ವೃತ್ತದಲ್ಲಿ ಕುಳಿತೆ. ತರಗತಿ ಆರಂಭಿಸಿ…… ನಾಟಕ ತಿದ್ದುವ ಮುನ್ನ ಒಮ್ಮೆ ನೋಡ್ತೀನಿ ಅಂದೆ, ನೋಡಿದೆ. ‘ಲೆಟ್ ಪಾಲಿ ಥ್ರೈವ್’ ನೋಡುವಾಗ ಪ್ರತಿಕ್ಷಣ ಅನುಭವಿಸಿದ ಅನುಭೂತಿಯನ್ನು ನನ್ನ ಶಬ್ಧಗಳಲ್ಲಿ ಹಿಡಿಯಲಾರೆ ಅನ್ನಿಸಿದೆ.
 

ಅದು ಜಗತ್ತಿನ ಕಥೆ! ರಾಮಯ್ಯನವರ ಚಡಪಡಿಕೆ, ಅಸಹನೆ, ಕಾಳಜಿ, ಪ್ರೀತಿ, ಹತಾಷೆ, ಅಂತಃಕರಣ….. ಪ್ರತೀ ಉಸಿರೂ ರಂಗದಲ್ಲಿ ಕಾವ್ಯವಾಗಿದೆ! ಅವರ ಪ್ರತಿಭಟನೆಯ ಶೈಲಿಗೆ ಮತ್ತೊಂದು ಮಾದರಿಯೇ ಇಲ್ಲ.. ಅಂಥದ್ದೊಂದು ಅಧ್ಯಾತ್ಮವನ್ನು ನಾನು ಈವರೆಗೆ ಕಂಡಿಲ್ಲ!
ಆ ನಟ-ನಟಿಯರೋ ಪ್ರಪಂಚದ ಅಷ್ಟೂ ಶಕ್ತಿಯನ್ನೆಲ್ಲಾ ತುಂಬಿಕೊಂಡಂತೆ ಅಭಿನಯಿಸುವ ತಂಡವದು….! ತರಗತಿ ಆರಂಭಿಸಿದೆ; ಕೌಶಲ್ಯ ಕಲಿಕೆಯನ್ನು ಬದಿಗಿಟ್ಟು., ಅಂತರಂಗದ ಬೆಳಕಿನಲ್ಲಿ ನಟನ ಭಾವೋದ್ದೀಪನದ ಪ್ರಖರತೆಯನ್ನು ಅವರಿಗೆ ಸಿದ್ಧ ಮಾಡಿಕೊಳ್ಳುವ ಬಗೆಗೆ ಗಮನವಹಿಸಿದೆ…

ಆರಂಭದಲ್ಲಿ ನಿಸ್ತೇಜವಾಗಿ ಕುಳಿತಿದ್ದ ತಂಡ ಸರಳ ರಂಗಾಟಗಳಿಂದ ನಿಧಾನ ಅರಳಿಕೊಂಡು, ಅನುಭವ ಸಾಂದ್ರತೆ ಎಲ್ಲವನ್ನೂ ಕ್ರೋಢೀಕರಿಸಿಕೊಂಡು ವಿರಾಟರಾಗಿ ಮುಗಿಲೆತ್ತರಕ್ಕೆ ಮೈ-ಮನಸ್ಸುಗಳನ್ನು ಚಾಚಿದ್ದನ್ನು ಕಂಡು ಮೂಕನಾದೆ.

ನಟನಟಿಯರನ್ನು ರಂಗದಲ್ಲಿ ಪ್ರಾತಕ್ಕೆ ಬಗ್ಗಿಸುವಾಗ ಮೊದಲು ಅವನನ್ನು ಒಲಿಸಿಕೊಳ್ಳಲು ಪಡುವ ಹರಸಾಹಸದ ಪ್ರಕ್ರಿಯೆ ಕ್ರಮೇಣ ಸುಖದ ಘಳಿಗೆಗಳಾಗಿ ಪರಿವತರ್ಿಕವಾಗುವುದನ್ನು ಪ್ರತ್ಯಕ್ಷ ಕಂಡಿರುವ ನನಗೆ…. ಇಲ್ಲಿ ಮತ್ತಷ್ಟು ವಿಷಯಗಳು ಅನುಭವಕ್ಕೆ ಬರತೊಡಗಿತು…
ಜಡದಂತೆ ಮಲಗಿದ್ದ ಅನುಭವ ಕೂಸನ್ನು ನಿಧಾನ ತಟ್ಟಿ, ಚಿವುಟಿ ಎಬ್ಬಿಸಿ ಅದು ಮಾಡುವ ರಂಪಾಟಗಳನ್ನು ನೋಡಿ, ನಟ ಮುಗುಳ್ನಕ್ಕು ಮನಸ್ಸಿನ ತೊಟ್ಟಿಲಲ್ಲಿ ತೂಗಿಟ್ಟುಕೊಳ್ಳುವುದು ಮೊದಲ ಪಾಠವೆಂದು ನನ್ನ ಅರಿವು.. ಮನೋ ವೈಜ್ಞಾನಿಕ ಪದ್ಧತಿಯ ನಟನೆ ಕಲಿಕೆ, ನಟನ ಪಾತ್ರವಲ್ಲದೇ ರಂಗಕೃತಿಯ ಸಾಧ್ಯತೆಗಳು ವಿಸ್ತಾರಗೊಳ್ಳುವಲ್ಲಿ ಅವಶ್ಯ ನೆರವಾಗುತ್ತದೆ.
ದೇಹ-ಧ್ವನಿಯ ಕಸರತ್ತುಗಳೆಷ್ಟು ಮುಖ್ಯವೋ, ಅಮೂರ್ತ ನೆನಪುಗಳನ್ನು ಬಡಿದೆಬ್ಬಿಸಿ ಉತ್ತೇಜಿತ ಭಾವಗಳನ್ನು ಕೌಶಲ್ಯಗಳಲ್ಲಿ ನಟ ರಂಗದ ಮೇಲೆ ಸೃಜಿಸುವುದೂ ಅಷ್ಟೇ ಮುಖ್ಯವಾದುದೆಂದು ಭಾವಿಸಿಕೊಂಡಿದ್ದೇನೆ. ಆ ಕಾರಣಗಳಿಗಾಗಿಯೇ ಅವರ ಅಂತರಂಗಕ್ಕೆ ಕೈ ಹಾಕಿದೆ.
‘ಸಂತೋಷದ ಘಳಿಗೆಗಳನ್ನು ನೆನಪು ಮಾಡಿಕೊಳ್ಳಿ’ ಎಂದೆ…. ಮುಖ ಅರಳಿದ್ದು ಕಂಡೆ. ಹೇಳುತ್ತಾ ಹೋದರು ‘ಅಪಮಾನವಾಗಿದ್ದು ಹೇಳಿ’ ಅಂದಾಗ ಬಳ್ಳಾರಿ ಮೂಲೆಯಿಂದ ಬಂದಿದ್ದ ದುಗ್ಗವ್ವ ನೆನಪನ್ನು ಬಿಚ್ಚಿದಳು….
ಸರ್ಕಾರಿ ಆಫೀಸ್ಗೆ ಹೋಗಿದ್ದೇನ್ರಿ… ಅವ ತಾಸೀಲ್ದಾರ್, ಅರ್ಜಿ ಚಲೋ ತುಂಬಿಸ್ಲಿಕ್ಕೆ ಬರೋದಿಲ್ಲ?… ಅಪ್ಪನ ಹೆಸರು ಅನ್ನೋ ಕಡೆ ಖಾಲಿ ಬಿಟ್ಟಿದ್ದೀ??? ತುಂಬಿಸಿಕೊಡು ಅಂತಾನ.. ಹ್ಯಾಂಗ್ರೀ ತುಂಬಿಸೋದು? ಅಂದಳು… ‘ಹೌದಲ್ಲವಾ ನೀನು ತುಂಬಿಸಿಕೊಡಬೇಕಲ್ಲವಾ ನಿಂದೇ ತಪ್ಪು ಅಂತಾ ಹೇಳಹೊರಟ್ಟಿದ್ದೆ… ಅಷ್ಟರಲ್ಲಿ ದುಗ್ಗವ್ವನೇ ಮುಂದುವರೆಸಿದಳು ಅಲ್ರೀ ಸರ ಅದ ಹೆಂಗ್ರೀ ತುಂಬಿಸೋದು ಅಂತಾ ವಾರೆ ಮಾಡಿ ನಕ್ಕಳು…. ಅಲ್ಲಿ ಗಾಳಿ ಉಸಿರುಗಟ್ಟಿತು.! ಅವಳಂದಳು ನಮಗಾ ಅಪ್ಪ ಯಾರೂ ಇರಂಗಿಲ್ರೀ! ಅಂದ್ರಾ ನಮ್ಮವ್ವ ದೇವದಾಸೀರಿ… ‘ಬಸವೀ’ಗ್ ಬಿಟ್ಟವ್ರಗೆ ಅಪ್ಪ ಹೆಂಗಿರ್ತಾನೇ ಹೇಳ್ರೀ? ಅಂದ್ಲು.
ಧಿಗ್ಮೂಢನಾದೆ.! ಅವಳು ಆರಾಮಾಗಿ ಹೇಳುತ್ತಿದ್ದಾಳೆ… ತೀರಾ ಸಹಜವಾಗಿ. ಇಲ್ಲಿಗೆ ಆಗೀಗ ಬರೋ ಬ್ಯಾರೀ ಹುಡುಗೀರ ಅಪ್ಪನ್ನ, ನನ್ನ ಅಪ್ಪ ಅಂದ್ಕೊಂಡು ಮಾತಾನಾಡ್ಸಿತ್ತಿದ್ದೆರೀ… ನನಗೂ ಅಪ್ಪ ಬೇಕೆನ್ನಿಸಿತ್ತು ಆದ್ರೆ ಏನ್ ಮಾಡ್ಲೀರೀ… ನನಗೆ ಅಪ್ಪನೇ ಇಲ್ರೀ… ಎಲ್ಲಾ ಕಡೆ ಕೇಳ್ತಾರೀ ನಿಮ್ಮಪ್ಪ ಯಾರು? ಅಂತಾ ಭಾರೀ ನೋವಾಗ್ತದ್ರೀ…. ಒಮ್ಮೆ ರಾಮಯ್ಯ ಸರ್ಗೆ ಹೇಳ್ದೇರೀ… ಅದಕ್ಕವರು ಯಾರಾದ್ರೂ ಅಪ್ಪ ಎಲ್ಲಿ ಅಂದ್ರೆ… ನನ್ನ ಹೆಸರು ಹೇಳು ಅಷ್ಟೇ! ಅಂದ್ರೂ ರೀ…
ನಿರಮ್ಮಳವಾದಳು ಅವಳು….
ನನ್ನೊಳಗೆ ಉಮ್ಮಳಿಸಿತ್ತು!
ಮಹಂತೇಶನ ಕಥೆಯೂ ಅದೇ… ಕಥನಕ್ಕೆ ಲತಾ, ಮಾದೇವಿ, ಶೃತಿ… ಒಬ್ಬೊಬ್ಬರ ಅನುಭವವೂ ಸುತ್ತಲಿದ್ದ ಬಂಡೆಗಳೂ ರೋಧಿಸಿಬಿಟ್ಟವೆನೋ ಅನಿಸತೊಡಗಿತು. ಸಾಯಲಿಕ್ಕೆ ಕಂಠಪೂರ್ತಿ ಕುಡಿದಿದ್ದ ಪರಲೋಕದ ಬಾಗಿಲ ತಟ್ಟಿದ್ದ ಅವ್ವನನ್ನು ಬದುಕಿಸಿಕೊಂಡ ಅರುಣಾಳ ಕಥೆ ಇನ್ನೂ ವಿದ್ರಾವಕವಾದದ್ದು… ಕುಡಿದು ಬಂದು ಹೆಂಡತಿಯನ್ನು ಬಡಿದು ಚಚ್ಚಿ ಸಾಯಿಸುವ ಮಟ್ಟಕ್ಕೆ ಹೋಗುತ್ತಿದ್ದ ಅಪ್ಪಂದಿರ ಬಗ್ಗೆ ತೀರಾ ಸಹಜವಾಗಿ ಅವರಾಡುತ್ತಿದ್ದ ಮಾತುಗಳಲ್ಲಿ ತಿರಸ್ಕಾರವೂ, ಪ್ರೀತಿಯೂ, ಮಮಕಾರವೂ… ಆ ಭಾವಗಳನ್ನು ಗ್ರಹಿಸಲಾಗದೆ ಹೋದೆ ನಾನು! ಅಷ್ಟೊಂದು ಮಿಶ್ರಭಾವದ ಮೂಕ ಸಂಕಟವದು!
‘ನಾಚಿಕೆಯಾದ ಕಥೆ ಹೇಳಿ’ ಅಂದೆ. ಮತ್ತೆ ಶುರುವಾಯಿತು ನಗೆ ಬುಗ್ಗೆ… ಬಾಲ್ಯದಲ್ಲಿ ಈಸುವ ಆಸೆಯಿಂದ ಬಟ್ಟೆ ಬಿಚ್ಚೆಸೆದು ಹೊಂಡದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾಗ… ಭಾವ ಬಂದು ಬಟ್ಟೆಗಳನ್ನು ಎತ್ತಿಕೊಂಡು ಹೋದಾಗ… ದಿಕ್ಕು ಕಾಣದೆ ಪರಿತಪಿಸಿ ತೊಳೆಯಲು ತಂದಿದ್ದ ಪಾತ್ರೆಗಳ ಬುಟ್ಟಿಯನ್ನು ಮರೆಯಾಗಿಸಿ ಕತ್ತಾಳೆಯನ್ನು ಕತ್ತರಿಸಿ ಸುತ್ತ ಜೋಡಿಸಿ, ಸೊಪ್ಪು ಸದೆಗಳನ್ನು ಕಟ್ಟಿಕೊಂಡು ಮನೆಗೆ ಓಡುವಾಗ ನಗಾಡಿದ ಮಿಕ್ಕವರೆದುರು ನಾಚಿಕೆಯಾದ ಕ್ಷಣ ಅವರ ಮುಖ ಕೆಂಪಾಗಿದ್ದು… ದಾಖಲಿಸಿಕೊಳ್ಳಿ! ಎಂದೆ.
‘ಕೋಪ’ದ ಕ್ಷಣದ ಅನುಭವ ಕೇಳಲು ಹೊರಟಾಗ ಅವರೊಳಗಿನ ಅಗ್ನಿಕುಂಡಕ್ಕೆ ಬೆಚ್ಚಿದೆ ನಾನು! ಅಂತಹ ವ್ಯಗ್ರತೆ ಅದು…
ಐವರು ರೆಡ್ಡಿಗಳು ಸೇರಿ ಆಸ್ತಿ ವ್ಯಾಜ್ಯದ ನೆಪದಲ್ಲಿ ಮನೆ ಮಂದಿಯನ್ನೆಲ್ಲಾ ಬೆತ್ತಲೆ ಮಾಡಿ ಹರೆಯದ ಬಾಲೆಯೊಬ್ಬಳನ್ನು ಹೀರಿ ಎಸೆದಿದ್ದ ಘಟನೆ ಕೇಳಿದ ಒಂಟಿಗಣ್ಣಿನ ನಾರಾಯಣಸ್ವಾಮಿ… ಆ ಬೆತ್ತಲೆ ಹೆಣವನ್ನು ನೋಡುತ್ತಲೆ ನಿಂತಿದ್ದ ಜನರಿಗೆ ಉಗಿದು ಪಕ್ಕದಲ್ಲಿದ್ದವರ ಬಟ್ಟೆ ತುಂಡನ್ನು ಹೊದೆಸಿದ, ಪೋಲೀಸರೆದುರು ನಗುತ ಬಂದು ನಿಂತ ರೆಡ್ಡಿಗೆ ಕೈಗೆ ಸಿಕ್ಕ ಮರದ ಕೊಂಟಿನಲ್ಲಿ ಭಾರಿಸಿದ ರಭಸಕ್ಕೆ ಬುರುಡೆ ಬಿಚ್ಚಿದ್ದನ್ನು ಹೇಳಿದ ಪರಿಗೆ ಅವನೊಳಗಿನ ಕೋಪದ ತಾಪ ಸುತ್ತಲೂ ತಾಂಡವವಾಡುತ್ತಿತ್ತು..
ಹಾಡುಗಾರ ನಾರಾಯಣಸ್ವಾಮಿ ಈ ಅನುಭವ ಹೇಳುವಾಗ ಆ ಒಂದೇ ಕಣ್ಣಿನಲ್ಲೂ ಕೋಟಿ ಜನ್ಮಗಳ ಆಕ್ರೋಶ ಕಂಡೆ!
ಪ್ರತಿಷ್ಠಿತ META ಉತ್ಸವದಲ್ಲಿ ರಾಷ್ಟ್ರೀಯ ಶ್ರೇಷ್ಠ ನಟನಾಗಿ ಪುರಸ್ಕಾರ ಪಡೆದ ರಾಯಚೂರಿನ ಡಿಂಗ್ರೀ ತನ್ನೂರಿನ ಜಾತಿಜಗಳದಲ್ಲಿ ಅನುಭವಿಸಿದ ಯಾತನೆಯನ್ನು ವಿವರಿಸುವಾಗ ತಾರತಮ್ಯದ ಅಸಹ್ಯ ಕಂಡು ಕ್ಷಣ ಕಾಲ ಎಲ್ಲರ ರಕ್ತ ಹೆಪ್ಪುಗಟ್ಟಿದಂತೆ ಕಂಡಿತು!
ಕೋಪ, ನಗು, ನಾಚಿಕೆ, ದುಃಖ… ಮುಂತಾದ ಬೇರೆ ಬೇರೆ ಸಂಧರ್ಭಗಳೆಲ್ಲಾ ಅವರ ಮನಸ್ಸು, ದೇಹ ಪ್ರತಿಕ್ರಿಯಿಸುತ್ತಿದ್ದನ್ನು ಸೂಕ್ಷ್ಮವಾಗಿ ಗಮನಿಸಿ… ಅವರಿಗೆ ಆ ತತ್ತರಗಳನ್ನು ದಾಖಲಿಸಿಕೊಳ್ಳಲು ಹೇಳಿದೆ ಅವನ್ನು ರಂಗದಲ್ಲಿ ಪುನರ್ಸೃಷ್ಠಿಸುವ ಪರಿಯನ್ನು ಹೇಳಿಕೊಡುವ ಪ್ರಯತ್ನ ಮಾಡಿದೆ.
ಎಲ್ಲ ತಲ್ಲಣಗಳೂ ಕಲೆಯಾದಾಗಾ, ಕಾವ್ಯವಾದಾಗ ರಂಗದಲ್ಲಿ ಪ್ರತಿಮೆಗಳಾಗಿ ಅಭಿವ್ಯಕ್ತಿಗೊಂಡಾಗ ಸಿಗುವ ಧ್ಯಾನಸ್ಥ ಸ್ಥಿತಿಯ ಸಂತಸ ಕುರಿತು ಸರಳವಾಗಿ ಬಿಡಿಸಿ ಹೇಳಿದೆ. ರಂಗದಲ್ಲಿ ಅಲ್ಲಿದ್ದ ಒಬ್ಬೊಬ್ಬರೂ ಋಷಿಗಳಂತೆ ಕಂಡರು ನನಗೆ. ಅಲ್ಲಿ ಶ್ರದ್ಧೆ ಇದೆ. ಅಂತಃಕರಣ ಇದೆ. ಅವರೆಡೆಗೆ ಜನ ತಿರುಗಿ ನೋಡಲೇಬೇಕಾಗಿದೆ ಅಷ್ಟೆ! ಅನಿಸಿತು.
‘ಲೆಟ್ ಪಾಲಿ ಥ್ರೈವ್’ ನಾಟಕದ ಪ್ರತೀ ಅಕ್ಷರ, ಅಕ್ಷರದ ನಡುವಿನ, ಸಾಲಿನ ನಡುವಿನ ಎಲ್ಲಾ ಅರ್ಥಗಳನ್ನು ನಟ-ನಟಿ ಬಿಡಿಸಿ ಹೇಳಲೇಬೇಕಾದ ಅನಿವಾರ್ಯತೆ ನನಗೆ ತುಂಬಾ ಕಂಡಿತು. ಒತ್ತಾಯ ಪೂರ್ವಕವಾಗಿ ಅಷ್ಟನ್ನೂ ಸ್ಪಷ್ಟವಾಗಿಸುವ ಪ್ರಯತ್ನ ಮಾಡಿದೆ. ಸಿದ್ಧ ಮಾದರಿಯ ರಂಗ ಪಠ್ಯಗಳನ್ನು ತೊರೆದು ಮುರಿದು ಕಟ್ಟುವ ಶಕ್ತಿ, ಚಳುವಳಿಗಳ ಮೂಲಕವೇ ಸಾಗಿ ಬಂದ ರಾಮಯ್ಯನವರಿಗೆ ಸಿದ್ಧಿಸಿಬಿಟ್ಟಿದೆ. ಅವರ ಎಲ್ಲಾ ನಾಟಕಗಳ ಪ್ರಮುಖ ಪಾತ್ರವಾದ ತಿಪ್ಪ ಮತ್ತು ಅಜ್ಜಿ ಇಲ್ಲಿಯೂ ಮತ್ತಷ್ಟು ಮುಂದುವರಿದ ಭಾಗವಾಗಿ ಕಾಣ ಸಿಗುತ್ತಾರೆ… ಅವರ ಹಳತು ಹೊಸತರ ಸಂಘರ್ಷ, ಸಿದ್ದಾಂತಗಳ ನಡುವೆ ಸಾಗುವುದು ಮತ್ತಷ್ಟು ಅರ್ಥಪೂರ್ಣ ರೋಚಕ.
ಪರಂಪರೆಗೆ ಪ್ರತ್ಯಸ್ತ್ರ್ತವಾಗಿ ಅವರ ಪಾತ್ರಗಳು, ಮತ್ತು ಢಾಳಾಗಿ ಕಾಣಸಿಗುವ ‘ಪ್ರತಿಮೆ’ಗಳು ಕಾಡುತ್ತಲೇ ಇರುತ್ತವೆ. ನಾಯಿತಿಪ್ಪದ ರೊಟ್ಟಿಮರ, ರತ್ನಪಕ್ಸಿಯ ಹಿಕ್ಕೆ… ಈಗ, ಪುರಾಣದಿಂದೆದ್ದು ಬಂದ ಕೋಣ ಮತ್ತು ಸಗಣಿ! ಅಂತೆಯೇ ದೇವನೂರರ ದಾರ್ಶನಿಕ ‘ಕುರಿಯಯ್ಯ’, ಪಾಲಿಟ್ಬ್ಯೂರೋ, ಪೇಜಾವರರು, ಮಾಧ್ಯಮಗಳ ಹುಚ್ಚಾಟಗಳು ಎಲ್ಲರನ್ನೂ, ಎಲ್ಲವನ್ನೂ ಜಗ್ಗಿ ಮಾತನಾಡಿಸಿ, ಗೊಂದಲಗೊಂಡ ಈ ಜಗತ್ತಿಗೆ ತತ್ಕ್ಷಣವೇ ತೀವ್ರವಾಗಿ ‘ಪ್ರತಿಕ್ರಿಯಿಸುವ ಅತ್ಯಂತ ವಿಶಿಷ್ಟ ಪದ್ಧತಿ – ‘ಆದಿಮ’ದ ನಾಟಕಗಳಲ್ಲಿದೆ. ಹಾಗಾಗಿ ರಾಮಯ್ಯನವರ ಕೃತಿಗಳನ್ನು, ಮಾತುಗಳನ್ನು, ಚಿಂತನೆಗಳನ್ನು ಮತ್ತು ನಡೆಯನ್ನು ಜೀರ್ಣ ಮಾಡಿಕೊಳ್ಳಲು ‘ಜಠರ’ಕ್ಕಿಂತ ‘ಗುಂಡಿಗೆ’ಯೇ ಬೇಕೇನೋ ಅನ್ನಿಸುತ್ತದೆ.
ಬರ್ಬರ ಬದುಕಿನ ಭಾರ ತಾಳದ ತಾಯಿ – ಕಂದಮ್ಮನೊಂದಿಗೆ ಬಾವಿಗೆ ಬೀಳಲು ಮುಂದಾದಾಗ, ಕಟ್ಟೆ ಮೇಲಿನ ಮಗ ಜಗ್ಗಿ ‘ಬ್ಯಾಡವ್ವಾ ಬದುಕೋಣ’ ಅಂತಾ ಸಮಾಧಾನ ಮಾಡಿ ಕರೆತಂದ ಅವನೇ ಕೋಟಗಾನಹಳ್ಳಿ ರಾಮಯ್ಯನಾಗುತ್ತಾನೆ…. ತನ್ನಂತೆ ತತ್ತರಿಸಿ ಹೋದ ಜೀವಗಳನ್ನು ಒಟ್ಹಾಕಿ, ಜೀವನ ಕಟ್ಟುವುದು ಅವರ ನಾಟಕಗಳಲ್ಲಿ ಕಾಣಸಿಗುವಂತೆಯೇ ‘ರೂಪಕಗಳ ಮಹಾಪೂರ’! ಪಂಡಿತ-ಪಾಮರರಿಬ್ಬರಿಗೂ ಏಕ ಕಾಲದಲ್ಲಿ ಸಂಭ್ರಮದಲ್ಲಿ ಸಂಕಟ ಹೇಳುವ ವಿಷಾದ ಗೀತೆ ‘ಲೆಟ್ ಪಾಲಿ ಥ್ರೈವ್’
ಸಿದ್ಧಾಂತಗಳಾಗಲಿ, ಅಭಿಪ್ರಾಯಗಳನ್ನು ಮಂಡಿಸುವಾಗ ರಂಗಭೂಮಿಯನ್ನು ‘ವಾಹಕವಾಗಿ’ ಬಳಸುವಾಗ ಒಣ ಅನಿಸದೆ… ಲವಲವಿಕೆಯ ಮೂಲಕವಾಗಿರುವುದರಿಂದ ಅವರ ಎಲ್ಲಾ ಕೃತಿಗಳಂತೆ ಇಲ್ಲಿಯೂ ರಂಗದಲ್ಲಿ ತಮಾಷೆ, ಸಂಗೀತ, ರೊಚ್ಚು ವಿಡಂಬನೆಯ ಗುಣ ಹೇರಳವಾಗಿದೆ.
ಎಲ್ಲ ನಟರು ಒಟ್ಟಾಗಿ ಹಾಡುತ್ತಾರೆ, ಲಯ ತಪ್ಪದೇ ಚಂದದಿಂದ ನರ್ತಿಸುತ್ತಾರೆ, ಶಕ್ತಿಯಿಂದ ಮಾತನಾಡುತ್ತಾರೆ… ಎಲ್ಲಕ್ಕಿಂತ ಹೆಚ್ಚಾಗಿ… ಆಧುನಿಕೋತ್ತರ ಮಾನವ ಜನಾಂಗದ ನಿಜದ ಆಶಯಗಳನ್ನು ಅರ್ಥಮಾಡಿಸುವ ಹುಮ್ಮಸ್ಸಿನಲ್ಲಿದ್ದಾರೆ….
‘ನೆಲದ ಕಡೆಗೆ ನಡಿಗೆ’ಯಲ್ಲಿ ಸಾಗುವ ದಿಟ್ಟ ನೋಟವದು..
‘ಮುನಿ’ಯಂತೆ ಮಾತನಾಡುತ್ತಲೇ ಹೋಗುವ ರಾಮಯ್ಯನವರನ್ನು ಕಂಡಾಗ ಜಾತ್ರೆಯಲ್ಲಿ ಕಳೆದು ಹೋದ ಅಣ್ಣನೊಬ್ಬನ ನೆನಪಾಗುತ್ತದೆ. ಅಪರೂಪಕ್ಕೆ ಅವರನ್ನು ಅರ್ಥ ಮಾಡಿಕೊಂಡಂತೆ ಅಲ್ಲಿರುವ ಮೋಹಿತ್ ಮತ್ತು ಲಕ್ಷ್ಮಣ್… ಭರವಸೆಯ ಕುಡಿಗಳಾಗಿ ಕಾಣುತ್ತಾರೆ ನನಗೆ.
ಆದರ್ಶಗಳನ್ನು ವಾಸ್ತವಕ್ಕೆ ತರುವ ಅಪರೂಪಗಳಿಗೆ ಒದಗುವ ಸಂಕಟವೂ ಅಲ್ಲಿದೆ.!
ಅವರು ಬೆಳಗಲಿ!

‍ಲೇಖಕರು G

June 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. ಚಿನ್ಮಯ ಭಟ್ಟ

    ನಮಸ್ತೆ ಸರ್,
    ಇಷ್ಟವಾಯ್ತು ಅವಧಿಯಲ್ಲಿನ ನಿಮ್ಮ ಅಂಕಣ…
    ಅಲ್ಲಿನ ಚಿತ್ರಗಳೂ ಸಹ ಖುಷಿಕೊಟ್ಟವು..
    ಬರಹದ ಬಗ್ಗೆ ಜಾಸ್ತಿ ನಾನೇನೂ ಹೇಳಲಾರೆ,ಚಿಕ್ಕವನು ನಾನು..ಆದರೆ ಅಲ್ಲಲ್ಲಿ ಕೆಲವೊಂದು ಬೆರಳಚ್ಚು ದೋಷಗಳಿವೆ ಎಂದಷ್ಟು ಹೇಳಬಲ್ಲೆ..
    ಹಾಂ ಅಲ್ಲಿ ದುರ್ಗವ್ವನ ವಿಚಾರ ಹೇಳುವಾಗ ಮಧ್ಯದಲ್ಲಿ ಬಂದ ಆ ಚಿತ್ರ ಯಾಕೋ ಕಥೆಯ ಓಘವನ್ನು ತಪ್ಪಿಸಿತು ಅನ್ನಿಸಿತು…
    ಗೊತ್ತಿಲ್ಲ..ನನಗನಿಸಿದ್ದನ್ನು ಹೇಳಿದೆ…ನೋಡಿ ಒಂದ್ಸಲ..
    ರಂಗಭೂಮಿಯ ಇನ್ನಷ್ಟು ಒಳ ಅರಿವನ್ನು ಕೊಡುವ ಲೇಖನಗಳಿಗಾಗಿ ಕಾಯುತ್ತಿದ್ದೇನೆ..ಬರೆಯುತ್ತಿರಿ…
    ನಮಸ್ತೆ

    ಪ್ರತಿಕ್ರಿಯೆ
  2. Bharadwaj D J

    Sir, Felt like reading a Metaphysical or Philosophical truth verse. Your writing style and supporting the words with your inner feelings are commendable. I am blessed for being your student. Keep posting your experiences and we are here to witness the content and these will be our learnings for lifetime. Thanks a ton for sharing this exhilarating piece of experience.
    – Bharadwaj D J

    ಪ್ರತಿಕ್ರಿಯೆ
  3. Swarna

    ಸುಂದರ ಭಾಷೆ, ಸುಲಲಿತ ಶೈಲಿ.ರಾಮಯ್ಯನವರಂತವರ ಸಂಖ್ಯೆ ಹೆಚ್ಚಲಿ

    ಪ್ರತಿಕ್ರಿಯೆ
  4. sathish babu

    ಬರವಣಿಗೆಯ ಶೈಲಿ ಚೆನ್ನಾಗಿದೆ. ನೀವೊಬ್ಬ ಉತ್ತಮ ನಟ, ನಿದೇಶಕ ಮಾತ್ರವಲ್ಲ. ಒಳ್ಳೆಯ ಬರಹಗಾರರೂ…ಮನುಷ್ಯರ ಅಂತರಂಗಕ್ಕೆ ಸುಲುಭವಾಗಿ ಇಳಿಯುತ್ತೀರಿ.
    -ಸತೀಶ್‌ಬಾಬು, ಮಂಡ್ಯ

    ಪ್ರತಿಕ್ರಿಯೆ
  5. pravara

    ರಮೇಶ್ ಸರ್,
    ಇಷ್ಟು ದಿನ ನಿಮ್ಮ ನಟನೆಯನ್ನು ನೋಡಿ ಖುಶಿ ಪಡುತಿದ್ದ ನಮಗೆ
    ನಿಮ್ಮ ಬರಹವನ್ನೂ ಓದಿ ಖುಷಿಸಬಹುದು ಅನ್ನಿ…. ಬರವಣಿಗೆ ತುಂಬಾ ಇಷ್ಟವಾಯ್ತು…

    ಪ್ರತಿಕ್ರಿಯೆ
  6. jagadishkoppa

    ರಮೇಶ್, ನಿಮ್ಮೊಳಗೆ ಒಬ್ಬ ಕಲಾವಿದನನ್ನು ಕಂಡಿದ್ದೆ. ಈಗ ಒಬ್ಬ ಸುಂದರವಾದ ಭಾಷೆಯ ಬರಹಗಾರರನನ್ನು ನೋಡಿದಂತಾಯಿತು. ದಯವಿಟ್ಟು ಬರವಣೆಗೆಯನ್ನು ಸಹ ನಟನೆಯೊಂದಿಗೆ ಮುಂದುವರಿಸಿ.
    ಜಗದೀಶ್ ಕೊಪ್ಪ, ಧಾರವಾಡ.

    ಪ್ರತಿಕ್ರಿಯೆ
  7. ಸುಧಾ ಚಿದಾನಂದಗೌಡ

    ಆಪ್ರವಾಯಿತು ನಿಮ್ಮ ಬರಹ

    ಪ್ರತಿಕ್ರಿಯೆ
  8. C P Nagaraja

    ಪ್ರೀತಿಯ ಮಂಡ್ಯ ರಮೇಶ್ ,
    ನಿಮ್ಮ ಬರಹವನ್ನು ಓದುತ್ತಿದ್ದಂತೆ ಉಸಿರು ಕಟ್ಟಿದಂತಾಯಿತು , ಎದೆ ನಡುಗತೊಡಗಿತು . ಜಾತಿ ಮತ್ತು ಹಣದಲ್ಲಿ ಮಧ್ಯಮ ವರ್ಗಕ್ಕೆ ಸೇರಿರುವ ನನ್ನಂತವರಿಗೆ ನಿಮ್ಮೊಡನೆ ಮಾತನಾಡಿದ ವ್ಯಕ್ತಿಗಳು ಬದುಕಿನಲ್ಲಿ ಕಂಡಿರುವ ಕ್ರೌರ್ಯ ಮತ್ತು ಪಟ್ಟಿರುವ ಯಾತನೆಗಳನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ .
    ನಾಟಕ , ಸಿನಿಮಾ ಮತ್ತು ಸಮಾಜದ ಆಗುಹೋಗುಗಳಲ್ಲಿ ನೀವು ಕಂಡಿರುವ ಹಾಗೂ ಕೇಳಿರುವ ಸಂಗತಿಗಳನ್ನು ಇದೇ ರೀತಿ ಬರೆಯಿರಿ .
    ಸಿ ಪಿ ನಾಗರಾಜ , ಬೆಂಗಳೂರು

    ಪ್ರತಿಕ್ರಿಯೆ
    • ಡಾ. ನಿಂಗು ಸೊಲಗಿ

      ರಮೇಶ್,
      ನಿಮ್ಮ ಬರಹ ತುಂಬಾ ಮೆಚ್ಚುಗೆಯಾಯಿತು. ಕಾವ್ಯ ಓದಿದ ಅನುಭವ. ಪ್ರತಿಯೊಂದು ಅಂಶವೂ ಅಂತಃಕರಣ ತಟ್ಟುವಂತಿದೆ. ಆದಿಮದ ಆಗುಹೋಗುಗಳ ಬಗ್ಗೆ ಅರಿವಿರುವ ನನಗೆ ಅಲ್ಲಿ ಕೆಲಕಾಲ ಕಳೆದ ಅನುಭವ ಮರುಕಳಿಸಿತು. ನಮ್ಮ ನೆಲದ ಸಾಂಸ್ಕ್ರುತಿಕ ರುಶಿಯಂತಿರುವ ರಾಮಯ್ಯನವರ ನೆಲದ ದನಿ ನಿಮ್ಮ ಬರಹದಲ್ಲಿ ಹೊರಹೊಮ್ಮಿದೆ.
      ಬಂಡೆಗಳ ನಡುವೆ

      ಪ್ರತಿಕ್ರಿಯೆ
  9. na.damodara shetty

    nimma baravanigege drishyatmakate ide. Rangabhuumiya kadegina nimma badhate shlaaghaniiya. monne rangaayanadalluu adannu thorisikottiri.

    ಪ್ರತಿಕ್ರಿಯೆ
  10. mamatha arsikere

    ನಿಮ್ಮ ಬರಹ ತುಂಬಾ ಇಷ್ಟವಾಯ್ತು ಸಾರ್. ನಿಮ್ಮೊಳಗೊಬ್ಬ ಎಷ್ಟು ಚಂದದ ವಿಮರ್ಶಕನಿದ್ದಾನೆ, ಬರಹಗಾರನಿದ್ದಾನೆ, ಆಪ್ತ ಸಲಹೆಗಾರನಿದ್ದಾನೆ.! nice ನೀವೀಗೆ ಬರೆಯುತ್ತಿದ್ದರೆ ಮತ್ತಷ್ಟು ಪ್ರಪಂಚದ ಬಣ್ಣಗಳನ್ನು ಕಾಣಬಹುದೆಂಬ ಆಶಯ ನಮ್ಮದು..

    ಪ್ರತಿಕ್ರಿಯೆ
  11. ನಾಗರಾಜ್ ಹೆತ್ತೂರ್

    ಜಾತಿ ವ್ಯವಸ್ಥೆ ಬಗ್ಗೆ ಮನತಟ್ಟುವ ಬರಹ.ಧನ್ಯವಾದಗಳು ರಮೇಶ್ ಸರ್.

    ಪ್ರತಿಕ್ರಿಯೆ
  12. G Venkatesha

    Namma Jnana vistaranege mattu vyakti vikasanakke Namagella Matthondu olleya Ankana sikkide. Avadhi balaga matthu Ramesh ravarige Dhanyavvadagalu

    ಪ್ರತಿಕ್ರಿಯೆ
  13. murali kati

    ರಾಮಯ್ಯ, ಅದಿಮ ನೆನಪಾದಗ ಅಪರಾಧಿ ಪ್ರಜ್ಞೆಯಿಂದ ಖಿನ್ನತೆ ಒಳಗಾಗುತ್ತೇನೆ. ನಾನು ಅಲ್ಲಿರಬೇಕಿತ್ತು ಅನ್ನಿಸುತ್ತದೆ. ಅದಿಮ ರಾಮಯ್ಯನವರು ಕಂಡ ಕನಸೇ ಇರಬಹುದು ಆದರೆ ಅದು ನಮ್ಮೇಲ್ಲರ ಕರ್ಮ ಭೂಮಿ ಆಗಬೇಕಿತ್ತು.. ಬದುಕಿನ ಹಲವು ಸೆಳೆತಗಳು ನನ್ನನ್ನು ಅಲ್ಲಿ ಹೊಗಲು ಬಿಡಲೇ ಇಲ್ಲ ಹಾಗೇ ಮತ್ತೇ ಎಲ್ಲೂ ಹೊಗಲೂ ಆಗಿಲ್ಲ. ಮುಂದೆ ನಾವು ಜಗತ್ತನ್ನು ‘ಅದಿಮ’ದ ದಾರಿಯಿಂದಲೇ ಪ್ರವೇಶಿಸಬೇಕಿದೆ. ಅದು ಕೇವಲ ಸಾಂಸ್ಕ್ರತಿಕ ಕೇಂದ್ರವಲ್ಲ ಅದು ಇವತ್ತಿನ ಹಾಗು ಭವಿಷ್ಯದ ಬದುಕು. ರಮೇಶ್ ಸರ್ ನಿಮ್ಮ ಬರಹಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ
  14. Raghunandan K

    ನಿಮ್ಮ ಬರಹದ ಶೈಲಿಯೋ ಅಥವಾ ಬರಹದ ಸಂಗತಿಯ ತೀವ್ರತೆಯೋ – ಕಾಡುತ್ತಿದೆ ನನ್ನನ್ನು…
    ಇಷ್ಟವಾಯಿತು ಬರಹ ಎಂದಷ್ಟೆ ಹೇಳಬಲ್ಲೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: