ಮಂಡ್ಯಾ ರಮೇಶ್ ಕಾಲಂ : ಹೀಗೊಂದು ಬೇಳೆಕಾಳಿನ ಪ್ರಸಂಗ

(ಇಲ್ಲಿಯವರೆಗೆ…)

ಎನ್.ಎಸ್.ಡಿ ಹುಡುಗರಿಗಾಗಿ ಕಾರಂತರು ಇಲ್ಲಿ ನಳದಮಯಂತಿ ನಿರ್ದೇಶಿಸಿದರು. ಅವರಿಗೆ ಕಂಸಾಳೆ ಹೇಳಿಕೊಡಲು ಬಂದ ಜನಪದ ಸಂಗ್ರಹಾಲಯದ ಕ್ಯುರೇಟರ್ ಶ್ರಿರಾಮಣ್ಣ ಮತ್ತು ಕಂಸಾಳೆ ಮಹದೇವಯ್ಯನವರ ಮಗನಾದ ಶ್ರೀ ಕುಮಾರಸ್ವಾಮಿ, ಮುಂದಿನ ಕೆಲ ದಿನಗಳಲ್ಲಿ ಕಂಸಾಳೆ ಹೇಳಿಕೊಟ್ಟರು. ನಮ್ಮಲ್ಲಿನ ಅನೇಕ ಹುಡುಗ-ಹುಡುಗಿಯರಿಗೆ ದೇಹದ ಲಾಲಿತ್ಯ, ಗಡುಸುತನದಲ್ಲೂ ವಿನ್ಯಾಸ ಮೂಡಿದ್ದು ಈ ಕಂಸಾಳೆಯ ಬೀಸು ತನದಲ್ಲಿ. ಭಕ್ತಿ ಭಾವದ ಆವೇಶ, ತನ್ಮಯತೆ, ಲಯಜ್ಞಾನ, ಇವೆಲ್ಲವೂ ಕಂಸಾಳೆಯ ಕಾಣಿಕೆ. ನಟವರ್ಗಕ್ಕೆ ಇದು ಎಷ್ಟು ಮುಖ್ಯ ಅಂತಾ ನಾನು ಬಿಡಿಸಬೇಕಾಗಿಲ್ಲ ಅಲ್ಲವೇ.?
ದೆಹಲಿಯಿಂದ ಹೆಚ್.ವಿ.ಶರ್ಮಾ ಎಂಬುವರು (ಕಾರಂತರಿಗೆ ಎನ್.ಎಸ್.ಡಿ.ಯಲ್ಲಿ ಕ್ಲಾಸ್ಮೆಟ್ ಆಗಿದ್ದ ಮನುಷ್ಯ ಈತ) ಮುಖವಾಡ ತಯಾರು ಮಾಡುವ ತರಗತಿಗಳನ್ನು ನಡೆಸುವ ಸಲುವಾಗಿ ಬಂದರು. ಮನುಷ್ಯರ ಬೇರೆ ಬೇರೆ ಮುಖಗಳು, ರಕ್ಕಸಿ, ನಾಯಿ, ಕೋತಿ, ಮೊಲ, ಹಸು, ಆನೆ…. ಹೀಗೆ ರಷ್ಟೊಂದು ಬಗೆಯ ಮುಖವಾಡಗಳನ್ನು ಸರಳ ರಟ್ಟು, ಮೈದಾ, ಗೋಂದು, ಇತ್ಯಾದಿ ವಸ್ತುಗಳನ್ನು ಬಳಸಿಕೊಂಡು ಮಾಡುವುದು ಹೇಗೆಂದು ತಾಳ್ಮೆಯಿಂದ ಹೇಳಿಕೊಟ್ಟರು. ಎಲ್ಲದಕ್ಕೂ ಲೆಕ್ಕಾಚಾರ, ರೇಖೆಗಳನ್ನು ಚಿತ್ರಿಸಿಕೊಳ್ಳುವುದರ ಮೂಲಕ ನೀಟ್ ಆಗಿ ಕತ್ತರಿಸಿ, ಮಯದಾದಲ್ಲಿ ಡಫ್ ಮಾಡಿಕೊಂಡು ಮುಖದ ಹಳ್ಳತಿಟ್ಟುಗಳನ್ನು ಬೇಕಾದ ರೀತಿ ಮಾಡಿ, ಪೇಪರ್ ಹಚ್ಚಿ, ಬಣ್ಣಗಳನ್ನು ಶೇಡ್ಸ್ ಚಿತ್ರಿಸಿದರೇನೆ… ಮುಖವಾಡಕ್ಕೆ ಮುಖ ಹೊಂದುವಂತೆ ಮಾಡಲು ಸರಳ ವಿಧಾನ ಹೇಳಿಕೊಟ್ಟರು.
ನಾವು ಕಿಂದರಿಜೋಗಿ ಇತ್ಯಾದಿಗಳಲ್ಲಿ ಮುಖವಾಡ ಧರಿಸಿ ಅಭಿನಯಿಸುತ್ತಿದ್ದರೂ, ಮುಖವಾಡದ ಪೂರ್ಣಮಹತ್ವದ ಅರಿವು ಮಾಡಿದ್ದು ರಘುನಂದನ್. ನಮ್ಮ ಕೈಯಲ್ಲಿ ಮುಖವಾಡದ ನಾಟಕವೊಂದನ್ನು ಮಾಡಿಸಲು ಹಗಲು ರಾತ್ರಿ ನಮ್ಮನ್ನು ತಿಕ್ಕಿ ತೀಡಿದಾಗ. ಃಎಚ್.ವಿ. ಶರ್ಮಾ ನಾವು ತಯಾರಿಸಿದ ಮುಖವಾಡವನ್ನೇ ಬಳಸಿ, ಅಶು ವಿಸ್ತರಣೆ ಮಾಡಿಸಿದ್ದರು. ಆದರೆ ರಘುನಂದನ್ ಮುಖವಾಡದ ಅಭಿನಯದ ಬಗೆಗೆ, ವಿಶ್ವರಮಗಭೂಮಿಯಿಂದ ನಮ್ಮ ಜಾನಪದ, ಚೈನಾ, ಜಪಾನ್… ತೀರಾ ಇತ್ತೀಚಿನ ಆಧುನಿಕ ರಂಗಭೂಮಿಯಲ್ಲಿ ಮುಖವಾಡಗಳನ್ನು ಬಳಸುತ್ತಿರುವ ಶಾಸ್ತ್ರೀಯ ಪದ್ದತಿ, ರೂಢಿಗತ, ಸಂಪ್ರದಾಯ, ಏಕಾಗ್ರ ಮನಸ್ಥಿತಿ, ಆವಾಹನೆ….. ಎಲ್ಲವನ್ನೂ ವಿವರವಾಗಿ ತಿಳಿಸಿ, ಜೊತೆಗೆ ಕಠಿಣ ಅಭ್ಯಾಸಗಳನ್ನು ಮಾಡಿಸಿ, ಜಾನಪದ ಕಥೆಯೊಂದನ್ನು ಅಶುವಿಸ್ತರಿಸಲು ಹೇಲಿ, ಅದನ್ನು ರಿಪೇರಿ ಮಾಡಿ, ಪ್ರದರ್ಶನ ಸಿದ್ಧಗೊಳಿಸಿದರು. ಸೂಕ್ತ ಸಂಗೀತ ಬಳಸಲು ಶ್ರಮಪಟ್ಟರು. ಮುಖವಾಡ ಧರಿಸಿದಾಗಲೂ ನಟ ತನ್ಮಯನಾಗಿ ಅಭಿನಯಿಸಲೇ ಬೇಕು. ಮತ್ತಷ್ಟು ಎಚ್ಚರದಿಂದ ಆಂಗಿಕ ಅಭಿನಯವನ್ನು ದೊಡ್ಡದಾಗಿ ಅರ್ಥವಂತಿಕೆ, ವಿನ್ಯಾಸ ಪೂಣ್ತೆಯಿಂದ ಬಳಸಬೇಕಾಗುತ್ತದೆ. ಕತ್ತು ಸೊಂಟ, ಮಣಿಕಟ್ಟು, ಕೀಲುಗಳಿಗೆ ಸಕತ್ತಾದ ಅಭ್ಯಾಸ, ಫ್ಲೆಕ್ಸಿಬಲಿಟಿ ದೊರಕಿದಾಗ ಮಾತ್ರ ಸಾಧ್ಯವಾಗುವುದು. ಮುಖವಾಡ ಧರಿಸಿದ ನಟ ಪ್ರತಿಕ್ಷಣದ ಅಭಿನಯದಲ್ಲೂ ಪ್ರಜ್ಞಾಪೂರ್ವಕವಾಗಿ ಮುಖವಾಡವನ್ನು ಪ್ರೊಜೆಕ್ಟ್ ಮಾಡಿ ಬಳಸಬೇಕಾಗುತ್ತದೆ. ವಜ್ರಸ್ಥಾನದಲ್ಲಿ ಪಾತ್ರನಿಂತು ಚಲಿಸಿದಾಗ ಸಿಗುವ ಶಕ್ತಿ, ವಿನ್ಯಾಸ ಎಷ್ಟು ಸತ್ಯ ಅಂತಾ ಈ ಪ್ರದರ್ಶನದಿಂದ ಕಂಡುಕೊಂಡಿದ್ದೇವೆ. ಕೆಲವು ಮುಖಗಳಿಗೆ ಪೂರ್ಣ ಬಳಿದೂ ಪ್ರಯೋಗ ಮಾಡಿದ ಈ ನಾಟಕಕ್ಕೆ ನಾವಿಟ್ಟುಕೊಂಡ ಹೆಸರು, ಬೇಳೆಕಾಳಿನ ಪ್ರಸಂಗ.
ದೆಹಲಿಯ ಶ್ರೀ ರಾಂ ಸೆಂಟರಿನಲ್ಲಿ ಎನ್.ಎಸ್.ಡಿ.ಯ ಅಭ್ಯಾಸೀ ಪ್ರಯೋಗಗಳು ನೋಡಲು ಸಿಕ್ಕವು. ಸೋಹ್ರಾಬ್ ರುಸ್ತಂ ಪಾರ್ಸಿ ಶೈಲಿಯಲ್ಲಿ ಪ್ರದರ್ಶಿತವಾದ ನಾಟಕ. ಇನ್ನೊಂದು ಸ್ಟುಡಿಯೋ ಥಿಯೇಟರ್ನಲ್ಲಿ ಬೆನವಿಟ್ಸ್ ನಿರ್ದೇಶನದ ಶೇಕ್ಸ್ಪಿಯರ್ನ ವಿನೋದ ನಾಟಕ ಟ್ವೆಲ್ತ್ನೈಟ್. ಪ್ರಸನ್ನ ಅವರ ತಿರಿಚ್ ಅನ್ನೋ ನಾಟಕವನ್ನೂ ನೋಡಿದೆವು. ವಸ್ತು, ತಂತ್ರ, ಆಲೊಚನೆ, ಎಲ್ಲದರಲ್ಲೂ ಹೊಸತನವಿದ್ದ ನಿಗೂಢ ನಾಟಕವದು. ಬಹುಶಃ ಇಂಡಿಯಾದ ಪ್ರಸ್ತುತ ನಿರ್ದೇಶಕರಲ್ಲಿ ನಾಟಕವೊಂದನ್ನು ರಂಗಕ್ಕೆ ತರುವಾಗ ಪ್ರಸ್ತುತತೆಯ ಆಳಚಿಂತನೆಯನ್ನು ಕಾಣಿಸಲು ಹೆಣಗಾಡುವ ಮತ್ತು ನಟರಿಗೆ ಸಬ್ಟೆಕ್ಸ್ಟ್ಗಳನ್ನು ಪ್ರಚೋದಿಸುವ ಕೆಲವೇ ಮಂದಿಯಲ್ಲಿ ಪ್ರಸನ್ನ ಮುಖ್ಯರೆನ್ನುವುದು ಸತ್ಯ. ಅವರು ತಿರುಗಾಟಕ್ಕೆ ಮಾಡಿಸಿದ ಹದ್ದುಮೀರಿದ ಹಾದಿ ನಾಟಕ ಬರ್ಗರ್ನ  ಸೆವೆನ್ತ್ಸೀಲ್ ಚಿತ್ರದ ವಸ್ತುವನ್ನೇ ಹೋಲುತ್ತಿದ್ದರೂ, ಮಂಡಿಸಿದ ರೀತಿ ಅಪ್ಪಟ ಭಾರತೀಯತೆಯನ್ನು ಹೊಂದಿತ್ತು.
ಕೊಡಗಿನಿಂದ ಕಾರ್ಯಪ್ಪನ ತಂಡ ಇಲ್ಲಿಗೆ ಬಂದು ನಾಟಕಗಳನ್ನು ಆಡಿದಾಗ ಇಕ್ಬಾಲ್ರ ಚಿಣ್ಣ-ಬಣ್ಣ ತಂಡದ ಮಕ್ಕಳ ನಾಟಕಗಳು, ಇಲ್ಲಿನ ಶಾಲೆಗಳಲ್ಲಿ ಪ್ರದರ್ಶನಗೊಂಡಾಗ, ನೀನಾಸಂ ತಿರುಗಾಟದ ನಾಟಕಗಳು ಪ್ರದರ್ಶನಗೊಂಡಾಗ, ನಾವೆಲ್ಲಾ ತಪ್ಪದೇ ಒಟ್ಟಾಗಿ ಕೂತು ನಾಟಕ ನೋಡಿದ್ದೇವೆ…. ಒಟ್ಟಿಗೆ ಕೂತು ಊಟಮಾಡಿದ್ದೇವೆ. ಪ್ರದರ್ಶನದ ತಂಡದ ಒಳಿತು ಕೆಡುಕುಗಳನ್ನು ನಿಷ್ಠೂರದಿಂದ, ವಿಶ್ವಾಸದಿಂದ ಚರ್ಚಿಸಿದ್ದೇವೆ.
ಸೋಲಿಗ ಮುದುಕನೊಬ್ಬ ತನ್ನ ಸೊಗಡಲ್ಲಿ ಕಥೆ ಹೇಳಿದ್ದನ್ನು ಕಣ್ಣರಳಿಸಿಕೊಂಡು ನೋಡಿದಂತೆ… ಅಮೇರಿಕನ್ ಮಹಿಳೆಯೊಬ್ಬಳು ತನ್ನ ಹಾವಭಾವಗಳಲ್ಲಿ ಕಥೆ ಕಟ್ಟಿ ನಮ್ಮನ್ನು ನಂಬಿಸಿದ್ದೂ ನೆನಪಿದೆ. ರಂಗಭೂಮಿಯಲ್ಲಿ ಸೋದರತ್ವ ಅನ್ನೋದು ಬರೀ ಘೋಷಣೆಯಾಗದೇ, ವಿಶ್ವಾಸದ ನಡವಳಿಕೆಯಾಗಬೇಕು ಎನ್ನುವ ಕಾರಂತರ ಉದ್ದೇಶ ಬೇರೆ ಬೇರೆ ಬಗೆಯಲ್ಲಿ ವ್ಯಕ್ತವಾಗಿದೆ.
ಭಣಭಣಗುಟ್ಟುತ್ತಿದ್ದ ಕಲಾಮಂದಿರದ ಮೇಲ್ಮನೆಯ ವಿಶಾಲಜಾಗ ಈಗ ವಿಶ್ವರಂಗಭೂಮಿಯ ಬಗೆಬಗೆಯ ಸೊಗಸಾದ ಪೋಸ್ಟ್ರ್ಗಳಿಂದ ತುಂಬಿದ ಜಕ್ಕಣ ಕಲಾಶಾಲೆ ಗ್ಯಾಲರಿಯಾಗಿದೆ. ಎರಡೂ ಕಡೆ ಮೆಟ್ಟಿಲು ಹತ್ತುವಾಗ ಶ್ರೀ ಗುಬ್ಬಿವೀರಣ್ಣ, ಶ್ರೀ ವರದಾಚಾರ್ಯರ ಆಳೆತ್ತರದ ಭಾವಚಿತ್ರಗಳು ಸ್ವಾಗತಿಸುತ್ತವೆ.

ರಂಗಾಯಣದ ಕಛೇರಿ ಮುಂದೆ ಎತ್ತರದ ಜೋಗಿ ಕಿಂದರಿ ಹಿಡಿದು ನಿಂತಿದ್ದಾನೆ…. ಆವರಣದ ಮೂಲೆಯಲ್ಲಿ ಕಟ್ಟೆ, ಕೊಳ, ಟೆರ್ರಾಕೋಟ ಬೊಂಬೆಗಳು ತುಂಬಿವೆ. ಮತ್ತೊಂದು ಅಚ್ಚರಿ ಎಂದರೆ, ಈ ಕಲಾಮಂದಿರದ ನಿರ್ಮಾಣಕ್ಕೆ ಖರ್ಚು ಮಾಡಿರುವುದು ಸುಮಾರು ನಾಲ್ಕು ಕೊಟಿ!
ರಂಗಾಯಣ ಇಲ್ಲಿ ನೆಲೆಗೊಂಡ ನಂತರ ನಾವು ನಮ್ಮ ಪೂರ್ವರಂಗಕ್ಕೂ ಪ್ರಯೋಗಗಳಿಗೆ ಸಿದ್ಧಪಡಿಸಿದ ಮನಸೆಳೆವ ಮರಗಳ ನಡುವಿರುವ ವನರಂಗ, ಅಖಾಡದಂತಿರುವ ದುಂಡುಕಣ, ಅತೀದೊಡ್ಡ  ಜನಪದರಂಗ, ಇಂಟಿಮೇಟ್ ಥಿಯೇಟರ್ಗೆ ಹತ್ತಿರಾಗುವ ಭೂಮಿಗೀತ…. ಈ ನಾಲ್ಕೈದು ರಂಗಮಂದಿರಗಳಿಗೆ ರಂಗಾಯಣ ಖರ್ಚು ಮಾಡಿರುವುದು ಹತ್ತಿರ ಹತ್ತಿರ ಒಂದು ಲಕ್ಷ ಮಾತ್ರ. ಇವ್ಯಾವು ಸಿಮೆಂಟ್ನ ಭದ್ರತೆಯಿಲ್ಲದಿರಬಹುದು.(ಪ್ರಯೋಗ ಬದಲಾವಣೆಯ ದ್ಯೋತಕವಾದ್ದರಿಮದ ಆ ಶಾಶ್ವತೆಯೂ ಅನವಶ್ಯಕ) ಆದರೆ ಪ್ರೇಕ್ಷಕರಿಗೆ, ನಟ, ನಿರ್ದೇಶಕರಿಗೆ ಹೊಸ ಹೊಸ ಕಲ್ಪನೆಯ ಕುರುಹಾಗಿ ಈ ರಂಗಮನೆಗಳು ಸಿದ್ಧವಾಗುತ್ತಿರುತ್ತವೆ.
ಕಲಾಮಂದಿರದ ಮೂಲೆಮೂಲೆಯನ್ನೂ ಹುಡುಕಿ ಅಲ್ಲೆಲ್ಲಾ ಅಶುವಿಸ್ತರಣೆ, ನಾಟಕಗಳನ್ನು ಮಾಡುತ್ತಾ, ಉಪಯೋಗ ಮಾಡಿಕೊಳ್ಳಲು ರಂಗಾಭ್ಯಾಸಿಗಳು ಯೋಚಿಸಿದ್ದದ್ದಿದೆ. ಒಮ್ಮೆ ಹಿಪೋಲಿಟಸ್ ನಾಟಕ್ಕಾಗಿ ಕಟ್ಟಿದ ಸೆಟ್ ಅನ್ನು ಮತ್ತೊಂದು ಮಕ್ಕಳ ನಾಟಕ ಮರಹೋತು ಬರ ಬಂತು ಢುಂ ಢುಂ ಢುಂ ಈ ಪ್ರಯೋಗಕ್ಕಾಗಿ ಸಿದ್ಧಪಡಿಸಬೇಕಾದ ಸಂದರ್ಭ ಬಂತು. ಸೆಟ್ನ ಯಾವ ಮೂಲೆಯನ್ನೂ ಕೆಡವದೆ ಇಡೀ ಸೆಟ್ನ್ನು… ಅಂದರೆ, ಅರಮನೆಯನ್ನು ಅರಣ್ಯವಾಗಿ ರೂಪಿಸಿದ ಬಗೆ ಸೊಗಸಾದ ಅನುಭವ. ಜೊಂಡುಹುಲ್ಲು, ಪೇಪರ್, ಮೈದಾ ಪೇಸ್ಟ್ ಇವು ನಮ್ಮ ಸಾಧನಗಳು. ನಿಜವಾದ ಗರಿಕೆಹುಲ್ಲು ಬೆಳಸಿ, ರಾಗಿಪೈರನ್ನು ಚಿಗುರಿಸಿ, ಮರದ ಬೊಡ್ಡೆ, ಬಿಳುಲುಗಳು… ಇಡೀ ಜಾಗವನ್ನು ಹಸಿರುಮಯ ಮಾಡಲು ಹುಡುಗರು ತೆಗೆದುಕೊಂಡ ಕ್ರಮ ಅಪಾರವಾದದ್ದು. ವನರಂಗದ ಛಾಯೆಯನ್ನು ಬದಲಿಸಿಬಿಟ್ಟಿದ್ದೆವು. ಎಲ್ಲಾ ಸಿದ್ಧವಾಗಿ ಸೆಟ್ ಕಣ್ಣುತುಂಬುತ್ತಿದ್ದವು…. ನಾಳೆ ನಾಟಕ, ಇವತ್ತು ಮಧ್ಯ ರಾತ್ರಿ ಮಳೆ! ಮನೆಯಲ್ಲಿ ಮಲಗಿದ್ದವರು ರಾತ್ರೋ ರಾತ್ರಿ ಧಡಬಡ ಓಡಿ ಬಂದು, ಸೆಟ್ಗೆ ಛತ್ರಿ ಹಿಡಿದು, ಟಾಪರ್ಾಲಿನ್ ಹೊದೆಸಿ, ಏನೇನೋ ತಿಪ್ಪುರಲಾಗ ಹಾಕಿದ್ದರೂ, ಮಳೆರಾಯನ ಮುಂದೆ ನಾವು ಸೋತಿದ್ದೆವು. ಸೆಟ್ ಕುಸಿದುಬಿತ್ತು. ಮತ್ತೆ ಮಾರನೇ ಬೆಳಿಗ್ಗೆ ಸೆಟ್ ಕೆಲಸಕ್ಕೆ ರೆಡಿ! ಸೆಟ್ ಚೆನ್ನಾಗಿತ್ತು. ಲೈಟ್ ಕೂಡ ಆದ್ರೆ…. ನಾಟಕ ಬರೀ ಅಶುವಿಸ್ತರಣೆಯಿಂದಲೇ ಬೆಳೆದು, ಕಥೆಯ ಸ್ಪಷ್ಟ ಬೆಳವಣಿಗೆಗೆ ನಿಧರ್ಿಷ್ಟ, ಖಚಿತ ರೂಪಗಳಿಲ್ಲದೆ ಸೋತುಬಿಟ್ಟಿತ್ತು. ಸಂಗೀತ ಇಂಪಾಗಿತ್ತು. ಆದರೆ, ಒಟ್ಟು ನಾಟಕ ಸಮಸ್ಯೆಯ ಆಳ ಮುಟ್ಟದೆ, ಮೇಲ್ಪದರದ ಟೊಳ್ಳು ವಿಡಂಬನೆಯಾಗಿ…. ಕೊಂಚ ರಂಜಿಸಿ, ಸುಮ್ಮನಾಗಿಬಿಟ್ಟಿತ್ತು. ಈ ಸೋಲಿಗೆ ನಾವು ಖಂಡಿತಾ ಧೃತಿಗೆಡಲಿಲ್ಲ. ಅದಕ್ಕೆ ಬಿಡುವೂ ಸಹ ಇರಲಿಲ್ಲ. ಮುಂದಿನ ಪ್ರದರ್ಶನಕ್ಕಾಗಿ ಆಗಲೇ ತಯಾರಿ ಮಾಡಿಕೊಳ್ಳುತ್ತಿದ್ದೆವು.
ಅಷ್ಟರಲ್ಲಾಗಲೇ ನಮಗೆ ಕತ್ತಿವರಸೆ, ದೊಣ್ಣೆವರಸೆ, ಕರಾಟೆ, ಜೂಡೀ ಇತ್ಯಾದಿಗಳನ್ನು ಸಮರಕಲೆಗಳನ್ನು ಮಣಿಪುರದ ಅಂಜುಸಿಂಗ್ ಹೇಳಿಕೊಡಲು ಪ್ರಾರಂಭಿಸಿದ್ದರು. ಕತ್ತಿವರಸೆಯ ಖಟ್ಟಾಗಳು, ಕರಾಟೆಯ ಸ್ಟೆಪ್ಸ್ಗಳು ಈತ ಹೇಳಿಕೊಡುವಾಗ ನಾವು ಮಾಡುವುದನ್ನೇ ಮರೆತು ನೋಡುತ್ತಾ ನಿಲ್ಲುತ್ತಿದ್ದೆವು. ಸೊಗಸಾದ ದೇಹವಿನ್ಯಾಸ, ಚುರುಕುತನ, ಮಿಂಚಿನಂತಹ ಚಾಕಚಕ್ಯತೆ, ಪಫರ್ೆಕ್ಟ್ ಆದ ಪೋಸ್ಗಳು…. ಅದೆಷ್ಟು ವರ್ಷದ ಸಾಧನೆಯೋ ಗೊತ್ತಿಲ್ಲ. ಈತ ತೋರಿಸಿಕೊಡುವಾಗಲೆಲ್ಲಾ, ತುಂಬಾ ಹೊಟ್ಟೆಕಿಚ್ಚುಪಟ್ಟಿದ್ದೇನೆ. ಸಿನೆಮಾ ಸ್ಟಂಟ್, ಹೊಡೆದಾಟಗಳ ನಾಲ್ಕಾರು ಬಗೆಗಳನ್ನು ತೋರಿಸಿಕೊಟ್ಟಿದ್ದರು. ಭೂಪಾಲ್ನಿಂದ ಚಿದ್ದುಮಣಿ ಅಂತಾ ಒಬ್ರು ಬಂದ್ರು, ಅಂಜುಸಿಂಗ್ ಎಷ್ಟು ಮೌನಿಯೋ, ಈತ ಅಷ್ಟೇ ಮಾತುಗಾರ, ಬುದ್ಧಿವಂತ, ನಮ್ಮನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸಿದ. ಸಮ್ಮರ್ಸಾಲ್ಟ್, ಮುಂಬದಿ, ಹಿಂಬದಿ ಲಾಗಾಗಳು, ಬಗೆಬಗೆಯ ಪಲ್ಟಿಗಳು, ಜಂಪ್ಸ್… ಉರಿಯುತ್ತಿರುವ ಬೆಂಕಿಯ ಚಕ್ರದ ನಡುವೆ ನಮ್ಮವರು ಹಾಋಇ ಪಲ್ಟಿಹೊಡೆಯುವುದು…. ನಮ್ಮ ಹೆಣ್ಣು ಮಕ್ಕಳು ಕತ್ತಿವರಸೆಯನ್ನು ವೀರಾವೇಶದಿಂದ ಮಾಡಬಲ್ಲಷ್ಟೇ ಸರಾಗವಾಗಿ ಕಬ್ಬಿಣದ ಸರಳನ್ನು ಎದೆಗೂಡಿನಿಂದ ಬಗ್ಗಿಸಿ ಒಗೆಯಬಲ್ಲರು! ನಾನಂತೂ ಎಲ್ಲ ತರಬೇತಿಗಳ ಪರಿಣಾಮವಾಗಿ ಎದೆಮೇಲೆ ಚಪ್ಪಡಿ ಇರಿಸಿಕೊಂಡು ಎದುರಾಳಿಯ ಕೈನಿಂದ ಬಲವಾದ ಸುತ್ತಿಗೆಯಿಂದ ಎತ್ತಿಹೊಡೆದು ಚಪ್ಪಡಿ ಎರಡಾಗಿಸಬಲ್ಲೆ ಎನ್ನಚಷ್ಟು ಆತ್ಮವಿಶ್ವಾಸ ಮೂಡಿದೆ.
ಇದೆಲ್ಲಾ ಯಾಕೆ? ಸರ್ಕಸ್? ಅಂತೀರಾ….?
ನಟ/ನಟಿ ಯಾಋಏ ಆಗಲಿ, ತನ್ನ ದೇಹದ ರೇಂಜ್, ಆತ್ಮವಿಶ್ವಾಸ, ಚುರುಕುತನವನ್ನು ಜಾಗೃತಗೊಳಿಸಿಕೊಳ್ಳಲು ಈ ಹೋರಾಟ, ಈ ಆಕ್ರೋಬ್ಯಾಟಿಕ್ಸ್ ಎಲ್ಲಾ ಬೇಕು. ವೇಗದ ಕ್ಷಣದಲ್ಲೂ ಖಚಿತತೆ ಎಲ್ಲದೆಹೋದರೆ, ಎಷ್ಟೆಲ್ಲಾ ಅನಾಹುತವಾಗಿಬಿಡುತ್ತದೆ ಈ ರಂಗದಲ್ಲಿ. ಆ ಅಭ್ಯಾಸ ತಪ್ಪಿಸಲು ಟೈಮಿಂಗ್ ವಿತ್ ಮೈಮಿಂಗ್ನ ಪ್ರಯೋಗ ಕರಗತವಾಗಲು ಇಷ್ಟೆಲ್ಲಾ ಹೋರಾಟ. ಇ ತರಬೇತಿಯಲ್ಲಿ ತಲೆ, ಕೈಬೆರಳ ಗಣಿಗೆಗೆ ಏಟು ಮಾಡಿಕೊಳ್ಳುವುದರಲಿ, ಮಂಡಿಚಿಪ್ಪಿನ ಜಾರುವಿಕೆಗೆ ಬಲಿಯಾಗಿ ತಿಂಗಳುಗಟ್ಟಲೆ ನೋವಿನಿಂದ ಆಸ್ಪತ್ರೆ ಕಂಡವರಿದ್ದಾರೆ. ಬೆಂಕಿಯ ಚಕ್ರದಲ್ಲಿ ಹಾರುವಾಗ, ಬೆನ್ನುಮೂಳೆಗೆ ಪೆಟ್ಟಾಗಿ ನನ್ನ ಕಥೆಯೇ ಮುಗಿಯಿತೆಂದುಕೊಳ್ಳುವಾಗ… ಅದೃಷ್ಟವಶಾತ್ ಬಚಾವ್ ಆಗಿದ್ದು ನೆನೆದರೇ… ಇಲ್ಲಾ! ಇನ್ನೊಮ್ಮೆ ಹಾರಿ ನೊಡಬೇಕು ಅನ್ನಿಸುತ್ತೆ.!!
ದುಮಡುಕಣದ ನಮ್ಮ ರಣರಂಗದ ಹೋರಾಟ ಜನರಿಗೆ ರೊಮಾಂಚನಕಾರಿಯಾಗಿ ಕಂಡರೂ, ಕತ್ತಿಗಳು, ಸಮುರಾಯ್ಗಳು, ದೊಣ್ಣೆಗಳಲ್ಲಿ, ನಮ್ಮ ಕಲಿಗಳು ರೋಷಾವೇಶದಿಂದ (ಲೆಕ್ಕಾಚಾರದಲ್ಲಿ) ಹೋರಾಡಿದರೂ…. ಕಾಋಂತರಿಗೆ ಮಾತ್ರ ಸಮಾಧಾನವಾಗಲೇ ಇಲ್ಲ! ಅವರು ನಮ್ಮನ್ನು ಮಣಿಪುರದ ಕಲಿಗಳಿಗೆ ಹೋಲಿಸಿ, ವರ್ಷವಿಡೀ ಬೈಯುತ್ತಲೇ ಇದ್ದರು,!
ಒಮ್ಮೆ ನಾವೆಲ್ಲಾ ಕುವೆಂಪುರವರ ಮನೆಗೆ ಹೋಗಿ ಕಿಂದರಜೊಗಿ ಹಾಡಿದ್ದೆವು. ಅತೀ ಸಮೀಪದಿಂದ ಅವರ ಕಣ್ಣುಗಳನ್ನು ಗಮನಿಸಿದೆ. ಕ್ಷಣಕಾಲ ತಡೆದು ಅವರೆಂದಿದ್ದರು. ಅವರು ಇಪ್ಪತೈದರ ಹರೆಯದಲ್ಲಿದ್ದಾಗ ಒಮ್ಮೆ ತೀರಾ ಜ್ವರ ಬಂದು ಮಲಗಿದ್ದಾಗ, ಎದ್ದು ಕೂತು ನಾಲ್ಕೈದು ಘಂಟೆಗಲ ಅವಧಿಯಲ್ಲಿ ಬೊಮ್ಮನಹಳ್ಳಿಯನ್ನು ಬರೆದಿದ್ದರಂತೆ. ಇದನ್ನು ಕೇಳಿ ನಾನು ದಿಗ್ಭ್ರಾಂತನಾಗಿದ್ದೆ.!
ಸಂಸ್ಕೃತಿ ಶಿಬಿರದಲ್ಲಿ ಶಿವರಾಮಕಾರಂತರ ಖಡಕ್ಕಾದ ಮಾತುಗಳನ್ನು ಕೇಳಿ ಅವಕ್ಕಾಗಿದ್ದೆವು! ಸಮಾಜದ ಎಲ್ಲಾ ಕ್ಷೇತ್ರಗಳನ್ನು ತನ್ನ ಬದುಕಿನಲ್ಲಿ ಬೆಸೆದುಕೊಂಡ ಇಂಡಿಯಾದ ಅಗ್ರಮಾನ್ಯ ವ್ಯಕ್ತಿ!
ಕಾರ್ನಾಡರು, ಶಾಂತಿನಾಥ ದೇಸಾಯಿ, ಶಂಭುಮಿತ್ರ,….. ಹೀಗೆ ಎಂಥೆಂಥವರನ್ನು ಕಾಣುವ, ಕೇಳುವ ಅವಕಾಶ ಎಲ್ಲೆಲ್ಲಿದ್ದರೂ ಬಿಡದೆ ದೋಚಿಕೊಂಡಿದ್ದೇವೆ.
ಶ್ರೀರಂಗರ ನಾಟಕಗಳ ಖ್ಯಾತಿಯ ಸಾಗರದ ಮಸೂರ್, ಅವರ ಮನೆಗೆ ಹೋಗಿ ನಮ್ಮ ಕ್ಷೇಮಾನಿಧಿಯ ನೆರವು ಹಣವನ್ನು ನೀಡಿ, ಕೊಂಚ ಧನ್ಯತಾಭಾವದಿಂದ ವಾಪಾಸ್ಸಾಗಿದ್ದೇವೆ.
ಸಿಂಹ, ಲೋಕೇಶ್, ಸುಂದರರಾಜ್, ನೀನಾಗುಪ್ತಾ, ಉಮಾಶ್ರೀ, ವಾಣಿ ಗಣಪತಿ, ….. ಇತ್ಯಾದಿಗಳೆದುರು ಬಂದಾಗಲೂ ನಾವು ಕೇಳಿದೊಡನೆ ನಮ್ಮ ಕ್ಷೇಮನಿಧಿಗೆ ಹಣ ಕೊಡುವ ಕೃಪೆ ಮಾಡಿದ್ದಾರೆ,
(ಮುಂದುವರೆಯುವುದು…)
 

‍ಲೇಖಕರು avadhi

August 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: