ಸುಗತ ಬರೆಯುತ್ತಾರೆ: ಕವಿಯೊಂದಿಗೆ ನಾವು ಮೃದುವಾಗಿ ವ್ಯವಹರಿಸೋಣ

ಸುಗತ ಶ್ರೀನಿವಾಸರಾಜು

ಕವಿ ಮಾತಿಗೆ ಸಾವಿಲ್ಲ ನಿಜ. ಆದರೆ ಕವಿಯ ಕುರಿತಾದ ಮಾತಿಗೂ ಕೊನೆಯಿಲ್ಲ ಎಂಬುದು ಪಬ್ಲೋ ನೆರೂಡನ ವಿಚಾರಕ್ಕೆ ಬಂದಾಗ ಸತ್ಯವೆನಿಸುತ್ತದೆ. ನಲವತ್ತು ವಷಗಳ ಹಿಂದೆ (23 ಸೆಪ್ಟೆಂಬರ್ 1973) ತೀರಿಕೊಂಡ ಈ ಸ್ಪ್ಯಾನಿಷ್ ಭಾಷೆಯ, ಎಡಪಂಥೀಯ ವಿಚಾರಧಾರೆಯ ಮಹಾಕವಿಯ ಮೂಳೆಗಳನ್ನು ಮಾತನಾಡಿಸಲು ಹೊರಟಿದ್ದಾರೆ ಚಿಲಿ ದೇಶದ ಜನ.
ಮನುಷ್ಯನ ಅನುರಾಗವನ್ನು, ಪ್ರೀತಿ, ಹತಾಶೆ, ಸಂಘರ್ಷ, ಶೃಂಗಾರವನ್ನು ಮತ್ತು ಆವುಗಳೊಂದಿಗೆ ಚರಿತ್ರೆ ಹಾಗೂ ಸಂಪ್ರದಾಯಗಳ ಒಡನಾಟವನ್ನು ತನ್ನ ಭಾವಪೂರ್ಣ ಭಾಷೆಯಲ್ಲಿ ಹಿಡಿದಿಟ್ಟ ಕವಿ, ಮುಂದೊಂದು ದಿನ ತನ್ನ ಮೂಳೆಗಳ ಮೂಲಕವೂ ಮಾತನಾಡಬೇಕಾಗಿ ಬರಬಹುದು ಎಂದು ಬಹುಶಃ ಎಣಿಸಿರಲಿಲ್ಲ. ನನಗೆ ಬಹಳ ಪ್ರಿಯವಾದ ಆತನ ‘The Heights of Macchu Picchu’ ಕವನದಲ್ಲಿ ಹೀಗೆ ಹೇಳುತ್ತಾನೆ:
ಕಲ್ಲಾಗಿ ಮೈದೆಳೆದಿರುವ ನೀನು ಮತ್ತೆ ಹಿಂದಿರುಗುವುದಿಲ್ಲ
ಕಾಲದ ಪಾತಾಳ ಗರ್ಭದಿಂದ ನೀನು ಮತ್ತೆ ಚಿಮ್ಮುವುದಿಲ್ಲ
ನಿನ್ನ ಒರಟು ದನಿಯ ರಭಸ ಹಿಂದಿರುಗುವುದಿಲ್ಲ
ಕೊರೆದು ಕೂಡಿಸಿದ ನಿನ್ನ ಕಣ್ಣುಗಳೂ ಏಳುವುದಿಲ್ಲ ಆ ಕುಳಿಗಳಿಂದ…
ಆದರೆ, ಈಗ ಅವನು ಎದ್ದು ಬಂದಿದ್ದಾನೆ. ಚಿಲಿ ದೇಶದೆಲ್ಲೆಡೆ, ಜಗತ್ತಿನ ಕಾವ್ಯಪ್ರಿಯರ ನಡುವೆ ಅವನದೇ ಮಾತು. ಅವನ ಕಾವ್ಯದ ಸಾಲುಗಳು ನಮ್ಮ ಅಸ್ತಿತ್ವದ ಆಳಕ್ಕೆ ಇಳಿದಿದ್ದವು. ಇಂಗ್ಲಿಷಿನ ನುಡಿಗಟ್ಟಿನಲ್ಲಿ ಹೇಳುವುದಾದರೆ, ನಮ್ಮ ಅಸ್ಥಿಮಜ್ಜೆಯನ್ನು ಸ್ಪರ್ಶಿಸಿದ್ದವು. ಕವನದ ಸಾಲುಗಳಿಗೂ, ಮೂಳೆಗಳಿಗೂ ಹೀಗೊಂದು ಸಂಬಂಧವಿದೆ. ಈಗ ಅವನ ಮೂಳೆಗಳು ಮಾತನಾಡಬೇಕಿದೆ.

ಪಬ್ಲೋ ನೆರೂಡ ಸತ್ತದ್ದು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ನಿಂದಲೋ ಅಥವಾ ವಿಷಪೂರಿತ ಚುಚ್ಚುಮದ್ದಿನಿಂದಲೋ ಎಂಬ ಜಿಜ್ಞಾಸೆ 2011ರಲ್ಲಿ ಶುರುವಾಯ್ತು. ಅದು ನ್ಯಾಯಾಲಯದ ಮೆಟ್ಟಿಲನ್ನೂ ಏರಿತು. ಏಪ್ರಿಲ್ 2013ರ ಹೊತ್ತಿಗೆ ಸ್ಯಾಂಟಿಯಾಗೋದ ನ್ಯಾಯಮೂರ್ತಿ ಮ್ಯಾರಿಯೊ ಕರೋಜ ನೆರೂಡನ ದೇಹವನ್ನು ಹೊರತೆಗೆದು ಪರೀಕ್ಷಿಸಬೇಕು ಎಂಬ ತೀರ್ಪನಿತ್ತರು. ಕವಿಯ ಸಾವಿನ ಕುರಿತಾದ ಅನುಮಾನವನ್ನು ಮೊದಲು ವ್ಯಕ್ತಪಡಿಸಿದ್ದು ಅವನ ಮಾಜಿ ಅಂಗರಕ್ಷಕ ಮತ್ತು ಕಾರು ಚಾಲಕ. ಆತನ ಹೆಸರು ಮ್ಯಾನುಯೆಲ್ ಆರಾಯ. ಈ ನಿಕಟವರ್ತಿಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ವಕೀಲ ಎಡ್‌ವಾರ್ಡ್‌ಡೊ ಕಾನ್‌ಟ್ರಿಯಸ್.
ನೆರೂಡ ಸಾವಿನ ಸುತ್ತ ಇರುವ ಗುಮಾನಿಗೆ ಚಾರಿತ್ರಿಕ ಕಾಕತಾಳೀಯಗಳು ಮತ್ತು ಕಾರಣಗಳಿವೆ. ಆತನ ಸಾವು ಸಂಭವಿಸಿದ್ದು ಸೇನೆಯ ಕ್ಷಿಪ್ರ ಕ್ರಾಂತಿಯ ಮೂಲಕ ಜನರಲ್ ಆಗಸ್ತೋ ಪಿನೋಷೆ ಸ್ಯಾಲ್‌ವದೋರ್ ಅಯೆಂದೇ ಸರಕಾರವನ್ನು ಚಿಲಿಯಿಂದ ಹೊರದಬ್ಬಿ, ತನ್ನನ್ನು ತಾನು ಸರ್ವಾಧಿಕಾರಿಯಾಗಿ ಪ್ರತಿಷ್ಠಾಪಿಸಿಕೊಂಡ ಎರಡು ವಾರಗಳ ನಂತರ. ಆ ಹೊತ್ತು ನೆರೂಡಗೆ ಕ್ಯಾನ್ಸರ್ ಇದ್ದದ್ದು ನಿಜ, ಆದರೆ ಆತ ಸಾವಿನ ಅಂಚನ್ನು ತಲುಪಿರಲಿಲ್ಲ ಎಂದು ಅವನ ನಿಕಟವರ್ತಿಗಳು ಪ್ರತಿಪಾದಿಸುತ್ತಾರೆ. ಅದೇ ಹೊತ್ತು ನೆರೂಡ ಚಿಲಿ ಬಿಟ್ಟು ಪಕ್ಕದ ಮೆಕ್ಸಿಕೋ ದೇಶಕ್ಕೆ ಹೋಗಿ ನೆಲೆಸಬೇಕು ಎಂದು ಭರದ ತಯಾರಿ ನಡೆಸಿದ್ದ. ಆ ದಿನಗಳಲ್ಲಿ ಅಧ್ಯಕ್ಷ ಅಯೆಂದೇ ಸ್ನೇಹಿತನಾದ ನೆರೂಡ ಜನರಲ್ ಪಿನೋಷೆಯ ಅಧಿಕಾರದ ಮೊದಲ ಹೆಜ್ಜೆಗಳನ್ನು ಬಹಳ ಉತ್ಸಾಹದಿಂದ ವಿಶ್ಲೇಷಿಸುತ್ತಿದ್ದ, ಅಂದರೆ ಅವನ ಮನಸ್ಸು ಚೆನ್ನಾಗಿ ಕೆಲಸ ಮಾಡುತ್ತಿತ್ತು. ಆತ ಸಾಯುವ ಇಪ್ಪತ್ತು ನಾಲ್ಕು ಗಂಟೆಗಳ ಮುನ್ನ ತನ್ನ ಪ್ರಿಯತಮೆಯೊಂದಿಗೆ ಕೂಡಿದ್ದ ಎಂಬಿತ್ಯಾದಿ ಖಾಸಗಿ ವಿಚಾರವೂ ಈಗ ಅವನ ‘ಕೊಲೆ’ಗೆ ಮತ್ತು ಅವನ ಆರೋಗ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.
ಕವಿ ನೆರೂಡ ಪಿನೋಷೆಯ ಮಿಲಿಟರಿ ಸರಕಾರದ ವಿರುದ್ಧ ಜಗತ್ತಿನಾದ್ಯಂತ ಹುಯಿಲೆಬ್ಬಿಸಬಹುದು ಎಂಬ ಶಂಕೆ ಇದ್ದದ್ದರಿಂದ ಅವನನ್ನು ಹತ್ಯೆ ಮಾಡಿಸಲಾಯಿತು; ಡಾ. ಪ್ರೈಸ್ ಎಂಬುವವನು ಅವನಿಗೆ ವಿಷದಿಂದ ಕೂಡಿದ ಚುಚ್ಚುಮದ್ದು ಕೊಟ್ಟ ಎಂಬ ಸಂಚಿನ ಸಿದ್ಧಾಂತ ಚಿಲಿಯಾದ್ಯಂತ ಈಗ ಚಲಾವಣೆಯಲ್ಲಿದೆ. ಏಪ್ರಿಲ್ 30ರಂದು ಹೊರತೆಗೆದಿದ್ದ ನೆರೂಡನ ಅವಶೇಷಗಳ ಕೆಲವು ಭಾಗಗಳನ್ನು ಹಲವು ದೊಡ್ಡ ದೇಶಗಳಿಗೆ ತಪಾಸಣೆಗೆ ಕಳಿಸಲಾಗಿದೆ. ಅಗತ್ಯ ಬಿದ್ದರೆ ಭಾರತಕ್ಕೂ ಕಳಿಸಿ ಪರೀಕ್ಷಿಸಲಾಗುವುದು ಎಂದು ಚಿಲಿ ಸರಕಾರ ತಿಳಿಸಿದೆ. ಈಗ ಒಂದು ವಾರದ ಹಿಂದೆ ಬಂದ ತಪಾಸಣೆಯ ಪ್ರಾಥಮಿಕ ವರದಿಯಲ್ಲಿ ನೆರೂಡಗೆ ಕ್ಯಾನ್ಸರ್ ಇದ್ದದ್ದು ಖಾತ್ರಿಯಾಗಿದೆ. ಆದರೆ ಅವನ ದೇಹದಲ್ಲಿ ವಿಷವಿತ್ತೇ ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಕೆಲವು ವಾರಗಳು ಕಾಯಬೇಕಾಗಿದೆ.

ಕವಿ ನೆರೂಡ ಭಾರತಕ್ಕೆ ಎರಡು ಬಾರಿ ಬಂದಿದ್ದ. ರಾಜತಾಂತ್ರಿಕ ಹುದ್ದೆಯಲ್ಲಿದ್ದ ಅವನು ಕೇವಲ ಕವಿಯಾಗಿ ಬಾರದೆ ರಾಯಭಾರಿಯಾಗಿಯೂ ಬಂದಿದ್ದ. ಭಾರತಕ್ಕೆ ಬರುವುದರ ಜೊತೆಗೆ ಅವನು ಬೆಂಗಳೂರಿಗೂ ಬಂದಿದ್ದ ಎಂಬ ವಿಚಾರ ಅನೇಕರಿಗೆ ತಿಳಿಯದೇ ಇರಬಹುದು. ಮೊದಲು ಅವನ ಬೆಂಗಳೂರಿನ ಭೇಟಿಯ ಬಗ್ಗೆ ತಿಳಿದಿರುವ ಕೆಲವು ಮಾಹಿತಿಯನ್ನು ಹಂಚಿಕೊಂಡು, ಅವನ ಭಾರತ ಯಾತ್ರೆಯ ಬಗ್ಗೆ ನಂತರ ಮಾತನಾಡುತ್ತೇನೆ.
ನನಗೆ, ನೆರೂಡ ಬೆಂಗಳೂರಿಗೆ ಬಂದಿದ್ದ, ಬಸವನಗುಡಿಯ ಒಂದು ಮನೆಯಲ್ಲಿ ಕೆಲವು ದಿನ ವಾಸವಾಗಿದ್ದ ಎಂದು ಹೇಳಿದ್ದು ನಮ್ಮ ಯು.ಎಸ್. ಶ್ರೀನಿವಾಸನ್ ಉರುಫ್ ‘ಪುಸ್ತಕ ವ್ಯಾಪಾರಿ ಶ್ರೀನಿವಾಸನ್’ (ಪುವ್ಯಾಶ್ರೀ). ನಮಗೆಲ್ಲ ಜಗತ್ತಿನ ಮೂಲೆ ಮೂಲೆಗಳಿಂದ ಪುಸ್ತಕ ತರಿಸಿಕೊಟ್ಟು, ಓದಿಸಿ, ಪ್ರೊತ್ಸಾಹಿಸಿ ಬೆಳೆಸಿದ ಪುವ್ಯಾಶ್ರೀಗೆ ಈಗ 80ರ ಹರೆಯ. ಅವರಿಗೆ ನೆರೂಡನ ವಿಚಾರ ತಿಳಿಸಿದ್ದು ಎ.ಟಿ. ಶ್ಯಾಮಾಚಾರ್ ಎಂಬ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಿಂದಿ ಪಂಡಿತರು. ಅವರು ಯೋಗಪಟು ಬಿ.ಕೆ.ಎಸ್ ಐಯ್ಯಂಗಾರ್ ಅವರ ಭಾವ ಮೈದುನ. ಶ್ಯಾಮಾಚಾರ್ ಆಗ ಎಡಪಂಥೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದು, ಕರ್ನಾಟಕ ಪೀಸ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿದ್ದರು. ಪುವ್ಯಾಶ್ರೀಗೆ ಶ್ಯಾಮಾಚಾರ್ ನೆರೂಡ ಇದ್ದು ಹೋದ ಮನೆ ತೋರಿಸುತ್ತೇನೆ ಎಂದು ಹೇಳಿದ್ದರಂತೆ. ಅನೇಕ ಬಾರಿ ಅವರು ಆ ಮನೆಯ ದರ್ಶನಕ್ಕೆ ಕಾರ್ಯಕ್ರಮವನ್ನೂ ಹಾಕಿಕೊಂಡಿದ್ದರಂತೆ. ಆದರೆ ಕೊನೆಯ ಘಳಿಗೆಯಲ್ಲಿ ಅದು ನೆರವೇರದೇ ಹೋಯಿತು ಎಂದು ಪೇಚಾಡಿಕೊಳ್ಳುತ್ತಾರೆ. ಶ್ಯಾಮಾಚಾರ್ 1998ರಲ್ಲಿ ತೀರಿಕೊಂಡರು.
ನೆರೂಡನೊಂದಿಗೆ ಬೆಂಗಳೂರಿಗೆ ಒಂದು ಹೆಂಗಸೂ ಬಂದಿದ್ದಳು ಎಂದು ಶ್ಯಾಮಾಚಾರ್ ಪುವ್ಯಾಶ್ರೀಗೆ ತಿಳಿಸಿದ್ದರು ಮತ್ತು ಆ ಹೆಂಗಸು ಆತನ ತಂಗಿ ಇದ್ದಿರಬಹುದು ಎಂದಿದ್ದರಂತೆ. ಇದಿಷ್ಟು ಮಾಹಿತಿ ಬಿಟ್ಟು ಅವನ ಬೆಂಗಳೂರಿನ ಭೇಟಿಯ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ನೆರೂಡ ಅವನ ‘ನೆನಪುಗಳು’ ಎಂಬ ಪುಸ್ತಕದಲ್ಲಿ ಭಾರತ ಯಾತ್ರೆಯ ಬಗ್ಗೆ ಸುದೀರ್ಘವಾಗಿ ಬರೆಯುತ್ತಾನೆ. ಕೋಲ್ಕತ್ತಾ, ಮುಂಬಯಿ ಮತ್ತು ದಿಲ್ಲಿಯ ಅನುಭವಗಳನ್ನು ದಾಖಲಿಸುತ್ತಾನೆ, ಆದರೆ ಬೆಂಗಳೂರಿನ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಬೆಂಗಳೂರು ಬಹುಶಃ ಯಾವುದೇ ವಿಶಿಷ್ಟ ಅನುಭವಗಳನ್ನು ಒಡ್ಡದ ‘ಪುಟ್ಟ ಊರು’ ಎಂದು ನೆರೂಡಗೆ ಅನ್ನಿಸಿ ನಿರ್ಲಕ್ಷಿಸಿರಬಹುದು.
ಭಾರತದಲ್ಲಿ ನಾನು ಹಿಂದೆ ‘ವಾಸವಾಗಿದ್ದೆ’ ಎಂದು ತನ್ನ ‘ನೆನಪುಗಳು’ ಪುಸ್ತಕದಲ್ಲಿ ಬರೆದುಕೊಳ್ಳುವ ನೆರೂಡ ಭಾರತಕ್ಕೆ ಮೊದಲು ಬಂದದ್ದು 1929ರಲ್ಲಿ. ಆಗ ಅವನು ಸಿಲೋನ್ (ಈಗಿನ ಶ್ರೀಲಂಕ) ದೇಶದಲ್ಲಿ ಹಿರಿಯ ರಾಜತಾಂತ್ರಿಕ ಅಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಿದ್ದ. ಭಾರತದ ಬಗ್ಗೆ ಆತ ಬರೆಯುವುದನ್ನು ಓದಿದರೆ (‘ನನಗಲ್ಲಿ ಅನೇಕ ಸ್ನೇಹಿತರಿದ್ದರು, ಅನೇಕರು ನನಗಲ್ಲಿ ಸೋದರರಂತಿದ್ದರು’) ಆತ ಭಾರತಕ್ಕೆ ಎರಡು ಬಾರಿಗಿಂತ ಹೆಚ್ಚು ಸಲ ಬಂದಿರಲು ಸಾಧ್ಯ. ಬಹುಶಃ ಅವನು ದಾಖಲಿಸಿರುವುದು ತನ್ನ ಎರಡು ಪ್ರಮುಖ ಭೇಟಿಗಳನ್ನು ಮಾತ್ರ ಎಂಬ ಅನುಮಾನ ಬಾರದೇ ಇರದು.
ನೆರೂಡನ 1929ರ ಭೇಟಿಯ ವಿಶೇಷ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ. ಅವನು ಗಾಂಧಿ, ಮೋತಿಲಾಲ್, ಜವಹರ್ ಲಾಲ್ ನೆಹರು, ಸುಭಾಷ್ ಬೋಸ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಾನೆ. ಸುಭಾಷ್‌ರ ಬಗ್ಗೆ ಅಕ್ಕರೆಯಿಂದ ಮಾತನಾಡುವ ನೆರೂಡ, ಗಾಂಧಿಯ ಬಗ್ಗೆ ಆಡುವ ಮಾತುಗಳು ಕುತೂಹಲಕಾರಿಯಾಗಿದೆ: ”ಗಾಂಧಿಗೆ ಒಂದು ನರಿಗೆ ಇರುವಂತಹ ತೀಕ್ಷ್ಣ ಮುಖಚರ್ಯೆ ಇತ್ತು. ಬಹಳ ಲೆಕ್ಕಾಚಾರದ ಮನುಷ್ಯನಂತೆ ಕಂಡರು. ತಂತ್ರಗಾರಿಕೆಯಲ್ಲಿ ನಿಪುಣ ಎಂಬುದು ಭಾಸವಾಗುತ್ತಿತ್ತು. ತನಗೆ ಬರುವ ಟೆಲಿಗ್ರಾಂಗಳಿಗೆ, ಪತ್ರಗಳಿಗೆ ಕ್ಷಣಾರ್ಧದಲ್ಲಿ ಉತ್ತರಿಸುವ ಚತುರತೆ ಇತ್ತು. ಎಂದೂ ಬಸವಳಿಯದ ಸಂತನಂತೆ ಅವರು ನನಗೆ ಕಂಡರು,” ಎಂದು ಬರೆಯುತ್ತಾನೆ.
ಭಾರತಕ್ಕೆ ನೆರೂಡ ಮತ್ತೆ ಬರುವುದು 1950ರಲ್ಲಿ. ಆಗ ಆತ ನೊಬೆಲ್ ಪಾರಿತೋಷಕ ಪಡೆದ ವಿಜ್ಞಾನಿ ಜೋಲಿಯೋ ಕ್ಯೂರಿಯ (ಮೇರಿ ಕ್ಯೂರಿಯ ಅಳಿಯ)ಎರಡು ಪತ್ರಗಳನ್ನು ಹೊತ್ತು ತರುತ್ತಾನೆ. ಕ್ಯೂರಿ ಆಗ ಶಾಂತಿ ಮಂತ್ರ ಪಠಿಸುವ, ಜಗತ್ತನ್ನು ಅಣ್ವಸ್ತ್ರಗಳಿಂದ ದೂರವಿಡುವ ಸಂಸ್ಥೆ ‘ಪಾರ್ಟಿಸಾನ್ಸ್ ಫಾರ್ ಪೀಸ್’ನ ಅಧ್ಯಕ್ಷರಾಗಿರುತ್ತಾರೆ. ನೆರೂಡ ತರುವ ಎರಡು ಪತ್ರಗಳಲ್ಲಿ ಒಂದು ಸಿ.ವಿ. ರಾಮನ್‌ರಿಗೆ ಉದ್ದೇಶಿಸಲ್ಪಟ್ಟಿದ್ದು ಮತ್ತೊಂದು ಪ್ರಧಾನಿ ನೆಹರೂಗೆ ಸಂಬಂಧಿಸಿದ್ದಾಗಿರುತ್ತದೆ. ನೆರೂಡ ಮುಂಬಯಿಯಲ್ಲಿ ಬಂದು ಇಳಿಯುತ್ತಿದ್ದಂತೆ ಆತನ ಮನಸ್ಸು ಕೆಡಿಸುವಂತ ಕಹಿ ಘಟನೆಯೊಂದು ಸಂಭವಿಸುತ್ತದೆ.
ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ಅವನನ್ನು ಗುಮಾನಿಯಿಂದ ಕಂಡು ಎರಡು ಘಂಟೆಗಳ ಕಾಲ ತನಿಖೆಗೆ ಒಳಪಡಿಸುತ್ತಾರೆ ಮತ್ತು ಆತ ತಂದಿದ್ದ ಬಟ್ಟೆ-ಬರೆ, ಪತ್ರಗಳನ್ನು ಜಾಲಾಡಿ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಆತ ಹೋಟೆಲ್ ಸೇರಿ ಎಷ್ಟೋ ಗಂಟೆಯ ನಂತರ ಆತನ ವಸ್ತುಗಳನ್ನು ತಲುಪಿಸುತ್ತಾರೆ. ನೆರೂಡ ಈ ಘಟನೆಯ ಗಾಯದಿಂದ ಹೊರಬರುವುದು, ಮಧ್ಯಾಹ್ನ ಆಕಸ್ಮಿಕವಾಗಿ ನೆಹರು ತಂಗಿ ವಿಜಯಲಕ್ಷ್ಮಿ ಪಂಡಿತ್‌ರನ್ನು ಊಟಕ್ಕೆ ಭೇಟಿಯಾದಾಗ. ಆಕೆಯ ಸೌಂದರ್ಯಕ್ಕೆ ನೆರೂಡ ಸಮ್ಮೋಹಿತನಾಗು ತ್ತಾನೆ: ”ಆಕೆ ಅಪ್ರತಿಮ ಸುಂದರಿ. ಸಿನಿಮಾ ತಾರೆಯಂತೆ ವೇಷ ಭೂಷಣ ಧರಿಸಿದ್ದರು. ಆಕೆಯ ಜರತಾರಿ ಸೀರೆ ಜಗಮಗಿಸುತ್ತಿತ್ತು. ಆಕೆ ಧರಿಸಿದ್ದ ಚಿನ್ನದ ಒಡವೆ ಮತ್ತು ಮುತ್ತುಗಳ ಹಾರ ಆಕೆಯ ಸುತ್ತ ವೈಭವದ ಪ್ರಭಾವಳಿಯನ್ನು ಸೃಷ್ಟಿಸಿತ್ತು. ನಾನು ಆಕೆಯನ್ನು ನೋಡುತ್ತಲೇ ಸಮ್ಮೋಹಿತನಾದೆ,” ಎಂದು ಬರೆಯುತ್ತಾನೆ.
ಮಾರನೆಯ ದಿನ ನೆಹರೂ ನೋಡಲು ನೆರೂಡ ದಿಲ್ಲಿಗೆ ಹೋಗುತ್ತಾನೆ. ತಂಗಿಯಿಂದ ಆಹ್ಲಾದಿತನಾದ ಕವಿ ಅಣ್ಣನ ಭೇಟಿಯಿಂದ ನಿರಾಶೆಗೊಳ್ಳುತ್ತಾನೆ. ನೆಹರೂ ನೆರೂಡಗೆ ಮುಖಕೊಟ್ಟು ಮಾತನಾಡಿಸುವುದಿಲ್ಲ. ತುಂಬ ಮುಜುಗರ ಉಂಟುಮಾಡುತ್ತಾರೆ. ”ನನ್ನ ಹಾಜರಿ ಅವರಲ್ಲಿ ನನ್ನ ಬಗ್ಗೆ ಅಪ್ರಜ್ಞಾಪೂರ್ವಕ ತಿರಸ್ಕಾರ ಉಂಟುಮಾಡುತ್ತಿತ್ತು ಎಂದು ಒಮ್ಮೆಲೇ ಹೊಳೆಯಿತು. ಪತ್ರ ಕಳಿಸಿರುವ ಪ್ರೊ.ಕ್ಯೂರಿಗೆ ಏನು ಹೇಳಲಿ ಎಂದು ಕೇಳಿದೆ. ಅದಕ್ಕೆ ಅವರು ‘ನಾನು ಅವರಿಗೆ ಉತ್ತರಿಸುತ್ತೇನೆ’ ಎಂದಷ್ಟೇ ಹೇಳಿದರು,” ಎಂದು ಬರೆಯುತ್ತಾನೆ. ಜತೆಗೆ ಜಾಗತಿಕ ಶಾಂತಿಯ ಬಗ್ಗೆ ಮಾತು ಬಂದಾಗ ಅತ್ಯಂತ ಸಿನಿಕರಾಗಿ ನೆಹರು ಪ್ರತಿಕ್ರಿಯಿಸಿದರು ಎಂದೂ ಹೇಳುತ್ತಾನೆ. ”ಕೆಲವು ವರ್ಷಗಳ ನಂತರ ನಾನು ‘ಲೆನಿನ್ ಶಾಂತಿ ಪ್ರಶಸ್ತಿ’ ಕೊಡುವ ಸಮಿತಿಯಲ್ಲಿದ್ದೆ. ಆಗ ನೆಹರು ಅವರ ಹೆಸರು ಪ್ರಸ್ತಾಪವಾದಾಗ ನಾನು ಮುಗುಳ್ನಕ್ಕು ಅವರ ಪರ ಮತ ಚಲಾಯಿಸಿದೆ. ಯಾರಿಗೂ ನನ್ನ ಮುಗುಳ್ನಗೆಯ ಅರ್ಥ ತಿಳಿಯಲಿಲ್ಲ,” ಎಂದು ಭಾರತದ ಮಾತು ಮುಗಿಸುತ್ತಾನೆ.
***
ತನ್ನ ‘ನೆನಪುಗಳು’ ಎಂಬ ಕವನದಲ್ಲಿ ನೆರೂಡ ‘Be gentle with the poet’ ಎಂದು ಹೇಳುತ್ತಾನೆ. ಈಗ ಅವನನ್ನು ಅವನ ಚಿರಶಾಂತಿಯ ಸ್ಥಳದಿಂದ ಕದಲಿಸಿರುವುದರಿಂದ ನಾವು ಅವನ ಅವಶೇಷ ಗಳೊಂದಿಗೆ ಮೃದುವಾಗಿ ವ್ಯವಹರಿಸೋಣ.

‍ಲೇಖಕರು G

June 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Anil Talikoti

    ಮಡಿದು ನಲವತ್ತು ವರುಷವಾದರೂ ನೆರೋಡಾ ನ ನೆನಪು ಇನ್ನೂ ಜೀವಂತ. ತುಂಬಾ ಒಳ್ಳೆಯ ಮೆಲಕುಗಳಿವು – ಬೆಂಗಳೂರಿಗೆ ಬಂದಿದ್ದು ಗೊತ್ತಿರಲಿಲ್ಲಾ. ಆಪ್ತ ಬರಹ – ಧನ್ಯವಾದಗಳು.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: