ಮಂಡ್ಯ ರಮೇಶ್ ಕಾಲಂ : ’ನಟನ’ ಹುಟ್ಟಿದ ಕಥೆ (ಭಾಗ ೨)

(ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ)

ಅದಾದ ಕಲವು ದಿನಗಳಲ್ಲಿ ಪತ್ರ ಬಂತು. ಪಕ್ಕದ Site… ಸಾಂಸ್ಕೃತಿಕ ಕಲಾ ಶಾಲೆಗೆಂದೇ ಮೀಸಲಾದ ಸ್ಥಳವನ್ನು ನನಗೆ ನೀಡಲಾಗಿತ್ತು. ಮತ್ತೆ ಹಣ ಕಟ್ಟಿ ಅಂದ್ರು, ಶುರು… ಯಾವುದೋ ಕೆಟ್ಟ ಸಿನೆಮಾ ದರಿದ್ರದ ರೋಲು ಮಾಡಿ ಬಂದೆ. ನಿರ್ಮಾಪಕ, ನಿರ್ದೇಶಕ, ಪ್ರೇಕ್ಷಕ ನೋಡಿ ಸಂತೋಷಿಸಿದ್ರು. ನನಗೆ ಹಣ ಕೊಟ್ರು, ಇನ್ನೊಂದಿಷ್ಟು ಅಲ್ಲಿ ಸೇರಿಸಿ ಮೊದಲ ಕಂತು ಕಟ್ಟಿದೆ! ನಟನಕ್ಕೆ ಸೈಟ್ ರಿಜಿಸ್ಟ್ರಾಯಿತು. ವೆಂಕೋಬರಾವ್, ರವೀಂದ್ರ ಜೋಷಿ, ಮುಂತಾದವರು ಬೆನ್ನು ತಟ್ಟಿದರು, ಇಂಜಿನಿಯರ್ ಪ್ರಭಾಕರ್ ರಾವ್ ತೋರಿದ ಆಸ್ಥೆ, ಮಮಕಾರ ಮರೆಯಲು ಈ ಜನ್ಮದಲ್ಲಿ ಸಾಧ್ಯವಿಲ್ಲ!
ಏಕದಂತ ಚಿತ್ರದಲ್ಲಿ ಅಭಿನಯಿಸಲು ಬಂದಿದ್ದಾಗ ಮನವೊಲಿಸಿದೆ. ಒಂದು ಒಳ್ಳೆ ದಿನ, ಘಳಿಗೆ ನೋಡಿ ಭೂಮಿಪೂಜೆ ಮಾಡಿ., ಮಾವಿನ ಸಸಿ ನೆಡೆಸಿದೆ. ರಮೇಶ್ ಅರವಿಂದ, ಅಪ್ಪ, ಅಣ್ಣ, ಅಕ್ಕ, ಆ ಹೊತ್ತಿಗೆ ನನ್ನೊಂದಿಗೆ ನಟನದಲ್ಲಿದ್ದ ನನ್ನ ನಟರುಗಳು ಕಣ್ಣಿನ ತುಂಬ ಆಸೆ ಇಟ್ಟುಕೊಂಡು ಗಿಡಕ್ಕೆ ನೀರೆರೆದರು. ರಂಗಮಂದಿರದ ಕೆಲಸ ಆರಂಭಿಸಿದೆವು. ಆ ದಿನದ ಆತಂಕ. ಸಂಭ್ರಮ, ಉತ್ಸಾಹ, ಇನ್ನೂ ನನ್ನ ಕಣ್ಣಿಂದ ಮಾಸಿಲ್ಲ!
ಈ ಬಾರಿ ಶಿಬಿರ ಇಲ್ಲೇ ಮಾಡೋಣ ಅಂದುಕೊಂಡೆವು. ಮಾಡೋದ್ ಮಾಡ್ತೀವಿ ಸ್ವಲ್ಪ ಗಟ್ಟಿಮುಟ್ಟಾಗಿರಲಿ ಅಂದುಕೊಂಡು, ಮೇಲೆ ಕಬ್ಬಿಣದ ಚಪ್ಪರ (Terrace) ಹಾಕಿಸಿ, ಶೀಟ್ಗಳನ್ನು ಹಾಕಿಸಿ ಸುತ್ತಲು ಸೀಳಿದ ಬೆತ್ತದ ದಬ್ಬೆಗಳನ್ನು neat ಆಗಿ ಗೋಡೆಯಾಗಿ ಮಾರ್ಪಡಿಸಿ. ಅತ್ಯಂತ ಕಲಾತ್ಮಕವಾದ ಸುಂದರ ಬೃಹತ್ ಆಧುನಿಕ ಪರ್ಣಕುಟಿಯನ್ನು ಕಟ್ಟಿಬಿಟ್ಟೆವು…. ಬೃಹತ್ ವೇದಿಕೆ, 300ಜನ ಕಲಾಪ್ರೇಮಿಗಳು ಕೂಡ್ರುವ ಪ್ರೇಕ್ಷಾಂಗಣ ಅಕ್ಕ ಪಕ್ಕ 2 ಗ್ರೀನ್ ರೂಂ… ಅದರಲ್ಲೇ ಆಫೀಸ್ ರೂಂ, Toilet, ಇನ್ನೊಂದು ಪಾರ್ಶ್ವದಲ್ಲಿ set props ಇಡಲು ‘ಯವನಿಕ’ ಹೆಸರಿನ Backstageಗೆ ಮೀಸಲಾದ ಜಾಗ…. ಎಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ ಕಟ್ಟಿದ್ದಾಯ್ತು….
stage ಕಟ್ಟುವಾಗ, ಕೆಲಸಗಾರರಿಲ್ಲದಿದ್ದಾಗ ತುಂಬಾ ಸಲ ನಮ್ಮ ಹುಡುಗರೇ ಮಣ್ಣುಹೊತ್ತರು ಗಾರೆ ಕಲೆಸಿ ಮೆತ್ತಿದ್ದರು…. ವಿಶೇಷವಾಗಿ ಜಿ.ಬಿ. ಮತ್ತಿತ್ತರರು ಆ ದಿನಗಳಲ್ಲಿ ಸ್ನಾನ ಮಾಡಿದ್ದೇ ನೋಡಿಲ್ಲ ನಾನು….. ನನ್ನ ಬಳಿ ನಟನೆ ಕಲಿಯಲಿಕ್ಕೆಂದು ಬಂದಿದ್ದ ಲೋಕೇಶ ತನ್ನ ಬದುಕನ್ನು ಒತ್ತೆ ಇಟ್ಟು ದುಡಿದ, ಮುಂದೆ ನಟನಾಗಿಯೂ ಬೆಳೆದ.
ಎಷ್ಟು ರಾತ್ರಿಗಳಲ್ಲಿ ಕಬ್ಬಿಣ-ಇಟ್ಟಿಗೆ-ಸಿಮೆಂಟಿನ ಕಾವಲಾಗಿ… ನನ್ನ ಕಾರೊಳಗೆ ಮಲಗಿಬಿಡುತ್ತಿದ್ದ, ಎದುರು ಮನೆಯವರಿಂದ ನೀರು ಇಸಿದುಕೊಂಡು ಕುಡಿದು ದಿನ ತಳ್ಳಿಬಿಡುತ್ತಿದ್ದ… ತುಂಬಾ ಕಷ್ಟದ ದಿನಗಳವು…. ನಮ್ಮ ನಟನ ರಂಗಮಂಟಪ ಮೈಸೂರಿನ ಸಾಂಸ್ಕೃತಿ ವಲಯದಲ್ಲಿ ಅಲ್ಪಾವಧಿಯಲ್ಲಿಯೇ ಸಾಂಸ್ಕೃತಿಕ ಹೆಗ್ಗುರುತಾಗತೊಡಗಿತು. ವಾರಂತ್ಯದಲ್ಲಿ ರಜಾದಿನಗಳಲ್ಲಿ ತಪ್ಪದೇ ನಾಟಕ ಪ್ರದರ್ಶನಗಳಾಗತೊಡಗಿತು.
ಆರಂಭವಾಯಿತು… ನಿಧಾನವಾಗಿ ರಂಗಮಂದಿರ ತುಂಬತೊಡಗಿತು… ಯಾರಿಗೂ ತೊಂದರೆ ಮಾಡದೇ ಶಿಸ್ತಿನಿಂದ ಸಾಗುತ್ತಿದ್ದ ನಮ್ಮ ಮೇಲೆ ನಾಲ್ಕಾರು ಜನರ ಕಣ್ಣುರಿ ಶುರುವಾಯಿತು… ಅವರು ಕೊಡುವ ತೊಂದರೆಗಳಿಗೆ ಸೊಪ್ಪು ಹಾಕದೆ… ಇಡೀ ವರ್ಷ ಅತ್ಯುತ್ತಮ ನಾಟಕಗಳು, ಮಕ್ಕಳ ಶಿಬಿರಗಳು, ಜಾನಪದ ಸಡಗರಗಳನ್ನು ಜನಕ್ಕೆ ನೀಡುತ್ತಾ ಹೋದೆವು… ಎಲ್ಲದರಲ್ಲೂ ಅಚ್ಚುಕಟ್ಟಿತ್ತು!

ಎಷ್ಟಾದರೂ ಸರಳವಾಗಿ ಕಟ್ಟಿದ್ದ ರಂಗಮಂದಿರ ನೆಲಕ್ಕೆಗಾರೆ ಇಲ್ಲ… ಸಿಕ್ಕಿದ್ದಕ್ಕೆಲ್ಲಾ ಗೆದ್ದಲು ಹತ್ತುತ್ತಿತ್ತು…. ಗಾಳಿಗೆ-ಮಳೆಗೆ ರಂಗಮನೆ ನಲುಗುತ್ತಿತ್ತು. ತುಂಬಾ ಕಷ್ಟಗಳು ಎದುರಾಗತೊಡಗಿತು ಕರೆಂಟ್ ಹೋದರೆ ಜನರೇಟರ್ ಇಲ್ಲ.! ಒಮ್ಮೆ ತೀರಾ ಮಳೆಗಾಳಿ ಜಾಸ್ತಿಯಾಗಿ – ಗಾಳಿಗೆ ಶೀಟ್ ಹಾರಲು ಪ್ರಾರಂಭಿಸಿತು… ಅದೂ ಶೋ ನಡೆಯುವಾಗ!
ತುಂಬಾ ಭಯಗೊಂಡೆ ಮತ್ತು ತೀರ್ಮಾನಿಸಿದೆ. ಇದನ್ನು ಸರಿಯಾಗಿಸಬೇಕೆಂದು. ಆದರೆ ಹೇಗೆ? ರಿಪೇರಿ ಮಾಡಲು ಹೊರಟರೂ ಲಕ್ಷಾಂತರ ಹಣಬೇಕು….. ಆ ಹೊತ್ತಿಗೆ ಇಷ್ಟನ್ನು ಕಟ್ಟಲು ಲಕ್ಷಾಂತರ ಹಣವನ್ನು ವೆಚ್ಚ ಮಾಡಿದ್ದೆ… ರಿಪೇರಿಗೆ ಎಲ್ಲಿಂದ ತರುವುದು… ಸರೀ ಅಲ್ಲಿ ರಿಹರ್ಸಲ್ಗಳನ್ನು ಮಾಡಿಕೊಂಡು ಕರ್ನಾಟಕದ ಬೇರೆ ಬೇರೆ ಭಾಗಗಳಿಗೆ ನಾಟಕ ಪ್ರದರ್ಶನ ಒಯ್ಯಲು ಆರಂಭಿಸಿದೆವು.
ಇದನ್ನೂ ಪೂರ್ಣಪ್ರಮಾಣದಲ್ಲಿ ಮಾಡಲು ಕಷ್ಟವಾಗುತ್ತಿತ್ತು! ಹವ್ಯಾಸಿ ತಂಡ. ಕಲಾವಿದರೂ ವಾರಗಟ್ಟಲೇ ರಜಾ ಹಾಕಲು ತೊಂದರೆ… ಅಭಿನಯ ಕಲಿಯಲು ಬಂದ ಹುಡುಗರು – ಟಿವಿ, ಸಿನೆಮಾಕ್ಕೆ ಹಾರಿಬಿಡುತ್ತಾರೆ… ಏನಪ್ಪಾ ಕಥೆ ಇದು ಅನ್ನಿಸಿತು. ಇಷ್ಟೊಂದು ಸೊಗಸಾಗಿ ನಡೆಯುತ್ತಿದ್ದ ರಂಗಮಂದಿರ ನಿಲ್ಲಿಸಿರುವ ಅಪಾರ ನೋವು ಒಂದೆಡೆ, ರಿಪೇರಿಗೆ ದುಡ್ಡಿಲ್ಲ, ನನ್ನನ್ನೇ ನಂಬಿಕೊಂಡು ಬಂದ, ರಂಗಭೂಮಿಯನ್ನು ಪ್ರೀತಿಯಿಂದ ಅಪ್ಪಿಕೊಂಡ ಯುವಕರು ಮಕ್ಕಳು…. ತುಂಬಾ ವಿಹ್ವಲನಾಗಿಬಿಟ್ಟೆ.!
ಧುತ್ತೆಂದು ಬಿ.ಜಯಶ್ರೀ ಬಂದರು. ಒಂದು ಸಂಜೆ ಕುಸಿದ ಭಾಗಗಳನ್ನು ನೋಡಿ, ನಮ್ಮ ಅಸಹಾಯಕತೆಯನ್ನು ಕಂಡು ಮಮ್ಮಲು ಮರುಗಿದರು… ನನ್ನ ತಂಡದ ಕೆಲಸ-ನಾಟಕ ನಿಷ್ಠೆಯನ್ನು ಹಿಂದೆಲ್ಲಾ ಗಮನಿಸಿದರು ಅವರು! ಮೌನವಾಗಿ ಎಲ್ಲಾ ನೋಡಿ ಸುಮ್ಮನೆ ಹೋದರು… ಮಾರನೇ ದಿನ ಕರೆ ಮಾಡಿದರು.ನಿಮ್ಮ ರಂಗಮಂದಿರ ಪುನರ್ನಿರ್ಮಾಣ ಮಾಡಲಿಕ್ಕೆ ಬೇಕಾದ ಎಲ್ಲಾ ಯೋಜನೆ, ವಿವರಗಳನ್ನು ಸಿದ್ಧಮಾಡಿ ಕಳಿಸಿಕೊಡಿ ಅಂತಾ… ಅದೂ ಅವರಾಗಿಯೇ…..
ಮತ್ತೊಂದು ಬೆಳಕಿಂಡಿ ಬದುಕಿನಲ್ಲಿ! ಮೂರ್ನಾಲ್ಕು ವರ್ಷಕ್ಕೆ ಅದೇ ಕತೆಯಾದರೇ ಅನ್ನುವ ಕಳವಳವೂ ಇತ್ತು, ವಾಸ್ತುಶಿಲ್ಪಿ ಶ್ರೀ ಕಿಶೋರ್ ಚಂದ್ರ ಇದನ್ನು ಪೂರ್ತೀ ಕೆಡವಿ ಹೊಸದಾಗಿ ಕಟ್ಟಿ ಅಂತಾ ಹಠಹಿಡಿದರು. ಅಷ್ಟು ಕಡಿಮೆ ಹಣದಲ್ಲಿ ಪೂರ್ತೀ ಬಿಲ್ಡಿಂಗ್ ಕಟ್ಟುವುದು ಸಾಧ್ಯವೇ ಇಲ್ಲ ಅಂತಾ ಚೆನ್ನಾಗಿ ಗೊತ್ತಿದ್ದರೂ… ಅದೆಂತದ್ದೋ ಹುಚ್ಚು ಧೈರ್ಯ ಆ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಮೂಡಿದ್ದು ನೆನೆದರೇ ಭಯವಾಗುತ್ತದೆ… ತಿಕ್ಕಲನಂತೇ… ಸರಳವಾಗಿ ಕಟ್ಟಿದರೂ ಅಚ್ಚುಕಟ್ಟಾಗಿರಬೇಕೆಂದು… ಹೀಗೀಗೆ ಆಗಬೇಕೆಂದು ಕನಸ್ಸು ಕಟ್ಟತೊಡಗಿದೆ… ಕೈಯಲ್ಲಿ ಕಾಸಿಲ್ಲದೇ…. ಕನಸು ಕಟ್ಟುವುದು ನನಗೆ ಬಾಲ್ಯದಿಂದಲೂ ಅಭ್ಯಾಸವಾಗಿ ಬಿಟ್ಟ ಗುಣ, ಇದರಿಂದಾಗಿ ಅನುಭವಿಸಿದ ಯಾತನೆಗಳು ಅಪಾರ… ಆದರೂ ಈ ಕಿಶೋರಚಂದ್ರ ತೋರಿಸಿದ ಆಸೆಗಳಿಗೆ… ಹೂಂ ಅಂದು ಹೊರಟೆ, ಎಡಗಡೆ ಪ್ರಭಾಕರ್ ಬಲಗಡೆ ರಾಮು ಇದ್ದ… ಆ ಹೊತ್ತಿಗೆ ‘ನಟನ’ದ ಮುಖ್ಯ ಭಾಗವಾಗಿ ದುಡಿಯುತ್ತಿದ್ದ…
ಇಷ್ಟು ದಿನ ಉಸಿರಾಡಿದ್ದ ಮಂದಿರ ಒಂದೊಂದಾಗಿ ಕಳಚತೊಡಗಿದಾಗ, ನೊಡಲು ಸಂಕಟವಾಗಿ… ಎಷ್ಟೋ ಬಾರಿ ಕಣ್ಣೀರು ಬಂದದ್ದೂ ಇದೆ.  ಪೂರ್ತೀ ಮುಗಿದ ಮೇಲೆ ಒಬ್ಬನೇ ನಿಂತು ನೋಡಿದೆ… ಬಿ.ಜಯಶ್ರೀಯವರ ರಾಜ್ಯಸಭಾ ಅನುದಾನದ ನಿಧಿಯಿಂದ ಹಣ ಬಿಡುಗಡೆ ಮಾಡುವ ಹೊತ್ತಿಗೆ ರಂಗಮಂದಿರದ ಜಾಗದಲ್ಲಿ ನಕ್ಷೆ ಸಿದ್ಧವಾಗ ತೊಡಗಿತು. ಮತ್ತೆ ಅನುಮತಿಗಾಗಿ MUDAಕ್ಕೆ ಅಲೆದಾಟ ಕೊನೆಗೂ ಒಪ್ಪಿಗೆ ಸಿಕ್ಕ ಪಾಯದ ಗುಂಡಿ ತೆಗೆಯಲು – ಜೆ.ಸಿ.ಬಿ. ರಾಕ್ಷಸ ಯಂತ್ರ ಬಂದ ದಿನ… ನನ್ನ ಎದೆಯಲ್ಲಿದ್ದ ಅತಂತ್ರ ಮತ್ತಷ್ಟು ಇಮ್ಮಡಿಯಾಯಿತು, ಇದೇನು ಹುಚ್ಚು ಸಾಹಸ ಇದು! ಹಿಂದಿಲ್ಲ-ಮುಂದಿಲ್ಲ ಒಂದಷ್ಟು ಜನ ನನ್ನ ರಂಗಕಾಯಕ ನಿಷ್ಟೆ ನೋಡಿ ಪ್ರೀತಿ ಮಾಡಿ ಬಿಟ್ಟರೇ ಸಾಕೆ…. ಅದು ಸಿಮೆಂಟಾಗಿ, ಮರಳಾಗಿ, ಕಬ್ಬಿಣವಾಗಿ ಜಲ್ಲಿಯಾಗಿ, ಕೆಲಸಗಾರರ, ಮೇಸ್ತ್ರಿಯ, ಕೂಲಿಯ ಹಣವನ್ನಾಗಿ ಪರಿವರ್ತಿಸುವುದು ಹೇಗೆ?
ಸಹಸ್ರವಲ್ಲ ಅದೆಷ್ಟು ಲಕ್ಷ ಜನರ ಬಳಿ ನಾವೊಂದು ರಂಗಶಾಲೆ, ರಂಗಮಂದಿರ ಕಟ್ಟುತ್ತಿದ್ದೇವೆ ಅಂತ ಪ್ರತಿಯೊಂದನ್ನು, ಇಂಚಿಂಚು ಬಿಡಿಸಿ ಹೇಳಿದ್ದೀನೋ… ಎಲ್ಲೂ ಬೋರಾಗಲಿಲ್ಲ! ನನ್ನ ಬಗ್ಗೆ ನನಗೆ ನಗೆ ಬಂದುಬಿಟ್ಟ ದಿನಗಳಿವೆ. ಹೇಳಿದ್ದೇ ಹೇಳಿದ್ದೇನೆ… ಊಹೂಂ ದಕ್ಕಿದ್ದು ಅಲ್ಪ! ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಎಲ್ಲ ಅಸಂಖ್ಯ ಶ್ರೀಮಂತರ ಬಳಿ ಅಲವತ್ತುಕೊಂಡೆ. ಸ್ವಾಮೀಜಿಗಳ ಬಳಿ ಹೋಗಲು ಮನಸ್ಸೊಪ್ಪಲಿಲ್ಲ… ತುಂಬಾ ಜನ ಪ್ರಯತ್ನಿಸಿದರು ತಪ್ಪಿಸಿಕೊಂಡೆ! ಸಿನೆಮಾ ಮಾಡಿದಾಗ, ಟಿ.ವಿ. ಶೋಗಳಲ್ಲಿ, ದಾರಾವಾಹಿಗಳಲ್ಲಿ ದುಟ್ಟು ಬಂದಾಗ, ಸೀದಾ ‘ನಟನ’ದ ಅಕೌಂಟ್ ಹಾಕಿ – ರಾಮು ಹತಿರ ಸ್ವಲ್ಪ ಅಲ್ಲ ಪೂರ್ತಿ ಲೆಖ್ಖ ನೋಡಿಕೊಳ್ಳಪ್ಪ ನನಗೆ ಅರ್ಥ ಆಗಲ್ಲ ಅಂತಾ ವಿನೀತನಾಗಿ ಒಪ್ಪಿಸಿ ಮತ್ತೆ ಜೋಳಿಗೆ ಹಿಡಿದು ಹೊರಟೆ!
ನಮ್ಮ ‘ನಟನ’ದ ನಾಟಕಗಳನ್ನು ಜನ ಹೇಗೆ ಪ್ರೀತಿಸಿದರು ಅಂದ್ರೆ 500 ರುಪಾಯಿಯಿಂದ 75000ರವೆರೆಗೆ ಸಂಭಾವನೆ ಪಡೆದದ್ದೂ ಇದೆ. ಇಬ್ಬರೇ ಬಂದು ನಾಟಕ ನೋಡಿ 60ರೂ ಕೊಟ್ಟು ಹೋದದ್ದೂ ಇದೆ. ಅನಗತ್ಯವಾಗಿ, ದುಂದು ವೆಚ್ಚ ಮಾಡದೆ, ಯಾರಿಗೂ ಮೋಸ ಮಾಡದೇ, ಸರಳವಾಗಿ ಬದುಕುತ್ತಾ ರಂಗಮಂದಿರ ನಟನ ಶಾಲೆ ಕಟ್ಟಿ ನಿರ್ಮಾಣ ಮಾಡಿ ನೂರರು ಮಕ್ಕಳಿಗೆ – ಯುವಕರಿಗೆ ಬದುಕಬೇಕೆಂಬ ನನ್ನ ಆಸೆಗೆ ಒಬ್ಬೊಬ್ಬರೇ ಬಂದು ಸೇರತೊಡಗಿದರು. ಶೀಘ್ರ ಕೋಪಿಯಾಗಿದ್ದೆ ನಾನು. ಕನಸಿನಲ್ಲೂ ಕೆಟ್ಟದ್ದು ಬಯಸಲಿಲ್ಲ. ಆದರೆ ಶಿಸ್ತಿಗೆ – ಬದ್ಧತೆಗೆ ಹೆದರಿದ ಅನೇಕರು ಓಡಿಹೋದರು, ಅಡ್ಡಿಯಿಲ್ಲ. ‘ಗಟ್ಟಿ ಕಾಳು’ಗಳು ಉಳಿಯುತ್ತವೆ ಎಂದು ಸಮಾಧಾನ ಪಟ್ಟುಕೊಂಡೆ.

ಅನೇಕ ಖ್ಯಾತನಾಮರು ನಟನ ತಂಡದಲ್ಲಿ ಶಿಬಿರ, ನಿರ್ದೇಶಿಸಿ ಕೊಟ್ಟ ನಾಟಕಗಳನ್ನು ನಾಡಿನಾದ್ಯಂತ ಪ್ರದರ್ಶಿಸುತ್ತಿದ್ದೇವೆ, ಖರ್ಚೆಲ್ಲಾ ಕಳೆದು ಮಿಕ್ಕಿದ ಹಣವನ್ನು ಶ್ರದ್ಧೆಯಿಂದ ರಂಗಮಂದಿರ ನಿರ್ಮಾಣಕ್ಕೆ ವ್ಯಯಿಸುತ್ತಿದ್ದೇವೆ. ಆದರೂ ಸಾಕಾಗುತ್ತಿಲ್ಲ… ದಾನಿಗಳು ಕೊಡುತ್ತಿಲ್ಲ ಎಂದು ಹೇಳಲು ನಾನು ಯಾರು? ಆರೋಗ್ಯವಂತ ಸಾಂಸ್ಕೃತಿಕ ಸಮುದಾಯ ನಿರ್ಮಿಸಲು ಹೊರಟಿದ್ದು ನಾವು.. ನಮ್ಮ ಮನಸ್ಸಂತೋಷಕ್ಕೆ ಯಾರೋ ಹಣ ಕೊಡಲಿಲ್ಲ ಎಂದು ಕೊರಗುವುದು ತಪ್ಪು…. ಆದರೇ ಕೆಲಸ ಸಾಗಿದೆ. ರಂಗಮಂದಿರದ ಪಾಯ ತೆಗೆಯುವಾಗ ಅದೆಷ್ಟು ಬಂಡೆಕಲ್ಲು ತುಂಬಾ ಕಷ್ಟವಾಯಿತು. ಮತ್ತೆ ಮರುಳಿನ ತೊಂದರೆ – ಲಾರಿ ಚಳುವಳಿ, ಅಧಿಕಾರಿಗಳು ಪ್ರತಿಸಾರಿ ಬದಲಾದಾಗಲೂ ಹೊಸಬರಿಗೆ ವಿವರಿಸಲು ಸಾಕುಬೇಕಾಗುತಿತ್ತು. ಅಧಿಕಾರದಲ್ಲಿದ್ದ ಪಕ್ಷದ ಅನೇಕರು ಹತ್ತಿರದಲ್ಲಿದ್ದರು ನಿರೀಕ್ಷಿತ ಪ್ರಮಾಣದ ಸಹಾಯವಾಗಲಿಲ್ಲ!
ಸಂಸ್ಥೆಗೆ ಅನೇಕರು ಕಲಿಯಲು ಬರುತ್ತಿದ್ದರು. ಬದುಕನ್ನು ರೂಪಿಸಿಕೊಂಡರು… ನಾಟಕಗಳನ್ನು ಮೆಚ್ಚಿಕೊಳ್ಳದ ಮಂದಿಯೇ ಇಲ್ಲ! ಅನ್ನುವಷ್ಟು ತಂಡ ಪ್ರಖ್ಯಾತವಾಗಿದೆ. ವಿಶೇಷವಾಗಿ ನಮ್ಮ ಯುವನಟ-ನಟಿಯರು, ಮಕ್ಕಳು ಅಭಿನಯಿಸುವ ಮಟ್ಟದ ಬಗ್ಗೆ ಪ್ರಶಂಸೆಯಿದೆ.
ಸಣ್ಣಪುಟ್ಟ ವೇದಿಕೆಗಳಿಂದ ದೆಹಲಿಯ ಅಂತರರಾಷ್ಟ್ರೀಯ ನಾಟಕೋತ್ಸವಗಳವರೆಗೂ ತಂಡ ಭಾಗವಹಿಸಿ, ಉತ್ಸಾಹಕ್ಕೆ – ಶ್ರದ್ಧೆಗೆ ಹೆಸರಾಗಿದೆ. ಎಲ್ಲ ತಂಡಗಳಲ್ಲೂ ಇರುವಂತೆ ‘ಸಣ್ಣ-ಪುಟ್ಟ’ ಸಮಸ್ಯೆಗಳು ಎದುರಾದಾಗಲೂ ತೂಗಿಸಿಕೊಂಡು ಹೋಗುವುದು ಅಭ್ಯಾಸವಾಗಿದೆ.
ಎಲ್ಲ ಕಲಾವಿದರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ, ಸಮಾರಂಭಗಳಿಗೆ, ಸಿನೆಮಾಗಳಿಗೆ ಒಟ್ಟಿಗೆ ಹೋಗುತ್ತೇವೆ. ಹೋಗಿರುವ ರಂಗಯಾತ್ರೆಗಳಂತೂ ಅಸಂಖ್ಯ, ಪ್ರದರ್ಶನಗಳ ಸಂಖ್ಯೆ ಸಾವಿರ ದಾಟಿರಬಹುದು.
ಈಗ ನಿಧಾನವಾಗಿ ನಟನರಂಗ ಶಾಲೆಯ ರಂಗಮಂದಿರ ಎದ್ದು ನಿಲ್ಲುತ್ತಿದೆ. ನೆಲಮಾಳಿಗೆ ಸಿದ್ಧವಾಗಿದೆ. ಪ್ರೇಕ್ಷಾಂಗಣ ಎದುರು ನಿಂತರೆ ಬೃಹತ್ ವೇದಿಕೆ ಸ್ಪಷ್ಟವಾಗಿ ಕಾಣಹತ್ತಿದೆ. ಅಕ್ಕಪಕ್ಕದ ಗ್ರೀನ್ ರೂಂನ ತಾರಸಿಯಾಗಿದೆ…. ಸರಿಸುಮಾರು ಶೇ45ರಷ್ಟು ಭಾಗ ಕೆಲಸ ಆಗಿದೆ… ಇನ್ನೂ ಸುತ್ತ ಗೋಡೆ ಆಗಬೇಕು – ತಾರಸಿ, ಕಛೇರಿ, ಗ್ರಂಥಾಲಯ, ಮಾಹಿತಿಕೇಂದ್ರ, ಪುಟ್ಟ ಅತಿಥಿ ಕೊಠಡಿ, ಅತಿಥಿ ಕಲಾವಿದ ಬಣಕ್ಕೆ ಡಾರ್ಮೆಟರಿ, ಶೌಚಾಲಯ – ಕಾಂಪೌಂಡ್ ನೀರಿನ ವ್ಯವಸ್ಥೆ, ವಿದ್ಯುತ್ ಕೊಠಡಿ, ಜನರೇಟರ್ ರೂಂ, ಲೈಟ್ಗಳು, ಪರದೆ,…. ನೆನೆದರೇ ಎದೆ ನಡಗುತ್ತದೆ. ಹಿಂದೆಯೇ ಎಂಥದ್ದೋ ಭಂಡಧೈರ್ಯದ ನಗೆ ಸುಳಿಯುತ್ತದೆ.

………..ಮತ್ತೆ ಕಟ್ಟುತ್ತಿರುವ ಕಟ್ಟದ ಮಧ್ಯೆ ಒಬ್ಬನೇ ನಿಂತಿದ್ದೇನೆ!
 

‍ಲೇಖಕರು avadhi

June 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Pravara kottur

    Rameshanna, ondu kelasavanna hididu poortigolisuvavaregoo neevu pattiruva paripaatilu kanna munde barutta hoguttade.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: