ಪ್ರಭಾ ಕಂಬತ್ತಳ್ಳಿ: ನಾವೆಲ್ಲಾ ಮಲೆನಾಡಿನಲ್ಲಿ ಸೇರಿ ಹೋದಂತಾಗಿತ್ತು

ಪ್ರಭಾ ಕಂಬತ್ತಳ್ಳಿ

ಮಲೆಗಳಲ್ಲಿ ಮದುಮಗಳು ನಾಟಕವನ್ನು ನೋಡಿಬಂದ ಸ್ನೇಹಿತರು ಅದನ್ನು ಕುರಿತು ವರ್ಣಿಸಿದ್ದನ್ನು ಕೇಳಿ ಹಾಗು ‘ಅವಧಿ’ಯಲ್ಲಿ ಹಾಕಿದ್ದ ನಾಟಕಗಳ ಚಿತ್ರಗಳು, ವಿವರಗಳು, ಅಭಿಪ್ರಾಯಗಳನ್ನು ವೀಕ್ಷಿಸಿ ಆಕರ್ಷಿತಳಾಗಿ ನಾಟಕವನ್ನು ನೋಡಲೇಬೇಕೆಂಬ ಆಕಾಂಕ್ಷೆ ಹುಟ್ಟಿ ನಾಟಕ ನೋಡಲು ಹೋಗಿದ್ದೆವು. ಸಣ್ಣ ದಿಂಬು, ನಿದ್ದೆ ಬಾರದಿರಲೆಂದು ಪ್ಲಾಸ್ಕಿನಲ್ಲಿ ಕಾಫಿ, ಲೋಟ, ಕಾಲು ಚಾಚಿಕೊಳ್ಳಲು ಸಾಧ್ಯವಾಗುವಂತೆ ಪುಟ್ಟ ಮಡಚುವ ಸ್ಟೂಲು, ಚಳಿಯಾಗದೆ ಇರೆಲೆಂದು ಶಾಲು, ಸಾಕ್ಸು ಹೀಗೆ ಸಕಲ ಸಾಧನ ಸನ್ನದ್ಧಳಾಗಿ ಪರಿವಾರದೊಡನೆ ಹೋದದ್ದು. ‘ಮಳೆ ಬಾರದಿರಲಪ್ಪ’ ಎಂದು ಮನಸ್ಸು ಪ್ರಾರ್ಥಿಸುತ್ತಿತ್ತು. ಏಕೆಂದರೆ ಕೆಲವರು ಮಳೆಗಳಲ್ಲಿ ಮದುಮಗಳು ನೋಡಿದ ಪಡಿಪಾಟಲನ್ನು ವರ್ಣಿಸಿದ್ದರು.

೪ ವೇದಿಕೆಗಳಲ್ಲಿ ನಡೆದ ಮದುಮಗಳು ನಾಟಕದ ಅನುಭವ ನಿಜಕ್ಕೂ ವಿಶಿಷ್ಟವಾದದ್ದು. ಒಂದು ಮಲೆನಾಡಿನ ಪರಿಸರವನ್ನೇ ಸಹಜ ಹಿನ್ನಲೆಯಲ್ಲಿ ನಿರ್ಮಿಸಿದ್ದೇ ರಂಗ ವೇದಿಕೆ ಅಧ್ಯಯನಕ್ಕೊಂದು ಅದ್ಭುತ ಪಠ್ಯವಾಗಿತ್ತು. ಮಲೆನಾಡಿಗೆ ವಿಶಿಷ್ಟವಾದ ಗೊರಬು, ಓಲೆ ಕೊಡೆ, ಅಲ್ಲಿನ ಜನರು ಉಡುವ ಸೀರೆಯ ಮಾದರಿ, ಕಂಬಳಿ, ವೇಷ ಭೂಷಣಗಳು, ಅನೇಕ ಬಗೆಯ ಮನೆಗಳು ಇಡೀ ನಾಟಕ ರಂಗಭೂಮಿ ಕಾರ್ಯಾಗಾರದ ಮಾದರಿಯಲ್ಲಿ ನಡೆದದ್ದನ್ನು ಹೇಳುತ್ತಿದ್ದವು. ಸುಮಾರು ೬೦-೭೦ ಮಂದಿ ಕಲಾವಿದರು ಸೇರಿ ಅಭಿನಯಿಸಿದ ಮದುಮಗಳು ಕುವೆಂಪು ಕಾದಂಬರಿಯ ಒಂದು ‘ದೃಶ್ಯ ಕಾವ್ಯ’ವೆನ್ನಬಹುದು. ಗುತ್ತಿ, ಅವನ ನಾಯಿ, ಐತ ಪೀಂಚಲು , ಚಲುವಯ್ಯ ಚೆನ್ನಮ್ಮ, ಹೆಗಡೇರು, ಪಾದ್ರಿ ಹೀಗೆ ಕುವೆಂಪುರವರ ಪಾತ್ರಗಳು ಜೀವಂತವಾಗಿ ಎದುರಿಗೆ ಬಂದ ಪರಿಗೆ ಬೆರಗಾದೆವು . ಎಲ್ಲ ನಟರ ಅಭಿನಯ ಟೈಮಿಂಗ್ ಎಲ್ಲವೂ ಅತ್ಯಂತ ಸೊಗಸಾಗಿತ್ತು. ಕುವೆಂಪು ಅವರ ಮಾತಿನಂತೆ ‘ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ’ ಎನ್ನುವುದನ್ನು ಸಾರುವಂತೆ ಎಲ್ಲ ಪಾತ್ರಗಳಿಗೂ ಒಂದೊಂದು ವಿಶಿಷ್ಟತೆ ಇತ್ತು. ಇಲ್ಲಿ ಪ್ರಧಾನವಾದದ್ದು ಕಥೆ, ಅದು ಬೀರುವ ಪರಿಣಾಮ ಮಾತ್ರ ಮುಖ್ಯವಾಯಿತು.

ಒಂದು ಕಾಲಘಟ್ಟದ ನಿರ್ದಿಷ್ಟ ಭಾಗದಲ್ಲಿ ನಡೆಯುವ ಜೀವನ ಕಥಾನಕದ ಮೂಲಕ ಕುವೆಂಪುರವರು ಜೀವಗಳ ನಿಸರ್ಗ ಸಹಜ ಚೈತನ್ಯ, ಅವರ ಮೇಲಾಗುವ ಸಾಮಾಜಿಕ, ಧಾರ್ಮಿಕ, ಆರ್ಥಿಕ ಪರಿಣಾಮಗಳು, ಶೋಷಣೆ ಎಲ್ಲವನ್ನು ಚಿತ್ರಿಸಿರುವ ಪರಿ ಅದ್ಭುತವಾದದ್ದು. ಮನುಷ್ಯ ಸ್ವಭಾವದ ನೂರಾರು ಮುಖಗಳ ಅನಾವರಣ, ಶೋಷಣೆ ದಬ್ಬಾಳಿಕೆ ಅದಕ್ಕೆ ಸಿಕ್ಕಿ ನರಳುವ ಜೀವಗಳ ಕಥನವಿದು. ಅದರ ಬಿಡುಗಡೆಯ ಹಾದಿಯ ಚಿತ್ರಣವೂ ಇದೆ. ಬದಲಾಗುತ್ತಿರುವ, ಬದಲಾಗಲೇ ಬೇಕಾದ ಅನಿವಾರ್ಯ ಸ್ಥಿತಿಯ ಚಿತ್ರಣವಿದೆ. ರಂಗಭೂಮಿಗೆ ಸಂಬಂಧಿಸಿದ ಮಾತುಕತೆಯೊಂದರಲ್ಲಿ ಸೇಹಿತರೊಬ್ಬರು ಹೇಳಿದಂತೆ ಮಲೆಗಳಲ್ಲಿ ಮದುಮಗಳು ನಾಟಕ ಒಂದು ನೋಡು ಪಠ್ಯ. ಆದರೆ ಕುವೆಂಪುರವರ ವಿಸ್ತಾರ ಜೀವನ ನೋಟ ಅವರವರಿಗೆ ದಕ್ಕಿದಂತೆ ಎಂಬ ಅಡಿಟಿಪ್ಪಣಿಯನ್ನು ಇಲ್ಲಿ ಸೇರಿಸಬೇಕೇನೋ.

ನಾಟಕದ ಮೂರನೆಯ ಭಾಗವನ್ನು ಅನಗತ್ಯವಾಗಿ ಎಳೆದರೇನೋ ಎಂಬ ಭಾವನೆ. ಹಲವು ಪಾತ್ರಧಾರಿಗಳು ಅತ್ಯುತ್ತಮವಾಗಿ ನಟಿಸಿದರೆ, ಹಲವು ಪಾತ್ರಧಾರಿಗಳಿಂದ ಪೂರ್ಣಪ್ರಮಾಣದ ಪ್ರತಿಭೆ ಹೊರಬರಲಿಲ್ಲವೇನೋ ಎನಿಸಿತು. ನಾಟಕದ ಹಾಡುಗಳಲ್ಲಿ ಶಿಷ್ಟ ಭಾಷೆಯ ಬಳಕೆಗಿಂತ ಹೆಚ್ಚು ಗ್ರಾಮ್ಯವನ್ನು ಅಳವಡಿಸಿದ್ದರೆ ಪರಿಣಾಮಕಾರಿಯಾಗುತ್ತಿತ್ತೇನೋ ಎನಿಸಿತು. ಕುವೆಂಪು ಅವರ ಹಾಡುಗಳೇ ಹೆಚ್ಚು ಬಳಕೆಯಾಗಿದ್ದರೆ ಇನ್ನೂ ಸೊಗಸೆನಿಸುತ್ತಿತ್ತು. ೫೦ ವರುಷ ಮೇಲ್ಪಟ್ಟ ಪ್ರೇಕ್ಷಕರಿಗೆ ಅಷ್ಟು ದೀರ್ಘಕಾಲ ಕುಳಿತು ಕೊಳ್ಳುವ ಆಸನದ ವ್ಯವಸ್ಥೆ ಅಷ್ಟು ಸಮರ್ಪಕವಾಗಿರಲಿಲ್ಲ.
ಆದರೆ ಇವೆಲ್ಲವನ್ನು ಮೀರಿ ಒಟ್ಟು ನಾಟಕದ ಪರಿಣಾಮ ಅದ್ಭುತವಾಗಿತ್ತು. ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿದ ನಾಟಕವಿದು. ಒಂದು ವಿಸ್ತಾರ ಭಿತ್ತಿಯ ಜೀವನ ದರ್ಶನದ ಕೃತಿಯೊಂದನ್ನು ರಂಗ ಮಾಧ್ಯಮಕ್ಕೆ ಅಳವಡಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಂಗೀತವಂತೂ ನಾಟಕಕ್ಕೆ ಜೀವ ಸಂಚಲನ ತಂದು ಕೊಟ್ಟಂತಿತ್ತು. ಸ್ವಲ್ಪಮಟ್ಟಿಗೆ ಸಿನಿಮೀಯವೆನಿಸಿದರೂ ನಾಟಕಕ್ಕೆ ಒಟ್ಟಾರೆ ಕಳೆಯನ್ನು ತಂದುಕೊಡುವಲ್ಲಿ ಅದರ ಪಾತ್ರ ಪ್ರಧಾನವೆಂದೇ ಹೇಳಬೇಕು. ಪರಿಣಾಮಕಾರಿಯಾಗಿ ನಾಟಕವನ್ನು ಕಟ್ಟಿಕೊಟ್ಟ ನಿರ್ದೇಶಕರು, ನಟರು, ಹಿನ್ನೆಲೆ ರಂಗಕರ್ಮಿಗಳು ಅತ್ಯಂತ ಅಭಿನಂದನಾರ್ಹರು. ನಾಟಕ ಮುಗಿಸಿ ಹೋಗುವಾಗ ಸ್ನೇಹಿತರೊಬ್ಬರು ‘ಅಬ್ಬಾ! ನನಗಂತೂ ನಾವೆಲ್ಲಾ ಮಲೆನಾಡಿನಲ್ಲಿ ಸೇರಿ ಹೋದಂತಾಗಿತ್ತು’ ಎಂದರು. ನಾಟಕದ ಅದ್ಭುತ ಪರಿಣಾಮಕ್ಕೆ ಇದೇ ಸಾಕ್ಷಿಯಲ್ಲವೇ?

‍ಲೇಖಕರು G

June 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. VEDA

    Howdu Prabha, nanagu saha ello malenadinalle iddineno annuva bhava nataka nodvashtu hottu ittu. Kelavondu orathegaliddaru saha ottare nataka adbuta drushyakvyave sari.Ella nataru lavlavikeyinda natisiddu abinandaneeya. Adrallu Huliyana churuku ota, mareyalaguvude illa.

    ಪ್ರತಿಕ್ರಿಯೆ
  2. Kantharaj.M.L

    I am 63 year, but i never had any discomfort,but had the seating was proper things would be different.when we lost in the play our pain, discomfort also lost.
    Wonderful experience,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: