ಸುಗತ ಬರೆಯುತ್ತಾರೆ: ಕನಸಿನ ಕುದುರೆಗೆ ಅರಾಜಕತೆಯ ಚಬಕ

ಸುಗತ ಶ್ರೀನಿವಾಸರಾಜು

ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ದೌಂಡಿಯಾ ಖೇರ ಎಂಬ ಗ್ರಾಮದಲ್ಲಿ ಚಿನ್ನದ ನಿಧಿಗಾಗಿ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಶೋಭನ್ ಸರ್ಕಾರ್ ಎಂಬ ಸಾಧುಗೆ ಈ ಗ್ರಾಮದ ಭೂಮಿಯಲ್ಲಿ ಸಾವಿರ ಟನ್ನಿನಷ್ಟು ಚಿನ್ನ ಭದ್ರವಾಗಿ ಅಡಗಿ ಕೂತಿದೆ ಎಂಬ ಕನಸು ಬಿದ್ದಿತ್ತು. ಅವರಿಗೆ ತನ್ನ ಕನಸಿನ ಅಸಲಿತನದ ಬಗ್ಗೆ ಅತೀವ ನಂಬಿಕೆ ಹುಟ್ಟಿ ಭಾರತದ ಕೇಂದ್ರ ಬ್ಯಾಂಕಿಗೆ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಮತ್ತು ಪ್ರಧಾನಿಗೆ ಪತ್ರ ಬರೆಯುವುದಲ್ಲದೆ, ಆ ಊರನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವ (ಕೋರ್ಬ ಲೋಕಸಭಾ ಕ್ಷೇತ್ರ) ಮತ್ತು ಈಗ ಮಂತ್ರಿಯೂ ಆಗಿರುವ ಚರಣದಾಸ ಮಹಂತರಿಗೆ ಈ ವಿಚಾರದಲ್ಲಿ ತಾವು ಕ್ರಿಯಾಶೀಲರಾಗಬೇಕು ಎಂದು ಅಪ್ಪಣೆ ಕೊಡಿಸಿ, ತನ್ನ ಕನಸು ಮತ್ತು ವಾಸ್ತವದ ನಡುವೆ ಸೇತುವೆಯೊಂದನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯಶಸ್ಸಿನ ಫಲವೇ ಈಗ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ.
ಈ ದೌಂಡಿಯಾ ಖೇರ ಗ್ರಾಮದಲ್ಲಿ ಚಾಲ್ತಿಯಲ್ಲಿರುವ ಕಥೆಯ ಪ್ರಕಾರ, ಹತ್ತೊಂಬತ್ತನೆಯ ಶತಮಾನದಲ್ಲಿ ಅಲ್ಲಿ ವಾಸವಾಗಿದ್ದ ಚಿನ್ನದ ವ್ಯಾಪಾರಿ ಮತ್ತು ತಾಲೂಕುದಾರ ರಾವ್ ರಾಜಾ ರಾಮ್‌ಭಕ್ಷ್ ಸಿಂಘ್ ಬ್ರಿಟಿಷರನ್ನು ಲೂಟಿ ಮಾಡಿ ಬಹಳಷ್ಟನ್ನು ಸಂಪತ್ತನ್ನು ಕೂಡಿಟ್ಟಿದ್ದ. ಆತನನ್ನು 1857ರ ಸಿಪಾಯಿ ದಂಗೆಯ ಸಮಯದಲ್ಲಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಭೂಮಿಯಲ್ಲಿ ಅಡಗಿ ಕೂತಿವೆ ಎನ್ನಲಾದ ಚಿನ್ನದ ಗಟ್ಟಿಗಳು ಬಹುಶಃ ಅವನು ಅಡಗಿಸಿಟ್ಟಿದ್ದಿರಬಹುದು ಎಂಬುದು ಸ್ಥಳೀಯರ ನಂಬಿಕೆ. ಈ ನಂಬಿಕೆಯನ್ನೇ ಶೋಭನ್ ಸರ್ಕಾರ್ ತಮ್ಮ ಕನಸಾಗಿಸಿಕೊಂಡರೇ ಅಥವಾ ಅಸಲು ಅವರ ಕನಸಿನಲ್ಲೇ ಈ ನಿಧಿ ಅನಾವರಣಗೊಂಡಿತೇ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಂದು ಮತ್ತೊಂದರಲ್ಲಿ ಮೇಳೈಸಿಕೊಂಡಿದೆ ಎಂದು ಭಾಸವಾದರೆ ಅದು ಅಸಹಜ ತರ್ಕವೇನಲ್ಲ.

ದೌಂಡಿಯಾ ಖೇರದ ಸ್ಥಳೀಯರ ನಂಬಿಕೆಯನ್ನು ತಿಳಿದು ನನಗೆ ನಮ್ಮ ನಡುವೆಯೇ ಇದ್ದ ದಂತ ಚೋರ ವೀರಪ್ಪನ್ ಕಥೆ ನೆನಪಾಯಿತು. ಆತ ಸತ್ತ ಮೇಲೆ ಅವನು ಸಂಪಾದಿಸಿದ ಅಪಾರ ಹಣದ ಶೋಧಕ್ಕೆ ಅನೇಕರು ಕಾಡಿಗೆ ಇಳಿಯಲು ಉತ್ಸಾಹ ತೋರಿದ್ದರು. ವೀರಪ್ಪನ್ ಕೋಟಿ ಕೋಟಿ ಹಣವನ್ನು ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ಅಡಗಿಸಿಟ್ಟಿದ್ದಾನೆ ಎಂಬ ನಂಬಿಕೆ ಚಾಲ್ತಿಯಲ್ಲಿತ್ತು. ಆ ನಂಬಿಕೆ ಈಗಲೂ ಇದ್ದರೆ ಆಶ್ಚರ್ಯ ಪಡಬೇಕಾಗಿಲ್ಲ. ಮುಂದೊಂದು ದಿನ ಯಾರೋ ಪ್ರಭಾವಿ ವ್ಯಕ್ತಿಗೆ ಈ ವಿಚಾರ ಕನಸಿನಲ್ಲಿ ಬಂದು, ಸರಕಾರ ಶೋಧನಾ ತಂಡ ರಚಿಸಿದರೆ ಅದಕ್ಕೂ ನಾವು ಆಶ್ಚರ್ಯ ಪಡಬೇಕಾಗಿಲ್ಲ. ಭಾರತದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತು ಇಲ್ಲಿ ಬಹಳ ಸೊಗಸಾಗಿ ಕೂರುತ್ತದೆ.
ಈ ಕಥೆಗಳು, ನಂಬಿಕೆಗಳು ಹಾಗಿರಲಿ, ನನ್ನ ಮುಂದೆ ಇರುವ ದೊಡ್ಡ ಪ್ರಶ್ನೆ ಮತ್ತು ಆತಂಕ ಬೇರೆಯೇ ತೆರನದ್ದಾಗಿದೆ: ಒಂದು ವೇಳೆ ಈ ಉತ್ಖನನ ಕಾರ್ಯ ಮುಂದುವರಿದು, ಭೂಮಿಯಡಿಯಲ್ಲಿ ನಿಜವಾಗಲೂ ಚಿನ್ನದ ನಿಧಿ ಸಿಕ್ಕರೆ ಏನು ಗತಿ? ಅದು ಒಬ್ಬ ಸಾಧುವಿನ ಕನಸು ಮತ್ತು ಒಂದು ಊರಿನ ಜನರ ನಂಬಿಕೆಗೆ ಮಾತ್ರ ಪುಷ್ಟಿ ನೀಡುವುದಿಲ್ಲ, ದೇಶದ ಅನೇಕ ಮೂಲೆಗಳಲ್ಲಿ ಬೀಳಬಹುದಾದ ಕನಸುಗಳಿಗೆ ಮತ್ತು ನಂಬಿಕೆಗಳಿಗೆ ಪುಷ್ಟಿ ನೀಡುವ ಸಾಧ್ಯತೆ ಇದೆ. ಈ ಬೆಳವಣಿಗೆ ನಮ್ಮೆಲ್ಲರ ನೆಮ್ಮದಿಯನ್ನು ಹಾಳುಗೆಡಹುತ್ತದೆ ಎಂಬುದರಲ್ಲಿ ಅನುಮಾನ ಬೇಡ.
ದೌಂಡಿಯಾ ಖೇರದ ಚಿನ್ನದ ನಿಧಿ ವಿಚಾರ ಬರೀ ನಂಬಿಕೆಯಾಗಿ ಉಳಿದಿದ್ದರೆ ಪರವಾಗಿರಲಿಲ್ಲ. ಆದರೆ, ಆ ನಂಬಿಕೆಯ ಜೊತೆಗೆ ಈಗ ಸರಕಾರದ ಯಂತ್ರದ ಜೋಡಣೆಯಾಗಿದೆ. ಉತ್ಖನನ ಕಾರ್ಯ ಪಾರದರ್ಶಕವಾಗಿ ನಡೆಯಬೇಕು ಎಂದು ಆಗ್ರಹಿಸಿ ಒಬ್ಬ ವ್ಯಕ್ತಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾನೆ ಕೂಡ. ಉತ್ಖನನದ ಸ್ಥಳದಲ್ಲಿ ಸಿ.ಸಿ ಟಿ.ವಿ ಅಳವಡಿಸಲಾಗಿದೆ ಎಂಬ ವರದಿಗಳು ಕೂಡ ನಮ್ಮ ಮುಂದಿವೆ. ಇವೆಲ್ಲ ನನಗೆ ಈ ಸದ್ಯ ಆಪತ್ತಿನ ಚಿಹ್ನೆಗಳಾಗಿ ಕಾಣುತ್ತಿವೆ. ತುಂಬು ವೈಚಾರಿಕತೆಯ, ವೈಜ್ಞಾನಿಕ ಮನೋಭಾವದ ಮತ್ತು ವಿವೇಕದ ನೆಲೆಗಟ್ಟಿನ ಮೇಲೆ ಕಟ್ಟಿರುವ ನಮ್ಮ ಸಂವಿಧಾನವನ್ನು ಕೆಡವುವ ಹಲವು ವ್ಯವಸ್ಥಿತ ಪ್ರಯತ್ನಗಳಲ್ಲಿ ಇದೂ ಒಂದೇ ಎಂದು ಕೆಲವೊಮ್ಮೆ ಅನಿಸದೆ ಇರದು. ದಾರ್ಶನಿಕ ನಾಯಕತ್ವ ಇಲ್ಲದ ಸಮಯದಲ್ಲಿ ಜನರ ನಂಬಿಕೆಯ ವಿಚಾರಕ್ಕೆ ಬಂದಾಗ, ಮೌಢ್ಯಕ್ಕೆ ಬಂದಾಗ ನಾವೇನು ಮಾಡಬೇಕು ಎನ್ನುವ ಪ್ರಶ್ನೆ ಹಲವು ಬಾರಿ ಅರಾಜಕತೆಯತ್ತ ಜಾರುತ್ತದೆ. ನಾವು ದೌಂಡಿಯಾ ಖೇರದಲ್ಲಿ ಕಾಣುತ್ತಿರುವುದು ಅರಾಜಕತೆಯ ಸಣ್ಣ ಸ್ವರೂಪ. ಇದರ ದೊಡ್ಡ ಸ್ವರೂಪವನ್ನು ನಾವು ಕೆಲವು ದಶಕಗಳ ಹಿಂದೆ ಅಯೋಧ್ಯಾ ರಾಮನ ದೇವಸ್ಥಾನದ ವಿಚಾರದಲ್ಲಿ ಕಂಡಿದ್ದೆವು. ಅದು ಸಮಷ್ಟಿಯ ನಂಬಿಕೆಯ ಆಧಾರದ ಮೇಲೆ ಬೆಳೆದ ರಾಜಕೀಯ ಚಳವಳಿ. ಇತ್ತ ಈ ಗ್ರಾಮದಲ್ಲಿ ಉತ್ಖನನ ಪ್ರಾರಂಭವಾಗುತ್ತಿದ್ದಂತೆ, ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ಕನಸನ್ನು ಜೀವಂತವಾಗಿರಿಸಲು ವಿಎಚ್‌ಪಿ ಕಾರ್ಯಕರ್ತರು ಬಂಧನಕ್ಕೆ ಒಳಗಾಗುತ್ತಿದ್ದದ್ದು ಕಾಕತಾಳೀಯ.
ದೌಂಡಿಯಾ ಖೇರದಲ್ಲಿ ಉತ್ಖನನ ನಡೆಸಬಾರದು ಎಂದು ವಾದಿಸುವ ಬದಲು, ಉತ್ಖನನ ನಡೆಸಲು ಸರಕಾರ ವೈಜ್ಞಾನಿಕ ಸಮೀಕ್ಷೆಯನ್ನು ಆಧಾರವಾಗಿರಿಸಿಕೊಳ್ಳಬೇಕಿತ್ತು (rational basis), ಕನಸು ಮತ್ತು ನಂಬಿಕೆಯನ್ನಲ್ಲ ಎಂಬ ವಾದ ಮುಖ್ಯವಾಗಬೇಕು. ಈ ರೀತಿ ನಂಬಿಕೆ ಮತ್ತು ಮೌಢ್ಯದ ಸುತ್ತ ಸಂವಿಧಾನಬದ್ಧ ಸರಕಾರದ ಯಂತ್ರವನ್ನು ಎಳೆದುತರುವುದು ನಮ್ಮ ಸುಮಾರು ಇನ್ನೂರು ವರ್ಷಗಳ ಸಾಮಾಜಿಕ ಪ್ರಗತಿಗೆ ಮತ್ತು ಸುಧಾರಣೆಗೆ ಧಕ್ಕೆ ಉಂಟುಮಾಡಿದ ಹಾಗೆ. ಬಹುಮುಖಿ ಭಾರತದಲ್ಲಿ ಎಷ್ಟು ತರಹೇವಾರಿ ನಂಬಿಕೆಗಳಿರಬಹುದು ಮತ್ತು ಈ ಎಲ್ಲ ನಂಬಿಕೆಗಳಿಗೆ ಸರಕಾರಿ ಪೋಷಣೆ ಸಿಕ್ಕರೆ ಏನಾಗಬಹುದು ಎಂದು ಒಮ್ಮೆ ಊಹಿಸಿ. ಇದನ್ನು ಹಲವರು ಹಣದ ಸುತ್ತ ಬೆಳೆದಿರುವ ಲಾಲಸೆ ಮಾತ್ರ ಎಂದು ವಿಶ್ಲೇಷಿಸಬಹುದು. ಆದರೆ, ಅದು ಒಂದು ಸೀಮಿತ ವಿಶ್ಲೇಷಣೆ ಮಾತ್ರವಾಗುತ್ತದೆ. ದೃಶ್ಯ ಮಾಧ್ಯಮದ ಪ್ರಭಾವ ಹೆಚ್ಚಿರುವ ಸಂದರ್ಭದಲ್ಲಿ ದೌಂಡಿಯಾ ಖೇರದಲ್ಲಿನ ಉತ್ಖನನ ಭಾರತದ ಅಜ್ಞಾತ, ಅಗೋಚರ ಮೂಲೆಯಲ್ಲಿ ನಡೆಯುತ್ತಿರುವ ಘಟನೆಯಾಗಿ ಮಾತ್ರ ಉಳಿಯದೆ, ಭಾರತದ ಮೂಲೆಮೂಲೆಗಳಲ್ಲೂ ಪ್ರತಿಧ್ವನಿಸುತ್ತದೆ. ದೃಶ್ಯಮಾಧ್ಯಮ ಒಂದು ತರಹದ ನಾಗರಿಕ ಸಂಪರ್ಕ ಜಾಲವನ್ನು (networked citizenry) ಸಾಧ್ಯವಾಗಿಸಿದೆ ಎಂಬುದು ಇಂತಹ ಘಟನೆಗಳು ಸಂಭವಿಸಿದಾಗ ತಿಳಿಯುತ್ತದೆ. ಉತ್ಖನನ ನಡೆಯುತ್ತಿರುವ ಸ್ಥಳದಲ್ಲಿ ನಿಧಿ ಸಿಗದಿದ್ದರೆ ಉತ್ತಮ. ಆ ಸಂದರ್ಭದಲ್ಲಿ ಬರೀ ಸರಕಾರ ಅಪಹಾಸ್ಯಕ್ಕೆ ಗುರಿಯಾಗುತ್ತದೆ ಮತ್ತು ಹೆಚ್ಚೆಂದರೆ ಆ ಸಾಧುವಿನ ಭಕ್ತರ ಸಂಖ್ಯೆ ಕ್ಷೀಣಿಸಬಹುದು. ಆದರೆ, ದುರದಷ್ಟವಶಾತ್ ನಿಧಿ ಸಿಕ್ಕಿಬಿಟ್ಟರೆ ನಮಗಾಗುವ ಅಪಾಯ ದೊಡ್ಡದು. ನಮ್ಮ ಆಧುನಿಕ ಸಮಾಜ ಮತ್ತು ಪ್ರಜಾಪ್ರಭುತ್ವದ ಬುನಾದಿಗೆ ಅದು ಪೆಟ್ಟು ಕೊಡದೆ ಇರದು.
ಇದಿಷ್ಟು ಹೇಳಿದ ನಂತರವೂ ಈ ವಾದಕ್ಕೆ ಮತ್ತೊಂದು ಮಗ್ಗುಲು ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ನಮ್ಮ ದೇಶದ ಸಂದರ್ಭದಲ್ಲಿ ಮತ್ತು ಜಗತ್ತಿನ ಹಳೆಯ ನಾಗರಿಕತೆಗಳ ವಿಚಾರದಲ್ಲಿ ‘ನಂಬಿಕೆ’ ಎನ್ನುವುದು ಆಧುನಿಕತೆ ಮತ್ತು ಚರಿತ್ರೆಯ ಜೊತೆ ಸದಾ ಸಂಘರ್ಷಕ್ಕೆ ಒಳಪಟ್ಟಿರುತ್ತದೆ. ನಮ್ಮ ಕಲ್ಪನೆಯ ಚರಿತ್ರೆಗೂ, ಪಶ್ಚಿಮದ ಶೈಕ್ಷಣಿಕ ಅಚ್ಚುಕಟ್ಟುತನದಲ್ಲಿ ಬೆಳೆದುಬಂದಿರುವ ಚರಿತ್ರೆಗೂ ಬಹಳ ವ್ಯತ್ಯಾಸವಿದೆ. ಬರೀ ವ್ಯತ್ಯಾಸವಲ್ಲ, ಕಂದರವಿದೆ. ನಾವು ಚರಿತ್ರೆ ಮತ್ತು ಪುರಾಣದ ನಡುವೆ ಎಳೆಯುವ ಗೆರೆ ಬಹಳ ತೆಳುವಾಗಿರುತ್ತದೆ. ಬಹಳಷ್ಟು ಸಲ ನಮಗೆ ಚರಿತ್ರೆ ಎಂಬುದು ಸಾಂಸ್ಕತಿಕ ನೆನಪು ಮಾತ್ರ (cultural memory). ಈ ನೆನಪಿನಲ್ಲಿ ನಂಬಿಕೆ, ಕನಸು, ಪುರಾಣ, ಹಾಡು, ಪದ, ಎಲ್ಲವೂ ಜೋಡಣೆಯಾಗಿ ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತಿರುತ್ತದೆ. ಆಧುನಿಕನೆನಿಸಿಕೊಳ್ಳುವ ಗಾಂಧಿಯ ಬಗ್ಗೆಯೂ ನಮಗೆ ಚರಿತ್ರೆಗಿಂತ ನೆನಪು ಮುಖ್ಯವಾಗುತ್ತದೆ. ಪಶ್ಚಿಮದ ಮಾದರಿಯಲ್ಲಿ ಚರಿತ್ರೆ ಬರೆಯಲು ದಾಖಲೆಗಳನ್ನು ಒಗ್ಗೂಡಿಸಬೇಕು. ಆದರೆ, ನಮ್ಮಲ್ಲಿ ಸ್ಮತಿ, ಸ್ಮರಣೆ, ನೆನಪುಗಳನ್ನು ಪೋಣಿಸುತ್ತಾ ಹೋಗುತ್ತೇವೆ. ಈ ಹಿನ್ನೆಲೆಯಲ್ಲಿ ನಾವು ದೌಂಡಿಯಾ ಖೇರದ ಉತ್ಖನನವನ್ನು ನೋಡಿದಾಗ ನಮಗೆ ಯಾವುದೇ ವಿರೋಧಾಭಾಸ ಕಾಣುವುದಿಲ್ಲ. ಅದರೆ, ಆಧುನಿಕತೆಯ ಅಂಶಗಳನ್ನು, ವಿಚಾರಧಾರೆಗಳನ್ನು, ಪ್ರಜಾಪ್ರಭುತ್ವವನ್ನು (ಇದು ಪಶ್ಚಿಮದಲ್ಲಿ ಹುಟ್ಟಿದ ಯೋಚನೆ) ಎಲ್ಲಕ್ಕೂ ಮಿಗಿಲಾಗಿ ಒಂದು ಸಂವಿಧಾನವನ್ನು ಅಳವಡಿಸಿಕೊಂಡಿರುವ ಪ್ರಭುತ್ವವೊಂದು (modern state) ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದಾಗ ನಮಗೆ ವಿರೋಧಾಭಾಸ ಢಾಳಾಗಿ ಕಾಣಿಸುತ್ತದೆ. ಚರಿತ್ರೆಯ ಪರ ಇರಬೇಕಾದ ಸಂಸ್ಥೆ ಪುರಾಣದ ಪರ ವಾಲಿದಂತೆ ಅನ್ನಿಸುತ್ತದೆ. ಪುರಾಣ, ನೆನಪು ಮತ್ತು ನಂಬಿಕೆಯ ಆಧಾರದ ಮೇಲೆ ಯಾವುದೇ ಆಧುನಿಕ ರಾಷ್ಟ್ರವನ್ನು ನಡೆಸಲಾಗುವುದಿಲ್ಲ. ಹಾಗೆ ಮಾಡಿದ ಸಂದರ್ಭದಲ್ಲಿ ಹಿಂದೆಯೇ ಹೇಳಿದ ಹಾಗೆ, ನಾವು ಅರಾಜಕತೆಯತ್ತ ಜಾರುತ್ತೇವೆ. ಪುರಾಣ ಮತ್ತು ಚರಿತ್ರೆಯ ನಡುವೆ ಸಮತೋಲನವನ್ನು ಕಾಪಾಡಲು ನವ ಆಧುನಿಕ ರಾಷ್ಟ್ರಗಳಾದ ನಮ್ಮಂತಹ ಹಳೆಯ ನಾಗರಿಕತೆಗಳು ಸದಾ ಹೆಣಗಾಡುತ್ತಿರುತ್ತವೆ.

ಕೆಲವು ವಾರಗಳ ಹಿಂದೆ ನಾನು ಹಳೆಬೀಡಿನ ಹೊಯ್ಸಳೇಶ್ವರ ಮತ್ತು ಬೇಲೂರಿನ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ನಮ್ಮ ಚರಿತ್ರೆಯ ಪರಿಕಲ್ಪನೆಯ ಬಗ್ಗೆ ಇರುವ ಗೊಂದಲ ಮತ್ತಷ್ಟು ಸ್ಪಷ್ಟವಾಯಿತು. ಈ ಎರಡೂ ದೇವಸ್ಥಾನಗಳ ಒಪ್ಪ-ಓರಣ, ಭದ್ರತೆಯನ್ನು ಪುರಾತತ್ವ ಇಲಾಖೆ ನೋಡಿಕೊಳ್ಳುತ್ತದೆ. ಆದರೆ, ಇಲ್ಲಿ ಅಧಿಕೃತ ಚಾರಿತ್ರಿಕ ಮಾಹಿತಿಗೆ ದೊಡ್ಡ ಕೊರತೆಯಿದೆ. ಅಲ್ಲಿ ಫಲಕಗಳ ಮೇಲೆ ಅಂಟಿಸಿರುವ ಮಾಹಿತಿ ಹರಿದು ಬಂದಿದ್ದರೂ, ಅದನ್ನು ಸರಿಪಡಿಸುವ ಗೋಜಿಗೆ ಪುರಾತತ್ವ ಇಲಾಖೆ ಹೋಗಿಲ್ಲ. ಚರಿತ್ರೆಯ ತುಣುಕುಗಳನ್ನು ಅರಸಿ ಬರುವವರಿಗಿಂತ ಭಕ್ತರೇ ಹೆಚ್ಚು ಬರುತ್ತಾರೆ ಎಂಬ ನಂಬಿಕೆ ಅವರದ್ದಾಗಿರಬಹುದು ಮತ್ತು ಅವರೇ ದೃಢೀಕರಣ ಪತ್ರ ನೀಡಿರುವ ಗೈಡುಗಳು ಹರಿಬಿಡುವ ಕಥಾನಕಗಳು ಮನರಂಜನೆ ನೀಡುತ್ತವೆಯೇ ಹೊರತು ಚರಿತ್ರೆಯ ಆಗುಹೋಗುಗಳಿಗೆ ಒಳನೋಟ ನೀಡುವುದಿಲ್ಲ. ಅವರಿಗೆ ಸ್ಥಳಪುರಾಣ ಮುಖ್ಯವೇ ಹೊರತು ಚರಿತ್ರೆಯ ಖಚಿತತೆಯಲ್ಲ ಮತ್ತು ಅವರ ಕಥಾನಕ ಒಂದು ರೀತಿಯ ಖಿನ್ನತೆಯಿಂದ ಕೂಡಿದೆ ಎನಿಸಿತು. ನಾವು ಎಂದೋ ಸಾಧಿಸಿದ್ದನ್ನು ಆಧುನಿಕ ಜಗತ್ತು (ಪಶ್ಚಿಮ ಎಂದು ಓದಿಕೊಳ್ಳಬಹುದು) ಇಂದು ತನ್ನದೆಂದು ಬೀಗುತ್ತಿದೆ ಎಂಬ ದನಿಯನ್ನು ಅದು ಹೊರಡಿಸುತ್ತಿತ್ತು. ”ಡಾರ್ವಿನ್‌ನ ವಿಕಾಸವಾದ ನಮಗೆ ಮೊದಲೇ ತಿಳಿದಿತ್ತು, ಬಾಬ್‌ಕಟ್ (ಆಧುನಿಕ ಕೇಶಲಂಕಾರ), ಬರ್ಮುಡಾ ಪ್ಯಾಂಟ್ (ಆಧುನಿಕ ವಸ್ತ್ರವಿನ್ಯಾಸ), ಎಲ್ಲವೂ ನಮ್ಮಲ್ಲಿ ಮೊದಲೇ ಇತ್ತು. History only repeats sir,” ಎಂದು ಒಬ್ಬ ಗೈಡ್ ಹೇಳಿದಾಗ ನನಗೆ ನಗು ಬಂತು.
ಚನ್ನಕೇಶವ ದೇವಸ್ಥಾನದ ಸುತ್ತ ಹೆಣೆದಿರುವ ಕೆ ವಿ ಅಯ್ಯರ್ ಅವರ ಸುಪ್ರಸಿದ್ಧ ಕಾದಂಬರಿ ‘ಶಾಂತಲಾ’ದಲ್ಲಿನ ‘ಅರಿಕೆ’ಯಲ್ಲಿನ ಈ ಕೆಲವು ಸಾಲುಗಳನ್ನು ಗಮನಿಸಿ: ”ಗರ್ಭಗುಡಿಯೊಳಗೆ ಒಬ್ಬ ವಟು ಮಹಾದೇವನ ಮುಂದೆ ಒಂದು ಚಿಕ್ಕ ಸೊಡರನ್ನು ಹಚ್ಚಿ ಬೆಳಕು ಮಾಡುತ್ತಿದ್ದ. ಮಹಾದೇವನಿಗೆ ಹಣ್ಣು, ಕಾಯಿ, ಹೂ ಅರ್ಪಿಸಿ, ಕರ್ಪೂರಾರತಿ ಮಾಡಿಸಿ, ದರ್ಶನ ಭಾಗ್ಯ ಪಡೆದೆ. ನನ್ನ ಚಿತ್ತ ವಿಭ್ರಮ ಭಾವೋದ್ರೇಕಕ್ಕೆ ಏರಿತು. ಮಹಾದೇವನ ಮುಂದೆ ಇದ್ದ ವರ್ತುಳಾಕಾರದ ಶಿಲಾಪೀಠದ ಮೇಲೆ ಕುಳಿತು ಕಣ್ಮುಚ್ಚಿದೆ. ಭಾವಜೀವಿಯೂ, ರಸ್ಮಾತಿಕೆಯೂ ಆದ ಮಹಾರಾಣಿ ಶಾಂತಲಾ ದೇವಿ ಭಕ್ತಿಪರವಶಳಾಗಿ ದೇವನ ಮುಂದೆ ನರ್ತಿಸುತ್ತಿದ್ದ ಶಿಲಾಪೀಠವಿದೆಂದು ನನ್ನ ಹದಯ ಹೇಳಿತು. ಆಗ ನನ್ನನ್ನು ಹಿಡಿದ ಭಾವಾವೇಶ ಈಗ ಹೀಗೆ ಕತಿರೂಪವಾಗಿದೆ…” ಅಯ್ಯರ್ ಅವರು ಕಾದಂಬರಿ ಬರೆಯುತ್ತಿದ್ದುದರಿಂದ ಈ ಭಾವಾವೇಶವನ್ನು ನಾವು ಅರ್ಥಮಾಡಿಕೊಳ್ಳಬಹುದು. ಆದರೆ, ಚರಿತ್ರೆ ನೋಡಲೂ ನಾವು ಬಹಳಷ್ಟು ಬಾರಿ ಇದೇ ಭಾವಾವೇಶವನ್ನು ಬಳಸುತ್ತೇವೆ.

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಅಂಕಣ ಬರಹ

‍ಲೇಖಕರು G

October 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. na.. damora shetty

    shobhan sarkar thale kettaddu saalade nammellara thale kedisuva hunnaara nadedide. adu nelada innashtu aalakke hogali.

    ಪ್ರತಿಕ್ರಿಯೆ
  2. ish

    ಪ್ರಬುದ್ಧವಾದ ವಿಶ್ಲೇಷಣೆ; ವೈಚಾರಿಕ ಅಥವಾ ಚಾರಿತ್ರಿಕ ತಳಹದಿಯಿಲ್ಲದ ನಂಬಿಕೆ, ಯಾವ ತರಹ ಮೌಢ್ಯವನ್ನು ಹುಟ್ಟುಹಾಕುತ್ತದೆ ಎಂಬುವುದಕ್ಕೆ ಈ ಉತ್ಖನನವೇ ಸಾಕ್ಷಿ. ತಂತ್ರಜ್ನ್ಯಾನ ಇಷ್ಟೊಂದು ಮುಂದುವರಿದಿರುವಾಗ ಸರಕಾರ ಒಂದು ಕನಸನ್ನು ಆಧಾರವನ್ನಾಗಿಸಿ ಉತ್ಖನನ ಮಾಡುತ್ತಿರುವುದು ಹಾಸ್ಯಸ್ಪದವೇ ಸರಿ. ಒಂದು ಕನಸು, ಅದನ್ನು ಪ್ರೋತ್ಸಾಹಿಸುವ ಮೌಢ್ಯ, ಅದನ್ನು ಆಧಾರವನ್ನಾಗಿಸಿ ಕಾರ್ಯಪೃವೃತ್ತವಾಗುವ ಸರಕಾರ, ದೇಶಕ್ಕೆ ಸಾವಿರಾರು ಕೋಟಿ ಬೆಳೆಬಾಳುವ ಚಿನ್ನಕ್ಕಿಂತಲೂ ಹೆಚ್ಚು ನಷ್ಟವನ್ನು ಉಂಟುಮಾಡುತ್ತವೆ. ದೇಶದ ಹಿತದೄಷ್ಟಿಯಿಂದ ಅಲ್ಲಿ ಚಿನ್ನ ಸಿಗದಿದ್ದರೆನೇ ಲೇಸು. ಈ ನಿಟ್ಟಿನಲ್ಲಿ ಸುಗತರವರು ಎತ್ತಿರುವ ಪ್ರಶ್ನೆಗಳು ಬಹಳ ಗಂಭೀರವಾದ್ದುದ್ದು. ಅದಕ್ಕೆ ಉತ್ತರವನ್ನು ಹುಡುಕುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ.

    ಪ್ರತಿಕ್ರಿಯೆ
  3. ಜೆ.ವಿ.ಕಾರ್ಲೊ, ಹಾಸನ

    ನನಗೆ ಅರ್ಥವಾಗದಿರೋದು ಇಷ್ಟೇ: ಪುರಾತತ್ವ ಇಲಾಖೆಗೆ ಉನ್ನಾವ್ ಜಿಲ್ಲೆಯಲ್ಲಿ ಅಡಗಿರುವ ಚಿನ್ನವನ್ನು ಹೊರತೆಗೆಯುವ ಕಾಯಕಕ್ಕೆ ಹಚ್ಚಿರುವುದು ಎಷ್ಟು ಸೂಕ್ತ? ಈ ಕೆಲಸಕ್ಕೆ ಬಳ್ಳಾರಿಯಲ್ಲಿ ಯಾರೂ ಸಿಗಲಿಲ್ಲವೇ? ಬಿಹಾರದ ಮುಖ್ಯಮಂತ್ರಿ ನಿತಿಶ್ ಹೇಳಿರುವಂತೆ ಪುರಾತತ್ವ ಇಲಾಖೆಗೆ ಈ ಕೆಲಸದಲ್ಲೇ ಹೆಚ್ಚು ಸಾರ್ಥಕ್ಯವಂತೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: