ಹೀಗೊಬ್ಬಳು ಹುಡುಗಿಯ ಕಥೆ

ನಡುವೆ ನಿಂತವಳು…

ಮೋಹನ್ ವಿ ಕೊಳ್ಳೇಗಾಲ

 
ಬೆಳ್ಳಂಬೆಳಗ್ಗೆಯ ಸವಿನಿದ್ದೆ ಉಂಟಲ್ಲ ‘ಆಹಾ!’, ಅನುಭವಿಸಿದವನೇ ಬಲ್ಲನದರ ಸವಿ. ಮನಸ್ಸು ಮೈ ಮರೆತರೆ ಆ ಕ್ಷಣದಲ್ಲಿ ಯಾರೂ ಆ ನಿದ್ದೆಯನ್ನು ಕಸಿಯಲಾರರು.
ಸಾವು?
ಸಾವೂ ಕೂಡ, ಕೆಲವರದು.
ಹೌದೇ?
ಹೌದು. ಬೆಳಗ್ಗೆ ಅಮ್ಮ ಈ ವಿಚಾರವಾಗಿಯೇ ಬೈದಳು.
‘ಮಗಾ, ಆ ಹುಡುಗಿ ತೀರ್ಕೊಂಡಿದ್ದಾಳಂತೆ ಕಣೋ’

‘ಅವನ ಜಂಭ ನೋಡು, ಒಂದು ಸಾವಿಗೂ ಎಚ್ಚರವಾಗದೇ ಮಲಗಿರೋದು, ಅಣ್ಣ ಎದ್ದೇಳೋ, ಹೋಗೋಣ’
‘ಹೋಗೆ ನೀನು, ನಾನು ಹಿಂದೆ ಬರ್ತೇನೆ’
‘ಒಂದು ಸಾವಿಗಿಂತಲೂ ನಿನಗೆ ನಿದ್ದೆ ಮುಖ್ಯ ಆಯ್ತಾ ಮಗನೆ? ಒಳ್ಳೆಯದಕ್ಕಲ್ಲ ಕಣೋ’

ಗಾಳಿ ಬೀಸಿದಂತೆ ಬಂದು ಕಿವಿಗೆ ಬಡಿದ ಅಮ್ಮ ಮಗಳ ಮಾತು, ಕಿವಿಯ ಬಳಿ ಗುಯ್‍ಗುಟ್ಟಿ ಗಾಳಿಯಷ್ಟೇ ವೇಗವಾಗಿ ಹೊರಟುಹೋಯಿತು. ಈ ಸಾವೂ ಕೂಡ ನನ್ನ ನಿದ್ದೆಯನ್ನು ಕಸಿಯಲಾಗದ, ಒಂದು ಜೀವದ ಅಂತಿಮ ಕ್ಷಣವಾಗಿತ್ತು. ಆದರೂ ಹೆಚ್ಚು ಹೊತ್ತು ಮಲಗದೆ ಬೇಗ ಎದ್ದು ಸಾವಿನಂಗಳಕ್ಕೆ ಬಂದಿದ್ದೇನೆ. ಸಾವಿನಮನೆಯ ಆರ್ತನಾದಕ್ಕೆ, ಇಲ್ಲಿ ನಡೆಯುತ್ತಿರುವ ನಾಟಕಕ್ಕೆ ಕೇವಲ ಮೂಕ ಪ್ರೇಕ್ಷಕನಾಗಿ ನಿಂತಿದ್ದೇನೆ ಅಷ್ಟೇ. ಕಣ್ಣೀರು ಹಾಕುವಷ್ಟೇನೂ ದುಃಖವಿಲ್ಲ. ಬೆಳಗ್ಗೆ ಬೇಗ ಬಂದಿದ್ದರೆ ಈ ಮೌನವ್ರತ ಸ್ವಲ್ಪ ದೀರ್ಘವಾಗುತ್ತಿತ್ತಷ್ಟೆ. ಅಷ್ಟಕ್ಕೂ ಈ ಸಾವೇನೂ ನನಗೆ ಅಚ್ಚರಿಯಲ್ಲ. ಅಂದುಕೊಂಡಿದ್ದೆ. ಆದುದರಿಂದ ಈ ಸಾವು ಮುಂಜಾನೆಯ ನನ್ನ ಸಂಪೂರ್ಣ ನಿದ್ದೆಯನ್ನು ಕಸಿಯಲಿಲ್ಲ. ಹುಟ್ಟಿನ ಗುಟ್ಟಿನ ಎಳೆಯನ್ನು ಒಂದು ಮಿತಿಯವರೆವಿಗೂ ಬಿಡಿಸಬಹುದು ಆದರೆ ಸಾವಿನ ಅವಸರವನ್ನಲ್ಲ ಎಂಬ ಮಾತನ್ನೇ ಹುಸಿ ಮಾಡಿ ಈ ಸಾವನ್ನು ನಾನು ಲೆಕ್ಕಿಸಿದ್ದೆ. ಒಂಟಿಕೊಪ್ಪಲ್ ಪಂಚಾಂಗ ನೋಡದೇನೆ! ಕಳೆದ ವರ್ಷ ನಮ್ಮ ಮನೆಯ ಮುಂದೆ ಜೀವ ಕಳೆಯುತ್ತ ಬಿದ್ದಿದ್ದ ಪಕ್ಷಿಯನ್ನು ಎಲ್ಲರೂ ಸತ್ತುಹೋಗುತ್ತದೆ ಎಂದಾಗ ನಾನು ಬದುಕುತ್ತದೆ ಎಂದು ಹೇಳಿ ಬದುಕಿಸಿದ್ದೆ. ಅಲ್ಲಿ ಸಾವನ್ನೂ ಮೀರಿದ ಬದುಕೊಂದನ್ನೆಣಿಸಿದ್ದೆ. ಆ ಪಕ್ಷಿಯೋ ನನ್ನ ಹಸ್ತವನ್ನೇ ತನ್ನ ಆಟದ ಮೈದಾನವಾಗಿಸಿಕೊಂಡು ಒಂದು ವರ್ಷ ಬೆಳೆಯಿತು. ಕತ್ತಲಾದಂತೆ ಪಂಜರದೊಳಕ್ಕೆ ಹೋಗುವುದೆಂದರೆ ತವರುಮನೆ ಬಿಡುವ ಹೆಣ್ಣಿನಷ್ಟೇ ದುಗುಡ. ಮೊನ್ನೆ ಮೊನ್ನೆ ಆ ಪಕ್ಷಿಯನ್ನಪ್ಪಿಕೊಂಡು ಮುದ್ದಾಡುತ್ತಿದ್ದಾಗ  ‘ಅದನ್ನು ತಬ್ಬಿಕೊಳ್ಳುವ ಬದಲು ಆ ಹೆಣ್ಣನ್ನು ಮದುವೆ ಆಗಿ ತಬ್ಬಿಕೊಳ್ಳಬಾರದೇ? ಕೃಷ್ಣತ್ತೆ ಅದನ್ನೇ ಕೇಳ್ತಾ ಇದ್ಲು’ – ಅಮ್ಮ.
‘ನಾನೇನೋ ತಾಳಿ ಹಿಡಿದುಕೊಂಡು ತಯಾರಿದ್ದೇನೆ’
‘ಥೂ! ಆ ನೀತಿಗೆಟ್ಟವಳೊಡನೆ? ಎದೆಯಲ್ಲಿ ತಾಳಿ ಕಟ್ಟಿಕೊಂಡು ಓಡಾಡುವವಳೊಡನೆ?!’ – ತಂಗಿ
‘ಇರಲಿ ಬಿಡು, ಈಗೀಗ ತಾಳಿಯೇ ನೇಣುಹಗ್ಗವಾಗುವುದು ಹೆಚ್ಚು’
‘ನಾನೊಪ್ತೀನೇನೋ? ಅದಾದ್ರೆ ನಿನ್ನ ತಂಗಿಯನ್ನ ಯಾರಾದ್ರೂ ತಂದುಕೊಳ್ತಾರೇನೋ?’
‘ಯಾಕೆ? ಅವಳೆಲ್ಲಿ? ನಾನೆಲ್ಲಿ? ತಂಗಿಯೆಲ್ಲಿ?’
‘ಅವಳ ವಿಚಾರ ಬಿಡು, ಗಂಡನಿಗೆ ಇಬ್ಬರು ಹೆಂಡತಿಯರು, ಇವಳಿಗೆ ಈಗ ಇನ್ನೊಬ್ಬ ಗಂಡ ಬೇಕು’
ಪಕ್ಷಿ ಮಲಗಿಕೊಂಡಿತ್ತು. ಅದಿರಲಿ, ಈ ಹುಡುಗಿಯನ್ನೇಕೆ ನಾ ಮದುವೆಯಾಗಬಾರದಿತ್ತು? ಆದರೆ, ನನ್ನವಳು? ಚೆ! ಆದರ್ಶಕ್ಕೆ ಬಲಿಬಿದ್ದು ನನ್ನವಳ ಕೈ ಬಿಡುವುದೇ? ಅವಳಿಗೆ ಕೊಟ್ಟ ಮಾತಿನಿಂದ, ಹೊಣೆಗಾರಿಕೆಯಿಂದ ವಿಮುಖನಾಗುವುದೇ? ಇವಳ ಕೈ ಹಿಡಿಯುವುದು ಮಾದರಿಯಾದರೆ, ನನ್ನವಳನ್ನು ಕೈ ಬಿಡುವುದು? ಎಂದು ಯೋಚಿಸುತ್ತಿರುವಾಗ ಒಂದು ನಂಬರ್ ಚೀರಿಕೊಂಡಿತ್ತು. ಹಲೋ ಎಂದಾಗ ಅಪರೂಪದಲ್ಲಪರೂಪಕ್ಕೆ ಶಶಿಧರಣ್ಣ ಫೋನ್ ಮಾಡಿದ್ದ. ಅಣ್ಣ ಎನ್ನುತ್ತೇನೆ, ಆದರೆ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದವನಲ್ಲ. ಅಮ್ಮ ಅದೆಷ್ಟೋ ಬಾರಿ ಆತನನ್ನು ಮಾವ ಎಂದು ಕೂಗು ಎಂದಿದ್ದಾಳೆ. ಆದರೆ, ಆತ ಹತ್ತಿರವಾದವನೇ ಅಲ್ಲ. ನಮ್ಮ ಜಾತಿಯಲ್ಲದ ಕಾರಣವೋ ಏನೋ, ನಮ್ಮೆಲ್ಲರಿಂದ ದೂರವಿದ್ದವನು. ಆತ ಫೋನಿನಲ್ಲಿ ‘ಆವೊತ್ತು ನಮ್ಮ ಮನೆಗೆ ಬಂದಿದ್ನಲ್ಲಾ ಆ ಮುದುಕಪ್ಪ, ಅವನು ಬೆಂಗಳೂರಲ್ಲೇ ಇದ್ದಾನಂತೆ, ಕಂಡರೆ ಗುಟ್ಟಾಗಿ ನನಗೆ ಫೋನ್ ಮಾಡು’ ಎಂದಿದ್ದ. ಯಾಕೆ ಎಂದು ಕೇಳುವಷ್ಟೇನೂ ಆತ್ಮೀಯ ಆತನಲ್ಲ. ಆದರೆ ಹಣದಲ್ಲಿ ಸಂಭಾವಿತನೇ ಹೌದು. ಸರ್ಕಾರಿ ಉದ್ಯೋಗದ ಗಿಂಬಳದಲ್ಲಿ ಉಳಿಸಿದವನು. ಮನೆ ಮಾತ್ರ ಮೂರು ಕಾಸಿಗೂ ಬೇಡದಂತಿತ್ತು. ಹಾಸಿಗೆ ಮೇಲಿನ ಬಟ್ಟೆ ತಲೆಕೆಟ್ಟು ತನ್ನನ್ನು ತಾನು ಹರಿದುಕೊಳ್ಳಬೇಕು ಅಲ್ಲಿಯವರೆವಿಗೂ ಬದಲಿಸುತ್ತಿರಲಿಲ್ಲ. ಮನೆಗೆ ಹೋಗಲು ಕಿಂಚಿತ್ತೂ ಇಷ್ಟವಿಲ್ಲವೆನಗೆ, ಈ ಅಮ್ಮನ ಹಿಂಸೆಗೆ ಅವಳ ಸೆರಗನ್ನು ಹಿಡಿದುಕೊಂಡು ಹೊರಟರೆ ‘ಟೀ ಕುಡಿತೀರಾ? ಊಟ ಮಾಡ್ತೀರಾ?’ ಎಂಬ ಮಾತುಗಳಲ್ಲೇ ದಿನ ಮುಗಿಸಿ ಹಸಿವಿಗೆ ತುತ್ತು ಅನ್ನವಿಕ್ಕದೇ ಕಳುಹಿಸಿಬಿಡುತ್ತಿದ್ದರು. ಪ್ರತಿ ಬಾರಿಯೂ! ಅವನಿಗೆ ಸರಿಯಾಗಿಯೇ ಕೃಷ್ಣತ್ತೆ ಹೆಂಡತಿಯಾಗಿದ್ದಳು. ಒಬ್ಬರನ್ನೊಬ್ಬರು ಹಿಂದಿಕ್ಕಿ ಮತ್ತೆ ಮುಂದಕ್ಕೆ ಹೋಗಿ ಗೆಲ್ಲುವ ಜಿಪುಣತನ. ಇವರನ್ನು ನಮ್ಮೆಲ್ಲರಿಂದ ದೂರವಿಟ್ಟಿದ್ದು ನಿಜವಾಗಿಯೂ ಈ ಜಿಪುಣತನವೇ ಹೌದು. ಹಣವನ್ನು ಉಳಿಸುವ ನೆಪದಲ್ಲಿ ಮನುಷ್ಯ ಗುಣದಲ್ಲಿ ಕ್ಷೀಣಿಸಿ ಹೋಗುವುದು ಪುರಾತನವೇ ಹೌದು!
ಆಶ್ಚರ್ಯ! ಇಷ್ಟು ಘಮಲು ಬೀರುವ ಗಂಧದಕಡ್ಡಿಯನ್ನು ಇವರು ದುಡ್ಡು ಕೊಟ್ಟು ತಂದರೆ? ಅಥವಾ? ಅದೇನೇ ಇರಲಿ, ಸಾವಿನ ಮನೆಯ ದುಃಖದ ಮಧ್ಯೆಯೂ ಈ ಸುವಾಸನೆ ನನ್ನನ್ನು ಸೆಳೆಯುತ್ತಿದೆ ಎಂದರೆ ಇದು ನನ್ನ ಬಾಲಿಶತನವೇ? ಸಾವೆಂಬ ಸತ್ಯವನ್ನು ಸ್ವೀಕರಿಸುವ ಪ್ರಬುದ್ಧತೆಯೇ? ಸಮತೆಯೇ? ಭಾವುಕನಲ್ಲವೇ? ಭಾವುಕನಂತೂ ಹೌದು. ಮೊನ್ನೆ ಆ ಪಕ್ಷಿಯ ರೆಕ್ಕೆಯನ್ನು ತುಳಿದಾಗ ಮೇಲಕ್ಕೆತ್ತಿ ‘ಸಾರಿ, ನೀನೀಗ ಗರ್ಭಿಣಿ, ಕಾಲಿಗೆ ಸಿಗಬಾರದಮ್ಮ’ ಎಂದು ಹೇಳುವಾಗ ಅದರ ಮುಖ ನೋಡಿ ಭಾವುಕನಾಗಿದ್ದೆ. ‘ಕಳ್ಳ ಬಸುರಿ’ ಎಂದು ತಂಗಿ ತಮಾಷೆ ಹಾಡಿದ್ದಳು. ಬಸುರಾಗಿದ್ದು ಪಕ್ಷಿಯಾದುದರಿಂದ ಅವಳ ಮಾತು ಗಂಭೀರವಾಗಲಿಲ್ಲ!
ಈ ಹುಡುಗಿಯ ಸಾವು ನನಗೆ ಆಶ್ಚರ್ಯವಲ್ಲ. ಕಳೆದ ತಿಂಗಳು ಈ ಮನೆಗೆ ಬಂದಾಗ ಬಾಗಿಲಲ್ಲಿ ನಿಂತಿದ್ದವಳ ಎದೆಯಲ್ಲಿನ ತಾಳಿ ಸ್ವಾಗತಿಸಿತ್ತು. ಆದರೆ, ಮಧ್ಯಾಹ್ನ ಬೀಳ್ಕೊಡುವಾಗ ತಾಳಿ ಮಾಯವಾಗಿತ್ತು. ಬೆಳಗ್ಗೆ ಹೊಸ್ತಿಲ ಹೊರಗೆ ನಿಂತಿದ್ದರೆ, ಬೀಳ್ಕೊಡುವಾಗ ಹೊಸ್ತಿಲ ಒಳಗೆ ನಿಂತಿದ್ದಳು. ಸಲ್ಲುವ ಕಾರಣವೋ ಏನೋ ಮೊದಲಿನಿಂದಲೂ ನಾನೆಂದರೆ ಆಕೆಗೆ ತುಸು ನಾಚಿಕೆಯೆ. ಮನೆಬಿಟ್ಟು ಹತ್ತು ಹೆಜ್ಜೆ ಹಾಕಿಲ್ಲ
‘ಅಮ್ಮಾ ಹಸಿವಾಗ್ತಾ ಇದೆ’
‘ನನಗೂ ಕಣೋ ಮಗನೆ’
‘ಈ ದರಿದ್ರ ಮನೆಗೆ ಕರ್ಕೋಂಡು ಬರಬೇಡ ಅಂಥ ಅದೆಷ್ಟು ಸಾರಿ ಹೇಳಿದ್ದೇನೆ ನಿನಗೆ? ಅವರ ಮನೆಯಲ್ಲಿ ನುಂಗಿದ ಎಂಜಲು ಒಳಕ್ಕೆ ಹೋಗದು’
‘ಹೌದೋ ಅಪ್ಪ, ಇವತ್ತೇನೋ ಮಾತಿತ್ತು’
‘ಹೆಂಗಸರದು ಎಂಥಾ ಮಾತು ಮೊಬೈಲ್‍ನಲ್ಲಾಗದ್ದು, ಹೀಗೇ ಬರ್ತಾ ಇರು, ಒಂದಲ್ಲ ಒಂದು ದಿನ ಈ ಜಿಪುಣರ ಮನೆಯಲ್ಲಿ ಕುಸಿದು ಸುಸ್ತಾಗಿ ಬಿದ್ದು ಸಾಯ್ತಿ’
ಅಷ್ಟಕ್ಕೆ ಅಮ್ಮ ಮುಸಿ ಮುಸಿ ನಕ್ಕಳು.

‘ಸಾವಿನ ವಿಚಾರ ಬಂದಾಗ ಈ ರೀತಿ ನಗಬೇಕು ನೋಡು’ – ನಾನಂದೆ
‘ಅದಕ್ಕಲ್ಲ’
‘ಮತ್ತೆ?’
‘ಮೊನ್ನೆ ಆ ಹುಡುಗಿ ನನಗೆ ಹೇಳ್ತಾ ಇತ್ತು, ಅವನು ಕರ್ಕೊಂಡ್ ಹೋದವನು ಕೇಕು, ಚಿಪ್ಸು, ಐಸ್ ಕ್ರೀಂ ಎಲ್ಲಾ ತಂದ್ಕೊಡ್ತಾ ಇದ್ನಂತೆ, ಅವಳಿಗೆ ಅದೇ ದೊಡ್ಡದಾಗಿ ಅವನ ಹಿಂದೆ ಓಡಿಹೋದಳೋ ಏನೋ?’
‘ಕಟ್ಟಿಕೊಂಡವನ ಕರ್ಮವಲ್ಲವೇ ಅದು? ಓಡಿ ಯಾಕೆ ಹೋಗ್ತಾಳೆ? ನೋಡಲು ಬಂದಿದ್ದವನಲ್ಲವೇ?’
‘ನೋಡಲು ಬಂದಿದ್ದವನು, ಆದರೆ ಮದುವೆಯ ವಿಚಾರವಾಗಿ ಕೂಡಿಕೆಯಾಗಲಿಲ್ಲವಲ್ಲ, ಮೊದಲಾಗಿ ಆತ ನಿಮ್ಮ ಕೃಷ್ಣತ್ತೆ ಕಡೆಯವನಲ್ಲ, ಶಶಿಧರನ ಕಡೆಯವನು’
‘ಯಾವ ಕಡೆಯಾದರೇನು? ಗಂಡಸಲ್ಲವೇ?’

ಈ ರೀತಿಯ ಪ್ರಶ್ನೆ ಎದುರಾದಾಗ ಅಮ್ಮ ಮೌನವಾಗಿಹೋಗುತ್ತಾಳೆ. ಎರಡು ತಿಂಗಳ ಹಿಂದೆ ಮನೆಗೆ ಬಂದಿದ್ದ ಗಾಯತ್ರಿ ಚಿಕ್ಕಮ್ಮ ‘ಅಯ್ಯೋ ಅವಳನ್ನು ನಮ್ಮ ಕಡೆಯವರು ಯಾರೂ ಕೇಳಲು ಹೋಗುವುದಿಲ್ಲ, ಅವಳೇನಿದ್ದರೂ ಶಶಿಧರನ ಕಡೆಗೆ ಆಗಬೇಕಷ್ಟೇ, ಇಲ್ಲದಿದ್ದರೆ ಇಲ್ಲ’ ಎಂದಾಗ ರೇಗಿಕೊಂಡಿದ್ದೆ. ‘ಯಾಕೆ? ನಮ್ಮ ಕಡೆ ಗಂಡಸರಿಲ್ಲವೇ? ಜಾತಿಯನ್ನು ಹುಟ್ಟಿಸಿ ಈಗ ಜಾತಿಗೇ ಹುಟ್ಟಿದವರಂತೆ ಆಡಬೇಡಿ’ ಎಂದಾಗ ಮತ್ತಿದೇ ಮೌನ. ಯಾರೂ ಗಂಡಸರು ಆಕೆಯನ್ನು ಗೊತ್ತುಮಾಡಿಕೊಂಡು ಮದುವೆ ಆಗಲು ಇವರು ಹೇಳಿದ ‘ನಮ್ಮಕಡೆಯವರಿಂದ’ ಹೋಗದಿದ್ದಾಗ ಆ ಹೆಣ್ಣು ಅದೆಷ್ಟು ಅಲುಗಾಡಿದ್ದಳೋ ಏನೋ? ಕೇಕು, ಚಿಪ್ಸು, ಐಸ್ ಕ್ರೀಂ ತಿಂದಾಗ ಆದ ಖುಷಿಯನ್ನೂ ನುಂಗುವಷ್ಟು!
ಅವರ ಕಡೆಯಿಂದ?!
ಆ ಹೆಣದ ಸುತ್ತ ಕುಳಿತ ಯಾರೂ ಈ ಹೆಣ್ಣನ್ನು ಪುಷ್ಟೀಕರಿಸಿ ಸಾಕಲಿಲ್ಲ. ಕಾಲ ಮೇಲೆ ಬಿದ್ದು ಹೊರಳಾಡುತ್ತಿರುವ ಅಣ್ಣನೆನಿಸಿಕೊಂಡವನು ಕೊನೆಯ ದಿನಗಳಲ್ಲಿ ಆಕೆಯನ್ನು ತನ್ಮೂಲಕ ಅಸ್ಪೃಶ್ಯಗೊಳಿಸಿದವ.
ಮದುವೆಯಾಗಲು ಬಂದಿದ್ದವನನ್ನು ಒಪ್ಪದಿದ್ದರೂ ಈಕೆ ಅಂದು ಆತನ ಜೊತೆ ಓಡಿಹೋಗಿ ಮಂಗಳೂರಿನಲ್ಲಿ ಕುಳಿತಿದ್ದಾದರೂ ಯಾಕೆ? ಆತನಿಗೆ ಮೊದಲೇ ಮದುವೆ ಆಗಿತ್ತು ಎಂಬ ಗುಟ್ಟು ಗೊತ್ತಿದ್ದೂ ಹೋದಳೇಕೆ? ಮನೆಯವರಿಗೆ ಈ ಯಾವತ್ತೂ ವಿಚಾರಗಳೇಕೆ ಮುಟ್ಟಲಿಲ್ಲ? ಹೌದು, ಆ ಮುದುಕನಿಂದ. ಶಶಿಧರಣ್ಣನಿಗೆ ಸ್ವಂತ. ಮೊದಲನೆ ಮದುವೆಯ ವಿಚಾರವನ್ನು ಗುಟ್ಟಾಗಿಟ್ಟವ. ಪ್ರಸ್ತಾಪವಾಗಲಿಲ್ಲ! ಕಾರಣವೇನೆಂದರೆ, ಹುಡುಗಿಯನ್ನು ನೋಡಲು ಬಂದವನ ಹೆಂಡತಿಯ ಬಗ್ಗೆ ಯಾರಾದರೂ ಊಹಿಸುವುದುಂಟೆ? ಆದರೂ ಯಾಕೋ ಹೊರಟುಬಿಟ್ಟಳು. ಜಿಪುಣತನವೇ ವೇದ್ಯವಾದ ಕೃಷ್ಣತ್ತೆ, ಶಶಿಧರಣ್ಣನ ಜೊತೆ ಬೆಳೆದವಳಿಗೆ ಆತ ಧಾರಾಳಿಯಾಗಿ ಕಂಡನೇ? ತಂದುಕೊಳ್ಳದ ಈ ‘ನಮ್ಮ ಕಡೆಯವರಿಗೆ ಸೋತು’ ಮದುವೆಯ ವಯಸ್ಸು ಮೀರುತ್ತಿರುವುದರಿಂದ ತನ್ನ ದಾರಿ ಹಿಡಿಯಲು ನಿಂತಳೇ? ನಮ್ಮ ಕಡೆ-ನಿಮ್ಮ ಕಡೆ ಎಂಬುದರ ನಡುವಿನ ಸಂದಿಗ್ಧತೆ ಕಾಡಿತೇ? ಗಂಡು ಹೆಣ್ಣಿನ ನಡುವಿನಂಶವಾಗಿ ಹುಟ್ಟಿದ ಈಕೆ ಎಂದೋ ಆಗಿದ್ದ ದಾರ್ಷ್ಯಕ್ಕೆ ಸಿಲುಕಿಕೊಂಡಳೇ? ಸಮಾಜವನ್ನು ಎದುರು ಹಾಕಿಕೊಳ್ಳದೇ ಸ್ವಚ್ಛಂದವಾಗಿ ಈ ಜಗತ್ತಿಗೆ ತೆರೆದುಕೊಳ್ಳಲು ಆಕೆ ನಿಂತಿದ್ದೂ ಸೋತಳೇಕೆ? ಒಟ್ಟಿನಲ್ಲಿ ಹೊರಟುಬಿಟ್ಟಳು. ಅರ್ಧ ತಿಂಗಳು ಜೊತೆ ಇದ್ದಳು. ಹಿಂದಿರುಗಿ ಬಂದುಬಿಟ್ಟಳು.
ಅಂದು ತಂಗಿ ‘ನೋಡ್ದಾ? ನೋಡ್ದಾ’ ಎಂದು ಪದೇ ಪದೇ ಕೇಳುತ್ತಿದ್ದಳು. ಏನೆಂದರೆ ಇರು ತೋರಿಸುತ್ತೇನೆ ಎಂದವಳು ಟೀವಿಯಲ್ಲಿ ಒಂದೈದು ಚಾನಲ್ ಗಳನ್ನು ತಿರುವಿ ತಿರುವಿ ಹಾಕುತ್ತಿದ್ದಳು. ಕೊನೆಗೂ ಕಂಡೆ. ಟೀವಿಯೊಳಗೆ ಇದೇ ಹುಡುಗಿ. ಹಲ್ಲೆಗೊಳಗಾಗುತ್ತಿರುವ ಮಧುಮಗ. ಅವರಿಬ್ಬರೂ ಯಾವುದೋ ಮನೆಯಲ್ಲಿ ಒಟ್ಟಿಗೆ ಹದಿನೈದು ದಿನ ಕಳೆದ ನಂತರ ಹುಡುಕಿ, ಮಂಗಳೂರಿನ ದೇವಸ್ಥಾನ ಒಂದರ ಮುಂದೆ ಚಪ್ಪರ ಹಾಕಿದ್ದರು. ಕೃಷ್ಣತ್ತೆ, ಶಶಿಧರಣ್ಣ, ಅಮ್ಮಾ, ಅಜ್ಜಿಯಷ್ಟೇ ಹೋಗಿದ್ದರು. ನಂತರದ ದಿನಗಳಲ್ಲಿ ಜನಗಳ ಬಾಯಿಗೆ ಬೀಗವಾಗಲಿ ಎಂದು ನೆಪಮಾತ್ರಕ್ಕೆ ಒಂದಷ್ಟು ಲಗ್ನಪತ್ರಿಕೆ ಹಂಚಿದ್ದರೂ ಯಾರನ್ನೂ ಜೊತೆ ಮಾಡಿಕೊಳ್ಳಲಿಲ್ಲ. ಸೆಲೆಬ್ರಿಟಿ ಮದುವೆಯಂತೆ! ಮದುವೆಗೆ ಅಡ್ಡಗಟ್ಟಿ ಗಲಾಟಿ ಎಬ್ಬಿಸಿ ತಾಳಿ ಕಟ್ಟಬೇಕಾದವನಿಗೆ ಹೊಡೆಯುತ್ತಿದ್ದವರಾರು? ಹೌದು, ಮೊದಲನೆ ಹೆಂಡತಿ ಕಡೆಯವರು. ಆತನಿಗೆ ಮೊದಲೇ ಮದುವೆ ಆಗಿತ್ತೇ? ಎಲ್ಲರಿಗೂ ಆಶ್ಚರ್ಯ. ಆತ ವಿಚ್ಛೇದನ ಕೊಟ್ಟು, ನ್ಯಾಯಸಮ್ಮತವಾಗಿ ಆಕೆಯಿಂದ ದೂರವಾಗಿದ್ದೇನೆ ಎಂದು ಹೇಳಿದ್ದೂ ಸುಳ್ಳು. ಈ ಹುಡುಗಿಗೂ ಆಶ್ಚರ್ಯ. ಮೈಮೇಲಿದ್ದ ಅವನ ಬೆವರಿನ ವಾಸನೆ ವಾಕರಿಕೆ ತಂತೇನೋ, ಕ್ಯಾಮರಾದಿಂದ ಹೊರಡುತ್ತಿದ್ದ ಬೆಂಕಿಗೆ ಮುಖ ಕೊಡಲಾಗದೆ ಬಂದುಬಿಟ್ಟಳು.
‘ಗಂಡ ಎಲ್ಲಿ? ಗಂಡ ಎಲ್ಲಿ? ಎಂದು ಎಲ್ಲರೂ ಕೇಳುತ್ತಾರೆ, ನಾನೇನು ಹೇಳೋದು? ಹಗಲೆಲ್ಲಾ ತಾಳಿ ಹಾಕಿಕೊಂಡು ಓಡಾಡುತ್ತೇನೆ, ರಾತ್ರಿಯಾದರೆ ಅಪ್ಪ ಅಳಬಾರದೆಂದು ಬಿಚ್ಚಿಟ್ಟುಬಿಡುತ್ತೇನೆ, ಕಾಲುಂಗರದ ವಿಚಾರ ಬರದಿರಲೆಂದು ಯಾವಾಗಲೂ ಕಾಲಿಗೆ ಸಾಕ್ಸ್ ಹಾಕಿಕೊಂಡು ಓಡಾಡೋದೆ ಆಯಿತು’ – ನಮ್ಮ ಮನೆಗೆ ಬಂದಿದ್ದ ಆಕೆ ಮೌನ ತೊರೆದು ಅಸಹಾಯಕಳಾಗಿ ಮಾತನಾಡಿದ್ದಳು ಅಪರೂಪಕ್ಕೆ.
‘ಮದುವೆಯೇ ಆಗಿಲ್ಲವೆಂದು ಹೇಳಿಬಿಡುವುದಲ್ಲವೇ?’ – ತಂಗಿ
‘ಲಗ್ನ ಪತ್ರಿಕೆ?’
‘ಓಹ್! ಮತ್ತೆ?’
‘ಮೊನ್ನೆ ಅಪ್ಪ ಬಾಯಿಗೆ ಬಂದಂತೆ ಆಡ್ತಾ ಇತ್ತು, ನನ್ನನ್ನ ಬೀದಿಗೆ ನಿಲ್ಲಿಸಿಬಿಟ್ಟೆ, ಅಳಿಯ ಎಲ್ಲಿ ಅಳಿಯ ಎಲ್ಲಿ ಎಂದು ಕೇಳೋರ್ಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ, ನಿನ್ನಿಂದ ನನ್ನ ಮಗನ ಮದ್ವೆ ಕೂಡ ಬೇಗ ಆಗ್ತಾ ಇಲ್ಲ ಅಂದ್ರು, ಈಗೀಗ ಕುಡಿಯೋದು ಕೂಡ ಜಾಸ್ತಿ ಮಾಡಿದ್ದಾರೆ, ನಾನೇನು ಮಾಡೋದು, ಇದೆಲ್ಲಾ ನಡೆಯದೇ ಇದ್ದಾಗಲೂ ಯಾರೂ ಮದುವೆ ವಿಚಾರ ಹಿಡಿದುಕೊಂಡು ಮನೆಗೆ ಬರಲಿಲ್ಲವಲ್ಲ’
‘ಮುಂದೆ ಏನು ಮಾಡೋಕಾಗುತ್ತೆ?’
‘ಹೇಗಿದ್ರೂ ಯಾರೂ ಮದುವೆಗೆ ಬಂದಿರಲಿಲ್ಲ, ಮತ್ತೆ ಯಾವುದಾದರೂ ದೂರದ ಸಂಬಂಧ ಗೊತ್ತುಮಾಡೋದು ಅಂಥ ಹೇಳ್ತಿದ್ದಾರೆ. ಆದ್ರೆ ಯಾರಿದ್ದಾರೆ? ಮದ್ವೆ ಸಮಯದಲ್ಲಿ ಈ ವಿಚಾರವೇನಾದರೂ ಗೊತ್ತಾದ್ರೆ, ಯಾರಾದರೂ ಬಂದ್ರೆ ಹೇಳಿಯೇ ತೀರಬೇಕು ಅನ್ನೋದು ನನ್ನ ಮಾತು, ಈಗ ಮಾತು ಬದಲಿಸಿಬಿಟ್ರೆ, ಮುಂದೆ?’
ಸಿಪ್ಪೆ ತೆಗೆದು ಹಣ್ಣು ತಿಂದಾತ ‘ಇಬ್ಬರನ್ನೂ ಜೊತೆಯಲ್ಲಿರಿಸಿಕೊಳ್ಳುತ್ತೇನೆ’ ಎಂದು ಫೋನಿನಲ್ಲಿ ಹೊಸ ವರಸೆ ತೆಗೆದವನು ನಂತರ ಫೋನಿಗೂ ಸಿಗಲಿಲ್ಲ, ಪೋಲೀಸರಿಗೂ. ಆತನ ಗಮ್ಮತ್ತೇ ಹಣ್ಣು ತಿನ್ನುವುದಾಗಿತ್ತು ಎನಿಸುತ್ತಿದೆ. ಒಂದು ಹುಡುಗಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋದವನು ಈಜು ಕಲಿಸದೇ ನಡು ನೀರಿನಲ್ಲಿ ಬಿಟ್ಟುಬಿಟ್ಟ. ನಾ ಕಂಡಂತೆ ಈ ಹುಡುಗಿ ನಮ್ಮಿಂದ ಸ್ವಲ್ಪ ದೂರ ನಿಂತೇ ಬೆಳೆದವಳು, ಮಹಾಮೌನಿ. ಈಗ ಉಳಿದೆಲ್ಲಾ ಕಾಲವನ್ನೂ ಮೌನಗರ್ಭದಲ್ಲಿಯೇ ಹೂತು ಕಳೆಯಲು ತೀರ್ಮಾನಿಸಿಬಿಟ್ಟಿದ್ದಾಳೆ. ಈ ಜಿಪುಣರ ಮನೆಯಲ್ಲಿ ಸಾಯಲು ಹಗ್ಗ ದೊರಕಿರುವುದೂ ಆಶ್ಚರ್ಯ. ಸಂದಿಗ್ಧತೆಗೆ ಸೋತು ಆತನ ಜೊತೆ ಹೋದವಳು ಇನ್ನೂ ಹೆಚ್ಚು ಸಂದಿಗ್ಧತೆಯನ್ನು ಹೊತ್ತುಕೊಂಡು ಬಂದು ದಿಕ್ಕೆಟ್ಟಳು. ತನ್ನ ಇಷ್ಟದ ಗಂಡನ್ನು ಆಯ್ಕೆ ಮಾಡಿಕೊಂಡ ಆಕೆಯ ಮನಸ್ಥಿತಿಯನ್ನು ಮೆಚ್ಚಬೇಕಾದ ನಾನು ಆಕೆಯ ಹೆಣವನ್ನು ಕಂಡಿದ್ದಕ್ಕಾಗಿ ನನ್ನನ್ನೇ ನಾನು ಶಪಿಸಿಕೊಳ್ಳುತ್ತಿದ್ದೇನೆ. ಆಕೆಯ ಸ್ಥಿತಿ ಕತ್ತಲಿನಲ್ಲಿ ಸೂಜಿ ಹುಡುಕಿ ದಾರ ಪೋಣಿಸುವಂತಿತ್ತು. ನಂತರದಲ್ಲಿ ಮದುವೆಯಾಗಲು ಮುಂದೆ ಬಂದವರೆಲ್ಲಾ ಮೂರನೇ ನಾಲ್ಕನೇ ಹೊಸಗೆಯವರು, ಜೊತೆಗೆ ಹೆಚ್ಚು ವರದಕ್ಷಿಣೆ, ಸೈಟು, ಕಾರು ಎಂದು ಬೇಡಿದವರು. ನಿಜ ಹೇಳಬೇಕೆಂದರೆ, ಈ ಜಗದ ಗದ್ದಲದ ನಡುವೆ ಕುಡಿಯೊಡೆದ ಈಕೆಯೊಳಗೆ ಭುಗಿಲೆದ್ದ ಬೆಂಕಿಗೆ ಆಕೆ ಎಲ್ಲೂ ಜವಾಬ್ದಾರಳಲ್ಲ. ಒಟ್ಟಿನಲ್ಲಿ ಈಗ ಚಿರಮೌನಿ.
ಇದೆಲ್ಲಾ ಮಗಿಸಿ ಮನೆಗೆ ಬಂದಾಗ ಸಂಜೆಯಾಗಿತ್ತು. ಬೆಳಕಿನೊಂದಿಗೆ ಆಕೆ ಲೀನವಾಗಿಹೋಗಿದ್ದಳು. ಬೆಂಕಿ ಮೂಲಕ! ಆದರೆ, ಹೊಸ್ತಿಲು ದಾಟಿ ಪಂಜರದ ಬಳಿ ಹೋದೊಡನೆ ನನ್ನ ಪಕ್ಷಿ ಆಶ್ಚರ್ಯ ನೀಡಿತ್ತು. ಜೋಡಿ ಮೊಟ್ಟೆ! ತಂದೆ ಯಾರು ಎಂದು ತಿಳಿಯದೇ! ಪಂಜರದೊಳಗೂ ನಗುವ ಪಕ್ಷಿ ನಾ ಬಂದೊಡನೆ ಕಿಚಿಪಿಚಿ ಮಾಡುತ್ತ ಹೆಗಲ ಮೇಲೆ ಕುಳಿತುಕೊಂಡಿತ್ತು. ಮುಟ್ಟಿನ ಮನೆಯಿಂದ ನಾ ಬಂದಿದ್ದರೂ ಅದಕ್ಕೆ ಮೈಲಿಗೆಯಾಗಲಿಲ್ಲ. ಈ ಪ್ರಪಂಚದಲ್ಲಿ ಅದೇನೇ ಇರಲಿ, ಸೃಷ್ಟಿದತ್ತವಾಗಿ ಒಡಮೂಡದ ನೂರಾರು ಸಂಗತಿಗಳು ತುಂಬಿಕೊಂಡಿರಲಿ, ಈ ಪಕ್ಷಿಗೆ ಎಂದಿಗೂ ಅವುಗಳು ಗೆರೆಗಳಲ್ಲ!

‍ಲೇಖಕರು G

October 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: