ಜೋಗಿಮನೆ : ಮೊನ್ನೆ ನಾನೊಂದು ಒಂಟೆಯನ್ನು ನೋಡಿದೆ..

ಮೊನ್ನೆ ನಾನೊಂದು ಒಂಟೆಯನ್ನು ನೋಡಿದೆ. ನಮ್ಮ ಬೀದಿಯಲ್ಲಿ ಅದು ಸರಾಗವಾಗಿ ನಡೆದುಕೊಂಡು ಬರುತ್ತಿತ್ತು. ಆ ಕ್ಷಣಕ್ಕೆ ನನಗೆ ಅದು ಒಂಟೆಯೆಂದು ನಂಬಲಿಕ್ಕೂ ಆಗಲಿಲ್ಲ. ಆಗಷ್ಟೇ ಬೆಳಗಾಗಿತ್ತು. ಸೂರ್ಯ ಇನ್ನೂ ನಮ್ಮ ಮನೆಯ ಮುಂದಿರುವ ಅಪಾರ್ಟುಮೆಂಟಿನ ಗೋಡೆ ದಾಟಿರಲಿಲ್ಲ. ಬೆಳಕು ಮಾತ್ರ ಬಕೆಟ್ಟಿನಿಂದ ಬೀದಿಗೆ ಚೆಲ್ಲಿದ ಅರಿಶಿನದ ನೀರಿನಂತೆ ಚೆಲ್ಲಾಡಿತ್ತು.
ನಮ್ಮ ಬೀದಿಯ ಮಂದಿ ಆಗಲೇ ಎದ್ದು ಮುಂಜಾನೆಯ ಗಡಿಬಿಡಿಯನ್ನು ಸವಿಯುತ್ತಿದ್ದರು. ಮೂಲೆ ಮನೆಯವರು ನೀಲಿ ಕಾರು ತೊಳೆಯುತ್ತಿದ್ದರೆ, ಪಕ್ಕದ ಮನೆಯ ಹುಡುಗ ವಾಕಿಂಗು ಮುಗಿಸಿ ತಲೆಯಿಂದ ಕಾಲಿನವರೆಗೆ ಬೆವತು ವಾಪಸ್ಸು ಬರುತ್ತಿದ್ದ.
ಅಂಥ ಹೊತ್ತಲ್ಲಿ ಒಂಟೆ ಕಾಣಿಸಿಕೊಂಡಿತು. ಅದು ಘನಗಾಂಭೀರ್ಯದಿಂದ ರಸ್ತೆಯ ಎರಡೂ ಬದಿಯಲ್ಲಿರುವ ಮನೆಯವರು ಹಾಕಿದ ರಂಗೋಲಿಯ ನಡುವೆ ನಡೆದುಕೊಂಡು ಬರುತ್ತಿತ್ತು. ಅದರ ಕಣ್ಣಾಲಿಗಳು ಅರ್ಧ ಮುಚ್ಚಿದ್ದವು. ಮೂಗಿನ ಹೊಳ್ಳೆಗಳು ಗಾಳಿ ಹೀರಿಕೊಳ್ಳುತ್ತ ಬಿಡುತ್ತ ಅಗಲವೂ ಸಪೂರವೂ ಆಗುತ್ತಿದ್ದವು. ಅದರ ಮೋಟು ಬಾಲ ನಡಿಗೆಯ ಓಘಕ್ಕೆ ತಕ್ಕಂತೆ ಕೊಂಚಕೊಂಚ ಎಡಕ್ಕೂ ಬಲಕ್ಕೂ ವಾಲಾಡುತ್ತಿತ್ತು. ವಿಳಾಸ ಖಚಿತವಾಗಿರುವ ಬೀದಿಗೆ ಆತ್ಮವಿಶ್ವಾಸದಿಂದ ಕಾಲಿಡುವ ಕೊರಿಯರ್‌ ಹುಡುಗನಂತೆ, ಒಂಟೆ ಅತ್ತಿತ್ತ ನೋಡದೇ ನಡೆದು ಬರುತ್ತಿತ್ತು.
ಬೆಳಗಾಗೆದ್ದು ಒಂಟೆ ಕಣ್ಣಿಗೆ ಬಿದ್ದರೆ ಶುಭಶಕುನವೋ ಅಪಶಕುನವೋ ಗೊತ್ತಿರಲಿಲ್ಲ. ಯಾವುದಾದರೂ ಟೀವಿ ಆನ್‌ ಮಾಡಿ, ಅಲ್ಲಿರುವ ನಂಬರಿಗೆ ಫೋನಿಸಿ, ಮುಂಜಾನೆ ಜ್ಯೋತಿಷಿಗಳನ್ನು ಒಂದು ಮಾತು ಕೇಳಿಬಿಡಬೇಕು ಅಂತ ಆ ಕ್ಷಣ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಅಂಥ ಹುಂಬ ಆಶೆಯನ್ನು ತಳ್ಳಿಹಾಕಿ ನಾನು ಒಂಟೆಯನ್ನೇ ಗಮನಿಸೊಡಗಿದೆ. ನನ್ನ ಮನೆಯ ಬಾಲ್ಕನಿಯ ಸರಳಿನ ಹಿಂದೆ ಅನಾಥನಂತೆ ನಿಂತುಕೊಂಡು ನಾನು ಒಂಟೆಯನ್ನೇ ನೋಡುತ್ತಿರುವುದು ಒಂಟೆಗೆ ಗೊತ್ತಿರಲಿಲ್ಲ. ಆದರೆ ನನಗೆ ನಾನು ಒಂಟೆ ನೋಡುತ್ತಿದ್ದೇನೆ ಅನ್ನುವುದು ಗೊತ್ತಿತ್ತು. ನಮ್ಮಿಬ್ಬರಿಗೆ ಆ ಬೆಳಗ್ಗೆ ಇದ್ದ ವ್ಯತ್ಯಾಸ ಅದೊಂದೇ ಎಂದು ಕಾಣುತ್ತದೆ.
ಒಂಟೆ ಒಂಟಿಯಾಗಿದೆಯಾ ಎಂದು ಅದರ ಅಕ್ಕಪಕ್ಕ ನೋಡಿದೆ. ಹಿಂದೊಮ್ಮೆ ಗುಜರಾತಿನ ಹುಡುಗನೊಬ್ಬ ಮಕ್ಕಳನ್ನು ಕೂರಿಸಿಕೊಂಡು ಹೋಗಲು ನಮ್ಮ ಬೀದಿಗೂ ಒಂಟೆ ಕರೆದುಕೊಂಡು ಬಂದಿದ್ದ. ಆಗಲೂ ನಾನು ಹೀಗೇ ಒಂಟೆಯನ್ನು ನೋಡಿದ್ದೆ. ಹತ್ತೋ ಹನ್ನೆರಡೋ ಅಡಿ ಎತ್ತರದ ಒಂಟೆಯ ಮುಂದೆ ಆ ಹುಡುಗ ಬೆರಳುದ್ದದ ಪವಾಡಪುರುಷನಂತೆ ಕಾಣಿಸುತ್ತಿದ್ದ. ಆ ಒಂಟೆ ಜೋರಾಗಿ ಉಸಿರುಬಿಟ್ಟರೇ ಹಾರಿಹೋಗುವವನಂತಿದ್ದ ಆ ಹುಡುಗ, ಒಂಟೆಯ ಕತ್ತಿಗೆ ಸುತ್ತಿದ್ದ ಹಗ್ಗವನ್ನು ಬಲಗೆ„ಲಿ, ಸಪೂರದ ಒಂದು ಬೆತ್ತವನ್ನು ಎಡಗೆ„ಲಿ ಹಿಡಕೊಂಡು ಒಂಟೆಯನ್ನು ನಿಯಂತ್ರಿಸುತ್ತಿದ್ದ. ಆತ ಅದ್ಯಾವುದೋ ಭಾಷೆಯಲ್ಲಿ ಆಜ್ಞೆ ಮಾಡಿದರೆ ಒಂಟೆ ಎರಡೂ ಮುಂಗಾಲುಗಳನ್ನು ಹಿಂದಕ್ಕೆ ಮಡಚಿ ಕೂತುಬಿಡುತ್ತಿತ್ತು. ಆತ ಮಕ್ಕಳನ್ನು ಅದರ ಮೇಲೆ ಹತ್ತಿಸಿ ಒಂಟೆಯನ್ನು ಬೀದಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಒಂದು ಸುತ್ತು ಒಯ್ದು ವಾಪಸ್ಸು ತಂದು ಬಿಡುತ್ತಿದ್ದ.
ಅವನ ಒಂಟೆಯ ಆಕರ್ಷಣೆ ಎಷ್ಟಿತ್ತೆಂದರೆ ಕೆಲವೊಮ್ಮೆ ಮಕ್ಕಳ ಜೊತೆ ತಾಯಂದಿರು ಕೂಡ ಒಂಟೆ ಹತ್ತುತ್ತಿದ್ದರು. ಒಂಟೆಯನ್ನು ಕೆಳಗೆ ನಿಂತು ನೋಡಿದಾಗ ಅದರ ಎತ್ತರ ಅವರಿಗೆ ಅರಿವಾಗುತ್ತಿರಲಿಲ್ಲವೆಂದು ಕಾಣುತ್ತದೆ. ಒಂಟೆ ಎದ್ದು ನಿಲ್ಲುತ್ತಿದ್ದಂತೆ ಅವರು ತುಟಿ ಕಚ್ಚಿ ಹಿಡಿದು, ಭಯವಾಗಿಲ್ಲ ಎಂಬಂತೆ ನಟಿಸುತ್ತಾ, ಕಣ್ಣುಗಳನ್ನು ವಿರುದ್ಧ ದಿಕ್ಕಿನಲ್ಲಿ ಝಳಪಿಸಿ ಯಾವ ಕ್ಷಣದಲ್ಲಿ ಬೇಕಿದ್ದರೂ ಬಿದ್ದು ಹೋಗುತ್ತೇನೆ ಎಂಬ ಭಾವದಲ್ಲಿ ಒಂಟೆಯ ಡುಬ್ಬಕ್ಕೆ ಒರಗಿ ಕೂತುಬಿಡುತ್ತಿದ್ದರು. ತನ್ನ ಮೇಲೆ ಕೂತಿರುವುದು ಮಗುವೋ ದೊಡ್ಡವರೋ ಎಂದು ಚಿಂತೆ ಕೂಡ ಮಾಡದೇ ಒಂಟೆ ಅದೇ ವೇಗದಲ್ಲಿ ಸುತ್ತು ಹಾಕಿ ಬರುತ್ತಿತ್ತು.
ಒಂಟೆಯಿಂದ ಕೆಳಕ್ಕಿಳಿಯುತ್ತಲೇ, ಅಷ್ಟೂ ಹೊತ್ತು ಭಯಭೀತರಾಗಿದ್ದ ಗƒಹಿಣಿಯರು ಏನೂ ಆಗಲ್ಲ, ಮಜವಾಗಿರುತ್ತೆ.. ಹೋಗಿ, ಒಂಚೂರೂ ಭಯ ಆಗಲ್ಲ ಅಂತ ಬೇರೆ ಗƒಹಿಣಿಯರನ್ನು ಪುಸಲಾಯಿಸುತ್ತಿದ್ದರು. ಅವರು ಒಂಟೆ ಹತ್ತಿದ ಗƒಹಿಣಿಯ ಕಣ್ಣುಗಳಲ್ಲಿ ಹೆಪ್ಪುಗಟ್ಟಿದ ಭಯವನ್ನು ಕಣ್ಣಾರೆ ಕಂಡವರಾದ್ದರಿಂದ, ಆ ಮಾತುಗಳಿಂದ ವಿಚಲಿತರಾಗದೇ, ನಾನು ರಾಜಸ್ಥಾನಕ್ಕೆ ಹೋದಾಗ ಕೂತಿದ್ದೆ, ಡೆಲ್ಲಿಯಲ್ಲಿ ಕೂತಿದ್ದೆ, ದುಬೆ„ಯಲ್ಲಿ ಕೂತಿದ್ದೆ ಅಂತ ತಮ್ಮ ತಮ್ಮ ಹಳೆಯ ಪ್ರವಾಸದ ಕತೆಗಳನ್ನು ಹೇಳಿ, ಒಂಟೆ ಸವಾರಿಯಿಂದ ಪಾರಾಗಲು ಹವಣಿಸುತ್ತಿದ್ದರು.
ನಾನು ಆ ಬೆಳಗ್ಗೆ ನೋಡಿದ ಒಂಟೆಯ ಜೊತೆ ಯಾರೂ ಇರಲಿಲ್ಲ. ಅದರ ಕತ್ತಿನಲ್ಲಿ ಹಗ್ಗ ಕೂಡ ಇರಲಿಲ್ಲ. ತೆಲುಗು ಸಿನಿಮಾಗಳ ಹೀರೋಗಳು ಮೊದಲ ದೃಶ್ಯದಲ್ಲಿ ಬಿಲ್ಡಪ್‌ ಕೊಟ್ಟು ತೆರೆಗೆ ಕಾಲಿಡುವಂತೆ ಆ ಒಂಟೆ ಗತ್ತಿನಿಂದ ನಡೆದುಕೊಂಡು ಬರುತ್ತಿತ್ತು. ತನ್ನನ್ನು ನಿಲ್ಲಿಸುವ, ಕೂರಿಸುವ ಮಂತ್ರ ಗೊತ್ತಿರುವ ಹುಡುಗ ಜೊತೆಗಿಲ್ಲ ಎಂಬ ಹಮ್ಮು ಬೇರೆ ಅದರ ದಪ್ಪ ತುಟಿಗಳಲ್ಲಿ ಕುಣಿದಾಡುತ್ತಿದ್ದಂತೆ ನನಗೆ ಅನ್ನಿಸಿತು.

ಕುದುರೆಯಂತೆ ಎರಡೂ ಮುಂಗಾಲುಗಳನ್ನು ಎತ್ತಿಹಾಕದೇ, ಮುಂಗಾಲಿನ ಎರಡು ಉಗುರುಗಳನ್ನು ಮಾತ್ರ ನೆಲಕ್ಕೆ ಊರಿ, ನೆಲ ಗಟ್ಟಿಯಾಗಿದೆ ಅಂತ ಖಾತ್ರಿ ಮಾಡಿಕೊಂಡು ಮತ್ತೂಂದು ಕಾಲನ್ನೆತ್ತಿ ಇಡುವಂತೆ ತೋರುತ್ತಿದ್ದ ಒಂಟೆ ಆ ಮುಂಜಾವದ ಪರಿಸರದಲ್ಲಿ ನನಗೆ ಹಗಲುಗನಸಿನಂತೆ ಭಾಸವಾದದ್ದಂತೂ ನಿಜ.
ನಾನು ನಮ್ಮ ಮನೆಯ ಬಾಲ್ಕನಿಯಲ್ಲೇ ಇದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡಿದೆ. ಮನೆಯ ಗೋಡೆ, ಬಾಲ್ಕನಿಯ ಸರಳುಗಳು, ಅಲ್ಲಿ ಒಣಹಾಕಿದ ಶರಟು, ಬನಿಯನ್ನು, ಮಗಳ ಯೂನಿಫಾರ್ಮು ಎಲ್ಲವೂ ಇತ್ತು. ನಾನು ಯಾವುದೇ ಮರುಭೂಮಿಯ ನಡುವೆ ನಿಂತಿಲ್ಲ ಎಂದು ಖಾತ್ರಿ ಮಾಡಿಕೊಂಡು, ಮತ್ತೂಮ್ಮೆ ಒಂಟೆಯನ್ನು ನೋಡಿದೆ. ಅದು ಆಗಲೇ ನಮ್ಮ ಮನೆಯ ಸಮೀಪ ಬರತೊಡಗಿತ್ತು. ಇನ್ನೇನು ಅದು ನಮ್ಮ ಮನೆಗೇ ಬರುತ್ತಿದೆ. ನಮ್ಮ ಮನೆಯ ಮುಂದೆ ಬಂದು ನಿಂತುಬಿಡುತ್ತದೆ. ನಾನು ಹೊರಗೆ ಹೋಗುತ್ತಿದ್ದಂತೆ ನನ್ನನ್ನು ಅನುಕಂಪದ ಕಣ್ಣಿಂದಲೋ ಸಿಟ್ಟಿನಿಂದಲೋ ನೋಡುತ್ತದೆ. ಅದರ ಕಣ್ಣಿಂದ ಬಳಬಳ ನೀರು ಸುರಿಯುತ್ತದೆ. ಸಿಟ್ಟಿನಲ್ಲಿದ್ದರೆ ಅದು ಒಮ್ಮೆ ಹೂಂಕರಿಸಿ ನನ್ನನ್ನು ಮೂತಿಯಿಂದ ತಿವಿಯುತ್ತದೆ. ಹೀಗೆಲ್ಲ ಯೋಚಿಸುತ್ತ ಆ ಬೆಳಗ್ಗೆ ಯಾಕೋ ಸಿಕ್ಕಾಪಟ್ಟೆ ಭಯವಾಗತೊಡಗಿತು.
ಒಂಟೆ ಮತ್ತಷ್ಟು ಹತ್ತಿರ ಬಂತು. ಒಂಟೆ ನನಗೇನೂ ಮಾಡದಿರಬಹುದು. ಸುಮ್ಮನೆ ನಮ್ಮ ಮನೆಯ ಮುಂದೆ ಬಂದು ನಿಂತುಬಿಡಬಹುದು. ಒಂಟೆ ಹೊರಗೆ ನಿಂತಿರುವಾಗ ನಾವು ಹೇಗೆ ಹೊರಗೆ ಹೋಗುವುದು. ಹೇಗೆ ಒಳಗೇ ಕೂತಿರುವುದು. ಅದು ಎಲ್ಲಿಗೂ ಹೋಗದೇ,ಮನೆಯ ಮುಂದೆಯೇ ನಿಂತುಬಿಟ್ಟರೆ? ಯಾವುದಾದರೂ ಟೀವಿ ಚಾನಲ್ಲಿಗೆ ´ೋನ್‌ ಮಾಡಿ ಹೇಳಿಬಿಡಲೇ? ಅವರು ಬಂದು ನಗರದಲ್ಲಿ ಪತ್ತೆಯಾದ ಒಂಟೆ. ಇಂಥವರ ಮನೆ ಮುಂದೆ ಕಾಣಿಸಿಕೊಂಡಿದೆ. ಈ ಒಂಟೆಗೂ ಅವರಿಗೂ ಏನು ಸಂಬಂಧ? ಹೀಗೆ ತರತರದ ಬ್ರೇಕಿಂಗ್‌ ನ್ಯೂಸುಗಳನ್ನು ಹಾಕುತ್ತಾ, ಕೊನೆಗೆ ನಾನೇ ಒಂಟೆ ಸಾಕುತ್ತಿದ್ದೇನೆ ಎಂಬ ತೀರ್ಮಾನಕ್ಕೆ ಅರಣ್ಯ ಇಲಾಖೆಯವರೂ ಪ್ರಾಣಿದಯಾ ಸಂಘದವರೂ ಬಂದುಬಿಟ್ಟರೆ? ಮನೆ ಮುಂದೆ ಒಂಟೆಯನ್ನು ನಿಲ್ಲಿಸಿಕೊಂಡದ್ದಕ್ಕಾಗಿ ನನಗೆ ಶಿಕ್ಷೆಯಾದರೆ? ಒಂಟೆ ನನ್ನದಲ್ಲ ಎಂದು ನಾನೇನೋ ಹೇಳಿಬಿಡಬಹುದು. ಆದರೆ ಒಂಟೆ ಹೇಳಬೇಕಲ್ಲ. ಅದು ನನ್ನನ್ನು ದಯಾದ್ರì ಕಂಗಳಿಂದ ನೋಡಿದಾಗ ಬುದ್ಧಿವಂತ ಕ್ಯಾಮರಮನ್‌ ಅದನ್ನೂ ಸೆರೆಹಿಡಿದು ತೋರಿಸಿದರೆ? ಅಕ್ಕಪಕ್ಕದ ಮನೆಯವರ ಸಾಕ್ಷಿ ಕೇಳಬಹುದು. ಆದರೆ ಅವರು ಒಂಟೆಯನ್ನು ಇದುವರೆಗೆ ನೋಡಿಲ್ಲ ಎಂದು ಹೇಳಬಲ್ಲರು. ಒಂಟೆ ನನ್ನದಲ್ಲ ಎಂದು ಹೇಳಲಾರರು.
ಒಂಟೆಯೊಂದು ಯಾಕಾದರೂ ಬರಬೇಕು ನಮ್ಮ ಬೀದಿಗೆ ಅಂತ ಸಿಟ್ಟು ಬಂತು. ಅದನ್ನು ಅಲ್ಲಿಂದಲೇ ಓಡಿಸಿಬಿಡಬೇಕು ಅಂದುಕೊಂಡೆ. ತನ್ನ ಪರಿಸರವನ್ನು ಬಿಟ್ಟು, ಮರಳುಗಾಡನ್ನು ಬಿಟ್ಟು, ತನ್ನವರನ್ನು ಬಿಟ್ಟು ಅದು ಬೆಳ್ಳಂಬೆಳಗ್ಗೆ ನಮ್ಮ ಬೀದಿಗೆ ಬಂದು, ನನ್ನಲ್ಲಿ ಅಸಂಖ್ಯಾತ ಪ್ರಶ್ನೆಗಳನ್ನು, ಅನೂಹ್ಯ ಭಯವನ್ನೂ ಹುಟ್ಟಿಸಿ ಏನು ಸಾಧಿಸಲಿಕ್ಕೆ ಹೊರಟಿದೆ. ಅಕ್ಕಪಕ್ಕದ ಮನೆಯವರು, ಬೀದಿಯ ಕೊನೆಯ ಮನೆಯವರೂ ಒಂಟೆಯನ್ನು ನೋಡಿರಬಹುದೇ? ಅವರಿಗೂ ಹೀಗೆ ಅನ್ನಿಸಿರಬಹುದೇ? ಅಥವಾ ಅವರ ಮನೆಯನ್ನು ಒಂಟೆ ದಾಟಿ ಬಂದಿದ್ದರಿಂದ ಅವರು ನೆಮ್ಮದಿಯಾಗಿದ್ದಾರೆಯೇ?
ಒಂಟೆ ಬರುತ್ತಲೇ ಇತ್ತು. ಅದರ ಡುಬ್ಬ, ಎತ್ತಿದ ಸೊಂಡಿಲಿನಂಥ ಕತ್ತು, ನಡೆಯುವಾಗಿನ ಲಯಬದ್ಧ ಸದ್ದು ಸಮೀಪಿಸತೊಡಗಿತು. ನಾನು ಮನೆಯಲ್ಲಿಲ್ಲ ಎಂದು ಅದಕ್ಕೆ ಗೊತ್ತಾಗಲಿ, ಅದರ ಕಣ್ಣಿಗೆ ನಾನು ಬೀಳುವುದು ಬೇಡ ಎಂದು ಗೋಡೆಯ ಮರೆಗೆ ಸರಿದು ನಿಂತೆ.
ಒಂಟೆ ನಮ್ಮ ಮನೆಯ ಮುಂದೆ ನಿಂತಿತೇ? ಅಥವಾ ನನಗೆ ಹಾಗನ್ನಿಸಿತೇ? ನಾನು ಒಮ್ಮೆ ಎದೆಬಡಿತ ನಿಂತು ಹೋದವನಂತೆ ಚಡಪಡಿಸಿದೆ. ಮರುಕ್ಷಣ ಒಂಟೆ ನಮ್ಮನೆಯನ್ನು ದಾಟಿ ಮುಂದೆ ಹೋಯಿತು. ಅಬ್ಬ, ಬದುಕಿದೆ ಅಂದುಕೊಂಡೆ. ಯಾರಾದರೂ ಕೇಳಿದರೆ, ನಾನಿನ್ನೂ ಎದ್ದಿರಲೇ ಇಲ್ಲ, ಒಂಟೆಯನ್ನು ನೋಡಿರಲೇ ಇಲ್ಲ ಅಂತ ಹೇಳಬೇಕು ಅಂದುಕೊಂಡೆ.
ಬಹುಶಃ ನಮ್ಮ ಮನೆಯ ಪಕ್ಕದಲ್ಲಿರುವ ಮನೆಯವನಿಗೆ ನನ್ನ ಹಾಗೇ ಆತಂಕ ಶುರುವಾಗಿರಬಹುದು. ಅವನ ಮನೆಯನ್ನು ಒಂಟೆ ದಾಟುವ ತನಕ ಅವನೂ ಬಾಲ್ಕನಿಯಿಂದ ನೋಡುತ್ತಿರಬಹುದು. ಯಾವುದಕ್ಕೂ ನಾನು ಸಾಕ್ಷಿಯಾಗ ಬಾರದು ಅಂದುಕೊಂಡು ಒಳಗೆ ಹೋಗಿ ನಿತ್ಯದ ಕೆಲಸಗಳಲ್ಲಿ ತೊಡಗಿಕೊಂಡೆ.
ಆಫೀಸಿಗೆ ಹೊರಟು ಹೊರಗೆ ಬರುವಾಗ ಬೀದಿಯ ಇತರ ಮಂದಿ ಸಿಕ್ಕರು. ಎಂದಿನಂತೆ ನಕ್ಕರು. ಯಾರೂ ಯಾರ ಹತ್ತಿರವೂ ಬೆಳ್ಳಂಬೆಳಗ್ಗೆ ಒಂಟೆ ನೋಡಿದ ಕತೆಯನ್ನು ತಪ್ಪಿಯೂ ಹೇಳಿಕೊಳ್ಳಲಿಲ್ಲ. ಆವತ್ತು ನಾವ್ಯಾರೂ ಒಂಟೆಯನ್ನೇ ನೋಡಿರಲಿಲ್ಲ ಎಂದು ನಮ್ಮನ್ನೇ ನಾವು ನಂಬಿಸಿಕೊಳ್ಳುತ್ತ ನಮ್ಮ ನಮ್ಮ ಕಛೇರಿಗಳಿಗೆ ತೆರಳಿದೆವು.

‍ಲೇಖಕರು G

October 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Anil Talikoti

    ಬೇರೆಲ್ಲಾ ಕಾಲಗಳಿಗಿಂತ ಇದೀಗ ನಾವು ನಿರ್ಲಿಪ್ತರು,ತಟಸ್ಥರು ಆಗಿದ್ದೆವೆ ಏನೋ ಅನಿಸುತ್ತದೆ. ಪ್ರಶ್ನೆ ನಮ್ಮ ಮೂಲಕ್ಕೆ ಬಂದಾಗ ಭಯದಿಂದ ಎತ್ತುವ ಕೈ -ಇನ್ನೊಬ್ಬರಿಗೆ ಅದು ದಾಟಿದಾಗ ಅಭಯ ಹಸ್ತ. ಕಸ ನಮ್ಮದಲ್ಲದಾಗ ನಿಟ್ಟುಸಿರು, ಪರಿಚಿತರದಾದರೆ ಭಾರದುಸಿರು, ಅಪರಿಚಿತರದಾದರೆ ಭಯಂಕರ ಸಿಟ್ಟಿನ ಬೆಂಕಿ ಉಗಳುವ ಉಸಿರು. ಅನೂಹ್ಯ ಭಯವಾದಿಗಳು ನಾವೆಲ್ಲಾ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  2. malathi S

    Nice!!
    ಒಂಟೆ ದರ್ಶನದ ಕತೆ ಚೆನ್ನಾಗಿದೆ
    🙂

    ಪ್ರತಿಕ್ರಿಯೆ
  3. Vidyashankar H

    ನಾವ್ಯಾರೂ ಒಂಟೆಯನ್ನೇ ನೋಡಿರಲಿಲ್ಲ ಎಂದು ನಮ್ಮನ್ನೇ ನಾವು ನಂಬಿಸಿಕೊಳ್ಳುತ್ತ ನಮ್ಮ ನಮ್ಮ ಕಛೇರಿಗಳಿಗೆ ತೆರಳಿದೆವು… Is the key to decipher the article…:-)

    ಪ್ರತಿಕ್ರಿಯೆ
  4. prashanth

    ಒಂಟೆ ಅನೇಕ ಘಟನೆಗಳಿಗೆ ಸಂಕೇತದಂತೆ ಕಂಡಿತು. ಅದು ಸಾವು ಆಗಿರಬಹುದೇ. ಭಯೋತ್ಪಾದನೆ, ಕೋಮುವಾದ ಆಗಿರಬಹುದು. ಉದಾರೀಕರಣ, ಪರಭಾಷೆಯ ಆಕ್ರಮಣ ಆಗಿರಬಹುದು. ಜಾಗತೀಕರಣವೂ ಆಗಿರಬಹುದು. ಚೆಂದದ ಕತೆ. ಭಯಗೊಳಿಸುವಂತಿದೆ.

    ಪ್ರತಿಕ್ರಿಯೆ
  5. amardeep.p.s.

    ನಮ್ಮ ಒಣಿಯಲ್ಲೂ ಒಂಟೆ ಬರುತ್ತದೆ … ನಾವು ಹತ್ತಿದ್ದೇವೆ . ಆದರೆ ಸಣ್ಣ ಎಳೆಗೂ ಇಷ್ಟು ಚೆಂದದ ಲೇಖನದ ನಿರೂಪಣೆ ನೀಡಿದ ನಿಮ್ಮ ಬರಹ ಬಹಳ ಇಷ್ಟವಾಯಿತು .. ಸರ್ /// ಅಭಿನಂದನೆಗಳು ..

    ಪ್ರತಿಕ್ರಿಯೆ
  6. Pramod

    ಸಣ್ಣ ಸಣ್ಣ ಸ೦ಗತಿಗಳನ್ನು ನಾವು ಮಕ್ಕಳ ಮುಗ್ಧ ಕುತೂಹಲ ಕಣ್ಣಿನಿ೦ದ ಕ೦ಡು ಅನುಭವಿಸಿ, ಚಿಕ್ಕ ಚಿಕ್ಕ ಸ೦ತೋಷಗಳನ್ನು, ಉಲ್ಲಾಸಗಳನ್ನು ಹ೦ಚಿಕೊಳ್ಳುವ ಸುಖ ಕಳೆದುಕೊ೦ಡಿದ್ದೇವೆ. ಅದರಲ್ಲೇನಿದೆ ಅನ್ನೋ ಉಢಾಪೆ.. We are all so pretentious!!

    ಪ್ರತಿಕ್ರಿಯೆ
  7. ಜೆ.ವಿ.ಕಾರ್ಲೊ, ಹಾಸನ

    ಮರಳುಗಾಡಿನಲ್ಲಿರಬೇಕಾದ ಒಂಟೆಗಳು ನಾಡಿಗೆ ಬರುತ್ತಿರುವುದು, ಟಾರ್ ರೋಡಿನಲ್ಲಿ ಬೂಟುಗಳಿಲ್ಲದೆ ನಡೆದುಕೊಂಡು ಬರುತ್ತಿರುವುದು..ಗದ್ದೆಗಳಲ್ಲಿ ಬರಿಗಾಲಿನಿಂದ ಓಡಾಡುತ್ತಿರುವವರು ಈಗ ಅಪಾರ್ಟ್ ಮೆಂಟುಗಳಲ್ಲಿ ಮೆತ್ತನೆ ಚಪ್ಪಲಿ ಹಾಕಿ ಕಮೋಡುಗಳ ಮೇಲೆ ಕುಳಿತು ಕೊಳ್ಳುವುದು.. ಯಾವುದು ಸಂಗತ, ಯಾವುದು ಅಸಂಗತ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: