ತೇಜಾವತಿ ಎಚ್.ಡಿ. ಅವರ ಕೃತಿ ‘ಸೀಮೆ ಜಾಲಿ’
ನಾಗಶ್ರೀ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಕಿರಣ್ ಮಾಳೋದೆ ಅವರ ಬರಹ ಇಲ್ಲಿದೆ.
-ಕಿರಣ್ ಮಾಳೋದೆ
ತೇಜಾವತಿ ಎಚ್.ಡಿ. ಅವರ “ಸೀಮೆ ಜಾಲಿ” ಇಪ್ಪತ್ತೆಂಟು ಕವಿತೆಗಳ ಸಂಕಲನ. ಪ್ರಸ್ತುತ ಸಮಾಜದ ಒತ್ತಡ, ಸಮಾನತೆಯ ಹುಡುಕಾಟ ಮತ್ತು ಧಾವಂತದ ಬದುಕನ್ನು ಸರಳ ಭಾಷೆ ಹಾಗೂ ಆಪ್ತ ಧ್ವನಿಯಲ್ಲಿ ಹಿಡಿದಿಡುವುದು ಇದರ ದೊಡ್ಡ ಶಕ್ತಿ. ದೈನಂದಿನ ಬದುಕಿನಿಂದಲೇ ಹೆಕ್ಕಿದ ಚಿತ್ರಗಳ ಮೂಲಕ ಈ ಕವಿತೆಗಳು ನಮ್ಮದೇ ಬದುಕನ್ನು ಕನ್ನಡಿಯಲ್ಲಿ ತೋರಿಸಿದಂತೆ ಅನಿಸುತ್ತವೆ.
ಹಿರಿಯ ಲೇಖಕಿ ಹಾಗೂ ಕವಯಿತ್ರಿ ಶ್ರೀಮತಿ ಎಚ್. ಎಲ್. ಪುಷ್ಪ ಅವರ ಮುನ್ನುಡಿ ಪುಸ್ತಕದ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಕವಿ ಎಂದರೆ ಫಲವತ್ತಾದ ಭೂಮಿ, ಆ ನೆಲದಲ್ಲಿ ಬೆಳೆದ ಬೆಳೆಯೇ ಕವಿತೆ ಎಂಬ ಅವರ ಉಪಮೆ ನನಗೆ ತುಂಬಾ ಇಷ್ಟವಾಯಿತು. ತೇಜಾವತಿಯವರ ಅನುಭವದ ಮಣ್ಣಿನಲ್ಲಿ ಮೊಳಕೆಯೊಡೆದ ಭಾವಗಳೇ ಇಲ್ಲಿ ಕವಿತೆಗಳಾಗಿ ಫಲ ಕೊಟ್ಟಿವೆ ಎನಿಸುತ್ತದೆ.
ಶೀರ್ಷಿಕೆ ಕವಿತೆ “ಸೀಮೆ ಜಾಲಿ” ಸಂಕಲನದ ಹೃದಯದಂತಿದೆ. ರಸ್ತೆಯ ಇಕ್ಕೆಲಗಳಲ್ಲಿ ಮೈತುಂಬ ಮುಳ್ಳು ಹೊತ್ತು ನಿಂತ ಜಾಲಿ ಮರಗಳ ಚಿತ್ರದೊಂದಿಗೆ ಇದು ಶುರುವಾಗುತ್ತದೆ. ಅವುಗಳ ನಡುವೆ ಹುಟ್ಟಿದ ಒಂದು ದಾಳಿಂಬೆ ಮರ ತಲೆಯೆತ್ತಿ ಸೂರ್ಯನನ್ನು ಎದುರುಗೊಳ್ಳುತ್ತದೆ. ಅದೇ ಗಾಳಿ, ಅದೇ ಬಿಸಿಲು, ಬರಡು ನೆಲ, ಆದರೂ ಆತ್ಮಾಭಿಮಾನದಿಂದ ಬದುಕುವ ಛಲ ಅದರಲ್ಲಿದೆ. ಸುತ್ತ ಮುಳ್ಳಿದ್ದರೂ ಸಿಹಿ ಫಲವನ್ನೇ ಕೊಡುವೆನೆಂಬ ಭೀಷ್ಮಪ್ರತಿಜ್ಞೆ ಅದರದು. ಕೊನೆಗೆ ಜಾಲಿಯ ಮರದಲ್ಲೂ ಗುಬ್ಬಿ ಗೂಡು ಕಟ್ಟಲಿ, ಹಕ್ಕಿಗಳ ಬಾಳು ಹಸನಾಗಲಿ ಎಂಬ ಹಾರೈಕೆ ಮನಸ್ಸಿಗೆ ಹಿತ ನೀಡುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಒಳ್ಳೆಯತನ ಉಳಿಸಿಕೊಳ್ಳುವ ಸಂದೇಶವನ್ನು ಇದು ಸರಳವಾಗಿ ಹೇಳುತ್ತದೆ.
“ಚುಚ್ಚುವ ಸೀರೆ” ನನ್ನನ್ನು ವಿಶೇಷವಾಗಿ ಸೆಳೆದ ಇನ್ನೊಂದು ಕವಿತೆ. ಬೆಳಿಗ್ಗೆ ಮಲ್ಲಿಗೆ ಮುಡಿದು, ಚಂದದ ಸೀರೆಯುಟ್ಟು ಹೊರಟ ಹೆಣ್ಣಿಗೆ ಸಂಜೆಯಾಗುತ್ತಲೇ ಸೀರೆಯ ನೆರಿಗೆ ಚುಚ್ಚತೊಡಗುತ್ತದೆ. ಈ ಸಣ್ಣ ಅನುಭವವನ್ನು ತತ್ಕಾಲಿಕ ಸಂಬಂಧಗಳ ಸ್ವಭಾವಕ್ಕೆ ಹೋಲಿಸಿರುವ ರೀತಿ ಅದ್ಭುತ.
“ಅಪೂರ್ಣ ಕವಿತೆ”ಯಲ್ಲಿ ಕವಿತೆಯಾಗಲು ಹೊರಟು ಅರ್ಧದಲ್ಲೇ ನಿಂತ ಕವಿತೆಯೇ ತನ್ನ ಕಥೆ ಹೇಳುತ್ತದೆ. ನಮ್ಮ ಬದುಕೂ ಕೆಲವೊಮ್ಮೆ ಹೀಗೆಯೇ ಅರ್ಧದಲ್ಲಿ ನಿಂತ ಕವಿತೆಯಂತೆ ಅನಿಸುತ್ತದೆ. ಆದರೆ ಅಪೂರ್ಣತೆಯೂ ತನ್ನದೇ ಆದ ಸೌಂದರ್ಯ ಮತ್ತು ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ಈ ಕವಿತೆ ಮನಗಾಣಿಸುತ್ತದೆ. ಮೀರಾ, ಅಕ್ಕ, ಎಮಿಲಿ, ರಾಬಿಯಾರಂತೆ ಕೆಲವು ಕವಿತೆಗಳು ಇಂದ್ರಿಯಗಳ ಲಗಾಮು ಹಿಡಿದು ಅಧ್ಯಾತ್ಮದ ರಥಕ್ಕೆ ಸಾರಥಿಯಾಗುತ್ತವೆ, ಲೌಕಿಕಕ್ಕೂ ಸರಿಸಾಟಿಯಾಗಿ ನಿಲ್ಲುತ್ತವೆ. ಸೃಜನಶೀಲ ಮನಸ್ಸಿನ ಹೋರಾಟ ಮತ್ತು ಕಾವ್ಯದ ಗೆಲುವು ಇಲ್ಲಿ ಒಂದಾಗಿ ಹೆಣೆದುಕೊಂಡಿವೆ.
“ದರ್ಜೆ ಎರಡನೆಯದೇ…” ಸಂಕಲನದ ಪ್ರಗತಿಪರ ಚಿಂತನೆಯ ಕವಿತೆ. ಕಾಳಜಿ, ಕನಿಕರ, ಒಲುಮೆ, ತ್ಯಾಗ, ಶ್ರಮ, ಪಾಲನೆ-ಪೋಷಣೆ ಎಲ್ಲದರಲ್ಲೂ ಮುಂಚೂಣಿಯಲ್ಲಿರುವ ಹೆಣ್ಣು, ಸಮಾಜ ಕೊಡುವ ದರ್ಜೆಯಲ್ಲಿ ಮಾತ್ರ ಎರಡನೆಯವಳಾಗಿ ಉಳಿದಿರುವುದನ್ನು ಈ ಕವಿತೆ ಪ್ರಶ್ನಿಸುತ್ತದೆ. ಕಷ್ಟ-ನಷ್ಟಗಳಲ್ಲಿ ಸರಿಪಾಲು ಹೊತ್ತವಳಿಗೆ ಸಾಧನೆಯ ಲಾಭದಲ್ಲೂ ಸಮಪಾಲು ಸಿಗಬೇಕೆಂಬ ನ್ಯಾಯಪ್ರಜ್ಞೆ ಇಲ್ಲಿದೆ. ಚರಿತ್ರೆಯ ಪುಟಗಳನ್ನೇ ಮರುಪರಿಶೀಲಿಸಬೇಕೆಂಬ ಚಿಂತನೆ ಓದುಗರನ್ನು ಹೊಸ ದೃಷ್ಟಿಕೋನದತ್ತ ಕರೆದೊಯ್ಯುತ್ತದೆ. ಆರ್ಭಟವಿಲ್ಲದೆ, ಸಂಯಮದ ಧ್ವನಿಯಲ್ಲಿ ಸಮಾನತೆಯ ಪ್ರಶ್ನೆ ಕೇಳುವುದು ಈ ಕವಿತೆಯ ಶಕ್ತಿ.
“ಗೂಡುಗಳ ಖಾಲಿತನ”ದ ಹಕ್ಕಿಗಳು ಅನ್ನ-ಅವಕಾಶ ಹುಡುಕಿ ಹುಟ್ಟೂರು ಬಿಟ್ಟು ಮಹಾನಗರ ಸೇರಿದ ಲಕ್ಷಾಂತರ ಜನರ ರೂಪಕವಾಗಿ ನನಗೆ ಕಾಣುತ್ತವೆ. ಮಹಾನಗರದ ಹೊಗೆ, ಹಾರ್ನ್‌ನ ಕರ್ಕಶ ಸದ್ದು, ಅವಸರದ ರಸ್ತೆಗಳ ನಡುವೆ ಬದುಕಿಗಾಗಿ ಹೋರಾಡುತ್ತಲೇ ತಮ್ಮ ಗೂಡನ್ನು, ತಮ್ಮ ಬೇರನ್ನು ಕಳೆದುಕೊಳ್ಳುವವರ ಏಕಾಂತ ಓದುಗರ ಹೃದಯವನ್ನು ಮೀಟುತ್ತದೆ. ಅವರ ಛಲ ಮತ್ತು ಒಳಗಿನ ಒಂಟಿತನ ಎರಡನ್ನೂ ಕವಯಿತ್ರಿ ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ. ಕೊನೆಯಲ್ಲಿ ಹೆಮ್ಮರಗಳ ಸಾಂತ್ವನ ಈ ಜೀವಗಳನ್ನು ಕೈಹಿಡಿದು ನಡೆಸುತ್ತದೆ ಎಂಬ ಆಶಯ ಕವಿತೆಗೆ ಭರವಸೆಯ ಬೆಳಕು ನೀಡಿದೆ.
“ಗುಲ್ ಮೊಹರ್” ಕವಿತೆ ಇನ್ನೂ ಹೆಚ್ಚು ಆಪ್ತ. ಬದುಕಿನ ಹೊರೆ ಹೊತ್ತು ದಣಿದ ಜೀವಗಳಿಗೆ ತನ್ನ ನೆರಳಲ್ಲಿ ವಿರಮಿಸಿಕೊಳ್ಳುವಂತೆ ಕರೆಯುವ ಮಮತೆಯ ಸಂಬೋಧನೆಯೊಂದಿಗೆ ಅದು ತೆರೆದುಕೊಳ್ಳುತ್ತದೆ. ವರ್ಷವಿಡೀ ತಾಳ್ಮೆಯಿಂದ ಕಾದು, ಮೇ ತಿಂಗಳಲ್ಲಿ ಸೂರ್ಯರಶ್ಮಿಯನ್ನೂ ತಡೆಯುವಷ್ಟು ದಟ್ಟವಾಗಿ ಅರಳುವ ಈ ಮರದ ವೈಭವ, ಬಾಲ್ಯದಲ್ಲಿ ಅದರ ಕೇಸರಗಳಿಂದ ಆಡಿದ ಕೊಕ್ಕೆ ಆಟದ ನೆನಪನ್ನು ಮೆಲುಕು ಹಾಕಿಸುತ್ತದೆ. ಆ ನೆನಪಿನ ಪಕ್ಕದಲ್ಲೇ ಇಂದಿನ ಮಕ್ಕಳ ಕೈಯಲ್ಲಿನ ವಾರ್‌ವೆಪನ್ಸ್, ತಟ್ಟೆಯಲ್ಲಿನ ಪಿಜ್ಜಾ-ಬರ್ಗರ್ ನಿಂತಿವೆ. ಯಾರನ್ನೂ ದೂಷಿಸದೆ ಎರಡು ಕಾಲಗಳನ್ನು ಮುಖಾಮುಖಿಯಾಗಿಸಿ, ಪ್ರಕೃತಿಯೊಂದಿಗೆ ನಾವು ಕಳೆದುಕೊಂಡ ನಂಟನ್ನು ಕವಯಿತ್ರಿ ಸೂಚ್ಯವಾಗಿ ಹೇಳುತ್ತಾರೆ. ಕೊನೆಗೆ, ನೂರು ದಿನ ಬದುಕುವುದಕ್ಕಿಂತ ಮೂರೇ ದಿನವಾದರೂ ಪೂರ್ಣವಾಗಿ ಅರಳಿ ಬದುಕುವುದು ಮುಖ್ಯ ಎಂಬ ಜೀವನಪಾಠವನ್ನು ಉಪದೇಶದ ಧಾಟಿಯಿಲ್ಲದೆ ಹೃದಯಕ್ಕೆ ತಟ್ಟುವಂತೆ ನೀಡುತ್ತಾರೆ.
“ನೆನಪಾಗುತ್ತಾರೆ…” ಕವಿತೆಯಲ್ಲಿ ಹೊಸ ಹೊಸ ಆಕರ್ಷಣೆಗಳಲ್ಲಿ ಮುಳುಗಿದ ಜನರ ನಡುವೆ ವಿವೇಕಾನಂದ, ಬಸವಣ್ಣ, ಅಕ್ಕ, ದೇಶಕ್ಕಾಗಿ ಜೀವ ತೆತ್ತ ಹುತಾತ್ಮರಂಥವರು ನೆನಪಾಗುತ್ತಾರೆ. ಹಸಿದವರ ನಡುವೆ ಭೂತಾಯಿಯ ಮಡಿಲಲ್ಲಿ ಮಲಗುವವರು, ಇಳಿಸಂಜೆಯಲ್ಲಿ ಒಂಟಿಯಾದ ವೃದ್ಧರೂ ಇಲ್ಲಿ ನೆನಪಾಗುತ್ತಾರೆ. ಪ್ರಸ್ತುತ ಧಾವಂತದ ಬದುಕಿನಲ್ಲಿ ನಾವು ಮರೆಯುತ್ತಿರುವ ಮೌಲ್ಯಗಳನ್ನು ಪದೇ ಪದೇ ಮರುಕಳಿಸುವ ಸಾಲಿನ ಮೂಲಕ ನೆನಪಿಸುವ ಶೈಲಿ ಪರಿಣಾಮಕಾರಿಯಾಗಿದೆ.
ಒಟ್ಟಾರೆಯಾಗಿ, “ಸೀಮೆ ಜಾಲಿ” ಪ್ರಸ್ತುತ ಸಮಾಜದ ಕನ್ನಡಿಯಂತೆ ಅಸ್ಮಿತೆ, ಸಂಬಂಧಗಳು, ವಲಸೆಯ ಬದುಕು, ಪರಿಸರ, ಬಾಲ್ಯದ ನೆನಪು ಮತ್ತು ಮಾನವೀಯ ಮೌಲ್ಯಗಳನ್ನು ಓದುಗರ ಮುಂದಿಡುತ್ತದೆ. ಕನ್ನಡ ಕಾವ್ಯಪ್ರೇಮಿಗಳು ಓದಲೇಬೇಕಾದ ಕೃತಿ. ತೇಜಾವತಿಯವರಿಂದ ಇನ್ನಷ್ಟು ಒಳ್ಳೆಯ ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.






0 Comments