ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃತಕ ಬುದ್ಧಿಮತ್ತೆಯ ಹೆಜ್ಜೆಗುರುತುಗಳು

ಡಾ.ಉದಯಶಂಕರ ಪುರಾಣಿಕ ಅವರ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)’

ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಎಲ್.ಪಿ.ಕುಲಕರ್ಣಿ ಅವರ ಬರಹ ಇಲ್ಲಿದೆ.

-ಎಲ್.ಪಿ.ಕುಲಕರ್ಣಿ

ವಿಜ್ಞಾನ-ತಂತ್ರಜ್ಞಾನ ಅಂದರೆ ಹಾಗೆ,ಆ ಕ್ಷೇತ್ರದಲ್ಲಿ ಪ್ರತಿ ಕ್ಷಣವೂ ಮನುಕುಲದ ಏಳ್ಗೆಯನ್ನು ಬಯಸುವ ಸಂಶೋಧನೆಗಳು ನಡೆಯುತ್ತಾನೇ ಇರುತ್ತವೆ. ಈ ಹಿಂದೆ ಟೆಲಿಫೋನ್,ರೆಡಿಯೋ,ಟಿವಿ,ಮೊಬೈಲ್ ಹಾಗೆ ಪ್ರಸ್ತುತ ಈ ಪ್ರಪಂಚವನ್ನು ಎಐ ಆಳುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಐ ನ ಕಬಂಧ ಬಾಹುಗಳು ಎಲ್ಲ ಕ್ಷೇತ್ರಗಳಲ್ಲೂ ಆವರಿಸುತ್ತಿರುವ ಈ ಸನ್ನಿವೇಶದಲ್ಲಿ ಅದರ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ.

ಈ ಹಿಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಡಾ.ಉದಯಶಂಕರ ಪುರಾಣಿಕ ಅವರ ‘ತಂತ್ರಜ್ಞಾನ ಪರಪಂಚ’ವನ್ನು;ನಂತರ ಅವರು ಕಳೆದ ವರ್ಷದವರೆಗೂ ವಿಜಯ ಕರ್ನಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಸೈಬರ್ ಹೆಜ್ಜೆ’ ಎಂಬ ಅಂಕಣ ಬರಹಗಳನ್ನು ನಾವೆಲ್ಲ ಓದಿರುತ್ತೇವೆ. ಮೂಲತಃ ಡಾ.ಉದಯಶಂಕರ ಪುರಾಣಿಕ್ ಅವರು ಸೈಬರ್ ಸೆಕ್ಯುರಿಟಿ ತಜ್ಞರು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲಿ ಸಾಕಷ್ಟು ಸಂಶೋಧನೆ ಮಾಡಿದವರು. ನಾವಿಂದು ಎಐ ಯುಗದಲ್ಲಿದ್ದೇವೆ. ಈ ಎಐ ಕುರಿತು ಸಮಗ್ರ ಅಧ್ಯಯನ ಮಾಡಿದ,ಕೌಶಲ್ಯ ಹೊಂದಿದ ದೇಶದ ಕೆಲವೇ ಕೆಲವು ಬೆರಳೆಣಿಕೆ ತಜ್ಞರಲ್ಲಿ ಈ ನಮ್ಮ ಪುರಾಣಿಕರು ಒಬ್ಬರು,ಮೇಲಾಗಿ ಕನ್ನಡಿಗರು,ಉತ್ತರ ಕರ್ನಾಟಕದವರು.

ಡಾ.ಉದಯಶಂಕರ ಪುರಾಣಿಕ ಅವರು ಬರೆದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ)-ಹೊಸ ತಂತ್ರಜ್ಞಾನ ಮತ್ತು ಅವಕಾಶಗಳು’ ಎಂಬ ಕೃತಿ ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪ್ರಕಟಗೊಂಡಿದೆ. ಈ ಕೃತಿಯ ಕಡೆಗೆ ಹೋಗುವುದಕ್ಕೂ ಮುಂಚೆ‌ ಕೃತಿಕಾರ,ಸೈಬರ್ ಸೆಕ್ಯುರಿಟಿ ತಜ್ಞ ನಮ್ಮ ಪುರಾಣಿಕರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಇದೆ. ‘ಕನ್ನಡವನ್ನು ಉಳಿಸಲು ಹೋರಾಡಬೇಕಿಲ್ಲ,ಅದನ್ನು ನಮ್ಮ ನಿತ್ಯ ಜೀವನದಲ್ಲಿ ಹೆಚ್ಚಾಗಿ ಬಳಸಿದರೆ ಸಾಕು’ ಎಂದು ಸದಾ ಹೇಳುತ್ತಾ ಬಂದಿರುವ ಅವರು ಅಪ್ಪಟ ಕನ್ನಡಿಗ. ನೇರ,ನಿಷ್ಠೂರ ಮಾತುಗಳಿಂದ ಕೂಡಿರುವ ಅವರು ಕನ್ನಡಕ್ಕಾಗಿ ಮಾಡಿದ ಕೆಲಸಗಳು ಒಂದೆರೆಡಲ್ಲ.

1999 ರ ಅಂತ್ಯದಲ್ಲಿ ಆಗತಾನೆ ಬೆಂಗಳೂರಿಗೆ ಚೆನ್ನೈ ಮೂಲದ ಸಿಟಿ ಬ್ಯಾಂಕ್ ತನ್ನ ಎಟಿಎಮ್ ನ್ನು ಪರಿಚಯಿಸಿತ್ತು. ಅದರಲ್ಲಿ ಕೇವಲ ಇಂಗ್ಲೀಷ್ ಭಾಷೆ ಮಾತ್ರ ಇತ್ತು. ಅಲ್ಲಿ ಪ್ರಾದೇಶಿಕ ಭಾಷೆಗಳಿಗೆ ಸ್ಥಾನವಿರಲಿಲ್ಲ.‌ ಇದನ್ನು ಗಮನಿಸಿದ ಪುರಾಣಿಕರು, ಎಟಿಎಮ್ ಜೊತೆ ವ್ಯವಹರಿಸಲು ಗ್ರಾಹಕರಿಗೆ ಪ್ರಾದೇಶಿಕ ಭಾಷೆ ಅಗತ್ಯವಿದೆ. ಹೀಗಾಗಿ ಬ್ಯಾಂಕಿನ ಮ್ಯಾನೇಜರ್ ಗೆ ಈ ಕುರಿತು ಮನದಟ್ಟು ಮಾಡಿದರು. ಮುಂದೆ ಸ್ವತಃ ತಾವೇ ತಮ್ಮ ಖರ್ಚಿನಿಂದ ಎಟಿಎಮ್ ನಲ್ಲಿ ಕನ್ನಡ ಸಾಫ್ಟವೇರ್ ತಯಾರಿಸಿಕೊಟ್ಟರು. ಕನ್ನಡ ಗಣಕ ಪರಿಷತ್ತಿನಲ್ಲಿ ಕೆಲಸಮಾಡಿದ್ದ ಅವರು ನಾವು ಇಂದಿಗೂ ಬಳಸುತ್ತಿರುವ ನುಡಿ ಅಪ್ಲಿಕೇಷನ್ ನ್ನು ಅಭಿವೃದ್ಧಿಪಡಿಸಿ ಕರ್ನಾಟಕ ಸರಕಾರಕ್ಕೆ ಒಪ್ಪಿಸಿದ್ದರು. ಇಲ್ಲೂ ಕೂಡ ಅವರು ವಯ್ಯಕ್ತಿಕ ಲಾಭಕ್ಕೆ ಹೋಗದೆ ಕನ್ನಡದ ಕೆಲಸ ಅದು ಬರೀ ಕೆಲಸವಲ್ಲ; ಅದೊಂದು ನಾಡುನುಡಿಗೆ ಸಲ್ಲಿಸುವ ಸೇವೆ ಎಂದೇ ಭಾವಿಸಿದ್ದರು. ಏರಟೆಲ್, ಬಿ ಎಸ್ ಎನ್ ಎಲ್ ಸೇರಿ ಎಲ್ಲ ಮೊಬೈಲ್ ಕಂಪನಿಗಳು ಮತ್ತು ಅಮೆಜಾನ್ ಕಾಲ್ ಸೆಂಟರ್ ಗೆ ಕರೆಮಾಡಿದ ಕೂಡಲೇ ಕರೆ ಮಾಡಿದವರಿಗೆ ಕೇಳಿಸುವ ಧ್ವನಿಯನ್ನು ತಂತ್ರಜ್ಞಾನ ಭಾಷೆಯಲ್ಲಿ ಐವಿಆರ್(ಇಂಟರ್ಯಾಕ್ಟೀವ್ ವೈಸ್ ರಿಸ್ಪಾನ್ಸ್) ಎಂದು ಕರೆಯಲಾಗುತ್ತದೆ. ಕನ್ನಡ ಐವಿಆರ್ ನ್ನು ಅಭಿವೃದ್ಧಿಪಡಿಸಿ ತಮ್ಮ ಕಂಪನಿಗಳಲ್ಲಿ ಉದ್ಯೋಗಕ್ಕೆ ಕನ್ನಡಿಗರಿಗೆ ಮೊದಲ ಆದ್ಯತೆಕೊಡಬೇಕೆಂಬ ಶರತ್ತನ್ನು ವಿಧಿಸಿ ಉಚಿತವಾಗಿ ಐವಿಆರ್ ಅಪ್ಲಿಕೇಷನ್ ನ್ನು ಆ ಕಂಪನಿಗಳಿಗೆ ಕೊಟ್ಟಿದ್ದು ಇದೇ ನಮ್ಮ ಪುರಾಣಿಕರು.

ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ 20 ವಾರಗಳ ಭ್ರೂಣದ ಚಿತ್ರಣವನ್ನು ಈ ಹಿಂದಿನ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ನಲ್ಲಿ ನೋಡಿದಾಗ ಅದರ ತಲೆಯ ಭಾಗವಷ್ಟೆ ಸ್ಪಷ್ಟವಾಗಿ ಕಂಡು ದೇಹದ ಉಳಿದ ಭಾಗಗಳು ಅಸ್ಪಷ್ಟವಾಗಿ ಕಾಣುತ್ತಿದ್ದವು. ಇದರ ಕುರಿತು ಕೊಡಾಕ್, ಜಿಇ ಕಂಪನಿಗಳ ಜೊತೆ ಕೈಜೋಡಿಸಿ ಅಧ್ಯಯನ ನಡೆಸಿದ ನಮ್ಮ ಪುರಾಣಿಕರು, ಭ್ರೂಣದ ಸ್ಪಷ್ಟ ಚಿತ್ರಣ ಸ್ಕ್ಯಾನಿಂಗ್ ನಲ್ಲಿ ಗೋಚರಿಸುವಂತಹ ಡಿಜಿಟಲ್ ಸ್ಕ್ಯಾನ್ ಪ್ರೊಸೆಸ್ಸಿಂಗ್ ನ್ನು ಅಭಿವೃದ್ಧಿಪಡಿಸುತ್ತಾರೆ. ಅವರ ಈ ಕಾರ್ಯಕ್ಕೆ ಪೇಟೆಂಟ್ ಸಿಗುತ್ತಲಿತ್ತು. ಈ ಸುದ್ದಿಯನ್ನು ಅವರು ತಮ್ಮ ತಾಯಿಗೆ ಹೇಳುತ್ತಾರೆ. ಮಗನ ಸಾಧನೆಗೆ ಹೆಮ್ಮೆಪಟ್ಟ ಆ ತಾಯಿ,ಈ ಪೇಟೆಂಟ್ ಅಂದರೇನು? ಎಂದು ಕೇಳುತ್ತಾರೆ. ಅದಕ್ಕೆ ಪುರಾಣಿಕರು,’ಅಮ್ಮಾ, ನಾವು ಅಭಿವೃದ್ಧಿಪಡಿಸಿದ ಈ ಸ್ಕ್ಯಾನಿಂಗ್ ಮಷಿನ್ ನ್ನು ಯಾರೇ ಖರೀದಿಸಿದರೂ ಅದರಿಂದ ನನಗೆ ಇಂತಿಷ್ಟು ಅಂತಾ ಹಣ ಬರುತ್ತದೆ.’ ಎನ್ನುತ್ತಾರೆ. ‘ಬಡಜನರಿಗೆ ಇದರಿಂದ ಉಪಯೋಗವಾಗಲಿ, ನೀನು ಅದರಿಂದ ಹಣ ಮಾಡುವುದು ಬೇಡ.’ ಎನ್ನುತ್ತಾರೆ ಆ ಮಹಾತಾಯಿ. ತಾಯಿಯ ಆಜ್ಞೆಯನ್ನು ಶಿರಸಾ ಪಾಲಿಸಿದ ಪುರಾಣಿಕರು ತಾವು ಅಭಿವೃದ್ಧಿಪಡಿಸಿದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಗೆ ಪೆಟೆಂಟ್ ಪಡೆಯುವುದಿಲ್ಲ. ಕೊಪ್ಪಳ ಜಿಲ್ಲೆಯ ಕುಕನೂರಿನ ಪಕ್ಕದಲ್ಲೇ ಇರುವ ಪುಟ್ಟ ಗ್ರಾಮ ದ್ಯಾಂಪೂರಿನ‌ ಸ್ವಾತಂತ್ರ ಹೋರಾಟಗಾರ,ಕರ್ನಾಟಕ ಏಕೀಕರಣ ಹೋರಾಟದ ವಿದ್ಯಾರ್ಥಿಗಳ ಮುಖಂಡ, ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ, ನಾಡುಕಂಡ ಶ್ರೇಷ್ಠ ಸಾಹಿತಿ ಶ್ರೀ ಅನ್ನದಾನಯ್ಯ ಕಲ್ಲಿನಾಥ.ಪುರಾಣಿಕ ಅವರ ಮಗನಾದ ಡಾ.ಉದಯಶಂಕರ ಅ.ಪುರಾಣಿಕರು ತಂದೆಯಂತೆಯೇ ಸಾಧಕರು. ದೇಶ,ನಾಡು,ನುಡಿ,ಹಿರಿಯರಿಗೆ ಸದಾ ಗೌರವ ಕೊಡುವ ಪುರಾಣಿಕರು ಕನ್ನಡದ ಹೆಮ್ಮೆಯ ಕುವರ. ಅವರ ಬಗ್ಗೆ ಹೇಳುತ್ತಾ ಹೊರಟರೆ ಈ ಲೇಖನ ಸಾಕಾಗುವುದಿಲ್ಲ,ಒಂದು ಪುಸ್ತಕವನ್ನೇ ಬರೆಯಬೇಕು.

ಡಾ.ಉದಯಶಂಕರ ಪುರಾಣಿಕರು ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಇತ್ತೀಚೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹೊರತಂದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ)-ಹೊಸ ತಂತ್ರಜ್ಞಾನ ಮತ್ತು ಅವಕಾಶಗಳು’ ಪುಸ್ತಕವೂ ಒಂದು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಯ್ಯನವರ ಬೆನ್ನುಡಿಯಂತೆ, ’21 ನೇ ಶತಮಾನದಲ್ಲಿ ಆಧುನಿಕ ಯಂತ್ರೋಪಕರಣಗಳು ಮತ್ತು ಶಸ್ತ್ರಾಸ್ತ್ರಗಳು ತಂದ ಬದಲಾವಣೆಗಳಂತೆಯೇ, ಎಐ ಇಂದಿನ ಕಾರ್ಯಪಡೆಯ ದೊಡ್ಡ ಮತ್ತು ಹೆಚ್ಚು ಕೌಶಲ್ಯಪೂರ್ಣ ವಿಭಾಗದಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ಸಾಧಿಸಿದೆ. ಹೆಚ್ಚಿದ ಜಾಗತಿಕರಣದ ಹೊರತಾಗಿಯೂ, ಜ್ಞಾನ ಕಾರ್ಯಕರ್ತರು ಯಾವಾಗಲೂ ತಮ್ಮ ಸ್ಥಳೀಯ ಜ್ಞಾನ, ಭಾಷಾ ಸಾಮರ್ಥ್ಯಗಳು ಮತ್ತು ವಿಶಿಷ್ಟ ದೇಶೀಯ ಪರಿಣತಿಯಲ್ಲಿ ಭರವಸೆಯನ್ನು ಕಂಡುಕೊಂಡಿದ್ದಾರೆ. ಆದಾಗ್ಯೂ, ಎಐ ನ ವಿಕಸನಗೊಳ್ಳುತ್ತಿರುವ ಕ್ರಾಂತಿಯು ಕೆಲಸದ ಗಡಿಗಳನ್ನು ವಿಸ್ತರಿಸಿ ಮರುರೂಪಿಸಿಲು ಮುಂದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿರುವ ಇಂತಹ ಉಪಯುಕ್ತ ಕೃತಿಯನ್ನು ರಚಿಸಿಕೊಟ್ಟ ಡಾ.ಉದಯಶಂಕರ ಪುರಾಣಿಕ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಧನ್ಯವಾದಗಳು.’

157 ಪುಟಗಳ ಈ ಪುಸ್ತಕದಲ್ಲಿ ಎಐ ಪರಿಚಯ, ಸಂಕ್ಷಿಪ್ತ ಇತಿಹಾಸ, ಎಐ ಬಿಲ್ಡಿಂಗ್ ಬ್ಲಾಕ್ ಗಳು, ಎಐ ಅಭಿವೃದ್ಧಿಯ ಮೂರು ಹಂತಗಳು, ಯಂತ್ರ ಕಲಿಕೆ, ಆಳವಾದ ಕಲಿಕೆ ಹೀಗೆ ಒಟ್ಟು 12 ಅಧ್ಯಾಯಗಳಿವೆ. ಇಲ್ಲಿ ಪ್ರತಿಯೊಂದು ಅಧ್ಯಾಯವೂ ಎಐನ ಆಳವಾದ ವಿಸ್ತೃತ ವಿಷಯದ ಕಡೆ ಗಮನಕೊಡುವುದಷ್ಟೆ ಅಲ್ಲಾ ಕೆಲವು ಅಧ್ಯಾಯಗಳ ಕೊನೆಯ ಪುಟದಲ್ಲಿ ಆ ಅಧ್ಯಾಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳ ಟಿಪ್ಪಣಿ ಕೊಟ್ಟಿರುವುದು ವಿಶೇಷ. ಅವಸರದಲ್ಲಿ ಓದುವ ಓದುಗನಿಗೆ ಈ ಪ್ರಮುಖ ಅಂಶಗಳು ಉಪಯುಕ್ತವಾಗುತ್ತವೆ. ಕ್ರೀಯಾಶೀಲತೆ ಹಾಗೂ ಹೊಸ ತಂತ್ರಜ್ಞಾನಕ್ಕೆ,ಕೌಶಲಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳಲು ಸದಾ ರೆಡಿ ಇರುವ ಪ್ರಜೆಗಳೆಂದರೆ ಜಪಾನಿಗರು. ಜಪಾನಿನ ಸಮುರೈ ರಾಜವಂಶ,ಸಾಂಪ್ರದಾಯಿಕ ಪದ್ಧತಿಗಳು, ಬದಲಾವಣೆಯನ್ನು ಅಳವಡಿಸಿಕೊಳ್ಳುವುದು ಮತ್ತು ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಈ ಕುರಿತು ಪುರಾಣಿಕರು ಕೃತಿಯ ಲೇಖಕರ ಮಾತಿನಲ್ಲಿ ಬರೆಯುತ್ತಾ ಸಾಗುತ್ತಾರೆ.

1956 ರ ಬೇಸಿಗೆಯಲ್ಲಿ ನ್ಯೂ ಹ್ಯಾಂಪ್ ಶೈರ್ ನ ಹ್ಯಾನೋವರ್ ನಲ್ಲಿರುವ ಡೌರ್ಟ್ಮೌತ್ ಕಾಲೇಜಿನಲ್ಲಿ ತಂತ್ರಜ್ಞಾನದ ಕುರಿತು ಸಮ್ಮೇಳನವೊಂದನ್ನು ನಡೆಸಲಾಯಿತು.‌ ಅಲ್ಲಿ ಈ ಎಐ ಪದವನ್ನು ಪರಿಚಯಿಸಲಾಯಿತು. ಗಣಿತ, ಅರಿವಿನ ವಿಜ್ಞಾನ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ನಾಲ್ವರು ಪ್ರಮುಖ ವ್ಯಕ್ತಿಗಳಾದ ಜಾನ್ ಮೆಕಾರ್ಥಿ, ಮಾರ್ವಿನ್ ಮಿನ್ಸ್ಕಿ, ನಥಾನಿಯಲ್ ರೋಚೆಸ್ಟರ್ ಮತ್ತು ಕ್ಲೌಡ್ ಶಾನನ್ ಅವರು ಈ ಸಮ್ಮೇಳನವನ್ನು ಆಯೋಜಿಸಿದ್ದರು. ಸಮ್ಮೇಳನಕ್ಕಾಗಿ ಅವರ ಅಧಿಕೃತ ಪ್ರಸ್ತಾವನೆಯು ಎಐ ಸಂಬಂಧಿತ ತಂತ್ರಜ್ಞಾನದ ಪಥದ ಬಗ್ಗೆ ಆಶಾವಾದಿ ದೃಷ್ಟಿಕೋನವನ್ನು ವ್ಯಕ್ತಪಡಿಸಿತು ಮತ್ತು ಮಾನವ ಬುದ್ಧಿಮತ್ತೆಯನ್ನು ಅನುಕರಿಸುವ ಯಂತ್ರಗಳ ಸಾಧ್ಯತೆಗಳನ್ನು ಅನ್ವೇಷಿಸುವ ಸಂಶೋಧನಾ ಯೋಜನೆಯನ್ನು ರೂಪಿಸಿತು. ಇದರ ಫಲವಾಗಿ ಮುಂದೆ ಎಮ್ ಐ ಟಿ ಮತ್ತು ಕಾರ್ನೆಗೀ ಮೆಲನ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ನಾದ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಎಐ ಸಂಶೋಧನಾ ಕೇಂದ್ರಗಳು ಹುಟ್ಟಿಕೊಂಡವು.

ದತ್ತಾಂಶ ವಿಜ್ಞಾನದ ಜೊತೆಗೆ, ಎಐ ಮಷಿನ್ ಲರ್ನಿಂಗ್, ಡೀಪ್ ಲರ್ನಿಂಗ್, ಉತ್ಪಾದಕ ಎಐ, ನೈಸರ್ಗಿಕ ಭಾಷಾ ಸಂಸ್ಕರಣೆ, ಸೈಬರ್ನೆಟಿಕ್ಸ್ ಮತ್ತು ಕಂಪ್ಯೂಟರ್ ದೃಷ್ಟಿ ಸೇರಿದಂತೆ ಹಲವಾರು ಉಪಕ್ಷೇತ್ರಗಳು ಮತ್ತು ತಂತ್ರಗಳನ್ನು ಎಐ ಒಳಗೊಂಡಿದೆ. ಎಐ ಅದರ ಮೂಲತತ್ವದಲ್ಲಿ,ಮಾನವ ಬುದ್ಧಿಮತ್ತೆಯ ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ವ್ಯವಸ್ಥೆಗಳನ್ನು ರಚಿಸುವ ಪ್ರಮುಖ ಧ್ಯೇಯಕ್ಕೆ ಮರಳುತ್ತದೆ. ಅಂತಹ ಕಾರ್ಯಗಳಲ್ಲಿ ಮಾನವ ಭಾಷೆಯನ್ನು ಅರ್ಥಮಾಡಿಕೊಳ್ಳುವುದು, ಮಾದರಿಗಳನ್ನು ಗುರುತಿಸುವುದು, ಅನುಭವದಿಂದ ಕಲಿಯುವುದು, ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಭಾವನಾತ್ಮಕ ಬುದ್ಧಿವಂತಿಕೆಯನ್ನು ಪ್ರದರ್ಶಿಸುವುದು….ಇಷ್ಟೆಲ್ಲಾ ಎಐ ನ ಸಮಗ್ರ ಮಾಹಿತಿಯನ್ನೊಳಗೊಂಡ  ಡಾ.ಉದಯಶಂಕರ ಪುರಾಣಿಕ ಅವರ  ಈ ಕೃತಿ ಅಧ್ಯಯನಶೀಲರಿಗೆ ಒಂದು ಉಪಯುಕ್ತ ರೆಫರನ್ಸ್ ಇದ್ದಂತೆ.‌

‍ಲೇಖಕರು Admin

29 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading