ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಸ್ತವ ಸಂಕೀರ್ಣಗಳ ವ್ಯಥೆಯ ಆರ್ತಕಂಪನ ‘ಪ್ರಾಜೆಕ್ಟ್ ಪಂಚತಂತ್ರ’

-ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್

ಮನುಷ್ಯ ತನ್ನ ಬದುಕಿಗಾಗಿ ಆಯುಧವನ್ನು ಕಂಡುಕೊಂಡ.ಆ ಆಯುಧವೇ ಯುದ್ಧಗಳಿಗೆ ದಾರಿಮಾಡಿ ಕೊಡುತ್ತದೆಂದು ಊಹಿಸಿರಲಿಲ್ಲ.ಮುಂದೆ ಅನಾಹುತವಾಗುವುದನ್ನು ಮರೆತುಬಿಟ್ಟ. ಈಗ ಯುದ್ಧದಿಂದ ವಿಮುಖನಾಗುವುದು ಹೇಗೆ ಎಂದು ತಡವರಿಸುತ್ತಲೇ, ತೆವಳುತ್ತಲೇ ಶಾಂತಿಯ ಹುಡುಕಾಟಕ್ಕಾಗಿ ಪರಿತಪಿಸುತ್ತಿದ್ದಾನೆ ಎಂಬ ಆಲೋಚನೆಯ ಪ್ರಯೋಗ ‘ಪ್ರಾಜೆಕ್ಟ್ ಪಂಚತಂತ್ರ’.

ನಾಟಕ ಕೇವಲ ಕಲ್ಪನೆಯ ಕಥೆಯನ್ನು ಹೇಳದೆ,ವಾಸ್ತವದ ಸ್ಥಿತಿಯನ್ನು ಅನಾವರಣಗೊಳಿಸುತ್ತದೆ, ಅಸ್ಥಿ  ಪಂಜರದ ಕಥೆ, ಸಿಂಹ ಮೊಲದ ಕಥೆ, ಬೆಕ್ಕಿನ ಕಥೆ,ಇಲಿಗಳ ಕಥೆ, ನರಿಗಳ ಕಥೆ, ಮೀನಿನ ಕಥೆ, ಟಗರು ಕುರಿಗಳ ಕಥೆ. ಪ್ರಾಣಿಗಳ ಮೂಲಕ ಮನುಷ್ಯನ ಕಥೆಯನ್ನು ಸಾರುತ್ತವೆ.ನಾಟಕವು ಮನಸ್ಸಿನ ವಿಕಾರದ ಶ್ರೇಣಿಗಳ ಅಪಾಯದ ವ್ಯಥೆಯನ್ನು ಸಾರುತ್ತದೆ. ಕಾಡಿನ ಪ್ರಾಣಿಗಳು ಯುದ್ಧ ಮಾಡಿ ಒಂದಾಗುತ್ತವೆ ಅಥವಾ ಮಾಡದೆಯೂ ಇರಬಹುದು ಅಥವಾ ಸಂಧಾನವು ಮಾಡಬಹುದು. ಆದರೆ ನಾಡಿನ ಮನುಷ್ಯ ಯುದ್ಧ ಮಾಡಿ ಶತ್ರುವನ್ನು ಸೃಷ್ಟಿಸಿಕೊಳ್ಳುತ್ತಾನೆ, ತಾನೇ ಶತ್ರುವಾಗುತ್ತಾನೆ . ಶತ್ರುತ್ವ ಮರೆತು ಮಿತ್ರತ್ವದ ಕಡೆಗೆ ಯೋಚಿಸುವುದನ್ನು ಮರೆತಿದ್ದಾ ನೆ. ಅಹಂಕಾರವು ಅವನನ್ನು ಆಳುತ್ತಿದೆ. ಹಾಗಾಗಿ ಮಾನವನಿಗೆ ಸಮಾಧಾನದ ಭವಿಷ್ಯವಿಲ್ಲ. ‘ಪ್ರಾಣಿಗಳೇ ಗುಣದಲಿ ಮೇಲು, ಮನುಷ್ಯ ಅದಕ್ಕಿಂತ ಕೀಳು’ ಎಂಬ ಹಾಡನ್ನು ನೆನೆಸಿಕೊಳ್ಳಬೇಕಷ್ಟೇ. ಯುದ್ಧ ಅನಿವಾರ್ಯವಲ್ಲ.ಶಾಂತಿ ಅನಿವಾರ್ಯ. ಇದು ಕೇವಲ ಭೌತಿಕ ಯುದ್ಧವಾಗದೆ ಮನಸ್ಸಿನ ಯುದ್ಧವು ಆಗಿದೆ. ಒಬ್ಬರಿಗೊಬ್ಬರು ಮೋಸ ವಂಚನೆಯಲ್ಲಿ ಕಾಲ ಕಳೆಯುತ್ತಿದ್ದೇವೆ.ಆರ್ಥಿಕ ಚಿಂತನೆಯೇ ನಮ್ಮ ಪರಮ ಆಪ್ತನಾಗಿದ್ದು, ಹಾರ್ದಿಕ ಚಿಂತನೆ ಮೂಲೆ ಗುಂಪಾಗಿದೆ. ಯುದ್ಧ ಆಗುವುದಕ್ಕೆ ಮುಂಚೆಯೇ ಯುದ್ಧದಂತೆ ವರ್ತಿಸುವ ಸುದ್ದಿ ವಾಹಿನಿಗಳ ಪ್ಯಾನಲ್ ಡಿಸ್ಕಶನ್. ಅವುಗಳಿಗೆ ಪ್ರಾಯೋಜಕತೆಯನ್ನು ಒದಗಿಸುವ ಜಾಹೀರಾತುಗಳು. ಇಂದಿನ ಚಾನಲ್ ಗಳ ಗದ್ದಲದ ಚರ್ಚೆಯನ್ನು, ಅವಿವೇಕಿಗಳ ಮಾತುಗಳನ್ನು ಕೇಳಿಸಿಕೊಳ್ಳುವಂತಾಗಿದೆ. ಹೆಣ್ಣು ಗಂಡೆಂಬ ಭೇದ ಭಾವವನ್ನು ಬಿತ್ತುವ ಧರ್ಮಗಳು.

ರಾಜಕಾರಣಿಗಳು,ಸರ್ವಾಧಿಕಾರಿಗಳು, ನ್ಯಾಯಾಧೀಶರು. ಇವೆಲ್ಲವುಗಳ ವ್ಯವಸ್ಥೆಯ ಡೋಂಗಿತನವನ್ನು ನಿರ್ದಿಗಂತ ತಂಡ ವಿಸ್ತರಿಸಿದೆ. ಸೃಷ್ಟಿಯ ಮೂಲ ಪ್ರಕ್ರಿಯೆಯನ್ನು ಪ್ರದರ್ಶಿಸುತ್ತಾ,  ಮನುಷ್ಯ ಸೃಜನಶೀಲತೆಯ ದಾಹವನ್ನು ತೋರ್ಪಡಿಸುತ್ತದೆ. ಮನುಷ್ಯ ಇಂದು ತನ್ನನ್ನು ತಾನು ನಿರ್ನಾಮ ಮಾಡಿಕೊಳ್ಳುವುದಕ್ಕೆ,ತನಗೆ ಗೊತ್ತಿದ್ದು ಗೊತ್ತಿಲ್ಲದಂತೆ ಹಪ -ಹಪಿಸುತ್ತಿದ್ದಾನೆ ಎಂಬ ಸೂಚ್ಯವು ನಾಟಕದಲ್ಲಿದೆ.ನಮ್ಮ ಅಜ್ಜ -ಅಜ್ಜಂದಿರು ನೀತಿ ಕಥೆಗಳನ್ನು ಹೇಳುವ ಕಾಲ ಮುಗಿದು ಹೋಗಿದೆ ಎಂಬ ಆತಂಕದಲ್ಲಿರುವಾಗ ಮತ್ತೆ ನೀತಿ ಕಥೆಗಳನ್ನು ವಾಸ್ತವ ಜಗತ್ತಿನ ಸಮಸ್ಯೆಗಳ ಮೂಲಕ ಪ್ರೇಕ್ಷಕರಿಗೆ ಉಣಬಡಿಸುತ್ತಿರುವುದು ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಮೈಲುಗಲ್ಲನ್ನು ನಿರ್ದಿಗಂತ ತಂಡ ರಚಿಸುತ್ತಿದೆ.  ದ್ವೇಷ ಭಾಷಣ,ಜಾತಿ ಭಾಷಣ,ಧರ್ಮ ಭಾಷಣ ಹೆಚ್ಚಾಗಿರುವ ರಿಲ್ಸ್ ಗಳಲ್ಲಿ ನನ್ನದೇ ಶ್ರೇಷ್ಠ ಎನ್ನುವ ಅಭಿಮಾನದ ಅಂಧಕಾರದಲ್ಲಿ ಮುಳುಗಿರುವ ಜಗತ್ತಿಗೆ ಪಂಚತಂತ್ರದ ಕಥೆಗಳು ಕನ್ನಡಿಯಾಗಿವೆ. ಸಮಸ್ಯೆಗಳಿಗೆ ಮೂಲ ಕಂಡು ಹಿಡಿಯುವುದೇ ನಮ್ಮ ಆದ್ಯತೆ ಆಗಬೇಕು ಎಂಬ ನಿಟ್ಟಿನಲ್ಲಿ ನಾಟಕ ಮಾತಾಡುತ್ತದೆ.

ರಂಗಭೂಮಿಯ ಕಲಾವಿದರಿಗೆ ಹಾಗೂ ಕೃಷಿಯನ್ನು ಮುನ್ನಡೆಸುತ್ತಿರುವ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗದೇ ಇರುವುದು ಜ್ವಲಂತ ಸಮಸ್ಯೆಯಾಗಿ ಇಂದು ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸುವಂತಾ ತಾಗಿದೆ. ರೈತನೆಂದರೆ ಅಪಹಾಸ್ಯ ಮಾಡುವ ವರ್ಗ. ಕಲಾವಿದರು ಇದರಿಂದ ಹೊರತಲ್ಲ ಎಂಬ ದನಿ ಇದೆ. ರೈತ ಸಮಾಜಕ್ಕೆ ಅನ್ನ ನೀಡಿದರೆ ನಟ ಸಮಾಜದ ವಿವೇಕವನ್ನು ತಿದ್ದುವ ಯೋಧ. ಕಲಾವಿದ ತನ್ನ ಸಹಜನಟನೆಯಿಂದ ಸಮಾಜದ ಪಾತ್ರಗಳನ್ನು ಪ್ರತಿಬಿಂಬಿಸುವ ಕನ್ನಡಿ. ಹಳಿ ತಪ್ಪಿದ ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕಲಾವಿದನ ಪಾತ್ರ ಮುಖ್ಯವಾಗಿದೆ. ಆದರೂ ಈ ಕಲಾವಿದನಿಗೆ ಕೆಲವೊಮ್ಮೆ ಎಲ್ಲವೂ ತಾನಾಗಿ ಇರಬೇಕೆಂಬ ಹಂಬಲ ಎಂಬ ಸ್ವ ವಿಮರ್ಶೆಯು ನಾಟಕದಲ್ಲಿದೆ. ಸೂರ್ಯನಿಗಿಂತ ಮೇಘ ಶ್ರೇಷ್ಠ,ಮೇಘಕ್ಕಿಂತ ವಾಯು ಶ್ರೇಷ್ಠ, ವಾಯುಕ್ಕಿಂತ ಪರ್ವತ ಶ್ರೇಷ್ಠ, ಪರ್ವತಕ್ಕಿಂತ ಇಲಿ ಶ್ರೇಷ್ಠ ಎಂಬ ಆಲೋಚನೆಯಲ್ಲಿ ಎಲ್ಲಾ ಪಾತ್ರಗಳನ್ನು ತಾನೇ ಮಾಡಬೇಕೆಂಬ ಹೊಂಬುತನ ಹೆಚ್ಚಾಗಿದೆ. ಇಂದಿನ ಆಡಳಿತ ವ್ಯವಸ್ಥೆಯನ್ನು ಗ್ರಹಿಸಿದಾಗ ಎಲ್ಲಾ ಖಾತೆಗಳು ತನ್ನ ಕೈಯಲ್ಲೇ ಇರಬೇಕೆಂಬ ಹಪಹಪಿ ಜನಪ್ರತಿನಿಧಿಗಳದ್ದು.ಅದರ ಲಾಭಾಂಶಗಳೆಲ್ಲವೂ ತನ್ನ ಕುಟುಂಬಕ್ಕೆ ತನಗೆ ಸೀಮಿತವಾಗಿ ಇರಬೇಕೆಂಬ ಮೋಹವು ಹೆಚ್ಚಾಗಿದೆ ಎಂಬ ದೃಷ್ಟಾಂತವನ್ನು ಕಟ್ಟಿಕೊಡಲಾಗಿದೆ. ಖಾತೆಯ ಬಗ್ಗೆ ಎಳ್ಳಷ್ಟು ಜ್ಞಾನವಿಲ್ಲದಿದ್ದರೂ ಆ ಖಾತೆ ಬೇಕೆಂಬ ಖ್ಯಾತೆ ಹೆಚ್ಚಾಗಿದೆ. ಇಲ್ಲದವರಿಗೆ ಸೂರನ್ನು ಕೊಡುವುದರ ಬದಲು ಇದ್ದವರೆ ಸೂರನ್ನು ಹಂಚಿಕೊಳ್ಳುವ ವ್ಯಾಧಿ ಮಿತಿಮೀರಿದೆ. ಈಗ ಬಹಳಷ್ಟು ಕಂಪನಿಗಳು ಸೃಷ್ಟಿಸಿ ಅನೇಕ ಉದ್ಯೋಗಿಗಳಿಗೆ ಬರಗಾಲದ ಛಾಯೆ ಆವರಿಸುವಂತೆ ಕಾಣುತ್ತಿದೆ. 

ನರಿ ಕಥೆಯಲ್ಲಿ ತಾನು ನರಿಯಲ್ಲ.ಸಿಂಹ ಎಂಬ ಭ್ರಮೆಯಲ್ಲಿ ಓಡಾಡಬೇಕೆಂಬ ಆಸೆ ತಾನೇಕೆ ಕಾಡಿನ ರಾಜವಾಗಬಾರದು ಎಂಬ ಹಂಬಲ ಅದಕ್ಕೆ.ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕುತಂತ್ರಿಗಳೇ ನಮ್ಮನ್ನಾಳುತ್ತಿರುವಾಗ ಅಲ್ಲಿ ಸಿಂಹದ ಕೆಲಸವೇನು ಎಂಬ ಪ್ರಶ್ನೆ ನೋಡುಗರಲ್ಲಿ ಉಂಟಾಗುತ್ತದೆ. ನರಿಗಳ ನಡುವಿನ ಕಾದಾಟ.ಅದರ ಆಲೋಚನೆಗಳು ಸಮಾಜದ ಪ್ರತಿಯೊಬ್ಬನನ್ನು ಪ್ರತಿನಿಧಿಸಿದಂತಿತ್ತು. ಒಟ್ಟಿಗೆ ಇದ್ದವರನ್ನು ಒಡೆದು ಆಳಬೇಕೆಂಬ ನೀತಿ ಪ್ರಬಲವಾಗುತ್ತಿದೆ. ಟಗರುಗಳ ಕಾಳಗದಲ್ಲಿ ಬೆಕ್ಕಿನ ತಾಂತ್ರಿಕ ನೈಪುಣ್ಯತೆ, ಟಗರುಗಳು ಅನ್ಯೋನ್ಯತೆಯ ಭಾವವನ್ನು ಬೆಂಕಿಯಾಗಿ ಪರಿವರ್ತಿಸಿದ ಬೆಕ್ಕಿನ ಚಾಲಾಕಿತನದ ಜನರು ನಮ್ಮೊಡನೆ ಇದ್ದಾರೆ. ಅಂಥವರಿಂದ ನಾವು ಪಾರಾಗುವುದು ಹೇಗೆ ಎಂಬ ನೀತಿಯನ್ನು ತಿಳಿಯಪಡಿಸಿತು. ತಾನು ನ್ಯಾಯಾಧೀಶ, ಶಾಂತಿ ರಕ್ಷಕ,ಧರ್ಮ ರಕ್ಷಕ, ವಿಶ್ವಗುರು,ನ್ಯಾಯಾಲಯದ ದೇವತೆ ಎಂದು ವಂಚಿಸುವ ಪಾತ್ರದಲ್ಲಿ ಬೆಕ್ಕಿನ ಹೆಜ್ಜೆಗಳನ್ನು ನಾವು ಗುರುತಿಸಬೇಕಿದೆ.ಏಕೆಂದರೆ ತನ್ನದೇ ಜಾಗಕ್ಕಾಗಿ ಬಡಿದಾಡುವ ಇಬ್ಬರ ನಡುವೆ ನ್ಯಾಯ ಒದಗಿಸದೆ ತಾನೇ ಕಬ್ಜ ಮಾಡಿಕೊಂಡ ಬೆಕ್ಕಿನ ಅನ್ಯಾಯದಿಂದ ನಾವು ಜಾಗೃತರಾಗಿರಬೇಕೆಂಬ ಸಂದೇಶವಿತ್ತು. ದ್ವೇಷ ಬಿತ್ತುವ ಬೆಕ್ಕಿನ ಪಾತ್ರಧಾರಿಗಳು ನಮ್ಮ ನಡುವೆ ಇದ್ದಾರೆ. ಶಾಂತಿಗೆ ಭಂಗ ತರುವ ರಾಜಕಾರಣಿಗಳು ಸಮಾಜ ಸುಧಾರಕರ ಹೆಸರಿನಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದಾರೆ. ಅಂತವರನ್ನು ನ್ಯಾಯಾಲಯವು ಕೂಡ ಏನು ಮಾಡಲಾಗುತ್ತಿಲ್ಲ ಎಂಬ ಸ್ವಚ್ಛ ದನಿ ಅಡಕಗೊಂಡಿದೆ. ಒಂದು ದೇಶ ಅಲ್ಲಿ ಜನಿಸಿದವರಿಗೆ ಮಾತ್ರ ಸೀಮಿತವಾಗಬಾರದು. ಅಲ್ಲಿ ಜನಿಸಿದವರಿಗೆ ಮಾತ್ರ ಮತದಾನದ ಹಕ್ಕು ನೀಡಬೇಕೆಂಬ ಸದ್ಯದ ವಾಸ್ತವ ಅಂಶಗಳನ್ನು ತೆರೆದಿಡುವ ನಾಟಕವಿದು. ಹಾಗಾಗಿ ‘ಗಡಿಗಳಿರುವುದು ದಾಟುವುದಕ್ಕೆ, ಸಂಸ್ಕೃತಿಯನ್ನು ಹಂಚಿಕೊಳ್ಳುವುದಕ್ಕೆ, ಪ್ರೀತಿಯನ್ನು ಅನುಭವಿಸುವುದಕ್ಕೆ’ ಎಂಬವುದು  ನಾಟಕದ ತಿರುಳು. ಅದು ಪ್ರಕಾಶ್ ರಾಜ್ ಅವರ ಹಿನ್ನೆಲೆಯ ಧ್ವನಿಯಲ್ಲೂ ಕಂಪಿಸುತಿತ್ತು.

ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸ್ ಗಳ ಹಾವಳಿ. ಇವುಗಳಿಗೆ ತಲೆ ಬುಡವಿಲ್ಲದ ಚರ್ಚೆ. ತುಂಬಾ ಸ್ವಾರಸ್ಯಕರವಾದ ನೇಕಾರನ ಕಥೆಯ ಮೂಲಕ ಮೂಡಿ ಬಂತು. ನೇಕಾರ ಕಾಡಿನಲ್ಲಿದ್ದಾಗ ದೇವರು ಅವನಿಗೆ ಎರಡು ವರಗಳನ್ನು ಕೇಳು ಎಂದು ಹೇಳುತ್ತಾನೆ. ಅವನು ಯಾವ ವರಗಳನ್ನು ಕೇಳಬೇಕೆಂದು ನಾಡಿನಲ್ಲಿದ್ದ ತನ್ನ ಸ್ನೇಹಿತ ಕ್ಷೌರಿಕನಿಗೆ ಬಂದು ಕೇಳುತ್ತಾನೆ. ಅವನು ಒಂದು ರಾಜನಾಗುವ ವರ ಕೇಳು. ಇನ್ನೊಂದು ನಾನು ಮಂತ್ರಿ ಆಗುವ ವರ ಕೇಳು. ಏಕೆಂದರೆ ಇಡೀ ದೇಶವನ್ನು ಲೂಟಿ ಮಾಡಬಹುದು ಎಂಬ ಮಹಾದಾಸೆ ಕ್ಷೌರಿಕನದು. ಆದರೆ ನೇಕಾರ ತನ್ನ ಹೆಂಡತಿಗೆ ಒಂದು ಮಾತು ಕೇಳುತ್ತೇನೆ ಎಂದು ಹೇಳಿದಾಗ ಕ್ಷೌರಿಕ, ಹೆಣ್ಣು ಬುದ್ಧಿ ಹೀನ ಬುದ್ದಿ,ಹೆಣ್ಣು ನಡೆದಾಡುವ ಸ್ಮಶಾನ,ದೋಷಗಳ ಭಂಡಾರ, ಹೆಣ್ಣು ಮೋಸದ ಮಹಲು, ನೀನು ಹೆಣ್ಣಿನ ಸಲಹೆ ಪಡೆದರೆ ನರಕಕ್ಕೆ ಹೋಗುವೆ ಎಂದು ಹೇಳುತ್ತಾನೆ.ಇದನ್ನೇ ನೆಪ ಮಾಡಿಕೊಂಡ ಎಲ್ಲಾ ಪ್ರಾಣಿಗಳು ‘ಹೆಣ್ಣು ಬುದ್ಧಿ ಹೀನ ಬುದ್ಧಿ ‘ಎಂಬ ಚರ್ಚೆಗೆ ಪ್ಯಾನಲ್ ಡಿಸ್ಕಶನ್ ಶುರು ಮಾಡಿಬಿಡುತ್ತವೆ.ಭ್ರಷ್ಟಾಚಾರಕ್ಕೆ ಹೆಣ್ಣೇಮೂಲ ಅವಳಿಗೆ ಬಂಗಾರ,ಬೆಳ್ಳಿ,ಒಡವೆ ಎಲ್ಲಾ ಬೇಕೆಂದು ಗಂಡನನ್ನು ಪೀಡಿಸುತ್ತಾಳೆ.ಅವಳು ಯೋಗ್ಯಳಲ್ಲ. ಮತ್ತೊಬ್ಬರು ಶೇಕಡ 90ರಷ್ಟು ಹೆಣ್ಣು ಮಕ್ಕಳು ಹೀನಕುಲದವರು ಎಂಬ ವಾದ ಪ್ರತಿವಾದಗಳಿಗೆ ಮಹಿಳೆ ವಸ್ತು ವಾಗುವ ಸನ್ನಿವೇಶ ಮಾರ್ಮಿಕವಾಗಿದೆ. ಈ ಮೊದಲು ಚರ್ಚೆ ಸಂವಾದಗಳಲ್ಲಿ ಹೆಚ್ಚಾಗಿ ಪುರುಷರು ಸಂವಹನ ನಡೆಸುತ್ತಿದ್ದರು. ಈಗ ಮಹಿಳೆಯರೇ ಮಧ್ಯಸ್ಥಿಕೆಯನ್ನು ವಹಿಸುತ್ತಿದ್ದೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಪೂರ್ವಜರು ಮಾಡಿದ ದಬ್ಬಾಳಿಕೆಗೆ ನೀವು ಜವಾಬ್ದಾರರಾಗಬೇಕೆಂಬ ಮಹಿಳೆಯ ಮಾತಿಗೆ ಕವಡೆ ಕಿಮ್ಮತ್ತು ಇಲ್ಲ. ಯಾವುದು ಚರ್ಚೆ ಆಗಬೇಕು ಯಾವುದು ಚರ್ಚೆ ಆಗಬಾರದೆಂದು ತೀರ್ಮಾನಕ್ಕೆ ಬರಬೇಕಾದವರು ಚಾನಲ್ ನವರು ಎಂಬ ಎಂಬ ಧೋರಣೆ ಇದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಹುನ್ನಾರ ಕೂಡ ನಡೆದಿದೆ ಎಂಬ ವಾದ ಬಲವಾಗಿದೆ. ಸುದ್ದಿ ಮುಖ್ಯಸ್ಥ ದುಬೆ, ಗಲಾಟೆ ಜಾಸ್ತಿಯಾದಾಗ ಬೊಬ್ಬೆ ಹೊಡೆಯುತ್ತಾನೆ. ಈ ತರಹದ ಬ್ರೇಕಿಂಗ್ ನ್ಯೂಸ್ ಗಳು ವಿಚಾರಗಳನ್ನು ಹರಾಜಿಗಿಟ್ಟಿವೆ ಎಂಬ ಒಳನೋಟವಿದೆ. ಏಕೆಂದರೆೆ ವಂದೇ ಮಾತರಂ ಗೀತೆಯಲ್ಲಿನ ಎಲ್ಲಾ ಸಾಲುಗಳನ್ನು ಹಾಡಬೇಕೆ ಅಥವಾ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ಗೊಂದಲಗಳನ್ನು ಸೃಷ್ಟಿಸಿ ಜನರನ್ನು  ಮೂಢರನ್ನಾಗಿಸುತ್ತಿರುವ ವ್ಯವಸ್ಥೆಗೆ ಅಥವಾ ತನ್ನ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತಿರುವ ಕೆಲವು ಜನರ ಹಿತಾಸಕ್ತಿಗೆ ಸಮಯ  ಹಾಳಾಗುತ್ತಿದೆ. ದೇಶದ ಪ್ರಗತಿಯ ಕುರಿತು ಚಿಂತಿಸುವ ಬದಲು ಇಲ್ಲ್ಲ ಸಲ್ಲದ ಆಲೋಚನೆಗಳ ಕೊಂಪೆಯಾಗಿ ದೇಶ ಪರಿವರ್ತಿತವಾಗುತ್ತಿದೆ ಎಂಬ ಅರಿವು ನಮಗಾಗ ಬೇಕು. ದಿನವೆಲ್ಲಾ ಐದಾರು ಪ್ಯಾನೆಲ್ ಡಿಸ್ಕಶನ್ಗಳು ನಡೆದು ಯಾವ ಫಲಿತಗಳು ಹೊರಬೀಳದೆ ಅಫಲಿತ ವಾತಾವರಣವನ್ನು ಸೃಷ್ಟಿಸುತ್ತಿವೆ. ಜನರನ್ನು ದಿಕ್ಕು ತಪ್ಪಿಸಿ,ನಗಿಸಿ ಮಾಯವಾಗಿ ಬಿಡುತ್ತವೆ. ನಗುವುದೇ ಬ್ರೇಕಿಂಗ್ ನ್ಯೂಸ್ ಎಂಬ ಹಾಸ್ಯಾಸ್ಪದಕ್ಕೆ ಗುರಿಯಾಗಿದೆ. ಇದರ ನಡುವೆ ಜಾಹೀರಾತುಗಳ ಅಬ್ಬರ. ನೀವು ಏನು ಊಟ ಮಾಡಬೇಕು, ನೀವು ಯಾವ ಬಟ್ಟೆ ಧರಿಸಬೇಕು, ಯಾವ ಚಪ್ಪಲಿ ಧರಿಸಬೇಕು,ಯಾವ ಔಷಧಿ ತೆಗೆದುಕೊಳ್ಳಬೇಕೆಂದು, ನೀವು ಹೇಗೆ ಜೀವಿಸಬೇಕು,ಜೀವಿಸಬಾರದು, ಯಾವ ಅಡಿಗೆ ಮಾಡಬಾರದು, ಯಾವುದು ಯೋಚಿಸಬೇಕು ಯೋಚಿಸಬಾರದು ಎಂದು ನಾವು ಹೇಳುತ್ತೇವೆ ಎಂಬ ಕಮರ್ಷಿಯಲ್ ಜಾಹೀರಾತುಗಳು ನಮ್ಮನ್ನು ಆಳುತ್ತಿವೆ ಎನಿಸುತ್ತದೆ. ಬಂಡವಾಳ ಶಾಹಿಗಳು ಬಡಜನರ ಮಧ್ಯಮ ಜನರ ಆಸೆಯನ್ನು ಹೆಚ್ಚಿಸಿ ವಂಚನೆಗೊಳಪಡಿಸುತ್ತಿರುವುದು ವಿಷಾದನೀಯ. ಅರೆನಗ್ನಾವಸ್ತೆ ಸ್ಥಿತಿಯಲ್ಲಿ ಪುರುಷರ,ಮಹಿಳೆಯರ ಒಳಉಡುಪುಗಳ ಜಾಹೀರಾತುಗಳಿಗೆ ಸೆನ್ಸಾರ್ ಇರಬೇಕಲ್ಲವೇ? ಯಾವ ನಿಯಮಗಳಡಿ ಇವು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯವಿದೆ ಎಂಬ ಅರಿವು ಕೂಡ ಜನಸಾಮಾನ್ಯರಿಗೆ ಇಲ್ಲ, ಅಧಿಕಾರಿ ವರ್ಗಗಳಿಗೂ ಕೂಡ ಇಲ್ಲವೆನಿಸುತ್ತದೆ.

ನಾಟಕದ ಮದ್ಯಾವಧಿಯ ನಂತರ 
ಹೊಶಿಯಾರ್, ಹೊಶಿಯಾರ್ ಎಂಬ ಜಾಡಮಾಲಿಯ ಕೂಗು ನೋಡುಗರ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಮಾನವೀಯತೆಯ ಅನುಕಂಪವನ್ನು ವೈಗೂಡಿಸಿಕೊಳ್ಳದ ವ್ಯಕ್ತಿ. ಅನ್ಯೋನ್ಯ ಸಂಬಂಧಗಳನ್ನು ಅರಿವಿರದ ಹಾಗೆ ಅಳಿಸಿ ಹಾಕುವ ಕುತಂತ್ರ ರೂಪಿಸುತ್ತಾನೆ ಎಂದು ಜಾಡಮಾಲಿ ಎಚ್ಚರಿಸುತ್ತಾನೆ. ಕೊಳದಲ್ಲಿರುವ ಮೀನುಗಳು ‘ನೀರಿನಲ್ಲಿ ಮೀನು ನನ್ನ ಹೃದಯದಲ್ಲಿ ನೀನು, ನೀನಿಲ್ಲದೆ ನಾನು ನೀರಿಲ್ಲದ ಮೀನು’ ಎಂದು ಮೀನುಗಳು ವಿಲಾಸದಲ್ಲಿರುವಾಗ ಈ ಸರ್ವಾಧಿಕಾರಿಯ ಆಸೆಯ ಮಾತಿಗೆ ಬೇರೊಂದು ಕೊಳಕ್ಕೆ ಹೋಗಿ ವಿನಾಶ ಅನುಭವಿಸುತ್ತವೆ.

ಪ್ರೀತಿಯ ಬಂಧನದಲ್ಲಿರುವವರಿಗೆ ಬೆಂಕಿಯ ಹಾಗೆ ಬಂದ ರಾಕ್ಷಸನ ಸುಳಿವು ಯಾರಿಗೂ ತಿಳಿಯದೆ ಇರುವುದು ನಮ್ಮ ವ್ಯವಸ್ಥೆಯ ದೌರ್ಬಲ್ಯ. ಅಸ್ಥಿಪಂಜರಕ್ಕೆ ಜೀವ ನೀಡಿ ಅದರಿಂದಾಗುವ ಅನಾಹುತಗಳನ್ನು ಗಣನೆಗೆ ಬಾರದಷ್ಟು ಸಮಾಜ ಆಹುತಿಗೊಳಪಡುತ್ತದೆ. ಅದರ ಲಾಭ ನಷ್ಟಗಳನ್ನು ಇಂದು ನಾವು ಎ.ಐ ಮಾದರಿಯಲ್ಲಿ ಕಾಣುತ್ತಿದ್ದೇವೆ . ಉದ್ಯೋಗ ಆಕಾಂಕ್ಷಿಗಳ ಬೆನ್ನಿಗೆ ಚೂರಿ ಹಾಕುವ ಎಲ್ಲಾ ಲಕ್ಷಣಗಳನ್ನು ನಾವು ಮುಂದೆ ಅನುಭವಿಸಬೇಕಾಗುತ್ತದೆ. ಯಾಂತ್ರಿಕತೆ ನಮ್ಮ ಕೈ ಮೀರಿ ಬೆಳೆಯುತ್ತಿದೆ.ಅದು ವೈಚಾರಿಕವಾಗಿರದೆ ವೈಲೆನ್ಸ್ ಆಗಿ ಮಾರ್ಪಡುತ್ತದೆ ಎಂಬುದರ ಅರಿವನ್ನು ನಾವು ಲೆಕ್ಕಿಸುತ್ತಿಲ್ಲ. ಅದು ನಮ್ಮ ದುರಾಸೆಯನ್ನು ಎತ್ತಿ ತೋರಿಸುತ್ತದೆ ಎಂಬ ಆಲೋಚನೆಯನ್ನು ಬಿತ್ತುವ ನಾಟಕವಿದು.

ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವದ ಉಸಿರಾಗಿ ಜೀವಿಸುತ್ತಿದೆ. ಸ್ವ ಪ್ರತಿಷ್ಠೆ, ಜಾತಿ, ವರ್ಣ, ಲಿಂಗ ಭೇದಭಾವದಿಂದ ಹೊರಬರಲು ನಮಗೆ ಸಾಧ್ಯವಾಗುತ್ತಲೇ ಇಲ್ಲ, ಸಾಧ್ಯವಾಗುವುದೇ ಇಲ್ಲ ಎಂಬ ಹಣೆಪಟ್ಟಿಯೊಳಗೆ ನಾಟಕ ಸುತ್ತು ಹೊಡೆಯುತ್ತದೆ. ‘ಕಲೆ ಜೀವ ಸಂವೇದನೆಯನ್ನು ಹೇಳುವುದು.ಅದನ್ನರಿಯದೆ ಇದ್ದರೆ ಭವಿಷ್ಯ ಕಗ್ಗತ್ತಲಿನಲ್ಲಿ ಕೊನೆಯಾಗುವುದೆಂಬ’ಗುರುವಿನ ಮಾತು ನಾಟಕದ ಜೀವಾಳ. ಅನುಗ್ರಹಿಸು ಎಂಬ ಹಾಡು ಮಾರ್ಮಿಕವಾಗಿತ್ತು. ಪ್ರೀತಿ, ಪ್ರೇಮ,ನ್ಯಾಯ, ಸಹಿಷ್ಣುತೆ ಬಾಂಧವ್ಯದ ಬಿಸಿಯನ್ನು ಕಲಿಸುವ ಜಾಯಮಾನ ನಮ್ಮದಾಗಬೇಕೆಂಬ ಆಶಯವಿದೆ. ತನ್ನದಲ್ಲದ ತಪ್ಪುಗಳಿಗೆ ಶಿಲುಬೆಯ ಮೇಲೆ ಶಿಕ್ಷೆ ಅನುಭವಿಸಿದ ಯೇಸುವಿನ ಶಾಂತಿ,ಸಹನೆ ಸಹಿಷ್ಣತೆ ನಮ್ಮದಾಗಬೇಕು. ಪಾಪದ ಪ್ರಾಯಶ್ಚಿತಕ್ಕಾಗಿ ಯೇಸು ಅನುಭವಿಸಿದಷ್ಟು ನೋವನ್ನು ನಾವು ಅನುಭವಿಸಲು ಸಾಧ್ಯವೇ? ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಯೋಧರನ್ನು, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಸಮಾಜ ರೂಪಿಸ ಬೇಕೆಂಬ ಹೊರಟವರಿಗೆ ಗುಂಡಿನ ಸುರಿಮಳೆಯಾಗಿದ್ದನ್ನು, ನ್ಯಾಯ ಕೇಳಿದವರಿಗೆ ಅನ್ಯಾಯದ ದಾರಿ ಹಿಡಿಸಿದ್ದನ್ನು, ರಂಗ ವೃಕ್ಷದ ಆಲದ ಮರದ ಬೇರುಗಳ ಚಿತ್ರಣ,ಆಂಗಿಕ ಅಭಿನಯ,ಪ್ರತಿಮೆಗಳ ಮೂಲಕ ವಾಸ್ತವವನ್ನು ಕಟ್ಟಿಕೊಟ್ಟಿತು. ನಗೆಗಡಲಿನ ಕ್ರಿಯಾತ್ಮಕ ಚಿತ್ರಣಗಳೊಂದಿಗೆ ವಿಚಾರವನ್ನು ಬಿತ್ತುವ ಪ್ರಯತ್ನವಿದು. ಶಿಕ್ಷಣ ಅಂದರೆ ಕೇವಲ ಅಕ್ಷರಗಳನ್ನು ಕಲಿಯುವುದಲ್ಲ. ಅದನ್ನು ಅನ್ವಯಿಸಿಕೊಳ್ಳುವುದರ ಬಗ್ಗೆ ನಾವು ಹಿಂದೆ ಸರಿಯುತ್ತಿದೆವೆಯೇ? ಎಂಬ ಜಿಜ್ಞಾಸೆ ನಮ್ಮನ್ನು ಕಾಡದ ಹೊರತು ನಾವು ರಾಜಕೀಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಅರಿವನ್ನು ಮೂಡಿಸಿಕೊಳ್ಳಲು ಸಾಧ್ಯವಾಗದು. ಆದರೆ ಶಿಕ್ಷಣ ಇಂದು ಮಾರಾಟದ ವಸ್ತು, ವೃತ್ತಿಪರ ಕೋರ್ಸ್ ಗಳನ್ನು ಹರಾಜುಗಿಡಲಾಗಿದೆ, ಹುದ್ದೆಗಳನ್ನು ಕೊಂಡುಕೊಳ್ಳಲಾಗುತ್ತಿದೆ ಎಂಬ ಪ್ರತಿಭಟನೆ ನಾಟಕದುದ್ದಕ್ಕೂ ಕಾಣುತ್ತೇವೆ.  ನಿರ್ಜೀವ  ವಸ್ತುವಿಗೆ ಜೀವ ಕೊಟ್ಟು ಅದರಿಂದ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಾಗಬೇಕೆ ಎಂಬ ಪ್ರಶ್ನೆ ಮೂಡಬೇಕಿದೆ. ಶಿಕ್ಷಣದ ಕುರಿತಾಗಿ ರವೀಂದ್ರನಾಥ್ ಟ್ಯಾಗೋರ್ ಅವರ ಮಾತು ನೆನಪಿಸಿಕೊಳ್ಳಬೇಕಿದೆ. ” ಶ್ರೇಷ್ಠ ಶಿಕ್ಷಣ ಮಾಹಿತಿಯನ್ನು ಒದಗಿಸುವುದಿಲ್ಲ.ಬದಲಾಗಿ ಅಸ್ತಿತ್ವದಲ್ಲಿರುವ ಎಲ್ಲರೊಂದಿಗೂ ಸಾಮರಸ್ಯದಿಂದ ಇರುವುದನ್ನು ಕಲಿಸುತ್ತದೆ. ” ಎಂಬ ಅವರ ಮಾತುಗಳಿಗೆ ನಾವು ಮುನ್ನುಡಿ ಬರೆಯಬೇಕಿದೆ. ಪಂಚತಂತ್ರದ 15 ಕಥೆಗಳನ್ನು ಒಳಗೊಂಡು ತನ್ನದೇ ರೀತಿಯ ಶೈಲಿಯಲ್ಲಿ ಅದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ತನ್ನ ಶ್ರಮವನ್ನು ಸಾರ್ಥಕ ಮಾಡಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಂಡ ನಿರತವಾಗಿದೆ. 

ಸುಳ್ಳನ್ನ ಹಲವು ಬಾರಿ  ಹೇಳುವ ಮೂಲಕ ಅದೇ ಸತ್ಯವೆಂದು ಪ್ರತಿಬಿಂಬಿಸುವ ಪ್ರಸ್ತುತ ಸಮಾಜಕ್ಕೆ ಭವಿಷ್ಯವಿಲ್ಲ ಎಂಬುದನ್ನು ಟಗರನ್ನು ನಾಯಿ ನಾಯಿ ಎಂದು ಪರಿಭ್ರಮಿಸುವ ಕಥೆಯ ಮೂಲಕ ನಾವು ಪಾಠ ಕಲಿಯಬೇಕಿದೆ. ಏಕೆಂದರೆ ರೈತರು ಬೆಳೆದ ಬೆಳೆಯನ್ನು ಮಧ್ಯವರ್ತಿಗಳು ಕಸಿದುಕೊಲ್ಲುವ ರೀತಿ, ಟಗರುಗಳ ಕಾಳಗದಲ್ಲಿ ಹಂಪೈರ್ ರ ಮೋಸದಾಟಕ್ಕೆ ರಕ್ತ ಕಾಳಗ ಮಾಡಿಕೊಂಡ ಕಥೆ ಮನಮುಟ್ಟುವಂತಿತ್ತು. ನಾವು ಇವತ್ತು ಬಂಡವಾಳ ಶಾಹಿಗಳ, ಅಧಿಕಾರಿಶಾಹಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದೇವೆ. ಹಾಗಾಗಿ ನಾವು ‘ಕುರಿಗಳು ಸಾರ್ ಕುರಿಗಳು’ ಕವಿತೆಯನ್ನು ನಾಟಕ ನೆನಪಿಸಿಕೊಡುತ್ತದೆ. ಕವಿಗಳು ಕೂಡ ಅಸಹಾಯಕರಾದಾಗ ಪ್ರತಿಭಟನೆಯ ಸಂಕೇತವಾಗಿ ಪ್ರಾಣಿ, ಪಕ್ಷಿ,ಪ್ರತಿಮೆಗಳ ಮೂಲಕ ತಮ್ಮ ಪ್ರತಿರೋಧವನ್ನು ತೋರಿಸುತ್ತಾರೆ ಎಂಬುದಕ್ಕೆ ನಿದರ್ಶನವಿದು. 

ಪ್ರಾಣಿಗಳಂತೆ ನಟಿಸುವ ನಟರ ಆಂಗಿಕ ಅಭಿನಯ ಅದ್ಭುತವಾಗಿತ್ತು. ನಟರ ಕನ್ನಡ ಇಂಗ್ಲಿಷ್ ಸಂಭಾಷಣೆ ಜಾಗರೂಕತೆಯಿಂದ ಬಳಸಬೇಕಿದೆ. ಏಕೆಂದರೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ತಟ್ಟುವಲ್ಲಿ ಮಾತುಗಳು ಹಿಂದೇಟು ಹಾಕುತ್ತಿದ್ದವು.ಅದು ರಂಗಮಂದಿರದ ಸೌಂಡ್ ಸಿಸ್ಟಮ್ ನ ಸಮಸ್ಯೆಯೋ ಅಥವಾ ಕಲಾವಿದರ ಸಮಸ್ಯೆಯೋ ತಿಳಿಯದಾಯಿತು. ಅಲ್ಲಲ್ಲಿ ಆಭಾಸವಾಗುವಂತದು ತಪ್ಪುತ್ತಿರಲಿಲ್ಲ. ನಟರು ಮೈಚಳಿ ಬಿಟ್ಟು  ನಟಿಸಿದರು. ಅಲ್ಲಲ್ಲಿ ಕಥೆಗಳು ಸ್ವಲ್ಪಮಟ್ಟಿಗೆ ಗೊಂದಲವನ್ನು ಸೃಷ್ಟಿಸುತ್ತಿದ್ದವು. ಪ್ರೇಕ್ಷಕರಿಗೆ ಸರಿಯಾಗಿ ತಲುಪಲು  ಹಾಕುತ್ತಿದ್ದವು. ರಂಗಮಂದಿರಗಳು ಪ್ರಯೋಗಗಳಿಗೆ ತಕ್ಕಂತೆ ವಿನ್ಯಾಸವನ್ನು ಮಾರ್ಪಡಿಸಿ ಕೊಳ್ಳಬೇಕಿದೆ. ಸುದೀರ್ಘ ನಾಟಕದ ನಡುವೆ ಏಳೆಂಟು ಬಾರಿ ಚಪ್ಪಾಳೆಗಳ ಸುರಿಮಳೆಗೆ ರಂಗ ಮಂದಿರ ಸಾಕ್ಷಿಯಾಗಿತ್ತು.

ದಿವಂಗತ ಚಿದಂಬರರಾವ್ ಜಂಬೆ ಅವರ ಸ್ಮರಣಾರ್ಥ ಲಕ್ಷ್ಮಣ್ ಮಂಡಲಗೇರಾ ಅವರ ರಂಗ ಕನಸು ಸಂಸ್ಥೆ ಆಯೋಜಿಸಿದ ಈ ನಾಟಕವನ್ನು ರಾಯಚೂರಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇತ್ತೀಚಿಗೆ  ನಿರ್ದಿಗಂತ ತಂಡ 15ನೇ ಪ್ರಯೋಗವಾಗಿ ಪ್ರಸ್ತುತಪಡಿಸಿತು. ನಟರಾಗಿ ಸುಷ್ಮಾ ಹೊನ್ನಾಳಿ, ಮಂಜುನಾಥ್ ವನಕೇರಿ,ಶಿವಮೂರ್ತಿ ಹುಣಸೂರ್, ಸಿದ್ದಪ್ಪ ಮಾದರ, ನವೀನ್ ಕಾಂಚನ,ದುರ್ಗಾ ಪರಮೇಶ್, ಅಭಿಷೇಕ್ ಕೃಷ್ಣ, ಭಾಗ್ಯಲಕ್ಷ್ಮಿ ಕಾಳೆ, ಕುಮಾರ್ ಲಾಲ್,ಶರತ್ ಕಾರಂತ್ ಅಭಿನಯಿಸಿದರು. ಬೆಳಕು ಮಂಜುನಾಥ್ ಹೆಚ್. ಎಸ್, ಸಂಗೀತ ಅನುಶ್ ಶೆಟ್ಟಿ, ರಂಗ ವಿನ್ಯಾಸ ಅನಿಶ್ ಕೊಟ್ಕಕಲ್, ನಾಟಕದ ಸೆಟ್ ಮತ್ತು ಪರಿಕರಗಳ ರೂವಾರಿಯಾಗಿ ಮಹೇಶ್ ಚಾರಿ , ಚಲನೆಯ ತರಬೇತಿ ನೀಡಿದವರು ಶಕೀಲ ಅಹಮದ್, ನಿರ್ದೇಶನ ಅರುಣ್ ಲಾಲ್ ಅವರದಾಗಿತ್ತು.

ಒಟ್ಟಿನಲ್ಲಿ ಈ ನಾಟಕದ ವಸ್ತು ವಿಷಯ ವಿಸ್ತಾರವಾಗಿದ್ದರೂ ಅದನ್ನು ಕಟ್ಟಿಕೊಡುವಲ್ಲಿ ನಿರ್ದಿಗಂತ ತಂಡ ಯಶಸ್ವಿಯಾಗಿದೆ. ನಿರ್ದೇಶಕರ ಮಾತಿನಲ್ಲೇ ಹೇಳುವುದಾದರೆ ಈ ನಾಟಕ ಶಿಕ್ಷಣ, ನ್ಯಾಯ,ಪೌರತ್ವ, ರಾಜಕೀಯ, ಪ್ರಜಾಪ್ರಭುತ್ವ,ಆಡಳಿತ, ಅಧಿಕಾರ,ರಾಷ್ಟ್ರೀಯ ಹಿತಾಸಕ್ತಿ,ಗಡಿಗಳು, ಯುದ್ಧ,ಶಾಂತಿ, ಮಾನವನ ಪ್ರಕೃತಿ ಪ್ರೀತಿ ಇಂತಹ ಹಲವು ತುರ್ತು ಪ್ರಶ್ನೆಗಳಿಗೆ ಎದುರಾಗಬೇಕೆಂದು ಬಯಸುತ್ತಾರೆ. ಪಂಚತಂತ್ರ ಕಥೆಗಳು ಕೇವಲ ಕಾಡಿನ ಕಥೆಗಳಲ್ಲ, ಅದು ನಾಡಿನ ಕಥೆಗಳು. ಅದು ಪ್ರಾಣಿಗಳ ಕಥೆಯಲ್ಲ, ಗಿಡಮರಗಳ ಕಥೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವದ ಕಥನಗಳ ಗುಚ್ಛ ಪ್ರಸ್ತುತ ದಿನಮಾನಗಳಿಗೆ ನಾವು ಸ್ಪಂದಿಸುವ ರೀತಿ ಹೇಗಿರಬೇಕೆಂಬ ಆಲೋಚನೆಯುಳ್ಳ ಕಥೆಗಳು ನಮ್ಮೊಂದಿಗೆ ಮಾತನಾಡಲು ಸಿದ್ಧವಾಗಿವೆ, ಆದರೆ ಮನುಷ್ಯ ಸಿದ್ಧನಿದ್ದಾನೆಯೇ ಎಂಬ ಪ್ರಶ್ನೆ ಮೂಡುವ ಹೊತ್ತಿಗೆ ಕಾಲ ಸನ್ಹಿತವಾಗಿದೆ ಅನಿಸುತ್ತದೆಯಲ್ಲವೇ? ದೆಹಲಿಯಲ್ಲಿನ ಜಂತರ್ ಮಂತರ್ ಸ್ಥಳಕ್ಕೆ ದಿಗ್ಬಂಧನ ಹಾಕಿ ಹೋರಾಟಗಾರರನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಧೋರಣೆ, ವಿಶೇಷ ಮತದಾರರ ಪರಿಷ್ಕರಣೆಯ ಹೆಸರಿನಲ್ಲಿ ಮತಗಳನ್ನು ಅಳಿಸಿ ಹಾಕುವ ಹುನ್ನಾರ,ಸ್ಟಿಂಗ್ ರಾಜಕಾರಣ, ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ನಾಶ ಮಾಡುವ ಸಂಚುರೂಪಿಸುವ, ಉದ್ಯೋಗಗಳು ಹಣಕ್ಕೆ ಮಾರಾಟವಾಗುವ ಜಾಲಗಳು, ಮಹಿಳಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಧೋರಣೆಗಳ  ನಡುವೆ  ಪಂಚತಂತ್ರದ ಕಥೆಗಳು ಹೋರಾಟದ ಮನಸುಗಳಿಗೆ ಉಸಿರಾಗಿ ನಿಲ್ಲುತ್ತವೆ.  ರಂಗ ವೃಕ್ಷದೊಳಗೆ ನಡೆಯುವ ಈ ಎಲ್ಲಾ ಘಟನೆಗಳಿಗೆ ಬೋಧಿಸತ್ವನ ಮಾತುಗಳಿಗೆ ಕಿವಿ ಕೊಡಬೇಕೆಂಬ ಆಲೋಚನೆ ಬಲವಾಗಿ ಬೇರೂರಿದೆ.

‍ಲೇಖಕರು Admin

29 October, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading