ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೧೩ ನಾಳೆಯ ಮರಣ

ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.

ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.

ಭಾಗ – ೧೩

ಈಶಾನ್ ಆ ರಾತ್ರಿ ಸರಿಯಾಗಿ ನಿದ್ರೆ ಮಾಡಲಿಲ್ಲ.ಮನೆಯ ಮುಂಭಾಗದ ಬಾಗಿಲಿನ ಚಿತ್ರ, ಕಪ್ಪು ಕಡತ ಹಿಡಿದ ಅಪರಿಚಿತನ ನೆರಳು, “ರಾಘವೇಂದ್ರನನ್ನು ಹುಡುಕಬೇಡಿ” ಎಂಬ ಎಚ್ಚರಿಕೆ ಇವೆಲ್ಲವೂ ಅವನ ಮನಸ್ಸಿನಲ್ಲಿ ಒಂದರ ಮೇಲೊ೦ದು ಬೆರೆತು ಹೋಗಿದ್ದವು. ಆ ಚಿತ್ರ ಇತ್ತೀಚಿನದ್ದೇ ಆಗಿದ್ದರೆ, ಯಾರೋ ತನ್ನ ಮನೆಯ ಸುತ್ತಮುತ್ತ ಬಂದಿದ್ದರು. ಅದು ಹಳೆಯ ಚಿತ್ರವಾಗಿದ್ದರೆ, ಅದನ್ನು ಕಳುಹಿಸಿದ ವ್ಯಕ್ತಿಗೆ ತನ್ನ ವೈಯಕ್ತಿಕ ಮಾಹಿತಿಯ ಪ್ರವೇಶವಿತ್ತು. ಎಲ್ಲವೂ ಗೋಜಲಾಗಿತ್ತು ಅವನಿಗೆ.

ಎರಡೂ ಸಾಧ್ಯತೆಗಳು ಆತಂಕ ಹುಟ್ಟಿಸುವಂತಿದ್ದವು. ಬೆಳಿಗ್ಗೆ ಎದ್ದ ಕೂಡಲೇ ಅವನು ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಪರಿಶೀಲಿಸಿದ. ಯಾವುದೇ ಬಲವಂತದ ಪ್ರವೇಶದ ಗುರುತು ಇರಲಿಲ್ಲ. ಮನೆಯೊಳಗಿನ ವಸ್ತುಗಳೂ ತಮ್ಮ ಜಾಗದಲ್ಲಿದ್ದವು. ಯಾರಾದರೂ ಒಳಗೆ ಬಂದಿದ್ದರು ಎಂಬುದಕ್ಕೆ ಸಾಕ್ಷಿಯಿರಲಿಲ್ಲ. ಆದರೂ ಅವನು ಬಾಗಿಲಿನ ಚಿತ್ರವನ್ನು ಅಳಿಸಲಿಲ್ಲ. ಅದನ್ನು ತನ್ನ ಸ್ನೇಹಿತನಿಗೂ ಸಾರಾಳಿಗೂ ಕಳುಹಿಸಿದ. ನಂತರ ಇಮೇಲ್ ಖಾತೆಯ ಪಾಸ್ವರ್ಡ್ ಬದಲಾಯಿಸಿ, ಅಪರಿಚಿತ ಸಾಧನಗಳ ಪ್ರವೇಶವನ್ನು ಪರಿಶೀಲಿಸಿದ. ಈ ಕೆಲಸಗಳನ್ನು ಮುಗಿಸಿದಾಗ ಅವನಿಗೆ ಸ್ವಲ್ಪ ನೆಮ್ಮದಿ ದೊರೆಯಿತು. ಆದರೆ ಆ ನೆಮ್ಮದಿ ಹೆಚ್ಚು ಹೊತ್ತು ಉಳಿಯಲಿಲ್ಲ.

ಬೆಳಿಗ್ಗೆ ಹತ್ತು ಗಂಟೆಗೆ ಅವನ ಸ್ನೇಹಿತನಿಂದ ಕರೆ ಬಂತು. “ನಿನ್ನ ಕಂಪ್ಯೂಟರ್‌ನಲ್ಲಿದ್ದ ಕೆಲವು ಕಡತಗಳನ್ನು ಪರಿಶೀಲಿಸಲು ಇನ್ನೂ ಸಮಯ ಬೇಕು. ಆದರೆ ಒಂದು ವಿಷಯ ಗಮನಕ್ಕೆ ಬಂದಿದೆ,” ಎಂದನು.
“ಏನು?” ಈಶಾನ್ ಕೇಳಿದ.
“ನೀನು ಸ್ಥಾಪಿಸಿದ ಮ್ಯೂಸ್ ಸಾಮಾನ್ಯ ಬರವಣಿಗೆಯ ಕಾರ್ಯಕ್ರಮದಂತೆ ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಅದರ ಕೆಲವು ಘಟಕಗಳು ಪ್ರತ್ಯೇಕ ಸೇವೆಗಳೊಂದಿಗೆ ಸಂಪರ್ಕ ಹೊಂದುವ೦ತೆ ರೂಪಿಸಲಾಗಿದೆ. ಅವು ಯಾವ ಉದ್ದೇಶಕ್ಕಾಗಿ ಬಳಸಲ್ಪಡುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಿನ್ನ ಅನುಮತಿಯಿಲ್ಲದೆ ಖಾಸಗಿ ಕಡತಗಳನ್ನು ಓದುತ್ತಿದ್ದರೆ, ಅದು ಗಂಭೀರವಾದ ಭದ್ರತಾ ಸಮಸ್ಯೆ.” ಎಂದ.
ಈಶಾನ್ ಮೌನವಾಗಿ ಕೇಳುತ್ತಿದ್ದ.

“ಇದನ್ನು ಸಂಪೂರ್ಣವಾಗಿ ಪರಿಶೀಲಿಸಲು ನನಗೆ ನಿನ್ನ ಕಂಪ್ಯೂಟರ್‌ಗೆ ನೇರ ಪ್ರವೇಶ ಬೇಕಾಗಬಹುದು. ಆದರೆ ಅದಕ್ಕೂ ಮೊದಲು, ಅದರಲ್ಲಿರುವ ಮುಖ್ಯ ಕಡತಗಳ ಪ್ರತಿಯನ್ನು ಸುರಕ್ಷಿತವಾಗಿ ಉಳಿಸಬೇಕು.” ಎಂದ ಸ್ನೇಹಿತ.
“ಸರಿ. ಯಾವಾಗ ಬರಬಹುದು?” ಕೇಳಿದ ಈಶಾನ್.
“ನಾಳೆ ಬೆಳಿಗ್ಗೆ ಬರಬಹುದು. ಅಲ್ಲಿವರೆಗೆ ಮ್ಯೂಸ್ ಅನ್ನು ತೆರೆಯಬೇಡ.”
ಕರೆ ಮುಗಿದ ನಂತರ ಈಶಾನ್ ಕಂಪ್ಯೂಟರ್‌ನತ್ತ ನೋಡಿದ.ಅದನ್ನು ತೆರೆಯಬಾರದೆಂದು ನಿರ್ಧರಿಸಿದ್ದ. ಆದರೆ ಈಗ ಅದನ್ನು ಪರಿಶೀಲಿಸಬೇಕೆಂಬ ಕುತೂಹಲ ಹೆಚ್ಚಾಗಿತ್ತು. ತನ್ನ ಹಳೆಯ ನೆನಪುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ವ್ಯವಸ್ಥೆಯೊಳಗೆ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಅವನು ಬಯಸುತ್ತಿದ್ದ.ಆದರೆ ಸ್ನೇಹಿತನ ಸಲಹೆಯನ್ನು ಪಾಲಿಸುವುದೇ ಉತ್ತಮವೆಂದು ನಿರ್ಧರಿಸಿದ.

ಅವನು ಕಂಪ್ಯೂಟರ್‌ನ್ನು ಆಫ್ ಮಾಡಿ ಅದರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ.ಆ ಕ್ಷಣಕ್ಕೆ ಎಲ್ಲವೂ ಮುಗಿದಂತೆ ಅನಿಸಿತು.ಆದರೆ ಮಧ್ಯಾಹ್ನದ ವೇಳೆಗೆ ಅವನಿಗೆ ಒಂದು ಇಮೇಲ್ ಬಂತು.ಇಮೇಲ್ ಕಳುಹಿಸಿದವರ ಹೆಸರು ಅಪರಿಚಿತವಾಗಿತ್ತು. ವಿಷಯದ ಸಾಲಿನಲ್ಲಿ ಹಳೆಯ ಸಂಶೋಧನಾ ಯೋಜನೆಯ ಹೆಸರಿತ್ತು. PROJECT MUSE-INCIDENT REPORT.

ಈಶಾನ್ ಕೆಲವು ಕ್ಷಣ ಪರದೆಯನ್ನು ನೋಡಿದ. ಈ ಸಂದೇಶವನ್ನು ತೆರೆಯಬೇಕೇ ಬೇಡವೇ ಎಂದು ಯೋಚಿಸಿದ. ನಂತರ ಅದು ತನ್ನ ತನಿಖೆಗೆ ಸಂಬ೦ಧಿಸಿದ ಮಹತ್ವದ ದಾಖಲೆ ಇರಬಹುದೆಂದುಕೊ೦ಡು ತೆರೆಯಲು ನಿರ್ಧರಿಸಿದ. ಮೇಲ್‌ನಲ್ಲಿ ಒಂದು ಹಳೆ ವರದಿಯ ಸ್ಕ್ಯಾನ್ ಇತ್ತು. ಅದರ ಕೆಲವು ಭಾಗಗಳು ಮಸುಕಾಗಿದ್ದವು. ಮೇಲ್ಭಾಗದಲ್ಲಿ ಒಂದು ಸಂಶೋಧನಾ ಸಂಸ್ಥೆಯ ಹೆಸರು ಕಾಣಿಸಿತು. ಕೆಳಗೆ ಯೋಜನೆಯ ಉದ್ದೇಶದ ಬಗ್ಗೆ ಕೆಲವು ಸಾಲುಗಳಿದ್ದವು.

ಮಾನವ ಭಾಷಾ ಮಾದರಿಗಳು, ವೈಯಕ್ತಿಕ ಬರವಣಿಗೆಯ ಶೈಲಿ, ನೆನಪುಗಳ ನಿರೂಪಣೆ ಮತ್ತು ಕಥಾ ರಚನೆಯ ನಡುವಿನ ಸಂಬ೦ಧವನ್ನು ಅಧ್ಯಯನ ಮಾಡುವ ಪ್ರಯೋಗ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಈಶಾನ್‌ಗೆ ಸಾರಾ ಹೇಳಿದ್ದ ಸಂಗತಿಗಳು ನೆನಪಾದವು.
ವರದಿಯ ಮುಂದಿನ ಭಾಗದಲ್ಲಿ ಪ್ರಯೋಗದ ವೇಳೆ ನಡೆದ ಘಟನೆಯ ಬಗ್ಗೆ ಬರೆಯಲಾಗಿತ್ತು. ಒಬ್ಬ ಸಂಶೋಧನಾ ಸಹಾಯಕನು ಪ್ರಯೋಗದ ನಂತರ ಕಾಣೆಯಾಗಿದ್ದನೆಂದು ಹೇಳಲಾಗಿತ್ತು. ಅವನ ಹೆಸರು ಸಂಪೂರ್ಣವಾಗಿ ಸ್ಪಷ್ಟವಾಗಿರಲಿಲ್ಲ. ಆದರೆ ಕೊನೆಯ ಅಕ್ಷರಗಳು ‘…ರುದ್ಧ’ ಎಂಬ೦ತೆ ಕಾಣುತ್ತಿದ್ದವು.

ಈಶಾನ್‌ನ ಕೈಗಳು ತಣ್ಣಗಾದವು.ಅದು ಅನಿರುದ್ಧನೇ?ಅವನು ವರದಿಯನ್ನು ಮತ್ತಷ್ಟು ದೊಡ್ಡದಾಗಿ ನೋಡಲು ಪ್ರಯತ್ನಿಸಿದ. ಆದರೆ ಸ್ಕಾö್ಯನ್‌ನ ಗುಣಮಟ್ಟ ಕಳಪೆಯಾಗಿತ್ತು. ಕೆಲವು ಸಾಲುಗಳು ಓದಲು ಸಾಧ್ಯವಾಗಲಿಲ್ಲ.ವರದಿಯಲ್ಲಿ ಮತ್ತೊಂದು ದಿನಾಂಕವಿತ್ತು.ಅನಿರುದ್ಧನ ಕುಟುಂಬ ಊರು ಬಿಟ್ಟಿದ್ದ ಸಮಯಕ್ಕೆ ಅದು ಹತ್ತಿರವಾಗಿತ್ತು.

ಈಶಾನ್ ವರದಿಯನ್ನು ತನ್ನ ಕಂಪ್ಯೂಟರ್‌ಗೆ ಉಳಿಸಿಕೊಳ್ಳಲು ಮುಂದಾದ. ಆದರೆ ಇಮೇಲ್‌ನಲ್ಲಿ ಡೌನ್ಲೋಡ್ ಮಾಡುವ ಆಯ್ಕೆ ಇರಲಿಲ್ಲ. ಅದನ್ನು ಕಳುಹಿಸಿದವರು ಕೇವಲ ಒಂದು ಲಿಂಕ್ ನೀಡಿದ್ದರು. ಲಿಂಕ್ ತೆರೆಯಲು ಪ್ರಯತ್ನಿಸಿದಾಗ, ಪುಟ ಕ್ಷಣಕಾಲ ಕಾಣಿಸಿಕೊಂಡು ನಂತರ ಮುಚ್ಚಿತು.ಅವನು ಮತ್ತೆ ಪ್ರಯತ್ನಿಸಿದ.ಈ ಬಾರಿ ಸಂದೇಶವೊ೦ದು ಕಾಣಿಸಿತು.“ಈ ದಾಖಲೆ ಇನ್ನು ಲಭ್ಯವಿಲ್ಲ.” ಈಶಾನ್‌ಗೆ ಕೋಪ ಬಂತು.

ಅವನು ವರದಿಯ ಸ್ಕ್ರೀನ್ ಶಾಟ್‌ಗಳನ್ನು ಉಳಿಸಿಕೊಂಡಿದ್ದ. ಅವು ಸಂಪೂರ್ಣವಾಗಿರದಿದ್ದರೂ, ಕೆಲವು ವಿವರಗಳನ್ನು ಪರಿಶೀಲಿಸಲು ಸಾಕಾಗಬಹುದಿತ್ತು. ಅವನು ಮತ್ತೆ ಇಮೇಲ್‌ಗೆ ಮರಳಿದ.ಕಳುಹಿಸಿದವರ ವಿಳಾಸವನ್ನು ಪರಿಶೀಲಿಸಿದಾಗ ಅದು ತಾತ್ಕಾಲಿಕ ಖಾತೆಯಂತೆ ಕಾಣಿಸಿತು. ಯಾವುದೇ ಸಹಿ ಇರಲಿಲ್ಲ. ಯಾವುದೇ ವಿವರಣೆಯೂ ಇರಲಿಲ್ಲ. ಆದರೆ ಇಮೇಲ್‌ನ ಕೊನೆಯಲ್ಲಿ ಒಂದು ವಾಕ್ಯವಿತ್ತು.“ಅನಿರುದ್ಧನ ಪ್ರಕರಣದಲ್ಲಿ ಸಂಭವಿಸಿದ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.”ಈಶಾನ್ ಆ ವಾಕ್ಯವನ್ನು ಹಲವು ಬಾರಿ ಓದಿದ.ಅನಿರುದ್ಧನ ಪ್ರಕರಣದಲ್ಲಿ ನಿಖರವಾಗಿ ಏನಾಯಿತು?ಯಾವ ಘಟನೆ ಪುನರಾವರ್ತನೆಯಾಗಬಹುದು?ಮತ್ತು ಆ ಘಟನೆಗೆ ತನ್ನ ಬದುಕಿನೊಂದಿಗೆ ಏನು ಸಂಬ೦ಧ?

ಅವನು ಸಾರಾಳಿಗೆ ಫೋನ್ ಮಾಡಿ ವರದಿಯ ಬಗ್ಗೆ ತಿಳಿಸಿದ.“ಇದನ್ನು ನನಗೆ ಕಳುಹಿಸು,” ಎಂದಳು ಅವಳು. “ನಾನು ಕೂಡ ಪರಿಶೀಲಿಸುತ್ತೇನೆ. ಆದರೆ ಈಗಲೇ ಅದನ್ನು ನಿಜವಾದ ಅಧಿಕೃತ ವರದಿಯೆಂದು ಪರಿಗಣಿಸಬಾರದು. ಯಾರಾದರೂ ನಕಲಿ ದಾಖಲೆ ಸೃಷ್ಟಿಸಿ ನಿನ್ನನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತಿರಬಹುದು.” ಎಂದಳು.
“ನನಗೂ ಆ ಅನುಮಾನವಿದೆ. ಆದರೆ ಅನಿರುದ್ಧನ ಹೆಸರು ಅದರಲ್ಲಿ ಇದೆ.”
“ಅದಕ್ಕಾಗಿಯೇ ನಾವು ಮೂಲವನ್ನು ಪರಿಶೀಲಿಸಬೇಕು. ಯಾರೋ ನಿನ್ನನ್ನು ಭಯಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸಾಧ್ಯತೆಯನ್ನು ಮರೆಯಬೇಡ.” ಎಂದಳು.

ಈಶಾನ್ ಒಪ್ಪಿಕೊಂಡ. ಆದರೆ ವರದಿಯಲ್ಲಿದ್ದ ದಿನಾಂಕ ಅವನ ಮನಸ್ಸಿನಿಂದ ದೂರವಾಗಲಿಲ್ಲ.ಮಧ್ಯಾಹ್ನ ಮೂರು ಗಂಟೆಗೆ ಈಶಾನ್ ತನ್ನ ಕಾದಂಬರಿಯ ಹಳೆಯ ಕರಡನ್ನು ಓದಲು ಕುಳಿತ. ಕಳೆದ ಕೆಲವು ದಿನಗಳಿಂದ ಅವನು ಬರವಣಿಗೆಯನ್ನು ಬಹುತೇಕ ನಿಲ್ಲಿಸಿದ್ದ. ಮ್ಯೂಸ್‌ನಿಂದ ದೂರವಿರಬೇಕೆಂಬ ನಿರ್ಧಾರ ಮತ್ತು ಅನಿರುದ್ಧನ ಬಗ್ಗೆ ಸತ್ಯ ತಿಳಿದುಕೊಳ್ಳಬೇಕೆಂಬ ಆಸೆ ಅವನನ್ನು ಸಂಪೂರ್ಣವಾಗಿ ಆವರಿಸಿದ್ದವು.
ಬರೆಯಲು ಮತ್ತೆ ಆರಂಭಿಸುವುದು ಅವನಿಗೆ ಅಗತ್ಯವಾಗಿತ್ತು. ತನ್ನ ಬದುಕಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ ಕಾಯುತ್ತಿದ್ದರೆ, ಅವನು ಮತ್ತೆ ಅದೇ ಹಳೆಯ ವೈಫಲ್ಯದ ಸ್ಥಿತಿಗೆ ಮರಳಬಹುದಿತ್ತು.ಅವನು ಒಂದು ಹೊಸ ಅಧ್ಯಾಯದ ಶೀರ್ಷಿಕೆ ಬರೆದ.“ಮರೆತ ಮನುಷ್ಯ.”ನಂತರ ಪಾತ್ರವೊಂದರ ಬಗ್ಗೆ ಬರೆಯಲು ಆರಂಭಿಸಿದ. ತನ್ನ ಹಿಂದಿನ ನೆನಪುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬನು ಅವುಗಳನ್ನು ಹುಡುಕಲು ಹೊರಡುವ ಕಥೆ. ಅವನಿಗೆ ದೊರೆಯುವ ಪ್ರತಿಯೊಂದು ಸುಳಿವೂ ಸತ್ಯದತ್ತ ಕರೆದೊಯ್ಯುವಂತೆ ಕಾಣುತ್ತಿತ್ತು. ಆದರೆ ಕೊನೆಯಲ್ಲಿ ಆ ಸುಳಿವುಗಳು ಅವನ ಸ್ವಂತ ಕಲ್ಪನೆಯಿಂದ ರೂಪುಗೊಂಡಿರಬಹುದೆAಬ ಅನುಮಾನವೂ ಇತ್ತು.

ಈಶಾನ್ ಬರೆಯುತ್ತಾ ಹೋದ.ಬಹಳ ದಿನಗಳ ನಂತರ ಅವನಿಗೆ ತನ್ನದೇ ಕಥೆಯೊಳಗೆ ಮುಳುಗಲು ಸಾಧ್ಯವಾಯಿತು. ಪಾತ್ರದ ಗೊಂದಲ ತನ್ನ ಗೊಂದಲವನ್ನು ಹೋಲಿಸುತ್ತಿದ್ದರೂ, ಅವನು ತನ್ನ ಅನುಭವಗಳನ್ನು ನೇರವಾಗಿ ನಕಲಿಸದೆ ಹೊಸ ರೂಪ ನೀಡುತ್ತಿದ್ದ. ಸುಮಾರು ನಲವತ್ತು ನಿಮಿಷಗಳ ಕಾಲ ಬರೆದ. ನಂತರ ಬರೆಯುವುದನ್ನು ನಿಲ್ಲಿಸಿದ. ಒಂದು ಪುಟ ಪೂರ್ಣಗೊಂಡಿತ್ತು.ಅದು ಅತ್ಯುತ್ತಮವಾಗಿರಲಿಲ್ಲ. ಆದರೆ ಅದರಲ್ಲಿ ಜೀವವಿತ್ತು.ಅವನು ಅದನ್ನು ಸೇವ್ ಮಾಡಿದ.

ಅಷ್ಟರಲ್ಲಿ ಪರದೆಯ ಕೆಳಭಾಗದಲ್ಲಿ ಒಂದು ಅಧಿಸೂಚನೆ ಕಾಣಿಸಿಕೊಂಡಿತು.“ಹೊಸ ಕರಡು ಲಭ್ಯವಿದೆ.” ಈಶಾನ್‌ನ ಹೃದಯ ಬಡಿತ ವೇಗವಾಯಿತು.ಅವನು ಮ್ಯೂಸ್ ಅನ್ನು ತೆರೆಯಲಿಲ್ಲ. ಕಂಪ್ಯೂಟರ್‌ನ ಇಂಟರ್‌ನೆಟ್ ಸಂಪರ್ಕವೂ ಕಡಿತಗೊಂಡಿತ್ತು. ಆದರೂ ಅಧಿಸೂಚನೆ ಹೇಗೆ ಕಾಣಿಸಿಕೊಂಡಿತು?ಅವನು ಅದನ್ನು ಮುಚ್ಚಲು ಪ್ರಯತ್ನಿಸಿದ. ಆದರೆ ಪರದೆಯ ಮೇಲೆ ಒಂದು ಕಡತದ ಹೆಸರು ಕಾಣಿಸಿತು. “ಅಧ್ಯಾಯ ೧೩-ನಾಳೆಯಮರಣ.”ಈಶಾನ್‌ನ ಬೆರಳುಗಳು ನಿಶ್ಚಲವಾದವು.

ಅವನು ಅಧಿಸೂಚನೆಯನ್ನು ತೆರೆಯಲಿಲ್ಲ. ಕೆಲವು ಕ್ಷಣ ಪರದೆಯನ್ನು ನೋಡುತ್ತ ಕುಳಿತ. ನಂತರ ಕಂಪ್ಯೂಟರ್‌ನಲ್ಲಿದ್ದ ಎಲ್ಲ ಕಾರ್ಯಕ್ರಮಗಳನ್ನು ಮುಚ್ಚಿ, ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ.ಆದರೆ ಅವನ ಮನಸ್ಸಿನಲ್ಲಿ ಆ ಶೀರ್ಷಿಕೆ ಉಳಿದುಕೊಂಡಿತ್ತು. ‘ನಾಳೆಯ ಮರಣ’.ಅದು ಕಥೆಯ ಶೀರ್ಷಿಕೆಯಾಗಿರಬಹುದು. ಮ್ಯೂಸ್‌ನಿಂದ ಹಿಂದೆ ಸೃಷ್ಟಿಸಲ್ಪಟ್ಟ ಕರಡು ಯಾವುದೋ ರೀತಿಯಲ್ಲಿ ಇನ್ನೂ ಉಳಿದಿರಬಹುದು. ಅಥವಾ ಅವನದೇ ಕಂಪ್ಯೂಟರ್‌ನಲ್ಲಿ ನಡೆಯುತ್ತಿದ್ದ ಯಾವುದೋ ಪ್ರಕ್ರಿಯೆ ಹೊಸ ಕಡತವನ್ನು ರಚಿಸಿರಬಹುದು.ಆದರೂ ಆ ಪದಗಳು ಅವನಿಗೆ ಅಸಹಜ ಭಯವನ್ನು ಉಂಟುಮಾಡಿದ್ದವು.

ಅವನು ಸಾರಾಳಿಗೆ ಕರೆ ಮಾಡಿದ. “ಮ್ಯೂಸ್‌ನಿಂದ ಹೊಸ ಅಧ್ಯಾಯದ ಅಧಿಸೂಚನೆ ಬಂದಿದೆ.” ಎಂದ.
“ನೀನು ಅದನ್ನು ತೆರೆದೆಯಾ?” ಕೇಳಿದಳು.
“ಇಲ್ಲ.”
“ಒಳ್ಳೆದಾಯ್ತು. ಈಗ ಅದನ್ನು ತೆರೆಯಬೇಡ. ನಾಳೆ ನಿನ್ನ ಸ್ನೇಹಿತ ಬರುವವರೆಗೆ ಕಾಯೋಣ.” ಎಂದಳು.
“ಅದರ ಶೀರ್ಷಿಕೆ ‘ನಾಳೆಯ ಮರಣ’ ಎಂದಿದೆ” ಎಂದ.
ಸಾರಾ ಕೆಲವು ಕ್ಷಣ ಮೌನವಾಗಿದ್ದಳು.“ಅದು ಭಯ ಹುಟ್ಟಿಸುವ ಶೀರ್ಷಿಕೆ. ಆದರೆ ಅದರಿಂದ ನಿಜವಾಗಿಯೂ ಏನಾದರೂ ಸಂಭವಿಸಲಿದೆ ಎಂದು ಅರ್ಥವಲ್ಲ. ಯಾರೋ ನಿನ್ನ ಆತಂಕವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರಬಹುದು.” ಎಂದು ಧೈರ್ಯ ನೀಡದಳು.
ಈಶಾನ್‌ಗೆ ಅವಳ ಮಾತು ಸಮಂಜಸವೆನಿಸಿತು.“ನಾನು ಅದನ್ನು ತೆರೆಯುವುದಿಲ್ಲ,” ಎಂದನು.
ಕರೆ ಮುಗಿದ ನಂತರ ಅವನು ಕಂಪ್ಯೂಟರ್‌ನಿ೦ದ ದೂರ ಸರಿದ.ಆದರೆ ಆ ರಾತ್ರಿ ಅವನು ಮಲಗುವವರೆಗೂ, ಆ ಕಡತದೊಳಗೆ ಏನಿರಬಹುದು ಎಂಬ ಕುತೂಹಲ ಅವನನ್ನು ಬಿಡಲಿಲ್ಲ.ಮರುದಿನ ಬೆಳಿಗ್ಗೆ ಏಳು ಗಂಟೆಗೆ ಈಶಾನ್‌ನ ಸ್ನೇಹಿತ ಬರಬೇಕಿತ್ತು. ಅವನು ಬೇಗ ಎದ್ದು ಕಂಪ್ಯೂಟರ್ ಅನ್ನು ಮುಟ್ಟದೆ ಕಾಯುತ್ತಿದ್ದ.ಆದರೆ ಆರು ಗಂಟೆ ನಲವತ್ತೈದು ನಿಮಿಷಕ್ಕೆ ಅವನ ಮೊಬೈಲ್‌ಗೆ ಒಂದು ಸಂದೇಶ ಬಂತು.

ಅದು ಮ್ಯೂಸ್‌ನಿಂದ ಬಂದ ಅಧಿಸೂಚನೆಯಾಗಿತ್ತು.“ಅಧ್ಯಾಯ ೧೩ ಪೂರ್ಣಗೊಂಡಿದೆ.”ಈಶಾನ್ ಸಂದೇಶವನ್ನು ಅಳಿಸಿದ.ಮತ್ತೊಂದು ಸಂದೇಶ ಬಂತು.“ನಿಮ್ಮ ಕಥೆಯ ಅಂತಿಮ ದೃಶ್ಯ ಸಿದ್ಧವಾಗಿದೆ.”ಅವನು ಮೊಬೈಲ್‌ನ್ನುಏರೋಪ್ಲೇನ್ ಮೋಡ್‌ಗೆ ಬದಲಾಯಿಸಿದ.ಆದರೆ ಕೆಲವು ಕ್ಷಣಗಳ ನಂತರ ಪರದೆಯ ಮೇಲೆ ಮತ್ತೊಂದು ಅಧಿಸೂಚನೆ ಕಾಣಿಸಿತು.“ನೀವು ನಾಳೆಯ ಬಗ್ಗೆ ತಿಳಿದುಕೊಳ್ಳಲು ಬಯಸುವುದಿಲ್ಲವೇ?”ಈಶಾನ್ ಮೊಬೈಲ್ ಅನ್ನು ಮೇಜಿನ ಮೇಲೆ ಇಟ್ಟ.

ಅವನಿಗೆ ಕೋಪ ಬರುತ್ತಿತ್ತು. ತನ್ನನ್ನು ಭಯಪಡಿಸುವ ಪ್ರಯತ್ನವನ್ನು ಸಹಿಸಿಕೊಳ್ಳಲು ಅವನು ಸಿದ್ಧನಿರಲಿಲ್ಲ. ಇದು ಮ್ಯೂಸ್‌ನಿಂದ ಬಂದಿರಲಿ ಅಥವಾ ಬೇರೆ ಯಾರಾದರೂ ಕಳುಹಿಸಿರಲಿ, ಅದರ ಉದ್ದೇಶ ತನ್ನ ಮನಸ್ಸನ್ನು ನಿಯಂತ್ರಿಸುವುದೇ ಆಗಿರಬಹುದು. ಮೊಬೈಲ್ ತೆಗೆದುಕೊಂಡು ಏರೋಪ್ಲೇನ್ ಮೋಡ್ ಆಫ್ ಮಾಡಿ ತನ್ನ ಸ್ನೇಹಿತನಿಗೆ ಕರೆ ಮಾಡಿದ.“ನೀನು ಬೇಗ ಬರಬಹುದೇ? ನನಗೆ ಕೆಲವು ಹೊಸ ಅಧಿಸೂಚನೆಗಳು ಬರುತ್ತಿವೆ.”
“ನಾನು ಈಗಲೇ ಹೊರಡುತ್ತೇನೆ. ಕಂಪ್ಯೂಟರ್ ಅನ್ನು ತೆರೆಯಬೇಡ.” ಎಂದ ಸ್ನೇಹಿತ.

ಈಶಾನ್ ಕಾಯತೊಡಗಿದ.ಆದರೆ ಏಳು ಗಂಟೆಗೆ ಸ್ನೇಹಿತ ಬರಲಿಲ್ಲ. ಅವನು ಕರೆ ಮಾಡಿದಾಗ, ಸ್ನೇಹಿತನ ಕಾರು ಕೆಟ್ಟುಹೋಗಿದ್ದರಿಂದ ಸ್ವಲ್ಪ ತಡವಾಗುವುದೆಂದು ತಿಳಿಸಿದ.“ನಾನು ಒಂದು ಗಂಟೆಯಲ್ಲಿ ಬರುತ್ತೇನೆ. ಅಷ್ಟರವರೆಗೆ ಏನನ್ನೂ ಬದಲಾಯಿಸಬೇಡ.” ಎಂದ.
ಈಶಾನ್ ಒಪ್ಪಿಕೊಂಡ.ಅವನು ಅಡುಗೆಮನೆಗೆ ಹೋಗಿ ಕಾಫಿ ಮಾಡಿಕೊಂಡು ಮರಳಿದಾಗ, ಕಂಪ್ಯೂಟರ್‌ನ ಪರದೆಯ ಮೇಲೆ ಬೆಳಕು ಕಾಣಿಸಿತು.ಅದು ಆಫ್ ಆಗಿತ್ತು.ಆದರೂ ಪರದೆಯ ಮೇಲೆ ಒಂದು ಕಡತದ ಹೆಸರು ಕಾಣಿಸಿತು. “ಅಧ್ಯಾಯ ೧೩-ನಾಳೆಯಮರಣ.”ಈಶಾನ್‌ನ ಕೈಯಲ್ಲಿದ್ದ ಕಾಫಿ ಕಪ್ ನಡುಗತೊಡಗಿತು. ಅವನು ಮೇಜಿನತ್ತ ಹೋಗಲಿಲ್ಲ. ದೂರದಿಂದಲೇ ಪರದೆಯನ್ನು ನೋಡಿದ.ಕೆಲವು ಕ್ಷಣಗಳ ನಂತರ ಪರದೆಯ ಮೇಲೆ ಮೊದಲ ಸಾಲು ಕಾಣಿಸಿಕೊಂಡಿತು. “ಈಶಾನ್ ಭಟ್‌ಗೆ ಆ ದಿನ ಬೆಳಿಗ್ಗೆ ಏಳು ಗಂಟೆ ಹದಿನೈದು ನಿಮಿಷಕ್ಕೆ ತನ್ನ ಬದುಕಿನ ಅತ್ಯಂತ ಭಯಾನಕ ಸುದ್ದಿ ತಿಳಿಯಲಿತ್ತು.”ಈಶಾನ್ ಗಡಿಯಾರವನ್ನು ನೋಡಿದ. ಏಳು ಗಂಟೆ ಹದಿನಾಲ್ಕು ನಿಮಿಷ ಆಗಿತ್ತು. ಅವನು ನಿಶ್ಚಲವಾಗಿ ನಿಂತ.ಮುAದಿನ ಸಾಲು ಕಾಣಿಸಿತು.“ಅವನು ಆ ಸುದ್ದಿಯನ್ನು ಕೇಳುವ ಮೊದಲು, ತನ್ನ ಕಂಪ್ಯೂಟರ್‌ನ ಪರದೆಯ ಮೇಲೆ ಮರಣದ ದಿನಾಂಕವನ್ನು ನೋಡಿದ್ದ.”ಗಡಿಯಾರ ಏಳು ಗಂಟೆ ಹದಿನೈದು ನಿಮಿಷ ತೋರಿಸಿತು.ಅದೇ ಕ್ಷಣದಲ್ಲಿ ಅವನ ಮೊಬೈಲ್ ರಿಂಗಣಿಸಿತು.

ಪರದೆಯ ಮೇಲೆ ಸ್ನೇಹಿತನ ಹೆಸರು ಕಾಣಿಸಿತು.ಈಶಾನ್ ತಕ್ಷಣ ಕರೆ ಸ್ವೀಕರಿಸಿದ.
“ಈಶಾನ್ ನೀನು ಶಾಂತವಾಗಿರು. ನಾನು ಈಗಷ್ಟೇ ಒಂದು ಸುದ್ದಿ ನೋಡಿದೆ. ಅದು ನಿನಗೆ ಸಂಬ೦ಧಿಸಿದೆ ಎಂದು ಖಚಿತವಿಲ್ಲ, ಆದರೆ ನೀನು ತಿಳಿದುಕೊಳ್ಳಬೇಕು.” ಎಂದ ಸ್ನೇಹಿತ.
“ಏನಾಯಿತು?” ಎಂದ ಈಶಾನ್.
“ನಿನ್ನೆ ರಾತ್ರಿ ನಿನ್ನ ಹಳೆಯ ಶಾಲೆಯ ಸಮೀಪವಿರುವ ಹಳೆಯ ವಾಚನಾಲಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಅದನ್ನು ನಿಯಂತ್ರಿಸಿದ್ದಾರೆ. ಆದರೆ ಒಳಗೆ ಒಬ್ಬ ವ್ಯಕ್ತಿ ಸಿಕ್ಕಿದ್ದಾನೆಂದು ಸುದ್ದಿ ಹೇಳುತ್ತಿದೆ.” ಎಂದ.
ಈಶಾನ್‌ನ ದೇಹ ತಣ್ಣಗಾಯಿತು.
“ಯಾರು ಆ ವ್ಯಕ್ತಿ?” ಎಂದ ಆತುರದಿಂದ.
“ಇನ್ನೂ ಅಧಿಕೃತವಾಗಿ ಗುರುತಿಸಿಲ್ಲ. ಆದರೆ ಸುದ್ದಿ ವರದಿಯಲ್ಲಿ ಒಂದು ಹೆಸರು ಉಲ್ಲೇಖವಾಗಿದೆ. ಅನಿರುದ್ಧನ ಹಳೆಯ ಸಂಶೋಧನಾ ಯೋಜನೆಯೊಂದಿಗೆ ಸಂಬ೦ಧ ಹೊಂದಿದ್ದ ವ್ಯಕ್ತಿ ಎಂದು ಹೇಳುತ್ತಿದ್ದಾರೆ.” ಎಂದ.
“ಯಾರ ಹೆಸರು?” ಅವಸರದಿಂದ ಕೇಳಿದ.
ಸ್ನೇಹಿತ ಸ್ವಲ್ಪ ಹೊತ್ತು ಮೌನವಾಗಿದ್ದ.“ಡಾ. ರಾಘವೇಂದ್ರ ಭಟ್.” ಎಂದ.
ಈಶಾನ್‌ನ ಕೈಯಿಂದ ಮೊಬೈಲ್ ಜಾರಿಬೀಳುವಂತಾಯಿತು. ಅವನು ಕಂಪ್ಯೂಟರ್‌ನತ್ತ ನೋಡಿದ.ಪರದೆಯ ಮೇಲೆ ಇನ್ನೊಂದು ಸಾಲು ಕಾಣಿಸಿಕೊಂಡಿತು.“ಮರಣವು ನಾಳೆ ಸಂಭವಿಸಬೇಕಾಗಿರಲಿಲ್ಲ. ಅದು ಈಗಾಗಲೇ ಸಂಭವಿಸಿತ್ತು. ಆದರೆ ಈಶಾನ್‌ಗೆ ಸತ್ಯ ತಿಳಿಯುವ ಹೊತ್ತಿಗೆ, ಅವನು ತನ್ನದೇ ಕಥೆಯ ಮುಂದಿನ ಬಲಿಪಶುವಾಗಿರಬಹುದಿತ್ತು.” ಎಂದು ಮೂಡಿಬಂತು. ಈಶಾನ್ ತಕ್ಷಣ ಕಂಪ್ಯೂಟರ್‌ನ ವಿದ್ಯುತ್ ಸಂಪರ್ಕವನ್ನು ಕಿತ್ತುಹಾಕಿದ.ಪರದೆ ಆರಿತು.

ಅವನು ಉಸಿರಾಡಲು ಪ್ರಯತ್ನಿಸಿದ. ಸುದ್ದಿಯು ನಿಜವಾಗಿದ್ದರೆ, ರಾಘವೇಂದ್ರ ಮೃತಪಟ್ಟಿದ್ದ. ಆದರೆ ಮ್ಯೂಸ್‌ಗೆ ಆ ಮಾಹಿತಿ ಹೇಗೆ ತಿಳಿದಿತ್ತು? ಅದು ನಿನ್ನೆ ರಾತ್ರಿ ಸಂಭವಿಸಿದ ಘಟನೆ. ವರದಿ ಈಗಷ್ಟೇ ಪ್ರಕಟವಾಗಿರಬಹುದು. ಬಹುಶಃ ಮ್ಯೂಸ್ ಇಂಟರ್‌ನೆಟ್‌ನಿ೦ದ ಸುದ್ದಿಯನ್ನು ಪಡೆದಿರಬಹುದು. ಆದರೆ ಕಂಪ್ಯೂಟರ್ ಸ್ಥಗಿತಗೊಂಡಿದ್ದಾಗ ಪರದೆಯ ಮೇಲೆ ಆ ಸಾಲುಗಳು ಹೇಗೆ ಕಾಣಿಸಿಕೊಂಡವು?ಅವನಿಗೆ ತಿಳಿಯಲಿಲ್ಲ.ಆದರೆ ಇನ್ನೊಂದು ಸಂಗತಿ ಅವನನ್ನು ಹೆಚ್ಚು ಕಾಡುತ್ತಿತ್ತು.

ಮ್ಯೂಸ್‌ನ ಕಡತದಲ್ಲಿ “ನಾಳೆಯ ಮರಣ” ಎಂಬ ಶೀರ್ಷಿಕೆ ಇತ್ತು. ಅದು ರಾಘವೇಂದ್ರನ ಸಾವನ್ನು ಸೂಚಿಸುತ್ತಿತ್ತೇ? ಅಥವಾ ಆ ಶೀರ್ಷಿಕೆ ಕೇವಲ ಕಥೆಯ ಕಲ್ಪನೆಯಾಗಿದ್ದು, ನಂತರ ಸಂಭವಿಸಿದ ಘಟನೆ ಅದಕ್ಕೆ ಹೊಂದಿಕೆಯಾಗಿತ್ತೇ? ಈ ಪ್ರಶ್ನೆಗೆ ಉತ್ತರ ಸಿಗುವವರೆಗೆ ಅವನು ಯಾವುದೇ ನಿರ್ಧಾರಕ್ಕೆ ಬರಬಾರದು ಎಂದುಕೊ೦ಡ. ಅವನು ಸ್ನೇಹಿತನಿಗೆ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಕೇಳಿದ. ನಂತರ ಸಾರಾಳಿಗೆ ಕರೆ ಮಾಡಿದ.ಅವಳು ಸುದ್ದಿ ಕೇಳಿದ ಕೂಡಲೇ ಅವನ ಮನೆಗೆ ಬರುವುದಾಗಿ ಹೇಳಿದಳು.

ಈಶಾನ್ ಕಂಪ್ಯೂಟರ್‌ನಿ೦ದ ದೂರ ಕುಳಿತ.ಅವನ ಮನಸ್ಸಿನಲ್ಲಿ ಭಯಕ್ಕಿಂತಲೂ ಹೆಚ್ಚು ಗೊಂದಲವಿತ್ತು. ತನ್ನ ಅನುಮಾನಗಳೆಲ್ಲವೂ ಸತ್ಯವಾಗುತ್ತಿವೆಯೇ? ಅಥವಾ ಯಾರೋ ತನ್ನ ಬದುಕಿನ ಘಟನೆಗಳನ್ನು ಕಥೆಯಂತೆ ಜೋಡಿಸಿ, ಅವನನ್ನು ಮಾನಸಿಕವಾಗಿ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆಯೇ? ರಾಘವೇಂದ್ರನ ಸಾವು ಒಂದು ನಿಜವಾದ ಘಟನೆ. ಆದರೆ ಅದರ ಹಿಂದೆ ಮ್ಯೂಸ್‌ನ ಕೈವಾಡವಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯಿರಲಿಲ್ಲ.

ಮಧ್ಯಾಹ್ನದ ವೇಳೆಗೆ ಸಾರಾ ಮನೆಗೆ ಬಂದಳು. ಅವಳೊಂದಿಗೆ ಈಶಾನ್‌ನ ಸ್ನೇಹಿತನೂ ಬಂದಿದ್ದ. ಅವರು ಕಂಪ್ಯೂಟರ್ ಅನ್ನು ಪರಿಶೀಲಿಸಲು ಆರಂಭಿಸಿದರು.ಅದರೊಳಗಿನ ಕೆಲವು ಕಡತಗಳು ಬದಲಾಗಿದ್ದವು. “ಅಧ್ಯಾಯ ೧೩-ನಾಳೆಯಮರಣ” ಎಂಬ ಕಡತ ಇತ್ತು. ಆದರೆ ಅದನ್ನು ತೆರೆಯುವಮೊದಲು ಅವರು ಅದರನಕಲನ್ನುಸುರಕ್ಷಿತವಾಗಿ ಉಳಿಸಿಕೊಂಡರು. ನ೦ತರ ಕಡತವನ್ನು ತೆರೆಯಲಾಯಿತು.ಅದರೊಳಗೆ ಸುಮಾರು ಹತ್ತು ಪುಟಗಳ ಪಠ್ಯವಿತ್ತು.

ಮೊದಲ ಕೆಲವು ಪುಟಗಳಲ್ಲಿ ಈಶಾನ್‌ನ ಬದುಕಿನ ಇತ್ತೀಚಿನ ಘಟನೆಗಳನ್ನು ಕಥೆಯ ರೂಪದಲ್ಲಿ ವಿವರಿಸಲಾಗಿತ್ತು. ಅವನ ಹಳೆಯ ಕಡತಗಳನ್ನು ಹುಡುಕುವುದು, ಅನಿರುದ್ಧನ ಬಗ್ಗೆ ಮಾಹಿತಿ ಪಡೆಯುವುದು, ರಾಘವೇಂದ್ರನನ್ನು ಹುಡುಕಲು ಪ್ರಯತ್ನಿಸುವುದುಇವೆಲ್ಲವೂ ಕಥೆಯಲ್ಲಿ ಕಾಣಿಸಿಕೊಂಡಿದ್ದವು. ಆದರೆ ನಾಲ್ಕನೇ ಪುಟದಲ್ಲಿ ಒಂದು ಸಂಗತಿ ಅವರನ್ನು ಬೆಚ್ಚಿಬೀಳಿಸಿತು.“ರಾಘವೇಂದ್ರ ಭಟ್ ತನ್ನ ಹಳೆಯ ಸಂಶೋಧನಾ ದಾಖಲೆಗಳನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದ. ಅವನಿಗೆ ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎಂಬ ಅನುಮಾನವಿತ್ತು. ಅವನು ಒಂದು ಹಳೆಯ ಕಟ್ಟಡಕ್ಕೆ ಹೋದ. ಅಲ್ಲಿ ಸಂಭವಿಸಿದ ಬೆಂಕಿಯ ನಂತರ, ಅವನನ್ನು ಜೀವಂತವಾಗಿ ಹೊರತರಲು ಸಾಧ್ಯವಾಗಲಿಲ್ಲ.”

ಈಶಾನ್ ತನ್ನ ಸ್ನೇಹಿತನತ್ತ ನೋಡಿದ. “ಈ ಮಾಹಿತಿ ನಿನ್ನೆ ರಾತ್ರಿ ಬರೆಯಲ್ಪಟ್ಟಿದೆಯೇ?” ಸ್ನೇಹಿತ ಕಡತದ ಗುಣಲಕ್ಷಣಗಳನ್ನು ಪರಿಶೀಲಿಸಿದ.“ಕಡತದ ಪ್ರಸ್ತುತ ದಿನಾಂಕವನ್ನು ಬದಲಾಯಿಸಬಹುದು. ಆದರೆ ಇಲ್ಲಿ ಕೆಲವು ಹಳೆಯ ಆವೃತ್ತಿಗಳ ಗುರುತುಗಳಿವೆ. ಅವುಗಳಲ್ಲಿ ಒಂದು ನಿನ್ನೆ ರಾತ್ರಿ ಎಂಟು ಗಂಟೆ ಹದಿನೇಳು ನಿಮಿಷದ ಸಮಯವನ್ನು ತೋರಿಸುತ್ತಿದೆ. ಇದರಿಂದಲೇ ಪಠ್ಯ ಆ ಸಮಯದಲ್ಲಿ ಸೃಷ್ಟಿಯಾಯಿತು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ಪರಿಶೀಲಿಸಬೇಕು.”

ಸಾರಾ ನಿಧಾನವಾಗಿ ಕೇಳಿದಳು. “ರಾಘವೇಂದ್ರನ ಸಾವಿನ ಸುದ್ದಿ ಯಾವಾಗ ಪ್ರಕಟವಾಯಿತು?”ಈಶಾನ್ ಮೊಬೈಲ್ ತೆಗೆದುಕೊಂಡು ಸುದ್ದಿಯನ್ನು ಪರಿಶೀಲಿಸಿದ. ಮೊದಲ ವರದಿ ಬೆಳಿಗ್ಗೆ ಏಳು ಗಂಟೆ ಹದಿನೈದು ನಿಮಿಷದ ನಂತರ ಪ್ರಕಟವಾಗಿತ್ತು. ಬೆಂಕಿ ಸಂಭವಿಸಿದ ಸಮಯವನ್ನು ರಾತ್ರಿ ಹನ್ನೊಂದು ಗಂಟೆ ಎಂದು ವರದಿ ಹೇಳುತ್ತಿತ್ತು. ಅಂದರೆ ಮ್ಯೂಸ್‌ನ ಕಡತದಲ್ಲಿದ್ದ ಮಾಹಿತಿ, ಕನಿಷ್ಠ ಕೆಲವು ಗಂಟೆಗಳ ಹಿಂದಿನ ಘಟನೆಯ ಬಗ್ಗೆ ಹೇಳುತ್ತಿತ್ತು.ಆದರೆ ಅದು ಮುಂಚಿತವಾಗಿ ತಿಳಿದಿತ್ತೇ? ಅಥವಾ ಯಾರಾದರೂ ಆ ಘಟನೆಯ ಬಗ್ಗೆ ಮೊದಲೇ ತಿಳಿದುಕೊಂಡು ಪಠ್ಯವನ್ನು ಸೃಷ್ಟಿಸಿದ್ದರೇ?ಈ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

ಸ್ನೇಹಿತ ಕಡತದ ಇನ್ನಷ್ಟು ಭಾಗಗಳನ್ನು ಪರಿಶೀಲಿಸಿದ. ಕೊನೆಯ ಪುಟದಲ್ಲಿ ಒಂದು ವಾಕ್ಯವಿತ್ತು.“ಈಶಾನ್ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ಅವನು ಮರೆತಿರುವುದನ್ನು ನೆನಪಿಸಿಕೊಳ್ಳುವವರೆಗೆ, ಕಥೆಯ ಅಂತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ.”ಅದರ ಕೆಳಗೆ ಒಂದು ಸಾಲು ಇತ್ತು. “ಮುಂದಿನ ಗುರಿ-ಈಶಾನ್ ಭಟ್.”

ಕೋಣೆಯಲ್ಲಿ ಮೌನ ಆವರಿಸಿತು.ಈಶಾನ್ ಆ ಪದಗಳನ್ನು ದಿಟ್ಟಿಸುತ್ತ ಕುಳಿತ. ಸಾರಾ ತಕ್ಷಣ ಹೇಳಿದಳು. “ಇದು ಬೆದರಿಕೆಯಂತೆ ಕಾಣುತ್ತದೆ. ಆದರೆ ಇದರಿಂದ ನಿಜವಾಗಿಯೂ ನಿನಗೆ ಅಪಾಯವಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಆದರೂ ನಾವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ದಾಖಲೆಗಳನ್ನು ಉಳಿಸೋಣ. ಅಗತ್ಯವಿದ್ದರೆ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡೋಣ.”

ಈಶಾನ್ ತಲೆಯಾಡಿಸಿದ. ಅವನಿಗೆ ಈಗ ಮ್ಯೂಸ್‌ನ ರಹಸ್ಯವನ್ನು ತಿಳಿದುಕೊಳ್ಳುವುದಷ್ಟೇ ಮುಖ್ಯವಾಗಿರಲಿಲ್ಲ. ತನ್ನ ಸುರಕ್ಷತೆಯೂ ಮುಖ್ಯವಾಗಿತ್ತು.ಆದರೆ ಕಡತದ ಕೊನೆಯ ಸಾಲು ಅವನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿತ್ತು. “ಮುಂದಿನ ಗುರಿ-ಈಶಾನ್ ಭಟ್.” ಅವನು ಕಂಪ್ಯೂಟರ್‌ನತ್ತ ನೋಡಿದ. ಅದನ್ನು ಆಫ್ ಮಾಡಲಾಗಿತ್ತು. ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿತ್ತು. ಆದರೂ ಅದರ ಪರದೆಯ ಮೇಲೆ ಕ್ಷಣಕಾಲ ಬೆಳಕು ಮಿನುಗಿತು. ಸ್ನೇಹಿತ ತಕ್ಷಣ ವಿದ್ಯುತ್ ಸಂಪರ್ಕವನ್ನು ತೆಗೆದುಹಾಕಿದ.ಪರದೆ ಆರಿತು.ಯಾರೂ ಮಾತನಾಡಲಿಲ್ಲ. ಆ ಮೌನದ ಮಧ್ಯೆ ಈಶಾನ್‌ಗೆ ಒಂದು ವಿಷಯ ಸ್ಪಷ್ಟವಾಯಿತು.

ಮ್ಯೂಸ್ ಕೇವಲ ತನ್ನ ಬರವಣಿಗೆಯ ಮೇಲೆ ಪ್ರಭಾವ ಬೀರುತ್ತಿದೆಯೇ, ಅಥವಾ ಯಾರೋ ಮ್ಯೂಸ್‌ನ ಹೆಸರನ್ನು ಬಳಸಿಕೊಂಡು ತನ್ನನ್ನು ಬೆದರಿಸುತ್ತಿದ್ದಾರೆಯೇ ಎಂಬುದನ್ನು ತಿಳಿಯದೆ ಮುಂದೆ ಸಾಗಲು ಸಾಧ್ಯವಿರಲಿಲ್ಲ.ರಾಘವೇಂದ್ರನ ಸಾವು ಆ ಪ್ರಶ್ನೆಯನ್ನು ಇನ್ನಷ್ಟು ತೀವ್ರಗೊಳಿಸಿತ್ತು. ಆದರೆ ಈಶಾನ್‌ಗೆ ತಿಳಿಯದ ಇನ್ನೊಂದು ಸಂಗತಿಯಿತ್ತು.ರಾಘವೇ೦ದ್ರನ ಸಾವಿನ ಸುದ್ದಿಯಲ್ಲಿ ಉಲ್ಲೇಖಿಸದಿದ್ದ ಒಂದು ವಿವರ. ಅವನಬಳಿಸಿಕ್ಕಿದ್ದಹಳೆಯ ಕಡತದೊಳಗೆ ಈಶಾನ್‌ನಬಾಲ್ಯದ ಕೈಬರಹದ ಒಂದುಪುಟವೂ ಇತ್ತು.ಆ ಪುಟದ ಕೊನೆಯ ಸಾಲಿನಲ್ಲಿ ಹೀಗೆ ಬರೆಯಲಾಗಿತ್ತು. “ನಾನು ಮರೆತರೆ, ಅವನು ಗೆಲ್ಲುತ್ತಾನೆ.”

‍ಲೇಖಕರು Admin

29 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading