–ಬಾಗೂರು ಮಾರ್ಕಾಂಡೇಯ
- ಕೆರಳಿಸುವ ನಿರಾಸೆ
ಅವಳ ನಿಟ್ಟುಸಿರ ಗಾಳಿಗೆದೆ
ತರಗೆಲೆಯಾಗುವವನು ನಾನು
ವಿರಹದಳಲ ಕೊಳ ಕಂಡ ತಳ
ವಿಲಗುಟ್ಟುವ ಜೀವದುಸಿರ
ಸದ್ದುಗದ್ದಲವಿರದ ಪ್ರಶಾಂತತೆ
ನಡು ನಡುವೆ ಊಳಿಡುವ
ಹಕ್ಕಿ ಪಕ್ಕಿಗಳ ಕರ್ಕಶತೆ
ದ್ಯಾನ ಭಗ್ನಗೊಳಿಸುವ ನೆನಪು
ಒನಪುಗಳ ಬಿಸಿಯುಸಿರ ಕಾವು
ಮತ್ತೇನೋ ನೋವು
ನಿಗಿನಿಗಿ ಕೆಂಡದಂತಾಗಿಬಿಡುವ
ಹದಮೀರಿದ ಭಾವ
ಆಸೆಗಳ ತೇಲು ತೆಪ್ಪದಲಿ ಅಂಗಾತ
ಸಂಗತ ಒಂದಿಲ್ಲ ಕುರುಹು
ಮಂಗಮನದಿಂಗಿತಕೆ
ಮೂರ್ತರೂಪು
ಮತಿಗೆ ಎಂಡವ ಸುರಿದ ನಗೆ
ಕಿರುನೋಟ ಮಾಟ
ರಸದೂಟ
ಅರಘಳಿಗೆಯಲೆ ಭಗ್ನ
ನಿಮಗ್ನ ನಗ್ನ
ಬಿಡಸಲಾಗದ ಅನುರಾದ ತೆಕ್ಕೆ
ಹಚ್ಚಿಸಿ ರೆಕ್ಕೆ ಪ್ರೇಮ ಪ್ರಪಾತಕ್ಕೆ
ಮೇಲೆತ್ತುವರಾರು ಕಾನನ
ಕೊಳಲ ಗಾನ ಮುಕುಂದನ
ವಿರಹ ಸ್ವರ ತಿಲ್ಲಾನ
ಅಲ್ಲ ಅವನು ವಿರಹಿ ಗೊಲ್ಲನ
ರಾಧೆಯ ಪ್ರಿಯತಮನಾ
ಬೆಣ್ಣೆ ಕಳ್ಳನೆಂದು
ಹಿಡಿದು ತೆಗೆದಿಬಿದ
ಕಳ್ಳಿಯರ ನಗೆ ಅಲೆಯಲಿ ಲೀನ
ಆಗಬಲ್ಲೆನೇನಾ
- ಪ್ರೀತೆ ಇರಲುಂಟೇ
ಕೊಳಕಿನ ಮನಸಿಗ ಕಥೆಯನು ಬರೆದರೆ
ನೀತಿ ಇರಲುಂಟೇನು ಅಲ್ಲಿ
ತೋಳನ ಬಾಯಲಿ ಮಂತ್ರವ ಹೇಳಿಸಿರೆ
ಪ್ರೀತಿ ಬಹುದೇನು ಮಲ್ಲಿ
ತೋರಿಕೆ ನುಡಿಗಟ್ಟಿನ ಪಾಂಡಿತ್ಯ ತೋರೆ
ಸಾಮನ್ಯನ ಕಷ್ಟ ಕುರುಡಲ್ಲಿ
ಕೋರಿಕೆ ಕೇಳದೆ ಅಧಿಕಾರದಿ ಮೆರೆದರೆ
ಅಮಾಯಕರ ಉಳಿವೆಲ್ಲಿ
ಮನದಲಿ ಕಹಿ ಬೇವಿನ ಬೀಜವ ಬಿತ್ತಿರೆ
ಮಾವು ಬೇಕೆನಲು ಫಲವೆಲ್ಲಿ
ಬನಕೆ ಬೆಂಕಿಯನು ಹಚ್ಚಿದ ದುರುಳರೆ
ಹೂವಿನ ಘಮವು ಇನ್ನೆಲ್ಲಿ
ಕನ್ನಡಿ ಎದುರು ನಕ್ಕರೆ ನಗುವು ಅತ್ತರೆ
ಅಳದೆ ಸಂತೋಷಕೆ ಉಳಿವೆಲ್ಲಿ
ಬೆನ್ನಿಗೆ ಹಿರಿವ ಹಿತಶತ್ರುಗಳೆ ತುಂಬಿರೆ
ಪಾಪಪುಣ್ಯದ ಕಥೆಯೆಲ್ಲಿ
ಬಿದ್ದರೆ ಕಾಲೆಳೆಯುವ ಸಭ್ಯರ ಎದುರೆ
ಬದುಕಿನ ಆಟ ನೋಡಲ್ಲಿ
ಗೆದ್ದರೆ ಹೆಗಲುಗೊಟ್ಟ ಹೊಗಳು ಭಟ್ಟರೆ
ಉಘೇ ಎನುವರು ನೀನಿರುವಲ್ಲಿ
- ದೂರ ದೂರ
ಸರಿಸಿರುವೆನವಳ ನೆನಪುಗಳನೆ ದೂರ ದೂರ
ಬರಿದಾಗದಿದೆ ಇನ್ನೂನು ಮೊಗೆದಷ್ಟು ಉತ್ತರ
ತರಿದೊಗೆದಂತೆ ಚಿಗಿಯುತ್ತಿವೆ ಏನೀ ಹುನ್ನಾರ
ಮನಗಳ ನಡುವೆ ಸಂಶಯ ಬಿರುಕು ಅಂತರ
ಬನಕ್ಕಿಟ್ಟ ಬೆಂಕಿ ಹೊತ್ತಿ ಉರಿದಂತೇ ಅವಸರ
ಕನಸೊಡೆದು ಚಿದ್ರವಾದಂತೆ ಕನ್ನಡಿ ಸಿಂಗಾರ
ಕೆಟ್ಟ ದೃಷ್ಠಿ ತಾಗಿತೇನೋ ಸಿಡಿದು ಭರಪೂರ
ನೆಟ್ಟನೆದರೆ ಕಣ್ಣೀರಿನ ಕೋಡಿ ಶೋಕಸಾಗರ
ಬಿಟ್ಟ ಕೈಯ್ಯ ಬಿಡದೇ ಹಿಡಿವ ಹಟ ನಿರಂತರ
ಬೇಕೆನಿಸದೇನೀಗ ನೊಂದ ಮನವೀಗ ಭಾರ
ಸಾಕೆನಿಸಿತೇಗೆ ಪ್ರೀತಿ ಸವಿಜೇನೇ ಕಹಿ ಒಗರ
ನೌಕೆ ಏರಿಯೆ ನವೆದೆ ಪ್ರೀತಿ ಕಡಲ ಮೇಲ್ಪದರ
ಆಳವರಿಯದೆ ಹೋದೆ ಮರ್ಕಟನಂತೆ ಹಗುರ
ಗಾಳವೇನಿಹುದೋ ಸಿಲುಕಿ ಹಿಂಸೆ ಮನಸಾರ
ತಾಳತಪ್ಪಿತೆ ಮೌನಲಿಸ ಬಿಡು ಏತಕೀ ವಿಕಾರ






0 Comments