ನಂಬಿಕೆ ಇಡಬೇಕು ತಾಯಿ
-ಜಿ.ಪಿ.ಬಸವರಾಜು
ಅಂಬಾರಿಯಲ್ಲಿ ಕುಳಿತಿರುವ
ತಾಯಿ ಕುಳಿತೇ ಇರಬೇಕು
ಮೂರು ಗಂಟೆಯೊ ಆರೊ
ಕಾಲದ ಮರ್ಜಿ ಯಾರ ಕೈಯಲ್ಲೊ
ನಂಬಿಕೆ ಇಡಬೇಕು ತಾಯೆ
ಅಂಬಾರಿ ಹೊತ್ತ ಆನೆಯ
ಸನ್ನಡತೆಯಲ್ಲಿ, ಮಾವುತನ
ತಾಳತಪ್ಪದ ತಾಳ್ಮೆಯಲ್ಲಿ
ಉರಿವ ಸೂರ್ಯನ ಕರುಣೆಯಲ್ಲಿ
ಮೋಡಗಳು ಬಂದು ಮೋಡಗಳು
ಹೋಗಿ ಸುರಿಯದ ಮಳೆಯಲ್ಲಿ
ನಂಬಿಕೆ ಇಡಬೇಕು ತಾಯಿ, ನುಗ್ಗಿ
ಬರುವ ಜನ ಜಾತ್ರೆಯಲ್ಲಿ, ಆನೆ-
ಗಾತ್ರದ ಅಲೆಗಳು ಎದ್ದೆದ್ದುಬಿದ್ದು
ಅಬ್ಬರಿಸುವ ಮೆರೆದಾಟದಲ್ಲಿ
ಸಾಲು ಸಾಲು ಮನೆಗಳು
ಮೇಲೆ ಮೇಲೆ ಮಹಡಿಗಳು
ಇಣುಕುವ ತೂರುವ ಬೆವರುವ
ಮನುಕುಲದ ಸಂತತಿಯ ಅವತಾರ
ಹೊರಲಾರದೆ ಭಾರ
ಕುಸಿಯಲಾರದೆ ಕಾಲು
ನಿಂತ ನಿಲುವಲ್ಲೆ ನಿಂತೇ-
ಇರುವ ಪವಾಡದಲ್ಲಿ ನಂಬಿಕೆ
ಇಡಬೇಕು ತಾಯಿ ನಂಬಿಕೆಯ
ಪೊಲೀಸರೊ ಅವರ ದಂಡಗಳೊ
ಅಧಿಕಾರಿಗಳೊ ಅವರ ದರ್ಪಗಳೊ
ರಾಜಕಾರಣಿಗಳೊ ಅವರ ಬಣ್ಣಬಣ್ಣ
ಹಸನ್ಮುಖದ ವಿಜಯದ ಗತ್ತುಗಳೊ
ಪೇಟವೊ ಹಾರವೊ ಬಿಸಿಲಿನ ಭಾರವೊ
ಕಾಲದೇಶಗಳ ಮರೆತು ಕುಣಿವ ಹೆಜ್ಜೆಗಳೊ
ನಂಬಿಕೆ ಇಡಬೇಕು ಉದ್ದ ದಾರಿ ಉದ್ದೋ-
ಉದ್ದ ಬೆಳೆಯುವ ಪವಾಡಗಳಲ್ಲಿ
ಒಂದಕ್ಕೆ ಹತ್ತಾಗಿ ಹತ್ತು ನೂರಾಗುವ
ಕಲೆಯೊ ಕಣ್ಕಟ್ಟೊ ಮಾಯೆಯೊ ಮರುಳೊ
ಗತಿಸಿದ್ದೊ ಮೆರೆದದ್ದೊ, ವೈಭವವೊ ಅದರ
ಉಳಿಕೆಯ ಎಲುಬಿನ ಹಂದರವೊ ಭೂತಕ್ಕೆ
ವರ್ತಮಾನ, ವರ್ತಮಾನಕ್ಕೆ ಭೂತವೊ
ಯಾವುದಾದರೂ ಅದರಲ್ಲಿ ನಂಬಿಕೆ ಇಡಬೇಕು
ತಾಯೆ, ಧೂಳೆದ್ದು ಆಕಾಶ ಮುಚ್ಚುವುದು
ಹೆಜ್ಜೆಯಲ್ಲಿ ಹೆಜ್ಜೆ ಸಾವಿರವೊ ಲಕ್ಷವೊ
ದಿಕ್ಕೆಟ್ಟು ಓಡಿದ ಕೋಲಾಹಲವೊ, ಸತ್ತವರು
ಸತ್ತು ಬದುಕಿದವರ ಬದುಕಿನ ಜಾತ್ರೆಯಲ್ಲಿ
ನಂಬಿಕೆ ಇಡಬೇಕು ತಾಯಿ ಮುಂದಿನ ಜಾತ್ರೆವರೆಗೆ.






0 Comments