ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೧೨
ಅನಿರುದ್ಧನ ಹಳೆಯ ವಿಳಾಸವನ್ನು ಹುಡುಕಲು ಈಶಾನ್ಗೆ ಎರಡು ದಿನಗಳು ಬೇಕಾದವು.ಅವನ ಬಳಿ ಇದ್ದದ್ದು ಹನ್ನೆರಡು ವರ್ಷಗಳ ಹಿಂದಿನ ಒಂದು ಪತ್ರದಲ್ಲಿದ್ದ ವಿಳಾಸ. ಆ ಪ್ರದೇಶ ಈಗ ಎಷ್ಟು ಬದಲಾಗಿರಬಹುದು ಎಂಬುದನ್ನು ಊಹಿಸುವುದು ಕಷ್ಟವಾಗಿತ್ತು. ಹಳೆಯ ಮನೆಗಳ ಜಾಗದಲ್ಲಿ ಅಪಾರ್ಟ್ಮೆಂಟ್ಗಳು ನಿರ್ಮಾಣವಾಗಿದ್ದವು. ಕೆಲವು ಬೀದಿಗಳ ಹೆಸರುಗಳು ಬದಲಾಗಿದ್ದವು. ಹಳೆಯ ಅಂಗಡಿಗಳ ಬದಲು ಹೊಸ ವಾಣಿಜ್ಯ ಕಟ್ಟಡಗಳು ಕಾಣಿಸಿಕೊಂಡಿದ್ದವು.ಆದರೂ ವಿಳಾಸದ ಕೊನೆಯ ಭಾಗ ಅವನಿಗೆ ಒಂದು ಸುಳಿವು ನೀಡಿತು. ಧಾರವಾಡದ ಹೊರವಲಯದಲ್ಲಿದ್ದ ಆ ಪ್ರದೇಶದಲ್ಲಿ ಇನ್ನೂ ಕೆಲವು ಹಳೆಯ ಮನೆಗಳು ಉಳಿದಿದ್ದವು. ಅವುಗಳ ನಡುವೆ ಅನಿರುದ್ಧನ ಕುಟುಂಬ ವಾಸಿಸುತ್ತಿದ್ದ ಮನೆ ಇರಬಹುದೆಂದು ಅವನು ಊಹಿಸಿದ.
ಶನಿವಾರ ಬೆಳಿಗ್ಗೆ ಈಶಾನ್ ಧಾರವಾಡಕ್ಕೆ ಹೊರಟ.ಸಾರಾಳಿಗೆ ತನ್ನ ಪ್ರಯಾಣದ ಬಗ್ಗೆ ತಿಳಿಸಿದ್ದ. ಅವಳು ಅವನೊಂದಿಗೆ ಬರಲು ಬಯಸಿದ್ದರೂ, ತನ್ನ ಕೆಲಸದ ಕಾರಣದಿಂದ ಬರಲಾಗಲಿಲ್ಲ. ಹೊರಡುವ ಮೊದಲು ಅವಳು ಒಂದು ಮಾತನ್ನು ಮತ್ತೆ ನೆನಪಿಸಿದ್ದಳು.“ಯಾರಾದರೂ ವಿಚಿತ್ರವಾಗಿ ವರ್ತಿಸಿದರೆ ಅಥವಾ ನಿನಗೆ ಅಸುರಕ್ಷಿತವೆನಿಸಿದರೆ, ಅಲ್ಲಿ ಹೆಚ್ಚು ಹೊತ್ತು ಉಳಿಯಬೇಡ. ನಿನಗೆ ಸಿಗುವ ಮಾಹಿತಿಯನ್ನು ದಾಖಲಿಸಿಕೋ. ಆದರೆ ಯಾರನ್ನೂ ಒತ್ತಾಯಿಸಿ ಪ್ರಶ್ನಿಸಬೇಡ.”
ಈಶಾನ್ ಅದಕ್ಕೆ ಒಪ್ಪಿಕೊಂಡಿದ್ದ.ಅವನು ಈಗ ಯಾವುದೋ ರಹಸ್ಯವನ್ನು ಬಗೆಹರಿಸಲು ಹೊರಟಿದ್ದ ಪತ್ತೇದಾರನಂತೆ ವರ್ತಿಸಲು ಬಯಸಲಿಲ್ಲ. ತನ್ನ ಬಾಲ್ಯದ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದ ಒಬ್ಬ ವ್ಯಕ್ತಿಯಾಗಿಯೇ ಇರಲು ಬಯಸಿದ.ಆದರೆ ಅವನ ಮನಸ್ಸಿನಲ್ಲಿ ಅನಿರುದ್ಧನ ಮುಖದ ಜೊತೆಗೆ ಇನ್ನೊಂದು ಮುಖವೂ ಕಾಣಿಸಿಕೊಳ್ಳುತ್ತಿತ್ತು. ಕನಸಿನಲ್ಲಿ ಕಂಡಿದ್ದ ಅಪರಿಚಿತ ವ್ಯಕ್ತಿ.ಅವನಿಗೆ ಆ ವ್ಯಕ್ತಿಯ ಕಣ್ಣುಗಳು ನೆನಪಾಗುತ್ತಿದ್ದವು. ಮುಖದ ಆಕಾರ, ಹಣೆಯ ಮೇಲಿದ್ದ ಸಣ್ಣ ಗುರುತು, ಮಾತನಾಡುವಾಗ ತುಟಿಯ ಒಂದು ಬದಿಯನ್ನು ಸ್ವಲ್ಪ ಮೇಲಕ್ಕೆ ಎತ್ತುವ ಅಭ್ಯಾಸಇವೆಲ್ಲವೂ ತನ್ನ ತಂದೆಯ ಹಳೆಯ ಸ್ನೇಹಿತರಲ್ಲಿ ಯಾರನ್ನೋಹೋಲಿಸುತ್ತಿದ್ದವು.ಆದರೆ ಯಾರು?ಅವನ ನೆನಪು ಇನ್ನೂ ಸ್ಪಷ್ಟವಾಗಿರಲಿಲ್ಲ.
ಅನಿರುದ್ಧನ ಹಳೆಯ ವಿಳಾಸಕ್ಕೆ ತಲುಪಿದಾಗ ಈಶಾನ್ಗೆ ಅಲ್ಲಿ ಹೊಸ ಮನೆ ನಿರ್ಮಾಣವಾಗಿರುವುದು ಕಂಡಿತು. ಗೇಟ್ ಮುಂದೆ ನಿಂತು ವಿಳಾಸವನ್ನು ಮತ್ತೊಮ್ಮೆ ಪರಿಶೀಲಿಸಿದ. ಅದು ಸರಿಯಾಗಿತ್ತು. ಆದರೆ ಹಳೆಯ ಮನೆ ಉಳಿದಿರಲಿಲ್ಲ.ಪಕ್ಕದ ಮನೆಯ ಮುಂದೆ ಒಬ್ಬ ವಯಸ್ಸಾದ ವ್ಯಕ್ತಿ ಕುರ್ಚಿಯಲ್ಲಿ ಕುಳಿತಿದ್ದರು. ಈಶಾನ್ ಅವರ ಬಳಿಗೆ ಹೋಗಿ ವಿನಯದಿಂದ ಪರಿಚಯಿಸಿಕೊಂಡ.“ಸರ್, ಇಲ್ಲಿ ಹಿಂದೆ ಅನಿರುದ್ಧ ಎಂಬ ಹುಡುಗನ ಕುಟುಂಬ ವಾಸಿಸುತ್ತಿದ್ದನಂತೆ. ಅವರ ಬಗ್ಗೆ ಏನಾದರೂ ನೆನಪಿದೆಯೇ?”ವೃದ್ಧರು ಅವನ ಮುಖವನ್ನು ಗಮನದಿಂದ ನೋಡಿದರು.
“ಅನಿರುದ್ಧನಾ? ಬಹಳ ವರ್ಷಗಳ ಹಿಂದಿನ ಮಾತು. ಅವರ ಮನೆ ಇಲ್ಲಿ ಇತ್ತು. ಒಳ್ಳೆಯ ಕುಟುಂಬ. ಆದರೆ ಏಕಾಏಕಿ ಮನೆ ಖಾಲಿ ಮಾಡಿ ಹೊರಟುಹೋದರು.” ಎಂದರು.
“ಅವರು ಎಲ್ಲಿ ಹೋದರು ಎಂಬುದು ನಿಮಗೆ ಗೊತ್ತೇ?” ಈಶಾನ್ ಕೇಳಿದ.
“ನಿಖರವಾಗಿ ಗೊತ್ತಿಲ್ಲ. ತಂದೆ ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ವರ್ಗಾವಣೆಯಾಗಿದ್ದಾರೆಂದು ಕೇಳಿದ್ದೆ. ಆದರೆ ಆ ಹುಡುಗನ ಬಗ್ಗೆ ಒಂದು ವಿಷಯ ನೆನಪಿದೆ.”
ಈಶಾನ್ ಸ್ವಲ್ಪ ಮುಂದೆ ಬಾಗಿ ಕೇಳಿದ. “ಏನದು?”
“ಅವನು ಯಾವಾಗಲೂ ಪುಸ್ತಕ ಹಿಡಿದುಕೊಂಡೇ ಇರುತ್ತಿದ್ದ. ಕೆಲವೊಮ್ಮೆ ಈ ಬೀದಿಯ ಕೊನೆಯಲ್ಲಿರುವ ಹಳೆಯ ಕಟ್ಟಡದ ಬಳಿ ಕುಳಿತು ಬರೆಯುತ್ತಿದ್ದ. ಅವನ ಜೊತೆ ಇನ್ನೊಬ್ಬ ಹುಡುಗ ಬರುತ್ತಿದ್ದ.”
ಈಶಾನ್ನ ಹೃದಯ ಬಡಿತ ಹೆಚ್ಚಾಯಿತು.“ಆ ಇನ್ನೊಬ್ಬ ಹುಡುಗ ಹೇಗಿದ್ದ?” ಕೇಳಿದ.
ವೃದ್ಧರು ಸ್ವಲ್ಪ ಯೋಚಿಸಿದರು.“ನಿನ್ನ ವಯಸ್ಸಿನವನಿರಬೇಕು. ತೆಳ್ಳನೆಯ ಮೈಕಟ್ಟು. ಕನ್ನಡಕ ಹಾಕುತ್ತಿದ್ದನೋ ಏನೋ ಸರಿಯಾಗಿ ನೆನಪಿಲ್ಲ. ಆದರೆ ಅವನು ಅನಿರುದ್ಧನಂತೆ ಹೆಚ್ಚು ಮಾತನಾಡುತ್ತಿರಲಿಲ್ಲ.”
ಈಶಾನ್ ತನ್ನ ಬಾಲ್ಯದ ಚಿತ್ರವನ್ನು ನೆನಪಿಸಿಕೊಂಡ. ತನ್ನ ಪಕ್ಕದಲ್ಲಿ ನಿಂತಿದ್ದ ಹುಡುಗ ಕನ್ನಡಕ ಧರಿಸಿದ್ದನೇ ಎಂಬುದು ಸ್ಪಷ್ಟವಾಗಲಿಲ್ಲ.
“ಅವರು ಯಾವ ಕಟ್ಟಡದ ಬಳಿ ಕುಳಿತು ಬರೆಯುತ್ತಿದ್ದರು?” ಎಂದ.
ವೃದ್ಧರು ರಸ್ತೆಯ ಕೊನೆಯತ್ತ ಬೆರಳು ತೋರಿಸಿ “ಅಲ್ಲಿ ಒಂದು ಹಳೆಯ ಸಾರ್ವಜನಿಕ ವಾಚನಾಲಯ ಇತ್ತು. ಈಗ ಅದು ಬಳಕೆಯಲ್ಲಿಲ್ಲ. ಹಿಂದೆ ಮಕ್ಕಳೂ ಯುವಕರೂ ಅಲ್ಲಿ ಪುಸ್ತಕ ಓದಲು ಹೋಗುತ್ತಿದ್ದರು. ಆ ಕಟ್ಟಡದ ಹಿಂಭಾಗದಲ್ಲಿ ಒಂದು ಸಣ್ಣ ಕೊಠಡಿಯಿತ್ತು. ಅನಿರುದ್ಧ ಮತ್ತು ಅವನ ಸ್ನೇಹಿತರು ಅಲ್ಲಿ ಕುಳಿತುಕೊಳ್ಳುತ್ತಿದ್ದರು.”
“ಆ ಕಟ್ಟಡ ಇನ್ನೂ ಇದೆಯೇ?” ಕೇಳಿದ.
“ಇದೆ. ಆದರೆ ಈಗ ಯಾರೂ ಬಳಸುವುದಿಲ್ಲ. ಬಾಗಿಲಿಗೆ ಬೀಗ ಹಾಕಿರಬಹುದು.” ಎಂದರು.
ಈಶಾನ್ ಅವರಿಗೆ ಧನ್ಯವಾದ ಹೇಳಿದ.ಹೊರಡುವ ಮೊದಲು ವೃದ್ಧರು ಮತ್ತೊಂದು ಸಂಗತಿಯನ್ನು ನೆನಪಿಸಿಕೊಂಡರು.
“ನೀನು ಅನಿರುದ್ಧನ ಸಂಬ೦ಧಿಯೇ?” ಕೇಳಿದರು ವೃದ್ದರು.
“ಇಲ್ಲ. ಬಾಲ್ಯದ ಸ್ನೇಹಿತ.” ಎಂದ.
“ಹಾಗಾದರೆ ಒಂದು ವಿಷಯ ಹೇಳುತ್ತೇನೆ. ಆ ಹುಡುಗನ ಕುಟುಂಬ ಹೊರಟುಹೋದ ನಂತರವೂ, ಕೆಲವು ತಿಂಗಳುಗಳವರೆಗೆ ಒಬ್ಬ ವ್ಯಕ್ತಿ ಆ ಹಳೆಯ ವಾಚನಾಲಯಕ್ಕೆ ಬರುತ್ತಿದ್ದ. ಅವನು ಅನಿರುದ್ಧನ ಸಂಬ೦ಧಿಯೇನೋ ಎಂದುಕೊ೦ಡಿದ್ದೆ. ಆದರೆ ಅವನು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಕಟ್ಟಡದ ಬಾಗಿಲಿನ ಬಳಿ ನಿಂತು ಒಳಗೆ ನೋಡುತ್ತಿದ್ದ. ನಂತರ ಹೊರಟುಹೋಗುತ್ತಿದ್ದ.”
ಈಶಾನ್ ನಿಶ್ಚಲವಾಗಿ ನಿಂತ.“ಆ ವ್ಯಕ್ತಿ ಹೇಗಿದ್ದ?”
“ಮಧ್ಯವಯಸ್ಕ. ಎತ್ತರವಾಗಿದ್ದ. ಕೈಯಲ್ಲಿ ಯಾವಾಗಲೂ ಕಪ್ಪು ಬಣ್ಣದ ಕಡತವಿರುತ್ತಿತ್ತು. ಒಮ್ಮೆ ನಾನು ಅವನನ್ನು ಕೇಳಿದ್ದೆ, ‘ಯಾರನ್ನು ಹುಡುಕುತ್ತಿದ್ದೀರಿ?’ ಎಂದು. ಅವನು ಉತ್ತರಿಸದೆ ಅಲ್ಲಿಂದ ಹೊರಟುಹೋದ.”
ಕಪ್ಪು ಕಡತ. ಈಶಾನ್ಗೆ ತನ್ನ ಬಾಲ್ಯದ ನೆನಪಿನಲ್ಲಿ ಕಂಡಿದ್ದ ವ್ಯಕ್ತಿ ನೆನಪಾದ. ಮನೆಯ ಮುಂಭಾಗದಲ್ಲಿ ತಂದೆಯೊ೦ದಿಗೆ ಮಾತನಾಡುತ್ತಿದ್ದ ಅಪರಿಚಿತ. ಅವನ ಕೈಯಲ್ಲೂ ಕಪ್ಪು ಕಡತವಿತ್ತು.ಇಬ್ಬರೂ ಒಂದೇ ವ್ಯಕ್ತಿಯಾಗಿದ್ದರೇ? ಅಥವಾ ಕಪ್ಪು ಕಡತ ಹಿಡಿದು ಓಡಾಡುತ್ತಿದ್ದವರು ಆ ಕಾಲದಲ್ಲಿ ಸಾಮಾನ್ಯವಾಗಿದ್ದರೇ? ಅವನು ತಕ್ಷಣ ನಿರ್ಧಾರಕ್ಕೆ ಬರಲಿಲ್ಲ.
“ಅವರು ಯಾವಾಗ ಬರುತ್ತಿದ್ದರು?” ಎಂದು ಕೇಳಿದ.
“ನಿಖರವಾಗಿ ನೆನಪಿಲ್ಲ. ಆದರೆ ಅನಿರುದ್ಧನ ಕುಟುಂಬ ಹೊರಟುಹೋದ ನಂತರದ ವರ್ಷದಲ್ಲಿ ಇರಬಹುದು.” ಎಂದು ನೆನಪಿಸಿಕೊಡು ಹೇಳಿದರು. ವೃದ್ಧರು ಮತ್ತಷ್ಟು ನೆನಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಈಶಾನ್ ಅವರಿಗೆ ಧನ್ಯವಾದ ಹೇಳಿ, ಅವರು ತೋರಿಸಿದ ಹಳೆಯ ವಾಚನಾಲಯದತ್ತ ನಡೆದ.
ಕಟ್ಟಡವು ರಸ್ತೆಯ ಕೊನೆಯಲ್ಲಿತ್ತು. ಅದರ ಸುತ್ತಲೂ ಕಾಡುಹುಲ್ಲು ಬೆಳೆದಿತ್ತು. ಗೋಡೆಗಳ ಮೇಲೆ ಹಳೆಯ ಬಣ್ಣ ಉದುರಿಹೋಗಿತ್ತು. ಕಿಟಕಿಗಳ ಕೆಲವು ಗಾಜುಗಳು ಒಡೆದಿದ್ದವು. ಮುಂಭಾಗದ ಬಾಗಿಲಿಗೆ ಬೀಗ ಹಾಕಲಾಗಿತ್ತು.
ಈಶಾನ್ ಬಾಗಿಲಿನ ಬಳಿ ನಿಂತು ಒಳಗೆ ನೋಡಲು ಪ್ರಯತ್ನಿಸಿದ.ಧೂಳಿನಿಂದ ಮುಚ್ಚಿದ ಮೇಜುಗಳು, ಹಳೆಯ ಕುರ್ಚಿಗಳು ಮತ್ತು ಗೋಡೆಗೆ ಅಂಟಿಸಿದ್ದ ಕೆಲವು ಹರಿದ ಪ್ರಕಟಣೆಗಳು ಕಾಣಿಸಿದವು. ಒಳಗೆ ಯಾರೂ ಇರಲಿಲ್ಲ.ಅವನು ಕಟ್ಟಡದ ಸುತ್ತಲೂ ನಡೆದ. ಹಿಂಭಾಗದಲ್ಲಿ ಒಂದು ಸಣ್ಣ ಬಾಗಿಲಿತ್ತು. ಅದರ ಮರದ ಚೌಕಟ್ಟು ಹಳೆಯದಾಗಿದ್ದರೂ, ಬಾಗಿಲಿನ ಕೆಳಭಾಗದಲ್ಲಿ ಹೊಸದಾಗಿ ಉಂಟಾದ ಗೀರುಗಳು ಕಾಣಿಸಿಕೊಂಡವು.
ಯಾರಾದರೂ ಇತ್ತೀಚೆಗೆ ಅದನ್ನು ತೆರೆದಿರಬಹುದೇ?ಅವನು ಬಾಗಿಲನ್ನು ತಳ್ಳಿದ. ಅದು ಸ್ವಲ್ಪ ಅಲುಗಾಡಿತು, ಆದರೆ ತೆರೆಯಲಿಲ್ಲ.ಈಶಾನ್ ಬಾಗಿಲಿನ ಬಳಿ ನಿಂತು ಆಲಿಸಿದ. ಒಳಗಿನಿಂದ ಯಾವುದೇ ಶಬ್ದ ಕೇಳಿಸಲಿಲ್ಲ. ಅವನು ತನ್ನ ಮೊಬೈಲ್ನಿಂದ ಕೆಲವು ಚಿತ್ರಗಳನ್ನು ತೆಗೆದುಕೊಂಡ. ನಂತರ ಕಟ್ಟಡದ ಮುಂಭಾಗಕ್ಕೆ ಮರಳಿದ.
ಅಷ್ಟರಲ್ಲಿ ಪಕ್ಕದ ರಸ್ತೆಯಿಂದ ಒಬ್ಬ ಯುವಕ ನಡೆದುಬಂದ. ಅವನು ಈಶಾನ್ನನ್ನು ಗಮನಿಸಿ ನಿಂತ.“ನೀವು ಯಾರನ್ನಾದರೂ ಹುಡುಕುತ್ತಿದ್ದೀರಾ?” ಎಂದ.
“ಹೌದು. ಈ ಕಟ್ಟಡದ ಬಗ್ಗೆ ಮಾಹಿತಿ ಬೇಕಿತ್ತು. ಹಿಂದೆ ಇಲ್ಲಿ ಅನಿರುದ್ಧ ಎಂಬ ಹುಡುಗ ಬರುತ್ತಿದ್ದನಂತೆ.” ಎಂದ ಈಶಾನ್.
ಯುವಕನ ಮುಖದಲ್ಲಿ ಕ್ಷಣಕಾಲ ಬದಲಾವಣೆ ಕಾಣಿಸಿತು.“ಅನಿರುದ್ಧ?”
“ನಿಮಗೆ ಆ ಹೆಸರು ಗೊತ್ತೇ?” ಕೇಳಿದ ಈಶಾನ್.
“ನನಗೆ ಅಲ್ಲ. ಆದರೆ ನನ್ನ ತಾತ ಈ ಕಟ್ಟಡದ ಹಳೆಯ ಗ್ರಂಥಪಾಲಕರಾಗಿದ್ದರು. ಅವರು ಈ ಸ್ಥಳದ ಬಗ್ಗೆ ಕೆಲವು ಬಾರಿ ಮಾತನಾಡಿದ್ದರು. ಇಲ್ಲಿ ಕೆಲವು ಯುವಕರು ಬರವಣಿಗೆ ಮತ್ತು ಕಂಪ್ಯೂಟರ್ಗಳ ಬಗ್ಗೆ ಪ್ರಯೋಗ ಮಾಡುತ್ತಿದ್ದರು ಎಂದು ಹೇಳುತ್ತಿದ್ದರು.”
ಈಶಾನ್ನ ಗಮನ ಸಂಪೂರ್ಣವಾಗಿ ಯುವಕನತ್ತ ತಿರುಗಿತು.“ಏನು! ಕಂಪ್ಯೂಟರ್ ಪ್ರಯೋಗಗಳಾ?” ಆಶ್ಚರ್ಯದಿಂದ ಕೇಳಿದ.
“ಹೌದು. ಆಗಿನ ಕಾಲದಲ್ಲಿ ಈ ಕಟ್ಟಡದಲ್ಲಿ ಒಂದು ಚಿಕ್ಕ ಕಂಪ್ಯೂಟರ್ ಕೊಠಡಿಯಿತ್ತು. ಶಾಲಾ ಮಕ್ಕಳಿಗೆ ಮೂಲಭೂತ ಕಂಪ್ಯೂಟರ್ ಶಿಕ್ಷಣ ನೀಡಲು ಆರಂಭಿಸಿದ್ದರು. ನಂತರ ಆ ಯೋಜನೆ ನಿಂತುಹೋಯಿತು.” ಎಂದ ಯುವಕ.
“ಆ ಯೋಜನೆಯನ್ನು ಯಾರು ನಡೆಸುತ್ತಿದ್ದರು?” ಈಶಾನ್ ಪ್ರಶ್ನಿಸಿದ.
“ನನಗೆ ಖಚಿತವಾಗಿ ಗೊತ್ತಿಲ್ಲ. ನನ್ನ ತಾತ ಒಬ್ಬ ಸಂಶೋಧಕರ ಹೆಸರು ಹೇಳುತ್ತಿದ್ದರು. ರಾಘವೇಂದ್ರ ಎಂಬ ಹೆಸರಿರಬೇಕು.” ಎಂದು ನೆನಪಿಸಿಕೊಂಡು ಹೇಳಿದ.
ರಾಘವೇಂದ್ರ ಹೆಸರು ಕೇಳುತ್ತಿದ್ದಂತೆ ಈಶಾನ್ನ ಎದೆ ಬಿಗಿದಂತಾಯಿತು. ತ೦ದೆಯ ದಿನಚರಿಯಲ್ಲಿ ಕಂಡ ಹೆಸರು. ಸಾರಾ ಹುಡುಕಿದ ಹಳೆಯ ಸಂಶೋಧನಾ ವರದಿಯಲ್ಲಿದ್ದ ಹೆಸರು. ಈಗ ಈ ಹಳೆಯ ಕಟ್ಟಡದೊಂದಿಗೆ ಸಂಬ೦ಧಿಸಿದ ಹೆಸರು.
“ಅವರ ಬಗ್ಗೆ ಇನ್ನೇನಾದರೂ ತಿಳಿದಿದೆಯೇ?” ಕೇಳಿದ ಈಶಾನ್.
“ನನ್ನ ತಾತನ ಬಳಿ ಹಳೆಯ ದಾಖಲೆಗಳಿದ್ದವು. ಅವರು ತೀರಿಕೊಂಡ ನಂತರ ಮನೆಯ ಕೆಲವು ವಸ್ತುಗಳನ್ನು ನಾವು ಉಳಿಸಿಕೊಂಡಿದ್ದೇವೆ. ಅದರಲ್ಲಿ ಈ ಕಟ್ಟಡದ ಕೆಲವು ಛಾಯಾಚಿತ್ರಗಳು ಇರಬಹುದು.” ಎಂದ ಯುವಕ. ನಂತರ ಸ್ವಲ್ಪ ಯೋಚಿಸಿ ತನ್ನ ಮೊಬೈಲ್ ತೆಗೆದುಕೊಂಡು “ನಾನು ಮನೆಗೆ ಹೋಗಿ ನೋಡುತ್ತೇನೆ. ನೀವು ನಿಮ್ಮ ಸಂಖ್ಯೆಯನ್ನು ಕೊಟ್ಟರೆ, ಏನಾದರೂ ಸಿಕ್ಕರೆ ತಿಳಿಸುತ್ತೇನೆ.” ಎಂದ ಯುವಕ.
ಈಶಾನ್ ತನ್ನ ಸಂಖ್ಯೆಯನ್ನು ನೀಡಿದ.ಯುವಕ ಹೊರಟುಹೋದ ನಂತರ ಈಶಾನ್ ಮತ್ತೆ ಕಟ್ಟಡದತ್ತ ನೋಡಿದ.ಅನಿರುದ್ಧ, ರಾಘವೇಂದ್ರ, ಹಳೆಯ ಕಂಪ್ಯೂಟರ್ ಕೊಠಡಿ, ನೆನಪುಗಳ ಪ್ರಯೋಗಇವೆಲ್ಲವೂ ಒಂದೇ ಕಾಲಘಟ್ಟಕ್ಕೆಸೇರಿದಸಂಗತಿಗಳಾಗಿರಬಹುದಿತ್ತು.ಆದರೆ ಅವುಗಳ ನಡುವಿನ ಸಂಬ೦ಧವನ್ನು ಇನ್ನೂ ಸಾಬೀತುಪಡಿಸಬೇಕಿತ್ತು.ಮಧ್ಯಾಹ್ನದ ಹೊತ್ತಿಗೆ ಈಶಾನ್ ತನ್ನ ತಾಯಿಗೆ ಮತ್ತೆ ಕರೆ ಮಾಡಿದ.
“ಅಮ್ಮ, ರಾಘವೇಂದ್ರ ಎಂಬ ವ್ಯಕ್ತಿ ಅಪ್ಪನಿಗೆ ಪರಿಚಯವಿದ್ದನೇ?” ತಾಯಿಯನ್ನು ಕೇಳಿದ.
ತಾಯಿ ಸ್ವಲ್ಪ ಹೊತ್ತು ಯೋಚಿಸಿದರು.“ರಾಘವೇಂದ್ರನಾ? ಹೌದು, ಆ ಹೆಸರಿನ ಒಬ್ಬ ವ್ಯಕ್ತಿ ಮನೆಗೆ ಬರುತ್ತಿದ್ದ. ನಿನ್ನ ತಂದೆಯೊAದಿಗೆ ಕೆಲಸದ ಬಗ್ಗೆ ಮಾತನಾಡುತ್ತಿದ್ದ. ಅವನು ಕಂಪ್ಯೂಟರ್ಗಳ ಬಗ್ಗೆ ತಿಳಿದಿದ್ದನೆಂದು ನೆನಪಿದೆ.” ಎಂದಳು.
ಈಶಾನ್ಗೆ ತನ್ನ ಅನುಮಾನಕ್ಕೆ ಮತ್ತೊಂದು ಸುಳಿವು ಸಿಕ್ಕಿತು. “ಅವರು ನಮ್ಮ ಮನೆಗೆ ಯಾವಾಗ ಬರುತ್ತಿದ್ದರು?” ಕೇಳಿದ.
“ನೀನು ಚಿಕ್ಕವನಿದ್ದಾಗ. ನಿನ್ನ ತಂದೆ ಯಾವುದೋ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಆ ಸಮಯದಲ್ಲಿ ಅವನು ಮನೆಗೆ ಬರುತ್ತಿದ್ದಿರಬಹುದು.” ಎಂದರು.
“ಅವನು ಅನಿರುದ್ಧನನ್ನು ತಿಳಿದಿದ್ದನೇ?” ಕೇಳಿದ.
ತಾಯಿ ತಕ್ಷಣ ಉತ್ತರಿಸಲಿಲ್ಲ.“ಒಮ್ಮೆ ಅವನು ನಿನ್ನ ಬಗ್ಗೆ ಏನೋ ಕೇಳಿದ್ದ. ನಿನ್ನ ಬರವಣಿಗೆಯ ಬಗ್ಗೆ. ನಿನ್ನ ತಂದೆ ನಿನಗೆ ಕಥೆ ಬರೆಯುವ ಅಭ್ಯಾಸವಿದೆ ಎಂದು ಹೇಳಿದ್ದರು. ನಂತರ ಅವರು ಇಬ್ಬರೂ ಬಹಳ ಹೊತ್ತು ಮಾತನಾಡಿದ್ದರು.” ನೆನಪು ಮಾಡಿಕೊಂಡು ಹೇಳಿದ್ದರು.
ಈಶಾನ್ ಕಣ್ಣು ಮುಚ್ಚಿದ. ನಂತರ ಮಾತು ಮುಂದುವರೆಸಿದ. “ಅಮ್ಮ, ಆ ವ್ಯಕ್ತಿ ಎತ್ತರವಾಗಿದ್ದನೇ? ಕೈಯಲ್ಲಿ ಕಪ್ಪು ಕಡತ ಇಟ್ಟುಕೊಳ್ಳುತ್ತಿದ್ದನೇ?”
“ಹೌದು, ಅವನ ಬಳಿ ಯಾವಾಗಲೂ ಒಂದು ಕಪ್ಪು ಕಡತ ಇರುತ್ತಿತ್ತು. ಅದರಲ್ಲಿ ಕಾಗದಗಳು ತುಂಬಿರುತ್ತಿದ್ದವು.” ತಾಯಿ ಹೇಳಿದಳು.
ಈಶಾನ್ನ ಕೈಗಳು ತಣ್ಣಗಾದವು.ಇದು ಈಗ ಕೇವಲ ಮಸುಕಾದ ನೆನಪಾಗಿರಲಿಲ್ಲ. ತಾಯಿಗೂ ಆ ವ್ಯಕ್ತಿ ನೆನಪಿದ್ದ.“ಅವನ ಪೂರ್ಣ ಹೆಸರು ನೆನಪಿದೆಯೇ?” ಕೇಳಿದ.
“ರಾಘವೇಂದ್ರ ಭಟ್ ಎಂದಿರಬಹುದು. ಆದರೆ ನನಗೆ ಖಚಿತವಿಲ್ಲ. ನಿನ್ನ ತಂದೆಯ ಹಳೆಯ ದಾಖಲೆಗಳಲ್ಲಿ ಅವನ ಬಗ್ಗೆ ಮಾಹಿತಿ ಇರಬಹುದು.” ಎಂದಷ್ಟೇ ಹೇಳಿದಳು.
ಕರೆ ಮುಗಿದ ನಂತರ ಈಶಾನ್ ತನ್ನ ತಂದೆಯ ದಿನಚರಿಯಲ್ಲಿದ್ದ ಸಾಲುಗಳನ್ನು ನೆನಪಿಸಿಕೊಂಡ.“ಮಕ್ಕಳಿಗೆ ಎಲ್ಲವನ್ನೂ ತಿಳಿಸುವುದು ಯಾವಾಗಲೂ ಒಳ್ಳೆಯದಲ್ಲ. ಕೆಲವೊಮ್ಮೆ ಅವರ ಭವಿಷ್ಯವನ್ನು ಕಾಪಾಡಲು, ಅವರ ಹಿಂದಿನ ತಪ್ಪುಗಳನ್ನು ಮರೆಮಾಚಬೇಕಾಗುತ್ತದೆ.”ಆ ಮಾತು ಈಗ ಹೊಸ ಅರ್ಥ ಪಡೆದುಕೊಳ್ಳುತ್ತಿತ್ತು.ತಂದೆ ಮತ್ತು ರಾಘವೇಂದ್ರ ಯಾವುದೋ ಯೋಜನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರೇ? ಆ ಯೋಜನೆಯಲ್ಲಿ ಈಶಾನ್ ಮತ್ತು ಅನಿರುದ್ಧನ ಬರವಣಿಗೆಯೂ ಬಳಸಲ್ಪಟ್ಟಿತೇ? ಅವನಿಗೆ ಉತ್ತರ ತಿಳಿಯಲಿಲ್ಲ.ಆದರೆ ಈಗ ರಾಘವೇಂದ್ರನನ್ನು ಹುಡುಕಬೇಕೆಂಬುದು ಸ್ಪಷ್ಟವಾಗಿತ್ತು.
ಸಂಜೆ ನಾಲ್ಕು ಗಂಟೆಗೆ ಸಾರಾ ಕರೆ ಮಾಡಿದಳು.“ನಿನಗೆ ಏನಾದರೂ ಮಾಹಿತಿ ಸಿಕ್ಕಿತಾ?”
ಈಶಾನ್ ತನ್ನ ಪ್ರಯಾಣದ ವಿವರಗಳನ್ನು ಹೇಳಿದ. ಹಳೆಯ ಓದುಮನೆ, ಗ್ರಂಥಪಾಲಕರ ಮೊಮ್ಮಗ, ರಾಘವೇಂದ್ರನ ಹೆಸರುಎಲ್ಲವನ್ನೂವಿವರಿಸಿದ.
ಸಾರಾ ಗಮನದಿಂದ ಕೇಳಿದಳು.“ಇದು ಮಹತ್ವದ ಸುಳಿವು. ಆದರೆ ಈಗಲೇ ರಾಘವೇಂದ್ರನೇ ಮ್ಯೂಸ್ನ ಹಿಂದಿರುವ ವ್ಯಕ್ತಿ ಎಂದು ನಿರ್ಧರಿಸಬಾರದು. ಒಂದೇ ಹೆಸರಿನ ಹಲವು ಜನರಿರಬಹುದು. ಹಳೆಯ ಯೋಜನೆಗೂ ಈಗಿನ ತಂತ್ರಾ೦ಶಕ್ಕೂ ಸಂಬ೦ಧವಿದೆ ಎಂಬುದನ್ನು ದೃಢಪಡಿಸಬೇಕು.” ಎಂದಳು.
“ನನಗೆ ಅರ್ಥವಾಗುತ್ತದೆ. ಆದರೆ ನನ್ನ ತಂದೆ ಆ ವ್ಯಕ್ತಿಯನ್ನು ತಿಳಿದಿದ್ದರು. ಅನಿರುದ್ಧನೂ ಅದೇ ಕಟ್ಟಡಕ್ಕೆ ಬರುತ್ತಿದ್ದ. ಅಲ್ಲಿ ಕಂಪ್ಯೂಟರ್ ಪ್ರಯೋಗಗಳೂ ನಡೆದಿದ್ದವು.” ಎಂದನು.
“ಹೌದು. ಈಗ ನಾವು ಆ ಕಾಲದ ದಾಖಲೆಗಳನ್ನು ಹುಡುಕಬೇಕು.” ಎಂದಳು ಸಾರಾ.
ಈಶಾನ್ ಸ್ವಲ್ಪ ಹೊತ್ತು ಮೌನವಾಗಿದ್ದ.“ಸಾರಾ, ನನಗೆ ಮತ್ತೊಂದು ವಿಷಯ ನೆನಪಾಗುತ್ತಿದೆ. ಬಾಲ್ಯದಲ್ಲಿ ನಮ್ಮ ಮನೆಯ ಬಾಗಿಲಿನ ಬಳಿ ಒಬ್ಬ ವ್ಯಕ್ತಿ ನಿಂತಿದ್ದ. ಅವನ ಮುಖವನ್ನು ಈಗಲೂ ಸ್ಪಷ್ಟವಾಗಿ ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಅವನ ಕೈಯಲ್ಲಿ ಕಪ್ಪು ಕಡತವಿತ್ತು. ಅವನು ತಂದೆಯೊ೦ದಿಗೆ ಮಾತನಾಡುತ್ತಿದ್ದ.” ಎಂದ.
“ಬಹುಶಃ ಅವನೇ ರಾಘವೇಂದ್ರನಾಗಿರಬಹುದು.” ಸಾರಾ ಅನುಮಾನಿಸದಳು.
“ಬಹುಶಃ. ಆದರೆ ಆ ವ್ಯಕ್ತಿ ನನ್ನನ್ನು ನೋಡಿದಾಗ, ಅವನ ಮುಖದಲ್ಲಿ ವಿಚಿತ್ರವಾದ ಭಾವನೆ ಇತ್ತು. ನಾನು ಅವನನ್ನು ಹಿಂದೆ ನೋಡಿದ್ದೆ ಎಂಬ ಭಾವನೆ ನನಗಿತ್ತು. ಆದರೆ ಅವನನ್ನು ಎಲ್ಲಿ ನೋಡಿದ್ದೆ ಎಂಬುದು ನೆನಪಾಗುತ್ತಿರಲಿಲ್ಲ.”
ಸಾರಾ ನಿಧಾನವಾಗಿ ಹೇಳಿದಳು. “ನಿನ್ನ ನೆನಪುಗಳನ್ನು ಬಲವಂತವಾಗಿ ಹೊರತೆಗೆಯಲು ಪ್ರಯತ್ನಿಸಬೇಡ. ಹಳೆಯ ದಾಖಲೆಗಳು ಮತ್ತು ನೇರ ಸಾಕ್ಷಿಗಳ ಮೂಲಕ ಅವುಗಳನ್ನು ಪರಿಶೀಲಿಸೋಣ. ನೆನಪನ್ನು ಬಲವಂತವಾಗಿ ಹುಡುಕಿದಾಗ, ಕಲ್ಪನೆ ಮತ್ತು ನಿಜವಾದ ಅನುಭವಗಳು ಬೆರೆತುಹೋಗಬಹುದು.”
ಈಶಾನ್ಗೆ ಅವಳ ಮಾತು ಸರಿಯೆನಿಸಿತು.ಅವನು ಈಗ ಪ್ರತಿಯೊಂದು ನೆನಪನ್ನೂ ತಕ್ಷಣ ಸತ್ಯವೆಂದು ಒಪ್ಪಿಕೊಳ್ಳಲು ಬಯಸಲಿಲ್ಲ. ಆದರೆ ಅವುಗಳನ್ನು ನಿರ್ಲಕ್ಷಿಸುವುದೂ ಸಾಧ್ಯವಾಗುತ್ತಿರಲಿಲ್ಲ.ಕರೆ ಮುಗಿದ ನಂತರ ಅವನು ತನ್ನ ನೋಟ್ಬುಕ್ನಲ್ಲಿ ಹೊಸ ವಿಭಾಗವೊಂದನ್ನು ಆರಂಭಿಸಿದ.
“ಬಾಲ್ಯದ ಮನೆಯ ಬಾಗಿಲಿನ ಬಳಿ ಕಂಡ ವ್ಯಕ್ತಿ.”ಅದರ ಕೆಳಗೆ ನೆನಪಿದ್ದ ವಿವರಗಳನ್ನು ಬರೆದ.ಎತ್ತರದ ಮೈಕಟ್ಟು. ಕಪ್ಪು ಕಡತ. ಗಂಭೀರ ಮುಖ. ತಂದೆಯೊ೦ದಿಗೆ ಮಾತುಕತೆ. ತನ್ನತ್ತ ನೋಡಿದಾಗ ಉಂಟಾದ ವಿಚಿತ್ರ ಭಾವನೆ.ನಂತರ ಮತ್ತೊಂದು ಸಾಲು ಸೇರಿಸಿದ.“ಗುರುತು ಇನ್ನೂ ಖಚಿತವಾಗಿಲ್ಲ.”ಅದನ್ನು ಬರೆದ ನಂತರ ಅವನಿಗೆ ಸ್ವಲ್ಪ ನೆಮ್ಮದಿಯಾಯಿತು. ತನ್ನ ಅನುಮಾನವನ್ನು ಸತ್ಯವೆಂದು ಪರಿಗಣಿಸದೆ, ಅದನ್ನು ಪರಿಶೀಲಿಸಬೇಕಾದ ಪ್ರಶ್ನೆಯಾಗಿ ದಾಖಲಿಸಿದ್ದ.
ರಾತ್ರಿ ಏಳು ಗಂಟೆಗೆ ಅನಿರೀಕ್ಷಿತ ಕರೆ ಬಂತು.ಅದು ಬೆಳಿಗ್ಗೆ ಭೇಟಿಯಾದ ಯುವಕನಿಂದಾಗಿತ್ತು.“ಸರ್, ನಾನು ತಾತನ ಹಳೆಯ ದಾಖಲೆಗಳನ್ನು ನೋಡಿದೆ. ಕೆಲವು ಛಾಯಾಚಿತ್ರಗಳು ಸಿಕ್ಕಿವೆ. ಅವುಗಳಲ್ಲಿ ಹಳೆಯ ವಾಚನಾಲಯ ಮತ್ತು ಕಂಪ್ಯೂಟರ್ ಕೊಠಡಿಯ ಚಿತ್ರಗಳಿವೆ. ಒಂದು ಚಿತ್ರದಲ್ಲಿ ರಾಘವೇಂದ್ರ ಎಂಬ ವ್ಯಕ್ತಿಯೂ ಇದ್ದಾನೆ.”
ಈಶಾನ್ ತಕ್ಷಣ ಎಚ್ಚರಗೊಂಡ.“ಚಿತ್ರವನ್ನು ನನಗೆ ಕಳುಹಿಸಬಹುದೇ?”
“ಹೌದು. ಆದರೆ ಒಂದು ವಿಷಯ ವಿಚಿತ್ರವಾಗಿದೆ. ಆ ಚಿತ್ರದಲ್ಲಿ ಮೂವರು ವ್ಯಕ್ತಿಗಳಿದ್ದಾರೆ. ಅವರಲ್ಲಿ ಒಬ್ಬರು ನಿಮ್ಮ ತಂದೆಯ೦ತೆ ಕಾಣುತ್ತಾರೆ.” ಎಂದ ಯುವಕ.
ಈಶಾನ್ನ ಉಸಿರು ಕ್ಷಣಕಾಲ ನಿಂತಿತು.“ನನ್ನ ತಂದೆಯೇ?” ಕೇಳಿದ.
“ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅವರಂತೆಯೇ ಕಾಣುತ್ತಾರೆ. ಚಿತ್ರವನ್ನು ಕಳುಹಿಸುತ್ತೇನೆ.” ಎಂದ. ಕರೆ ಕಡಿತಗೊಂಡಿತು. ಕೆಲವು ಕ್ಷಣಗಳ ನಂತರ ಈಶಾನ್ನ ಮೊಬೈಲ್ಗೆ ಛಾಯಾಚಿತ್ರ ಬಂತು.
ಅದು ಹಳೆಯ ಕಪ್ಪು-ಬಿಳುಪು ಚಿತ್ರವಾಗಿತ್ತು. ಒಂದು ಸಣ್ಣ ಕೋಣೆಯಲ್ಲಿ ಮೂರು ಜನರು ನಿಂತಿದ್ದರು. ಹಿಂದೆ ಎರಡು ಕಂಪ್ಯೂಟರ್ಗಳಿದ್ದವು. ಗೋಡೆಯ ಮೇಲೆ ಕೈಯಿಂದ ಬರೆಯಲಾಗಿದ್ದ ಫಲಕವಿತ್ತು. ಅದರ ಮೇಲಿನ ಪದಗಳು ಸಂಪೂರ್ಣವಾಗಿ ಸ್ಪಷ್ಟವಾಗಿರಲಿಲ್ಲ.
ಈಶಾನ್ ಚಿತ್ರವನ್ನು ಜೂಮ್ ಮಾಡಿ ನೋಡಿದ.ಎಡಭಾಗದಲ್ಲಿ ನಿಂತಿದ್ದ ವ್ಯಕ್ತಿ ಅವನ ತಂದೆಯ೦ತೆ ಕಾಣುತ್ತಿದ್ದ. ಮಧ್ಯದಲ್ಲಿ ನಿಂತಿದ್ದ ವ್ಯಕ್ತಿಯ ಕೈಯಲ್ಲಿ ಕಪ್ಪು ಕಡತವಿತ್ತು. ಬಲಭಾಗದಲ್ಲಿ ನಿಂತಿದ್ದ ಯುವಕನ ಮುಖ ಮಾತ್ರ ಸ್ಪಷ್ಟವಾಗಿತ್ತು.
ಅದು ಅನಿರುದ್ಧನಾಗಿರಬಹುದೇ?ಈಶಾನ್ ಆ ಮುಖವನ್ನು ಹಳೆಯ ಶಾಲಾ ಛಾಯಾಚಿತ್ರದೊಂದಿಗೆ ಹೋಲಿಸಿದ. ಹೋಲಿಕೆ ಇತ್ತು. ಆದರೆ ಚಿತ್ರಗಳ ಗುಣಮಟ್ಟದ ಕಾರಣದಿಂದ ಖಚಿತವಾಗಿ ಹೇಳಲು ಸಾಧ್ಯವಾಗಲಿಲ್ಲ.ಅವನು ಚಿತ್ರವನ್ನು ಮತ್ತಷ್ಟು ದೊಡ್ಡದಾಗಿ ನೋಡಿದ.ಹಿಂದಿನ ಗೋಡೆಯ ಮೇಲಿದ್ದ ಫಲಕದಲ್ಲಿ ಮೂರು ಪದಗಳು ಕಾಣಿಸಿಕೊಂಡವು.“MEMORY- LANGUAGE-MUSE.”ಈಶಾನ್ನ ಹೃದಯ ಬಡಿತ ವೇಗವಾಯಿತು.ಇದು ಸಾಮಾನ್ಯ ಕಂಪ್ಯೂಟರ್ ತರಬೇತಿ ಕೊಠಡಿಯ ಚಿತ್ರವಾಗಿರಲಿಲ್ಲ. ಕನಿಷ್ಠ ಆ ಫಲಕವು ಯಾವುದೋ ವಿಶೇಷ ಯೋಜನೆಯ ಹೆಸರನ್ನು ಸೂಚಿಸುತ್ತಿತ್ತು.
ಈಶಾನ್ ಯುವಕನಿಗೆ ಕರೆ ಮಾಡಿದ.“ಈ ಚಿತ್ರ ಯಾವಾಗ ತೆಗೆದದ್ದು ಎಂದು ಗೊತ್ತೇ?” ಕೇಳಿದ.
“ನಿಖರವಾಗಿ ಗೊತ್ತಿಲ್ಲ. ಆದರೆ ತಾತನ ದಾಖಲೆಗಳ ಪ್ರಕಾರ ಅದು ಸುಮಾರು ಹನ್ನೆರಡು ಅಥವಾ ಹದಿಮೂರು ವರ್ಷಗಳ ಹಿಂದಿನದು.” ಎಂದ ಯುವಕ.
“ನಿನ್ನ ತಾತ ಈ ಯೋಜನೆಯ ಬಗ್ಗೆ ಏನಾದರೂ ಬರೆದಿದ್ದಾರೆಯೇ?” ವಿವರ ಕೇಳಿದ.
“ಕೆಲವು ಟಿಪ್ಪಣಿಗಳಿವೆ. ಅವುಗಳನ್ನು ಇನ್ನೂ ಸಂಪೂರ್ಣವಾಗಿ ಓದಿಲ್ಲ. ನಾಳೆ ನಿಮಗೆ ತಿಳಿಸುತ್ತೇನೆ.” ಎಂದ ಯುವಕ. ಈಶಾನ್ ಧನ್ಯವಾದ ಹೇಳಿ ಕರೆ ಮುಗಿಸಿದ.
ಅವನು ಛಾಯಾಚಿತ್ರವನ್ನು ಮತ್ತೆ ತೆರೆದ.ಈ ಬಾರಿ ಮಧ್ಯದಲ್ಲಿ ನಿಂತಿದ್ದ ವ್ಯಕ್ತಿಯ ಮುಖದತ್ತ ಗಮನ ಹರಿಸಿದ. ಅವನ ಕಣ್ಣುಗಳು, ಹಣೆಯ ಮೇಲಿನ ಸಣ್ಣ ಗುರುತು ಮತ್ತು ತುಟಿಯ ಒಂದು ಬದಿಯನ್ನು ಸ್ವಲ್ಪ ಮೇಲಕ್ಕೆ ಎತ್ತಿಕೊಂಡಿದ್ದ ರೀತಿಇವೆಲ್ಲವೂ ತನ್ನ ಕನಸಿನಲ್ಲಿದ್ದ ಅಪರಿಚಿತನನ್ನು ನೆನಪಿಸುತ್ತಿದ್ದವು.
ಅವನು ಆ ಚಿತ್ರವನ್ನು ಸಾರಾಳಿಗೆ ಕಳುಹಿಸಿದ.ಕೆಲವು ನಿಮಿಷಗಳ ನಂತರ ಅವಳಿಂದ ಕರೆ ಬಂತು.“ಈಶಾನ್, ಮಧ್ಯದಲ್ಲಿ ನಿಂತಿರುವ ವ್ಯಕ್ತಿಯನ್ನು ನೋಡು. ಅವನು ರಾಘವೇಂದ್ರನಾಗಿರಬಹುದೇ?” ಕೇಳಿದಳು.
“ನನಗೆ ಹಾಗೆ ಅನಿಸುತ್ತಿದೆ.” ಎಂದ.
“ಆದರೆ ಇನ್ನೊಂದು ಸಂಗತಿ ಗಮನಿಸಿದ್ದೀಯಾ?” ಕೇಳಿದಳು.
“ಏನು?”
“ಚಿತ್ರದ ಬಲಭಾಗದಲ್ಲಿರುವ ಹುಡುಗನ ಕೈಯಲ್ಲಿ ಒಂದು ನೋಟ್ಬುಕ್ ಇದೆ. ಅದರ ಮುಖಪುಟದಲ್ಲಿ ಏನೋ ಬರೆಯಲಾಗಿದೆ.”
ಈಶಾನ್ ಚಿತ್ರವನ್ನು ಮತ್ತೊಮ್ಮೆ ಪರಿಶೀಲಿಸಿದ. ನೋಟ್ಬುಕ್ನ ಮುಖಪುಟದ ಮೇಲಿನ ಅಕ್ಷರಗಳು ಮಸುಕಾಗಿದ್ದವು. ಆದರೆ ಅವುಗಳಲ್ಲಿ ಒಂದು ಪದ ಸ್ಪಷ್ಟವಾಗಿ ಕಾಣಿಸಿತು.“ಅಂತ್ಯ.”ಅವನ ಮನಸ್ಸಿನಲ್ಲಿ ಬಾಲ್ಯದ ಗ್ರಂಥಾಲಯದ ದೃಶ್ಯ ಮತ್ತೆ ಮೂಡಿತು. ಅನಿರುದ್ಧ ತನ್ನ ಕೈಯಲ್ಲಿದ್ದ ನೋಟ್ಬುಕ್ ಅನ್ನು ತೋರಿಸುತ್ತಿದ್ದ. ಅದರ ಮುಖಪುಟದ ಮೇಲೂ ಇದೇ ಪದವಿತ್ತು.ಇದು ಅದೇ ನೋಟ್ಬುಕ್ ಆಗಿರಬಹುದೇ?ಚಿತ್ರವನ್ನು ನೋಡುತ್ತಲೇ ಅವನು ನಿಧಾನವಾಗಿ ಹೇಳಿದ. “ನಾವು ಆ ಕಥೆಯನ್ನು ಇಲ್ಲಿ ಬರೆದಿರಬೇಕು.”
ಸಾರಾ ಉತ್ತರಿಸಿದಳು. “ಬಹುಶಃ. ಆದರೆ ಈಗ ನಮಗೆ ಇನ್ನೂ ಒಂದು ವಿಷಯ ತಿಳಿಯಬೇಕಿದೆ. ಈ ಚಿತ್ರದಲ್ಲಿ ನಿನ್ನ ತಂದೆಯಿದ್ದರೆ, ಅವರು ಈ ಯೋಜನೆಯ ಬಗ್ಗೆ ತಿಳಿದಿದ್ದರು. ಹಾಗಾದರೆ ನಂತರ ಅವರು ನಿನಗೆ ಏನನ್ನಾದರೂ ಮರೆಮಾಚಲು ಪ್ರಯತ್ನಿಸಿದ್ದು ಯಾಕೆ?”
ಈಶಾನ್ಗೆ ಉತ್ತರ ಇರಲಿಲ್ಲ.ತಂದೆಯ ಪತ್ರವನ್ನು ತೆಗೆದು ಚಿತ್ರವನ್ನು ಅದರೊಂದಿಗೆ ಹೋಲಿಸಿದ.ತಂದೆ ಅನಿರುದ್ಧನ ಬಗ್ಗೆ ತಿಳಿದಿದ್ದರು.ಅವರು ರಾಘವೇಂದ್ರನನ್ನೂ ತಿಳಿದಿದ್ದರು.ಅವರು ಆ ಹಳೆಯ ಯೋಜನೆಯ ಭಾಗವಾಗಿದ್ದಿರಬಹುದು. ಆದರೆ ಈಶಾನ್ನ ಬಾಲ್ಯದ ನೆನಪುಗಳು ಯಾಕೆ ಅಪೂರ್ಣವಾಗಿದ್ದವು ಎಂಬುದು ಇನ್ನೂ ತಿಳಿದಿರಲಿಲ್ಲ.
ಆ ರಾತ್ರಿ ಮಲಗುವ ಮೊದಲು ಈಶಾನ್ ತನ್ನ ಹಳೆಯ ನೋಟ್ಬುಕ್ ಅನ್ನು ತೆರೆದ. ಅದರ ಖಾಲಿ ಪುಟದಲ್ಲಿ ಹೀಗೆ ಬರೆದ. “ನಾನು ಸತ್ಯವನ್ನು ಹುಡುಕುತ್ತಿದ್ದೇನೆ. ಆದರೆ ನನ್ನ ನೆನಪುಗಳೇ ನನಗೆ ದಾರಿ ತೋರಿಸುತ್ತಿವೆಯೋ, ಅಥವಾ ನಾನು ಓದುತ್ತಿರುವ ದಾಖಲೆಗಳು ನನ್ನ ನೆನಪುಗಳನ್ನು ರೂಪಿಸುತ್ತಿವೆಯೋ ಎಂಬುದು ನನಗೆ ತಿಳಿದಿಲ್ಲ. ಆದ್ದರಿಂದ ನಾನು ಕಂಡ ಪ್ರತಿಯೊಂದು ಸುಳಿವನ್ನೂ ಪರಿಶೀಲಿಸಬೇಕು.”
ಅವನು ಪೆನ್ನು ಕೆಳಗಿಟ್ಟ.ಅಷ್ಟರಲ್ಲಿ ಮೊಬೈಲ್ಗೆ ಮತ್ತೊಂದು ಸಂದೇಶ ಬಂತು.ಈ ಬಾರಿ ಸಂದೇಶ ಅಪರಿಚಿತ ಸಂಖ್ಯೆಯಿ೦ದ ಬಂದಿರಲಿಲ್ಲ. ಅದು ಇಮೇಲ್ನಿಂದ ಬಂದಿತ್ತು. ಕಳುಹಿಸಿದವರ ಹೆಸರಿನ ಜಾಗದಲ್ಲಿ ಕೇವಲ ಒಂದು ಅಕ್ಷರವಿತ್ತು. ‘A’ ಸಂದೇಶವನ್ನು ತೆರೆದಾಗ ಒಂದೇ ಒಂದು ಛಾಯಾಚಿತ್ರ ಕಾಣಿಸಿತು.ಅದು ಇತ್ತೀಚೆಗೆ ತೆಗೆದ ಚಿತ್ರವಾಗಿತ್ತು. ಈಶಾನ್ನ ಮನೆಯ ಮುಂಭಾಗದ ಬಾಗಿಲು.ಚಿತ್ರವನ್ನು ಹೊರಗಿನಿಂದ ತೆಗೆದಿದ್ದರು. ಬಾಗಿಲಿನ ಬಳಿಯಲ್ಲಿ ಯಾರೂ ಇರಲಿಲ್ಲ. ಆದರೆ ಬಾಗಿಲಿನ ಗಾಜಿನಲ್ಲಿ ಒಬ್ಬ ವ್ಯಕ್ತಿಯ ನೆರಳು ಪ್ರತಿಬಿಂಬಿಸುತ್ತಿತ್ತು.ಆ ನೆರಳು ಕೈಯಲ್ಲಿ ಕಪ್ಪು ಕಡತವೊಂದನ್ನು ಹಿಡಿದಿತ್ತು.ಚಿತ್ರದ ಕೆಳಗೆ ಒಂದು ಸಾಲು ಬರೆಯಲಾಗಿತ್ತು.“ನೀವು ನನ್ನನ್ನು ನೆನಪಿಸಿಕೊಳ್ಳಲು ಆರಂಭಿಸಿದ್ದೀರಿ. ಈಗ ಬಾಗಿಲು ತೆರೆಯುವ ಸಮಯ ಬಂದಿದೆ.”
ಅದನ್ನು ಓದಿ ಈಶಾನ್ನ ದೇಹ ನಡುಗಿತು. ಅವನು ತಕ್ಷಣವೇ ಕಿಟಕಿಯತ್ತ ನೋಡಿದ. ಮನೆಯ ಹೊರಗೆ ಯಾರೂ ಕಾಣಿಸಲಿಲ್ಲ. ಬಾಗಿಲಿನ ಬಳಿ ಹೋಗಿ ಪರಿಶೀಲಿಸಿದ. ಅಲ್ಲಿ ಯಾರೂ ಇರಲಿಲ್ಲ. ಬಾಗಿಲಿನ ಬೀಗವೂ ಸರಿಯಾಗಿತ್ತು. ಚಿತ್ರ ಯಾವಾಗ ತೆಗೆದದ್ದು ಎಂಬುದು ತಿಳಿಯಲಿಲ್ಲ. ಅದು ಇಂದಿನ ಚಿತ್ರವೇ? ಅಥವಾ ಹಳೆಯ ಚಿತ್ರವೊಂದನ್ನು ಯಾರಾದರೂ ಈಗ ಕಳುಹಿಸಿದ್ದರೇ? ಅವನು ತಕ್ಷಣವೇ ಚಿತ್ರದ ವಿವರಗಳನ್ನು ಪರಿಶೀಲಿಸಿದ. ಆದರೆ ಮೂಲ ಮಾಹಿತಿಯಿಂದ ಖಚಿತವಾದ ದಿನಾಂಕವನ್ನು ತಿಳಿಯಲು ಸಾಧ್ಯವಾಗಲಿಲ್ಲ.
ಅವನು ಸಾರಾಳಿಗೆ ಕರೆ ಮಾಡಲು ಮೊಬೈಲ್ ತೆಗೆದುಕೊಂಡ.ಆದರೆ ಕರೆ ಮಾಡುವ ಮೊದಲು ಮತ್ತೊಂದು ಸಂದೇಶ ಬಂತು.“ರಾಘವೇAದ್ರನನ್ನು ಹುಡುಕಬೇಡಿ. ಮೊದಲು ನಿಮ್ಮ ತಂದೆ ಏನನ್ನು ಮರೆಮಾಚಿದರು ಎಂಬುದನ್ನು ತಿಳಿಯಿರಿ.” ಈಶಾನ್ನ ಮನಸ್ಸಿನಲ್ಲಿ ಪ್ರಶ್ನೆಗಳ ಸುಳಿಗಾಳಿ ಎದ್ದಿತು.ಈ ವ್ಯಕ್ತಿ ಯಾರು? ಅವನು ರಾಘವೇಂದ್ರನನ್ನು ಏಕೆ ಹುಡುಕಬಾರದೆಂದು ಎಚ್ಚರಿಸುತ್ತಿದ್ದ? ಅವನ ಬಳಿ ಈಶಾನ್ನ ಮನೆಯ ಚಿತ್ರ ಹೇಗೆ ಇತ್ತು?ಈಶಾನ್ ತನ್ನ ಮನೆಯ ಬಾಗಿಲಿನತ್ತ ಮತ್ತೊಮ್ಮೆ ನೋಡಿದ.
ಅನಿರುದ್ಧನಬಗ್ಗೆ ತನಿಖೆ ಆರಂಭಿಸಿದ ಕ್ಷಣದಿಂದ ಯಾರೋ ಅವನ ಚಲನವಲನಗಳನ್ನು ಗಮನಿಸುತ್ತಿರುವ ಸಾಧ್ಯತೆ ಇದೆ ಎಂಬುದು ಅವನಿಗೆ ಈಗ ಸ್ಪಷ್ಟವಾಗಿತ್ತು. ಆದರೆ ಅದನ್ನು ಸಾಬೀತುಪಡಿಸುವ ಸಾಕ್ಷಿ ಅವನ ಬಳಿ ಇರಲಿಲ್ಲ.ಅವನು ಸಂದೇಶವನ್ನು ಅಳಿಸಲಿಲ್ಲ. ಚಿತ್ರವನ್ನೂ ಉಳಿಸಿಕೊಂಡ.ನ೦ತರ ತನ್ನ ನೋಟ್ಬುಕ್ನಲ್ಲಿ ಕೊನೆಯ ಸಾಲು ಬರೆದ.“ಬಾಗಿಲಿನ ಆಚೆಯ ವ್ಯಕ್ತಿ ಇನ್ನೂ ಇದ್ದಾನೆ. ಆದರೆ ಅವನು ನನ್ನನ್ನು ರಕ್ಷಿಸಲು ಬಯಸುತ್ತಾನೆಯೋ, ನಿಯಂತ್ರಿಸಲು ಬಯಸುತ್ತಾನೆಯೋ ತಿಳಿಯಬೇಕು.”
ಅವನು ದೀಪವನ್ನು ಆರಿಸಿದ.ಕತ್ತಲೆಯ ಕೋಣೆಯಲ್ಲಿ ಮಲಗಿದ್ದರೂ, ಅವನ ಮನಸ್ಸಿನಲ್ಲಿ ಆ ಹಳೆಯ ಚಿತ್ರ ಮರುಕಳಿಸುತ್ತಿತ್ತು. ತಂದೆ, ಅನಿರುದ್ಧ ಮತ್ತು ಕಪ್ಪು ಕಡತ ಹಿಡಿದ ಅಪರಿಚಿತ ವ್ಯಕ್ತಿಮೂವರೂ ಒಂದೇ ಕೋಣೆಯಲ್ಲಿನಿಂತಿದ್ದರು.ಅವರ ಹಿಂದೆ ಇದ್ದ ಫಲಕದಲ್ಲಿ ಬರೆಯಲಾಗಿದ್ದ ಪದಗಳು ಈಗ ಅವನಿಗೆ ಕೇವಲ ಸಂಶೋಧನಾ ಯೋಜನೆಯ ಹೆಸರಾಗಿ ಕಾಣಿಸುತ್ತಿರಲಿಲ್ಲ.ಅವು ಅವನ ಬದುಕಿನ ಅತ್ಯಂತ ದೊಡ್ಡ ರಹಸ್ಯದ ಮೂರು ಕೀಲಿಗಳಂತೆ ಕಾಣಿಸುತ್ತಿದ್ದವು.ನೆನಪು. ಭಾಷೆ. ಮ್ಯೂಸ್.ಆದರೆ ಆ ಮೂರು ಕೀಲಿಗಳಿಂದ ತೆರೆಯಬೇಕಾದ ಬಾಗಿಲಿನ ಆಚೆ ಏನಿತ್ತು ಎಂಬುದು ಇನ್ನೂ ತಿಳಿದಿರಲಿಲ್ಲ.






0 Comments