ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುತ್ತಿ ಸುಳಿವ ಆತ್ಮದ  ಕರೆ ‘ಡ್ರೀಮ್ಸ್ ಫ್ರಮ್ ಮೈ ಫಾದರ್’

ಬರಾಕ್ ಓಬಾಮ ಅವರ ‘ಡ್ರೀಮ್ಸ್ ಫ್ರಮ್ ಮೈ ಫಾದರ್‘

ಈ ಕೃತಿಯ ಕುರಿತ ದೇವಿಕಾ ನಾಗೇಶ್ ಅವರ ಬರಹ ಇಲ್ಲಿದೆ.

-ದೇವಿಕಾ ನಾಗೇಶ್

ಸುತ್ತಿ ಸುಳಿವ ಆತ್ಮದ  ಕರೆ -ಬರಾಕ್ ಓಬಾಮ ಅವರ “ಡ್ರೀಮ್ಸ್ ಫ್ರಮ್ ಮೈ ಫಾದರ್ ” 

“ಘನತೆ  ಹಾಗೂ ಗುಲಾಮಗಿರಿ, ನ್ಯಾಯ ಹಾಗೂ ಅನ್ಯಾಯ, ಬದ್ಧತೆ ಹಾಗೂ ಉದಾಸೀನ, ಸರಿ ಹಾಗೂ ತಪ್ಪು ”ಇವುಗಳ  ನಡುವಿನ ಆಯ್ಕೆಯ ತೊಳಲಾಟದಲ್ಲಿ ತನ್ನ ಬೇರು ಹುಡುಕುತ್ತ ಕೀನ್ಯಾಗೆ ಹೋಗಿ ತನ್ನೊಳಗಿನ ಗಾಯವನ್ನು ಗುಣ ಪಡಿಸಿಕೊಳ್ಳುವರೆಗಿನ ಒಬಾಮ ಎಂಬ ಸಾಮಾನ್ಯ 

 ಒಬ್ಬ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗ ದ  ನಡುವಿನ ಅನುಸಂಧಾನ ದ  ಅರ್ಧ ಕಥನ ಬರಾಕ್ ಓಬಾಮ ಅವರ “ಡ್ರೀಮ್ಸ್ ಫ್ರಮ್ ಮೈ ಫಾದರ್ ” 

ಒರಿಜಿನ್ಸ್ -ಚಿಕಾಗೋ -ಕೀನ್ಯಾ  ಹೀಗೆ  ಮೂರು  ಭಾಗಗಳಾಗಿ  ಹಂಚಿಕೊಂಡಿರುವ  ಈ ಕಥಾನಕ ನಮ್ಮದೇ ಮನೆಯೊಳಗನ್ನು, ಊರನ್ನು ಬೇರನ್ನು ಸ್ಪರ್ಶಸುತ್ತಿರುವ  ಅನುಭವ ನೀಡುತ್ತದೆ. ಮಿಶ್ರ ತಳಿಯ ಕುಟುಂಬದ ಕೂಸೊಂದು ತಾನು ಯಾರು ಎನ್ನುವ ಅಸ್ತಿತ್ವದ ಹುಡುಕಾಟದೊಂದಿಗೆ ನಡೆಸಿದ ಜೀವನ ಪಯಣದ ಕಿರುನೋಟ ಇಲ್ಲಿದೆ. ಜನಾಂಗ ಬಿಳಿಯರಿರಲಿ -ಕಂದಿರಲಿ -ಕರಿಯರಿರಲಿ.… ಒಳಗೆ ಸುಳಿವಾತ್ಮ ಒಂದೇ..ಧರಿಸುವ  ಕನ್ನಡಕವನ್ನು  ಅವಲಂಬಿಸಿ ನಾವು  ನಟಿಸುತ್ತಿರುತ್ತೇವೆ. 

ಬರಾಕ್ ಒಬಾಮ  ಬಾಲ್ಯ ದಲ್ಲಿ ಅಮೇರಿಕನ್ ತಾಯಿ ಅನ್ನಾ ಮತ್ತು ಅವಳ ಹೆತ್ತವರ ಜೊತೆಗೆ ಬೆಳೆದ.ಕೀನ್ಯಾ ಮೂಲದ ಅಪ್ಪ ಬರಾಕ್ ಮತ್ತು ತನ್ನ ಮೈ ಬಣ್ಣದ ಕಾರಣದಿಂದ ಲೋಕ ದೃಷ್ಟಿಗೆ  ಕರಿಯನಾದವ.ವರ್ಣಭೇದದ ಕಹಿ ಅನುಭವಕ್ಕೆ ಬರದಂತೆ ಕಳೆದ ಆತನ  ಬಾಲ್ಯ, ಮಲತಂದೆ ಲೋಲೋ ,ತಾಯಿಅನ್ನಾಮತ್ತು ತಂಗಿ ಮಾಯ ಜೊತೆ ಕಳೆದ ಇಂಡೋನೇಶ್ಯಾದ ದಿನಗಳ ಬಗ್ಗೆ ಪುಟ್ಟ ಟಿಪ್ಪಣಿಗಳು ಇಲ್ಲಿವೆ. ತಾನು ಆಪ್ರಿಕನ್ ಅಮೇರಿಕನ್ ತಂದೆಯ ಮಗ ಎನ್ನುವುದನ್ನು ಬರಾಕ್ ಒಬಾಮ ಆವಾಹಿಸಿಕೊಂಡು ಜಗತ್ತಿನ ನೊಂದವರ ಅಪಾಯದ ಅಂಚಿನಲ್ಲಿರುವವರ ಪರ ನಿಲ್ಲಬೇಕೆಂದು  ಮಾಡಿದ ಸಂಕಲ್ಪ,ಬದುಕಿನ ಯಾವುದೇ ಸಂಬಂಧಗಳು, ನೆನಪುಗಳು ಹುಸಿ ಹೋಗದಂತೆ ಅವುಗಳನ್ನು ಪೊರೆದು ಕಟ್ಟಿ ಕೊಂಡ ಕೈ ಬುತ್ತಿ ಈ ಹೊತ್ತಿಗೆ .ಹವಾಯಿಯಲ್ಲಿ ಅಜ್ಜ, ಅಜ್ಜಿಯರ ಜೊತೆಗಿದ್ದು ಓದುವಾಗಕೆಲವು ಕರಿಯರು ಬಿಳಿಯರಾಗುವುದಕ್ಕೆ ಹಪಹಪಿಸಿ ಸ್ವಂತ ಹಣದಲ್ಲಿ ಚಿಕಿತ್ಸೆ ಮಾಡಿಸುವಾಗ ಆದ ಎಡವಟ್ಟಿನಿಂದ ಜೀವನ್ಮರಣ ಸ್ಥಿತಿಯಲ್ಲಿರುವುದು ಈತ ಕಂಡಿದ್ದ.ಮೊಮ್ಮಗನ ಗಮನಕ್ಕೆ ಬರದಂತೆ ಎಚ್ಚರ ವಹಿಸುತ್ತ ಕರಿಯರ ಅಸಂಬದ್ಧ ನಡವಳಿಕೆಗಳಿಂದ ನೊಂದ ಅಜ್ಜಿಯ ಮಾತುಗಳನ್ನು ಕೇಳಿದ್ದ.ಬಿಳಿಯರು ಕರಿಯರನ್ನು ನಡೆಸಿಕೊಳ್ಳುತ್ತಿರುವ ಅಮಾನುಷ ಕ್ರೌರ್ಯದ ಬಗ್ಗೆ ಸ್ವತ ಅಜ್ಜನ ಹಿರಿಯ ಕರಿ ಗೆಳೆಯ ಪ್ರಾಂಕ್ ಜೊತೆಗಿನ ತನ್ನ ಮಾತುಗಕತೆಗಳಲ್ಲಿ ಅರಿತುಕೊಂಡಿದ್ದ.ಒಬಾಮಾ ಪದವಿ ಶಿಕ್ಷಣಕ್ಕೆ ಹವಾಯಿಯಿಂದ ಲಾಸ್ ಎಂಜಲೀಸ್ ಗೆ ಹೊರಡುವ ಮೊದಲು  “ಕಾಲೇಜು ಶಿಕ್ಷಣ ನಿಮ್ಮನ್ನು ತರಬೇತು ಗೊಳಿಸುತ್ತದೆ. ಆದರೆ ಒಬಾಮ ಜಗತ್ತಿನ ಆಗುಹೋಗುಗಳಿಗೆ ಮಾನವೀಯತೆಯಿಂದ ಸ್ಪಂದಿಸಲು ಸದಾ ನೀನು ಮೈಯಲ್ಲ ಕಣ್ಣಾಗಿ ಎಚ್ಚರದಿಂದಿರು” .ಪ್ರಾಂಕ್ ಹೇಳಿದ ಕಿವಿಮಾತಿದು. 

ಚಿಕಾಗೋದಲ್ಲಿ ಮೊತ್ತ ಮೊದಲು ಬಾರ್ಬರ್ ಶಾಪ್  ನಲ್ಲಿ ಸಮಾಜದ ಒಳಸುಳಿಗಳ ರಾಜಕೀಯ ಪಾಠ ಕಲಿತ ಒಬಾಮ ಅಲ್ಲಿ ಕಮ್ಯುನಿಟಿ  ಆರ್ಗಾನೈಸರ್  ಆಗಿ  ಪದವಿ  ಶಿಕ್ಷಣ ದ  ನಡುವೆ  ಬಿಡುವು ಪಡೆದು ಕೆಲಸ  ಪ್ರಾರಂಭಿಸಿದ. ಬೇರೆ ಬೇರೆ ವರ್ಣ ಸಮುದಾಯದ ಜನಸಾಮಾನ್ಯರ ಜೊತೆ ಮಹಿಳೆಯರ ಜೊತೆ ಕೆಲಸ  ಮಾಡುವಾಗ ಪ್ರಜಾಪ್ರಭುತ್ವ ವನ್ನು  ಬಲಪಡಿಸಲು ತಳಹಂತ ದಿಂದ  ಜನಪ್ರತಿನಿಧಿ ಗಳನ್ನು, ಕಾರ್ಯಾಂಗವನ್ನು ಉಪಯೋಗಿಸುವ  ಕಾರ್ಯತಂತ್ರ ಒಬಾಮಗೆ ಮನವರಿಕೆ ಆಗತೊಡಗಿತು.ಇತನಿಗೆ ಕೆಲಸ ನೀಡಿದ ಮಾರ್ಟಿ ಪರಿಚಯಿಸಿದ  issue,action, power, self intrest ಈ ತತ್ತ್ವ ದ  ನೆಲೆಗಟ್ಟಿನಲ್ಲಿ ಸಂಘಟನೆ ಕಟ್ಟುವ ಪೂರ್ವಭಾವಿ  ತಯಾರಿಯಲ್ಲಿ ಆದ  ಮೊದಲ ಸೋಲು  ಮೂಡಿಸಿದ  ಹತಾಶೆಗೆ ಆಗಲೇ ಏಳು ಕೆರೆಯ  ನೀರು ಕುಡಿದಿದ್ದ  ಹಿರಿಯ ಮಾರ್ಟಿ ಕೊಟ್ಟ ತಿರುಗೇಟು “I am not a poet I am an organaisor ” ಎಂದಿತ್ತು. ಈ  ಕೆಲಸದ ಸಂದರ್ಭ  ಸಮುದಾಯದ ತಿರುಗಾಟ ದಲ್ಲಿ ಒಬಾಮ ಗಂಡಂದಿರ ಸಹಕಾರವಿಲ್ಲದೆ ಮಕ್ಕಳನ್ನು ಬೆಳೆಸುವ ಮಹಿಳೆಯರು, ಒಂಟಿ ಪುರುಷರು ಚರ್ಚುಗಳಲ್ಲಿ ಸಮುದಾಯ ಕೇಂದ್ರಗಳಲ್ಲಿ ಶಾಲೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಕಂಡ.ಅವರನ್ನು ತನ್ನ ಕೆಲಸದಲ್ಲಿ ತೊಡಗಿಸಿ ಕೊಳ್ಳಲು ಅಗತ್ಯ ಮಾರ್ಗಸೂಚಿ ರೂಪಿಸುವಾಗ ಸಮುದಾಯ ಆಧರಿತ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಜನಪ್ರತಿನಿಧಿ ಗಳನ್ನು ಅಧಿಕಾರಿಗಳನ್ನು ಮುಖಾಮುಖಿಯಾಗಿಸಿದ. ಯುವಜನ ಸಬಲೀಕರಣ, ಉದ್ಯೋಗ, ವೃತ್ತಿ ತರಭೇತಿ,ಮೂಲಭೂತ ಸೌಕರ್ಯಇತ್ಯಾದಿ ಸಮುದಾಯದ ಅಗತ್ಯಕ್ಕೆ ಸ್ಪಂದಿಸುವಂತೆ  ಜನ ಸಂಘಟನೆಯಾಗಿ ಹಕ್ಕೊತ್ತಾಯ ಮಂಡಿಸಿ ಅವುಗಳನ್ನು ಆಗು ಮಾಡಿಸುವಲ್ಲಿ ಮುಷ್ಕರ ಗಳನ್ನು ಸಂಯೋಜಿಸುವಲ್ಲಿ ಒಬಾಮ ಮುಂಚೂಣಿಯಲ್ಲಿದ್ದ.  ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸ್ಥಳೀಯ ಆಸ್ಪತ್ರೆಯ ಉನ್ನತೀಕರಣಕ್ಕೆ ಶ್ರಮಿಸುವ, ಯುವ ಜನರ ಸಬಲೀಕರಣ, ಶಿಕ್ಷಣ,ಮಾದಕದ್ರವ್ಯ ವ್ಯಸನ ಮುಕ್ತಿಗೆ ದುಡಿಯುವ ಒಂಟಿ ಮಹಿಳೆಯರು ,ಪುರುಷರು ಒಬಾಮನ ಈ ಕೆಲಸದಲ್ಲಿ ನೈತಿಕ ಶಕ್ತಿ ತುಂಬಿದವರು.ಎಂತಹ ದೃತಿಗೆಟ್ಟ ಸನ್ನಿವೇಶದಲ್ಲೂ ಕುಗ್ಗದೆ ಮುನ್ನಡೆಯುವ ಛಲ ಒಬಾಮಗೆ ಬಾಲ್ಯದ ಬದುಕು ಕಲಿಸಿದ ಪಾಠವಾಗಿತ್ತು. ಓದಿನ ನಡುವೆ ತೆಗೆದುಕೊಂಡ ಬಿಡುವಿನಲ್ಲಿ ಮಾಡಿದ ಸುಮಾರು ಒಂದು ವರುಷದ ಒಬಾಮನ ಕಮ್ಯೂನಿಟಿ ಕೆಲಸ   ಸುಮಾರು ಐವತ್ತು ಸಮುದಾಯವನ್ನು ಒಳಗೊಂಡ ಸಂಘಟನೆಯಾಗಿ ರೂಪು ಪಡೆದಿತ್ತು. ಇಲ್ಲಿನ ಒಬಾಮನ ಕೆಲಸದಲ್ಲಿ ಭರವಸೆಯ ಬೇರುಗಳಾದ ಹಲವು ಮಹಿಳೆಯರಲ್ಲಿ ಒಬ್ಬಳಾದ ಶೆರ್ಲಿ ಒಬಾಮಗೆ ತಾಯ್ತನದ ಪ್ರೀತಿ ನೀಡಿ  ಭವಿಷ್ಯದ ನಾಯಕನಾಗುವ  ಒಬಾಮನ ಸಾಮರ್ಥ್ಯ ಗುರುತಿಸಿ ಶುಭ ಹಾರೈಸಿದ್ದಳು. ಇಲ್ಲಿ ಚಿಕಾಗೋದ ಸ್ಥಳೀಯ ರಾಜಕಾರಣಿಗಳು ಒಬಾಮನಿಗೆ ಪರಿಚಯವಾಗಿದ್ದರು . ಸ್ವಭಾವತಃ ಅಸಾಧಾರಣ ಆತ್ಮ ವಿಶ್ವಾಸ ಭವಿಷ್ಯ ದ  ಬಗ್ಗೆ  ಭರವಸೆ ಇದ್ದ ಒಬಾಮ ಈ ಕೆಲಸದಲ್ಲಿ ಅಂತಿಮವಾಗಿ ಕಲಿತ ಪಾಠ ನಾಯಕತ್ವ ಎನ್ನುವುದುಇತರರಿಗೆ ಅಂದರೆ  ದ್ವನಿ ಇಲ್ಲದ ನಿರ್ಗತಿಕ ಅಪಾಯದ ಅಂಚಿನಲ್ಲಿರುವ ಜನರಿಗಾಗಿ  ಕೆಲಸಮಾಡಿ ಅವರು ಸಮುದಾಯದ ದ್ವನಿಯಾಗಿ ಸಶಕ್ತರಾಗುವಂತೆ  ಮಾಡುವುದರ ಮೂಲಕ ಲಭಿಸುತ್ತದೆ.ಚಿಕಾಗೋದ  ಆಳ್ತೆಗೆಲ್ಡ್ ನ ಕಾರ್ವೆರ್ ಪ್ರಾಥಮಿಕ ಶಾಲೆ.   ಹದಿಹರೆಯದ  ಒಂಟಿ ತಾಯಂದಿರ ಮಕ್ಕಳು ಇಲ್ಲಿನ ವಿದ್ಯಾರ್ಥಿಗಳು.ಒಂದು ರೀತಿ ನಿರ್ಲಕ್ಷ ಕ್ಕೆ ಒಳಗಾಗಿದ್ದ ಈ ಶಾಲೆಯ ಮಕ್ಕಳು  ಮತ್ತು ಹೆತ್ತವರ  ಉನ್ನತಿಗಾಗಿ  ಆ ಶಾಲೆಗೆ ನಿರಂತರ  ಭೇಟಿ ನೀಡುವಂತೆ ಅಲ್ಲಿನ ಪ್ರಾಂಶುಪಾಲರು ಒಬಾಮನನ್ನು ಕರೆದಿದ್ದರು. ಇಲ್ಲಿ ಶಿಕ್ಷಕ ಪೋಷಕರ ಆಸೋಶಿಯೇಷನ್ ಒಂದು  ಸಂಘಟನೆಯಾಗಿ ಶಾಲೆಯ ಹಾಗೂ ಅವರ  ಮೂಲಭೂತ ಸೌಕರ್ಯ ಗಳಿಗಾಗಿ ಹೋರಾಟ  ಮಾಡುವ ನೆಲೆಯಲ್ಲಿ  ಕ್ರಿಯಾ  ಯೋಜನೆ ಮಾಡಲು  ಅವರ ಬೆನ್ನೆಲುಬಾಗಿ ಒಬಾಮ ಶ್ರಮಿಸಿದ್ದ.

ಒಬಾಮ ನ  ಕೆಲಸದಲ್ಲಿ ನಿರಂತರ ಬೆಂಬಲ ನೀಡುತ್ತಿದ್ದ ಮಹಿಳೆಯರಲ್ಲಿ  ಒಬ್ಬಾಕೆ ರೂಬಿ.ಆಕೆಯ ಹದಿಹರೆಯದ ಮಗ ಕ್ಯೆಲೇಯ  ಕಲಿಕೆ ಯಲ್ಲಿ  ಪ್ರಗತಿ  ಹಿಮ್ಮುಖ ವಾಗುತ್ತಿರುವುದು  ಕಂಡು ಒಬಾಮ  ಕ್ಯೆಲೇ ಯನ್ನು  ಒಮ್ಮೆ  ಮಾತಾಡಿಸುವಂತೆ ರೂಬಿ ಕೇಳಿ ಕೊಂಡಿದ್ದಳು. ಈ  ಘಟನೆ  ಸರಕಾರಿ  ಶಾಲೆಗಳ  ಸಮಸ್ಯೆ  ಮತ್ತು  ಪರಿಹಾರ ದ ನೆಲೆಯಲ್ಲಿ  ತೊಡಗಿ  ಕೊಳ್ಳಲು  ಒಬಾಮಗೆ ಪ್ರೇರಣೆ ಯಾಯಿತು. ತಾನು ಹಾರ್ವರ್ಡ್  ನಲ್ಲಿ  ಲಾ  ಓದುಲು ಸಿದ್ಧತೆ ಮಾಡಿಕೊಳ್ಳುವ ಜೊತೆ ಗೆ ಒಬಾಮ ತಾನು ಮಾಡುತ್ತಿರುವ ಕೆಲಸ ದ ಸಂಬಂಧ ನೆಟ್ವರ್ಕ್ ಬೆಳೆಸಲು ಕರಿಯರನ್ನು  ಪ್ರತಿನಿಧಿಸುವ  ಮಂತ್ರಿಗಳನ್ನು  ತನ್ನ  ಅನುಪಸ್ಥಿತಿ ಯಲ್ಲಿ  ತನ್ನ ಕೆಲಸದ  ಜವಾಬ್ದಾರಿ  ವಹಿಸಿಕೊಳ್ಳಲಿದ್ದ ಜಾನ್  ಜೊತೆಗೆ ಭೇಟಿಯಾಗುತ್ತಿದ್ದ. ಈಗಾಗಲೇ ಮಾಡಿರುವ ಕೆಲಸ  ನಿರಂತರ ಮುಮದುವರಿಯ ಬೇಕು ಎನ್ನುವ ಆಶಯ ಒಬಾಮನದು. 

   ಅಣ್ಣನ ಭೇಟಿಗೆ ಚಿಕಾಗೋಗೆ ಬಂದವಳು ಒಮ್ಮೆಯೂ ನೋಡದ  ಮಲ ತಂಗಿ ಆವುಮ. ನಂತರ ಒಬಾಮಗೆ ತಂದೆಯ ಕಡೆಯ ಸಂಬಂಧ ಬೆಳೆಸಿಕೊಳ್ಳಲು ಮುಖ್ಯ ಕೊಂಡಿಯಾದಳು.ಈ ಭೇಟಿ ಯಲ್ಲಿ ಪರಸ್ಪರರು ತೆರೆದಿಟ್ಟ ಅಂತರಂಗ ಅವರಲ್ಲಿ ಮೂಡಿಸಿದ ಕುಟುಂಬ ಸಂಬಂಧದ ಬೆಚ್ಚಗಿನ ಭಾವ ಬದುಕು ಬರಿದಾಗದಂತೆ ಕಾಯುವ ಶಕ್ತಿಯಾಗಿತ್ತು.  ಓಲ್ಡ್ ಮ್ಯಾನ್ (ತಂದೆ )ಆಗಿ ತಂಗಿ ಅವುಮ ಮಾತಿನ ಮೂಲಕ ತೆರೆದುಕೊಂಡ ತನ್ನ ತಂದೆಯ ಕಥನ ಕೇಳಿದ ಒಬಾಮಗೆ  ತಾನು  ಅದೇಕೋ ಹಗುರಾದ ಭಾವ.. ಮೂಡಿಸಿತ್ತು.ತಂದೆಯ ಜೊತೆಗಿದ್ದೂ ಆವುಮ ಮತ್ತವಳ ಒಡಹುಟ್ಟಿದವರು ಅನುಭವಿಸಿದ ಒಂಟಿತನ ..ಅನಾಥ ಪ್ರಜ್ಞೆ  ಕಡಿಮೆಯಾಗಿರಲಿಲ್ಲ.ರಾಜಕಾರಣದಲ್ಲಿ ಹೀನಾಯ ಸೋಲು ಕಂಡ ತಂದೆ ಕುಡಿತದ ಚಟಕ್ಕೆ ಬಿದ್ದುಸರೀಕರ ಎದುರು ಕಳೆದು ಕೊಂಡ ಗೌರವ…ಇತ್ಯಾದಿ ಗಳ  ಬಗ್ಗೆ ಆಕೆ ಹೇಳಿದಾಗ ಒಬಾಮಗೆ ತಂದೆ ಯ  ನಿರೀಕ್ಷೆ  ತಾನು ಮುಟ್ಟಲಾರೆ ಎನ್ನುವ  ಭಯದಿಂದ  ಮುಕ್ತನಾಗಿ ಜೀವನ ದಲ್ಲಿ ಆತ ಮಾಡಿದ ತಪ್ಪು ತಾನು ಮಾಡ ಬಾರದು ಎಂಬ ನಿರ್ಧಾರಕ್ಕೆ ಕಳಿಸು .ಅಲ್ಲಿಯವರೆಗೆ  ತಂದೆಯ ವಂಶ ಮತ್ತು ಆತನ ಶ್ರೀಮಂತ ಹಿನ್ನೆಲೆ, ತೂಕದ ವ್ಯಕ್ತಿತ್ವದ ಬಗ್ಗೆ ತಾಯಿ ಮತ್ತು ಅವಳ ಹೆತ್ತವರು ತೆರೆದಿಟ್ಟ ಮುಖಕ್ಕಿಂತ ಭಿನ್ನವಾದ  ಇನ್ನೊಂದು ಮುಖವೂ ಇದೆ ಎನ್ನುವ ವಾಸ್ತವ ತೆರೆದು ಕೊಂಡಿತ್ತು.

    ಈ ಕಥಾನಕದಲ್ಲಿ ಒಬಾಮ ತೆರೆದಿಡುವ ಜಗತ್ತು ವಿಶ್ವದ ಪ್ರತಿ ಮನೆ,ಹಳ್ಳಿ ಪಟ್ಟಣಗಳದ್ದು . ಬಣ್ಣಗಳ ಹೊರತು ಭಾವ ಹೊಮ್ಮಿಸುವ ಸ್ವರ ಒಂದೇ ಅನ್ನುವ ಅರಿವು ಮೂಡಿಸುತ್ತದೆ . ಆತನ  ಸ್ತ್ರೀ ಪರ  ಸಂವೇದನೆ  ಮನೆಯೊಳಗಿನ  ಕಂಪೋರ್ಟ್ಮೆಂಟ್ ನಲ್ಲಿ ದಕ್ಕಿದ್ದು. ಇದರ  ಒಟ್ಟಂದ ಫಲವೇ ಯಾರನ್ನೂ ದ್ವೇಷಿಸದೆ ಸಮಚಿತ್ತದ  ರಾಜಕಾರಣ ವನ್ನು ಅಮೇರಿಕಾ ದ  ಅಧ್ಯಕ್ಷ ನಾಗಿ  ಆತನಿಗೆ ನಡೆಸಲು  ಸಾಧ್ಯವಾಗಿದ್ದು. ಹಾಗೆ ನೋಡಿದರೆ ಒಬಾಮ ನ  ಕಣ್ಣು ಕಂಡ  ವರ್ಣ ಭೇದಕ್ಕೂ ಮತ್ತು ಆತನ ಕರಿಯ ಸ್ನೇಹ ವಲಯ ಕಂಡ ವರ್ಣ ಭೇದ ಕ್ಕೂ ಒಂದೇ ಸರಿಸುಮಾರಿನಲ್ಲಿ ಯೇ ಆದರೂ ಅಜಗಜಾಂತರ ವ್ಯತ್ಯಾಸ ವಿತ್ತು. ಮಿಶ್ರ ತಳಿಯವನಾಗಿ ಬಿಳಿಯ ಅಮ್ಮ ನ ಜೊತೆಗಿದ್ದು ಆಕೆಯ  ಪೋಷಕರು  ನೀಡಿದ ಸಂಸ್ಕಾರ ಈ  ಗೊಂದಲದಲ್ಲಿ  ಆತ ತನ್ನ ಅಸ್ತಿತ್ವ ದ  ಹುಡುಕಾಟ ಕ್ಕಾಗಿ  ನಡೆಸಿದ  ಸಮರವೇನೂ ಕಡಿಮೆಯದಲ್ಲ. 

ಬುದ್ಧಿ ತಿಳಿದ ನಂತರ ತನ್ನ ಪ್ರಜ್ಞೆ ಯ ಭಾಗವಾಗಿ ಒಮ್ಮೆ  ಮಾತ್ರ  ಕಂಡ ತಂದೆ, ಬಾಲ್ಯ ದಲ್ಲಿ ಅಜ್ಜನ ಒಡನಾಟ ದಲ್ಲಿ ಕಂಡ ಪರಿಸರ, ಕಂದು ವರ್ಣದವನಾದ ಮಲತಂದೆ ಲೊಲೋ ಜೊತೆ ಇಂಡೋನೇಷ್ಯ ದಲ್ಲಿ  ಕಳೆದ  ದಿನಗಳು ಈ ಎಲ್ಲದರ ಒಟ್ಟು ಪರಿಣಾಮ  ಬರಾಕ್ ಒಬಾಮ. 

ಬದುಕು ತೆರೆದ ಪುಸ್ತಕ ಆಗುವುದು ನಮಗೆ ನಾವು ಪ್ರಾಮಾಣಿಕರಾಗುವ ಮೊದಲ ಹೆಜ್ಜೆ .ಗಂಡು ಹೆಣ್ಣು ಇಬ್ಬರಿಗೂ ಅಗತ್ಯದ  ಸಬಲೀಕರಣದ ಮನಸ್ಥಿತಿ ದಕ್ಕುವುದು ನಮ್ಮೊಳಗಿನ ಯುದ್ಧದಲ್ಲಿ ನಾವು ಗೆದ್ದಾಗ. ಒಬಾಮ ಇದನ್ನು ಗಾಯ ಗುಣ ಪಡಿಸುವ ಪ್ರಕ್ರಿಯೆ ಎಂದು ಕರೆಯುತ್ತಾನೆ .ನಿಜವೇ ಗಾಯ ಮಾಗಿದ ಮೇಲೆಯೇ ತಾನೆ ಜಗತ್ತಿನ ಸಂಕಟವಷ್ಟನನ್ನೂ ಎದೆಗೊತ್ತಿಕೊಂಡು ಸಂತೈಸುವ ಸಮಚಿತ್ತ ಸಿದ್ಧಿಸುವುದು “The audacity of hope “ಒಬಾಮಾನ ಅಜ್ಜಿ ಯ  ನಿತ್ಯ ದ  ಪ್ರಾರ್ಥನೆ ಯಾಗಿತ್ತು. ಮಹಾನುಭಾವರ ಕಥಾನಕಗಳು ನೀಡುವ ನೋಟ ಮುಖ್ಯ ಆಗುವುದು ಈ ಕಾರಣ ಕ್ಕೆ ಅಲ್ಲವೇ! 

ತಂದೆ ತೀರಿಕೊಂಡ ನಂತರ ಒಬಾಮ ಕೀನ್ಯಾಗೆ ಮೊದಲ ಬಾರಿ  ಹೋದ.ಅಲ್ಲಿ ಏರ್ ಪೋರ್ಟ್ ನಲ್ಲಿ  ಬ್ರಿಟಿಷ್ ಏರ್ ವೇ ಅಧಿಕಾರಿಗೆ ಮೊದಲೇ ಪರಿಚಯವಿದ್ದ ತನ್ನ ತಂದೆಯ  ಮಗನೆಂದು ಪರಿಚಯ ಹೇಳುವ ಅವಕಾಶವಾದ ಪುಳಕ  ಒಬಾಮ  ಅನುಭವಿಸಿದ. ಅವುಮಾಳ ಜೊತೆ ಒಬಾಮಾ ಅಲ್ಲಿನ  ಹೋಟೆಲ್ ಗೆ  ಹೋದಾಗ  ಅಲ್ಲಿನ  ಸಿಬ್ಬಂದಿಗಳು ಹೊರದೇಶ ದ ಗ್ರಾಹಕ ರನ್ನು ಗೌರವದಿಂದ ನಡೆಸಿಕೊಂಡು ತಮ್ಮಜನರನ್ನು   ನಿರ್ಲಕ್ಷ ಮಾಡಿದ್ದರು.ಆಗ ಸಿಟ್ಟಾಗಿ ಆವುಮ ಊಟಕ್ಕೆ ಆರ್ಡರ್ ಮಾಡದೇ ಅಲ್ಲಿಂದ ಅಣ್ಣನ ಜೊತೆ ಎದ್ದು ನಡೆದಿದ್ದಳು. ಪರಕೀಯರ ಆಳ್ವಿಕೆಗೆ ಒಳಗಾದ ದೇಶಗಳ ಜನಸಮುದಾಯದ  ಮನಸ್ಥಿತಿ ಯನ್ನು ಕೀನ್ಯಾ  ದ ಹೋಟೆಲ್ ನ ಪರಿಚಾರಕರಲ್ಲಿ ಕಂಡ  ಒಬಾಮನಿಗೆ ಇದರಿಂದ ಬೇಸರವಾಗಿರಲಿಲ್ಲ. ಉದಾರಿಯೂ , ಕರುಣಾಳುವೂ ಆಗಿದ್ದ ಅವನ ತಂದೆ ಇಡೀ ಕುಟುಂಬವನ್ನು ಪೊರೆದಿದ್ದ ,ಅದೇ  ಕುಟುಂಬ ಅಪ್ಪ ಸೋತಾಗ ನಿರ್ಲಕ್ಷ ತೋರಿಸಿದ್ದರೂ ಬತ್ತದ ಆತನ ಕುಟುಂಬ ಪ್ರೀತಿ ಯ  ಬಗ್ಗೆ  ತಂದೆಯ ತಂಗಿ  ಹೇಳಿದ್ದರು. ಹೀಗೆ ಕೀನ್ಯಾ ದ ಪಯಣ ಒಬಾಮಾ ಗೆ ತಂದೆ ಒಡನಾಡಿದ  ಪ್ರಪಂಚ, ಕರುಳು ಬಳ್ಳಿ ಸಂಬಂಧ ಅಲ್ಲಿನ ಸಂಸ್ಕೃತಿ ಸಮುದಾಯದ ಸ್ಥೂಲ ಚಿತ್ರಣ ಅಲ್ಲಿನ ಕುಟುಂಬ ಸದಸ್ಯ ರ ನಿರೀಕ್ಷೆಗಳ ಹಳವಂಡಗಳ ನಡುವೆ ತಾನು ಯಾರು ಎನ್ನುವ ಪ್ರಜ್ಞೆಯನ್ನು ಆವಾಹಿಸಿ ಕೊಳ್ಳುವುದಕ್ಕೆಸಾಧ್ಯ ವಾಗುತ್ತದೆ .ತನಗೆ  ಬದುಕು  ತಂದೊಡ್ಡಿದ ಬೇರೆ  ಬೇರೆ ದೇಶದ  ಸ್ನೇಹ  ಸಂಬಂಧ, ಮನುಷ್ಯ ಪ್ರೀತಿಯ ಎಳೆಗಳು ತನ್ನ  ಜೀವನ ದ ಬೇರೆ  ಬೇರೆ ಸಂಕಷ್ಟ ದ ಸನ್ನಿವೇಶದಲ್ಲಿ ಪೊರೆದ ಸಂಗತಿಗಳು ಎನ್ನುವ ವಿಚಾರತಂದೆಯ ಕಡೆಯ ತನ್ನ ಸೋದರರಲ್ಲಿ ಒಬಾಮಾ ಹೇಳುತ್ತಾನೆ. ಈ ಎಲ್ಲಕ್ಕಿಂತಲೂ ಕುತೂಹಲ ಹುಟ್ಟಿಸುವ ಈ ಕೃತಿಯಲ್ಲಿ ನಾನು ಗಮನಿಸಿದ ಸಂಗತಿ ಬಹುಪತ್ನಿತ್ವ ,ಬಹುಪತಿತ್ವಅಥವಾವಿಚ್ಛೇಧನ ಮರುಮದುವೆ ಜಾರಿಯಲ್ಲಿರುವ ಸಮಾಜದಲ್ಲಿ ಸಂಬಂಧಗಳನ್ನು ಬೆಸೆಯುವ ಪೋಷಿಸುವ ಮಾದರಿ  .ಹಸಿವು, ನಿದ್ದೆಯಷ್ಟೇ ಸಹಜ ಎನ್ನುವಂತೆ ಮೈಥುನವನ್ನು  ಇವರು ಗ್ರಹಿಸುವುದು. ಕೃಷಿ ಭೂಮಿ ಮತ್ತು ಜಾನುವಾರು ಗಳೇ ಆಸ್ತಿಯಾಗಿ ಶ್ರಮಜೀವನ, ಹಂಚಿ ತಿನ್ನುವ ಮಾದರಿಗಳೇ ಮೌಲ್ಯಗಳಾಗಿದ್ದ ಕಾಲದಿಂದ” ಲೂ “ಸಮುದಾಯ ಬೆಳೆದು ಬಂದ ಕತೆಯನ್ನು ಅಜ್ಜಿಯ ಬಾಯಿಯಲ್ಲಿ ಕೇಳಿದ. ತನ್ನ ಅಜ್ಜ ಒಂಯಂಗೊ ಆಯುರ್ವೇದ ತಜ್ಞನಾಗಿದ್ದ ವಿಚಾರ ಅಜ್ಜಿಯಿಂದ ತಿಳಿಯುತ್ತದೆ.ತೀವ್ರ ಕುತೂಹಲಿಯಾಗಿದ್ದ ಈ ಅಜ್ಜ ತಿರುಗಾಟದ ಪ್ರವೃತ್ತಿ ಯಿಂದ ಒಮ್ಮೆ ಕಿಸುಮ ನಗರಕ್ಕೆ ಬಂದಿದ್ದಾಗ ಬ್ರಿಟಿಷರ ಪರಿಚಯ ವಾಗುತ್ತದೆ.ಅಲ್ಲಿಂದ ಹಿಂದೆ ಊರಿಗೆ ಬರುವಾಗ ಅಜ್ಜ ಉಡುಗೆ  ತೊಡುಗೆ ಗಳಲ್ಲಿ ಬ್ರಿಟಿಷರನ್ನು ಅನುಕರಿಸಿದ್ದ. ಈ ಕಾರಣಕ್ಕೆ ಕುಟುಂಬ ಆತನನ್ನು ಬಹಿಷ್ಕರಿಸುತ್ತದೆ. ಆಗ ಆತ ನಗರಕ್ಕೆ ಹಿಂತಿರುಗಿ ಬ್ರಿಟಿಷರ ಭಾಷೆ ಕಲಿತ,ನಂತರ ಅವರಿಗಾಗಿ ಕೆಲಸ ಮಾಡಿದ …ಹೀಗೆಒಬಾಮಾಗೆ ಅಜ್ಜಿ ಹೇಳಿದ ತನ್ನ ಸಮುದಾಯದ ಕತೆಯಲ್ಲಿ ಇಡೀ ಆಪ್ರಿಕಾ ಬ್ರಿಟಿಷ್ ರ ವಶವಾದ  ರೋಚಕ ಕಥೆಯೂ,ವಿಶ್ವ ಕಂಡ ಮಹಾಯುದ್ಧಗಳ ಕಥೆಯೂ ಅದು  ಕುಟುಂಬ ಮತ್ತು ಇಡೀ ಆಫ್ರಿಕಾ ಬುಡಕಟ್ಟು ಸಮಾಜದ ಮೇಲಾದ ಪರಿಣಾಮ ಬಗ್ಗೆಯೂ ಇದ್ದವು. ಬ್ರಿಟಿಷರ ಸಂಪರ್ಕದಲ್ಲಿದ್ದೂ ಅವರ ಅಡುಗೆ ಕೆಲಸದವನಾಗಿದ್ದರೂ ಹೊಸತನಕ್ಕೆ ತೆರೆದುಕೊಂಡಿದ್ದರೂ  ತನ್ನ ಧರ್ಮವನ್ನು ಸಮುದಾಯವನ್ನೂ ಅಪಾರವಾಗಿ  ಗೌರವಿಸುತ್ತಿದ್ದಅಜ್ಜ ತನ್ನ ಹೆಂಡತಿ ಯರನ್ನು ಮಕ್ಕಳನ್ನು ಕರೆದು ಕೊಂಡು ತನ್ನ ಮೂಲದ ನೆಲಕ್ಕೆ ಬಂದು ನೆಲೆಸಿದ್ದ.ಈ ಅಜ್ಜ ಒಬಾಮನ ತಂದೆ ಬಿಳಿಯರ ಹುಡುಗಿ ಆನ್ನಾಳನ್ನು ಮದುವೆಯಾಗುವುದನ್ನು ವಿರೋಧಿಸಿದ್ದ…ತನ್ನ ಮೂಲವನ್ನು ಪ್ರಜ್ಞಾ ಪೂರ್ವಕವಾಗಿ ಶೋಧಿಸುತ್ತ ಇವೆಲ್ಲವನ್ನೂ ಒಳಗೊಂಡು ಇವೆಲ್ಲದರ ಹೊರತಾಗಿ ಅತ್ಯಂತ ಆರೋಗ್ಯಪೂರ್ಣವಾಗಿ ಬದುಕು ,ಕುಟುಂಬ,ಸಮಾಜವನ್ನು ಆವಾಹಿಸಿ ಕೊಂಡು ಬರಾಕ್ ಒಬಾಮ ಇಡೀ ವಿಶ್ವವೇ ಗುರುತಿಸುವ ಹಂತ ತಲುಪಿರುವುದು…ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ವ್ಯಕ್ತಿಗಿರುವ ಬಹುದು ಸಾಧ್ಯತೆಗಳಒಂದು ಮಾದರಿ.ಒಬಾಮನ ತಂದೆ ಯ ಕುಟುಂಬದ ಸದಸ್ಯರ ಭೇಟಿ, ಅವರು ಇವನನ್ನು ಭೇಟಿಯಾಗುವಲ್ಲಿ ತೋರಿದ ಉತ್ಸುಕತೆ, ರಕ್ತ ಸಂಬಂಧದ ಎಳೆಗಳು ಬದುಕು ಸಮೃದ್ಧಿಗೊಳಿಸುವ ಜೀವನದಿ ಹೌದು,  ಅಲ್ಲಿರುವ ಜಿಗುಟುತನವನ್ನು ನಿಭಾಯಿಸಿಕೊಂಡು ಬದುಕು ಕಟ್ಟುವ  ಜಾಣ್ಮೆ ಒಮ್ಮೆ  ಸಿದ್ಧಿಸಿದರೆ ಇದು ಸಮಾಜಮುಖಿಯಾಗಿ  ಹರಿದು ಮಾನವೀಯತೆಗೆ ಮೆರುಗು ನೀಡುತ್ತದೆ. ಒಬಾಮಾನ ತಂದೆ ಯ ಇಡೀ  ಕುಟುಂಬ ನೈರೋಬಿಯಿಂದ ಕಿಸುಮು ಮೂಲಕ ಪಯಣಿಸಿದರೆ ಒಂದುರಾತ್ರಿ  ಒಂದು ಹಗಲು ದೂರದ ಮಟಟು ಬರಾಕ್ ಒಬಾಮಾ ತಂದೆಯ ಮೂಲದಮನೆ ಸಿಗುತ್ತದೆ . ಕೃಷಿ ಮೂಲದ ಈ ಕುಟುಂಬ ದ ಅಜ್ಜಿ, ಚಿಕ್ಕಪ್ಪ ,ಮಾವ ಇವರನ್ನೆಲ್ಲ ಒಬಾಮಗೆ ಭೇಟಿ ಮಾಡಿದ. ಮೊಮ್ಮಗನನ್ನು ಮೊದಲ ಬಾರಿ ಭೇಟಿಯಾದ ಸಂಭ್ರಮ ಅಜ್ಜಿಯಲ್ಲಿ ಹೊಸ ಹುರುಪು ಮೂಡಿಸಿತ್ತು. ಕುಟುಂಬ ದ  ಸದಸ್ಯರು  ಒಬಾಮಾ ನನ್ನು   ‘’ಬ್ಯಾರಿ‘’  ಎಂದು ಪರಿಚಯ ಮಾಡಿಕೊಳ್ಳುವುದರಲ್ಲಿ ತೋರಿಸಿದ ಉತ್ಸಾಹ  ಸರಳ ಸಜ್ಜನಿಕೆಯನ್ನು  ಓದುವಾಗ  ಒಂದು  ಕ್ಷಣ ನನ್ನದೇ  ಹಳ್ಳಿಯ ತರವಾಡು ಮನೆಯನ್ನು  ಹೊಕ್ಕಾಡಿ ಸ್ಪರ್ಶಸಿ  ಬಂದ  ಭಾವ  ತುಂಬಿ  ಬಂತು. 

ಕೀನ್ಯಾ , ಭಾರತ,  ಅಮೇರಿಕಾ ಎಲ್ಲೇ ಇರಲಿ ನೆಲ,ಜಲ,ಪರಿಸರ ಜನ ಜೀವನ,ಕುಟುಂಬ ಸಮಾಜ ಈ ಎಲ್ಲವುಗಳ  ಒಟ್ಟು ಪರಿಣಾಮ ಒಳಿತು  ಕೆಡುಕುಗಳ  ಈ  ಹಗ್ಗ ಜಗ್ಗಾಟ. ಸೋಲು ಗೆಲುವು ಅನ್ನುವುದು ನಮ್ಮ  ಸಾಮರ್ಥ್ಯ ವನ್ನು ಅವಲಂಬಿಸಿ ಹೇಗೆ ಬದಲಾಗುತ್ತವೆ ಎನ್ನುವ ವಾಸ್ತವದ ಆತ್ಮಾವಲೋಕನ ಈ ಕೃತಿ ಮಾಡಿ  ಕೊಡುತ್ತದೆ. 

ಸಮಾಜದ ವಿವಿಧ ಆಯಾಮಗಳಲ್ಲಿ ನವ ವಸಾಹತುಷಾಹಿ ಜನ ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದರಿಂದ ಬಚಾವಾಗಲು ಇರುವ ಪರ್ಯಾಯ ಮಾರ್ಗಗಳು ಯಾವುವು ?ಪಿತೃತ್ವದ ಧೋರಣೆ ,ಲಿಂಗ ಅಸಮಾನತೆ, ವರ್ಣಭೇದ ಇತ್ಯಾ ದಿ ಛಾಯೆಗಳ  ನಿಟ್ಟುಸಿರು ಗಾಢವಾಗಿ  ಆಕ್ರಮಿಸುತ್ತಿರುವ  ಸರಿ ಹೊತ್ತಿನಲ್ಲಿ  ಕೆಲವು ಜೀವ ಚೈತನ್ಯದ ಕಿರು ಬೆಳಕು ನೀಡುವ ಕೆಲವು ಅಂಶಗಳು ಇಲ್ಲಿವೆ.ಜೀವನದ ಎಲ್ಲ ಋಣಾತ್ಮಕ ಅಂಶಗಳ ನಡುವೆ ನಾವೆಲ್ಲ ಜೊತೆಯಾಗಿ ಕಟ್ಟಬಹುದಾದ ಸಹ್ಯ ಬದುಕಿನ ಬಹುಮುಖ ಸಾದ್ಯತೆಗಳ ಹಲವು ನೋಟಗಳು ಈ ಕೃತಿಯ ಓದಿನ  ಮೂಲಕ ನಮಗೆ ದಕ್ಕುತ್ತದೆ. 

ಮಾನವಿಕ ಮತ್ತು ಕಾನೂನು  ಅಧ್ಯಯನ  ಓದುತ್ತ ಜನರ  ನಾಡಿ ಮಿಡಿತ  ಅರಿಯುವ ಕಮ್ಯುನಿಟಿ  ಸಂಘಟನೆಯಲ್ಲಿ ತೊಡಗಿಕೊಳ್ಳುವ  ಒಬಾಮಾನ ಆಯ್ಕೆಯ ಹಿನ್ನೆಲೆ ಯಲ್ಲಿಗ್ರಾಂಪ (ಅಮ್ಮನ ತಂದೆ)ನ ಕರಿಯ ಗೆಳೆಯ ಫ್ರಾಂಕ್ ನ  ಕಿವಿಮಾತುಗಳಿತ್ತು. ಒಬಾಮ ನಡೆದು ಬಂದ  ದಾರಿಯ  ಹಿನ್ನೋಟವಿತ್ತು. ಹಣ  ಸಂಪಾದನೆ ಯೊಂದೇ ಜೀವನದ  ಉದ್ದೇಶ ವಲ್ಲ  ಎನ್ನುವ ಸ್ಪಷ್ಟತೆಯಿದ್ದ  ಒಬಾಮ  ನನ್ನು  ಬಾಲ್ಯದಲ್ಲಿ ಹವಾಯಿ ಯಲ್ಲಿ  ಅಜ್ಜ ಅಜ್ಜಿ  ವರ್ಣ ಭೇದ ದಕಹಿ ತಟ್ಟದಂತೆ  ಪೋಷಿಸಿದರು . ಸಿಂಗಲ್ ಮದರ್ ತಾಯಿಯ  ಜೀವನ ಪ್ರೀತಿ ಸಂಸಾರ  ನಿರ್ವಹಣೆ ಯಲ್ಲಿ ಆಕೆ ಯ ಹೊಣೆಗಾರಿಕೆ  ಒಬಾಮಗೆ ಶಿಕ್ಷಣದ ಪ್ರತಿಹಂತದಲ್ಲೂ ಶ್ರಮಜೀವಿಯಾಗಿ  ದುಡಿದು ಕಲಿಯಲು ಪ್ರೇರಣೆಯಾಯಿತು.ಓದು  ಕೆಲಸ ಹಾರ್ವರ್ಡ್ ಲಾ ಕಾಲೇಜು  ವಾತಾವರಣ ,ಅಲ್ಲಿನ  ಲಾ  ಮ್ಯಾಗಜಿನ್ ನ  ಪ್ರಥಮ ಆಫ್ರಿಕನ್ ಅಮೇರಿಕನ್ ಅಧ್ಯಕ್ಷ ನಾಗಿ ಒಬಾಮ ಪಡೆದ  ಪ್ರಸಿದ್ಧಿ ಮುಂದಿನ ಜೀವನದ ಪ್ರಮುಖ ಹೆಜ್ಜೆಗಳನ್ನು ಇಡುವುದಕ್ಕೆ ಮಾರ್ಗದರ್ಶನವಾಯಿತು.

ಒಟ್ಟಾರೆಯಾಗಿ ಅಮೇರಿಕಾ ದ ಅತ್ಯಂತ ಕಿರಿಯ ಅಧ್ಯಕ್ಷನಾಗಿ ಒಬಾಮ  ಪಡೆದ ಮ್ಯಾನತೆ ನಂತರ ನೊಬೆಲ್ ಶಾಂತಿ ಪುರಸ್ಕಾರ  ಪಡೆಯುವಲ್ಲಿಯವರೆಗಿನ ಆತನ ಪಯಣದಲ್ಲಿ ಅವನಬದುಕಿನಲ್ಲಿ ಸುಳಿದು ಸುತ್ತಿದ ಪ್ರತಿಯೊಬ್ಬರ ಪಾತ್ರವೂ ಇದೆ.ಇವೆಲ್ಲದರ ಪರಿಣಾಮ ನಾವು  ಇಂದು ಕಾಣುವ ವಿನಮ್ರ ಸ್ಥಾಯಿ ಪ್ರಜ್ಞೆ ಯ ಬರಾಕ್ ಒಬಾಮ ಎನ್ನುವುದು ಈ ಕೃತಿಯಲ್ಲಿ  ನಮಗೆ ದಟ್ಟವಾಗಿ ಕಾಣಿಸುತ್ತದೆ. ಕಾಯಾ ವಾಚಾ ಮನಸಾ ಮಿಚೆಲ್ ಸಹಧರ್ಮಿಣಿಯಾಗಿ ಆತನ ಈ ಪಯಣದಲ್ಲಿ ಒದಗಿ ಬಂದ ರೀತಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತನ್ನ ಬದುಕಿನಲ್ಲಿ ಬಂದ ಸ್ರ್ತ್ರೀ ಪಾತ್ರಗಳು ಎನ್ನುವ ಗೌರವ ವಿನಮ್ರತೆ ಒಬಾಮ ನಲ್ಲಿರುವುದು ನಾವಿಲ್ಲಿ ಕಾಣ ಬಹುದು. ಇಂಡೋನೇಷ್ಯಾ ,ಭಾರತ,ಕೀನ್ಯಾ,ಅಮೇರಿಕಾ ಹೀಗೆ ಒಟ್ಟು ಜನಸಮುದಾಯಗಳ ನಾಡಿಮಿಡಿತವೂ ಈ ಕೃತಿಯ ಓದಿನಲ್ಲಿ ನಮಗೆ  ದಕ್ಕುತ್ತದೆ. ತಂದೆ ಯ ಕನಸಿನ  ಜೊತೆಗಿನ  ಬರಾಕ್ ಒಬಾಮಾನ  ಪಯಣ  ನಮ್ಮ ನಾಗರೀಕತೆ ಬೆಳೆದು ಬಂದ  ದಾರಿಯ ಹಿನ್ನೋಟವಾಗಿಯೂ ನಮಗೆ ಕಾಣುತ್ತದೆ. 

‍ಲೇಖಕರು Admin

14 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading