-ಮಂಜುಳಾ
ಮನದ ಅಲೆ
ಕಡಲ ದಂಡೆಯ ಮರಳತಡಿ
ಮರುಕಳಿಸಿ ಪುಟಿದೇಳುವ ಅಲೆಗಳು
ನಿನ್ನನ್ನೇ ಹೊತ್ತು ತರುತ್ತಿವೆ
ಮನದಾಳದಿಂದೆದ್ದ ಭಾವನೆಗಳ
ರಂಗು ಅನಂತಾಗಸದಿ ಎರಚಿ
ಬಣ್ಣದ ಭಾವಗಳಾಗಿ ಜಿನುಗುತ್ತಿವೆ
ಎದ್ದ ದೊಡ್ಡ ಅಲೆಯೊಂದು
ಪಾದ ನೇವರಿಸಿ ಮರಳ ತೇವವಾಗಿಸಿ
ಮರಳಿ ಕಡಲ ಮಡಿಲಲ್ಲಿ ಲೀನವಾಯ್ತು
ಥೇಟ್! ನಿನ್ನೆಡೆಗೆ ಏಳುವ ಭಾವಗಳು
ಮನದ ನೆಲದ ಹಸಿಯಾಗಿಸಿ
ನಾ ಕಂಪಿಸುವ ಹಾಗೆ
ಕೈಯಲ್ಲಿ ಹಿಡಿದ ಮರಳು ಹಸಿಯಾಗಿದೆ
ಮರಳ ಗೂಡ ಕಟ್ಟಲು
ಪುಷ್ಟಿಯಾಗಿರುವಂತೆ
ತೀರದಿ ಸಂಜೆ ಇಳಿದಿದೆ
ಅಲೆಗಳು ಕಡಲ ಸುತ್ತುವುದು
ಸೃಷ್ಟಿ ನಿಯಮವೆಂಬತೆ ಮುಂದುವರೆದಿದೆ
ನಿನ್ನೆಡೆಗೆ ನನ್ನ ಭಾವಪ್ರಹಸುವಿಕೆಯೂ
ಸೃಷ್ಟಿ ನಿಯಮವೇ! ನಾ ಪ್ರಯತ್ನಿಸುತ್ತಿಲ್ಲ
ಸಹಜವಾಗಿ ನನ್ನೊಳಗೆ ಮಿಳಿತಗೊಂಡ ನೀನು
ಕಡಲ ಅಲೆಯಷ್ಟು ಸಹಜವಾಗಿ
ಮನದ ಪ್ರತಿ ಭಾವದ ಅಲೆಯಲ್ಲೂ
ನಿನ್ನ ಪ್ರಹವಿಸುವಿಕೆ…!






0 Comments