-ಡಾ.ಪ್ರಹ್ಲಾದ ಡಿ.ಎಂ
ಕಾರ್ಫೋರೇಟ್ ತತ್ವಮಸಿ
ನಾ ಹಳ್ಳಿಯ ಫಕೀರ
ನೀ ಸಮುದ್ರದ ಮತ್ಸಗಂಧಿ
ನೀ ನೀರು ಕುಡಿದು ಬದುಕುವೆ
ನಾ ಗಾಳಿ ಸೇವಿಸಿ ಜೀವಿಸುವೆ
ಇಬ್ಬರಿಗೂ ಬಂದಿದ್ದು ಒಂದೇ ಕಾಯಿಲೆ
ಕ್ಯಾನ್ಸರ್, ಟಿ.ಬಿ, ಲಂಗ್ಸ್ ಡ್ಯಾಮೆಜ್…
ಇದು ಹೇಗೆ ಸಾಧ್ಯ ಎಂದು ಕೇಳಿದೆ ?
ಮತ್ಸಗಂಧಿ ನಕ್ಕು ಹೇಳಿದಳು
ನಾವಿಬ್ಬರು ಸೇವಿಸಿದ್ದು ಮಾರಿಯಂತಿರುವ
ಆ ನಿಮ್ಮೂರ ಕಾರ್ಖಾನೆಯ ಧೂಳಿನ
ಕಣವೇ ಪ್ರಿಯ ಸಖ ಎಂದು!.
ನಾ ಕುರಿ ಕಾಯುವ ಬೀರ
ನೀ ದನ ಕಾಯುವ ಬೆನಿಯ
ನಾವಿಬ್ಬರು ನೀರಿಗಾಗಿ ನಮ್ಮ ಪುರಾತನ
ಕಾಲದ…
ಕೆರೆ, ಕಟ್ಟೆ, ಬಾವಿ, ಹಳ್ಳ ಹುಡುಕುತ್ತ ಅಲೆದರೆ
ಇವುಗಳಿಗೆಲ್ಲ ಗೋಡೆಕಟ್ಟಿ
‘ಇಲ್ಲಿ ಮನುಷ್ಯರಿಗೆ ಪ್ರವೇಶವಿಲ್ಲವೆಂಬ’
ದ್ವಾರ ಪಾಲಕರ ರಾಜಾಜ್ಞೆ…
ನಮ್ಮ ನೆಲ ನಮ್ಮ ಜಲವೆಂದು ಕಿರುಚಿದರು
ಕಪ್ಪನೆ ಹೊಗೆಯಲ್ಲಿ ಹಾಕಿ ಗುರುತೆ ಸಿಗದಂತೆ ಮಸಿ ಮಾಡಿದರು.
ನಾ ದೊಂಬರ ಸಿದ್ಧ
ನೀ ಹೊಲೆಯರ ಚೆನ್ನಿ
ಇಬ್ಬರು ಕೂಡಿ ಹೊರೆಟೆವೂ ಪುರಾತನ ಕಾಡಿಗೆ
ಆಹಾರ ಹುಡುಕುತ್ತ, ಜೇನನು ಬಿಡಿಸುತ್ತ,
ಕೌಜುಗವ ಹೊಡೆಯುತ್ತ,
ನಿನ್ನ ಪ್ರೀತಿಯ ಅಪ್ಪುಗೆಗಾಗಿ
ಕಾಡೆಲ್ಲ ತಿರುಗಿ ಶೌರ್ಯವ ಮೆರೆಯುತ್ತ.
ಆದರೇ ಇಂದು ನನ್ನ ಪೂರ್ವಜರ
ಕಾಡಿಗೆಲ್ಲ ಕಾಪೌಂಡ್ ಕಟ್ಟಿ
ಕಪ್ಪು ಮಸಿ ಉಗುಳುವ ಯಂತ್ರಗಳನ್ನು
ತುಂಬಿರುವರು…
ನೋಡಿದ ಚೆನ್ನಿ ನುಡಿದಳು
‘ಇದೇನೂ ಇವರಪ್ಪನ ಅಸ್ತಿಯೇ’ ಎಂದು.
ದೂರದ ಗೋಡೆಗಳ ಮೇಲೆ ಶಿಲೆಗಳು
ಕಣ್ಣಾರಳಿಸಿ ‘ಇಲ್ಲಿ ಮನುಷ್ಯರು ಜೀವಿಸಲು
ಯೋಗ್ಯವಾದ ಸ್ಥಳ ಅಲ್ಲವೆಂದು’ ನಸು ನಕ್ಕಿದವು.
ಅಕ್ಕ ನೀ ತುಂಗೆ, ನಾ ಭದ್ರೆ
ನಾವಿಬ್ಬರು ಗಿರಿ ಪರ್ವತಗಳಿಂದ
ಹನಿ ಹನಿ ಕೂಡಿಸಿಕೊಂಡು
ಕೂಡಿದ್ದೆ ತುಂಗಭದ್ರೆ ಆಗಿ ನಿಂತೆವು.
ಅಂದಿನ ರಾಜ ನಮ್ಮಿಬ್ಬರಿಗೆ ನಮಿಸಿ
‘ಇಲ್ಲಿ ಮನುಷ್ಯತ್ವವಿದೆ ನಿಲ್ಲಿ ಎಂದು’
ಇಬ್ಬರನ್ನು ತಡೆದನು.
ಆಗ ಇಲ್ಲಿ ನಮ್ಮನ್ನು ಮನೆ ಮಗಳಂತೆ ಕಂಡರು.
ನಾವಿಬ್ಬರು ಜೊತೆಗೂಡಿ
ಹೊಲ ಗದ್ದೆಗಳಲ್ಲಿ ಕುಣಿದಾಡಿ
ಮಾತೃ ವಾತ್ಸಲ್ಯದ ಎದೆ ಹಾಲು ಉಣಿಸಿದೆವು.
ಆದರೆ ಇಂದು ನಮ್ಮ ಎದೆ ಹಾಲಿಗೆ
ವಿಷ ಉಣಿಸಿದರು ಕಾರ್ಫೋರೇಟ್‌ಗಳು.
ಚೋಮನ ಮಕ್ಕಳು ಹೀಗೀಗಾ
ಆಕ್ಷರ ಕಲಿತಿದ್ದಾರೆ.
ಇಂದು ಚೋಮ
‘ಗೇಣು ಭೂಮಿ ಮಾರಿಯಾದರೂ
ಮಕ್ಕಳನ್ನು ನೌಕರಿಗೆ ಸೇರಿಸುವ ಕನಸು’ ಕಾಣುತ್ತಿದ್ದಾನೆ.
ನಮ್ಮೂರ ತೈನಾತಿ ಡಂಗುರ ಸಾರಿದ
‘ನೀವು ಭೂಮಿ ಕೊಟ್ಟರೇ
ನಿಮ್ಮ ಮಕ್ಕಳಿಗೆ ಉದ್ಯೋಗವೆಂದು’
ದೂರದಿ ನಿಂತು ಕೇಳಿದ ಚೋಮ ನಿಜವೆಂದು ತಿಳಿದು
ಮರುದಿನವೇ ಭೂಮಿಕೊಟ್ಟು
ಚೋಮ ‘ಉದ್ಯೋಗ ಸ್ವಾಮಿ ಎಂದ’
ತೈನಾತಿ ನಕ್ಕು ಹೇಳಿದ
‘ಭೂಮಿ ಪಡೆಯುವುದು ಮಾತ್ರ ನನ್ನ ಕೆಲಸ
ಉದ್ಯೋಗ ಕಾರ್ಫೋರೇಟ್ ನಿರ್ಧಾರವೆಂದು’
ಚೋಮ ನೆಲಕ್ಕೆ ಕುಸಿದ.
ಇಂದು ತನ್ನ ಹೊಲದಲ್ಲಿ ನಿಂತ
ಮಿಷಿನ್‌ಗಳ ಹೊಗೆಯನ್ನು
ಕುಡಿದು ಕುಡಿದು ದುಡಿ ಬಾರಿಸಲು ಶಕ್ತಿಯಿಲ್ಲದೆ
ಮೂಲೆ ಹಿಡಿದಿದ್ದಾನೆ.
ಚೋಮನ ಅರೋಗ್ಯ ಕಾಪಾಡಲು
ಗುರುವ, ಚೆನಿಯ, ಬೆಳ್ಳಿ ಗುಳೆ ಹೊರಟು ನಿಂತಿದ್ದಾರೆ.
ಅದನ್ನು ನೋಡಿದ ದ್ವಾರ ಪಾಲಕರು
ಯಾರಿಗೋ ಕರೆಮಾಡಿ ನಕ್ಕು ನಕ್ಕು ಬೀಗುತ್ತಿದ್ದಾರೆ.
ಗೋಡೆ ಮೇಲೆ ‘ಸ್ಥಳಿಯರಿಗೆ ಉದ್ಯೋಗವಿಲ್ಲವೆಂದು’
ಸುಗ್ರೀವಾಜ್ಞೆಯಾಗಿದೆ ಎಂಬ
ಅಸ್ಪಷ್ಟ ಚಿತ್ರ ಹರಿದಾಡುತ್ತಿದೆ.
ಇಂದು ಮಾತ್ರ ಚೋಮನ ಕನಸು
ಕನಸಾಗಿಯೇ ಉಳಿದಿದೆ.
ಏಕೆಂದರೆ…
ಇಲ್ಲಿ ಮನುಷ್ಯತ್ವವಿಲ್ಲದ ರಾಜನಿದ್ದಾನೆ||






0 Comments