ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ

-ಕೆ ರಾಜಕುಮಾರ್

ಅಮರ ಗಾಯಕಿ ಎಸ್. ಜಾನಕಿ ಅವರಿಗೆ ನುಡಿತರ್ಪಣ:
ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ

ಇದು ಎಲ್ಲ ಕಾಲದ ಹಾಡು! ನೀವು ಓದಿದರೆ ಸಂತೋಷ; ನನಗೂ, ನಿಮಗೂ ಏಕಕಾಲಕ್ಕೆ!

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ:

ಸರಳವಾದ ನಾಲಿಗೆ ನುಲಿಗೆ (TONGUE TWISTERಗೆ) ಪುಟ್ಟಣ್ಣ ಕಣಗಾಲ್ ನಿರ್ದೇಶನದ ಉಪಾಸನೆ ಚಿತ್ರದ ಈ ಜನಪ್ರಿಯ ಗೀತೆಯ ಮೊದಲ ಎರಡು ಸಾಲು ಉದಾಹರಣೆ. ಇವು ರ ಅಕ್ಷರ ಹೊರಳಿಸಲು ನಾಲಿಗೆಗೆ ನೆರವಾಗುತ್ತವೆ. ರ ಕೆಲವು ಮಕ್ಕಳ ನಾಲಿಗೆಯು ಸುಲಭವಾಗಿ ಉಚ್ಚರಿಸಲು ಸಾಧ್ಯವಾಗದ ಅಕ್ಷರ.

ಈಗ ನೇರವಾಗಿ ಈ ಗೀತೆಯ ಕುರಿತು ಗಮನಹರಿಸೋಣ.‌ ಅರ್ಧ ಶತಮಾನಕ್ಕೂ ಹಿಂದಿನಿಂದ ಕೇಳಿ, ಕೇಳಿ ಪರವಶವಾಗುತ್ತಿರುವ ಕನ್ನಡ ಹಾಡಿದು. ಬಹುತೇಕ ಸಂಸ್ಕೃತ ಪದಗಳೇ ತುಂಬಿರುವ ರಚನೆಯಿದು. ಆದರೆ ಎಲ್ಲೂ ಹಾಗನಿಸದು. ಕವಿ ವಿಜಯನಾರಸಿಂಹ ಅವರ ಈ ರಚನೆಗೆ #ರಾಷ್ಟ್ರಕವಿಕುವೆಂಪುಅವರೇ_ತಲೆದೂಗಿದ್ದರು. ಚಿತ್ರಗೀತೆಯೂ ಸಹ ಈ ರೀತಿ ಶ್ರೇಷ್ಠಮಟ್ಟದ ಪದ ಮತ್ತು ಸ್ವರ ಸಂಯೋಜನೆ ಪಡೆದು ಎತ್ತರಕ್ಕೆ ಜಿಗಿಯಬಲ್ಲದು ಎಂದು ಕುವೆಂಪು ಅವರಿಗೆ ಮನವರಿಕೆ ಮಾಡಿಸಿದ ಗೀತೆಯಿದು. ಇದರಲ್ಲಿನ ನಾದಬ್ರಹ್ಮನ ಓಂಕಾರನಾದದಂತಹ ಆಧ್ಯಾತ್ಮಿಕ ವಿಚಾರಸ್ಪರ್ಶವಿರುವ ಸಾಲು ಕುವೆಂಪುರವರ ಗಮನ ಸೆಳೆದಿತ್ತು. ಈ ಗೀತೆ ಬಂದಂದಿನಿಂದ ಕನ್ಯಾಕುಮಾರಿ ದೇಗುಲದಲ್ಲಿ ಪ್ರತಿದಿನವೂ ಅನುರಣಿಸುತ್ತಲೇ ಇದೆ. ಇದನ್ನು ಆಲಿಸಿದಾಗ ಅಮರತ್ವ ಲಬ್ದಿಗೆ ಗಾನವೆ ಸೋಪಾನ ಎಂಬ ಮಾತು ನೆನಪಾಗುತ್ತದೆ.

ಕನ್ಯಾಕುಮಾರಿಯಲ್ಲಿ ‘ಶ್ರೀ ವಿವೇಕಾನಂದ ಶಿಲಾ ಸ್ಮಾರಕ’ ನಿರ್ಮಾಣವಾದದ್ದು 1970ರಲ್ಲಿ. 1973ರಲ್ಲಿ ಅಲ್ಲಿಗೆ ಹೋಗಿ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರ: ಉಪಾಸನೆ. ಬಿಡುಗಡೆ 1974ರಲ್ಲಿ. ಭಾರತೀಯರ ಧಮನಿ-ಧಮನಿಯಲ್ಲಿ ದೇಶಪ್ರೇಮ, ಧರ್ಮಪ್ರೇಮವನ್ನು ಮಿಡಿಸುವಂತಹ ಆ ಭವ್ಯ ಸ್ಮಾರಕ ನಿರ್ಮಾಣದ ಮೊದಲ ಹಂತದ ನೋಟ ಈ ಹಾಡನ್ನು ತೆರೆಯ ಮೇಲೆ ವೀಕ್ಷಿಸುವಾಗ ಲಭ್ಯ!

ಈ ಗೀತೆ ಸಾರಮತಿ (ಚಾರುಮತಿ) ರಾಗವನ್ನಾಧರಿಸಿದೆ. ಸನ್ನಿವೇಶದ ಭಾವತೀವ್ರತೆಯನ್ನು ಸೃಷ್ಟಿಸಲು ಅತ್ಯಂತ ಸಮರ್ಥವಾಗಿದೆ. ವೀಣೆ ಮತ್ತು ಮೃದಂಗದ ದನಿ ದಿವ್ಯಾನುಭೂತಿ ಉಂಟುಮಾಡುತ್ತದೆ. ಎಪ್ಪತ್ತರ ದಶಕದಲ್ಲಿ ಹಾಡಲು ಬರಲಿ, ಬರದಿರಲಿ ಎಲ್ಲೆಲ್ಲೂ ಇದರದೇ ಚಮಕ್, ಇದರದೇ ದಮಕ್. ಈ ಹಾಡು ಬಂದ ಮೇಲೆ‌ ಇದರದೇ ಹವಾ. ಇದರದೇ ಜಾದು. ಹೆಣ್ಣು ನೋಡಲು ಬಂದಾಗಲೂ ಇದೇ ಹಾಡನ್ನು ಹಾಡಿಸುವಷ್ಟರ ಮಟ್ಟಿಗೆ ಇದು ಜನಮನವನ್ನು ಆವರಿಸಿಕೊಂಡಿತ್ತು.‌ ಶಾಲಾ, ಕಾಲೇಜುಗಳ ಚಿತ್ರಗೀತೆ ಅಥವಾ ಭಕ್ತಿಗೀತೆಗಳ ಸ್ಪರ್ಧೆಯಿರಲಿ, ಅಂತ್ಯಾಕ್ಷರಿ ಆಟವಿರಲಿ ಇದರದೇ ಗುನುಗು, ಇದರದೇ ಪುನುಗು. ಪ್ರವಾಸ, ತೀರ್ಥಯಾತ್ರೆಯ ನಡುವೆಯೂ ಇದರದೇ ಕುಕಿಲು, ಇದರದೇ ಕುಹೂ ಕುಹೂ. ಬಚ್ಚಲಿನಲ್ಲೂ ಈ ಹಾಡಿನದೇ ಆಲಾಪ. ಬಾಯಲ್ಲೇ ವೀಣೆಯ ದನಿಯನ್ನೂ ಬಿಡದೆ ಹಾಡುವವರೂ ಇದ್ದರು! ಈ ಚಿತ್ರಕ್ಕೆ ವೀಣೆ ನುಡಿಸಿದ ಶ್ಯಾಮಲಾ ಸ್ವಾಮಿ ಅವರಿಗೆ ಸಾಮಾನ್ಯರು ಸಹ ವೀಣೆಯ ಪಲುಕುಗಳನ್ನು ಬಾಯಲ್ಲೇ ಹೊರಡಿಸುತ್ತಿದ್ದದ್ದು ಸಂತಸ ಮತ್ತು ಅಚ್ಚರಿಯನ್ನು ಏಕಕಾಲಕ್ಕೆ ತಂದಿತ್ತು.

ಗಾಯಕ, ಲೇಖಕ, ಸಂಗೀತ ನಿರ್ದೇಶಕ, ಚಿತ್ರ ನಿರ್ದೇಶಕರ ಅದ್ಭುತ ಅರ್ಥಪೂರ್ಣ ಸಮಾಗಮ. ವಿಜಯನಾರಸಿಂಹ ಅವರು ಹಿಂದೂ ಮಹಾಸಾಗರವನ್ನು ಧೇನಿಸಿ ರಚಿಸಿದ ಅನನ್ಯ ಗೀತೆ. ವಿಜಯಭಾಸ್ಕರ್ ಅವರ ಸ್ವರ ಸಂಯೋಜನೆ ಎದೆಯ ಭಾವವನ್ನು ಮೊಗೆಮೊಗೆದು ಕೊಡುತ್ತದೆ. ಇದನ್ನು ಕೇಳುವಾಗ ನಮಗೆ ಪ್ರಿಯವಾದ ಬೇರೆ ಯಾವ ಗೀತೆಯೂ ನೆನಪಿಗೆ ಬಾರದು. ಇದರದೇ ಗುಂಗು, ಇದರದೇ ಗುನುಗು. ಬೇರೆಯದನ್ನು ಸ್ಮೃತಿಯ ಸನಿಹಕ್ಕೂ ಸುಳಿಯಗೊಡದು. ಅಂತಹ ಅಯಸ್ಕಾಂತ ಶಕ್ತಿ ಇದರದು. ಅಂತಹ ತಾದಾತ್ಮ್ಯದ, ತಲ್ಲೀನ ಭಾವದ ಸೃಜನೆ ಈ ಗೀತೆಯದು.

ಗಾಯಕಿ ಎಸ್. ಜಾನಕಿಯವರು ಈ ಹಾಡನ್ನು ಹಾಡಲೆಂದೇ ಹುಟ್ಟಿಬಂದರೇನೋ ಎಂಬಂತೆ ತನುತುಂಬಿ, ಮನತುಂಬಿ, ಚಿತ್ತಚೇತನ ತುಂಬಿ ಹಾಡಿದ್ದಾರೆ. ಅವರದು ಬಣ್ಣನೆಗೆಟುಕದ ಭಾವಪರವಶಗೊಳಿಸುವ ಗಾಯನ. ಗೀತೆಯೊಂದರ ಅಕ್ಷರ, ಅಕ್ಷರವನ್ನೂ ಹೆಣೆಯುವ ಕಸೂತಿ ಕಲೆ ಗೀತರಚನಕಾರರದು. ಅದಕ್ಕೆ ಸ್ವರ-ಸ್ವರ ಬೆಸೆದು ಹಾಡಾಗಿಸುವವರು ಸಂಗೀತ ನಿರ್ದೇಶಕರು. ಅದಕ್ಕೆ ಜೀವ ತುಂಬಿ ಭಾವದ ಹೊನಲಾಗಿಸುವವರು ಜಾನಕಿಯಂತಹ ಸುಮೇರು ಗಾಯಕರು. ದೇವಿಯನ್ನು ಧೇನಿಸುತ್ತ, ತನ್ನ ಆಂತರ್ಯದಲ್ಲೇ ವಿಷಾದ ಭಾವವನ್ನು ಸೂಸುವ ಗೀತೆಯಿದು. ರಾಗಾನುರಾಗಗಳು ಎಂದೂ ವಿಸ್ಮೃತಿಗೆ ಸಂಬಂಧಿಸಿದ್ದು ಅಲ್ಲವಲ್ಲ. ಗಾನಸರಸ್ವತಿ ನಿವಸಿಸಲು ಸೂಕ್ತ ತಾಣ ಹುಡುಕಿ, ಹುಡುಕಿ ಕಡೆಗೆ ಜಾನಕಿಯವರ ಶಾರೀರಕ್ಕಿಂತ ಉತ್ತಮ ಸ್ಥಳ ಸಿಗದೆಂದು ಅಲ್ಲೇ ನೆಲೆಗೊಂಡಳೇನೋ ಎಂದು ಭಾವಿಸುವಂತಿದೆ. ಅಷ್ಟು ಪರಿಪಕ್ವ ಗಾಯನ. ಆ ಸಂಗೀತ ಶಾರದೆಗೆ #ಅಕ್ಷರದ #ಅಭ್ಯುತ್ಥಾನ ಗೌರವ (STANDING OVATION OF LETTERS) ಸಲ್ಲಲೇಬೇಕು. ಆಭೇರಿ ರಾಗದಲ್ಲಿ “ಸಿಂಗಾರ ವೇಲನೆ ದೇವ” ಎಂದ ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ.

ಈ ಚಿತ್ರ ಬಂದ ಮೂರು ವರ್ಷದ ಅನಂತರ ಜಾನಕಿ ಅವರು ಹೇಮಾವತಿ ಚಿತ್ರಕ್ಕಾಗಿ ಎಲ್. ವೈದ್ಯನಾಥನ್ ಅವರ ಸಂಗೀತ ನಿರ್ದೇಶನದಲ್ಲಿ “ಶಿವ ಶಿವ ಎನ್ನದ ನಾಲಿಗೆ ಏಕೆ?” ಹಾಡನ್ನು ಹಾಡಿದರು. ಅತ್ಯಂತ ಸಂಕೀರ್ಣ ಸಂಯೋಜನೆ. ಅಭೋಗಿ ಮತ್ತು ಅಭೋಗಿತೋಡಿ ಈ ಎರಡು ರಾಗಗಳ ಸಂಕೀರ್ಣ ಬೆಸುಗೆ. ವೃತ್ತಿ ಜೀವನದಲ್ಲಿ ತಮಗೆ ಅತ್ಯಂತ ಸವಾಲು ಒಡ್ಡಿದ ಹಾಡಿದು ಎಂದು ಅವರು ಹೇಳುತ್ತಾರೆ. ಆದರೆ ಕನ್ನಡದ ಅಖಂಡ ಜನಮಾನಸಕ್ಕೆ ಪ್ರಿಯವಾದದ್ದು ಭಾರತ ಭೂಶಿರ ಮಂದಿರ ಸುಂದರಿ ಗೀತೆ.

ಜಾನಕಿಯವರು ಏರುದನಿಯಲ್ಲೂ ಶ್ರುತಿತಪ್ಪದೆ, ರಚನೆಯ ಎಲ್ಲ ಸಾಧ್ಯತೆಗಳನ್ನೂ ಕಂಠದಲ್ಲಿಯೇ ಕಂಡರಿಸಿ, ಸಾಹಿತ್ಯವನ್ನು ಸ್ಪಷ್ಟವಾಗಿ ಉಚ್ಚರಿಸುವ ಅಸಾಮಾನ್ಯ ಗಾಯಕಿ. ಗಾಯನದ ಸಂದರ್ಭದಲ್ಲಿ ಅವರು ಕಂಬದ ಹಾಗೆ ಮೈಕಿನ ಮುಂದೆ ನಿಲ್ಲುವ ಭಂಗಿ‌ ಜನಜನಿತ. ಲತಾ ಮಂಗೇಶ್ಕರ್ ಸಹ ಅಂತೆಯೇ. ಆಂಗಿಕ ಚಲನೆಯೇ ಕಾಣದು. ಇಬ್ಬರೂ ವೇದಿಕೆಯ ಮೇಲಿನ ಚಿತ್ತಾರಗಳೇ; ಸ್ತಬ್ಧ ಚಿತ್ರಗಳೇ! ಆದರೂ ಹಾಡುವ ಗೀತೆಗಳಿಗೆ ಭಾವ-ಬಣ್ಣವನ್ನು ತುಂಬುತ್ತಿದ್ದ ಪರಿ ಅನನ್ಯ.

ಇದೇ ಉಪಾಸನೆ ಚಿತ್ರದಲ್ಲಿ ಅಳವಡಿಸಲ್ಪಟ್ಟ ಪುರಂದರದಾಸರ ರಚನೆ “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎಂಬ ಹಾಡು ಸಹ ಸಾರಮತಿಯ ಛಾಯೆಯಿಂದ ಪುನೀತಗೊಂಡಿದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್, ಸಂಗೀತ ನಿರ್ದೇಶಕ ವಿಜಯಭಾಸ್ಕರ್, ಗೀತರಚನೆಕಾರ ವಿಜಯನಾರಸಿಂಹ, ಎಸ್. ಜಾನಕಿ ಅವರಂತಹ ದಿವ್ಯ ಪ್ರತಿಭೆಗಳ ರಸಸಂಗಮವನ್ನು ಕನ್ಯಾಕುಮಾರಿ ಕುರಿತಾದ ಈ ಗೀತೆಯಲ್ಲಿ ಕಾಣಬಹುದು. ಈ ಹಾಡಿಗೆ ಇದೀಗ 52ರ ನಡುವಯಸ್ಸು.‌ ಅರ್ಧ ಶತಮಾನ ಕ್ರಮಿಸಿದರೂ ಈ ಗೀತೆ ಹದಿಹರೆಯದ ಉತ್ಸಾಹ-ಹುಮ್ಮಸ್ಸನ್ನು ಇನ್ನೂ ಉಳಿಸಿಕೊಂಡಿದೆ. ಇಂತಹ ಹಾಡುಗಳೇ ನಮ್ಮ ಗಾನಪರಂಪರೆಯ ಬಲಿಷ್ಠ ಕೊಂಡಿಗಳು. ಭಾವನೆಗಳ ರಸಾಭಿವ್ಯಕ್ತಿಗೆ ಸಂಗೀತ ಹೇಗೆ ಮಾಧ್ಯಮ ಆಗಬಹುದು ಎಂಬುದನ್ನು ಇಂತಹ ಗೀತೆಗಳು ದೃಢಪಡಿಸುತ್ತವೆ. ಅಂತರಂಗದಲ್ಲಿ ಮಡುಗಟ್ಟಿ ನಿಂತಿರುವ ನೋವು ಹಾಡಾಗಿ ಹರಿದು ಮನವನ್ನು ನಿರುಮ್ಮಳವಾಗಿಸಿ ಸಂಗೀತಕ್ಕಿರುವ ಚಿಕಿತ್ಸಕ ಗುಣವನ್ನು ಸಾಬೀತುಪಡಿಸುತ್ತವೆ.

ಒಂದು ಮಾತು. ಈ ಹಾಡು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವಂತಹುದು. ಸಾಮಾನ್ಯವಾಗಿ ಕ್ಲೈಮ್ಯಾಕ್ಸ್ ಎಂದರೆ ಒಂದು ಹೊಡೆದಾಟ/ಫೈಟಿಂಗ್ ಇರಲೇಬೇಕೆನ್ನುವ ಚಿತ್ರರಂಗದ ಪೂರ್ವನಿರ್ಧಾರಿತ ನಿಲುವನ್ನು ಹಾಡಿನ ಮೂಲಕ ತೊಡೆದು ಹಾಕಿದ ಗೀತೆಯಿದು.

ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ
ಎಂಬಂತಹ ಸಾಲುಗಳು ಸಮರ್ಥವಾಗಿ ಆ ಕೆಲಸವನ್ನು ನಿರ್ವಹಿಸಿವೆ.‌ ಅಲೆಗಳ ಉಬ್ಬರವಿಳಿತದಲ್ಲಿ ಹೊಯ್ದಾಡುತ್ತ ಬರುವ ದೋಣಿ, ಅದರಲ್ಲಿನ ಪಯಣಿಗರ ಆತಂಕ ತುರೀಯ ಸನ್ನಿವೇಶದಲ್ಲಿ ಅಂದರೆ ಕ್ಲೈಮ್ಯಾಕ್ಸ್‌ನಲ್ಲಿ ಬೇಕಾದ ಭಾವತೀವ್ರತೆಯನ್ನು ಸೃಷ್ಟಿಸುತ್ತವೆ.

ಮತ್ತೊಂದು ಮಾತು. ಈ ಹಾಡು ಭಾವತೀವ್ರತೆಯಿಲ್ಲದೆ ಚಿತ್ರದ ನಡುವೆಯೂ ಒಮ್ಮೆ ಬರುತ್ತದೆ. ಬಾಣಂತಿ ಸಾರಿನಂತೆ ಅದರ ಸ್ವಾದ. ಆದರೆ ಕಡೆಯಲ್ಲಿ ಬರುವ ಇದೇ ಹಾಡು ಕೇಳುಗರ ಪಾಲಿಗೆ ರಸಗವಳ. ಹಾಗಾಗಿ ಆರತಿಯವರ ಸಂಯಮ ಮತ್ತು ಭಾವತಪ್ತ ಅಭಿನಯಕ್ಕೆ ಎರಡು ಅವಕಾಶಗಳನ್ನು ಒದಗಿಸಿಕೊಟ್ಟಿದೆ.

ವಿಜಯಭಾಸ್ಕರ್ ಪ್ರಯೋಗಶೀಲರು. ಅವರೇ ಸಂಯೋಜಿಸಿರುವ ಮಲಯಮಾರುತ ಚಿತ್ರದ “ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ” ಗೀತೆ ಸಹ ಸಾರಮತಿ ರಾಗಾಧಾರಿತವೇ. ಭಾರತ ಭೂಶಿರ ಮಂದಿರ ಸುಂದರಿ ಗೀತೆಯ ರಾಗಸಂಯೋಜನೆ ಅವರ ಸುಮೇರು ಸೃಷ್ಟಿ. ಇಂದಿಗೂ ಕೇಳುಗರ ಮೈಮನಗಳನ್ನು ರೋಮಾಂಚನಗೊಳಿಸುವ ಗೀತೆಯಿದು. ಭಾರತೀಯ ಚಲನಚಿತ್ರ ಗೀತೆಗಳ ಪೈಕಿ ಚಿರಸ್ಥಾಯಿಯಾಗಿ ಉಳಿಯಬಲ್ಲ ಕೆಲವು ಹಾಡುಗಳಲ್ಲಿ ಇದೂ ಒಂದು.

ಜೀವಜೀವದ ಸ್ವರಸಂಚಾರ, ಅಮೃತಚೇತನ ರಸಧಾರ ಎಂದು ವಿಜಯನಾರಸಿಂಹ ಅವರೇ ತಮ್ಮ ಇನ್ನೊಂದು ಗೀತೆಯಲ್ಲಿ ಪ್ರೇಮಕ್ಕೆ ನಿರ್ವಚನ ಬರೆದಿದ್ದಾರೆ. ಇದೇ ವ್ಯಾಖ್ಯೆ ಸಂಗೀತಕ್ಕೂ ಅನ್ವಯಿಸುತ್ತದೆ. ಸಂಗೀತವೆಂಬುದು ಒಂದು ರೋಗನಿವಾರಕ ಚಿಕಿತ್ಸೆ. ಈ ಕುರಿತಾಗಿ ನಡೆದ ಸಂಶೋಧನೆಗಳು ಇದನ್ನು ದೃಢಪಡಿಸಿವೆ. ಮನಸ್ಸನ್ನು ನಿರಾಳವಾಗಿಸಿ ದುಗುಡ, ಆತಂಕಗಳನ್ನು ನೀಗಿ ಚೈತನ್ಯದಾಯಕವಾಗಿಸುವ ಸಂಜೀವಿನಿ ಶಕ್ತಿ ಅದಕ್ಕಿದೆ.

ಒಮ್ಮೆ ತದೇಕಚಿತ್ತದಿಂದ “ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ” ಎಂದು ನಿಮಗೆ ನೀವೇ ಗುನುಗಿಕೊಳ್ಳಿ. ಅದು ಕೋಟಿ ಕೋಟಿ ಕಂಠ ಕಲಕಲ ನಿನಾದವಾಗುತ್ತದೆ. ಕನ್ಯಾಕುಮಾರಿಗೆ ಮತ್ತೊಮ್ಮೆ ಹೋಗಿಯೇಬಿಡೋಣ ಎನಿಸುತ್ತದೆ. ಇದನ್ನು ಕೇಳಿ, ಓದಿ ಹೋಗಿಬಂದವರು ಇದ್ದಾರೆ! ಅದು ಈ ಹಾಡಿನ ಅಂತಃಶಕ್ತಿ. ಹೊರಡಲ ಅನುವಾದವರಿಗೆ ಒಂದು ಶುಭಹಾರೈಕೆ. ಇದ್ದಲ್ಲೇ ಇದ್ದು, ಹಾಡಿನಲ್ಲೇ ‘ನೋಡಿಬಂದ’ ಖುಶಿ ಅನುಭವಿಸಿದವರಿಗೆ ಶ್ರದ್ಧಾಭಕ್ತಿಯ ನಮನ.

ಏಳು ಕನ್ನಡ ಪದಗಳು ಉಳಿದವು ಸಂಸ್ಕೃತ ಪದಗಳು:

ವಿಜಯನಾರಸಿಂಹ ಅವರ ರಚನೆಯ ಈ ಹಾಡಿನಲ್ಲಿ ಇರುವ ಕನ್ನಡ ಪದಗಳು ಎಷ್ಟು ಎಂಬ ಪ್ರಶ್ನೆ ಏಳುತ್ತದೆ. ನಾಲ್ಕೇ ಪದಗಳು ಎಂದು ತೇಲಿಸಿ ಹೇಳುವವರುಂಟು. ಇದರಲ್ಲಿರುವುದು ನಾಲ್ಕಲ್ಲ; ಏಳು ಕನ್ನಡ ಪದಗಳಿವೆ. ಉಳಿದವೆಲ್ಲ ಸಂಸ್ಕೃತ ಪದಗಳು. ಕನ್ನಡವು ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸುವ ಅಪರಿಮಿತ ಸಾಮರ್ಥ್ಯ ಪಡೆದಿದೆ. ಏಳು ಪದಗಳನ್ನು ಹೊರತುಪಡಿಸಿ ಉಳಿದ ಪದಗಳೆಲ್ಲ ಸಂಸ್ಕೃತ ಶಬ್ದಗಳು ಎಂದರೆ ಅಚ್ಚರಿ ಆಗುತ್ತದೆ. ಕನ್ನಡ ಮತ್ತು ಸಂಸ್ಕೃತ ಹೊಂದಿಕೊಂಡು ಬಾಳಲರಿತ ಭಾಷೆಗಳು. ಕನ್ನಡದ ನಡುವಿನ ಇಂಗ್ಲಿಷ್ ಪದಗಳನ್ನು ಹೆಕ್ಕಿ ತೋರುವುದು ಸುಲಭ. ಆದರೆ ಸಂಸ್ಕೃತ ಪದಗಳನ್ನು ಪ್ರತ್ಯೇಕಿಸುವುದು ಬಲ್ಲವರಿಗೆ ಮಾತ್ರ ಸಾಧ್ಯ. ಈ ಹಾಡಿನಲ್ಲಿರುವ ಕನ್ನಡ ಪದಗಳ ಪಟ್ಟಿ:
ಪಾಲಗಡಲ, ನಿನ್ನ, ನೀ, ನೀನೇ, ತುಂಬಿ, ಬಾರೆ, ತೋರೆ.

ಒಂದು ಜಿಜ್ಞಾಸೆ:

ಕಣಕಣ ಕನ್ನಡವೇ? ಸಂಸ್ಕೃತ ಪದವೇ?
ಕಣ ಕನ್ನಡವೂ ಹೌದು. ಸಂಸ್ಕೃತದಲ್ಲೂ ಇದೆ. ಇಲ್ಲಿ ‘ಕಣಕಣ ನೀನೇ ಕರುಣಾಪೂರೆ’ ಎಂಬ ಸಾಲಿನಲ್ಲಿ ಸಂಸ್ಕೃತ ಎಂದೆನಿಸಿತು. ಮೊದಲು ಅದನ್ನು ಕನ್ನಡ ಪದಗಳ ಪಟ್ಟಿಯಲ್ಲಿ ಇಟ್ಟಿದ್ದೆ! ಇನ್ನೊಂದು ಗೀತೆ ‘ಕಣಕಣದೆ ಶಾರದೆ’ ಇಲ್ಲಿಯೂ ಕಣ ಸಂಸ್ಕೃತ ಎಂದೆನಿಸುತ್ತದೆ.

ಇದನ್ನು ಜಿಜ್ಞಾಸೆ ಪಟ್ಟಿಯಲ್ಲಿ ಇಡುತ್ತಿದ್ದೇನೆ. ದಯವಿಟ್ಟು ಬಲ್ಲವರು ಬೆಳಕು ಚೆಲ್ಲಿ.

ವಿಜಯನಾರಸಿಂಹ ಅವರ ಅಮೋಘ ರಚನೆ ಇಂತಿದೆ. ಗಮನಿಸಿ:

ಭಾರತ ಭೂಶಿರ ಮಂದಿರ ಸುಂದರಿ.

ಭಾರತ ಭೂಶಿರ ಮಂದಿರ ಸುಂದರಿ.
ಭುವನ ಮನೋಹರಿ ಕನ್ಯಾಕುಮಾರಿ.

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರಸಂಗಮ ಸರಸ ವಿಹಾರಿಣಿ ||ಭಾರತ||

ಶಿವತಾಂಡವದ ಡಮರು ನಿನಾದ
ಶಿವತಾಂಡವದ ಡಮರು ನಿನಾದ
ನಾದಬ್ರಹ್ಮನ ಓಂಕಾರ ನಾದ.
ಆ … ಆ…ಆ.. ಆ..ಆ…ಆ..
ಆ … ಆ…ಆ.. ಆ..ಆ…ಆ..
ನಾದವೇ ಲೀಲಾ ಆಗಮ ವೇದ
ನಾದ ವೇದ ಶಿವೇ
ನಾದ ವೇದ ಶಿವೇ
ನಿನ್ನ ವಿನೋದ. ||ಭಾರತ||

ಸಂಗೀತ ಸುಧೆಯ ಚೈತನ್ಯಧಾರೆ.
ಕಣಕಣ ನೀನೇ ಕರುಣಾಪೂರೆ.
ನವ ಭಾವ ನವ ಜೀವ
ನೀ ತುಂಬಿ ಬಾರೆ.
ನವ ಭಾವ ನವ ಜೀವ
ನೀ ತುಂಬಿ ಬಾರೆ.
ನವರಸವಾಹಿನಿ
ನೀ ದಯೆ ತೋರೆ.
||ಭಾರತ||

ಒಂದು ಸರಳ #ಪ್ರಶ್ನೆ:

ಒಟ್ಟು ಸ್ವರಗಳ ಸಂಖ್ಯೆ ಏಳು: ಸ ರಿ ಗ ಮ ಪ ದ ಮತ್ತು ನಿ. ಎಂಟನೆಯ ಸ್ವರ ಎಂಬುದಿಲ್ಲ. ಏಳು ಸ್ವರವು ಸೇರಿ ಸಂಗೀತವಾಯಿತು. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂಬ ಹಾಡೂ ಇದೆ. ಇದು ನಿಮಗೆ ಗೊತ್ತು. ಹಾಗಾದರೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಇರುವ ಒಟ್ಟು ರಾಗಗಳೆಷ್ಟು ಎಂಬುದನ್ನು ಹೇಳಬಲ್ಲಿರಾ?
ಇರುವ ಈ ಏಳು ಸ್ವರಗಳನ್ನು ಕ್ರಮಪಲ್ಲಟ ಮತ್ತು ಸಂಯೋಜನೆ (Permutations and Combinations)ಯಿಂದ ಸುಮಾರು 30000 ಬಗೆಯ ರಾಗಗಳನ್ನಾಗಿ ಮಾಡಬಹುದು!

ಭೂಶಿರ ಎಂದರೇನು?

ಹಾಡಿನಲ್ಲಿ ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ ಎಂದಿದೆ. ಆದರೆ ಭಾರತದ ಶಿರ ಕಾಶ್ಮೀರವಲ್ಲವೇ ಎಂದು ಬಹಳ ಜನ ಕೇಳುವುದುಂಟು. ಭೂ ಶಿರವಲ್ಲ. ಅದು ಒಂದೇ ಪದ: ಭೂಶಿರ.

ಭೂಶಿರವೆಂದರೆ ಸಾಗರ, ಸರೋವರ ಅಥವಾ ನದಿಯೊಳಗೆ ಚಾಚಿಕೊಂಡಿರುವ ಎತ್ತರದ ಭೂಭಾಗ. ಇಂಗ್ಲಿಷಿನಲ್ಲಿ ಇದನ್ನು CAPE ಎನ್ನುತ್ತಾರೆ.

‘ಭಾರತ ಭೂಶಿರ ಮಂದಿರ
ಸುಂದರಿ’ ಗೀತೆಯನ್ನು ವೀಕ್ಷಿಸಿ ಪುಳಕಿತರಾಗಲು ದಯವಿಟ್ಟು ಕೊಂಡಿ ಒತ್ತಿ: https://share.google/QXclt7P9DSudCYbrH

‍ಲೇಖಕರು Admin

13 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading