-ಎಚ್ ಬಿ ದಿನೇಶ್
“ನಾವು ಅಗಲಿದ ನಂತರ ಜನರ ಮನಸ್ಸಿನಿಂದ ಮರೆತು ಹೋಗುತ್ತೇವೆ. ಏನೇ ಸಾಧಿಸಿದ್ದರೂ ಕಾಲ ಕ್ರಮೇಣ ಅದು ಮಸುಕಾಗುತ್ತದೆ. ಆದರೆ ಖ್ಯಾತ ಗಾಯಕರು, ಕಲಾವಿದರು ಎಂದಿಗೂ ಸಾಯುವುದಿಲ್ಲ. ಪ್ರತಿದಿನ ಬದುಕಿರುತ್ತಾರೆ. ಅವರ ಗಾಯನಕ್ಕಾಗಿ ನಾವು ಪ್ರತಿದಿನ ತಡಕಾಡುತ್ತೇವೆ “
ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರು ಸುಮಾರು ನಲವತ್ತಮೂರು ವರ್ಷಗಳ ಹಿಂದೆ ಆಡಿದ್ದ ಮಾತು ಇದು.
ಇಂದು ಮುಂಜಾನೆ ‘ಬೈ ಟು ಕಾಫಿ’ ಗೆಳೆಯರ ಹರಟೆಯಲ್ಲಿ ಖ್ಯಾತ ಗಾಯಕಿ, ಕನ್ನಡಿಗರ ಪ್ರತಿದಿನದ ಧ್ವನಿ ಎಸ್ ಜಾನಕಿ ಅಮ್ಮನವರನ್ನು ಎಲ್ಲರೂ ತಮ್ಮದೇ ದಾಟಿಯಲ್ಲಿ ನೆನೆಯುತ್ತಿದ್ದಾಗ ಗುಂಡೂರಾವ್ ಅವರ ಈ ಮಾತು ನೆನಪಿಗೆ ಬಂತು. ಗೆಳೆಯ ವೆಂಕಟೇಶ್ ಬರೆಯಿರಿ ಎಂದರು. ಬರೆದಿರುವೆ. ಇದಕ್ಕೆ ಒಂದು ಹಿನ್ನೆಲೆಯಿದೆ.
1983- ಆಗ ತಾನೇ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ ಎ ಪತ್ರಿಕೋದ್ಯಮ ಮುಗಿಸಿ, ಎಸ್ ವಿ ಜಯಶೀಲರಾವ್ ಅವರ ಸಂಪಾದಕತ್ವದ ‘ಮುಂಜಾನೆ’ ಪತ್ರಿಕೆಗೆ ವರದಿಗಾರನಾಗಿ ಸೇರಿದ್ದೆ. ಹೊಸ ಅನುಭವ. ಮುಂಜಾನೆ ಸತ್ಯ ಮುಖ್ಯ ವರದಿಗಾರರು. ಶಶಿಧರ್ ಭಟ್, ಮನೋಹರ ಯಡವಟ್ಟಿ, ಸದಾಶಿವ ಶೆಣೈ, ಜಗನ್ನಾಥ ಪ್ರಕಾಶ್ ಹೀಗೆ ನಾವೆಲ್ಲ ಸಹೋದ್ಯೋಗಿಗಳು.
1984 ಇರಬಹುದು. ಲೋಕಸಭಾ ಚುನಾವಣೆ. ಮೈಸೂರು ಕ್ಷೇತ್ರದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಂಗ್ರೆಸ್ ಅಭ್ಯರ್ಥಿ. ಅವರ ಪರ ಪ್ರಚಾರಕ್ಕೆ ಗುಂಡೂರಾವ್ ಅವರು ಬೆಂಗಳೂರಿನಿಂದ ಹೊರಟಿದ್ದರು. ಅವರ ಪ್ರಚಾರದ ವರದಿಗೆ ನನ್ನನ್ನು ನಿಯೋಜಿಸಲಾಗಿತ್ತು. ಅವರ ಕಾರಿನಲ್ಲೇ ಪಯಣ.
ಕರ್ನಾಟಕ ಲೋಕಸೇವಾ ಆಯೋಗದ ಬಳಿ ಇದ್ದ ಗುಂಡೂರಾವ್ ಅವರ ಮನೆಗೆ ಹೋಗಿ ‘ನಾನು ಕಳುಹಿಸಿರುವುದಾಗಿ ತಿಳಿಸಿ’ ಎಂದು ಜಯಶೀಲರಾವ್ ಹೇಳಿದ್ದರು.
ಎತ್ತರದ ವ್ಯಕ್ತಿತ್ವ, ಶುಭ್ರ ಬಿಳಿ ಉಡುಪಿನ ಗುಂಡೂರಾವ್ ಮನೆಯಿಂದ ಹೊರಬಂದರು. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತರು. ನನ್ನನ್ನು ಪಕ್ಕದಲ್ಲಿ ಕುಳಿತುಕೊಳ್ಳಲು ಕೈಸನ್ನೆ ಮಾಡಿದರು. ಮುಜುಗರದಿಂದಲೇ ಹಿಂಬದಿ ಸೀಟಿನಲ್ಲಿ ಆಸೀನನಾದೆ. ಮುಂಜಾನೆ ಪತ್ರಿಕೆಯ ಆಧಾರ ಸ್ತಂಭಗಳಲ್ಲಿ ಗುಂಡೂರಾಯರು ಪ್ರಮುಖರಾಗಿದ್ದರು ! ಮುಂದಿನ ಸೀಟಿನಲ್ಲಿ ಚಾಲಕನ ಪಕ್ಕದಲ್ಲಿ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಕುಳಿತರು.
ಕಾರು ಹೊರಟಿತು. ನಾನು ಮೌನವಾಗಿದ್ದೆ.
ಅವರೇ ಮಾತು ಆರಂಭಿಸಿ ನನ್ನ ಬಗ್ಗೆ ವಿಚಾರಿಸಿದರು. “ಎಚ್ ಸಿ ಶ್ರೀಕಂಠಯ್ಯ ಅವರ ಸಂಬಂಧಿಯಂತೆ” ಎಂದರು. ಹೌದು ಸರ್ ಎಂದೆ. “ಜಯಶೀಲರಾವ್ ನಿಮ್ಮ ಬಗ್ಗೆ ಹೇಳಿದ್ದಾರೆ. ನಿಮ್ಮವರು ಪತ್ರಿಕೋದ್ಯಮದಲ್ಲಿ ಕಡಿಮೆ. ಧೈರ್ಯವಾಗಿರಬೇಕು” ಎಂದು ಸಲಹೆ ನೀಡಿದರು.
ಕಾರು ಬೆಂಗಳೂರು ದಾಟಿದ ನಂತರ ಶ್ರೀನಿವಾಸಮೂರ್ತಿ ಅವರಿಗೆ “ಕ್ಯಾಸೆಟ್ ಬಾಕ್ಸ್ ಕೊಡ್ರಿ” ಎಂದರು. ಕ್ಯಾಸೆಟ್ ಬಾಕ್ಸ್ ರಾಯರ ಕೈ ಸೇರಿತು. ಅದರಲ್ಲಿದ್ದ ಒಂದು ಕ್ಯಾಸೆಟ್ ಅನ್ನು ಶ್ರೀನಿವಾಸಮೂರ್ತಿ ಅವರಿಗೆ ಕೊಟ್ಟು ಬಾಕ್ಸ್ ಪಕ್ಕದಲ್ಲೇ ಇರಿಸಿಕೊಂಡರು.
ಅದು ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ ಮುಂತಾದ ಶ್ರೇಷ್ಠ ಗಾಯಕರ ಆಯ್ದ ಗೀತೆಗಳ ಕ್ಯಾಸೆಟ್. ಕಣ್ಣು ಮುಚ್ಚಿ ಹಾಡನ್ನು ಆಲಿಸುತ್ತಿದ್ದ ಅವರು, ಒಂದು ಕ್ಯಾಸೆಟ್ ಮುಗಿಯುತ್ತಿದ್ದಂತೆ ಮತ್ತೊಂದನ್ನು ಕೊಡುತ್ತಿದ್ದರು.
ಹೀಗೆ ಕಾರು ಶ್ರೀರಂಗಪಟ್ಟಣದ ಬಳಿಯ ಪಶ್ಚಿಮವಾಹಿನಿ ತಲುಪಿತು. ಅವರ ಸೂಚನೆ ಇಲ್ಲದಿದ್ದರೂ ಕಾರು ನಿಂತಿತು. ಇದು ಅವರ ಪ್ರಯಾಣದಲ್ಲಿ ಕಾಫಿ ಸವಿಯುವ ಖಾಯಂ ತಾಣ ಎಂದು ಆ ಪುಟ್ಟ ಹೋಟೆಲ್ ಮಾಲೀಕರು ತಿಳಿಸಿದರು. ಕಾರಿನಲ್ಲೇ ಕುಳಿತು ಕಾಫಿ ಸವಿದ ರಾಯರು, ಅಲ್ಲಿದ್ದ ಎಲ್ಲರನ್ನೂ ಮಾತನಾಡಿಸಿ, ಎಲ್ಲರಿಗೂ ಟಿಪ್ಸ್ ಕೊಟ್ಟು ಹೊರಟು ಮತ್ತೊಂದು ಕ್ಯಾಸೆಟ್ ಹಾಕಿಸಿದರು.
“ನೀವು ಹಾಡು ಕೇಳ್ತೀರೇನ್ರಿ” ಎಂದು ಪ್ರಶ್ನಿಸಿದರು. “ರೇಡಿಯೋದಲ್ಲಿ ಕೇಳ್ತೀನಿ ಸರ್ “ಎಂದೆ. “ಸಂಗೀತ ಕೇಳಬೇಕು. ಮನಸ್ಸಿಗೆ ಮುದ ಕೊಡುತ್ತೆ. ನಾವೆಲ್ಲ ಮರೆಯಾಗುತ್ತೇವೆ. ಮರೆತು ಹೋಗುತ್ತೇವೆ. ಸಿನಿಮಾ ಕಲಾವಿದರು, ಗಾಯಕರು ಸಾಯೋದೇ ಇಲ್ಲ. ಪ್ರತಿದಿನ ಬದುಕಿರ್ತಾರೆ. ರಾಜ್ ಕಪೂರ್, ರಾಜ್ ಕುಮಾರ್, ಲತಾ ಮಂಗೇಶ್ಕರ್, ಕಿಶೋರ್ ಕುಮಾರ್ ಅವರನ್ನು ಜನ ಎಂದಿಗೂ ಸಾಯಲು ಬಿಡುವುದಿಲ್ಲ . ಅವರಿಗಾಗಿ ಪ್ರತಿದಿನ ತಡಕಾಡುತ್ತೇವೆ ” ಎಂದರು ಗುಂಡೂರಾವ್. ಅವರ ಗಾನವಿಹಾರ ಕುಶಾಲನಗರದವರೆಗೂ ಮುಂದುವರಿದಿತ್ತು. ರಾಯರೊಂದಿಗಿನ ನನ್ನ ಪಯಣವನ್ನು , ಅಂದು ಹೆಗ್ಗಡ ದೇವನ ಕೋಟೆಯಲ್ಲಿ ಕಂಡ ಗೆಳೆಯ ವಾಸುಕಿ ಆಗಾಗ್ಗೆ ಕೀಟಲೆ ಮಾಡುತ್ತಾ ನೆನಪಿಸುತ್ತಾನೆ . ಇದೊಂದು ಅದ್ಭುತ ನೆನಪಿನ ಪಯಣ . ಇನ್ನಷ್ಟು ಬರೆಯಬಹುದು
ಅಂದು ರಾಯರು ಈ ಮಾತು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಜಾನಕಿಯಮ್ಮ, ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಅಣ್ಣಾವ್ರು ಕನ್ನಡಿಗರ ಪ್ರತಿದಿನದ ಸ್ಮರಣೆಯಲ್ಲಿ ಜೀವಂತವಾಗಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.
ಗಾನ ಕೋಗಿಲೆ ಜಾನಕಿಯಮ್ಮರಿಗೆ ಭಾವಪೂರ್ಣ ನಮನಗಳು






0 Comments