ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕಮಹಾದೇವಿಯ ಚಿತ್ರ

-ಪ್ರತಿಭಾ ನಂದಕುಮಾರ್

ಬರೆಯುವವರಿಗೆ ಒಂದು ಕಟ್ಟುಪಾಡಿದೆ
ಅವರೇ ಹಾಕಿಕೊಂಡದ್ದು
ಕೂದಲ ರಾಶಿ ಅವಳ ಮೈತುಂಬ ಆವರಿಸಿ
ಪೂರಾ ಮುಚ್ಚಿ ಮುಚ್ಚಿ
ಬೆತ್ತಲು ಕಾಣದಂತೆ ಹೊದ್ದಿಸಿ
ಕಾಮನ ಮುದ್ರೆಯ ಕಂಡು
ನಿಮಗೆ ನೋವಾದೀತೆಂದು ಮುಚ್ಚಿದೆ
ಎಂದಳೆಂದು ಬರೆದು
ಯಾರಿಗೂ ನೋವಾಗದಂತೆ

ತಿಳಿಯದು ಅವರಿಗೆ
ಬತ್ತಲೆ ಎಂದರೆ ಬತ್ತಲಲ್ಲ
ಕೂದಲ ಹೊದಿಕೆಯಲ್ಲ
ಪಂಚಾಗ್ನಿಗೆ ಮೈಯೊಡ್ಡಿ
ಚಳಿಗಾಳಿಗೆ ಮನಸ್ಸೊಡ್ಡಿ
ಯಾರು ಎಲ್ಲಿ ಕೈಯಿಕ್ಕಿದರೂ ಪರೀಕ್ಷೆಗೆ
ದೃಢವಾಗಿ ಕಾಡದಿರಣ್ಣ ಎಂದು ತಡೆದು ನಿಲ್ಲಿಸಿ
ದಾಪುಗಾಲಿನಲ್ಲಿ ನಡೆದವಳು

ಮುಚ್ಚಬೇಡಿ ಅವಳಂಗವನ್ನು
ಎಲ್ಲವನ್ನೂ ಬಿಚ್ಚಿಟ್ಟವಳನ್ನು
ಹೆಣ್ಣಿನ ದೇಹಕ್ಕೆ ಕಂಗಾಲಾಗುವ
ಗಂಡುಗಳ ಲೆಕ್ಕಿಸದೇ ನುಡಿದು
ಒಲೆಯೊಳಗಿಕ್ಕಿ ನಡೆದವಳನ್ನು

ಅಷ್ಟು ಸುಲಭಕ್ಕೆ ಬಚ್ಚಿಡಲಾರಿರಿ.

‍ಲೇಖಕರು Admin

14 July, 2026

1 Comment

  1. Suresha B

    ಚಂದದ ಮಾತು…
    ಬಿಚ್ಚಿಟ್ಟು ಬಯಲಾದ ಜೀವವನು
    ಮುಚ್ಚಿಟ್ಟು ತೋರುವವನು
    ಅಕ್ಕನ ಬಯಲನು ತಿಳಿಯದವನು.

    ಒಳ್ಳೆಯ ಕವನ‌ ಅಕ್ಕೋವ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading